‘ಕತೆಯನ್ನು ನಂಬು. ಕತೆಗಾರನನ್ನಲ್ಲ’ (Trust the tale, not the teller) ಎಂದು ವಿಮರ್ಶಕರು ಆಗಿಂದಾಗ್ಗೆ ಉದ್ಧರಿಸುವ ಇಂಗ್ಲಿಷ್ ಕಾದಂಬರಿಕಾರ ಡಿ. ಎಚ್. ಲಾರೆನ್ಸ್‍ನ ಮಾತಿನ ಅರ್ಥವಾದರೂ ಏನು? ಇದು ಎರಡು ರೀತಿಯ ಸಂದಿಗ್ಧತೆಗಳಿಗೆ ಎಡೆಮಾಡುತ್ತದೆ: (೧) ಕತೆ ಅರ್ಥಾತ್ ಕೃತಿಯ ಕರ್ತೃವಿಗೆ ತನ್ನ ರಚನೆಯ ಕುರಿತು ಇತರರಿಗಿಂತ (ಎಂದರೆ ಓದುಗರಿಗಿ೦ತ) ಹೆಚ್ಟು ಗೊತ್ತಿರುವುದಿಲ್ಲ ಎಂಬ ತಾತ್ಪರ್ಯ ಈ ಮಾತಿನಲ್ಲಿದೆ. ಇದು ವಾಸ್ತವಕ್ಕೆ ದೂರವಾದ ಸ೦ಗತಿ. ಕೃತಿಕಾರನಿಗೆ ತನ್ನ ರಚನೆಯ ಪ್ರತಿಯೊಂದು ಅಂಶದ ಬಗ್ಗೆಯೂ ಗೊತ್ತಿರುತ್ತದೆ- ಯಾಕೆಂದರೆ ಪ್ರತಿಯೊಂದನ್ನೂ ಕಲ್ಪಿಸಿಕೊಂಡವನು, ಆರಿಸಿಕೊಂಡವನು, ಬಳಸಿ ಕೊಂಡವನು ಆತನೇ; (೨) ಇನ್ನು, ಕತೆಯನ್ನು ಅರ್ಥಾತ್ ಕೃತಿಯನ್ನು ನಂಬು ಎಂದರೇನು? ಕೃತಿಗೆ ಆಕಾರವಿದೆ ಹಾಗೂ ಈ ಆಕಾರವನ್ನು ರಚಿಸಲು ಮನುಷ್ಯ ಭಾಷೆಯನ್ನು ಉಪಯೋಗಿಸಲಾಗಿದೆ ಎಂದು ಮಾತ್ರವಲ್ಲದೆ, ಅದನ್ನು ಮನುಷ್ಯರಿಗೆ ಹೋಲಿಸುವಂತಿಲ್ಲ; ಕತೆಯಾಗಲಿ ಕೃತಿಯಾಗಲಿ ಯಾರಿಗೂ ಏನನ್ನೂ ಹೇಳುವುದಿಲ್ಲ, ಯಾರ ಮಾತನ್ನೂ ಅದು ಕೇಳುವುದೂ ಇಲ್ಲ, ಹಾಗೂ ಯಾರೂ ಅದನ್ನು ಮಾತಾಡಿಸಲಾರರು. ಹಾಗಿರುತ್ತ, ಅದನ್ನು ‘ನಂಬುವ’ ಅಥವಾ ‘ನಂಬದಿರುವ’ ಪ್ರಶ್ನೆಯೇ ಏಳುವುದಿಲ್ಲ. ಒಂದು ಚಿತ್ರವನ್ನು ಅಥವಾ ನೃತ್ಯವನ್ನು ನಂಬಿ ಎಂದು ನಾವು ಹೇಳುವುದಿಲ್ಲವಲ್ಲ? ಅದೇ ರೀತಿ ಸಾಹಿತ್ಯ ಕೃತಿಯನ್ನೂ ನಂಬಿ ಎನ್ನುವಂತಿಲ್ಲ.
ಆದ್ದರಿಂದ ಲಾರೆನ್ಸ್‌ನ ಮಾತನ್ನು ನಾವು ಅಕ್ಷರಶಃ ತೆಗೆದುಕೊಳ್ಳದೆ ರೂಪಕಾರ್ಥದಲ್ಲಿ ತೆಗೆದುಕೊಳ್ಳಬೇಕಾಗುತ್ತದೆ. ಈ ರೂಪಕಾರ್ಥದಲ್ಲಿ ಲಾರೆನ್ಸ್‌ನ ಪಕಾರ, ಕೃತಿ ತನ್ನ ಅರ್ಥವೆಲ್ಲವನ್ನೂ ಒಳಗೊಂಡಿರುತ್ತದೆ ಹಾಗೂ ಅದನ್ನು ತಿಳಿದುಕೊಳ್ಳುವುದು ಓದುಗರ ಕೆಲಸ; ಕೃತಿಕಾರನು ಈ ಬಗ್ಗೆ ಹೇಳುವುದಕ್ಕೆ ಪತ್ಯೇಕವಾಗಿ ಏನೂ ಉಳಿದಿರುವುದಿಲ್ಲ. ಒಂದು ವೇಳೆ ಆತ ಅಂಥದೇನಾದರೂ ಹೇಳಿದರೆ ಅದನ್ನು ನಾವು ನಂಬಬೇಕಾಗಿಲ್ಲ, ಎಂದರೆ ಅದು ಕೃತಿಯ ಅರ್ಥಕ್ಕೆ ಅನಗತ್ಯವಾಗಿರುತ್ತದೆ ಎಂದು ನಾವು ತಿಳಿದುಕೊಳ್ಳಬಹುದು.
