ನಾವು ಬಡವರೆಂದು

ನಾವು ಬಡವರೆಂದು

ಕೆಟ್ಟದ್ದು ಹದಗೆಡುತ್ತಿದೆ ಇಲ್ಲಿ. ಹೋದವಾರ ಅತ್ತೆ ಜಸಿಂಟಾ ತೀರಿಕೊಂಡಳು. ಮತ್ತೆ ಶನಿವಾರ, ಅವಳನ್ನು ಮಣ್ಣುಮಾಡಿ ಬಂದು ದುಃಖ ಮಸುಕಾಗುತಿದ್ದಾಗ ಮಳೆ ಹುಚ್ಚು ಹಿಡಿದ ಹಾಗೆ ಸುರಿಯಿತು. ನಮ್ಮಪ್ಪನಿಗೆ ತಬ್ಬಿಬ್ಬು. ಬಾರ್‍ಲಿ ಬೆಳೆಯೆಲ್ಲ ಕೊಯ್ದು ಚಪ್ಪರದಲ್ಲಿ ಒಣಗಿ ಹಾಕಿದ್ದ. ದಿಢೀರನೆ ಸುರಿದ ಮಳೆ -ಒಂದೇ ಹಿಡಿ ಬಾರ್‍ಲಿಯನ್ನೂ ಎತ್ತಿಟ್ಟುಕೊಳ್ಳುವುದಕ್ಕೆ ಆಗದ ಹಾಗೆ ಅಲೆ ಅಲೆಯಾಗಿ ಬರುತ್ತಲೇ ಇತ್ತು. ಆ ಹೂತ್ತಿನಲ್ಲಿ ಮನೆಯಲ್ಲಿದ್ದವರು ಚಪ್ಪರದ ಕೆಳಗೆ ಒಬ್ಬರಿಗೊಬ್ಬರು ಒತ್ತಿ ನಿಂತು, ಆಕಾಶದಿಂದ ಬೀಳುವ ತಣ್ಣನೆ ಮಳೆ ನೀರು ಆಗ ತಾನೇ ನಾವು ಕೊಯ್ಲು ಮಾಡಿದ್ದ ಹಳದೀ ಬಾರ್‍ಲಿಯನ್ನು ಸುಟ್ಟು ಹಾಕುವುದನ್ನು ನೋಡುತ್ತ ನಿಲ್ಲವುದು ಬಿಟ್ಟು ಇನ್ನೇನೂ ಮಾಡಲು ಆಗಲಿಲ್ಲ.

ಮತ್ತೆ ನಿನ್ನೆ ತಾನೇ, ಅಕ್ಕ ತಾಚಾಳ ಹನ್ನೆರಡನೆಯ ಹುಟ್ಟು ಹಬ್ಬ, ನಮ್ಮಪ್ಪ ಅವಳಿಗೆ ಕೊಟ್ಟಿದ್ದ ಹಸು ಹೊಳಯಲ್ಲಿ ಕೊಚ್ಚಿ ಹೋಗಿತ್ತು.

ಮೂರು ದಿನದ ಹಿಂದೆ, ನಡು ರಾತ್ರಿ ಹೊತ್ತಲ್ಲಿ ಹೊಳ ಏರುವುದಕ್ಕೆ ಶುರುವಾಗಿತ್ತು. ನನಗೆ ಜೋರು ನಿದ್ದೆ. ಗುಡುಗಿನಂಥ ಶಬ್ದಕ್ಕೆ ಎಚ್ಚರವಾಯಿತು. ಚಾವಣಿಯೇ ತಲೆಯ ಮೇಲೆ ಕುಸಿಯಿತೋ ಅನ್ನುವ ಹಾಗೆ ಹೊದಿಕೆ ಕೈಯಲ್ಲಿ ಹಿಡಿದುಕೊಂಡೇ ಕುಪ್ಪಳಿಸಿ ಎದ್ದು ನಿಂತೆ. ಹೊಳೆಯ ನೀರಿನ ಶಬ್ದ ಅನ್ನುವುದು ಗೊತ್ತಾಗಿ, ಆ ಶಬ್ದ ಲಾಲಿ ಹಾಡಿದ ಹಾಗೆ ಅನ್ನಿಸಿ ಮತ್ತೆ ನಿದ್ದೆ ಹೋದೆ.

