ಉರಿವ ಮಹಡಿಯ ಒಳಗೆ

ಉರಿವ ಮಹಡಿಯ ಒಳಗೆ

ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು ಎತ್ತರಿಸಿ ಸುತ್ತಲೂ ನೋಡಿದ. ಯಾರೂ ಇಲ್ಲ. ಎಲ್ಲರೂ ತಮ್ಮ ತಮ್ಮ ಕೆಲಸ ಮುಗಿಸಿ ಮನೆಯ ಕಡೆ ಕ್ಯಾಬ್‌ನಲ್ಲಿ ಪ್ರಯಾಣಿಸಿಯಾಗಿತ್ತು. ಅವನಿಗೆ ಆರಾಮ ಎಣಿಸಿತು. ಹಲವು ವರ್ಷಗಳಿಂದ ಅನಿವಾರ್ಯದಿಂದಲೋ, ಅಲ್ಲಾ ಕಾಲನ ಹೊಡೆತದಿಂದಲೋ ಅವನು ನಿಶ್ಯಬ್ಧತನವನ್ನು ಮತ್ತು ಏಕಾಂಗಿತನವನ್ನು ಬಹಳವಾಗಿ ಮೆಚ್ಚಿಕೊಂಡಿದ್ದ. ಮನುಷ್ಯ ಹುಟ್ಟುವಾಗಲೂ, ಸಾಯುವಾಗಲೂ, ಸುಖಿಸುವಾಗಲೂ, ದುಃಖಿಸುವಾಗಲೂ ಏಕಾಂಗಿ ಎಂದ ಮೇಲೆ ಇರುವಿಕೆಯಲ್ಲೂ ಏಕಾಂಗಿತನ ಏಕೆ ಸಹ್ಯವಾಗಬಾರದು? ಮಧುಕರ ಎದ್ದು ನಿಂತ. ಮೈ ಕೊಡವಿಕೊಂಡ ಜವಾಬ್ದಾರಿಯ ಸ್ಥಾನದಲ್ಲಿರುವುದರಿಂದ ಕೆಲಸದ ಒತ್ತಡ ಇನ್ನೂ ಇತ್ತು. ಯಾವುದೇ ಕೆಲಸವನ್ನಾಗಲೀ ಅವನು ಶ್ರದ್ದೆಯಿಂದ ಕರ್ತವ್ಯವೆಂಬಂತೆ ಪಾಲಿಸುತ್ತಿದ್ದ. ಎಂತಹ ಒತ್ತಡದಲ್ಲೂ ಅವನು ಗ್ರಾಹಕರೊಂದಿಗೆ ತಾಳ್ಮೆ ಕಳೆದು ಕೊಂಡು ಬೇಜವಬ್ದಾರಿಯಿಂದ ವರ್ತಿಸುತ್ತಿರಲಿಲ್ಲ. ತನ್ನ ವೈಯುಕ್ತಿಕ ಸಮಸ್ಯೆಗಳನ್ನು ತನ್ನ ಕಸುಬುನೊಂದಿಗೆ ಎಂತಹ ಸಂದರ್ಭದಲ್ಲೂ ಕಲಬೆರಕೆ ಮಾಡಿ ಕೊಳ್ಳುತ್ತಿರಲಿಲ್ಲ. ಆದುದರಿಂದ ಮಧುಕರ ಕಂಪೆನಿಗೆ ಹಾಗೂ ಮೇಲಾಧಿಕಾರಿಗಳಿಗೆ ಆಸ್ತಿಯಾಗಿದ್ದ.

ಮಧುಕರ ಕ್ಯಾಂಟೀನ್ ಕಡೆ ಸಾಗಿದ. ಅವನ ಪ್ರತೀ ಹೆಜ್ಜೆಯಲ್ಲೂ ಆಲೋಚನೆ ಮಡುಗಟ್ಟಿತ್ತು. ಆಲೋಚನೆಗಳೊಂದಿಗೆ ಅವನ ಹೆಜ್ಜೆಗಳೂ ನಿಧಾನವಾಗಿ ಸಹಕರಿಸುತ್ತಿದ್ದುವು. ಅವನ ಬರುವಿಕೆಯನ್ನು ದೂರದಿಂದಲೇ ನೋಡಿದ ಕ್ಯಾಂಟೀನ್ ಮಾಲಕ ಕಾಫಿ ರೆಡಿ ಮಾಡಿದ.

