ರಾವಣಾಂತರಂಗ – ೧೫

ರಾವಣಾಂತರಂಗ – ೧೫

ಮಾಯಾಜಿಂಕೆಯ ಮೋಹ

ವಿಭೀಷಣ ಹೋಗುತ್ತಿದ್ದಾನೆ. ಎಲ್ಲವನ್ನು ತೊರೆದು “ನಿಲ್ಲು ವಿಭೀಷಣ ನಿಲ್ಲು ನನ್ನನ್ನು ಬಿಟ್ಟು ಹೋಗಬೇಡ ಒಳಗಿಂದ ಹೃದಯ ಚೀರುತ್ತಿತ್ತು. ಆದರೆ ಮಾಯಾ ಮನಸ್ಸು ಸಮ್ಮತಿಸಲಿಲ್ಲ. ಬಾಯಿ ಬಿಡಲಿಲ್ಲ” ಹೋಗು ವಿಭೀಷಣ ಹೋಗು ಶ್ರೀರಾಮನ ಕೃಪಾಕಟಾಕ್ಷ ನಿನ್ನ ಮೇಲೆ ಬೀಳುತ್ತದೆ. ನನಗೆ ಗೊತ್ತು ಲಂಕೆಯ ಮುಂದಿನ ಸಾರ್ವಭೌಮ ನೀನೆಂದು, ನನ್ನ ಅವಸಾನ ಕಾಲ ಪ್ರಾಪ್ತವಾಯಿತು. “ವಿನಾಶ ಕಾಲೇ ವಿಪರೀತ ಬುದ್ಧಿ ಎನ್ನುವಂತೆ ನನಗೀಗ ಕೆಟ್ಟಕಾಲ ಆರಂಭವಾಗಿದೆ. ನನ್ನ ಸಾವಿನಲ್ಲೇ ಪರ್‍ಯಾವಸಾನ! ನನಗೇನು ಪಾಪ ಪುಣ್ಯದ ಅರಿವಿಲ್ಲವೆಂದುಕೊಂಡೆಯಾ, ಇದ್ದು ನಾನೇಕೆ ಹೀಗೆ ವರ್ತಿಸುತ್ತಿದ್ದೇನೆಂದು ನನಗೆ ಗೊತ್ತಿಲ್ಲ. ನಾನು ಎಲ್ಲವನ್ನು ಕಾಲಕ್ಕೆ ಬಿಟ್ಟಿದ್ದೇನೆ. ಅದೇ ನಿರ್ಧರಿಸಲಿ, ಹೋಗು ತಮ್ಮಾ ಹೋಗು ಸುಖವಾಗಿ ನೂರ್‍ಕಾಲ ಬಾಳು.”

ಅಂದು ಶೂರ್ಪನಖಿಯು ಬಂದು ಚುಚ್ಚು ಮಾತುಗಳನ್ನಾಡಿ ನನ್ನ ಕೆರಳಿಸದೇ ಇದ್ದಿದ್ದರೆ ಈ ಅನಾಹುತಗಳೇ ನಡೆಯುತ್ತಿರಲಿಲ್ಲ. ನನ್ನ ಗಂಡಸುತನಕ್ಕೆ ಧಿಕ್ಕಾರ ಹಾಕಿದಳಲ್ಲ. “ಅಗ್ರಜಾ ಎಷ್ಟೋ ಜನ ಸುಂದರ ಸ್ತ್ರೀಯರನ್ನು ನೀನು ನೋಡಿರಬಹುದು, ತಂದಿರಬಹುದು, ಆದರೆ ಸೀತಾ ದೇವಿಯಂತಹ ರತ್ನ ನಿನ್ನ ಅರಮನೆಯಲ್ಲಿದ್ದರೆ ಭೂಷಣ! ಅಂದು ಸೀತಾ ಸ್ವಯಂವರದಲ್ಲಿ ಗೆದ್ದು ತರಲಾಗಲಿಲ್ಲ. ಈಗ ಸಮೀಪದಲ್ಲೇ ಸೀತೆಯಿದ್ದಾಳೆ. ಅವಳನ್ನು ಕದ್ದಾದರೂ ತಂದು ನಿನ್ನ ಮಾನ ಉಳಿಸಿಕೊ. ಯುದ್ಧವೆಂದು ಎದುರು ನಿಂತು ಹೋರಾಡಿ ನಿನ್ನ ಶಕ್ತಿಯನ್ನು ವ್ಯರ್ಥಮಾಡಿಕೊಳ್ಳಬೇಡ, ಯುಕ್ತಿಯಿಂದ ಕಾರ್ಯ ಸಾಧಿಸಿಕೋ” ನನಗಾದರೂ ಆಕ್ಷಣ ಅವಳ ಮಾತು ಸರಿಯೆಂದು ತೋರಿತು. ಮಾರೀಚನನ್ನು ಕಂಡು ವಿಚಾರ ಮಾಡೋಣವೆಂದು ಅವನ ಮನೆಗೆ ಹೋದರೆ “ರಾವಣೇಶ್ವರಾ ವಿಶ್ವಾಮಿತ್ರರ ಯಾಗಕಾಲದಲ್ಲಿ ಶ್ರೀರಾಮಚಂದ್ರನ ಪರಾಕ್ರಮವನ್ನು