ಪುಂಸ್ತ್ರೀ – ೧೨

ಪುಂಸ್ತ್ರೀ – ೧೨

ಮನವನೋದಿಕೋ ತಾತ

ದ್ರೋಣಾಚಾರ್ಯರ ದೇಹಾಂತ್ಯದ ಬಳಿಕ ಇನ್ನು ಬದುಕುಳಿದು ಮಾಡುವುದೇನು ಎಂಬ ಭಾವ ಭೀಷ್ಮರನ್ನು ಕಾಡತೊಡಗಿತು. ದ್ರೋಣಾಚಾರ್ಯರನ್ನು ಹಾಗೆ ವಧಿಸಬೇಕಾದ ಪ್ರಮೇಯವಿರಲಿಲ್ಲ. ಹೆಬ್ಬೆರೆಳು ಕಳಕೊಂಡ ವಯೋವೃದ್ಧ ಗುರುವನ್ನು ಕೊಲ್ಲಲು ಯುಧಿಷ್ಠಿರ ಸುಳ್ಳು ಹೇಳಬೇಕಾದ ಪರಿಸ್ಥತಿ ನಿರ್ಮಾಣವಾದುದನ್ನು ನೆನೆದು ಅವರಿಗೆ ಕಳವಳವಾಯಿತು. ತಾನು ಅಯೋಮಯ ಸ್ಥತಿಯಲ್ಲಿರುವಾಗ ಶಿಖಂಡಿ ಬಾಣ ಪ್ರಯೋಗಿಸಿದ್ದೂ ಅವರ ನೆನಪಿಗೆ ಬಂತು. ತಾನು ಬದುಕಿಯೂ ಸತ್ತಿದ್ದೇನೆ. ದ್ರೋಣಾಚಾರ್ಯರು ನಿಜವಾಗಿಯೂ ಸತ್ತಿದ್ದಾರೆ. ಎರಡೂ ಘಟನೆಗಳ ಹಿಂದೆ ಒಂದೇ ಪ್ರೇರಕ ಶಕ್ತಿ ಇರುವಂತೆ ಅವರಿಗೆ ಭಾಸವಾಯಿತು. ಯುಧಿಷ್ಠಿರ ಸುಳ್ಳು ಹೇಳಬೇಕಾದರೆ ಅದಕ್ಕೆ ಕೃಷ್ಣನ ಒತ್ತಾಯವೇ ಕಾರಣವಾಗಿರಬೇಕು. ಶಿಖಂಡಿಯನ್ನು ಬಾಣ ಪ್ರಯೋಗಿಸುವಂತೆ ಪ್ರೇರೇಪಿಸಿದ್ದೂ ಅವನೇ ಆಗಿರಬೇಕು. ಭೀಷ್ಮರು ಧನುರ್ಧಾರಿಯಾಗಿರುವವರೆಗೆ ಪಾಂಡವರಿಗೆ ವಿಜಯ ದಕ್ಕುವುದಿಲ್ಲ ಎಂದು ಕೃಷ್ಣ ಅಂದು ಅರ್ಜುನನೊಡನೆ ಮುಖಾಮುಖಿಯಾದಾಗ ಹೇಳಿದ್ದು ಅವರಿಗೆ ನೆನಪಾಯಿತು. ಅವನ ಪ್ರೇರಣೆ ಅಲ್ಲದಿರುತ್ತಿದ್ದರೆ ಶಿಖಂಡಿ ಯಾಕಾಗಿ ಬಾಣ ಪ್ರಯೋಗಿಸಬೇಕಿತ್ತು? ಶಿಖಂಡಿಯ ವರ್ತನೆಗೆ ಬೇರಾವ ಕಾರಣವೂ ಭೀಷ್ಮರಿಗೆ ಹೊಳೆಯಲಿಲ್ಲ.

ಅವರ ನೆನಪುಗಳು ಹಿಂದಕ್ಕೋಡಿದವು. ಯುದ್ಧ ಹದಿನಾರನೆಯ ದಿನವನ್ನು ಪ್ರವೇಶಿಸಿದೆ. ದುರ್ಯೋಧನನ ತಮ್ಮಂದಿರಲ್ಲಿ ಈಗ ಬದುಕುಳಿದಿರುವವರೆಂದರೆ ಯುಯುತ್ಸು ಮತ್ತು ದುಶ್ಯಾಸನ ಮಾತ್ರ. ಯುದ್ಧಾರಂಭದ ಮುನ್ನ ಕುರು ಸೇನಾಧ್ಯಕ್ಷನಾಗಿ ಉಭಯ ಸೇನೆಗಳ ನಡುವೆ ರಥವನ್ನು ಪ್ರತಿಷ್ಠಾಪಿಸಿ ಅವರು ಉಚ್ಛ ಕಂಠದಲ್ಲಿ ಘೋಷಿಸಿದ್ದರು: “ಇದು ಧರ್ಮಕ್ಷೇತ್ರವಾದ ಕುರುಕ್ಷೇತ್ರ. ಧರ್ಮಸ್ಥಾಪನೆಗಾಗಿಯೇ ಯುದ್ಧ ನಡೆಯುತ್ತಿದೆ. ನಮ್ಮ ಪಾಳಯದಲ್ಲಿನ ಡೋಲಾಯ ಮನಸ್ಸಿನವರಿಗೆ ಕುರು ಸೇನಾಧ್ಯಕ್ಷನಾಗಿ ಕೊನೆಯ ಅವಕಾಶ ನೀಡುತ್ತಿದ್ದೇನೆ. ಪಾಂಡವರದು ಧರ್ಮಮಾರ್ಗವೆಂದು ಭಾವಿಸುವವರು ನಮ್ಮ ಸೇನೆಯಲ್ಲಿದ್ದು, ಆತ್ಮಸಾಕ್ಷಿಗೆ ವಿರುದ್ಧವಾಗಿ ಹೋರಾಡಬೇಕಾಗಿಲ್ಲ. ಅವರು ತಮಗಿಷ್ಟ ಬಂದಂತೆ ಮಾಡಬಹುದು.”

ಭೀಷ್ಮಾಚಾರ್ಯರ ಘೋಷಣೆ ಕೇಳಿ ಉಭಯ ಸೇನೆಗಳು ಆಶ್ಚರ್ಯಚಕಿತವಾಗಿದ್ದವು. ಸಂಚಲನ ಕಾಣಿಸಿಕೊಂಡದ್ದು ಕುರುಸೇನೆಯಲ್ಲಿ. ಒಬ್ಬ ಶಸ್ತ್ರಧಾರಿ ವೀರ ದಾರಿ ಮಾಡಿಕೊಂಡು ಅವರ ಬಳಿಗೆ ಬಂದು ಹೇಳಿದ್ದ: “ತಾತಾ, ದ್ಯೂತಪೂರ್ವದಲ್ಲಿ ಪಾಂಡವರು ಇಂದ್ರಪ್ರಸ್ಥವನ್ನು ಆಳುತ್ತಿದ್ದರು. ದ್ಯೂತದ ನಿಯಮ ಪ್ರಕಾರ ವನವಾಸ, ಅಜ್ಞಾತವಾಸಗಳನ್ನು ಮುಗಿಸಿ ನ್ಯಾಯಬದ್ಧವಾಗಿ ಇಂದ್ರಪ್ರಸ್ಥವನ್ನು ಕೇಳುತ್ತಿದ್ದಾರೆ. ಅವರಿಗೆ ಅದನ್ನು ಕೊಡಬೇಕಾದದ್ದು ಧರ್ಮ. ಪಾಂಡವ ಪಕ್ಷದಿಂದ ಕೃಷ್ಣನು ಸಂಧಾನಕ್ಕಾಗಿ ಬಂದಿದ್ದಾಗ ನಾನಿದನ್ನು ಅಣ್ಣನಲ್ಲಿ ನಿವೇದಿಸಿದ್ದೆ. ಅವನಿಗದು ಪಥ್ಯವಾಗಲಿಲ್ಲ. ಅಣ್ಣ ಮಾಡುತ್ತಿರುವುದು ಅಧರ್ಮವೆಂದು ನನ್ನ ಮನಸ್ಸಾಕ್ಷಿ ಹೇಳುತ್ತಿದೆ. ನಾನು ಪಾಂಡವ ಪಾಳಯ ಸೇರಿ ಅನ್ಯಾಯದ ವಿರುದ್ಧ ಹೋರಾಡಲು ತೀರ್ಮಾನಿಸಿದ್ದೇನೆ. ನೀವು ನನ್ನನ್ನು ಆಶೀರ್ವದಿಸಬೇಕು.”

ಅವ ಯುಯುತ್ಸು. ದುರ್ಯೋಧನನ ಸೋದರರಲ್ಲಿ ಅತ್ಯಂತ ಹೆಚ್ಚು ತಿಳಿದುಕೊಂಡಿರುವವನು. ದ್ರೌಪದಿಯ ವಸ್ತ್ರಾಪಹರಣ ಕಾಲದಲ್ಲಿ ಇವನು ಸಿಡಿದೇಳುತ್ತಾನೆಂದು ಭೀಷ್ಮರು ಭಾವಿಸಿದ್ದರು. ಆಗಿವನು ದನಿ ಎತ್ತಿರಲಿಲ್ಲ. ವಿಕರ್ಣ ತಿರುಗಿ ಬಿದ್ದು ದ್ರೌಪದಿಯ ಪರ ವಾದಿಸಿದ್ದ. ವಿಕರ್ಣನನ್ನು ಒಬ್ಬರೂ ಬೆಂಬಲಿಸಿರಲಿಲ್ಲ. ಅವನು ಯುದ್ಧ ಸಂನ್ಯಾಸ ಸ್ವೀಕರಿಸಬಹುದೆಂದು ಭೀಷ್ಮರು ಯೋಚಿಸಿದ್ದರು. ಅವರ ಯೋಚನೆಗೆ ವಿರುದ್ಧವಾಗಿ ವಿಕರ್ಣ ಕೌರವ ಪಾಳಯದಲ್ಲೇ ಉಳಿದು ಯುಯುತ್ಸು ಪಾಂಡವ ಪಾಳಯ ಸೇರ ಹೊರಟಿದ್ದಾನೆ. ದುರ್ಯೋಧನನ ಅಕೃತ್ಯಗಳ ಬಗ್ಗೆ ಒಮ್ಮೆಯೂ ದನಿ ಎತ್ತದ ಯುಯುತ್ಸು ಈಗ ಸ್ಫೋಟಿಸಿದ್ದಾನೆ. ಹೆಚ್ಚು ಓದಿಕೊಂಡವರ ಕಥೆ ಹೀಗೆಯೇ. ಮೌನವಾಗಿ ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆ. ಕೊನೆಗೊಮ್ಮೆ ಸಿಡಿದೇಳುತ್ತಾರೆ.