“ಸರ್, ತಾವು ತಪ್ಪು ತಿಳಿದುಕೊಳ್ಳುವುದಿಲ್ಲವಾದರೆ ಒಂದು ಪ್ರಶ್ನೆಯನ್ನು ಕೇಳಬಹುದೇ?” ಕ್ಯಾಂಟೀನ್ ಮಾಲಕ ಕಾಫಿ ತಂದಿಡುತ್ತಾ ದೇಶಾವರಿ ನಗೆ ನಕ್ಕು ಕೇಳಿದ. ಕೆಲಸದ ಶಿಫ್ಟ್‍ನ ಸಮಯ ವಲ್ಲವಾದುದರಿಂದ ಕ್ಯಾಂಟೀನ್‌ನಲ್ಲಿ ಹೆಚ್ಚಿನ ಗಿರಾಕಿಗಳು ಬಂದಿರುದಿಲ್ಲ. ಕಾಫಿ ಹೀರುತ್ತಾ ಮಧುಕರ ಮಾಲಕನ ಮುಖ ನೋಡಿದ. ಮಾಲಕನಿಗೆ ಮುಜುಗರವಾಯಿತು. ಕ್ಷಮಿಸುವಂತೆ ಮುಖ ಸಣ್ಣಗೆ ಮಾಡಿದ. ಮಧುಕರ ಪ್ರಶ್ನೆ ಕೇಳುವಂತೆ ತಲೆಯಲ್ಲಾಡಿಸಿದ. “ಸರ್, ಹಲವು ವರ್ಷದಿಂದ ನೋಡುತಿದ್ದೇನೆ. ತಾವು ರಜೆಯಲ್ಲೂ ಬಂದು ಕೆಲಸ ಮಾಡುತ್ತೀರಿ. ಅಲ್ಲದೆ ಎಲ್ಲರೂ ಸಂಜೆ ಆರು ಗಂಟೆಯ ಒಳಗೆ ಕ್ಯಾಬ್‌ನಲ್ಲಿಯೋ, ಕಾರ್‌ನಲ್ಲಿಯೇ ಮನೆಗೆ ತೆರಳುತ್ತಿದ್ದರೆ, ತಾವು ಸುಮಾರು ಹತ್ತು ಗಂಟೆ ರಾತ್ರಿಯಾದರೂ ಕೆಲಸ ಮಾಡುತಿದ್ದೀರಲ್ಲಾ? ಮನೆಯವರು ಆಕ್ಷೇಪಣೆ ಮಾಡುವುದಿಲ್ಲವೇ ಸಾರ್? ನಿಮಗೆ ವಿಶ್ರಾಂತಿ ಬೇಡವೇ ಸಾರ್?” ಮಾಲಿಕ ತನ್ನ ಮನದಾಳದಲ್ಲಿ ಉಳಿದು ಹೋಗಿದ್ದ ಹಳೆಯ ಪ್ರಶ್ನೆಯನ್ನು ಹೊರ ಹಾಕಿ, ಉತ್ತರಕ್ಕಾಗಿ ಕಾತರದಿಂದ ಅವನನ್ನು ನೋಡುತಿದ್ದ. ಮಾಲಿಕನ ಪ್ರಶ್ನೆಯಿಂದ ಮಧುಕರನ ಮುಖದಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಅವನು ಆಲೋಚಿಸಿದ. ಮೈ ಮೇಲಿನ ಕಜ್ಜಿಯನ್ನು ತುರಿಸಿಕೊಂಡಷ್ಟೂ ಗಾಯ ದೊಡ್ಡದಾಗುತ್ತದೆ. ನೋವು ಜಾಸ್ತಿಯಾಗುತ್ತದೆ. ನನ್ನ ಸಮಸ್ಯೆಗಳನ್ನು ಇವನ ಮುಂದೆ ಇಟ್ಟರೆ ನನ್ನ ಸಮಸ್ಯೆಗಳೇನೂ ಕಡಿಮೆಯಾಗುವುದಿಲ್ಲ. ಬದುಕು ಏನನ್ನೂ ಕೊಟ್ಟರೂ ಸ್ವೀಕರಿಸಿ ಮುಂದುವರಿಯುವ ಮನದಲ್ಲಿ ದುಗುಡ ದುಮ್ಮಾನಗಳಿರುವುದಿಲ್ಲ. ಕಾಫಿಯ ಕಪ್ಪನ್ನು ಕೆಳಗಿಟ್ಟು ಅವನು ಮಾಲಿಕನ ಮುಖ ನೋಡಿದ. ಮಾಲಿಕನ ಮುಖದಲ್ಲಿ ಉತ್ತರ ಕೇಳುವ ತವಕವಿತ್ತು. ಅವನು ಹೇಳಿದ. “ಆಕ್ಷೇಪಣೆ ಇದೆ ಎಂದು ತಿಳಿದು ಕೊಂಡರೆ ಅದು ಇದೆ. ಇಲ್ಲ ಎಂದು ತಿಳಿದು ಕೊಂಡರೆ ಇಲ್ಲ. ಸಂಬಂಧಗಳನ್ನು ಅತಿಯಾಗಿ ಮನಸ್ಸಿಗೆ ಹಚ್ಚಿಕೊಂಡಾಗ ಅವುಗಳು ನಮಗೆ ನೋವು ಕೊಡದೆ ಇರುವುದಿಲ್ಲ. ಅದೇ ರೀತಿ ಇನ್ನೊಬ್ಬರ ಎದುರು ಸಣ್ಣದಾಗ ಬಾರದೆಂದು ಬದುಕುವುದೇ ಜೀವನ ಎಂದು ತಿಳಿದವರಿಗೆ ಬದುಕಿನಲ್ಲಿ ವಿಶ್ರಾಂತಿ ಇರುವುದಿಲ್ಲ.” ಮಧುಕರ ಎದ್ದು ನಿಂತ. ಒಂದು ಸಣ್ಣ ಬಿಸ್ಕಟಿನ ಪೊಟ್ಟಣ ಖರೀದಿಸಿ ಕ್ಯಾಂಟೀನಿನ ಹಿಂಬದಿಗೆ ಬಂದ. ಅಲ್ಲಿ ಅವನ ಪ್ರೀತಿಯ ಹೆಣ್ಣು ಬೆಕ್ಕು ತನ್ನ ನಾಲ್ಕು ಮರಿಗಳಿಗೆ ಮೊಲೆ ಹಾಲು ಉಣಿಸುತಿತ್ತು. ಅವನು ಆ ಬೆಕ್ಕು ಮತ್ತು ಅದರ ಮರಿಗಳನ್ನು ತದೇಕ ಚಿತ್ತದಿಂದ ನೋಡತೊಡಗಿದ. ಗೋಡೆಗೆ ಒರಗಿ ಅರ್ಧ ಅಂಗಾತ ಮಲಗಿ ಕೊಂಡು ತನ್ನ ನಾಲ್ಕು ಕಾಲುಗಳ ಸಂಧಿಗಳಲ್ಲಿ ಮರಿಗಳನ್ನು ತೂರಿಸಿಕೊಂಡು ಹಾಲುಣಿಸುತ್ತಾ ಹಾಯಾಗಿ ತೂಕಡಿಸುತ್ತಿದೆ. ಇದಕ್ಕಿಂತ ದೊಡ್ಡ ಸುಃಖ, ನೆಮ್ಮದಿ ಏನಿದೆ? ಮನದಾಳದಲ್ಲಿ ಮೂಡುವ ಪರಿಪೂರ್ಣತೆಯ ಸ್ಪಂಧನವೇ ನೆಮ್ಮದಿ, ಪ್ರಾಣಿ-ಪಕ್ಷಿಗಳು ಯಾಕೆ ಇಷ್ಟೊಂದು ನಿರ್ಲಿಪ್ತವಾಗಿ, ನಿರ್ಭಯವಾಗಿ ಬದುಕುತ್ತದೆ? ಯಾಕೆಂದರೆ ಅವುಗಳಿಗೆ ರಾಗ ದ್ವೇಷಗಳಿಲ್ಲ. ಇನ್ನೊಬ್ಬರ ಬದುಕಿನಲ್ಲಿ ಆಟವಾಡುದಿಲ್ಲ. ಯಾವುದೇ ಒತ್ತಡ, ಜಂಜಾಟದ ಬದುಕು ಅವುಗಳದಲ್ಲ. ಯಾವಾಗ ಒತ್ತಡ, ಜಂಜಾಟಗಳಿರುತ್ತವೆಯೋ ಅಲ್ಲಿ ಸಮಸ್ಯೆಗಳಿರುತ್ತವೆ. ಆದರೆ ಭಯ ಮುಕ್ತ ಜೀವನ ಮನುಷ್ಯನಿಗೆ ಏಕೆ ಸಾಧ್ಯವಾಗಿಲ್ಲ? ಮನುಷ್ಯ ಜೀವನಕ್ಕಿಂತ ಪ್ರಾಣಿ-ಪಕ್ಷಿಗಳ ಜೀವನವೇ ಲೇಸು. ಅವನು ಬಿಸ್ಕೇಟಿನ ಪೊಟ್ಟಣವನ್ನು ಬಿಚ್ಚಿದ, ಬಿಸ್ಕೆಟುಗಳನ್ನು ಸಣ್ಣ ತುಂಡುಗಳನ್ನಾಗಿ ಮಾಡಿದ. ಬಾಗಿ ಕೊಂಡು ಪೊಟ್ಟಣದಲ್ಲಿರುವ ಎಲ್ಲಾ ಬಿಸ್ಕಿಟು ತುಂಡುಗಳನ್ನು ಬೆಕ್ಕುಗಳ ಬಳಿಯಲ್ಲಿ ಸುರಿದ. ಮರಿಗಳು ಮೊಲೆ ಹಾಲು ಕುಡಿಯುವುದನ್ನು ಬಿಟ್ಟು, ದಿಗ್ಗನೆ ಎದ್ದು, ಬಾಲ ಅಲ್ಲಾಡಿಸುತ್ತಾ ಕೃತಜ್ಞತೆಯ ಕಣ್ಣುಗಳಿಂದ ಅವನನ್ನು ನೋಡುತ್ತಾ ಬಿಸ್ಕಿಟು ತಿನ್ನ ತೊಡಗಿದುವು. ತಾಯಿ ಬೆಕ್ಕು ಆಗಾಗ್ಗೆ ಮರಿಗಳ ಬೆನ್ನನ್ನು, ಕುತ್ತಿಗೆ ಭಾಗವನ್ನು ನೆಕ್ಕುತ್ತಾ ಬಿಸ್ಕಿಟು ತಿನ್ನುತಿತ್ತು. ಈ ಬೆಕ್ಕಿನ ಮರಿಗಳ ಸೃಷ್ಟಿಗೆ ಕಾರಣವಾದ ಗಂಡು ಬೆಕ್ಕಿನ ಆಸರೆಯಿಲ್ಲದೆ ಈ ತಾಯಿ ಬೆಕ್ಕು ನಿರ್ಮಲ ಮನಸ್ಸಿನಿಂದ ನಿರ್ಭಯವಾಗಿ ತನ್ನ ಮರಿಗಳನ್ನು ಸಾಕುತ್ತಾ ತನ್ನ ಜೀವನ ಸಾಗಿಸುತ್ತದೆ. ಅದರಲ್ಲಿ ತೃಪ್ತಿ ಕಾಣುತ್ತದೆ. ಆದರೆ ಅವಳು? ತನಗೆ, ತನ್ನ ಮಕ್ಕಳಿಗೆ ಆಸರೆಯಾದವನ ಬಗ್ಗೆ ಕಾಳಜಿ, ಚಿಂತೆ, ಹೆಮ್ಮೆ ಪಟ್ಟುಕೊಳ್ಳದೆ ತನ್ನದೇ ಲೋಕ, ತನ್ನದೇ ಭಾವನೆ, ತನ್ನದೇ ಗೊಡ್ಡು ಆದರ್ಶಗಳಿಗೆ ಅಂಟಿಕೊಂಡು ಸಂಸಾರವನ್ನು ನರಕ ಮಾಡಿಕೊಂಡು ಬದುಕುತ್ತಿದ್ದಾಳಲ್ಲಾ? ಯಾಕೆ ಹೀಗೆ? ಇದು ಆಧುನಿಕತೆಯೇ? ಕಾರಣ ಒಂದೇ ಒದೆಸಿಕೊಳ್ಳುವವರು ಇರುವ ತನಕ ಒದೆಯುವವರು ಹುಟ್ಟುತ್ತಲೇ ಇರುತ್ತಾರೆ. ಅವನ ಗಮನ ಬೆಕ್ಕುಗಳ ಹತ್ತಿರ ಹೋಯಿತು. ಬಿಸ್ಕಿಟು ತಿಂದು ಮುಗಿಸಿ ಅವುಗಳು ಮೂತಿಯನ್ನು ನೆಕ್ಕುತ್ತಿದ್ದುವು. ಯಾಕೋ ಅವನಿಗೆ ಸ್ವಲ್ಪ ನೆಮ್ಮದಿಯಾಯಿತು. ಆ ನೆಮ್ಮದಿಯಿಂದಲೇ ಅವನು ಕಛೇರಿ ಕಡೆ ನಡೆದು ಹೋದ. ರಾತ್ರಿಯ ಆ ನಿಶ್ಯಬ್ದ ಮೌನದೊಂದಿಗೆ ಅವನು ತನ್ನ ಕೆಲಸದಲ್ಲಿ ಲೀನನಾದ.

