ಜೋತಿಷ್ಯ

ಜೋತಿಷ್ಯ

ತಮಿಳು ಮೂಲ: ಕೊನಷ್ಟೈ

“ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ”ಎಂದಳು ಕಮಲಾ.

ಸಮಯ, ಸಂಧ್ಯಾ ಕಾಲ. ಲೇಡೀಸ್ ಕ್ಲಬ್‌ನ (ಮಹಿಳಾ ಸಮಾಜ) ಉಪವನದ ಒಂದು ಮೂಲೆಯಲ್ಲಿ ಮೇಜಿನ ಸುತ್ತ ಮುವ್ವರು ಚಿಕ್ಕ ವಯಸ್ಸಿನ ಯುವತಿಯರು ಕುಳಿತು ಸಂಭಾಷಣೆಯಲ್ಲಿ ತೊಡಗಿದ್ದರು.

“ನೀನು ಹಾಗೆ ಹೇಳಲು ಕಾರಣ ನನಗೆ ಗೊತ್ತು” ಎಂದಳು ದೇವಕಿ.
“ಏನು ಕಾರಣ?”
“ನಿನ್ನ ಮದುವೆಗೆ ಮುಹೂರ್ತವನ್ನು ನೋಡಿ ಹೇಳಿದವರು ಅವರು ತಾನೇ”
“ಇಲ್ಲವೇ ಇಲ್ಲ. ಮುಹೂರ್ತ ನೋಡಿ ಮದುವೆ ಮಾಡಿದ್ದರೆ ತಾನೇ ಅವರು ನೋಡಿ ಹೇಳುವುದಕ್ಕೆ ?”
“ಹಾಗಾದರೆ ನಿನಗೆ ಒಳ್ಳೆಯ ಗಂಡ ಸಿಕ್ಕುತ್ತಾನೆ ಎಂದಾದರೂ ಜ್ಯೋತಿಷ್ಯ ಹೇಳಿರಬೇಕು ಅವರು.”
“ಅದೂ ಇಲ್ಲ. ಅದಕ್ಕೆ ಅವರು ವಿರೋಧವಾಗಿಯೇ ಹೇಳಿದರು” ಎಂದು ಕಮಲಾ ಮಾತನ್ನು ಲಂಬಿಸಿ ಎಳೆದು ಹೇಳಿದಳು.
“ಹಾಗೆ ಅವರು ಹೇಳಿದುದು ತಾನೇ ಅಂತಹುದೇನು? ನಿನ್ನ ಗಂಡನಿಗೆ ಒಳ್ಳೆಯ ಹೆಂಡತಿ ಸಿಕ್ಕುತ್ತಾಳೆ ಎಂದು ತಾನೇ. ಅದಕ್ಕಾಗಿ ಶಾಸ್ತ್ರಿಗಳಿಗೆ ಚಿನ್ನದ ತೋಡಾ ಕೊಡಬೇಕೆನ್ನತ್ತೀಯಾ?”ಎಂದು ಕೇಳಿದಳು ಸರಳಾ. ಎಲ್ಲರೂ ನಕ್ಕರು.
“ನನ್ನ ಸ್ವಂತ ವಿಷಯ ಇರಲಿ, ನನ್ನ ಮಾತಿನ ಪುಷ್ಟಿಗಾಗಿ ಬೇರೆ ದೃಷ್ಟಾಂತ ಹೇಳುತ್ತೇನೆ. ನನ್ನ ಪ್ರೇಮದ ಗೆಳತಿ ವಿಮಲಾ ತನಗೆ ಸಂಭವಿಸಿದುದನ್ನು ಸ್ವಲ್ಪವೂ ಮುಚ್ಚು ಮರೆಯಿಲ್ಲದೆ ನನ್ನೊಂದಿಗೆ ಹೇಳಿದ್ದಾಳೆ. ಅದನ್ನು ಹಾಗೆಯೇ ಒಂದು ಅಕ್ಷರವನ್ನೂ ಕೂಡ ಬದಲಾಯಿಸದೆ ಹೇಳುತ್ತೇನೆ. ಅದನ್ನು ಕೇಳಿದ ಮೇಲೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ” ಎಂದಳು ಕಮಲಾ.

ಮೂವರೂ ಮೂರು ಐಸ್‌ಕ್ರೀಂ ತರಿಸಿಕೊಂಡು ಸಾವಧಾನವಾಗಿ ಕತೆ ಹೇಳಲೂ ಕೇಳಲೂ ತೊಡಗಿದರು. ವಿಮಲಾ ತನ್ನೊಡನೆ ಹೇಳಿದುದನ್ನು ಕಮಲಾ ಹಾಗೆಯೇ ಹೇಳತೊಡಗಿದಳು.

ವಿಮಲಾ ಕಮಲೆಗೆ ಹೇಳಿದುದು

ನನ್ನನ್ನು ಮದುವೆಯಾಗಲು ಬಯಸಿ ಬರುವವರ ಜಾತಕಗಳನ್ನೆಲ್ಲಾ ನಮ್ಮ ತಂದೆ ರಾಮಲಿಂಗ ಜೋಯಿಸರಿಗೆ ಸರಿ ನೋಡಲು ಕೊಡುವುದು ಪದ್ಧತಿ. ಅವರು ಪ್ರತಿ ಜಾತಕದಲ್ಲಿಯೂ ಏನಾದರೊಂಮ ತಪ್ಪನ್ನು ಕಂಡು ಹಿಡಿದೇ ಹಿಡಿಯುತ್ತಿದ್ದರು. ನನಗೂ ಹದಿನೈದು ವರ್ಷ ತುಂಬಿ ಹೋಗಿತ್ತು. ಕೊನೆಯಲ್ಲಿ ನಮ್ಮ ತಂದೆ ಒಂದು ಜಾತಕವನ್ನು ಕೊಟ್ಟು “ಶಾಸ್ತ್ರಿಗಳೇ ಇದಾದರೂ ಕೂಡುತ್ತದೆಯೇ ನೋಡಿ, ಆರಣಿ (ಆಶಾಢ, ಶ್ರಾವಣ) ಮಾಸವಾದರೂ ಚಿಂತೆಯಿಲ್ಲ, ಈಗಲೇ ವಿವಾಹವನ್ನು ಮುಗಿಸಿಬಿತ್ತೇನೆ” ಎಂದರು.

ಶಾಸ್ತ್ರಿಗಳು ಕನ್ನಡಕವನ್ನು ಹಾಕಿಕೊಂಡು ನನ್ನ ಜಾತಕವನ್ನೂ ನಮ್ಮ ತಂದೆ ಕೊಟ್ಟ ಜಾತಕವನ್ನೂ -ಎರಡನ್ನೂ ಸ್ವಲ್ಪ ನೋಡಿದರು. ಅನಂತರ ಕನ್ನಡಕವನ್ನು ಹಣೆಯ ಮೇಲಕ್ಕೆ ತಳ್ಳಿ ಬಿಟ್ಟು ನನ್ನ ಜಾತಕವನ್ನೇ ಮತ್ತೊಂದು ಸಲ ನೋಡಿದರು. ಕೊನೆಯಲ್ಲಿ ದೊಡ್ಡದಾಗಿ ನಿಟ್ಟುಸಿರು ಬಿಟ್ಟು ಎರಡು ಜಾತಕಗಳನ್ನೂ ನೆಲದ ಮೇಲೆ ಹಾಕಿದರು. ನನ್ನ ತಂದೆಗೆ ಎದೆ ಡವ ಡವಕೆಂದು ಹೊಡೆದುಕೊಂಡಿತು.

