ಕನ್ನಡದಲ್ಲಿ ಎಲ್ಲವನ್ನೂ ಹೇಳುವುದು ಸಾಧ್ಯವಾಗಬೇಕು

ಕನ್ನಡದಲ್ಲಿ ಎಲ್ಲವನ್ನೂ ಹೇಳುವುದು ಸಾಧ್ಯವಾಗಬೇಕು

‘ಆಳ ನಿರಾಳ’ದ ಈ ಕಾಲಮಿನಲ್ಲಿ ನಾನು ಹಲವಾರು ವಿಷಯಗಳ ಕುರಿತು ಬರೆಯುತ್ತಿದ್ದೇನೆ. ವಾರ ವಾರವೂ ಬರೆಯುವಾಗ ಈ ತರದ ವೈವಿಧ್ಯತೆ ಅನಿವಾರ್ಯವಾಗಿ ಬಂದೇ ಬರುತ್ತದೆ. ಸಾಹಿತ್ಯ, ಭಾಷೆ, ಶಿಕ್ಷಣ, ವಿಜ್ಞಾನ, ಸಮಾಜ ವಿಜ್ಞಾನ, ಇತಿಹಾಸ, ಸಂಸ್ಕೃತಿ ಮುಂತಾದ ಹಲವು ಕ್ಷೇತ್ರಗಳಲ್ಲಿ ನನಗಿರುವ ಕುತೂಹಲವನ್ನು ಓದುಗರ ಜತೆ ಹಂಚಿಕೊಳ್ಳುವುದಕ್ಕೆ ಈ ಮೂಲಕ ನನಗೆ ಸಾಧ್ಯವಾಗುತ್ತಿದೆ. ಹಂಚಿಕೊಳ್ಳುವುದಕ್ಕಿಂತಲೂ ಮುಖ್ಯವಾಗಿ ಅವರನ್ನು ಯೋಚನೆಗೆ ಹಚ್ಚುವುದು ನನ್ನ ಉದ್ದಿಶ್ಯ. ಯಾಕೆಂದರೆ ಹಂಚಿಕೊಳ್ಳುವುದಕ್ಕೆ ನನ್ನ ಬಳಿ ಏನೂ ಇಲ್ಲ. ಅಲ್ಲದೆ ಈ ನನ್ನ ಪ್ರಯತ್ನದ ಹಿಂದೆ ಜನರಿಗೆ ಗೊತ್ತಿರಲಾರದ ಇನ್ನೊಂದು ಆಶಯವೂ ಇದೆ: ಅದೆಂದರೆ ಕನ್ನಡದಲ್ಲಿ ‘ಎಲ್ಲವನ್ನೂ’ ಹೇಳುವುದು ಸಾಧ್ಯವಾಗಬೇಕು ಎನ್ನುವುದು.

ಕರ್ನಾಟಕದಿಂದ ಯಾವತ್ತೂ ದೂರವಿರುವ ನನ್ನಂಥವರು ಕನ್ನಡಿಗರನ್ನು, ಕನ್ನಡ ಭಾಷೆಯನ್ನು ಬಹಳವಾಗಿ ಹಚ್ಚಿಕೊಂಡಿರುತ್ತಾರೆ. ಇದರರ್ಥ ಇತರ ಜನರನ್ನಾಗಲಿ, ಭಾಷೆಗಳನ್ನಾಗಲಿ ಅವರು ಕಡೆಗಣಿಸುತ್ತಾರೆ ಎಂದಲ್ಲ. ಒಬ್ಬ ಸಾಹಿತಿಯಾಗಲಿ, ಭಾಷಾವಿಜ್ಞಾನಿಯಾಗಲಿ, ವಿಚಾರವಂತನಾಗಲಿ ಯಾರನ್ನೇ ನಿರಾಕರಿಸುವುದು ಹೇಗೆ ಸಾಧ್ಯ? ನಿರಾಕರಿಸುವ ಬದಲು ಸ್ವೀಕರಿಸುವ ತತ್ವವೇ ಪ್ರಗತಿಗೆ ಒಳ್ಳೆಯದು. ಆದರೂ ಮನುಷ್ಯನಿಗೆ ಕೆಲವೊಂದು ಪ್ರಾದೇಶಿಕ ಪ್ರೀತಿಗಳು ಇದ್ದೇ ಇರುತ್ತವೆ. ಇವೇ ಆತನಿಗೊಂದು ಹೆಸರು ಮತ್ತು ಗುರುತನ್ನು ಕಲ್ಪಿಸುವುದು. ಮಹಾತ್ಮಾ ಗಾಂಧಿಯವರ ಬಗ್ಗೆ ಬರೆಯುತ್ತ ಎರಿಕ್ ಎರಿಕ್ಸನ್ ಸ್ವಲ್ಪ ಬೆರಗು ಮತ್ತು ಹತಾಶೆಯಿಂದ ಹೇಳುವ ಮಾತೆಂದರೆ ಲೋಕವನ್ನು ಪೀತಿಸುವ ವ್ಯಕ್ತಿ ಯಾರನ್ನೂ ಪ್ರೀತಿಸುವುದಿಲ್ಲ ಎಂದು. ಇದೇ ಮಾತನ್ನು ಈಚೆಗೆ ತೀರಿಕೊಂಡ ಅಮೇರಿಕದ ತತ್ವಜ್ಞಾನಿ ರಿಚರ್ಡ್ ರೋರ್‍ಟಿ ಕೂಡಾ ಇನ್ನೊಂದು ಸಂದರ್ಭದಲ್ಲಿ ಹೇಳಿದ್ದುಂಟು. ಆದರೆ ಮಹಾತ್ಮಾ ಗಾಂಧಿ ಆಫ್ರಿಕಾದಲ್ಲಿ ಹೋರಾಡಿದ್ದು ಅಲ್ಲಿ ನೆಲಸಿದ್ದ ಭಾರತೀಯ ಅನಿವಾಸಿಗಳ ಪರವಾಗಿ ವಿನಾ ಅಲ್ಲಿನ ಕಪ್ಪು ಜನರ ಪರವಾಗಿ ಅಲ್ಲ. ಆದ್ದರಿಂದಲೇ ವಿ. ಎಸ್. ನೈಪಾಲ್ ಗಾಂಧಿಯವರ ಆಫ್ರಿಕಾದಲ್ಲಿ ಆಫ್ರಿಕನ್ನರೇ ಇಲ್ಲ ಎಂದು ಗೇಲಿಮಾಡುವುದು ಸಾಧ್ಯವಾದುದು. ಆದರೆ ನೈಪಾಲರ ವಿಷಯಕ್ಕೇ ಬಂದರೆ, ಎಂದೋ ಭಾರತದಿಂದ ಟ್ರಿನಿಡಾಡ್‌ಗೆ ವಲಸೆಹೋದ ಕುಟುಂಬದಲ್ಲಿ ಜನಿಸಿ ಈಗ ಇಂಗ್ಲೆಂಡ್‌ನಲ್ಲಿ ವಾಸವಾಗಿರುವ ಈ ನೊಬೆಲ್ ಸಾಹಿತಿಯಾದರೂ ಭಾರತದ ಬಗ್ಗೆ ಭಾರತೀಯರ ಬಗ್ಗೆ ಯಾಕೆ ಇಷ್ಟೊಂದು ತಲೆಕೆಡಿಸಿಕೊಳ್ಳಬೇಕು ಎಂದು ನಾವು ಕೇಳಬಹುದು. ಗಾಂಧಿಯವರಾಗಲಿ ನೈಪಾಲರಾಗಲಿ ‘ಸಂಕುಚಿತ’ ಮನಸ್ಕರೆಂದು ಯಾರೂ ಖಂಡಿತ ಹೇಳಲಾರರು.

ಮನುಷ್ಯ ಸಮೂಹಗಳ ಅಸ್ತಿತ್ವ ಮತ್ತು ಬೆಳವಣಿಗೆಗೆ ವಿಶ್ವಮಾನವತೆ (universalism)ಹಾಗೂ ಸ್ವಾಯತ್ತತೆ (autonomy) ಎರಡೂ ಬೇಕಾಗುತ್ತವೆ. ಬಹುಭಾಷೆಗಳ ಸಾರವೇ ಇದು. ಈ ವಿಷಯದಲ್ಲಿ ಮಾತ್ರ ಮಹಾತ್ಮಾ ಗಾಂಧಿಯವರು ಸ್ವಲ್ಪ ಎಡವಿದಂತೆ ಕಾಣುತ್ತದೆ: ಇಡೀ ಭಾರತದಲ್ಲಿ ಹಿಂದಿಯೊಂದೇ ಬಳಕೆಗೆ ಬರುವುದು ಆರ್ಥಿಕ ಕಾರಣದಿಂದ ಸೂಕ್ತ ಎಂದು ಅವರು ತಮ್ಮದೊಂದು ಲೇಖನದಲ್ಲಿ ಒಮ್ಮೆ ಬರೆದಿದ್ದರು! ಭಾರತದಂಥ ಬಡ ದೇಶಕ್ಕೆ ಹಲವು ಭಾಷೆಗಳನ್ನು ಬೆಳೆಸಿಕೊಳ್ಳುವ ಹಣಕಾಸಿನ ಶಕ್ತಿಯಿಲ್ಲ ಎನ್ನುವುದು ಅವರ ಮಾತಿನ ಹಿಂದಿನ ಕಾಳಜಿಯಾಗಿದ್ದಿತು. ಅವರು ಈ ಮಾತನ್ನು ಹಿಂದಿಯ ಪರವಾಗಿ ಆಡಿದ್ದಲ್ಲ. ಭಾರತದ ಪರವಾಗಿ ಆಡಿದ್ದು, ಹಿಂದಿಯನ್ನು ಒಪ್ಪಿಕೊಳ್ಳುವುದರ ಮೂಲಕ ಇಡೀ ಭಾರತವನ್ನು ಒಟ್ಟಾಗಿ ಉಳಿಸಿಕೊಳ್ಳಬಹುದು ಎಂಬ ಆಂತರ್ಯ ಅವರಲ್ಲಿ ಇದ್ದಿತೋ ಏನೋ. ಆದರೂ ಬಹುಭಾಷೆಯ ಮತ್ತು ಬಹುಳ ಸಂಸ್ಕೃತಿಯ ಭಾರತಕ್ಕೆ ಇಂಥ ಏಕತ್ರತೆ ಹಿತವಾದ ವಿಚಾರವಾಗಿರಲಿಲ್ಲ.