ರಾತ್ರಿಯ ಜಾವ, ಅವನಿಗೆ ಆಕಳಿಕೆ ಬರತೊಡಗಿತು. ಕೆಲಸವನ್ನು ಸ್ಥಗಿತಗೊಳಿಸಿ ಅವನು ತನ್ನ ಕಾರಿನ ಕಡೆ ನಡೆದ. ಕಾರಿನಲ್ಲಿ ಕುಳಿತು ಕೊಂಡು ಎ.ಸಿ ಆನ್ ಮಾಡಿ, ಕಾರು ರಿವರ್ಸ್ ತೆಗೆದು ಕಂಪೆನಿಯ ಗೇಟಿನ ಬಳಿಗೆ ಬಂದ. ಅಂದು ಪಗಾರದ ಮೊದಲವಾರ ಅವನ ಬರವನ್ನೇ ಮೂವರು ಸೆಕ್ಯೂರಿಟಿ ಗಾರ್ಡ್‌ಗಳು ಎದುರು ನೋಡುತ್ತಿದ್ದರು. ಎಡಗೈಯಲ್ಲಿ ಗನ್ ಹಿಡಿದು ಸಾಲಾಗಿ ನಿಂತ ಸೆಕ್ಯೂರಿಟಿಗಳು ತಮ್ಮ ಬಲ ಕಾಲನ್ನು ನೆಲಕ್ಕೆ ಜೋರಾಗಿ ಬಡಿದು ಸೆಲ್ಯೂಟ್ ಹೊಡೆದರು. ಅವರು ನಿಂತ ಭಂಗಿ, ಮುಖ ಚರ್ಯ, ಬೂಟುಕಾಲಿನ ಶಬ್ದ ಎಲ್ಲಾ ವಿಚಿತ್ರವಾಗಿ ಕಂಡಿತು ಅವನಿಗೆ ಈ ಲೋಕದಲ್ಲಿ ಸಂಸ್ಕಾರವಿರುವ ಉತ್ತಮ ಗುಣ ನಡತೆ ಇರುವವರಿಗೆ ಬೆಲೆಯಿಲ್ಲ. ಹಣಕ್ಕೆ ಮಾತ್ರ ಬೆಲೆ, ಹಣ ಒಂದಿದ್ದರೆ ಎಂತಹ ಲಫಂಗನೂ ಗೌರವ ಪಡೆಯುತ್ತಾನೆ. ಅದೇ ನಾನು ನಡೆದು ಕೊಂಡು ಬರುತ್ತಿದ್ದರೆ ಇವರಿಂದ ಈ ರಾಜ ಮರ್ಯಾದೆ ಸಿಗುತಿತ್ತೇ? ಎಷ್ಟೋ ಮಂದಿ ಕಾರ್ಮಿಕರು ನಡೆದು ಕೊಂಡೇ ಫ್ಯಾಕ್ಟರಿಯ ಒಳಗೆ ಹೊರಗೆ ಹೋಗುತ್ತಾರೆ. ಅವರಿಗೆ ಯಾರು ಸೆಲ್ಯೂಟ್ ಹೊಡೆಯುತ್ತಾರೆ? ಯಾರು ಗೌರವಿಸುತ್ತಾರೆ? ಈ ಜಗತ್ತೇ ಹೀಗೆ, ಇಲ್ಲಿ ಜೀವ ತಳೆದದ್ದೇ ಮೊದಲ ಜೈಲು ಶಿಕ್ಷೆ. ಮದುವೆ ಎರಡನೇ ಜೈಲು ಶಿಕ್ಷೆ. ಅವನು ಬಟನ್ ಒತ್ತಿ ಕಾರಿನ ಗ್ಲಾಸನ್ನು ಕೆಳಗೆ ಮಾಡಿದ. ಪರ್ಸಿನಿಂದ ಐನೂರು ರೂಪಾಯಿಯ ನೋಟೊಂದನ್ನು ಹೊರ ತೆಗೆದು ಹೊರಗೆ ಬಾಗಿ ಅವರಿಗೆ ನೀಡಿದ. “ಹಂಚಿಕೊಳ್ಳಿ” ಅವನಂದ. ಅವರು ತಲೆ ಅಲ್ಲಾಡಿಸುತ್ತಾ ಮತ್ತೊಂದು ಸೆಲ್ಯೂಟ್ ಹೊಡೆದರು. ಯಾಕೋ ಅವನಿಗೆ ಅವರನ್ನು ಮಾತಾಡಿಸ ಬೇಕೆಂದೆಣಿಸಿತು. ಕುಳಿತಲ್ಲಿಂದಲೇ ಕೈ ಸನ್ನೆಯಿಂದ ಅವರನ್ನು ಹತ್ತಿರ ಕರೆದ. ಶಿಸ್ತಿನ ಸಿಪಾಯಿಗಳಂತೆ ಓಡಿ ಬಂದು ಅವನ ಬಳಿ ನಿಂತು ಕೊಂಡರು.

