ಕನ್ನಡ ಕಾವ್ಯಧಾತುವಿಗೆ ಅಂಟಿಕೊಂಡಿರುವ ಆತ್ಮೀಯ ಕವಿ

ಕನ್ನಡ ಕಾವ್ಯಧಾತುವಿಗೆ ಅಂಟಿಕೊಂಡಿರುವ ಆತ್ಮೀಯ ಕವಿ

ದುಃಖ ಯಾವಾಗಲೂ ವೈಯಕ್ತಿಕವಾಗಿರುತ್ತದೆ, ಆದ್ದರಿಂದಲೇ ಅದು ಮಾತಿಗೆ ಅತೀತವೂ ಆಗಿರುವುದು. ಅತಿಯಾದ ದುಃಖದಲ್ಲಿ ಉಮ್ಮಳ ಮಾತ್ರವೇ ಸಾಧ್ಯ. ಅಥವಾ ಮೌನ. ಆದರೆ ವೈಯಕ್ತಿಕ ದುಃಖ ಸಾರ್ವತ್ರಿಕವಾದಾಗ ಬಹುಶಃ ಕಾವ್ಯ ಹುಟ್ಟಿಕೊಳ್ಳುತ್ತದೆ. ವಾಲ್ಮೀಕಿಯಲ್ಲಿ ಹೀಗೇ ಆಯಿತು. ಕ್ರೌಂಚ ಮಿಥುನದಲ್ಲಿ ಒಂದರ ಸಾವು, ಇನ್ನೊಂದರ ನೋವು ಮೊದಲು ಅನುಭವಿಸಿದ್ದು ಕವಿ; ನಂತರ ಅದೇ ಕಾವ್ಯ ರೂಪ ಪಡೆದು ರಾಮಾಯಣವಾಯಿತು. ವೈಯಕ್ತಿಕ ದುಃಖವನ್ನು ಕವಿ ಅನುಭವಿಸದೆ ಇದ್ದಿದ್ದರೆ ಅವನಿಂದ ಸೀತಾನ್ವೇಷಣೆಯಾಗಲಿ, ಸೀತಾಪರಿತ್ಯಾಗವಾಗಲಿ ಸಾಧ್ಯವಾಗುತ್ತಿರಲಿಲ್ಲ.

ಕವಿ ಎಚ್.ಎಸ್.ವಿ. ಎರಡು ವರ್ಷಗಳ ಹಿಂದೆ ತಮ್ಮ ಬಾಳ ಸಂಗಾತಿಯನ್ನು ಕಳೆದುಕೊಂಡರು. ಮನುಷ್ಯನೊಬ್ಬನಿಗೆ ಪತ್ನೀವಿಯೋಗಕ್ಕಿಂತ ಹೆಚ್ಚಿನ ವಿಯೋಗವಿಲ್ಲ. ಅದು ಮನುಷ್ಯನನ್ನು ಒಂಟಿಯಾಗಿಸುತ್ತದೆ, ಅಂತರ್ಮುಖಿಯಾಗಿಸುತ್ತದೆ, ಅಕ್ಷರಶಃ ಅವಾಕ್ಕಾಗಿಸುತ್ತದೆ. ಇದೆಲ್ಲ ಆಗಿಯೂ ಋಷಿಮನಸ್ಸಿನ ಕವಿ ಇದನ್ನೂ ಕಾವ್ಯವಾಗಿಸಬಲ್ಲ ಎನ್ನುವುದಕ್ಕೆ ಎಚ್.ಎಸ್.ವಿ.ಯವರ ಈಚಿನ ಕವನ ಸಂಕಲನ ‘ಉತ್ತರಾಯಣ’ವೇ ಸಾಕ್ಷಿ. ಇದರಲ್ಲಿ ಎಷ್ಟು ಒಳ್ಳೆಯ ಕವಿತೆಗಳಿವೆಯೆಂದರೆ ಸಾವಿನ ನೆರಳಿಲ್ಲದಿರುತ್ತಿದ್ದರೆ ಇದೊಂದು ಕೊಂಡಾಡತಕ್ಕ ಸಂದರ್ಭವೆಂದು ಹೇಳಬಹುದಾಗಿತ್ತು. ಆದರೆ ಇಲ್ಲಿ ಸಾವಿನ ನಶ್ವರತೆಯೇ ಕಲೆಯ ಅನಶ್ವರತೆಗೂ ಕಾರಣವಾಗಿರುವುದರಿಂದ ಹುಟ್ಟು- ಸಾವು, ಅಂತರ್ಮಖತೆ-ಬಹಿರ್ಮುಖತೆ, ಮಾತು-ಮೌನ, ವೈಯಕ್ತಿಕ-ಸಾರ್ವತ್ರಿಕ ಮುಂತಾದ ಯುಗಳಗಳು ಈ ಕಾವ್ಯಲೋಕದಲ್ಲಿ ಅರ್ಥಹೀನವಾಗಿ ತೋರುತ್ತವೆ. ‘ಉತ್ತರಾಯಣ’ದ ಸಾರವನ್ನು ಗಹಿಸುವಂತೆ ಬೆನ್ನುಡಿ ಬರೆದ ಅನಂತಮೂರ್ತಿ ಕೀಟ್ಸ್ ಹೇಗೆ ಈ ಪ್ರಪಂಚವನ್ನು ಒಂದು “vale of Soul-making” ಎಂದು ಕರೆದ ಎನ್ನುತ್ತ ಎಚ್.ಎಸ್.ವಿ. ‘ಕೀಟ್ಸ್ ಪರಿಭಾವಿಸುವಂತೆ ಆತ್ಮದ ಸಿದ್ಧಿಯ ದಾರಿಯಲ್ಲಿದ್ಧಾರೆ’ ಎನ್ನುತ್ತಾರೆ.