ಯುಯುತ್ಸುವಿನ ವರ್ತನೆ ದುರ್ಯೋಧನನ ನೈತಿಕ ಸೋಲೆಂದು ಭೀಷ್ಮರಿಗೆ ಆಗ ಅನ್ನಿಸಿತ್ತು. ಯುದ್ಧಾರಂಭಕ್ಕೆ ಮುನ್ನ ಸ್ವಯಂ ದುರ್ಯೋಧನನ ಸೋದರ ಉಭಯ ಸೇನೆಗಳ ಮಧ್ಯೆ ನಿಂತು ತನ್ನಣ್ಣನದು ಅಧರ್ಮವೆಂದು ಸಾರಿದ್ದಾನೆ. ಮುಂದಿನ ಯುದ್ಧದುದ್ದಕ್ಕೂ ಕುರುಪಾಳಯದ ಆತ್ಮಸಾಕ್ಷಿಯನ್ನು ಕೆಣಕುವ ಪ್ರಕರಣವಿದು. ಅದಕ್ಕಿಂತ ಸ್ವಲ್ಪ ಮೊದಲು ಯುಧಿಷ್ಠಿರ ತನ್ನ ತಮ್ಮಂದಿರ ಸಹಿತ ಬಂದು ಕಾಲಿಗೆ ಬಿದ್ದಿದ್ದ. ಯುದ್ಧದಲ್ಲಿ ಜಯಶಾಲಿಯಾಗೆಂದು ಆಶೀರ್ವದಿಸಿ ತಾತಾ ಎಂದು ಅವರನ್ನು ನೈತಿಕವಾಗಿ ಕಟ್ಟಿ ಹಾಕಿದ್ದ. ಸಂಕಷ್ಟದಿಂದ ಪಾರಾಗಲು ಅವರು ‘ಧರ್ಮಕ್ಕೆ ಜಯವಾಗಲಿ’ ಎಂದು ಆಶೀರ್ವದಿಸಿದ್ದರು. ದುರ್ಯೋಧನನ ತಮ್ಮ ಯುಯುತ್ಸು ಅಧರ್ಮ ಯಾರದೆಂದು ಸ್ಪಷ್ಟ ತೀರ್ಪು ಕೊಟ್ಟು ಬಿಟ್ಟಿದ್ದಾನೆ!

ಅಪಮಾನದಿಂದ ಕ್ರುದ್ಧನಾಗಿದ್ದ ದುರ್ಯೋಧನ ತನ್ನ ರಥದಿಂದಲೇ ಬೊಬ್ಬಿಟ್ಟಿದ್ದ: ತಾತಾ, ಇದೇನು ಮಾಡಿ ಹಾಕಿದಿರಿ ನೀವು? ಸೇನಾಧ್ಯಕ್ಷನೇ ಪಕ್ಷ ನಿಷ್ಠಾಂತರಕ್ಕೆ ಪ್ರಚೋದನೆ ನೀಡಬಹುದೆ? ಆ ತಲೆಕೆಟ್ಟ ಯುಯುತ್ಸು ಎಲ್ಲಿಗೆ ಬೇಕಾದರೂ ಹೋಗಿ ಹಾಳಾಗಲಿ. ಯುದ್ಧದಲ್ಲಿ ನನಗೆದುರಾದಾಗ ಅವನ ತಲೆ ಕತ್ತರಿಸಿ ಚೆಲ್ಲುತ್ತೇನೆ”.

ಯುಯುತ್ಸು ಭೀಷ್ಮರಿಗೆ ವಂದಿಸಿ ಪಾಂಡವ ಪಾಳಯದತ್ತ ದೃಢವಾದ ಹೆಜ್ಜೆಗಳನ್ನು ಇರಿಸುತ್ತಾ ಹೋಗಿದ್ದ. ಹತ್ತನೆಯ ದಿನ ಶಿಖಂಡಿಯಿಂದಾಗಿ ಹೀಗೆ ಮಲಗಿಯೇ ಇರಬೇಕಾದ ಸ್ಥತಿಯಲ್ಲಿ ಆ ಮಾತುಗಳು ಕಿವಿಯಲ್ಲಿ ಮೊಳಗತೊಡಗಿವೆ. ಹದಿನೈದನೆಯ ದಿನ ಗುರು ದ್ರೋಣಾಚಾರ್ಯರ ಅಮಾನವೀಯ ಹತ್ಯೆಯಾಗಿದೆ. ನಷ್ಟದ ಪರಿಣಾಮವನ್ನು ತುಲನೆ ಮಾಡಿದರೆ ಪಾಂಡವ ಪಕ್ಷಕ್ಕಿಂತಲೂ ಹೆಚ್ಚು ಹಾನಿ ಕೌರವ ಪಕ್ಷಕ್ಕಾಗಿದೆ.

ಭೀಷ್ಮರು ಚಿಂತಾಕ್ರಾಂತರಾಗಿರುವಾಗ ಕರ್ಣನ ಆಗಮನವಾಯಿತು. ಜತೆಯಲ್ಲಿ ದುರ್ಯೋಧನನಿರಲಿಲ್ಲ. ಕರ್ಣ ತನ್ನ ಅಂತರಂಗವನ್ನು ಏಕಾಂತದಲ್ಲಿ ಬಿಚ್ಚಿಡಲು ಬಂದಿರಬೇಕೆಂದು ಅವರಂದುಕೊಂಡರು. ಕರ್ಣನದು ಬಹಳ ಇಕ್ಕಟ್ಟಿನ ಪರಿಸ್ಥತಿ. ತನ್ನದೇ ತಾಯ ಉದರದಿಂದ ಬಂದ ಯುಧಿಷ್ಠಿರ, ಭೀರ್ಮಾರ್ಜುನರೊಡನೆ ಇವ ಹೋರಾಡಬೇಕು, ಅದೂ ದುರ್ಯೋಧನನದು ಅಧರ್ಮವೆಂದು ತಿಳಿದ ಮೇಲೂ! ಪ್ರಾಯಃ ಇಂಥದ್ದೊಂದು ಇಕ್ಕಟ್ಟಿನಲ್ಲಿ ಆರ್ಯಾವರ್ತ ದಲ್ಲಿ ಯಾರೂ ಸಿಕ್ಕಿ ಹಾಕಿಕೊಂಡಿರಲಿಕ್ಕಿಲ್ಲವೆಂದು ಅವರಿಗನ್ನಿಸಿತು.

ಕರ್ಣ ಅವರಿಗೆ ವಂದಿಸಿ ಕುಳಿತುಕೊಂಡ. ಮುಖ ಕಪ್ಪಿಟ್ಟಿತ್ತು. ಇವನೀಗ ಸೇನಾಧ್ಯಕ್ಷನಾಗಿದ್ದಾನೆ. ಒಂದು ದಿನ ಪೂರ್ತಿ ಕುರು ಸೇನೆಯನ್ನು ಮುನ್ನಡೆಸಿದ್ದಾನೆ. ಇವನು ಅಶ್ವತ್ಥಾಮ, ಕೃಪರ ಪಾಲಿಗೆ ಮಹಾ ಬ್ರಾಹ್ಮಣ ದ್ವೇಷಿ. ಶಲ್ಯಭೂಪತಿ ಇವನನ್ನು ಸೂತಪುತ್ರನೆಂದೇ ಕರೆಯುತ್ತಾನೆ. ಪಾಪ, ಈಗಲೂ ಏನೇನು ಅಪಮಾನಗಳನ್ನು ಅನುಭವಿಸುತ್ತಿದ್ದಾನೋ ಏನೊ?

ಭೀಷ್ಮರು ಆತ್ಮೀಯವಾಗಿ ಪ್ರಶ್ನಿಸಿದರು: “ಏನು ಮಗೂ? ಏಕೆ ಬಂದೆ?”

ಕರ್ಣನಿಗೆ ಭೀಷ್ಮರು ಇಷ್ಟವಾಗುತ್ತಿದ್ದುದೇ ಅದಕ್ಕೆ. ಲೋಕ ಅವನನ್ನು ಸೂತಪುತ್ರ ಎಂದು ಕರೆಯುತ್ತಿತ್ತು. ಅವನು ಪರಶುರಾಮರಿಂದ ಶಸ್ತ್ರಾಭ್ಯಾಸ ಮಾಡಿದವನೆಂಬುದು ಗೊತ್ತಾದ ಮೇಲೆ ಭೀಷ್ಮರು ಅವನನ್ನು ಮಗೂ ಎಂದೇ ಕರೆಯತೊಡಗಿದರು. ಅಧಿರಥ, ರಾಧೆಯರು ಕರ್ಣನನ್ನು ಕರೆಯುತ್ತಿದ್ದುದು ‘ಮಗೂ’ ಎಂದೇ. ಆ ಕರೆಯಲ್ಲಿ ಅಪರಿಮಿತ ವಾತ್ಸಲ್ಯವಿತ್ತು. ಭೀಷ್ಮರ ಕರೆಯಲ್ಲಿ ವಾತ್ಸಲ್ಯದೊಡನೆ ಅಭಿಮಾನವೂ ಮಿಳಿತವಾಗಿದ್ದನ್ನು ಕರ್ಣ ಗುರುತಿಸಿದ್ದ. ತನ್ನ ನೋವುಗಳನ್ನು ಅವರಲ್ಲಿ ತೋಡಿಕೊಂಡು ಹಗುರಾಗುತ್ತಿದ್ದ.

ಈ ಮಾನವ ಪ್ರಪಂಚದಲ್ಲಿ ಯಾವತ್ತೂ ನಲಿವಿಗಿಂತ ನೋವೇ ಹೆಚ್ಚು. ನೋವನ್ನು ನಲಿವಾಗಿ ಪರಿವರ್ತಿಸುವುದೇ ಜೀವನ ಕಲೆ ಎಂದು ಅವರಂದದ್ದನ್ನು ನೆನಪಿಟ್ಟುಕೊಂಡಿದ್ದ. ಆ ಮಾತನ್ನು ನೆನಪಿಸಿಕೊಂಡಾಗಲೆಲ್ಲಾ ಅವನಲ್ಲಿ ಅಪರಿಮಿತ ಜೀವನೋತ್ಸಾಹ ತುಂಬುತ್ತಿತ್ತು. ಭೀಷ್ಮಾಚಾರ್ಯರ ಎದೆಯ ವ್ರಣದಿಂದ ವಾಸನೆ ಹೊರ ಹೊಮ್ಮುವುದನ್ನು ಅವನು ಗಮನಿಸಿದ. ಆದರೆ ಕುರುಕ್ಷೇತ್ರದಲ್ಲಿ ಉದ್ದಕ್ಕೂ ಇಡುಗಿದ್ದ ಮಾನವ ವಿಸರ್ಜನೆಗಳ, ಕೊಳೆತ ಹೆಣಗಳ ವಾಸನೆ ಯಷ್ಟು ಅದು ಅಸಹ್ಯವಾಗಿರಲಿಲ್ಲ.

