ತಲ್ಪಾ

ತಲ್ಪಾ

ನತಾಲಿಯಾ ಅಮ್ಮನ ತೋಳಿನಲ್ಲಿ ಹುದುಗಿ ತುಂಬ ಹೊತ್ತು ಮೌನವಾಗಿ ಬಿಕ್ಕಿದಳು. ನಾವು ಝೆನ್‌ಸೋಂಟ್ಲಾದಿಂದ ವಾಪಸು ಬಂದು ಅವಳು ಅಮ್ಮನನ್ನು ನೋಡುವ ಈವತ್ತಿನವರೆಗೆ, ಅವಳಿಂದ ಸಮಾಧಾನ ಮಾಡಿಸಿಕೊಳ್ಳಬೇಕು ಅನ್ನಿಸುವ ಈ ಕ್ಷಣದವರೆಗೆ, ಎಷ್ಟೋ ದಿನದಿಂದ ಅಳುವನ್ನು ಒಳಗೇ ತಡೆದುಕೊಂಡಿದ್ದಳು.

ಇದಕ್ಕೆ ಮೊದಲು ನಾವು ಎಷ್ಟು ದಿನ ಎಷ್ಟು ಕಷ್ತಪಟ್ಟು ತಲ್ಪಾದಲ್ಲಿ ಯಾರ ಸಹಾಯವೂ ಇಲ್ಲದೆ ಅವಳು ಮತ್ತು ನಾನು ಇಬ್ಬರೇ ಆಳವಾಗಿ ಗೋರಿ ತೆಗೆದು ತೆಗೆದ ಮಣ್ಣನೆಲ್ಲ ಕೈಯಲ್ಲಿ ಬಾಚಿ ಹಾಕಿ ತಾನಿಲೋನನ್ನು ಅದರಲ್ಲಿ ಹೂಳಿ, ನೋಡಿದವರಿಗೆ ಹೆದರಿಕೆ ಆಗಬಾರದು, ತಾನಿಲೋ ಹೆಣ ವಾಸನೆ ಹೊಡೆಯಬಾರದು ಹಾಗೆ ಮುಚ್ಚಿ – ಇದನ್ನೆಲ್ಲ ಮಾಡುವಾಗಲೂ ಅವಳು ಅತ್ತಿರಲಿಲ್ಲ.

ಆಮೇಲೆ ಕೂಡಾ ನಾವು ರಾತ್ರಿಯ ಹೊತ್ತು ಯಾರೂ ಜೊತೆಗಿಲ್ಲದೆ ಇಬ್ದರೇ ವಾಪಸು ನಡೆದುಕೊಂಡು ಬರುತ್ತಾ ಇರುವಾಗ, ನಾವು ನಿದ್ದಯಲ್ಲಿ ನಡೆಯುತಿದ್ದೆವೋ ಅನ್ನುವ ಹಾಗೆ ಕಾಲಲ್ಲೇ ತಡವರಿಸಿ ರಸ್ತೆ ಹುಡುಕಿಕೊಂಡು, ನಾವಿಡುವ ಒಂದೊಂದು ಹೆಜ್ಜೆಯೂ ತಾನಿಲೋನ ಗೋರಿಯ ಕಪಾಳಕ್ಕೆ ಹಾಕಿದ ಏಟು ಅಂದುಕೊಳ್ಳುತ್ತ ಬರುತ್ತಿರುವಾಗ ಕೂಡ ಅವಳು ಅತ್ತಿರಲಿಲ್ಲ. ಆ ಹೊತ್ತಿನಲ್ಲಿ ನತಾಲಿಯ ಮನಸ್ಸು ಗಟ್ಟಿಮಾಡಿಕೊಂಡಿದ್ದಳು, ಒಳಕುದಿತ ಗೊತ್ತಾಗದ ಹಾಗೆ ಹೃದಯವನ್ನು ಹಿಂಡಿ ಇಷ್ಟೇ ಇಷ್ಟು ಮಾಡಿಕೊಂಡಿದ್ದಳು ಅನ್ನಿಸುತಿತ್ತು. ಅವಳ ಕಣ್ಣಿಂದ ಒಂದೇ ಒಂದು ಹನಿಯೂ ಜಾರಿರಲಿಲ್ಲ.

ಅಮ್ಮನನ್ನು ಅಪ್ಪಿಕೊಂಡು ಅಳುವುದಕ್ಕೆ ಇಲ್ಲಿಗೆ ಬಂದಿದ್ದಳು; ತನ್ನ ದುಃಖವನ್ನು ಅಮ್ಮನ ಜೊತೆ ಹಂಚಿಕೊಳ್ಳುವುದಕ್ಕೆ, ತಾನೆಷ್ಟು ನರಳುತಿದ್ದೇನೆ ನೋಡು ಎಂದು ತೋರಿಸುವುದಕ್ಕೆ ಬಂದಿದ್ದಳು; ನಮ್ಮೆಲ್ಲರ ಜೊತೆ ದುಃಖ ಹಂಚಿಕೊಳ್ಳುವುದಕ್ಕೆ, ನಮ್ಮ ಪಾಪಗಳ ಕೊಳಕು ಲಂಗೋಟಿ ಬಟ್ಟೆ ಒಗೆದು ಹಾಕುವುದಕ್ಕೆ ಬಂದಿದ್ದಳು. ನನ್ನೊಳಗೂ ಬಿಕ್ಕು ಹುಟ್ಟುತಿರುವುದು ಗೊತ್ತಾಗುತಿತ್ತು.

ಅದು ತಾನಿಲೋ ಸನ್ತೋಸ್ ಅಂತಲಾ? ನಾವಿಬ್ಬರೇ, ನತಾಲಿಯಾ ಮತ್ತೆ ನಾನು ಸೇರಿ ಅವನನ್ನು ಕೊಂದಿದ್ದೆವು. ಅವನು ಸಾಯಲಿ ಅಂತಲೇ ತಲ್ಪಾಗೆ ಕರೆದುಕೊಂಡು ಹೋದೆವು. ಸತ್ತ. ಅಷ್ಟು ದೀರ್ಘ ಪ್ರಯಾಣ ತಾಳಿಕೊಳ್ಳಲಾರ ಅನ್ನುವುದು ನಮಗೆ ಗೊತ್ತಿತ್ತು. ಆದರೂ ಕರಕೊಂಡು ಹೋದೆವು, ನಾವಿಬ್ನರೂ ಬಲವಂತ ಮಾಡತಾ ಮುಂದೆ ಮುಂದೆ ಅವನನ್ನು ಸಾಗಿಸಿಕೊಂಡು ಹೋದೆವು. ಅವನ ವಿಚಾರ ಪೂರಾ ಕೈತೊಳೆದುಕೊಂಡ ಹಾಗೆ ಆಗುತ್ತದೆ ಅಂದುಕೊಂಡಿದ್ದೆವು. ಹಾಗೇ ಆಯಿತು.