ಯಾವುದು ಕಲೆಯಲ್ಲಿ ಶಾಶ್ವತವಾಗುತ್ತದೋ ಅದು ಜೀವನದಲ್ಲಿ ನಶ್ವರವಾಗುತ್ತದೆ ಎಂಬ ಶಿಲ್ಲರನ ಮಾತಿದೆ. ಅದೇ ರೀತಿ ಕೀಟ್ಸ್ ಕೂಡಾ ಅಮರತ್ವವಿರುವುದು ಕಲೆಯಲ್ಲಿ ಮಾತ್ರವೇ ಎಂದು ನಂಬಿದ್ದವ. ನಶ್ವರ ಜಗತ್ತನ್ನು ಮೀರಿ ಕಲಾಜಗತ್ತನ್ನು ನಿರ್ಮಿಸುವ ಮನುಷ್ಯ ರೊಮ್ಯಾಂಟಿಕ್ ತತ್ವದ ಕಲ್ಪನೆ ಎಂದುಕೊಂಡರೆ ಅದೂ ಸರಿಯಲ್ಲ. ಯಾಕೆಂದರೆ, ಗ್ರೀಕ್ ಮೂಲದ ಪೋಯೆಟ್ ಎಂಬ ಶಬ್ದದ ಅರ್ಥವೇ ‘ಕರ್ತಾರ’ ಎಂದು. ಸಂಸ್ಕೃತದ ಕವಿ ಎಂಬ ಪದದ ಮೂಲಾರ್ಥವೂ ಅದುವೇ. ದೇವರಿಗೆ ಕವಿ ಎಂಬ ನಾಮಧೇಯವೂ ಇರುತ್ತ, ಒಂದರ್ಥದಲ್ಲಿ ಕವಿ ದೇವರಿಗೆ ಸವಾಲಾಗುತ್ತಾನೆ. ‘ಉತ್ತರಾಯಣ’ದ ಆರಂಭದಲ್ಲೇ ಕವಿ ಉಪನಿಷದ್ವಾಕ್ಯವೊಂದನ್ನು ಉದ್ದರಿಸುತ್ತಾರೆ: ಮೃತ್ಯುವಿನ ಭಯದಿಂದ ದೇವತೆಗಳು ಛಂದಸ್ಸಿನ ಮೊರೆ ಹೊಕ್ಕರು ಎಂದು ಅದರ ತಾತ್ಪರ್ಯ. ಇಂದು ನಾವಿದನ್ನೊಂದು ರೂಪಕವಾಗಿ ತೆಗೆದುಕೊಳ್ಳಬೇಕಾಗುತ್ತದೆ; ಇಲ್ಲದಿದ್ದರೆ ದೇವತೆಗಳಿಗೆ ಮೃತ್ಯುವಿನ ಭಯವೆಂದರೇನು! ಛಂದಸ್ಸು ಅವರನ್ನು ರಕ್ಷಿಸುವುದೆಂದರೇನು! ಛಂದಸ್ಸು ಇಲ್ಲಿ ಕಲೆಗೆ ರೂಪಕವಾಗುತ್ತದೆ. ಕಲೆಯಲ್ಲಿ ಮಾತ್ರವೇ ಅನಶ್ವರತೆ ಸಾಧ್ಯ. ಕವಿ ಛಂದಸ್ಸನ್ನು ನಿಯಂತ್ರಿಸಬಲ್ಲನಾದ್ದರಿಂದ ಆತ ನಿರ್ಮಾಪಕನೂ ಆಗುತ್ತಾನೆ. ಕವಿ ಉಶನಸ್ ಅರ್ಥಾತ್ ಶುಕ್ರಾಚಾರ್ಯರಿಗೆ ಸಂಜೀವನೀ ಮಂತ್ರ ಗೊತ್ತಿತ್ತು ಎನ್ನುತ್ತದೆ ಪುರಾಣ.

ಒಳ್ಳೆಯ ಕವಿತೆಯೊಂದು ಹೇಗಿರಬೇಕು ಎನ್ನುವ ಪ್ರಶ್ನೆಗೆ ಸರಿಯಾದ ಉತ್ತರ ಯಾರಿಗೂ ಗೊತ್ತಿಲ್ಲ. ಯಾಕೆಂದರೆ ಇದು ಸಂಬಂಧಿಸಿದ ಸಂಗತಿ. ಸೃಷ್ಟಿಯ ಸಾಧ್ಯತೆ ಯಾವತ್ತೂ ಮುಕ್ತವಾಗಿರುತ್ತದೆ. ಆದ್ದರಿಂದ ಇಲ್ಲಿ ನಮಗೆ ಯಾವ ಆದರ್ಶವೂ ಮಾದರಿಯಾಗಿ ಲಭ್ಯವಾಗುವುದಿಲ್ಲ. ಯಾವುದೂ ಕೊನೆಯ ಕವಿತೆ ಎನ್ನುವಂತಿಲ್ಲ; ಎಲ್ಲವೂ ಪ್ರಯತ್ನಗಳೇ. ಅಮೆರಿಕನ್ ಕವಿಯಿತ್ರಿ ಎಮಿಲಿ ಡಿಕಿನ್ಸನ್ ಒಳ್ಳೆಯ ಕವಿತೆ ಓದಿದಾಗ ನೆತ್ತಿ ಸಿಡಿದುಹೋಗುವಂತಿರಬೇಕು ಎನ್ನುತ್ತಾಳೆ. ಇದೊಂದು ಹೇಳುವ ವಿಧಾನ. ಎಚ್.ಎಸ್.ವಿ.ಯವರ ಕವಿತೆಗಳು ಒಳ್ಳೆಯದಾಗಿದ್ದೂ ಅವು ನಮ್ಮ ನೆತ್ತಿ ಸಿಡಿಸುವುದಿಲ್ಲ; ಆಪ್ಯಾಯಮಾನವಾಗಿಯೇ ಅವು ನಮ್ಮನ್ನು ಒಳಗೊಳ್ಳುತ್ತವೆ, ಬೆರಗುಗೊಳಿಸುತ್ತವೆ.

ಆಧುನಿಕತೆ ಜಾಗತಿಕ ಕಾವ್ಯದಲ್ಲಿ ಕಾಲಿರಿಸಿದ್ದು ವಾಮನಕ್ರಮದಲ್ಲಿ. ಮೊದಲು ಅದು ಓದುಗರನ್ನು ತಿರಸ್ಕರಿಸಿತು, ತುಚ್ಛೀಕರಿಸಿತು, ಅವರ ಮುಖಕ್ಕೇ ಉಗಿಯಿತು. ಉದಾಹರಣೆಗೆ ಬಾದಲೇರ್, ಟಿ.ಎಸ್. ಎಲಿಯಟ್. ಪರಂಪರಾಗತ ಪ್ರತಿಕ್ರಿಯೆಯಿಂದ ಓದುಗರ ಸಂವೇದನೆ ಜಡ್ಡುಗಟ್ಟಿದೆ ಎನ್ನುವುದು ಆಧುನಿಕತೆಯ ನಂಬಿಕೆಯಾಗಿತ್ತು. ಇದರಿಂದ ಅವರನ್ನು ಬಿಡುಗಡೆಗೊಳಿಸದೆ ಹೊಸ ಕಾವ್ಯ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಓದುಗರನ್ನು ಘಾತಗೊಳಿಸುವಂಥ ರಚನೆಗಳು ನಿರ್ಮಾಣವಾದುವು.

ಎರಡನೆಯದಾಗಿ ಆಧುನಿಕತೆ ಛಂದಸ್ಸನ್ನು ತಿರಸ್ಕರಿಸಿ ಮುಕ್ತಛಂದಸ್ಸು ಎಂಬ ‘ವಿರೋಧಾಭಾಸ’ವೊಂದನ್ನು ಪ್ರಯೋಗಿಸಿತು. ಮುಕ್ತ ಛಂದಸ್ಸು ವಿರೋಧಾಭಾಸ ಯಾಕೆಂದರೆ ರಚನೆಯೊಂದು ಏಕಕಾಲದಲ್ಲಿ ಮುಕ್ತವೂ ಛಂದೋಬದ್ಧವೂ ಆಗಿರುವುದು ಸಾಧ್ಯವಿಲ್ಲ. ಇದನ್ನರಿತ ಮುಕ್ತಛಂದಸ್ಸು ಛಂದಸ್ಸಿನಿಂದ ಸಂಪೂರ್ಣವಾಗಿ ಮುಕ್ತವಾಗುತ್ತ ಹೋಯಿತು. ಮುಕ್ತಛಂದಸ್ಸಿನ ಪ್ರತಿಪಾದಕರಲ್ಲಿ ಒಬ್ಬನಾದ ಎಲಿಯೆಟ್‌ಗೇ ಇದೊಂದು ಮುಜುಗರದ ಸಂಗತಿಯಾಗಿ, ಮುಕ್ತಛಂದಸ್ಸೆಂದರೆ ಸ್ವಚ್ಛಂದವಲ್ಲ ಎಂದು ಅವನು ಎಚ್ಚರಿಸಬೇಕಾಯಿತು. ಆದರೆ ಪೂರ್ಣ ಸ್ವಾತಂತ್ರ್ಯದತ್ತ ದಾಪುಗಾಲಿಡುತ್ತಿದ್ದ ಆಧುನಿಕತೆ ಈ ಎಚ್ಚರಿಕೆಯತ್ತ ಗಮನವೀಯುವ ಸ್ಥಿತಿಯಲ್ಲಿ ಇರಲಿಲ್ಲ. ಆದ್ದರಿಂದ ಕವಿತೆ ಹೆಚ್ಚೆಚ್ಚು ಗದ್ಯಮಯವಾಗುತ್ತ ಅದನ್ನು ಬಿಗಿಯುವ ನಿಯಂತ್ರಣವಿಲ್ಲದೆ ತನ್ನ ಶಕ್ತಿಯನ್ನು ಕಳೆದುಕೊಳ್ಳಲು ಸುರುಮಾಡಿತು. ಆರಂಭದ ನಾವೀನ್ಯತೆ ಮುಗಿದಾಗ ಮುಕ್ತಛಂದಸ್ಸಿನ ಸಾಧ್ಯತೆಯೂ ಮುಗಿದಂತೆ ಎನಿಸತೊಡಗಿತು. ಮೂರನೆಯದಾಗಿ ಆಧುನಿಕತೆ ಒಡೆಯುವುದರಲ್ಲಿ ತೋರಿಸಿದ ಆಸಕ್ತಿಯನ್ನು ಕಟ್ಟುವುದರಲ್ಲಿ ತೋರಿಸಲಿಲ್ಲ. ಸಕಲ ಪರಂಪರಾಗತ ಆಚರಣೆಗಳನ್ನೂ ಅವು ಭರಿಸುವ ಮೌಲ್ಯಗಳನ್ನೂ ತನಿಖೆಗೊಳಪಡಿಸುವುದೇ ಆಧುನಿಕತೆಯ ಈ ಮೂರನೆಯ ವಾಮನಕ್ರಮ. ಆದ್ದರಿಂದ ವ್ಯಂಗ್ಯ ಕಟಕಿ ವಿಕ್ಷಿಪ್ತತೆಗಳಿಲ್ಲದೆ ಕಾವ್ಯವೇ ಇಲ್ಲ ಎನ್ನುವಂತಾಯಿತು. ಇಂದು ಎಲ್ಲಾ ಮೌಲ್ಯಗಳೂ ಪ್ರಶ್ನೆಗೊಳಗಾಗಿರುವುದರಿಂದ ಮಿಲನ್ ಕುಂದೇರಾ ಹೇಳುವಂಥ unbearable lightness of being ಅರ್ಥಾತ್ ‘ಇರವಿನ ಅಸಹನೀಯ ಲಾಘವ’ಕ್ಕೆ ಒಳಗಾಗಿದ್ದೇವೆ. ನಮ್ಮನ್ನು ಒಂದೆಡೆ ಇರಿಸಿಕೊಳ್ಳುವ ಗುರುತ್ವಾಕರ್ಷಣ ಶಕ್ತಿಯೇ ಇಲ್ಲದಾಗಿದೆ. ಆದ್ದರಿಂದ ಯಾವ ಕ್ರಿಯಾಶಕ್ತಿಗೋಸ್ಕರ ನಾವು ಆಧುನಿಕತೆಯನ್ನು ಆಹ್ವಾನಿಸಿದೆವೋ ಆ ಕ್ರಿಯಾಶಕ್ತಿಯೇ ಅಸಾಧ್ಯವಾಗಿಬಿಟ್ಟಿದೆ.