ಈಗ ಎಲ್ಲರ ಆಸೆಯಾದ ಇಂಗ್ಲಿಷ್ ಭಾಷೆಯನ್ನು ಕೂಡಾ ಕೆಲವೇ ಶತಮಾನಗಳ ಹಿಂದೆ ಇಂಗ್ಲೆಂಡ್‌ನಲ್ಲೇ ಯಾರೂ ಕೇಳುವವರಿರಲಿಲ್ಲ. ಅದೊಂದು ಕೇವಲ ಗ್ರಾಮ್ಯ ಭಾಷೆಯಾಗಿತ್ತು. ಲ್ಯಾಟಿನ್ ಮತ್ತು ಫ್ರೆಂಚ್ ಭಾಷೆಗಳು ಆ ದೇಶದ ಆದರ್ಶಗಳಾಗಿದ್ದುವು. ಹದಿನೇಳನೆಯ ಶತಮಾನದ ಆರಂಭದಲ್ಲಿ ಕಿಂಗ್ ಜೇಮ್ಸ್ ಬೈಬಲ್ ಭಾಷಾಂತರ ಮತ್ತು ಶೇಕ್ಸ್‌ಪಿಯರಿನ ನಾಟಕಗಳಿಂದಾಗಿ ಅದಕ್ಕೆ ಸ್ವಲ್ಪ ಮರ್ಯಾದೆ ಬಂತು. ನಂತರವೂ ಆ ಭಾಷೆ ಶಾಲೆ ಕಾಲೇಜುಗಳಲ್ಲಿ ಮಾಧ್ಯಮವಾಗಬೇಕಾದರೆ ಮತ್ತೆರಡು ಶತಮಾನಗಳ ಕಾಲ ಕಾಯಬೇಕಾಯಿತು. ಆದರೆ ನಂತರ ಅದರಲ್ಲಿ ಆದ ಬೆಳವಣಿಗೆ ಮಾತ್ರ ಅಭೂತಪೂರ್ವ. ಇದು ಇಂಗ್ಲಿಷ್‌ನ ಕತೆಯಾದರೆ, ಜರ್ಮನ್ ಭಾಷೆ ಕೂಡಾ ತೀರ ಈಚಿನವರೆಗೆ ಕೀಳರಿಮೆಯಿಂದ ನರಳುತ್ತಿದ್ದುದೇ. ಜರ್ಮನ್ ಮೂಲಕ ಏನೂ ಸಾಧಿಸುವಹಾಗಿಲ್ಲ ಎಂಬ ಸ್ಥಿತಿ. ಗೆಯಥೆ ಬರೆಯಲು ಆರಂಭಿಸಿದ ಕಾಲದಲ್ಲಿ ಸಹಾ ಜರ್ಮನಿಯಲ್ಲಿ ಫ್ರೆಂಚಿನದೇ ಕಾರುಭಾರು. ಮೇಲ್ವರ್ಗದವರೆಲ್ಲ ಮಾತಾಡುತ್ತಿದ್ದುದು ಫ್ರೆಂಚ್ ಭಾಷೆ ಹಾಗೂ ಅನುಸರಿಸುತ್ತಿದ್ದುದು ಫ್ರೆಂಚ್ ಸಂಸ್ಕೃತಿ. ಆದರೆ ನಂತರ ಆ ಭಾಷೆಯಲ್ಲಿ ಇಡೀ ವೈಚಾರಿಕ ಲೋಕವನ್ನೇ ಬದಲಾಯಿಸುವ ಕಾಂಟ್, ಹೆಗೆಲ್, ಮಾರ್ಕ್, ನೀತ್ಸೆ, ಫ್ರಾಯ್ಡ್, ಹೈಡೆಗರ್, ಐನ್‌ಸ್ಟೈನ್ ಮುಂತಾದ ತತ್ವಜ್ಞಾನಿಗಳು, ವಿಜ್ಞಾನಿಗಳು ಮೂಡಿಬಂದುದು ನಮಗೆಲ್ಲ ಗೊತ್ತಿರುವ ಸಂಗತಿ. ಆಧುನಿಕ ತತ್ವಜ್ಞಾನಕ್ಕೆ ಬಹುಶಃ ಜರ್ಮನ್ ನೀಡಿದಂಥ ಕೊಡುಗೆಯನ್ನು ಲೋಕದ ಇನ್ನು