ಎದ್ದಾಗ ಬೆಳಗಿನ ಆಕಾಶದಲ್ಲಿ ದೊಡ್ಡ ದೊಡ್ಡ ಕಪ್ಪು ಮೋಡ, ಮಳೆ ನಿಲ್ಲದೆ ಒಂದೇ ಸಮ ಸುರಿಯುತ್ತಲೇ ಇದೆ ಅನ್ನಿಸಿತು. ಹೊಳೆಯ ಶಬ್ಬ ಹೆಚ್ಚಾಗುತಿತ್ತು, ಜೋರಾಗುತಿತ್ತು, ಹತಿರ ಬರುತಿತ್ತು. ಬೆಂಕಿಯ ವಾಸನೆ ದೂರದಿಂದಲೇ ಬರುವ ಹಾಗೆ ಉರುಳುವ ನೀರಿನ ಕೊಳೆತ ವಾಸನೆ ಇಲ್ಲಿಗೂ ಬರುತ್ತಿತ್ತು.

ಹೊರಗೆ ಹೋಗಿ ನೋಡುವಷ್ಟರಲ್ಲಿ ಹೊಳೆಯು ದಡವನ್ನು ಮೀರಿ ನಿಧಾನವಾಗಿ ನಮ್ಮೂರಿನ ಬೀದಿಗೆ ಹತ್ತಿರ ಬರುತಿತ್ತು. ಊರಿನ ಜನ ಲಾ ತಂಬೂರ ಅಂತ ಕರೆಯುತ್ತಾರಲ್ಲ ಆ ಹಂಗಸಿನ ಮನೆಗೆ ಮಗ್ಗುತಿತ್ತು. ಕೊಟ್ಟಿಗೆಗೆ ನುಗ್ಗಿ, ಚೆಲ್ಲಾಡಿಕೊಂಡು ಕೊಟ್ಟಿಗೆ ಬಾಗಿಲಿಂದ ಪವಾಹದ ಹಾಗೆ ಹೊರಕ್ಕೆ ಬರುತಿತ್ತು. ಆಗಲೇ ಹೊಳೆಯ ಭಾಗವೇ ಆಗಿದ್ದ ಮನೆಗೂ ಹೊರಕ್ಕೂ ಓಡಾಡುತ್ತ ತಂಬೂರ ಕೋಳಿ, ಹುಂಜಗಳನ್ನೆಲ್ಲ ಬೀದಿಗೆ ಎಸೆಯುತಿದ್ದಳು- ಅವೆಲ್ಲ ಎಲ್ಲಾದರೂ ಹೋಗಿ, ಹೊಳೆ ನೀರು ಬರದಿರುವ ಕಡೆ ಜಾಗ ನೋಡಿಕೊಳ್ಳಲಿ ಅಂತ.

ಅಗೋ ಅಲ್ಲಿ ರಸ್ತೆಯ ತಿರುವಿನಲ್ಲಿ, ಹೊಳೆಯ ನೀರು ಜಸಿಂಟಾ ಅತ್ತೆಯ ಚಪ್ಪರದ ಪಕ್ಕದಲ್ಲಿದ್ದ ಹುಣಸೆ ಮರವನ್ನು ಕೊಚ್ಚಿಕೊಂಡು ಹೋಗಿತ್ತು. ಯಾವಾಗಲೋ ಯಾರಿಗೆ ಗೊತ್ತು. ಈಗ ಅಲ್ಲಿ ಹುಣಸೆ ಮರ ಇರಲಿಲ್ಲ. ಊರಲ್ಲಿ ಇದ್ದಿದ್ದು ಅದೊಂದೇ ಹುಣಸೆ. ಅದಕ್ಕೇ ಇಷ್ಟು ಪ್ರವಾಹ ಬಂದಿರಲಿಲ್ಲ ಅನ್ನುತಿದ್ದರು ಜನ.