ಹೀಗೆ ಲಾರೆನ್ಸ್ ಕೃತಿಯನ್ನು ಕೃತಿಕಾರನಿಂದ ಪತ್ಯೇಕಿಸುವುದರ ಮೂಲಕ ಸಾಹಿತ್ಯದ ಬಗ್ಗೆ ಮಹತ್ವವಾದೊಂದು ತತ್ವವನ್ನು ನೀಡುತ್ತಾನೆ: ಸಾಹಿತ್ಯ ಯಾರೊಬ್ಬನ ಕೈಯಲ್ಲೂ ಇರುವುದಿಲ್ಲ! ಸ್ವತಃ ಕೃತಿಕಾರನ ಕೈಯಲ್ಲೂ ಇರುವುದಿಲ್ಲ. ಅದಕ್ಕೆ ಅದರದೇ ಆದ ಜೀವನವಿದೆ, ಗತಿಶೀಲತೆಯಿದೆ. ಇವನ್ನು ನಿಯಂತ್ರಿಸುವುದು ಖುದ್ದು ಕೃತಿಕಾರನಿಂದಲೂ ಅಸಾಧ್ಯ. ಉದಾಹರಣೆಗೆ, ಕೃತಿಕಾರ ಹಲವು ಹೇಳಿಕೆಗಳನ್ನು ಕೊಡಬಹುದು, ಕೆಲವೊಮ್ಮೆ ಕಟ್ಟಾವಾದಿಯಂತೆಯೂ ಕಾಣಿಸಬಹುದು. ಖಂಡಿತವಾದಿಯಂತೆ ಆತ ಇದಮಿತ್ಥಂ ಎಂದು ಅಪ್ಪಣೆಕೊಡಿಸಬಹುದು. ಆದರೆ ಆತನಿಂದ ನಿರ್ಮಿತವಾದ ಸಾಹಿತ್ಯ ಹಾಗೆ ಎಂದೂ ಮಾಡುವುದಿಲ್ಲ. ಅಥವಾ ಒಂದು ವೇಳೆ ಅದು ಹಾಗೆ ಮಾಡಿದರೆ, ಅದು ಒಳ್ಳೆಯ ಸಾಹಿತ್ಯವೆಂದು ನಮಗೆ ಅನಿಸುವುದೂ ಇಲ್ಲ. ಅಂಥ ರಚನೆಗಳು ಪ್ರಚಾರ ಸಾಹಿತ್ಯವಾಗಿರಬಹುದು, ಆದರೆ ನಾವು ಯಾವುದನ್ನು ಸೃಜನಾತ್ಮಕ ಸಾಹಿತ್ಯವೆಂದು ಕರೆಯುತ್ತೇವೆಯೋ ಅದಾಗಿರುವುದು ಮಾತ್ರ ಸಾಧ್ಯವಿಲ್ಲ.
ಈ ಸೃಜನಶೀಲತೆ ಎನ್ನುವ ಪದವನ್ನು ನಾವು ಕೇವಲ ಲೇಖಕರಿಗೆ ಮಾತ್ರ ಸಂಬಂಧಿಸಿ ಕರೆಯುವ ವಾಡಿಕೆಯಿದೆ-ಲೇಖಕ ಸೃಜಿಸುತ್ತಾನೆ ಎನ್ನುವ ಅರ್ಥದಲ್ಲಿ. ಆದರೆ ಇದನ್ನು ಕೃತಿಗೆ ಸಂಬಂಧಿಸಿದ ಅರ್ಥದಲ್ಲಿಯೂ ತೆಗೆದುಕೊಳ್ಳುವುದು ಸಾಧ್ಯ. ಯಾವ ಕೃತಿ ಓದುಗರ ಮನಸ್ಸನ್ನು ಸೃಜನಶೀಲತೆಗೆ ಪ್ರಚೋದಿಸುತ್ತದೆಯೋ ಅದು ಸೃಜನಶೀಲ ಸಾಹಿತ್ಯ. ಅಂಥ ಕೃತಿ ಯಾವತ್ತೂ ಮೂಲಭೂತವಾದಿಯೋ ಕಟ್ಟಾವಾದಿಯೋ ಆಗಿರುವುದು ಸಾಧ್ಯವಿಲ್ಲ. ಅದು ಮುಚ್ಚಿರುವುದೂ ಇಲ್ಲ; ಹಲವು ಅರ್ಥಸಾಧ್ಯತೆಗಳಿಗೆ ತೆರೆದಿರುವುದೇ ಅದರ ಮುಖ್ಯ ಗುಣ. ಆದ್ದರಿಂದ ಅಂಥ ಕೃತಿಗಳಲ್ಲಿ ನಾವು ಹಲವಾರು ಧ್ವನಿಗಳನ್ನು ಕೇಳುತ್ತೇವೆ, ದೃಷ್ಟಿಕೋನಗಳನ್ನು ಕಾಣುತ್ತೇವೆ. ಆದ್ದರಿಂದಲೇ ಇಲ್ಲಿ ಲೇಖಕ ಯಾವತ್ತೂ ಕಳೆದುಹೋಗಿರುತ್ತಾನೆ.