ತಲ್ಪಾಕ್ಕೆ ಹೋಗುವ ಐಡಿಯಾ ನಮ್ಮಣ್ಣ ತಾನಿಲೋನದ್ದೇ. ನಮ್ಮೆಲ್ಲರಿಗಿಂತ ಮುಂಚೆ ಅವನಿಗೇ ಅದು ಹೊಳೆದಿತ್ತು. ಯಾರಾದರೂ ನನ್ನ ಅಲ್ಲಿಗೆ ಕರಕೊಂಡು ಹೋಗಿ ಅಂತ ಎಷ್ಟೋ ವರ್ಷಗಳಿಂದ ಕೇಳುತ್ತಾ ಇದ್ದ. ಎಷ್ಟೋ ವರ್ಷಗಳಿಂದ. ಅವನ ಕಾಲಿನ ಮೇಲೆಲ್ಲ ದೊಡ್ಡ ಕೆಂಪು ಕೆಂಪು ದದ್ದುಗಳಾದವಲ್ಲ ಅವತ್ತಿನಿಂದ ಕೇಳುತಿದ್ದ. ಆ ದದ್ದು ಕ್ರಮೇಣ ಗಾಯವಾಗಿ ರಕ್ತದ ಬದಲು ಗಟ್ಟಿಯಾದ ಹಳದೀ ಕೀವು ಸೋರುವುದಕ್ಕೆ ಶುರುವಾಗಿತ್ತು. ನನಗೆ ಭಯವಾಗತಾ ಇದೆ, ಈ ಖಾಯಿಲೆಗೆ ಔಷಧವೇ ಇಲ್ಲ ಅನಿಸತಾ ಇದೆ ಅಂತ ಅವನು ಹೇಳಿದ್ದು ಚೆನ್ನಾಗಿ ಜ್ಞಾಪಕ ಇದೆ ನನಗೆ. ಅದಕ್ಕೇ ಅವನು ತಲ್ಪಾಗೆ ಹೋಗಿ ಅಲ್ಲಿರುವ ಕನ್ಯೆ ಮೇರಿಗೆ ಪೂಜೆ ಮಾಡಿಸಿಕೊಂಡು ಬರಬೇಕು, ಅವಳು ಕಣ್ಣು ತೆರೆದು ನೋಡಿದರೆ ಗಾಯಗಳೆಲ್ಲ ವಾಸಿಯಾಗತವೆ ಅನ್ನುತಿದ್ದ. ತಲ್ಪಆ ಬಹಳ ದೂರ, ಹಗಲು ಹೊತ್ತಿನ ಬಿಸಿಲಲ್ಲಿ, ರಾತ್ರಿಯ ಹೊತ್ತು ಮಾರ್ಚ್ ತಿಂಗಳ ಥಂಡಿಯಲ್ಲಿ ದಿನವೂ ಬಹಳ ಹೊತ್ತು ನಡೆಯಬೇಕು ಅನ್ನುವುದು ಅವನಿಗೆ ಗೊತ್ತಿತ್ತು. ಆದರೂ ಹೋಗಬೇಕು ಅನ್ನುತಿದ್ದ. ಯಾವ ಔಷಧವೂ ಇಲ್ಲದ ಎಂದೂ ವಾಸಿಯಾಗದ ಎಷ್ಟೋ ಕಾಯಿಲೆಗಳನ್ನು ತಲ್ಪಾದ ಕನ್ಯೆ ಮೇರಿ ವಾಸಿಮಾಡಿದಾಳೆ ಅನ್ನುತಿದ್ದ. ಹೇಗೆ ಮಾಡಬೇಕೋ ಅವಳಿಗೆ ಗೊತ್ತು. ಕೊಳೆ ಕಸರು ಎಲ್ಲ ತೆಗೆದು ಮಳೆ ನಿಂತ ಮೇಲೆ ಕಾಣುವ ಸ್ವಚ್ಛ ಹೊಲದ ಹಾಗೆ ಮಾಡಿ ಮಾಡಿಬಿಡತಾಳೆ. ಅಲ್ಲಿ ಅವಳೆದುರು ನಿಂತು ನಮಸ್ಕಾರ ಮಾಡಿದರೆ ಸಾಕು ಕಾಯಿಲೆ ಹೋಗಿಬಿಡುತದೆ, ಆಮೇಲೆ ಯಾವುದೇ ನೋವು ಇರುವುದಿಲ್ಲ ಅಂತ ಅನ್ನುತಿದ್ದ.

ಅವನನ್ನ ಅಲ್ಲಿಗೆ ಕರೆದುಕೊಂಡು ಹೋಗುವುದಕ್ಕೆ ಅವನ ಈ ಮಾತನ್ನೇ ಗಬಕ್ಕನೆ ಹಿಡಿದುಕೊಂಡೆವು. ನಾನಂತೂ ತಾನಿಲೋ ಜೊತೆಗೆ ಹೋಗಲೇಬೇಕಾಗಿತ್ತು. ಅವನು ನನ್ನ ಅಣ್ಣ, ನತಾಲಿಯಾ ಕೂಡ ನಮ್ಮ ಜೊತೆ ಬರಲೇಬೇಕಾಗಿತ್ತು. ಅವಳು ನಮಣ್ಣನ ಹೆಂಡತಿ. ಅವನಿಗೆ ಸಹಾಯಮಾಡಬೇಕಾಗಿತ್ತು. ತೋಳು ಹಿಡಿದು, ಆಸೆಯ ಕಾಲೆಳೆದುಕೊಂಡು ಬರುತಿದ್ದ ಅವನ ಭಾರ ಬೆನ್ನ ಮೇಲೆ ಹೊತ್ತು ಅಲ್ಲಿಗೆ ಹೋಗುವುದೂ, ವಾಪಸು ಬರುವುದೂ ಅವಳೇ ಮಾಡಬೇಕಾಗಿತ್ತು.

ನತಾಲಿಯಾ ಮನಸ್ಸಿನಲ್ಲೇನಿದೆ ಅನ್ನುವುದು ನನಗಾಗಲೇ ಗೊತ್ತಿತ್ತು. ಅವಳ ಬಗ್ಗೆ ಕೂಡ ಸ್ವಲ್ಪ ಗೊತ್ತಿತು. ಅವಳ ದುಂಡನೆಯ ಕಾಲು, ಕಲ್ಲಿನ ಹಾಗೆ ಗಟ್ಟಿಯಾಗಿ, ಮಧ್ಯಾಹ್ನದ ಬಿಸಿಲಿನಲ್ಲಿರುವ ಕಾಲಿನ ಹಾಗೆ ಬಿಸಿಯಾಗಿ ಇರುವ ಕಾಲು ಬಹಳ ಕಾಲದಿಂದ ಒಂಟಿತನ ಅನುಭವಿತುಸತ್ತಿವೆ ಅನ್ನುವುದು ಗೊತ್ತಿತ್ತು. ಆಗಲೇ ಗೊತ್ತಿತ್ತು. ಎಷ್ಟೋ ಸಾರಿ ನಾವು ಒಟ್ಟಿಗೆ ಇದ್ದೆವು. ನಾವು ಒಟ್ಟಗೆ ಇದ್ದಾಗೆಲ್ಲ ತನಿಲೋನ ನೆರಳು ನಮ್ಮನ್ನು ಬೇರೆ ಮಾಡುತ್ತಲೇ ಇತ್ತು. ಬೊಬ್ಬೆ ಹುಣ್ಣಿನ ಅವನ ಕೈ ನಮ್ಮಿಬ್ಬರ ಮಧ್ಯ ಇಳಿದು ನತಾತಲಿಯಾ ಅವನ ಆರೈಕೆ ಮಾಡುತ್ತಲೇ ಇರಲಿ ಅಂತ ಅವಳನ್ನು ಎಳೆದುಕೊಂಡು ಹೋಗುತಿತ್ತು. ಅವನು ಬದುಕಿರುವವರೆಗೂ ಹೀಗೇನೇ.

ಆಗಿದ್ದರ ಬಗ್ಗೆ ನತಾಲಿಯಾ ನೊಂದುಕೊಂಡಿದ್ದಳು ಅನ್ನುವುದು ಗೊತ್ತು. ನಾನೂ ನೊಂದುಕೊಂಡಿದ್ದೆ. ಅದರಿಂದ ಪಶ್ಚಾತ್ತಾಪದ ಅಳಲು ತಗ್ಗಲಿಲ್ಲ. ನಮ್ಮ ಮನಸ್ಸಿನ ನೆಮ್ಮದಿ ಶಾಶ್ವತವಾಗಿ ಹೋಗಿಟಬಿಟ್ಟಿತು. ತಾನಿಲೋಗೆ ಸಾಯುವ ಹೊತ್ತು ಬಂದಿತ್ತು, ಹೇಗಿದ್ದರೂ ಅವಮ ಸಾಯುತಿದ್ದ, ತಲ್ಪಾಗೆ ಅಷ್ಟು ದೂರ ಹೋಗಿದ್ದೂ ಉಪಯೋಗವಾಗಲಿಲ್ಲ ಅಂದುಕೊಂಡರೂ ಮನಸ್ಸಿಗೆ ಶಾಂತಿ ಇರಲಿಲ್ಲ. ಯಾಕೆ ಅಂದರೆ ಅವನು ಇಲ್ಲೇ ಇದ್ದಿದ್ದರೂ ಸಾಯುತಿದ್ದ. ಅಲ್ಲಿ ಹೋಗಿ ಸ್ವಲ ಬೇಗ ಸತ್ತ ಅಷ್ಟೆ. ದಾರಿಯ ಶ್ರಮ, ಹಿಂಸೆ, ಮೈಯಿಂದ ರಕ್ತ ಜಾಸ್ತಿ ಹೋಗಿದ್ದು, ಸಿಟ್ಟು ಎಲ್ಲಾ ಸೇರಿ ಅವನನ್ನು ಬೇಗ ಸಾಯಿಸಿದವು. ಅವನಿಗೆ ಮುಂದೆ ಹೋಗಲು ಇಷ್ಟವಿರದಿದ್ದರೂ ಹೋಗಿ ಫಲವಿಲ್ಲ. ವಾಪಸ್ಸು ಹೋಗಿ ಅಂತ ಬಲವಂತಮಾಡಿದರೂ ನತಾಲಿಯ ಮತ್ತೆ ನಾನು ಅವನನ್ನ ಬಲವಂತ ಮಾಡಿ ಮುಂದೆ ಮುಂದೆ ಸಾಗಿಸಿಕೊಂಡು ಹೋಗಿದ್ದಕ್ಕೆ ಕೆಟ್ಟನಿಸುತ್ತದೆ. ಈಗ ವಾಪಸ್ಸು ಹೋಗುವುದಕ್ಕೆ ಆಗಲ್ಲ ಅನ್ನುತ್ತ ಅವನ ತೋಳು ಹಿಡಿದು ಎಬ್ಬಿಸಿ ನಿಲ್ಲಿಸಿ ಮುಂದೆ ಹಜ್ಜೆ ಹಾಕಲೇಬೇಕು ಹಾಗೆ ಮಾಡುತಿದ್ದೆವು.