“ನಿಮ್ಮ ದಾಂಪತ್ಯ ಜೀವನ ಹೇಗಿದೆ? ಹೆಂಡತಿ ಮಕ್ಕಳೊಂದಿಗೆ ಸುಖವಾಗಿದ್ದೀರಾ?” ಅವನ ಅನಿರೀಕ್ಷಿತ ಪ್ರಶ್ನೆಗೆ ಅವರು ತಬ್ಬಿಬ್ಬಾದರು.

“ಹೂ…. ಸರ್… ಚೆನ್ನಾಗಿದ್ದೇವೆ.”

“ಮತ್ತೆ ಈ ಹಣ ಏನು ಮಾಡ್ತೀರಾ?” ಅವರಲ್ಲಿ ಒಬ್ಬ ಉತ್ತರಿಸಿದ. “ಮಕ್ಕಳಿಗೆ ಸ್ವಲ್ಪ ಸಿಹಿತಿಂಡಿಕೊಂಡು ಹೋಗುತ್ತೇವೆ. ಮತ್ತೆ ಹೆಂಡತಿಗೆ ಮುಡಿಯಲು ಸ್ವಲ್ಪ ಮಲ್ಲಿಗೆ ಹೂ ಕೊಂಡು ಹೋಗ ಬೇಕು ಸಾರ್…” ಮತ್ತಿಬ್ಬರು ಅವನ ಮಾತಿಗೆ ಸಮ್ಮತಿಯಿದೆ ಎಂಬಂತೆ ತಲೆ ಅಲ್ಲಾಡಿಸಿದರು. ಅವನಿಗೆ ಸಂತೋಷವಾಯಿತು. ಬಡತನದಲ್ಲೂ ಎಷ್ಟು ನೆಮ್ಮದಿ ಪಟ್ಟುಕೊಳ್ಳುತ್ತಾರೆ ಈ ಜನರು ಎಂದು ಮನದಲ್ಲೇ ಅಂದು ಕೊಂಡ. “ಗುಡ್, ಬರುತ್ತೇನೆ” ಎನ್ನುತ್ತಾ ಕಾರಿನ ಗ್ಲಾಸ್ ಮೇಲೆ ಮಾಡಿ ಕಾರು ಚಲಾಯಿಸಿದ, ಕಾರು ಯಾಂತ್ರಿಕವಾಗಿ ಸಾಗುತ್ತಿದ್ದಂತೆ ಅವನು ಆಲೋಚನೆಯಲ್ಲಿ ಬಿದ್ದನು. ಎಲ್ಲರನ್ನೂ ತೃಪ್ತಿಗೊಳಿಸಬಲ್ಲೆ ಎಂಬುವುದು ಒಂದು ಕಲ್ಪನೆ ಮಾತ್ರ ನನ್ನಲ್ಲಿ ಇನ್ನೂ ಬದುಕುವ ಆಸೆ ಉಳಿದಿದೆ. ಆದುದರಿಂದಲೇ ದುಃಖ ದಾರಿ ಮಾಡಿಕೊಂಡು ಬರುತ್ತಾ ಇದೆ. ಈ ಬಡವರನ್ನು ನೋಡಿ ನಾವು ಕಲಿಯಬೇಕಾದುದು ತುಂಬಾ ಇದೆ. ಹಸಿವಿನಲ್ಲೂ ಅವರು ಹಬ್ಬ ಕಾಣುತ್ತಾರೆ. ತಮ್ಮ ಅಂತಸ್ತಿಗೆ ಅನುಗುಣವಾಗಿ ಜೀವನವನ್ನು ನಡೆಸುವ ವಿದ್ಯೆ ಕಲಿತಿದ್ದಾರೆ. ಆದರೆ ತನಗೆ? ಎಲ್ಲಾ ಇದ್ದೂ ಇಲ್ಲದವನಾಗಿದ್ದೇನೆ. ದಿನೇ ದಿನೇ ನಾನು ಕಳೆದು ಹೋಗುತ್ತಿದ್ದೇನೆ. ನನ್ನ ಅಸ್ತಿತ್ವ, ನನ್ನ ಗೌರವ, ನನ್ನ ಅಂತಸ್ತು, ನಾನು ಪಾಲಿಸಿಕೊಂಡು ಬಂದ ಸಂಸ್ಕೃತಿ, ಸಂಸ್ಕಾರ, ಈ ದಾಂಪತ್ಯದ ಜಂಜಾಟದಲ್ಲಿ ಮಣ್ಣು ಪಾಲಾಗುತ್ತಿದೆ. ನನ್ನನ್ನು ಪ್ರೀತಿ ಮಾಡುವ ಹೃದಯದ ಕೊರತೆಯಿದೆ. ಪ್ರೀತಿಯ ಹೃದಯ ಮನಸ್ಸನ್ನು ಶ್ರೀಮಂತಗೊಳಿಸುತ್ತದೆ. ಆದರೆ ದ್ವೇಷದ ಹೃದಯ ಮನಸ್ಸನ್ನು ಸುಡುತ್ತದೆ. ಅವನು ಸಮಯ ನೋಡಿದ. ರಾತ್ರಿ ಒಂಭತ್ತು ಗಂಟೆ. ಮನೆಗೆ ಹೋಗಲು ಮನಸ್ಸು ಒಪ್ಪದು. ಅವನು ತನ್ನ ಸ್ವಂತ ಮನೆಯ ಲಕ್ಷುರಿ ಎಪಾರ್ಟ್‌ಮೆಂಟ್‌ನ ಎದುರು ಬಂದರೂ ಕಾರನ್ನು ಮನೆಯ ಕಡೆಗೆ ತಿರುಗಿಸದೆ ಮುಂದೆ ಸಾಗಿದ. ಎಲ್ಲಿಗೆ ಹೋಗುವುದು? ಎಲ್ಲಿಗೆ? ನಾಲ್ಕು ವರ್ಷದ ತನ್ನ ದಾಂಪತ್ಯ ಜೀವನದಲ್ಲಿ ದುಃಖದ ಪಾತ್ರವೇ ಬಹಳ. ಅವಳು ಬದಲಾಗಬಹುದೆಂಬ ವ್ಯರ್ಥ ಪ್ರಯತ್ನ ಮಾಡುತ್ತಲೇ ನನ್ನ ಬದುಕನ್ನು ಹಾಳು ಮಾಡಿ ಕೊಂಡೆ. ಪ್ರೀತಿಯ ಪಾಶ ಕಡಿದು ಹೋಗಿದೆ. ದುಃಖವನ್ನು ದೂರ ಸರಿಸಲು ಪ್ರಯತ್ನಿಸಿದಷ್ಟೂ ಅದು ಹೆಗಲೇರಿ ಕುಳಿತುಕೊಳ್ಳುತ್ತದೆ.