ಆದ್ದರಿಂದಲೇ ನಿಜವಾದ ಸಾಹಿತ್ಯ ಯಾವತ್ತೂ ಮೂಲಭೂತವಾದಿ ಆಗಿರುವುದು ಸಾಧ್ಯವಿಲ್ಲ. ಬರೆದ ಲೇಖಕ ಮೂಲಭೂತವಾದಿಯಾಗಿರಬಹುದು, ಆದರೆ ಆತ ಬರೆದ ಸಾಹಿತ್ಯವಲ್ಲ. ಸಾಹಿತ್ಯ ಮತ್ತು ಸಿದ್ಧಾಂತಕ್ಕಿರುವ ಮುಖ್ಯ ವ್ಯತ್ಯಾಸವೆಂದರೆ, ಸಾಹಿತ್ಯ ಬಹುಧ್ವನಿಯಾಗಿರುತ್ತದೆ, ಸಿದ್ಧಾಂತದ ಧ್ವನಿ ಒಂದೇ. ಆದ್ದರಿಂದಲೇ ಸಾಹಿತ್ಯ ಯಾವುದೇ ವಾದಗಳನ್ನೂ ಮೀರಿ ನಿಂತಿರುವುದು. ಅದೇ ತರ ಅಬ್ಸಲ್ಯೂಟಿಸಂ ಅರ್ಥಾತ್ ಖಂಡಿತವಾದ ಕೂಡಾ ಸಾಹಿತ್ಯದ ಪರಿಧಿಯ ಹೊರಗೇ ಉಳಿಯುತ್ತದೆ. ಖಂಡಿತವಾದವೆಂದರೆ ತನಗೆಲ್ಲವೂ ಪರಿಪೂರ್ಣವಾಗಿ ಗೊತ್ತಿದೆ ಎನ್ನುವ ನಂಬಿಕೆ. ಇಂಥ ವಾದಗಳು -ಮೂಲಭೂತವಾದ, ಖಂಡಿತವಾದ, ಕೋಮುವಾದ ಅಥವಾ ಇಂಥದೇ ಇನ್ನಿತರ ವಾದಗಳು -ಇತರರ ಕುರಿತು ಅಸಹನೆ ಹೊಂದಿರುತ್ತವೆ. ಅವು ಕೇಳುವುದಿಲ್ಲ, ಯಾವಾಗಲೂ ಮಾತಾಡುತ್ತ ಇರುತ್ತವೆ, ಎಂದರೆ ಹೇಳಿದ್ದನ್ನೇ ಹೇಳುತ್ತ. ಆದ್ದರಿಂದ ಇಲ್ಲಿ ಮರುಚಿಂತನೆಗಾಗಲಿ, ಬೆಳವಣಿಗೆಗಾಗಲಿ ಆಸ್ಪದವಿಲ್ಲ. ಯಾವಾಗಲೂ ಈ ವಾದಗಳು ಸಂಘರ್ಷ ಮತ್ತು ವಿಧ್ವಂಸಕತೆಯ ಹಾದಿಯನ್ನೇ ತುಳಿಯುತ್ತವೆ, ಸಹಕಾರ ಮತ್ತು ಸಾಮರಸ್ಯದ ಹಾದಿಯನ್ನಲ್ಲ.
