ಸಾಸಿವೆಯಷ್ಟು ಸುಖಕ್ಕೆ…..

ಸಾಸಿವೆಯಷ್ಟು ಸುಖಕ್ಕೆ…..

ಇಡೀ ಕೋಣೆ ಸಿಗರೇಟ್ ವಾಸನೆಯಿಂದ ತುಂಬಿತ್ತು. ಕೋಣೆಗಿದ್ದ ಒಂದೇ ಒಂದು ಕಿಟಿಕಿ ಸಹ ಮುಚ್ಚಿತ್ತು. ಫ಼್ಯಾನ್ ತಿರುಗುತ್ತಿತ್ತು. ಕೋಣೆ ಯಿಂದ ಹೊರಹೋಗಲಾದ ಹೊಗೆ, ಫ಼್ಯಾನ್ ಗಾಳಿ, ಬಿಯರ್ ಕುಡಿದ ದೇಹದಿಂದ ಹೊರಟ ಉಸಿರು ಸೇರಿ ಇಡೀ ಕೋಣೆ ಯಲ್ಲಿ ವಿಚಿತ್ರ ಕಮುಟು ವಾಸನೆ ಸೃಷ್ಟಿ ಯಾಗಿತ್ತು. ಟಿ.ವಿ.ಯಲ್ಲಿ ಯಾವುದೋ ಇಂಗ್ಲಿಷ್ ಸಿನಿಮಾ ಮೂಡಿ ಬರುತ್ತಿತ್ತು. ಸಿ.ಡಿ.ಪ್ಲೇಯರ್ ತನ್ನ ಕಾರ್ಯ ನಿರ್ವಹಿಸುತ್ತಿತ್ತು. ಅನಂತಯ್ಯ ನೆಲಕ್ಕೆ ಹಾಸಿದ ಕೊಳಕು ಬೆಡ್ ಮೇಲೆ ಬಿದ್ದುಕೊಂಡಿದ್ದ ಅರೆ ಬೆತ್ತಲೆಯಾಗಿ.

ತಲೆದಿಂಬಿನ ಬಳಿ ರಿಂಗಣಿಸುತ್ತಿದ್ದ ಮೊಬೈಲ್. ಹಾಸಿಗೆ ಸುತ್ತ ದೇಹ ಸುಟ್ಟುಕೊಂಡು, ಬುಡಮಾತ್ರ ಉಳಿಸಿಕೊಂಡು ಬಿದ್ದಿದ್ದ ಹತ್ತಾರು ಸಿಗರೇಟ್ ತುಂಡುಗಳು. ನಾಲ್ಕಾರು ಬೀಯರ್ ಬಾಟಲ್. ಬಾಡಿಗೆ ಮನೆಯಲ್ಲಿ ಆತ ವಾಸವಾಗಿದ್ದ. ವಾರದಿಂದ ಗುಡಿಸದ ಮನೆ. ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದ ಬಟ್ಟೆ, ಕೋಣೆ ಸೇರಿದಂತೆ ದಟ್ಟ ದಾರಿದ್ರ್ಯದ ಅಲೆ ಮನೆಯ ಎಲ್ಲೆಡೆ ಮುತ್ತಿಡುತ್ತಿತ್ತು.

ಬಾಡಿಗೆ ಮನೆಯಲ್ಲಿ ಒಬ್ಬಂಟಿಯಾಗಿ ಬದುಕುವುದೆಂದರೆ ಎಂಥ ಅಸಹನೀಯ. ರಾತ್ರಿಪೂರಾ ಹಳವಂಡ ಯೋಚನೆಗಳಿಂದ ನಿದ್ದೆಗೆಟ್ಟಿದ್ದ ಅನಂತು ಗ್ರೀನ್ ಲ್ಯಾಂಡ್ ಬಾರ್ ನಿಂದ ತಂದಿದ್ದ ಬೀಯರ್ ನೆಲ್ಲಾ ಖಾಲಿ ಮಾಡಿದ ಪರಿಣಾಮ ತಲೆ ಹಿಡಿದುಕೊಂಡಿತ್ತು. ತಲೆ ಭಾರ ಇಳಿಸಲು ಹರಳೆಣ್ಣೆಯನ್ನ ತಲೆಗೆ ಸುರಿದುಕೊಂಡು, ಮತ್ತೆರಡು ಬೀಯರ್ ತರುವಂತೆ ಮನೆಯ ಬಳಿ ಮುಂಜಾನೆ ಬರಲಿದ್ದ ಮೋನಪ್ಪನ್ಗೆ ಹೇಳ್ಬೇಕೆಂದುಕೊಂಡ. ಬದುಕು ಹಳಿ ತಪ್ಪುತ್ತಿದೆ ಎಂದು ಅನ್ನಿಸ್ತು.

ಎಲ್ಲಿ ಆದ್ರೂ ಓಡಿ ಹೋಗಲೇ ಎಂಬ ಯೋಚ್ನೆ ಸುಳಿಯುತ್ತಿದ್ದಂತೆ ನಗುಬಂತು. ಸರ್ಕಾರಿ ನೌಕರಿ ಎಂಬ ಕಟ್ಟಳೆ ಕಣ್ಣಿಗೆ ಕವಿಯತೊಡಗಿತು. ಲಕ್ಷಗಟ್ಟಲೆ ಹಣ ಎಣಿಸುವ ಗೆಳೆಯರು ನೆಪ್ಪಿಗೆ ಬಂದ್ರು. ಕಳೆದ ವರ್ಷವಷ್ಟೇ ಹರಿದ್ವಾರ, ಕಾಶಿ, ತಾಜ್ ಮಹಲ್, ರಾಜಸ್ಥಾನ, ಮೌಂಟ್ ಅಬು ಸುತ್ತಿದ್ದು, ಕೊನೆಗೆ ದೆಹಲಿ ಪ್ರವಾಸ, ಅಲ್ಲಿನ ಬೀದಿಗಳಲ್ಲಿ ತಲೆ ಹಿಡುಕರು ಲಾಡ್ಜ್ ಗೆ ಕರೆದೊಯ್ದು ಬಿಟ್ಟಿದ್ದು, ನಂತರ ಅಲ್ಲಿ ಮಾಲ್ ಚಾಹಿಯೇ ಸಾಬ್, ಅಚ್ಚಾ ಫ಼ಿಗರ್, ಕಮ್ ಉಮ್ರಕಾ ಮಿಲ್ತಾ ಹೈ, ಚಾಹಿಯೇ ತೋ ಬೋಲ್…. ಮೇರಾ ಮೊಬೈಲ್ ನಂಬರ್ ರಖೋ ಸಾಬ್ ಎಂದು ಪಿಂಪ್ ಒಬ್ಬ ಕೇಳಿದ್ದು ನುಗ್ಗಿಬಂತು. ಮೊನಪ್ಪಾ ಬರುವವನಿದ್ದ. ಅವ ಬರುವುದನ್ನೇ ಕಾಯುತ್ತಾ, ಹಾಸಿಗೆಯ ಮೇಲೆ ಇದ್ದ ಸ್ಥಿತಿಯಲ್ಲೇ ಬಿದ್ದುಕೊಂಡ ಅನಂತು. ಶವಾಸನ ಎಂದುಕೊಂಡು ನಗತೊಡಗಿದ. ಹೆಂಡ್ತಿ, ಕಚೇರಿಯ ಸ್ಟೆಲ್ಲಾ ಎದುರಿಗನ ಗೋಡೆಯ ಮೇಲೆ ಸುಳಿದು ಮರೆಯಾದ್ರು. ಒಮ್ಮೆ ಅರ್ಬೀ ಸಮುದ್ರ, ಕಾಳಿ ನದಿ ಸಂಗಮದ ರೌದ್ರಾವಾತಾರ ನೆನಸಿಕೊಂಡ. ಮೈ ಜುಮ್ಮೆಂದಿತು. ಕಾಳಿ ಸೇತುವೆಯ ಮೇಲಿಂದ ಕೆಳಗೆ ಜಿಗಿದಂತೆ ಕಲ್ಪಿಸಿಕೊಂಡ. ಜೀವವೇ ಕೈಯಲ್ಲಿ ಬಂದಾಯ್ತು. ಸದಾಶಿಗಡ ಕೋಟೆಯ ಮೇಲಿಂದ ನಿಂತು ಗುಡ್ಡ ಸೀಳಿ ರೂಪಿಸಿದ ರಸ್ತೆ ಕೆಳಗೆ ಬಿದ್ದಂತೆ… ದೇಹ ತಣ್ಣಗಾಯ್ತು. ಕೆಟ್ಟ ಆಲೋಚನೆಗಳಿಗೆ ಬ್ರೇಕ್ ಹಾಕಲು ಯತ್ನಿಸಿ, ಟಿ.ವಿ. ಕಡೆಗೆ ದೃಷ್ಟಿ ನೆಟ್ಟ. ಅಲ್ಲಿಯೂ ಅಟ್ಟಸಿಕೊಂಡು ಬಂದ ದೃಶ್ಯ…. ಹೊರಗೆ ಕಾಲಿಂಗ್ ಬೆಲ್ ಶಬ್ದ.
* * *
ಮೋನಪ್ಪ ಆಫ಼ೀಸ್ ನಲ್ಲಿನ ಪೀವನ್. ಆಫ಼ೀಸರ್ ಅನಂತಯ್ಯನ್ನ ಸಹಾಯಕ. ಕಚೇರಿಯಲ್ಲಿ ಸಾಹೆಬ್ರು ಆಗಿದ್ದರೂ, ಮನೆಯಲ್ಲಿ ಸಹಾಯಕ ಮೋನಪ್ಪಗೆ ಸಮಾನತೆಯ ಪಾಠ ಆಗಾಗ ಹೇಳುವುದು ಸಾಮಾನ್ಯವಾಗಿತ್ತು. ಅನಂತು ಕುಡಿದರೆ ಒಮ್ಮೆಮ್ಮೊ ಮನುಷ್ಯನಂತೆಯೂ, ಮತ್ತೊಮ್ಮೆ ರಾಕ್ಷಸನಂತೆ ವರ್ತಿಸುವುದು ಮಾಮೂಲಾಗಿತ್ತು.

