Home / ಕಥೆ / ಸಣ್ಣ ಕಥೆ / ಹೈದರಲ್ಲಿಯ ಸಾಹಸ ಪರೀಕ್ಷೆ

ಹೈದರಲ್ಲಿಯ ಸಾಹಸ ಪರೀಕ್ಷೆ

ದಳವಾಯಿ ಪದವಿಯಲ್ಲಿದ್ದು ಹೈದರಲ್ಲಿಯು ನಂಜರಾಜಯ್ಯನನ್ನು ಕೊಣನೂರಿಗೆ ಕಳುಹಿಸಿದ ಬಳಿಕ ರಾಜಧಾನಿಗೆ ಬಂದು ಮೈಸೂರಿನ ಮುತ್ತಿಗೆಯಲ್ಲಿ ನಡೆದ ವೆಚ್ಚಕ್ಕಾಗಿ ತನಗೆ ಇದ್ದ ಆದಾಯ ಸಾಲದೆಂದೂ ಇನ್ನೂ ಹೆಚ್ಚಿನ ಆದಾಯವು ಬೇಕೆಂದೂ ರಾಜರಲ್ಲಿ ಅರಿಕೆ ಮಾಡಿದನು. ಖಂಡೇರಾಯನಿಗೆ ಇದು ಹೈದರನ ಹಣದಾಸೆಯ ಫಲವೆಂದು ತಿಳಿದು ಹೈದರನು ಸುಳ್ಳನೆವಗಳನ್ನು ಹೇಳಿ ಹಣವನ್ನು ಸೇಕರಿಸುತ್ತಾನೆಂದು ಅರಮನೆಯಲ್ಲಿ ತಿಳಿಸಿದನು. ಏಕಂದರೆ ಖಂಡೇರಾಯನಿಗೆ ಹೈದರನ ಪೂರ್ವ ವ್ಯತ್ತಾಂತವೂ ಸ್ವಭಾವವೂ ಚನ್ನಾಗಿ ತಿಳಿದಿತ್ತು.

ದೃಷ್ಟಾಂತಕ್ಕೆ ಹಿಂದೆ ಒಂದುಸಲ ನಂಜರಾಯ್ಯನು ಅಧಿಕಾರ ಮಾಡುತ್ತಿದ್ದಾಗ ಹೈದರನು ಕೆಲವು ಪಾಳಯಗಾರರನ್ನು ಆಡಗಿಸಲು ಸೈನ್ಯದೊಡನೆ ಹೊರಟು ಅವರನ್ನು ಉಪಾಯದಿಂದ ವಶ ಮಾಡಿಕೊಂಡು ನಂಜರಾಜಯ್ಯನಲ್ಲಿಗೆ ತಾನು ಹೆಚ್ಚಾಗಿ ಯುದ್ಧ ಮಾಡಿದಂತೆ ಸೈನಿಕರಲ್ಲಿ ಅನೇಕರು ಗಾಯಪಟ್ಟವರಂತೆಯೂ ವರದಿಯನ್ನು ಬರೆಸಿದನು. ನಂಜರಾಜಯ್ಯನು ಹೈದರನಿಗೂ ಇತರ ಅಧಿಕಾರಿಗಳಿಗೂ ಖಿಲ್ಲತ್ತುಗಳನ್ನೂ ಗಾಯಪಟ್ಟವರಿಗೆ ಜಖಂ ಪಟ್ಟಿ ಯನ್ನೂ ಒಬ್ಬ ಅಧಿಕಾರಿಯೊಡನೆ ಕೊಟ್ಟು ಕಳುಹಿಸಿದನು. ಜಖಂ ಪಟ್ಟಿಯೆನ್ನುವುದು ಗಾಯಪಟ್ಟವರಿಗೆ ಗುಣವಾಗುವವರೆಗೆ ತಿಂಗಳಿಗೆ ೧೪ ರೂ. ಯಂತೆ ವೇತನಕ್ಕೂ ಔಷಧೋಪಚಾರಗಳ ಸಹಾಯ ದ್ರವ್ಯಕ್ಕೂ ಹೆಸರಾಗಿತ್ತು. ಅಧಿಕಾರಿಯು ಗಾಯ ಪಡೆದವರನ್ನು ಸ್ವತಃ ನೋಡಿ ಜಖಂ ಪಟ್ಟಿಯನ್ನು ಕೊಡಿಸಬೇಕಾಗಿತ್ತು. ಆಗ ಹೈದರನು ಮಾಡಿದ್ದೇನು ? ನಿಜವಾಗಿ ಗಾಯಪಟ್ಟಿದ್ದವರು ೬೭ ಮಂದಿ; ಆದರೆ ಹೈದರನು ಸುಮಾರು ಏಳುನೂರು ಮಂದಿ ಸೈನಿಕರ ಕೈಕಾಲುಗಳಿಗೆ ಅರಿಶಿನದ ಅರಿವೆಗಳನ್ನು ಕಟ್ಟಿಸಿ ಅಧಿಕಾರಿಗೆ ತೋರಿಸಿದನು. ಆ ಸೈನಿಕರೂ ಹೈದರನ ಇಷ್ಟದಂತೆ ನಟಿಸಿದರು. ಈ ರೀತಿಯಲ್ಲಿ ೬೭ ಮಂದಿಗೆ ಬದಲಾಗಿ ೭೦೦ ಮಂದಿಗೆ ಲೆಕ್ಕವಾಗಿ ಪ್ರತಿಯೊಬ್ಬರಿಗೂ ೧೪ ರೂ. ಗಳಂತೆ ಸಂದಾಯವಾಯಿತು. ಅದರಲ್ಲಿ ಹೈದರನು ನಿಜವಾಗಿ ಗಾಯ ಪಡೆದಿದ್ದವರಿಗೆ ತಲೆಗೇಳು ರೂಪಾಯಿನಂತೆ ಕೊಟ್ಟು ಉಳಿದುದನ್ನು ತನ್ನ ಸ್ವಂತ ಬೊಕ್ಕಸಕ್ಕೆ ಸೇರಿಸಿದನು. ಇಂತಹ ಚಾತುರ್ಯಗಳು ಎಷ್ಟೋ ನಡೆದಿದ್ದವು. ಸಾಧಾರಣವಾಗಿ ಖಂಡೇರಾಯನು ಅವುಗಳೆಲ್ಲವನ್ನೂ ಬಲ್ಲವನಾಗಿದ್ದನು.

