ಕನ್ನಡ ಚಿತ್ರರಂಗಕ್ಕೆ ಅಮೃತ ವರ್ಷ

ಕನ್ನಡ ಚಿತ್ರರಂಗಕ್ಕೆ ಅಮೃತ ವರ್ಷ

೩-೩-೨೦೦೮ರಿಂದ ಕನ್ನಡ ಚಿತ್ರರಂಗವು ಎಪ್ಪತೈದನೇ ವರ್ಷಕ್ಕೆ ಕಾಲಿಡುತ್ತಿದೆ. ಅಂದರೆ ವಜ್ರ ಮಹೋತ್ಸವ ವರ್ಷ ಆರಂಭವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಅಷ್ಟೇನೂ ಆರೋಗ್ಯಕರವಾಗಿಲ್ಲ. ಅಷ್ಟೇಕೆ ಚಿತ್ರೋದ್ಯಮದ ಪ್ರಾತಿನಿಧಿಕ ಸಂಸ್ಥೆಗಳಿಗೆ ಮತ್ತು ಸರ್ಕಾರಕ್ಕೆ ಇದು ಕನ್ನಡ ಚಿತ್ರರಂಗದ ವಜ್ರ ಮಹೋತ್ಸವ ವರ್ಷವೆಂಬ ನೆನಪು ಸಹ ಬಂದಂತಿಲ್ಲ. ರೀಮೇಕ್ ಚಿತ್ರಗಳಿಗೆ ತೆರಿಗೆ ವಿನಾಯಿತಿ ಕೊಡಬೇಕು ಅಥವಾ ಕೊಡಬಾರದು ಎಂಬ ವಿಷಯದಲ್ಲಿ ಇಡೀ ಕನ್ನಡ ಚಿತ್ರರಂಗದ ಅಳಿವು ಉಳಿವು ಅಡಗಿದೆ ಎಂಬ ಭ್ರಮೆಯನ್ನು ಮೂಡಿಸುವ ‘ಜಾಗೃತ ಪ್ರಜ್ಞೆ’ ಮಾತ್ರ ಪ್ರಜ್ವಲಿಸುತ್ತಿದೆ. ರೀಮೇಕ್ ಚಿತ್ರಗಳ ವಿಷಯವು ಕನ್ನಡ ಚಿತ್ರರಂಗದ ಒಂದು ಸಮಸ್ಯೆಯೇ ಹೊರತು ಅದೊಂದೇ ಎಲ್ಲವೂ ಅಲ್ಲ ಎಂಬ ವಿವೇಕ ಯಾಕೆ ಇಲ್ಲ ಎಂದು ವಿಷಾದವಾಗುತ್ತದೆ. ರೀಮೇಕ್ ಎನ್ನುವುದು ಚಲನಚಿತ್ರವೊಂದರ ಕತೆ, ಚಿತ್ರಕತೆಗೆ ಅಂದರೆ ಸಾಹಿತ್ಯ ವಿಭಾಗಕ್ಕೆ ಮಾತ್ರ ಸಂಬಂಧಿಸಿದ ವಿಷಯ. ಚಲನಚಿತ್ರ ನಿರ್ಮಾಣದ ಅನೇಕ ಅಂಗಗಳಲ್ಲಿ ‘ಸಾಹಿತ್ಯ ವಿಭಾಗ’ ಒಂದು ಮುಖ್ಯ ಅಂಗ ಎನ್ನುವುದು ನಿಜವಾದರೂ ಕನ್ನಡ ಚಿತ್ರರಂಗದ ಅಳಿವು-ಉಳಿವು ಸಾಹಿತ್ಯ ವಿಭಾಗವೊಂದನ್ನು ಮಾತ್ರ ಅವಲಂಬಿಸಿದೆಯೆಂದು ಭಾವಿಸುವುದು ಒಂದು ವಿಪರ್ಯಾಸವೇ ಸರಿ. ರೀಮೇಕ್ ಚಿತ್ರಗಳ ಪರಭಾಷಾ ಕತೆ, ಚಿತ್ರಕತೆಯನ್ನು ವಿರೋಧಿಸಿ ತೆರಿಗೆ ವಿನಾಯಿತಿ ಕೊಡುವುದು ಬೇಡ ಎನ್ನುವವರು ಅದೇ ರೀತಿ ಪರಭಾಷಾ ಕಲಾವಿದರು, ತಂತ್ರಜ್ಞರು, ಗಾಯಕರು ಇರುವ ಕನ್ನಡ ಚಿತ್ರಗಳಿಗೆ ರಿಯಾಯಿತಿ ಬೇಡವೆಂದು ಯಾಕೆ ಹೇಳುತ್ತಿಲ್ಲ? ಸರ್ಕಾರದ ಸೌಲಭ್ಯಗಳು ಬೇಕು ಎನ್ನುವುದಾದರೆ ಪರಭಾಷಾ ಕತೆ, ಚಿತ್ರಕತೆಯನ್ನಷ್ಟೇ ಅಲ್ಲ, ಪರಭಾಷಾ ಕಲಾವಿದರು, ತಂತ್ರಜ್ಞರು, ಗಾಯಕರೇ ಮುಂತಾದ ಆಮದು ಬಳಗಕ್ಕೂ ನಿಯಂತ್ರಣವಿರಬೇಕೆಂದು ಯಾಕೆ ಕೇಳುತ್ತಿಲ್ಲ? ರೀಮೇಕ್ ಚಿತ್ರಗಳನ್ನು ಗುರುತಿಸಲು ಈಗ ಇರುವ ನಿಯಮಾವಳಿಗಳ ವೈರುಧ್ಯಗಳನ್ನು ಯಾಕೆ ಎತ್ತಿ ತೋರಿಸುತ್ತಿಲ್ಲ? ಇನ್ನೊಂದು ಕಡೆ ಪರಭಾಷಾ ಕತೆಗಾರರು, ನಟಿಯರು, ತಂತ್ರಜ್ಞರು, ಗಾಯಕರು ಮುಂತಾದವರ ಮುಂದೆ ಮಂಡಿಯೂರಿ ಕೂತರೆ ಮಾತ್ರ ಕನ್ನಡ ಚಿತ್ರೋದ್ಯಮದ ಉದ್ಧಾರವೆಂದು ಭಾವಿಸಿರುವವರ ಆರ್ಭಟಕ್ಕೆ ಏನು ಹೇಳುವುದು? ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಯಿಲ್ಲ. ಸರ್ಕಾರಿ ಸೌಲಭ್ಯದ ಪ್ರಶ್ನೆ ಮಾತ್ರ ಇದೆ. ಯಾರು ಯಾವುದೇ ರೀತಿಯ ಚಿತ್ರ ಮಾಡಲು ಸ್ವತಂತ್ರರು. ಆದರೆ ಸರ್ಕಾರದ ಸೌಲಭ್ಯಗಳು ಬೇಕೆಂದರೆ ಮಾತ್ರ ನಿರ್ದಿಷ್ಟ ನಿಯಮಗಳಿಗೆ ಬದ್ಧವಾಗಿರಬೇಕು. ಈ ನಿಯಮಗಳು ಹೇಗಿರಬೇಕು ಎಂಬ ಬಗ್ಗೆ ಸಮಾಧಾನಕರ ಸನ್ನಿವೇಶದಲ್ಲಿ ಚರ್ಚೆ ನಡೆಯುವ ವಾತಾವರಣವು ವಜ್ರಮಹೋತ್ಸವ ವರ್ಷದಲ್ಲಾದರೂ ಬಂದೀತೆ ಎಂದು ನಿರೀಕ್ಷಿಸಿದರೆ ನಿರಾಶೆಯೇ ಎದುರಾಗುವಂತೆ ಕಾಣುತ್ತಿದೆ. ಏಕಂಶದ ಕಾರ್ಯಕ್ರಮದಲ್ಲೇ ಕನ್ನಡ ಚಿತ್ರಂಗದ ಅಳಿವು-ಉಳಿವು ಅಡಗಿದೆಯೆಂದು ಉಭಯ ಬಣಗಳು ಭಾವಿಸಿರುವುದರಲ್ಲೇ ಸಮಸ್ಯೆಯ ಸುಳಿ ಇದೆ.