ಯಾವುದೇ ಭಾಷೆ ನೀಡಿರಲಾರದು. ಜರ್ಮನಿಯಲ್ಲಿ ಮಾತ್ರವಲ್ಲ, ರಶಿಯಾದಲ್ಲೂ ಹದಿನೆಂಟು ಹತ್ತೊಂಬತ್ತನೆಯ ಶತಮಾನಗಳಲ್ಲಿ ಫ್ರೆಂಚೇ ಆಳುವ ವರ್ಗ ಅನುಸರಿಸುವ ಭಾಷೆಯಾಗಿತ್ತು. ಟಾಲ್‌ಸ್ಟಾಯಿಯ ‘ಯುದ್ಧ ಮತ್ತು ಶಾಂತಿ’ (War and Peace) ಎಂಬ ರಶಿಯನ್ ಕಾದಂಬರಿಯನ್ನು ನೋಡಿದರೆ ಅದರಲ್ಲಿ ಒಂದು ಅಧ್ಯಾಯ ತುಂಬಾ ಫ್ರೆಂಚ್ ಭಾಷೆಯಲ್ಲೇ ಸಂಭಾಷಣೆ ಇರುವುದನ್ನು ಕಾಣಬಹುದು. ರಶಿಯನ್ನಲ್ಲಿ ಹೇಳಿಕೊಳ್ಳುವಂಥ ಒಂದೇ ಒಂದು ಮಹಾಕಾವ್ಯ ಕೂಡಾ ಇಲ್ಲ. ಆದರೂ ಆ ಭಾಷೆ ಮುಂದೊತ್ತಿ ಅದರಲ್ಲಿ ಬಂದಂಥ ಸೃಜನಶೀಲ ಮತ್ತು ವೈಜ್ಞಾನಿಕ -ವೈಚಾರಿಕ ಸಾಹಿತ್ಯ ಬೆರಗುಗೊಳಿಸುವಂಥದು.

ಭಾಷೆಯೊಂದು ಕೇವಲ ಸಾಹಿತ್ಯ ರಚನೆಯಿಂದಷ್ಟೇ ಬೆಳೆಯುವುದಿಲ್ಲ. ಭಾಷೆಯ ಬೆಳವಣಿಗೆಯ ನಿಜವಾದ ಮಾಪನವೆಂದರೆ ಜನಪದದ ಬೆಳವಣಿಗೆ. ಕಲ್ಲಿದ್ದಲ ಹೊರತು ಹೆಚ್ಚೇನೂ ಹೇಳಿಕೊಳ್ಳುವಂಥ ನೈಸರ್ಗಿಕ ಸಂಪತ್ತಿರದ ಇಂಗ್ಲೆಂಡ್ ಆಧುನಿಕತೆಯ ಆರಂಭ ಕಾಲದಿಂದಲೇ ಸಮುದ್ರಾಧಿಪತ್ಯ ಸಾಧಿಸಿಕೊಂಡಿತು. ಮುಂದೆ ವಸಾಹತುಗಳನ್ನು ಸ್ಥಾಪಿಸಿಕೊಳ್ಳಲೂ ವ್ಯಾಪಾರ ವಹಿವಾಟುಗಳನ್ನು ಬೆಳೆಸಿಕೊಳ್ಳಲೂ ಇದರಿಂದ ಆ ದೇಶಕ್ಕೆ ಸಾಧ್ಯವಾಯಿತು. ಚಿಕ್ಕ ದ್ವೀಪವಾದ ಇಂಗ್ಲೆಂಡ್ ಇಡೀ ಲೋಕಕ್ಕೆ ತನ್ನನ್ನು ತಾನು ತೆರೆದುಕೊಂಡಿತು. ಇದೆಲ್ಲದರ ಹಿಂದೆ ಅದು ಪ್ರಜಾಪಭುತ್ವ ಹಾಗೂ ಸಾರ್ವತ್ರಿಕ ಶಿಕ್ಷಣದಲ್ಲಿ ವಿನಿಯೋಗಿಸಿದ ವೈಚಾರಿಕ ಭಂಡವಾಳವೂ ಪ್ರಮುಖ ಪಾತ್ರ ವಹಿಸಿತ್ತೆಂಬುದನ್ನು ಮರೆಯಬಾರದು.

