ತುಂಬಿದ ಬಸ್ಸು. ಮಾಸ್ತರರು ಬಹಳ ಪ್ರಯಾಸಪಟ್ಟು ಹೊರಗಿನಿಂದಲೇ ಕೈಚೀಲವನ್ನು ಎದುರಿನ ಸೀಟಿನಲ್ಲಿ ಮೊದಲೇ ಹಾಕಿದ್ದರಿಂದ ಸೀಟಿಗೆ ಸಮಸ್ಯೆಯಾಗಿರಲಿಲ್ಲ. ಸೆಕೆ ವಿಪರೀತವಾಗಿದ್ದುದರಿಂದ ಮಾಸ್ತರರು ಆಗಾಗ ಬೆವರು ಒರೆಸಿಕೊಳ್ಳುತ್ತಾ ಪರಿಚಿತರು ಯಾರಾದರೂ ಇದ್ದಾರೆಯೇ ಎಂದು ಕೊರಳು ತಿರುಗಿಸಿದರು. ಆ ರಶ್‌ನಲ್ಲಿ ಎಲ್ಲರನ್ನೂ ಸರಿಯಾಗಿ ನೋಡಲು ಸಾಧ್ಯವಾಗಲಿಲ್ಲ. ನೋಡಲು ಸಾಧ್ಯವಾದಷ್ಟು ಮುಖಗಳಲ್ಲಿ ಪರಿಚಯದ್ದು ಒಂದೂ ಇರಲಿಲ್ಲ.

ಮಾಸ್ತರರ ಕೈ ಜೇಬಿಗೆ ಹೋಯಿತು. ಹಣವನ್ನು ಹೊರತೆಗೆದು ಸರಿಯಾಗಿದೆಯೇ ಎಂದು ಮತ್ತೊಮ್ಮೆ ಎಣಿಸಿಕೊಂಡರು. ಐವತ್ತು ರೂಪಾಯಿ. ಸದ್ಯ ಪಿಕ್‌ಪಾಕೆಟ್‌ ಆಗಿಲ್ಲ. ಮನೆಯಿಂದ ಹೊರಡುವಾಗ ಅವರ ಹೆಂಡತಿ ಸರಿಯಾಗಿ ಲೆಕ್ಕ ಹಾಕಿದ್ದರು. ಬಸ್ಸಿಗೆ ಒಟ್ಟು ಅಪ್ಪೆಂಡೌನ್‌ ಮೂವತ್ತು ರೂಪಾಯಿ. ಪಂಚಕಜ್ಜಾಯಕ್ಕೆ ಹತ್ತು. ಕುಂಕುಮಾರ್ಚನೆಗೆ ಆರು ಮತ್ತು ಕರ್ಪೂರಾರತಿಗೆ ಮೂರು. ಉಳಿದ ಒಂದು ರೂಪಾಯಿ ಹುಂಡಿಗೆ. ಊಟ ಹೇಗೂ ಛತ್ರದಲ್ಲಿ ನಡೆಯುತ್ತದೆ. ಅದೂ ಬ್ರಾಹ್ಮಣರಿಗೆ ಪ್ರತ್ಯೇಕ ವ್ಯವಸ್ಥೆ ಇರುವುದರಿಂದ ಮಡಿ ಕೆಡುವುದಿಲ್ಲ. ಹೋಟೆಲಲ್ಲಿ ಏನನ್ನೂ ತಿನ್ನಬಾರದು ಎನ್ನುವುದಕ್ಕೆ ಇಷ್ಟೆಲ್ಲಾ ಲೆಕ್ಕಾಚಾರ.