ಇಂಥ ವಾದಗಳಿಗೆ ಕಿವಿಗಳಿಲ್ಲದ ಕಾರಣ ಇವುಗಳ ಜತೆ ಮಾತಾಡುವುದೇ ಸಾಧ್ಯವಿಲ್ಲ. ಯಾವುದರ ಜತೆ ನಾವು ಮಾತಾಡಲು ಸಾಧ್ಯವಿಲ್ಲವೋ ಅದು ಸಾಹಿತ್ಯವಾಗುವುದು ಹೇಗೆ? ಈ ಕಾರಣಕ್ಕೆ ಕತೆಗಾರನ ಜತೆ ಮಾತಾಡಲು ಸಾಧ್ಯವಿಲ್ಲದಾಗಲೂ ಆತ ಬರೆದ ಕತೆಗಳ ಜತೆ ಮಾತಾಡಲು ಸಾಧ್ಯ. ‘ಒಂದೂರಿನಲ್ಲಿ ಒಬ್ಬ ರಾಜ ಇದ್ದ’ ಎಂದಾಗಲೇ ನಮ್ಮ ಕಲ್ಪನೆ ಗರಿಗೆದರಲು ಸುರುವಾಗುತ್ತದೆ. ಅವನನ್ನು ಕಲ್ಪಿಸಲು ತೊಡಗುತ್ತೇವೆ. ಇದು ಹಳೆಯ ಕತೆಯಾಯಿತು. ಹೊಸ ಕತೆಗಳೂ ಅಂತೆಯೇ. ಲಂಕೇಶರ ಪ್ರಸಿದ್ಧ ಸಣ್ಣ ಕತೆ ‘ರೊಟ್ಟಿ’ ಆರಂಭವಾಗುವುದೂ ಹೀಗೆ:
‘ಬೇಸಿಗೆ. ನೆರಳಿದ್ದಲ್ಲೆಲ್ಲ ಜನ, ತೇವವಿದ್ದಲ್ಲೆಲ್ಲ ನೊಣ. ಸಿಂಗಾರಪೇಟೆಯ ಸ್ಟೇಷನ್ನಲ್ಲಿ ವಾರದ ಕೆಳಗೆ ರೈಲಿನಿಂದ ಇಳಿದಾಗ ಆಕೆ ಸರಿಯಾಗಿ ಗಮನಿಸಿರಲಿಲ್ಲ; ಅತ್ತಿಂದಿತ್ತ ಇತ್ತಿಂದತ್ತ ಓಡಾಡುವ ಕೂಲಿಗಳು; ಹರಿದ ಬಟ್ಟೆ, ಕೊಳಕು ಮೈ, ಕಂಕುಳಲ್ಲಿ ಮಕ್ಕಳು. ಸ್ಪೇಷನ್ನು ತುಂಬ ಇಂಥವರು; ಗೋಡೆಗಳ ಮೇಲೆಲ್ಲ ತನಗೆ ಅರ್ಥವಾಗದ ಬಣ್ಣದ ಚೀಟಿಗಳು, ಬೈದಾಟಗಳು.’
ಈಕೆ ಯಾರು ಎನ್ನುವುದರ ಬಗ್ಗೆ ನಮಗೆ ಅಸ್ಪಷ್ಟವಾಗಿ ಮಾತ್ರ ಗೊತ್ತಾಗುತ್ತದೆಯಷ್ಟೆ. ಯಾವುದೋ ಹಳ್ಳಿಯಿಂದ ಟ್ರೇನಿನಲ್ಲಿ ಬಂದಿದ್ದಾಳೆ-ವಾರದ ಹಿಂದೆ. ಬಾಣಂತಿ ಮಗಳನ್ನು ಕಾಣುವುದಕ್ಕೆಂದು. ಒಂದೇ ವಾರದಲ್ಲಿ ಊರಿಗೆ ಮರಳಲು ಮತ್ತೆ ಸ್ಟೇಷನ್‌ಗೆ ಬಂದಿದ್ದಾಳೆ. ಅವಳ ಕೈಯಲ್ಲಿ ಟ್ರಂಕು, ರೊಟ್ಟಿಯ ಬುತ್ತಿ. ಇದೆಲ್ಲವೂ ಕತೆ ಮುಂದುವರಿದಂತೆ ನಮಗೆ ಗೊತ್ತಾಗುವುದು. ಓದುತ್ತಿದ್ದಂತೆ ನಮ್ಮಲ್ಲಿ ಕೆಲವು ನಿರೀಕ್ಷೆಗಳು ಮೂಡುತ್ತವೆ. ಕೆಲವು ಸಲ ನಿರೀಕ್ಷೆಗಳು ಸರಿಯಾಗಿರುತ್ತವೆ, ಆದರೆ ಹಲವು ವೇಳೆ ಅವು ತಪ್ಪಾಗಿ ಬೇರೇನೋ ಆಗುತ್ತ ಇರುತ್ತವೆ. ಕತೆಯೆಂದರೆ ಹೀಗೇ. ಕತೆಯ ಜತೆ ಮಾತಾಡುವುದೆಂದರೆ ಇದೇ. ಎಲ್ಲವೂ ಮೊದಲೇ ನಿರೀಕ್ಷಿಸಿದಂತೆ ನಡೆದರೆ ಅದರಲ್ಲಿ ಕತೆಯಿಲ್ಲ. ಕತೆ ಓದುಗನ ಮನಸ್ಸಿನಲ್ಲಿ ಸೃಜಿಸುವುದೆಂದರೆ ಈ ಕ್ರಿಯೆಯೇ.