ಮಧ್ಯಾಹ್ನ ಅಕ್ಕ ಮತ್ತೆ ನಾನು ಇಬ್ಬರೂ ಪ್ರವಾಹದ ನೀರು ನೋಡುವುದಕ್ಕೆ ಹೋದೆವು. ಜಾಸ್ತಿಯಾಗುತಿತ್ತು. ಕಪ್ಪಾಗುತಿತ್ತು. ಸೇತುವೆ ಇರಬೇಕಾಗಿದ್ದ ಜಾಗದಲ್ಲಿ ಮೀರಿ ಹರಿದು ನುಗ್ಗುತಿತ್ತು. ಒಂದಿಷ್ಟೂ ಬೇಜಾರಾಗದೆ ಗಂಟೆಗಟ್ಟಲೆ ಅಲ್ಲೇ ನಿಂತಿದ್ದೆವು. ಜನ ಏನೇನು ಅನ್ನುತ್ತಿದ್ದಾರೋ ಕೇಳಬೇಕೆಂದು ಹೊಳೆಯ ಕೊಳ್ಳದಿಂದ ಮೇಲಕ್ಕೆ ಏರಿ ಬಂದೆವು. ಹೊಳೆಯ ಹತ್ತಿರ ಎಷ್ಟು ಶಬ್ದ ಇತ್ತೆಂದರೆ ಜನ ಬಾಯಿ ತೆರೆಯುವುದು, ಮುಚ್ಚುವುದು ಕಾಣುತಿತ್ತೇ ಹೊರತು ಒಂದೂ ಮಾತು ಮಾತ್ರ ಕೇಳುತ್ತಿರಲಿಲ್ಲ. ಅದಕ್ಕೇ ಮೇಲಕ್ಕೇರಿ ಬಂದು ಜನ ಹೊಳೆಯನ್ನು ನೋಡುತ್ತ ಎಷ್ಟು ಲಾಸಾಯಿತು ಅನ್ನುವ ಲೆಕ್ಕ ಹಾಕುತಿದ್ದಲ್ಲಿಗೆ ಬಂದೆವು. ಆಗ ಗೊತ್ತಾಯಿತು-ಅಕ್ಕ ತಾಚಾಗೆ ಕೊಟ್ಟಿದ ಸರ್ಪೆಂಟಿನಾ ಅನ್ನುವ ಹಸುವನ್ನು ಹೊಳೆ ಕೊಚ್ಚಿಕೊಂಡು ಹೋಗಿತ್ತು. ಅಕ್ಕನ ಹುಟ್ಟು ಹಬ್ಬಕ್ಕೆ ಅಪ್ಪ ಆ ಹಸು ಕೊಟ್ಟಿದ್ದ. ಅದಕ್ಕೆ ಒಂದು ಕಿವಿ ಬೆಳ್ಳಗೆ ಇನ್ನೊಂದು ಕಿವಿ ಕೆಂಪಗೆ ಇತ್ತು, ದೂಡ್ಡ ಕಣ್ಣಿದ್ದವು.

ದಿನಾ ತಾನು ನೋಡುತಿದ್ದ ಹೊಳೆ ಇದಲ್ಲ ಅನ್ನುವುದು ಗೊತ್ತಿದ್ದರೂ ಅದು ಯಾಕೆ ಹೊಳೆ ದಾಟುವುದಕ್ಕೆ ಹೋಯಿತೋ ಗೊತ್ತಿಲ್ಲ. ಅದೇನೂ ಪೆದ್ದ ಹಸುವಲ್ಲ. ಹೀಗೆ ಹೊಳೆಗೆ ಸಿಕ್ಕಿ ಸತ್ತಿತು ಅಂದರೆ ಅದು ನಿದ್ರೆಯಲ್ಲಿ ನಡೆದುಕೊಂಡು ಬಂದಿರಬೇಕು. ಕೊಟ್ಟಿಗೆಯ ಬಾಗಿಲು ತೆಗೆಯಲು ಹೋದಾಗ ಎಷ್ಟೋ ಸಾರಿ ನಾನೇ ಅದನ್ನು ಎಬ್ಬಿಸುತಿದ್ದೆ. ಇಲ್ಲದಿದ್ದರೆ ಅದು ಇಡೀ ದಿನ ಹಾಗೇ ಕಣ್ಣು ಮುಚ್ಚಿಕೊಂಡು, ನಿಶ್ಚಲವಾಗಿ ನಿಂತು, ನಿದ್ರೆ ಮಾಡುವ ಹಸುಗಳ ಹಾಗೆ ಉಸಿರುಗರೆಯುತ್ತ ಇದ್ದುಬಿಡುತಿತ್ತು.