ಮೋನ್ಯಾ ’ನಿನ್ನೆ ರಕ್ತವಾಂತಿಯಾಯ್ತು. ಎಳೆ ನೀರು ಕುಡಿದೆ ಆದರೂ ಝಳ ಕಡಿಮೆ ಆಗ್ತಿಲ್ಲಾ’ ಎಂದು ನೂರಾ ಇಪ್ಪತ್ತನೇ ಸಲ ಹೇಳಿದ್ದನೇನೋ. ವಿಕಟ ನಗೆ ನಗುವುದು, ಕೆಲವೊಮ್ಮೆ ಅಳುವುದು ಕೋಣೆಯನ್ನು ತುಂಬಿಕೊಳ್ಳುತ್ತಿತ್ತು. ಸಾಹೇಬ್ರು ಕಣ್ಣೀರು ಹಾಕಿದ್ರೆ ಪಾಪ ಅನ್ಸುತ್ತಿತ್ತು ಮೋನಪ್ಪಗೆ.

ಹೆಂಡತಿ ದೂರವಾಗುತ್ತಿರುವುದು, ನೌಕರಿ ಯಿಂದ ತನಗೆ ೩೦ ಸಾವಿರ ಸಂಬಳ ಬರುವುದು, ರತ್ನಂ ಅವರ ಪದಗಳನ್ನು ಹಾಡುವುದು, ಕೋತಿ ತರಹ ವರ್ತಿಸುವುದು, ಹೇಳಿದ್ದನ್ನೇ ಸಾವಿರ ಸಲ ಹೇಳುವುದನ್ನು ಕೇಳಿದ್ದ ಮೋನಪ್ಪಗೆ ಹಲವು ಸಲ ರೇಜಿಗೆ ಅನ್ನಿಸುತ್ತಿತ್ತು. ಆದರೂ ವರ್ಷದಿಂದ ಹಲವು ಸಲ ಸಾಹೇಬನ ಕುಡುಕು ದರ್ಶನ ಕಂಡಿದ್ದರಿಂದ ಒಗ್ಗಿಹೋಗಿತ್ತು.

ಈ ಮಿಂಡ್ರಿಮಗ ಆಫ಼ೀಸರ್ ಯಾವಾಗ ಇಲ್ಲಿಂದ್ ಬಿಡ್ತಾನೋ ಎಂದು ಯೊಚ್ನೆ ಬರ್ತಿತ್ತು. ಕುಡಿದಾಗ ಹತ್ ಸಾಯ ಪಡ್ವಾ ’ಸಾಹೇಬ’, ಹತ್ತಾರು ಬೀರು ಬಾಟಲ್ ನಲ್ಲಿ ಉಳಿಸಿದ್ದನ್ನ ಸ್ವಲ್ಪ ಕೊಡ್ತಾನೆ ಎಂಬುದೇ ದೊಡ್ಡ ಉಪಕಾರ ಎಂದು ಭಾವ್ಸೊದು, ನಂಚಲು ತಂದ್ ಚಿಕನ್ ಸಿಕ್ಸಟಿಫ಼ೈವ್ ನಲ್ಲಿ ಮಾಂಸವಿಲ್ಲದ ಒಂದ್ಯಾಡು ತುಂಡು ಎಸೆದು ನಾಯಿಗಿಂತ ಕಡೆಯಾಗಿ ಕಾಣುವುದು, ಕುಡಿದಿದ್ದಾನೆ ಎಂಬ ನೆಪದಲ್ಲಿ ಹಲ್ಕಟ್ಟು ಬೈದು ಬಾಸಿಜಂ ತೋರಿಸಿಕೊಳ್ಳುವುದನ್ನು ಯಾಕೆ ಸಹಿಸಿಕೊಂಡಿರಬೇಕು? ಸಾಹೇಬ್ ವಿರುದ್ಧ ತಿರುಗಿಬಿದ್ದು ಬಿಡಲೇ ಎಂದೆನೆಸಿದರೂ, ’ತಿರುಗಿ ಮಾತನಾಡದ’ ಮೋನಪ್ಪ ಎಲ್ಲವನ್ನು ಅದುಮಿಕೊಂಡಿದ್ದ.