ಇದನ್ನು ಓದಿದಾಗ ಕತೆಗಾರರಾದ ಲಂಕೇಶರ ಒಲವುಗಳು, ಅನುಕಂಪಗಳು ಯಾವ ಕಡೆ ಇವೆ ಎನ್ನುವುದು ನಮಗೆ ಗೊತ್ತಾಗಬಹುದಾದರೂ ಅದಕ್ಕಿಂತ ಹೆಚ್ಚೇನೂ ಗೊತ್ತಾಗುವುದಿಲ್ಲ. ಓದುಗರಿಗೆ ಅದು ಬೇಕಾಗಿಯೂ ಇಲ್ಲ. ಯಾಕೆಂದರೆ ಯಾವುದೇ ವಾದವನ್ನೋ ಸಿದ್ಧಾಂತವನ್ನೋ ಸಾಧಿಸಿ ತೋರಿಸುವುದಕ್ಕಾಗಿ ಕತೆ ಇರುವುದಲ್ಲ.
ವಿಮರ್ಶಕರು ಆ ಕೆಲಸವನ್ನು ಮಾಡಬಹುದು. ಆದರೆ ಓದುಗರು ಯಾರೂ ಯಾವುದೇ ಸಿದ್ಧಾ೦ತ ತಿಳಿದುಕೊಳ್ಳುವುದಕ್ಕೆಂದು ಸಾಹಿತ್ಯ ಓದುವುದಿಲ್ಲ. ಓದುಗರು ಕತೆಯ ಸೊಗಸಿಗಾಗಿ ಕತೆ ಓದುತ್ತಾರೆ, ಅದೇ ರೀತಿ ಕಾದಂಬರಿಯ ಸೊಗಸಿಗಾಗಿ ಕಾದಂಬರಿಯನ್ನೂ, ಕವಿತೆಯ ಸೊಗಸಿಗಾಗಿ ಕವಿತೆಯನ್ನೂ ಓದುತ್ತಾರೆ. ಆದರೂ ಅವರೇನೂ ಲೇಖಕರನ್ನು ಕೇಳಿ ಹಾಗೆ ಮಾಡುವುದಿಲ್ಲ. ತಮ್ಮ ಕೃತಿಯ ಬಗ್ಗೆ ಲೇಖಕರು ಏನು ಹೇಳುತ್ತಾರೆ ಎನ್ನುವುದು ಕುತೂಹಲಕಾರಿಯೆನಿಸಬಹುದು, ಓದಿಗೆ ಸಹಾಯಕವೂ ಆಗಬಹುದು. ಆದರೆ ಓದುಗ ಅದನ್ನೆಲ್ಲಾ ನಂಬಬೇಕೆಂದೇನೂ ಇಲ್ಲ.
ಅಷ್ಟಕ್ಕೂ ಒಂದು ಕೃತಿಯ ರಚನೆ ಆದಮೇಲೆ ಅದು ಲೇಖಕನ ಕೈಯಿಂದ ಹೊರಟುಹೋದ ಹಾಗೇ ಸರಿ. ಆಮೇಲೆ ಅದರ ಓದಿನ ಮೇಲೆ ಲೇಖಕನಿಗೆ ಪ್ರತ್ಯೇಕವಾದ ಅಧಿಕಾರವಾಗಲಿ, ವಿಶೇಷವಾದ ಜ್ಞಾನವಾಗಲಿ ಇರುವುದಿಲ್ಲ. ಲೇಖಕನೂ ಇತರ ಓದುಗರಂತೆಯೇ ಆಗಿಬಿಡುತ್ತಾನೆ. ಟಾಲ್‌ಸ್ಟಾಯನ್ನ ಕೇಳಿ ನಾವು ‘ಅನ್ನಾ ಕರೆನೀನಾ’ ಓದುತ್ತೇವೆಯೇ? ಅಥವಾ ಶೇಕ್ಸ್‌ಪಿಯರನ್ನ ನೇಳಿ ‘ಹ್ಯಾಮ್ಲೆಟ್’ನ್ನ ಅರ್ಥಮಾಡಿಕೊಳ್ಳುತ್ತೇವೆಯೇ? ಸರಿ, ಕೇಳುವುದಕ್ಕೆ ಅವರೀಗ ಇಲ್ಲವಲ್ಲ ಎನ್ನಬಹುದು; ಒಂದು ವೇಳೆ ಇರುತ್ತಿದ್ದರೂ ನಾವವರನ್ನು