ಹದಿಹರೆಯದವರ ಶಕ್ತಿ ಸಾಮರ್ಥ್ಯಗಳ ಶತ್ರು : ಖಿನ್ನತೆ

ಹದಿಹರೆಯದವರ ಶಕ್ತಿ ಸಾಮರ್ಥ್ಯಗಳ ಶತ್ರು : ಖಿನ್ನತೆ

ಅಧ್ಯಾಯ -೪

“ಈಕೆ ನನ್ನ ಮಗಳು, ಪರಿಣಿತಾ, ಒಂದು ವಾರದ ಹಿಂದೆ ಬಿ.ಇ. ಕಂಪ್ಯೂಟರ್ ಕೋರ್ಸ್‌ಗೆ ಸೇರಿಸಿದೆವು. ಇವಳ ಸಿ‌ಇಟಿ ರ್‍ಯಾಂಕಿಂಗ್ ಬಹಳ ಕಡಿಮೆ ಇದ್ದು, ಮೆರಿಟ್ ಸೀಟ್ ಎಲ್ಲೂ ಸಿಗಲಿಲ್ಲ. ಕೊನೆಗೆ ಮ್ಯಾನೇಜ್‌ಮೆಂಟ್ ಕೋಟಾದಲ್ಲಿ ಸೀಟ್ ಕೊಡಿಸಿದೆವು. ಐವತ್ತು ಸಾವಿರ ರೂಪಾಯಿ ಸಾಲ ಮಾಡಿದೆವು. ಇವಳ ಆಸೆ ಪೂರೈಸಲಿ, ಇವಳು ಇಂಜಿನಿಯರ್ ಆಗಲಿ ಎಂದು ಈ ಒಂದು ತಿಂಗಳು ನಾವು ಪಟ್ಟ ಕಷ್ಟ, ನೋವುಗಳು ಆ ದೇವರಿಗೆ ಗೊತ್ತು. ಕಾಲೇಜಿಗೆ ಮೂರು ದಿನಗಳು ಹೋದಳು. ‘ಮ್ಯಾತ್ಸ್ ತುಂಬಾ ಕಷ್ಟ ನನಗೇನೂ ಅರ್ಥವಾಗುತ್ತಿಲ್ಲ. ಪಾಠ ಕೇಳುವಾಗ, ಓದುವಾಗ ತಲೆ ವಿಪರೀತ ನೋವು ಬರುತ್ತದೆ. ನನ್ನಿಂದ ಈ ಕೋರ್ಸ್ ಸಾಧ್ಯವಿಲ್ಲ, ಕೋರ್ಸ್ ಬಿಟ್ಟು ಬಿಡುತ್ತೇನೆ’ ಎನ್ನಲು ಶುರುಮಾಡಿದ್ದಾಳೆ. ನಿನ್ನೆ ಮತ್ತು ಈ ದಿನ ಕಾಲೇಜಿಗೆ ಹೋಗಿಲ್ಲ. ಕೂತು ಸುಮ್ಮನೆ ಕಣ್ಣೀರು ಹಾಕುತ್ತಾಳೆ. ನಾವು ಎಷ್ಟೊಂದು ಸಮಾಧಾನ ಹೇಳಿದ್ದೇವೆ. ‘ಪ್ರಯತ್ನ ಮಾಡು, ಮ್ಯಾತ್ಸ್ ಕಷ್ಟವಾದರೆ ಟ್ಯೂಶನ್‌ಗೆ ಹೋಗುವಿಯಂತೆ, ನಮ್ಮ ಮನೆಯ ಎದುರು ವಾಸಿಸುವ ಹುಡುಗಿ ಈಗ ನಾಲ್ಕನೇ ಸೆಮಿಸ್ಟರ್‌ನಲ್ಲಿದ್ದಾಳೆ. ಅವಳು “ನಿನಗೆ ಗೈಡ್ ಮಾಡುತ್ತಾಳೆ, ಧೈರ್ಯ ತಂದುಕೋ” ಎಂದರೆ, ‘ಹೇಳಿಕೊಡುವವರು ಎಷ್ಟೂ ಅಂತ ಹೇಳಿಕೊಡುತ್ತಾರೆ. ನನಗೆ ಏನೂ ಅರ್ಥವಾಗುತ್ತಿಲ್ಲ. ಇವಳೆಂತಹ ದಡ್ಡಿ ಎಂದು ಕೊಂಡರೆ ನನಗೆ ಎಷ್ಟು ಅವಮಾನ, ನನ್ನನ್ನು ಬಲವಂತ ಮಾಡಬೇಡಿ. ನಾನು ಈ ಕೋರ್ಸ್ ಮುಂದುವರೆಸುವುದಿಲ್ಲ. ಮುಂದುವರೆಸು ಎಂದು ನೀವೇನಾದರೂ ಒತ್ತಾಯ ಮಾಡಿದರೆ, ನಾನು ಏನಾದರೂ ಮಾಡಿಕೊಂಡು ಸಾಯುತ್ತೇನೆ’ ಎನ್ನುತ್ತಾಳೆ. ನಮಗೇನು ಮಾಡಬೇಕು ತೋಚುತ್ತಿಲ್ಲ” ಎಂದರು ಅವಳ ತಾಯಿ ಪಾರ್ವತಿ.
*   *   *   *

“ಹೈ ಫಸ್ಟ್ ಕ್ಲಾಸ್ ಬಂದೇ ಬರುತ್ತೆ, ಎಂ.ಬಿ.ಬಿ.ಎಸ್. ಅಥವಾ ಬಿಡಿ‌ಎಸ್ ಸೀಟ್ ಗ್ಯಾರಂಟಿ ಎಂದು ನಿರೀಕ್ಷೆ ಮಾಡಿದ್ದೆ ಸಾರ್. ಫಲಿತಾಂಶ ಬಂದಾಗ ಸೆಕೆಂಡ್ ಕ್ಲಾಸ್‌ನಲ್ಲಿ ಪಾಸಾಗಿದ್ದೆ. ಬಹಳ ಬೇಸರವಾಯಿತು.

ಸಿಇಟಿನಲ್ಲಾದರೂ ಚೆನ್ನಾಗಿ ಮಾಡೋಣ ಎಂದು ಬಹಳ ಕಷ್ಟಪಟ್ಟು ಓದಿದೆ ಸಾರ್. ಅಲ್ಲೂ ನಾನು ಯಶಸ್ವಿಯಾಗಲಿಲ್ಲ ಆತ್ಮಹತ್ಯೆ ಯೋಚನೆ ಬಂತು. ಆಜ್ಜಿಯ ಬಿಪಿ, ಮಾತ್ರೆಗಳನ್ನು ತಿಂದು ಮಲಗಿದ್ದೇ ಜ್ಞಾಪಕ. ಎಚ್ಚರವಾದಾಗ ಆಸ್ಪತ್ರೆಯಲ್ಲಿದ್ದೆ. ನನ್ನ ಅಮ್ಮ ಅಜ್ಜಿ ಅಳುತ್ತಿದ್ದರೆ, ಅಪ್ಪನಿಗೆ ನನ್ನ ಮೇಲೆ ಸಿಟ್ಟು ಬಂದಿತ್ತು. ಇದುವರೆಗೆ ಪೊಲೀಸ್ ಸ್ಟೇಷನ್ ನೋಡಿರಲಿಲ್ಲ. ಇವನ ದೆಸೆಯಿಂದ ನೋಡುವಂತಾಯಿತು. ಇಂತಹ ಮಕ್ಕಳು ಏಕೆ ಹುಟ್ಟಬೇಕು ಎಂದು ರೇಗಾಡುತ್ತಿದ್ದಾರೆ. ಮನಸ್ಸಿಗೆ ಇನ್ನಷ್ಟು ಬೇಸರವಾಗುತ್ತಿದೆ. ಓದುವುದರಲ್ಲಿ ಫೇಲಾದೆ. ಈಗ ಸಾಯುವ ಪ್ರಯತ್ನದಲ್ಲೂ ಫೇಲಾದೆ” ಎಂದು ಖಿನ್ನವಾಗಿ ನುಡಿದ ಪ್ರಜ್ವಲ್.

“ನನಗೀಗ ೧೭ ವರ್ಷ ವಯಸ್ಸು ಸರ್‌, ತಂದೆ ತಾಯಿಗಳ ಟೀಕೆ, ತಿರಸ್ಕಾರ, ಬೈಗುಳಗಳನ್ನು ಕೇಳಿ ಗೊತ್ತಿದೆಯೇ ವಿನಃ ಅವರಿಂದ ಒಂದು ದಿನವೂ ನಾನು ಮೆಚ್ಚುಗೆಯ ಮಾತುಗಳನ್ನು ಕೇಳಿಲ್ಲ ಸಾರ್. ನಾನು ಕಪ್ಪಗೆ ಹುಟ್ಟಿದ್ದು, ಒಂದು ಕಣ್ಣು ಮಾಲಗಣ್ಣಾಗಿದ್ದು, ದೊಡ್ಡ ತಪ್ಪಾಗಿ ಹೋಗಿದೆ. ನನ್ನ ಅಕ್ಕ, ನನ್ನ ತಂಗಿ ಬೆಳ್ಳಗಿದ್ದಾರೆ. ದಿನಕ್ಕೆ ಹತ್ತು ಸಲವಾದರೂ ‘ಗೀತಾ ಕಪ್ಪು, ಅವಳನ್ನು ಯಾರು ಮದುವೆಯಾಗುತ್ತಾರೆ. ಜೊತೆಗೆ ಅಂತಹ ಬುದ್ದಿವಂತೆಯಲ್ಲ. ಅವಳ ಭವಿಷ್ಯದ ಬಗ್ಗೆ ನಮಗೆ ಚಿಂತೆಯಾಗಿಬಿಟ್ಟಿದೆ’ ಎಂದು ಅಮ್ಮ ಹೇಳುತ್ತಲೇ ಇರುತ್ತಾಳೆ. ನಾನು ಮಾಡಿದ ಯಾವುದೇ ಕೆಲಸದಲ್ಲಿ ತಪ್ಪು ಕಂಡು ಹಿಡಿಯುತ್ತಾಳೆ. ‘ನೋಡಲು ಅಂದವಿಲ್ಲ. ಕೆಲಸ ಮಾಡುವುದನ್ನಾದರೂ ಚೆನ್ನಾಗಿ ಕಲಿಯಬಾರದೇನೇ, ನಿನ್ನಂತಹ ಮಕ್ಕಳು ಹೆತ್ತವರ ಹೊಟ್ಟೆ ಉರಿಸಲೇ ಜಗತ್ತಿಗೆ ಬಂದಿರುತ್ತಾರೆ. ನನ್ನ ಕರ್ಮ’ ಎಂದು ವಟಗುಟ್ಟುತ್ತಲೇ ಇರುತ್ತಾಳೆ. ಕಾಲೇಜಿನಲ್ಲೂ ನನಗೆ ಫ್ರೆಂಡ್ಸ್ ಇಲ್ಲ. ಎಲ್ಲರೂ ನನ್ನನ್ನು ಅಸ್ಪುರ್‍‍ಶ್ಯಳಂತೆ ಕಾಣುತ್ತಾರೆ. ಮನಸ್ಸಿಗೆ ಬಹಳ ದುಃಖವಾಗುತ್ತದೆ, ಏಕೀ ಜೀವನ ಸಾಯಬೇಕು ಎನ್ನಿಸುತ್ತದೆ. ಪೇಪರ್‌ನಲ್ಲಿ, ಟೀವಿ ಜಾಹೀರಾತಿನಲ್ಲಿ ಬರುವ ಫೇಸ್ ಕ್ರೀಮ್‌ನಿಂದ ನನ್ನ ಕಪ್ಪು ಚರ್ಮ ಬೆಳ್ಳಗಾಗುತ್ತದಾ, ನನ್ನ ಮಾಲಗಣ್ಣನ್ನು ಆಪರೇಷನ್ ಮಾಡಿ ಸರಿ ಪಡಿಸಬಹುದೇ, ಉತ್ತರಿಸಿ, ತಮ್ಮ ವಿಶ್ವಾಸಿ, ಗೀತಾ”.
*   *   *   *