ಕುಸಿದು ಕುಳಿತ ಇಂದಿನ ಆಧುನಿಕ ಕಾವ್ಯಸಂದರ್ಭದಲ್ಲಿ ಎಚ್.ಎಸ್.ವಿ. ಅವರ ಯತ್ನಗಳು ಹೊಸ ಆಶಾಕಿರಣವನ್ನು ತೋರುವಂತೆ ಕಂಡರೆ ಆಶ್ಚರ್ಯವಿಲ್ಲ. ಯಾಕೆಂದರೆ ಎಚ್.ಎಸ್.ವಿ. ಆಧುನಿಕತೆಯ ಹರಿಕಾರನಾದ ನವ್ಯಸಾಹಿತ್ಯದ ಪ್ರಾದುರ್ಭಾವ ಕಾಲದಲ್ಲಿ ತಮ್ಮ ಕಾವ್ಯಜೀವನವನ್ನು ಆರಂಭಿಸಿದ್ದರೂ ಅವರೆಂದೂ ಸಂಪೂರ್ಣವಾಗಿ ಅದರಲ್ಲಿ ತಮ್ಮನ್ನು ತೊಡಗಿಸಿಕೊಂಡವರಲ್ಲ. ವಾಸ್ತವದಲ್ಲಿ ನವ್ಯಕಾವ್ಯವನ್ನು ಸಾಕಷ್ಟು ಗುಮಾನಿಯಿಂದಲೇ ಅವರು ಕಂಡವರು. ಪರಂಪರೆಯಿಂದ ಭಗ್ನಗೊಳ್ಳುವುದಕ್ಕಿಂತ ಅದರ ಜತೆಗಿನ ಅನುಸಂಧಾನವೇ ಅವರಿಗೆ ಹೆಚ್ಚು ಪ್ರಿಯವಾದ ಮಾರ್ಗವಾಗಿತ್ತು.

