ನಾಟಿ ಕಲ್ಲನು ದಾಟಿ ಇಳಿದು ಬಾ

‘ಈ ಬಾರಿ ನಾವು ಮೂರು ಜಲಪಾತ ನೋಡಲಿಕ್ಕಿದ್ದೇವೆ ಸರ್‌. ಇವು ದೇವರಗುಂಡಿಗಿಂತಲೂ ರೋಮಾಂಚಕ’ ಎಂದು ಹೇಳಿ ನಾಯಕ ಪಾವಕೃಷ್ಣ ನನ್ನಲ್ಲಿ ಇನ್ನಿಲ್ಲದ ಕುತೂಹಲ ಮೂಡಿಸಿಬಿಟ್ಟ.

ಅವು ಅಕ್ಟೋಬರ ತಿಂಗಳ ಕೊನೆಯ ದಿನಗಳು. ಈ ಬಾರಿ ಎಲ್ಲೆಲ್ಲೂ ಭರ್ಜರಿ ಮಳೆ. ತ್ಸುನಾಮಿಯ ಪರಿಣಾಮದ ವರ್ಷಧಾರೆ. ದೇವರಗುಂಡಿಗಿಂತಲೂ ರೋಮಾಂಚಕ ಎಂದಿವನು ಹೇಳಬೇಕಾದರೆ ಅಲ್ಲಿಗಿಂತ ಐದಾರು ಪಟ್ಟು ಹೆಚ್ಚು ಜಿಗಣೆಗಳಿರಲೇಬೇಕು. ಅನೇಕ ವರ್ಷಗಳಾದವು ಕಾಡಜಿಗಣೆಗಳ ಸಹವಾಸದಿಂದ ದೂರಾಗಿ. ಮೊನ್ನೆ
ದೇವರಗುಂಡಿಯಲ್ಲಿ ಕಾಡ ಜಿಗಣೆಗಳಿಂದ ಕಚ್ಚಿಸಿಕೊಂಡಾಗ ಬಾಲ್ಯದ ಮಧುರ ದಿನಗಳು ನೆನಪಾಗಿದ್ದವು. ಈಗ ಮತ್ತೊಮ್ಮೆ ಬಾಲ್ಯದ ದಿನಗಳಿಗೆ ಕಾಲಯಾನ.

ದಸರಾ ರಜೆಯ ಮಧ್ಯದಲ್ಲಿನ ಈ ಚಾರಣಕ್ಕೆ ಅಧಿಕೃತ ಪರವಾನಗಿಯ ಅಗತ್ಯವೇನಿರಲ್ಲಿಲ್ಲ. ಆದರೂ ಬಾಸ್‌ ಸಂಪ್ರೀತರಾದರೆ ಯಾವುದಕ್ಕೂ ಒಳ್ಳೆಯದೆಂದು

ಪ್ರಾಚಾರ್ಯ ದಾಮೋದರ ಗೌಡರಿಗೆ ದೂರವಾಣಿಯಲ್ಲಿ ತಿಳಿಸಿದೆ. ಅವರು ಉತ್ಸಾಹದ ದನಿಯಲ್ಲಿ ಮಕ್ಕಳು ಬಂದಿದ್ದರು. ರಾತ್ರೆ ಕಾಲೇಜಲ್ಲಿ ಉಳಕೊಳ್ಳಲು ಪರ್ಮಿಶನ್ನು ಕೊಟ್ಟಿದ್ದೇನೆ. ಪರ್ವತದಂಚಿಗೆ, ಜಲಪಾತಗಳ ಬುಡಕ್ಕೆ ಹೋಗಬೇಡಿ. ಜಾರುಬಂಡೆ ಏರಲು ಪರ್ಮಿಶನ್ನು ಕೊಡಬೇಡಿ ಎಂದರು. ನಾನು ಅಭ್ಯಾಸ ಬಲದಿಂದ ತಲೆಯಾಡಿಸಿ ಬಿಟ್ಟೆ. ರಿಸೀವರ್‌ ಕೆಳಗಿಟ್ಟ ಮೇಲೆಯೇ ನನಗೆ ನೆನಪಾದದ್ದು ನಾನು ‘ಹ್ಹೂಂ’ ಹೇಳಬೇಕಿತ್ತೆಂದು.

ಈ ಬಾರಿ ಪಡ್ಡೆಗಳ ಸಂಖ್ಯೆ ಹದಿನೆಂಟಕ್ಕೆ ಇಳಿದಿತ್ತು. ಜಾಲಿ, ಶ್ರೀರಾಜ, ಪುಟ್ಟ ಕಮಲಾಕ, ವಿನೋದ, ವಶಿಷ್ಠ, ರೈತ, ರಂಜನ ಮೊದಲಾದವರು ನಾಪತ್ತೆ. ಕೆಲವರ ಉತ್ತರನ ಪೌರುಷ ಬೈಸಿಕಲ್ಲು ಜಾಥಾಕ್ಕೆ ಮುಗಿದುಹೋಗಿತ್ತು. ಇನ್ನು ಕೆಲವರಿಗೆ ಅದು ಅಕ್ಟೋಬರ ದಂಡಯಾತ್ರೆಯ ಮೂಲಕ ದಿಗ್ವಿಜಯ ಸಾಧಿಸುವ ಸಂಕ್ರಮಣ ಪುಣ್ಯ ಕಾಲ. ಹದಿನೆಂಟು ಪಡ್ಡೆಗಳೊಡನೆ ಜೀವನ ಯಾತ್ರೆಯ ಅಂತಿಮ ಹಂತ ಪ್ರವೇಶಿಸುತ್ತಿರುವ ನಾನು. ಯಾವ ಜನ್ಮದ ಮೈತ್ರಿಯೊ?

ಮೃಗಗಳೇ ಮೇಲು

ಹಿಂದಿನ ದಿವಸ ಮಿತ್ರರೊಬ್ಬರು ಕೇಳಿದ್ದರು. ಯಾವ್ಯಾವುದೋ ಗಿರಿ ಕಾನನಗಳಿಗೆ ಹೊರಟಿದ್ದೀರಲ್ಲಾ! ಕ್ರೂರ ಪ್ರಾಣಿಗಳ ಹೆದರಿಕೆಯಾಗುವುದಿಲ್ಲವೇ? ನಾನು ಇಲ್ಲವೆಂದೆ. ಮಾನವನಷ್ಟು ಕ್ರೂರಪ್ರಾಣಿ ಈ ಪ್ರಪಂಚದಲ್ಲಿ ಇನ್ನೊಂದು ಇರಲು ಸಾಧ್ಯವಿಲ್ಲ. ಹೊಟ್ಟೆ ಕಿಚ್ಚನ್ನೇ ಜೀವನದ ಪ್ರಧಾನ ಗಳಿಕೆಯನ್ನಾಗಿ ಮಾಡಿಕೊಂಡ

ಜನ ನಮ್ಮ ಸುತ್ತ ಮುತ್ತ ಅದೆಷ್ಟಿಲ್ಲ? ತಪ್ಪುಗಳನ್ನು ತೋರಿಸಲು ಎಲ್ಲರೂ ತುದಿಗಾಲಲ್ಲಿ ಕಾದಿರುತ್ತಾರೆ. ಸಾಧನೆಗಳಿಗೆ ಮೆಚ್ಚುಗೆ ಸೂಚಿಸಲು. ಎಷ್ಟೋ ಕಷ್ಟಪಟ್ಟು ಕೃತಿಯೊಂದನ್ನು ರಚಿಸಿದರೆ ಕೊಂಡು ಓದುವುದಿರಲಿ, ಅದು ಅವನ ಪರ್ಸನಲ್‌ ಸಾಧನೆ. ಅದರಿಂದೇನು ಪ್ರಯೋಜನ ಎಂದು ಮೂಗು ಮುರಿಯುವವರದ್ದೇ  ಮೆಜಾರಿಟಿ. ಮೂವತ್ತು ವರ್ಷಗಳಲ್ಲಿ ಸುಮಾರು ಮೂರು ಸಾವಿರ ವಿದ್ಯಾರ್ಥಿಗಳು ಈ ಕಾಲೇಜಿನಿಂದ ಹೊರಬಂದಿದ್ದಾರೆ. ನಾನವರಿಗೆ ಪಾಠ ಹೇಳಿದವನು. ಆದರೆ ನನ್ನ ಸಾಹಿತ್ಯ ಕೃತಿಯೊಂದು ಹೊರಬಂದಾಗ ತಾವಾಗಿಯೇ ಒಂದು ಪ್ರತಿ ಬೇಕು ಎಂದವರಿಲ್ಲ. ಕಳೆದ ವರ್ಷ ಒಂದು ಮೊಬೈಲು ಕೊಂಡಾಗ ಮಾತ್ರ ಸಾಕಷ್ಟು ಮಂದಿ ಅಭಿನಂದಿಸಿ ಫೋನು ಮಾಡಿ ‘ಬೇಗ ಕಾರು ತಗೊಳ್ಳಿ’ ಎಂದು ಉಚಿತ ಉಪದೇಶ ನೀಡಿಯೇ ಬಿಟ್ಟರು!

ಈ ವರ್ಷ ಭೀಷ್ಮ ಮತ್ತು ಅಂಬೆಯರನ್ನು ಪ್ರಧಾನ ಪಾತ್ರನ್ನಾಗಿಸಿ ಪುಂಸ್ತ್ರೀ ಕಾದಂಬರಿ ಬರೆದೆ. ಪ್ರಜಾಮತದಲ್ಲದು ಧಾರಾವಾಹಿಯಾಗಿ ಬಂತು. ಅದರಲ್ಲಿ ಅಂಬೆ ಕಾಡಲ್ಲಿ ಏಕಾಕಿಯಾಗಿ ಹೊರಟಾಗ ವೃ್ಧಿ ಪುರೋಹಿತ ತಡೆದು ‘ಹೋಗಬೇಡ. ಕಾಡಲ್ಲಿ ಅಪಾಯಕಾರಿ ಮೃಗಗಳಿವೆ’ ಎನ್ನುತ್ತಾನೆ. ಅಂಬೆಯದಕ್ಕೆ ‘ನಾವು ತೊಂದರೆ ಕೊಡದಿದ್ದರೆ ಕಾಡ ಮೃಗಗಳಿಂದ ನಮಗೆ ಅಪಾಯವಿಲ್ಲ. ಮನುಷ್ಯರಿಂದ ಮಾತ್ರ ಎಂದಿಗೂ ಅಪಾಯ ತಪ್ಪಿದ್ದಲ್ಲ; ಎನ್ನುತ್ತಾಳೆ. ಜೀವನದಲ್ಲಿ ಮೌಲ್ಯಗಳಿಗಾಗಿಯೇ ಬದುಕು ದುಕೊಂಡವರೆಲ್ಲರ ಸಾರ್ವತ್ರಿಕ ಅನುಭವವಿದು. ಶಿಶಿಲದ ಬಳಿಯ ಬರ್ಗುಳದಲ್ಲಿ ಮಾವಂದಿರೊಡನೆ ಬೆಳೆದವ ನಾನು. ದೊಡ್ಡ ಮಾವ ಹದಿನಾಲ್ಕೆಕರೆ ಜಾಗ ಮಾಡಿಕೊಂಡಿದ್ದರು. ಅವರನ್ನೇ ಪ್ರಧಾನ ಪಾತ್ರವನಾನಗಿ ಮಾಡಿ ಕರಾಚಿ ಕಾರಣೋರು ಎಂಬ ಕತೆಯೊಂದನ್ನು ಬರೆದಿದ್ದೆ. ಅಲ್ಲಿ ಹಾಡ ಹಗಲು ಮೊಲಗಳು, ಆಮೆಗಳು, ಕಾಡಕೋಳಿಗಳು ಹೆಜ್ಜೆ ಹೆಜ್ಜೆಗೆ ಕಾಣಸಿಗುತ್ತಿದ್ದವು. ಜಿಂಕೆಗಳು ಮತ್ತು ಕಡವೆಗಳು ಮನೆಯಂಗಳಕ್ಕೇ ಬಂದು ಬಿಡುತ್ತಿದ್ದವು. ರಾತ್ರೆ ಕಾಡಹಂದಿ ಮತ್ತು ಆನೆಗಳು ಕಾಣಿಸಿಕೊಳ್ಳುತ್ತಿದ್ದವು. ಕಾಡಂಚಿನಲ್ಲಿ ಆಗಾಗ ಹುಲಿಯ ಗರ್ಜನೆ. ಮಳೆಗಾಲದಲ್ಲಿ ಹಿಂಡು ಹಿಂಡು ಮೀನು ಕಪಿಲಾ ನದಿಯಿಂದ ತೋಡಿನ ಮೂಲಕ ಗದ್ದೆಗೆ ನುಗ್ಗುತ್ತಿದ್ದವು. ಹಗಲು ಕಂಡ ಮೊಲ, ಕಾಡುಕೋಳಿ, ಮೀನು, ಏಡಿ, ಆಮೆ ರಾತ್ರೆ ಊಟದ ಬಟ್ಟಲಿಗೆ ಬಂದು ಬಿದ್ದಾಗ ವಿಚಿತ್ರ ಸಂಕಟವಾಗುತ್ತಿತ್ತು. ಅದೇ ಭಾವತೀವ್ರತೆ ಸಸ್ಯಹಾರಿಯಾಗಲು ಕಾರಣವಾಯಿತು.

