Home / ಲೇಖನ / ಇತರೆ / ಸಣ್ಣ ಸಂಗತಿ

ಸಣ್ಣ ಸಂಗತಿ

ಪ್ರಿಯ ಸಖಿ,
ಮೊನ್ನೆ ಕೆ. ಎಸ್. ನರಸಿಂಹಸ್ವಾಮಿಗಳ ‘ಸಣ್ಣ ಸಂಗತಿ’ ಎಂಬ ಒಂದು ಸುನೀತ (ಸಾನೆಟ್)ವನ್ನು ಓದುತ್ತಿದ್ದೆ.. ಕವನದ ಹೆಸರೇ ಸೂಚಿಸುವಂತೆ ಕವಿ ಅಲ್ಲಿ ಹಿಡಿದಿಟ್ಟ ಚಿತ್ರ ಅತ್ಯಂತ ಸಣ್ಣ ಸಂಗತಿ. ಆದರೆ ಅದರಲ್ಲಿರುವ ಧ್ವನಿ ಮಾತ್ರ ಮಹತ್ತರ ವಾದುದು. ಕವಿ ಚಿತ್ರಿಸಿರುವ ಆ ಸಣ್ಣ ಸಂಗತಿಯಾದರೋ ಇಷ್ಟೆ ಸೋನೆ ಮಳೆ ಹಿಡಿದ ನಡುರಾತ್ರಿ. ಇತ್ತ ಮನೆಯೊಳಗೆ ಪುಟ್ಟ ಮಗುವೊಂದು ಮಂಚದ ಬಳಿಯ ತೊಟ್ಟಿಲಲ್ಲಿ ಅರ್ಧ ಕಣ್ಣು ಮುಚ್ಚಿ ಮಲಗಿದೆ. ಅದೂ ಬರಿಮೈಲಿ. ನಿದ್ದೆಗಣ್ಣಿನಲ್ಲೇ ಪಕ್ಕದಲ್ಲಿರುವ ತಾಯಿ ಕೈನೀಡಿ ಹೊದಿಕೆಯನ್ನು ಸರಿಪಡಿಸಿದ್ದಾಳೆ. ಆದರೆ ಮಗು
ಮತ್ತೆ ಹೊದಿಕೆಯನ್ನು ಕಿತ್ತೆಸೆದು ಬರಿ ಮೈಲಿ ಮಲಗುತ್ತದೆ. ಸುನೀತದ ಕೊನೆಯ ಎರಡು ಸಾಲು ಹೀಗಿದೆ.

ನಿದ್ದೆ ಎಚ್ಚರಗಳಲಿ ಪೊರೆವ ಕೈ ದುಡಿಯುತಿದೆ
ಅದನು ಲೆಕ್ಕಿಸದೆ ಮಗು ಹೊದಿಕೆಯನು ಒದೆಯುತಿದೆ

ಈ ಎರಡು ಸಾಲುಗಳಲ್ಲಿ ಎಂತಹಾ ಅರ್ಥ ತುಂಬಿದೆ ನೋಡಿದೆಯಾ ಸಖಿ. ತಾಯಿ-ಮಗುವಿನ ಸಂಬಂಧದಲ್ಲಾಗಲಿ ಸೃಷ್ಟಿಯೊಂದಿಗಿನ ಮಾನವನ
ಸಂಬಂಧದಲ್ಲಾಗಲಿ ತಾಯಿಯೂ ಸೃಷ್ಟಿಯೂ ಉನ್ನತವಾದ ಸ್ಥಾನದಲ್ಲಿ ನಿಂತು ಮಗುವೂ ಮಾನವನೂ ಅರಿತೂ ಮಾಡಿದ ತಪ್ಪುಗಳನ್ನು ಕ್ಷಮಿಸುತ್ತಲೇ ಇರುತ್ತಾರೆ. ಆದರೆ ಆ ಕ್ಷಮೆಗೆ ಬೆಲೆ ಕೊಡದ ಮಗು ಮಾನವ ತನ್ನ ಅಹಂಕಾರದಿಂದ, ತಾ ಮಾಡಿದ್ದೇ ಸರಿಯೆಂಬ ಗರ್ವದಿಂದ ಅದೇ ತಪ್ಪುಗಳನ್ನು ಮತ್ತೆ ಮತ್ತೆ ಮಾಡುತ್ತಲೇ ಇರುತ್ತಾನೆ. ಬಹುಶಃ ತಾಯಿಯೂ ಸೃಷ್ಟಿಯೂ ತೋರುವ ಕ್ಷಮೆಗೆ, ಮಗುವಿನ-ಮಾನವನ ತಪ್ಪುಗಳಿಗೆ ಕೊನೆಯೆಂಬುದೇ ಇಲ್ಲ! ಆದರೆ ತಾಯಿಯ ಸೃಷ್ಟಿಯ ಅಖಂಡ ಕ್ಷಮೆಗೂ ಮಿತಿಯೆಂಬುದೊಂದಿದೆ ಎಂದು ಅನ್ನಿಸುವುದಿಲ್ಲವೇ?  ಆ ಕ್ಷಮೆಯನ್ನು ಕಳೆದುಕೊಂಡ ಕೊನೆಯ ದಿನ ಬಹುಶಃ ಇಲ್ಲಿ ಏನೂ ಉಳಿದಿರುವುದಿಲ್ಲ! ಅಂತೂ ಮಾಡುವ ಅಂತಹಾ ಕ್ಷಮೆ ಇಲ್ಲದ ತಪ್ಪನ್ನು ನಾವ್ಯಾರೂ ಮಾಡದಂತೆ ಸಮಯ ಮೀರುವ ಮೊದಲೇ ಎಚ್ಚೆತ್ತುಕೊಳ್ಳಬೇಕಲ್ಲವೇ ಸಖಿ?

ಪೊರೆವ ಕೈಗಳ ದುಡಿಮೆಯನ್ನು ಲೆಕ್ಕಿಸದ ಮಗು ಹೊದಿಕೆಯನು ಮತ್ತೆ ಮತ್ತೆ ಒದೆದು ಮುಂದೊಮ್ಮೆ ಪೊರೆವ ಕೈಗಳ ಪ್ರೇಮವನ್ನೇ ಕಳೆದುಕೊಳ್ಳಬಾರದಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...