* * *
ಮೋನಪ್ಪನ ಸಾಹೆಬ್ರು ದೂರದ ರಾಯಚೂರಿನಾದ ಕಾರವಾರಕ್ಕೆ ಎರಡು ವರ್ಷದ ಹಿಂದೆ ವರ್ಗಾವಾಗಿ ಬಂದಿದ್ದ. ಹೊಸ ಸಾಹೇಬರು ಬಂದಾಗ ಅವರಿಗೆ ಬಾಡಿಗೆ ಮನೆಕೊಡಿಸಲು ನೆರವಾದವನೇ ಮೋನಪ್ಪ. ಬಾಡಿಗೆ ಮನೆ ಸಿಕ್ಕದಿನ ಸಾಹೇಬ ಚಿಕನ್ ಬಿರಿಯಾನಿ ಕೊಡಿಸಿದ್ರು. ಅದನ್ನು ತಿನ್ನದೇ ಮನೆಗೆ ಹೊಯ್ದಿದ್ದ ಮೋನಪ್ಪ ಬಿರಿಯಾನಿಯನ್ನು ಹೆಂಡತಿ ಮಕ್ಕಳಿಗೆ ನೀಡಿ ಸಂಭ್ರಮಿಸಿದ್ದ. ನೌಕರಿಗೆ ಸೇರಿ ಮೊವತ್ತು ವರ್ಷ ಸವೆಸಿದ್ದ. ಸರ್ವೀಸ್ ನಲ್ಲಿ ಎಂಟತ್ತು ಜನ ಸಾಹೆಬ್ರನ್ನ , ಅವರ ಹಗಲು ರಾತ್ರಿ ಕಾರ್ಯಾಚರಣೆ ಕಂಡಿದ್ದ ಆತ ಹೊರಹಾಕಲಾಗದ ನೂರಾರು ಸತ್ಯಗಳಿಗೆ ಮೌನ ಸಾಕ್ಷಿಯಾಗಿದ್ದ.

ಕಚೇರಿಯ ಟೈಫಿಸ್ಟ್ ಸ್ಟೆಲ್ಲಾ ಜೊತೆ ಚೆಲ್ಲಾಟವಾಡಲು ಹೋದ ರಾಮಮೂರ್ತಿ ಎಂಬ ಅಧಿಕಾರಿ ದೂರದ ಗುಲ್ಬರ್ಗಾಕ್ಕೆ ವರ್ಗಾವಾಗಿ, ಗುಲ್ಬರ್ಗಾದಲ್ಲಿದ್ದ ಅಧಿಕಾರಿ ರಾಯಚೂರಿಗೂ, ರಾಯಚೂರಿನಲ್ಲಿದ್ದ ಅನಂತು ಕಾರವಾರಕ್ಕೆ ಬಂದಾಗಿತ್ತು. ಇವರ ಅಧಿಕಾರದ ಅವಧಿ ಸಹಿಸುವುದು ಮೋನಪ್ಪಗೆ ಅನಿವಾರ್ಯವೂ ಆಗಿತ್ತು. ತಾನು ಮಾತ್ರ ಅರಬ್ಬೀ ಸಮುದ್ರದ ಅಲೆಗಳಂತೆ ಕಚೇರಿಯಿಂದ ಮನೆಗೆ, ಮನೆಯಿಂದ ಸಾಹೇಬ್ರು ಮನೆಗೂ ಅಲೆಯುವುದು ಮಾಮೂಲಾಗಿತ್ತು. ಬಸವನಹುಳುವಿನಂತೆ ಆತ ಕಚೇರಿಗೆ ಅಂಟಿಕೊಂಡಿದ್ದ. ಕಚೇರಿಯ ಜೊತೆಗೆ ಎಂಥದ್ದೋ ಸೆಂಟಿಮೆಂಟು ಮೋನಪ್ಪನ ಎದೆಯಲ್ಲಿ ಬೇರುಬಿಟ್ಟಿತ್ತು.