ಕಣ್ಣಾರೆ ನೋಡಿ ಅನುಭವಿಸಿದ್ದೇನೆ. ಒಂದೇ ಬಾಣದ ಹೊಡೆತಕ್ಕೆ ಉತ್ತರದಿಂದ ದಕ್ಷಿಣ ದೇಶಕ್ಕೆ ಬಿದ್ದೆನು. ಪ್ರಾಣ ಉಳಿದಿದ್ದೇ ಹೆಚ್ಚು. ನಿನ್ನ ಕೈಮುಗಿದು ಬೇಡಿಕೊಳ್ಳುತ್ತೇನೆ. ಸೀತಾಪಹರಣದಂತಹ ದುಷ್ಪ ಕಾರ್ಯವನ್ನು ಮಾಡಬೇಡವೆಂದು ಪರಿಪರಿಯಾಗಿ ಬೇಡಿಕೊಂಡನು. “ನಾನಾದರೂ ಸುಮ್ಮನಿರದೆ ಅವನ ಅಂಜುಬುರುಕತನವನ್ನು ಬಣ್ಣಿಸಿ ನನ್ನ ಶೌರ್ಯ ಪರಾಕ್ರಮದ ಮೇಲೆ ನಂಬಿಕೆಯಿಟ್ಟು ಸಹಾಯ ಮಾಡಬೇಕೆಂದು ಮನವೊಲಿಸಿದೆ. ಮಾರೀಚನಾದರೋ ನನ್ನ ಉಪಕೃತಕ್ಕೆ ಕಟ್ಟುಬಿದ್ದು ಮನಸಿಲ್ಲದಿದ್ದರೂ ಒಪ್ಪಿಕೊಂಡು ಸಿದ್ಧನಾದನು. ಇಬ್ಬರೂ ಮಾಯಾರೂಪದಿಂದ ಪಂಚವಟಿಯಲ್ಲಿದ್ದ ರಾಮನ ತಪೋವನಕ್ಕೆ ಇಳಿದೆವು. ದಾರಿಯಲ್ಲಿ ಬರುವಾಗ ಅಪಶಕುನಗಳ ಸರಮಾಲೆ! ಮಾರೀಚನಿಗೆ ಅರಿವಾಯಿತು. ಇಂದು ನಿನ್ನ ಕಥೆ ಮುಕ್ತಾಯವೆಂದು “ಅಳಿಯ ರಾವಣೇಶ್ವರಾ! ರಾಮಬಾಣಕ್ಕೆ ನಾನು ಬಲಿಯಾಗುವುದು ಖಂಡಿತ ನಿನಗೂ ಅಧೋಗತಿಗಿಳಿಯುವ ಕಾಲ ಸನ್ನಿಹಿತವಾಗುತ್ತಿದೆ. ನಾನು ಬಂಗಾರದ ಜಿಂಕೆಯಾಗಿ ಸೀತೆಯ ಮುಂದೆ ಸುಳಿದಾಡುತ್ತೇನೆ. ಅವಳ ಬಯಕೆಯಂತೆ ರಾಮಲಕ್ಷ್ಮಣರು ನನ್ನ ಹಿಂದೆ ಬರುತ್ತಾರೆ. ನೀನು ತಾಪಸಿಯ ವೇಷ ಧರಿಸಿ ಸೀತೆಯನ್ನು ಕದ್ದೊಯ್ಯಿ” ಎಂದು ಸುಂದರವಾದ ಬಂಗಾರದ ಜಿಂಕೆಯಾದನು. ಚಂಚಲವಾದ ಕಣ್ಣುಗಳು, ಹೊಳೆಯುವ ಹಲ್ಲುಗಳು, ಕಿರಿದಾದ ಕಿವಿಗಳು ಮೈಮೇಲೆ ದೃಷ್ಟಿ ಬೊಟ್ಟುಗಳುಳ್ಳ ಚಿಗರೆಯ ಮರಿಯ ರೂಪವನ್ನು ತಾಳಿ ಸರೋವರದಲ್ಲಿ ಮುಖ ತೊಳೆಯುತ್ತಿದ್ದ ಸೀತೆಯ ಕಣ್ಣಿಗೆ ಬಿದ್ದನು. ಬಂಗಾರದ ಜಿಂಕೆಯನ್ನು ನೋಡಿ ಜಾನಕಿಯು “ಇದೆಂತಹ ಮೃಗವು” ಎಂದು ಅದರ ಸೌಂದರ್ಯಕ್ಕೆ ಮೋಹಿತಳಾಗಿ ಶ್ರೀರಾಮನಿಗೆ ತಿಳಿಸಲಿಕ್ಕೆಂದು ಮೇಲೆ ಬಂದರೆ ಆ ಮಾಯಾಮೃಗವು ಅವಳ ಸಮೀಪಕ್ಕೆ ಬಂದಿತು. ಸೀತೆಯು ಹಿಡಿಯಲು ಹೋದರೆ ಕೈಗೆ ಸಿಕ್ಕಂತೆ ಮಾಡಿ ಆಟವಾಡಿಸಿತು. ಜಾನಕಿಗೆ ಅದರ ಚೆಲ್ಲಾಟ ಕಂಡು ವಿಶೇಷವಾದ ಪ್ರೀತಿ ಉಕ್ಕಿ ಬಂತು.