“ಏನು ಶಾಸ್ತ್ರಿಗಳೇ ಹೆಣ್ಣಿಗೆ ಶನಿದೋಷ ಬಲವಾಗಿದೆಯೋ?”ಎಂದು ಕೇಳಿದರು ನಮ್ಮ ತಂದೆ.

“ಹಾಗಿದ್ದರೂ ಏನೂ ಬಾಧಕವಿಲ್ಲ” ಎಂದರು ಶಾಸ್ತ್ರಿಗಳು.

“ಏನು? ಶನಿ ದೋಷ ಬಾಧಕವಿಲ್ಲವೆ?”

“ಹೌದು. ಶನಿ ದೋಷವಾಗಿದ್ದರೆ ಕೂಡಲೇ ಪರಿಹಾರ ಮಾಡಿ ಬಿಡುತ್ತಿದ್ದೆ”.

“ಹಾಗಾದರೆ ಅದಕ್ಕಿಂತ ಕೆಟ್ಟದ್ದು ಏನಿರಬಹುದು ಜಾತಕದಲ್ಲಿ?”

“ಇದುವರೆಗೆ ನನ್ನ ವಿದ್ಯೆಯೇ ಸುಳ್ಳಾಗಿರಬಹುದೆಂದುಕೊಂಡು ನಿಮ್ಮೊಂದಿಗೆ ತಿಳಿಸದೆ ಇದ್ದೆ, ಇನ್ನು ಮುಚ್ಚಿಟ್ಟು ಪ್ರಯೋಜನವಿಲ್ಲ. ಯಾಕೆಂದರೆ ನಾವು ನಿರೀಕ್ಷಿಸದ ಪುರುಷ ಇವಳನ್ನು ಸೇರುತ್ತಾನೆ. ಇವಳ ಜಾತಕ ಸೀತಾ ದೇವಿಯ ಚಕ್ರದಂತೆ, ಆದರೆ ಇನ್ನೂ ಬಲವಾಗಿ ವಕ್ರನಾಗಿ ಇದೆ. ಸೀತಾ ದೇವಿಯನ್ನಾದರೋ ವಿವಾಹವಾದ ನಂತರ ರಾವಣನು ಎತ್ತಿಕೊಂಡು ಹೋಗುವುದು ಸಂಭವಿಸಿತು. ರಾವಣನನ್ನು ರಾಮನು ಧ್ವಂಸ ಮಾಡಿ ಸೀತೆಯನ್ನು ಹಿಂದಕ್ಕೆ ಕರೆದುಕೊಂಡು ಬಂದನು. ನಿಮ್ಮ ಹೆಣ್ಣಿಗೆ ಜಾತಕದಲ್ಲಿ ತೋರುವ ವಿಧಿಯೊ?- ನಾನು ಏನು ಹೇಳಲಿ? ನನಗೆ ನಾಲಗೆಯೇ ಏಳುವುದಿಲ್ಲ. ಆದರೂ ಹೇಳುತ್ತೇನೆ. ನಿಮ್ಮ ಈ ಕನ್ಯೆಯನ್ನು ಒಬ್ಬನು ಬಲಾತ್ಕಾರವಾಗಿ ಹಾರಿಸಿಕೊಂಡು ಹೋಗಿ ಮದುವೆ ಮಾಡಿಕೊಳ್ಳುತ್ತಾನೆ” ಎಂದರು.

“ಹಾಗೆಯೇ”? ಎಂದು ನಮ್ಮ ತಂದೆ ಗಾಬರಿಯಿಂದ ಕೇಳಿದರು.
“ಹೌದು, ಶ್ರೀ ಜಯಂತಿ ಇನ್ನೂ ಒಂದು ವಾರವಿದೆ. ಈ ಏಳು ದಿನಗಳಲ್ಲಿಯೇ ಇದು ನಡೆಯುವುದು” ಎಂದು ಶಾಸ್ತ್ರಿಗಳು ಲೆಕ್ಕಾಚಾರವಾಗಿ ಖಂಡಿತವಾಗಿಯೇ ಹೇಳಿದರು.

ನನ್ನ ತಂದೆಗೂ ತಾಯಿಗೂ ಅರ್ಧ ಮೂರ್ಛೆಯೇ ಉಂಟಾಯಿತು. ಶಾಸ್ತ್ರಿಗಳು ಓಲೆಗರಿ ಪುಸ್ತಕವನ್ನೂ ಜಾತಕಗಳನ್ನೂ ಎತ್ತಿಕೊಂಡು ಹೊರಟು ಹೋದರು. ಸ್ವಲ್ಪ ಹೊತ್ತಿನ ನಂತರ ಮೊದಲು ನಮ್ಮ ತಾಯಿಗೇ ಸ್ವಲ್ಪ ಸಮಾಧಾನವುಂಟಾಯಿತು.
“ಇನ್ನು ಒಂದು ಗಳಿಗೆಯೂ ಈ ಗ್ರಾಮದಲ್ಲಿರುವುದು ಭದ್ರವಲ್ಲ, ಪಟ್ಟಣದಲ್ಲಿ ಎಲ್ಲಿಯಾದರೂ ಪೋಲೀಸ್ ಕಾವಲಿನಲ್ಲಿಯೇ ಇನ್ನು ಇರಬೇಕು” ಎಂದಳು.

ನಮ್ಮ ತಂದೆ ಚಿಂತೆಯಿಂದ “ಯಾವ ನಗರಕ್ಕೆ ಹೋಗುವುದು ತಾನೇ ನಮ್ಮಿಂದ ಸಾಧ್ಯ?” ಎಂದರು.