ತಾತಾ, ಇಂದಿನ ಯುದ್ಧದಲ್ಲಿ ನಾವು ಮಹಾವೀರರಾದ ಕ್ಷೇಮಧೂರ್ತಿ, ವಿಂದಾನು ವಿಂದ, ಸಂಶಪ್ತಕರನ್ನು ಕಳಕೊಂಡೆವು. ಕುರುಪಾಳಯ ಬರಿದಾಗುತ್ತಿದೆ. ಮುಂದೇನು ಮಾಡಬೇಕೆಂದೇ ನನಗೆ ತೋಚುತ್ತಿಲ್ಲ. ಅದಕ್ಕಾಗಿ ನಿಮ್ಮಲ್ಲಿಗೆ ಬಂದಿದ್ದೇನೆ”.

ಭೀಷ್ಮರು ಸಂತೈಕೆಯ ಸ್ವರದಲ್ಲಿ ಹೇಳಿದರು: ಮಗೂ, ನೀನೀಗ ಕುರು ಸೇನಾಧ್ಯಕ್ಷ. ಸೇನೆಯ ನಿರ್ದೇಶಕನಾಗಿ ಮುನ್ನಡೆಸಬೇಕಾದವ. ನೀನೇ ಹಿಂದೇಟು ಹಾಕಿದರೆ ಅದು ತಪ್ಪಾಗುತ್ತದೆ. ಹೇಳು, ನಿನ್ನನ್ನು ಕಾಡುತ್ತಿರುವುದೇನು”

ಕರ್ಣ ತನ್ನ ನೋವನ್ನು ತೋಡಿಕೊಂಡ: “ಈ ಯುದ್ಧಾರಂಭಕ್ಕೆ ಮುನ್ನ ನನ್ನ ತಾಯಿ ಬಂದಿದ್ದಳು, ಕುಂತೀದೇವಿ. ಅವಳು ನನ್ನಮ್ಮನೆಂದು ಮೊದಲೇ ಕೃಷ್ಣ ತಿಳಿಸಿದ್ದನಲ್ಲಾ? ಅವಳ ಮುಖದಲ್ಲಿ ತಪ್ಪಿತಸ್ಥ ಭಾವವಿತ್ತು. ಪಾಂಡುವನ್ನು ವಿವಾಹವಾಗುವ ಮುನ್ನ ನನ್ನನ್ನು ಹೆತ್ತು ತ್ಯಜಿಸಿದವಳು, ಯುದ್ಧ ನಿಶ್ಚಯವಾದ ಮೇಲೆ ನನ್ನೆದುರು ನಿಲ್ಲುವಾಗ ಅದೆಷ್ಟು ಮಾನಸಿಕ ಹಿಂಸೆ ಅನುಭವಿಸಿದಳೊ? ಅವಳು ಬಂದವಳು ಕಣ್ಣೀರಿಟ್ಟು ಕನ್ಯಾಮಾತೆಯಾಗಿ ತಾನು ಹಾಗೆ ನಡೆದುಕೊಳ್ಳುವುದು ಅನಿವಾರ್ಯವಾಗಿತ್ತೆಂದು ಹಳೆಯದೆಲ್ಲವನ್ನೂ ನೆನಪಿಸಿಕೊಂಡಳು. ಮುಂದೆ ನಡೆಯಲಿರುವ ಯುದ್ಧದಲ್ಲಿ ಪಾಂಡವರನ್ನು ಕೊಲ್ಲಬಾರದೆಂದು ಬೇಡಿಕೊಂಡಳು. ಅರ್ಜುನನ ಹೊರತಾಗಿ ಇತರ ಪಾಂಡವರ ಕೂದಲನ್ನೂ ಕೊಂಕಿಸುವುದಿಲ್ಲವೆಂದು ನಾನವಳಿಗೆ ಭಾಷೆ ಕೊಟ್ಟುಬಿಟ್ಟೆ. ಈಗ ನನ್ನ ಕೈ ಕಟ್ಟಿದಂತಾಗಿದೆ”.

ಭೀಷ್ಮರಿಗೆ ಕರ್ಣನ ನೋವಿನ ಅರಿವಾಯಿತು. ಕರ್ಣ ಪಾಂಡವರೈವರನ್ನೂ ಮುಗಿಸಬಲ್ಲ ಬಲವಂತನೆಂಬುದು ಅವರಿಗೆ ಗೊತ್ತಿತ್ತು. ಆ ಕುಂತಿ ಯಾವ ಮುಖದಲ್ಲಿ ಇವನಲ್ಲಿಗೆ ಬಂದು ಬೇಡಿದಳೊ? ಇವನು ಯಾವ ಕಾರಣಕ್ಕಾಗಿ ಭಾಷೆಯಿತ್ತನೊ? ಬಹುಶಃ ಕೃಷ್ಣನ ಪ್ರೇರೇಪಣೆ ಯಿಂದಲೇ ಕುಂತಿ ಇವನಲ್ಲಿಗೆ ಬಂದಿರಬೇಕು. ಅರ್ಜುನನ ಹೊರತಾಗಿ ಇತರ ಪಾಂಡವರನ್ನು ಕೊಲ್ಲಲಾರೆನೆಂದು ಇವನು ಭಾಷೆಯಿತ್ತಿದ್ದರೆ ಅದು ಇವನ ಪೆದ್ದುತನ. ಇವನಿಗೆ ಯುಧಿಷ್ಠಿರನನ್ನು ಕೊಲ್ಲುವುದು ದೊಡ್ಡ ಸಂಗತಿಯೇ ಅಲ್ಲ. ಆದರೆ ಅವನನ್ನು ಈವರೆಗೂ ಕೊಲ್ಲಲು ಇವನಿಂದಾಗಲಿಲ್ಲ. ಕೃಷ್ಣ ಮತ್ತು ಕುಂತಿ ಇವನ ನೈತಿಕ ನೆಲೆಗಟ್ಟನ್ನು ಪುಡಿ ಮಾಡಿದ್ದರು. ಈ ಕರ್ಣನನ್ನು ಹಳಿದು ಪ್ರಯೋಜನವೇನು?

ನಿರ್ಭಾವ ಸ್ವರದಲ್ಲಿ ಭೀಷ್ಮರೆಂದರು: “ಮಗೂ, ದುರ್ಯೋಧನ ಯುದ್ಧಪೂರ್ವದಲ್ಲಿ ನನ್ನನ್ನು ಕುರು ಸೇನಾಧ್ಯಕ್ಷನನ್ನಾಗಿ ಮಾಡಿದಾಗ ಆಕ್ಷೇಪವೆತ್ತಿದವ ನೀನು. ಆಗ ನೀನು ‘ಈ ವಯಸ್ಸಿನಲ್ಲಿ ನಿಮ್ಮಿಂದ ಏನನ್ನೂ ಮಾಡಲಾಗದು ತಾತಾ ಎಂದಿದ್ದೆ. ನಾನು ಸೇನಾಧ್ಯಕ್ಷನಾಗಿ ಹತ್ತುದಿನ ಪರ್ಯಂತ ಯುದ್ಧ ನಡೆಸಿದೆ. ಈ ಅವಧಿಯಲ್ಲಿ ಕುರುಪಾಳಯಕ್ಕೆ ದೊಡ್ಡ ನಷ್ಟವೇನಾಗಲಿಲ್ಲ. ದ್ರೋಣಾಚಾರ್ಯರ ಸೇನಾಧ್ಯಕ್ಷತೆಯ ಐದು ದಿನಗಳುದ್ದಕ್ಕೂ ಅಧರ್ಮ, ಅನ್ಯಾಯ ಪರಂಪರೆಗಳೇ ಸಂಭವಿಸಿದವು. ನೀನು ಒಂದೇ ದಿನದಲ್ಲಿ ದಾರಿ ಕಾಣದೆ ಬಸವಳಿದಿರುವೆ. ನಿನ್ನ ಕೈಗಳನ್ನು ನೀನೇ ಕಟ್ಟಿ ಹಾಕಿಕೊಂಡಿರುವೆ. ಜೀವನದುದ್ದಕ್ಕೂ ಬ್ರಹ್ಮಚಾರಿಯಾಗಿರುತ್ತೇನೆಂದು ಪ್ರತಿಜ್ಞೆ ಮಾಡುವುದು ನನಗೆ ಅನಿವಾರ್ಯವಾಗಿತ್ತು. ಆದರೆ ನೀನು ಕುಂತಿಗೆ ವಚನ ನೀಡುವ ಅಗತ್ಯವೇನಿತ್ತು? ಆಗ ಅಂಗರಾಜ್ಯಾಭಿಷೇಕದಿಂದ ನಿನ್ನನ್ನು ಬಹಿರಂಗವಾಗಿ ಕ್ಷತ್ರಿಯತ್ವಕ್ಕೇರಿಸಿದ ದುರ್ಯೋಧನನ ಋಣಭಾರದ ನೆನಪು ನಿನಗಾಗಲಿಲ್ಲ. ಯಾಕೆಂದು ಹೇಳುತ್ತೀಯಾ?”

ಕರ್ಣ ಅಂತರ್ಮುಖಿಯಾದ. ಅಂದು ಪರೀಕ್ಷಾ ಕಣದಲ್ಲಿ ಅಂಗರಾಜ್ಯದ ದೊರೆಯೆಂದು ನನ್ನನ್ನು ಘೋಷಿಸಿ ದುರ್ಯೋಧನ ಅಪಮಾನದಿಂದ ಪಾರು ಮಾಡಿದ್ದ. ಹಸ್ತಿನಾವತಿಯಿಂದ ಅಂಗದೇಶಕ್ಕೆ ಏನಿಲ್ಲವೆಂದರೂ ಐದಾರುದಿನಗಳ ಕುದುರೆ ಸವಾರಿ. ನಾನು ಅಂಗದೇಶಕ್ಕೆ ಹೋಗಿ ನೆಲೆಸಲು ದುರ್ಯೋಧನ ಬಿಟ್ಟಿರಲಿಲ್ಲ. ಹಸ್ತಿನಾವತಿಯಲ್ಲಿ ದುರ್ಯೋಧನನ ಆಂತರಂಗಿಕ ಮಿತ್ರನಾಗಿ ಉಳಿದುಬಿಟ್ಟೆ. ಅಂಗರಾಜ್ಯಾಭಿಷೇಕ ಒಂದು ತಾಂತ್ರಿಕ ವಿಧಿ ಮಾತ್ರ. ಭೀಷ್ಮರ ಭಯದಿಂದ ಅಂಗರಾಜ ವರ್ಷಕ್ಕೊಮ್ಮೆ ಹಸ್ತಿನಾವತಿಗೆ ಬಂದು ಹೋಗುತ್ತಿದ್ದುದನ್ನು ಬಿಟ್ಟರೆ ಬೇರಾವ ಸಂಬಂಧವೂ ಇರಲಿಲ್ಲ. ದುರ್ಯೋಧನನ ಸಾಮಯಿಕ ನೈತಿಕ ಬೆಂಬಲದಿಂದಾಗಿ ಅವನ ಯಾವುದೇ ಕೃತ್ಯವನ್ನು ಖಂಡಿಸಲಾರದೆ ಹೋದೆ. ನಾನು ನಿಷ್ಠನಾಗಬೇಕಿದ್ದುದು ದುರ್ಯೋಧನನಿಗೆ. ಹೆತ್ತ ತಕ್ಷಣ ಲೋಕಾಪವಾದಕ್ಕೆ ಅಂಜಿ ಗಂಗೆಯ ಪಾಲು ಮಾಡಿದ ಮಾತೆ ಕುಂತಿಗೆ ನಾನು ವಚನ ಈಯಬೇಕಾದ ಅಗತ್ಯವಿರಲಿಲ್ಲ. ಆದರೂ ಇತ್ತೆನಲ್ಲಾ? ಯಾಕಿರಬಹುದು?

