ಕಂಗಳ ಮುಂದಣ ಬೆಳಗ ಕಾಣದೆ,
ಕಂಡಕಂಡವರ ಹಿಂದೆ ಹರಿದು,
ಇನ್ನು ಬೇರೆ ಕಂಡೆನೆಂಬ ಭಂಗಿತರ ನೋಡಾ!
ತನ್ನಲ್ಲಿ ತಾ ಸುಯಿಧಾನಿಯಾಗಿ ನೋಡಲರಿಯದೆ,
ಭಿನ್ನಗಣ್ಣಿಲಿ ನೋಡಿಹೆನೆಂದು ತಮ್ಮ ಮರೆದು
ಇನ್ನುಂಟೆಂದು ಅರಸುವ ಅಣ್ಣಗಳಿರಾ ನೀವು ಕೇಳಿರೋ,
ಮನವು ಮಹದಲ್ಲಿ ನಿಂದುದೆ ಲಿಂಗ.
ಕರಣಂಗಳರತುದೆ, ಕಂಗಳ ಮುಂದಣ ಬೆಳಗು.
ಇದನರಿಯದೆ, ಮುಂದೆ ಘನ ಉಂಟೆಂದು,
ತೊಳಲಿ ಬಳಲಿ ಅರಸಿಹೆನೆಂದು
ಅರುಮರುಳಾಗಿ ಹೋದರಯ್ಯ ನಿಮ್ಮನರಿಯದೆ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****