ವರದಿಗಳಲ್ಲಿ ಉಸಿರಾಡುತ್ತಿರುವ ಹಿಂದುಳಿದ ವರ್ಗ

ವರದಿಗಳಲ್ಲಿ ಉಸಿರಾಡುತ್ತಿರುವ ಹಿಂದುಳಿದ ವರ್ಗ

ದೇಶದ ವಿವಿಧ ದಿನಪತ್ರಿಕೆಗಳಲ್ಲಿ ದಿನಾಂಕ ೨೦-೨-೧೯೯೪ರಂದು ಚಿತ್ರ ಸಹಿತ ಸುದ್ದಿಯೊಂದು ಪ್ರಕಟಗೊಂಡಿತು. ‘ಮಂಡಲ್ ಆಯೋಗದ ಶಿಫಾರಸ್ಸಿನನ್ವಯ ನೇಮಕಗೊಂಡ ಪ್ರಥಮ ಅಭ್ಯರ್ಥಿ ಆಂಧ್ರ ವಿ. ರಾಜಶೇಖರಚಾರಿ ಅವರಿಗೆ ಭಾನುವಾರ ನವದೆಹಲಿಯಲ್ಲಿ ಕೇಂದ್ರ ಕಲ್ಯಾಣ ಸಚಿವ ಸೀತಾರಾಮ ಕೇಸರಿ ಅವರು ನೇಮಕಾತಿ ಪತ್ರ ನೀಡಿದರು’ ಎಂದು ಪ್ರಚಾರಪಡಿಸಲಾಯಿತು. ಆದೇಶದ ಪತ್ರವನ್ನು ಕ್ಯಾಮೆರಾಕ್ಕಾಗಿಯೇ ಹಿಡಿದಂತಿದ್ದ ಕೋನವನ್ನು ಗಮನಿಸಿದಾಗ – ಇದು ಸಾಂಕೇತಿಕವಾಗಿದೆಯಲ್ಲವೆ ಎಂಬ ಪ್ರಶ್ನೆಯೆದ್ದಿತು. ಆದೇಶದ ಪ್ರತಿಯು ಅಭ್ಯರ್ಥಿಗೆ ಕಾಣದಿದ್ದರೂ ಕ್ಯಾಮರಕ್ಕೆ ಕಾಣಬೇಕು. ಅಭ್ಯರ್ಥಿಯ ಕ್ಯಾಮರಾಕ್ಕಗಿಯೇ ಕೋಟು ತೊಟ್ಟು ಬಂದಿರಬೇಕು. ಸಚಿವರು ಆದೇಶದ ಪ್ರತಿಯನ್ನು ದಯಪಾಲಿಸುತ್ತಿರುವಾಗ ಜೂನಿಯರ್ ಸಚಿವರು ಅದನ್ನೇ ನೆಟ್ಟ ನೋಟದಲ್ಲಿ ತುಂಬಿಕೊಳ್ಳಬೇಕು. ಛೇ! ಹೀಗೆ ಬರೆಯುತ್ತಿರುವಾಗ ನಾನು ಸಿನಿಕನಾಗುತ್ತಿದ್ದೇನೆಯೆ? ಇಲ್ಲ, ಖಂಡಿತ ಇಲ್ಲ, ಸಂಕಟ ಪಡುತ್ತಿದ್ದೇನೆ.