ಮಾಸ್ತರರಿಗೆ ಈರುಳ್ಳಿ ದೋಸೆ ಮತ್ತು ಬ್ರೂ ಕಾಫಿ ಅಂದರೆ ಪ್ರಾಣ. ಹೆಂಡತಿ ಮಾತ್ರ ಅದನ್ನು ತಿನ್ನಗೊಡುವುದಿಲ್ಲ. “ಈರುಳ್ಳಿ ಮೈಲಿಗೆ, ನಿಮ್ಮ ಮೈಗೂ ಆಗುವುದಿಲ್ಲ” ಎಂದು ನಯವಾಗಿಯೇ ಗದರಿಸುವುದು ಅವರ ವಾಡಿಕೆ. ಈಗ ಹೆಂಡತಿ ಜತೆಗಿಲ್ಲ. ಆದರೆ ಹಣ ಕೊಡುವಾಗ ಸರಿಯಾಗಿ ಲೆಕ್ಕ ಹಾಕಿ ಎಷ್ಟು ಬೇಕೋ ಅಷ್ಟನ್ನೇ ಕೊಟ್ಟಿದ್ದಾಳೆ. ದೇವರಿಗೆ ಅರ್ಚನೆ ಮತ್ತು ಆರತಿ ಮಾಡಿಸದೆ ಇದ್ದರೆ ಒಂಬತ್ತು ರೂಪಾಯಿ ಮಿಗುತ್ತೆ. ಅದರಲ್ಲಿ ಒಂದು ಈರುಳ್ಳಿ ದೋಸೆ ಹೊಡೆಯಬಹುದು. ಒಂದು ಬೈಟು ಕಾಫಿ ಕುಡಿಯಬಹುದು. ಆದರೆ ಎಲ್ಲದಕ್ಕೂ ರಶೀದಿ ತರಲು ಹೆಂಡತಿ ಹೇಳಿದ್ದಾಳೆ. ಅಲ್ಲದೆ ಈ ವಯಸ್ಸಿನಲ್ಲಿ ದೇವರಿಗೆ ಮೋಸ ಮಾಡಬಾರದು.

ಬಸ್ಸಲ್ಲಿ ವಿಪರೀತ ರಶ್‌ ಇದೆ. ಟಿಕೇಟ್‌ ಕೊಡಲು ಕಂಡಕ್ಟರ್‌ ಬಂದಾಗ ಎಲ್ಲೋ ಹೊರಗಡೆ ನೋಡುತ್ತಾ ಕೇಳದಂತೆ ಇದ್ದು ಬಿಡುವುದು ಅಥವಾ ಆಗಿದೆ ಅಂದು ಬಿಡುವುದು. ಐಡಿಯಾವೇನೋ ಒಳ್ಳೆಯದೇ. ಆದರೆ….. ಊಹ್ಞುಂ ಅದಾಗುವುದಿಲ್ಲ. ಎಲ್ಲಾದರೂ ಚೆಕಿಂಗ್‌ನವರು ಬಂದರೆ ಮರ್ಯಾದೆ ಹೋಗಿ ಬಿಡುತ್ತದೆ. ದಂಡ ಕಟ್ಟುವಷ್ಟು ಹಣವೂ ತನ್ನಲ್ಲಿಲ್ಲ. ಈ ಬಸ್ಸಲ್ಲಿ ಗುರುತಿನ ಒಂದು ಪಿಳ್ಳೆ ಇದ್ದರೂ ಸಾಕು. ವಿಷಯ ಊರಿಡೀ ಟಾಂ ಟಾಂ ಆಗುತ್ತದೆ. ಅದಾಗುವುದೇ ಇಲ್ಲ. ಆದರೆ ತಾನು ಈರುಳ್ಳಿ ದೋಸೆ ತಿನ್ನುವುದು ಹೇಗೆ? ಹೇಗೆ ? ಹೇಗೆ ?

ಕ್ಷೇತ್ರದಲ್ಲಿ ಯಾರಾದರೂ ಗುರುತಿನವರು ಸಿಕ್ಕರೆ ಅವರನ್ನು ಹೋಟೆಲಿಗೆ ಕರೆದು ಕೊಂಡು ಹೋಗುವುದು. ಈರುಳ್ಳಿ ದೋಸೆ ತಿಂದು, ಬ್ರೂ ಕಾಫಿ ಕುಡಿಯುವುದು. ಬಿಲ್ಲು? ಬಿಲ್ಲು ಆತ ಕೊಡುತ್ತಾನೆಂದು ಏನು ಗ್ಯಾರೆಂಟಿ? ಮರ್ಯಾದೆಗಾದರೂ ತಾನು ಬಿಲ್ಲು ಕೊಡುತ್ತೇನೆಂದು ಹೇಳಬೇಕು. ಆತ ಆಗಲಿ ಎಂದುಬಿಟ್ಟರೆ? ಬಿಲ್ಲು ತಾನೇ ಕೊಡಬೇಕಾಗುತ್ತದೆ. ಆಗ ತಾನು ತನ್ನ ಹೆಂಡತಿಗೆ ಮುಖ ತೋರಿಸುವಂತೆಯೇ ಇಲ್ಲ.