‘ಇಲ್ಲಿಗೆ ತಲ್ಪಾ ಹತ್ತಿರ, ವಾಪಸ್ಸು ಝೆನ್‍ಸೋಂಟ್ಲಾಗೆ ಹೋಗುವುದು,’ ದೂರ ಅಂತನ್ನುತಿದ್ದೆವು. ತಲ್ಪಾ ಇನ್ನೂ ದೂರವಿತ್ತು, ಎಷ್ಟೋ ದಿನದ ಪ್ರಯಾಣ ಮಾಡಬೇಕಾಗಿತ್ತು.

ಅವನು ಸಾಯಲಿ ಅನ್ನುವುದು ನಮ್ಮ ಆಸೆ. ಝೆನ್‍ಸೋಂಟ್ಲಾ ಬಿಡುವುದಕ್ಕೂ ಮೊದಲೇ, ತಲ್ಪಾಗೆ ಹೋಗುತ್ತ ದಿನಾ ರಾತ್ರಿ ದಾರಿಯಲ್ಲಿ ತಂಗಿದಾಗ ಕೂಡ ಆ ಬಯಕೆಯೇ ನಮ್ಮ ಮನಸಿನಲ್ಲಿತ್ತು ಅನ್ನುವುದನ್ನ ಹೇಳಬೇಕಾಗಿಲ್ಲ. ಯಾಕೆ ಹಾಗೆ ಅನ್ನುವುದು ಈಗ ತಿಳಿಯುತಿಲ್ಲ, ಆಗ ಮಾತ್ರ ನಮಗೆ ನಿಜವಾಗಿ ಬೇಕಾಗಿದ್ದದ್ದು ಅವನ ಸಾವು ಮಾತ್ರ. ನನಗೆ ಚೆನ್ನಾಗಿ ಜ್ಞಾಪಕ ಇದೆ.

ಆ ರಾತ್ರಿಗಳು ಚೆನ್ನಾಗಿ ಜ್ಞಾಪಕ ಇವೆ. ದೇವದಾರು ಸೌದೆ ನಮಗೆ ಬೆಳಕು ಕೊಡುತಿತ್ತು. ಬೆಂಕಿಯೆಲ್ಲ ಆರಿ ಬೂದಿಯಾಗುವವರೆಗೆ ಕಾದಿದ್ದು ನತಾಲಿಯಾ ಮತ್ತೆ ನಾನು ಇರುಳ ಆಕಾಶದ ಬೆಳಕನ್ನು ಮರೆಮಾಡುವಂಥ ಜಾಗ ಹುಡುಕುತಿದ್ದೆವು. ನಿರ್ಜನ ಹಳ್ಳಿಗಾಡಿನ ಪ್ರಯಾಣದ ಏಕಾಂತದಲ್ಲಿ, ತಾಲಿನೋನ ಕಣ್ಣಿನಿಂದ ಮರೆಯಾಗಿ ಕತ್ತಲಲ್ಲಿ ಕರಗುತ್ತ ನಾವು ಹೀಗೆ ಹತ್ತಿರಹತ್ತಿರವಾದೆವು. ಏಕಾಂತ ನಮ್ಮಿಬ್ಬರನ್ನೂ ಬೆಸೆಯುತಿತ್ತು ನತಾಲಿಯಾಳನ್ನು ನನ್ನ ತೋಳಿಗೆ ದಬ್ಬಿ ಅವಳಿಗೆ ಬಿಡುಗಡೆ ಸಿಗುವಂತೆ ಮಾಡುತಿತ್ತು. ನತಾಲಿಯಾ ಮೈ ಸಡಿಲಬಿಟ್ಟು ಆರಾಮವಾಗುತ್ತ ಎಷ್ಟೊಂದು ಸಂಗತಿಗಳನ್ನು ಮರೆತುಬಿಡುತಿದ್ದಳು, ಹಾಗೇ ನಿದ್ರೆ ಹೋಗುತಿದ್ದಳು. ಅವಳ ಮೈ ಬಿಡುಗಡೆಯ ಭಾವವನ್ನು ಅನುಭವಿಸುತಿತ್ತು.

ನಾವು ಮಲಗುತಿದ್ದ ನೆಲ ಯಾವಾಗಲೂ ಬೆಚ್ಚಗಿರುತಿತ್ತು. ನೆಲದ ಶಾಖದಿಂದ ನನ್ನಣ್ಣ ತಾನಿಲೋನ ಹೆಂಡತಿಯ ಮೈ ಬಿಸಿಯೇರುತಿತ್ಫ಼್ತು. ಎರಡೂ ಶಾಖಗಳು ಒಟ್ಟಿಗೆ ಸೇರಿ ಎಂಥವರನ್ನೂ ಕಾಣುತಿದ್ದ ಕನಸಿನಿಂದ ಎಬ್ಬಿಸುತಿದ್ದವು. ಅವಳ ಮೈ ಕೆಂಡದ ಮೇಲೆ ನನ್ನ ಮೈ ಆಡುತಿತ್ತು. ಮೊದಲು ಮೃದುವಾಗಿ ಅಪ್ಪಿದ ನನ್ನ ತೋಳು ಆಮೇಲೆ ಅವಳ ಮೈಯಿಂದ ರಕ್ತ ಹಿಂಡುವ ಹಾಗೆ ಬಿಗಿಯುತಿದ್ದವು. ಮತ್ತೆ ಮತ್ತೆ ಹೀಗೇ ಆಗುತಿತ್ತು. ದಿನಾ ರಾತ್ರಿ, ಬೆಳಗ್ಗೆ ಹೊತ್ತು ಹುಟ್ಟುವ ವೇಳೆಗೆ ತಣ್ಣನೆ ಗಾಳಿ ಬೀಸಿ ನಮ್ಮ ಮೈ ಬಿಸಿ ಆರಿಸುವವರೆಗೂ. ತಲ್ಪಾದಲ್ಲಿರುವ ಕನ್ಯೆ ಮೇರಿಯ ದೇವಸ್ಥಾನಕ್ಕೆ ತಾನಿಲೋನನ್ನು ಕರಕೊಂಡು ಹೋಗುತ ನತಾಲಿಯ ಮತ್ತು ನಾನು ಹೀಗಿದ್ದೆವು.

ಈಗ ಎಲ್ಲಾ ಮುಗಿದಿದೆ. ತಾನಿಲೋ ಬದುಕಿನಿಂದಲೂ ಪಾರಾಗಿಬಿಟ್ಟ. ಮೈಯಲ್ಲ ಹುಣ್ಣಾಗಿ ಕಾಲು ಕೈಗಳ ಒಂದೊಂದು ರಂಧ್ರದಿಂದಲೂ ಒಳಗಿನ ಕಸುರೆಲ್ಲ ಕೀವಾಗಿ ಜಿನುಗುತ್ತಿರುವಾಗ ಬದುಕಿರುವುದು ಎಷ್ಟು ಕಪ್ಪ ಅಂತ ಅವನಿನ್ನು ಹೇಳಲಾರ. ಇಷ್ಪಿಷ್ಟಗಲ ಗಾಯ ನಿಧಾನವಾಗಿ ಬಾಯಿಬಿಡುತ್ತ ಕೀವು ಸುರಿಯುತ್ತ ಗಾಳಿ ತಾಕಿ ಕೀವುಗುಳ್ಳೆ ಒಡೆದು ಕೆಟ್ಟ ವಾಸನೆ ಹರಡುತ್ತ-ನಮಗೆಲ್ಲ ಭಯಹುಟ್ಟಸಿತ್ತು.

ಈಗ ಅವನು ಸತ್ತಿದಾನೆ. ಆದರೂ ಏನೂ ವ್ಯತ್ಯಾಸವಾಗಿಲ್ಲ. ನತಾಲಿಯ ಈಗ ಅವನನ್ನು ನೆನೆದು ಅಳುತ್ತಾಳೆ. ಅವಳ ಮನಸ್ಸಿನಲ್ಲಿ ಎಷ್ಟು ದುಃಖ ಇದೆ ಅನ್ನುವುದನ್ನು ಅವನು ಎಲ್ಲಿದಾನೋ ಅಲ್ಲಿಂದಲೇ ನೋಡಲಿ ಅನ್ನುವ ಹಾಗೆ. ನಾಲ್ಕಾರು ದಿನದಿಂದ ತಾನಿಲೋನ ಮುಖ ಕಾಣತಾ ಇದೆ, ನನಗೆ ತಾಕುತಾ ಇದೆ ಅನ್ನುತಾಳೆ. ಬೆವರಿವಿಂದ ಮುಖ ವದ್ದೆಯಾಗಿರುತಿತ್ತು; ನೋವನ್ನು ತಡೆದುಕೊಳ್ಳುವ ಶಕ್ತಿ ಬೆವರಾಗಿ ಅವನನ್ನು ಬಿಟ್ಟು ಹೋಗುತಿತ್ತು. ಅವಳ ಬಾಯಿಗೆ ತಾಕುತಿತ್ತು, ಅವಳ ಕೂದಲಲ್ಲ ಅಡಗುತಿತ್ತು, ಅವಳಿಗೆ ಕೇಳಿಸಲಾಗದಷ್ಟು ಸಣ್ಣದನಿಯಲ್ಲಿ ಸಹಾಯಮಾಡು ಅನ್ನುತಿತ್ತು. ನನಗೆ ವಾಸಿಯಾಗಿದೆ, ಈಗ ನೋವು ಇಲ್ಲ, ನಿನ್ನ ಜೊತೆ ಇರಬಹುದು, ನಿನ್ನ ಜೊತೆ ಇರುವುದಕ್ಕೆ ಸಹಾಯಮಾಡು ಅಂದಿದ್ದನಂತೆ.

