ತ್ರಿವಳಿ ತಲಾಖ್ ನಿಷೇಧ-ಧರ್‍ಮದ ಕಂದಾಚಾರಕ್ಕೆ ಬಿದ್ದ ಮೂಗುದಾರ

ತ್ರಿವಳಿ ತಲಾಖ್ ನಿಷೇಧ-ಧರ್‍ಮದ ಕಂದಾಚಾರಕ್ಕೆ ಬಿದ್ದ ಮೂಗುದಾರ

ನಿಯಮ ನಿಯಮಗಳ ನಡುವೆ ಶ್ರೇಷ್ಠ ಮಹಿಳಾ ಸಾಹಿತಿ ಸಾರಾ ಅಬೂಬಕ್ಕರರ ಒಂದು ಸಣ್ಣಕಥೆ. ಮುಸ್ಲಿಂ ಸಾಮಾಜಿಕ ವ್ಯವಸ್ಥೆಯಲ್ಲಿ ಅಮಾಯಕ ಹೆಣ್ಣು ಪುರುಷ ದೌರ್‍ಜನ್ಯಕ್ಕೆ ತುಳಿತಕ್ಕೆ ಒಳಗಾಗುವ, ಸಂಪ್ರದಾಯತೆಯ ಕಪಿಮುಷ್ಟಿಯಲ್ಲಿ ನಲುಗಿ ಹೋಗುವ, ಗಂಡಸಿನ ದೌರ್‍ಜನ್ಯ, ದರ್‍ಪ ಅಹಮ್ಮಿಗೆ ಆಕೆಯ ಸೂಕ್ಷ್ಮ ಅಂತರಂಗದ ತಲ್ಲಣಗಳು, ತವಕಗಳು, ಕೊನೆಗೊಮ್ಮೆ ಆಕೆಯೇ ಅದಕ್ಕೆ ಬಲಿಯಾಗುವ ಕರಳು ಹಿಂಡುವ ಕಥೆ ಮನ ಕಲಕುತ್ತದೆ. ಪರೋಕ್ಷವಾಗಿ ಸ್ತ್ರೀವಾದಿ ದೃಷ್ಟಿಕೋನದ ಬಂಡಾಯದ ಕಹಳೆಯೆಂದೆನ್ನಿಸಿದರೂ ಆ ಸಮುದಾಯದ ಸ್ತ್ರೀ ಸಮೂಹವನ್ನು ತನ್ನ ಕಬಂಧ ಬಾಹುಗಳಲ್ಲಿ ಉಸಿರುಗಟ್ಟಿಸುತ್ತಿದ್ದ ತಲಾಖ್ ಎಂಬ ಅಮಾನವೀಯ ಪಾರಂಪಾರಿಕ ಆಚರಣೆಯ ವಿರುದ್ದದ ಒಂದು ಗಟ್ಟಿದ್ವನಿಯಾಗಿದೆ. ವರ್‍ತಮಾನದ ಸಮಸ್ಯೆಯೂ ಆಗಿರುವ ಈ ಪದ್ಧತಿಯ ಒಳಹೊರಗನ್ನು, ಹೆಣ್ಣು ಗಂಡಿನ ಕೈಗೊಂಬೆಯಂತೆ, ಸ್ವಂತಿಕೆ ಇಲ್ಲದವಳಂತೆ ಮಾಡಿ ಆಕೆಯ ಇಡೀ ಬದುಕು ಬಲಿಯಾಗುವ ದುರಂತವನ್ನು ಮನೋಜ್ಞವಾಗಿ ಸಾರಾ ಚಿತ್ರಿಸುತ್ತಾರೆ.