* * *
ಬೆಳಗಿನ ಐದು ಗಂಟೆ. ಸುಂಕೇರಿ ಮಸೀದಿಯಿಂದ ’ಅಲ್ಲಾ ಹೋ ಅಕ್ಬರ್’ ಎಂಬ ನಮಾಜ್ ಆರಂಬಾಯ್ತು. ನೌಕರಿಗೆ ಸೇರಿದ ಎರಡು ವರ್ಷಕ್ಕೆ ಅಧಿಕಾರಿಯೋರ್ವನ ಕೃಪೆಯಿಂದ ಸರ್ಕಾರಿ ಕ್ವಾಟರ್ಸ್ ಹಿಡಿದಿದ್ದ ಮೋನಪ್ಪಗೆ ಪಕ್ಕದ ಮಸೀದಿಯ ನಮಾಜ್ ಒಗ್ಗಿಹೋಗಿತ್ತು. ನಮಾಜ್ ಬಗ್ಗೆ ಒಂಥರಾ ಗೌರವ ಸಹ ಮೋನಪ್ಪನಲ್ಲಿ ಹುದುಗಿತ್ತು. ದೇವನೊಬ್ಬ ನಾಮ ಹಲವು ಎಂದು ಹೇಳುತ್ತಿದ್ದ ಹಿಂದಿನ ಅಧಿಕಾರಿ ರಾಮಮೂರ್ತಿಗಳ ಮಾತು ನೆನಪಾಯ್ತು. ನಮಾಜ್ ಮೂಡಿ ಗಾಳಿಯಲ್ಲಿ ತೇಲಿ ತೇಲಿ ಒಂದುಕಿವಿಯಲ್ಲಿ ಇಳಿಯುತ್ತಿದ್ದಂತೆ ಹಾಸಿಗೆಯಲ್ಲಿರುತ್ತಿದ್ದ ಮೋನಪ್ಪಗೆ ಎಚ್ಚರ ಆಗುವುದು ರೂಢಿಯಾಗಿತ್ತು. ಅಲ್ಲಿಂದ ದಿನದ ಕೆಲ್ಸಕ್ಕೆ ಅಣಿಯಾಗ್ತಿದ್ದ.

ರವಿವಾರ ಬೆಳಿಗ್ಗೆಯೇ ಸಾಹೇಬ್ರು ಮನೆಕಡೆ ಬರುವಂತೆ ಹೇಳಿದ್ದು ನೆನಪಾಯ್ತು. ಬಾಡಕರ್ ಅಂಗಡಿಯಿಂದ ಚಿಕನ್ ತಂದು ಮಕ್ಕಳಿಗೆ ಖುಷಿ ಪಡ್ಸಬೇಕೆಂದು ಕೊಂಡಿದ್ದ ಮೋನಪ್ಪ. ಅದ್ರೆ ಸಾಹೆಬ್ರು ಮನೆಗೆ ಹೋಗ್ಲೆಬೇಕು. ಅಲ್ಲಿಗೆ ಹೋದ್ರೆ, ಇಡೀ ದಿನ ಕೆಲ್ಸಾ ಮಾಡ್ಸಿಕೋತಾನೆ. ’ಅದು ತಾ, ಇದು ತಾ. ಸಿಗರೇಟು ಹಚ್ಚು, ಬೀಯರ್ ಹಾಕು…. ಬಾಟಲ್ ಎತ್ತಿಡು….’ ಎಂಬ ಆರ್ಡರಗಳ ಸರಮಾಲೆ. ಜೊತೆಗೆ ’ಸುಳೇಮಗ್ನೆ ನೀನು ಉದ್ಧಾರ ಆಗಲ್ಲ ಕಣೋ, ನೀನು ಬದ್ಮಾಷ್ ಇದ್ದೀಯ. ನಾನು ಬದ್ಮಾಷ್ ಇದ್ದೇನೆ. ಜೀವನದಲ್ಲಿ ಸೆಟ್ಲ ಆಗಬೇಕು, ಹಣ ಮಾಡ್ಬೇಕು’ ಎಂಬ ಸುಭಾಷಿತಗಳು ಬೇರೆ ಎಂದೆಲ್ಲಾ ನೆನಸಿಕೊಳ್ಳುತ್ತಲೇ, ”ರವಿವಾರವೂ ಬಿಡುವುದಿಲ್ಲ ಈ ಸುಳೇಮಗಾ’ ಅಂದು ಕೊಂಡ ಮೋನಪ್ಪ.

ಅಂತೂ ತನ್ನನ್ನು ತಾನೆ ಶಪಿಸಿಕೊಳ್ಳುತ್ತಾ, ತಮ್ಮ ಜನ್ಮವೇ ಹೀಗೆ ’ಅನ್ಯರ ಸೇವೆಯಲ್ಲಿ’ ಎಂದು ಕೊಳ್ಳುತ್ತಾ.. ಸಾಹೇಬ್ರ ಮನೆ ತಲುಪಿ ಪ್ರವೇಶದ್ವಾರದ ಬಳಿಯ ಕಾಲಿಂಗ್ ಬೆಲ್ ಒತ್ತಿದ.