“ಯಾಕೆ ತಾತಾ?”

ಯಾಕೆಂದರೆ ಮಗೂ, ದುರ್ಯೋಧನ ಮಾಡಿದ್ದೆಲ್ಲಾ ಅನ್ಯಾಯವೆಂದು ನಿನ್ನ ಆತ್ಮಸಾಕ್ಷಿ ಹೇಳುತ್ತಿತ್ತು, ಅದಕ್ಕೆ. ದುರ್ಯೋಧನನ ಋಣಭಾರಕ್ಕೆ ನೀನವನ ಅಕೃತ್ಯಗಳಲ್ಲಿ ಪಾಲ್ಗೊಳ್ಳ ಬೇಕಾಯಿತೆಂಬುದು ಲೋಕಕ್ಕೇ ಗೊತ್ತಿರುವ ಸತ್ಯ. ಪಾಪದ ಪರಿಮಾರ್ಜನೆಗಾಗಿ ನೀನು ತಾಯಿಗೆ ವಚನವಿತ್ತೆ”

ಕರ್ಣ ಮತ್ತೆ ಅಂತರ್ಮುಖಿಯಾದ. ಆಚಾರ್ಯ ಭೀಷ್ಮರು ಊಹಿಸಿದ ಕಾರಣ ಸರಿಯಾದದ್ದೆ? ಕಪಟದ್ಯೂತ, ವಸ್ತ್ರಾಪಹರಣ, ಅರಣ್ಯವಾಸ ಕಾಲದ ಘೋಷ ಯಾತ್ರೆ, ಗೋಗ್ರಹಣ, ಚಕ್ರವ್ಯೂಹದಲ್ಲಿ ಅಭಿಮನ್ಯುವಿನ ವಧೆ, ರಾತ್ರಿಯ ಯುದ್ಧ ಯಾವುದಕ್ಕೂ ನನ್ನ ಸಮ್ಮತಿಯಿರಲಿಲ್ಲ. ಆದರೆ ಯಾವುದನ್ನೂ ನಾನು ವಿರೋಧಿಸಲಾರದೆ ಹೋದೆ. ನನ್ನ ಅರಿವಿಗೇ ಬಾರದೆ ಮನದ ಮೂಲೆಯಲ್ಲೆಲ್ಲೋ ದುರ್ಯೋಧನ ವಿದ್ವೇಷದ ಮೊಳಕೆಯೊಡೆದಿರಬಹುದೆ? ಮಾತೆ ಕುಂತೀದೇವಿ ನನ್ನನ್ನು ಹುಡುಕಿಕೊಂಡು ಬಂದಿದ್ದಾಗ ಜೀವನದುದ್ದಕ್ಕೂ, ನಾನು ಅನುಭವಿಸಿದ ನೋವೇಕೆ ಜ್ವಾಲಾಮುಖಿಯಾಗಿ ಸ್ಫೋಟಿಸಲಿಲ್ಲ? ಕೃಷ್ಣ ನನ್ನ ಜನನ ವೃತ್ತಾಂತವನ್ನು ತಿಳಿಸಿದ ಮೇಲೆ ತೀರಾ ಮೆದುವಾಗಿ ಬಿಟ್ಟೆ. ಒಂದು ಕಾಲದಲ್ಲಿ ಕನ್ಯಾಮಾತೃತ್ವ ಅಪಮಾನದ ಸಂಗತಿಯಾಗಿರಲಿಲ್ಲವೆಂದು ಆಚಾರ್ಯ ಭೀಷ್ಮರು ಯಾವುದೋ ಸಂದರ್ಭದಲ್ಲಿ ಹೇಳಿದ್ದರು. ನನ್ನ ಕೀಳರಿಮೆಯನ್ನು ಹೋಗಲಾಡಿಸಲು ಅವರು ಮಾಡಿದ ಪ್ರಯತ್ನವಿರಬೇಕದು. ಕನ್ಯಾಮಾತೆಯಾಗಿ ಸತ್ಯವತಿ ಪಡೆದ ದ್ವೈಪಾಯನರು ಆರ್ಯಾವರ್ತದ ಅತ್ಯಂತ ದೊಡ್ಡ ವಿದ್ವಾಂಸರೆನಿಸಿದರು. ಸತ್ಯವತಿಯ ಧೈರ್ಯ ಕುಂತೀದೇವಿಗೆ ಬರಲಿಲ್ಲ. ಯಾವ ಭಾವ, ಯಾವ ಸಂದರ್ಭ ಕುಂತೀದೇವಿ ನನ್ನನ್ನು ತ್ಯಜಿಸುವಂತೆ ಮಾಡಿತೊ? ಪಾಂಡುವಿನ ಕೈ ಹಿಡಿದು ಸುಖ ಪಡಲಾಗದ, ನಾಲ್ವರು ಪುತ್ರರಿದ್ದೂ ಯಾರ್ಯಾರದೋ ಆಶ್ರಯದಲ್ಲಿ ದಿನ ಕಳೆಯಬೇಕಾಗಿ ಬಂದ ದುರವಸ್ಥೆ ಅವಳದು. ಓರ್ವ ಹೆಣ್ಣಾದುದಕ್ಕೆ ಕುಂತಿ ಅನುಭವಿಸಬೇಕಾಗಿ ಬಂದ ನೋವು ಮತ್ತು ಅಪಮಾನಗಳಿಗಾಗಿ ಮರುಗಿ ನಾನವಳಿಗೆ ವಚನವಿತ್ತಿದ್ದೆ. ತಾಯಿಯೆಂಬ ಕಾರಣಕ್ಕಾಗಿ ಅಲ್ಲ. ನಾನು ಶಿಶುವಾಗಿದ್ದಾಗ ಒಂದು ಕ್ಷಣವೂ ಅಪ್ಪಿಕೊಳ್ಳದ, ಒಂದೇ ಒಂದು ಬಾರಿಯೂ ಮೊಲೆಯೂಡದ, ಅತ್ತಾಗ ಸಂತೈಸದ, ನನಗೆ ಒಂದೇ ಒಂದಕ್ಷರವನ್ನೂ ಕಲಿಸದ ಅವಳು ನನ್ನ ತಾಯಿಯೆಂದು ನನಗೆ ಒಮ್ಮೆಯೂ ಅನ್ನಿಸಿರಲಿಲ್ಲ.

“ಇರಬಹುದು ತಾತಾ. ಕುಂತೀದೇವಿಗೆ ನಾನು ವಚಯವೀಯಬೇಕಾದ ಅಗತ್ಯವಿಲ್ಲದಿರಬಹುದು. ನಾಲ್ಕು ಮಂದಿ ಮಕ್ಕಳಿದ್ದೂ ಸುಖವುಣ್ಣಲಿಲ್ಲ ಅವಳು. ನನ್ನಿಂದ ಅವಳಿಗೆ ಅಷ್ಟಾದರೂ ಸಂತೋಷ ಸಿಗಲಿ ಎಂಬ ಭಾವವೂ ನನ್ನಲ್ಲಿದ್ದಿರಬಹುದು. ಬೇಡುವವರಿಗಿಂತ ಕೊಡುವವರು ದೊಡ್ಡವರು. ಇದು ನನ್ನನ್ನು ಸಾಕಿ ಸಲಹಿದ ಮಾತೆ ರಾಧೆ ಕಲಿಸಿಕೊಟ್ಟ ಪಾಠ. ಆದರೂ ವಚನ ನೀಡುವಾಗ ನಾನು ಅರ್ಜುನನನ್ನು ಹೊರಗಿರಿಸಿದ್ದೇನೆ. ಯುಧಿಷ್ಠಿರ, ನಕುಲಸಹದೇವರನ್ನು ಗೆಲ್ಲುವುದು ಏನೇನೂ ಕಷ್ಟವಲ್ಲ. ಆದರೆ ಅವರನ್ನು ಕೊಲ್ಲಲು ಕಾರಣಗಳೇ ಸಿಗುತ್ತಿಲ್ಲ. ಭೀಮಾರ್ಜುನರಲ್ಲಿ ಯಾರನ್ನಾದರೂ ಒಬ್ಬರನ್ನು ಕೊಂದರೆ ಅದು ನಿಜವಾದ ವಿಜಯ. ಕಪಟವೆಂಬುದು ಲವಲೇಶವೂ ಇಲ್ಲದ ಭೀಮನನ್ನು ಕೊಲ್ಲಲು ಮನಸ್ಸು ಒಡಂಬಡುವುದಿಲ್ಲ. ಆ ಅರ್ಜುನ ಮಹಾ ಸ್ವಾರ್ಥಿ. ಅವನಿಂದಾಗಿ ಪರೀಕ್ಷಾ ಕಣದಲ್ಲಿ ನಾನು ಅಪಮಾನಕ್ಕೊಳಗಾದೆ. ಬಡಪಾಯಿ ಏಕಲವ್ಯ ಹೆಬ್ಬೆರಳನ್ನೇ ಕಳಕೊಂಡ. ಜಾತಿಯ ಕಾರಣಕ್ಕಾಗಿ ಇನ್ನೊಬ್ಬರನ್ನು ಅಪಮಾನಿಸುವವನ್ನು ನಾನು ಮಾನವನೆಂದು ಪರಿಗಣಿಸುವುದಿಲ್ಲ. ಅದಕ್ಕೇ ನಾನು ಅರ್ಜುನನನ್ನು ಲಕ್ಷ್ಯವಾಗಿರಿ ಸಿಕೊಂಡಿರುವುದು”.

