ಬೆಚ್ಚನೆಯ ಸಿರಿಹಗಲ ಭರವಸೆಯ ನನಗಿತ್ತು
ಮಳೆಯಂಗಿ ಇರದೆ ಪ್ರಯಾಣಿಸಲೇಕೆ ಪ್ರೇರಿಸಿದೆ ?
ನನಗಡ್ಡ ಬರುವಂತೆ ಕರಿಮೋಡಕೆಡೆಯಿತ್ತು
ಹೊಲಸುಗಪ್ಪಲ್ಲಿ ಚೆಲುವನ್ನೇಕೆ ಮರೆಸಿದೆ ?
ಕರಿಮುಗಿಲ ತೂರಿ ಹೊರಬಂದು ಗಾಳಿಗೆ ಜರೆದ
ಕಂಗೆಟ್ಟ ಮುಖದ ಮಳೆ ಹನಿ ಒರೆಸಿದರೆ ಸಾಕೆ ?
ಗಾಯ ಮಾಯಿಸಿಯು ಅವಮಾನದುರಿ ಆರಿಸದ
ಉಪಶಮನವನು ಯಾರು ನ್ಯಾಯವೆನುವರು ಏಕೆ ?
ನೀ ನಾಚಿ ನನ್ನ ಎದೆಬೆಂಕಿ ಆರುವುದೇನು ?
ಕೊರಗಿದರು ನೀನು ಕೊರತೆಯನು ತುಂಬದು ಗೋಳು ;
ಫಾತಿಸಿದವನ ವ್ಯಥೆಯು ಯಾತನೆಯ ಶಿಲುಬೆಯನು
ಹೊತ್ತ ಜೀವಕ್ಕೆ ಹಿತವೇನ ತರುವುದು ಹೇಳು ?
ಆದರೂ ನಿನ್ನೊಲವು ಸುರಿವ ಕಂಬನಿಮುತ್ತು
ತಪ್ಪುಗಳಿಗೆಲ್ಲ ಪರಿಹಾರ, ಹಿರಿಸಂಪತ್ತು.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 34
Why didst thou promise such a beauteous day