“ರಘುನಾಥ ಅಲ್ಲಿ ನೋಡಿ ಆ ಚಿನ್ನದ ಜಿಂಕೆಯನ್ನು ಹೇಗಾದರೂ ಮಾಡಿ ತಂದುಕೊಡಿ ನಾವು ಅರಣ್ಯದಲ್ಲಿರುವವರೆಗೆ ಅದು ನನ್ನ ಜೊತೆಯಾಗುವುದು ಅದರ ಒಡನಾಟದಲ್ಲಿ ದಿನಗಳು ಕಳೆದುದ್ದೇ ಗೊತ್ತಾಗುವುದಿಲ್ಲ. ಅಯೋಧ್ಯೆಗೆ ಹೋಗುವಾಗ ಅದನ್ನು ತೆಗೆದುಕೊಂಡು ಹೋಗೋಣಾ, ಎಲ್ಲಿಯಾದರೂ ಓಡಿ ಹೋದಿತು. ಬೇಗ ಹಿಡಿದು ತನ್ನಿ” ಸೀತೆಯ ಕಾತುರ ಆತುರ ಕಂಡು ರಾಮನಿಗೆ ನಗು ಬಂತು ಪಾಪ! ಒಂದು ದಿನವಾದರೂ, ಏನನ್ನು ಬಾಯ್ದಿಟ್ಟು ಕೇಳಿದವಳಲ್ಲ. ರಾಜಕುಮಾರಿ! ಅರಮನೆಯಲ್ಲಿ ಸುಖದ ಸುಪ್ಪತ್ತಿಗೆಯಲ್ಲಿರಬೇಕಾದ ಕೋಮಲಾಂಗಿ ನನ್ನಿಂದಾಗಿ ಈ ಕಾಡು ಮೇಡು ಅಲೆಯಬೇಕಾಗಿ ಬಂತು. ಇದೊಂದು ಆಸೆಯನ್ನು ನಡೆಸೋಣಾ” ಎಂದು ಬಿಲ್ಲು ಬಾಣ ಹಿಡಿದು ಹೊರ ಬಂದನು. ಲಕ್ಷ್ಮಣನು ಅಡ್ಡ ಬಂದು “ಅಣ್ಣಾ ನನಗೇಕೋ ಆ ಜಿಂಕೆ ನಿಜವಾದುದ್ದಲ್ಲ ಮಾಯಾಮೃಗವಿರಬೇಕೆಂದು ತೋರುತ್ತಿದೆ” “ಲಕ್ಷಣಾ ಅದು ಬಂಗಾರದ್ದಾಗಿದ್ದರೆ ಹಿಡಿದು ತರುವೆ ಮಾಯಾಮೃಗವಾಗಿದ್ದರೆ ಕೊಂದು ತರುವೆನು. ಹಣೆಯಲ್ಲಿ ಬ್ರಹ್ಮ ಬರೆದ ಬರಹವನ್ನು ತಪ್ಪಿಸಲಿಕ್ಕಾಗದು ನಾನು ಬರುವವರೆಗೂ ಜಾನಕಿಯನ್ನು ಜತನದಿಂದ ಕಾಪಾಡು” ಎಂದು ಹೇಳಿ ಜಿಂಕೆಯನ್ನು ಹಿಂಬಾಲಿಸಿದನು. ಜಿಂಕೆ ಘೋರವಾದ ಅರಣ್ಯವನ್ನು ಹೊಕ್ಕಿತು. ಮಾಯಾತೀತನಾದ ರಾಮನು ಮಾಯಾಮೃಗವನ್ನು ಬೆನ್ನಟ್ಟಿದನು. ಕೊನೆಗೆ ಓಡಿ ಓಡಿ ಆಯಾಸವಾದ ಜಿಂಕೆ ನಿಂತಿತು. ಜಿಂಕೆಯ ವೇಷದಲ್ಲಿದ್ದ ಮಾರೀಚನಿಗೆ ಇನ್ನು ನಾನು ರಾಮಬಾಣಕ್ಕೆ ಪ್ರಾಣ ಆಹುತಿಯಾಗುವುದೆಂದು ತಿಳಿದು ಶ್ರೀರಾಮನ ಮಂಗಳ ಮೂರ್ತಿಯನ್ನು ಭಕ್ತಿಯಿಂದ, ದೈನ್ಯದಿಂದ ನೋಡಿದನು. ನನ್ನ ಅನೇಕ ಜನ್ಮಗಳ ಪಾಪ ನಾಶವಾಯಿತು. ಮರಣಕಾಲದಲ್ಲಿ ಶ್ರೀರಾಮಬಾಣದಿಂದ ಮುಕ್ತಿಯನ್ನು ಪಡೆಯುವ ನಾನೇ ಧನ್ಯನು “ರಾಮರಾಮ” ಎಂದು ಉಚ್ಚರಿಸುವಷ್ಟರಲ್ಲಿ ರಾಮನ ಬಾಣ ಮಾರೀಚನ ಕೊರಳನ್ನು ಕತ್ತರಿಸಿತು. ರಾವಣನಿಗೆ ಮಾತುಕೊಟ್ಟಂತೆ ಸಾಯುವಾಗ ನಿಜರೂಪ ಧರಿಸಿ “ಹಾ! ಲಕ್ಷ್ಮಣ ಹಾ! ಸೀತಾ” ಎಂದು ಕೂಗಿ ಕೆಳಗೆ ಬಿದ್ದು ಪ್ರಾಣ ಬಿಟ್ಟನು. ಇಲ್ಲಿಗೆ ಮಾರೀಚನ ಕಥೆ ಮುಕ್ತಾಯವಾಯಿತು. ಮಾರೀಚನ ಧ್ವನಿ ಕೇಳಿ ಸೀತೆಯು ಲಕ್ಷ್ಮಣನನ್ನು ಕುರಿತು “ಲಕ್ಷ್ಮಣಾ ಶ್ರೀರಾಮನ ದನಿ ಕೇಳಿದೆಯಾ ಏನೋ ಆಘಾತವಾಗಿರಬೇಕು. ಬೇಗ ಓಡು ಅವನನ್ನು ರಕ್ಷಿಸು’ ಎಂದಳು. ಅದಕ್ಕೆ ಸೌಮಿತ್ರಿಯು “ತಾಯೇ ರಾಘವೇನೆಂದರೇ ಯಾರು? ಆತನು ಆದಿಪುರುಷ ಆತನಿಗೆ ಅಪತ್ತು ಒದಗಿದರೆ ಲೋಕಗಳು ಉಳಿಯುವುದೇ? ಸೂರ್ಯಚಂದ್ರರು ಬೆಳಗುವರೇ? ಇದೆಲ್ಲಾ ರಾಕ್ಷಸರ ಕುತಂತ್ರ ನನ್ನ ಮಾತನ್ನು ನಂಬಿ ಸುಮ್ಮನಿರಿ ಇನ್ನೇನು ಅಣ್ಣ ಬಂದುಬಿಡುತ್ತಾನೆ” “ಲಕ್ಷ್ಮಣಾ ನೀನಿಂತಹ ನಯವಂಚಕನೆಂದು ತಿಳಿದಿರಲಿಲ್ಲ. ನಿನ್ನದೆಲ್ಲಾ ಕಪಟ ಸ್ವಾಮಿ ಭಕ್ತಿ ನೀನೀಗಲೇ ನನ್ನ ಸ್ವಾಮಿಯನ್ನು ಕರೆ ತರದಿದ್ದರೆ ನಿನ್ನೆದುರಿಗೆ ಪ್ರಾಣವನ್ನು ಕಳೆದುಕೊಳ್ಳುತ್ತೇನೆ. ನನಗೆ ಗೊತ್ತು ನಿನಗೆ ನನ್ನ ಮೇಲಿನ ವ್ಯಾಮೋಹ ಅಣ್ಣ ಸತ್ತರೆ ಸಾಯಲಿ ಸೀತೆಯೊಂದಿಗೆ ಆರಾಮವಾಗಿ ಬದುಕುತ್ತೇನೆಂದು ಕನಸು ಕಟ್ಟಿಕೊಳ್ಳಬೇಡ, ರಾಮಚಂದ್ರನನ್ನುಳಿದು ಬೇರೆಯವರ ಕೈಗೆ ಸಿಗುವವಳಲ್ಲ ಈ ಜಾನಕಿ” ಎನ್ನಲು ಲಕ್ಷ್ಮಣನು ಎರಡು ಕಿವಿಗಳನ್ನು ಮುಚ್ಚಿಕೊಂಡು “ತಾಯೇ ನಿಷ್ಟೂರದ ಮಾತುಗಳಾಡಬೇಡ ಅರೆಗಳಿಗೆಯಲ್ಲಿ ಕರೆತರುವೆನು ದೇವಿ! ಅಡವಿಯಲ್ಲಿ ಸಂಚರಿಸುವ ರಕ್ಕಸರು ಮಾಯಾಮಂತ್ರದಲ್ಲಿ ನಿಸ್ಸಿಮರು ನೀವು ಮಾತ್ರ ಬಹಳ ಎಚ್ಚರಿಕೆಯಿಂದಿರಬೇಕು. ಇದೊ ನೋಡಿ ಬಾಗಿಲಿಗೆ ಅಡ್ಡವಾಗಿ ಈ ರೇಖೆಯನ್ನು ಎಳೆದಿದ್ದೇನೆ. ನೀವು ಇದನ್ನು ದಾಟಿ ಮುಂದೆ ಬರಬಾರದು” ಎಂದು ಕಟ್ಟಪ್ಪಣೆ ಮಾಡಿ ರಾಮನನ್ನು ಅರಸುತ್ತಾ ನಡೆದನು. ಲಕ್ಷ್ಮಣನು ಅತ್ತ ಹೋದಕೂಡಲೇ ನಾನು ಕಪಟಯತಿಯ ವೇಷವನ್ನು ಧರಿಸಿ ಪರ್ಣಕುಟೀರವನ್ನು ದಾಟುವಷ್ಟರಲ್ಲಿ ಲಕ್ಷ್ಮಣರೇಖೆ ಅಡ್ಡ ಬಂತು. ಕುಟೀರ ದೊಳಗೆ ಕಾಲಿಡಲಾಗಲಿಲ್ಲ. ಕೆಲಸ ಕೆಟ್ಟಿತೆಂದು ಅಲ್ಲಿಂದಲೇ ‘ಭವತಿ ಭಿಕ್ಷಾಂದೇಹಿ’ ಎಂದು ಕೂಗಿದೆ. ಪತಿಯ ವಿರಹದಿಂದ ಕಂಗೆಟ್ಟಿದ್ದ ಸೀತೆ ಒಳಗಿಂದ ಬಂದು ನನ್ನ ಕಂಡು “ಯತಿವರ್ಯ ಒಳಗೆ ಬನ್ನಿ. ನಾನು ನಿಮ್ಮ ಮಗಳಂತಿರುವೆನು, ಕುಳಿತುಕೊಳ್ಳಿ ನನ್ನ ತಂದೆಯಾದ ಜನಕರಾಜರನ್ನೇ ಕಂಡಾಂತಾಯಿತು.” ಅವಳ ಮಾತು ಶೂಲದಂತೆ ಚುಚ್ಚಿದವು “ಎಂತದ ಮನೋಹರ ಸೌಂದರ್ಯ” ಅವಳನ್ನು ಕಂಡರೆ ಬಯಕೆಗಳು ಸುಟ್ಟುಹೋಗುವುವು. ನನಗೊಬ್ಬ ಮಗಳಿರಬೇಕಾಗಿತ್ತು. ಇದ್ದಿದ್ದರೆ ನಾನಿಂತಹ ಕೆಟ್ಟ ಕಾರ್ಯಕ್ಕೆ ಕೈಹಾಕುತ್ತಿರಲಿಲ್ಲವೇನೋ” “ಎಲೈ ಚಂದ್ರಮುಖಿ ಪತಿಯಿಲ್ಲದ ಮನೆಗೆ ಪರಷುರುಷರು ಬರಬಾರದು, ನೋಡುವವರ ಕಣ್ಣಿಗೆ ಕೆಟ್ಟದಾಗುತ್ತದೆ. ನಿನ್ನ ಮನೆಯಲ್ಲಿರುವುದನ್ನು ನೀಡು ನಾನು ಬೇಗ ಹೋಗಬೇಕು.” ಸೀತೆ ಒಳಗೆ ಹೋಗಿ ಹಣ್ಣು ಹಂಪಲುಗಳನ್ನು ತಂದಳು. ‘ಯತಿವರ್ಯ ತೆಗೆದುಕೊಳ್ಳಿ ನಾನು ಈ ರೇಖೆಯನ್ನು ದಾಟಬಾರದೆಂದು ನನ್ನ ಮೈದುನ ಅಪ್ಪಣೆ ಮಾಡಿದ್ದಾನೆ. “ಏನೆಂದ ಮುನಿಗಳಿಗೆ ಅವಮಾನ ಮಾಡುವೆಯಾ ನಮ್ಮನ್ನು ಯಾರೆಂದುಕೊಂಡೆ? ಕ್ಷಣಾರ್ಧದಲ್ಲಿ ನಿನಗೆ ಶಾಪವನ್ನು ಕೊಡಬಲ್ಲೆ, ಅತಿಥಿ ಸತ್ಕಾರ ಮಾಡುವ ರೀತಿ ಇದೆಯೇನು? ನಾನು ಗೆರೆ ದಾಟಿ ಒಳಬರುವುದಿಲ್ಲ.”

ನನ್ನ ಕೋಪದ ಮಾತುಗಳಿಗೆ ಹೆದರಿದ ಸೀತೆ ರೇಖೆ ದಾಟಿ ಬಂದು ಫಲಗಳನ್ನು ಜೋಳಿಗೆಗೆ ಸುರಿದಳು ನಾನು ನಿಜ ರೂಪ ತಾಳಿ ಅಟ್ಟಹಾಸದಿಂದ ನಕ್ಕೆ ನನ್ನ ಹತ್ತು ಮುಖಗಳನ್ನು ನೋಡಿ ಗಿಡುಗನನ್ನು ಕಂಡ ಗಿಳಿಯಂತೆ ನಡುಗಿದಳು. ಸೀತೆಯ ಹೆರಳನ್ನು ಹಿಡಿದೆಳೆದು ರಥದಲ್ಲಿ ಹಾಕಿಕೊಂಡು ಹೊರಟೆನು. ಸೀತೆಯ ರೋಧನ ದಶದಿಕ್ಕುಗಳನ್ನು ತುಂಬಿತು. ಲಂಕೆಯ ಕಡೆಗೆ ವೇಗವಾಗಿ ಹೋಗುತ್ತಿರುವಾಗ ಸೀತೆಯ ಆರ್ತನಾದ ಕೇಳಿ ಜಟಾಯುವು ತನ್ನ ರೆಕ್ಕೆಗಳನ್ನು ಚಾಚಿ “ಎಲೈ ರಕ್ಕಸನೇ ಜಗದಂಬಿಕೆಯಾದ ಸೀತಾದೇವಿಯನ್ನು ಚೋರತನದಿಂದ ಒಯ್ಯುತ್ತಿರುವೆಯಾ? ನೀನು ಸಮುದ್ರದಲ್ಲಿ ಹೊಕ್ಕರೂ ನಿನ್ನನ್ನು ಕೊಲ್ಲದೆ ಬಿಡೆನು” ಎಂದು ಸೀತೆಯ ಎಡಗೈ ಹಿಡಿದು ನೆಲಕ್ಕೆ ಇಳಿಸಬೇಕೆನಿಸುವಷ್ಟರಲ್ಲಿ ಖಡ್ಗದಿಂದ ಜಟಾಯುವಿನ ರೆಕ್ಕೆಗಳೆರಡನ್ನು ಕತ್ತರಿಸಿದೆನು ಜಟಾಯವು ಆಕಾಶದಿಂದ ನೆಲಕ್ಕೆ ಬಿದ್ದನು. “ರಾವಣಾಸುರ ಪರಸ್ತ್ರೀಯರನ್ನು ಅಪಹರಿಸಿ ನಿನ್ನ ಸಾವನ್ನು ನೀನೇ ಕರೆಯುತ್ತಿದ್ದೀಯಾ ಹೋಗು ನಿನ್ನ ಕಾರ್ಯಕ್ಕೆ ತಕ್ಕ ಫಲವನ್ನು ಅನುಭವಿಸುವೆ” ಎಂದು ಕೂಗುತ್ತಿತ್ತು.