ಇಲ್ಲಿ ನಾನು ಬದುಕುತ್ತಿರುವ ಕಾಂತಮಂಗಲದ ಮನೆಯಲ್ಲಿ ನಾಗರಹಾವು ಅಂಗಳದಲ್ಲಿ ಹಾದು ಹೋಗುತ್ತದೆ. ಪರಮ ವಿಷದ ಕಟ್ಟ ಬುಳಕ್ಕರಿ ಹಾವು ಮನೆಯೊಳಗೇ ಬಂದು ಬಿಡುತ್ತದೆ. ಲಕ್ಷ್ಮೀಚೇಳು, ಕೊಂಬಚೇಳು ಮನೆಯ ಸಂದುಗೊಂದುಗಳಲ್ಲಿ ಕಾಣಿಸಿಗುತ್ತವೆ. ಅವು ನಮ್ಮಂತೆ ಈ ಭೂಮಿಯಲ್ಲಿ ಬದುಕುವ ಅಧಿಕಾರ ಹೊಂದಿವೆ.

ನಾವು ಅವುಗಳ ಆವಾಸಸ್ಥಾನಗಳಿಗೆ ಬೇಲಿ ಹಾಕಿಕೊಂಡು ‘ನಮ್ಮ ಜಾಗ, ನಮ್ಮಪ್ಪ ಮಾಡಿದ ಜಾಗು ಎನ್ನುತ್ತೇವೆ. ಯಾರ ಅಪ್ಪ ಈ ಜಗವನ್ನು ಸೃಷ್ಟಿಸಿದ ? ಯಾರ ಅಪ್ಪನಿಗೆ ಆ ಜೀವಿಗಳನ್ನು ಸೃಷ್ಟಿಸಲು ಸಾಧ್ಯವಿದೆ? ಅಂದ ಮೇಲೆ ಅವುಗಳನ್ನು ಕೊಲ್ಲುವ ಹಕ್ಕು ನಮಗೆಲ್ಲಿದೆ? ಚುಮು ಚುಮು ಬೆಳಕಲ್ಲಿ ಕಾಲೇಜಿನಿಂದ ವ್ಯಾನಲ್ಲಿ ಡ್ರೈವರ್‌ ಬಳಿಯ ಏಕೈಕ ಸೀಟಿನಲಿ ಕೂತು ಸಂಪಾಜೆಗೆ ಹೋಗುತ್ತಿರುವಾಗ ಉದಯಿಸಿದ ಭಾವನೆಗಳವು. ಸಂಪಾಜೆ ಗಡಿಯ ಹೋಟಲಲ್ಲಿ ತಿಂಡಿ ತಿಂದೆವು. ಹದಿನೆಂಟು ಮಂದಿಗೆ ಹೊಟ್ಟೆ ತುಂಬುವಷ್ಟು ತಿಂಡಿ ಅಲ್ಲಿರಲಿಲ್ಲ. ಬೇಕರಿಯಿಂದ ಒಂದಷ್ಟು ಬ್ರೆಡ್ಡು ಮತ್ತು ಬಾಳೆಹಣ್ಣು ನಾಯಕ ಕಟ್ಟಿಸಿಕೊಂಡ. ಪಡ್ಡೆಗಳಿಗಾಗಿ ಜಹಾಂಗೀರ್‌, ಒಣ ದ್ರಾಕ್ಷಿ ಮತ್ತು ರಸ್ಕ್‌ ತೆಗೆದುಕೊಂಡೆ. ರಬ್ಬರ್‌ ತೋಟದ ನಡುವಣ ರಸ್ತೆಯಲ್ಲಿ ಸಾಗಿತು ನಮ್ಮ ದಂಡು.

ಅರೆಕಲ್ಲಿನ ಅಯ್ಯಪ್ಪ
‘ನಾವೀಗ ಹೋಗುತ್ತಿರುವುದು ಅರೆಕಲ್ಲಿಗೆ. ಅಲ್ಲಿಂದ ನಾಟಿಕಲ್ಲಿಗಾಗಿ ಮೂರು ಜಲಪಾತಗಳಿಗೆ. ಅರೆಕಲ್ಲಿನ ಮಲೆಕುಡಿಯರು ನಮ್ಮ ಮಾರ್ಗದರ್ಶಕರು’ ಎಂದು ನಾಯಕ ಘೋಷಿಸಿದ. ಅರೆಕಲ್ಲಿನ ಜಾತ್ರೆ ಮತ್ತು ವಿಶಿಷ್ಟ ಆಚರಣೆಗಳ ಬಗ್ಗೆ ಸಂಪಾಜೆ ದೇವಿಪ್ರಸಾದರು ಎಷ್ಟೋಬಾರಿ ನನ್ನಲ್ಲಿ ಹೇಳಿದ್ದರು. ಡಾ|| ಚಂದ್ರಶೇಖರ
ದಾಮ್ಮೆ ಒಂದು ಸಂಶೋಧನಾತ್ಮಕ ಕೃತಿ ಬರೆದಿದ್ದರು. ಅವೆಲ್ಲಾ ಈಗ ನೆನಪಾದವು. ಅರೆಕಲ್ಲಿಗೆ ಸಂಪಾಜೆಯಿಂದ ಸುಮಾರು ಎಂಟು ಕಿ. ಮೀ. ದೂರ. ಒಂದು ರಸ್ತೆ ಯಿದೆ. ನಡಕೊಂಡು ಹೋಗುವಾಗ ಶಾಲಾಮಕ್ಕಳು ಎದುರಾಗುತ್ತಾರೆ. ಮಕ್ಕಳಲ್ಲಿ ಮಾತಾಡಿ ಮುಗ್ಛತೆಯ ಲೋಕಕ್ಕೆ ಪಯಣಿಸುವುದು ನನ್ನದೊಂದು ಅಭ್ಯಾಸ.
ಯಾರಾದರೂ ಮಕ್ಕಳು ಸಿಕ್ಕಿದಾಗ ಸುಮ್ಮನೆ ಕೇಳಿನೋಡಿ.’ ನಿನ್ನ ಹೆಸರು …………..ಅಲ್ಲವೇ?’ ಅವರಾಗ ‘ಅಲ್ಲ. ನನ್ನ ಹೆಸರು …………………….’ ಎನ್ನುತ್ತಾರೆ. ‘ಓ ನೀನು ………..ಎಂದೇ ತಿಳಿದುಕೊಂಡಿದ್ದೆ. …………ನನ್ನ  ಹಾಗೇ ಇದ್ದಾನೆ’ ಎಂದರೆ ಅವರು ನಗುತ್ತಾರೆ. ಅವರ ಮುಖದಲ್ಲಿ ಇವನೆಂತಹ ಬೋದಾಳ ಎಂಬ ಭಾವವಿರುತ್ತದೆ. ‘ನೀನೀಗ …..ಕ್ಲಾಸಲ್ಲವೇ’ ಎನ್ನುವುದು ಮುಂದಿನ ಪ್ರಶ್ನೆ. ಅದು ಸರಿಯಾಗಿದ್ದರೆ ಮಕ್ಕಳ ಮುಖದಲ್ಲಿ ಮೂಡುವ ಅಚ್ಚರಿ
ನೋಡಬೇಕು. ತಪ್ಪಾದರೆ ಅವರೇ ನಮ್ಮನ್ನು ಸರಿಪಡಿಸುತ್ತಾರೆ. ಆಗ ಹೇಳಬೇಕು. ುಹೌದಾಲ ಕಳೆದ ಸಲ ನಿನ್ನನ್ನು ನೋಡಿದಾಗ ನೀನು ………. ನೇ ತರಗತಿಯಲ್ಲಿದ್ದೆ. ವರ್ಷಗಳು ಎಷ್ಟು ಬೇಗ ಉರುಳುಹೋಗುತ್ತವೆ.’ ಈಗ ಮಕ್ಕಳು ಕಕ್ಕಾಬಿಕ್ಕಿಯಾಗುತ್ತಾರೆ.

ಸ್ಕೂಟರಲ್ಲಿ ಪಯಣಿಸುವಾಗ ಮಕ್ಕಳು ಎದುರಾದರೆ ಒಮ್ಮೊಮ್ಮೆ ನಿಲ್ಲಿಸಿ ಕೇಳುತ್ತೇನೆ. ‘ಇದೇನು ಮಾರಾಯ ನೀನಿಲ್ಲಿ?’ ಅವರು ಉತ್ತರ ಕೊಡುವ ಮೊದಲೇ ಸ್ಕೂಟರು ಮುಂದಕ್ಕೆ ಹೋಗಿರುತ್ತದೆ. ಅವರು ಅಂದು ಇಡೀ ದಿನ ಗೊಂದಲದಲ್ಲಿ ಮುಳುಗಿರುತ್ತಾರೆ. ಮನೆಯಲ್ಲಿ ಹೋಗಿ ಅದನ್ನು ಹೇಳಿ ಅಪ್ಪಅಮ್ಮಂದಿರನ್ನು ‘ಅದು ಯಾರು ಹಾಗೆ ನನ್ನಲ್ಲಿ ಕೇಳಿದ್ದು’ ಎಂದು ಕಾಡಲೂಬಹುದು!

ಅರೆಕಲ್ಲು ಹಾದಿಯಲ್ಲೂ ಹಾಗೇ ಆಯಿತು. ಎದುರಾದ ಮಕ್ಕಳಿಗೆ ನಾನು ಹಾಕಿದ ಪ್ರಶ್ನೆಗಳಿಂದ ಉತ್ತೇಜಿತರಾದ ಪಡ್ಡೆಗಳು ಆ ಮೇಲೆ ಕಾಣಸಿಕ್ಕವರನ್ನು ನನಗಿಂತ ಮೊದಲೇ ಪ್ರಶ್ನೆಹಾಕಿ ತಬ್ಬಿಬ್ಬುಗೊಳಿಸತೊಡಗಿದರು. ಹಿಂದಿನಂತೆ ಮಡಪಾಯಹಡಿ ಪ್ರವೀಣ, ವಿನಯ ಮತ್ತವನ ಸೆನೕಹಿತರು ಹಿಂದೆ ಬೀಳ ತೊಡಗಿದರು.

‘ಏನ್ರಯಯ್ಯ ನೀವೆಂತ ಗಂಡಸರು?’ ಎಂದವರನ್ನು ಛೇಡಿಸಿದಾಗ ‘ಮಡಪಾಯಹಡಿ ಉತ್ತರಕುಮಾರ ಸರ್‌’ ಎಂದು ಇಕಬಾಲ್‌ ಎಲ್ಲರನ್ನೂ ನಗಿಸಿದ.