“ನಾನು ಒಂದು ಹುಡುಗಿಯನ್ನು ಪ್ರೀತಿಸಿದೆ. ಎರಡು ವರ್ಷ ನಮ್ಮ ಸ್ನೇಹ ಪ್ರೀತಿ ನದಿಯಂತೆ ಓಡುತ್ತಿತ್ತು. ಮದುವೆಯಾದರೆ ನಿನ್ನನ್ನೇ ಎಂದಿದ್ದಳು. ನಾನು ಅವಳ ಬಗ್ಗೆ ತುಂಬಾ ಕನಸು ಕಟ್ಟಿದ್ದೆ. ಜಾತಿ ಬೇರೆ ಬೇರೆಯಾದ್ದರಿಂದ ಮನೆಯವರು ವಿರೋಧ ಮಾಡುವುದು ಗ್ಯಾರಂಟಿ ಎಂದು ಗೊತ್ತಿತ್ತು. ಪಿಯುಸಿ ಆದ ಮೇಲೆ ಬಿಇಗೆ ಸೀಟು ಸಿಕ್ಕಿದ್ದರೂ ಬಿಟ್ಟು ಐಟಿ‌ಐ ಸೇರಿಕೊಂಡೆ. ಬೇಗ ಉದ್ಯೋಗ ಹಿಡಿದು, ಸಂಪಾದನೆ ಮಾಡಿ, ಅವಳನ್ನು ಮದುವೆಯಾಗಬೇಕೆಂದು ನಿಶ್ಚಯಿಸಿದ್ದೆ, ಏನಾಯಿತೋ ಏನೋ ಮೂರು ತಿಂಗಳ ಹಿಂದೆ ಅವಳು ‘ಭಾಸ್ಕರ್ ನಾವು ಮದುವೆಯಾಗುವುದು ಸಾಧ್ಯವಿಲ್ಲ, ನನ್ನ ತಂದೆಗೆ ಹಾರ್ಟ್ ಪ್ರಾಬ್ಲಮ್ ಇದೆಯಂತೆ. ನಾನು ನಿನ್ನನ್ನು ಮದುವೆಯಾಗುತ್ತೇನೆಂದರೆ ಅವರಿಗೆ ಹಾರ್ಟ್ ಅಟ್ಯಾಕ್ ಆಗಬಹುದು. ನನ್ನಿಂದಾಗಿ ನನ್ನ ತಂದೆ ಸಾಯುವಂತಾಗಬಾರದು’, ಎಂದು ಹೇಳಿ ನನ್ನ ಹೃದಯವನ್ನೇ ಒಡೆದುಹಾಕಿದಳು. ನಾನು ನಿರಾಶನಾದೆ. ಕೋರ್ಸ್ ಬಿಟ್ಟೆ, ಮನೆಯಲ್ಲೇ ಕುಳಿತೆ. ಎಲ್ಲದರಲ್ಲೂ ನಿರಾಸಕ್ತಿ, ನಿರುತ್ಸಾಹ, ಯಾವುದೇ ಚಟುವಟಿಕೆ ಅರ್ಥಹೀನ ಎನಿಸಿತು. ಊಟ, ನಿದ್ರೆ, ಮನರಂಜನೆ ಎಲ್ಲವನ್ನೂ ಬಿಟ್ಟೆ, ನನ್ನ ತಂದೆ ತಾಯಿ ಗಾಬರಿಗೊಂಡರು. ವೈದ್ಯರಲ್ಲಿಗೆ ಕರೆದೊಯ್ದರು. ನನಗೆ ಡಿಪ್ರೆಶನ್ ಎಂದು ವೈದ್ಯರು ಔಷಧಿಯನ್ನು ಕೊಟ್ಟರು. ಯಾರಿಗೂ ನನ್ನ ನಿರಾಶೆ, ನನ್ನ ಹುಡುಗಿ ಮಾಡಿದ ಮೋಸವನ್ನು ಹೇಳಲಿಲ್ಲ. ನಮಗೆ ಆಗದವರಾರೋ ಮಾಟ ಮಾಡಿಸಿ, ನನ್ನ ಆರೋಗ್ಯ ಕೆಟ್ಟಿದೆ ಎಂದು ಅಮ್ಮ ಹೇಳಿದಳು. ಈಗ ನಾನು ನಮ್ಮ ಅಂಗಡಿಯಲ್ಲೇ ಕುಳಿತುಕೊಳ್ಳುತ್ತೇನೆ. ಬೇಕಾಬಿಟ್ಟಿ ವ್ಯಾಪಾರ ಮಾಡುತ್ತೇನೆ, ಹೇಗಿದ್ದ ಮಗ ಹೇಗಾದ ಎಂದು ತಂದೆ ತಾಯಿಗಳು ಚಿಂತೆ ಮಾಡುತ್ತಾರೆ. ಏನು ಮಾಡಲಿ ಸಾರ್‌ ಅವಳನ್ನು ನಾನು ಮರೆಯಲಾಗುತ್ತಿಲ್ಲ. ಸಂತೋಷ, ಸಂಭ್ರಮ ನನ್ನ ಜೀವನದಲ್ಲಿ ಮತ್ತೆ ಬರುವುದಿಲ್ಲ” ಎಂದ ದಾಮೋದರ.

“ಇವಳ ಅಣ್ಣ ಆಕ್ಸಿಡೆಂಟ್‌ನಲ್ಲಿ ಸತ್ತ ಮೇಲೆ ಇವಳು ಹೀಗಾಗಿ ಬಿಟ್ಟಳು ಸಾರ್. ರ್‍ಯಾಂಕ್ ವಿದ್ಯಾರ್ಥಿ. ಸಂಗೀತದಲ್ಲಿ ಸೀನಿಯರ್ ಪರೀಕ್ಷೆ ಪಾಸ್ ಮಾಡಿದ್ದಳು. ಡ್ಯಾನ್ಸ್ ಕಲಿಯುತ್ತಿದ್ದಳು. ಚರ್ಚಾಸ್ಪರ್ಧೆ, ಲೇಖನ ಸ್ಪರ್ಧೆಗಳಲ್ಲಿ ಭಾಗವಹಿಸಿದರೆ, ಯಾವುದಾದರೂ ಒಂದು ಬಹುಮಾನ ಗ್ಯಾರಂಟಿ. ಅಣ್ಣ ತಂಗಿ ಬಹಳ ಅನ್ನೋನ್ಯವಾಗಿದ್ದರು. ಅವಳ ಸ್ಪರ್ಧೆಗಳಿಗೆ ಅವನೇ ವಿಷಯವನ್ನು ಸಂಗ್ರಹಿಸಿಕೊಡುತ್ತಿದ್ದ. ಎಲ್ಲಿ ಸ್ಪರ್ಧೆ ಇದೆ, ಹೇಗೆ ಆಪ್ಲೈ ಮಾಡಬೇಕು ಎಂದು ಹೇಳಿಕೊಡುತ್ತಿದ್ದ. ತನ್ನ ಕಾಲೇಜಿಗೆ ರಜೆ ಹಾಕಿ ಅವಳೊಂದಿಗೆ ಹೋಗಿಬರುತ್ತಿದ್ದ. ಒಬ್ಬರನ್ನೊಬ್ಬರು ಬಹಳ ಹಚ್ಚಿಕೊಂಡಿದ್ದರು. ಅವನು ಊಟಮಾಡದೇ ಇವಳು ಊಟ ಮಾಡುತ್ತಿರಲಿಲ್ಲ. ಅವನು ಸತ್ತ ಸುದ್ದಿ ಕೇಳಿದ ಮೇಲೆ ಹತ್ತು ದಿವಸ ಇವಳು ಮಾತೇ ಆಡಲಿಲ್ಲ. ಅಳಲಿಲ್ಲ, ಗೊಂಬೆ ಕೂತ ಹಾಗೆ ಕುಳಿತಿದ್ದಳು. ಈಗಲೂ ಅಷ್ಟೇ, ಬಹಳ ಕಡಿಮೆ ಮಾತು. ಒಂದು ನಗುವಿಲ್ಲ, ಅಲಂಕಾರವಿಲ್ಲ. ಕಾಲೇಜಿಗೆ ಹೋಗಿಬರುತ್ತಾಳೆ. ತಾನಾಗಿಯೇ ಯಾರೊಂದಿಗೂ ಮಾತಾಡುವುದಿಲ್ಲ. ಯಾವ ಸ್ಪರ್ಧೆಯಲ್ಲೂ ಭಾಗವಹಿಸುವುದಿಲ್ಲ. ಯಾರಾದರೂ ಸಣ್ಣ ಟೀಕೆ ಮಾಡಿದರೂ ಜೋರಾಗಿ ಅಳಲು ಪ್ರಾರಂಭಿಸುತ್ತಾಳೆ, ಸಿಹಿ ತಿನ್ನುವುದೇ ಇಲ್ಲ. ಮದುವೆ, ನಾಮಕರಣದಂತಹ ಸಂತೋಷ ಸಮಾರಂಭಗಳಿಗೆ ಎಷ್ಟೇ ಒತ್ತಾಯ ಮಾಡಿದರೂ ಬರುವುದಿಲ್ಲ. ನಾವೆಲ್ಲ ಎಷ್ಟೋ ಸಮಾಧಾನ ಹೇಳಿದರೂ ಬದಲಾಗಿಲ್ಲ, ಇವಳ ದುಃಖವನ್ನು ಕಡಿಮೆ ಮಾಡುವುದು ಹೇಗೆ ಡಾಕ್ಟರೇ” ಎಂದರು ಸುನಂದಮ್ಮ.
*   *   *   *