ಕರ್ನಾಟಕದ ‘ಗತ ವೈಭವ’ ಏನೇ ಇದ್ದರೂ ಅದೊಂದೂ ಈಗ ನಮ್ಮ ಸಹಾಯಕ್ಕೆ ಬರುವುದಿಲ್ಲ. ಕರ್ನಾಟಕವೊಂದು ದೇಶವಲ್ಲ, ಅದಕ್ಕೊಂದು ರಾಜಕೀಯ ಶಕ್ತಿಯಿಲ್ಲ. ಇಚ್ಛಾಶಕ್ತಿಯಂತೂ ಮೊದಲೇ ಇಲ್ಲ. ಬೆಂಗಳೂರು ಹೊರ ರಾಜ್ಯದವರಿಂದ ಆಕ್ರಮಿಸಲ್ಪಟ್ಟಿದೆ ಎಂದು ಕೂಗಾಡುತ್ತೇವೆ. ಅವರಿಗೆ ಕನ್ನಡ ಕಲಿಸಿ ಅವರನ್ನು ಕನ್ಕಡಿಗರನ್ನಾಗಿಸಿಕೊಳ್ಳುವ ವ್ಯಾಪಕ ಪ್ರಯತ್ನವನ್ನು ಮಾತ್ರ ಮಾಡುವುದಿಲ್ಲ. ಬೆಂಗಳೂರಿಂದ ಮೈಸೂರಿಗೆ ವರ್ಗವಾದರೇ ಅದರಿಂದ ತಪ್ಪಿಸಿಕೊಳ್ಳುವುದು ಹೇಗೆಂದು ಶತಪ್ರಯತ್ನ ನಡೆಸುವವರು ಕನ್ನಡಿಗರು; ಜಂಗಮಾವಸ್ಥೆಗಿಂತ ಸ್ಥಾವರಾವಸ್ಥೆಯನ್ನೇ ಹೆಚ್ಚು ಇಷ್ಟಪಡುವವರು. ವ್ಯವಸಾಯ ಮೂಲದವರ ಬಗ್ಗೆ ನಾನೀ ಮಾತನ್ನು ಹೇಳುವುದಿಲ್ಲ; ಯಾಕೆಂದರೆ ವ್ಯವಸಾಯ ಇದ್ದಲ್ಲೇ ಇರಲು ನಮ್ಮನ್ನು ಬದ್ಧರಾಗಿಸುತ್ತದೆ. ಆದರೆ ವಿದ್ಯಾಭ್ಯಾಸ ಪಡೆದು ಬೇರೆ ಬೇರೆ ಕಡೆ ಕೆಲಸ ಮಾಡಬೇಕಾದವರೂ ಕೂಡಾ ಇಂಥ ಸಾಹಸ ಪ್ರವೃತ್ತಿಯನ್ನು ತೋರಿಸುವುದು ಕಡಿಮೆ-ವ್ಯವಸಾಯ ಸಂಸ್ಕೃತಿಗೆ ಅವರಿನ್ನೂ ಅಂಟಿಕೊಂಡಿದ್ದಾರೆ ಎನ್ನೋಣವೇ? ಆದರೆ ಇದೇ ಹಿನ್ನೆಲೆಯ ಮಲೆಯಾಳಿಗಳು ಊರು ಬಿಟ್ಟು ಪರವೂರಿಗೆ ಕೆಲಸ ಹುಡುಕಿಕೊಂಡು ಹೋಗುತ್ತಾರೆ. ಕನ್ನಡಿಗರಲ್ಲಿ ಇಂಥ ಉಮೇದು ಕಡಿಮೆ. ಆದ್ದರಿಂದಲೇ ಕರ್ನಾಟಕದಲ್ಲಿ ಹೊರನಾಡಿಗರು ಇರುವಷ್ಟು ಹೊರನಾಡುಗಳಲ್ಲಿ ಕನ್ನಡಿಗರು ಇಲ್ಲದಿರುವುದು. ತಮಿಳರು, ತೆಲುಗರು, ಮಲೆಯಾಳಿಗರು, ಬಿಹಾರಿಗಳು, ಬೆಂಗಾಳಿಗಳು, ಗುಜರಾತಿಗಳು ಎಲ್ಲೆಡೆ ಕಾಣಿಸುತ್ತಾರೆ. ಆದರೆ ಕನ್ನಡಿಗರು ಕಾಣಿಸುವುದು ಅತ್ಯಲ್ಪ. ನಾನು ಸುಮಾರು ಮೂವತ್ತು ವರ್ಷಗಳ ಕಾಲವಿದ್ದ ಹೈದರಾಬಾದಿನ ಸೆಂಟ್ರಲ್ ಇನ್ಸ್‍ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೇಜಸ್ (ಈಗ ಅದರ ಹೆಸರು ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೆಜಸ್ ಯುನಿವರ್‍ಸಿಟಿ) ಎಂಬ ಪ್ರಸಿದ್ಧ ಸಂಸ್ಥೆಗೆ ಓದಲು ಬರುತ್ತಿದ್ದ ವಿದ್ಯಾರ್ಥಿಗಳಲ್ಲಿ ಕನ್ನಡಿಗರ ಸಂಖ್ಯೆಯೇ ಪ್ರತಿ ವರ್ಷವೂ ಅತ್ಯಂತ ಕಡಿಮೆಯದು ಎಂದರೆ ಆಶ್ಚರ್ಯವಾಗುತ್ತದೆ- ಇದರ ಆರಂಭದ ನಿರ್ದೇಶಕರು ಕನ್ನಡಿಗರೇ ಆದ ವಿ. ಕೃ. ಗೋಕಾಕರಾಗಿದ್ದೂ!