ಅರೆಕಲ್ಲಿಗೆ ಇನ್ನೇನು ಒಂದು ಕಿ. ಮೀ. ದೂರವಿದೆ ಎನ್ನುವಾಗ ನಮ್ಮ ಸ್ಥಳೀಯ ಮಾರ್ಗದರ್ಶಕರು ಎದುರಾದರು. ನಾಲ್ಕು ಮಂದಿ ಮಲೆಕುಡಿಯ ಯುವಕರು. ನಮ್ಮನ್ನು ನೋಡಿ ‘ಅಯ್ಯಯೋ, ನೀವು ತುಂಬಾ ಮುಂದಕ್ಕೆ ಬಂದಿದ್ದೀರಿ. ಮತ್ತೆ ಹಿಂದಕ್ಕೆ ಹೋಗುವಾ. ಜಲಪಾತಗಳನ್ನು ನೋಡಿ ನಾಟಿ ಕಲ್ಲಿಗಾಗಿ ಅರೆಕಲ್ಲಿಗೆ ಬರುವಾ. ಅದೇ ಸುಲಭು ಎಂದರು. ಈಗಾಗಲೇ ಕಾಡ ಜಿಗಣೆಗಳಿಂದ ಸಾಕಷ್ಟು ಬಾರಿ ಕಚ್ಚಿಸಿಕೊಂಡ ನಮಗೆ ಮತ್ತೆ ಹಿಂದಕ್ಕೆ ಹೋಗಲು ಮನಸ್ಸಾಗಲಿಲ್ಲ. ‘ಹೇಗೂ ಬಂದಾಯಿತಲ್ಲಾ? ಅರೆಕಲ್ಲು ನೋಡಿಯೇ ಜಲಪಾತಕ್ಕೆ ಹೋಗೋಣ. ಆಗ ಮಧ್ಯಾಹ್ನವಾಗಿರುತ್ತದೆ. ಚೆನಾನಗಿ ಸಾನನ ಮಾಡಬಹುದು’ ಎಂದೆವು. ಮಾರ್ಗದರ್ಶಕರು ಮನಸ್ಸಿಲ್ಲದೆ ಒಪ್ಪಿದರು. ಅವರ ಮಾತನ್ನು ಕೇಳಬೇಕಿತ್ತೆಂದು ನಮಗೆ ತೀರಾ ತಡವಾಗಿ ಗೊತ್ತಾಯಿತು.

ಅರೆಕಲ್ಲಿನಲ್ಲಿ ಎರಡು ದೇವಾಲಯಗಳಿವೆ. ಶಿವನದ್ದು ಮತ್ತು ಅಯ್ಯಪ್ಪನದ್ದು. ಶಕ್ತಿಯ ಆರಾಧನೆಗಿಂತ ಶಿವನ ಆರಾಧನೆಗೆ ಹೆಚ್ಚು ಮಹತ್ವ ಬಂದದ್ದು, ಮಾತೃ ಪ್ರಧಾನ ಕುಟುಂಬ ವ್ಯವಸ್ಥೆಯ ಬದಲು ಪಿತೃ ಪ್ರಧಾನ ಕುಟುಂಬ ವ್ಯವಸ್ಥೆ ಅನುಷ್ಠಾನಕ್ಕೆ ಬಂದುದರಿಂದ. ಶೈವ ಮತ್ತು ವೈಷ್ಣವ ಪಂಥೀಯರ ನಡುವಣ ಸಂಘರ್ಷ ತಪ್ಪಿಸಲು ಹರಿಹರಪುತ್ರನಾಗಿ ಅಯ್ಯಪ್ಪನ ಆವಿರ್ಭಾವಾಯಿತು. ಹಾಗಂತ ಎಲ್ಲೋ ಓದಿದ್ದನ್ನು ಪಡ್ಡೆಗಳಿಗೆ ತಿಳಿಸಿದೆ.

ದೇವಾಲಯಗಳಿಗೆ ಐವತ್ತು ಮೀಟರು ದೂರದಲ್ಲಿ ಪಾದರಕೆಗಳನ್ನು ಕಡ್ಡಾಯವಾಗಿ ಕಳಚಿಡಲೇ ಬೇಕು. ಮೇ ತಿಂಗಳಲ್ಲಿ ನಡೆಯುವ ಅರೆಕಲ್ಲು ಜಾತ್ರೆ ಕಾಲದಲ್ಲಿ ಶಾಂತಿವ್ಯವಸ್ಥೆ ಕಾಪಾಡಲೆಂದು ಪೋಲೀಸರ ತಂಡ ಇಲ್ಲಿಗೆ ಬರುತ್ತದೆ. ಒಂದು ಬಾರಿ ಹಾಗೇ ಬಂದ ಪೋಲೀಸರು ಬೂಟುಗಾಲಲ್ಲಿ ದೇವಾಲಯಗಳ ಸಮೀಪಕ್ಕೆ ಬಂದು
ಬಿಟ್ಟರು. ದೇವರ ಜಾಗ ಅಪವಿತ್ರವಾಯಿತೆಂದು ಸ್ಥಳೀಯರು ಅವರನ್ನು ಬಡಿದು ಓಡಿಸಿಯೇಬಿಟ್ಟರು! ಹಾಗಂತ ಪಾವನಕೃಷ್ಣ ಮೆಲ್ಲನುಸಿರಿದ. ನಡೆಯೋದಿಕ್ಕೇ ಕಷ್ಟಪಡುವ ನಮ್ಮ ಹುಡುಗರು ಓಡುವುದುಂಟೆ ? ಅಲ್ಲಿ ಚಪ್ಪಲಿ ಚೋರರು ಇರಲು ಸಾಧ್ಯವಿರಲಿಲ್ಲ. ನೆಮ್ಮದಿಯಿಂದ ಚಪ್ಪಲಿ ಕಳಚಿಟ್ಟು ಕಲ್ಲು ಮುಳ್ಳುಗಳಿಂದ ಚುಚ್ಚಿಚಸಿಕೊಂಡು ಮುಂದುವರಿದೆವು.

ಮೊದಲು ಎದುರಾದದ್ದು ಅಯ್ಯಪ್ಪನ ಗುಡಿ. ಅದರ ಬಲಭಾಗಕ್ಕೆ ಮೇಲ್ಗಡೆ ಶಿವನ ದೇವಾಲಯ. ಅಯ್ಯಪ್ಪನನ್ನು ಶಾಸ್ತಾರನೆಂದೂ ಕರೆಯುತ್ತಾರೆ. ಅವನು ಹರಿಹರಪುತ್ರ, ಮತಾತೀತ ದೇವರು. ಶಬರಿಮಲೆ ಅವನ ಮೂಲಸ್ಥಾನ. ಅವನ ನೆಚ್ಚಿನ ಬಂಟ ವಾವರನೆಂಬ ಮುಸ್ಲಿಮ. ಅಯ್ಯಪ್ಪನನ್ನು ನೋಡುವ ಮೊದಲು ವಾವರನನ್ನು ನೋಡಿಯೇ ಹೋಗಬೇಕು. ಇಲ್ಲದಿದ್ದರೆ ಫಲ ದಕ್ಕುವುದಿಲ್ಲ. ಅಯ್ಯಪ್ಪ ಜಾತ್ಯತೀತ ದೇವರು. ಅವನನ್ನು ಹಿಂದುಗಳು ಮಾತ್ರವಲ್ಲದೆ, ಮುಸಲ್ಮಾನರು ಮತ್ತು ಕ್ರಿಶ್ಚಿಯನನರೂ ನಂಬುತ್ತಾರೆ. ಎಂತೆಂತಹ ಪ್ರಭೃತಿಗಳನ್ನೂ ಚಳಿಗಾಲದ ಒಂದೆರಡು ಮಾಸ ಸಾತ್ವಿಕ ಜೀವನ ನಡೆಸುವಂತೆ ಮಾಡುವ ಶಕ್ತಿ ವಂತನಾತ. ಪರಮ ಕುಡುಕರು, ದಿನಾ ಜಗಳಾಡುವವರು ದೀಕ್ಷಾ ಬ್ಧಿರಾದ ಮೇಲೆ ತಮ್ಮನ್ನು ನಿಯಂತ್ರಿಸಿಕೊಳ್ಳುತ್ತಾರೆ. ವಿಪರೀತ ಸಿಟ್ಟು ಬಂದಾಗ ಎದುರಾಳಿಗೆ ‘ನಾನು ಮಾಲೆ ಹಾಕಿದ್ದಕ್ಕೆ ನೀನೀಗ ಬದುಕಿಕೊಂಡೆ ಮಗನೇ. ಮಲೆಗೆ ಹೋಗಿ ಬಂದು ಮಾಲೆ ತೆಗೆದ ಮೇಲೆ ನಿನ್ನ ತಿಥಿ ಮಾಡುತ್ತೇನೆ’ ಎಂದು ಬಿಡುತ್ತಾರೆ. ಅಯ್ಯಪ್ಪನನ್ನು ಬಿಟ್ಟರೆ ಬೇರಾವ ದೇವರಿಗಿದೆ ಹೀಗೆ ತತ್ಕಾಲಕ್ಕಾದರೂ ಮನುಷ್ಯರನ್ನು ಬದಲಾಯಿಸಬಲ್ಲ ಶಕ್ತಿ?

ಅಂತಹ ಶಕ್ತಿವಂತ ದೇವರ ಗುಡಿಯ ಫೋಟೋ ತೆಗೆಯಲು ಮಾರ್ಗದರ್ಶಿಗಳು ಬಿಡಲಿಲ್ಲ. ‘ಫೋಟೋ ತೆಗೆದರೆ ದೇವರ ಶಕ್ತಿ ಕಡಿಮೆಯಾಗುತ್ತದೆ’ ಎಂದು ಬಿಟ್ಟರು. ಬೂಟುಗಾಲಲ್ಲಿ ಹೋಗಿ ಏಟು ತಿಂದ ಫೋಲೀಸರಂತಾಗುವುದು ಬೇಡವೆಂದು ನಮ್ಮೊಡನಿದ್ದ ಛಾಯಾಗ್ರಾಹಕ ಸುಮ್ಮನಾದ. ಮಾರ್ಗದರ್ಶಿಗಳೊಡನೆ ಕೆಲವು ಪ್ರಶ್ನೆ ಕೇಳಿದೆವು. ಅವರಿಗೆ ಉತ್ತರ ಗೊತ್ತಿರಲಿಲ್ಲ. ಅಯ್ಯಪ್ಪನ ಅಪಾರ ಶಕ್ತಿಯ ಬಗ್ಗೆ ಕೆಲವು ನಂಬಿಕೆಗಳನ್ನು ನಮಗೆ ತಿಳಿಸಿದರು. ನಂಬಿಕೆಗಳನ್ನು ಪ್ರಶ್ನಿಸಿ ಅಪಾಯವನ್ನು ಯಾಕೆ ಮೇಲೆಳೆದುಕೊಳ್ಳಬೇಕು ?

ಅಯ್ಯಪ್ಪನ ಗುಡಿಗೊಂದು ಸುತ್ತು ಹಾಕಿ ಮೇಲಾಪಗದ ಶಿವದೇವಾಲಯಕ್ಕೆ ಹೋದೆವು. ಅದರ ಎದುರುಗಡೆಯ ನಂದಿಯ ವಿಗ್ರಹ ಚೆನ್ನಾಗಿತ್ತು. ನಂದಿಯ ಫೋಟೋ ಕೂಡಾ ತೆಗೆಯಲು ಅನುಮತಿ ಕೊಡಲಿಲ್ಲ. ಎಲ್ಲಾ ಕಡೆಗಳಲ್ಲಿ ಅಪಾಯವಿರುವುದು ಭಕ್ತರಿಂದಲೇ ಅ ಶಿವದೇಗುಲದ ಬಲಬದಿಯ ಎತ್ತರದ ಹಾದಿ ಯಲ್ಲಿ ನಾವು ಚಪ್ಪಲಿ ಇಟ್ಟಲ್ಲಿಗೆ ಬರುವಾಗ ಎಡಬದಿಯ ಸುಂದರ ಪರ್ವತವನ್ನು ನೋಡಿದೆವು. ಅದರ ಶೂಟಿಂಗು ಮಾಡಲು ಮಾರ್ಗದರ್ಶಕರು ಅನುಮತಿ ನೀಡಿದರು. ಆಗಲೂ ಕ್ಯಾಮರಾದ ಗೃಧ್ರದೃಷ್ಟಿಗೆ ಅಯ್ಯಪ್ಪ ಮತ್ತು ಶಿವನ ದೇವಾಲಯಗಳು ಬೀಳದಂತೆ ಎಚ್ಚರ ವಹಿಸಿಕೊಂಡರು!