“ತುಂಬಾ ತಲೆ ನೋವು ಸಾರ್, ನೆತ್ತಿ, ತಲೆಯ ಅಕ್ಕಪಕ್ಕೆ ಹಿಂದೆ, ಕತ್ತು ಎಲ್ಲ ಕಡೆ ನೋವಿದೆ. ವಾರದಲ್ಲಿ ಎರಡು ಮೂರು ಸಲ ಬಂದು ಬಿಡುತ್ತದೆ. ನೋವು ಶಮನ ಮಾಡುವ ಮಾತ್ರೆ ತಿಂದರೂ ನೋವು ಕಡಿಮೆಯಾಗುವುದಿಲ್ಲ. ಓದಲು ಏಕಾಗ್ರತೆ ಇಲ್ಲ. ನೆನಪೂ ಬಹಳ ಕಡಿಮೆಯಾಗಿಬಿಟ್ಟಿದೆ, ಯಾವ ಚಟುವಟಿಕೆ ಮಾಡಲೂ ಮನಸ್ಸಿಲ್ಲ. ಸುಮ್ಮನೆ ಒಂದು ಕಡೆ ಕೂತುಕೊಳ್ಳೋಣ ಅಥವಾ ಮಲಗೋಣ ಎನಿಸುತ್ತದೆ. ನಿದ್ರೆ ಏನೋ ಬರುತ್ತದೆ. ಆದರೆ ಮಧ್ಯರಾತ್ರಿ ಎಚ್ಚರವಾಗಿ ಬಿಡುತ್ತದೆ. ಏನೋ ತಪ್ಪು ಮಾಡಿದ್ದೇನೆ ಎಂಬ ಆಲೋಚನೆ ಬರುತ್ತಲೇ ಇರುತ್ತದೆ. ಹಿಂದೆ ಅಜ್ಜಿಯ ಮೇಲೂ ಕೋಪಕ್ಕೆ ಅವರನ್ನು ನೂಕಿ ಬೀಳಿಸಿದ್ದು, ನಾನು ಕ್ಲಾಸಿನಲ್ಲಿ ತಪ್ಪು ಮಾಡಿ ಅದನ್ನು ಸ್ನೇಹಿತೆಯ ಮೇಲೆ ಹಾಕಿ, ಟೀಚರ್ ಕೈನಲ್ಲಿ ಅವಳನ್ನು ಶಿಕ್ಷೆಗೆ ಗುರಿಪಡಿಸಿದ್ದು, ಸ್ನೇಹಿತೆಯರಿಗೆ ಐಸ್ ಕ್ರೀಂ ಕೊಡಿಸಲು ಅಪ್ಪನ ಜೇಬಿನಿಂದ ಹಣ ಕದ್ದದ್ದು, ಹೀಗೆ ಮಾಡಿದ ತಪ್ಪುಗಳೆಲ್ಲ ಮತ್ತೆ ಮತ್ತೆ ನೆನಪಿಗೆ ಬಂದು ಕಾಡುತ್ತವೆ” ಎಂದಳು ಮೀರಾ.
*   *   *   *

“ಚಿಕ್ಕಂದಿನಲ್ಲಿ ನಾನು ತುಂಬಾ ತೀಟೆ ಮಾಡುತ್ತಿದ್ದೆ. ಸ್ಕೂಲಿಗೆ ಸರಿಯಾಗಿ ಹೋಗುತ್ತಿರಲಿಲ್ಲ. ಇದರಿಂದಾಗಿ ಅಪ್ಪನ ಕೈಯಲ್ಲಿ ಸಕತ್ತಾಗಿ ಏಟು ತಿನ್ನುತ್ತಿದ್ದೆ, ಕಡೆಗೆ ನನ್ನನ್ನು ಬೋರ್ಡಿಂಗ್ ಸ್ಕೂಲ್‌ಗೆ ಸೇರಿಸಿಬಿಟ್ಟರು. ಅದೊಂದು ಜೈಲು, ಉಸಿರು ಕಟ್ಟಿಸುವ ವಾತಾವರಣ, ಪ್ರತಿದಿನ ರಾತ್ರಿ ಒಬ್ಬನೇ ಕೂತು, ಮುಸುಕು ಹಾಕಿಕೊಂಡು ಆಳುತ್ತಿದ್ದೆ. ನಾನು ಗಣಿತ, ಇಂಗ್ಲೀಷ್‌ನಲ್ಲಿ ವೀಕಾಗಿದ್ದೆ. ಟೀಚರ್ ಸಹಪಾಠಿಗಳು ನನ್ನನ್ನು ದಡ್ಡ, ಐ.ಕ್ಯೂ ಕಡಿಮೆ ಇರುವವನು ಎಂದು ತಿರಸ್ಕಾರದಿಂದ ನೋಡುತ್ತಿದ್ದರು. ಆರು ವರ್ಷ ಈ ಜೈಲಿನಲ್ಲಿ ನನ್ನನ್ನು ಕೊಳೆ ಹಾಕಿದ ಅಪ್ಪ ಅಮ್ಮನ ಮೇಲೆ ನನಗೆ ಇಂದಿಗೂ ಸಿಟ್ಟಿದೆ. ನನ್ನ ಅಕ್ಕ ಮತ್ತು ತಂಗಿಯನ್ನು ಜೊತೆಯಲ್ಲಿಟ್ಟುಕೊಂಡು ಸಾಕಿದ ಅವರಿಗೆ ನಾನು ಭಾರವಾಗಿದ್ದೆ. ನಾನು ಅವರ ಜೊತೆಯಲ್ಲಿರುವುದು ಅವರಿಗೆ ಬೇಕಿರಲಿಲ್ಲ. ಮನಸ್ಸಿನಲ್ಲಿ ಯಾವಾಗಲೂ ಬೇಸರ, ದುಃಖ, ಸಿಟ್ಟು ತುಂಬಿಕೊಂಡಿರುತ್ತಿದ್ದೆ. ಪಿಯುಸಿಗೆ ಬೆಂಗಳೂರಿನಲ್ಲಿ ಉಳಿದುಕೊಂಡೆ. ನನ್ನ ಅಕ್ಕ ಹೋಂ ಸೈನ್ಸ್ ಕಾಲೇಜಿನಲ್ಲಿ ಓದುತ್ತಿದ್ದಾಳೆ. ನಮಗೋಸ್ಕರ ಒಂದು ಮನೆ ಮಾಡಿದ್ದಾರೆ. ಪಿಯುಸಿಯಲ್ಲಿ ಕೆಲವು ಫ್ರೆಂಡ್ಸ್ ಸಿಕ್ಕಿದ್ದಾರೆ. ಅವರೂ ನನ್ನ ಹಾಗೆ ತಂದೆ ತಾಯಿಗಳ ಪ್ರೀತಿ ಸಿಗದೆ ಇದ್ದವರು. ಖುಷಿಯಾಗಿರುವುದು ಹೇಗೆ ಎಂದು ನನಗೆ ಹೇಳಿಕೊಟ್ಟರು, ಸಿಗರೇಟ್ ಸೇದುವುದು, ಬೀರ್ ಬ್ರಾಂದಿ ಕುಡಿಯುವುದು, ಹುಡುಗಿಯರನ್ನು ಚುಡಾಯಿಸುವುದು, ಗರ್ಲ್‌ಫ್ರೆಂಡ್ಸ್‌ಗಳ ಜೊತೆಯಲ್ಲಿ ಸುತ್ತುವುದು, ಸ್ಪೀಡ್ ಆಗಿ ಬೈಕ್ ಓಡಿಸುವುದು, ಕಾಲೇಜಿಗೆ ಚಕ್ಕರ್ ಹೊಡೆದು ಇಂಗ್ಲೀಷ್, ಹಿಂದಿ ಸಿನೆಮಾ ನೋಡುವುದು, ಡ್ಯಾನ್ಸ್ ಕ್ಲಬ್‌ಗಳಲ್ಲಿ ಕುಣಿಯುವುದು, ಪಿಕ್‌ನಿಕ್ ಹೋಗುವುದು, ಇಂಟರ್‌ನೆಟ್‌ನಲ್ಲಿ ಚಾಟ್ ಮಾಡುವುದು, ಹುಡುಗಿಯರ ಬೆತ್ತಲೆ ಚಿತ್ರಗಳು, ಸೆಕ್ಸ್ ದೃಶ್ಯಗಳನ್ನು ನೋಡುವುದು, ಒಂದೇ ಎರಡೇ. ಈಗ ಇದೇ ನನ್ನ ಫುಲ್‌ಟೈಂ ಕೆಲಸವಾಗಿದೆ. ಪುರುಸೊತ್ತು ಇದ್ದರೆ ಕಾಲೇಜಿಗೆ ಹೋಗುತ್ತೇನೆ. ಇಲ್ಲದಿದ್ದರೆ ಇಲ್ಲ. ಪಿಯು ಎರಡನೇ ವರ್ಷದಲ್ಲಿ ಅಟೆಂಡೆನ್ಸ್ ಶಾರ್ಟೇಜ್ ಆಗಿ ಪರೀಕ್ಷೆಗೆ ಕೂರಿಸೋಲ್ಲ ಎಂದರು. ನಾವು ನಾಲ್ಕು ಜನ ಹೋಗಿ, ಪ್ರಿನ್ಸಿಪಾಲ್‌ರನ್ನು ಬೆದರಿಸಿದೆವು. ಕೈಕಾಲು ಮುರಿಯುವುದಾಗಿ ಧಮಕಿ ಕೊಟ್ಟೆವು. ಬಾಯಿಮುಚ್ಚಿಕೊಂಡು, ಪರೀಕ್ಷೆಗೆ ಕಟ್ಟಲು ಪರ್ಮಿಶನ್ ಕೊಟ್ರು, ಈಗಿನ ಕಾಲದಲ್ಲಿ ಸಾಫ್ಟ್ ಆಗಿದ್ದರೆ ಏನೂ ಪ್ರಯೋಜನವಿಲ್ಲ. ಜೋರು ಮಾಡಬೇಕು. ಬಯಸಿದ್ದನ್ನು ಕಿತ್ತುಕೊಂಡು ಅನುಭವಿಸಬೇಕು. ಖುಷಿಕೊಡುವ ಚಟುವಟಿಕೆ ಮಾಡಿದಾಗ ಸ್ವಲ್ಪ ನೆಮ್ಮದಿ ಆಮೇಲೆ ಅದೇ ಬೇಸರ, ದುಃಖ, ಜಿಗುಪ್ಸೆ. ಕಂಠಪೂರ್ತಿ ಕುಡಿದು ನಶೆಯಲ್ಲಿದ್ದಾಗ ಕೂಗಾಡಿ ಕಿರುಚುತ್ತೇನಂತೆ, ಸಾಯುವ ಮಾತಾಡುತ್ತೇನಂತೆ. ಅಪ್ಪ ಅಮ್ಮನನ್ನು ಬಾಯಿಗೆ ಬಂದಂತೆ ಬಯ್ಯುತ್ತೇನಂತೆ. ಇದಲ್ಲಾ ನನ್ನ ನೆನಪಿನಲ್ಲಿ ಉಳಿಯುವುದಿಲ್ಲ. ತಂದೆ ತಾಯಿಗಳೂ ಸೇರಿದಂತೆ ಎಲ್ಲರ ಪ್ರಕಾರ ನಾನೊಬ್ಬ ಲೋಫರ್, ಡ್ರಗ್ ಅಡಿಕ್ಟ್, ಲಂಗು ಲಗಾಮಿಲ್ಲದ ಹುಚ್ಚು ಕುದುರೆ. ಇದಕ್ಕೆ ಕಾರಣ ನನ್ನ ಮನಸ್ಸಿನಲ್ಲಿ ಮನೆ ಮಾಡಿರುವ ದುಃಖ, ಸಿಟ್ಟು ಎಂದು ಬಡ ಬಡಿಸಿದ ಭುವನೇಂದ್ರ,
* * * *