ನಾವೇ ತೆಗೆದ ಆಳವಾದ ಗುಂಡಿಯಲ್ಲಿ ಅವನನ್ನು ಆಗ ತಾನೇ ಹೂತು ಅದೇ ಆಗ ತಲ್ಪಾ ಬಿಟ್ಟು ಹೊರಟಿದ್ದೆವು.

ಆವಾಗಿನಿಂದ ನತಾಲಿಯಾ ನನ್ನ ಮರೆತುಬಿಟ್ಟಳು. ಅವಳ ಕಣ್ಣು ಮೊದಲೆಲ್ಲ ಹೇಗೆ ಹೊಳೆಯುತಿತ್ತು, ನನಗೆ ಗೊತ್ತಿದೆ. ನೆಲದ ಮೇಲೆ ಇಷ್ಟಗಲ ನಿಂತ ನೀರು ಹುಣ್ಣಿಮೆ ಬೆಳಕಲ್ಲಿ ಹೊಳೆದ ಹಾಗೆ ಹೊಳೆಯುತಿತ್ತು. ಈಗ, ನೀರನ್ನೆಲ್ಲ ತುಳಿದು ರಾಡಿ ಎಬ್ಬಿಸಿದ ಹಾಗಿದೆ ಅವಳ ನೋಟ. ಏನನ್ನೂ ನೋಡುತ್ತಿರಲಿಲ್ಲ. ಈಗ ತಾನಿಲೋನನ್ನು ಬಿಟ್ಟು, ಬದುಕಿದ್ದಾಗ ಸೇವೆ ಮಾಡಿದ, ಅವನು ಸಾಯಬೇಕಾದಾಗ ಸಮಾಧಿಮಾಡಿದ ತಾನಿಲೋನನ್ನು ಬಿಟ್ಟು ಬೇರೆ ಏನೂ ಅವಳ ಪಾಲಿಗೆ ಇರಲಿಲ್ಲ.
* * *

ತಲ್ಪಾದ ಮೇನ್ ರೋಡು ಹಿಡಿಯುವುದಕ್ಕೆ ನಮಗೆ ಇಪತ್ತು ದಿನ ಬೇಕಾಯಿತು. ಅಲ್ಲಿಯ ತನಕ ನಾವು ಮೂರು ಜನ ಮಾತ್ರ ಇದ್ದೆವು. ಮೇನ್ ರೋಡಿಗೆ ಬಂದಮೇಲೆ ಎಲ್ಲೆಲ್ಲಿಂದಲೋ ಬಂದ ಜನ ಸಿಗುವುದಕ್ಕೆ ಶುರುವಾಯಿತು. ಅವರೆಲ್ಲ ನಮ್ಮ ಹಾಗೇ ಈ ಮೇನ್ ರೋಡಿಗೆ ಬಂದು ಸೇರಿದ್ದರು. ರಸ್ತೆ ನದಿಯ ಪ್ರವಾಹದ ಹಾಗಿತ್ತು. ನಾವು ಹಿಂದೆ ಬೀಳುವ ಹಾಗೆ ಮಾಡುತಿತ್ತು. ಎಲ್ಲ ಕಡೆಯಿಂದ ನಮ್ಮನ್ನು ಒತ್ತುತ್ತ ಧೂಳು ಮಣ್ಣು ನಮ್ಮನ್ನು ಕಟ್ಟಿಹಾಕಿದೆ ಅನ್ನಿಸುವ ಹಾಗೆ ಮಾಡುತಿತ್ತು. ಗುಂಪು ಗುಂಪು ಜನ ನಡೆದ ಹಾಗೆ ಹಿಟ್ಟಿನಂಥ ಧೂಳು ಮೇಲೇಳುತಿತ್ತು, ನಿಧಾನವಾಗಿ ಕೆಳಗಿಳಿಯುತಿತ್ತು, ಜನರ ಕಾಲ್ತುಳಿತ ಮತ್ತೆ ಅದನ್ನು ನೆಲಕ್ಕೊತ್ತಿ ಮೇಲಕ್ಕೆ ಎಬ್ಬಿಸುತಿತ್ತು. ನಮ್ಮ ಮೇಲೂ ನಮ್ಮ ಕಾಲ ಕೆಳಗೂ ಸದಾ ಕಾಲ ಧೂಳು, ಧೂಳೇ. ಧೂಳಿನ ರಾಶಿಯ ಮೇಲ ಆಕಾಶ. ಮೋಡವಿರದ, ಧೂಳು ಕವಿದ ಆಕಾಶ. ಧೂಳು ನೆರಳು ಕೊಡುವುದಿಲ್ಲ.

ಬಿಸಿಲ ಧಗೆ ತಪ್ಪಿಸಿಕೊಳ್ಳುವುದಕ್ಕೆ ಬೆಳ್ಳನೆ ನೆಲದಿಂದ ಮುಖಕ್ಕೆ ರಾಚುವ ಬೆಳಕು ತಪ್ಪಿಸಿಕೊಳ್ಳುವುದಕ್ಕೆ ನಾವು ರಾತ್ರಿಯಾಗುವವರೆಗೆ ಕಾಯಬೇಕಾಗಿತ್ತು.

ದಿನಗಳು ಉದ್ದವಾಗುತಿದ್ದವು. ನಾವು ಝೆನ್‍ಸೋತ್ಲಾ ಬಿಟ್ಟದ್ದು ಫೆಬ್ರವರಿ ಮಧ್ಯದಲ್ಲಿ. ಈಗ ಮಾರ್ಚಿ ತಿಂಗಳು ಶುರುವಾಗಿ ಸೂರ್ಯ ಬೆಳಗಿನ ಹೊತ್ತು ಬೇಗನೇ ಕಾಣಿಸುತಿದ್ದ. ಸಂಜೆಯಾಗಿ ನಾವು ಒಂದಿಷ್ಟು ಕಣ್ಣು ಮುಚ್ಚುವುದರೊಳಗೆ ಇದೋ ಈಗ ಮುಳುಗಿದ ಅನ್ನಿಸುತಿದ್ದ ಸೂರ್ಯ ಆಗಲೇ ಮತ್ತೆ ಹುಟ್ಟಿರುತಿದ್ದ.

ಈ ಜನಗಳ ಗುಂಪಿನಲ್ಲಿ ಜರುಗುತ್ತಿರುವಾಗ ಬದುಕು ತುಂಬ ನಿಧಾನ, ತುಂಬ ಹಿಂಸೆ ಅನ್ನಿಸಿದ ಹಾಗೆ ಮತ್ತೆ ಯಾವತ್ತೂ ಅನ್ನಿಸಿರಲಿಲ್ಲ. ಜನಗಳ ಹಿಂಡಿನಲ್ಲಿ ಹೋಗುತ್ತಿರುವಾಗ ಈ ಕೆಟ್ಟ ಬಿಸಿಲಿನಲ್ಲಿ ನಾವೆಲ್ಲ ಉಂಡೆ ಮುದ್ದೆಯಾಗಿರುವ ಹುಳುಗಳ ರಾಶಿ, ಧೂಳಿನ ಮೋಡದಲ್ಲಿ ಸಿಕ್ಕಿ ಒದ್ದಾಡುತಿದ್ದೇವೆ, ಈ ರಸ್ತೆ ಸರಪಳಿಯ ಹಾಗೆ ನಮ್ನನ್ನೆಲ್ಲ ಬಿಗಿದುಹಾಕಿದೆ ಅನ್ನಿಸುತಿತ್ತು. ನಮ್ಮ ಕಣ್ಣೆಲ್ಲ ಧೂಳು, ನಮ್ಮ ನೋಟ ದಾಟಲಾಗದ ಧೂಳಿನ ಗೋಡೆಗೆ ಡಿಕ್ಕಿ ಹೊಡೆದು ವಾಪಸ್ಸಾಗಿ ಮತ್ತೆ ಎಲ್ಲೆಲ್ಲೂ ಧೂಳನ್ನೇ ಕಾಣುತಿತ್ತು. ತಲೆಯ ಮೇಲಿನ ಆಕಾಶ ಧೂಳು ಕವಿದು ಸದಾ ಮಂಕಾಗಿರುತಿತ್ತು. ಧೂಳಡರಿದ ಆಕಾಶದಲ್ಲಿ ಸೂರ್ಯ ನಮ್ಮನ್ನೆಲ್ಲ ಮೇಲಿನಿಂದ ಜಜ್ಜುವ ಸುಡುವ ಭಾರವಾದ ಗುಂಡಿನ ಹಾಗಿದ್ದ. ಎಲ್ಲೋ ಒಂದೊಂದು ಸಾರಿ, ಯಾವುದಾದರೂ ಹೊಳೆ ದಾಟುವಾಗ ಧೂಳು ಹೆಚ್ಚಾಗಿ ಮೇಲೇರಿ ಎಲ್ಲ ಒಂದಷ್ಟು ನಿಚ್ಚಳವಾಗುತಿತ್ತು. ಧೂಳು ಮೆತ್ತಿ ಕಪ್ಪಡರಿ ಸುಡುತಿದ್ದ ತಲೆಗಳನ್ನು ಹೊಳೆಯ ನೀರಿಗೆ ಅದ್ದುತಿದ್ದೆವು. ಚಳಿ ಹೆಚ್ಚಾದಾಗ ಬಾಯಿಯಿಂದ ಹಬೆ ಹೊರಗೆ ಬರುವ ಹಾಗೆ ನೀರಿಗದ್ದಿದ ತಲೆಗಳಿಂದ ನೀಲಿ ಹೊಗೆ ಮೇಲೇಳುತಿತ್ತು. ಸ್ವಲ್ಪ ಹೊತ್ತು ಅಷ್ಟೇ. ಮತ್ತೆ ನಾವೆಲ್ಲಾ ಧೂಳಿನಲ್ಲಿ ಕಣ್ಮರೆಯಾಗಿ ಧೂಳುಮಯವಾಗುತಿದ್ದೆವು. ಎಲ್ಲರನ್ನೂ ಸುಡುತಿದ್ದ ಬಿಸಿಲಿನಿಂದ ಒಬ್ಬರನ್ನಿನ್ನೊಬ್ಬರು ಕಾಪಾಡುವುದಕ್ಕೆ ಹೆಣಗುತ್ತ ನಡೆಯುತಿದ್ದೆವು.