ನನ್ನ ಈ ಸಂಕಟ – ಮಂಡಲ್ ವರದಿಯ ಪರವಾದ ಕಾಳಜಿಯ ಕೇಂದ್ರದಲ್ಲಿ ಹುಟ್ಟಿದ ಸಂಕಟ. ಹಿಂದುಳಿದ ವರ್ಗದ ಅಭಿವೃದ್ಧಿಯ ಆಶಯವು ಪ್ರದರ್ಶನದ ಪ್ರತಿಯ ಮಟ್ಟಕ್ಕೆ ಇಳಿದು ಬಿಡುತ್ತಿದೆಯೇನೊ ಎಂಬ ಅನುಮಾನ ಮತ್ತು ಆತಂಕದಲ್ಲಿ ಹುಟ್ಟಿದ ಸಂಕಟ. ಮಂಡಲ್ ವರದಿಯ ಅನುಷ್ಠಾನ ಕಡೆಗೂ ಪ್ರಾರಂಭವಾದ ಸಂತೋಷದಲ್ಲೇ, ಒಬ್ಬ ವ್ಯಕ್ತಿಗೆ ಕೊಟ್ಟ ಸಾಂಕೇತಿಕ ನೇಮಕಾತಿ ಪತ್ರಕ್ಕೆ ಹಿಗ್ಗಿ ಹೀರೇಕಾಯಿ ಆಗಬೇಕಾದ ಸನ್ನಿವೇಶದಲ್ಲಿ ನಾವು ನಿಂತಿದ್ದೇವಲ್ಲ ಎಂಬ ಸಂಕಟ. ಇದಕ್ಕಿಂತ ಇನ್ನೇನು ಹೇಳಲಿ ? ಕೇಂದ್ರ ಸರ್ಕಾರದ ನೇಮಕಾತಿಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿಯೇ ಇಲ್ಲದಿದ್ದಾಗ ಮಂಡಲ್ ವರದಿಯ ಅನುಷ್ಠಾನ ಪ್ರಾಮಾಣಿಕವಾಗಿ ಆಗುತ್ತಾ ಬಂದರೆ, ಸಾಮಾಜಿಕ ಶೋಷಣೆ ಗೀಡಾದ ಸಮುದಾಯದಿಂದ ಬಂದ ಕೆಲವರಿಗಾದರೂ ಮುಖ್ಯಸ್ಥಾನಗಳು ಸಿಗಬಹುದು, ಕಡೇಪಕ್ಷ ಉದ್ಯೋಗಾವಕಾಶ ಹೆಚ್ಚಾಗಬಹುದು ಎಂಬ ಸಂತೋಷ ಖಂಡಿತ ಇದೆ. ಆದರೆ ಸ್ವಾಭಾವಿಕವಾದ ಸಾಮಾಜಿಕ ನ್ಯಾಯಕ್ಕೆ ಇಲ್ಲಿ ಬೆಟ್ಟ ಕಡಿದು ಇಲಿ ಹಿಡಿಯುವ ಕೆಲಸ ನಡೆಯುತ್ತಿರುವುದನ್ನು ಕಂಡಾಗ, ಹಿಂದುಳಿದ ವರ್ಗಗಳ ಹಿಂದುಳಿದಿರುವಿಕೆಗೆ ವ್ಯಥೆಯಾಗುತ್ತದೆ.