ಕರ್ಣ ತೀರಾ ಸಹಜವಾದ ಭಾವನೆಗಳನ್ನು ಅಭಿವ್ಯಕ್ತಿಸಿದ್ದಾನೆಂದು ಭೀಷ್ಮರಿಗನ್ನಿಸಿತು. ಅರ್ಜುನ ವರ್ತಮಾನದಲ್ಲಿ ಆರ್ಯಾವರ್ತದ ಅತಿಶ್ರೇಷ್ಠ ಧನುರ್ವಿದ್ಯಾ ಧುರಂಧರ. ಈಗಲೂ ಅವನನ್ನು ವರಿಸಲು ಅರಗುವರಿಯರು ಹಾತೊರೆಯುತ್ತಿದ್ದಾರಂತೆ! ಇನ್ನು ಮುಂದೆ ಕುರು ಸಾಮ್ರಾಜ್ಯವನ್ನು ಸಂರಕ್ಷಿಸಬಲ್ಲ ಧನುರ್ಧಾರಿ ಇದ್ದರೆ ಅದು ಅರ್ಜುನ ಮಾತ್ರ. ಅವನನ್ನೇ ಈ ಕರ್ಣ ಕೊಂದರೆ ಕುರು ಚಕ್ರಾಧಿಪತ್ಯ ಉಳಿಯುವುದಿಲ್ಲ. ಘೋಷಯಾತ್ರೆಯ ಕಾಲದಲ್ಲಿ ಇವನಿಂದ ಗೆಲ್ಲಲಾಗದ ಚಿತ್ರಸೇನನನ್ನು ಅರ್ಜುನ ಸೋಲಿಸಿದ. ಗೋಗ್ರಹಣ ಕಾಲದಲ್ಲಿ ಅರ್ಜುನ ಬುದ್ಧಿವಂತಿಕೆ ಪ್ರದರ್ಶಿಸಿ ಪಾರಾದ. ಜಯದ್ರಥನನ್ನು ಅರ್ಜುನನ ಕೈಯಿಂದ ಕಾಪಾಡಲು ಕರ್ಣನಿಂದಾಗಲಿಲ್ಲ. ಇನ್ನು ಅರ್ಜುನನನ್ನು ಇವ ಕೊಲ್ಲಬಲ್ಲನೆ?

ಭೀಷ್ಮರು ಆತಂಕದಿಂದ ಕೇಳಿದರು: “ಮಗೂ, ನೀನು ಅರ್ಜುನನನ್ನು ಕೊಲ್ಲಬಲ್ಲೆಯಾ? ನಿನ್ನ ತಮ್ಮನನ್ನು ಕೊಲ್ಲಲು ನಿನಗೆ ಮನಸ್ಸು ಬಂದೀತೆ?”

ಮೊದಲನೆಯದು ಸಾಮಥ್ರ್ಯಕ್ಕೆ ಸಂಬಂಧಿಸಿದ ಪ್ರಶ್ನೆ ತಾತಾ. ನೀವು, ದ್ರೋಣರು ಮತ್ತು ನಾನು ಪರಶುರಾಮಾಚಾರ್ಯರ ಶಿಷ್ಯಂದಿರು. ನಾನು ಸಂಗ್ರಹಿಸಿರುವ ವಿದ್ಯೆ ಅರ್ಜುನನನ್ನು ಕೊಲ್ಲಲು ಧಾರಾಳ ಸಾಕು. ಎರಡನೆಯದು ಮನಸ್ಸಿಗೆ ಸಂಬಂಧಿಸಿದ ಪ್ರಶ್ನೆ. ಅರ್ಜುನ ಕುಂತೀದೇವಿಯ ಹೊಟ್ಟೆಯಲ್ಲಿ ಹುಟ್ಟಿದವನು. ಮಾತೃತ್ವ ಸಂದೇಹಾತೀತವಾದದ್ದು. ತಂದೆಗಿಂತ ಯಾವತ್ತೂ ತಾಯಿಯೇ ಮುಖ್ಯಳು. ಆದರೆ ತಾತಾ, ನನ್ನ ಪಾಲಿಗೆ ಸಾಕಿದ ರಾಧೆಯೇ ನನ್ನ ತಾಯಿ. ಇನ್ನು ನನ್ನನ್ನು ಸದಾ ಸೂತಪುತ್ರನೆಂದು ಹಳಿಯುವ ಅಹಂಕಾರಿ ಅರ್ಜುನನ ಮೇಲೆ ಭ್ರಾತೃವಾತ್ಸಲ್ಯ ಹೇಗೆ ಬಂದೀತು ಹೇಳಿ? ಕುಂತಿ ನನ್ನನ್ನು ಹೆತ್ತವಳೆಂಬುದು ಗೊತ್ತಾಗುವ ಮೊದಲೂ ನಾನು ಅರ್ಜುನನ ಹುಟ್ಟನ್ನು ಆಕ್ಷೇಪಿಸಿದವನಲ್ಲ. ನಮ್ಮ ಹುಟ್ಟಿಗೆ ನಾವು ಕಾರಣರಲ್ಲದುದರಿಂದ ಹುಟ್ಟಿನ ಬಗ್ಗೆ ಆಕ್ಷೇಪವೆತ್ತುವ ಹಕ್ಕು ನಮಗಿಲ್ಲ. ನಾನು ಅರ್ಜುನನನ್ನು ಪ್ರೀತಿಸಲು ಒಂದೇ ಒಂದು ಕಾರಣ ಹೊಳೆಯುತ್ತಿಲ್ಲ. ಹೇಳಿ ತಾತಾ, ನಾನ್ಯಾಕೆ ಅರ್ಜುನನನ್ನು ಕೊಲ್ಲಬಾರದು?”

ಏನು ಹೇಳಬೇಕೆಂದು ಭೀಷ್ಮರಿಗೆ ತೋಚಲಿಲ್ಲ. ಅರ್ಜುನನ ಸ್ವಾರ್ಥ ಮತ್ತು ಅಹಂಕಾರ ಅವರಿಗೆ ಅಪರಿಚಿತವಾದದ್ದೇನಾಗಿರಲಿಲ್ಲ. ಅದಾದರೂ ದೊಡ್ಡ ಸಮಸ್ಯೆಯೆಂದು ಅವರಿಗನ್ನಿಸಿರಲಿಲ್ಲ. ಸಮಸ್ತ ಸಂಕಷ್ಟಗಳಿಗೆ ಯುಧಿಷ್ಠಿರನ ಚಂಚಲ ಚಿತ್ತವೇ ಕಾರಣವೆಂದು ಅವರು ಎಷ್ಟೋ ಬಾರಿ ಅಂದುಕೊಂಡಿದ್ದರು. ಇಂದ್ರಪ್ರಸ್ಥದಲ್ಲಿ ಪಾಂಡವರನ್ನು ಪ್ರತಿಷ್ಠಾಪಿಸಲು ಅವರು ತುಂಬಾ ಕಷ್ಟಪಟ್ಟಿದ್ದರು. ದ್ಯೂತದಲ್ಲಿ ರಾಜ್ಯವನ್ನು ಮಾತ್ರವಲ್ಲದೆ ಬಹಳ ಸುಲಭವಾಗಿ ಮಾನಮರ್ಯಾದೆ ಯನ್ನೂ ಯುಧಿಷ್ಠಿರ ಕಳಕೊಂಡ. ಸೋಲುವುದು ಖಚಿತವೆಂದು ತಿಳಿದೂ ತನ್ನನ್ನು, ತಮ್ಮಂದಿರನ್ನು ಮತ್ತು ಹೆಂಡತಿಯನ್ನು ಅಡವಿಡುವವರು ಯಾರಾದರೂ ಇರುತ್ತಾರೆಯೇ? ಭೀಮಸೇನನ ಘೋರ ಪ್ರತಿಜ್ಞೆಗಳಿಂದ ಕಂಗೆಟ್ಟ ಅಂಧನೃಪತಿ ಧೃತರಾಷ್ಟ್ರ ಯುಧಿಷ್ಠಿರನಿಗೆ ದ್ಯೂತದಲ್ಲಿ ಅವ ಕಳಕೊಂಡದ್ದನ್ನೆಲ್ಲಾ ಮರಳಿಸಿದನಲ್ಲಾ? ಆ ಮೇಲೂ ವನವಾಸ, ಅಜ್ಞಾತವಾಸಗಳ ಷರತ್ತಿನಲ್ಲಿ ಯುಧಿಷ್ಠಿರ ದ್ಯೂತವಾಡಿ ಸೋತ. ಒಂದು ಸಲದ ಸೋಲಿನಿಂದ ಪಾಠ ಕಲಿಯದ ಅವನ ಪರಮ ಬೋದಾಳ ತನಕ್ಕೆ ಏನು ಹೇಳಬೇಕು? ಅಂದು ಯುಧಿಷ್ಠಿರ ಕೇವಲ ಮನರಂಜನೆಗಾಗಿ ದ್ಯೂತವಾಡಬೇಕಿತ್ತು. ಯಾವುದೇ ಪಣ ಒಡ್ಡಬಾರದಿತ್ತು. ಆಗ ವಸ್ತ್ರಾಪಹರಣ ಪ್ರಕರಣ ಸಂಭವಿಸುತ್ತಿರಲಿಲ್ಲ. ವನವಾಸ ಅಜ್ಞಾತವಾಸಗಳ ಸೊಲ್ಲಿರುತ್ತಿರಲಿಲ್ಲ. ಅಸಲು ಈ ಯುದ್ಧವೇ ನಡೆಯುತ್ತಿರಲಿಲ್ಲ. ಈಗಲೂ ದುರ್ಯೋಧನ ಯುದ್ಧದ ಬದಲು ದ್ಯೂತವೆಂದು ತೀರ್ಮಾನ ಮಾಡುತ್ತಿದ್ದರೆ ಯುಧಿಷ್ಠಿರ ಬಹುಶಃ ಬೇಡವೆನ್ನುತ್ತಿರಲಿಲ್ಲ. ರಕ್ತಪಾತವಿಲ್ಲದೆ ಸಾಮ್ರಾಜ್ಯ ದುರ್ಯೋಧನನಿಗೆ ದಕ್ಕಿ ಬಿಡುತ್ತಿತ್ತು. ನಾಳೆ ಪಾಂಡವರು ಯುದ್ಧ ಗೆದ್ದರೆ ಸಾಮ್ರಾಜ್ಯ ಉಳಿಸಿಕೊಳ್ಳುತ್ತಾರಾ? ಚಂಚಲಚಿತ್ತ ನಾದ ಯುಧಿಷ್ಠಿರ ಯಾರೊಡನೆ ದ್ಯೂತವಾಡಿ ಇದನ್ನು ಕಳಕೊಳ್ಳುತ್ತಾನೊ?

