ನೀನೆಂಬುದಿಲ್ಲದಿದ್ದರೆ
ನಾನೆಂಬುದೂ ಇಲ್ಲ.
ಗಿಡ ಮರ ಹೂಗಳಿಲ್ಲ.
ಹಕ್ಕಿ ಹಾಡು, ಗೂಡುಗಳಿಲ್ಲ.
ಕತ್ತಲ ತೊಡೆಯುವ ಸೂರ್‍ಯ
ಕಲ್ಮಶಗಳನ್ನು ತೊಳೆಯುವ ನದಿ
ಜಗತ್ತೆ ಅತ್ತಂತೆ ಕಾಣಿಸಿಸುವ ಮಳೆ
ಜಗತ್ತೆ ನಕ್ಕಂತೆ ಕಾಣಿಸುವ
ಬೆಳದಿಂಗಳು, ಯಾವುದೂ ಇಲ್ಲ.

ನೀನೆಂಬುದಿಲ್ಲದಿದ್ದರೆ
ನಾನೆಂಬುದೂ ಇಲ್ಲ.
ಮೆಟ್ಟಿದರೂ ಮಿಡುಕದ ನೆಲ
ಮಿಂಚಿ ಮಳೆಗರೆವ ಮುಗಿಲು
ತಗ್ಗದ, ಬಗ್ಗದ, ಜಗ್ಗದ
ಬೆಟ್ಟಗಳ ಸಾಲು
ಝೇಂಕರಿಸುವ ದುಂಬಿ
ನಿಟ್ಟುಸಿರಿಡುವ ಗಾಳಿ
ಹರ್‍ಷ ತುಂಬಿದ ಹಗಲು
ವಿಷಾದ ಸೂಸುವ ಇರುಳು
ಯಾವುವೂ ಇಲ್ಲ.

ನೀನೆಂಬುದಿಲ್ಲದಿದ್ದರೆ
ನಾನೆಂಬುದೂ ಇಲ್ಲ.
ಪಂಜಗಳಿದ್ದೂ ಪಂಜರದೊಳಗೆ
ಬಂದಿಯಾದ ಸಿಂಹ
ನರ್‍ತನವೆಂದರೇನು ಎಂದು
ಕೇಳುವ ನವಿಲು
ಕಾಡಿನ ಜಾಡರಿಯದ ಜಿಂಕೆ
ಹಾರಲು ಹಿಂಜರಿಯುವ ಹಕ್ಕಿ
ಯಾವುದೂ ಇಲ್ಲ.

ನೀನೆಂಬುದಿಲ್ಲದಿದ್ದರೆ
ನಾನೆಂಬುದೂ ಇಲ್ಲ.
ಚಿಂದಿ ಆಯುವ ಹುಡುಗ
ಹೂಮಾರುವ ಹುಡುಗಿ
ಕಳ್ಳ, ಕದೀಮ, ಕಲಾವಿದ,
ಠೇಂಕರಿಸುವ ರಾಜಕಾರಣಿ
ಹೂಂಕರಿಸುವ ಉಗ್ರಗಾಮಿ
ಯಾರ್‍ಯಾರೂ ಇಲ್ಲ.

ನೀನೆಂಬುದಿಲ್ಲದಿದ್ದರೆ
ನಾನೆಂಬುದೂ ಇಲ್ಲ.
ನೇಣಿಗೇರಿದ ನಿರುದ್ಯೋಗಿ
ಪ್ರೀತಿಸಿ ಕೈಕೊಟ್ಟ ಪ್ರೇಮಿ
ಹೆತ್ತು ಬಿಸಾಡಿಹೋದ ತಾಯಿ
ವರದಕ್ಷಿಣೆ, ಸೀಮೆಎಣ್ಣೆ,
ಕೋರ್‍ಟು, ಕಛೇರಿ,
ಜಾಮೀನೂ ಜೈಲು
ಯಾವುದೂ ಇಲ್ಲ.

ನೀನೆಂಬುದಿಲ್ಲದಿದ್ದರೆ
ನಾನೆಂಬುದೂ ಇಲ್ಲ.
ನೀರಿಲ್ಲದ ನಲ್ಲಿ
ಕೈಕೊಡುವ ಕರೆಂಟು
ವೋಟು, ಬಜೆಟು,
ಸ್ಲಮ್ಮು, ಸ್ಲೋಗನ್ನು
ಸಾರಾಯಿ, ತುರಾಯಿ
ಯಾವುದೂ ಇಲ್ಲ.

ನೀನೆಂಬುದಿಲ್ಲದಿದ್ದರೆ
ನಾನೆಂಬುದೂ ಇಲ್ಲ.
ಮಸೀದಿ, ಮಠ, ಮುಷ್ಕರ
ಮೆರವಣಿಗೆಗಳಿಲ್ಲ.
ಭಾಷಣ, ಭರವಸೆ
ಪ್ರಣಾಳಿಕೆಗಳಿಲ್ಲ.
ಗಡಿ, ಗನ್ನು,
ಅಪಘಾತ, ಅಣುಬಾಂಬು
ಯಾವುದೂ ಇಲ್ಲ.

ನೀನೆಂಬುದಿಲ್ಲದಿದ್ದರೆ
ನಾನೆಂಬುದೂ ಇಲ್ಲ.
ದುಃಖ, ದುಗುಡ, ದುಮ್ಮಾನವಿಲ್ಲ.
ಆಸೆ, ಅಕ್ಕರೆ, ಅಹಂಕಾರಗಳಿಲ್ಲ.
ಆತ್ಮನೂ ಇಲ್ಲ, ಪರಮಾತ್ಮನೂ ಇಲ್ಲ.
ಧ್ಯಾನ, ಮೋಕ್ಷ, ಮರಣ,
ಸಮಾಧಿ, ಸ್ಮಾರಕಗಳಿಲ್ಲ.
ಅಣುವೂ ಇಲ್ಲ
ಬ್ರಹ್ಮಾಂಡವೂ ಇಲ್ಲ.

ಇಲ್ಲಿ….
ನಾನು-ನೀನು
ಏನೇನೂ ಅಲ್ಲ.
*****

ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)