ಖಂಡೇರಾಯನಂತೆಯೇ ರಾಣಿವಾಸದ ಮಾತುಶ್ರೀಯವರೂ ಹೈದರನ ನಡತೆಯನ್ನು ಕಂಡು ಬೇಸರಪಟ್ಟರು. ಕರಾಚೂರಿ ನಂಜರಾಜಯ್ಯನ ಅಧಿಕಾರದಿಂದ ಪಾರಾಗಿ ಹೈದರನ ಅಧಿಕಾರಕ್ಕೊಳಗಾಗುವುದು ಖಂಡಿತವೆಂದು ತಿಳಿದು ಮಾತೃಶ್ರೀಯವರು ಖಂಡೇರಾಯನನ್ನು ಗೌಪ್ಯವಾಗಿ ಕರೆಸಿ ಪ್ರಮಾಣಮಾಡಿಸಿ, ಆತನೊಡನೆಯೂ ದೊರೆಗಳೊಡನೆ ಆಲೋಚನೆ ಮಾಡಿದರು. ಹೈದರಲ್ಲಿಯನ್ನು ಆದಷ್ಟು ಬೇಗನೆ ಅಡಗಿಸದಿದ್ದರೆ ರಾಜ್ಯವನ್ನೇ ಅಪಹಾರ ಮಾಡುವನೆಂಬುದು ಮೂವರಿಗೂ ಸ್ಪಷ್ಟವಾಗಿತ್ತು. ಆತನನ್ನು ಅಡಗಿಸಲು ಆ ಸಮಯವೂ ಅನುಕೂಲವಾಗಿತ್ತು; ಏಕೆಂದರೆ ಆತನ ಸೈನ್ಯದ ಬಹು ಭಾಗವು ಘಟ್ಟದ ಕೆಳಗಿನ ಸೀಮೆಯಲ್ಲಿತ್ತು; ಆತನ ಅಲ್ಪ ಸೈನ್ಯದೊಡನೆ ರಾಜಧಾನಿಯಲ್ಲಿ ಕೋಟೆಯ ಹೊರಗೆ ಇರುತ್ತಿದ್ದು, ಮತ್ತು ಮರಾಟೆಯವರ ದಂಡೊಂದು ರಾಜ್ಯದ ಉತ್ತರ ಭಾಗದಲ್ಲಿಯೇ ಇತ್ತು, ಮೊದಲು ಮರಾಟೆಯವರ ಸರದಾರ ವೀಸಾಜಿಪಂಡಿತನಲ್ಲಿಗೆ ಆಪ್ತನಾದವನೂ ಉಭಯ ಪರಿಚಿತನೂ ಆಗಿದ್ದ ಒಬ್ಬ ಸಾಹುಕಾರನನ್ನು ಕಳುಹಿಸಿ ಆತನ ಸೈನ್ಯವು ಸುಸಮಯದಲ್ಲಿ ಸಹಾಯವಾಗಿ ಬರುವಂತೆ ಮಾಡಿಕೊಂಡು, ಹೈದರನ ಅಲ್ಪ ಸೈನ್ಯವನ್ನು ಕೋಟೆಯ ಸೈನ್ಯದಿಂದ ಸೋಲಿಸಿ ಹೈದರನನ್ನು ಹಿಡಿಯಬಹುದೆಂದು ಆಲೋಚನೆ ನಡೆಯಿತು. ಮೊದಲು ಖಂಡೇರಾಯನು ಇಷ್ಟಪಡಲಿಲ್ಲ; ಏಕಂದರೆ ಹೈದರನ ಉಪ್ಪನ್ನು ತಿಂದು ಅಭಿವೃದ್ಧಿಗೆ ಬಂದಿದ್ದನು. ಆದರೆ ಹಿಂದೂ ರಾಜ್ಯವಾಗಿದ್ದುದು ಮುಸಲ್ಮಾನ ಕೈಗೆ ಸಿಕ್ಕಿಬಿಟ್ಟಿತೆಂಬ ಯೋಚನೆಯು ಹುಟ್ಟಿ ಖಂಡೇರಾಯನು ಅರಮನೆಯಲ್ಲಿ ನಡೆದ ಯೋಚನೆಯಲ್ಲಿ ಭಾಗಿಯಾದನು. ಈ ಯೋಚನೆಯಂತೆಯೇ ಎಲ್ಲ ಸನ್ನಾಹವೂ ನಡೆಯಿತು. ಮರಾಟೆಯವರು ಸಮಯಕ್ಕೆ ಬರುವುದಾಗಿ ಒಪ್ಪಿದರು. ಖಂಡೇರಾಯನು ಅವರ ಸಮಾಚಾರ ಬಂದೊಡನೆಯ ಕಾರ್ಯ ಭಾಗಕ್ಕೆ ಸಿದ್ಧನಾದನು.

ಆಗಸ್ಟ್ ೧೨ನೇ ತಾರೀಖಿನ ದಿನ ಮರಾಟೆಯವರು ಬಂದು ಸೇರುವುದಾಗಿ ಹೇಳಿಕಳುಹಿದ್ದರಾದುದರಿಂದ ಖಂಡೇರಾಯನು ಆ ದಿನ ಬೆಳಿಗ್ಗೆ ಕೋಟೆಯ ಬಾಗಿಲನ್ನು ನಿತ್ಯದಂತೆ ತೆಗೆಸದೆ ಮುಚ್ಚಿರ ತಕ್ಕದ್ದೆಂದು ಅಪ್ಪಣೆ ಮಾಡಿದನು. ಹೈದರನು ಸ್ವಲ್ಪ ಸೈನ್ಯದೊಡನೆ ಮಹಾನವಮಿಮಂಟಪದ ಬಳಿ ಇದ್ದನು. ಕೋಟೆಯ ಬಾಗಿಲು ಭದ್ರವಾದಮೇಲೆ ಖಂಡೇರಾಯನು ಗೋಡೆಯ ಮೇಲಿನ ಫಿರಂಗಿಗಳನ್ನು ಹೈದರನ ಬೀಡಿನ ಕಡೆ ತಿರುಗಿಸಿ ಗುಂಡು ಹಾರಿಸಿದನು. ಹೈದರನಿಗೆ ಈ ಫಿರಂಗಿಗಳ ಢಂಕೃತಿಯು ಆಶ್ಚರ್ಯವನ್ನು ಮಾಡಿತು. ಇದೇನೆಂದು ತಿಳಿಯಲು “ಖಂಡೇರಾಯರನ್ನು ಕರಕೊಂಡು ಬಾ” ಎಂದು ದೂತನೊಬ್ಬನನ್ನು ಅಟ್ಟಿದನು. ಆತನು ಕೋಟೆಯ ಕಡೆ ಹೋಗಿ ಬಂದು “ಕೋಟೆಯ ಬಾಗಿಲು ಹಾಕಿದೆ; ಮತ್ತು ಖಂಡೇರಾಯರೇ ಗೋಡೆಯ ಮೇಲೆ ನಿಂತು ಫಿರಂಗಿಗಳನ್ನು ಹೊಡೆಸುತ್ತಿದ್ದಾರೆ” ಎಂದು ತಾನು ಕಂಡುದನ್ನು ತಿಳಿಸಿದನು. ಕುಶಾಗ್ರಮತಿಯಾದ ಹೈದರನು ತಕ್ಷಣವೇ ಅನುಮಾನಶಕ್ತಿಯಿಂದ ಪಿತೂರಿ ನಡೆದಿದಯೆಂದು ಗ್ರಹಿಸಿದನು. ತನ್ನ ಕುಟುಂಬವನ್ನೂ ಮಕ್ಕಳನ್ನೂ ಒಂದು ಗುಡಿಸಲಿನಲ್ಲಿ ಮರೆಯಾಗಿಡಿಸಿ, ಸೈನಿಕರಿಗೆ ಅಲ್ಲಲ್ಲಿ ಮರೆಯಾಗಿದ್ದು ಫಿರಂಗಿಗಳ ಹೊಡೆತಕ್ಕೆ ಸಿಕ್ಕದಂತಿರತಕ್ಕದ್ದೆಂದು ಎಚ್ಚರಿಕೆ ಕೊಟ್ಟು, ನದಿಯನ್ನು ದಾಟಲು ಇತರರಾರಿಗೂ ಅನುಕೂಲವಾಗದಿರುವಂತೆ ತನ್ನವರನ್ನು ಕಳುಹಿಸಿ ಇದ್ದ ಹರಿಗೋಲುಗಳೆಲ್ಲವನ್ನೂ ಹಿಡತರಿಸಿ ಭದ್ರಪಡಿಸಿದನು. ಅತ್ತ ಖಂಡೇರಾಯನು ಫಿರಂಗಿಗಳನ್ನು ಹಾರಿಸಿದಮೇಲೆ ಮರಾಟೆಯವರ ಆಗಮನವನ್ನೆದುರು ನೋಡಿದನು; ಅವರು ಬರುವ ಸುಳಿವೇ ಕಾಣಲಿಲ್ಲ. ಆದ್ದರಿಂದ ಖಂಡೇರಾಯನು ಮತ್ತೇನನ್ನೂ ಮಾಡದೆ ಕಾಲ ಕಳೆಯಲು ಹೈದರನ ಬಳಿಗೆ ದೂತರನ್ನು ಸಂಧಿಗೆಂದು ಅಟ್ಟಿದನು. ಹೈದರನು ಇದನ್ನೂಹಿಸಿಕೊಂಡು ತನಗೂ ಕಾಲವು ಬೇಕಾಗಿದ್ದುದರಿಂದ ತಾನೂ ಸಂಧಿಯ ನಟನೆಯನ್ನು ತೋರಿದನು, ರಾತ್ರಿಯಾಗುವವರೆಗೂ ಈ ರೀತಿ ಕಳೆಯಿತು. ಹೈದರನಾಟವು ಮುಗಿಯಿತೆಂದು ಖಂಡೇರಾಯನು ತಿಳಿದು ಈ ಸಂದರ್ಭದಲ್ಲಿ ಹೈದರನು ಪ್ರಾಣಸಹಿತ ತಪ್ಪಿಸಿಕೊಂಡು ಹೋಗಲು ಅನುಕೂಲ ಮಾಡಿಕೊಟ್ಟನೆಂದು ಒಂದು ಹೇಳಿಕೆಯುಂಟು.