ನಿಟ್ಟುಸಿರುಬಿಟ್ಟು ಭೀಷ್ಮರೆಂದರು: “ಹೌದು ಮಗೂ. ನೀನು ಅರ್ಜುನನನ್ನು ಪ್ರೀತಿಸಲು ಕಾರಣಗಳೇ ಇಲ್ಲ. ಆದರೆ ಅವನ ಸಾರಥಿ ಕೃಷ್ಣ ಮಹಾ ಯುದ್ಧ ತಂತ್ರಜ್ಞ. ಅವನಿಂದಾಗಿ ನಾನು ಅರ್ಜುನನನ್ನು ಏನೂ ಮಾಡಲಾರದೆ ಹೋದೆ. ಈಗ ನೀನು ಅರ್ಜುನನನ್ನು ಕೊಲ್ಲಲು ಹೊರಟಿದ್ದೀಯೇ. ಕೃಷ್ಣ ಸಾರಥ್ಯಕ್ಕೆ ಪ್ರತಿಯಾಗಿ ಯಾವ ವ್ಯೂಹವನ್ನು ನಿರ್ಮಿಸಿದ್ದಿ? ಏನಾದರೂ ಯೋಚನೆ ಮಾಡಿದ್ದೀಯಾ?

ಉತ್ಸಾಹದಿಂದ ಕರ್ಣ ಉತ್ತರಿಸಿದ: “ಯೋಚನೆ ಮಾಡಿಯೇ ನಾನು ನಿಮ್ಮಲ್ಲಿಗೆ ಬಂದದ್ದು ತಾತಾ. ಕೃಷ್ಣನಷ್ಟೇ ಯುದ್ಧ ತಂತ್ರಜ್ಞ ನಮ್ಮಲ್ಲೂ ಇದ್ದಾನೆ. ಅವನು ಶಲ್ಯಭೂಪತಿ. ಆತನೇನಾದರೂ ನನ್ನ ಸಾರಥಿಯಾಗಿ ಬಿಟ್ಟರೆ ಕೃಷ್ಣನ ತಂತ್ರಗಳಿಗೆ ಪ್ರತಿತಂತ್ರ ಹೂಡಬಲ್ಲ. ನಾನು ಅರ್ಜುನನೊಡನೆ ನಿಶ್ಚಿಂತೆಯಿಂದ ಕಾದಬಲ್ಲೆ. ಅವನನ್ನು ಕೊಲ್ಲಲೂ ಬಲ್ಲೆ. ನನಗೆ ಬೇರೆ ಋಣಗಳ ಹಂಗಿಲ್ಲ. ಆದರೆ ದುರ್ಯೋಧನನ ಋಣವನ್ನು ನಾನು ಸ್ವಲ್ಪವಾದರೂ ತೀರಿಸಬೇಕು. ಅವನ ಒಂದು ಗುಣವನ್ನು ನಾನು ಬಹುವಾಗಿ ಮೆಚ್ಚಿಕೊಂಡವನು. ಹುಟ್ಟಿನ ಕಾರಣಕ್ಕಾಗಿ ಅವನು ಯಾರನ್ನೂ ಪರಿಹಾಸ್ಯ ಮಾಡಿದ್ದು ನನ್ನ ನೆನಪಿನಲ್ಲಿಲ್ಲ. ಅವನಲ್ಲದಿದ್ದರೆ ನಾನು ಕೇವಲ ಹಸ್ತಿ ನಾವತಿಯ ಕುದುರೆ ಪರಿಚಾರಕನಾಗಿ ಉಳಿದುಬಿಡುತ್ತಿದ್ದೆ. ಪ್ರಭುತ್ವ ಮನಸ್ಸು ಮಾಡಿದರೆ ಯಾವುದೇ ರೀತಿಯ ಅಸಮಾನತೆಯನ್ನಾದರೂ ನಿವಾರಿಸಲು ಸಾಧ್ಯವಿದೆ, ಅಲ್ಲವಾ ತಾತಾ?”

ಭೀಷ್ಮರಿಗೆ ನಗು ಬಂತು: “ಮಗೂ, ಪ್ರಭುತ್ವ ಮಾತ್ರ ಮನಸ್ಸು ಮಾಡಿದರೆ ಸಾಕಾಗುವುದಿಲ್ಲ. ಪ್ರಜೆಗಳೂ ಮನಸ್ಸು ಮಾಡಬೇಕು. ನಿಧಾನವಾಗಿ ಸಂಭವಿಸುವ ಬದಲಾವಣೆಗಳು ಶಾಶ್ವತವಾಗಿರುತ್ತದೆ. ಮಾನವನಲ್ಲಿರುವ ಮೃಗೀಯ ಗುಣಗಳು ಜಾತಿ ಮತ್ತು ವರ್ಣ ಸಂಬಂಧೀ ಅಸಮಾನತೆಗೆ ಕಾರಣಗಳು. ಅವು ನಿವಾರಣೆಯಾಗಬೇಕಾದರೆ ಮಾನವನಲ್ಲಿ ಓದುವ, ಚಿಂತಿಸುವ, ವಿಚಾರ ವಿಮರ್ಶೆ ಮಾಡುವ ಸಂಸ್ಕಾರ ಮೂಡಬೇಕು. ದುರ್ಯೋಧನ ನಿನ್ನನ್ನು ಅವನ ಆಪ್ತ ವಲಯದಲ್ಲಿ ಸೇರಿಸಿಕೊಂಡದ್ದಕ್ಕೆ ಅವನು ಗುಣವಂತನಂತೆ ನಿನಗೆ ಕಾಣಿಸುತ್ತಾನೆ. ಬಹುವಾಗಿ ಪ್ರೀತಿಸುವವರ ದುರ್ಗುಣಗಳನ್ನು ಪ್ರಜ್ಞಾಪೂರ್ವಕವಾಗಿ ನಾವು ಮರೆ ಮಾಚುತ್ತೇವೆ. ಈ ದುರ್ಯೋಧನ ಒಬ್ಬನೇ ಒಬ್ಬ ಶೂದ್ರನನ್ನು ಅಥವಾ ದಸ್ಯುವನ್ನು ತನ್ನ ಆಪ್ತ ವಲಯಕ್ಕೆ ಸೇರಿಸಿದ್ದಾನೆಯೆ? ಅಂದು ಕೃಷ್ಣ ಸಂಧಾನನಿಮಿತ್ತವಾಗಿ ಬಂದವನು ವಿದುರನ ಮನೆಯಲ್ಲಿ ಉಳಿದು ಕೊಂಡ. ಅದಕ್ಕೆ ವಿದುರನನ್ನು ಇವ ದಾಸೀಪುತ್ರನೆಂದು ತುಂಬಿದ ಸಭೆಯಲ್ಲಿ ಅಪಮಾನಿಸಿದ. ವಿದುರನ ತಂದೆ ಯಾರೆಂದುಕೊಂಡಿದ್ದಿ? ದ್ವೈಪಾಯನರು! ಸಂಬಂಧದಲ್ಲಿ ವಿದುರ ದುರ್ಯೋಧನನಿಗೆ ಪಾಂಡುವಿನಂತೆ ಚಿಕ್ಕಪ್ಪನಾಗುತ್ತಾನೆ. ಆದರೆ ಕ್ಷೇತ್ರ ಕಾರಣವಾಗಿ ವಿದುರ ದಾಸೀ ಪುತ್ರನೆಂದು ಕರೆಸಿಕೊಳ್ಳಬೇಕಾಯಿತು. ಕುರು ಸಾಮ್ರಾಜ್ಯದ ಶೂದ್ರರಿಗೆ ಮತ್ತು ದಸ್ಯುಗಳಿಗೆ ಶಸ್ತ್ರಶಾಸ್ತ್ರ ಶಿಕ್ಷಣ ನೀಡುವ ಒಂದು ವ್ಯವಸ್ಥೆ ಮಾಡಲು ಇವನಿಗೆ ಮನಸ್ಸು ಬರಲಿಲ್ಲ. ಇದು ದುರ್ಯೋಧನ ಸಮಾನತೆಗಾಗಿ ಶ್ರಮಿಸುವ ಕತೆ! ಅಂದು ಸ್ಪರ್ಧಾ ಕಣದಲ್ಲಿ ಅರ್ಜುನ ನಿನ್ನ ಹುಟ್ಟಿನ ಮೂಲವನ್ನು ಕೆಣಕಿದಾಗ ನಿನ್ನಲ್ಲಿ ಮೂಡಿರಬಹುದಾದ ಸೇಡನ್ನು ಪಾಂಡವ ದಮನಕ್ಕಾಗಿ ಬಳಸಲು ನಿನ್ನನ್ನು ಅವನೊಂದು ಸಾಧನವನ್ನಾಗಿ ಮಾಡಿಕೊಂಡ ಅಷ್ಟೇ. ಅವನ್ನೆಲ್ಲಾ ಈಗ ಚರ್ಚಿಸಿ ಪ್ರಯೋಜನವೇನಿಲ್ಲ. ಈಗ ನೀನೇನು ಮಾಡ ಹೊರಟಿದ್ದೀ? ಅದನ್ನು ಹೇಳು”.

ಕರ್ಣನೆಂದ: “ದುರ್ಯೋಧನ ಎಂಥವನೇ ಆಗಿದ್ದರೂ ಅವನ ವಿಜಯಕ್ಕಾಗಿ ನಾನು ಒಂದು ಅಂತಿಮ ಯತ್ನ ಮಾಡಬೇಕಾಗಿದೆ ತಾತಾ. ಶಲ್ಯಭೂಪತಿ ನನ್ನ ಸಾರಥಿಯಾದರೆ ಕೃಷ್ಣಾರ್ಜುನರಿಗೆ ಸಡ್ಡು ಹೊಡೆಯಬಲ್ಲೆ. ಶಲ್ಯನನ್ನು ನನ್ನ ಸಾರಥಿಯನ್ನಾಗಿಸುವುದು ಸುಲಭದ ಮಾತಲ್ಲ. ದುರ್ಯೋಧನ ಈ ಪ್ರಸ್ತಾಪ ಮಾಡಿದಾಗ ‘ಕ್ಷತ್ರಿಯನಾದ ನಾನು ಶೂದ್ರನಾದ ಕರ್ಣನ ಸಾರಥ್ಯ ಮಾಡುವುದೇ’ ಎಂದು ಪ್ರಶ್ನಿಸಿದನಂತೆ. ಯುದ್ಧದ ಈ ಹಂತದಲ್ಲೂ ಅಸಮಾನತೆಗೆ ಒಗ್ಗಿ ಹೋದ ಮನಸ್ಸು ಕೆಲಸ ಮಾಡುವ ರೀತಿ ನೋಡಿದಿರಾ ತಾತಾ? ದುರ್ಯೋಧನನಿಂದ ಶಲ್ಯ ಭೂಪತಿಯನ್ನು ಒಪ್ಪಿಸಲಾಗಲಿಲ್ಲ. ನಿಮ್ಮಿಂದ ಸಾಧ್ಯವಿದೆ. ನೀವೊಂದು ಮಾತು ಹೇಳಿದರೆ ಶಲ್ಯ ಭೂಪತಿ ನಿರಾಕರಿಸಲಾರ. ದುರ್ಯೋಧನನ ಋಣವನ್ನು ತೀರಿಸಲು ನನಗೆ ಕಟ್ಟ ಕಡೆಯದೊಂದು ಅವಕಾಶ ಮಾಡಿ ಕೊಡುತ್ತೀರಾ ತಾತಾ?”