ಹೀಗೆ ಆಧುನಿಕ ಕಾವ್ಯದ ಏರಿಳಿತದ ಉದ್ದಕ್ಕೂ ಪರಂಪರೆಯ ಸಂಬಂಧವನ್ನು ಕಾಯ್ದುಕೊಳ್ಳುವ ಪ್ರಿಯ ಕಾಯಕವನ್ನು ನಿರ್ವಹಿಸುತ್ತ ಬಂದಿರುವ ಎಚ್.ಎಸ್.ವಿ. ಕನ್ನಡ ಕಾವ್ಯಧಾತುವಿಗೆ ಅಂಟಿಕೊಂಡಿರುವ ಆತ್ಮೀಯ ಕವಿ.

ಈ ಅನುಸಂಧಾನದ ಒಂದು ಎಳೆಯೆಂದರೆ ಛಂದಸ್ಸಿನ ಕುರಿತು ಅವರಿಗಿರುವ ಮೋಹ. ನಿಜ, ಇಂದು ನಾವು ಹಳೆಯ ಕಂದ ವೃತ್ತಗಳಲ್ಲಿ ಬರೆಯುವುದು ಸಾಧ್ಯವಿಲ್ಲ; ಬರೆದರೆ ಅದು ಹಳೆಯ ಕಾಲಕ್ಕೆ ಸೇರುತ್ತದಲ್ಲದೆ ಇಂದಿನ ಕಾಲಕ್ಕಲ್ಲ. ಕವಿಗೆ ಪರಂಪರೆಯ ಜತೆ ಅನುಸಂಧಾನ ಅಗತ್ಯವಾಗುವಂತೆ ತನ್ನ ಕಾಲದ ಜತೆಗಿನ ಸಂಬಂಧವೂ ಅಷ್ಟೇ ಮುಖ್ಯವಾಗುತ್ತದೆ. ಈ ತೂಗುಯ್ಯಾಲೆಯನ್ನು ಎಚ್.ಎಸ್.ವಿ. ಸಮರ್‍ಥವಾಗಿ ನಿಭಾಯಿಸಿಕೊಂಡು ಬಂದಿದ್ದಾರೆ. ಅವರು ಛಂದೋಬದ್ಧವಾಗಿ ಬರೆಯದೆ ಇದ್ದರೂ, ಛಂದಸ್ಸನ್ನು ಧಿಕ್ಕರಿಸಿಯೂ ಬರೆದಿಲ್ಲ. ಪ್ರಾಸವನ್ನು ಹಿತಮಿತವಾಗಿ ಉಪಯೋಗಿಸುತ್ತಾರೆ. ಒಂದು ರೀತಿಯ ಲಯಬದ್ಧತೆ ಅವರ ಎಲ್ಲಾ ಕವಿತೆಗಳಲ್ಲೂ ಕಾಣಿಸುತ್ತದೆ. ಉದಾಹರಣೆಗೆ, ‘ಉತ್ತರಾಯಣ’ದ ಈ ಕೆಲವು ಸಾಲುಗಳು:

ಕಣ್ಣಿದೆ: ಕಾಣಿಸುತ್ತಿಲ್ಲ. ಕಿವಿಯಿದೆ; ಕೇಳಿಸುತ್ತಿಲ್ಲ.
ನಾಲಗೆಯಿದೆ; ನುಡಿಯುತ್ತಿಲ್ಲ. ನೀನಿದ್ದೀಯ-ಇಲ್ಲದ ಹಾಗೆ.
ಕ್ರಿಯಾಹೀನ ಕಾರ್ಯಾವಸ್ಥೆಯ ಮುಚ್ಚಿಟ್ಟ ಸಂಪುಟವೇ…
ನೀನು ತೆರೆದ ಕಣ್ಣಿಂದ ಮತ್ತೆ ನೋಡಬಹುದೆಂದು ಕಾಯುತ್ತಿರುವೆ.