ವೈವಾಹಿಕ ಜೀವನದಲ್ಲಿ ಸಂತೃಪ್ತಿಯಿಂದ ಬದುಕುತ್ತಿದ್ದ ಎರಡು ಮಕ್ಕಳ ತಾಯಿ ಜೋಹರಾ ಮತ್ತೆ ಗರ್‍ಭವತಿ. ಮನೆಯ ಪರಿಸ್ಥಿತಿಯೇನೂ ಅಷ್ಟು ಚೆನ್ನಾಗಿಲ್ಲ. ಪತಿ ಕಾದರ ಹೆಂಡತಿ ಮಕ್ಕಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಆದರೆ ಆ ಒಂದೇ ಸಂದರ್‍ಭ ಅವರ ಬದುಕನ್ನು ಜೀವನವನ್ನು ನಾಶಮಾಡಿಬಿಡುತ್ತದೆ. ಆರು ತಿಂಗಳ ಗರ್‍ಭಿಣಿ ಜೊಹರಾ ಅತ್ತೆಯ ಕೊಂಕುನುಡಿ, ಮನೆಗೆಲಸ, ಎರಡು ಮಕ್ಕಳ ನೋಡಿಕೊಳ್ಳುವ ಜವಾಬ್ದಾರಿಯ ಜೊತೆ ಕುಟುಂಬದ ಹೊಣೆಯನ್ನು ಸರಿಯಾಗೇ ನಿಭಾಯಿಸುತ್ತಿದ್ದಾಳೆ. ಆದರೆ ಅದೊಂದು ದಿನ ಕಾದರ್ ಮನೆಗೆ ಬಂದವನು ಜೊಹರಾಗೆ ಆಕೆಯ ತಾಯಿ ಮದುವೆಯಲ್ಲಿ ನೀಡಿದ ಬಂಗಾರದ ಆಭರಣಗಳನ್ನು ಕೊಡುವಂತೆ ಕೇಳುತ್ತಾನೆ. ತಾಯಿ ನೀಡಿದ ಅದನ್ನು ತಾನು ಕೊಡುವುದಿಲ್ಲ ಎಂದ ಜೊಹರಾಳ ವಾದ ಆತನ ಅಸಹನೆಗೆ ಕೋಪಕ್ಕೆ ಆಕೆಯ ಮೇಲಿನ ತಿರಸ್ಕಾರಕ್ಕೆ ಕಾರಣವಾಗುವುದೇ ಮೊದಲ ವಿಪರ್‍ಯಾಸ. ತನ್ನ ವೃತ್ತಿಯಲ್ಲಿನ ಬೇಜವಾಬ್ದಾರಿತನಕ್ಕೆ ತಾನು ಹೊಣೆಗಾರನೆಂಬುದ ಮರೆತು ಸಂಸಾರ ನಿರ್‍ವಹಣೆಯ ದುಡಿಮೆಗೂ ಕೂಡ ಪತ್ನಿಯ ತವರಿನ ಕೊಡುಗೆಯನ್ನು ಆಪೇಕ್ಷಿಸುವುದು. ಕೊಡಲೊಲ್ಲದ ಆಕೆಗೆ ಆತ ತಲಾಖ್ ನೀಡುವುದು ಗಂಡಸಿನ ಧಾರ್‍ಷ್ಟ್ಯಕ್ಕೆ ಸಂಕೇತವಾಗಿ ನಿಲ್ಲುತ್ತದೆ. ತಾಯಿಯ ಮನೆಯಲ್ಲಿಯೂ ಗಂಡನಿಂದ ಪರಿತ್ಯಕ್ತೆಯಾದ ಆಕೆ ಅನುಭವಿಸುವ ಸಂಕಟಗಳು ಸ್ತ್ರೀ ಬದುಕಿನ ಅತಂತ್ರತೆಯನ್ನು ತೆರೆದು ತೋರುತ್ತವೆ.

