ಆಗೊಮ್ಮೆ ಈಗೊಮ್ಮೆ ಜಗದ
ನಿಯಮಗಳು ಬದಲಾಗುತ್ತವೆ.
ಬಿಸಿನೀರಿನಲ್ಲೂ ಜೀವಜಗತ್ತು
ತೆರೆದು ಕೊಳ್ಳುತ್ತದೆ.

ಸಾಗರದ ಬುಡವೂ ನಿಗಿನಿಗಿ ಉರಿಯುತ್ತದೆ.
ಎದೆಯ ಕಡಲಿಗೂ ಬೆಂಕಿ
ಇಳಿಯುತ್ತದೆ,

ಅನ್ವೇಷಣೆಯ ಆಲಂಬನ
ವ್ಯತ್ಯಾಸಗೊಂಡಿದ್ದು ವ್ಯಸನದಿಂದಲೇ
ದೃಷ್ಟಾರರು ನೆಪಮಾತ್ರ ಆಗಿ ಬಿಡುತ್ತಾರೆ

ಮಾತು ಸತ್ತ ಮನಸ್ಸುಗಳು
ಭಾವಶೂನ್ಯತೆಯಲ್ಲಿ ರೂಪಾಂತರಗೊಳ್ಳುತ್ತವೆ
ಕರಕಲು ಕಲ್ಲಿದ್ದಲಿ ರಾಶಿ ಕೆಂಡದಂಗಡಿ
ಮೇಲಿಂದ ಮೇಲೆ ಎದ್ದು
ಒಳಹೊರಗಿನ ರತ್ನಗಂಬಳಿಗಳು
ಕೊಚ್ಚೆ ಮೆತ್ತಿಕೊಂಡಿವೆ.

ಅಕ್ಷರದ ನೆಲೆಯಲ್ಲೂ ರೂಕ್ಷ
ರಕ್ತ ಪಿಪಾಸುಗಳು
ಮಾಂಸಕ್ಕೆ ಮುತ್ತುವ ನೊಣಗಳು
ಮೈತಾಳುತ್ತವೆ.

ಸಂತೆಯಲ್ಲಿ ಅಪ್ಪಚ್ಚಿಯಾಗುತ್ತವೆ
ಹಾರುವ ಅಭಿಲಾಷೆಗೆ ರೆಕ್ಕೆ ಕಟ್ಟಿಕೊಂಡ
ಚಿಟ್ಟೆಗಳು
ಪ್ರೇಮ ಮತ್ತು ಮಸಣಗಳು
ಒಂದೇ ತೊಟ್ಟಿಲಲ್ಲಿ ಜೋಕಾಲಿಯಾಡುತ್ತವೆ.
*****

ನಾಗರೇಖಾ ಗಾಂವಕರ