ಅದೇನೇ ಇರಲಿ, ವಜ್ರಮಹೋತ್ಸವ ವರ್ಷದಲ್ಲಿ ಕನ್ನಡ ಚಿತ್ರರಂಗಕ್ಕೆ ಒಳಿತಾಗುವ, ನೈಜ ಕನ್ನಡತನಕ್ಕೆ ಮನ್ನಣೆ ಸಿಗುವ, ಸಮಚಿತ್ತದ ಚಿಂತನೆ ನಡೆಯಲಿ ಎಂದು ಹಾರೈಸಬೇಕಾಗಿದೆ. ಹಾಗೆ ನೋಡಿದರೆ ಕನ್ನಡ ಚಿತ್ರರಂಗದ ಪರಂಪರೆಗೆ ಸ್ವತಂತ್ರ ಸಾಂಸ್ಕೃತಿಕ ಸ್ಪರ್ಶವಿರುವುದನ್ನು ಇತಿಹಾಸದಿಂದ ನಾವು ತಿಳಿಯಬೇಕು. ಮುಖ್ಯವಾಹಿನಿಯ ಜೊತೆಗೆ ಪರ್ಯಾಯ ಚಿತ್ರರಂಪರೆ ಬೆಳೆದಿರುವುದನ್ನೂ ಗಮನಿಸಬೇಕು.

ಕನ್ನಡದ ಮೊದಲನೇ ವಾಕ್ಚಿತ್ರವಾದ ‘ಸತಿ ಸುಲೋಚನ’ ಬಿಡುಗಡೆಯಾದದ್ದು ೩-೩-೧೯೩೪ರಂದು. ಅಂದರೆ ೩-೩-೨೦೦೮ರಂದು ವಜ್ರಮಹೋತ್ಸವ ವರ್ಷ ಆರಂಭವಾಗುತ್ತದೆ. ಕನ್ನಡ ಚಿತ್ರರಂಗವು ಎಪ್ಪತೈದನೇ ವರ್ಷಕ್ಕೆ ಕಾಲಿಡುತ್ತದೆ. ‘ಸತಿ ಸುಲೋಚನ’ ಚಿತ್ರಕ್ಕೂ ಮುಂಚೆಯೇ ಅಂದರೆ ೧೯೩೩ರಲ್ಲೇ ಚಿತ್ರೀಕರಣವನ್ನು ಪ್ರಾರಂಭಿಸಿದ ‘ಭಕ್ತ ಧ್ರುವ’ ಚಿತ್ರವು ತಡವಾಗಿ ಮುಗಿದು, ತಡವಾಗಿ ಬಿಡುಗಡೆಯಾದ್ದರಿಂದ ಕನ್ನಡದ ಎರಡನೇ ವಾಕ್ಚಿತ್ರವಾಯಿತು. ವಾಕ್ಚಿತ್ರಗಳಿಗೂ ಮುಂಚೆಯೇ ಕನ್ನಡಿಗರು ಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡದಲ್ಲಿ ನಡೆದ ಮೊದಲನೇ ಚಿತ್ರೀಕರಣವು ಒಂದು ನಾಟಕಕ್ಕೆ ಸಂಬಂಧಪಟ್ಟಿದೆ. ೧೯೨೧ರಲ್ಲಿ ‘ರತ್ನಾವಳಿ ಥಿಯೇಟ್ರಿಕಲ್ ಕಂಪನಿ’ಯ ಎ.ವಿ. ವರದಾಚಾರ್ಯರು ಮೈಸೂರು ಅರಮನೆಯಲ್ಲಿ, ಇಂಗ್ಲಿಷ್ ನಾಟಕದ ರೂಪಾಂತರವಾದ ‘ನಿರುಪಮಾ’ ಎಂಬ ನಾಟಕವನ್ನು ಪ್ರದರ್ಶನ ಮಾಡುತ್ತಿದ್ದು ಅಂದಿನ ಯುವರಾಜರಾಗಿದ್ದ ಕಂಠೀರವ ನರಸಿಂಹರಾಜ ಒಡೆಯರ್ ಅವರು ಕೈಯ್ಯಿಂದ ಸುತ್ತಿ ಚಿತ್ರ ತೆಗೆಯುವ ಕ್ಯಾಮರಾದಿಂದ ಈ ನಾಟಕವನ್ನು ಚಿತ್ರೀಕರಿಸಿದರು. (ಕನ್ನಡ ಸಿನಿಮಾ – ಇತಿಹಾಸದ ಪುಟಗಳಲ್ಲಿ – ಗಂಗಾಧರ್‌ ಮೊದಲಿಯಾರ್). ಆನಂತರ ೧೯೨೫ರಲ್ಲಿ ಗುಬ್ಬಿ ಚನ್ನಬಸವೇಶ್ವರ ನಾಟಕ ಮಂಡಳಿಯು ತರೀಕೆರೆಯ ಸಂತೆ ಮೈದಾನದಲ್ಲಿ ಕ್ಯಾಂಪ್ ಹಾಕಿ ‘ಮಹಾತ್ಮ ಕಬೀರ್’ ನಾಟಕ ಪ್ರದರ್ಶನವನ್ನು ಮಾಡುತ್ತಿದ್ದಾಗ ಮದರಾಸಿನ ರಂಗಯ್ಯ ನಾಯ್ಡು ಅವರು ನಾಲ್ಕು ದಿನಗಳ ಕಾಲ ಅದನ್ನು ಚಿತ್ರೀಕರಿಸಿದರು. ೧೯೨೯ರಲ್ಲಿ ತಯಾರಾದ ಮೂಕಿ ಚಿತ್ರ ‘ವಸಂತಸೇನ’ವು ಸಂಸ್ಕೃತ ನಾಟಕ ‘ಮೃಚ್ಚಕಟಿಕ’ದ ಆಧಾರದಿಂದ ನಿರ್ಮಾಣಗೊಂಡಿತು. ೧೯೩೦-೩೧ ರಲ್ಲಿ ಶಿವರಾಮಕಾರಂತರು ಭೂತರಾಜ್ಯ ಮತ್ತು ಡೊಮಿಂಗೊ ಎಂಬ ಎರಡು ಮೂಕಿ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದರು. ೧೯೩೦ರಲ್ಲಿ ದೇವುಡು ನರಸಿಂಹ ಶಾಸ್ತ್ರಿಗಳ ‘ಕಳ್ಳರ ಕೂಟ’ ನಾಟಕವನ್ನು ಆಧರಿಸಿ ‘ಹಿಸ್ ಲವ್ ಅಫೇರ್’ ಎಂಬ ಮೂಕಿ ಚಿತ್ರವು ನಿರ್ಮಾಣವಾಯಿತು. ಇದೇ ಸುಮಾರಿಗೆ ದೇವುಡು ಅವರ ನೀಳ್ಗತೆಯನ್ನಾಧರಿಸಿದ ‘ಸಾಂಗ್ ಆಫ್ ಲೈಫ್’ ಎಂಬ ಮೂಕಿ ಚಿತ್ರ ರೂಪುಗೊಂಡಿತು. ಹೀಗೆ ಮೂಕಿ ಚಿತ್ರಗಳ ಕಾಲದಿಂದ ಕನ್ನಡ ಸಾಹಿತ್ಯ ಮತ್ತು ರಂಗಭೂಮಿಯ ಜೊತೆಗೆ ಚಿತ್ರರಂಗದ ಸಂಬಂಧ ಬೆಳೆದು ಬಂದಿದೆ. ಬಿಡುಗಡೆಯಾದ ಮೊದಲ ಕನ್ನಡ ವಾಶ್ಚಿತ್ರ ‘ಸತಿ ಸುಲೋಚನ’ದ ಕತೆ ಸಂಭಾಷಣೆ ಮತ್ತು ಹಾಡುಗಳನ್ನು ರಚಿಸಿದವರು ಖ್ಯಾತ ನಾಟಕಕಾರ ಬೆಳ್ಳಾವೆ ನರಹರಿ ಶಾಸ್ತ್ರಿಗಳು. ೧೯೩೫ರಲ್ಲಿ ಬಂದ ಗುಬ್ಬಿ ಕಂಪನಿಯ ‘ಸದಾರಮೆ’ (ಮೊದಲ ಆವೃತ್ತಿ) ಮರಾಠಿ ಯಿಂದ ರೂಪಾಂತರಗೊಂಡ ಕನ್ನಡ ನಾಟಕವನ್ನು ಆಧರಿಸಿತ್ತು. ಕನ್ನಡದ ಮೊದಲನೆ ಸಾಮಾಜಿಕ ವಾಕಿತ್ರವಾದ ‘ಸಂಸಾರ ನೌಕ’ವನ್ನು ಎಚ್.