ಮುಂದೆ ಆಕೆಗೆ ಹೆರಿಗೆಯಾಗಿ ಮತ್ತೆ ಗಂಡು ಮಗು ಜನಿಸುತ್ತಲೇ ಗಂಡನ ಮನಸ್ಥಿತಿ ಬದಲಾಗಿ ಆತ ಆಕೆಯನ್ನು ಪುನಃ ಮನೆಗೆ ಕರೆತರಲು ಬಯಸುತ್ತಾನೆ. ಆದರೆ ಒಮ್ಮೆ ತಲಾಖ್ ನೀಡಿದ ನಂತರ ಪುನಃ ಗಂಡನ ಮನೆಗೆ ಮರಳಬೇಕೆಂದರೆ ಮರುವಿವಾಹವಾಗಬೇಕೆಂಬುದು ಧರ್‍ಮದ ನಿಯಮ. ಗಂಡನ ಬಗ್ಗೆ ತಾತ್ಸಾರವೆನಿಸಿದರೂ ಮಕ್ಕಳ ನೆನೆದು ಆಕೆ ಒಪ್ಪುತ್ತಾಳೆ. ಆದರೆ ಗಂಡಿನ ಮನಸ್ಸು ಬಯಸಿದಾಗ ಆತನ ಕಾಮನೆ ಕೆರಳಿದಾಗ ಆತನಿಗೆ ಬೇಕೆನ್ನಿಸಿದಾಗ ತಕ್ಕಂತೆ ಬದಲಾಗುವ ಯಂತ್ರದಂತೆ ನಿರ್‍ಜೀವದ ವಸ್ತುವಂತೆ ಹೆಣ್ಣು ಎಂಬ ಸಿದ್ಧಾಂತವನ್ನು ಪುರುಷ ಸಮಾಜ ಸೃಷ್ಟಿಸಿಕೊಂಡ ಒಟ್ಟಾರೆ ನಿಯಮಗಳು ಕಾನೂನುಗಳು ಅವಳನ್ನು ಬಲಿತೆಗೆದುಕೊಳ್ಳುತ್ತವೆ. ಹೆರಿಗೆಯಾಗಿ ಇನ್ನು ಋತುಸ್ನಾನೆಯಾಗಿರದ ಆಕೆಯೊಂದಿಗೆ ಮತ್ತೊಮ್ಮೆ ವಿವಾಹವಾಗಬೇಕೆಂದರೆ ಆಕೆ ಋತುಸ್ನಾನೆಯಾಗಬೇಕು. ಹಾಗಾಗಿ ಆತನ ತಪ್ಪಿಗೆ ಆಕೆ ಪ್ರಕೃತಿಯ ವಿರುದ್ಧ ಬಲವಂತದ ಋತುಸ್ನಾನಕ್ಕೆ ತೆಗೆದುಕೊಂಡ ನಾಟಿ ಔಷಧದಿಂದ ರಕ್ತಸ್ರಾವ ಹೆಚ್ಚಿ ಅದ ನಿಯಂತ್ರಿಸಲಾಗದೇ ಕೊನೆಗೊಂದು ದಿನ ಆಕೆ ಇಹಲೋಕ ತ್ಯಜಿಸುವುದು ಅತ್ಯಂತ ಶೋಚನೀಯ. ಇಡೀ ಮುಸ್ಲಿಂ ಸಮುದಾಯದಲ್ಲಿ ಸ್ತ್ರೀಯರ ವೈಯಕ್ತಿಕ ಬದುಕು ಪುರುಷನ ಅಣತಿಯಂತೆ ಆ ಸುಳಿಯಲ್ಲೇ ನರಳುವುದು ಕಮರುವುದು ತನಗಿಷ್ಟ ಬಂದಂತೆ ರಚಿಸಿಕೊಂಡ ಧರ್‍ಮದ ನಿಯಮಗಳಿಂದ ತಪ್ಪುಮಾಡದ ಮುಗ್ಧೆಯೊಬ್ಬಳು ಪ್ರಾಣ ಕಳೆದುಕೊಳ್ಳುವುದು ಸಮಾಜದ ತಾರತಮ್ಯಕ್ಕೆ ಹಿಡಿದ ಕನ್ನಡಿ.

