ಶಬರಿ – ೩

ಶಬರಿ – ೩

ಎಲ್ಲರೂ ಹಟ್ಟಿಗೆ ಬರುವ ವೇಳೆಗೆ ನರಸಿಂಹರಾಯಪ್ಪನ ಆಳುಗಳು ಸಾರಾಯಿ ಪೀಪಾಯಿಗಳನ್ನು ತಂದಿಟ್ಟು ಕಾದಿದ್ದರು. ಇದೂ ಒಂದು ಪದ್ಧತಿ. ಮದುವೆಯ ದಿನ ರಾತ್ರಿ ಹೆಣ್ಣನ್ನು ಗುಡಿಯೊಳಗೆ ಬಿಟ್ಟು ಬಂದ ಮೇಲೆ ಕುಡಿತ ಮತ್ತು ಊಟದ ವ್ಯವಸ್ಥೆಯು ರಾಜ ವಂಶಸ್ಥರಿಗೆ ಸೇರಿದ್ದು ಅದರಂತೆ ಎಲ್ಲ ವ್ಯವಸ್ಥೆಯಾಗಿತು. ಪೂಜಾರಪ್ಪ ಎಲ್ಲವನ್ನೂ ದೇವಿಯ ವಿಗ್ರಹದ ಮುಂದೆ ಇರಿಸಿದ. ಪೂಜೆ ಮಾಡಿದ. ಆನಂತರ ಸೇವಿಸಲು ಎಲ್ಲರಿಗೂ ಹೇಳಿದ. ಇದೊಂದು ಪೂಜೆಯೆಂಬಂತೆ ಎಲ್ಲರೂ ಸೇವಿಸತೂಡಗಿದರು. ಗಂಡಸರು ಕುಡಿಯತೊಡಗಿದರೆ, ಹೆಂಗಸರು ಹಬ್ಬದ ಊಟವನ್ನು ಒಳಗೆ ಕೊಂಡೊಯ್ದರು.

ಎಲ್ಲವನ್ನೂ ಸಂಬಂಧ ಪಡದವರಂತೆ ನೋಡುತ್ತಿದ್ದವರು ಇಬ್ಬರು- ಚಂದ್ರ ಮತ್ತು ಹುಚ್ಚೀರ.

ಸಿಟ್ಟು ಮತ್ತು ಸಂಕಟ ಎರಡೂ ಒಟ್ಟಾದಂತೆ ಇಬ್ಬರೂ ಕೂತಿದ್ದರು. ಸ್ವಲ್ಪ ಹೂತ್ತಾದ ನಂತರ ಚಂದ್ರ, ಹುಚ್ಚೀರನನ್ನು ಕರಕೊಂಡು ಹಟ್ಟಿಯ ಹೂರಗಡೆ ಹೋದ. ಹಿಂತಿರುಗಿ ಬರುವ ವೇಳಗೆ ಎಲ್ಲರೂ ಕುಡಿದು. ತಿಂದು ಮಲಗಿದ್ದರು. ಚಂದ್ರ, ಹುಚ್ಚೀರನನ್ನು, ಮತ್ತೆ ಕರೆದುಕೂಂಡು ಅಲ್ಲಿಂದ ಹೂರಟ.

ಚಂದ್ರ ಮತ್ತು ಹುಚ್ಚೀರ ದೇವರಗುಡಿಯ ಹತ್ತಿರ ಬಂದರು.
ಅದೂಂದು ಪುರಾತನ ದೇವಾಲಯ.
ಹಾಗಂತ ಸುಂದರ ಶಿಲ್ಪಗಳೇನೂ ಇಲ್ಲ.

ದೊಡ್ಡ ಬಾಗಿಲ ಬಳಿ ಆ ಕಡೆ- ಈ ಕಡೆ ಎರಡು ಆಕೃತಿಗಳನ್ನು ಕೆತ್ತಲಾಗಿದೆ. ಅವರು ದೇವರ ಕಾವಲು ಪುರುಷರೆಂದು ಪ್ರತೀತಿ. ಒಬ್ಬ ಕಾಲಪುರುಷನಿಗೆ ಇಬ್ಬರು ಕಾವಲು ಪುರುಷರು!
-ಇದು ಚಂದ್ರನ ಒಳಗೆ ಕಿಡಿಯುವ ನುಡಿ.

ಹುಚ್ಚೀರನಿಗೆ ಹುಚ್ಚು ಧೈರ್ಯ ತುಂಬಿ, ಚಂದ್ರ ಇಲ್ಲೀವರೆಗೆ ಕರೆತಂದಿದ್ದ. ಗುಡಿಯ ಹತ್ತಿರ ಬರುತ್ತಿದ್ದಂತೆ ಹುಚ್ಚೀರನಿಗೆ ಸಣ್ಣನಡುಕ. ಆದರೆ ಚಂದ್ರ ಬಿಡಲಿಲ್ಲ. “ಇವತ್ತು ಎರಡ್ರಲ್ಲೊಂದು ತೀರ್ಮಾನ ಆಗ್ಬೇಕು. ಅದಕ್ಕೆ ನೀನೆ ಸಾಕ್ಷಿಯಾಗಿರ್‍ಬೇಕು. ನರಸತ್ತೋರ್ ತರಾ ಇರೋ ಬದ್ಲು ಸಾಯೋದೆ ವಾಸಿ ಅಂತ ಹೇಳ್ಳಿಲ್ವ ನಾನು. ಇಷ್ಟಕ್ಕೂ ಏನೂ ಆಗಲ್ಲ. ನಮ್‌ ಶಬರೀನ ನಾವ್ ಕಾಪಾಡ್‌ಬೇಕೊ ಇಲ್ವೊ ಹೇಳು” ಎಂದು ಮತ್ತೊಮ್ಮೆ ಹುರಿದುಂಬಿಸಿದ.

ಅಲ್ಲಿ ಆ ಕಡೆ ದೇವರಗುಡಿಯ ಒಳಬಂದ ಶಬರಿಗೆ ಒಳಗೆಲ್ಲ ಕತ್ತಲ ಇರಿತ. ಮುಂದೆ ಗರ್ಭಗುಡಿಯಲ್ಲಿ ಹಚ್ಚಿದ ಹಣತೆ. ಅದು ಯವಾಗ ಆರುವುದೋ ಗೊತ್ತಿಲ್ಲ. ನಿಂತಲ್ಲೇ ನಿಂತು ಸಾವರಿಸಿಕೊಂಡ ಮೇಲೆ ಗುಡಿಯ ಒಳಗು ಇಷ್ಟಿಷ್ಟೇ ಕಾಣತೊಡಗಿದೆ. ಗೆಳತಿ ಗೌರಿಯನ್ನು ಜ್ಞಾಪಿಸಿಕೊಂಡಳು. ಆಕೆ “ಏನೂ ಆಗಾಕಿಲ್ಲ. ಅಂಗ್ ವೋಗಿ ಇಂಗ್ ಬತ್ತೀಯ” ಎಂದು ಕಿವಿಯಲ್ಲಿ ಉಸಿರಿದ್ದಳು. ಅದೇ ಉಸಿರಾಗಿ ಮುಂದೆ ಹಜ್ಜೆಯಿಟ್ಟಳು.