ಯಾವತ್ತಾದರೂ ರಾತ್ರಿ ಆಗತದೆ ಅಂದುಕೊಳ್ಳುತಿದ್ದೆವು. ರಾತ್ರಿ ಆಗತದೆ, ಆಗ ನಾವು ಒಂದಿಷ್ಟು ವಿಶ್ರಾಂತಿ ಪಡೆಯುತ್ತೇವೆ, ಈಗ ಏನಾದರೂ ಮಾಡಿ ದಿನ ನೂಕುವುದು ಹೇಗಾದರೂ ಸರಿ ಬಿಸಿಲು. ಧಗೆ ತಪ್ಪಿಸಿಕೊಳ್ಳುವುದು ಇಷ್ಟಾದರೆ ಸಾಕು. ಆಮೇಲೆ ನಿಲ್ಲುತ್ತೇವೆ, ವಿಶ್ರಾಂತಿ ಪಡೆಯುತ್ತೇವೆ. ಈಗ, ಈಗ ಏನಾದರೂ ಮಾಡಿ ನಮಗಿಂತ ಮುಂದೆ ಇರುವವರ ಹಿಂದೆ ಹಿಂದೆ ಸಾಧ್ಯವಾದಷ್ಟೂ ಜೋರಾಗಿ ಸಾಗುವುದು, ನಮ್ಮ ಹಿಂದೆ ಇರುವವರಿಗಿಂತ ಬೇಗ ಬೇಗ ಸಾಗುವುದು ಅಷ್ಟೇ ಗುರಿ. ಅದಷ್ಟೇ ಈಗ ಮುಖ್ಯ. ನಾವು ಸತ್ತಾಗ ಹೇಗಿದ್ದರೂ ಬೇಕಾದಷ್ಟು ವಿಶ್ರಾಂತಿ ಸಿಗುತ್ತದೆ.

ನತಾಲಿಯಾ ಮತ್ತೆ ನಾನು ಹಾಗಂದುಕೊಳ್ಳುತಿದ್ದೆವು. ತಲ್ಪಾದ ಮೇನ್ ರೋಡಿವನಲ್ಲಿ, ಮೆರವಣಿಗೆಯ ಜೊತೆಗೆ ಸಾಗುತ್ತಿರುವಾಗ ತಾನಿಲೋ ಕೂಡ ಬೇಗ ಹೋಗಬೇಕು, ತಲ್ಪಾದ ಮೇರಿ ಮಾತೆಯ ಪವಾಡ ಮುಗಿಯುವ ಮುನ್ನ ಹೋಗಿ ದರ್ಶನ ಪಡೆಯಬೇಕು ಅಂತ ಹಾಗೇ ಅಂದುಕೊಂಡಿರಬಹುದು.

ತಾನಿಲೋ ಹದಗೆಡುತಿದ್ದ. ಮುಂದೆ ಬರುವುದೇ ಇಲ್ಲ ಇನ್ನು ಅಂತ ಅವನು ಅನ್ನುವ ಹೊತ್ತು ಕೂಡ ಬಂದಿತು. ಅವನ ಪಾದಗಳ ಧರ್ಮ ಬಿರುಕು ಬಿಟ್ಟು ರಕ್ತ ಸುರಿಯುತಿತ್ತು. ಸ್ವಲ್ಪ ಸುದಾರಿಸಿಕೊಳ್ಳುವವರೆಗೆ ಅವನ ಉಪಚಾರ ಮಾಡಿದೆವು. ಸುದಾರಿಸಿಕೊಂಡರೂ ಮುಂದೆ ಹೋಗುವುದು ಬೇಡ ಅಂದ.

‘ಒಂದೆರಡು ದಿನ ಇಲ್ಲೇ ಇದ್ದು ಝೆನ್‍ಸೋಂಟ್ಲಾಕ್ಕೆ ವಾಪಸು ಹೋಗತೇನೆ, ಅಂತ ಅಂದ.

ನತಾಲಿಯಾಗೂ ನನಗೂ ಅದು ಬೇಕಾಗಿರಲಿಲ್ಲ. ನಮ್ಮೊಳಗಿರುವ ಏನೋ ಓಂದು ತಾನಿಲೋ ಬಗ್ಗೆ ನಮಗೆ ಯಾವಕರುಣೆಯೂ ಹುಟ್ಟದಂತೆ ತಡೆಯುತಿತ್ತು. ಆ ಕ್ಷಣದಲ್ಲಿ ನೋಡಿದರೆ ಅವನಲ್ಲಿನ್ನೂ ಜೀವವಿದೆ ಅನಿಸುತಿತ್ತು. ತಲ್ಪಾಗೆ ಅವನನ್ನು ಕರಕೊಂಡೇ ಹೋಗಬೇಕು ಅಂದುಕೊಂಡೆವು. ಪಾದಗಳ ಊತ ಕಡಮೆಯಾಗಲೆಂದು ಬೆಂಕಿ-ನೀರು ಅನ್ನುತ್ತಾರಲ್ಲ ಆ ಅಗ್ವಾರ್ಡಿಯೆಂಟೆ ಬ್ರಾಂದಿಯನ್ನು ಅವನ ಪಾದಗಳಿಗೆ ತಿಕ್ಕಿದಳು. ಅವನನ್ನು ಪುಸಲಾಯಿಸಿದಳು. ಅವನ ಕಾಯಿಲೆ ವಾಸಿಮಾಡುವವರು ಯಾರಾದರೂ ಇದ್ದರೆ ಅದು ತಲ್ಪಾದ ಕನ್ಯೆ ಮೇರಿ ಮಾತ್ರ. ಅವನಿಗೆ ಶಾಶ್ವತವಾದ ಆರಾಮ ಸಿಗುವ ಹಾಗೆ ಮಾಡುವವರು ಯಾರಾದರೂ ಇದ್ದರೆ ಅದು ತಲ್ಪಾದ ಕನ್ಯೆ ಮೇರಿ ಮಾತ್ರ. ಇನ್ನು ಯಾರಿಗೂ ಆಗಲ್ಲ. ಎಷ್ಟೋ ಕನ್ಯೆ ಮೇರಿಯರು ಇದ್ದರೂ ತಲ್ಪಾದ ಮೇರಿ ಮಾತ್ರ ಖಾಯಿಲೆ ವಾಸಿ ಮಾಡುವವಳು ಅಂತ ಅವನಿಗೆ ಹೇಳುತಿದ್ದಳು.

ಆಗ ತಾನಿಲೋ ಕೂಡ ಅಳುತಿದ್ದ. ಅವನ ಮುಖದ ಬೆವರಿನ ಮೇಲೆ ಕಣ್ಣೀರಿನ ಗೆರೆ ಮೂಡುತಿದ್ದವು. ಮಾಡಿದ ಕೆಟ್ಟ ಕೆಲಸಗಳಿಗೆ ತನ್ನನ್ನೆ ಬೈದುಕೊಳ್ಳುತಿದ್ದ. ನತಾಲಿಯಾ ತಲೆಗೆ ಸುತ್ತಿಕೊಂಡ ಸ್ಕಾರ್ಫಿನಲ್ಲಿ ಅವನ ಕಣ್ಣೀರು ಒರೆಸುತಿದ್ದಳು. ನಾವಿಬರೂ ಸೇರಿ ಅವನ ತೋಳು ಹಿಡಿದು ಎಬ್ಬಿಸಿ ರಾತ್ರಿಗೆ ಮೊದಲು ಇನ್ನೊಂದಷ್ಟು ದಾರಿ ನಡೆಸುತಿದ್ದೆವು.