ಪೋಸು ಕೊಟ್ಟಿತು ಗೋವು
ಹೊರಗಡೆಯಿಂದಲೇ ದೇವರ ದರ್ಶನ ಪಡೆದು ಚಪ್ಪಲಿ ಇಟ್ಟಲ್ಲಿಗೆ ಬಂದೆವು. ಅಲ್ಲಿ ಸಮೃ್ಧಿ ಹುಲ್ಲು. ದನವೊಂದು ಹುಲ್ಲುಮೇಯುತ್ತಿತ್ತು. ಅರೆಕಲ್ಲಿಗೆ ಹೋಗುವ ಹಾದಿಯಲ್ಲಿ ದನಗಳು ಅಲ್ಲಲ್ಲಿ ಹುಲ್ಲು ಮೇಯುತ್ತಿದ್ದುದ್ದನ್ನು ಕಂಡಿದ್ದೆವು. ಇಲ್ಲಿನ ದನಗಳ ಭಾಗ್ಯ ಕಾಂತಮಂಗಲದ ದನಗಳಿಗಿಲ್ಲ. ಅವನ್ನು ಹಟ್ಟಿಯಿಂದ ಬಿಟ್ಟರೆ ಹೋಗುವುದೆಲ್ಲಿಗೆ? ಜನರು ಚರಂಡಿಗೂ ಜಾಗಬಿಡದೆ ರಸ್ತೆಯ ಟಾರಿನವರೆಗೂ ಬೇಲಿ ಹಾಕಿರುತ್ತಾರೆ. ಬಡಪಾಯಿ ದನಗಳು ರಸ್ತೆಯಲ್ಲಿ ಒಂದಷ್ಟು ವಾಕಿಂಗ್‌ ಮಾಡಿ ಹಟ್ಟಿಗೇ ವಾಪಾಸಾಗಿ ಬಿಡುತ್ತವೆ. ಭೂಮಿ ಕಾಣಿಯಿಲ್ಲದ ಬಡವರು ತಮ್ಮ ದನಗಳ ಹೊಟ್ಟೆಹೊರೆಯಲು ಶ್ರೀಮಂತರ ತೋಟದ ಹುಲ್ಲನ್ನು ಆಶ್ರಯಿಸಬೇಕಾಗುತ್ತದೆ. ಹೆಚ್ಚಿನವರು ತಮ್ಮ ತೋಟದ ಹುಲ್ಲನ್ನು ಕೊಂಡೊಯ್ಯಲು ಬಡವರಿಗೆ ಅನುಮತಿ ನೀಡುವುದಿಲ್ಲ. ಬಡವರ ಹೊಟ್ಟೆಯ ಹಾಗೇ ಇರುತ್ತದೆ

ಅವರು ಸಾಕುವ ದನಗಳ ಹೊಟ್ಟೆಯೂ. ಭಾರತದ ಗೋತಳಿಗಳನ್ನು ಸಂರಕಿಸಬೇಕೆಂದು ಇತ್ತೀಚೆಗೆ ಜಾಥಾವೊಂದನ್ನು ಸ್ವಾಮೀಜಿಯೊಬ್ಬರ ಮುಂದಾಳತ್ವದಲ್ಲಿ ಸಂಘಟಿಲಾಗಿತ್ತು. ಗೋತಳಿಗಳ ಉಳಿವಿಗೆ ಗೋಮಾಳಗಳ ಅಗತ್ಯವಿದೆ. ಭೂರಹಿತ ಬಡವರಿಗೆ ಭೂಮಿ ಹಂಚಬೇಕಾದ ಅನಿವಾರ್ಯತೆಯೂ ಇದೆ. ಅದಕ್ಕಾಗಿ ಚಳವಳಿ ಮಾಡುವ ಸ್ವಾಮೀಜಿಯೊಬ*ರ ಅಗತ್ಯವೂ ಇದೆ.

ಅರೆಕಲ್ಲಿನ ದನದ ಸುತ್ತ ನಾವು ನೆರೆದೆವು. ಅದು ಗಾಬರಿಬಿದ್ದು ಕಿವಿ ಬಾಲ ನೆಟ್ಟಗೆ ಮಾಡಿ ಓಡಲಿಲ್ಲ. ಅದರ ಕೊಂಬುಗಳ ಮಧ್ಯೆ ಗಂಟಲ ಬಳಿ, ಹಿಂಬದಿಯ ಎರಡೂ ಕಾಲುಗಳ ಮಧ್ಯೆ ತುರಿಸಿದೆ. ಶರೀರಕ್ಕಂಟಿದ್ದ ರಕ್ತ ಹೀರುವ ಉಣ್ಣಿಗಳನ್ನು ಕಿತ್ತೆಸೆದೆ. ದನಕ್ಕೆ ಖುಷಿಯಾಯಿತು. ಫೊಟೋಕ್ಕೆ ಪೋಸುಕೊಟ್ಟಿತು. ಸ್ವಲ್ಪ ಹೊತ್ತಲ್ಲಿ ಅದರ ಹಿಂಬದಿಯಿಂದ ಜಲಧಾರೆ ಹರಿದೇ ಬಿಟ್ಟಿತು. ಗಿರೀಶನಾಗ ಬೊಬ್ಬಿಟ್ಟು ತೀರ್ಥ ಬಾತಿಯಾ. ಹಂಞಹೊತ್ತಿಲಿ ಪ್ರಸಾದನೂ ಬಂದದೆ.’ ಅವನ ಮಾತು ಮುಗಿಯುತ್ತಿರುವಂತೆ ದನ ಪಚಕ್ಕನೆ ಪ್ರಸಾದ ಕರುಣಿಸಿಯೇ ಬಿಟ್ಟಿತು.

ಕಮಲಾಕ ಹೊಟ್ಟೆ ಬಿರಿಯುವಂತೆ ನಕ್ಕ. ತರಗತಿಯಲ್ಲಿ ಅವನು ಇದ್ದಕ್ಕಿದ್ದಂತೆ ನಕ್ಕು ಈ ನಗು ಯಾರದೆಂದು ನಾನು ನೋಡುವಾಗ ವೃದ್ಧನಾರೀ ಪತಿವೃತಾ ಪೋಸು ಕೊಡುವವನು. ಮೂವರಲ್ಲಿ ಇಂದು ರೈತ ಮತ್ತು ಪುಟ್ಟ ಕಮಲಾಕರು ಬಂದಿರಲಿಲ್ಲ. ಈ ಕಮಲಾಕನ ತಲೆಗೆ ಪಾಠ ಹೋಗುತ್ತಿರಲಿಲ್ಲ. ಆದರೂ ಗಂಭೀರವಾಗಿ ಪಾಠ ಕೇಳುವವನಂತೆ ನಟಿಸಿ ನಾನು ಬೋರ್ಡಲ್ಲಿ ಬರೆಯುವಾಗ ಏನೇನೋ ಗೊಣಗುವವನು. ಅದನ್ನೇ ದೊಡ್ಡ ಜೋಕೆಂಬಂತೆ ಭಾವಿಸಿ ಅವನ ಸುತ್ತಮುತ್ತ ಕೂರುವ ಹೈಪರ್‌ ಬೋಳಗಳು ಗಹಗಹಿಸಿ ವಿಕಟ ಅಟ್ಟಹಾಸ ಮಾಡುವವರು. ‘ಏನ್ರಯಯ್ಯ ಅದು’ ಜೋಕು ನನಗೂ ಹೇಳ್ರಯ್ಯು ಅಂದರೆ ಊಹುಂ. ಪಡ್ಡೆಗಳ ವಲಯದ ನಾನ್‌ವೆಜ್‌ ಜೋಕುಗಳವು. ಅವನನ್ನು ಸಹಿಸಿ ಸಹಿಸಿ ಸಾಕಾಗಿ ‘ನೀನು ಸರ್ಕಸ್ಸಿನ ಬಪೂನು, ಜೋಕರು, ನಕಲಿಶ್ಯಾಮು ಎಂದು ಒಂದು ಸಲ ಬಯ್ದು ಬಿಟ್ಟೆ. ಅದು ಅವನ ಹೆಸರಾಗಿ ಆಚಂದ್ರಾರ್ಕವಾಗಿ ಉಳಿದುಬಿಟ್ಟಿತು. ಆ ನಕಲಿ ಶ್ಯಾಮನ ನಗು ಸಾಂಕ್ರಾಮಿಕವಾಗಿ ಸುತ್ತಣ ಗಿರಿಗಂಹ್ವರಗಳಲ್ಲಿ ಪ್ರತಿಧ್ವನಿಸಿತು.

ಈಗ ಹೊಟ್ಟೆ ಚುರುಗುಟ್ಟ ತೊಡಗಿತು. ಹಾದಿಬದಿಯ ಬಡ್ಡುಹುಳಿಗಳನ್ನು ಕೊಯ್ದುಕೊಂಡು ಮುಂದುವರಿದೆವು. ದಾರಿಯಲ್ಲಿ ನಮ್ಮ ಮಾರ್ಗದರ್ಶಕನೊಬ್ಬನ ಮನೆ ಎದುರಾಯಿತು. ಅಲ್ಲಿ ಪಾತ್ರೆಯೊಂದಕ್ಕೆ ನೀರು ಹುಯ್ದು ಹುಳಿಯನ್ನು ಹಿಂಡಿ ಸ್ವಲ್ಪ ಉಪ್ಪು ಹಾಕಿ ಅರೆಕಲ್ಲು ಕೋಲ್ಡ್‌ ಡ್ರಿಂಕ್ಸನ್ನು ನಮ್ಮ ಹುಡುಗರು ತಯಾರಿಸಿಯೇ ಬಿಟ್ಟರು. ಆಹಾಅ ಆ ಕಣಕ್ಕದು ಅಮೃತಪಾನ. ನಾಯಕ ಪಾವನ ಕೃಷ್ಣ ಹೊತ್ತು ತಂದಿದ್ದ ಬಾಳೆಗೊನೆ ಕಣಾರ್ಧದಲ್ಲಿ ಕಣ್ಮರೆಯಾಯಿತು. ನಮ್ಮ  ಬೊಬ್ಬೆಗೆ ಅಲ್ಲಿದ್ದ ಎರಡು ನಾಯಿಗಳು ಬಾಲಮಡಚಿ ಸದ್ದಿಲ್ಲದೆ ಜಾಗ ಖಾಲಿ ಮಾಡಿದ್ದವು. ಅವು ಎಲ್ಲೋ ದೂರಕ್ಕೆ ಓಡಿ ಬೊಗಳಿ ಅಲ್ಲಿಂದಲೇ ತಮ್ಮ ಉಗ್ರ ಪ್ರತಾಪ ತೋರಿಸತೊಡಗಿದವು. ನೀರವ ಅರಣ್ಯದಲ್ಲಿ ಅವುಗಳ ಬೊಗಳುವಿಕೆ ಮಾರ್ಮೊಳಗತೊಡಗಿತು.