ಒಂದು ವೇಳೆ ತನ್ನ ಹಳೆಯ ಶಿಷ್ಯರಲ್ಲಿ ಯಾರಾದರೂ ಸಿಕ್ಕರೆ ಅವರು ಹೋಟೆಲಿಗೆ ಕರೆದುಕೊಂಡು ಹೋದಾರೆ? ಛೇ! ಆಗಲೂ ಗ್ಯಾರೆಂಟಿಯೇನಿಲ್ಲ. ಈಗಿನ ಯಾವ ಶಿಷ್ಯರಿಗೆ ಗುರುಗಳಲ್ಲಿ ಅಂತಹಾ ಪ್ರೀತಿಯಿದೆ? ಅವರ ಹಣ ಏನಿದ್ರೂ ಸಿನಿಮಾಕ್ಕೆ, ಶೋಕಿಗೆ, ಹುಡುಗಿಯರಿಗೆ ಮತ್ತು ಕುಡಿಯಲಿಕ್ಕೆ ಮಾತ್ರ. ಗುರುಗಳಿಂದ ಯಾವ ಸುಖವಿದೆ? ಒಂದು ವೇಳೆ ಯಾರಾದರೂ ಶಿಷ್ಯೆ ಸಿಕ್ಕು ಹೋಟೆಲಿಗೆ ಕರೆದರೆ? ಛೇ! ಈ ಹುಡುಗಿಯರು ಇನ್ನೂ ಆಗಲಿಕ್ಕಿಲ್ಲ. ಡ್ರೆಸ್ಸು, ಮೇಕಪ್ಪು, ಹೋಟೆಲು, ಪಿಕ್ಚರ್ರು, ಗ್ರೀಟಿಂಗ್ಸು ಎಂದು ಹಣ ಸುರಿದಾರೇ ಹೊರತು ಗುರುಗಳಿಗೆ ಕಾಸೂ ಖರ್ಚು ಮಾಡುವವರಲ್ಲ. ಒಟ್ಟಿನಲ್ಲಿ ತಾನು ಈರುಳ್ಳಿ ದೋಸೆ ತಿನ್ನಲು, ಬ್ರೂ ಕಾಫಿ ಕುಡಿಯಲು ಆಗುವುದಿಲ್ಲ. ಛೇ!

ಮಾಸ್ತರರಿಗೆ ನರಸಿಂಹನ ನೆನಪಾಯ್ತು. ಅವ ಛತ್ರದಲ್ಲಿ ತರಕಾರಿ ಹೆಚ್ಚುವವ. ತನಗೆ ದೂರದ ಸಂಬಂಧಿ. ಅವನನ್ನು ಮಾತಾಡಿಸುವುದು. ಕೊನೆಗೆ ಕಾಫಿಗೆ ಕರೆಯುವುದು. ಅವನದ್ದೇ ಊರಾದುದರಿಂದ ಮರ್ಯಾದೆಗಾದರೂ ಬಿಲ್ಲು ಕೊಡುತ್ತಾನೆ. ಹೌದು. ಅದುವೇ ಸರಿ.

ಊಹ್ಞುಂ! ಇದು ಸರಿಯಾಗುವುದಿಲ್ಲ. ತಾನೇನು ಅವನ ಮನೆಗೆ ಹೋಗಿ ಬಂದು ಮಾಡುವುದಿಲ್ಲ. ಇಷ್ಟಕ್ಕೂ ಅವನದು ಏನೋ ಬಾದರಾಯಣ ಸಂಬಂಧ ಅಷ್ಟೇ. ಕಾಫಿಗೆ ಕರೆದರೆ ತಾನೇ ಬಿಲ್ಲು ಕೊಡಬೇಕಾಗುತ್ತದೆ. ಏಕೆಂದರೆ ನರಸಿಂಹನದು ಅಡುಗೆ ಕೆಲಸ. ಅವನಿಗೆ ಇರುವ ಸಂಬಳ ಅಷ್ಟಕಷ್ಟೆ. ಅದು ಅವನಿಗೆ ದೇವರು ಕೊಟ್ಟ ಏಳು ಮಕ್ಕಳ ಹೊಟ್ಟೆ ತುಂಬಿಸಲಿಕ್ಕೂ ಸಾಕಾಗುವುದಿಲ್ಲ. ಏನೋ ಬಿಟ್ಟಿ ಛತ್ರ ಇರುವುದಕ್ಕೆ ಅವು ಬದುಕಿಕೊಂಡಿವೆ. ಇನ್ನೇನು ಮಾಡುವುದು? ಏನೂ ಇಲ್ಲ. ಈ ಸಲಕ್ಕೆ ಹೋಟೆಲಿಗೆ ಹೋಗುವ ಆಸೆ ಬಿಡುವುದು. ನೋಡುವಾ. ಇನ್ನೊಮ್ಮೆ ದೇವರು ದಯಪಾಲಿಸಿಯಾನು.