ನಾನು ಲಂಕೆಯನ್ನು ಸೇರಿ ಊರ ಹೊರಬಾಗಿಲಲ್ಲಿರುವ ಅಶೋಕವನದಲ್ಲಿ ಸೀತೆಯನ್ನಿಟ್ಟು ರಾಕ್ಷಸ ಸ್ತ್ರೀಯರನ್ನು ಕಾವಲು ಹಾಕಿ ಚೆನ್ನಾಗಿ ನೋಡಿಕೊಳ್ಳಿರೆಂದು ತಾಕೀತು ಮಾಡಿ ಅಂತಃಪುರಕ್ಕೆ ಧಾವಿಸಿದೆ. ಸುದ್ದಿ ಲಂಕೆಯನ್ನು ಸುತ್ತು ಹಾಕಿತು, ಅಣ್ಣನಾದ ರಾವಣನು ಮಾಡಿದ್ದು ಯೋಗ್ಯವಲ್ಲವೆಂದೂ ಸೀತಾಪಹರಣ ರಾಕ್ಷಸರ ವಂಶಕ್ಕೆ ಮೃತ್ಯುವೆಂದು ವಿಭೀಷಣನು ಖಂಡಿಸಿದನು. ಮಂಡೋದರಿಯು ಸೀತಾದೇವಿಯನ್ನು ಕಂಡು ಮಮ್ಮಲ ಮರುಗಿದಳು. ಅನ್ಯಾಯದ ಕೆಲಸವೆಂದು ಕಿಡಿಕಿಡಿಯಾದಳು. “ಯಾರು ಏನೇ ಅನ್ನಲಿ ನಾನು ಸರಿಯಾದ ಕೆಲಸವನ್ನು ಮಾಡಿರುವನೆಂದು ಎದೆ ತಟ್ಟಿಕೊಂಡೆ, ಆದರೂ ಒಮ್ಮೊಮ್ಮೆ ಗಂಡಸಿಗೆ ಯೋಗ್ಯವಾದ ಕೆಲಸ ಮಾಡಲಿಲ್ಲವೆಂದು ಮನಸ್ಸು ಚುಚ್ಚುತ್ತಿತ್ತು. ಯುದ್ಧಕ್ಕಾಗಿ ಹಾತೊರೆಯುತ್ತಿದ್ದವನು. ಧೀರನಾಗಿ ರಾಮಲಕ್ಷ್ಮಣರೊಡನೆ ಯುದ್ಧ ಮಾಡಿ ಸೀತೆಯನ್ನು ಗೆದ್ದು ತರದೆ ಕದ್ದುತಂದನಲ್ಲ. ಶೂರ್ಪನಖಿಯ ಮಾತು ಕೇಳಬಾರದಾಗಿತ್ತು. “ಸ್ತ್ರೀ ಬುದ್ಧಿ ಪ್ರಳಯಾಂತಕ” ಎನ್ನುವ ಮಾತು ಸುಳ್ಳಲ್ಲ. ಅಸೂಯೆಯಿಂದಲೋ ಪುತ್ರಶೋಕದಿಂದ ಪ್ರೇರೇಪಿತಳಾಗಿ ಕೆರಳಿದರೆ ನನ್ನ ಬುದ್ಧಿ ಎಲ್ಲಿ ಹೋಗಿತ್ತು. ಮಣ್ಣು ತಿನ್ನುವುದಕ್ಕೆ ಥೂ! ಇದೆಂದು ಕಳಂಕ ಶಾಶ್ವತವಾಗಿ ಉಳಿದು ಬಿಟ್ಟಿತು. ಹೋಗಲಿ ಈಗೇನು ಪ್ರಳಯವಾಗಿಲ್ಲ. ನಾನ್ಯಾಕೆ ಸಮುದ್ರದಾಟಿ ಯುದ್ಧ ಮಾಡಬೇಕು. ಸೀತೆಗಾದರೂ ಅವರು ಕಡಲು ದಾಟಿ ಯುದ್ಧಕ್ಕೆ ಬಂದೇ ಬರುತ್ತಾರೆ. ಆಗ ತೋರಿಸಿದರಾಯಿತು ನನ್ನ ಪರಾಕ್ರಮ ಶೌರ್ಯಗಳನ್ನು. ಸೀತಾಪಹರಣ ಮುಗಿದು ಎಷ್ಟೋ ದಿನಗಳಾದುವು. ಮಾರುತಿಯಾಗಲೇ ಶ್ರೀರಾಮನಿಗೆ ವಿಷಯಗಳನ್ನು, ನಿವೇದಿಸಿರಬೇಕು. ಈಗ ವೈರಿಗಳು ಲಂಕೆಗೆ ಮುತ್ತಲು ಯೋಜನೆಳನ್ನು ಕೈಗೊಂಡಿರುತ್ತಾರೆ. ಗುಪ್ತ ಗೂಢಾಚಾರರು ಏನೇನು ವಿಷಯ ತರುತ್ತಾರೋ ನೋಡಬೇಕು. ವಿಭೀಷಣನು ಹೋಗಿದ್ದಾಯಿತು. ಇನ್ನು ಕುಂಭಕರ್ಣ, ಪ್ರಹಸ್ತ ಮೇಘನಾದರನ್ನು ಕರೆಸಿ ಸಮಾಲೋಚನೆ ಮಾಡಬೇಕು. ಅವರ ಸೈನ್ಯದ ಬಲಾಬಲಗಳನ್ನು ನೋಡಿಕೊಂಡು ನಾವು