ಹೀಗೆ ಅವನನ್ನು ಎಳೆದುಕೊಂಡೇ ತಲ್ಪಾ ಮುಟ್ಟಿದೆವು.

ಕೊನೆಯ ಕೆಲವು ದಿನಗಳಲ್ಲಿ ನಾವು ಕೂಡ ದಣಿದಿದ್ದೆವು. ನಮ್ಮನ್ನು ಯಾರೋ ತಡೆದು ನಿಲ್ಲಿಸಿ ನಮ್ಮ ಮೇಲೆ ಅತಿ ಭಾರದ ಹೊರೆ ಹೊರಿಸಿದ ಹಾಗೆ ಅನ್ಕಿಸುತಿತು. ನಾಲ್ಕಾರು ಹೆಜ್ಜೆಗೆ ಒಂದೊಂದು ಸಾರಿ ಕುಸಿಯುತಿದ್ದ ತಾನಿಲೋ. ಎಬ್ಬಿಸಬೇಕಾಗಿತ್ತು, ಕೆಲವೊಮ್ಮೆ ನಮ್ಮ ಬೆನ್ನಮೇಲೆ ಹೊತ್ತು ಸಾಗಬೇಕಾಗುತಿತ್ತು. ಅದಕ್ಕೇ ನಾವು ಆಗ ಹಾಗಿದ್ದೆವು. ಹೆಜ್ಜೆ ಇಟ್ಟರೆ ಮೈ ತಟ್ಟಾಡುತ್ತಿತ್ತು. ಆದರೆ ಹಿಂದೆ ಇದ್ದವರು ಮಾತ್ರ ನಾವು ಬೇಗ ಹೆಜ್ಜೆ ಹಾಕುವ ಹಾಗೆ ಮಾಡುತಿದ್ದರು.

ಹುಚ್ಚು ಕೆದರಿದ ಲೋಕ ರಾತ್ರಿಯ ಹೊತ್ತಿನಲ್ಲಿ ಮಾತ್ರ ಒಂದಿಷ್ಟು ಶಮನವಾದ ಹಾಗೆ ಅನಿಸುತಿತ್ತು. ಯಾತ್ರೆಗೆ ಹೊರಟ ಜನ ಅಲ್ಲಲ್ಲೇ ಪುಟ್ಟದಾಗಿ ಬೆಂಕಿ ಮಾಡಿಕೊಂಡು ಸುತ್ತ ಕೂತು ಪ್ರಾರ್ಥನೆ ಹೇಳಿಕೊಳ್ಳುತಿದ್ದರು. ತಲ್ಪಾದ ಆಕಾಶ ದಿಟ್ಟಿಸುತ್ತ ಶಿಲುಬೆಯಾಕಾರದಲ್ಲಿ ಕ್ರಾಸ್‍ಮಾಡಿಕೊಳ್ಳುತಿದ್ದರು. ಬೀಸುವ ಗಾಳಿ ಬಗೆ ಬಗೆಯ ಸದ್ದುಗಳನ್ನೆಲ್ಲ ಎತ್ತಿ ಕಲೆಸಿ ಹಾಕಿ ಏಕೈಕ ಲಯಬದ್ಧ ಮರ್‍ಮರವಾಗಿ ಕೇಳಿಸುವಂತೆ ಮಾಡುತಿತ್ತು. ಸ್ವಲ್ಪ ಹೊತ್ತಾದಮೇಲೆ ಎಲ್ಲವೂ ನಿಶ್ಚಲವಾಗಿ ಮೌನವಾಗುತಿತ್ತು. ಮಧ್ಯರಾತ್ರಿಯ ಹೊತ್ತಿಗೆ ತುಂಬಾ ದೂರದಲ್ಲಿ ಯಾರೋ ಹಾಡುವುದು ಕೇಳುತಿತ್ತು. ಕಣ್ಣು ತಾವಾಗಿ ಮುಚ್ಚುತಿದ್ದವು, ನಿದ್ರೆ ಮಾಡದೆ ಬೆಳಕು ಹರಿಯುವ ಹೊತ್ತಿಗೆ ಕಾಯುತಿದ್ದೆವು.
* * *

ಪ್ರಭುವಿನ ಕೀರ್ತನೆ ಹಾಡುತ್ತಾ ತಲ್ಪಾ ಮುಟ್ಟಿದೆವು.

ಫೆಬ್ರವರಿಯ ಮಧ್ಯಭಾಗದಲ್ಲಿ ಊರು ಬಿಟ್ಟವರು ಮಾರ್ಚೆ ತಿಂಗಳ ಕೊನೆಯ ಹೊತ್ತಿಗೆ, ಎಷ್ಟೋ ಜನ ವಾಪಸ್ಸು ಹೊರಡುತ್ತಿರುವಾಗ ನಾವು ತಲ್ಪಾ ಮುಟ್ಟಿದ್ದೆವು. ಅದಕ್ಕೆ ಕಾರಣ ಹರಕೆ ತೀರಿಸಲೇಬೇಕೆಂದು ತಾನಿಲೋ ಹಟ ಮಾಡಿದ್ದು. ಮುಳ್ಳಿರುವ ಪಾಪಾಸು ಕಳ್ಳಿ ಎಲೆಗಳನ್ನು ತಾಯತದ ಹಾಗೆ ಕೊರಳಿಗೆ ಕಟ್ಟಿಕೊಂಡ ಜನರನ್ನು ಕಂಡಾಗ ತಾನೂ ಹಾಗೆ ತೊಡುವ ತೀರ್ಮಾನ ಮಾಡಿದ. ಹೆಜ್ಜೆ ಇಡುವುದು ಕಷ್ಟವಾಗುವ ಹಾಗೆ ಕಾಲಿಗೆ ತನ್ನದೇ ಅಂಗಿಯನ್ನು ತೆಗೆದು ಬಿಗಿದು ಕಟ್ಟಿಕೊಂಡ. ತಲೆಗೆ ಮುಳ್ಳಿನ ಕಿರೀಟ ಬೇಕು ಅಂದ. ಸ್ವಲ್ಪ ಹೊತ್ತಾದ ಮೇಲೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡ. ಕೊನೆಯ ಒಂದಷ್ಟು ದೂರವನ್ನು ಕೈಗಳನ್ನು ಬೆನ್ನ ಹಿಂದೆ ಕಟ್ಟಿಕೊಂಡು ಮೊಳಕಾಲೂರಿ ಮಂಡಿಯ ಮೇಲೇ ಕುರುಡು ಕುರುಡಾಗಿ ಸಾಗುತ್ತ ನನ್ನಣ್ಣ ತಾನಿಲೋ ಸಾಂಟೋಸ್ ಅನ್ನುವ ವಸ್ತು ತಲ್ಪಾಗೆ ಬಂದು ತಲುಪಿತು. ಮೈಗೆಲ್ಲ ಸುತ್ತಿಕೊಂಡ ಬಟ್ಟೆ, ಬ್ಯಾಂಡೇಜು, ಪೌಲ್ಟೀಸುಗಳಿಂದ ರಕ್ತ ಕೀವು ಜಿನುಗುತ್ತ ಅವನು ಮುಂದೆ ಸಾಗಿದಂತೆ ಗಾಳಿಯಲ್ಲೆಲ್ಲ ಯಾವುದೋ ಪ್ರೌಣಿ ಸತ್ತ ವಾಸನೆ ಹರಡುತಿತ್ತು.

ನಾವು ಗಮನ ಕೊಡದೆ ಇರುವಾಗ ಅವನು ತಟ್ಟನೆ ಕುಣಿಯುವ ಭಕ್ತರ ಗುಂಪಿನಲ್ಲಿ ಕಾಣಿಸುತಿದ್ದ. ಇಗೋ ಇಗೋ ಅನ್ನುವಷ್ಟರಲ್ಲಿ ಕೈಯಲ್ಲಿ ಉದ್ದವಾದ ಸೊನಾಜಾ ಗಿಲಕಿ ಹಿಡಿದು ಆಡಿಸುತ ಗಾಯವಾದ ಬರಿಗಾಲು ನೆಲಕ್ಕೆ ಜೋರಾಗಿ ಅಪ್ಪಳಿಸುತ್ತ ಕುಣಿಯುತಿದ್ದ. ಬಹಳ ಕಾಲದಿಂದ ಒಳಗೇ ಇಟ್ಟುಕೊಂಡಿದ್ದ ಕೋಪವನ್ನೆಲ್ಲ ಹೊರಕ್ಕೆ ಹಾಕುವ ಹಾಗೆ ಆವೇಶದಿಂದ ಕುಣಿಯುತಿದ್ದನೋ ಅಥವಾ ಇನ್ನೊಂದಿಷ್ಟು ಹೆಚ್ಚು ಕಾಲ ಬದುಕುವುದಕ್ಕೆ ಕೊನೆಯ ಪ್ರಯತ್ನವಾಗಿ ಹರಕೆ ಸಲ್ಲಿಸುತಿದ್ದನೋ.