ಮಾಸ್ತರರು ನಿರಾಳವಾಗಿ ಕೂತರು. ಬಸ್ಸು ಮುಕ್ಕಾಲು ಹಾದಿ ಕ್ರಮಿಸಿಯಾಗಿತ್ತು. ಇನ್ನೇನು ಕ್ಷೇತ್ರ ಬಂದೇ ಬಿಡುತ್ತದೆ. ಯಾಕೆ ಈ ಕಂಡಕ್ಟರ್‌ ಇನ್ನೂ ಬಂದಿಲ್ಲ ಚೀಟಿಗೆ? ಮಾಸ್ತರರಿಗೆ ಈಗ ಹೊಸತೊಂದು ಆಸೆ ಮಿಂಚಿತು. ಓ ದೇವರೆ ಅವ ಬಾರದಿರಲಿ. ಕೇತ್ರ ಮುಟ್ಟುವವರೆಗೂ ಅವ ಬಾರದಿರಲಿ. ಮುಟ್ಟಿದ ಬಳಿಕ ನುಗ್ಗಲಿನಲ್ಲಿ ಬೇಗ ಇಳಿದರಾಯ್ತು. ಹದಿನೈದು ರೂಪಾಯಿ ಮೂವತ್ತು ಪೈಸೆ ಉಳಿಯುತ್ತದೆ. ಅದು ತನ್ನ ಆಸೆ ಈಡೇರಿಸಲು ಧಾರಾಳ ಸಾಕು. ಸ್ವಲ್ಪ ಕಡಿಮೆಯಾದರೆ ಹುಂಡಿಗೆ ಹಾಕುವ ನಲುವತ್ತು ಪೈಸೆಯಲ್ಲಿ ಅಡ್‌ಜಸ್ಟ್ ಮಾಡಬಹುದು. ಅಬ್ಬಾ! ಅಂತೂ ಕಂಡಕ್ಟರ್‌ ಇನ್ನು ಈ ತುದಿಗೆ ಬರಲಾರ. ದೇವರು ತನ್ನ ಆಸೆಯನ್ನು ಈಡೇರಿಸುತ್ತಿದ್ದಾನೆ. ಓ ದೇವರೇ ನೀನೆಷ್ಟು ದಯಾಮಯಿ! ಮಾಸ್ತರರು ತಲೆ ಹೊರಗೆ ಹಾಕಿ ಚೆಕಿಂಗ್‌ ಜೀಪು ಎಲ್ಲಾದರೂ ಹಿಂಬಾಲಿಸುತ್ತಿದೆಯೇ ಎಂದು ನೋಡಿದರು. ಕಾಣಲಿಲ್ಲ. ಮುಂದಿನಿಂದ ಏನಾದರೂ ಬರುತ್ತಿರಬಹುದೇ ಎಂದು ಐದು ನಿಮಿಷ ರಸ್ತೆಯ ಮೇಲೆಯೇ ಕಣ್ಣಿಟ್ಟರು. ಊಹ್ಞುಂ ! ಈಗ ಅವರ ಎದೆ ಡವಗುಟ್ಟ ತೊಡಗಿತು. ಉದ್ವೇಗ, ಆನಂದ, ಕಾತರ, ನಿರೀಕ್ಷೆ. ಅಂತೂ ದೇವರು ದಯಪಾಲಿಸುತ್ತಾನೆ!

“ಯಾರಿಗ್ರೀ ಇನ್ನು ಚೀಟಿ?” ದಪ್ಪನೆಯ ಸ್ವರ ಮಾಸ್ತರರನ್ನು ವಾಸ್ತವಕ್ಕೆ ಎಳೆದು ತಂದಿತು. “ಅಯ್ಯೋ ಹಾಳಾದವ ಬಂದೇ ಬಿಟನಲ್ಲಪ್ಪಾ…. ಇವನ್‌ ಬಾಯಿಗೆ ಮಣ್ಣು ಬೀಳ…. ಇವನ್‌ ಮನೆ ಎಕ್ಕುಟ್ಟು ಹೋಗ” ಎನ್ನುತ್ತಾ ಹಣ ತೆಗೆಯಲು ಜೇಬಿಗೆ ಕೈ ಹಾಕಿದರು. ನೋಟು ತೆಗೆಯುವಾಗ ಅವರ ಕೈ ನಡುಗಿತು. ಆಯಿತು. ತನಗೆ ಈವತ್ತು ದೋಸೆ ತಿನ್ನಲು ಬ್ರಹ್ಮ ಹಣೆಯಲ್ಲಿ ಬರೆದಿಲ್ಲ. ಬ್ರೂ ಕಾಫಿ ಕುಡಿಯುವ ಯೋಗವಿಲ್ಲ. ಹೋಯಿತು. ಎಲ್ಲವೂ ಮುಗಿದೇ ಹೋಯಿತು.