“ತಿರುಚನಾಪಲ್ಲಿಗೆ ಹೋಗೋಣ. ಅಲ್ಲಿ ನಮ್ಮ ಸೋದರತ್ತೆಯ ಮಗ (ಅತ್ತಾನ್ (ಸೋದರತ್ತೆಯ ಮಗನನ್ನು ತಮಿಳಿನಲ್ಲಿ “ಆತ್ತಾನ್” ಎನ್ನುತ್ತಾರೆ. ಈ ಕತೆಯಲ್ಲಿ ಉದ್ದಕ್ಕೂ ಆ ಮಾತನ್ನೇ ಬಳಸಿದೆ.)) ಸಬ್ ಕಲೆಕ್ಟರ್ ಆಗಿ ಬಂದಿದ್ದಾನೆ. ಅಲ್ಲಿ ಹೋದರೆ ನಮಗೆ ಯಾವ ಯೋಚನೆಯೂ ಇರುವುದಿಲ್ಲ” ಎಂದು ಉಪಾಯ ಹೇಳಿದಳು ನನ್ನ ತಾಯಿ. ಅತ್ತಾನ್‍ನ ಸಹಾಯ ಬೇಡುವುದು ನಮ್ಮ ತಂದೆಗೆ ಅಷ್ಟು ಇಷ್ಟವಿಲ್ಲ. ಅವರು ಸೀಮೆಗೆ ಹೋಗಿ ಬಂದವರು. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅಧಿಕಾರ ದೊರೆತು ಇನ್ನೂ ಒಂದು ವರುಷವಾಗಿತ್ತು, ನನ್ನ ಜಾತಕಕ್ಕಾಗಿ ಹೇಳಿ ಕಳುಹಿಸಿದ್ದರು. ನಮ್ಮ ತಾಯಿಗೆ ಇಷ್ಟವೇ. ಆದರೆ ನಮ್ಮ ತಂದೆ ಒಪ್ಪಲಿಲ್ಲ. “ಒಳ್ಳೆಯ ಮಾತು ಹೇಳಿದೆ. ಸೀಮೆಗೆ ಹೋಗಿ ಬಂದವನು ಜಾತಿ ಭ್ರಷ್ಣ, ಅವನಿಗೆ ನನ್ನ ಮಗಳನ್ನು ಕೊಡುವುದು ಸಾಧ್ಯವಿಲ್ಲ” ಎಂದು ಬಿಟ್ಟಿದ್ದರು. ಅಳಿಯನ ಅಂತಸ್ತಿಗೆ ಅರ್ಹವಾಗಿ ಮರ್ಯಾದೆ ಮಾಡಿ ವಿವಾಹ ಮಾಡುವುದು ಕಷ್ಟವೆಂಬ ಭಾವನೆಯೂ ನಮ್ಮ ತಂದೆಗೆ ಇದ್ದಿರಬಹುದು, ಅವರಲ್ಲಿ ಈಗ ಹೋಗಿ ಸಹಾಯ ಕೇಳುವುದಕ್ಕೆ ನಮ್ಮ ತಂದೆಗೆ ಲಜ್ಜೆಯಾದುದು ಸ್ವಾಭಾವಿಕವೇ? ಹೀಗಿದ್ದರೂ ನಮ್ಮ ತಾಯಿ ಹೇಳಿದಂತೆ ನಮಗೆ ಬೇರೆ ಗತಿ ಇರಲಿಲ್ಲ. ಹೇಗಾದರೂ ಅವರ ಸಹಾಯವನ್ನು ನಾವು ಯಾಚಿಸುವುದು ಈ ಒಂದು ವಾರಕ್ಕಾಗಿ ತಾನೆ? ಈ ಕಾರಣಗಳಿಂದ ಕೊನೆಯಲ್ಲಿ ನಮ್ಮ ತಂದೆ ಸಮ್ಮತಿಸಿದರು.

ತಿರುಚನಾಪಳ್ಳಿಯಲ್ಲಿ ನಮ್ಮ ಅತ್ತಾನ್‍ರ ಬಂಗಲಿಯ ಮಗ್ಗಲು ಮನೆಯೊಂದು ನಮಗೆ ಸಿಕ್ಕಿತು. ನಮ್ಮ ಅತ್ಯಾನ್‌ರನ್ನ ನಾನು ನೋಡಿ ಕೆಲವು ವರುಷಗಳಾಗಿದ್ದವು. ಮೊದಲು ಅವರು ನನ್ನನ್ನು ವಿವಾಹವಾಗಲು ಬೇಡಿದಾಗ ತಿರಸ್ಕರಿಸಿದುದರಿಂದ ಈಗ ಅವರ ಸಹಾಯವನ್ನು ಅಪೇಕ್ಷಿಸಲು ನನಗೆ ಸಂಕಟವಾಗಿತ್ತು. ಒಂದು ಪಕ್ಷ ಅವರಿಗೆ ಇನ್ನೂ ನನ್ನ ಮೇಲೆ ಕೋಪವೇ ಇರಬಹುದು” ಎಂದು ಹೆದರಿದ್ದೆನು. ಆದರೆ ಅವರು ನನ್ನನ್ನು ನೋಡಿದಾಗ ಅವರ ಕಣ್ಣುಗಳು ಸ್ವಲ್ಪ ಜ್ವಲಿಸಿದುವೇ ಹೊರತು ಮಾತುಗಳಲ್ಲಿ ಕೋಪವೇನೂ ಕಾಣಲಿಲ್ಲ.

“ಬಾ ಸೀತಾ”ಎಂದರು.

ಅವರು ಉತ್ಸಾಹವಾಗಿ ಒಳ್ಳೆ ನಗು ಮುಖವಾಗಿದ್ದರು. ಆದರೂ ನಮ್ಮ ತಂದೆ ಪದೇ ಪದೇ ಹೇಳಿ ಹೇಳಿ ಅಭ್ಯಾಸವಾಗಿದ್ದಂತೆ “ಅವನು ಜಾತಿಭ್ರಷ್ಟ” ಎಂದು ಖಿನ್ನರಾಗಿ ಹೇಳಿಕೊಂಡರು. ಆದರೆ ಬಾಗಿಲಿನಲ್ಲಿ ಯಾವಾಗಲೂ ನಮಸ್ಕರಿಸುತ್ತ ನಿಂತಿದ್ದ ಇಬ್ಬರು ಜವಾನರನ್ನು ನೋಡಿ ತಂದೆಯವರ ಮನಸ್ಸೂ ಸ್ವಲ್ಪ ಮೃದುವಾಯಿತು.
ಹೇಳಿದ್ದಂತೆ ಅತ್ಯಾನ್ ನಿತ್ಯ ಬೆಳಿಗ್ಗೆ ಬರುತ್ತಿದ್ದರು. ನಮ್ಮ ತಂದೆಯವರು ಆ ಕಾಲದಲ್ಲಿಯೇ ಪ್ರಾತಃಕಾಲದ ಜಪದಲ್ಲಿ ತೊಡಗಿರುತ್ತಿದ್ದರು. ನಮ್ಮ ತಾಯಿಗೆ ಹಳ್ಳಿಯಲ್ಲಿ ಮೊಸರು ಕಡೆಯುವ ಅಭ್ಯಾಸವಾಗಿದ್ದುದರಿಂದ ತಾವೇ ಮೊಸರನ್ನು ಕಡೆದ ಹೊರತು ಅವರಿಗೆ ಸಮಾಧಾನವಾಗುತ್ತಿರಲಿಲ್ಲ. ಆದುದರಿಂದ ನಮ್ಮ ಅತ್ತಾನ್ ಬಂದಾಗ ಅವರಿಗೆ ಮಾತಿಗೆ ಸಿಕ್ಕುತ್ತಿದ್ದವಳು ನಾನು ಒಬ್ಬಳೇ. ಆದರೆ ಅದರಿಂದ ಅವರಿಗೆ ಅತೃಪ್ತಿಯಾದಂತೆ ತೋರಲಿಲ್ಲ.
* * * *