ಕೇಳುತ್ತಿರಲಿಲ್ಲ. ಯಾಕೆಂದರೆ, ನಮಗೇನೂ ಸಾಹಿತ್ಯ ಮೀಮಾಂಸೆ ತಿಳಿದಿಲ್ಲವಾದರೂ, ಎಲ್ಲೋ ಒಳ ಆಂತರ್ಯದಲ್ಲಿ ಗೊತ್ತಿರುತ್ತದೆ ಹೀಗೆ ಲೇಖಕನನ್ನು ಕೇಳಿ ಏನೂ ಉಪಯೋಗವಿಲ್ಲ ಎಂಬುದಾಗಿ. ನಿಜ, ಕೆಲವು ಸಂದರ್ಭಗಳಲ್ಲಿ ನಾವು ಪರಿತಪಿಸುವುದಿದೆ-ಲೇಖಕನನ್ನೇ ಕೇಳುವುದು ಸಾಧ್ಯವಿರುತ್ತಿದ್ದರೆ ಒಳ್ಳೆಯದಿತ್ತು ಎಂದು. ಆದರೆ ಇಂಥ ಸಂದರ್ಭಗಳು ಕೃತಿಯ ಒಟ್ಟಾರೆ ಅರ್ಥ ವಿಚಾರಿಸುವುದಕ್ಕಾಗಿ ಅಲ್ಲ, ಪಠ್ಯದ ಕ್ಲಿಷ್ಟತೆಯನ್ನು ಬಿಡಿಸಿಕೊಳ್ಳುವುದಕ್ಕೆ ಮಾತ್ರ. ಅಮೇರಿಕನ್ ಕವಿ ವಾಲೆಸ್ ಸ್ಟೀವನ್ಸ್‌ನ ಕವಿತೆಗಳಲ್ಲಿ ನನಗೆ ಇಂಥ ಎದುರಾದದ್ದಿದೆ. ಸ್ಪೀವನ್ಸ್‌ನದೊಂದು ಕವಿತೆಯಿದೆ; ಹೆಸರು ‘ಗುಬ್ಬಿನಾಲ್’ ಎಂದು. ಯಾವುದೇ ನಿಘಂಟುವಿನಲ್ಲಾಗಲಿ ವಸ್ತುಕೋಶದಲ್ಲಾಗಲಿ ನನಗೀಪದ ಕಾಣ ಸಿಕ್ಕಿದ್ದಿಲ್ಲ. ವಾಲೆಸ್ ಸ್ಪೀವನ್ಸ್‌ನ ಕವಿತೆಗಳ ಬಗ್ಗೆ ಈಗ ವಿಸ್ತಾರದ್ದೂ ಆಳದ್ದೂ ಆದ ಟಿಪ್ಪಣಿಗಳು ಬಂದಿವೆ. ‘ಗುಬ್ಬಿನಾಲ್’ ಪದಕ್ಕೆ ಕೆಲವರು ‘ಬರ್ಬರವಾದ ಒಂದು ಜನಾಂಗ’ ಎಂದು ಅರ್ಥ ಕೊಟ್ಟರೆ, ಇನ್ನು ಕೆಲವರು ‘ಜಗತ್ತನ್ನು ಕೊಳಕಾಗಿಯೂ ಜನರನ್ನು ದುಃಖಿಗಳಾಗಿಯೂ ತಿಳಿದುಕೊಂಡವ’ ಎಂಬ ಅರ್ಥ ಕೊಡುತ್ತಾರೆ. ಆದರೆ ಇದಕ್ಕೆಲ್ಲ ಯಾವ ಸರಿಯಾದ ಆಧಾರವೂ ಇಲ್ಲ. ಅಯೋವಾ ಯೂನಿವರ್ಸಿಟಿಯಲ್ಲಿ ಇಂಗ್ಲಿಷ್ ಪ್ರೊಫೆಸರರೂ ಅಂತರರಾಷ್ಟ್ರೀಯ ಲೇಖಕರ ಕಮ್ಮಟದ ನಿರ್ದೇಶಕರೂ ಸ್ವತಃ ಕವಿಯೂ ಆಗಿರುವ ಕ್ರಿಸ್ಬೊಫರ್ ಮೆರಿಲ್ ಅವರನ್ನು ನಾನೀಬಗ್ಗೆ ಒಮ್ಮೆ ಕೇಳಿದಾಗ, ಅವರಿಗೂ ಈ ಪದದ ಕುರಿತು ನಿಖರವಾದ ಅರಿವಿರಲಿಲ್ಲ. ಅವರೂ ನನ್ನಂತೆಯೇ ವಾಲೆಸ್ ಸ್ಪೀವನ್ಸ್‌ನ ಕವಿತೆಗಳನ್ನು