“ಓ….. ಇದು ನೀವಾ ಸಾ. ನಮಸ್ಕಾರ”. ದಪ್ಪನೆಯ ದನಿಗೆ ಮಾಸ್ತರರು ತಲೆ ಎತ್ತಿ ನೋಡಿದರು. ಕಂಡೆಕ್ಟರು ಕೈ ಮುಗಿದು ನಿಂತಿದ್ದಾನೆ. ಮುಖದಲ್ಲಿ ನಗು. ಯಾರು? ದಪ್ಪ ಗಾಜಿನೊಳಗಿಂದ ಮಾಸ್ತರರ ಕಣ್ಣು ಮೇಲೆ ಕೆಳಗೆ ಹೋಯಿತು.

“ಏನ್‌ ಸಾ ಮರ್ತೇಬಿಟ್ರಾ? ಇದು ನಾನ್ ಸಾ…. ಹೊಸಮನಿ ಬೆಟ್ಟಯ್ಯ. ನೀವೇ ಕಲಿಸಿದ್ದು ಸಾ ಶಿವಮೊಗ್ಗದಲ್ಲಿ. ಈಗ ಕಂಡಕ್ಟರಾಗಿದ್ದೀನಿ.”

ಮಾಸ್ತರರಿಗೆ ನೆನಪಾಗತೊಡಗಿತು. ಶಿವಮೊಗ್ಗೆಯಲ್ಲಿ ತಾನು ಕಳೆದ ದಿನಗಳು. ತುಂಟ ಬೆಟ್ಟಯ್ಯನ ನೆನಪೂ ಆಯಿತು. ವಯಸ್ಸಿಗೆ ಬಂದ ಹೆಣ್ಮಕ್ಕಳು ಸಾಕಷ್ಟಿದ್ದ ಕ್ಲಾಸು ಅದು. ಹಾಗೆಯೇ ಗಂಡು ಮಕ್ಕಳು ಕೂಡಾ. ಅವರಲ್ಲೊಬ್ಬ ಈ ಬೆಟ್ಟಯ್ಯ. ಹುಡುಗಿಯರೆಂದರೆ ಇವನಿಗೆ ಪ್ರಾಣ. ಅವರನ್ನು ಕಾಡಿಸೋದು, ಪೀಡಿಸೋದು ಇವನ ಅಭ್ಯಾಸ. ಅತ್ಯಂತ ದೂರುಗಳು ಬರುತ್ತಿದ್ದುದೇ ಇವನ ಮೇಲೆ.

ಮಾಸ್ತರರ ಮುಖ ಅರಳಿತು. “ಆಗಲಪ್ಪಾ. ದೇವ್ರು ಚೆನ್ನಾಗಿ ಇಟ್ಟಿರ್ಲಿ. ಮದ್ವೆ, ಮಕ್ಳು….. ಏನ್ಕತೆ?”

“ಎಲ್ಲಾ ಆಗಿದೆ ಸಾ. ಮೂರವೆ. ಎಲ್ಲಾ ತಮ್ಮ ದಯೆ ಸಾ. ಆದ್ರೆ ಎಲ್ಲಾ ಡೆಬಿಟ್ಟೇ ಸಾ.” ಮಾಸ್ತರರಿಗೆ ಅರ್ಥವಾಗಲಿಲ್ಲ. ಇದ್ರಲ್ಲಿ ನನ್ನ ದಯೆಯೇನು ಬಂತಪ್ಪಾ? ಎಲ್ಲಾ ಶಿವ ಕಣ್ಣು ಬಿಟ್ಟದ್ದು. ಅದೇನೋ ಡೆಬಿಟ್ಟು ಅಂದೆಯಲ್ಲಾ? ಅದೇನದು?

ಬೆಟ್ಟಯ್ಯ ನಕ್ಕುಬಿಟ್ಟ. ಮೂರು ಹೆಣ್ಣೇ ಸಾ. ಡೌರಿ ಕೊಡ್ಬೇಕಾಗುತ್ತಲ್ಲಾ? ಅದ್ಕೇ ಡೆಬಿಟ್ಟು ಅಂದುಬಿಟ್ಟೆ.