ಓಂದು ಕಡೆ ಅಲಂಕಾರಗೊಂಡ ಮಂಚ. ಹಿರಿಯರು ಹೇಳಿದ ಹಾಗೆ ತಾನು ಅದರ ಮೇಲಿರಬೇಕು. ದೇವರಿಗಾಗಿ ಕಾಯಬೇಕು. ಮಧ್ಯರಾತ್ರಿಯ ವೇಳಗೆ ದೇವರು ಗರ್ಭಗುಡಿಯಿಂದ ಬರುತ್ತಾನೆ. ಬಂದವನ ಪಾದಕ್ಕೆ ಬೀಳಬೇಕು. ಮುಂದ ಆತನ ವಶ. ದೈವ ವಶ!

ಇಲ್ಲಿ ಈ ಕಡೆ ಚಂದ್ರ ಹುಚ್ಚೀರನೊಂದಿಗೆ ದೇವರಗುಡಿಯನ್ನು ಒಂದು ಸುತ್ತು ಹಾಕಿದ. ಹಳೆಯದಾದ ಗುಡಿಯ ಒಳಗೆ ಹೋಗಲು ಯಾವುದಾದರೂ ಕಳ್ಳಗಿಂಡಿ ಇದ್ದೀತೆ ಅಂತ ಹುಡುಕಿದ. ಎಲ್ಲೂ ಇರಲಿಲ್ಲ. ಕಲ್ಲಿನಿಂದ ಕಟ್ಟಿದ ಗುಡಿ, ಗುಂಡುಕಲ್ಲಿನಂತೆ ಗಟ್ಟಿಯಾಗಿ ನಿಂತಿತ್ತು.

ಚಂದ್ರ ಬಾಗಿಲ ಬಳಿಗೆ ಬಂದ. ತಾನು ತಂದಿದ್ದ ಅನೇಕ ಬೀಗದ ಕೈಗಳಿಂದ ಬೀಗತೆಗೆಯಲು ಪ್ರಯತ್ನಿಸಿದ. ಕಡೆಗೆ ತಂತಿಗಳನ್ನು ತೂರಿಸಿ ತೆಗೆಯಲು ನೋಡಿದ. ಕಡೆಗೆ ಅತ್ತಿತ್ತ ನೋಡಿ ಬೀಗವನ್ನು ಒಡೆದೇ ಬಿಟ್ಟ.

ಒಂದು ಕ್ಷಣ ಮೌನ.
ಸದ್ದಿನ ನಂತರದ ಸ್ತಬ್ಧತೆ.
ಸುತ್ತೆಲ್ಲ ನೋಡಿದ. ಮಲಗಿದ ಮನೆಗಳು! ಸದ್ದಿಲ್ಲದ ಸಂದಿಗೊಂದಿಗಳು!
ಸೀದಾ ಒಳನುಗ್ಗಿದ. ಬಾಗಿಲು ಹಾಕಿದ.
ಹುಚ್ಚೀರನ ಜೊತೆ ಮರೆಯಲ್ಲಿ ನಿಂತು ನೋಡಿದ.
ಮಂಚದ ಮೇಲೆ ಶಬರಿ ಕೂತಿದ್ದಾಳೆ.
ಉಸಿರುಗಟ್ಟಿದ ಶಬರಿ.
ಗರ್‍ಭಗುಡಿ-ಉಸಿರುಗಟ್ಟಿದ ಹುತ್ತ
ಬುಸ್ಸೆಂದು ಹೊರಟಿರುವ ಹೆಡೆಗಾಗಿ
ಸರಸರನೆ ಹರಿಯುವ ನಡೆಗಾಗಿ
ಕಾದಿರುವಳು ಶಬರಿ!

ಮರೆಯಲ್ಲಿ ನಿಂತ ಚಂದ್ರ ಮತ್ತು ಹುಚ್ಚೀರ ನೋಡುತ್ತಿರುವಂತೆಯೇ ಗರ್‍ಭಗುಡಿಯ ದೀಪ ಆರಿತು. ಇವರಲ್ಲಿ ತವಕ. ಶಬರಿಗೆ ಸಣ್ಣ ನಡುಕ.

ನೋಡು ನೋಡುತ್ತಿದ್ದಂತೆಯೇ ಗರ್‍ಭಗುಡಿಯ ಕತ್ತಲಲ್ಲಿ ‘ದೇವರ ರೂಪವೊಂದು’ ಕಾಣ್ಸಿಕೊಂಡಿತು. ಮೆಲ್ಲನೆ ಮುಂದಡಿಯಿಟ್ಟ ದೇವರ ರೂಪದ ಈ ಆಕೃತಿಯ ಕಿರೀಟ ಹೊಳೆಯುತ್ತಿತ್ತು. ಮೆಲ್ಲನೆ ಮುಂದಡಿಯಿಟ್ಟ ದೇವರ ರೂಪದ ಈ ಆಕೃತಿಯ ಕಿರೀಟ ಹೊಳೆಯುತ್ತಿತ್ತು. ಉಳಿದದ್ದು ಅಸ್ಪಷ್ಟ. ಆದರೂ ಚಂದ್ರನ ಕಣ್ಣುಗಳಿಗೆ ಈ ಅಸ್ಪಷ್ಟ ದೇವರ ರೂಪದಲ್ಲಿ ಯಾವುದೋ ಆಕಾರವೊಂದು ಸ್ಪಷ್ಟವಾಗತೊಡಗಿತು. ಆ ರೂಪ ಶಬರಿಯ ಸಮೀಪಕ್ಕೆ ಬರುತ್ತಿದ್ದಂತೆ ಚಂದ್ರ ‘ಏಯ್’ ಎಂದು ಕಿರುಚುತ್ತ ಮುನ್ನುಗ್ಗಿ ಆ ರೂಪದ ಮೇಲೆ ಬಿದ್ದ.

‘ದೇವರು’ ಸ್ತಂಭೀಭೂತನಾದ!
ಶಬರಿ ದಿಗ್ಭ್ರಾಂತಳಾದಳು.
ದಿಕ್ಕೆಟ್ಟು ಅಲ್ಲಿಂದ ಓಡಿದಳು.
ಹುಚ್ಚೀರ ಮಾತ್ರ ಚಂದ್ರನ ಸಾಹಸಕ್ಕೆ ಸಾಕ್ಷಿಯಾಗಿ ನಿಂತಿದ್ದ- ನಡಗುವ ಎದೆ ಹಿಡಿದು; ನಡಯುತ್ತಿರುವ ಘಟನಯಿಂಂದ ಗರ ಬಡಿದು.
* * *

ಶಬರಿ ಓಡಿಬಂದಳು.

ನಿದ್ದೆ ಮಾಡಿದ ಊರಿನ ಬೀದಿಗಳಲ್ಲಿ, ಗಾಳಿಗೆ ತರೆಪರಗುಟ್ಟುವ ಮರಗಿಡಗಳ ನಡುವಿನಲ್ಲಿ, ಹಳ್ಳಕೂಳ್ಳಗಳ ಹಾದಿಯಲ್ಲಿ, ಹಟ್ಟಿಗೆ ಓಡಿಬಂದಳು. ಬಂದು ನಿಂತವಳೇ ‘ಯಪ್ಪೊ ಯಪ್ಪೊ’ ಎಂದು ಕೂಗಿದಳು.