ಶೇಕಡಾ ೧೫ ರಿಂದ ೨೦ ರಷ್ಟು ಹರೆಯದವರು ಖಿನ್ನತೆಯಿಂದ ಬಳಲುತ್ತಾರೆ. ಅವರ ಬೇಕು ಬೇಡಗಳು, ನಿರೀಕ್ಷೆಗಳು ಪೂರೈಕೆಯಾಗದೆ ನಿರಾಶೆಯಿಂದ ಖಿನ್ನತೆಗೆ ಒಳಗಾಗಿದ್ದಾರೆ. ಆಹಾರ, ವಸ್ತ್ರ, ವಸತಿ, ಪ್ರೀತಿ, ವಿಶ್ವಾಸ ಅವರಿಗೆ ಬೇಕಾದ ಪ್ರಾಮುಖ್ಯತೆ, ಸ್ಥಾನಮಾನ ಇತರರ ಮೆಚ್ಚುಗೆ, ಶ್ಲಾಘನೆ, ಅಗತ್ಯಗಳನ್ನು ಪೂರೈಸಲು ಬೇಕಾದ ಹಣ ಅವರಿಗೆ ಎಷ್ಟಿದ್ದರೂ ಸಾಲದು. ಇನ್ನಷ್ಟು ಬೇಕು, ಸಿಗದಿದ್ದಾಗ ಬೇಸರ, ದುಃಖ ನಿರಾಶೆಗಳಿಂದ ಖಿನ್ನತೆ ಕಾಯಿಲೆಗೆ ಒಳಗಾಗುತ್ತಾರೆ. ಖಿನ್ನತೆ ಕಾಯಿಲೆ ಬಂದಿದೆ ಎಂದು ಗುರುತಿಸುವುದು ಹೇಗೆ. ಎರಡು ವಾರಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ಈ ಕೆಳಕಾಣುವ ಲಕ್ಷಣ/ತೊಂದರೆಗಳಿವೆಯೇ ಗಮನಿಸಿ:

* ಯಾವಾಗಲೂ ಬೇಸರ, ದುಃಖದ ಭಾವನೆ. ಇದರಿಂದಾಗಿ ಆಳು ಬರುವುದು.
* ಎಲ್ಲದರಲ್ಲೂ ನಿರಾಸಕ್ತಿ, ಓದಿನಲ್ಲೂ ನಿರಾಸಕ್ತಿ.
* ಹಿಂದೆ ಸಂತೋಷ, ಉತ್ಸಾಹಗಳನ್ನು ನೀಡುತ್ತಿದ್ದ ಚಟುವಟಿಕೆಗಳಿಂದ ಕೂಡ ಈಗ ಸಂತೋಷವಿಲ್ಲ.
* ಅಸಹಾಯಕ ಹಾಗೂ ನಿರಾಶಾಭಾವನೆ.
* ನಾನು ಅಪ್ರಯೋಜಕ, ಯಾವ ಕೆಲಸವೂ ನನ್ನಿಂದಾಗದು. ಇನ್ನೊಬ್ಬರಿಗೂ ಮನೆಯವರಿಗೆ ಸಮಾಜಕ್ಕೆ ನಾನು ಹೊರೆ ಎಂಬ ಆಲೋಚನೆ.
* ನಗು, ನಲಿವು, ಯಶಸ್ಸು, ಒಳ್ಳೆಯ ದಿನಗಳು ಇನ್ನೆಂದಿಗೂ ಬರುವುದಿಲ್ಲ ಎನಿಸುವುದು.
* ನಿದ್ರಾ ತೊಂದರೆಗಳು ಅಥವಾ ಹೆಚ್ಚು ನಿದ್ರೆ.
* ಹಸಿವು ಕಡಿಮೆಯಾಗುವುದು ಬಾಯಿ ರುಚಿ ಇಲ್ಲದಿರುವುದು.
* ತೂಕ ಕಡಿಮೆಯಾಗುವುದು.
* ದೇಹದ ಚಲನ ವಲನಗಳು ನಿಧಾನವಾಗುವುದು.
* ಮನಸ್ಸಿನ ಆಲೋಚನೆ ನಿರ್ಧಾರ ಮಾಡುವ ಪ್ರಕ್ರಿಯೆಗಳೂ ನಿಧಾನವಾಗಿ, ವ್ಯಕ್ತಿ ಮಂಕಾಗುವುದು.
* ಅಸ್ತಷ್ಟ ಆದರೆ ತೀವ್ರವಾದ ಶಾರೀರಿಕ ನೋವುಗಳು, ಸುಸ್ತು, ನಿಶ್ಯಕ್ತಿ ಕಾಣಿಸಿಕೊಳ್ಳುವುದು.
* ಸಾಯುವ ಇಚ್ಛೆ, ಆತ್ಮಹತ್ಯೆಯ ಆಲೋಚನೆ, ಪ್ರಯತ್ನ.
* ಕಲಿಕೆಯಲ್ಲಿ ಹಿಂದುಳಿಯುವುದು, ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆಯುವುದು. ವಿದ್ಯಾಭ್ಯಾಸವನ್ನು ನಿಲ್ಲಿಸುವ ನಿರ್ಧಾರ ಮಾಡುವುದು.
* ವಿಪರೀತ ಧೂಮಪಾನ, ಮದ್ಯಪಾನ ಮಾಡುವುದು, ಸಿಟ್ಟು ಕೋಪವನ್ನು ಪ್ರಕಟಿಸುವುದು, ಆಕ್ರಮಣ ಶೀಲತೆ.

ಖಿನ್ನತೆ ಕಾಯಿಲೆಗೆ ಚಿಕಿತ್ಸೆ ಏನು:

೧) ಔಷಧಿಗಳು: ಇಮಿಪ್ರಮಿನ್, ಅಮಿಟ್ರಿಫ್ಟಲಿನ್, ಡಾತಿಪಿನ್, ಎಸ್ಸಿಟಲೋಪ್ರಾಂ, ಪ್ಲೂಯಾಕ್ಸೆಟೀನ್, ಸಾಟ್ರಾಲಿನ್‌ಗಳು ಈಗ ಲಭ್ಯವಿದೆ. ಇವೆಲ್ಲ ಮಿದುಳಿನ ಮೇಲೆ ಪರಿಣಾಮ ಬೀರಿ, ಡೊಪಮಿನ್ ಮತ್ತು ಸೆರೋಟೋನಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ.

ಇವು ನಿದ್ರಾಮಾತ್ರೆಗಳಲ್ಲ, ಅಭ್ಯಾಸವನ್ನುಂಟು ಮಾಡುವುದಿಲ್ಲ. ಸುರಕ್ಷಿತವಾದ ಔಷಧಿಗಳು ಎಂಬುದನ್ನು ಗಮನಿಸಿ, ಕೆಲವು ಅಡ್ಡಪರಿಣಾಮಗಳಾಗಬಹುದು. ಬಾಯಿ ಒಣಗುವುದು, ಮಲಬದ್ಧತೆ, ಕಣ್ಣುಮಂಜಾಗುವುದು, ತಲೆ ಸುತ್ತು, ನಿದ್ರೆ ಹೆಚ್ಚುವುದು, ತೂಕಡಿಕೆ, ಮೂತ್ರ ಬಂದ್ ಆಗುವುದು ಇತ್ಯಾದಿ ಕಂಡು ಬಂದರೆ ವೈದ್ಯರಿಗೆ ತಿಳಿಸಿ.

ಔಷಧಿಗಳು ಕೆಲಸ ಮಾಡಿ, ಖಿನ್ನತೆಯ ಲಕ್ಷಣಗಳು ಕಡಿಮೆಯಾಗಲು, ಎರಡು ಮೂರು ವಾರಗಳು ಬೇಕಾಗಬಹುದು. ಸಹನೆ ಇರಲಿ.

ಔಷಧಿಗಳನ್ನು ಕನಿಷ್ಟ ೨ ತಿಂಗಳು ಸೇವಿಸಬೇಕು. ಎಷ್ಟು ಕಾಲ ಸೇವಿಸಬೇಕೆಂಬುದನ್ನು ವೈದ್ಯರು ಹೇಳುತ್ತಾರೆ, ಸಾಮಾನ್ಯವಾಗಿ ಆರು ತಿಂಗಳಿಂದ ಒಂದು ವರ್ಷದವರೆಗೆ ಔಷಧಿ ಸೇವಿಸಬೇಕಾಗಿ ಬರಬಹುದು.