ಅಕ್ಕಪಕ್ಕದ ಪ್ರಯಾಣಿಕರೆಲ್ಲರೂ ಗೊಳ್ಳೆಂದು ನಕ್ಕರು. ಮಾಸ್ತರರಿಗೂ ನಗು ಬಾರದಿರಲಿಲ್ಲ. ಬೆಟ್ಟಯ್ಯನೇ ಮುಂದುವರಿಸಿದ. “ಮೊದ್ಲಿದ್ದು ಎರಡು ಹೆಣ್ಣಾದ್ವು ಸಾ. ಶಿವಾ ಕಣ್‌ ಬಿಡ್ತಾನೇಂತ ಮತ್ತೊಂದಕ್ಕೆ ಕಾದೆ. ಅದೂ ಹೆಣ್ಣಾಯ್ತು. ಈವಾಗ ಕಟ್‌ ಸಾ…. ನಿಲ್ಲಿಸ್‌ಬಿಟ್ಟೆ.”

“ಒಳ್ಳೇದಾಯ್ತು ಬಿಡು. ಈ ಕಾಲದಲ್ಲಿ ಎರಡಕ್ಕಿಂತ ಹೆಚ್ಚು ಇರೋನು ಮೂರ್ಖನೇಯ. ಬೆಲೆ ಎಷ್ಟು ಏರಿಬಿಡ್ತು ನೋಡು. ಹೇಗೆ ಅಷ್ಟೊಂದು ಮಕ್ಳನ್ನ ಸಾಕ್ತಾರೋ?” ಮಾಸ್ತರರು ಗದ್ದಕ್ಕೆ ಕೈ ಕೊಟ್ಟರು.

“ಏನ್‌ ಸಾ….. ಕ್ಷೇತ್ರಕ್ಕೆ ಹೊರಟ್ಬಿಟ್ರಿ?” ಬೆಟ್ಟಯ್ಯ ಮಾತು ಬದಲಾಯಿಸಿದ.

ಮಾಸ್ತರರು ಎಲ್ಲಾ ಹೇಳಿದರು. ತನ್ನ ಮಕ್ಕಳಿಗೆ ಮದುವೆಯಾದದ್ದು. ತಾನು ಎರಡು ವರ್ಷಗಳ ಕೆಳಗೆ ರಿಟೈರ್ಡ್‌ ಆದದ್ದು. ಹೆಂಡತಿ ಹೇಳಿದ ಹರಿಕೆ ಸಂದಾಯಕ್ಕೆಂದು ತಾನೀಗ ಕ್ಷೇತ್ರಕ್ಕೆ ಹೊರಟಿರೋದು.

ಬೆಟ್ಟಯ್ಯ ನೆನಪು ಮಾಡಿಕೊಂಡ. ಮಾಸ್ತರರು ಬಸವಣ್ಣ, ಗಾಂಧಿ ಪಾಠವನ್ನು ಅತ್ಯಂತ ರಸವತ್ತಾಗಿ ಮಾಡುತ್ತಿದ್ದುದು. ಸತ್ಯ, ಅಹಿಂಸೆ, ಪ್ರಾಮಾಣಿಕತೆ ಇಲ್ಲದ ಜೀವನ ಜೀವನವೇ ಅಲ್ಲ ಅನ್ನುತ್ತಿದ್ದುದು. ಅದಕ್ಕೆ ಹರಿಶ್ಚಂದ್ರ, ಶಿಬಿ, ಬುದ್ಧ, ಬಸವಣ್ಣರ ದೃಷ್ಟಾಂತ ಕತೆಗಳನ್ನು ಹೇಳುತ್ತಿದ್ದುದು. ಕೇಳುತ್ತಾ, ಕೇಳುತ್ತಾ ತಾವೆಲ್ಲಾ ಅದರಲ್ಲೇ ಕರಗಿ ಹೋಗಿ ಕಣ್ಣೀರು ಹರಿಸುತ್ತಿದ್ದುದು.

ಮಾಸ್ತರರಿಗೆ ಹಳೆಯದೆಲ್ಲಾ ನೆನಪಾಗಿ ಖುಷಿಯಾಯ್ತು. ಇಷ್ಟು ಅಭಿಮಾನ ಇಟ್ಟು ಕೊಂಡಿರುವ ಈತ ತನ್ನನ್ನು ಕಾಫಿಗೆ ಕರೆಯದಿರುತ್ತಾನೆಯೇ? ಕರೆದರೆ ತನಗೆ ಈರುಳ್ಳಿ ದೋಸೆ ತಿನ್ನುವ ಯೋಗ ಇದೆ. ಇಲ್ಲದಿದ್ದರೆ ಈ ಬಾರಿಗೆ ಆಸೆ ಬಿಡುವುದು. ಅವನಾಗಿಯೇ ಕರೆಯದಿದ್ದರೆ ತಾನಾಗಿಯೇ ಕರೆಯುವುದು. ಶಿಷ್ಯನಾದುದರಿಂದ ಬಿಲ್ಲಿನ ಭಾರ ಅವನೇ ಹೊತ್ತಾನು. ನೋಡೋಣ. ಯೋಗ ಇದ್ದ ಹಾಗಾಗುತ್ತದೆ.