ಮೆಚ್ಚುವವರಾಗಿದ್ದರು. ಆದರೆ ಪ್ರೊಫೆಸರ್ ಮೆರಿಲ್ ನನಗೊಂದು ವಿಷಯ ತಿಳಿಸಿದರು: ಅದೆಂದರೆ, ಹೀಗೆ ಎಲ್ಲೂ ಇಲ್ಲದ ಪದಗಳನ್ನು ಹೊಸೆಯುವುದು ಸ್ಟೀವನ್ಸ್‌ಗೆ ಇಷ್ಟವಾದ ಸಂಗತಿಯಾಗಿತ್ತು ಎಂಬುದು. ಆದ್ದರಿಂದ ಒಂದು ವೇಳೆ, ಸ್ಟೀವನ್ಸ್‌ನ್ನೇ ಹೋಗಿ ಕೇಳಿದ್ದರೂ ಆತ ಬಹುಶಃ ‘ನಿಮಗೆ ಅರ್ಥವಾದ ಹಾಗೆ ಎಂದುಬಿಡುತ್ತಿದ್ದ. ಶೇಕ್ಸ್‌ಪಿಯರ್ ತನ್ನದೊಂದು ನಾಟಕಕ್ಕೆ ಇಂಥದೇ ಹೆಸರನ್ನು ಇಟ್ಟಿರುವುದನ್ನು ನೆನೆದುಕೊಳ್ಳಬೇಕು – As You like it ‘ನಿಮಗನಿಸಿದ ಹಾಗೆ’
ಕೃತಿಯೊಂದನ್ನು ಓದುವುದೆಂದರೆ ಅದನ್ನು ಪ್ರವೇಶಿಸಿದಂತೆ. ಅದರದೇ ಆದ ಒಂದು ಜಗತ್ತಿರುತ್ತದೆ-ಅದು ನಮ್ಮ ಸಾಧಾರಣ ಜಗತ್ತಿಗೆ ಸ್ವಲ್ಪಮಟ್ಟಿಗೆ ಸಾದೃಶ್ಯ ಹೊಂದಿರಬಹುದು; ಆದರೆ ಭಿನ್ನವೂ ಆಗಿರುತ್ತದೆ. ಮಾತ್ರವಲ್ಲ, ಲೇಖಕ ಎಲ್ಲವನ್ನೂ ಸ್ಪಷ್ಟವಾಗಿ ಹೇಳುವುದೂ ಇಲ್ಲ, ಅಲ್ಲಲ್ಲಿ ತಡೆಗಳು, ಎಡೆಗಳು ಇದ್ದೇ ಇರುತ್ತವೆ. ಆದ್ದರಿಂದ ಓದುಗನ ಮನಸ್ಸಿಗೂ ಈ ತಡೆಗಳನ್ನು ಮೀರುವ ಮತ್ತು ಎಡೆಗಳನ್ನು ತುಂಬುವ ಕೆಲಸ ಬೀಳುತ್ತದೆ. ಇಲ್ಲಿ ಪ್ರತಿಯೊಬ್ಬ ಓದುಗನೂ ಇದನ್ನು ತನ್ನ ಅಳವಿಗೆ ಸಾಧ್ಯವಾದ ರೀತಿಯಲ್ಲಿ ಮಾಡಬೇಕಾಗುತ್ತದೆ. ಇಂಥ ಸ್ಥಿತಿಯಲ್ಲಿ ಹೊರಗಿನಿಂದ ತರುವ ಸಹಾಯ ಕೇವಲ ಸಹಾಯವಲ್ಲದೆ ಇನ್ನೇನೂ ಅಲ್ಲ. ಪದಗಳ ಅರ್ಥ. ಸಂದರ್ಭ ಸೂಚನೆ, ಚಾರಿತ್ರಿಕ ಹಿನ್ನೆಲೆ ಇತ್ಯಾದಿ ಪ್ರಾಥಮಿಕ ಅರಿವು ಅಗತ್ಯವಾಗುತ್ತದಾದರೂ, ಇವೆಲ್ಲ ಇದ್ದೂ, ಕೊನೆಗೂ ಸಾಹಿತ್ಯ ಸಾಗರದಲ್ಲಿ ಈಜಬೇಕಾದವನು ಓದುಗನೇ; ಹಾಗಲ್ಲದೆ ಅದು ಸ್ವಂತ ಅನುಭವವಾಗಿ ಓದುಗನಿಗೆ ದಕ್ಕಲಾರದು.