ಹೈದರನು ತನ್ನಲ್ಲಿದ್ದ ಹಣವೆಲ್ಲವನ್ನೂ ಒಟ್ಟುಗೂಡಿಸಿ ವಿಶ್ವಾಸಪಾತ್ರರಾಗಿದ್ದ ನೂರು ಸವಾರರು, ಇಬ್ಬರು ಅಧಿಕಾರಿಗಳು ಮತ್ತು ಇಬ್ಬರು ಸಾರಿಗೆಸವಾರರನ್ನು ಕರೆಸಿ ಅವರಲ್ಲಿ ಆ ಹಣವನ್ನು ಹಂಚಿದನು. ಕತ್ತಲಾದ ಕೂಡಲೆ ಎಲ್ಲರೂ ನದಿಯನ್ನು ಈಜಿಕೊಂಡು ದಾಟಿ ಉತ್ತರ ದಡವನ್ನು ಸೇರಿದರು. ಅಲ್ಲಿ ಎಲ್ಲರೂ ಸವಾರರಾಗಿ ಇಪ್ಪತ್ತು ಕುದುರೆಗಳನ್ನು ಬೇರೆಯಾಗಿ ಓಡಿಸಿಕೊಂಡು ದೌಡಾಯಿಸಿದರು. ಹೈದರನ ಹೆಂಡತಿ ಮಕ್ಕಳು ಮಹಾನವಮಿಯ ಮಂಟಪದ ಬಳಿಯ ಗುಡಿಸಲಿನಲ್ಲಿಯೇ ಇದ್ದು ಬಿಟ್ಟರು. ಹೈದರನು ತನ್ನ ಪರಿವಾರದೊಡನೆ ಈಶಾನ್ಯ ಮಾರ್ಗವನ್ನು ಹಿಡಿದನು.

ಮರಾಟೆಯವರು ಸಕಾಲಕ್ಕೆ ಬಾರದಿದ್ದುದು ಖಂಡೇರಾಯನ ಪ್ರಯತ್ನಕ್ಕೆ ಅಡ್ಡಿಯಾಯಿತು. ಅಂದು ಬಾರದೆ ಮರಾಠೆಯವರು ವೇಳೆ ಮೀರಿ ಮರುದಿನ ಬಂದರು. ಖಂಡೇರಾಯನು ಬೆಳಗಾದ ಕೂಡಲೆ ಹೈದರನು ಮಾಯವಾದುದನ್ನು ತಿಳಿದು, ಆತನ ಬಿಡಾರಕ್ಕೆ ಹೋಗಿ ಅಲ್ಲಿದ್ದ ಸಾಮಗ್ರಿಯೆಲ್ಲವನ್ನೂ ಕೋಟೆಯೊಳಕ್ಕೆ ಸಾಗಿಸಿ, ಆತನ ಹೆಂಡತಿ ಮಕ್ಕಳನ್ನು ಆದರದಿಂದ ಕೋಟೆಯೊಳಕ್ಕೆ ಕರೆಸಿಕೊಂಡು ಒಳ್ಳೆ ಮನೆಯೊಂದನ್ನು ಬಿಡಿಸಿ ಅಲ್ಲಿಳಿಸಿದನು. ಮತ್ತು ಹೈದರನು ಬೆಂಗಳೂರು ಕೋಟೆಯನ್ನು ಹಿಡಿಯಲು ಪ್ರಯತ್ನಿಸಬಹುದೆಂದು ಊಹಿಸಿ ಆ ಕೋಟೆಯು ರಾಜರಿಗೇ ಉಳಿಯುವಂತೆ ಅಲ್ಲಿಯ ಹಿಂದೂ ಸೈನಿಕರಿಗೆ ಎಚ್ಚರಿಕೆಯಿಂದಿದ್ದು ಅಲ್ಲಿಯ ಕಿಲ್ಲೇದಾರ ಕಬೀರ್ ಬೇಗನನ್ನು ಹಿಡಿದು ನಿರ್ಬಂಧದಲ್ಲಿಡಬೇಕೆಂದು ಆಜ್ಞೆಯನ್ನು ಕಳುಹಿಸಿದನು.

ಇತ್ತ ಹೈದರನು ರಾತ್ರಿಯೆಲ್ಲ ಸವಾರಿ ಮಾಡಿ ಅರವತ್ತು ಮೈಲಿ ದೂರ ಕಳೆದು ಅಲ್ಲಿ ಆನೆಕಲ್ಲಿನ ಕಡೆಗೆ ತಿರುಗಿದನು. ಆನೆಕಲ್ಲಿನಲ್ಲಿ ತನ್ನ ಬಂಧುವಾದ ಇಸ್ಮಾಯಿಲ್ ಬೇಗ್ ಇದ್ದನು; ಆತನಲ್ಲಿ ಅನುಮಾನಕ್ಕೆ ಆಸ್ಪದವಿರಲಿಲ್ಲ. ಬೆಂಗಳೂರಿನಲ್ಲಿ ಅಧಿಕಾರಿಯಾಗಿದ್ದ ಕಬೀರ್‌ ಬೇಗನು ಸ್ನೇಹಿತನೇ ಆಗಿದ್ದರೂ ಹೈದರನಿಗೆ ಆನೆಕಲ್ಲೇ ಉತ್ತಮವೆಂದು ತೋರಿತು. ಅಲ್ಲದೆ ಆನೆಕಲ್ಲಿನ ಬಳಿ ಒಂದು ಸೈನ್ಯವೂ ಸಿಕ್ಕುವ ಸಂಭವವೂ ಇದ್ದಿತು. ಬೆಳಗಾಗುವುದ ರೊಳಗಾಗಿ ಹೈದರನು ಆನೆಕಲ್ಲನ್ನು ತಲಪಿದನು; ದಾರಿಯಲ್ಲಿ ನಲವತ್ತು ಕುದುರೆಗಳು ಆಯಾಸಪಟ್ಟು ಮಧ್ಯದಲ್ಲಿಯೇ ನಿಂತವು. ಎಂಭತ್ತು, ಕುದುರೆಗಳೊಡನೆ ಆನೆಕಲ್ಲನ್ನು ಪ್ರವೇಶಮಾಡಿ ಇಸ್ಮಾಯಿಲ್ ಬೇಗನನ್ನು ಕಂಡು ಸಮಾಚಾರವನ್ನು ತಿಳಿಯಹೇಳಿ, ತಕ್ಷಣವೇ ಬೆಂಗಳೂರಿಗೆ ಹೊರಟು ಕಬೀರ್ ಬೇಗನ ಮನಸ್ಸನ್ನರಿತು ಅನುಕೂಲನಾಗಿದ್ದ ಪಕ್ಷದಲ್ಲಿ ಆತನು ಮಾಡಬೇಕಾದುದನ್ನು ಹೇಳಿ ಬರುವಂತೆ ಆತನನ್ನು ಕಳುಹಿಸಿದನು.