ಏನಾಗಿತ್ತೋ. ನಿದ್ರೆ ಮಾಡುತಿತ್ತೇನೋ. ಅಥವಾ ನೀರು ಬಂದು ಪಕ್ಕೆಗೆ ತಾಕಿದಾಗ ತಟ್ಟನೆ ಎಚರವಾಗಿರಬೇಕು. ಬೆದರಿ ವಾಪಸ್ಸು ಹೋಗಲು ತಿರುಗಿರಬೇಕು. ಕೆಸರುಮಯವಾದ ಕಪ್ಪು ನೀರಿನ ಪ್ರವಾಹದಲ್ಲಿ ಸಿಕ್ಕಿಬಿದ್ದಿರಬೇಕು. ಮೊರೆಯಿಟ್ಟು ಒದರಿರಬೇಕು. ಹೇಗೆ ಒದರಿತೋ, ದೇವರಿಗೇ ಗೊತ್ತು.

ನೀರಿನಲ್ಲಿ ಹಸು ಕೊಚ್ಚಿಕೊಂಡು ಹೋಗುವುದನ್ನು ನೋಡಿದ್ದವನನ್ನು ‘ಹಸುವಿನ ಜೊತೆಗೆ ಕರುವೂ ಇತ್ತಾ,’ ಅಂತ ಕೇಳಿದೆ. ಅವನು ನಾನು ನೋಡಲಿಲ್ಲ ಅಂದ. ಇಗೋ ನಾನಿರುವ ಜಾಗಕ್ಕೆ ಸಮೀಪವಾಗಿ ಹಸು ಗಾಳಿಯಲ್ಲಿ ಕಾಲು ಮೇಲೆತ್ತಿಕೊಂಡು ತೇಲಿ ಹೋಗುತಿದ್ದದ್ದು ನೋಡಿದೆ, ಆಮೇಲೆ ಅದು ಪಕ್ಕಕ್ಕೆ ಉರುಳಿಕೊಂಡು ಕೊಂಬಾಗಲೀ ಕಾಲಾಗಲೀ ಕಾಣಲೇ ಇಲ್ಲ ಅಂದ. ಎಷ್ಟೊಂದು ಮರದ ಬೊಡ್ಡೆಗಳು ಬೇರು ಸಮೇತ ತೇಲಿಕೊಂಡು ಬರುತಿದ್ದವು. ಆ ಮನುಷ್ಯ ಅವನ್ನೆಲ್ಲ ಹಿಡಿದು ಮನೆಗೆ ಸೌದೆ ಒಟ್ಟು ಮಾಡುವುದರಲ್ಲಿ ಮುಳುಗಿದ್ದ. ಹಾಗಾಗಿ ನೀರಿನಲ್ಲಿ ಕೊಚ್ಚಿ ಹೋದದ್ದು ಪ್ರಾಣಿಯೋ ಮರದ ಬೊಡ್ಡೆಯೋ ಸರಿಯಾಗಿ ನೋಡಲು ಆಗುತ್ತಿರಲಿಲ್ಲ.

ಕರು ಜೀವಂತವಾಗಿದೆಯೋ ಅಮ್ಮನ ಜೊತೆ ಹೊಳೆಯಲ್ಲಿ ತೇಲಿ ಹೋಯಿತೋ ನಮಗೆ ಗೊತಾಗಲಿಲ್ಲ. ಕರುವೂ ಜೊತೆಯಲ್ಲಿತ್ತಾದರೆ ದೇವರೇ ಕಾಪಾಡಬೇಕು, ಹಸುವನ್ನೂ ಕರುವನ್ನೂ.

ಅಕ್ಕ ತಾಚಾಳದ್ದು ಅಂತ ಏನೂ ಇಲ್ಲವಾಗಿ ಇನ್ನು ಮನೆಯಲ್ಲಿ ಆಗುವುದೆಲ್ಲ ಪ್ರಬ್ಲಮ್ಮೇ. ಮೊದಲನೆಯದಾಗಿ ಅಕ್ಕನಿಗೆಂದು ಆ ಹಸುವನ್ನು, ಅದು ಕರುವಾಗಿದ್ದಾಗಿನಿಂದಲೂ ಸಾಕುವುದಕ್ಕೆ ಅಪ್ಪ ತುಂಬ ಕಷ್ಟಪಟ್ಟಿದ್ದ. ನನ್ನ ಉಳಿದ ಇಬ್ಬರು ಅಕ್ಕಂದಿರ ಹಾಗೆ ಇವಳೂ ಮನೆ ಬಿಟ್ಟು ಓಡಿ ಹೋಗಿ ಸೂಳೆಯಾಗದಿರಲಿ, ಅವಳದು ಅನ್ನುವ ಆಸ್ತಿಯಾಗಿ ಹಸು ಇರಲಿ ಅನ್ನುವುದು ಅಪ್ಪನ ಆಸೆ.