’ಶನಿವಾರ ರಾತ್ರಿಯಿಂದಲೇ ಕುಡಿಯಲು ಆರಂಭಿಸಿರಬೇಕು… ಬೋಸುಡಿ ಮಗಾ… ಕಳ್ಳ……ಗಿಂಬಳದ ದುಡ್ಡನ್ನೆಲ್ಲಾ ಕುಡಿದು, ತಿಂದು…. ರಂಡೆಯರ್ಗೆ ಚೆಲ್ಲಿ ಸಾಯ್ತನೆ ಎಂದುಕೊಳ್ಳುತ್ತಿದ್ದಂತೆ’……

ಬಾಗಿಲು ತೆರೆದುಕೊಂಡಿತು.

ಮೋನ್ಯಾ ’ಎರ್ಡ್ ಬೀಯರ್, ಹೋಟೆಲಲ್ಲಿ ತಿಂಡಿ, ಎರ್ಡ್ ಪ್ಯಾಕ್ ಸಿಗರೇಟು ತಂಬಾ’ ಎಂದ ಅನಂತು ಕೈಯಲ್ಲಿ ನೂರರ ಎರಡು ನೋಟು ತುರುಕಿದ.

ಬೆಳಿಬೆಳಿಗ್ಗೆ ಯಾವ ಬಾರ್ ತೆಗ್ದಿರ್ತವೆ ಎಂದು ಒಂದು ಕ್ಷಣ ಯೋಚಿಸಿದ ಮೋನ್ಯಾಗೆ ನೆನಪಾದದ್ದು, ಆಳ್ವೆಕೋಡಿಯ ಶೀನನ ಮನೆ. ಅವ ಕದ್ದು ಮಾರುತ್ತಿದ್ದ ಬೀಯರ್ ಖರೀದಿಸಿದ. ಹೈವೇ ಪಕ್ಕದ ಹೋಟ್ಲಲ್ಲಿ ತಿಂಡಿ ಕಟ್ಟಿಸಿದ. ಗೂಡಂಗಡಿ ಯೊಂದರಲ್ಲಿ ಸಿಗರೇಟು ಖರೀದಿಸಿ ತನ್ನ ಹಳೇ ಕಾಲದ ಲೂನಾ ಹತ್ತಿದ್ದ.

’ಬಂದ್ಯಾ ಮೋನಾ…. ನೀನು ತುಂಬಾ ನಿಯತ್ತಿನ ಮನುಷ್ಯ ಕಣಯ್ಯ. ಎಲ್ಲಿ ಕೈ ಕೊಡು. ಎಡಗೈ ಕೊಡ್ಬೇಡಾ ಮಾದಿಗರಂಗ್ ಹ. ಬಲಗೈ ಕೊಡು’ ಎಂದ ಅನಂತು ಮೋನಪ್ಪನ ಕೈ ಕುಲುಕಿದ.

’ಸಾಹೇಬ್ರಾ ನಾನು ಇವತ್ತ ಬೇಗ ಹೋಗ್ಬೇಕು. ಮನ್ಗೆ ಚಿಕನ್ ತರ್ತಿನಿ ಎಂದು ಹೇಳಿ ಬಂದೀನ.

’ಆಯ್ತು ಮಾರಾಯಾ, ನಿಮಗೆಲ್ಲಾ ಹೆಂಡ್ತಿ ಮಕ್ಕಳು ಇದ್ದಾರಾ? ನಮಗಿಲ್ಲಾ ನೋಡು. ರವಿವಾರ ಸಹ ಹೀಂಗಾ ಒಬ್ನಾ ಇರ್ಬೇಕು. ನಾನು ಈ ಸಲ ಟ್ರಾನ್ಸಫರ್ ಮಾಡ್ಸಿಕೋತಿನಿ, ನಿಂಗೆ ಕರುಣೆ ಇಲ್ಲ. ನಾವಿಲ್ಲಿ ಸಾಯ್ತಾ ಇದೀವಿ.’ ಎಂದು ಸೆಂಟಿಮೆಂಟ್ ಕೆರಳಿಸಲು ಯತ್ನಿಸಿದ ಅನಂತಯ್ಯ.

’ಹೋಗ್ಲಿ ಬಿಡ್ರಿ ಸಾಹೇಬ್ರಾ, ಏನ್ ಮಾಡ್ಬೇಕೇಳ್ರಿ’
’ಇವತ್ತು ಆಕಿ ಸಿಗ್ತಳೇನು ನೋಡು….. ಒಂದು ಪೋನ್ ಹಾಕು….’

ಹಡಬಿ ನನ್ ಮಗಾ ಎಂದು ಮನದಲ್ಲೇ ಅಂದುಕೊಳ್ಳುತ್ತಾ ’ಅಲ್ಲೇ ಗ್ವಾಡಿ ಮ್ಯಾಲಾ ನಂಬ್ರ ಬರ್ಕೊಂಡಿರಲ್ಲಾ, ನೀವಾ ಮಾಡ್ರಿ ಸಾಹೆಬ್ರಾ’ ಎಂದ.