ಅವನು ಕಾರನ್ನು ಮೈದಾನಿನ ಕಡೆ ತಿರುಗಿಸಿದ. ವಿಶಾಲವಾದ ಮೈದಾನ, ಸಂಜೆ ಹೊತ್ತು ಹಾಗೂ ಭಾನುವಾರ ಜನ ಜಂಗುಳಿಯಿಂದ ತುಂಬಿರುತಿತ್ತು. ರಾತ್ರಿಯಾದಂತೆ ನಿಶ್ಯಬ್ಧವಾಗಿ ಮಲಗಿದೆ. ಕಾರನ್ನು ಮೈದಾನಿನ ಮೂಲೆಯೊಂದರಲ್ಲಿ ನಿಲ್ಲಿಸಿ ನಡೆದು ಬಂದ. ಹತ್ತಿರದಲ್ಲಿದ್ದ ಕಲ್ಲು ಬೆಂಚಿನ ಮೇಲೆ ಕುಳಿತ ತಂಪಗಿನ ಗಾಳಿ ಅವನ ಮೈ ಸೋಂಕಿದಾಗ ಅವನಿಗೆ ಹಾಯೆನಿಸಿತು. ವಸಂತಗಳು ಉರುಳುತಿದ್ದಂತೆ ತಾನು ಒಂಟಿಯಾಗುತ್ತಿದ್ದೇನೆ ಎಂದೆಣಿಸಿತು. ತನ್ನ ಒಂಟಿತನ, ನೋವು ವೇದನೆಗಳನ್ನು ಯಾರಲ್ಲಿ ತೋಡಿಕೊಳ್ಳಲಿ? ಅವನ ಮೈ ನಿಧಾನವಾಗಿ ಕಂಪಿಸಿತು. ಅವನು ನಿರಾಸೆಯಿಂದ ಮೇಲೆ ನೋಡಿದ. ಪೂರ್ಣಚಂದ್ರ ಮೂಡಿ ಬರುತ್ತಿದ್ದ, ಚಂದ್ರ ಮೇಲೇರಿ ಬರುತ್ತಿದ್ದಂತೆ ಇಡೀ ಮೈದಾನ ಹಾಲು ಚೆಲ್ಲಿದಂತೆ ಕಂಗೊಳಿಸಿತು. ಅವನು ಚಂದ್ರನನ್ನು ದೃಷ್ಟಿಸಿ ನೋಡಿದ. ತನ್ನ ಮೈ ತುಂಬಾ ಕಲೆಗಳನ್ನು ಹೊತ್ತುಕೊಂಡು ಇಡೀ ಜಗತ್ತಿಗೆ ಬೆಳಕು ನೀಡುತ್ತಿದ್ದಾನೆ. ಎಂತಹ ನಿಸ್ವಾರ್ಥ ಸೇವೆ! ಆದರೆ ಮನುಷ್ಯ? ಎಷ್ಟೊಂದು ಸ್ವಾರ್ಥ! ತನ್ನ ಹಟ ಸಾಧನೆಗೆ ಯಾರನ್ನೂ ಬಲಿಗೊಡಲು ಸಿದ್ಧನಿದ್ದಾನೆ. ಹೌದು, ನನ್ನ ಭಾವನೆಗಳ ಜೊತೆ ಅವಳು ಆಟವಾಡುತ್ತಿದ್ದಾಳೆ. ಇದು ಸರಿಯಲ್ಲ. ಈ ಆಟದಲ್ಲಿ ಅವಳು ಗೆಲ್ಲಬಹುದು. ಆದರೆ ನನ್ನನ್ನು ಮಾತ್ರ ಕಳೆದು ಕೊಳ್ಳ ಬೇಕಾಗುತ್ತದೆ.

ಬೆಳದಿಂಗಳನ್ನು ನೋಡುತ್ತಿದ್ದಂತೆ ಅವನಿಗೆ ತನ್ನ ತೀರಿ ಹೋದ ತಂದೆ-ತಾಯಿಯ ನೆನಪಾಯಿತು. ಕಣ್ಣಾಲಿಗಳು ತುಂಬಿ ಬಂದುವು. ಬೆಳದಿಂಗಳ ರಾತ್ರಿಯೆಂದರೆ ಅಪ್ಪನಿಗೆ ತುಂಬಾ ಸಂತೋಷ. ಪ್ರತೀ ತಿಂಗಳ ಪೂರ್ಣಿಮೆಯಂದು ಇಡೀ ಕುಟುಂಬ ರಾತ್ರಿ ಊಟವನ್ನು ಮನೆಯ ತಾರಸಿಯಲ್ಲೇ ಮಾಡಬೇಕು, ಎಷ್ಟೇ ಕಷ್ಟವಾದರೂ ಸರಿ, ಅಮ್ಮ ಆದಿನ ವಿಶೇಷ ಅಡುಗೆ ತಯಾರಿಸುತ್ತಿದ್ದರು. ನನಗೆ ಹಾಗೂ ಅಪ್ಪನಿಗೆ ಇಷ್ಟವಾದ ಯಾವುದಾದರೊಂದು ಅಡುಗೆ ಆ ದಿನ ಖಂಡಿತ ಇರುತಿತ್ತು. ನಾನು ಮನೆಯ ತಾರಸಿಯಲ್ಲಿ ಅಡುಗೆ ಪದಾರ್ಥವನ್ನು ಮೊದಲೇ ಕೊಂಡು ಹೋಗಿ ಇಡುತ್ತಿದ್ದೆ. ಅಪ್ಪ ಬಂದೊಡನೆ ಸ್ನಾನ ಮುಗಿಸಿ ಊಟಕ್ಕೆ ಕುಳಿತುಕೊಳ್ಳುತ್ತಿದ್ದೆವು. ಅಪ್ಪ ಮತ್ತು ಅಮ್ಮನೊಂದಿಗೆ ಊಟ ಮಾಡುವುದೆಂದರೆ ಎಂತಹ ಸಂತಸ! ಊಟ ಮಾಡುತ್ತಾ ಅಪ್ಪ ಜೋಕ್ ಕಟ್ ಮಾಡುತ್ತಿದ್ದರು. ಅಮ್ಮನನ್ನು ನಗಿಸಿ ನಗಿಸಿ ಸುಸ್ತು ಮಾಡುತ್ತಿದ್ದರು. ಮುವತ್ತೈದು ವರ್ಷದ ಅವರ ದಾಂಪತ್ಯ ಜೀವನದಲ್ಲಿ ಅಮ್ಮ-ಅಪ್ಪ ಮುಖ ಸಿಂಡರಿಸಿ ಕೊಂಡಿದ್ದು ನಾನು ಕಂಡೇ ಇಲ್ಲ. ಆದರೆ ನನ್ನ ನಾಲ್ಕು ವರ್ಷದ ದಾಂಪತ್ಯ ಜೀವನ ಕೆಂಡದ ಮೇಲಿನ ನಡಿಗೆಯಾಗಿದೆ. ಈಗ ದುಃಖ ತೋಡಿಕೊಳ್ಳಲು ಅಮ್ಮನೂ ಇಲ್ಲ. ಅಪ್ಪನೂ ಇಲ್ಲ. ಅಣ್ಣ, ಅಕ್ಕ, ತಂಗಿ, ತಮ್ಮ ಮೊದಲೇ ಇಲ್ಲ. ಅಪ್ಪ ನನ್ನ ಸುಖಕ್ಕಾಗಿ ಒಂದೇ ಮಗು ಸಾಕೆಂದು ನಿಯಂತ್ರಿಸಿ ಕೊಂಡರು. ಅಮ್ಮನ ಯಾವುದೇ ಬೇಡಿಕೆಗೆ ಅಪ್ಪ ಜಗ್ಗಲಿಲ್ಲ. ಅವರ ಒಂದೇ ಉದ್ದೇಶವೆಂದರೆ ನಾನು ಕಲಿಯಬೇಕು. ವಿದ್ಯಾವಂತನಾಗಬೇಕು. ಒಳ್ಳೆಯ ಉದ್ಯೋಗ ಗಳಿಸಬೇಕೆಂದು ಅವರ ಆಶೆ, ಅದೆಲ್ಲವೂ ಅವರು ನೆನಸಿದಂತೆಯೇ ಆಯಿತು. ಮದುವೆಯೂ ಆಯಿತು. ಆದರೆ ನೆಮ್ಮದಿ ಮಾತ್ರ ಮರೀಚಿಕೆಯಾಯಿತು. ಸುಂದರ ಮನೆಯನ್ನು ಖರೀದಿಸಿದೆ. ಆದರೆ ಆ ಮನೆಯಲ್ಲಿ ಸುಂದರವಾಗಿ ಬದುಕುವುದು ಮಾತ್ರ ನನ್ನಿಂದ ಸಾಧ್ಯವಾಗಲಿಲ್ಲ. ಕಾಡುತ್ತಿರುವ ಈ ನೋವಿಗೆ, ಒಂಟಿತನಕ್ಕೆ ಪರಿಹಾರ ಏನು?