ಹಟ್ಟಿ ಒಚ್ಚಿಬಿದ್ದಿತು.
ನಿದ್ದೆಯ ಅಮಲು ಹರಿದು ಹೋಯಿತು.
ತಿಮ್ಮರಾಯಿ, ಪೂಜಾರಪ್ಪ, ಗಾಉರಿ- ಹೀಗೆ ಎಚ್ಚರವಾದವರೆಲ್ಲ ಎದ್ದು ಬಂದರು. ತಿಮ್ಮರಾಯಿ ಮಗಳನ್ನು ನೋಡಿದ.

ಬಿರುಗಾಳಿಯ ನಡುವೆ ಬೆದರಿನಿಂತ ಹಸಿರು ಮರ!
“ಮಗಳೆ, ಏನವ್ವ ಇದು? ಯಾಕಿಂಗ್‌ ಬಂದೆ ಮಗಳೆ?
-ಎಂದು ತಿಮ್ಮರಾಯಿ ಕೇಳುತ್ತಲೇ ಶಬರಿ ಗಳಗಳನೆ ಅತ್ತಳು.
ಗೌರಿ ಹತ್ತಿರ ಬಂದು ಹಿಡಿದುಕೊಂಡಳು.

ಪೂಜಾರಪ್ಪ ತಾಳ್ಮೆ ಕಳದುಕೊಂಡಿದ್ದ. ಶಬರಿಯ ಅಳುವಿನಲ್ಲಿ ಅವನಿಗೆ ಉತ್ತರವಿರಲಿಲ್ಲ.

“ಅದೇನಂಗಳ್ತೀಯ? ದ್ಯಾವ್ರ್‌ಗುಡಿ ಬಿಟ್ಟು ಯಾಕ್‌ ಬಂದ್? ಬೊಗಳು.” ಎಂದು ಅಬ್ಬರಿಸಿದ. ಆದರೆ ತಿಮ್ಮರಾಯಿಗೆ ಇದು ಸರಿಕಾಣಲಿಲ್ಲ.

“ಅದ್ಯಾಕಂಗಾಡ್ತೀಯ ಪೂಜಾರಪ್ಪ? ಎದ್ನೋ ಬಿದ್ನೊ ಅಂಬ್ತ ಓಡ್ ಬಂದಂಗೈತೆ ಈ ಮಗ. ಸುಮ್ಕೆ ಎಗ್ರಾಡಿರಾತ?” ಎಂದು ಬೇಸರಪಟ್ಟು ಶಬರಿಯನ್ನು ಮತ್ತೆ ಕೇಳಿದ- “ಏನಾತು ಯೇಳವ್ವ, ಅದೇನೇ ಇದ್ರು ನಾನು ನನ್ನ ಮಗ್ಳನ್ನ ಬಿಟ್ ಕೊಡಾಕಿಲ್ಲ. ಯೇಳವ್ವ ಏನಾತು?

ಕತ್ಲಾಗ್ ದ್ಯಾವ್ರ್‌ ಬಂದಂಗ್‌ ಆತು ಕಣಪ್ಪ. ಆಟ್ರಾಗೆ ಇನ್ಯಾರೊ ಬಂದು ದ್ಯಾವ್ರ್ ಮ್ಯಾಲೆ ಬಿದ್ದಂಗಾತು. ಆಮ್ಯಾಕ್ ನಂಗೊಂದೂ ತೋಚ್ದೆ ಹೆದ್ರಿಕಂಡ್ ಓಡ್ ಬಂದೆ ಕಣಪ್ಪ.”

“ಓಡ್ ಬರಾಕ್‌ ಮೊದ್ಲು ಏನಾತು? ಒಸಿ ಬಿಡ್ಸೇಳು” ಎಂದು ಪೂಜಾರಪ್ಪ ಮತ್ತೆ ಒತ್ತಾಯಿಸಿದ.

“ಕತ್ಲಾಗ್ ಅದೇನೇನಾತೊ ನಂಗೊಂದು ತಿಳೀಲಿಲ್ಲ. ಪ್ರಾಣಾನೇ ವೋದಂಗಾತು. ಓಡ್ ಬಂದೆ”- ಶಬರಿ ಹೇಳಿ ಅಳತೊಡಗಿದಳು.

“ಅಂಗಾರ್ ಬಾಗ್ಲು ತಗ್‌ದಿತ್ತಾ?” -ಪೂಜಾರಪ್ಪ ಮತ್ತೆ ಪ್ರಶ್ನಿಸಿದ.
ಶಬರಿ ಹೌದೆಂಬಂತೆ ತಲೆಯಾಡಿಸಿದಳು.
ಪೂಜಾರಪ್ಪ ಒಂದು ಕ್ಷಣ ಯೋಚಿಸಿದ.
“ಚಂದ್ರ ಎಲ್ಲಿ ಕಾಣುಸ್ತಿಲ್ಲ?” ಎಂದು ಕೇಳಿದ.

ಆಗ ಎಲ್ಲರಿಗೂ ಚಂದ್ರನ ನೆನಪು ಬಂತು. ತಿಮ್ಮರಾಯಿ ಒಳ ಹೊರಗೆಲ್ಲ ನೋಡಿದ. ‘ಚಂದ್ರ, ಚಂದ್ರ’ ಎಂದು ಮೂರ್‍ನಾಲ್ಕು ಸಾರಿ ಕೂಗಿದ. ಇಲ್ಲ! ಚಂದ್ರ ಇರಲಿಲ್ಲ.

ಹಟ್ಟಯಲ್ಲೂ ಇಲ್ಲ; ಆಕಾಶದಲ್ಲೂ ಇಲ್ಲ.
ಕಪಿಟ ಮೋಡದ ಮರೆ; ಎಲ್ಲಿದ್ದಾನೋ ಗೊತ್ತಾಗುತ್ತಿಲ್ಲ.
ಪೂಜಾರಪ್ಪ ಸುಮ್ಮನಿರಲಲ್ಲ.

“ಏನೋ ಅನಾವ್ತ ಆಗೈತೆ ತಿಮ್ಮರಾಯಿ. ನಿನ್‌ಮಗಳು ಇಂಗೆಲ್ಲ ಅರ್ಧಕ್ಕೆ ಎದ್ ಬಂದಿರಾದು ಹಟ್ಟೀಗೊಳ್ಳೇದಾಗಾಕಿಲ್ಲ. ಬರ್ರಿ ಗುಡಿತಾವೋಗಾನ” ಎಂದು ಹೂರಟುಬಿಟ್ಟ. ವಿಧಿಯಿಲ್ಲದೆ ಉಳಿದವರೆಲ್ಲ ಹಿಂಬಾಲಿಸಿದರು.
* * *

ಊರಿನ ಬೀದಿಗಳಲ್ಲಿ ಹಟ್ಟಿಯ ದಂಡು ಬಂದಾಗ ತಾನಾಗೇ ಊರಿಗೆ ಎಚ್ಚರವಾಯಿತು. ಬೆಚ್ಚನೆ ನಿದ್ದೆಯನ್ನು ಕೆಡಿಸಿದ ಇವರನ್ನು ಇರಿಯುವಂತೆ ನೋಡುತ್ತಲೇ ಎದ್ದ ಊರವರು ಕಡೆಗೆ ಕುತೂಹಲಿಗಳಾಗಿ ಇವರ ಜತೆ ಸೇರಿ ಬಂದರು- ಸುಂಟರಗಾಳಿಯಂತೆ.