ಈ ಔಷಧ ಸೇವಿಸುವಾಗ ಇತರ ಕಾಯಿಲೆಗಳು ಬಂದರೆ ಬೇರೆ ಔಷಧಿ ಸೇವಿಸಲು ಅಡ್ಡಿ ಇಲ್ಲ. ಆದರೆ, ವೈದ್ಯರ ಉಸ್ತುವಾರಿ ಅಗತ್ಯ.

೨) ಆಪ್ತ ಸಲಹೆ ಸಮಾಧಾನ: ವ್ಯಕ್ತಿಯೊಂದಿಗೆ ಸ್ನೇಹ ಪೂರ್ವಕವಾಗಿ ಮಾತನಾಡಿ, ಆತನ ಕಷ್ಟ ಸುಖ ಸಮಸ್ಯೆಗಳನ್ನು ವಿಚಾರಿಸಿ, ಆಪ್ತ ಸಲಹೆ ಸಮಾಧಾನ ನೀಡುವುದು ಒಂದು ಮೌಲಿಕವಾದ ಚಿಕಿತ್ಸಾ ವಿಧಾನ. ಇದನ್ನು ವಾರಕ್ಕೆ ಎರಡು ಮೂರು ಸಲ, ಪ್ರತಿ ಸಲ ೩೦ ರಿಂದ ೪೦ ನಿಮಿಷಗಳ ಕಾಲ ಮಾಡಬೇಕಾಗುತ್ತದೆ. ವ್ಯಕ್ತಿಯ ಮನಸ್ಸನ್ನಾವರಿಸಿರುವ ನಕಾರಾತ್ಮಕ ಆಲೋಚನೆಗಳು, ತೀರ್ಮಾನಗಳನ್ನು ತೆಗೆದು, ಸಕಾರಾತ್ಮಕ ಹಾಗೂ ಉತ್ತೇಜನಾತ್ಮಕ ಆಲೋಚನೆಗಳು, ತೀರ್ಮಾನಗಳು ಬರುವಂತೆ ಮಾಡಬೇಕು. ಕಷ್ಟನಷ್ಟಗಳನ್ನು ನಿಭಾಯಿಸಲು ಸಮಸ್ಯೆಗಳನ್ನು ಪರಿಹರಿಸಲು ಸಲಹೆಗಳನ್ನು ನೀಡಬೇಕು.

ಖಿನ್ನತೆ – ಆತ್ಮಹತ್ಯೆ :

ಪ್ರತಿ ಸೆಕೆಂಡಿಗೆ ಒಬ್ಬರು, ಈ ಪ್ರಪಂಚದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ದೇಶದಲ್ಲಿ ಪ್ರತಿ ಒಂದು ಲಕ್ಷ ಜನರಲ್ಲಿ ಪ್ರತಿ ವರ್ಷ ಹನ್ನೊಂದು ಜನ ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಿದ್ದಾರೆ. ಕರ್ನಾಟಕದಲ್ಲಿ ಪ್ರತಿ ವರ್ಷ ೧೫,೦೦೦ ಜನ ಆತ್ಮಹತ್ಯೆಯಿಂದ ಸತ್ತರೆ, ಬೆಂಗಳೂರು ನಗರದಲ್ಲಿ ಪ್ರತಿ ವರ್ಷ ೨,೫೦೦ ಕ್ಕಿಂತ ಹೆಚ್ಚು ಮಂದಿ ಸಾಯುತ್ತಿದ್ದಾರೆ. ೨೦೧೪ ರಲ್ಲಿ ದೇಶದಲ್ಲಿ ೧.೩೧ ಲಕ್ಷ ಜನ ಆತ್ಮಹತ್ಯೆ ಮಾಡಿಕೊಂಡು ಸತ್ತರು. ಪ್ರತಿವರ್ಷ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುವವರ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿ. ಯುವ ಜನ, ರೈತರು, ಮಹಿಳೆಯರು, ಮಕ್ಕಳು, ಇಳಿಯ ವಯಸ್ಸಿನವರು ಎಲ್ಲ ವರ್ಗದ ಜನ ಆತ್ಮಹತ್ಯೆಗೆ ಪ್ರಯತ್ನಿಸುವುದು ನಿತ್ಯದ ಸುದ್ದಿಯಾಗಿದೆ.

ಪ್ರತಿಯೊಂದು ಜೀವಿ ಬದುಕಲು ಹೋರಾಡುತ್ತದೆ. ಪ್ರಾಣಿಗಳಲ್ಲಿ ಅಪರೂಪವಾದ ಸ್ವಹತ್ಯೆ ಮನುಷ್ಯರಲ್ಲಿ ಏಕೆ ಕಂಡು ಬರುತ್ತದೆ? ಸಾಲ ಮಾಡಿದವರೆಲ್ಲ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಪರೀಕ್ಷೆಯಲ್ಲಿ ಫೇಲಾದವರೆಲ್ಲ ಆತ್ಮಹತ್ಯೆಗೆ ಶರಣಾಗುವುದಿಲ್ಲ. ಕಷ್ಟನಷ್ಟಗಳಿಗೆ ಒಳಗಾದವರೆಲ್ಲ ಸಾಯುವ ಪ್ರಯತ್ನ ಮಾಡುವುದಿಲ್ಲ. ಅವರಲ್ಲಿ ಕೆಲವರು ಏಕೆ ಈ ಕೃತ್ಯ ಮಾಡುತ್ತಾರೆ. ಸಾಕಷ್ಟು ಜನ ತಾವೇಕೆ ಆತ್ಮಹತ್ಯೆ ಮಾಡಿಕೊಂಡೆವು ಎಂಬುದನ್ನು ಬರೆದಿಟ್ಟು ಹೋಗುತ್ತಾರೆ. ಅದರ ಪ್ರಕಾರ

* ವಾಸಿಯಾಗದ, ತುಂಬಾ ನೋವು ಕೊಡುವ, ಸಾಮಾಜಿಕ ಕಳಂಕವನ್ನುಂಟು ಮಾಡುವ, ಪ್ರಾಣಾಂತಕ ಕಾಯಿಲೆಗಳು ಶೇಕಡ ೨೦ರಷ್ಟು ಆತ್ಮಹತ್ಯೆಗೆ ಕಾರಣ.
* ಶೇಕಡ ೨೧ ಪ್ರಕರಣಗಳಲ್ಲಿ ಕೌಟುಂಬಿಕ ಸಮಸ್ಯೆಗಳು, ಕಲಹಗಳು.
* ಶೇಕಡ ೩.೪ ಪ್ರಕರಣಗಳಲ್ಲಿ ಭಗ್ನಪ್ರೇಮ.
* ಶೇಕಡ ೨.೬ ಪ್ರಕರಣಗಳಲ್ಲಿ ಬಡತನ, ಹಣಕಾಸಿನ ಮುಗ್ಗಟ್ಟು.
* ಶೇಕಡ ೨.೧ ಪ್ರಕರಣಗಳಲ್ಲಿ ಪರೀಕ್ಷೆ/ಗುರಿಮುಟ್ಟುವುದರಲ್ಲಿ ವಿಫಲತೆಯನ್ನು ವ್ಯಕ್ತಿಗಳು ಕಾರಣಾಂಶವಾಗಿ ಸೂಚಿಸಿದ್ದರು.
* ಶೇಕಡ ೩೫ ಪ್ರಕರಣಗಳಲ್ಲಿ ಯಾವ ಕಾರಣವನ್ನು ಕೊಟ್ಟಿರಲಿಲ್ಲ.

ಆತ್ಮಹತ್ಯೆ ಮಾಡಿಕೊಂಡು ಸತ್ತವರಲ್ಲಿ ಶೇಕಡ ೭.೪ ಮಂದಿ ವಿದ್ಯಾರ್ಥಿಗಳು. ಈ ರೀತಿ ಸತ್ತ ವಿದ್ಯಾರ್ಥಿಗಳಲ್ಲಿ ಶೇಕಡಾ ೩೦ ಮಂದಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಮತ್ತು ಪಿಯುಸಿ ವಿದ್ಯಾರ್ಥಿಗಳು.

ಆತ್ಮಹತ್ಯೆಗೆ ಪ್ರೇರಣೆ ಏನು?

೧) ಸಾವೇ ಪರಿಹಾರ ಎಂಬ ನಿರ್ಧಾರ: ಕಷ್ಟ, ನಷ್ಟ, ಸೋಲು, ನಿರಾಶೆ, ಅಪಮಾನ, ತೀವ್ರ ಹಣ ಸಂಪನ್ಮೂಲಗಳ ಕೊರತೆ, ಪ್ರೀತಿ, ಆಸರೆ ಇಲ್ಲದಿರುವ ಸಂದರ್ಭ ಸನ್ನಿವೇಶದಲ್ಲಿ ವ್ಯಕ್ತಿ ‘ಇನ್ನು ಬದುಕುವುದರಿಂದ ನೋವು ಹೆಚ್ಚುತ್ತದೆ. ಕಷ್ಟ ಸಮಸ್ಯೆಗಳಿಗೆ ಪರಿಹಾರ ಕಾಣುತ್ತಿಲ್ಲ. ಸಾವೇ ಇವುಗಳಿಂದ ನನಗೆ ಮುಕ್ತಿ ಕೊಡುತ್ತದೆ. ಸಾವೇ ಪರಿಹಾರ’ ಎಂದು ನಿರ್ಧಾರ ಮಾಡುತ್ತಾನೆ. ಈ ನಿರ್ಧಾರಕ್ಕೆ ಕೆಲವರು ಕೆಲವೇ ಸೆಕೆಂಡುಗಳು/ನಿಮಿಷದಲ್ಲಿ ಬಂದರೆ, ಕೆಲವರು ಹಲವಾರು ದಿನಗಳು, ವಾರಗಳನ್ನು ತೆಗೆದುಕೊಳ್ಳಬಹುದು.