ಎಚ್.ಎಸ್.ವಿ.ಅವರ ಕವಿತೆಗಳು ಆರಂಭದಿಂದಲೂ ಸಾರ್ವತ್ರಿಕವಾಗಿ ಸ್ವೀಕೃತ ಆಗಿರುವುದಕ್ಕೆ ಕಾರಣವೇನೆನ್ನುವುದನ್ನೂ ವಿಚಾರಿಸಬಹುದು. ಆಧುನಿಕರಾಗಿದ್ದೂ ಅವರು ಸ್ವೀಕೃತ ಮೌಲ್ಯಗಳ ಪರಿಧಿಯೊಳಗೇ ಕಾವ್ಯರಚನೆ ಮಾಡುವವರು ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ. ಆದ್ದರಿಂದಲೇ ಅವರ ರಾಮನ ಚಿತ್ರಣವಾಗಲಿ ಕೃಷ್ಣನ ಚಿತ್ರಣವಾಗಲಿ ಸಮಾಜದಲ್ಲಿ ರೂಪ ಪಡೆದ ಕಲ್ಪಿತ ಪ್ರತಿಮೆಗಳನ್ನು ಭಂಜಿಸುವುದಿಲ್ಲ; ಹೊರತು ಅವನ್ನು ಮರುಚಲಾವಣೆಗೆ ತರುತ್ತವೆ. ರಾಮ ಇನ್ನೂ ಸಾಂಸಾರಿಕನಾದ ‘ಮರ್ಯಾದಾಪುರುಷೋತ್ತಮ’ನೇ; ಕೃಷ್ಣ ಇನ್ನೂ ರಾಸಲೀಲೆಯ ‘ರಾಧಾಕೃಷ್ಣ’ನೇ. ಈ ದೇವರುಗಳನ್ನು ಭಾರತೀಯ ಸಮಾಜ ಹೇಗೆ ಡೊಮೆಸ್ಟಿಕೇಟ್ ಮಾಡಿಕೊಂಡಿತು ನೋಡಿ! ಸೀತೆಯನ್ನು ಪರಿತ್ಯಜಿಸಿಯೂ ಶ್ರೀರಾಮ ಗೃಹಸ್ಥನೇ; ಅನೇಕ ಹೆಂಡಿರಿದ್ದೂ ರಾಧೆಯೆಂಬ ವಿವಾಹಿತೆಯ ಜತೆ ಸಂಬಂಧ ಬೆಳೆಸಿದ ಶ್ರೀಕೃಷ್ಣನೂ ಪೂಜ್ಯನೇ. ಈ ಎರಡೂ ದೇವರುಗಳ ಕಾಲ ಬೇರೆ, ಯುಗಧರ್ಮಗಳು ಬೇರೆ. ಇಂದು ನಾವು ಅವರ ವರ್ತನೆಗಳನ್ನು ನಮ್ಮ ಯುಗಕ್ಕೆ ಪಳಗಿಸಿಕೊಂಡಿದ್ದೇವೆ. ಈ ನಿಟ್ಟಿನಲ್ಲಿ ಎಚ್.ಎಸ್.ವಿ. ಅವರದು ಕೀರ್ತನಕಾರರ ಮಾರ್ಗ, ವಚನಕಾರರದ್ದಲ್ಲ. ವಚನಕಾರರು
ಆಧುನಿಕರಂತೆ ಓದುಗರನ್ನು ಚಕಿತಗೊಳಿಸುತ್ತಾರೆ, ತಂತಮ್ಮ ಇಷ್ಟದೈವಗಳೊಂದಿಗಿನ ಅವರ ಸಂಬಂಧಗಳು ಯಾವಾಗಲೂ ಸಮಸ್ಯಾತ್ಮಕವೇ; ಕೀರ್ತನಕಾರರು ದೇವರುಗಳನ್ನು ಬಯ್ದಾಗಲೂ ಅದು ಪೀತಿಯ ತರಾಟೆ ಮಾತ್ರವೇ ಆಗಿರುತ್ತದೆ. ಅವರು ಸಂಸಾರವನ್ನು ತೊರೆದಾಗಲೂ ಸಂಸಾರ ಅವರನ್ನು ತೊರೆದಿರುವುದಿಲ್ಲ. ಎಚ್.ಎಸ್.ವಿ. ಕೂಡ ಮೂಲತಃ ಸಾಂಸಾರಿಕ ಕವಿ. ಅವರು ತಮ್ಮ ಪತ್ನಿಯ ಸಾವಿನ ಕುರಿತಾಗಿ ಬರೆದಾಗಲೂ ಕೂಡಾ ಪ್ರತಿಪಾದಿಸುವುದು ಸಾಂಸಾರಿಕ ಮೌಲ್ಕಗಳನ್ನೇ.