ಎಲ್. ಸಿಂಹ ಅವರು ಅದೇ ಹೆಸರಿನ ತಮ್ಮ ನಾಟಕವನ್ನು ಆಧರಿಸಿ ರೂಪಿಸಿದರು. (೧೯೩೬) ಬಿ. ಪುಟ್ಟಸ್ವಾಮಯ್ಯ ಅವರು ೧೯೪೧ರಲ್ಲಿ ಗುಬ್ಬಿವೀರಣ್ಣನವರು ನಿರ್ಮಿಸಿದ ‘ಸುಭದ್ರ’ ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆ, ಗೀತೆಗಳನ್ನು ಬರೆದರು. ೧೯೪೨ರಲ್ಲಿ ತಯಾರಾದ ‘ಜೀವನ ನಾಟಕ’ ಚಿತ್ರಕ್ಕೆ ಅ.ನ.ಕೃ. ಅವರು ಕತೆ, ಚಿತ್ರಕತೆ ಮತ್ತು ಸಂಭಾಷಣೆ ಬರೆದರು. ಡಾ. ರಾಜಕುಮಾರ್ ಅವರು ನಾಯಕರಾಗಿ ಅಭಿನಯಿಸಿದ ‘ಬೇಡರ ಕಣ್ಣಪ್ಪ’ (೧೯೫೪) ಚಿತ್ರಕ್ಕೆ ಹರಿಹರ ಕವಿಯ ‘ಕಣ್ಣಪ್ಪನ ರಗಳೆ’ ಆಧಾರ ಮತ್ತು ಕನ್ನಡದ ಮೊದಲನೇ ಕಾದಂಬರಿಯಾಧಾರಿತ ಚಿತ್ರ ಡಾ. ರಾಜ್‌ಕುಮಾರ್ ಅಭಿನಯದ ‘ಕರುಣೆಯೇ ಕುಟುಂಬದ ಕಣ್ಣು’ ಚಿತ್ರಕ್ಕೆ ಕೃಷ್ಣಮೂರ್ತಿ ಪುರಾಣಿಕರ ‘ಧರ್ಮದೇವತೆ’ ಕಾದಂಬರಿ ಆಧಾರ. ಕನ್ನಡ ಚಿತ್ರರಂಗಕ್ಕೆ ಚಿ. ಸದಾಶಿವಯ್ಯನವರಂತಹ ಅನೇಕರ ಕೊಡುಗೆ ಅಪಾರ. ಹೀಗೆ ಕನ್ನಡ ಚಿತ್ರರಂಗವು ಆರಂಭದಿಂದಲೂ ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರಗಳ ಸಂಬಂಧದಿಂದ ಸಹಜ ವಿಕಾಸ ಕಾಣುತ್ತ ಬಂದಿದೆ. ಇಂದು ಇದೇ ಸ್ಥಿತಿ ಇದೆಯೆ? ವಿವಿಧ ಸಾಂಸ್ಕೃತಿಕ ಕ್ಷೇತ್ರಗಳು ಪರಸ್ಪರ ಪೂರಕವಾಗುತ್ತ ಪ್ರಬುದ್ಧವಾಗಬೇಕಾದ ಅಗತ್ಯ ಇದೆಯಲ್ಲವೆ? ವಜ್ರ ಮಹೋತ್ಸವ ವರ್ಷದಲ್ಲಾದರೂ ಇಂತಹ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಲ್ಲವೆ?