ಈ ರೀತಿ ನಿರ್ಧಾರ ಕೈಗೊಳ್ಳುವಾಗ ಅವರಿಗೆ ತಾವು ಒಂಟಿ ತಮಗೆ ಯಾರೂ ಇಲ್ಲ. ತಮ್ಮ ಸಹಾಯಕ್ಕೆ ಯಾರು ಬರುತ್ತಿಲ್ಲ. ತಾವು ಅಸಹಾಯಕರು ಎಂದು ಅನಿಸಿಬಿಡುತ್ತದೆ. ಸಾಯುವ ಇಚ್ಛೆ ತೀವ್ರವಾಗಿ, ಸಾಯುವ ಪ್ರಯತ್ನವನ್ನು ಗಂಭೀರವಾಗಿಯೇ ಮಾಡುತ್ತಾರೆ. ಯಾರೂ ಇಲ್ಲದ ಜಾಗ, ಯಾರೂ ಇಲ್ಲದ ಸಮಯ, ಯಾರೂ ತಮ್ಮ ಪ್ರಯತ್ನವನ್ನು ವಿಫಲಗೊಳಿಸದಂತೆ ಮಾಡಲು ಸರಿಯಾದ ಸಮಯ, ಸ್ಥಳ ಮತ್ತು ವಿಧಾನವನ್ನು ಆಯ್ಕೆ ಮಾಡುತ್ತಾರೆ. ತಮ್ಮ ಇಂಗಿತವನ್ನು ಯಾರಿಗೂ ಹೇಳುವುದಿಲ್ಲ. ರಹಸ್ಯವಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ಲಾನ್ ಮಾಡುತ್ತಾರೆ. ಈ ಸಮಯದಲ್ಲಿ ಯಾರಾದರೂ ಅವರೊಂದಿಗೆ ಮಾತನಾಡಿದರೆ, ಸಹಾಯ, ಆಸರೆ ನೀಡಿದರೆ, ಪ್ರಯತ್ನವನ್ನು ಮುಂದೂಡುತ್ತಾರೆ ಅಥವಾ ಕೈಬಿಡುತ್ತಾರೆ.

೨) ಒತ್ತಡ/ಪ್ರತಿಭಟನೆ: ಆತ್ಮಹತ್ಯೆ ಪ್ರಯತ್ನವನ್ನು ಕೆಲವರು ತಮ್ಮ ಸಿಟ್ಟು ಕೋಪವನ್ನು ಪ್ರಕಟಿಸಲು, ಇತರರ ಗಮನ ಸೆಳೆಯಲು ಅಥವಾ ತಮ್ಮ ಪ್ರತಿಭಟನೆಯನ್ನು ದಾಖಲಿಸಲು ಉಪಯೋಗಿಸುತ್ತಾರೆ. ಈ ಮೂಲಕ ಸಂಬಂಧಪಟ್ಟವರ ಮೇಲೆ ಒತ್ತಡವನ್ನು ತರುತ್ತಾರೆ. ಅವರನ್ನು ಮಣಿಸಲು ಪ್ರಯತ್ನಿಸುತ್ತಾರೆ. ವಿಶೇಷವಾಗಿ ಹದಿಹರೆಯದವರು, ಯುವ ಜನ ಹೀಗೆ ಮಾಡುತ್ತಾರೆ.

* ನನಗೆ ಬೈಕ್ ಕೊಡಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ.
* ನಾನು ಮೆಚ್ಚಿದ ಹುಡುಗನೊಂದಿಗೆ ಮದುವೆ ಮಾಡದಿದ್ದರೆ ನಾನು ಸಾಯುತ್ತೇನೆ.
* ಇನ್ನೊಮ್ಮೆ ನನಗೆ ಎಲ್ಲರ ಮುಂದೆ ಅವಮಾನ ಮಾಡಿದರೆ, ನಾನು ಏನಾದರೂ ಮಾಡಿಕೊಂಡು ಸತ್ತುಹೋಗುತ್ತೇನೆ.
* ನನ್ನ ಮೇಲಿನ ಆರೋಪವನ್ನು ನೀವು ವಾಪಸ್ ತೆಗೆದುಕೊಳ್ಳದಿದ್ದರೆ ನನ್ನ ಸಾವಿಗೆ ನೀವೇ ಕಾರಣ ಎಂದು ಬರೆದಿಟ್ಟು ಸಾಯುತ್ತೇನೆ.
* ನನ್ನ ಬೇಡಿಕೆಯನ್ನು ಈಡೇರಿಸಿ, ಈಡೇರಿಸದಿದ್ದರೆ ನಿಮ್ಮ ಮುಂದೆಯೇ ಬೆಂಕಿ ಹಚ್ಚಿಕೊಂಡು ಸಾಯುತ್ತೇನೆ, ಇತ್ಯಾದಿ.

೩) ಸಹಾಯಕ್ಕಾಗಿ ಮೊರೆ: ನಾನು ತುಂಬಾ ಕಷ್ಟದಲ್ಲಿದ್ದೇನೆ. ನಾನು ನನ್ನ ಸಮಸ್ಯೆಗಳನ್ನು ನಿಭಾಯಿಸಲಾರೆ. ಯಾರೂ ಸಹಾಯಕ್ಕೆ ಮುಂದೆ ಬರುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ನಾನು ಬದುಕಿರುವುದು ನನಗೆ ಕಷ್ಟ, ಸಹಾಯ ಮಾಡಿ, ಇಲ್ಲದಿದ್ದರೆ ಸಾವೇ ನನಗೆ ಗತಿ ಎಂದು ಆತ್ಮಹತ್ಯೆ ಪ್ರಯತ್ನದ ಮೂಲಕ ಸಹಾಯಕ್ಕಾಗಿ ಕೆಲವರು ಮೊರೆ ಇಡುತ್ತಾರೆ.

ಈ ಮೇಲಿನ ಎರಡನೇ ಮತ್ತು ಮೂರನೇ ಗುಂಪಿನ ಜನ, ಆತ್ಮಹತ್ಯೆ ಪ್ರಯತ್ನವನ್ನು ಬಹುರಂಗವಾಗಿಯೇ ಮಾಡುತ್ತಾರೆ. ಸಂಬಂಧಪಟ್ಟವರಿಗೆ ಸ್ಪಷ್ಟವಾಗಿ ತಿಳಿಸುತ್ತಾರೆ. ಅವರು ಬಳಸುವ ವಿಧಾನ ಗಂಭೀರ ಸ್ವರೂಪದ್ದಾಗಿರುವುದಿಲ್ಲ. ನಾಲ್ಕು ಮಾತ್ರೆಗಳನ್ನು ನುಂಗುವುದು, ಸ್ವಲ್ಪ ಟಿಕ್- ೨೦ ಕುಡಿಯುವುದು, ಒಂದನೇ ಅಂತಸ್ತಿನಿಂದ ಬೀಳುವುದು / ಬೀಳುತ್ತೇನೆ ಎನ್ನುವುದು. ಮುಂಗೈಯನ್ನು ಬ್ಲೇಡಿನಿಂದ ಕೊಯ್ಯುವುದು.

೪) ಮಾನಸಿಕ ಅಸ್ವಸ್ಥತೆಗಳು : ಶೇಕಡ ೨೦ ರಷ್ಟು ಜನ ವಿವಿಧ ರೀತಿಯ ಮಾನಸಿಕ ಸಮಸ್ಯೆ ಅಸ್ವಸ್ಥತೆಗಳಿಂದ ಬಳಲುತ್ತಾರೆ. ಅಲ್ಪಮಟ್ಟದ ಕಾಯಿಲೆಗಳಿಂದ ಆತಂಕ, ಖಿನ್ನತೆ ಇರಬಹುದು, ತೀವ್ರಮಟ್ಟದ ಕಾಯಿಲೆಗಳಾದ ಸ್ಕಿಜೋಫ್ರಿನಿಯಾ, ಬೈಪೋಲಾರ್ ಅಫೆಕ್ಟಿವ್ ಡಿಸಾರ್ಡರ್, ಮದ್ಯಮಾದಕ ವಸ್ತುಗಳ ಸೇವನೆಯ ಚಟವಾಗಬಹುದು. ಮಾನಸಿಕ ಅಸ್ವಸ್ಥತೆ ಇದ್ದಾಗ ನಮ್ಮ ವಿವೇಚನೆ ಕುಗ್ಗುತ್ತದೆ, ಕಷ್ಟ ಸಮಸ್ಯೆಗಳನ್ನೆದುರಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ. ತೀವ್ರ ರೀತಿಯ ಕಾಯಿಲೆಗಳಲ್ಲಿ ಭ್ರಮೆ ನಮ್ಮನ್ನು ಆವರಿಸಿಕೊಳ್ಳುತ್ತದೆ. ಆದ್ದರಿಂದ ಮಾನಸಿಕ ಅಸ್ವಸ್ಥತೆ ಇದ್ದಾಗ, ವ್ಯಕ್ತಿ ಅತ್ಯಲ್ಪ ಕಾರಣಕ್ಕೆ ಅಥವಾ ಕಾರಣವಿಲ್ಲದೆಯೇ ಆತ್ಮಹತ್ಯೆಗೆ ಪ್ರಯತ್ನಿಸಬಹುದು. ಯಾರು ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ, ಹೇಗೆ ಮಾಡುತ್ತಾರೆ?

ಲಿಂಗ / ವಯಸ್ಸು / ವಿದ್ಯಾಭ್ಯಾಸ ಇತ್ಯಾದಿ ಮತ್ತು ಆತ್ಮಹತ್ಯೆ

ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ
೫೯% ಗಂಡಸರು
೪೧% ಹೆಂಗಸರು

೩೭% ೧೫ ರಿಂದ ೨೯ ವರ್ಷ ವಯಸ್ಸಿನವರು
೩೪% ೩೦ ರಿಂದ ೪೪ ವರ್ಷ
೩.೨% ಮಕ್ಕಳು
೭.೨% ವೃದ್ದರು

೨೭% ಅವಿದ್ಯಾವಂತರು
೨೬% ೧೦ನೇ ತರಗತಿಗಿಂತ ಹೆಚ್ಚು ಓದಿದವರು
೬.೯% ಹೈಸ್ಕೂಲು
೨೨% ಮಾಧ್ಯಮಿಕ ಶಾಲೆ
೨೭% ಪ್ರಾಥಮಿಕ ಶಾಲೆ
೬೭% ವಿವಾಹಿತರು
೨೩% ಅವಿವಾಹಿತರು
೫% ಬೇರೆಯಾದವರು
೫.೨% ವಿದ್ಯಾರ್ಥಿಗಳು
೨೧% ಗೃಹಿಣಿಯರು
೮.೮% ನಿರುದ್ಯೋಗಿಗಳು

ಆತ್ಮಹತ್ಯಾ ವಿಧಾನ

೨೫% ನೇಣು ಹಾಕಿಕೊಂಡು
೩೭% ವಿಷ ಸೇವನೆ
೧೧.೧% ಸುಟ್ಟಗಾಯಗಳಿಂದ
೯.೦% ನೀರಿನಲ್ಲಿ ಮುಳುಗಿ

ಆತ್ಮಹತ್ಯೆಯ ನಿವಾರಣೆ ಹೇಗೆ ?