ಅರ್ಜುನನನ್ನು ಕೊಲ್ಲಲು ಸಹಾಯ ಮಾಡುವುದೆ? ಅರ್ಜುನ ನಾಳೆಯ ಯುದ್ಧದಲ್ಲಿ ಕರ್ಣನಿಂದ ಹತನಾದರೆ ಮುಂದೆ ಕುರು ಸಾಮ್ರಾಜ್ಯದ ರಕ್ಷಣೆ ಮಾಡುವವರಾರು? ಭೀಷ್ಮರು ಗಾಢವಾಗಿ ಯೋಚಿಸತೊಡಗಿದರು. ಈಗ ಕುರು ಸಾಮ್ರಾಜ್ಯವೆಂದು ಕರೆಯುವ ಪ್ರದೇಶವನ್ನು ಹಿಂದೆ ಅದೆಷ್ಟು ರಾಜ ಮಹಾರಾಜರುಗಳು ಆಳಿ ಗತಿಸಿ ಹೋಗಿದ್ದಾರೊ? ಕುರುಗಳು ಚಂದ್ರ ವಂಶೀಯರಂತೆ. ಆದರೆ ಧೃತರಾಷ್ಟ್ರನಾಗಲೀ, ಪಾಂಡುವಾಗಲೀ ಚಂದ್ರವಂಶೀಯರಾಗಲು ಹೇಗೆ ಸಾಧ್ಯ? ಪರಾಶರ ಮುನಿಗೆ ಸತ್ಯವತೀ ದೇವಿಯಲ್ಲಿ ಜನಿಸಿದ ದ್ವೈಪಾಯನರ ಮಕ್ಕಳು ಅವರು. ಧೃತರಾಷ್ಟ್ರನ ರಾಣಿಯರು ದೂರದ ಗಾಂಧಾರದವರು. ಕುಂತೀದೇವಿ ಯದುಕುಲದವಳು. ಅಂದ ಮೇಲೆ ಕುರು ಸಾಮ್ರಾಜ್ಯದ ಮುಂದಿನ ಸಮ್ರಾಟನನ್ನು ಮತ್ತು ಸಂರಕ್ಷಕನನ್ನು ನಿರ್ಧರಿಸುವ ಹಕ್ಕು ನನಗಿಲ್ಲ. ಕಾಲಾಯ ತಸ್ಮೈ ನಮಃ. ಕರ್ಣನ ಕೊನೆಯಾಸೆಯನ್ನು ತೀರಿಸಲು ತಾನು ನೆರವಾಗುವುದೇ ಧರ್ಮವೆಂಬ ತೀರ್ಮಾನಕ್ಕೆ ಬಂದು ಭೀಷ್ಮರೆಂದರು.

“ಹೋಗು ಮಗೂ, ದುರ್ಯೋಧನನಿಗೆ ತಿಳಿಸು. ನನ್ನಾಜ್ಞೆಯೆಂದು ಹೇಳಿ ಶಲ್ಯಭೂಪತಿಯನ್ನು ಅವನು ಕರೆದುಕೊಂಡು ಬರಲಿ”

ಕರ್ಣ ಹೊರ ನಡೆದ. ಮಾದ್ರ ದೇಶಾಧಿಪತಿಯಾದ ಶಲ್ಯಭೂಪತಿಗೆ ವಿಪರೀತ ಕುಲದ ಹಮ್ಮು. ಅವನು ಹುಟ್ಟೇ ಶ್ರೇಷ್ಠತೆಯನ್ನು ನಿರ್ಧರಿಸುತ್ತದೆ ಎಂದು ಗಾಢವಾಗಿ ನಂಬಿದ್ದವನು. ಅವನನ್ನು ಸ್ವಲ್ಪ ಹೊಗಳಿದರೆ ಅವನಿಂದ ಏನನ್ನು ಬೇಕಾದರೂ ಪಡಕೊಳ್ಳಬಹುದಿತ್ತು. ಮುಖ ಸ್ತುತಿಗೆ ಮರಳಾಗುವ ಬೋಳೆ ಸ್ವಭಾವದ ಶಲ್ಯಭೂಪತಿ ತನ್ನ ಮಾತನ್ನು ತಿರಸ್ಕರಿಸಲಾರನೆಂಬ ವಿಶ್ವಾಸ ಭೀಷ್ಮರಿಗಿತ್ತು.

ಶಲ್ಯಭೂಪತಿ ಕೌರವ ಪಾಳಯ ಸೇರಬೇಕಾಗಿ ಬಂದ ಪ್ರಸಂಗ ಭೀಷ್ಮರಿಗೆ ನೆನಪಾಯಿತು. ಅವನ ತಂಗಿ ಮಾದ್ರಿ ಪಾಂಡುವಿನ ಎರಡನೆಯ ಹೆಂಡತಿಯಾಗಿ ಹಸ್ತಿನಾವತಿಗೆ ಸೊಸೆಯಾದವಳು. ಪಾಂಡುವಿನ ಅನುಮತಿಯಿಂದ ನಕುಲಸಹದೇವರ ತಾಯಿಯಾದವಳು. ಕೌರವ ಪಾಂಡವರ ನಡುವೆ ಯುದ್ಧ ನಿಶ್ಚಯವಾದಾಗ ಶಲ್ಯಭೂಪತಿ ಮಾದ್ರದ ಸೇನೆಯೊಡನೆ ತನ್ನಳಿಯಂದಿರಾದ ಪಾಂಡವರ ಸಹಾಯಕ್ಕೆಂದು ಹೊರಟಿದ್ದ. ಮಾರ್ಗ ಮಧ್ಯದಲ್ಲಿ ದುರ್ಯೋಧನ ಅವನನ್ನು ಭೇಟಿಯಾಗಿದ್ದ. ಅಪೂರ್ವ ಔತಣಕೂಟ, ಸುರಾಪಾನ, ಗಾನ ನರ್ತನ ಮತ್ತು ಸುರಸುಂದರಿಯ ರಾದ ಗಣಿಕಾಂಗನೆಯರಿಂದ ಶಲ್ಯಭೂಪತಿಯನ್ನು ಸಂತೃಪ್ತನನ್ನಾಗಿ ಮಾಡಿದ್ದ. ಅವನ ಕಾಲಿಗೆ ಬಿದ್ದು ಕುರು ಸಾಮ್ರಾಜ್ಯವನ್ನು ಸಂರಕ್ಷಿಸಬೇಕು ಎಂದು ಬೇಡಿಕೊಂಡಿದ್ದ.

ಶಲ್ಯಭೂಪತಿ ಇಕ್ಕಟ್ಟಿನಲ್ಲಿ ಸಿಕ್ಕಿದ್ದ. ಪಾಂಡವರ ಸಹಾಯಕ್ಕೆಂದು ಹೊರಟವನು ಹೀಗೆ ದುರ್ಯೋಧನನ ಹಂಗಿಗೆ ಬಿದ್ದು ಬಿಟ್ಟೆನಲ್ಲಾ ಎಂದು ಹಳಹಳಿಸಿದ. ಸುಲಭವಾಗಿ ಅವನು ದುರ್ಯೋಧನನ ಮಾತನ್ನು ಒಪ್ಪಿಕೊಳ್ಳಲಿಲ್ಲ. ದುರ್ಯೋಧನ ಶಲ್ಯನನ್ನು ಹಾಡಿ ಹೊಗಳಿದ. ತನಗೆ ದ್ವೇಷವಿರುವುದು ಭೀಮಾರ್ಜುನರಲ್ಲಿ ಮಾತ್ರ. ನಕುಲ ಸಹದೇವರು ಮಾದ್ರೀ ಪುತ್ರರಾದುದರಿಂದ ಶುದ್ಧ ಕ್ಷತ್ರಿಯ ಯೋನಿ ಸಂಜಾತರಾಗುತ್ತಾರೆ. ಅವರನ್ನು ಕುಂತೀಪುತ್ರರ ದಾಸ್ಯದಿಂದ ವಿಮುಕ್ತಿಗೊಳಿಸುವುದು ತನ್ನ ಉದ್ದೇಶಗಳಲ್ಲಿ ಒಂದು ಎಂದು ಹೇಳಿ ಶಲ್ಯಭೂಪತಿ ತಲೆದೂಗುವಂತೆ ಮಾಡಿದ. ಮಾದ್ರೀ ಪುತ್ರರಲ್ಲಿ ಯಾರನ್ನಾದರೂ ಕುರು ಸಮ್ರಾಟನನ್ನಾಗಿಸುವುದಾದರೆ ಈಗಲೂ ತಾನು ಸಂಧಿಗೆ ಸಿದ್ಧನೆಂದು ಪುಂಗಿಯೂದಿದ್ದ. ಶಲ್ಯಭೂಪತಿಯ ಮನಕರಗಿ ಅವನು ಕುರುಪಾಳಯವನ್ನು ಸೇರಿಕೊಂಡ. ಅವನ ಹಾಗೆ ಅಶ್ವ ಮತ್ತು ಗೋಹೃದಯಗಳನ್ನು ಬಲ್ಲವರು ಸಮಸ್ತ ಆರ್ಯಾವರ್ತದಲ್ಲಿ ಯಾರೂ ಇರಲಿಲ್ಲ. ಆ ವಿದ್ಯೆಯನ್ನವನು ಅಳಿಯಂದಿರಾದ ನಕುಲಸಹದೇವರಿಗೆ ಹೇಳಿಕೊಟ್ಟದ್ದು ಅಜ್ಞಾತವಾಸ ಕಾಲದಲ್ಲಿ ಉಪಯೋಗಕ್ಕೆ ಬಂದಿತ್ತು. ಅಂತಹ ಶಲ್ಯ ಕರ್ಣನ ಸಾರಥಿಯಾದರೆ ಯುದ್ಧದ ಹಣೆಯ ಬರಹ ಬದಲಾಗಬಹುದೆ?