ಏಕದಂತ ಮುಪಾಸ್ಮಹೇ
ಆ ಮನೆಯ ಹಿಂಬದಿಯ ಸಣ್ಣ ತೋಟ ದಾಟಿದರೆ ನಿಬಿಡಾರಣ್ಯ ಎದುರಾಗುತ್ತದೆ. ಕಾಡೆಂದರೆ ಅದು! ಎತ್ತರೆತ್ತರದ ಬೃಹದಾಕಾರದ ವಿವಿಧ ಜಾತಿಯ ಮರಗಳು. ಕೆಲವೆಡೆ ಮರಗಳಿಗೆ ಜೋತು ಬಿದ್ದು ಉದ್ದಕ್ಕೆ ಸಾಗಿರುವ ಬಿಳಲುಗಳು. ಸೂರ್ಯ ಕಿರಣಗಳು ನೆಲಕ್ಕೆ ತಾಗದಂತೆ ದಟ್ಟವಾಗಿ ಆಕಾಶದೆತ್ತರಕ್ಕೆ ಬೆಳೆದು ನಿಂತ ವೃಕ್ಷ ರಾಜಿಗಳ ತಣ್ಣನೆಯ ನೆಳಲಲ್ಲಿ ನಡೆದುಹೋಗುವ ಸೌಭಾಗ್ಯ ನಮ್ಮ ಪಾಲಿಗೆ. ಅದು ಚಾರಣವಲ್ಲ, ಪರ್ವತಾರೋಹಣ. ಗಿಡಮರಗಳ ದಟ್ಟಣೆಯಿಂದಾಗಿ ನಾವು ಏರುತ್ತಿರುವುದು ಒಂದು ಪರ್ವತವನ್ನು ಎಂದು ಮೊದಲಿಗೆ ನಮಗನಿನಸಿಯೇ ಇರಲಿಲ್ಲ. ಏರುತ್ತಾ, ಏರುತ್ತಾ ಹೋದಂತೆ ಏದುಸಿರು ಬರತೊಡಗಿತು. ನಡಿಗೆ ನಿಧಾನವಾಯಿತು.

ಕೆಳಕ್ಕೆ ನೋಡಿದರೆ ಸೊಂಟವನ್ನು ಕೈಯಿಂದ ಆಧರಿಸಿಕೊಂಡು ನಾಲ್ವರು ಆಳ ಪಾತಾಳದಿಂದ ನಿಧಾನಕ್ಕೆ ಮೇಲಕ್ಕೆದ್ದು ಬರುತ್ತಿರುವುದು ಕಾಣಿಸಿತು. ಮಡಪಾಯಹಡಿ ಅಂಡ್‌ ಕೊ!

ಸುಮಾರು ಮೂವತ್ತು ನಲವತ್ತು ನಿಮಿಷಗಳ ಅವಿರತ ಆರೋಹಣದ ಬಳಿಕ ಬೋಳು ಪ್ರದೇಶ ಸಿಕ್ಕಿತು. ಅಲ್ಲಿ ನೆಲ್ಲಿಮರಗಳಿದ್ದವು. ಕೆಲವದರಲ್ಲಿ ನೆಲ್ಲಿಕಾಯಿಗಳು !

ಅಯ್ಯೋ! ನೆಲ್ಲಿಕಾಯಿಗಳನ್ನು ಬಿಡುವವರುಂಟೆ ? ಅದಾಗಲೇ ಇಕ್‌ಬಾಲ, ಚಂದ್ರಜಿತ್‌, ಚೇತನ್‌, ಯತಿರಾಜ, ಚೊಕ್ಕಾಡಿ ವಿನಯ, ಗಿರೀಶ, ನಕಲಿಶ್ಯಾಮ ಮತ್ತಿತರರು ಅಲ್ಲಿ ವಿರಾಜಮಾನರಾಗಿ ದೂರದ ದೃಶ್ಯಗಳ ಸೊಬಗನ್ನು ಸವಿಯುತ್ತಿದ್ದರು. ನಾವಿದ್ದದ್ದು ಪಶ್ಚಿಮ ಘಟ್ಟಗಳ ಸೆರಗಿನ ಅನಾಮ ಧೇಯ ಪರ್ವತವೊಂದರ ಶಿಖರದಲ್ಲಿ. ಅದರ ಹೆಸರು ನಮ್ಮ ಮಾರ್ಗದರ್ಶಕರಿಗೇ ಗೊತ್ತಿರಲಿಲ್ಲ. ಅಲ್ಲಿಂದ ಸಂಪಾಜೆ, ಕೋಯನಾಡು ಅದರಾಚೆಯ ಬೆಟ್ಟಗುಡ್ಡಗಳು ರಮಣೀಯವಾಗಿ ಕಾಣಿಸುತ್ತವೆ. ನಡುವಿನಲ್ಲೊಂದು ಬೆಳ್ಳಿ ಧಾರೆ. ‘ ಅದುವೇ ಕಲ್ಲಾಳ ಜಲಪಾತ. ನಮ್ಮ ಮುಂದಿನ ಚಾರಣ ಅಲ್ಲಿಗೆ’ ಎಂದು ನಾಯಕ ಪಾವನಕೃಷ್ಣ ಘೋಷಿಸಿದ. ‘ಅಷ್ಟು ದೂರ ನಡೆಯಬೇಕಾ’ ಎಂದು ಜಯಪ್ರಕಾಶ ಹತಾಶನಾಗಿ ಕೇಳಿದ. ಆಗ ‘ಸರ್‌ ಇಲ್ಲಿ ನೋಡಿ’ ಎಂಬ ಸರ್ವೇಶನ ಗಾಬರಿಯ ದನಿ ಕೇಳಿಸಿತು. ಅವನು ಆನೆಲದ್ದಿಯನ್ನು ತೋರಿಸುತ್ತಿದ್ದ. ‘ ಸಂಜೆ ಐದರ ಮೇಲೆ ಆನೆಯೊಂದು ಒಮ್ಮೊಮ್ಮೆ ಇಲ್ಲಿ ಕಾಣಸಿಗುತ್ತದೆ. ಇದು ಒಣಗಿದ ಲದ್ದಿ. ನಾಲ್ಕೈದು ದಿನಗಳ ಹಿಂದಿನದ್ದು.’ ನಮ್ಮ ಮಾರ್ಗದರ್ಶಕರು ವಿವರಣೆ ನೀಡಿದರು.

ಒಂದೇ ಆನೆ ಕಾಣಿಸಿಕೊಳ್ಳುತ್ತದೆಂದರೆ ಅದು ಸಲಗ. ಪ್ರಾಣಿಗಳ ಅಧೋಲೋಕದ ನಾಯಕ! ಶಿಶಿಲದಲ್ಲೊಮ್ಮೆ ಚಿಂಗಾಣಿ ಪರ್ವತ ಏರುವಾಗ ಬಿಸಿ ಲದ್ದಿಯನ್ನು ಕಂಡಿದ್ದೆ. ನಮ್ಮೂರಲ್ಲೊಬ್ಬನಿಗೆ ಒಮ್ಮೆ ಅಲ್ಲೇ ಕಾಡಲ್ಲಿ ಆನೆಯ ಒಂದು ದಂತ ಸಿಕ್ಕಿತಂತೆ. ಸುಳಿವು ಸಿಕ್ಕ ಪೋಲೀಸರು ಅವನ ಜನ್ಮ ಜಾಲಾಡಿಬಿಟ್ಟರಂತೆ. ಎಲ್ಲಾ ಸೇರಿ ಕತೆಯೊಂದು ರೂಪುಗೊಂಡಿತು. ಅದಕ್ಕೆ ಏಕದಂತ ಮುಪಾಸ್ಮಹೇ ಎಂದು ಹೆಸರಿಟ್ಟಿದ್ದೆ.

ಶಿಶಿಲಕ್ಕೆ ಹೋಗುವ ಹಾದಿಯಲ್ಲಿ ಸೌತಡ್ಕದ ಅರಳೀಕಟ್ಟೆಯಲ್ಲಿ ಒಂದು ಗಣಪತಿಯ ವಿಗ್ರಹವಿದೆ. ಯಾರು ಬೇಕಾದರೂ ಅದನ್ನು ಸ್ಪರ್ಶಿಸಬಹುದು. ದೇವರನ್ನು ಮುಕ್ತವಾಗಿ ಸ್ಪರ್ಶಿಸುವ ಭಾಗ್ಯ ಕರುಣಿಸುವ ಈ ಗಣಪತಿಯ ಬಗ್ಗೆ ಸುತ್ತುಮುತ್ತಣ ರೈತಾಪಿ ವರ್ಗಕ್ಕೆ ಅಪಾರ ಗೌರವ. ಅವನಿಗೆ ಈಡುಗಾಯಿ ಹರಿಕೆ ಸಲ್ಲಿಸಿದರೆ ಗದ್ದೆಗಳಿಗೆ ಆನೆಗಳ ಉಪದ್ರವವಿರುವುದಿಲ್ಲ ಎನ್ನುವುದೊಂದು ನಂಬಿಕೆ. ಬಂಡಾಯ ಸಾಹಿತ್ಯದ ಉಛ್ರಾಯದ ದಿನಗಳಲ್ಲಿ ಆ ಗಣಪತಿಯನ್ನು ಕೇಂದ್ರವಾಗಿರಿಸಿ ಒಂದು ಆಲದ ಮರವೂ, ಒಬ್ಬ ಹುಡುಗನ ಪುಟ್ಟ ಕತ್ತಿಯೂ ಎಂಬ ಕತೆಯೊಂದನ್ನು ಬರೆದಿದ್ದೆ. ಯಕ್ಷಗಾನ ಪಾತ್ರಧಾರಿಯಾಗಿ ಗಜಮುಖಾದವಗೇ ಗಣಪಗೇ ಎಂದು ಪ್ರಾರ್ಥಿಸಿಯೇ ರಂಗಪ್ರವೇಶ ಮಾಡುತ್ತಿದ್ದೆ.

ಹೀಗೆ ಆನೆ ಮತ್ತು ಆನೆಮೊಗದ ದೇವರೊಡನೆ ನನಗೆ ಹತ್ತಿರದ ಸಂಬಂಧವಿತ್ತು. ‘ಸಲಗವನ್ನು ನೋಡಬೇಕೆನಿಸಿದೆ ‘ ಎಂದೆ. ಮಲೆಕುಡಿಯ ಮಾರ್ಗದರ್ಶಕರು ‘ಬಹಳ ಅಪಾಯ. ನೀವಿಲ್ಲಿ ಒಂದೆರಡು ದಿನ ನಿಲ್ಲಬೇಕಾದೀತು’ ಎಂದರು. ಸಲಗವನ್ನು ನೋಡುವ ಕಾರ್ಯಕ್ರಮವನ್ನು ಅನಿವಾರ್ಯ ಕಾರಣಗಳಿಂದ ಎಂದು ಮುಂದೂಡಿದೆ.

ಪಾವನಕೃಷ್ಣ ಬಿಸ್ಕತ್ತು ಹಂಚಿದ. ಆಗ ನಿಸರ್ಗಸೂೇರ್ತಿಯಿಂದ ಹುಟ್ಟಿದ ನನ್ನ ಕತೆಗಳ ಬಗ್ಗೆ ಹೇಳಿದೆ. ಇವು ಓದೆಂದರೆ ಮೂಗು ಮುರಿಯುವವರು. ಪಾಠವಿಲ್ಲದಾಗ ಗಂಟೆ ಗಟ್ಟಲೆ ಕಾಲೇಜು ಎಂಟ್ರೇನ್ಸಿನಲ್ಲೇ ಬಕಧ್ಯಾನ ಮಾಡುವವರು. ಪಾಠ ಮುಗಿದ ಮೇಲೆ ಬಸ್‌ಸ್ಟ್ಯಾಂಡಲ್ಲಿ ಗಂಟೆಗಳ ಕಾಲ ನಿಂತು ಸುವಾಸನೆ ಆಘ್ರಾಣಿಸುವ ರಸಿಕರು. ಪಾಠಪುಸ್ತಕಗಳನ್ನೇ ಕೊಳ್ಳದವರು ಕತೆ ಪುಸ್ತಕ ಕೊಳ್ಳುತ್ತಾರಾ ! ಆದರೆ ಏನಾಶ್ಚರ್ಯ? ಯತಿರಾಜನ ಬಾಯಿಯಿಂದ ಮುತ್ತುಗಳುದುರಿದವು! ‘ನಾಳೆಯೇ ನಿಮ್ಮ ಕತೆ ಪುಸ್ತಕ ಕೊಂಡು ಓದುತ್ತೇನೆ.’