೧) ಸಂಭವನೀಯ ವ್ಯಕ್ತಿಗಳನ್ನು ಅವರು ಪ್ರಯತ್ನ ಮಾಡುವ ಮೊದಲೇ ಗುರುತಿಸಿ ಅವರಿಗೆ ಸಹಾಯ ಆಸರೆ ನೀಡುವುದು:

ಯಾರು ಕಷ್ಟ, ನಷ್ಟ, ಸೋಲು, ನಿರಾಶೆ, ಅಪಮಾನ, ನೋವಿಗೆ ಒಳಗಾಗಿದ್ದಾರೋ ಅವರಿಗೆ ಆಪ್ತಸಲಹೆ ಸಮಾಧಾನವನ್ನು ಮನೆಯವರು ಬಂಧುಮಿತ್ರರು, ಸಂಘ ಸಂಸ್ಥೆಗಳು, ವೈದ್ಯರು, ಮನಶಾಸ್ತ್ರಜ್ಞರು, ಮನೋವೈದ್ಯರು ನೀಡುವುದು. ಉದಾ: ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿ, ಸಾಲದ ಬಾಧೆಯಿಂದ ಬಳಲುತ್ತಿರುವ ರೈತರು, ಅಂಗವೈಕಲ್ಯ, ಅವಮಾನ, ಸಾವನ್ನು ತರುವ ಅಥವಾ ಸಾಮಾಜಿಕ ಕಳಂಕವನ್ನುಂಟು ಮಾಡುವ ಕಾಯಿಲೆಗಳಿಂದ ನರಳುತ್ತಿರುವವರು, ನಿರುದ್ಯೋಗಿಗಳು, ಪ್ರೀತಿ ಪ್ರೇಮದಲ್ಲಿ ವಿಫಲರಾಗಿರುವರು. ಒಂಟಿಯಾಗಿ ಬದುಕುತ್ತಿರುವವರು ಇತ್ಯಾದಿ. ಇಂಥವರಿಗಾಗಿ ಆಪ್ತಸಲಹೆ ಸಮಾಧಾನ ಕೇಂದ್ರಗಳು, ದಿನದ ೨೪ ಗಂಟೆಗಳೂ ಕೆಲಸ ಮಾಡುವ ಫೋನ್ ಸಹಾಯವಾಣಿ, ಆಸರ ನೀಡುವ ಕೇಂದ್ರಗಳನ್ನು ಸ್ಥಾಪಿಸಬೇಕು.

೨) ಖಿನ್ನತೆ ಮತ್ತು ಭಾವೋದ್ವೇಗಗಳಿಗೆ ಒಳಗಾದವರನ್ನು ಗುರುತಿಸಿ ಅವರಿಗೆ ಸಲಹೆ ಚಿಕಿತ್ಸೆಯನ್ನು ನೀಡಲು ಎಲ್ಲ ಖಾಸಗಿ ಮತ್ತು ಸರಕಾರಿ ವೈದ್ಯರು, ಶುಶ್ರಕರಿಗೆ, ಆರೋಗ್ಯ ಸಹಾಯಕರಿಗೆ ತರಬೇತಿ ನೀಡುವುದು, ಖಿನ್ನತೆ ನಿವಾರಕ ಔಷಧಿ ಮತ್ತು ಶಮನಕಾರಿ ಔಷಧಿಯನ್ನು ನೀಡುವುದು.

೩) ಸಮಸ್ಯೆ ನೋವು ನಿರಾಶಗೆಳನ್ನು ಸಮರ್ಥವಾಗಿ ನಿಭಾಯಿಸಲು ಯುವ ಜನರಿಗೆ ಮತ್ತು ಎಲ್ಲರಿಗೂ ತರಬೇತಿ ನೀಡುವುದು. ಕಳಗಿನ ಸೂತ್ರಗಳನ್ನು ಪಾಲಿಸುವುದು.

* ನಿಮ್ಮ ಅಗತ್ಯಗಳನ್ನು ತಗ್ಗಿಸಿ, ಸರಳ ತೃಪ್ತ ಜೀವನ ಮಾಡಿ, ಹಣವನ್ನು ವಿವೇಚನೆಯಿಂದ ಸಂಪಾದಿಸಿ ಮತ್ತು ಬಳಸಿ ಆದಾಯಕ್ಕಿಂತ ಖರ್ಚು ಹೆಚ್ಚುವುದು ಬೇಡ.

* ಇತರರ ಬಗ್ಗೆ ನಿರೀಕ್ಷೆಗಳನ್ನು ಕಡಿಮೆ ಮಾಡಿ, ಅವರು ನಿಮ್ಮೊಂದಿಗೆ ಹೊಂದಿಕೊಳ್ಳಲು ಅವಕಾಶಕೊಡಿ, ಎಲ್ಲರೊಡನ ಸ್ನೇಹದಿಂದಿರಿ. ಅವರನ್ನು ಅರ್ಥಮಾಡಿಕೊಳ್ಳಿ

* ನಿರಾಶಾವಾದ ಬೇಡ, ಒಳ್ಳೆಯದಾಗುತ್ತದೆ ಎಂಬ ಭರವಸ ಇರಲಿ, ಎಲ್ಲರಲ್ಲಿ ಮತ್ತು ಎಲ್ಲದರಲ್ಲಿ ಒಳ್ಳೆಯದನ್ನು ನೋಡಿ.

* ವರ್ತಮಾನ ಮುಖ್ಯ ನಿನ್ನೆ ಮತ್ತು ನಾಳೆಯ ಬಗ್ಗೆ ಚಿಂತೆ ಬೇಡ.

* ವಾಸ್ತವಿಕತೆಯನ್ನು ಒಪ್ಪಿಕೊಳ್ಳಿ ಮತ್ತು ಆದಕ್ಕೆ ಹೊಂದಿಕೊಳ್ಳಿ, ನಿಮ್ಮನ್ನು ಇತರರನ್ನು ಶ್ಲಾಘಿಸಿ.

* ಒಂಟಿಯಾಗಿರಬೇಡಿ, ಜನರೊಂದಿಗೆ ಬೆರೆಯಿರಿ. ಸಂಘ ಸಂಸ್ಥೆಗಳ ಸದಸ್ಯರಾಗಿ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಿ.

* ಸೃಜನಶೀಲ ಚಟುವಟಿಕೆಗಳು, ಸಂಗೀತ, ಸಾಹಿತ್ಯ, ಯೋಗ, ಧ್ಯಾನ, ಕ್ರೀಡೆಗಳಿಗೆ ದಿನವೂ ಒಂದು ಗಂಟೆ ಮೀಸಲಿಡಿ.

* ನಿಮ್ಮ ಭಾವನೆ, ಅನಿಸಿಕೆಗಳನ್ನು ಆತ್ಮೀಯರೊಂದಿಗೆ ಹೇಳಿಕೊಳ್ಳಿ ನಿಮ್ಮ ಪರಿಸರವನ್ನು ಚೆನ್ನಾಗಿಟ್ಟುಕೊಳ್ಳಿ.

* ಸದಾ ಚಟುವಟಿಕೆಯಿಂದಿರಿ. ನೀವು ಮಾಡುವ ಕೆಲಸಗಳಿಂದ ಸಂತೋಷಪಡಿ.

* ನಿಮ್ಮ ಜ್ಞಾನ ಕೌಶಲ್ಯಗಳು ಉತ್ತಮಪಡಿಸಿಕೊಳ್ಳಿ, ಜೀವನ ಘಟನೆಗಳಿಗೆ ಪೂರ್ವಸಿದ್ಧತೆ ಮಾಡಿ, ಸರಿಯಾಗಿ ನಿಭಾಯಿಸಿ.

* ಪಾಲಿಗೆ ಬಂದದ್ದನ್ನು ಸ್ವೀಕರಿಸಿ, ಹಲವು ಸಮಸ್ಯೆಗಳಿದ್ದಾಗ, ಒಂದೊಂದು ಸಮಸ್ಯೆಯನ್ನು ಇತರರ ನೆರವಿನೊಂದಿಗೆ ನಿಭಾಯಿಸಿ, ಸಾಧಿಸಬಹುದಾದ ಗುರಿಗಳಿರಲಿ.

* ಸೊಪ್ಪು, ತರಕಾರಿ, ಹಾಲು, ಹಣ್ಣು ಇರುವ ಆಹಾರವನ್ನು ಹಿತಮಿತವಾಗಿ ವೇಳೆ ವೇಳೆಗೆ ಸರಿಯಾಗಿ ಸೇವಿಸಿ, ಸ್ವಚ್ಛತೆ ಬಗ್ಗೆ ಗಮನ ಕೊಡಿ. ನಿತ್ಯ ವ್ಯಾಯಾಮ ಮಾಡಿ.