ದೇವರಗುಡಿಯ ಹತ್ತಿರ ಬಂದಾಗ ಗಾಳಿ ಉಸಿರುಕಟ್ಟಿ ನಿಂತಿತು. ಗುಡಿಯ ಬಾಗಿಲಲ್ಲಿ ಚಂದ್ರ ರಕ್ತಕಾರಿ ಬಿದ್ದಿದ್ದ!

ಶಬರಿ ಹತ್ತಿರ ಬಂದು ನೋಡಿ ಬೆಂದ ಹಗ್ಗದಂತ ಬಿದ್ದಳು. ಗೌರಿ ಹಿಡಿದುಕೂಂಡಳು.

ಶಬರಿಯ ಅಳು ಹಗ್ಗ ನೇದಂತೆ ಜೀವ ಸಂಚಾರವಾಯಿತು.

ಜನರಲ್ಲಿ ಗುಸುಗುಸು ಆರಂಭವಾಯಿತು. ಎಲ್ಲೋ ಇದ್ದ ಹುಚ್ಚೀರ ಮಲ್ಲಗೆ ಬಂದು ಜನರ ಮಧ್ಯೆ ಸೇರಿಕೊಂಡ.

ಫೂಜಾರಪ್ಪ ಚಂದ್ರನ ಮೈಮುಟ್ಟಿ ಘೋಷಿಸಿದ- “ಜೀವ ಇಲ್ಲ. ಯಾವಾಗ್ಲೊ ಸತ್ತೋಗವ್ನೆ. ದ್ಯಾವ್ರ ಜತೆ ಚಲ್ಲಾಟ ಆಡಿದ್ರೆ ಇನ್ನೆನಾಗ್ತೈತೆ”

ಅಷ್ಟರಲ್ಲಿ ಊರ ಒಡೆಯರು ಬಂದರು.
ಹುಚ್ಚೀರ ಹೆದರಿ ಮರೆಗೆ ಸರಿದ.

ನರಸಿಂಹರಾಯಪ್ಪ ಮತ್ತು ರಾಮಾಜೋಯಿಸರು ಚಂದ್ರನ ಹೆಣ ನೋಡಿದರು. ನರಸಿಂಹರಾಯಪ್ಪ “ಇದಕ್ಕೇನಂಬ್ತೀರ ಜೋಯಿಸ್ರೆ” ಎಂದು ಕೇಳಿದ. “ಇನ್ನೇನ್ ಹೇಳೋದು, ಎಲ್ಲಾ ಆ ದೇವರಲೀಲೆ. ಸಂಪ್ರದಾಯಕ್ಕೆ ಸೆಡ್ಡು ಹೊಡೀತೀನಿ ಅಂದ್ರೆ ಆಗೋದೆಲ್ಲ ಹೀಗೆ. ಅರ್ಧಂಬರ್ಧ ವಿದ್ಯೆ ಕಲ್ತು ಅಡ್ಡಾದಿಡ್ಡಿ ಆಡಿದ್ರೆ ಇದೇ ಗತಿ ನೋಡಿ.” ಎಂದು ಜೋಯಿಸರು ಹೇಳಿದ್ದಕ್ಕೆ ನರಸಿಂಹರಾಯಪ್ಪ ತನ್ನ ಮಾತನ್ನೂ ಸೇರಿಸಿದ-

“ನಮ್ತಾವ್‌ ನಿಗಿರ್‌ದಂಗೇ ಆ ದ್ಯಾವ್ರತಾವ್ಲು ನಿಗರವ್ನೆ ಅನ್ನುಸ್ತೈತೆ. ಪಾಪ! ಸುಮ್ಕೆ ಜೀವ ಕಳ್ಕಂಡ. ಈ ಶಬರೀಗೆ ವೊತ್ತಾರೆ ತಾಳಿಕಟ್ಟಿ ಸರವೋತ್ನಾಗೆ ಕಿತ್ಕಂಡ್ ಬಿಟ್ಟ.”

“ಎಲ್ಲಾ ದೈವಲೀಲೆ” ಎಂದ ಜೋಯಿಸರು “ನೋಡಿ ಸುಮ್ಕೆ ಶವ ಸಂಸ್ಕಾರ ಮಾಡಿ ಮುಗಿಸ್ಬಿಡಿ. ಸದ್ದುಗದ್ದಲ ಇಲ್ದೆ ಎಲ್ಲಾ ನಡದೋದ್ರೆ ದೇವರ ಸಿಟ್ಟು ಶಮನ ಆಗುತ್ತೆ. ಇದೆಲ್ಲ ಸುದ್ದಿಗಿದ್ದಿ ಆದ್ರೆ ಹಟ್ಟಿ ಹರಾಜಾಗುತ್ತೆ ಅಷ್ಟೆ” ಎಂದು ಅಪ್ಪಣೆ ಕೊಡಿಸಿದರು.

“ಅವ್ರ್ ಮಾಡಿದ್ದು ಅವ್ರಿಗೇ ತಟ್‌ತೈತೆ ಬಿಡಿ ಜೋಯಿಸ್ರೆ” ಎಂದು ನರಸಿಂಹರಾಯಪ್ಪ ಹೇಳಿದ್ದೇ ತಡ, ಹಟ್ಟಿಯ ಪೂಜಾರಪ್ಪ “ನಾವ್‌ ನಿಮ್ಮನ್ ಬಿಟ್ ಬಾಳಾದುಂಟಾ ದಣೇರ? ಎಲ್ಲಾ ನೀವೇಳ್ದಂಗೇ ಮಾಡ್ತೀವಿ” ಎಂದು ಹೇಳಿ “ಮದ್ಲು ಇಲ್ಲಿಂದ ಶವ ಸಾಗ್ಸಾನ ಬರ್ರಿ, ಏ ಹುಚ್ಚಿರ, ಎಲ್ಲೊ ಆಳಾಗೋದೆ, ಬಾರ್‍ಲ ಒಂದ್‌ ಕೈಯ್ಯಾಕು” ಎಂದು ಕೂಗಿದ.

ಅಳುತ್ತಿದ್ದ ಶಬರಿಯನ್ನು ಗೌರಿ ಏಳಿಸಿಕೂಂಡು ಬಂದಳು.

ಹುಚ್ಚೀರ ಮತ್ತು ಇತರರು ಬಂದು ಚಂದ್ರನ ಹೆಣಕ್ಕೆ ಕೈಹಾಕಿದರು. ಆಗ ಜೋಯಿಸರು ಹೇಳಿದರು- “ನಾಳ ಮೊದ್ಲು ಗುಡೀನೆಲ್ಲ ತೊಳೆದು ಶುದ್ಧಿ ಮಾಡ್ಬೇಕು. ಹೀಗೆಲ್ಲ ಆಗಿರೋದುಕ್ಕೆ ಪ್ರಾಯಶ್ಚಿತ್ತ ಮಾಡ್ಕೊಬೇಕು. ಪೂಜಿಗೀಜೆ ಎಲ್ಲಾ ಇರುತ್ತೆ. ಶವ ಸಂಸ್ಕಾರ ಮುಗ್ಸಿ ಶಬರೀನ ಕರ್‍ಕೊಂಡ್ ಬನ್ನಿ.” ಇಲ್ಲೀವರೆಗೆ ಅಳುವಿನಲ್ಲಿ ಮುಳುಗಿದ ಶಬರಿ “ಇಲ್ಲ ನಾನಲ್ಲಿಗ್ ತಿರ್‍ಗ ಬರಾಕಿಲ್ಲ. ನಾನ್‌ ಸತ್ರೂ ಬರಾಕಿಲ್ಲ” ಎಂದು ಕಿರುಚಿದಳು. ಆಗ ಪೂಜಾರಪ್ಪ ಗದರಿದ – “ಆಯ್ತಾಯ್ತು ನಡಿ ಮದ್ಲು. ದ್ಯಾವ್ರ್ ಗುಡೀತಾವ ದೆವ್ವ ಕಂಡಂಗಾಡ್‌ ಬ್ಯಾಡ. ನಡ್‌ನಡಿ.”

ಚಂದ್ರನ ಹೆಣ ಹಟ್ಟಿಗೆ ಬಂತು.

ಅಲ್ಲಲ್ಲೆ ಏಟು ಬಿದ್ದ ಗುರುತು ಕಾಣುತ್ತಿತ್ತು. ಆ ಬಗ್ಗೆ ಯಾರೂ ಮಾತಾಡದಿದ್ದರೂ ಪೂಜಾರಪ್ಪನೇ ಹೇಳಿದ- “ದ್ಯಾವ್ರನ್ನೇ ಪರೀಕ್ಷೆ ಮಾಡಾಕೋಗಿ ರಕ್ತ ಕಾರ್‌ ಬಿದ್ದ ನೋಡ್ರಿ. ಅದಕ್ಕೇ ಗಾಯ ಆಗಿರ್‍ಬೇಕು.”

ಚಂದ್ರನ ತಾಯಿಯ ಅಳು ಹಟ್ಟಿ ತುಂಬ ಹಬ್ಬಿತು.

“ಇವೆಲ್ಲ ಬ್ಯಾಡ ಕಣೋ ಅಂದೆ. ಒಡೇರ್‍ಗೇ ಸೆಡ್ ವೂಡೀತೀನಿ ಅಂದ. ದ್ಯಾವ್ರು ದಿಂಡ್ರು ಅಂಬ್ತ ಸುಟ್ಟು ಸುಣ್ಣ ಆಗ್‌ಬ್ಯಾಡ್ರಿ ಅಂಬ್ತ ನಮ್ಗೇ ಬುದ್ದಿಯೇಳ್ತಿದ್ದ ಈ ಬುದ್ದಿಗೇಡಿ ನನ್‌ ಮಗ; ಇವಾಗ್‌ ನೋಡ್ರಪ್ಪ, ಅಗಲಾಗಿದ್ದಾನು ರಾತ್ರಿ ಇಲ್ದಂಗಾದ” ಎಂದು ರೋಧಿಸುತ್ತಿದ್ದ ಚಂದ್ರನ ತಾಯಿಯನ್ನು ಹೆಂಗಸರು ಒತ್ತಾಯವಾಗಿ ಒಳಗೆ ಕರೆದೊಯ್ದರು.

ಪೂಜಾರಪ್ಪ, ತಾಯಿ ಮತ್ತು ತಿಮ್ಮರಾಯಿ-ಇಬ್ಬರನ್ನೂ ಒಪ್ಪಿಸಿ ಹೂತ್ತು ಹುಟ್ಟೋ ವೇಳೆ ಹೆಣವನ್ನು ಹೂತುಬಿಡಲು ಸಜ್ಜಾದ.

ಚಂದ್ರನ ಹೆಣಕ್ಕೆ ಸ್ನಾನ ಮಾಡಿಸಿದರು; ಕೂಡಿಸಿದರು. ಪೂಜೆ ಮಾಡಿದರು. ಎಲ್ಲರೂ ಸೇರಿ ಕೊಂಡೊಯ್ದರು.

ಅಳುವನ್ನು ನುಂಗಿ ನಡೆದ ಶಬರಿ; ಜೂತಗೆ ಗೌರಿ.
ಹೆಣ ಹೂಳಿದ್ದಾಯಿತು-ವಿವಾಹವನ್ನೇ ಹೂತಂತೆ.
ಈಗ ಶಬರಿಯ ಸರದಿ.
ಭೋರೆಂದು ಅಳುವ ಶಬರಿಯ ಬಳೆಗಳನ್ನು ಒಡೆದರು.
ಹಣೆಯ ಕುಂಕುಮವನ್ನು ಅಳಿಸಿ ಖಾಲಿ ಮಾಡಿದರು.
ಚಂದ್ರನಿಲ್ಲದೆ ಬೆಳದಿಂಗಳು ವಿಧವೆ!
ಕಾಡುವ ಅಮಾವಾಸ್ಯೆಗೆ ಬರವೆ?

ಓಡೆಯ ನರಸಿಂಂಹರಾಯಪ್ಪ ಅಮಾವಾಸ್ಯೆಯಂತೆ ಕಾಡಿದ. ಹೇಗಿದ್ದರೂ ಮದುವೆಯಾದ ಗಂಡನಿಲ್ಲ; ಒಂದು ದಿನವೂ ಆತನೊಂದಿಗೆ ಬಾಳುವೆ ಮಾಡಲಿಲ್ಲ. ಶ್ರೀಮಂತರು, ಭೂಮಾಲೀಕರು ಹಣ ನೀಡಿ ಹಣ್ಣಿನ ಕೂಡಿಕೆ ಮಾಡಿಕೊಳ್ಳುವ ಪ್ರವೃತ್ತಿ ಒಂದು ಪದ್ಧತಿಯೇ ಆಗಿಬಿಟ್ಟಿದೆ. ಅದರಂತೆ ತಾನೇಕೆ ಶಬರಿಯನ್ನು ಪಡೆಯಬಾರದು? ಹೀಗೆ ಅನ್ನಿಸಿದ್ದೇ ತಡ ಒಡೆಯ ನರಸಿಂಹರಾಯಪ್ಪ ತಿಮ್ಮರಾಯಿಗೆ ಹೇಳಿ ಕಳಿಸಿದ್ದ. ಜಮೀನಿನ ಬಳಿ ಆರಾಮವಾಗಿ ಕೂತಿದ್ದ ಒಡೆಯನ ಬಳಿಗೆ ಬಂದ ತಿಮ್ಮರಾಯಿ ನಡು ಬಗ್ಗಿಸಿ ನಿಂತ. ಒಡೆಯ ಮಾತು ಆರಂಭಿಸಿದ.