’ಎಲಿ ನಂಬರ್ ವದರು’ ಎಂದ ಅನಂತು ಮೊಬೈಲ್ ಎತ್ತಿಕೊಂಡ. ಕೋಣೆ ಯಿಂದ ಮನೆಯ ಮತ್ತೊಂದು ಕಡೆಗೆ ಹೋದ ಅನಂತು ಏನೇನೋ ಸಣ್ಣದನಿಲಿ ಮಾತಾಡಿಕೊಂಡ್ರು. ಕೊನೆಗೆ ಮಾತು ನಿಂತಿತು.

ಸಾಹೇಬ್ರಾ ಮುಂದೇನು? ತಿಂಡಿ ಕೊಡ್ಲಾ……’

’ಆಯ್ತಪ್ಪಾ ಕೊಡು’ ಎಂದು ನಿಟ್ಟುಸಿರು ಬಿಡುತ್ತಾ…. ಎರಡು ಸಾವಿರ ರೂ.ಕೊಡ್ಬೇಕಂತ. ಎಂಥ ಸುಂದ್ರಿ ಇರ್ಬಹುದು. ತಲೆ ಹಿಡುಕ್ರು ಕುಂತ್ಕಂಡಲ್ಲೇ ದುಡ್ಡು ಮಾಡ್ತಾರೆ ಎಂದು ಶಪಿಸಿದ ಸಾಹೇಬ.

’ಎಲ್ಲಿದಂಥ್ರಿ’

’ಕಾಣಕೋಣದ್ದೋ, ಕೊಲ್ಲಾಪುರದ್ದೋ ಅಂಥಿದ್ಲು.’

’ಏನ್ಮಾಡ್ತೀರಿ ಎಂದು ಕೆಣಕಿದ’ ಮೋನ್ಯಾ

’ಕರ್ಕೊಂಬಾ ನೋಡೋಣ ಅಂದೀನ.’

’ಮೋನ್ಯಾ, ಬಿಯರ್ ಒಪನ್ ಮಾಡು. ಅಲ್ಲಿ ಪ್ಲೇಟ್ ಇದೆ ನೋಡು. ತಿಂಡಿ ಹಾಕು.’

ತಿಂಡಿ ತಿಂದ ಅನಂತು ಸಿಗರೇಟು ಹಚ್ಚಿ ಮತ್ತೆ ಮಾತು ಶುರು ಮಾಡಿದ್ರು.

’ಮೋನಪ್ಪಾ, ಹೆಂಡ್ತಿ ಡೈವರ್ಸ ಕೊಡ್ತಾಳಂತೆ.’

’ಫೋನ್ ಬಂದಿತ್ತಾ ಸಾಹೆಬ್ರಾ’

’ಬಂದಿತ್ತು. ಯಾವನೋ ಮಿಂಡ್ ಗಾರನ ಜೊತೆಗೆ ಇದ್ಲೇನೋ’

’ಮತ್ತೆ… ನೀವಿಲ್ಲಿ’ ಅಂದ ಮೋನ್ಯಾ. ಮಾತು ಚುಚ್ಚಿದ್ ಹಾಂಗಾತು.

’ಲೇ…. ಸುಮ್ನಿರು, ಶರೀಫ಼್ ಸಾಹೆಬ್ರು ಏನೆಳ್ಯಾರಾ… ಮೋಹದ ಹೆಂಡ್ತಿ ತೀರ್ದ ಬಳಕಾ…. ನಾ ಆಕಿ ಸತ್ತಳಾಂತ ತಿಳ್ದಿನೀ….. ನಮ್ಮಂತಾ ಹೊಲಿ ಸುಳ್ಯಾ ಮಕ್ಳು….. ಆ ಬಿಳಿ ಹುಡ್ಗಿನ ಮದ್ವಿ ಆಗ್ಬಾರದಿತ್ತು, ಆಗಿಬಿಟ್ಟೆ… ಇಲ್ಲಿಲ್ಲಾ…. ಆಕಿನಾ ಮ್ಯಾಲ ಬಿದ್ದ್ ಅದ್ಲು…. ನಾ ಹಾಡ್ತಿದ್ದೆ ನೋಡು, ಅದ್ಕ ಮರಳಾಗಿದ್ಲು. ಅದ್ರ ಮುಂದ ನಡೆದದ್ದ ಬ್ಯಾರೆ. ಹೊಂದಾಣಿಕೆ ಆಗ್ಲಿಲ್ಲ. ಜಾಲಿ ಮರ ಎಲ್ಲಿ? ಬಾಳೆ ದಿಂಡು ಎಲ್ಲಿ? ನಮ್ಗಾ ಎಲುಬು ಇಲ್ಲದಿದ್ದರೆ ಆಗಲ್ಲಾ… ಮೈ ತೊಳಿಯಕ್ಕ ಮನಸ ಬರಲ್ಲಾ… ಹೊಲ್ಸ ಸುಳ್ಳಾಮಕ್ಳು ನಾವು….. ಮತ್ತೆ ರಕ್ತ ವಾಂತಿ ಆಗಿತ್ತು. ನಾನು ಇಲ್ಲಿರುವುದಿಲ್ಲ’ ಎಂದು ಬಡಬಡಿಸಿದ್ರು. ಭಾವುಕರಾದರೋ , ಭಾವುಕರಾದಂತೆ ನಟ್ಸಿದ್ರೋ ಅಂತು ಗೊಂದಲ ತಲೆ ತಿನ್ನ ತೊಡಗಿತು.