ಬಿಸ್ಕತ್ತಿನ ರ್ಯಾಪರುಗಳನ್ನು ಬ್ಯಾಗುಗಳಲ್ಲಿ ತುಂಬಿ ನಾವು ಮುಂದುವರಿದೆವು. ಅಲ್ಲಿ  ಸೆಗಣಿಯ ರಾಶಿ. ಕಾಡೆಮ್ಮೆ ಕೋಣಗಳು ರಾತ್ರೆ ತಂಗುವ ಸ್ಥಳವದು. ಅವು ನಿನ್ನೆ ರಾತ್ರೆ ಅಲ್ಲಿ ಮಲಗಿದ್ದಕ್ಕೆ ಅಲ್ಲಿನ ಹುಲ್ಲುಗಳು ಸಾಕ್ಷ್ಯ ನುಡಿಯುತ್ತಿದ್ದವು. ‘ಸರ್‌, ಕಾಡುಕೋಣಗಳೆಂದರೆ ಬಹಳ ಅಪಾಯ’ ಎಂದು ಅಸೀಫು ಅನುಭವಸ್ಥನಂತೆ ನುಡಿದ. ‘ಕಾಡುಕೋಣಗಳೇನು ಮಹಾ, ಈ ಕೋಣಗಳೆದುರು ‘ ಎಂದು ಬಿಟ್ಟೆ. ನಗು ಮೊಳಗಿತು. ‘ ಇದು ಕಾಡೆಮ್ಮೆ ಕೋಣಗಳ ಹನಿಮೂನು ಸ್ಪಾಟು’ ಎಂದು ನಕಲಿ ಶಾಮ ಹೇಳಿಯೇಬಿಟ್ಟ. ಚಂದ್ರಜಿತ್‌, ವಿನಯ, ಲೋಕೇಶ, ಜಯಪ್ರಕಾಶ, ಗಿರೀಶ ಮುಂತಾದವರು ತಾವು ತರಗತಿಯಲ್ಲಿದ್ದೇವೇನೋ ಎಂಬಂತೆ ವೈವಿಧ್ಯಮಯವಾದ ನಗುವಿನ ತರಂಗಗಳನ್ನು ಎಬ್ಬಿಸಿದರು. ಚಂಡಮಾರುತಕ್ಕೆ ಕತ್ರಿನಾ, ರೀಟಾ, ಝೀಟಾ, ವಿಲ್ಮಾ ಇತ್ಯಾದಿಯಾಗಿ ಅನೇಕ ಹೆಸರುಗಳಿರುವಂತೆ ಇವರ ನಗುವಿನ ಅಲೆಗಳಿಗೂ ಹೆಸರುಗಳಿರಬೇಕಿತ್ತು !

ನಾಟಿಕಲ್ಲಿನಲ್ಲಿ ನೂಪುರ ನಾಟ್ಯಧಾರೆ
ನಾವೀಗ ಹೋಗುತ್ತಿದ್ದುದು ಗಿರಿಶಿಖರಗಳ ಮೇಲೆಯೇ. ಎಷ್ಟೊಂದು ಶಿಖರಗಳಿಲ್ಲಿ ! ಇದೇ ಕೊನೆಯೆಂದುಕೊಂಡರೆ ಅದರ ಬಳಿಕ ಇನ್ನೊಂದು.ು ಇವುಗಳ ಹೆಸರೇ ನು?’ ಎಂಬ ಪ್ರಶ್ನೆಗೆ ‘ಅಲ್ಲಿ ಕಾಣುತ್ತಿರುವುದು ನಾಟಿಕಲ್ಲು ಪರ್ವತ. ಇವಕ್ಕೆಲ್ಲಾ ಏನು ಹೆಸರೋ ಗೊತ್ತಿಲ್ಲ’ ಎಂದರು. ‘ಮಕ್ಕಳಿಗೆ ಹೆಸರು ಇಡುವ ಹಾಗೆ ಈ ಶಿಖರಗಳಿಗೂ ಹೆಸರಿಡಬೇಕು. ಇನ್ನಾದರೂ ಇವಕ್ಕೆ ಹೆಸರಿಟ್ಟುಬಿಡಿ’ ಎಂದೆವು. ಅವರು ಮುಖ ಮುಖ ನೋಡಿಕೊಂಡರು.

ನಮ್ಮ ಸಾಹಸಗಳು ಯಥಾವತ್ತಾಗಿ ವೀಡಿಯೋದಲ್ಲಿ ದಾಖಲಾಗುತ್ತಿದ್ದವು. ಸೀತಾರಾಮನ ಕ್ಯಾಮರಾಕ್ಕೂ ಬಿಡುವಿರಲಿಲ್ಲ. ಆನೆಲದ್ದಿ, ಕೋಣನ ಸೆಗಣಿಯಿಂದ ಹಿಡಿದು ಆ ಗುಡ್ಡದ ಮೇಲೆ ಅಲ್ಲಲ್ಲಿ ಕಾಣಸಿಗುವ ಬಗೆ ಬಗೆಯ ಬಣ್ಣದ ಹೂವುಗಳನ್ನು ಕ್ಯಾಮರಾಗಳಲ್ಲಿ ಸೆರೆಹಿಡಿಯುತ್ತಿದ್ದ. ಬಣ್ಣ ಬಳಿದುಕೊಂಡ ಕೃತಕ ಮಾನವ ಮೂತಿಗಳನ್ನು ಕ್ಲಿಕ್ಕಿಸಿ ಗೋಡೆಗಳ ಮೇಲೆ ಸ್ಟೂಡಿಯೋದ ಮಂದಿಗಳು ನೇತುಹಾಕುತ್ತಾರೆ. ಇವನು ದುರ್ಗಮವಾದ ಬೆಟ್ಟ ಗುಡ್ಡಗಳನ್ನು ಅತ್ಯಂತ ಸೂಕ್ಮ ಸಾಧನಗಳೊಡನೆ ಏರಿ ತಾನು ಕಂಡು ಅನುಭವಿಸಿದ ಪ್ರಕೃತಿಯನ್ನು ಪಟ್ಟಣದಲ್ಲಿ ಜಾತಿಮತಗಳ ಮತ್ತು ಪೊಳ್ಳು ಪ್ರತಿಷೆ್ಠಯ ಕೋಟೆ ಕಟ್ಟಿಕೊಂಡು ವಿಕೃತ ಜೀವನ ನಡೆಸುವ ಕೃತಕ ಮಂದಿಗಳಿಗೆ ತೋರಿಸಿ ಅವರ ಕಣ್ಣು ತೆರೆಯಿಸುವ ಸಾಹಸ ಮಾಡಿದ್ದಾನೆ. ಇವನ ಸ್ಟೂಡಿಯೋ ಅದೊಂದು ವ್ಯಾಪಾರ ಕೇಂದ್ರವಾಗಿರುವುದಿಲ್ಲ. ದೇವರು ರುಜು ಮಾಡಿದ ಕಲಾ ಮಂದಿರವಾಗಿರುತ್ತದೆ.

ಅಷ್ಟರಲ್ಲಿ ಸುಬ್ರಹ್ಮಣ್ಯ ಕೂಗಿಕೊಂಡ. ‘ಓಹ್‌ ಅ ಆಚೆ ನೋಡಿ. ಎಂತಹ ಸುಂದರ ದೃಶ್ಯ!’ ನಾವು ನೋಡಿದ ದೃಶ್ಯ ಮನಮೋಹಕವಾಗಿತ್ತು. ಉದ್ದಕ್ಕೂ ಮರಗಿಡ, ತೋಟ ಗದ್ದೆಗಳ ಹಸಿರೋ ಹಸಿರು. ಅವುಗಳ ಮಧ್ಯದಲ್ಲೊಂದು ದೇವಾಲಯ. ಅದು ಹರಿಹರೇಶ್ವರ ದೇಗುಲ. ಹರಿಹರ ಪಳ್ಳತ್ತಡ್ಕ, ಕೊಲ್ಲಮೊಗ್ರ, ಬಾಳುಗೋಡು, ಕಲ್ಮಕಾರು ಪ್ರದೇಶವದು. ಇಲ್ಲಿಂದಲೇ ಹಾರಲು ಸಾಧ್ಯವಾದರೆ ಐದಾರು ಕಿಲೋಮೀಟರುಗಳಾದೀತು. ಅಲ್ಲಿಗೆ ರಸ್ತೆಯಿರುವುದು ಸಂಪಾಜೆಯಿಂದ ಸುಳ್ಯಕ್ಕಾಗಿ, ಗುತ್ತಿಗಾರು ಮೂಲಕ. ಏನಿಲ್ಲವೆಂದರೂ 65-70 ಕಿ. ಮೀ. ದೂರ. ಇಲ್ಲಿಂದ ಅಲ್ಲಿಗೆ ಮತ್ತು ಸಂಪಾಜೆಗೆ ಟ್ರಾಲಿ ವ್ಯವಸ್ಥೆ ಮಾಡಿದರೆ ಎಷ್ಟು ಚೆನ್ನಾಗಿರುತ್ತದೆ ?

ಕೊನೆಗೂ ನಾವಲ್ಲಿಗೆ ಮುಟ್ಟಿದೆವು, ನಾಟಿ ಕಲ್ಲಿಗೆ. ಅಲ್ಲಿ ದೊಡ್ಡ ಕಲ್ಲಗುಪೆಯಹಯ ಮಧ್ಯದಲ್ಲಿ ಉದ್ದನೆಯ ಕಲ್ಲೊಂದನ್ನು ನಾಟಿದ್ದಾರೆ. ‘ಇದು ನಮ್ಮ ದೇವರು ಅಯ್ಯಪ್ಪ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ತಾಣ. ಈ ಕಲ್ಲು ಅಯ್ಯಪ್ಪನ ಬಾಣ’ ಎಂದು ಮಾರ್ಗದರ್ಶಿಗಳು ಹೇಳಿದರು.

ಅಯ್ಯಪ್ಪನೊಡನೆ ನನ್ನ ನಂಟು ಯಕ್ಷಗಾನ ಸಂಬಂಧಿಯಾದದ್ದು. ಡಿಸೆಂಬರ ಜನವರಿ ತಿಂಗಳುಗಳಲ್ಲಿ ವೃತಧಾರಿಗಳು ಅಯ್ಯಪ್ಪ ವಿಳಕ್ಕ್‌ ಉತ್ಸವ ಆಚರಿಸುತ್ತಾರೆ. ಬೆಳಗಿನ ಜಾವ ಕೆಂಡ ಸೇವೆಯನ್ನು ಮಾಡುತ್ತಾರೆ. ರಾತ್ರೆ ನಿದ್ದೆ ಕೆಡಬೇಕಲ್ಲಾ ! ಅದಕ್ಕೆ ರಾತ್ರಿಯಿಡೀ ಯಕ್ಷಗಾನ ಬಯಲಾಟ ಏರ್ಪಡಿಸುತ್ತಾರೆ. ನಾನೊಬ್ಬ ಹವ್ಯಾಸಿ
ಕಲಾವಿದನಾಗಿ ಎಷ್ಟೋ ಪ್ರಸಂಗಗಳಲ್ಲಿ ಪಾತ್ರಧಾರಿಯಾಗಿ ಅಭಿನಯಿಸಿದ್ದೆ. ಅಯ್ಯಪ್ಪ ವಿಳಕ್ಕಿನ ಸಂದರ್ಭದಲ್ಲಿ ವೃತಧಾರಿಗಳು ಯಕ್ಷಗಾನ ಕಲಾವಿದರಿಗೆ ಎಲ್ಲಿಲ್ಲದ ಗೌರವ ಕೊಡುತ್ತಾರೆ. ನಾನು ಶಿವನಾಗಿ ಕಾಣಿಸಿಕೊಂಡಂದು ರಂಗಕ್ಕೇ ಬಂದು ಕಾಲಿಗೆ ಸಾಷ್ಟಾಂಗ ವಂದಿಸುವವರಿದ್ದಾರೆ. ಉಳಿದ ಸಂದರ್ಭಗಳಲ್ಲಿ ಕಲಾವಿದರಿಗೆ ಅಷ್ಟು ಗೌರವ ಸಿಗುವುದಿಲ್ಲ. ಜಾತ್ಯತೀತತೆಯ ಮತ್ತು ಧರ್ಮ ಸಮನ್ವಯತೆಯ ಸಂಕೇತವಾಗಿರುವ ಅಯ್ಯಪ್ಪ ಅಷ್ಟರ ಮಟ್ಟಿಗೆ ನನಗೂ ಇಷ್ಟವೇ. ಅಯಪ್ಪನ ವೃತಾಚರಣೆಯ ಕಾಲದ ನಿಯಮಾವಳಿಗಳನ್ನು ಎಲ್ಲರೂ ವರ್ಷದುದ್ದಕ್ಕೂ ಪಾಲಿಸುವಂತಾದರೆ ಈ ದೇಶಕ್ಕೆ ಕುಟುಂಬ ಯೋಜನೆಯ, ಪೋಲೀಸರ ಮತ್ತು ನ್ಯಾಯಾಲಯಗಳ ಅಗತ್ಯವೇ ಇರುವುದಿಲ್ಲ !