ಮಾತಿನ ಮಧ್ಯೆ ಬೆಟ್ಟಯ್ಯ ಕೇಳಿದ. “ಆರೋಗ್ಯವಾಗಿದ್ದೀರಾ ಸಾ.?”

ಮಾಸ್ತರರು ಕನ್ನಡಕವನ್ನು ತೆಗೆದು ಗ್ಲಾಸುಗಳನ್ನು ಕರ್‌ಚೀಪಿನಿಂದ ಉಜ್ಜುತ್ತಾ ಹೇಳಿದರು. “ನಂದೇನಪ್ಪಾ? ಇದೊಂದು ಕಣ್ಣು ಬಿಟ್ರೆ ಬೇರಿನ್ನೇನೂ ತೊಂದ್ರೆ ಇಲ್ಲ. ತಿನ್ನೋದ್ರಲ್ಲಿ ತುಂಬಾ ಕಟ್ಟು ನಿಟ್ಟು. ಅದ್ಕೆ ಆರೋಗ್ಯವಾಗೇ ಇದ್ದೀನಿ.”

ಬೆಟ್ಟಯ್ಯ ಗೆಲುವಿನ ದನಿಯಲ್ಲಿ ಹೇಳಿದ. “ನಾನೂ ಅಷ್ಟೆ ಸಾ. ನೀವು ಏಳ್ತಿದ್ದ ಎಲ್ಲಾ ಆರೋಗ್ಯ ಪಾಠ ನೆನಪಿಟ್ಟು ಕೊಂಡಿದ್ದೀನಿ. ನನ್ನೆಂಡ್ರೂ ನಂಕಿಂತಾ ವಾಸಿ ಸಾ. ಓಟೇಲಿದ್ದು ಆಳು ಮೂಳೂ ತಿಂದು ಮೈ ಕೆಡಿಸ್ಕೋಬೇಡೀಂತ ಬುತ್ತಿ ಕಟ್ಟಿಕೊಡ್ತಾಳೆ. ಅದ್ಕೇ ಇಂಗಿದ್ದೀನಿ.”

ಮಾಸ್ತರರ ಮುಖ ಬಾಡಿತು. ಆಯಿತು. ಇದ್ದ ಒಂದು ಆಸೆಯೂ ಹೋಯಿತು. ದಿನಾ ಬಸ್ಸಲ್ಲಿ ಯಾವ್ಯಾವುದೋ ಊರಿಗೆ ಹೋಗುವ ಇವನೇ ಮನೆಯಿಂದ ಬುತ್ತಿ ಕಟ್ಟಿಸ್ಕೂಂಡು ಬರ್ತಾನೇಂದ್ರೆ ತನ್ನನ್ನು ಈತ ಹೋಟೆಲಿಗೆ ಕರೆದುಕೊಂಡು ಹೋಗಲುಂಟೆ? ಒಟ್ಟಿನಲ್ಲಿ ತಾನಿವತ್ತು ಎದ್ದ ಗಳಿಗೆ ಖಂಡಿತಾ ಚೆನ್ನಾಗಿಲ್ಲ.

ಬೆಟ್ಟಯ್ಯ ಮಾತು ಮುಂದುವರಿಸಿದ. “ಸಾ…. ನಿಂಬಗ್ಗೆ ಏಳ್ತಾ ಇರ್ತೀನಿ ಸಾ ನಮ್ಮೆಂಡ್ರಲ್ಲಿ. ಅದೇನ್‌ ಪಾಠ, ಅದೇನ್‌ ಸಿಸ್ತು ಸಾ ನಿಮ್ದು? ಬೇಕು ಸಾ….. ನಿಮ್ಮಂತ ಅಪ್ಪಂಗುಟ್ಟಿದ್‌ ಮೇಸ್ಟ್ರುಗಳೇ ಬೇಕು ಸಾ ಈ ನನ್ ದರಿದ್ರ ಸೂಳೇಮಗನ ದೇಸಕ್ಕೆ….”