“ಎಂಗಿದ್ದೀಯ?”
“ಸಾಯ್ಲಿಲ್ಲ ಬದುಕ್ಲಿಲ್ಲ ಇಂಗೇ ಇವ್ನಿ ದಣೇರ.”
“ಮಗಳು ಎಂಗವ್ಳೆ?”
“ನಾನಿದ್ದಂಗೆ ಅವ್ಳೂನು.”
“ಅರೇದ್‌ ಉಡುಗೀನ ಇಂಗೇ ಬಿಡ್ ಬಾರ್‍ದು ಕಣೋ.”
“ಇನ್ನೇನ್‌ ಮಾಡಾಕಾಯ್ತದೆ ದಣಿ? ಎಲ್ಲಾ ಅಣೇಬರಾ”
“ಅಣೇಬರಾ ಅಂದ್ಕಂಡಿದ್ರೆ ಹೂಟ್ಟೆ ತುಂಬ್ತೈತೇನೊ?”
“ಎಂಗೋ ನಡ್ಕಂಡ್ ಬಂದೈತಲ್ಲ ದಣಿ. ಉಪಾಸಾನೊ ವನವಾಸಾನೊ ಜೀವ ಇರಾಗಂಟ ಇರಾದು.”
“ನೀನ್‌ ಮನಸ್‌ ಮಾಡಿದ್ರೆ. ನಿಂಗೆ ನಿನ್‌ ಮಗಳಿಗೆ ಹೊಲ ಮನೆ ಎಲ್ಲಾ ಮಾಡ್ಕೊಡ್ತೀನಿ.”
ತಿಮ್ಮರಾಯಿಗೆ ಅರ್ಥವಾಗಲಿಲ್ಲ. ಸುಮ್ಮನೆ ನೋಡಿದ.
“ಯಾಕ್ಲ ಅಂಗ್ ನೋಡ್ತೀಯ? ಸುತ್ತು ಬಳಸು ಯಾಕ? ಯೇಳ್ತೀನ್ ಕೇಳು, ನಿನ್‌ ಮಗಳನ್ನ ನಾನ್‌ ಕೂಡಿಕೆ ಮಾಡ್ಕಂಬ್ತೀನಿ. ಹೆಂಡ್ತಿ ತರಾನೇ ನೋಡ್ಕಂಬ್ತೀನಿ.”
ತಿಮ್ಮರಾಯಿ ಬೆಚ್ಚಿದ.
ಹಿಂದೆ ಹಟ್ಟಿಯಲ್ಲಿ ಇಂಥ ಘಟನೆಗಳು ನಡೆದಿದ್ದವು.

ಕೆಲವು ಹೆಣ್ಣುಮಕ್ಕಳು ಶ್ರೀಮಂತರ ಹಾಸಿಗೆಯಲ್ಲಿ ಹೂವಾಗಲು ಹೋಗಿ ಹಾವಿನ ಸಂಗ ಮಾಡಿದಂತಾಗಿದ್ದವು. ಶ್ರೀಮಂತರಲ್ಲಿ ಕೆಲವರು ನಿಯತ್ತಿನಿಂದಲೂ ನಡೆದುಕೊಂಡಿದ್ದರು. ಕಡಯವರೆಗೂ ಸಾಕಿದ್ದರು. ಆದರೆ ಎಲ್ಲರೂ ಹಾಗಿರಲಿಲ್ಲ. ಆದರೆ ಇತ್ತೀಚೆಗೆ ಈ ಪದ್ಧತಿ ಕಡಿಮೆಯಾಗಿತ್ತು. ಒಡೆಯನು ಈ ಬಗ್ಗೆ ಆಸಕ್ತಿ ತೋರಿಸಿರಲಿಲ್ಲ. ಇವತ್ತು ಇದ್ದಕ್ಕಿದ್ದಂತೆ ‘ಕೂಡಿಕೆ’ ಬಗ್ಗೆ ಕೇಳಿದಾಗ ಏನೂ ತೋಚಲಿಲ್ಲ. ಈತನನ್ನು ಗಂಡನಂತೆಯೇ ಒಪ್ಪಿ ಮೀಸಲಾಗಬೇಕು; ಪ್ರತಿಫಲವಾಗಿ ಬದುಕಿಗೆ ಭದ್ರತೆ-ಇದು ಕೂಡಿಕೆಯ ವಾಡಿಕೆ. ಇದನ್ನು ತನ್ನ ಮನೆಯಲ್ಲೇ ಜಾರಿಗೆ ತರಬೇಕೆಂಬ ಒತ್ತಡ ಹುಲಿಯಂತೆ ನಿಂತಿದೆ. ಹಿಂದಿನಿಂದ ಬಂದ ಪದ್ಧತಿಯಾದರೂ ತನ್ನ ಮಗಳಿಗೆ ಇದನ್ನು ಹೇಳುವುದು ಹೇಗೆ? ವಾಡಿಕೆಗೆ ಆಕೆಯನ್ನು ಒಪ್ಪಿಸುವುದು ಹೇಗೆ? ಒಡೆಯರಿಗೆ ಇಲ್ಲವೆನ್ನುವುದು ಹೇಗೆ? ತಿಮ್ಮರಾಯಿ ಗೊಂದಲದಲ್ಲಿ ಬಿದ್ದಿದ್ದ. ಮಾತು ಬರಲಿಲ್ಲ.

“ಯಾಕ್ಲ ಸುಮ್ಕೆ ನಿಂತ್ಕಂಡೆ? ನಾನೇನ್ ಕೇಳ್‌ಬಾರದ್ ಕೇಳಿದ್ನೇನ್ಲ?”
ಒಡೆಯನ ಗಡಸು ಮಾತಿಗೆ ಬೆಚ್ಚಿದ ತಿಮ್ಮರಾಯಿ “ಅಂಗೇನಿಲ್ಲ ಒಡೆಯ” ಎಂದು ತಡವರಿಸುತ್ತ ನಿಂತ.

“ಮತ್ತಿನ್ಯಾಕ್ಲ ತಡ?”
“ಅದೂ… ಅಧ್ಮ್ನೂ…”
“ದೂಸರ ಮಾತಾಡ್‌ಬ್ಯಾಡ; ನಮ್ಮಪ್ಪ ಮೂರ್ ಜನ ಇಟ್ಕಂಡಿದ್ದ. ಗೊತ್ತೇನ್ಲ?”
ತಿಮ್ಮರಾಯಿ ಸುಮ್ಮನೆ ನಿಂತು ನೆಲ ನೋಡುತ್ತಿದ್ದ.
“ಅದೆಲ್ಲ ನಂಗೊತ್ತಿಲ್ಲ; ನಾಳೀಕ್‌ ಬಂದು ಒಪ್ಪಿಗೆ ಅಂಬ್ತ ಯೇಳ್‌ಬೇಕು.”
“ಬತ್ತೀನ್ ದಣೇರ.”