ಹಾಗಿದ್ದರೆ ಎಚ್.ಎಸ್.ವಿ.ಯ ಆಧುನಿಕತೆಯನ್ನು ಎಲ್ಲಿ ನಾವು ಕಾಣಬೇಕು? ಮುಖ್ಯವಾಗಿ ಅವರು ಉಪಯೋಗಿಸುವ ಶೈಲಿಯಲ್ಲಿ: ಶಿಷ್ಟ ಪದಗಳ ಜತೆಗೇ ಆಡುನುಡಿಗಳನ್ನೂ ಅವರು ಹಿತಮಿತವಾಗಿ ಬಳಸುತ್ತಾರೆ. ಇದರಿಂದ ಕಾವ್ಯಗಾಂಭೀರ್ಯಕ್ಕೆ ಕೆಡುಕಾಗದಂತೆ ಅದನ್ನು ಆಧುನಿಕವೂ ಆಗಿಸುವುದು ಅವರಿಗೆ ಸಾಧ್ಯವಾಗುತ್ತದೆ. ಇನ್ನೊಂದು ರೀತಿಯಿಂದ ಅವರು ಹೊಸೆಯುವ ರೂಪಕಗಳೂ ಜನಸಾಮಾನ್ಯರ ಬದುಕಿನಿಂದಲೇ ಎತ್ತಿಕೊಂಡಂಥವು. ಉದಾಹರಣೆಗೆ ಶ್ರೀರಾಮನ ಕೌಟಿಂಬಿಕತೆಗೆ ಇಲ್ಲಿ ಒದಗಿರುವುದು ಜನಮನದಲ್ಲಿರುವ ರಾಮಪರಿವಾರದ ಕ್ಯಾಲೆಂಡರ್ ಚಿತ್ರ; ಆದರೆ ಎಚ್.ಎಸ್.ವಿ. ಇದನ್ನು ಗ್ರೂಪ್ ಫೋಟೋ ಹಿಡಿಯುವ ಛಾಯಾಚಿತ್ರಕಾರನ ರೂಪಕದಿಂದ ‘ಸೆರೆಹಿಡಿ’ಯುತ್ತಾರೆ! ಇಂಥ ಕವಿತೆ ಕಟ್ಟುವ ರೀತಿ ಕೌಶಲ್ಯವೂ ಹೌದು; ಜತೆಗೇ ಅದು ಮಡಿವಂತಿಕೆಯಿಲ್ಲದ ಸ್ವೀಕರಣ ಸಂವೇದನೆ (inclusive sensibility)ಗೆ ಸಾಕ್ಷಿಯೂ ಆಗುತ್ತದೆ.

ಎಚ್.ಎಸ್.ವಿ.ಯವರ ಸದ್ಯದ ಕವಿತೆಗಳ ಮುಂದೆ ನವ್ಯ, ನವ್ಯೋತ್ತರ, ವಸಾಹತೋತ್ತರ ಮುಂತಾದ ಪದಗಳು ಆಭಾಸವಾಗಿ ತೋರುತ್ತವೆ. ನನಗೆ ಅನಂತಮೂರ್ತಿಯವರ ‘ಆತ್ಮಸಿದ್ಧಿ’ಯ ಮಾತಿನ ಜತೆಗೆ ನೆನಪಾಗುವುದು ‘ಮಾಗುವುದೊಂದೇ’ (ripness is all) ಎಂಬ ಶೇಕ್‌ಸ್ಪಿಯರ್‌ನ ವಾಕ್ಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶೋಕ ಗೀತೆ
Next post ತೆರಿಗೆ

ಸಣ್ಣ ಕತೆ

 • ಇರುವುದೆಲ್ಲವ ಬಿಟ್ಟು

  ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

 • ಕಳಕೊಂಡವನು

  ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

 • ನಾಗನ ವರಿಸಿದ ಬಿಂಬಾಲಿ…

  ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

 • ಎದಗೆ ಬಿದ್ದ ಕತೆ

  ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

 • ಸಂಶೋಧನೆ

  ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

cheap jordans|wholesale air max|wholesale jordans|wholesale jewelry|wholesale jerseys