ನಾವು ಬಡವರು, ನಮ್ಮ ಸ್ಥಿತಿ ಸುದಾರಿಸುವುದಕ್ಕೆ ಸಾಧ್ಯವೇ ಇಲ್ಲ, ಅದಕ್ಕೇ ಅವರಿಬ್ಬರೂ ತಪ್ಪು ದಾರಿ ಹಿಡಿದರು ಅಂತ ನಮ್ಮಪ್ಪ ಹೇಳುತ್ತಾನೆ. ಚಿಕ್ಕ ಮಕ್ಕಳಾಗಿದ್ದಾಗಿನಿಂದಲೂ ಅವರು ಅಪ್ಪನಿಗೆ ಎದುರುತ್ತರ ಕೊಡುತಿದ್ದರಂತೆ. ದೊಡ್ಡವರಾಗುತಿದ್ದ ಹಾಗೆ ಕೆಟ್ಟ ಸಹವಾಸಕ್ಕೆ ಬಿದ್ದು ಎಲ್ಲಾ ಥರದ ಕೆಟ್ಟ ಕೆಲಸ ಕಲಿತರಂತೆ. ರಾತ್ರಿ ಯಾವ ಹೊತಿನಲ್ಲಿ ಗಂಡಸರು ಸಿಳ್ಳೆ ಹಾಕಿದರೂ ಅದರ ಅರ್ಥ ಅವರಿಗೆ ಗೊತ್ತಾಗುತಿತ್ತು. ಬೆಳಗಿನ ಜಾವದ ತನಕ ಹೊರಗೇ ಇರುತಿದ್ದರು. ಒಂದೊಂದು ಸಾರಿ, ಅವರು ಮನೆಗೆ ನೀರು ತರುವುದಕ್ಕೆ ಹೊಳೆಗೆ ಹೋಗಿದ್ದಾರೆ ಅಂದುಕೊಂಡಿದ್ದಾಗ ಕೊಟ್ಟಿಗೆಯಲ್ಲಿ ನೆಲದ ಮೇಲೆ ಬಿದ್ದು ಹೊರಳುತಿದ್ದರು. ಒಬ್ಬೊಬ್ಬರ ಮೇಲೂ ಒಬ್ಬೊಬ್ಬ ಗಂಡಸು ಇರುತಿದ್ದ.

ಕೊನೆಗೆ ನಮ್ಮಪ್ಪ ಅವರನ್ನು ಮನೆಯಿಂದ ಹೊರಗೆ ಹಾಕಿದ. ತಡೆಯುವಷ್ಟೂ ತಡಕೊಂಡ, ಇನ್ನು ಆಗದು ಅನ್ನಿಸಿದಾಗ ಹೊರಕ್ಕೆ ದಬ್ಬಿದ. ಅಯುಲ್ತಾಕ್ಕೋ ಇನ್ಯಾವುದೋ ಊರಿಗೆ ಹೋದರಂತೆ. ಅಲ್ಲಿ ಅವರು ಈಗ ಸೂಳೆಯರು.

ತಾಚಾ ಕೂಡ ತನ್ನ ಇಬ್ಬರು ಅಕ್ಕಂದಿರ ಹಾಗೆ ಆಗುತ್ತಾಳೆ ಅನ್ನುವ ಹೆದರಿಕೆ ಅಪ್ಪನಿಗೆ. ಹಸು ಇಲ್ಲದೆ ಬಡವಳಾದೆ. ಇನ್ನೂ ಬೆಳೆಯುತ್ತಿರುವ ಹುಡುಗಿ, ತಾನದೊಡ್ಡವಳಾದ ಮೇಲೆ ಸಭ್ಯ ಗಂಡಸನ್ನ ಮದುವೆ ಆಗುವುದಕ್ಕೆ ಕೊಡುವ ವರದಕ್ಷಿಣೆ ಇಲ್ಲವಾಯಿತು ಅಂದುಕೂಳ್ಳುತ್ತಾಳೋ ಅನ್ನುವ ಭಯ ಅಪ್ಪನಿಗೆ. ಹಾಗಾಗುವುದು ಇನ್ನು ಕಷ್ಟವೇ. ಹಸು ಇದ್ದಾಗ ಅದು ಬೇರೆ ಮಾತು. ಹಸು ಸಿಗುತ್ತದೆ ಅನುವುದಕ್ಕಾದರೂ ಯಾರಾದರೂ ಒಳ್ಳೆಯವರು ಅವಳನ್ನ ಮದುವೆಯಾಗುವ ಧೈರ್ಯ ಮಾಡುತಿದ್ದರು.