ಇಸ್ಮಾಯಿಲ್ ಬೇಗನು ಬೆಂಗಳೂರನ್ನು ಶೀಘ್ರವಾಗಿಯೇ ಸೇರಿದನು. ಕಬೀರ ಬೇಗನು ಹೈದರನ ಹಿತಚಿಂತಕನೇ ಆಗಿದ್ದನು. ಇಬ್ಬರೂ ಕರ್ತವ್ಯವೇನೆಂದು ಕೂಡಲೆ ನಿರ್ಧರಿಸಿದರು. ಅಲ್ಲಿದ್ದ ಸೈನಿಕರಲ್ಲಿ ಕೆಲವರು ಹಿಂದುಗಳೂ ಉಳಿದವರು ಮುಸಲ್ಮಾನರಾಗಿಯೂ ಇದ್ದರು. ಹಿಂದೂ ಸೈನಿಕರು ಖಂಡೇರಾಯನ ಮಾತನ್ನು ಮೀರತಕ್ಕವರಾಗಿರಲಿಲ್ಲ; ಆದ್ದರಿಂದ ಅವರನ್ನು ಕೋಟೆಯ ಕಾವಲಿನಿಂದ ತಪ್ಪಿಸಬೇಕೆಂದು ಆಲೋಚನೆ ನಡೆಯಿತು. ಸಮಯವೂ ಅನುಕೂಲವಾಗಿತ್ತು; ಪದ್ಧತಿಯಂತೆ ಅಂದು ಸೈನ್ಯಕ್ಕೆ ಬಟವಾಡೆಯಾಗಬೇಕಾಗಿತ್ತು. ಆಗ ಕಬೀರ ಬೇಗನು ಮುಸಲ್ಮಾನ ಸೈನಿಕರನ್ನು ಕಾವಲಿಗೆ ನಿಲ್ಲಿಸಿ, ಹಿಂದೂ ಸೈನಿಕರೆಲ್ಲರೂ ಬಟವಾಡೆಗಾಗಿ ಕೋಟೆಯಲ್ಲಿ ಸೇರಬೇಕೆಂದು ಆಜ್ಞೆ ಮಾಡಿದನು. ಯಾರಿಗೂ ಅನುಮಾನಪಡಲಿಕ್ಕಾಸ್ಪದವಿರಲಿಲ್ಲ. ಹಿಂದೂ ಸೈನಿಕರು ಈ ರೀತಿ ಕೋಟೆಯ ಬಾಗಿಲುಗಳನ್ನು ಕೊತ್ತಲಗಳನ್ನೂ ಬಿಟ್ಟು ಹೊರಟ ಕೂಡಲೆ ಖಂಡೇರಾಯನ ಆಜ್ಞೆಯ ಹೊತ್ತುಕೊಂಡು ಒಬ್ಬ ಸವಾರನು ಬಂದನು. ಸಮಯ ಮೀರಿ ಹೋಗಿತ್ತು; ಹಿಂದೂ ಸೈನಿಕರು ನಿರ್ಬಂಧದಲ್ಲಿ ಸಿಕ್ಕವರಾಗಿದ್ದರು. ಇತ್ತ ಇಸ್ಮಾಯಿಲ್ ಬೇಗನು ಎಲ್ಲವೂ ಅನುಕೂಲವಾಗಿದೆಯೆಂದು ಹೈದರನಿಗೆ ಹೇಳಿಕಳುಹಿದನು; ಅದನ್ನೇ ಹೊಂಚುತ್ತಿದ್ದ ಹೈದರನು ಸೈನ್ಯದೊಡನೆ ಅನೆಕಲ್ಲಿನಿಂದ ಅಂದೇ ಹೊರಟು ಸಂಜೆಯಲ್ಲಿ ಬೆಂಗಳೂರನ್ನು ತಲಪಿದನು. ಆ ದಿನ ಹೈದರನು ಒಟ್ಟು ೯೪ ಮೈಲಿಗಳ ದೂರವನ್ನು ಕುದುರೆಯ ಮೇಲೆಯೇ ಕಳೆದನು.

ಅಪಾಯದಿಂದ ಪಾರಾಗಿದ್ದರೂ ಹೈದರನ ಸ್ಥಿತಿಯು ಕಠಿಣವಾಗಿಯೇ ಇತ್ತು. ಬೆಂಗಳೂರು, ದಿಂಡುಗಲ್ಲು ಮತ್ತು ಬಾರಾ ಮಹಲುಗಳು ಮಾತ್ರವೇ ಅಧೀನವಾಗಿದ್ದವು; ರಾಜ್ಯ ಕೋಶಗಳು ಖಂಡೇರಾಯನ ಅಧೀನವಾಗಿದ್ದುವು; ಸೈನ್ಯವನ್ನು ಕೂಡಿಸುವ ಆಸೆಯೆಲ್ಲವೂ ಪುದುಚೇರಿ ಪ್ರಾಂತ್ಯದಲ್ಲಿದ್ದ ಮೊಖದುಂ ಅಲ್ಲಿಯ ಮೇಲಿನ ಭರವಸೆಯಲ್ಲಿತ್ತು. ತಕ್ಷಣವೇ ಹೊರಟುಬರತಕ್ಕುದೆಂದು ಮೊಖದುಂ ಅಲ್ಲಿಗೆ ಅನೆಕಲ್ಲಿನಿಂದಲೇ ಹೈದರನು ಆಜ್ಞೆ ಕಳುಹಿದ್ದನು. ಆದರೆ ದೂರಪ್ರಯಾಣವಾಗಿತ್ತು; ಮೊಖದುಂ ಅಲ್ಲಿಯು ಬರುವುದರೊಳಗೆ ಏನಾದರೂ ಸಂಭವಿಸಬಹುದಾಗಿತ್ತು. ಆದರೂ ಹೈದರನು ಎದೆಗೆಡಲಿಲ್ಲ. ಸಾಧ್ಯವಾದಷ್ಟು ಸೇನೆಯನ್ನು ಕೂಡಿಸಲು ತಕ್ಕ ಸನ್ನಾಹ ನಡೆಸಿದನು. ಬೆಂಗಳೂರಿನ ಸಾಹುಕಾರರಿಂದ ಹಣವನ್ನು ಸಾಲವಾಗಿ ತೆಗೆದುಕೊಂಡು ಸೈನಿಕರನ್ನು ಕೂಡಿ ಹಾಕಿದನು. ಹೈದರನು ಪ್ರಸಿದ್ದ ದಳಪತಿಯಾಗಿದ್ದನು. ಸಣ್ಣವರೂ ದೊಡ್ಡವರೂ ಬಂದು ಸೈನ್ಯದಲ್ಲಿ ಸೇರಿದರು. ಒಂಟೆ ಕುದುರೆ ನಾಯಕನೆಂದು ಹೆಸರು ಪಡೆದ ಯಕೀನ್‌ಖಾನನೂ, ಉತ್ತಮ ಕುಲಸ್ಥನೂ ಅನುಭವಶಾಲಿಯೂ ಆದ ಫಜಲುಲ್ಲಾಖಾನನೂ ಈ ಸಮಯದಲ್ಲಿಯೇ ಹೈದರನ ಬಳಗೆ ಬಂದು ಸೇರಿಕೊಂಡರು.

ಮೊಖದುಂ ಅಲ್ಲಿಯು ಪುದುಚೇರಿ ಪ್ರಾಂತ್ಯದಿಂದ ಹೊರಟು ಅಲ್ಲಲ್ಲಿದ್ದ ಸೈನ್ಯಗಳನ್ನು ಕೂಡಿಹಾಕುತ್ತ, ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದನು. ಖಂಡೇರಾಯನಿಗೆ ಇದು ತಿಳಿದಿತ್ತು. ಆತನು ಕಣಿವೆ ಕೆಳಗೆ ಪ್ರಬಲರಾಗಿದ್ದ ಇಂಗ್ಲೀಷರಿಗೂ ಫರಾನ್ಸಿಯವರಿಗೂ ರಾಜದ್ರೋಹಿಯಾದ ಹೈದರನು ರಾಜ್ಯಭ್ರಷ್ಟನಾದನೆಂಬ ಸಮಾಚಾರವನ್ನು ತಿಳುಹಿ, ಮೊಖದುಂ ಅಲ್ಲಿಯ ಸೈನ್ಯವು ಘಟ್ಟವನ್ನು ಪಾರಾಗಿ ಬಾರದಂತೆ ಮರಾಟೆಯವರ ದಳವನ್ನು ಕಳುಹಿಸಿದನು. ಮೊಖದುಂ ಅಲ್ಲಿಯು ಅಂಚೆಟ್ಟಿ ದುರ್ಗಕ್ಕೆ ಬಂದು ತಲಪುವ ವೇಳೆಗೆ ಖಂಡೇರಾಯನ ಕಡೆಯವರಾದ ಮರಾಟೆಯವರು ಅಡ್ಡಿಯಾದರು. ಇದನ್ನು ತಿಳಿದು ಹೈದರನು ಫಜಖುಲ್ಲಾಖಾನನನ್ನು ಬೆಂಗಳೂರಿನಿಂದ ಸೈನ್ಯದೊಡನೆ ಕಳುಹಿದನು. ಫಜಲುಲ್ಲಾಖಾನನು ಆನೆಕಲ್ಲನ್ನು ತಲಪಿ ಅಲ್ಲಿಂದ ಮರಾಟೆಯವರ ಮದ್ಯೆ ನುಗ್ಗಿ ಮೊಖದುಂ ಅಲ್ಲಿಗೆ ಸಹಾಯ ಮಾಡಲು ಸಾಹಸಪಟ್ಟನು. ಆದರೆ ಮರಾಟೆಯವರು ಆತನಿಗೆ ಆಸ್ಪದ ಕೊಡಲಿಲ್ಲ. ಆತನ ಸೇನೆಯು ಭಂಗವಾಗಿ ಪ್ರಯತ್ನವು ನಿಷ್ಪಲವಾಯಿತು. ಅತ್ತ ಮೊಖದುಂ ಅಲ್ಲಿಯ ಪಾಡು ದಿನೇದಿನೇ ಕಷ್ಟವಾಗುತ್ತಿತ್ತು. ಹೈದರನಿಗೆ ಉಳಿಗಾಲವು ತೋರಲಿಲ್ಲ.