ನಾಟಿಕಲ್ಲಿನ ಕಲ್ಲ ಬಂಡೆಗಳಲ್ಲಿ ಕೂತು ದಣಿವಾರಿಸಿಕೊಂಡೆವು. ಸುತ್ತಮುತ್ತಣ ದೃಶ್ಯಾವಳಿಗಳಿಂದ ಕಣ್ಮನ ತುಂಬಿಕೊಂಡೆವು. ಪಡ್ಡೆಗಳಿಗೆ ಹೊಸ ಲಹರಿ ಬಂತು. ‘ಕುಣಿಯುವ ಸರ್‌. ನೀವೂ ಸೇರಿಕೊಳ್ಳಬೇಕು ‘ ಎಂದರು. ‘ಆಗಲಿ. ಮೊದಲು ನೀವು ಆರಂಭಿಸಿ. ತಾರಕಕ್ಕೇರುವಾಗ ನಾನು ಸೇರಿಕೊಳ್ಳುತ್ತೇನೆ’ ಎಂದೆ. ಇವು ಯಾವ್ಯಾವುದೋ ಹಾಡು ಹೇಳಿಕೊಂಡು ಕುಣಿಯತೊಡಗಿದವು. ಯಾವ ಹಾಡೂ ಮೂರುನಾಲ್ಕು ಸಾಲುಗಳಿಂದಾಚೆ ಇವುಗಳಿಗೆ ಬಾಯಿ ಪಾಠ ಬರುತ್ತಿರಲಿಲ್ಲ. ಚಂದ್ರಜಿತ ಮತ್ತು ಅಸೀಫ ಕೇರಳದ ಚೆಲುವೆಯ ಬಗ್ಗೆ ಮಲೆಯಾಳಿ ಹಾಡು ಹೇಳಿದರು. ಅವಳು ಅದರಲ್ಲಿ ನೂಪುರ ಧರಿಸಿ ನಾಟ್ಯಧಾರೆ ಹರಿಸುವವಳು. ಇವರಲ್ಲೂ ಇದೆ ಮಾರ್ದವತೆ ಅ ಹಾಡು ಹೇಳಿದರೆ ಕುಣಿಯಲಾಗದಷ್ಟು, ಕುಣಿತದೊಂದಿಗೆ ಹಾಡು ಬೆರೆಸಲಾಗದಷ್ಟು ಇವರು ದಣಿದಿದ್ದರು. ಯಾರೂ ಆಜ್ಞಾಪಿಸದೆ ಕುಣಿತ ನಿಂತಿತು.

ಆಶ್ಚರ್ಯ! ಇವರಲ್ಲಿ ಇನ್ನೂ ಉತ್ಸಾಹವಿತ್ತು. ಕೆಲವರು ಕಬಡ್ಡಿ ಅಣಕವಾಡಿದರು. ಎತ್ತರೆತ್ತರಕ್ಕೆ ಮಾನವ ಪಿರಾಮಿಡ್‌ ರಚಿಸಿದರು. ಆಯ ತಪ್ಪಿ ಎತ್ತರದಲ್ಲಿದ್ದವ ಬಿದ್ದ. ಬೆನ್ನ ಮೂಳೆಗೆ ಪೆಟ್ಟಾದೀತೆಂದು ಪಿರಾಮಿಡ್‌ ಆಟ ಬೇಡವೆಂದೆ. ಇರುವವರಲ್ಲಿ ಅತ್ಯಂತ ಗಿಡ್ಡದವನೂ, ಕಡ್ಡಿ ಪೈಲ್ವಾನನೂ ಆದ ಸರ್ವೇಶನನ್ನು ಸಾಮೂಹಿಕವಾಗಿ ಮೇಲಕ್ಕೆತ್ತಿ ಎಸೆದು ಹಿಡಿಯುವ ಆಟ ಆಡಿದರು. ಸರ್ವೇಶ ಬಹಳ ಮಜಾ ಅನುಭವಿಸುತ್ತಿದ್ದ. ಅದಾಗಿ ಪರಿಸರ ಸಂರಕಣೆಯ ಕೆಲವು ಘೋಷಣೆ ಕೂಗಿದರು. ನಮ್ಮ ಮಾರ್ಗದರ್ಶಕರು ಬೆಪ್ಪಾಹಗಿ ಇವರನ್ನು ನೋಡುತ್ತಿದ್ದರು.

ಇಳಿದು ಬರುತಿಹಳು
ಸ್ವಲ್ಪ ಹೊತ್ತು ಕೂತು ದಣಿವಾರಿಸಿ ನಮ್ಮ ತಂಡ ಮುಂದುವರಿಯಿತು. ಇನ್ನು ಜಲಪಾತಗಳಿಗೆ ಇಳಿಯುವುದು. ಮತ್ತೆ ಶುರುವಾಯಿತು ಕಾಡ ಜಿಗಣೆಗಳ ಕಾಟ. ಹತ್ತುವುದಕ್ಕಿಂತ ಇಳಿಯುವುದು ಸುಲಭ ಎಂಬ ನಂಬಿಕೆ ಕಣಾರ್ಧದಲ್ಲಿ ಸುಳ್ಳಾಯಿತು. ಅಷ್ಟೊಂದು ಗಿರಿಶಿಖರ ಹತ್ತಿ ಬಂದು ಕಸುವು ಕಳಕೊಂಡ ಕಾಲುಗಳು, ಬೆಟ್ಟ ಇಳಿಯುವಾಗ ಒಲ್ಲೆನೆಂದು ನಡುಗ ತೊಡಗಿದವು. ಇದು ನನ್ನ ವಯಸ್ಸಿನ ಪರಿಣಾಮವೆಂದು ನಾನು ಸೊಲ್ಲೆತ್ತದೆ ಇಳಿಯತೊಡಗಿದೆ. ಪಡ್ಡೆಗಳೂ ತಮ್ಮ ಕಾಲು ನಡುಗುತ್ತಿವೆಯೆಂದು ಹೇಳಿದಾಗ ನನಗೆ ವಯಸ್ಸಾಗಿಲ್ಲ ಎಂದುಕೊಂಡೆ! ಆ ಪ್ರಪಾತದಲ್ಲಿ ಇಳಿಯುವುದು ನಿಜಕ್ಕೂ ಅಪಾಯಕಾರಿ ಸಾಹಸವಾಗಿತ್ತು. ಹಿಂದಿನ ದಿನದ ಮಳೆಯಿಂದ ಕೆಸರಾದ ನೆಲದಲ್ಲಿ ಚಪ್ಪಲಿ ಸರ್ರನೆ ಜಾರುತ್ತಿತ್ತು. ಆಗ ಬೆತ್ತವೋ, ಮುಳ್ಳೋ, ಕಲ್ಲೋ, ಪೊದೆಯೊ ಸಿಕ್ಕಿದ್ದನ್ನು ಹಿಡಿದುಕೊಳ್ಳಲೇಬೇಕು. ಬೆತ್ತದ
ಮುಳ್ಳು ಚುಚ್ಚಿ ಕೊಂಡರೆ ನಾಲ್ಕೈದು ದಿನ ಅಸಹ್ಯ ಸಿಡಿತ ಬೇರೆ.

ಹೇಗೆ ಹೇಗೋ ಇಳಿದೆವು, ಜಲಪಾತವೊಂದರ ತುದಿಗೆ. ಅದನ್ನು ಸ್ಥಳೀಕರು ಬಾಣ ಜಲಪಾತ ಎಂದು ಕರೆಯುತ್ತಾರೆ. ಲೈನ್ಕಜೆ ಹಾದಿಯಾಗಿ ಬಂದರೆ ಇದು ಕೊನೆಗೆ ಸಿಗುತ್ತದೆ. ನಾಟಿಕಲ್ಲಿನಿಂದ ಇಳಿದ ಕಾರಣ ನಮಗದು ಮೊದಲಿಗೆ ಸಿಕ್ಕಿತು. ಬಹಳ ದೊಡ್ಡ ಜಲಪಾತವದು.

ಜಲಪಾತದ ಸೊಬಗನ್ನು ಕೆಳಗಿನಿಂದ ನೋಡಬೇಕು. ಕಾಡ ಜಿಗಣೆಗಳಿಂದ ಕಚ್ಚಿಸಿಕೊಂಡು ಅಲ್ಲಲ್ಲಿ ಜಾರುತ್ತಾ, ಬೀಳುತ್ತಾ, ಗಿಡಗಂಟಿಗಳನ್ನು, ಮರದ ಬಿಳಲುಗಳನ್ನು ಆಧಾರಕ್ಕೆ ಹಿಡಿದುಕೊಳ್ಳುತ್ತಾ ಬುಡಕ್ಕಿಳಿದೆವು. ಏನಿಲ್ಲವೆಂದರೂ ಐವತ್ತು ಅಡಿಗಳಿಗಿಂತ ಎತ್ತರದ ಜಲಪಾತವದು. ಬಂಡೆಯನ್ನು ಅಪ್ಪಿಹಕೊಂಡು ಜಲಪಾತದ
ಮಧ್ಯ ಭಾಗಕ್ಕಿಂತಲೂ ಸ್ವಲ್ಪ ಎತ್ತರಕ್ಕೇರಿದೆವು. ಪಾವನಕೃಷ್ಣ ಎಲ್ಲರಿಗಿಂತ ಮೊದಲು ಮೇಲಕ್ಕೇರಿ ನನ್ನನ್ನು ಕೈ ಹಿಡಿದು ಹತ್ತಿಸಿಕೊಂಡ.

ತುಂಬಾ ಮೋಹಕ ಜಲಪಾತವದು. ಜಲಪಾತಕ್ಕೆ ತಲೆಯೊಡ್ಡಿ ನಿಂತೆವು. ಧುಮ್ಮಮಿಕ್ಕುವ ಜಲಪಾತ ನಮ್ಮನ್ನು ಪ್ರಪಾತಕ್ಕೆ ತಳ್ಳಿ ಬಿಡುತ್ತದೇನೋ ಎಂಬ ಆತಂಕ ಒಂದೆಡೆ ತಲೆಯೊಡ್ಡಿ ನಿಂತಾಗ ಸಿಗುವ ಅನೂಹ್ಯ ಅನುಭೂತಿ ಇನ್ನೊಂದೆಡೆ. ಹಾಗೆಯೇ ಒಂದಷ್ಟು ಹೊತ್ತು ಕಳೆದವು. ನೀಳಕಾಯದ ನಕಲಿಶ್ಯಾಮನ ಮೇಲೆ ಜಲಧಾರೆ ಬೀಳುವಾಗ ಯಾರೋ ಹೇಳಿದರು. ‘ ಮಹಾ ಮಸ್ತಕಾಭಿಷೇಕ.’ ನಿಸರ್ಗದ ಮಡಿಲಲ್ಲಿ ಡಾಂಭಿಕ ಭಕ್ತರ ಕಾಟವಿಲ್ಲದೆ ಸಹಜವಾಗಿ ಅನುದಿನವೂ ಮಸ್ತಕಾಭಿಷೇಕ ಮಾಡಿಸಿಕೊಳ್ಳುವ ಭಾಗ್ಯ ಯಾವ ದೇವರಿಗಿದೆ ?