ಪ್ರತಿವರ್ಷವೂ ತೋಲಿಮಾನ್‍ನಲ್ಲಿ ನಡೆಯುತಿದ್ದ ನಮ್ಮ ಪ್ರಭುವಿನ ಒಂಬತ್ತು ದಿನಗಳ ಹಬ್ಬಕ್ಕೆ ಹೋಗಿ ಅವನು ಕುಣಿಯುತ್ತ ಇದ್ದದ್ದನ್ನು ನೆನಪು ಮಾಡಿಕೊಂಡಿದ್ದರೂ ಇರಬಹುದು. ಆಗ ಅವನು ಮೈ ಮೂಳೆಗಳೆಲ್ಲ ಕಳಚಿ ಬೀಳುವ ಹಾಗೆ ಕುಣಿದರೂ ದಣಿಯುತ್ತಲೇ ಇರಲಿಲ್ಲ. ಅದನ್ನು ಜ್ಞಾಪಿಸಿಕೊಂಡು ಮೈಯಲಿದ್ದ ಕಸುವು ಮತ್ತೆ ಬರಲೆಂದು ಈಗ ಕುಣಿಯುತಿದ್ದನೇನೋ.

ನತಾಲಿಯ ಮತ್ತೆ ನಾನು ಅವನನ್ನು ಹಾಗೆ ಕಂಡದ್ದು ಒಂದೆರಡು ಕ್ಷಣ ಮಾತ್ರ. ಕೈಗಳನ್ನು ಮೇಲೆತ್ತಿ ಮೈಯನ್ನು ಧೊಪ್ಪನೆ ನೆಲಕ್ಕೆ ಕುಕ್ಕಿದ್ದು ನೋಡಿದೆವು. ರಕ್ತ ಮೆತ್ತಿದ್ದ ಕೈಯಲ್ಲಿ ಸೊನಾಜಾ ಗಿಲಕಿ ಇನ್ನೂ ಹಾಗೇ ಇತ್ತು. ಕುಣಿಯುತಿದ್ದ ಜನರ ಕಾಲ್ತುಳಿತಕ್ಕೆ ಸಿಕ್ಕದಿರಲೆಂದು ಅವನನ್ನು ಹೊರಕ್ಕೆ ಎಳೆದು ತಂದೆವು. ತಮ್ಮ ನಡುವೆ ಏನೋ ಬಿದ್ದಿದೆ ಅನ್ನುವುದನ್ನು ಗಮನಿಸದೆ ಹಾರಿ ಹಾರಿ ತುಳಿತುಳಿದು ಕುಣಿಯುತಿದ್ದ ಕಾಲುಗಳ ಆವೇಶದಿಂದ ಅವನನ್ನು ಕಾಪಾಡಿದೆವು.

ಹೆಳವನ ಹಾಗೆ ತಡವರಿಸುತ್ತ ಹೆಜ್ಜೆ ಹಾಕುತಿದ್ದವನನ್ನು ಕರೆದುಕೊಂಡು ಚರ್ಚಿನೊಳಕ್ಕೆ ಹೋದೆವು. ತಲ್ಪಾದ ಕನ್ಯೆ ಮೇರಿಯ ಬಂಗಾರದ ಪುಟ್ಟ ವಿಗ್ರಹದ ಎದುರಿನಲ್ಲಿ ತನ್ನ ಪಕ್ಕದಲ್ಲೇ ಅವನು ಮೊಳಕಾಲೂರಿ ಪ್ರಾರ್ಥನೆಗೆ ಕೂರುವಂತೆ ನೋಡಿಕೊಂಡಳು ನತಾಲಿಯಾ. ತಾಲಿನೋ ಪ್ರಾರ್ಥನೆ ಶುರುಮಾಡಿದ. ಕಣ್ಣಲ್ಲಿ ದೊಡ್ಡ ಕಂಬನಿ ಮೂಡಿತು. ಅವನೊಳಗಿಂದ ಉಕ್ಕಿ ಬಂದು ನತಾಲಿಯಾ ಅವನ ಕೈಯಲ್ಲಿರಿಸಿದ್ದ ಮೇಣದ ಬತ್ತಿಯನ್ನು ಆರಿಸಿಬಿಟ್ಟಿತು. ಅವನಿಗೆ ಗೊತ್ತಾಗಲಿಲ್ಲ. ಸುತ್ತಲೂ ಉರಿಯುತಿದ್ದ ಅಷ್ಟೊಂದು ಮೇಣದ ಬತ್ತಿಗಳ ಪ್ರಖರ ಬೆಳಕು ಅವನ ಹತ್ತಿರದಲ್ಲೇ ಏನಾಗುತ್ತಿದೆ ಅನ್ನುವುದನ್ನು ಕಾಣುವುದಕ್ಕೆ ಅಡ್ಡಿಯಾಗಿತ್ತು. ಆರಿದ ಮೇಣದ ಬತ್ತಿ ಹಿಡಿದೇ ಪ್ರಾರ್ಥನೆ ಮಾಡಿದ. ತನ್ನ ಪಾರ್ಥನೆ ತನಗೇ ಕೇಳಲೆಂದು ಪ್ರಾರ್ಥನೆಯನ್ನು ಕಿರುಚುತಿದ್ದ.

ಫಲವಿಲ್ಲ. ಸತ್ತು ಹೋದ.

‘…. ನೋವು ತುಂಬಿದ ಯಾಚನೆಯೊಂದು ನಮ್ಮ ಹೃದಯಗಳಿಂದ ಹೊಮ್ಮಿ ಅವಳಿಗೆ ಅರ್ಪಿತವಾಗುತ್ತದೆ. ಶುಭದ ಭರವಸೆ ತುಂಬಿದ ಅಳಲು ಹೊರಹೊಮ್ತುತ್ತದೆ. ಅಳಲು ಕೇಳದಷ್ಟು ಕಿವುಡಳಲ್ಲ, ಕಂಬನಿ ಕಾಣದಷ್ಟು, ಕುರುಡಳಲ್ಲ ಮರುಕದ ಅಮ್ಮ. ತನ್ನ ಅನುಗ್ರಹವನ್ನು ಸ್ವೀಕರಿಸಲು ನಮ್ಮೆದೆ ಮಿದುವಾಗಿ ಶುದ್ಧವಾಗಿ ಇರಬೇಕು. ಅದಕ್ಕೇ ಅವಳು ನಮ್ಮ ಕಳಂಕಗಳನ್ನೆಲ್ಲ ತೊಳೆದುಬಿಡುತ್ತಾಳೆ. ಕನ್ಯೆ ಮೇರಿ, ನಮ್ಮ ಮಾತೆ ನಮ್ಮ ಯಾವ ಪಾಪವನ್ನೂ ತಿಳಿಯಲು ಬಯಸಳು. ನಾವು ಮಾಡುವ ಪಾಪಕ್ಕೆಲ್ಲ ತಾನೇ ಹೊಣೆ ಎಂದು ಭಾವಿಸುತ್ತಾಳೆ ಅವಳು. ಬದುಕು ನಮಗೆ ಕೆಡುಕು ಮಾಡದಿರಲೆಂದು ನಮ್ಮನ್ನು ತನ್ನ ತೋಳಿನಲ್ಲೆತ್ತಿಕೊಳ್ಳುವ ಅಮ್ಮ ಇಲ್ಲೇ ನಮ್ಮ ಪಕ್ಕದಲ್ಲೇ ಇದ್ದಾಳೆ. ನಮ್ಮ ದಣಿವಿಗೆ, ರೋಗ ಪೀಡಿತ ಆತ್ಮಕ್ಕೆ, ಮುಳ್ಳು ಚುಚ್ಚಿ ಗಾಯವಾಗಿ ರಕ್ತ ಸೋರುತ್ತ ಮಣಿದಿರುವ ದೇಹಕ್ಕೆ ಸ್ವಾಂತನ ನೀಡುತ್ತಾಳೆ. ಪ್ರತಿ ದಿನವೂ ನಮ್ಮ ನಿಷ್ಠೆ ಬೆಳೆಯುತ್ತದೆ, ನಾವು ಮಾಡುವ ತ್ಯಾಗದಿಂದ ಬಲಪಡೆಯುತ್ತದೆ ಅನ್ನುವುದು ಮೇರಿ ಮಾತೆಗೆ ತಿಳಿದಿದೆ…’

ವೇದಿಕೆಯ ಮೇಲೆ ನಿಂತ ಪಾದ್ರಿ ಹೇಳುತಿದ್ದ. ಅವನು ಮಾತು ನಿಲ್ಲಿಸಿದ ತಕ್ಷಣ, ಒಮ್ಮೆಲೇ ಅಲ್ಲಿದ್ದ ಎಲ್ಲರಿಂದಲೂ ಪ್ರಾರ್ಥನೆಯ ಆಸ್ಫೋಟವಾಯಿತು-ಹೊಗೆಗೆ ಅಂಜಿದ ಜೇನುಗಳ ಗುಂಪಿನಿಂದ ಝೇಂಕಾರ ಹೊಮ್ಮುವ ಹಾಗೆ.