ನಿಜ ಹೇಳಬೇಕಾದರೆ ಅತ್ಯಂತ ಅನಾಯಕತ್ವದ ಅರಾಜಕತೆ ಹಾಗೂ ಅಭದ್ರತೆಯ ವರ್ಗವೆಂದರೆ ಹಿಂದುಳಿದ ವರ್ಗವೆಂದು ಧಾರಾಳವಾಗಿ ಹೇಳಬಹುದು. ಅಸ್ಪೃಶ್ಯರ ಸಂಘಟನೆಗಿರುವ ಸೌಲಭ್ಯವೊಂದು ಹಿಂದುಳಿದ ವರ್ಗಗಳಿಗಿಲ್ಲ. ಅಸ್ಪೃಶ್ಯರಲ್ಲಿ ಅಸ್ಪೃಶ್ಯತೆಯೇ ಸಂಘಟನೆಯ ಕೇಂದ್ರ ಶಕ್ತಿ ಯಾಗಬಲ್ಲದು. ಪ್ರಾಥಮಿಕ ಹಂತದಲ್ಲಾದರೂ ಒಳಪಂಗಡಗಳ ಪ್ರತ್ಯೇಕತಾ ಭಾವನೆಗಳನ್ನು ಮರೆಸಬಲ್ಲದು. ಆದರೆ ‘ಹಿಂದುಳಿದ ವರ್ಗ’ ವೆನ್ನುವುದು ನೂರೆಂಟು ಜಾತಿಗಳ ನಂಟಿನಿಂದ ಮೂಡುವ ಪರಿಕಲ್ಪನೆ, ಇಲ್ಲಿ ಎಲ್ಲಾ ಜಾತಿ ಗಳನ್ನು ಒಂದುಗೂಡಿಸಿದ ಕೇಂದ್ರನೆಲೆ ‘ಹಿಂದುಳಿದಿರುವಿಕೆ’ಯಾದರೂ ಹಿಂದುಳಿದಿರುವಿಕೆಯಲ್ಲಿ ಸಮಾನತೆಯಿಲ್ಲ. ಈ ಕಾರಣದಿಂದ ಸಮಾನತೆಗಾಗಿ ಹೂಡುವ ಒತ್ತಾಯದಲ್ಲೂ ಸಮಾನತೆ ಮೂಡಿಸುವುದು ಕಷ್ಟವಾಗುತ್ತದೆ; ಹಿಂದುಳಿದ ವರ್ಗದಲ್ಲೇ ಶ್ರೇಣಿಗಳನ್ನು ಹುಡುಕಲು ಸಾಧ್ಯವಿರುವುದರಿಂದ ಒಳ ವೈರುಧ್ಯಗಳು ನಿಜ ಹೋರಾಟದ ತೀವ್ರತೆಯನ್ನು ತಣ್ಣಗಾಗಿಸುವ ಅಪಾಯವಿದೆ. ಸವಲತ್ತುಗಳಲ್ಲಿ ಸಮಾನತೆ ಕಾಣುವ ಕಣ್ಣು ಪಟ್ಟಿಯ ನೋಟಕ್ಕೆ ಒಗ್ಗಿದ ಹಿಂದುಳಿದ ವರ್ಗವನ್ನು ರೂಪಿಸುತ್ತಿರುವ ನಮ್ಮ ಸಂದರ್ಭದ ವೈರುಧ್ಯವನ್ನು ಇಲ್ಲಿ ಗಮನಿಸಬೇಕು. ದಲಿತರ (ಅಸ್ಪೃಶ್ಯರ) ಹೋರಾಟಕ್ಕೂ ಹಿಂದುಳಿದ ವರ್ಗಗಳ ಹೋರಾಟಕ್ಕೂ ಇಲ್ಲಿ ವ್ಯತ್ಯಾಸ ಕಾಣಬಹುದು. ದಲಿತರಿಗೆ ಸಂವಿಧಾನಾತ್ಮಕ ರಕ್ಷಣೆ ಜೊತೆಗೆ ಅಸ್ಪೃಶ್ಯತೆಯ ವಿರುದ್ಧದ ಹೋರಾಟಕ್ಕೆ ಅಣಿಗೊಳಿಸುವಾಗ, ಸವಲತ್ತಿನ ಒತ್ತಾಯವೊಂದೇ ಪ್ರಧಾನವಾಗುವುದಿಲ್ಲ. ಸವಲತ್ತುಗಳಿಗಾಗಿ ಒತ್ತಾಯಿಸುತ್ತ ಬಂದರೂ ಅಸ್ಪೃಶ್ಯತೆಯ ತೀವ್ರತೆಯಿಂದಾಗಿ, ಇದು ತಾನಾಗಿಯೇ ವ್ಯವಸ್ಥೆ ವಿರೋಧದ ಪ್ರಶ್ನೆಯಾಗಿಬಿಡುತ್ತದೆ. ಶತಮಾನದ ಇತಿಹಾಸವನ್ನು ಪ್ರಶ್ನಿಸುತ್ತಲೇ ಪ್ರಾರಂಭವಾಗುವ ದಲಿತರ ಪ್ರತಿಭಟನೆಯಲ್ಲಿ ಸಹಜವಾಗಿ ಮೂಡುವ ಸಾಮಾಜಿಕ ತೀವ್ರತೆ, ವಿವಿಧ ಜಾತಿ ಸಮೂಹದ ಹಿಂದುಳಿದ ವರ್ಗಗಳಲ್ಲಿ ಮೂಡುವುದಿಲ್ಲ. ಈ ವರ್ಗದಲ್ಲಿ ದೊಡ್ಡ ಮೀನುಗಳು ಸಣ್ಣ ಮೀನುಗಳು ಒಟ್ಟಿಗೆ ಇರುವುದರಿಂದ ಪರಸ್ಪರ ಅಪನಂಬಿಕೆ ವಾತಾವರಣ ಮೂಡುವ ಅಪಾಯವಿದ್ದೇ ಇದೆ. ಅಧಿಕಾರ ಹಾಗೂ ಸವಲತ್ತುಗಳನ್ನು ನ್ಯಾಯವಾಗಿ ಕೇಳಬೇಕಾದಾಗಲೂ ಯಾರಿಗೆ ಎಷ್ಟು ಎಂಬ ಪ್ರಶ್ನೆ ಸಹಜವಾಗಿಯೇ ವ್ಯಾವಹಾರಿಕವಾಗುತ್ತದೆ. ದಲಿತರಲ್ಲಿ ಒಳಪಂಗಡಗಳ ಪ್ರಶ್ನೆ ಇದೆಯಾದರೂ ಅದು ಎಡಗೈ ಮತ್ತು ಬಲಗೈಗೆ ಮಾತ್ರ ಮೀಸಲಾಗಿದ್ದು ಬೂದಿಮುಚ್ಚಿದ ಕೆಂಡದಂತೆ ಒಳಗೆ ಬಿಸಿಯಾಗುತ್ತ, ಬೂದಿಯಾಗುತ್ತ, ಮತ್ತೆ ಹದಗೊಳ್ಳುತ್ತ ಹೋರಾಟವನ್ನು ಉಳಿಸಿಕೊಳ್ಳುತ್ತ ಬರುತ್ತಿದೆ.