“ನಿನ್ನ ಸ್ನೇಹಿತೆ ವಿಮಲಾವನ್ನು ಒಂದು ಸಲ ನೋಡಬೇಕೆಂದು ಆಸೆಯಾಗಿದೆ”ಎಂದು ದೇವಕಿ,
“ನನಗೂ ಹಾಗೆಯೇ” ಎಂದು ಸರಳಾ ಅನುಮೋದಿಸಿದಳು.
“ಏತಕ್ಕಾಗಿಯೋ?” ಎಂದು ಕಮಲಾ ಸ್ವಲ್ಪ ಕೋಪದಿಂದ ಕೇಳಿದಳು.
“ಏನೂ ಇಲ್ಲ. ಮುಂದೆ ಹೇಳು (ಐಯ್ಯರೇ ಇನ್ನೂ ಮೂರು ಐಸ್‌ಕ್ರೀಂ ತಂದು ಕೊಡಿ) ಅವರಿಬ್ಬರೂ ಏನನ್ನು ಕುರಿತು ದಿನವೂ ಮಾತ ನಾಡಿಕೊಳ್ಳುತ್ತಿದ್ದರೋ!”
ಕಮಲಾ ಮತ್ತೆ ಮುಂದುವರಿಸಿ ವಿಮಲಾ ತನ್ನೊಂದಿಗೆ ಹೇಳಿದುದನ್ನು ಹೇಳತೊಡಗಿದಳು.
* * * *

ನಾವು ಏನೇನು ಮಾತನಾಡಿಕೊಂಡೆವು ಎಂಬುದು ನನಗೆ ಜ್ಞಾಪಕವಿಲ್ಲ. ಆದರೆ ಹೊತ್ತು ಬಹಳ ಕಳೆದು ಹೋಯಿತು. ಮೂರನೆಯ ದಿವಸ ನಮ್ಮ ಮನೆಯಿಂದ ಹೊರಡುವಾಗ ಅತ್ತಾನ್ ನನಗೆ ಒಂದು ಪಠವನ್ನು ತೋರಿಸಿದರು.

“ಇದು ಯಾರು ಹೇಳು ನೋಡೋಣ?”

“ಅದು ಒಂದು ರಾಜಾ?”

“ಅಲ್ಲ, ಅಲ್ಲ”

ಅಲ್ಲವಾದರೆ ಅಮರ ಸಿಂಹಾಸನ ಟಾಕೀಸ್‌ನಲ್ಲಿ ರಾವಣ ವೇಷಧಾರಿಯ ಚಿತ್ರ ಪತ್ರಿಕೆಗಳಲ್ಲಿ ಬಿದ್ದಿತ್ತು. ಇದು ಅವನಾಗಿರಬಹುದು.

“ಅದೂ ಅಲ್ಲ. ಇವನಂತಿರುವ ಒಬ್ಬನು ಶ್ರೀ ಜಯಂತಿಗೆ ಮೊದಲು ನಿನ್ನನ್ನು ಹಾರಿಸಿಕೊಂಡು ಹೋಗುತ್ತಾನೆ.”

“ಈ ವಿಚಾರ ನಿಮಗೆ ಹೇಗೆ ಗೊತ್ತು?”ಎಂದು ಕೇಳಿದೆ. ಅವರು ಪ್ರತ್ಯುತ್ತರ ಕೊಡದೆ ಹೊರಟು ಹೋದರು.

ಅವರು ಮರು ದಿವಸ ಬಂದಾಗ ಮತ್ತೆ ಅದೇ ವಿಷಯವನ್ನು ಕೇಳಿದೆ. “ಅದೇ? ಒಂದು ಹೆಣ್ಣನ್ನು ಹಾರಿಸಿಕೊಂಡು ಹೋದುದಕ್ಕಾಗಿ ಸೆರೆಯಲ್ಲಿರುವ ಖೈದಿಯ ಚಿತ್ರ, ನಿನಗಾಗಿ ಬರುವ ಪುರುಷ ಹೇಗಿರುತ್ತಾನೆಂಬುದನ್ನು ತೋರಿಸಲು ಅದನ್ನು ತರಿಸಿದೆ.”

“ಅವನ ಮುಖ ನನಗೇನೂ ಒಪ್ಪಿಗೆಯಿಲ್ಲ” ಎಂದು ಹೇಳಿ ಪಟವನ್ನು ಕಿತ್ತುಕೊಂಡು ಹರಿದು ಹಾಕಿದೆ.

“ಹಾಗಾದರೆ ನಿನಗೆ ಬೇರೆ ಒಬ್ಬನ ಪಠವನ್ನು ತೋರಿಸಲೆ?”

“ಯಾರ ಪಟ?”

“ಯಾರೊ ಒಬ್ಬ, ಒಂದು ಹೆಣ್ಣನ್ನು ಹಾರಿಸಿಕೊಂಡು ಹೋಗಿ ಅವಳನ್ನು ವಿವಾಹವಾಗುತ್ತಾನಂತೆ. ಹಾಗೆ ಅವನಿಗೆ ಒಬ್ಬ ಜೋಯಿಸರು ಹೇಳಿದ್ದಾರೆ.”

“ಎಲ್ಲಿ ತೋರಿಸಿ, ನಿಮ್ಮ ಪಠವೇ; ಹ್ಯಾಟ್ ಹಾಕಿಕೊಂಡ ಮಾತ್ರಕ್ಕೆ ನನಗೆ ತಿಳಿಯದೆ? ಸುಮ್ಮನೆ ಯಾಕೆ ಸುಳ್ಳೆಲ್ಲ ಹೇಳುತ್ತೀರಿ?”

“ಏನು ಸುಳ್ಳು ಹೇಳಿದೆ? ನಿನಗೆ ಜೋಯಿಸ ಹೇಳಿದುದು ನಿಜ, ನನಗೆ ಹೇಳಿದರೆ ಮಾತ್ರ ಸುಳ್ಳು ಅಲ್ಲವೇ? ಕೆಲವು ಕಾಲದಿಂದಲೇ, ಹಾರಿಸಿಕೊಂಡು ಹೋಗಬೇಕಾದ ಹೆಣ್ಣನ್ನೂ ಸಹ ಹುಡುಕಿ ಇಟ್ಟಿದ್ದೇನೆ” ಎಂದು ಹೇಳಿಕೊಂಡೇ ಅವರು ಹೊರಟು ಹೋದರು.

ಮರು ದಿವಸ ಅವರು ಬಂದು “ಅವನ ವಿಚಾರ ಸತ್ಕಾರಕ್ಕೆ ಬರೆದಿದ್ದೇನೆ” ಎಂದರು.

“ಯಾರ ವಿಚಾರ?”

“ನಿನ್ನೆ ಹೇಳಿದೆನಲ್ಲ ಆ ಖೈದಿಯ ವಿಚಾರ”

“ಏನೆಂತ ಬರೆದಿದ್ದೀರೋ?”

“ಉಳಿದಿರುವ ಶಿಕ್ಷೆಯನ್ನು ವಜಾ ಮಾಡಬೇಕೆಂದು”

“ಆ ರೀತಿ ಯಾಕೆ ಬರೆದಿರಿ?”

“ನೀನೇ ಹೇಳು, ನಾನು ಮಾತ್ರ ನಿನ್ನನ್ನು ಹಾರಿಸಿಕೊಂಡು ಹೋಗಿ ವಿವಾಹ ಮಾಡಿಕೊಂಡು ನನ್ನ ಅಧಿಕಾರದಲ್ಲಿರುವಾಗ, ಅದೇ ರೀತಿ ಮಾಡಿದ ಮತ್ತೊಬ್ಬನು ಜೈಲಿನಲ್ಲಿರುವುದು ನ್ಯಾಯವೆ?

“ನೀವೇನೂ ನನ್ನನ್ನು ಹಾರಿಸಿಕೊಂಡು ಹೋಗುವುದಿಲ್ಲ” ಎಂದು ಖಂಡಿತವಾಗಿ ಹೇಳಿದೆ.

“ಹಾಗೆಯೆ? ನಮ್ಮಿಬ್ಬರಿಗೂ ಹೇಳಿರುವ ಜ್ಯೋತಿಷ್ಯ ಸುಳ್ಳಾಗಿ ಹೋಗುವುದೆ? ನಾನು ಇಷ್ಟು ಕಷ್ಟ ಪಟ್ಟು ದೇವಸ್ಥಾನದ ಧರ್ಮದರ್ಶಿಗಳಿಂದ ಸಂಪಾದಿಸಿರುವ ಈ ಆಶೀರ್ವಾದ ಪತ್ರವೂ ವ್ಯರ್ಥವಾಗಿ ಹೋಗುವುದೇ?” ಎಂದರು.

ನಾನೇನೂ ಬದಲು ಹೇಳಲಿಲ್ಲ. ತಟಕ್ಕನೆ ಅವರ ಕೈಯ್ಯಲ್ಲಿದ್ದ ಕೆಂಪು ಚೀಟಿಯನ್ನು ಕಿತ್ತುಕೊಂಡೆ, ಮರು ದಿವಸ ಗುಣಕ್ಷೇತ್ರ ದೇವಸ್ಥಾನದಲ್ಲಿ ವಿವಾಹವನ್ನು ನಡೆಸಿಕೊಳ್ಳಲು ದೇವಾಲಯದ ಅಧಿಕಾರಿಗಳು ಕೊಟ್ಟಿದ್ದ ಅನುಮತಿ ಪತ್ರ ಅದು. ವಧುವಿನ ಹೆಸರು ವಿಮಲಾ ಎಂದು ಇತ್ತು. ಅದಕ್ಕೆ ಮೇಲೆ ಅಳಿಯನಾಗುವವನು ಎಂಬಲ್ಲಿ ಅತ್ತಾನ್ ರ ಹೆಸರಿತ್ತು. ಶುಭಮಸ್ತು ಎಂಬ ಧರ್ಮದರ್ಶಿಗಳ ಆಶೀರ್ವಚನವೂ ಇತ್ತು. ಅತ್ತಾನೆ= ಹೀಗೆ ಮಾಡಿದುದಕ್ಕೆ, ನನಗೆ ಮಾತ್ರ ಅವರು ಸಮಯ ಕೊಟ್ಟಿದ್ದರೆ, ಅವರಿಗೆ ಸಾವಿರ ಆಕ್ಷೇಪಣೆ ಹೇಳಿರುತ್ತಿದ್ದೆ. ಆದರೆ ನಾನು ಅದನ್ನು ಪೂರ್ಣ ಓದುವುದಕ್ಕೆ ಮುಂಚೆಯೇ ಅವರು ಕಿತ್ತುಕೊಂಡು ಹೋಗಿಬಿಟ್ಟರು. ಅವರನ್ನು ಮತ್ತೆ ಕಂಡಾಗ ಹೇಗೆ ಹೇಗೆ ಗದರಿಸಬೇಕೆಂದು ಆ ಹಗಲು ರಾತ್ರಿಯೆಲ್ಲಾ ಉರು ಹಾಕಿಕೊಂಡಿದ್ದೆ. ಎಷ್ಟೇ ಅತ್ತಾನಿಯಾಗಿರಲಿ, ಸುಂದರನಾಗಿರಲಿ, ಪ್ರಿಯನಾಗಿರಲಿ, ಈ ರೀತಿ ಅವರೊಂದಿಗೆ ಓಡಿಹೋಗಿ ಯಾರೂ ಕಾಣದಂತೆ ಮದುವೆ ಮಾಡಿಕೊಳ್ಳುವುದು ಚೆನ್ನಾಗಿರುತ್ತದೆಯೇ? ಅವರೊಂದಿಗೆ ಪ್ರಕಾಶವಾಗಿ ಮಣೆಯ ಮೇಲೆ ಕುಳಿತು ವಿವಾಹವಾಗಲು ನನ್ನ ತಂದೆ ಒಪ್ಪುವುದಿಲ್ಲವೆಂಬ ಮಾತಂತೂ ಇರಲಿ, ನನ್ನ ಮದುವೆಗೆ ನಾನು ಮೊದಲು ಒಪ್ಪಬೇಡವೇ? ನನ್ನನ್ನು ಬಾಯಿ ಮಾತಿಗಾದರೂ ಕೇಳಿ ಒಪ್ಪಿಸದೆ ನನ್ನ ಸಮ್ಮತಿ ತಮ್ಮ ಕೈಯ್ಯಲ್ಲಿಯೇ ಇದೆಯೆಂದು ತಿಳಿದು ತೀರ್ಮಾನಿಸುವುದೇ? ಎಷ್ಟು ಧೈರ್ಯ? ಇದಕ್ಕಾಗಿಯಾದರೂ ಅವನು ಮದುವೆ ಮಾಡಿಕೊಂಡು ಅನಂತರ ದಿನವೂ ಅವರ ಮಾತನ್ನು ಮೀರಿ ನಡೆದ ಸೇಡು ತೀರಿಸಿಕೊಳ್ಳಬೇಕೆಂದು ಕೂಡ ನನಗೆ ಆಗಾಗ್ಗೆ ತೋರ
ಹತ್ತಿತ್ತು.

ಆದರೆ ಮರು ದಿನ ಬೆಳಿಗ್ಗೆ ಅವರನ್ನು ನೋಡಿದಾಗ ನನಗೆ ಅಯ್ಯೋ ಪಾಪ ಎನ್ನಿಸಿತು. ಕಿವಿಯನ್ನು ಮುಚ್ಚಿ ದವಡೆ ಸುತ್ತ ಒಂದು ಕೆಂಪು ಬಣ್ಣದ ಶಾಲನ್ನು ಸುತ್ತಿದ್ದರು.