ಕರು ಇನ್ನೂ ಬದುಕಿರಬಹುದು ಅನ್ನುವೊಂದೇ ಆಸೆ ಈಗ. ತನ್ನಮ್ಮನ ಹಿಂದೆ ಹೊಳೆ ದಾಟುವ ಮನಸ್ಸು ಅದಕ್ಕೆ ಬಂದಿಲ್ಲದೆ ಇರಬಹುದು. ಕರುವೂ ತನ್ನಮ್ಮನ ಹಿಂದೆಯೇ ಹೊಳೆಗೆ ಬಿದ್ದಿದ್ದರೆ ಅಕ್ಕ ತಾಚಾ ಸೂಳೆಯಾಗುವುದು ಇನ್ನು ಇಗೂ ಇಷ್ಟೇ ದೂರದ ಸಂಗತಿ. ಹಾಗಾಗಬಾರದು ಅನ್ನುವುದು ಅಮ್ಮನ ಆಸೆ.

ಇಂಥ ಹೆಣ್ಣುಮಕ್ಕಳನ್ನು ಕೊಟ್ಟು ದೇವರು ಯಾಕೆ ಶಿಕ್ಷೆಮಾಡುತಿದ್ದಾನೋ ಅನ್ನುವುದು ಅಮ್ಮನ ಆತಂಕ. ಅವಳ ಅಜ್ಜಿಯ ಕಾಲದಿಂದಲೂ ಅವರ ಮನೆಯಲ್ಲಿ ಕೆಟ್ಟವರು ಯಾರೂ ಇರಲೇ ಇಲ್ಲ. ಎಲ್ಲರೂ ದೇವರನ್ನ ನಂಬಿಕೊಂಡು ಭಯದಲ್ಲೇ ಬೆಳೆದವರು. ಹೇಳಿದ ಮಾತು ಕೇಳುತಿದ್ದವರು. ಯಾರಿಗೂ ಕೆಟದ್ದು ಮಾಡಿದವರಲ್ಲ. ಹಾಗಿರುವಾಗ ಈ ಇಬ್ಬರು ಹೆಣ್ಣು ಮಕ್ಕಳು ಯಾಕೆ ಕೆಟ್ಟರು? ಅಮ್ಮನಿಗೆ ಗೊತ್ತೇ ಆಗುತ್ತಿರಲಿಲ್ಲ. ಏನು ತಪ್ಪು ಮಾಡಿದೆ, ಏನು ಪಾಪ ಮಾಡಿದೆ ಅಂತ ಇಬ್ಬರು ಕೆಟ್ಟ ಹೆಣ್ಣು ಮಕ್ಕಳಾದರು ಎಂದು ತಲೆ ಕೆಡಿಸಿಕೊಳ್ಳುತಿದ್ದಳು. ಅವರ ಬಗ್ಗೆ ಯೋಚನೆ ಬಂದಾಗಲೆಲ್ಲ ಅಳುತ್ತಾಳೆ, ‘ದೇವರು ಕಾಪಾಡಲಿ ಅವರನ್ನ,’ ಅನ್ನುತ್ತಾಳೆ.

ಈಗ ಏನೂ ಮಾಡುವುದಕ್ಕೆ ಆಗಲ್ಲ ಅನ್ನುತ್ತಾನೆ ಅಪ್ಪ. ಇರುವ ಒಬ್ಬಳೇ ಮಗಳು ತಾಚಾಳದ್ದೇ ದೊಡ್ಡ ಜವಾಬ್ದಾರಿ ಅನ್ನುತ್ತಾನೆ. ಬೆಳೆಯುತ್ತಾ ಇದಾಳೆ. ಅಕ್ಕಂದಿರ ಹಾಗೇ ಮೊಲೆ ತೊಟ್ಟು ಚೂಪಾಗಿ, ಗಮನಸೆಳೆಯುವ ಹಾಗೆ ಕಾಣುವುದಕ್ಕೆ ಶುರುವಾಗಿದೆ.