ಅವನು ಮತ್ತೊಮ್ಮೆ ಚಂದಿರನನ್ನು ದಿಟ್ಟಿಸಿದ. ಅವನ ತಾಯಿ-ತಂದೆ ಪೂರ್ಣಚಂದ್ರನ ಮದ್ಯದಿಂದ ನಗುತ್ತಾ ಆಶೀರ್ವಾದಿಸಿದಂತೆ ಅವನಿಗೆ ಕಂಡಿತು. ಅವನು ತನ್ನ ಎರಡೂ ಕೈಗಳನ್ನು ಜೋಡಿಸಿ, ಎದ್ದು ನಿಂತು ತಲೆಬಾಗಿದ. ಈ ಭೂಮಿಯಲ್ಲಿ ನೀನಿರುವಷ್ಟು ದಿನ ನಾನು ಒಂಟಿಯಲ್ಲ ಚಂದಿರ ಎಂದು ತನ್ನಲ್ಲೇ ಅಂದುಕೊಂಡ. ಒಮ್ಮೆ ಸುತ್ತಲೂ ನೋಡಿದ. ಈ ವಿಶಾಲವಾದ ಭೂಮಿ, ಆಕಾಶ, ಮರಗಿಡಗಳು, ಬೆಟ್ಟಗುಡ್ಡಗಳು, ಬೀಸುವ ಗಾಳಿ ಎಲ್ಲವೂ ನಾವಿದ್ದೇವೆ, ನಾವಿದ್ದೇವೆ ಎಂದು ಕೂಗಿ ಕೊಂಡು ಅವನನ್ನು ಅಪ್ಪಿಕೊಂಡಂತಾಯಿತು. ಅವನಿಗೆ ಆನೆ ಬಲ ಬಂದ ಹಾಗಾಯಿತು. ಅವನು ಆ ಉತ್ಸಾಹದಲ್ಲಿ ಕಾರಿನ ಕಡೆಗೆ ನಡೆದ.