ಗಾಬರಿಯಿಂದ “ಏನು ಸಮಾಚಾರ” ಎಂದು ಕೇಳಿದೆ.

“ಕಿವಿ ನೋವು. ಎರಡು ಕಿವಿಗಳಲ್ಲಿಯೂ ಚುಚ್ಚುತ್ತಿದೆ. ರಾತ್ರಿಯೆಲ್ಲಾ ಕಣ್ಣನ್ನೇ ಮುಚ್ಚಲಿಲ್ಲ”

ನನಗೆ ಕರುಣೆ ಹೆಚ್ಚಾಗಿ ಕೋಪ ಇಳಿದು ಹೋಯಿತು. “ಏನಾದರೂ ಔಷಧಿ ಮಾಡಿಕೊಳ್ಳಬಾರದೆ?” ಎಂದೆ.

“ಒಂದು ಔಷಧಿಯೂ ಬಾಕಿಯಿಲ್ಲ. ಇನ್ನು ಮಂತ್ರಿಸಿ ನೋಡಬೇಕು ಅಷ್ಟೆ”

ನಮ್ಮ ತಂದೆಯವರಿಗೆ ಮಂತ್ರದಲ್ಲಿ ಪೂರ್ಣ ನಂಬಿಕೆ. ಯಾವ ರೋಗ ಬಂದರೂ ಊರಿನಲ್ಲಿ ಅವರು ಮಾಂತ್ರಿಕನನ್ನೇ ಕರೆಸುತ್ತಾರೆ. ನನಗೆ ಅದರಲ್ಲಿ ಅಷ್ಟು ನಂಬಿಕೆ ಇಲ್ಲ. ಆದರೆ ನಮ್ಮ ಅತ್ತಾನ್ ತುಂಬ ಓದಿದವರು. ಅವರೇ ಹೇಳುವಾಗ ಯಾಕೆ ಮಾಡಿ ಪರೀಕ್ಷಿಸಬಾರದು? ಎಂದು ನನಗೆ ತೋರಿತು.

ಅತ್ಯಾನ್ ಹೇಳಿದರು.

“ಆದರೆ ಕಿವಿಯ ನೋವಿಗೆ ಮಂತ್ರಿಸುವುದೆಂದರೆ ಬಹಳ ತಾಪತ್ರಯ. ಮದುವೆಯಾಗದ ಹೆಣ್ಣು ಮಂತ್ರಿಸಿದರೆ ಮಾತ್ರ ಫಲಿಸುತ್ತೆ”

“ಅದೇನೂ ಅಂತಹ ಮಹಾ ತಾಪತ್ರಯವೆ? ನಾನು ಸ್ನಾನ ಮಾಡಿ ಶುದ್ಧಳಾಗಿದ್ದೇನೆ. ಮಂತ್ರವನ್ನು ಹೇಳಿ, ಜಪಿಸುತ್ತೇನೆ” ಎಂದೆ.

“ಜಪಿಸಬೇಡ, ಮಂತ್ರವನ್ನು ನನ್ನ ಕಿವಿಯಲ್ಲಿ ಒಂದು ಸಲ ಹೇಳಿದರೆ ಸಾಕು” ಎಂದು ಹೇಳಿ ಕಿವಿಗೆ ಕಟ್ಟಿದ್ದ ಶಾಲುವನ್ನು ಬಿಚ್ಚಿದರು.

ರಾತ್ರಿಯೆಲ್ಲಾ ಎಚ್ಚರವಾಗಿದ್ದಿದ್ದರೂ ಮುಖವೇನೂ ಬಾಡಿರಲಿಲ್ಲ. “ಮೊದಲು ಬಲ ಕಿವಿಯಲ್ಲಿ ನಾನು ಹೇಳುವಂತೆ ಹೇಳು” ಎಂದರು.

“ಓಂ”
“ಓಂ”
“ಅಗ್ನಿ ಸಾಕ್ಷಿ”
“ಅಗ್ನಿ ಸಾಕ್ಷಿ”
“ತವಂ ಮೇ”
“ತವಂ ಮೇ”
“ಕಾಂತಃ”
“ಕಾಂತಃ”
“ಸರಿ, ಈಗ ಅರ್ಧ ನೋವು ನಿಂತು ಹೋಯಿತು. ಇನ್ನು ಎಡ ಕಿವಿಯಲ್ಲಿ ಇದಕ್ಕೆ ನಮ್ಮ ಭಾಷೆಯಲ್ಲಿ ಹೇಳಿದರೆ ಸಾಕು”

“ಓಂ”
“ಓಂ”
“ಅಗ್ನಿ ಸಾಕ್ಷಿ-ಅಗ್ನಿ ಭಗವಂತನೇ ಸಾಕ್ಷಿಯಾಗಿರಲಿ”
“ಅಗ್ನಿ ಸಾಕ್ಷಿ-ಅಗ್ನಿ ಭಗವಂತನೇ ಸಾಕ್ಷಿಯಾಗಿರಲಿ”
“ತವಂ-ನೀನು”
“ತವಂ-ನೀನು”
“ಮೇ-ನನಗೆ”
“ಕಾಂತಃ-ಕಾಂತನು”
“ಕಾಂ-ನಾನು ಹೇಳುವುದಿಲ್ಲ”

“ಆಗಲೇ ಹೇಳಿಯೇ ಆಯಿತೆಲ್ಲ, ಸಂಸ್ಕೃತದಲ್ಲಿ ಅದೂ ಬಲ ಕಿವಿಯಲ್ಲಿ ಹೇಳುವುದು ತಾನೇ ಮುಖ್ಯವಾದುದು. ಅಗ್ನಿ ಸಾಕ್ಷಿಯಾಗಿ ಹೇಳಿದ ಮಾತುಗಳನ್ನು ಇನ್ನು ಹೇಗೆ ಅಳಿಸುವುದು? ಬೇರೆ ಪುರುಷನನ್ನು ಹೇಗೆ ಮದುವೆ ಯಾಗುವುದು? ಆ ಚೀಟ ಎಲ್ಲಿ”?

“ಆ ಮೇಜಿನ ಡ್ರಾಯರ್‌ನಲ್ಲಿದೆ ನಾನು ಯಾತಕ್ಕೂ ಸಮ್ಮತಿಸುವುದಿಲ್ಲ”

“ಕಿಟಕಿಯ ಆಚೆ ಇಣಕಿ ನೋಡು, ಬಾಗಿಲಿನಲ್ಲಿ ಮೋಟಾರು ಸಿದ್ದವಾಗಿದೆ.”