ಇಂದು ದಲಿತರಂತೆ ಸಂಘಟಿತರಾಗಿ ಸಮಗ್ರ, ಸಮರ್ಥ ಹೋರಾಟವೊಂದನ್ನು ಕಟ್ಟುವುದು ಹಿಂದುಳಿದ ವರ್ಗಕ್ಕೆ ಇನ್ನೂ ಸಾಧ್ಯವಾಗದಿರುವವುದರಿಂದಲೇ ಮಂಡಲ್ ವರದಿಯ ಅನುಷ್ಠಾನ ಅಂಗವಾಗಿ ಒಬ್ಬರಿಗೆ ಕೆಲಸ ಸಿಕ್ಕಿದರೂ ಹಿಂದುಳಿದ ವರ್ಗಕ್ಕೆ ಸಂಭ್ರಮವಾಗಿಬಿಡುತ್ತದೆ! ಮಂಡಲ್ ಪ್ರಸಿದ್ಧ ಮಾಜಿ ಪ್ರಧಾನಿ ವಿ. ಪಿ. ಸಿಂಗ್ ಅವರು ಲಂಡನ್ನಿನಲ್ಲೇ ಸಂಭ್ರಮಿಸಿ ಸ್ವದೇಶಕ್ಕೆ ಬಂದ ಕೂಡಲೇ ಪ್ರಥಮ ನೇಮಕಾತಿಯ ಅಭ್ಯರ್ಥಿಗೆ ಅಭಿನಂದನೆ ಸಲ್ಲಿಸುವುದಾಗಿ ಸಂದೇಶ ಕಳಿಸಿರುವಾಗ ಸಾಮಾನ್ಯ ಹಿಂದುಳಿದ ವರ್ಗದವರಿಗೆ ಸಂಭ್ರಮವಾಗುವುದು ಸ್ವಾಭಾವಿಕವೇ ಆಗಿದೆ. ಆದರೆ ಹಿಂದುಳಿದ ವರ್ಗದವರ ಒಳಮನಸ್ಸು ಸಂಕಟವನ್ನುಳಿಸಿಕೊಂಡು ಸಂತೋಷಪಡುವುದಾದರೆ ಹೋರಾಟದ ಹುರುಪು ಉಳಿದೀತೆಂದು ನನ್ನ ಭಾವನೆ. ಯಾಕೆಂದರೆ ನಮ್ಮದು ಭ್ರಮೆ ಮತ್ತು ವಾಸ್ತವಗಳ ನಡುವಿನ ಸಂಘರ್ಷವಾಗಬೇಕು. ಭ್ರಮೆ ಬಿತ್ತುವ ಭಾವ ಚಿತ್ರಗಳು ನಮ್ಮ ದೃಷ್ಟಿಯನ್ನು ಮಂದಗೊಳಿಸಿ, ದರ್ಶನವನ್ನು ಪ್ರದರ್ಶನ ಮಾತ್ರವಾಗಿಸುವ ಅಪಾಯವನ್ನು ಅರಿತಾಗ ಸಂತೋಷದ ಗೆರೆಗಳನ್ನು ಗುರುತಿಸಿಕೊಳ್ಳಲು ಸಾಧ್ಯ.

ಹಿಂದೆ ಒಂದು ಮಾತು ಹೇಳಿದೆ : ಹಿಂದುಳಿದ ವರ್ಗವೆಂದರೆ ಅನಾಯಕತ್ವ, ಅರಾಜಕತೆಗೆ ಹಾಗೂ ಅಭದ್ರತೆಯ ವರ್ಗ – ಎಂದು. ಈಗ ಇನ್ನೊಂದು ವಿಶ್ಲೇಷಣವನ್ನು ಸೇರಿಸಬಹುದು: ಹಿಂದುಳಿದ ವರ್‍ಗ ‘ಅನಾಥ’ ವರ್‍ಗವೂ ಹೌದು. ನನ್ನ ಮಾತುಗಳನ್ನು ಈಗ ವಿವರಿಸುತ್ತೇನೆ.

ನಮ್ಮ ದೇಶದಲ್ಲಿ ಹಿಂದುಳಿದ ವರ್ಗಕ್ಕೆ ಸಮರ್ಥ ನಾಯಕತ್ವ ದೊರಕಿಯೇ ಇಲ್ಲ. ಇದರರ್ಥ – ಹಿಂದುಳಿದ ವರ್ಗದ ನಾಯಕರು ಹುಟ್ಟಿಯೇ ಇಲ್ಲ, ಹೋರಾಟ ನಡೆಸಿಯೇ ಇಲ್ಲ ಎಂದಲ್ಲ. ಹಿಂದುಳಿದ ವರ್ಗದ ವಿವಿಧ ನೆಲೆಗಳಿಂದ ಪ್ರತಿಭಾನ್ವಿತ ನಾಯಕರು ಮುಂಚೂಣಿಗೆ ಬಂದಿದ್ದಾರೆ. ಆದರೆ ಎಲ್ಲ ಒಳ ನೆಲೆಗಳನ್ನು ಒಂದಾಗಿಸುವ ವಾತಾವರಣವೊಂದು ಮೂಡಿತೆ? ಮೂಡುವ ಭಾವನೆಯನ್ನು ಮೂಡಿಸಿದರೂ ಇದು ಅಧಿಕಾರ ಹಂಚಿಕೆ ಹಂತದಲ್ಲಿ ನಿಂತಿದೆಯಲ್ಲವೆ? ದಲಿತರು ಸಾಮಾಜಿಕ ವ್ಯವಸ್ಥೆಯನ್ನು ಪ್ರಶ್ನಿಸುತ್ತಾ ಸವಲತ್ತುಗಳನ್ನು ಕೇಳುವ ಹಕ್ಕನ್ನು ಸ್ಥಾಪಿಸಿದ ರೀತಿಯಲ್ಲಿ ಹಿಂದುಳಿದ ವರ್ಗದವರು ಮಾಡಲು ಸಾಧ್ಯವಾಗದಿರುವುದಕ್ಕೆ ಇವರು ದಲಿತರಿಗಿಂತ ಮುಂದುವರೆದವರೆಂಬುದು ಒಂದು ಕಾರಣವಾದರೆ, ನೂರೆಂಟು ಜಾತಿಗಳ ಒಕ್ಕೂಟವೇ ಹಿಂದುಳಿದ ವರ್ಗವೆಂಬುದು ಇನ್ನೊಂದು ಕಾರಣ. ಇಂಥ ಒಕ್ಕೂಟವನ್ನು ಗಟ್ಟಿಗೊಳಿಸುವ ಪ್ರಬುದ್ಧಗೊಳಿಸುವ ನಾಯಕತ್ವ ಮೂಡಿ ಬಾರದೆ ಇರುವ ಸತ್ಯ ಮತ್ತೊಂದು ಕಾರಣ. ಹೀಗಾಗಿ ಹಿಂದುಳಿದ ವರ್ಗದ ಒಡಲಲ್ಲೇ ಇರುವ ಅರಾಜಕತ್ವ ಅಳೆಯುವ ಬದಲು ಅರಳತೊಡಗುತ್ತದೆ; ಅದರಲ್ಲೂ ಅರಿವಾಗದಂತೆ ಅರಳುವ ಈ ಅರಾಜಕತ್ವ ಅಭದ್ರನೆಲೆಯನ್ನೂ ನಿರ್ಮಿಸಿಬಿಡುತ್ತದೆ. ಕಡೆಗೆ ಇಡೀ ಹಿಂದುಳಿದ ವರ್ಗ ಅಪನಂಬಿಕೆಯಲ್ಲಿ ನರಳುತ್ತ ಅನಾಥ ವರ್ಗವಾಗುತ್ತದೆ. ಮುಳುಗುವವನಿಗೆ ಹುಲ್ಲುಕಡ್ಡಿ ಸಿಕ್ಕಿದರೂ ಸಂತೋಷ ಪಡುವಂತೆ, ಸೀತಾರಾಮ ಕೇಸರಿಯವರ ಕೈಯಲ್ಲಿರುವ ಪ್ರಥಮ ಅಭ್ಯರ್ಥಿಯ ನೇಮಕಾತಿ ಆದೇಶವನ್ನು ಕಂಡು ಸಂಭ್ರಮಗೊಳ್ಳುತ್ತದೆ. ಈ ಸಂಭ್ರಮಕ್ಕೆ ಎ. ಪಿ. ಸಿಂಗ್ ಅವರ ರೋಮಾಂಚನವೂ ಸೇರಿ ಅಭ್ಯರ್ಥಿಗೆ ನೇಮಕಾತಿ ಆದೇಶ ನೀಡುವ ಚಿತ್ರ ಪ್ರಕಟಗೊಂಡಿದ್ದು ಪ್ರಚಾರ ಪಡೆದದ್ದು ಪಾರ್ಲಿಮೆಂಟ್ ಪ್ರಾರಂಭವಾಗುವ ದಿನವೆಂಬುದನ್ನು ಮರೆಸಿಬಿಡುತ್ತದೆ.

ಇದು ಕಾಕತಾಳೀಯವೆಂದು ನನಗನ್ನಿಸದು. ಯಾಕೆಂದರೆ ಸರ್ಕಾರಿ ಆಜ್ಞೆಯೊಂದನ್ನು ಪತ್ರಿಕಾಗೋಷ್ಠಿಯಲ್ಲಿ ಅದೂ ರಜಾ ದಿನವಾದ ಭಾನುವಾರದಂದು ಕೊಡುವ ತುರ್ತು ಏನಿತ್ತು? ಪಾರ್ಲಿಮೆಂಟ್ ಪ್ರಾರಂಭವಾಗುವ ದಿನವೇ ಹಿಂದುಳಿದ ವರ್ಗವು ಪ್ರಚಾರದ ‘ಬಲಿಪಶು’ವಾದದ್ದು ಇತಿಹಾಸದ ವಾಸ್ತವವೇ ಇರಬಹುದು.

ಇಲ್ಲಿ ಇನ್ನೊಂದು ಅಂಶವನ್ನೂ ಹೇಳಬೇಕು: ದಲಿತರಿಗೆ ಮೀಸಲಾತಿ ಹಕ್ಕು ಸಂವಿಧಾನಾತ್ಮಕವಾಗಿದ್ದುದರಿಂದ, ಅವರು ಸೂಕ್ತ ಅನುಷ್ಠಾನಕ್ಕೆ ಮಾತ್ರ ಒತ್ತಾಯಿಸಬೇಕಿದೆ. ಹಿಂದಿನ ಹೋರಾಟ ಮತ್ತು ವಿಧಾನಗಳು ಮುಂದಿನ ಹೋರಾಟಕ್ಕೆ ಅಣಿಯಾಗುವ ಹಂತಕ್ಕೆ ಅವರನ್ನು ಕರೆತಂದಿದ್ದವು. ಆದ್ದರಿಂದ ದಲಿತ ಹೋರಾಟಗಳು ಸಾಮಾಜಿಕ ಬದಲಾವಣೆಯ ವ್ಯಾಪಕ ಹೋರಾಟದ ಆಶಯವನ್ನು ಅಭಿವ್ಯಕ್ತಿಸತೊಡಗಿದವು. ಆದರೆ ಹಿಂದುಳಿದ ವರ್ಗಕ್ಕೆ ಮೀಸಲಾತಿಯ ಬಗ್ಗೆ ಸಂವಿಧಾನಾತ್ಮಕ ರಕ್ಷಣೆ ಇರಲಿಲ್ಲ. ದೇವರಾಜ ಅರಸು ಕಾಲದ ಕರ್ನಾಟಕದಂಥ ಕೆಲವು ರಾಜ್ಯಗಳನ್ನು ಹೊರತು ಪಡಿಸಿದರೆ, ಹಿಂದುಳಿದ ವರ್ಗದ ಮೀಸಲಾತಿ ಪ್ರಯತ್ನ ಪ್ರಾರಂಭವಾಗಿಯೇ ಇರಲಿಲ್ಲ. ಹೀಗಾಗಿ ಹಿಂದುಳಿದ ವರ್ಗಕ್ಕೆ ಮೊದಲು ಮೀಸಲಾತಿ ಸೌಲಭ್ಯದ ಕಡೆಗೆ ಗಮನ. ಅದು ಪೂರ್ಣಗೊಳ್ಳದ ಅಭದ್ರ ಸ್ಥಿತಿಯಲ್ಲಿ ಸಮಗ್ರ ಸಾಮಾಜಿಕ ಬದಲಾವಣೆಯ ಆಶಯಕ್ಕೆ ಅಣಿಯಾಗುವ ಸನ್ನಿವೇಶ ಈ ವರ್ಗದಲ್ಲಿ ಸೃಷ್ಟಿಯಾಗುತ್ತಿರಲಿಲ್ಲ. ಸಮಗ್ರ ಸಾಮಾಜಿಕ ಬದಲಾವಣೆಯು ಒಂದು ಸಾಧನ ಮಾತ್ರವಾಗಿ ಮೀಸಲಾತಿಯ ಮಿತಿಯನ್ನು ತಿಳಿಯಪಡಿಸುವ ಪ್ರಬುದ್ಧ ನಾಯಕತ್ವವೂ ರೂಪುಗೊಂಡಿಲ್ಲ, ಬಿಡಿ ಉದಾಹರಣೆಗಳನ್ನು ಬಿಟ್ಟರೆ ಸಮಗ್ರ ಹೋರಾಟವೂ ಹುಟ್ಟಿಲ್ಲ. ಇಂಥ ಸಂದರ್ಭದಲ್ಲಿಟ್ಟು ಹಿಂದುಳಿದ ವರ್ಗವನ್ನು ನಾವು ಅರ್ಥಮಾಡಿಕೊಳ್ಳಬೇಕು. ಹಿಂದುಳಿದ ವರ್ಗವೂ ತನ್ನನ್ನು ತಾನು ಈ ಹಿನ್ನಲೆಯಲ್ಲಿ ಅರ್ಥಮಾಡಿಕೊಳ್ಳಬೇಕು. ಆಗ ತನ್ನ ‘ಹೋರಾಟ’ದ ಮಿತಿಗಳು ಮನವರಿಕೆಯಾಗುತ್ತವೆ. ಹಾಗೆ ನೋಡಿದರೆ ಹಿಂದುಳಿದ ವರ್ಗದ ಹೋರಾಟಕ್ಕೆ ವರದಿಗಳ ಅನುಷ್ಠಾನಕ್ಕಾಗಿ ಮಾತ್ರ ಒತ್ತಾಯಿಸುವ ಮಿತಿ ಒದಗಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ, ಈಗ ಲಭ್ಯವಾಗುತ್ತಿರುವ ಸವಲತ್ತುಗಳು ಹೋರಾಟದ ಫಲವೆನ್ನುವುದಕ್ಕಿಂತ ಅಧಿಕಾರದ ನೆಲೆಯಿಂದ ಒದಗಿಸುವ ಅವಕಾಶಗಳು. ಕರ್ನಾಟಕದಲ್ಲಿ ದೇವರಾಜ ಅರಸರು ಹಿಂದುಳಿದ ವರ್ಗದ ತೀವ್ರ ಹೋರಾಟವಿಲ್ಲದೆಯೂ ಹಾವನೂರು ವರದಿಯನ್ನು ಅನುಷ್ಠಾನಕ್ಕೆ ತಂದು ಅವಕಾಶಗಳನ್ನು ಒದಗಿಸಿದರು. ವಿ. ಪಿ. ಸಿಂಗ್ ಅವರು ಶಕ್ತಿರಾಜಕೀಯದ ಫಲವಾಗಿ, ದೇವಿಲಾಲ್ ವಿರುದ್ಧದ ಶಕ್ತಿ ಸಂಚಯದ ಉಪಾಯವಾಗಿ ಮಂಡಲ್ ವರದಿಯ ಅನುಷ್ಠಾನವನ್ನು ಮೊದಲು ಘೋಷಿಸಿ, ಆಮೇಲೆ ಅದಕ್ಕೆ ಬದ್ದವಾಗುತ್ತ ಬಂದರು.