ಕಾರು ನಿಧಾನವಾಗಿ ಸಿರಿವಂತ ಬಡಾವಣೆಯ ರಸ್ತೆಯಲ್ಲಿರುವ ಆ ಲಕ್ಷುರಿ ಎಪಾರ್ಟ್‌ಮೆಂಟ್ ಕಡೆ ಹೋಯಿತು. ಅವನ ಕಾರು ಲಕ್ಷುರಿ ಎಪಾರ್ಟ್‌ಮೆಂಟಿನ ಪ್ರವೇಶ ದ್ವಾರವನ್ನು ಮುಟ್ಟಿದೊಡನೆ ಸೆಕ್ಯೂರಿಟಿ ಗಾರ್ಡ್ ಸೆಲ್ಯೂಟ್ ಹೊಡೆದು ಗೇಟಿನ ಬಾಗಿಲು ತೆರೆದ. ಅವನು ಮುಂದೆ ಸಾಗಿದ. ತನ್ನ ಬ್ಲಾಕಿಗೆ ಬಂದು ತನ್ನ ಸ್ವಸ್ಥಾನದಲ್ಲಿ ಕಾರನ್ನು ನಿಲ್ಲಿಸಿದ. ಕಾರಿನಿಂದ ಹೊರಗೆ ಬಂದು ಕಾರನ್ನು ಕೀಯಿಂದ ಲಾಕ್ ಮಾಡಿ ಲಿಫ್ಟ್‍ನತ್ತ ನಡೆದ, ಲಿಫ್ಟಿನಿಂದ ಹೊರ ಬಂದವನೇ ಮನೆಯ ಬಾಗಿಲ ಎದುರು ನಿಂತು ಕರೆಗಂಟೆ ಒತ್ತಿದ. ಬಾಗಿಲು ತೆರೆದುಕೊಳ್ಳಲೇ ಇಲ್ಲ. ಅವನು ಕೆಲವು ನಿಮಿಷ ಕಾದ. ಪ್ರಯೋಜನವಾಗಲಿಲ್ಲ. ತನ್ನ ಕ್ಯಾರಿಯರ್ ಬ್ಯಾಗಿನಿಂದ ಮನೆಯ ಮತ್ತೊಂದು ಕೀಯನ್ನು ಹೊರ ತೆಗೆದು ಬಾಗಿಲು ತೆರೆದ, ಪೂರ್ಣ ಕತ್ತಲೆ, ಬಾಗಿಲನ್ನು ಲಾಕ್ ಮಾಡಿ, ಬೋಲ್ಟ್ ಸಿಕ್ಕಿಸಿ ಅವನು ಕತ್ತಲೆಯಲ್ಲಿ ತಡಕಾಡುತ್ತಾ ಲೈಟಿನ ಸ್ವಿಚ್ ಹಾಕಿದ. ಬೆಳಕಾಯಿತು. ಮನೆ ಪೂರ್ತಿ ಸ್ಮಶಾನ ಮೌನ, ಅವನು ಓರೆ ಕಣ್ಣಿನಿಂದ ಬೆಡ್ ರೂಮಿನತ್ತ ನೋಡಿದ. ಅವಳು ತಲೆವರೆಗೂ ಬೆಡ್‌ಶೀಟ್ ಹೊದ್ದು ಮಲಗಿದ್ದು ಕಂಡು ಬಂತು. ಈ ಸಾರಿ ಅವನು ಅಧೀರನಾಗಲಿಲ್ಲ. ಅಂಗಲಾಚಲಿಲ್ಲ. ತನ್ನ ಸ್ವಪ್ರತಿಷ್ಟೆ, ಗೌರವ, ಮರ್ಯಾದೆಯನ್ನು ಪುನಃ ಕಳಕೊಳ್ಳುವ ಹಂತಕ್ಕೆ ಹೋಗಲು ಅವನು ತಯಾರಿರಲಿಲ್ಲ. ಅದಾಗಲೇ ಅವನೊಂದು ನಿರ್ಧಾರಕ್ಕೆ ಬಂದಾಗಿತ್ತು. ಅವನು ತಾನು ಪ್ರತ್ಯೇಕವಾಗಿ ಮಲಗುತ್ತಿರುವ ತನ್ನ ರೂಮಿನತ್ತ ನಡೆದ. ರೂಮಿನ ಲೈಟ್ ಆನ್ ಮಾಡಿದ. ತನ್ನ ಲ್ಯಾಪ್‌ಟಾಪ್ ಇರುವ ಬ್ಯಾಗನ್ನು ಭುಜದಿಂದ ಕೆಳಗಿಳಿಸಿ ಗೋಡೆ ಬದಿಗೆ ತಾಗಿಸಿ ಇಟ್ಟ. ವಸ್ತ್ರ ಬದಲಿಸಿ ಕೊಂಡ. ಬಾತ್ರೂಮಿಗೆ ಹೋಗಿ ಸುಸ್ತಾಗುವಷ್ಟು ಬಿಸಿನೀರಿನಲ್ಲಿ ತಲೆ ಸ್ನಾನ ಮಾಡಿದ. ಅಲ್ಲಿಂದ ಹೊರ ಬಂದು ನೈಟ್ ಡ್ರೆಸ್ ಹಾಕಿ ಕೊಂಡ. ಅಡುಗೆ ಕೋಣೆಗೆ ಬಂದು ಪಾತ್ರೆಗಳ ಮುಚ್ಚಳ ತೆರೆದ. ಅಲ್ಲಿ ತಿನ್ನಲು ಏನೂ ಇರಲಿಲ್ಲ. ಪ್ರಿಜ್ ತೆರೆದ. ಒಣಗಿದ ಬ್ರೆಡ್ ತುಂಡುಗಳು ಮತ್ತು ಐಸ್ ನೀರಿನ ಬಾಟಲಿಗಳು ಮಾತ್ರ ಇದ್ದುವು. ಅವನು ಹೊಟ್ಟೆ ತುಂಬಾ ನೀರು ಕುಡಿದು ತನ್ನ ರೂಮಿನತ್ತ ನಿಧಾನವಾಗಿ ಹೆಜ್ಜೆ ಹಾಕಿದ. ಅವನು ರೂಮಿನ ಕಿಟಕಿಯನ್ನು ಅರ್ಧ ತೆರೆದ. ಪೂರ್ಣ ಚಂದ್ರ ಅವನನ್ನು ನೋಡಿ ನಕ್ಕ, ನಾನಿದ್ದೇನೆ ಅಂದ. ಅವನಿಗೆ ಆರಾಮ ಎಣಿಸಿತು. ಇದು ನನ್ನ ಮನೆ. ನನ್ನ ಸ್ವಂತ ಮನೆ, ನನ್ನ ಬೆವರಿನ ಮನೆ. ಈ ಮನೆಗೆ ನಾನೊಬ್ಬನೇ ರಾಜ. ಬೇರೆ ಯಾರಿಗೂ ಇಲ್ಲಿ ಹಕ್ಕು ಇಲ್ಲ. ಅಧಿಕಾರವೂ ಇಲ್ಲ. ನನ್ನ ಅಸ್ತಿತ್ವವನ್ನು, ನೆಮ್ಮದಿಯನ್ನು ಹಾಳು ಗೆಡವುವ ಯಾರಿಗೂ ಇಲ್ಲಿ ಇನ್ನು ಮುಂದೆ ಇರಲು ಹಕ್ಕು ಇಲ್ಲ. ಇದೇ ನನ್ನ ಅಂತಿಮ ನಿರ್ಧಾರ. ಅವನು ದೃಢ ನಿರ್ಧಾರದಿಂದ ನಿಧಾನವಾಗಿ ನಿದ್ರೆಗೆ ಜಾರಿದ.

ದೂರದಲ್ಲಿ ಪೂರ್ಣಚಂದ್ರನ ಬೆಳಕು ಕಿಟಕಿಯಿಂದ ತೂರಿ ಬಂದು ಅವನ ಮೈಯನ್ನು ಆವರಿಸಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಊಸುರವಳ್ಳಿ
Next post ಹಕ್ಕಿ ಲೋಕ

ಸಣ್ಣ ಕತೆ

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…