ದುರ್ಯೋಧನನು ಕರ್ಣ ಮತ್ತು ಶಲ್ಯಭೂಪತಿಯರೊಡನೆ ಬಿಡದಿಯನ್ನು ಹೊಕ್ಕಾಗ ಭೀಷ್ಮರ ಯೋಚನಾ ಲಹರಿ ತುಂಡಾಯಿತು. ಆಗಷ್ಟೇ ಅವರ ವೃಣದ ಸುತ್ತ ವೈದ್ಯರು ಸುಗಂಧ ದ್ರವ್ಯಗಳನ್ನು ಲೇಪಿಸಿದ್ದರು. ಇನ್ನು ಈ ವೃಣ ಅಸಹ್ಯ ವಾಸನೆಯನ್ನು ಸೂಸದೆಂದು ಅವರಿಗೆ ಧೈರ್ಯವಾಯಿತು. ಬಂದವರ ಅಭಿವಾದನಗಳನ್ನು ಸ್ವೀಕರಿಸಿ ಆಸನಗಳತ್ತ ಕೈ ತೋರಿಸಿ ಭೀಷ್ಮರೆಂದರು: “ಮಾದ್ರಾಧಿಪನಾದ ಶಲ್ಯ ಭೂಪತಿ ಈ ಬಿಡದಿಗೆ ಬಂದುದರಿಂದ ನನ್ನ ಗೌರವ ಹೆಚ್ಚಾದಂತಾಗಿದೆ. ನಾನು ಬದುಕಿಯೂ ಸತ್ತಂತಿದ್ದೇನೆ. ನಿನ್ನೆ ಆಚಾರ್ಯ ದ್ರೋಣರ ವಧೆಯಾಗಿದೆ. ಈಗ ಕುರುಪಾಳಯದಲ್ಲಿ ಯುದ್ಧ ಗೆದ್ದುಕೊಡಬಲ್ಲ ಹಿರಿಯರು ಅಂತಿರುವುದು ನೀನು ಮಾತ್ರ. ಹೇಳು ಭೂಪತೀ, ಯುದ್ಧದ ಗತಿ ಏನಾಗಬಹುದು?”

ಹೊಗಳಿಕೆಯಿಂದ ಶಲ್ಯಭೂಪತಿ ಉಬ್ಬಿ ಹೋದ. ಅವನಿಗೆ ಭೀಷ್ಮರ ಯೋಗ್ಯತೆ ಚೆನ್ನಾಗಿ ತಿಳಿದಿತ್ತು. ಅವನು ಸಹಜ ಸ್ವರದಲ್ಲಿ ಉತ್ತರವಿತ್ತ: “ಆಚಾರ್ಯರೇ, ಪರಿಸ್ಥಿತಿ ತುಂಬಾ ಸಂಕೀರ್ಣವಾಗಿದೆ. ಕೃಷ್ಣಾರ್ಜುನರು ನಮಗೆ ದೊಡ್ಡ ಸಮಸ್ಯೆಯಾಗಿ ಬಿಟ್ಟಿದ್ದಾರೆ. ಅವರನ್ನು ನಿವಾರಿಸಿದರೆ ಗೆಲುವು ನಮ್ಮದೇ. ಆದರೆ ಅದು ಹೇಗೆನ್ನುವುದೇ ದೊಡ್ಡ ಸಮಸ್ಯೆ. ಅರ್ಜುನನಂತಹ ಧನುರ್ವಿದ್ಯಾ ಪ್ರವೀಣ ಮತ್ತು ಕೃಷ್ಣನಂತಹ ಯುದ್ಧ ತಂತ್ರ ನಿಪುಣರು ನಮ್ಮಲ್ಲಿಲ್ಲ. ಇದ್ದಿದ್ದರೆ ನಾವು ಚಿಂತಿಸಬೇಕಾದ ಅಗತ್ಯವೇ ಇರಲಿಲ್ಲ”.

ತಕ್ಷಣ ದುರ್ಯೋಧನನೆಂದ: “ತಾತಾ, ಈ ಶಲ್ಯಮಾವ ಮಹಾರಥಿಕ. ಯುದ್ಧತಂತ್ರ ಗಾರಿಕೆಯಲ್ಲಿ ಕೃಷ್ಣನಿಗೆ ಸರಿಸಾಟಿಯಾಗಿರುವವರು. ಅನುಭವದಲ್ಲಿ ಅವನಿಗಿಂತಲೂ ಹಿರಿಯರು. ಆದರೂ ಸುಮ್ಮನೆ ಕೀಳರಿಮೆಯಿಂದ ಏನೇನನ್ನೋ ಹೇಳುತ್ತಿರುತ್ತಾರೆ. ಇನ್ನು ನಮ್ಮ ಕರ್ಣ ಬಿಲ್ವಿದ್ಯೆಯಲ್ಲಿ ಯಾವತ್ತೂ ಆ ಅರ್ಜುನನಿಗಿಂತ ಮಿಗಿಲೇ. ಕರ್ಣ ರಥಿಕನಾಗಿ ಈ ಮಾವ ಸಾರಥಿಯಾದರೆ ಕುರುಸೇನೆಯನ್ನು ಗೆಲ್ಲಬಲ್ಲವರು ಈ ಲೋಕದಲ್ಲಿ ಯಾರಿದ್ದಾರೆ? ಏನು ಹೇಳುತ್ತೀರಿ ತಾತಾ?”

ಇದು ಸರಿಯಾದ ಅವಕಾಶವೆಂದುಕೊಂಡು ಭೀಷ್ಮರೆಂದರು: “ಶಲ್ಯಭೂಪತೀ, ದುರ್ಯೋಧನ ಹೇಳಿದ್ದರಲ್ಲಿ ಉತ್ಪ್ರೇಕ್ಷಯೇನಿಲ್ಲ. ಆರ್ಯಾವರ್ತದಲ್ಲಿ ಅಶ್ವಹೃದಯ ಬಲ್ಲವರಲ್ಲಿ ನೀನು ಅದ್ವಿತೀಯ. ನಿನ್ನ ಸಾರಥ್ಯ ಕರ್ಣನಿಗೆ ಸಿಕ್ಕರೆ ನಾಳೆಯ ವಿಜಯ ನಮ್ಮದೇ. ನೀನಿದನ್ನು ತಿರಸ್ಕರಿಸಬಾರದು. ಕರ್ಣ ಸಾರಥಿಯಾಗಿ ಪಾರ್ಥಸಾರಥಿಗೆ ಮಿಗಿಲೆನಿಸಬೇಕು. ದುರ್ಯೋಧನನಿಗೆ ವಿಜಯ ತಂದೀಯಬೇಕು.”

ಭೀಷ್ಮರು ಯಾಚನೆಯ ದನಿಯಲ್ಲಿ ಹೇಳಿದುದನ್ನು ತಿರಸ್ಕರಿಸಿದರೆ ತಪ್ಪಾಗುತ್ತದೆಂದು ಶಲ್ಯನಿಗನ್ನಿಸಿತು. ಅವನೆಂದ: “ಆಚಾರ್ಯರೇ, ನೀವೇ ಹೇಳಿದ ಮೇಲೆ ಇನ್ನೇನಿದೆ? ಅದನ್ನು ಆಜ್ಞೆಯೆಂದು ಶಿರಸಾ ವಹಿಸಿದ್ದೇನೆ. ವಿಧಿ ನನ್ನನ್ನು ಕುರು ಪಾಳಯಕ್ಕೆ ಸೇರಿಸಿದೆ. ದುರ್ಯೋಧನನಿಗೆ ಜಯ ದೊರಕಿಸಿಕೊಡಬೇಕಾದದ್ದು ನನ್ನ ಧರ್ಮ. ನನಗೆ ವಹಿಸಿಕೊಟ್ಟ ಕೆಲಸವನ್ನು ನಿಷ್ಠೆಯಿಂದ ಮಾಡುತ್ತೇನೆ. ಆದರೆ ಈ ಕರ್ಣ ಒಂದು ಮಾತನ್ನು ನೆನಪಿಡಬೇಕು. ನಾನು ಇವನಿಗಿಂತ ಕುಲ, ಬಲ, ವಿದ್ಯೆ, ಅನುಭವ, ವಯಸ್ಸು ಎಲ್ಲದರಲ್ಲೂ ದೊಡ್ಡವನು. ಯುದ್ಧದ ಸಂದರ್ಭದಲ್ಲಿ ನಾನು ಹೇಳಬಹುದಾದ ಮಾತುಗಳು ದುರ್ಯೋಧನನ ವಿಜಯಕ್ಕಾಗಿ ನಾನು ರೂಪಿಸುವ ತಂತ್ರ ಗಳೆಂಬುದನ್ನು ಇವನು ತಿಳಿದುಕೊಂಡು ಅದನ್ನು ಪಾಲಿಸಬೇಕು. ನನ್ನ ಮಾತಿಗಿವನು ಬೆಲೆ ಕೊಡದಿದ್ದರೆ ಮತ್ತೆ ಒಂದು ಕ್ಷಣ ನಾನಿವನ ರಥದಲ್ಲಿರಲಾರೆ”.

ಕರ್ಣನ ಪರವಾಗಿ ಭೀಷ್ಮರು ಆಶ್ವಾಸನೆ ನೀಡಿದರು: “ಶಲ್ಯಭೂಪತೀ, ಅಂಥಾದ್ದೇನೂ ನಡೆಯುವುದಿಲ್ಲ. ಸಂಭವಿಸಿದರೆ ನಿನ್ನಷ್ಟದಂತೆ ನಡೆಯುವ ಸ್ವಾತಂತ್ರ್ಯ ನಿನಗಿದ್ದೇ ಇರುತ್ತದೆ”.

ಸಂತೃಪ್ತ ವದನದ ದುರ್ಯೋಧನ ಎದ್ದು ತಾತನಿಗೆ ಶಿರಬಾಗಿ ವಂದಿಸಿದ. ಕರ್ಣ ಮತ್ತು ಶಲ್ಯ ಅವನನ್ನು ಅನುಕರಿಸಿದರು. ವಿಜಯದ ಕನಸು ಕಾಣುತ್ತಾ ಮೂವರೂ ಬಿಡದಿಯಿಂದ ಹೊರಬಿದ್ದರು.

ಅವರು ಹೋದ ಮೇಲೆ ವೃಣದ ಅಸಹ್ಯ ವಾಸನೆ ಅವರ ಮೂಗಿಗೆ ರಾಚಿತು. ಆ ಮಾತುಗಳು ಕಿವಿಗಪ್ಪಳಿಸತೊಡಗಿದವು: “….ಗಂಡೂ ಅಲ್ಲದ, ಹೆಣ್ಣೂ ಅಲ್ಲದ ಜೀವಿಯಾಗಿ ನಿನ್ನನ್ನು ಕೊಲ್ಲುತ್ತೇನೆ”.
*****

ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಾಳು
Next post ಬೆಚ್ಚನೆಯ ಸಿರಿಹಗಲ ಭರವಸೆಯ ನನಗಿತ್ತು

ಸಣ್ಣ ಕತೆ

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

cheap jordans|wholesale air max|wholesale jordans|wholesale jewelry|wholesale jerseys