ಪಾದ್ರಿ ಹೇಳಿದ ಯಾವ ಮಾತೂ ತಾನಿಲೋ ಕೇಳಿಸಿಕೊಂಡಿರಲಿಲ್ಲ. ನಿಶ್ಚಲವಾಗಿದ್ದ. ತಲೆ ಮುಂದೆ ಬಾಗಿ ಮೊಳಕಾಲಿಗೆ ತಾಕುತಿತ್ತು. ನತಾಲಿಯ ಅವನ ಭುಜ ಹಿಡಿದು ಅಲುಗಾಡಿಸಿದಳು. ಅವನು ಏಳಲಿಲ್ಲ. ಸತ್ತು ಹೋಗಿದ್ದ.

ಹೊರಗೆ ಕುಣಿತದ ಸದ್ದು. ಡೋಲು, ತುತೂರಿ, ಗಂಟೆಗಳ ನಾದ. ಆಗ ನನ್ನೊಳಗೆ ದುಃಖ ಉಮ್ಮಳಿಸಿತು. ಅಷ್ಟೊಂದು ಜೀವಿಗಳು, ಅಲ್ಲೇ ನಗುತ್ತ ನಿಂತಿರುವ ಮಾತೆ ಮೇರಿಯ ಕಣ್ಣಿಗೆ ಅಡ್ಡವಾಗಿ, ಹೊರೆಯಂತೆ ಬಿದ್ದಿರುವ ತಾನಿಲೋ. ದಃಖವಾಯಿತು.

ಅವನು ಸಾಯಲೆಂದೇ ಕರಕೊಂಡು ಹೋಗಿದ್ದೆವು. ಅದನ್ನು ಮರೆಯಲಾರೆ.
* * *

ಈಗ ನಾವಿಬ್ಬರೂ ಇಲ್ಲಿದ್ದೇವೆ. ಝೆನ್‍ಸೋಂಟ್ಲಾದಲ್ಲಿ ನಮ್ಮ ಜೊತೆಯಲ್ಲಿ ಅವನಿಲ್ಲದೆ ವಾಪಸ್ಸು ಬಂದೆವು. ನತಾಲಿಯಾಳ ಅಮ್ಮ ನನ್ನನ್ನು ಏನೂ ಕೇಳಲಿಲ್ಲ. ನನ್ನು ಅಣ್ಣ ತಾನಿಲೋಗೆ ಏನು ಮಾಡಿದೆ ಅಂತಲೂ ಕೇಳಲಿಲ್ಲ. ನತಾಲಿಯಾ ಅಮ್ಮನ ಭುಜದ ಮೇಲೆ ತಲೆ ಇಟ್ಟು ಅತ್ತಳು. ಅಳು ಎಲ್ಲ ಕಥೆಯನ್ನೂ ಹೇಳಿತ್ತು.

ನಾವು ಎಲ್ಲಿಗೂ ಹೋಗಿ ಮುಟ್ಟಲಿಲ್ಲ ಅನ್ನಿಸುವುದಕ್ಕೆ ಶುರುವಾಗಿದೆ. ಒಂದಿಷ್ಟು ವಿಶ್ರಾಂತಿಗೆಂದು ಇಲ್ಲಿಗೆ ಬಂದಿದ್ದೇವೆ, ಮತ್ತೆ ನಡೆಯುವುದು ಶುರುಮಾಡುತ್ತೇವೆ ಅನ್ನಿಸುತ್ತದೆ. ಎಲ್ಲಿಗೆ ಹೋಗಬೇಕೋ, ಗೊತ್ತಿಲ್ಲ. ಹೋಗಲೇ ಬೇಕು ಅನ್ನುವುದಂತೂ ನಿಶ್ಚಯ. ಇಲ್ಲಿ ನಾವು ದುಃಖಕ್ಕೆ ಸಮೀಪವಾಗಿದ್ದೇವೆ, ತಾನಿಲೋನ ನೆನಪಿಗೆ ಹತ್ತಿರವಾಗಿದ್ದೇವೆ.

ನಮ್ಮಿಬ್ಬರಲ್ಲೂ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಭಯವೂ ಹುಟ್ಟೀತು. ನಾವು ತಲ್ಪಾ ಬಿಟ್ಟು ಹೊರಟಮೇಲೆ ಒಬ್ಬರಿಗೊಬ್ಬರು ಮಾತೇ ಆಡಿಲ್ಲ ಅನ್ನುವುದರ ಅರ್ಥ ಇದೇ ಇರಬೇಕು. ಈಚಲು ಚಾಪೆಯಲ್ಲಿ ಸುತ್ತಿಟ್ಟ ತಾನಿಲೋನ ಹೆಣಕ್ಕೆ ನಾವಿನ್ನೂ ಹತ್ತಿರದಲ್ಲೇ ಇದ್ದೇವೆ. ಚಾಪೆಯ ಒಳಗೆ ಹೊರಗೆ ಗುಂಯ್ಗುಡುವ ನೀಲಿ ನೊಣಗಳ ರಾಶಿ. ಸತವನ ಬಾಯಿಂದಲೇ ಗೊರಕೆಯ ಸದ್ದು ಬರುತ್ತಿದೆಯೋ ಅನ್ನಿಸುವಂಥ ಶಬ್ಬ ಮಾಡುತ್ತಿವೆ. ನತಾಲಿಯಾ ಎಷ್ಟು ಕಷ್ಪಪಟ್ಟರೂ, ನಾನು ನತಾಲಿಯಾ ಇಬ್ಬರೂ ಎಷ್ಟು ಕಷ್ಟಪಟ್ಟರು ಮುಚ್ಚಲಾಗದಿದ್ದ, ಇನ್ನೂ ಉಸಿರಾಡಲು ಬಯಸುತಿದ್ದ, ಆದರೆ ಉಸಿರು ಸಿಗದಿದ್ದ ಬಾಯಿ. ತಾನಿಲೋಗೆ ಇನ್ನು ನೋವಿಲ್ಲ. ಆದರೂ ಅವನು ನೋವುಂಡವನು. ಕೈ ಕಾಲು ತಿರುಚಿಕೊಂಡು ಕಣ್ಣು ಅಗಲ ತೆರೆದುಕೊಂಡು ತನ್ನ ಸಾವು ತಾನೇ ಕಾಣುತ್ತಿರುವವನ ಹಾಗೆ. ಮತ್ತೆ ಇಗೋ ಇಲ್ಲಿ ಗಾಯದಿಂದ ಹಳದೀ ಕೀವು ಒಸರುತ್ತಿದೆ, ನಮ್ಮ ಮುಖಕ್ಕೆ ಹಾರುತ್ತಿದೆ, ನಮ್ಮ ಬಾಯಿಗೆ ಬೀಳುತ್ತಿದೆ, ಕಹಿ ಜೇನಿನ ರುಚಿಯದ್ದು ಅದು, ನಾವು ಒಮ್ಮೊಮ್ಮೆ ಉಸಿರೆಳದುಕೊಂಡಾಗಲೂ ನಮ್ಮ ರಕ್ತದಲ್ಲೇ ಬೆರೆತು ಹೋಗುತ್ತಿದೆ ಅನ್ನಿಸುತ್ತದೆ.

ಇಲ್ಲಿದ್ದರೆ ಇವೇ ಮತ್ತೆ ಮತ್ತೆ ನಮ್ಮ ನೆನಪಿಗೆ ಬರುತ್ತಿರುತ್ತದೆ. ತಲ್ಪಾದ ಸ್ಮಶಾನದಲ್ಲಿ ನಾವು ಮಣ್ಣು ಮಾಡಿದ ತಾನಿಲೋ ನಮ್ಮ ನೆನಪಿನಲ್ಲೇ ಇರುತ್ತಾನೆ. ನಾಯಿ ನರಿಗಳು ಬಂದು ಅವನ ಹೆಣ ತಿನ್ನದಿರಲೆಂದು ಕಲ್ಲು ಮಣ್ಣು ರಾಶಿ ಹಾಕಿ ನತಾಲಿಯಾ ಮತ್ತೆ ನಾನು ಮುಚ್ಚಿ ಹಾಕಿದ ತಾನಿಲೋ ನೆನಪಿಗೆ ಬರುತ್ತಲೇ ಇರುತ್ತಾನೆ.
*****

ಸ್ಪಾನಿಷ್ ಮೂಲ: ಹ್ವಾನ್ ರುಲ್ಫೋ Juan Rulfo
ಕಥೆ ಹೆಸರು : Talpa

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲೋಕ-ಕಲ್ಯಾಣ
Next post ಜಿಜ್ಞಾಸೆ

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…