ಒಟ್ಟಿನಲ್ಲಿ ಹಿಂದುಳಿದ ವರ್ಗದವರಿಗೆ ಸಂಬಂಧಿಸಿದ ವರದಿಗಳು ಈ ವರ್ಗಕ್ಕೆ ವರವಾಗಿ ಕಾಣಿಸುತ್ತಿವೆ; ಕಾಡುತ್ತಿದೆ. ಆದರೆ ಒಂದು ಮಾತು ನೆನಪಿರಬೇಕು : ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ವರದಿಗಳು ‘ಹೋರಾಟ’ದ ಹಾದಿಯಲ್ಲಿ ಹುಟ್ಟಿದ ಸಾಂತ್ವನ ಸತ್ಯಗಳು. ಹಿಂದುಳಿದ ವರ್ಗವು ಈ ಸಾಂತ್ವನ ಸತ್ಯಗಳನ್ನೇ ಅಂತಿಮ ಸತ್ಯಗಳೆಂದು ಭ್ರಮಿಸಿ ವರದಿಗಳ ಅನುಷ್ಠಾನಕ್ಕೆ ಜೀವವನ್ನು ಒತ್ತೆಯಿಡುವ ಸ್ಥಿತಿಗೆ ಮುಟ್ಟುತ್ತಿರುವುದು ಆತಂಕಕಾರಿಯಾಗಿದೆ. ವರದಿಗಳಾಚೆಗೆ ಒಂದು ಹೋರಾಟವಿದೆಯೆಂಬ ಸತ್ಯ, ವರದಿಗಳ ವಿವಾದದಲ್ಲಿ, ಆಸೆ-ನಿರಾಸೆ ಗಳಲ್ಲಿ, ಹೂತು ಹೋಗುತ್ತಿದೆ.

ಹೀಗೆ, ವರದಿಗಳಲ್ಲಿ ಉಸಿರಾಡುತ್ತಿರುವ ಹಿಂದುಳಿದ ವರ್ಗ ಅಲ್ಲೇ ಆಂತ್ಯವಾಗಬಾರದು. ಇದು ನನ್ನಂಥವರ ಅಭೀಪ್ಸೆ.

೬-೩-೧೯೮೪
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೂಚಕ
Next post ಶಶಿಯೆ ನೀ ಹಾಡು ಹಾಡು

ಸಣ್ಣ ಕತೆ

 • ಹೃದಯ ವೀಣೆ ಮಿಡಿಯೆ….

  ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

 • ಬಾಳ ಚಕ್ರ ನಿಲ್ಲಲಿಲ್ಲ

  ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

 • ಕತೆಗಾಗಿ ಜತೆ

  ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

 • ತ್ರಿಪಾದ

  ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

 • ಆಮಿಷ

  ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

cheap jordans|wholesale air max|wholesale jordans|wholesale jewelry|wholesale jerseys