ಹರೆಯದವರಲ್ಲಿ ಆತ್ಮಹತ್ಯೆ:

ಇತ್ತೀಚಿನ ವರ್ಷಗಳಲ್ಲಿ ಹದಿಹರೆಯದವರು ಆತ್ಮಹತ್ಯೆಗೆ ಪ್ರಯತ್ನಿಸುವುದು, ಅದರಲ್ಲಿ ಯಶಸ್ವಿಯಾಗುವುದು ಕಂಡು ಬರುತ್ತಿದೆ. ಪರೀಕ್ಷೆಯಲ್ಲಿ ಫೇಲು ಅಥವಾ ಕಡಿಮೆ ಮಾರ್ಕ್ಸ್ ಬಂದಿದೆ. ಜನರ ಮುಂದೆ ಅವಮಾನವಾಯಿತು. ಭಗ್ನ ಪ್ರೇಮ, ಯಾವುದೇ ನಿರಾಶೆ, ಕುಟುಂಬದವರೊಂದಿಗೆ ಮನಸ್ತಾಪ, ಜಗಳ, ನಿರುದ್ಯೋಗಿಗಳನ್ನು ಆತ್ಮಹತ್ಯೆಗೆ ಸಾಮಾನ್ಯ ಕಾರಣಗಳೆಂದು ಹೇಳಲಾಗುತ್ತದೆ. ಹರೆಯದವರ ಆತ್ಮಹತ್ಯಾ ಯತ್ನಗಳಲ್ಲಿ ಎರಡು ಬಗೆ ಇದೆ. ಇನ್ನು ಬದುಕು ಬೇಡ, ಸಾವೇ ತನ್ನ ಸಮಸ್ಯೆಗೆ ಪರಿಹಾರ ಎಂದು ಯೋಚಿಸಿ, ಪ್ರಯತ್ನಿಸುವವರದು ಒಂದು ಗುಂಪಾದರೆ; ಆತ್ಮಹತ್ಯೆ ಮಾಡುವುದರ ಮೂಲಕ ತಮ್ಮ ಸಿಟ್ಟು, ಕೋಪ, ಪ್ರತಿಭಟನೆ, ಸಂಬಂಧಪಟ್ಟವರಿಗೆ ಎಚ್ಚರಿಕೆ ಅಥವಾ ಶಿಕ್ಷೆ ಕೊಡುವುದು. ಹಾಗೂ ತಮ್ಮ ಸಮಸ್ಯೆಗಳ ಬಗ್ಗೆ ಎಚ್ಚರ ಗಮನ ಸೆಳೆಯುವುದು ಇನ್ನೊಂದು ಗುಂಪು. ಮೊದಲ ಗುಂಪು ತೀವ್ರ ಬಗೆಯ ಆತ್ಮಹತ್ಯಾ ಯತ್ನ ಮಾಡುತ್ತಾರೆ. ಯಾರೂ ಇಲ್ಲದ ಜಾಗ ಸಮಯದಲ್ಲಿ ನೇಣುಹಾಕಿಕೊಳ್ಳುವುದು, ದೊಡ್ಡ ಪ್ರಮಾಣದಲ್ಲಿ ವಿಷ ಸೇವಿಸುವುದು, ಆಳವಾದ ಬಾವಿ, ಕೆರೆಗೆ ಬೀಳುವುದು, ಬಹು ಎತ್ತರದ ಸ್ಥಳ ಕಟ್ಟಡದಿಂದ ಕೆಳಕ್ಕೆ ಬೀಳುವುದು ಇತ್ಯಾದಿ. ಎರಡನೇ ಗುಂಪು ಲಘುವಾದ ಪ್ರಯತ್ನ ಮಾಡುತ್ತಾರೆ. ಕೆಲವೇ ಮಾತ್ರೆಗಳನ್ನು ನುಂಗುವುದು, ಇತರರ ಮುಂದೆ ನೇಣುಹಾಕಿಕೊಳ್ಳಲು, ಬೆಂಕಿ ಹಚ್ಚಿಕೊಳ್ಳಲು, ಪ್ರಯತ್ನಿಸುವುದು ಇತ್ಯಾದಿ. ಸಾಯಲು ಇವರಿಗೆ ಇಷ್ಟವಿರುವುದಿಲ್ಲ. ಕೆಲವು ಸಲ ಆಕಸ್ಮಿಕವಾಗಿ ಸತ್ತು ಹೋಗುತ್ತಾರೆ. ಶೇಕಡಾ ೬೦ರಷ್ಟು ಆತ್ಮಹತ್ಯೆ ಪ್ರಕರಣಗಳಲ್ಲಿ ವ್ಯಕ್ತಿ ಖಿನ್ನತೆ ರೋಗದಿಂದ ಬಳಲುತ್ತಿರುತ್ತಾನೆ. ಉಳಿದ ಪ್ರಕರಣಗಳಲ್ಲಿ ಭಾವೋದ್ವೇಗಕ್ಕೆ ಒಳಗಾಗಿರುತ್ತಾರೆ.

ಆತ್ಮಹತ್ಯಾ ನಿವಾರಣೆ:

ಹರೆಯದವರ ಆತ್ಮಹತ್ಯಾ ಪ್ರಕರಣಗಳು ಕುಟುಂಬದ ಮೇಲೆ ಸಮಾಜದ ಮೇಲೆ ಅಹಿತಕರ ಪರಿಣಾಮವನ್ನುಂಟು ಮಾಡುತ್ತವೆ. ಬದುಕಿನ ಹೊಸ್ತಿನಲ್ಲಿರುವ ವ್ಯಕ್ತಿ ಸಾಯುವುದು ಒಂದು ದೊಡ್ಡ ದುರಂತವೆಂದೇ ಪರಿಗಣಿಸಲಾಗುತ್ತದೆ. ಬಹುತೇಕ ಪ್ರಕರಣಗಳು ನಿವಾರಣೀಯ, ಕುಟುಂಬದವರು, ಬಂಧು-ಮಿತ್ರರು, ಶಿಕ್ಷಕರು, ಸ್ವಲ್ಪ ಮುನ್ನೆಚ್ಚರಿಕೆ ವಹಿಸಬೇಕು.

* ಪರೀಕ್ಷಾ ಫಲಿತಾಂಶದ ಬಗ್ಗೆ ಹೆಚ್ಚು ಒತ್ತಡ ಹಾಕಬೇಡಿ. ಅಕಸ್ಮಾತ್ ಫೇಲಾದರೆ ಏನು ಮಾಡಬೇಕು/ಏನು ಮಾಡಬಾರದೆಂದು ವಿವರಿಸಿ. ಫೇಲಾಗುವುದು ಅವಮಾನವಲ್ಲ. ಅಪರಾಧವೂ ಅಲ್ಲ ಎನ್ನಿ. ಫೇಲಾದ/ ಕಡಿಮೆ ಅಂಕಗಳು ಬಂದ ವಿದ್ಯಾರ್ಥಿಗಳನ್ನು ಸಮಾಧಾನದಿಂದ ಮಾತನಾಡಿಸಿ, ಸಾಂತ್ವಾನ ಹೇಳಿ, ಮುಂದಿನ ಪ್ರಯತ್ನದಲ್ಲಿ ಪಾಸಾಗಲು ಪ್ರಯತ್ನಿಸು ಎನ್ನಿ, ಈ ಮಕ್ಕಳನ್ನು ಒಂಟಿಯಾಗಿರಲು ಬಿಡಬೇಡಿ.

* ಹರೆಯದವರ ಕಷ್ಟ ನಷ್ಟ, ನೋವು, ನಿರಾಶೆಗಳ ಬಗ್ಗೆ ತಂದೆ ತಾಯಿಗಳು ನಿತ್ಯ ವಿಚಾರಿಸಬೇಕು, ಭಾವನೆಗಳನ್ನು ಹೇಳಿಕೊಳ್ಳಲು ಅವಕಾಶ ಮಾಡಿಕೊಡಬೇಕು.

* ಮುಟ್ಟಬಹುದಾದ ಗುರಿಗಳು, ಬದಲೀ ಗುರಿಗಳನ್ನು ಇಟ್ಟುಕೊಳ್ಳಲು ತರಬೇತಿ ನೀಡಬೇಕು. ಒಂದು ಗುರಿಮುಟ್ಟಲು ವಿಫಲರಾದಾಗ, ಮತ್ತೊಂದು ಗುರಿಯತ್ತ ಅವರ ಲಕ್ಷವನ್ನು ಸೆಳೆಯಬೇಕು.

* ನಿತ್ಯ ತೃಪ್ತಿ: ಲಭ್ಯವಿದ್ದುದರಲ್ಲಿ ತೃಪ್ತಿ, ಸಣ್ಣಪುಟ್ಟ ಸಾಧನೆಗಳನ್ನು ಗಮನಿಸಿ ಹೆಮ್ಮೆ ಪಡುವ ಪ್ರವೃತ್ತಿಯನ್ನು ಬೆಳೆಸಿ. ಅತಿ ಆಸೆ/ಅವಾಸ್ತವಿಕ ಮಹತ್ವಾಕಾಂಕ್ಷೆ ಬೇಡ ಎನ್ನಿ. ಸಾವು ಯಾವ ಸಮಸ್ಯೆಗೂ ಪರಿಹಾರವಲ್ಲ. ಈಸಬೇಕು, ಇದ್ದು ಜೈಸಬೇಕು. ಮರಳಿ ಯತ್ನವ ಮಾಡಿ ಎನ್ನಿ. ಹಾಗೆ ಗೆದ್ದವರ ಉದಾಹರಣೆಗಳನ್ನು ಕೊಡಬೇಕು. ಉದಾ: ಅಮೆರಿಕೆಯ ಅಧ್ಯಕ್ಷ ಅಬ್ರಹಾಂ ಲಿಂಕನ್ ೪೮ ಸೋಲುಗಳ ನಂತರ ಗೆದ್ದ ಭೂಪ ಅವನು.

* ಆರೋಗ್ಯಕರ ಮನರಂಜನೆಯನ್ನು ಪಡೆಯಲು ತರಬೇತಿ ನೀಡಿ.

* ಯಾವುದೇ ವ್ಯಕ್ತಿಗೆ ಬೇಸರದಿಂದಲೋ, ದುಃಖದಿಂದಲೋ ಭಯ ಸಿಟ್ಟಿನಿಂದಲೋ ಆತ್ಮಹತ್ಯೆ ಯೋಚನೆ ಬಂದಾಗ, ತಕ್ಷಣ ತನ್ನ ಆತ್ಮೀಯರೊಂದಿಗೆ ಮಾತನಾಡಬೇಕು. ಭಾವೋದ್ವೇಗಗಳನ್ನು ಹೇಳಿಕೊಳ್ಳಬೇಕು, ಸಾಂತ್ವನ ಪಡೆಯಬೇಕು. ಅಗತ್ಯಬಿದ್ದರೆ ಆಪ್ತ ಸಮಾಲೋಚಕರನ್ನು, ಮನಶಾಸ್ತ್ರಜ್ಞರನ್ನು ಮನೋವೈದ್ಯರನ್ನು ಕಾಣಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮ್ಯಾಚಿಂಗ್
Next post ಕಳಚಿಕೊಂಡವರು

ಸಣ್ಣ ಕತೆ

 • ಮಿಂಚಿನ ದೀಪ

  ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

 • ಜೋತಿಷ್ಯ

  ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

 • ನಿರೀಕ್ಷೆ

  ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

 • ಬಾಗಿಲು ತೆರೆದಿತ್ತು

  ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

 • ಆನುಗೋಲು

  ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

cheap jordans|wholesale air max|wholesale jordans|wholesale jewelry|wholesale jerseys