“ನಾನು ಇಣಕಿ ನೋಡುವುದಿಲ್ಲ. ಅಬ್ಬ ಎಷ್ಟು ದೊಡ್ಡ ಕಾರು!”
“ಊಟಕ್ಕೆ ಮತ್ತೆ ಹಿಂದಿರುಗಿ ಬಿಡಬಹುದು?
“ಒಂದು ಹೆಜ್ಜೆಯನ್ನೂ ಎತ್ತಿ ಇಡುವುದಿಲ್ಲ. ನಾನು ಒಳ್ಳೆ ಸೀರೆ ಕೂಡ ಉಟ್ಟುಕೊಂಡಿಲ್ಲ”

ನನ್ನ ಪಾಡಿಗೆ ನಾನು ಆಕ್ಷೇಪಿಸುತ್ತಲೇ ಇದ್ದೆ. ಹೇಗೋ ಮೋಟಾರಿನ ಸಮೀಪಕ್ಕೆ ಹೋಗಿಯೇ ಇದ್ದೆವು.

ಹನ್ನೊಂದು ಗಂಟೆಗೆ ವಿವಾಹಿತ ದಂಪತಿಗಳಾಗಿ ಅತ್ತಾನ್‌ರ ಮನೆಗೆ ಹಿಂತಿರುಗಿದೆವು.

ಆ ದಿನ ಪೂರ್‍ತ ನಮ್ಮ ತಂದೆ ಕೋಪವಾಗಿಯೇ ಇದ್ದರು. ನಮ್ಮ ಮುಖವನ್ನು ಇನ್ನು ನೋಡುವುದಿಲ್ಲವೆಂದೇ ಹೇಳಿದರು. ಮರು ದಿನ ನಮ್ಮ ತಾಯಿ “ಚೆನ್ನಾಗಿದೆ. ಇಂದು ಶ್ರೀ ಜಯಂತಿ ಹಬ್ಬದ ದಿನ ನಮ್ಮ ಒಬ್ಬಳೇ ಹೆಣ್ಣನ್ನೂ ಅಳಿಯನನ್ನೂ ಕರೆಸಿ ಒಂದು ತುತ್ತು ಅನ್ನವನ್ನೂ ಕೂಡಾ ಬಡಿಸದಿದ್ದರೆ ದೇವರು ಏನಾದರೂ ಶಾಪ ಕೊಡುತ್ತಾನೆ” ಎಂದು ಹೇಳಿದ ನಂತರವೇ ನಮ್ಮ ತಂದೆ ನಮ್ಮನ್ನು ಮನ್ನಿಸಿದರು.

“ಹೇಗಿದ್ದರೂ ಶಾಸ್ತ್ರಿಗಳು ಹೇಳಿದ್ದ ಜೋತಿಷ್ಯ ಸುಳ್ಳಾಗಲು ಸಾಧ್ಯವೆ? ಜೋತಿಷ್ಯ ವಿಶೇಷಗಳನ್ನು ಶಾಸ್ತ್ರಿಗಳನ್ನು ಕೇಳುವ ಆವಶ್ಯಕತೆ ತಾನೆ ಏನು? ನಿಮಗೆ ತಿಳಿಯದ ವಿಷಯವೆ?” ಎಂದು ಅತ್ತಾನ್ ಹೇಳಿದ ನಂತರ ನಮ್ಮ ತಂದೆಗೂ ನಮಗೂ ಪೂರ್ಣವಾಗಿ ರಾಜಿಯಾಗಿಬಿಟ್ಟಿತು. ನಮ್ಮ ತಂದೆ ಬಹಳ ಬೇಗ “ಅತ್ತಾನ್ ಭ್ರಷ್ಟ” ಎಂಬ ಮಾತನ್ನೇ ಮರೆತುಬಿಟ್ಟರು. ಶ್ರೀ ಜಯಂತಿಯ ರಾತ್ರಿ ನಾವೆಲ್ಲಾ ಒಟ್ಟಿಗೆ ಊಟಕ್ಕೆ ಕುಳಿತೆವು. ಈಗೆಲ್ಲಾ ನಮ್ಮ ತಂದೆ ಅಳಿಯಂದಿರು ಎಂದು ಹೇಳುವುದಿಲ್ಲ. “ಕಲೆಕ್ಟರ್ ಕರೆಯುತ್ತಾರೆ” “ಕಲೆಕ್ಟರ್ ಹೇಳಿದರು” ಎನ್ನುತ್ತಾರೆ. ಅವರ ಮಾತು ಫಲಿಸಿ ಶೀಘ್ರವಾಗಿ ಕಲೆಕ್ಟರ್ ಕೆಲಸವಾಗುವುದನ್ನು ನಿರೀಕ್ಷಿಸುತ್ತಿದ್ದೇನೆ.”
* * * *

“ಹೀಗೆ ವಿಮಲಾ ನನಗೆ ಹೇಳಿದಾಳೆ, ಈಗಲಾದರೂ ರಾಮಲಿಂಗ ಶಾಸ್ತ್ರಿಗಳ ಜೋತಿಷ್ಯವನ್ನು ನಂಬುತೀರಾ ಇಲ್ಲವೆ?” ಎಂದು ಕಮಲಾ ಕೇಳಿ ಮುಗಿಸಿದಳು.

“ಕತೆ ಏನೋ ಸರಿಯಾಗಿ ಮುಗಿಯಿತು. ಆದರೆ ಹೆಣ್ಣನ್ನು ಬಲಾತ್ಕಾರವಾಗಿ ಹಾರಿಸಿಕೊಂಡು ಹೋಗಿ ವಿವಾಹವಾಗುತ್ತಾನೆಂದು ಜೋಯಿಸರು ಹೇಳಿರಲಿಲ್ಲವೆ?” ನೀನು ಹೇಳುವುದರಲ್ಲಿ ಹಾಗೆ ಬಲಾತ್ಕಾರವಾಗಿ ಹಾರಿಸಿಕೊಂಡು ಹೋದುದು ಕಾಣುವುದಿಲ್ಲವಲ್ಲ? ಎಂದಳು ಸರಳಾ.

“ಕಾಣುವುದಿಲ್ಲವೆ ನಿನಗೆ? ಎಂದು ಕಮಲಾ ಕೋಪದಿಂದ ಹೇಳಿದಳು.” “ನನ್ನನ್ನು ಅತ್ತಾನ್ ಕಟ್ಟಿ ಎತ್ತಿಕೊಂಡು ಮಹಡಿಯ ಮೆಟ್ಟಿಲುಗಳನ್ನಿಳಿದು ಮೋಟಾರಿನಲ್ಲಿ ಹಾಕಿದುದನ್ನು ನೀನು ನೋಡಿದ್ದರೆ ಹೀಗೆ ಹೇಳುತ್ತಿರಲಿಲ್ಲ” ಎಂದಳು.