ಕನ್ನಡ ಚಿತ್ರರಂಗದ ಇನ್ನೊಂದು ಬಹುಮುಖ್ಯ ಆಯಾಮವೆಂದರೆ ಆರಂಭದಿಂದಲೂ ನಮ್ಮ ಸಂಸ್ಕೃತಿಯ ‘ಉಪಧಾರೆ’ ಯನ್ನು ಆಧರಿಸಿದ್ದು. ‘ಉಪ’ ಎಂದ ಕೂಡಲೇ ಅಪ್ರಧಾನ ಎಂದು ಭಾವಿಸಬೇಕಾಗಿಲ್ಲ. ಸಂಸ್ಕೃತಿಯಲ್ಲಿ ಕೆಲವು ನೆಲೆಗಳನ್ನು ಪ್ರಧಾನಗೊಳಿಸಿದ (ಹುಸಿ) ಪರಂಪರೆಯು ನಮ್ಮಲ್ಲಿದೆ. ಅದಕ್ಕೆ ಪರ್ಯಾಯವಾದ ಆದರೆ ಅಷ್ಟೇ ಪ್ರಧಾನವಾದ ಧಾರೆಗಳನ್ನು ಹಿನ್ನೆಲೆಗೆ ಸರಿಸಲಾಗಿದ್ದು, ಅವುಗಳನ್ನು ಗುರುತಿಗಾಗಿ ‘ಉಪಧಾರೆ’ ಎಂದು ಕರೆಯುತ್ತಿದ್ದೇನೆ ಮತ್ತು ಅವುಗಳು ಉಪಧಾರೆಗಳಾಗಿ ಉಳಿದದ್ದು ಒಂದು ವಾಸ್ತವ ಸಂಗತಿಯಾಗಿದೆ. ವಿಶೇಷವೆಂದರೆ ಕನ್ನಡದ ಮೊದಲನೇ ವಾಕ್ಚಿತ್ರವೇ ಸಂಸ್ಕೃತಿಯ ‘ಉಪಧಾರೆ’ಯನ್ನು ಅವಲಂಬಿಸಿದೆ. ಇಂದ್ರಜಿತುವಿನ ಹೆಂಡತಿಯಾದ ‘ಸತಿ ಸುಲೋಚನ’ ಕನ್ನಡದ ಮೊದಲ ವಾಕ್ಚಿತ್ರಕ್ಕೆ ಪ್ರಧಾನ ವಸ್ತುವಾದಂತೆ ಸೀತಾದೇವಿಯ ಪಾತ್ರ ಯಾಕೆ ಆಗಲಿಲ್ಲ ಎಂಬ ಪ್ರಶ್ನೆ ಕುತೂಹಲಕಾರಿಯಾದುದು. ಹೀಗೆ ನೋಡಿದರೆ, ಕನ್ನಡ ಚಿತ್ರರಂಗದ ಮೊದಲನೇ ಕಾಲು ಶತಮಾನವು ‘ಸಾಂಸ್ಕೃತಿಕ ಉಪಧಾರೆ’ಯನ್ನು ‘ಪ್ರಧಾನ ಧಾರೆ’ಯಾಗಿಸಿದ ಪ್ರಮುಖ ಆಯಾಮವನ್ನು ಪಡೆದಿದೆ. ನನ್ನ ಅಭಿಪ್ರಾಯದ ಸಮರ್ಥನೆಗಾಗಿ ಕೆಲವು ಪ್ರಮುಖ ಚಿತ್ರಗಳನ್ನು ಉದಾಹರಿಸಬಹುದು. ಭಕ್ತ ಧ್ರುವ (೧೯೩೪), ಚಿರಂಜೀವಿ (೧೯೩೬), ಪುರಂದರದಾಸ (೧೯೩೭), ಸದಾರಮೆ (೧೯೩೫), ವಸಂತಸೇನಾ (೧೯೪೧), ಭಕ್ತಪ್ರಹ್ಲಾದ (೧೯೪೨), ಸತ್ಯ ಹರಿಶ್ಚಂದ್ರ (೧೯೪೩), ಹೇಮರೆಡ್ಡಿ ಮಲ್ಲಮ್ಮ (೧೯೪೫), ಚಂದ್ರಹಾಸ ಮತ್ತು ಮಹಾತ್ಮ ಕಬೀರ್ (೧೯೪೭), ಭಕ್ತರಾಮದಾಸ್ (೧೯೫೪), ಭಕ್ತಕುಂಬಾರ (೧೯೪೯), ಗುಣಸಾಗರಿ (೧೯೫೩), ಬೇಡರ ಕಣ್ಣಪ್ಪ (೧೯೫೪), ಶಿವಶರಣೆ ನಂಬೆಕ್ಕ, ಸಂತಸಕ್ಕೂಬಾಯಿ, ಮಹಾಕವಿ ಕಾಳಿದಾಸ (೧೯೫೫) ನಳ ದಮಯಂತಿ (೧೯೫೭)- ಹೀಗೆ ಉದಾಹರಿಸುತ್ತ ಹೋಗಬಹುದು.