ಐ‌ಎಫ್‌ಎಸ್, ಐ‌ಎ‌ಎಸ್ ಮುಂತಾದ ವಿವಿಧ ಭಾರತೀಯ ಸೇವಾ ವಿಭಾಗಗಳಲ್ಲೂ ಕನ್ನಡಿಗರ ಸಂಖ್ಯೆ ಕಡಿಮೆಯೇ ಸರಿ. ಆದರೆ ಬಿಹಾರಿಗಳು, ಬೆಂಗಾಳಿಗಳು, ತಮಿಳರು ಮತ್ತು ಮಲೆಯಾಳಿಗಳು ಸಾಕಷ್ಟು ಸಂಖ್ಯೆಯಲ್ಲಿ ಪ್ರವೇಶ ಪಡೆಯುತ್ತಾರೆ. ಐ‌ಐಟಿಗಳಲ್ಲಿ ತೆಲುಗರದು ಮೇಲುಗೈ. ಐಟಿಯಲ್ಲಿ ತಮಿಳರು ಮುಂದಿದ್ದಾರೆ. ಕನ್ನಡಿಗರು ಯಾಕೆ ಪ್ರತಿಯೊಂದರಲ್ಲೂ ಹಿಂದೆ? ಯಾಕೆಂದರೆ ಕೋಚಿಂಗ್ ಕ್ಲಾಸುಗಳಿಗೆ ನಮ್ಮದು ವಿರೋಧ. ಬೇರೆ ಭಾಷೆಗಳನ್ನು ಕಲಿಯುವುದಕ್ಕೆ ವಿರೋಧ. ಸಂಸ್ಕೃತವೆಂದರೆ ಸಿಟ್ಟು. ನಾವು ಎಲ್ಲವನ್ನೂ ವಿರೋಧಿಸುವ ಪ್ರಚಂಡರು! ಒಂದು ವೇಳೆ ನಾನು ಕರ್ನಾಟಕದ ವಿದ್ಯಾಮಂತ್ರಿಯಾಗುತ್ತಿದ್ದರೆ ಸಮಗ್ರ ಭಾಷಾ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸುತ್ತಿದ್ದೆ; ಅದರಲ್ಲಿ ಸಂಸ್ಕೃತ, ಪಾಳಿ, ಪ್ರಾಕೃತ, ಅರೆಬಿಕ್, ಗ್ರೀಕ್, ಲ್ಯಾಟಿನ್, ಫ್ರೆಂಚ್, ಜರ್ಮನ್, ಸ್ಪಾನಿಶ್, ರಶಿಯನ್, ಚೈನೀ, ಜಪಾನೀ, ಟಿಬೆಟನ್ ಮುಂತಾದ ಭಾಷೆಗಳನ್ನು ಕಲಿಯುವುದಕ್ಕೆ ಅನುಕೂಲತೆ ಕಲ್ಪಿಸಿಕೊಡುತ್ತಿದ್ದೆ. ಅದೇ ರೀತಿ ಉನ್ನತ ಮೂಲ ವಿಜ್ಞಾನ ಮತ್ತು ಸಮಾಜ ವಿಜ್ಞಾನಗಳ ಸಂಸ್ಥೆಗಳನ್ನೂ ತೆರೆಯುತ್ತಿದ್ದೆ. ದೇಶೀ ಹಾಗೂ ವಿದೇಶೀ ಸ್ಪರ್ಧಾ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಗೆ ತರಬೇತಿ ಕೊಡಿಸುವುದನ್ನು ವಿದೇಶೀ ವಿಶ್ವವಿದ್ಯಾಲಯಗಳೊಂದಿಗೆ ಸಂಪನ್ಮೂಲ ವಿನಿಮಯಕ್ಕೆ ದಾರಿ ಮಾಡಿಕೊಡುತ್ತಿದ್ದೆ. ನಿಜ, ಕನಸು ಕಾಣುವುದು ಸುಲಭ ಎಂದು ಈ ಮಾತುಗಳನ್ನು ಕಡೆಗಣಿಸಬಹುದು. ಆದರೆ ಕನಸಿನಿಂದಲೇ ಕಾರ್ಯಕ್ರಮಗಳು ರೂಪಿತವಾಗುವುದು.