‘ನನಗೆ ಗೊತ್ತು. ಅವಳು ಎಲ್ಲಿ ಹೋದರೂ ಜನ ದುರುದುರು ನೋಡುತ್ತಾರೆ. ಅವಳು ಹಾಳಾಗುವುದು ಗ್ಯಾರಂಟಿ,’ ಅನ್ನುತ್ತಾನೆ ಅಪ್ಪ.

ಅವನಿಗೆ ಅದೇ ಭಯ.

ತನ್ನ ಹಸು ಇನ್ನು ವಾಪಸು ಬರುವುದಿಲ್ಲ, ಹೊಳೆ ಹಸುವನ್ನು ಕೊಂದು ಹಾಕಿದೆ ಅನ್ನುತ್ತಾ ತಾಚಾ ಅಳುತಿದ್ದಾಳೆ. ಇಲ್ಲೇ ನನ್ನ ಪಕ್ಕದಲ್ಲಿದ್ದಾಳೆ. ಪಿಂಕು ಡ್ರೆಸ್ಸು ಹಾಕಿಕೊಂಡು, ಹರಿಯುವ ಹೊಳೆ ನೀರನ್ನೇ ನನ್ನ ಜೊತೆಯಲ್ಲಿ ನೋಡುತ್ತಾ, ಅಳು ತಡೆಯಲಾರದೆ ಅವಳ ಕೆನ್ನೆಯ ಮೇಲೆ ಕೊಳೆ ನೀರಿನ ಧಾರೆ, ಅವಳ ಒಳಗೆ ಉಕ್ಕುವ ಹೊಳೆಯ ಪ್ರವಾಹ.

ಅವಳ ಭುಜ ಬಳಸಿ ಹಿಡಿಯುತ್ತೇನೆ, ಅವಳಿಗೆ ಸಮಾಧಾನವಾಗಲೆಂದು. ಅವಳಿಗೆ ಅರ್ಥವಾಗುವುದಿಲ್ಲ. ಇನ್ನೂ ಅಳುತ್ತಾಳೆ. ಹೊಳೆಯ ದಡದಲ್ಲಿ ಕೇಳಿಸುವಂಥ ನೀರು ಸವರಿಕೊಂಡು ಹೋಗುವ ಸದ್ದು ಅವಳ ತುಟಿಯಿಂದಲೂ ಕೇಳುತ್ತಿದೆ. ನಡುಗುತಿದ್ದಾಳೆ. ಪ್ರವಾಹ ಏರುತ್ತಿದೆ. ಹೊಳೆಯ ನೀರಿನ ಕೊಳೆತ ತಾಚಾಳ ವದ್ದೆ ಮುಖಕ್ಕೂ ಮೆತ್ತಿದೆ. ಅವಳ ಮೊಲೆ ಒಂದೇ ಸಮ ಏರುತ್ತ ಇಳಿಯುತ್ತ ಅವಳನ್ನು ನಾಶದ ಸಮೀಪಕ್ಕೆ ಒಯ್ಯುತ್ತಿವೆ.
*****
ಸ್ಪಾನಿಷ್ ಮೂಲ: ಹ್ವಾನ್ ರುಲ್ಫೋ Juan Rulfo
ಕಥೆ ಹೆಸರು : Es que somos muy pobres We’re just very poor

ಕೀಲಿಕರಣ : ಎಂ ಎನ್ ಎಸ್ ರಾವ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಕ್ಕರೆ
Next post ಅನುಮತಿ

ಸಣ್ಣ ಕತೆ

 • ನಿರಾಳ

  -

  ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… ಮುಂದೆ ಓದಿ.. 

 • ಮಿಂಚಿನ ದೀಪ

  -

  ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… ಮುಂದೆ ಓದಿ.. 

 • ಸಾವಿಗೊಂದು ಸ್ಮಾರಕ…

  -

  ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… ಮುಂದೆ ಓದಿ.. 

 • ಕೇರೀಜಂ…

  -

  ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… ಮುಂದೆ ಓದಿ.. 

 • ದೊಡ್ಡವರು

  -

  ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… ಮುಂದೆ ಓದಿ..