ಇಂತಹ ಸಮಯದಲ್ಲಿಯೇ ಹೈದರನ ಅದೃಷ್ಟ ಪರೀಕ್ಷೆಯಾದಂತಾಯಿತು. ಮರಾಟೆಯವರು ಹೇಗಾದರೂ ಹಣಕ್ಕಾಸೆ ಪಡತಕ್ಕವರೆಂದುಕೊಂಡು ಹೈದರನು ವಿಸಾಜಿ ಪಂಡಿತನೊಡನೆ ಸಂಧಾನವನ್ನು ಮೊದಲಿಟ್ಟನು. ಸುಲಭವಾಗಿ ಮರಾಟೆಯವರು ಹೊರಟುಹೋಗುವರೆಂದು ಹೈದರನು ಸ್ವಪ್ನೇಪಿ ನೆನಸಿರಲಿಲ್ಲ. ಆದರೆ ಆಶ್ಚರ್ಯವೇ ನಡೆಯಿತು. ಮರಾಟೆಯವರು ಹೈದರನ ಮಾತಿಗೊಪ್ಪಿ ಪುಣೆಗೆ ಹೊರಡಲನುವಾದರು. ಇದರ ರಹಸ್ಯವೇನೆಂದರೆ ಪಾಣಿಪಟ ಕ್ಷೇತ್ರದಲ್ಲಿ ಅಹಮ್ಮದ್ ಷಹ ಅಬ್ದಾಲಿಯೊಡನೆ ಘೋರ ಸಂಗ್ರಾಮಕ್ಕೆ ಸಿದ್ದರಾಗಿ ನಿಂತಿದ್ದ ಮರಾಟೆಯವರಿಗೆ ಎಲ್ಲ ಸೈನ್ಯಗಳೂ ಬೇಕಾಗಿದ್ದವು. ವೀಸಾಜಿ ಪಂಡಿತನು ಅದಕ್ಕಾಗಿಯೇ ಆತುರದಿಂದ ಪುಣೆಗೆ ಹೊರಡಲನುವಾಗಿದ್ದನು. ಮರಾಟೆಯವರು ಹೊರಟುಹೋದುದು ಹೈದರನಿಗೇ ಅಲ್ಲದೆ ಇತರರಿಗೂ ಅಚ್ಚರಿಯನ್ನುಂಟುಮಾಡಿತು. ಅಂತೂ ಹೈದರನು ಅದೃಷ್ಟಶಾಲಿಯೆನ್ನುವುದು ಇದರಿಂದ ಸ್ಪಷ್ಟವಾಯಿತು.

ಹೈದರನು ಮೊಖದುಂ ಅಲ್ಲಿಯನ್ನು ಸೇರಿಕೊಳ್ಳಲು ಅವಕಾಶವಾದ ಕೂಡಲೆ ಕೊಯಿಮುತ್ತೂರು ಶಾಲ್ಯಗಳು ತನ್ನ ಸ್ವಾಧೀನದಲ್ಲಿಯೇ ಇರುವಂತೆ ಏರ್ಪಾಟುಮಾಡಿ, ನೈರುತ್ಯ ದಿಕ್ಕಿಗೆ ಪ್ರಯಾಣ ಮಾಡಿ, ಸೋಸಲೆಯ ಬಳಿ ಕಾವೇರಿ ನದಿಯನ್ನು ದಾಟಿದನು. ಫರಾನ್ಸಿ ಜನರ ಚಿಕ್ಕ ದಳವೊಂದು ಹೈದರನನ್ನು ಸೇರಿಕೊಂಡಿತು. ಖಂಡೇರಾಯನು ನಿದಾನ ಮಾಡಬಾರದೆಂದು ತನ್ನ ಸೈನ್ಯದೊಡನೆ ಹೊರಟು, ನಂಜನಗೂಡಿನ ಬಳಿ ಹೈದರನನ್ನು ಅಡ್ಡಿ ಮಾಡಿದನು. ಹೈದರನಲ್ಲಿ ೬,೦೦೦ ಕುದುರೆ, ೫,೦೦೦ ಕಾಲಾಳುಗಳು ಮತ್ತು ೨೦ ಫಿರಂಗಿಗಳೂ ಇದ್ದವು. ಖಂಡೇರಾಯನ ಸೈನ್ಯದಲ್ಲಿ ೭,೦೦೦ ಕುದುರೆ, ೬,೦೦೦ ಕಾಲಾಳುಗಳು ಮತ್ತು ೨೮ ಫಿರಂಗಿಗಳೂ ಇದ್ದುವು. ಸಂಖ್ಯೆಯಲ್ಲಿ ಖಂಡೇರಾಯನ ಸೈನ್ಯವು ದೊಡದಾಗಿದ್ದರೂ ಶಿಕ್ಷೆಯಲ್ಲಿ ಹೈದರನ ಸೈನ್ಯವು ಮೇಲಾಗಿತ್ತು. ಹೈದರನು ಕದನಕ್ಕೆ ಸಿಕ್ಕಬಾರದೆಂದು ಕಾಲ ತಳ್ಳುತ್ತಿದ್ದನು. ಆದರೆ ಖಂಡೇರಾಯನು ಮುಂದಾಗಿ ಕದನವನ್ನು ಹೂಡಿ ಹೈದರನನ್ನು ಚನ್ನಾಗಿ ಸೋಲಿಸಿಬಿಟ್ಟನು. ಹೈದರನು ಮಾಡಿದ ಪ್ರಯತ್ನವೆಲ್ಲವೂ ವ್ಯರ್ಥವಾದಂತೆ ತೋರಿತು.