ಪರಭಾಷೆಗಳನ್ನು ಕಲಿಯುವುದರಿಂದ ನಮ್ಮ ಭಾಷೆಗೆ ಹಾನಿಯಿದೆಯೇ? ದ್ವಿಭಾಷಿತ್ವ ಸ್ವಭಾಷೆಯ ಸಾವಿಗೆ ಕಾರಣ ಎನ್ನುವ ಕಲ್ಪನೆಯೊಂದಿದೆ. ಇದು ಸರಿಯೆಂದಾದರೆ, ಬೇರೆ ಭಾಷಾಸಂಪರ್ಕದಿಂದ ದೂರವಿರುವುದೇ ಸ್ವಭಾಷೆಯ ರಕ್ಷಣೋಪಾಯವಾಗುತ್ತದೆ. ಆದರೆ ಈ ರೀತಿ ಬೇಲಿ ಹಾಕಿಕೊಳ್ಳುವುದು ಎಷ್ಟು ಆಭಾಸಪೂರ್ಣವೆಂದು ಬೇರೆ ಹೇಳಬೇಕಾಗಿಲ್ಲ. ಹೆಚ್ಚೆಚ್ಚು ಸಂಪರ್ಕಜಾಲದಲ್ಲಿ ಬೆಳೆಯುತ್ತಿರುವ ಇಂದಿನ ಜಗತ್ತಿನಲ್ಲಿ ಇದು ಅಸಾಧ್ಯವೂ ಹೌದು. ಇತರ ಭಾಷೆಗಳ ಸಂಸರ್ಗದಲ್ಲೇ ನಮ್ಮ ಸ್ವಂತ ಭಾಷೆ ಬೆಳೆಯಬೇಕು; ಆಗಲೇ ಅದಕ್ಕೆ ಕಸುವು ದೊರಕುವುದು. ಕೃತಕ ರಕ್ಷಣೆಯಲ್ಲಿ ಭಾಷೆ ಹೆಚ್ಚು ಕಾಲ ಉಳಿಯಲಾರದು. ಆದರೆ ಸಾಧ್ಯವಾದ ರಕ್ಷಣೆ ಅದಕ್ಕೆ ಬೇಕಾಗುತ್ತದೆ; ಇದಕ್ಕೆ ಆಧುನಿಕ ಮನಸ್ಸು ಸಾಮಾನ್ಯವಾಗಿ ಸಂದೇಹದಿಂದ ನೋಡುವಂಥ ಭಾಷಾಭಿಮಾನ ಅಗತ್ಯವಾಗುತ್ತದೆ.