ಹೀಗೆ ವಿಶಿಷ್ಟ ಆಯಾಮಗಳಿಂದ ಬೆಳೆಯುತ್ತ ಬಂದ ಕನ್ನಡ ಚಿತ್ರರಂಗದ ಉನ್ನತಿ ಕುರಿತಂತೆ, ನಾವು ಹುಸಿ ವಾಗ್ವಾದಗಳಾಚೆಗೆ ನಿಂತು ಯೋಚಿಸುವ ಸಂದರ್ಭ ಬಂದಿದೆ. ವಜ್ರ ಮಹೋತ್ಸವ ವರ್ಷದಲ್ಲಿ ಕನ್ನಡ ಚಿತ್ರರಂಗದ ‘ಆತ್ಮ’ವನ್ನು ಕಂಡುಕೊಳ್ಳುವ ಕೆಲಸ ಆಗಬೇಕಾಗಿದೆ. ಆತ್ಮಾವಲೋಕನ, ಆತ್ಮವಿಶ್ವಾಸ ಮತ್ತು ಆತ್ಮೋನ್ನತಿಗಳ ನೆಲೆಯಿಂದ ಕನ್ನಡ ಚಿತ್ರರಂಗವನ್ನು ಸಮೃದ್ಧಗೊಳಿಸಬೇಕಾಗಿದೆ. ಶ್ರೀಮಂತಿಕೆಯ ಹೊರ ವಯ್ಯಾರದಲ್ಲಿ ‘ಆತ್ಮ’ವು ಕಳೆದುಹೋಗದಂತೆ ಕಾಪಾಡಿಕೊಳ್ಳಬೇಕಾಗಿದೆ.

ವಜ್ರ ಮಹೋತ್ಸವ ವರ್ಷದಲ್ಲಾದರೂ ಕನ್ನಡ ಚಿತ್ರರಂಗದ ಒಳಿತಿಗಾಗಿ ‘ಸಮಗ್ರ ಯೋಜನೆ’ ಸಿದ್ಧವಾಗಬೇಕು. ಸರ್ಕಾರದ ವಾರ್ತಾ ಇಲಾಖೆ, ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ, ಕಾರ್ಮಿಕರ ಒಕ್ಕೂಟ, ಕಲಾವಿದರ ಸಂಘ, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ, ಪ್ರದರ್ಶಕರ ಸಂಘ – ಹೀಗೆ ಎಲ್ಲಾ ಸಂಘ ಸಂಸ್ಥೆಗಳೂ ವಜ್ರ ಮಹೋತ್ಸವ ಆಚರಣೆಯನ್ನು ಅರ್ಥಪೂರ್ಣಗೊಳಿಸುವಂತೆ ಕ್ರಿಯಾ ಯೋಜನೆಯನ್ನು ಸಿದ್ದಗೊಳಿಸಿ ತಂತಮ್ಮ ವ್ಯಾಪ್ತಿಯಲ್ಲಿ ಕಾರ್ಯಗತಗೊಳಿಸಬೇಕು. ಮಾಧ್ಯಮಗಳು ಮಾಹಿತಿ ಸಮೃದ್ಧಿಯಿಂದ ಓದುಗರ ವಿವೇಕವನ್ನು ವಿಸ್ತರಿಸಬೇಕು. ಮೊದಲು ವಾರ್ತಾ ಇಲಾಖೆ ಮತ್ತು ವಾಣಿಜ್ಯ ಮಂಡಳಿ ಮುಂದಾಗಬೇಕು. ಸಲ್ಲದ ಸಂಗತಿಗಳ ಸಮಾರೋತ್ಸಾಹಕ್ಕೆ ಕಡಿವಾಣ ಹಾಕಿಕೊಂಡು ಕನ್ನಡತನ ಮತ್ತು ಕನ್ನಡಿಗ ಕೇಂದ್ರಿತ ಚಿತ್ರರಂಗವನ್ನು ಬೆಳೆಸಲು ಬದ್ದರಾಗಬೇಕು.
*****
೨-೩-೨೦೦೮

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೫೬
Next post ಬಾಯಿಲ್ಲದವರು

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…