ಆಗ ಹೈದರನ ಜಾಣತನದ ಪರೀಕ್ಷೆಯೊದಗಿತು. ಉಪಾಯಗಾರನಾದ ಹೈದರನು ಯಾರಿಗೂ ಏನನ್ನೂ ಹೇಳದೆ ಇನ್ನೂರು ಸೈನಿಕರನ್ನು ಸೇರಿಸಿ ಕರೆದುಕೊಂಡು ರಾತ್ರಿಯಲ್ಲಿ ಶಿಬಿರವನ್ನು ಬಿಟ್ಟು, ಬಳಸಿಕೊಂಡು ಪ್ರಯಾಣಮಾಡಿ, ಮರುದಿನ ಬೆಳಿಗ್ಗೆ ಕೊಣನೂರನ್ನು ತಲುಪಿ, ಅಲ್ಲಿದ್ದ ಕರಾಚೂರಿ ನಂಜರಾಜಯ್ಯನ ಮನೆ ಬಾಗಲಿಗೆ ಬಂದು ಅವರನ್ನು ಕಾಣಬೇಕೆಂದು ಪ್ರಾರ್ಥಿಸಿದನು. ನಂಜರಾಜಯ್ಯನು ಒಳಗೆ ಬರಮಾಡಿಕೊಂಡ ಕೂಡಲೆ ಹೈದರನು ಆತನಿಗೆ ಅಡ್ಡಬಿದ್ದು, ಆತನ ಕಾಲುಗಳನ್ನು ಹಿಡಿದು, “ತಮ್ಮ ಉಪ್ಪು ತಿಂದು ಬೆಳೆದು ತಮಗೆ ಕೇಡನ್ನು ಬಗೆದುದಕ್ಕಾಗಿ ನನ್ನ ಗತಿ ಹೀಗಾಯಿತು. ಈಗ ಬುದ್ದಿ ಬಂತು. ನಾನು ಹಿಂದೆ ಮಾಡಿದ ಅಪರಾಧಗಳನ್ನು ಮನ್ನಿಸಬೇಕು. ನನ್ನ ದುರದೃಷ್ಟಕ್ಕೆ ನನ್ನ ದ್ರೋಹವೇ ಕಾರಣ. ತಾವು ದೊಡ್ಡ ಮನಸ್ಸು ಮಾಡಬೇಕು, ಈ ದೀನದರಿದ್ರನನ್ನು ಉದ್ಧಾರ ಮಾಡಬೇಕು. ತಾವು ರಾಜಧಾನಿಗೆ ಹಿಂತಿರುಗಿ ಬರುವಿರಾದರೆ ಆ ಕಳ್ಳ ಖಂಡೇರಾಯನ ಆಟವು ಮುಗಿಯುವುದು. ರಾಜ್ಯವೂ ಉದ್ಧಾರವಾಗುವುದು” ಎಂದು ಅತಿ ದೈನ್ಯವನ್ನು ನಟಿಸಿ ಮೊರೆಯಿಟ್ಟನು. ನಂಜರಾಜಯ್ಯನೆಂದೂ ಚತುರನೆಂದೆನಿಸಿರಲಿಲ್ಲ; ಹೈದರನ ಉಪಾಯವನ್ನು ಭೇದಿಸುವ ಚಾತುರ್ಯವು ಆತನಲ್ಲಿರಲಿಲ್ಲ. ಆತನು ಹೈದರನ ಮಾತಿಗೆ ಮರುಳಾಗಿ ಆತನ ಜತೆಯಲ್ಲಿ ಸೇರಿ ರಾಜಧಾನಿಗೆ ಹೊರಡಲೊಪ್ಪಿದನು. ನಂಜರಾಜಯ್ಯನ ೨,೦೦೦ ಸೇನೆಯು ಹೈದರನನ್ನು ಸೇರಿತು. ಮತ್ತು ಮುಖ್ಯಸ್ಥರೆಲ್ಲರಿಗೂ “ಸರ್ವಾಧಿಕಾರಿ ಪದವಿಯಲ್ಲಿರುವ ನಾವು ರಾಜಧಾನಿಗೆ ಹೊರಟು ನಮ್ಮ ಅಧಿಕಾರವನ್ನು ಪೂರ್ವದಂತೆ ಮಾಡಲು ನಿಶ್ಚಯಿಸಿರುತ್ತೇವೆ. ಹೈದರಲ್ಲಿಯು ನಮ್ಮ ದಳವಾಯಿಯಾಗಿರುತ್ತಾನೆ. ಎಲ್ಲರೂ ನಮ್ಮ ಅಜ್ಞಾನುವರ್ತಿಗಳಾಗಿ ಹೈದರನಿಗೆ ಅನುಕೂಲರಾಗಿರತಕ್ಕದ್ದು” ಎಂಬ ಒಕ್ಕಣಿಕೆಯು ನಂಜರಾಜಯ್ಯನ ಹೆಸರಿನಲ್ಲಿ ಎಲ್ಲ ದಿಕ್ಕುಗಳಿಗೆ ಹೊರಟಿತು. ಹೈದರನು ಕೊಣನೂರಿಗೆ ಹೋಗಿ ತನ್ನ ಉಪಾಯವನ್ನು ಸಮಗ್ರವಾಗಿ ಸಾಧಿಸಿಯೇ ಬಿಟ್ಟನು.

ಆದರೆ ಖಂಡೇರಾಯನು ದಡ್ಡನಾಗಿರಲಿಲ್ಲ. ಹೊರಟು ಹೋಗುವಾಗ ಹೈದರನು ತನ್ನ ಸೈನಿಕರು ಖಂಡೇರಾಯನ ಕೈಗೆ ಸಿಕ್ಕದಂತಿದ್ದು ಆತನ ಸೈನ್ಯದ ಹಿಂದೆಯೇ ಇರುತ್ತ ಆದಷ್ಟು ಧ್ವಂಸವನ್ನು ಮಾಡುತ್ತಿರಬೇಕೆಂದು ಹೇಳಿಹೋಗಿದ್ದನು. ಸೈನಿಕರು ಅದರಂತೆಯೇ ವರ್ತಿಸುತ್ತಿದ್ದರು. ಹೈದರನು ಕೋಣನೂರಿಗೆ ಹೋದ ಸುದ್ದಿಯನ್ನು ತಿಳಿಯುತ್ತಲೇ ಖಂಡೇರಾಯನು ಹೈದರನ ಆಲೋಚನೆಯನ್ನು ಊಹಿಸಿಕೊಂಡು ಹೈದರನ ಸೇನೆಯು ಹೈದರನನ್ನು ಸೇರದಂತೆ ತನ್ನ ಸೇನೆಯನ್ನು ಇಬ್ಬರ ಮಧ್ಯೆ ನಡಸುತ್ತ ಹೈದರನನ್ನು ನಾಶಗೊಳಿಸಲು ಸನ್ನದ್ಧನಾಗಿದ್ದನು. ಖಂಡೇರಾಯನ ಚಾತುರ್ಯವು ಹೈದರನ ಉಪಾಯವನ್ನು ಸೋಲಿಸಿತು. ಹೈದರನ ಅವಸ್ಥೆ ಪುನಃ ದುರವಸ್ಥೆಯೇ ಆಯಿತು. ಅಂತಹ ವೇಳೆಯಲ್ಲಿಯೂ ಹೈದರನು ಮತ್ತೊಂದು ತಂತ್ರವನ್ನು ನಡೆಸಿದನು.

ಖಂಡೇರಾಯನು ಸೈನ್ಯದೊಡನೆ ಸಂಚರಿಸುತ್ತ, ಶ್ರೀರಂಗಪಟ್ಟಣಕ್ಕೆ ೨೬ ಮೈಲಿ ದೂರದಲ್ಲಿರುವ ಕಟ್ಟೆ ಮಳಲವಾಡಿಯ ಬಳಿ ಬಂದಿದ್ದನು. ಆತನ ಶಿಬಿರದಿಂದ ಹೈದರನು ಹತ್ತು ಮೈಲಿ ಮುಂದಿದ್ದನು. ಹೀಗಿರಲು ಹೈದರನು ನಂಜರಾಜಯ್ಯನ ಹೆಸರನ್ನೂ ಮೊಹರನ್ನೂ ಉಪಯೋಗಿಸಿ, ಖಂಡೇರಾಯನ ಸೈನ್ಯದಲ್ಲಿದ್ದ ಅಧಿಕಾರಿಗಳಿಗೆ ಕಾಗದಗಳನ್ನು ಈ ರೀತಿಯಾಗಿ ಬರೆಸಿದನು. “ನೀವೆಲ್ಲರೂ ಸ್ವಾಮಿ ಸೇವಾಪರರಾಗಿ ನಮ್ಮಾಜ್ಞೆಯನ್ನು ಪಾಲಿಸಲು ಕುತೂಹಲಿಗಳಾಗಿರುವಿರೆಂಬುದನ್ನು ತಿಳಿದು ಸಂತೋಷಪಟ್ಟಿದ್ದೇವೆ. ಆಗಲೇ ಗೊತ್ತುಮಾಡಿಕೊಂಡಂತೆ ನೀವೆಲ್ಲರೂ ಒಟ್ಟು ಸೇರಿ, ರಹಸ್ಯವಾಗಿ ಖಂಡೇರಾಯನನ್ನು ಸೆರೆಹಿಡಿದು ನಮಗೊಪ್ಪಿಸಿದ ಕೂಡಲೆ ನಿಮ್ಮ ಬಹುಮಾನಗಳು ನಿಮಗೆ ಸಲ್ಲುತ್ತವೆ. ನಿಮ್ಮ ಕ್ಷಿಪ್ರತೆಯನ್ನೇ ಎದುರುನೋಡುತ್ತಿದ್ದೇವೆ. “ಈ ಕಾಗದಗಳನ್ನು ಹೈದರನು ಒಬ್ಬ ಬೇಹುಗಾರನಿಗೆ ಕೊಟ್ಟು, ಕಾಗದಗಳು ಖಂಡೇರಾಯನ ಕೈಗೆ ಬೀಳುವಂತೆ ಹೇಗೆ ವರ್ತಿಸಬೇಕಾಗಿದ್ದಿತೋ ಅದನ್ನು ಹೇಳಿಕೊಟ್ಟನು.