ಜಲಪಾತದ ಕೆಳಗಡೆಯ ನೀರಲ್ಲಿ ಮಡಪ್ಪಾಡಿ, ವಿನಯ ಮತ್ತಿತರ ವಾಟರ್‌ ಫೋಬಿಯಾದವರು ನಾನು ಬೈದೇನೆಂದು ಒಲ್ಲದ ಮನಸ್ಸಿನಿಂದ ಸ್ನಾನದ ಶಾಸ್ತ್ರ ಮಾಡುತ್ತಿದ್ದರು. ಶಿವಪ್ರಸಾದ ಒಂದು ಕೆಂಪು ಬೈರಾಸು ಸುತ್ತಿಕೊಂಡು ಎತ್ತರಕ್ಕೇರಲು ಹವಣಿಸುತ್ತಿದ್ದ. ಅವನು ಥೇಟು ಆದಿಮಾನವ ಕಳೆಯಲ್ಲಿ ಕಂಗೊಳಿಸುತ್ತಿದ್ದ.

ಅವನು ಚಾರಣದುದ್ದಕ್ಕೂ ನನ್ನ ಮುಂದಿರುತ್ತಿದ್ದ. ಅವನ ಚಪ್ಪಲಿಯ ಉಂಗುಷ್ಟವೇ ಕಿತ್ತು ಹೋಗಿತ್ತು. ನನಗಿಂತ ಹೆಚ್ಚು ಬಾರಿ ಅವನು ಜಾರಿ ಬಿದ್ದಿದ್ದ. ಹಿಂಭಾಗದಲ್ಲಿ ಪಾವನಕೃಷ್ಣನಿರುವಾಗ ನಾನು ಚಿಂತಿಸಬೇಕಿರಲಿಲ್ಲ. ಅವನಿಗೆ ನನ್ನ ಕಣ್ಣಿನ ಸಮಸ್ಯೆ, ರಕ್ತದೊತ್ತಡದ ತೀವ್ರತೆಯ ಅರಿವಿತ್ತು. ಇತರ ಪಡ್ಡೆಗಳು ಅವರಷ್ಟೇ ಆರೋಗ್ಯ ಅವರ ಗುರುಗಳಿಗೂ ಇದೆಯೆಂದು ತಿಳಿದುಕೊಂಡಿರಬೇಕು. ಪಾವನಕೃಷ್ಣನಿಗೆ ವಾಸ್ತವಿಕತೆಯ ಅರಿವಿತ್ತು. ‘ಯಾವ ಬ್ಯಾಚು ಹೀಗೆ ಚಾರಣ ಮಾಡಿದೆ ಸರ್‌? ನೀವಿದ್ದರೆ ನಮಗೆ, ತಂದೆ ತಾಯಂದಿರಿಗೆ ಧೈರ್ಯು ಎನ್ನುತ್ತಿದ್ದ. ನನಗೂ ಇವರು ಹತ್ತಿರವಾಗಿದ್ದರು.

ಮಡಪಾಯಹಡಿಯಂತಹ ಕೆಲವು ಪುರಾತನ ಪಾತಕಿಗಳನ್ನು ಬಿಟ್ಟರೆ ಹೆಚ್ಚಿನವರು ನನ್ನ ಮಗ ಪೃಥ್ಥಿಯ ಪ್ರಾಯದವರು. ಅದಕ್ಕೆಂದೇ ಹಚ್ಚಿಕೊಂಡೆನೇ ಇವರನ್ನು !

ಬಾಣ ಜಲಪಾತದ ಪರಿಶು್ಧಿ ನೀರು, ಪರಿಸರದ ಅತಿಶುಭ್ರ ಗಾಳಿ ನಮ್ಮ ಆಯಾಸವನ್ನು ಹೋಗಲಾಡಿಸಿದವು. ಇಲ್ಲೇ ಇದ್ದು ಬಿಡೋಣವೆನಿಸುತ್ತದೆಂದು ಒಂದಿಬ್ಬರು ಹೇಳಿದರು. ಎಷ್ಟು ಹೊತ್ತು ಕಳೆದೆವೊ?  ಶಿವಪ್ರಸಾದನ ಹಲ್ಲುಗಳು ಕಟಕಟ ಸ್ವರ ಹೊರಡಿಸಿತೊಡಗಿದವು. ನಾವು ನಿಧಾನವಾಗಿ ಜಲಪಾತದ ತೆಕ್ಕೆಯಿಂದ ಹೊರಬಂದೆವು.

ಹಾಗೇ ತೋಡಿನಗುಂಟ ಕೆಳಗೆ ಸಾಗಿದಾಗ ಎರಡನೆಯ ಜಲಪಾತ ಸಿಕ್ಕಿತು. ಇದು ಸುಮಾರು ನಲವತ್ತು ಅಡಿ ಎತ್ತರವಿರಬಹುದು. ನೀರ ಹರಿವೇನೋ ಮೋಹಕವಾಗಿದೆ.

ಆದರೆ ಜಲಪಾತದ ಮಧ್ಯಕ್ಕೆ ಹೋಗಲಾಗದಷ್ಟು ಕಡಿದಾದ ಬಂಡೆಯ ಮೇಲ್ಗಡೆಯಿಂದ ಧುಮ್ಮಮಿಕ್ಕುತ್ತಿದೆ ಅದು.

ಈಗಾಗಲೇ ಒದ್ದೆಯಾಗಿ ಗದಗುಟ್ಟುತ್ತಿದ್ದ ನಮಗೆ ಇನ್ನೊಂದು ಸ್ನಾನ ಅಷ್ಟು ಬೇಗ ಮಾಡುವ ಉಲ್ಲಾಸವೂ ಇರಲಿಲ್ಲ.

ಅದನ್ನು ನಮ್ಮ ಮಾರ್ಗದರ್ಶಕರು ಅರ್ಬಿ ಜಲಪಾತವೆಂದು ಕರೆಯುತ್ತಾರೆ. ಅದರ ಬುಡದ ಬಳಿಯ ಬಂಡೆಯೊಂದರಲ್ಲಿ ಕೂತು ತಿಂಡಿ ತಿಂದೆವು. ನಕಲಿ ಶ್ಯಾಮ ಒಂದು ಸಣ್ಣ ಏಡಿಯನ್ನು ಹಿಡಕೊಂಡು ಬಂದು ಅನ್ಯಗ್ರಹದ ಜೀವಿಯೊಂದನ್ನು ತಂದು ತೋರಿಸುವ ಸಾಹಸಿಯಂತೆ ಪೋಸು ಕೊಟ್ಟ. ಪ್ರಾಣಿ ಹಿಂಸೆ ಮಾಡುತ್ತಿ
ರುವುದಕ್ಕೆ ನಾವೆಲ್ಲಾ ಅವನನ್ನು ಗದರಿದೆವು. ಕೆಲವು ಪಡ್ಡೆಗಳ ಬಾಯಿಯಿಂದ ಅಭ್ಯಾಸ ಬಲದಿಂದಾಗಿ ಅಣಿಮುತ್ತುಗಳು ಉದುರಿಬಿಟ್ಟವು. ಅವನು ಪೆಚ್ಚಾಗಿ ಸುಟ್ಟ ಬದನೆಕಾಯಿಯಂತೆ ಮುಖ ಮಾಡಿಕೊಂಡು ಏಡಿಯನ್ನು ನೀರಲ್ಲಿ ಬಿಟ್ಟು ಬಂದ.

ಮೂರನೆಯದು ಲೈನ್ಕಜೆ ಜಲಪಾತ. ಬಾಣ ಮತ್ತು ಅರ್ಬಿಗೆ ಹೋಲಿಸಿದರೆ ಇದು ಏನೇನೂ ಅಲ್ಲ. ಅದರ ದರ್ಶನ ದೂರದಿಂದಲೇ ಮಾಡಿ ಧನ್ಯರಾದೆವು. ಇಲ್ಲಿಂದಲೇ ನಮ್ಮ ಚಾರಣ ಆರಂಭವಾಗುತ್ತಿದ್ದರೆ ಅದರ ಮಹತ್ವ ನಮಗರ್ಥವಾಗುತ್ತಿತ್ತು. ಅಲ್ಲಿಂದ ಸ್ವಲ್ಪ ದೂರದಲ್ಲಿ ಲೈನ್ಕಜೆ ಸತ್ಯ ಗಣಪತಿ ಭಟ್ಟರ ಮನೆಯಿದೆ. ಅದು
ಒಂದು ಗ್ರಂಥಾಲಯದಂತಿದೆಯೆಂದು ಪತ್ರಿಕೆಗಳು ಲೇಖನ ಬರೆದಿದ್ದವು. ‘ನೋಡೋಣವಾ, ಬೇಡವಾ’ ಎಂಬ ಪ್ರಶ್ನೆ ಎದ್ದಾಗ ‘ಈಗ ಬೇಡು ಎಂದು ಧ್ವನಿ ಮತದಿಂದ ತೀರ್ಮಾನವಾಯಿತು.

ನಾವು ಮುಂದುವರಿದೆವು. ರಸ್ತೆ ಎದುರಾದಾಗ ಮಲೆ ಕುಡಿಯ ಮಾರ್ಗದರ್ಶಿಗಳು ತಮ್ಮ ಪಥ ಬದಲಿಸಿದರು. ಅವರಿಂದ ನಮ್ಮ ಜ್ಞಾನವೇನೂ ಹೆಚ್ಚಾಗಿರಲಿಲ್ಲ. ಆದರೆ ಅವರಿಲ್ಲದಿರುತ್ತಿದ್ದರೆ ನಾಟಿಕಲ್ಲು ಪರ್ವತದ ಹಾದಿ, ಅಲ್ಲಿಂದ ಮೂರು ಜಲಪಾತಗಳಿಗಿಳಿಯುವ ದಾರಿ ನಮಗೆ ಗೊತ್ತಾಗುತ್ತಿರಲಿಲ್ಲ. ಅವರ ಉಪಕಾರಕ್ಕೆ ನಮ್ಮ ಕಿರುಗಾಣಿಕೆ- ಯೆಂದು ಇನ್ನೂರು ರೂಪಾಯಿ ನೀಡಿದೆವು. ಅವರು ಅರೆಕಲ್ಲಿನ ಹಾದಿ ಹಿಡಿದರು. ನಾವು ಸಂಪಾಜೆಯತ್ತ ಸಾಗಿದೆವು.

‘ಹೇಗಿತ್ತು ಇಂದಿನ ದಿನ?’ ಎಂಬ ನನ್ನ ಪ್ರಶ್ನೆಗೆ. ‘ಇಂತಹ ಅನುಭವ ಜೀವನದಲ್ಲಿ ಎಂದೂ ಆದದ್ದಿಲ್ಲ’ ಎಂದು ಸಾಮೂಹಿಕವಾಗಿ ನಮ್ಮ ರಣಧೀರರ ಪಡೆ ಉತ್ತರಿಸಿತು. ಅವರಿಗೆಂದರೇನು ? ಅವರ ಇಮ್ಮಡಿ ಪ್ಲಸ್‌ ಹತ್ತು ವರ್ಷದ ನನಗೂ ಅಂದಿನದ್ದು ಅಪೂರ್ವ ಅನುಭವವೇ ಆಗಿತ್ತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿಬ್ಬೆರಗಿನ ನಿವಾಸಿಗಳು !!
Next post ಸಂಶೋಧಕರ ಪುಟಗಳಿಂದ

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…