’ಏನೋ ಆಗಲಿದೆ, ಇಲ್ಲಿಂದ ಕಾಲ್ಕೀಳ’ ಬೇಕೆಂದು ಕೊಂಡ ಮೊನಪ್ಪ.

ಸಾಹೇಬ್ರು ಬೀಯರ್ ಇಳಿಸತೊಡಗಿದ್ರು. ಮೀಡಿಯೇಟರ್ ಮೀನಾ ’ಹಕ್ಕಿ’ಯನ್ನ ಕರೆತರುವಳಿದ್ಲು.

’ಮೋನಪ್ಪ ನೀ ಹೊರಡು’ ಎಂಬ ಆದೇಶ ಬೀಳುತ್ತಿದ್ದಂತೆ ಆತ ಇಲ್ಲಿಂದ ಕಾಲ್ಕಿತ್ತ.

ಸೋಮವಾರ ಬೆಳಿಗ್ಗೆ ೯ ಗಂಟಿಗೆ ದೃಶ್ಯವಾಹಿನಿಯಲ್ಲಿ ಫ಼್ಲಾಶ್ ನ್ಯೂಸ್ ಬರುತ್ತಿತ್ತು. ಮೋನಪ್ಪ ಕಚೇರಿಗೆ ಹೊರಡುವ ಗಡಿಬಿಡಿಯಲ್ಲಿದ್ದ. ಟಿ.ವಿ.ಯಲ್ಲಿ ’ರಾಯಚೂರು ಮೂಲದ ಹಿರಿಯ ಅಧಿಕಾರಿ ಕಾರವಾರದಲ್ಲಿ ನೇಣಿಗೆ ಶರಣು’ ಸುದ್ದಿ ಕೇಳುತ್ತಿದ್ದಂತೆ ಗರಬಡಿದವನಂತೆ ನಿಂತ. ಕ್ಷಣಹೊತ್ತು ಸುಧಾರಿಸಿಕೊಂಡು ಸಾಹೇಬ್ರ ಬಾಡಿಗೆ ಮನೆಯ ಕಡೆಗೆ ಲೂನಾ ಹತ್ತಿದ. ಜನ ಜಂಗುಳಿ ಸಾಹೇಬ್ರ ಮನೆಮುಂದೆ ನೆರೆದಿದ್ರು. ಪೋಲೀಸರು ಜನರನ್ನು ಚದುರಿಸುತ್ತಿದ್ದರು. ಪಿ ಎಸ್ ಐ ಮನೆಯನ್ನ ಸೂಕ್ಷ್ಮವಾಗಿ ಪರಿಶೀಲಿಸ್ತುತ್ತಿದ್ದರು. ಕೋಣೆಯಲ್ಲಿ ನೇತಾಡುತ್ತಿದ್ದ ಹೆಣದ ಕೆಳಗೆ ಬರೆದಿಟ್ಟಿದ್ದ ಪತ್ರ… ಕೋಣೆಯ ಮೂಲೆಯೊಂದರಲ್ಲಿ ಬಿದ್ದಿದ್ದ ವೇಲ್, ಲಿಪ್ಸ್ಟಿಕ್ ಹಿರಿಯ ಪೋಲೀಸ್ ಅಧಿಕಾರಿಯ ಕೈ ಸೇರಿದವು.
*****
(ಜುಲೈ ೨೦೦೯)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನತದೃಷ್ಟ
Next post ಜಂಜಾಟ

ಸಣ್ಣ ಕತೆ

 • ಜುಡಾಸ್

  "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

 • ಏಕಾಂತದ ಆಲಾಪ

  ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

 • ಮಂಜುಳ ಗಾನ

  ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

 • ಯಿದು ನಿಜದಿ ಕತೀ…

  ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

 • ಕರಾಚಿ ಕಾರಣೋರು

  ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…