ಕಾಗದಗಳನ್ನು ಹೊತ್ತ ಬೇಹಿನವನು ಅದರಂತೆಯೇ ಆಚರಿಸಿದನು. ಕಾಗದಗಳನ್ನು ಓದಿದೊಡನೆಯೇ ಖಂಡೇರಾಯನು ದಿಕ್ಕೆಟ್ಟು, ವಿಚಾರಶೂನ್ನನಾಗಿ ಹಿಂದುಮುಂದುನೋಡದೆ, ಯಾರೊಡನೆಯೂ ಆಲೋಚನೆ ಮಾಡದೆ, ತನ್ನ ಕುದುರೆಯನ್ನೇರಿ ಶ್ರೀರಂಗಪಟ್ಟಣಕ್ಕೆ ಓಡಿದನು. ಸ್ವಲ್ಪಹೊತ್ತಿನ ಮೇಲೆ ಸೇನೆಯಲ್ಲಿ ಖಂಡೇರಾಯನು ಮಾಯವಾದುದು ತಿಳಿದು ಮಹಾ ಕೋಲಾಹಲವೆದ್ದಿತು. ಸಮಾಚಾರವೇನೆಂದು ಯಾರಿಗೂ ತಿಳಿದಿರಲಿಲ್ಲವಾಗಿ ಒಬ್ಬೊಬ್ಬರೊಂದೊಂದು ಬಗೆಯಾಗಿ ಅನುಮಾನಪಟ್ಟು, ಏನೋ ಸರ್ವನಾಶವೇ ಆಗಿರಬೇಕೆಂದು ಭಯಪಟ್ಟು, ಅನ್ಯರಿಗೆ ತಿಳಿಯದ ಹಾಗೆ ಪ್ರತಿಯೊಬ್ಬರೂ ಸ್ವಕ್ಷೇಮಚಿಂತನೆಯನ್ನು ಮಾಡಲಾರಂಭಿಸಿದರು. ಈ ಸ್ಥಿತಿಯು ಹೈದರನಿಗೆ ತಿಳಿದಕೂಡಲೆ ಹಿಂದುಮುಂದು ಎರಡು ಕಡೆಗಳಲ್ಲಿಯೇ ಇದ್ದ ತನ್ನ ಸೈನ್ಯವನ್ನು ಅನಾಯಕನಾಗಿದ್ದ ಆ ಸೈನ್ಯದ ಮೇಲೆ ಬೀಳುವಂತೆ ಆಜ್ಞೆ ಕೊಟ್ಟನು. ಅತಿಸ್ವಲ್ಪಕಾಲದಲ್ಲಿಯೇ ಖಂಡೇರಾಯನ ದಿಕ್ಕೆಟ್ಟ ಸೈನ್ಯವು ಚದರಿ, ಪಲಾಯನ ಶಕ್ತರಾದವರು ಪಲಾಯನಪರರಾಗಿಯೂ, ಉಳಿದವರು ಶರಣಾಗತರಾಗಿಯೂ ಆದರು. ಹೈದರನ ಉಪಾಯವು ಕ್ಷಿಪ್ರವಾಗಿ ಫಲದಾಯಕವಾಯಿತು. ಖಂಡೇರಾಯನ ಯುದ್ಧಸಾಮಗ್ರಿಯೆಲ್ಲವೂ ಲಭಿಸಿದ್ದಲ್ಲದೆ ಆತನಿಗಿದ್ದ ಸೇನೆಯು ಚದರಿಹೋಯಿತು.

ತಕ್ಷಣವೇ ರಾಜಧಾನಿಗೆ ಹೈದರನು ಹೊರಡಲಿಲ್ಲ. ಆತುರ ಪಟ್ಟರೆ ಕೆಲಸ ಕೆಟ್ಟೀತೆಂದು ಯೋಚಿಸಿ ಹೈದರನು ಅಲ್ಲಿಯೇ ನಾಲ್ಕೈದು ದಿನಗಳು ನಿಂತನು. ಅತ್ತ ಕುದುರೆಗಳನ್ನು ಹತ್ತಿ ಪಲಾಯನಮಾಡಿದವರು ತಮ್ಮನ್ನು ಯಾರೂ ಹಿಂಬಾಲಿಸದಿರಲು ಸ್ವಲ್ಪ ಎಚ್ಚರತಪ್ಪಿ ಶ್ರೀರಂಗಪಟ್ಟಣದ ಕೋಟೆಯೊಳಕ್ಕೆ ಹೊರಡದೆ ಹೊರಗಡೆಯೇ ಇರುತ್ತಲಿದ್ದರು. ಹೈದರನು ನಾಲ್ಕೈದು ದಿನಗಳು ಕಳೆದಕಡಲೆ ಯಾರಿಗೂ ತಿಳಿಯದಂತೆ ಸಂಜೆಯಲ್ಲಿ ಹೊರಟು, ಮಧ್ಯರಾತ್ರಿ ವೇಳೆಗೆ ಸರಿಯಾಗಿ ಅಲ್ಲಿಗೆ ಬಂದು, ಅವರನ್ನು ಧ್ವಂಸ ಮಾಡಿ, ಕೋಟೆಯೊಳಗಿದ್ದವರು ಪ್ರತೀಕಾರಮಾಡುವ ಮೊದಲೇ ಅಲ್ಲಿಂದ ಮಾಯವಾಗಿ ಬಿಟ್ಟನು. ಖಂಡೇರಾಯನ ಸೈನ್ಯವೆಲ್ಲವೂ ಈ ರೀತಿಯಲ್ಲಿ ದಿಕ್ಕಾಪಾಲಾಯಿತು.

ಈ ಸಮಯದಲ್ಲಿಯೂ ಹೈದರನು ಆತುರಪಡಲಿಲ್ಲ. ಘಟ್ಟದ ಕೆಳಗಣ ಪ್ರಾಂತ್ಯಗಳೆಲ್ಲವನ್ನೂ ಸ್ವಾಧೀನ ಪಡಿಸಿಕೊಂಡ ಹೊರತು ಖಂಡೇರಾಯನೊಡನೆ ಪುನಃ ದ್ವಂದ್ವ ಪ್ರಯತ್ನ ಮಾಡಬಾರದೆಂದು ಗಜ್ಜಲಹಟ್ಟಿ ಕಣಿವೆಯ ಮಾರ್ಗವಾಗಿ ಹೊರಟು ಹೈದರನು ಈರೋಡನ್ನು ಹಿಡಿದು ಆ ಪ್ರಾಂತ್ಯದಲ್ಲಿ ತಮ್ಮ ಅಧಿಕಾರವನ್ನು ಭದ್ರಗೊಳಿಸಿಕೊಂಡನು. ತರುವಾಯ ಮೇ ತಿಂಗಳಲ್ಲಿ ಪ್ರಯಾಣಮಾಡಿ, ತನ್ನ ಸಮಸ್ತ ಸೈನ್ಯದೊಡನೆ ರಾಜಧಾನಿಯ ಬಳಿ ಬಂದು, ನದಿಯ ದಕ್ಷಿಣ ಡದಲ್ಲಿ ಬೀಡು ಬಿಟ್ಟು ಕೆಲಕಾಲ ಖಂಡೇರಾಯನೊಡನೆ ಸಂಧಾನಮಾತ್ರವನ್ನು ನಡೆಸುವವನಾಗಿ ನಟಿಸಿದನು. ಪ್ರತಿ ಸಾಯಂಕಾಲವೂ ತನ್ನ ಸೈನಕ್ಕೆ ದಡದ ಅಂಚಿನಲ್ಲಿ ಕವಾಯತು ಮಾಡಿ ಸುತ್ತ ಏಳು ದಿನಗಳನ್ನು ಕಳೆದನು. ಆತನೆದುರಿಗೇ ನಾನು ಆಚೆಯ ದಡದಲ್ಲಿದ್ದ ಖಂಡೇರಾಯನ ಸೈನದವರು ಈ ಉಪಾಯದಿಂದ ಮೋಸಹೋಗಿ ಎಚ್ಚರವಿಲ್ಲದಿದ್ದರು. ಎಂಟನೆ ದಿನ ಹೈದರನು ಕವಾಯತನ್ನು ಮಾಡಿಸುತ್ತಿದ್ದ ಹಾಗೆಯೇ ತಟಕ್ಕನೆ ಸೈನ್ಯಗತಿಯನ್ನು ಬದಲಾಯಿಸಿ, ಹೊಳೆಯನ್ನು ದಾಟಿಸಿ, ಖಂಡೇರಾಯನ ಸೈನ್ಯದ ಮೇಲೆ ಬಿದ್ದು ಅವರನ್ನು ದಿಕ್ಕಾಪಾಲಾಗಿ ಓಡಿಸಿ, ತನ್ನ ಸೈನ್ಯವನ್ನು ಕರೆದುಕೊಂಡು ಈಗ ಗಂಜಾಂ ಇರುವ ಎಡೆಯಲ್ಲಿ ಶಿಬಿರವನ್ನು ಸ್ಥಾಪಿಸಿದನು.

