ನೆರಳನರಸುವ ಕೂಸು ತನ್ನ ಎಳೆ ಕೈಗಳಲಿ
ಅದ ಹಿಡಿದು ತನ್ನೊಡನೆ ಆಟಕುಪಯೋಗಿಸುವ
ಎಳೆ ಚಪಲಕೀಡಾಗಿ-ಹಿಗ್ಗಿನಲಿ ಓಡುತಲಿ
ಅದರೆಡೆಗೆ ನಡೆದಾಗ, ನೆರಳು ಕೈಗಳ ಹಿಡಿತ
ತಪ್ಪಿಸುತ ಜಾರಿರಲು, ಕಣ್ಣೀರ ಕರೆಯುತ್ತ
ತಾಯ ಮಡಿಲಲಿ ತನ್ನ ದುಗುಡ ಹರಿಸುವ ಹಾಗೆ,
ಸಂತಸದ ನೆರಳರಸಿ, ಒಲವಿನೆದೆ ಬಯಸುತ್ತ,
-ಕಣ್ಣೆವೆಯ ಮುಚ್ಚದಿಹ ಮುಗಿಲ ತಾರೆಯ ಹಾಗೆ
ಬಾಳದುಸ್ವಪ್ನಗಳ ಅಲೆಗಳಲಿ ಸಿಕ್ಕುತಲಿ
ಹೃದಯದೊಲವಾಸೆಗಳು ಚೂರು ಚೂರಾಗುವುದ
ಕಂಡು ಕಣ್ಣೀರ್ಗರೆದು, ಕಾವಿನಲಿ, ನೋವಿನಲಿ,
ನಿನ್ನೆಡೆಗೆ ಸಾಗುತಿಹೆ! ಮೈಮರೆಪ ಮಧುಭರಿತ
ನಿನ್ನೆದೆಯ ದಳಗಳಲಿ ನನ್ನಾತ್ಮ ಸಂತವಿಸಿ
ನೋವನಳಿಪುದು ಗೆಳತಿ-ಉಳಿದೆಲ್ಲ ಅಳಿದಿರಲಿ!
*****