ಸ್ವಂತ ಭಾಷೆಯನ್ನು ಅಭಿವೃದ್ದಿಪಡಿಸುವುದಕ್ಕೆ ಭಾಷಾಂತರ ಒಂದು ಪ್ರಮುಖ ವಿಧಾನ. ಆಧುನಿಕ ಕನ್ನಡದ ಬೆಳವಣಿಗೆಗೆ ಪತ್ರಿಕೆಗಳು ನೀಡಿರುವ ಹಾಗೂ ನೀಡುತ್ತಿರುವ ಕೊಡುಗೆಯನ್ನು ಗಮನಿಸಿದರೆ ಈ ಸಂಗತಿ ತಿಳಿಯುತ್ತದೆ. ಪತ್ರಿಕಾಲಯಗಳಿಗೆ ಸುದ್ದಿಗಳು ಹೆಚ್ಚಾಗಿ ಸುದ್ದಿ ಸಂಸ್ಥೆಗಳ ಮೂಲಕ ಇಂಗ್ಲಿಷ್ ಭಾಷೆಯಲ್ಲಿ ಬರುತ್ತವೆ; ಅವನ್ನು ಪತ್ರಿಕಾಕರ್ತರು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸುತ್ತಾರೆ. ಇದು ಬಹಳ ತುರ್ತಿನಲ್ಲಿ ನಡೆಯುವ ಕೆಲಸ. ಇಂಥ ತುರ್ತು ಕೆಲವೊಮ್ಮೆ ಆಭಾಸಕ್ಕೆ ಎಡೆಮಾಡಿದರೂ ಹೊಸ ಹೊಸ ಪದಗಳ ನಿರ್ಮಾಣಕ್ಕೆ ಮತ್ತು ಬಳಕೆಗೆ ಕಾರಣವಾಗುವುದರಿಂದ ಇದೊಂದು ಸೃಷ್ಟಿಕ್ರಿಯೆಯೆಂದೇ ತಿಳಿದುಕೊಳ್ಳಬೇಕು. ಇಡೀ ಜಗತ್ತಿನಲ್ಲಿ ಬಹುಶಃ ಅರಬರಷ್ಟು ಭಾಷಾಭಿಮಾನಿಗಳು ಬೇರೆ ಇಲ್ಲ. ಆದ್ದರಿಂದಲೇ ಅವರು ಶ್ರೇಷ್ಟ ಅನುವಾದಕರೂ ಹೌದು. ಅರಬೀ ಭಾಷಾಂತರ ಇಲ್ಲದಿರುತ್ತಿದ್ದರೆ ಆಧುನಿಕ ಜಗತ್ತಿಗೆ ಪ್ಲೇಟೋ, ಅರಿಸ್ಟಾಟಲ್ ಮುಂತಾದವರ ಬರಹಗಳು ಲಭ್ಯವಾಗುತ್ತಿರಲಿಲ್ಲ. ಯಾಕೆಂದರೆ ಈ ಮೂಲ ಬರಹಗಳೊಂದೂ ಈಗ ಉಳಿದಿಲ್ಲ. ಇಂದು ಅರಬೀ ಉಪಶೀರ್ಷಿಕೆಗಳಿರುವ ಅದೆಷ್ಟೋ ಸಿನೆಮ ಮತ್ತು ಟೀವಿ ಧಾರಾವಾಹಿಗಳು ಸೀಡಿ ಅಥವಾ ಡಿವಿಡಿ ರೂಪಗಳಲ್ಲಿ ದೊರಕುತ್ತವೆ. ಇಂಗ್ಲಿಷ್ ಭಾಷೆಯ ಕುರಿತಾಗಿ ಆಸಕ್ತಿಯಿದ್ದರೂ ಅರಬರು ಎಂದೂ ತಮ್ಮ ಮಾತೃಭಾಷೆಯನ್ನು ಬಿಟ್ಟುಕೊಡುವವರಲ್ಲ. ಅರೇಬಿಯಾದ ದೊಡ್ಡ ಪಟ್ಟಣಗಳ ಹೆಚ್ಚಿನ ಸ್ಥಾಪನೆಗಳಿಗೂ ಇಂಗ್ಲಿಷ್ ನಾಮಫಲಕಗಳೇನೋ ಇವೆ; ಆದರೆ ಇಂಗ್ಲಿಷ್‌ನ ಸ್ಥಾನ ಅರಬೀ ಭಾಷೆಯ ಕೆಳಗಡೆ. ಅದೇ ರೀತಿ ಎಲ್ಲಾ ಸ್ತರಗಳಲ್ಲೂ ವ್ಯಾಸಂಗ ಮಾಧ್ಯಮ ಅರಬಿಯೇ. ಇಂಗ್ಲಿಷ್ ಒಂದು ಕಲಿಕೆಯ ಭಾಷೆ ಮಾತ್ರ.

ಬಾಷಾಂತರದಿಂದ ಸ್ವಂತ ಬಾಷೆಯಲ್ಲಿ ಸಾಹಿತ್ಯ ಮೂಡುವುದಕ್ಕೆ ತೊಂದರೆಯಾಗುತ್ತದೆ ಎನ್ನುವುದು ಸರಿಯಲ್ಲ. ಭಾಷಾಂತರವನ್ನು ಸೃಜನಶೀಲತೆಗೆ ಪೂರಕವಾಗಿ ಮಾಡಿಕೊಳ್ಳುವುದು ನಮ್ಮ ಕೈಯಲ್ಲಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೦೭
Next post ಬನ್ನಿ ಕೂಗಾಡೋಣ

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…