ನಿನ್ನ ಧ್ವನಿ ಕೇಳಿದಾಗ ಆಲಿಸಿದಾಗ
ಕೈಯಲ್ಲಿ ಜಾರಿಹೋದವು ಸ್ಪರ್ಶಕೆ
ಸಿಗದ ಶಬ್ದಗಳು ಒಮ್ಮೆಲೇ ಬಂದು
ಎರಗಿದ ನೆನಪುಗಳು ಯಾವುದೋ
ಪರಿಮಳ ಎದೆಯಲ್ಲಿ ಮುಳ್ಳಿನ ಕೇದಿಗೆಬನ
ಕನಸಿನ ದಾರಿ ಗುಂಟ ದಡ ವಿಲ್ಲದ ನೆರಳು
ಬೀದಿಯಲ್ಲಿ ಬೇಸಿಗೆ ಬಿಸಿಲ ಮರೀಚಿಕೆ.

ನಿಂತಲ್ಲಿ ಕುಂತಲ್ಲಿ ಕನ್ನಡಿಯಾಗದ
ನಿನ್ನ ಬಿಂಬ ಪ್ರತಿಫಲಿಸಲಾರದೇ ಮಂಕು
ಆವರಿಸಿದ ಆಲದ ಮರದ ಬಿಳಲುಗಳು
ಅಡಿಯಲ್ಲಿ ದಾಖಲಾಗಲಿಲ್ಲ ಪ್ರೀತಿ
ಮಾತುಗಳಾಡದ ಸಂಜೆ ಮೌನದಲಿ
ರೂಪವಿಲ್ಲದ ಚಿತ್ರಗಳು ಮಾಸಿ ಹೋದವು
ಚಳಿಗೆ ಉದುರಿ ಬಿದ್ದ ಕಂದು ಎಲೆಗಳು.

ಜೀವದಲೆಗಳು ಬಿತ್ತಿದ ಅಂತರ್ಜಲದ
ಭಾವಿ ಒಬ್ಬೊಬ್ಬರಾಗಿ ಇಳಿದು ಕದಡಿ
ಕೆಸರ ತಳ ಮರೆತುಬಿಟ್ಟ ಪಾ
ಅರಿವಿಲ್ಲದ ವ್ಯಾಪ್ತಿಯ ಗೆರೆಗಳು
ಲೋಕದ ಟೊಂಕು ತಿದ್ದುವ ಹಂಗು
ಮನವ ಸಂತೈಸಿಕೊಳ್ಳಿದ ಪರಿಗಳು
ಮಳೆ ಹನಿಗೆ ಹಸಿಯಾಗದ ಮನ.
ಕಳಚಿಕೊಂಡು ಮರವಾಗುವ ಸಂತ.
*****