ತಿಮ್ಮರಾಯಿ ದಾರಿ ಕಾಣದ ಮನಸ್ಸಲ್ಲಿ ಹಟ್ಟಿಯ ಹಾದಿ ಹಿಡಿದ. ನಿಜ; ಇದಕ್ಕೆ ಊರವರ ವಿರೋಧವೂ ಇರಲಿಲ್ಲ. ಒಡೆಯನ ಮನೆಯಲ್ಲಿ ಗದರಿದರೆ ಒಡತಿ ಸಾವಿತ್ರಮ್ಮನೂ ಸುಮ್ಮನಿರಬೇಕು. ಊರ ಒಡಯನಿಗೆ ಎದುರಾರು? ಆದರೆ ತನ್ನ ಮಗಳು ಇದಕ್ಕೆ ಒಪ್ಪುತ್ತಾಳಯೆ? ಅವರವರೇ ಇಷ್ಟಪಟ್ಟು ಕೂಡಿಕೆ ಮಾಡಿಕೊಂಡವರು ಇದ್ದಾರೆ. ಶ್ರೀಮಂತನೊ ಬಡವನೊ ಒಪ್ಪಿಗೆ ಇದ್ದಾಗ ಬೇರ ಮಾತು. ತನ್ನ ಮಗಳಿಗೆ ಈ ವಿಷಯ ತಿಳಿಸುವುದಕ್ಕೆ ನಾಲಗೆ ಅಲುಗಾಡುವುದೇ ಇಲ್ಲ. ತಿಳಿಸದೆ ಇರುವುದೂ ಸಾಧ್ಯವಿಲ್ಲ. ಯಾಕೆಂದರೆ ಒಡಯನಿಗೆ ಎದುರಾಗಿ ನಿಲ್ಲುವಂತಿಲ್ಲ; ನಿಲ್ಲಲಾಗುವುದಿಲ್ಲ.

ರಾತ್ರಿ ಚಿಂತೆಯಲ್ಲಿ ಮುಳುಗಿದ ತಿಮ್ಮರಾಯಿ ಚಡಪಡಿಸುತ್ತಿರುವುದನ್ನು ಕಂಡ ಶಬರಿ ತಾನೇ ಕೇಳಿದಳು.

“ಯಾಕಪ್ಪೊ ಒಂತರಾ ಇದ್ದೀಯ? ಏನಾತು?”
ತಿಮ್ಮರಾಯಿ ಮಗಳ ಮುಖ ನೋಡಿದ.
“ನನ್ ಬಾಳ್ಳೇವ್ ಇಂಗಾತು ಅಂಬ್ತ ಸಂಕಟಾನೇನಪ್ಪ? ನೀನ್ ಯಾತ್ರುದು ಸಿಂತೆ ಮಾಡ್‌ಬ್ಯಾಡ. ಗಂಡ್‌ಮಗ ಇದ್ದಂಗಿರ್‍ತೀನಿ.”
ತಿಮ್ಮರಾಯಿ ಮೆಲ್ಲಗೆ ಮಾತು ಶುರುಮಾಡಿದ.
“ಬಾಯಾಗೇಳ್ದಂಗೆಲ್ಲ ಇರಾಕಾಯ್ತದ ಮಗ್ಳೆ?”
“ಯಾಕಪ್ಪ ಆಗಾಕಿಲ್ಲ? ನಾನಿಲ್ ಇರಾದ್ ನಿಂಗ್ ಸರ್‍ಬರಾಕಿಲ್ವ? ಯೇಳು”
“ಎಲ್ಲಾನ ಉಂಟಾ ಮಗ್ಳೆ? ಕಣ್ಣದ್ರಿಗೇ ಮಗಳಿದ್ರೆ ಬ್ಯಾಡ ಅಂಬಾಕಾಯ್ತದ? ಆದ್ರೆ ಸಾಯಾಗಂಟ ಇಂಗೇ ಇರಾಕಾಯ್ತದ ಯೇಳು ಮತ್ತೆ. ಅದ್ಕೆ ಒಂದ್ ವಿಸ್ಯ ಯೇಳಾನ ಅಂಬ್ತ ಇವ್ನಿ.”
“ಏನಪ್ಪ?”
“ಅದೇ….. ಅದೇ… ಓಡೇರ್ ಕರಿಸ್ಕಂಡಿದ್ರು”
“ಯಾಕಂತೆ?”
“ನಿನ್ನ… ನಿನ್ನ… ಕೂಡಿಕೆ ಮಾಡ್ಕಂಬ್ತಾರಂತ.”
ಶಬರಿ ಸಿಟ್ಟಾಗಲಿಲ್ಲ. ಸ್ವಲ್ಪ ಹೊತ್ತುಸುಮ್ಮನಿದ್ದು ಕೇಳಿದಳು.
“ಅದಕ್ ನೀನೇನಂದೆ?”
“ನಿನ್ನನ್ನ ಕೇಳಿ ಯೇಳ್ತೀನಿ ಅಂದೆ.”
“ನನ್ನೇನ್ ಇದ್ರಾಗ್ ಕೇಳಾದು?”
ತಿಮ್ಮರಾಯಿಗೆ ಅಚ್ಚರಿ. ಮಗಳ ಮುಖ ನೋಡಿದ.
ಶಬರಿ ಮಾತು ಮುಂದುವರೆಸಿದಳು.
“ನನ್ ಕೇಳ್ತೀನಿ ಅಂಬಾದ್ಕಿಂತ ಅಲ್ಲೇ ಯೇಳ್ ಬರ್‌ಬೇಕಿತ್ತು. ಇದು ಆಗಾವೋಗೊ ಮಾತಲ್ಲ. ನನ್‌ ಮಗಳು ಒಪ್ಪಾಕಿಲ್ಲ ಅಂಬ್ತ”
“ಓಡೇರ್‍ಗೆ ಅಂಗೇಳಾಕಾಯ್ತದ ಮಗ್ಳೆ?”
“ಮಗಳಿಗೆ ಇಂಗೇಳಾಕಾಯ್ತದೆ. ಅಲ್ಲೇನಪ್ಪ?”
ಶಬರಿ ವ್ಯಂಗ್ಯ-ವೇದನೆಗಳಿಂದ ಕೇಳಿದ ಮಾತಿಗೆ ತಿಮ್ಮರಾಯಿ ಮೌನವಾದ ಮುಂದೆ ಮಾತಾಡಲಿಲ್ಲ.
ಒಡೆಯರಿಗೆ ಉತ್ತರ ಕೊಡುವುದು ಹೇಗೆಂಬ ತಳಮಳದಲ್ಲಿ ಕಂಗಾಲಾಗಿದ್ದ ಆದರೆ ಹೇಳಲೇಬೇಕಿತ್ತು.
ಮಾರನೇ ದಿನ ತಿಮರಾಯಿ ಒಡೆಯನ ಬಳಿ ಬಂದವನೇ ಕಾಲು ಹಿಡಿದುಕೊಂಡ. “ನನ್‌ ಮಗ್ಳು ಬ್ಯಾಡ ಆಂಬ್ತಾಳೆ ದಣಿ. ಬ್ಯಾಸ್ರ ಮಾಡ್ಕಬ್ಯಾಡ್ರಿ” ಎಂದ.
“ಯಾಕೆ? ಅವ್ಳ್‌ಗೇನ್‌ ಕೊಬ್ಬಾ?” ಎಂದು ಕೇಳಿದ ಒಡೆಯ.
“ಅಂಗಲ್ಲ ದಣೇರ. ಮನ್‌ ಮನ್ನೆ ಗಂಡನ್‌ ಕಳ್ಳಂಡವ್ಳೆ. ಮನಸ್ನಾಗ್ ಅದೇ ಇರ್‍ತೈತೆ. ದಿನ ಕಳ್ದಂಗೆ ಸರ್ಯಾಗ್ತಾಳೆ ದಣಿ”- ತಿಮ್ಮರಾಯಿ ಸಮಾಧಾನಿಸಲು ಯತ್ನಿಸಿದ.