ಅಲ್ಲಿಂದ ಹೈದರನು ರಾಜರಿಗೆ “ಖಂಡೇರಾಯನು ನನ್ನ ಸೇವಕನಾದಾತನು. ಆತನನ್ನು ನನಗೆ ಬಿಟ್ಟುಕೊಡಬೇಕು. ಮತ್ತು ರಾಜ್ಯದಿಂದ ನನಗೆ ಸಲ್ಲಬೇಕಾದ ಹಣವು ವಿಶೇಷವಾಗಿರುತ್ತದೆ. ಅದನ್ನು ಸಲ್ಲಿಸಿ ಬಿಟ್ಟರೆ ನಾನು ಪೂರ್ವದಂತೆ ತಮ್ಮ ಸೇವಕನಾಗಿರುತ್ತೇನೆ. ಅದು ತಮಗಿಷ್ಟವಿಲ್ಲದಿದ್ದರೆ ಮತ್ತೆಲ್ಲಿಯಾದರೂ ಉದ್ಯೋಗವನ್ನು ಸಂಪಾದಿಸಿಕೊಳ್ಳುತ್ತೇನೆ. ರಾಜರ ಚಿತ್ತ” ಎಂದು ಹೇಳಿ ಕಳುಹಿಸಿದನು. ಅಧಿಕಾರಿವರ್ಗದವರಿಗೆ ಇದರ ಸಾರಾಂಶದೊಂದಿಗೆ ತನ್ನ ಇಷ್ಟ ಪೂರ್ತಿಯಾಗದಿದ್ದರೆ ಮುಂದೆ ತಾನು ಮಾಡತಕ್ಕದ್ದನ್ನು ತಿಳಿಯಪಡಿಸಿದನು. ಅಧಿಕಾರಿಗಳು ಸ್ವಾರ್ಥಪರರಾಗಿಯೂ ಹೇಡಿಗಳಾಗಿಯೂ ಇದ್ದುದರಿಂದ ಅನ್ಯಾಯದಿಂದಲೂ ಅಕ್ರಮದಿಂದಲೂ ಸಂಪಾದಿಸಿಕೊಂಡಿದ್ದ ತಮ್ಮ ಸ್ವಂತ ಆಸ್ತಿಪಾಸ್ತಿಗಳು ಉಳಿಯುವ ಮಾರ್ಗವನ್ನೇ ಆಲೋಚಿಸಿ ರಾಜರಿಗೆ ಇದ್ದ ಭಯವನ್ನು ಹೆಚ್ಚಿಸಿದರು. ರಾಜ್ಯವನ್ನಪಹಾರಮಾಡಿದರೂ ಹೈದರನು ರಾಜರ ಹೇಳಿಕೆಯಂತೆ ಅಪಹಾರಮಾಡಿದವನೆಂದು ಸಿದ್ದವಾಗುವಂತೆ ಸಂಧಾನಮಾಡಿದ್ದ ಹೈದರನ ಯುಕ್ತಿಯನ್ನೂ ಒಲವನ್ನೂ ಕಂಡು ಎಲ್ಲರೂ ನಿಶ್ಚೇಷ್ಟರಾದರು. ಹೈದರನ ಕಾಗದಕ್ಕೆ ಪ್ರತಿಯಾಗಿ ರಾಜರು “ನಮ್ಮ ಸ್ವಂತ ವೆಚ್ಚಕ್ಕೆ ಮೂರು ಲಕ್ಷ ಆದಾಯವನ್ನೂ, ಕರಾಚೂರಿ ನಂಜರಾಜಯ್ಯನಿಗೆ ಒಂದು ಲಕ್ಷ ಆದಾಯವನ್ನೂ ಬಿಟ್ಟು ಉಳಿದುದನ್ನು ಹೈದರನೇ ಹೊತ್ತು ರಾಜ್ಯಾಡಳಿತವನ್ನು ತಾಳಬೇಕೆಂದೂ ಖಂಡೇರಾಯನನ್ನು ಒಪ್ಪಿಸಲಾಗುವುದೆಂದೂ ಕೇಳಿ ಕಳುಹಿಸಲೊಪ್ಪಿದರು. ಹೈದರನು ಇವುಗಳನ್ನು ರಾಜಾಜ್ಞೆಯೆಂದೂ ತಾನು ರಾಜಾಜ್ಞೆಯನ್ನು ಶಿರಸಾವಹಿಸತಕ್ಕವನೆಂದೂ ಪ್ರಕಟಿಸಿ, ದೈನ್ಯವನ್ನೂ ವಿನಯವನ್ನೂ ನಟಿಸಿ ರಾಜಧಾನಿಯನ್ನು ಹೊಕ್ಕು, ತನ್ನ ಅಧಿಕಾರವನ್ನು ಮೊದಲಿಟ್ಟನು. ಆಗ ರಾಜರೂ ರಾಣಿವಾಸದವರೂ ಖಂಡೇರಾಯನನ್ನು ಉಳಿಸಬೇಕೆಂದು ಹೈದರನನ್ನು ಕೇಳಿಕೊಂಡರು. ಹೈದರನು “ಖಂಡೇರಾಯನು ನನ್ನ ಪೂರ್ವದ ಮಿತ್ರ, ಆಪ್ತನಾದ ಗೆಳೆಯನು. ಆತನನ್ನು ನಾನು ಗಿಣಿಯಂತೆ ಸಾಕುತ್ತೇನೆ” ಎಂದು ಹೇಳಿ ಕಳುಹಿಸಿದನು. ತರುವಾಯು ಹೈದರನು ಆತನ ಆಸ್ತಿ ಪಾಸ್ತಿಗಳೆಲ್ಲವನ್ನೂ ಜಪ್ತಿಮಾಡಿಸಿ, ಆತನ ಅನುಚರರನ್ನು ಬಂಧಿಸಿ, ಆತನನ್ನು ಒಂದು ಕಬ್ಬಿಣದ ಪಂಜರದಲ್ಲಿಡಿಸಿ ಗಿಣಿಗೆ ಹಾಕುವಷ್ಟು ಹಾಲನ್ನೂ ಅನ್ನವನ್ನೂ ಕೊಡಿಸುವ ಹಾಗೆ ಅಪ್ಪಣೆಮಾಡಿದನು. ಖಂಡೇರಾಯನು ಪಂಜರದಲ್ಲಿಯೇ ಸತ್ತನು. ಹೈದರನನ್ನು ಯಾರಾದರೂ “ಖಂಡೇರಾಯನಲ್ಲಿ ತಾವು ಬಹಳ ಕ್ರೌರ್ಯವನ್ನು ತೋರಿಸಿದಿರಿ” ಎಂದರೆ “ಏಕೆ, ನಾನು ಅವನನ್ನು ಗಿಣಿಯಂತೆ ಸಾಕಲಿಲ್ಲವೇ” ಎನ್ನುತ್ತಿದ್ದನು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...