ಮಾಸ್ತರರಿಗೆ ಕಸಿವಿಸಿಯಾಯ್ತು. “ಸರಿಯಪ್ಪಾ ಆಗ್ಲಿಂದ ಮಾತೇ ಆಯ್ತು ನೋಡು. ಬೇಗ ಚೀಟಿ ಕೊಟ್ಬಿಡು.” ಬೆಟ್ಟಯ್ಯ ಎದುರುಗಡೆ ಗಾಜಿನಿಂದ ನೋಡಿದರೆ ಬಸ್ಸು ಕ್ಷೇತ್ರಕ್ಕೆ ಮುಟ್ಟಿಯಾಗಿತ್ತು. “ಅಯ್ಯಯೋ ಬುಡಿ ಸಾ… ಇನ್ಯಾಕೆ ಚೀಟಿ? ಎಂಗೂ ಬಂದಾಯ್ತಲ್ಲ? ಅಣಾ ಮಿಕ್ಕಿದ್ರೆ ದೇವ್ರುಂಡಿಗೆ ಆಕ್‌ ಬುಡಿ.”

ಮಾಸ್ತರರಿಗೆ ನಂಬಲಾಗಲಿಲ್ಲ. ಹೀಗೂ ಉಂಟೆ? ದೇವರು ತನ್ನ ಆಸೆಯನ್ನು ಹೀಗೆ ಈಡೇರಿಸಿದ್ದಾನೆ. ಅಬ್ಬಾ! ಎದೆಯ ಮೇಲೆ ಕೈ ಇರಿಸಿ ಮಾಸ್ತರರು ಮೇಲಕ್ಕೆದ್ದರು. ಡವಗುಟ್ಟುವ ಹೃದಯ! ಕೈಚೀಲವನ್ನು ಎತ್ತಿಕೊಂಡು ಆತುರಾತುರವಾಗಿ ಇಳಿಯತೊಡಗಿದರು. ಇಳಿಯುತ್ತಿರುವಂತೆ ಬೆಟ್ಟಯ್ಯನನ್ನು ನೋಡಿ “ಆಗಲಪ್ಪ, ದೇವರು ನಿನನ್ನು ಚೆನ್ನಾಗಿ ಇಟ್ಟಿರ್ಲಿ ಎಂದರು. ಬೆಟ್ಟಯ್ಯನೂ ವಿನೀತನಾದ. ಎಲ್ಲಾ ತಮ್ಮ ಆಸೀರ್ವಾದ ಸಾ.”

ಮಾಸ್ತರರು ಇಳಿದರು. ಜೇಬು ಮುಟ್ಟಿ ನೋಡಿಕೊಂಡರು. ಮುಂದುಗಡೆ ಉಪಾಹಾರ ಮಂದಿರದ ಬೋರ್ಡು ಕಂಡಾಗ ಕಾಲುಗಳು ಅವರನ್ನು ಅತ್ತ ಎಳೆದವು. ದೇವ್ರೇ, ನೀನು ಪರಮ ದಯಾಳು. ಚೀಟಿ ತಗೊಳ್ಳದೆ ಉಳಿದ ಹಣ ಹದಿನೈದು ರೂಪಾಯಿಯಲ್ಲಿ ಈರುಳ್ಳಿ ದೋಸಾ ತಿಂದು, ಬ್ರೂ ಕಾಫಿ ಕುಡ್ದು ಮಿಕ್ಕಿದ್ದನ್ನು ಹುಂಡಿಗೇ ಹಾಕ್ತೀನಿ ನಮ್ಮಪ್ಪಾ ಎಂದುಕೊಳ್ಳುತ್ತಾ ನಡೆದರು.

ಹಿಂದಿನಿಂದ ಡ್ರೈವರನ ಮಾತು ಕೇಳಿಸಿತು. “ಯಾಕೋ ಬೆಟ್ಟಾ ಫಿಫ್ಟಿನಾದ್ರೂ ಇಸ್ಕೂಳ್ದೆ ಬುಟ್‌ಬುಟ್ಟೆ?”

ಅದಕ್ಕೆ ಬೆಟ್ಟಯ್ಯ ಉತ್ತರಿಸಿದ. “ಅವ್ರು ನಂ ಗುರುಗ್ಳು ಕಣ್ಲಾ. ಅದ್ಕೇ ಬುಟ್ಟೆ. ಬಸವಣ್ಣನ್‌ ಬಗ್ಗೆ, ಗಾಂಧಿ ಬಗ್ಗೆ, ಅದೆಂಗ್‌ ಪಾಠ ಮಾಡ್ತಿದ್ರು ಗೊತ್ತಾ?”

ಒಂದು ಕ್ಷಣ ಮಾಸ್ತರರು ನಿಂತುಬಿಟ್ಟರು. ಮರುಗಳಿಗೆಯಲ್ಲಿ ಅವರು ಹೋಟೇಲಿನ ಒಳಗಿದ್ದರು.
*****
೧೯೯೭