“ಓಹೊ ನಿನ್ನನ್ನೆ? ನಿನ್ನ ಅತ್ತಾನ್ ಕಟ್ಟಿ ಎತ್ತಿಕೊಂಡು ಹೋದುದು? ಈಗ ಚೆನ್ನಾಗಿ ತಿಳಿಯಿತು. ನಿನ್ನ ಸ್ನೇಹಿತೆಯ ಕತೆಯನ್ನು ಒಂದು ಅಕ್ಷರವೂ ಕೂಡ ತಪ್ಪದಂತೆ ಜ್ಞಾಪಕವಾಗಿ ಹೇಳುವ, ನಿನ್ನ ಶಕ್ತಿಯೂ ತಿಳಿಯಿತು. ವಿಮಲಾವನ್ನು ಪ್ರತ್ಯಕ್ಷವಾಗಿ ನೋಡಬೇಕೆಂದು ನನ್ನ ಆಸೆ ಎಂದು ಹೇಳಲಿಲ್ಲವೆ? ಆ ವ್ಯರ್ಥವಾದ ಮಾತನ್ನು ಇನ್ನೂ ಬಿಟ್ಟೆ” ಎಂದಳು ದೇವಕಿ. ಅವಳೂ ಸರಳಳೂ ನಕ್ಕರು. ಕಮಲಾ ಲಜ್ಜೆಯಿಂದ ತಲೆ ತಗ್ಗಿಸಿಕೊಂಡು ಸ್ವಲ್ಪ ಹೊತ್ತು ಮೌನವಾಗಿದ್ದಳು.

“ನಿನ್ನ ಜೋಯಿಸರನ್ನು ಕುರಿತು ನನಗೆ ಸ್ವಲ್ಪ ಸಂದೇಹವುಂಟಾಗಿದೆ” ಎಂದು ದೇವಕಿ ಮತ್ತೆ ಪ್ರಾರಂಭಿಸಿದಳು.

“ಏನು ಸಂದೇಹ?”
“ನಿನ್ನ ಅಡ್ವಾನ್‌ರಿಗೆ ಅವರು ಮೊದಲಿನಿಂದ ಗೊತ್ತು ಅಲ್ಲವೆ?”
“ಹಾಗೇ ಇರಬೇಕು. ಅವರ ಮಗನಿಗೆ ಸ್ವಲ್ಪ ದಿನಗಳ ಕೆಳಗೆ ಅತ್ತಾನ್ ಶಿಪಾರಸು ಹೇಳಿ ಒಂದು ಗುಮಾಸ್ತೆ ಕೆಲಸವನ್ನು ಕೊಡಿಸಿದರು.
“ಹೋಗಲಿ. ಪ್ರಪಂಚದಲ್ಲಿ ಕೃತಜ್ಞತೆ ಎಂಬುದು ಇನ್ನೂ ಇದೆ.”
“ಹಾಗಂದರೇನು?” ಎಂದು ಕಮಲಾ ಗೊಣಗುಟ್ಟಿದಳು.
“ಹಾಗೆಂದರೆ ಆ ಮಹಡಿ ಮೆಟ್ಟಿಲು ದೃಶ್ಯವನ್ನು ನೋಡಲು ಲಭ್ಯವಾಗದೇ ಹೋಯಿತಲ್ಲಾ ಎಂದು ವಿಷಾದಪಡುತ್ತೇನೆ” ಎಂದಳು ದೇವಕಿ.
“ಅವಳ ಮಾತಿರಲಿ, ನಾನು ಸ್ವಲ್ಪ ಜೋತಿಷ್ಯ ಹೇಳುತ್ತೇನೆ ಕೇಳು” ಎಂದಳು ಸರಳಾ.
“ಏನು ಜೋತಿಷ್ಯ ?”
“ಶಾಸ್ತ್ರಿಗಳೂ ಅವರ ದೇವಿಯರೂ, ಮೊದಲು ಉಡುತ್ತಿದ್ದ ಹರಕಲು ಪಂಚೆಯನ್ನೂ ನೂಲು ಕಂಬಿ ಸೀರೆಯನ್ನೂ ಬಿಟ್ಟು, ರೇಶ್ಮಿ ಅಂಚಿನ ಸಂಚಿಯನ್ನೂ ಬೆಂಗಳೂರು ರೇಷ್ಮೆ ಸೀರೆಯನ್ನೂ ಕೊಳ್ಳುವವರಾಗಿದ್ದಾರೆ ಅಲ್ಲವೆ?”

“ಆಗಲೇ ಕೊಂಡುಕೊಂಡು ಆಯಿತಲ್ಲ”

“ಹಾಗೋ! ಹಾಗಾದರೆ ಆಕೆಗೆ ಹೊಸದಾಗಿ ಒಡವೆಗಳನ್ನೂ ಮಾಡಿಸಿ ಕೊಳ್ಳುವ ಆಸೆ ಇರಬಹುದೆ?”

“ಸವರನ್ ಬೆಲೆ ಹೇಗಿದೆ ವಿಚಾರಿಸಿ ಬರೆಯಿರಿ ಎಂದು ಆಕೆ ನನಗೆ ಬರೆದಿದ್ದಾಳೆ”

ಇವೆಲ್ಲ ಅವರ ಮಗ ಸಂಪಾದಿಸುತ್ತಿರುವ ೩೦ ರೂಪಾಯಿ ಗುಮಾಸ್ತೆ ಕೆಲಸದಿಂದ ಆಗುತ್ತಿದೆಯಲ್ಲವೆ?- ಈಶ್ವರನ ಜಡೆಯಿಂದ ಗಂಗಾ ಪ್ರವಾಹದಂತೆ ಅಲ್ಲಿ ಹಣ ಸುರಿಯುತ್ತಿರಬಹುದು”

ಸರಳಳೂ ದೇವಕಿಯೂ ನಕ್ಕರು. ಕಮಲಾ ಸಹ ನಗುವಿನಲ್ಲಿ ಸೇರದಿರಲು ಸಾಧ್ಯವಾಗಲಿಲ್ಲ.

ಅನಂತರ “ಅದೆಲ್ಲಾ ಏನೂ ಇಲ್ಲ. ನಮ್ಮ ಜೋಯಿಸರದು ಏನೂ ತಪ್ಪಿಲ್ಲ” ಎಂದಳು ಕಮಲಾ.

“ತಪ್ಪು ಎಂದು ಹೇಳಲಿಲ್ಲವಲ್ಲ. ನಾನೂ ಸಹ ಶಾಸ್ತ್ರಿಗಳನ್ನು ಕರೆಸಿ ಜೋತಿಷ್ಯ ಕೇಳಬೇಕೆಂದು ನಿಶ್ಚಯಿಸಿದ್ದೇನೆ” ಎಂದಳು ಸರಳಾ.

“ಎಲ್ಲಾ ಬಿಟ್ಟು ಶಾಸ್ತ್ರಿಗಳು ಯಾಕೆ? ಸುಂದರರಾಗಿ ಒಳ್ಳೆಯವರಾಗಿ ಸಬ್ ಕಲೆಕ್ಟರ್ ಆಗಿರುವ ಒಬ್ಬ ಅತ್ಯಾನ್ ಇದ್ದರೇ ಸಾಕಲ್ಲ! ಎಂದಳು ದೇವಕಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಳಕಳಿ
Next post ಉದಯಾಚಲದಲಿ ಮೂಡಿದ ಸೂರ್ಯ

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

cheap jordans|wholesale air max|wholesale jordans|wholesale jewelry|wholesale jerseys