ಈ ಕಥೆಯ ಉಲ್ಲೇಖದ ಹಿನ್ನೆಲೆ ಯಾಕೆಂದರೆ ಕಳೆದ ವಾರವಷ್ಟೇ ಮುಸ್ಲಿಂ ಮಹಿಳೆಯರು ಐತಿಹಾಸಿಕ ನ್ಯಾಯವನ್ನು ಪಡೆದವರಾಗಿದ್ದಾರೆ. ಹಲವಾರು ವರ್‍ಷಗಳ ತರುವಾಯ ಭಾರತೀಯ ಸ್ತ್ರೀ ಸಮುದಾಯ ವಿಜಯದ ಕೇಕೆ ಹಾಕುತ್ತಿದೆ. ಮುಸ್ಲಿಂ ಸಮುದಾಯದ ಮಹಿಳೆಯರೊಂದಿಗೆ ಎಲ್ಲ ಮಹಿಳೆಯರೂ ನೈತಿಕ ವಿಜಯದ ಆನಂದದ ಹುರುಪಿನಲ್ಲಿದ್ದಾರೆ. ಮುಸ್ಲಿಂ ಮಹಿಳೆಯರು ಅದರಲ್ಲೂ ಸುನ್ನಿ ಮುಸ್ಲಿಂ ಸಮುದಾಯದ ಹೆಣ್ಣುಗಳು ಕೆಲವೊಮ್ಮೆ ಕನಸಿನಲ್ಲೂ ಬೆಚ್ಚಿ ಬೀಳುತ್ತಿದ್ದ ತ್ರಿವಳಿ ತಲಾಖ್ ಎಂಬ ವಿವಾದಾತ್ಮಕ ಪದ್ಧತಿಯನ್ನು ರದ್ದುಪಡಿಸುವ ಐತಿಹಾಸಿಕ ತೀರ್‍ಪನ್ನು ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ನೀಡಿದೆ. ಇಸ್ಲಾಂ ಧರ್‍ಮದಲ್ಲಿ ತ್ರಿವಳಿ ತಲಾಖ್ ಆಚರಣೆಯಲ್ಲಿ ಇಲ್ಲ. ಇದು ಸಂವಿಧಾನ ಬಾಹಿರ ಮತ್ತು ಇದಕ್ಕೆ ಕಾನೂನಿನ ರಕ್ಷಣೆ ನೀಡಲು ಸಾಧ್ಯವಿಲ್ಲ. ಈ ಬಗ್ಗೆ ಹೊಸ ಕಾನೂನು ರೂಪಿಸಿ. ಎಲ್ಲ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಹಿತಾಸಕ್ತಿ ಬದಿಗಿರಿಸಿ ಸಹಕರಿಸಿ ಎಂದು ಸುಪ್ರಿಂಕೋರ್‍ಟ ಹೇಳಿದೆ. ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ಸಾಂವಿಧಾನಿಕ ಮಾನ್ಯತೆ ಇಲ್ಲ. ಹಾಗಾಗಿ ಇಂತಹ ತಲಾಖ್ ಅಸಂವಿಧಾನಿಕ. ಸ್ತ್ರೀ ಬರಿಯ ಸಣ್ಣಪುಟ್ಟ ಕಾರಣಗಳಿಂದ ಬದುಕಿನ ನೆಲೆಯನ್ನು ಮೂರೇ ಅಕ್ಷರಗಳಲ್ಲಿ ಕಳೆದುಕೊಂಡು ಪಡಬಾರದ ಪಾಡು ಪಟ್ಟ ಹೆಂಗಳೆಯರ ಕಷ್ಟಕ್ಕೆ ಕೊನೆಗೂ ಒಂದು ಜಯ ಸಿಕ್ಕಿದೆ.

ವಿವಾಹವೆಂದರೆ ಅದೊಂದು ಮಧುರ ಸಂಬಂಧ. ವಿವಾಹ ಎನ್ನುವುದು ಪಾಶ್ಚಾತ್ಯರಿಗೆ ಒಂದು ಸಾಮಾಜಿಕ ಒಪ್ಪಂದ. ಆದರೆ ಭಾರತೀಯರಿಗೆ ಅದು ಪವಿತ್ರ ಬಂಧನ. ಭಾರತೀಯ ಸಂಸ್ಕೃತಿಯಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತರಲ್ಲಿ ಭಿನ್ನ ಆಚರಣೆಗಳಿಂದ ಕೂಡಿದ್ದರೂ ಭಾರತೀಯ ನೆಲೆಯಲ್ಲಿ ತನ್ನದೇ ಭಾವನಾತ್ಮಕ ಹಾಗೂ ಸಾಮಾಜಿಕ ಕಟ್ಟಳೆಗಳಿಂದ ಬಿಗಿಯಲ್ಪಟ್ಟಿದೆ. ವಿವಾಹ ವಿಚ್ಛೇದನವನ್ನು ಭಾರತದಲ್ಲಿ ಉದಾಸೀನತೆಯಿಂದ ನೋಡಲಾಗುತ್ತದೆ. ಆದಾಗ್ಯೂ ವಿಚ್ಛೇದನಗಳು ಇಂದು ಹೆಚ್ಚು ಪ್ರಚಲಿತವಾಗುತ್ತಿವೆ. ಅದರಲ್ಲೂ ಅಕಾರಣವಾಗಿ ವಿಚ್ಛೇದನ ನೀಡುವ ಸುಲಭ ವಿಧಾನ ಭಾರತದಲ್ಲಿ ಮುಸ್ಲಿಂ ಸುನ್ನಿ ಸಮುದಾಯದ ತಲಾಖ್ ವಿಧಾನ. ಪುರುಷ ಮಾತ್ರದವರಿಗೆ ಇರುವ ಬಹುಪತ್ನಿತ್ವ ಮತ್ತು ತಲಾಖ್ ಎಂಬ ವಿಶಿಷ್ಟ ಸೌಲಭ್ಯಗಳು ಬಹುತೇಕ ಸ್ತ್ರೀ ಶೋಷಣೆಗೆ ಸಿದ್ಧಮಾದರಿಗಳಿಂತಿವೆ. ಸುಮಾರು ೧೪೦೦ ವರ್ಷಗಳಷ್ಟು ಹಿಂದಿನಿಂದಲೂ ಜಾರಿಯಲ್ಲಿದ್ದ ಈ ಪದ್ದತಿಯ ಪ್ರಕಾರ ಒಮ್ಮೆಲೆ ಮೂರು ಬಾರಿ ತಲಾಖ್ ಹೇಳಿ ಹೆಂಡತಿಗೆ ವಿಚ್ಛೇದನ ನೀಡುವ ಪರಿಪಾಠ ಸುನ್ನಿ ಸಮುದಾಯದಲ್ಲಿದ್ದು ಅನಾಗರಿಕ ಪರಂಪರೆಯಂತೆ ರೂಢಿಯಲ್ಲಿತ್ತು. ನಡೆಯುವಾಗ ಪತ್ನಿ ತನಗಿಂತಲೂ ಮುಂದೆ ನಡೆದಳೆಂದೋ, ಪತ್ನಿ ಕಾಲ್ಗೆಜ್ಜೆ ಹಾಕಿದಳೆಂದೋ, ತಿಂಡಿಕೊಡಲು ತಡಮಾಡಿದಳೆಂದೋ ಇತ್ಯಾದಿ ಕ್ಷುಲಕ ಕಾರಣ ನೆವಮಾಡಿ ಕೋಪದಿಂದ ಬುದ್ಧಿ ಸ್ಥಿಮಿತ ಕಳೆದುಕೊಂಡ ಪತಿರಾಯ ಯಾವುದೋ ಆವೇಶಕ್ಕೆ ಒಳಗಾಗಿ ಇಂತಹ ಘನಂದಾರಿ ನುಡಿಗಳ ಉದ್ಘರಿಸಿದ್ದೇ ಹೌದಾದರೆ ಅದು ಕೂಡಾ ವಿಚ್ಛೇದನವೇ ಆಗಿರುತ್ತಿತ್ತು. ಇಂತಹುದೇ ಘಟನೆಯನ್ನು ಆಧಾರವಾಗಿಟ್ಟುಕೊಂಡೇ ಬರೆದ ಸಾರಾ ಅಬೂಬಕ್ಕರ ಅವರ ಈ ಸಣ್ಣ ಕಥೆ ಇಲ್ಲಿ ಉಲ್ಲೇಖನೀಯ. ಈ ಐತಿಹಾಸಿಕ ತೀರ್‍ಪು ಜೋಹರಾಳಂತಹ ಸಾವಿರಾರು ಹೆಣ್ಣು ಮಕ್ಕಳಿಗೆ ವರದಾನ. ಮಹಿಳಾ ದಮನಕಾರಿ ಧೋರಣೆಗೆ ಇನ್ನಾದರೂ ಕೊಂಚ ತಡೆಯಾಗಬಹುದೆಂಬ ನಿರೀಕ್ಷೆಯಲ್ಲಿ..
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತ್ರುಪ್ತಿ
Next post ಪಕ್ಷಿ ಮಂಚವೆ ತಾಯ ಮಂಚವು

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

cheap jordans|wholesale air max|wholesale jordans|wholesale jewelry|wholesale jerseys