“ಆಯ್ತು. ಇವತ್ತಿಗ್‌ ಬಿಟ್ಟಿವ್ನಿ. ಅವ್ಳ್ ಬ್ಯಾರೆ ಯಾರ್‍ಗೂ ಸಿಗ್‌ಬಾರ್‍ದು. ಅಂಗೇನಾರ ಇದ್ರೆ ನಂಗೇ ಮೊದ್ಲು ಮೀಸಲು. ತಿಳೀತೇನ್ಲ್?”
“ಆಯ್ತು ದಣೇರ”- ತಿಮ್ಮರಾಯಿ ನಿರಾಳವಾದಂತೆ ಥಟ್ಟನೆ ಹೇಳಿದ. ಸದ್ಯ, ಒಡೆಯ ಒದೆಯಲಿಲ್ಲವೆಂದು ಸಂತೋಷಗೊಂಡು ಹಿಂತಿರುಗಿದ.

ಮತ್ತೆ ಮಗಳ ಬಳಿ ಈ ವಿಷಯ ಎತ್ತಲಿಲ್ಲ.
ಮಗಳು ಏನಾಯಿತೆಂದು ಕೇಳಲಿಲ್ಲ.
ಆ ಬಗ್ಗೆ ಮಾತಾಡುವುದೇ ಅಸಹ್ಯವೆನಿಸಿತ್ತು.

ನರನಾಡಿಗಳಲ್ಲಿ ಹರಿಯುವ ನೋವಿನ ಹಾವು.
ಮತ್ತದೇ-
ಚಂದ್ರನಿಲ್ಲದೆ ಬೆಳದಿಂಗಳು ವಿಧವ!
ಸೂರ್ಯ, ನೀನೆಂದು ಬರುವೆ?
* * *

ಹಾದು; ಎಲ್ಲ ನೆನಪುಗಳ ನಡುವೆ ಈಗ ಶಬರಿಯ ಮುಂದಿರುವ ಪ್ರಶ್ನೆ-
‘ಸೂರ್ಯ ನೀನೆಂದು ಬರುವ್?’

ಚಂದ್ರನನ್ನು ಕಳೆದುಕೊಂಡವಳು ಈಗ ಸೂರ್ಯನಿಗಾಗಿ ಹಂಬಲಿಸುತ್ತಿದ್ದಾಳೆ. ಇಲ್ಲೀವರೆಗೆ ಬಂದ ನೆನಪುಗಳಲ್ಲಿ ಚಂದ್ರನ ಶವ ಕಂಡ ಶಬರಿ ಬಚ್ಚಿಬಿದ್ದು ನೋಡುತ್ತಾಳೆ-

ಅದೇ ಕತ್ತಲು: ಅದೇ ಬಿರುಗಾಳಿ; ಗುಡುಗು ಮಿಂಚುಗಳ ಸಂಚಿನಾಟ!
ಮಿಂಚಿನ ಬೆಳಕಿನಲ್ಲಿ ತೇಲಿಬರುವ ಚಂದ್ರನ ಹೆಣ.
ಗುಡುಗಿನ ಸದ್ದಿಗೆ ನಡುಗಿ ನಿಂತು ಹೋದ ಜೀವ.
ಕತ್ತಲ ಕಣಿವೆಯಲ್ಲಿ ನೆನಪಿನ ನೆತ್ತರ ಕಲೆಗಳು!
ಬೆತ್ತಲಾದ ಮನಸಲ್ಲಿ ಸತ್ತೂ ಸಾಯದ ಸೆಳೆತಗಳು!

ಶಬರಿ ಹೊಟ್ಟೆಯನ್ನು ನೋಡಿದಳು. ಅಯಾಚಿತವಾಗಿ ಅಂದುಕೊಂಡಳು.
“ತೇಜ, ತೇಜ”. ಮಗನಿಗೆ ಮಾತಿಲ್ಲ.

ಹೂಟ್ಟೆಯೊಳಗಿನ ಜೀವ. ಭ್ರೂಣಗಟ್ಟಿದ ಭಾವ. ಶಬರಿಗೆ ಸಂಕಟ. ಅಲ್ಲೇ ಇದ್ದ ಹುಚ್ಚೀರನ ಕಣ್ಣಲ್ಲಿ ನೀರು.

ಶಬರಿಯನ್ನು ಕಾಡುವ ಸಾವಿನ ಸರ್ಪ!
ಅಂದು ಗಂಡ ಚಂದ್ರನ ಸಾವು; ಇಂದು ತಂದೆ ತಿಮ್ಮರಾಯಿ ಸಾವು.
ಹಾಗಾದರೆ ಸೂರ್ಯ?
ಸೂರ್ಯ ಯಾಕೆ ಇಷ್ಟು ದಿನಗಳಾದರೂ ಬರಲಿಲ್ಲ.
ಇನ್ನೆಷ್ಟು ದಿನ ಕಾಯುವುದು? ಶಬರಜ್ಜಿಯಾಗಬೇಕೆ? ಕಾಯುತ್ತಲೇ ಕಾಯಿಪಲ್ಲೆಗಳನ್ನು ಕೂಡಿಡಬೇಕೆ? ಕಣ್ಣಿಗೆ ಎಣ್ಣೆ ಹಾಕಿಕೊಂಡು ಹಾದಿ ನೋಡುತ್ತಲೇ ಇರಬೇಕೆ?

ಎದ್ದ ಪ್ರಶ್ನೆಗಳನ್ನು ಬಡಿದು ಬೀಳಿಸುವಂತೆ ಬಿರುಗಾಳಿ ಬೀಸಿತು.

ನೋಡು ನೋಡುತ್ತಿದ್ದಂತಯೇ ಗಾಳಿಯ ಬಿರುಸು ಕಡಿಮೆಯಾಗಿ ಮಳೆ ಶುರುವಾಯಿತು. ಇದ್ದಕ್ಕಿದ್ದಂತೆ ಜೋರು ಮಳೆ. ಹೂರಗೆ ಇದ್ದ ಶಬರಿ ಎದ್ದು ಒಳ ಹೋದಳು. ಜೊತೆಗೆ ಹುಚೀರನೂ ಹೋದ. ಒಳಗೆ ಬಾಗಿಲ ಬಳಿಯೇ ಕೂತ.

ತಿಮ್ಮರಾಯಿಯನ್ನು ಮಣ್ಣುಮಾಡಿ ಬಂದ ಮೇಲೆ ಗೂಡಲ್ಲಿ ಇಟ್ಟಿದ್ದ ದೀಪ ಹಾಗೇ ಉರಿಯುತ್ತಿತ್ತು.

ಹೊರಗೆ ಮಿಂಚು; ಮಳೆ.
ಶಬರಿ ಹೊರಗೆ ಬಂದಳು; ದಿಟ್ಟಿಸಿದಳು.
ಕರದರಲ ಕಣಿವೆಯಲ್ಲಿ ಬೆಳಕಿನ ನೀರು.
ಮತ್ತೆ ನೆನಪಿನ ನೆತ್ತರನದಿ…
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಾಕಿನ ಬಯಕೆ
Next post ನೀನೆಂಬುದಿಲ್ಲದಿದ್ದರೆ…. ನಾನೆಂಬುದೂ ಇಲ್ಲ

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

cheap jordans|wholesale air max|wholesale jordans|wholesale jewelry|wholesale jerseys