ಸನ್ನದ್ಧರಾಗಬೇಕು. ಶತ್ರುಪಕ್ಷದವರು ಕೈಲಾಗದವರೆಂದು ಉದಾಸೀನ ಮಾಡಬಾರದು. ಹಾಗೆಯೇ ಅತಿಯಾದ ಆತ್ಮವಿಶ್ವಾಸವೂ ಒಳ್ಳೆಯದಲ್ಲ. ಅಹಂಕಾರವಾಗಿ ಪರಿಣಮಿಸಿ ನಮ್ಮನ್ನೇ ಮಟ್ಟ ಹಾಕುತ್ತದೆ. “ದೇವಿ ಮಂಡೋದರಿ ನೀನಿರಬೇಕಾಗಿತ್ತು. ನನ್ನ ಜೊತೆಯಲ್ಲಿ ಸಹಸ್ರ ಆನೆಯ ಬಲವಿದ್ದ ಹಾಗಾಗುತ್ತಿತ್ತು. ನನ್ನ ನೀನು ಅರ್ಥಮಾಡಿಕೊಳ್ಳಲಿಲ್ಲ. ನೀನೇನು ನನ್ನ ನೋಡಿದವರೆಲ್ಲರಿಗೂ ಒಂದೇ ಅಭಿಪ್ರಾಯ, ರಾವಣ ಕೆಟ್ಟವ, ಕಾಮುಕ, ವಿಷಯಲಂಪಟ ಸ್ವಾರ್ಥಿಯೆಂದು; ಆದರೆ ನನ್ನ ಅಂತರಂಗದ ವಿಚಾರ ನನಗಷ್ಟೇ ಗೊತ್ತು ನೂರುವರ್ಷ ಪರಮಾತ್ಮನ ಭಕ್ತನಾಗಿರುವುದಕ್ಕಿಂತ ಮೂರು ವರ್ಷ ಶತೃವಾಗಿದ್ದು ಮುಕ್ತಿ ಪಡೆದು ಪರಮಾತ್ಮನ ಸನ್ನಿದಿ ಸೇರುವುದು ಒಳ್ಳೆಯದು. ಪರಮಾತ್ಮನ ಆಜ್ಞೆಯಿಲ್ಲದೆ ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲವೆಂತೆ. ಆಗಲಿ ಆಗಲಿ ಅದೇನಾಗುತ್ತದೋ ಆಗಲಿ ಎಂದುಕೊಂಡು ಗುಪ್ತಸಮಾಲೋಚನಾ ಸಭೆಗೆ ದಯಮಾಡಿಸಿದೆ.

ನನ್ನ ಪರಮಾಪ್ತ ಗೂಢಾಚಾರರಿಬ್ಬರು ನನ್ನ ದಾರಿ ಕಾಯುತ್ತಿದ್ದರು. ಬಂದೊಡನೆ ನಮಸ್ಕರಿಸಿ ತಲೆಬಾಗಿ ನಿಂತರು. “ವಿಶೇಷವಾದ ಸಮಾಚಾರವೇನು” ಮಹಾರಾಜ ನಾವು ಯಾವುದನ್ನು ಅಸಾಧ್ಯವೆಂದು ಕೊಂಡಿದ್ದೆವೊ ಅದನ್ನು ಸಾಧ್ಯವಾಗಿಸಿದರು. ಶ್ರೀರಾಮಲಕ್ಷ್ಮಣರು ಸಮುದ್ರಕ್ಕೆ ಸೇತುವೆಯನ್ನು ಕಟ್ಟುತ್ತಿದ್ದಾರೆ. “ಶ್ರೀರಾಮನು ಸಮುದ್ರರಾಜನು ಮಾರ್ಗ ತೋರಿಸೆಂದು ನಿರಶನ ವ್ರತ ಕೈಕೊಂಡು ದರ್ಭಶಯನನಾಗಿ ದಂಡೆಯ ಮೇಲೆ ಮಲಗಿದನು. ಸಮುದ್ರರಾಜನು ಪ್ರತ್ಯಕ್ಷವಾಗಲಿಲ್ಲ. ಪ್ರಸನ್ನವಾಗಲಿಲ್ಲ. ಕೋಪಗೊಂಡು ಶ್ರೀರಾಮನು ತನ್ನಲ್ಲಿರುವ ಅಸ್ತ್ರವನ್ನು ಅಭಿಮಂತ್ರಿಸಿ ಹೊಡೆಯಬೇಕೆನಿಸುವಷ್ಟರಲ್ಲಿ ಸಮುದ್ರರಾಜನು ತನ್ನ ಅಹಂಕಾರವನ್ನು ಬಿಟ್ಟು ಶ್ರೀರಾಮನಿಗೆ ಶರಣಾಗತನಾಗಿ “ಶ್ರೀರಾಮ ವಿಶ್ವಕರ್ಮನ ಮಗನಾದ ನಳನಿಂದ ಸೇತುವೆ ಕಟ್ಟಿಸು. ಅಂಗದ ಸುಕ್ಷೇಣ ನೀಲಾದಿಗಳು ಎಲ್ಲರೂ ಬೆಟ್ಟಗುಡ್ಡಗಳನ್ನು ತಂದು ನಳನ ಕೈಗೆ ಕೊಡಲಿ, ನಿನ್ನ ನಾಮ ಸ್ಮರಿಸುತ್ತಾ ಸಮುದ್ರದಲ್ಲಿ ಹಾಕಿದರೆ ಅವು ತೇಲುವುವು. ಭವಸಾಗರವನ್ನೇ ದಾಟಿಸುವ ನೀನು ಈ ಭೂಸಾಗರಕ್ಕೆ ಅಂಜಬೇಕೆ?” ಎಂದು ನಮಸ್ಕರಿಸಿ ಹೋದನು. ಸುಗ್ರೀವನ ಆಜ್ಞೆಯಂತೆ ಸಮಸ್ತ ಕಪಿಗಳು ತಮ್ಮ ಶಕ್ತಾನುಸಾರ ಬೆಟ್ಟ ಗುಡ್ಡಗಳನ್ನು ತಂದು ನಳನಿಗೆ ಕೊಡಲು ನಳನು ರಾಮ ನಾಮದೊಂದಿಗೆ ಸಮುದ್ರದಲ್ಲಿ ಹಾಕುತ್ತಾ ಬಂದನು. ಕಪಿಗಳಿಂದ ಈ ಕೆಲಸ ಬೇಗನೆ ಸಾಗುವುದಿಲ್ಲವೆಂದು ಸುಗ್ರೀವ ಅಂಗದ, ಜಾಂಬವಂತ, ಹನುಮಂತ ಎಲ್ಲರೂ ಪರ್ವತಗಳನ್ನು ಗಿರಿಗಳನ್ನು ತಂದು ನಳನಿಗೆ ಕೊಟ್ಟರು. ಹೀಗೆ ಕೆಲವೇ ದಿನಗಳಲ್ಲಿ ನೂರು ಯೋಜನ ಸೇತುವೆ ಪೂರ್ಣವಾಯಿತು. ಶ್ರೀರಾಮನು ರಾಜಮಾರ್ಗದಂತೆ ಸರಳವಾದ ಸೇತುವೆಯನ್ನು ಕಂಡು ಆನಂದಿತನಾಗಿ ಎಲ್ಲರನ್ನು ಹೊಗಳಿದನು. ಗೋಧೂಳಿ ಲಗ್ನದಲ್ಲಿ ಸಕಲಕಪಿ ಸೇನೆಯೊಡನೆ ಸೇತುವೆಯ ದಾಟಿ ಸುವೇಲಾದ್ರಿಯ ತಪ್ಪಲುಭೂಮಿಯಲ್ಲಿ ಬೀಡುಬಿಟ್ಟಿರುವನು” ಗೂಢಾಚಾರರ ವರದಿಯಿಂದ ಶತ್ರುಗಳು ಬಲಾಡ್ಯರು ಹಿಡಿದ ಕೆಲಸ ಪೂರೈಸುವ ಛಲಗಾರನೆಂದು ಸ್ಥಿರವಾಯಿತು. ಇನ್ನು ಕೆಲವೇ ದಿನ ಸಮರ ಕಹಳೆ ಮೊಳಗಲು “ರಾವಣೇಶ್ವರಾ ಇನ್ನೊಂದು ಗಂಭೀರವಾದ ವಿಷಯ ನಿಮ್ಮ ತಮ್ಮ ವಿಭೀಷಣರು ತಮ್ಮ ಹಿಂಬಾಲಕರೊಡನೆ ಶತ್ರು ಪಾಳೆಯವನ್ನು ಸೇರಿದ್ದಾರೆ. ಶ್ರೀರಾಮನಿಗೆ ಶರಣಾಗತನಾಗಿ ಸ್ನೇಹ ಹಸ್ತ ಚಾಚಿದ್ದಾರೆ. ಮಾರುತಿಯು ವಿಭೀಷಣನ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸಿರುವುದರಿಂದ ಆಶ್ರಯ ನೀಡಿ, ಲಂಕಾರಾಜ್ಯದ ಪಟ್ಟಾಭಿಷೇಕವನ್ನು ಮಾಡಿದರು. “ಓಹೋ ಪಟ್ಟಾಭಿಷೇಕವೂ ನಡೆಯಿತೇ ನಾನಿನ್ನು ಬದುಕಿರುವಾಗಲೇ ವಿಭೀಷಣನಿಗೆ ಲಂಕೆಯ ಸಾರ್ವಭೌಮತ್ವ ಪಟ್ಟಾಭಿಷೇಕ! ನಡೆಯಲಿ ನಡೆಯಲಿ ಇನ್ನೆಷ್ಟು ದಿನ, ಯುದ್ಧ ಆರಂಭವಾದರೆ ಗೊತ್ತಾಗುತ್ತದೆ. ಯಾರ ರಾಜ್ಯ ಯಾರಿಗೆಂದು? ಮೆರೆಯಲಿ! ಮೆರೆಯಲಿ!
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಗುವಿನೊಡನೆ
Next post ಹೇಳು, ಯಾವುದೊ ತಪ್ಪಿಗಾಗಿ ನನ್ನನು ನೀನು

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…