ಲೇಖಕನ ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚೆಚ್ಚು ತಿಳಿದಷ್ಟು ಆತನ ಕೃತಿಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಅನುಕೂಲವಾಗುತ್ತದೆ ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ ಇದೇನೂ ಅಷ್ಟು ಮಹತ್ತದ್ದಲ್ಲ. ಒಂದಷ್ಟು ಪ್ರಾಥಮಿಕ ಮಾಹಿತಿಗಳು ಗೊತ್ತಿರಬೇಕಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ನಮ್ಮ ಕನ್ನಡದ ಪರಂಪರೆಯನ್ನು ತೆಗೆದುಕೊಂಡರೆ, ನಮಗೆ ಪಂಪ, ರನ್ನ, ಕುಮಾರವ್ಯಾಸ, ಲಕ್ಷ್ಮೀಶರ ಬಗ್ಗೆ ಗೊತ್ತಿರುವುದಾದರೂ ಅತ್ಯಲ್ಪ. ಆದರೂ ಅವರ ಕೃತಿಗಳನ್ನು ಓದುವುದಕ್ಕೆ ಇದೊಂದು ತೊಡಕೆನಿಸುವುದಿಲ್ಲ. ಕುಮಾರವ್ಯಾಸ ತನ್ನನ್ನು ತಾನು ‘ಲಿಪಿಕಾರ’ನೆಂದು ಕರೆದುಕೊಂಡುದು ಅವನ ವಿನಯವನ್ನಷ್ಪೇ ಸೂಚಿಸುವುದಲ್ಲ; ಅವನ ಮಾತಿನ ಹಿಂದೆ ಸಾಹಿತ್ಯದ ಓದಿನ ಒಂದು ತತ್ವವೂ ಅಡಗಿದೆ ಆ ತತ್ವ: ಅದೆಂದರೆ, ಕೃತಿಯ ಕಡೆ ಗಮನ ಹರಿಸು, ಕೃತಿಕಾರನ ಕಡೆ ಅಲ್ಲ ಎಂಬುದು.
ಆದರೆ ಕೃತಿಯ ಓದಿಗೆ ಅಗತ್ಯವಾದ ಮಾಹಿತಿ ಕೇವಲ ಲೇಖಕನಿಗೂ ಸೇರಿದ್ದಲ್ಲ, ಲೇಖಕನ ಕಾಲದೇಶಗಳು, ಕೃತಿಯ ಸಂದರ್ಭ ಮುಖ್ಯವಾಗುತ್ತವೆ. ಉದಾಹರಣೆಗೆ, ವಚನ ಸಾಹಿತ್ಯವನ್ನು ಆ ಕಾಲದ ಸಾಮಾಜಿಕ ಸಾಂಸ್ಕೃತಿಕ ಒತ್ತಡಗಳ ಹಿನ್ನೆಲೆಯನ್ನು ಮರೆತು ಓದುವುದರಿಂದ ಆ ಸಾಹಿತ್ಯಕ್ಕೆ ಸರಿಯಾದ ನ್ಯಾಯ ದೊರಕುವುದಿಲ್ಲ. ಈ ಮಾಹಿತಿಗೂ ಒಂದು ಮಿತಿಯಿರುತ್ತದೆ. ಮಿತಿ ಮೀರಿದರೆ, ಮಾಹಿತಿಗಳೇ ತೊಡಕೂ ಆಗಬಹುದು. ಹಾಗಾದಾಗ, ನಮ್ಮ ಗಮನ ಕೃತಿಯನ್ನು ಬಿಟ್ಟು ಇತಿಹಾಸದ ಕಡೆ ತಿರುಗುತ್ತದೆ. ಅದೇ ನಮ್ಮ ಉದ್ದೇಶವಾಗಿದ್ದರೆ ಆ ಮಾತು ಬೇರೆ. ಆಗ ಸಾಹಿತ್ಯ ಇತಿಹಾಸದ ಕಡೆ ಇಣುಕುವುದಕ್ಕಿರುವ ಕಿಂಡಿಯಾಗುತ್ತದೆ ಅಷ್ಟೆ. ಕೃತಿಯಿಂದ ಕೃತಿಕಾರನನ್ನು ದೂರೀಕರಿಸುವುದು ಓದಿಗೆ ಅಗತ್ಯವಾಗಿರುವಂತೆಯೇ ಕೃತಿಯನ್ನು ಸುತ್ತುವರಿದ ಚಿಪ್ಪುಗಳಿಂದಲೂ ಕೆಲವೊಮ್ಮೆ ಅದನ್ನು ಮುಕ್ತಗೊಳಿಸುವುದು ಅಗತ್ಯವಾಗಬಹುದು. ಯಾಕೆಂದರೆ ಸಾಹಿತ್ಯಕೃತಿಯೊಂದನ್ನು ತನಗೆ ಬೇಕಾದಂತೆ ಓದುವ ಮೂಲ ಸ್ವಾತಂತ್ರ್ಯ ಪ್ರತಿಯೊಬ್ಬ ಓದುಗನಿಗೂ ಇದೆ.
ವಾಸ್ತವದಲ್ಲಿ ಕೃತಿಕಾರನೇ ಬಂದು ನಮಗೆ ತನ್ನ ಕೃತಿಯನ್ನು ಹೀಗೆ ಹೀಗೆ ಓದಬೇಕೆಂದು ಹೇಳಿದರೂ ಓದುಗರಾದ ನಾವದನ್ನು ಒಪ್ಪಬೇಕೆಂದೇನೂ ಇಲ್ಲ. ಅದನ್ನು ನಾವು ನಮ್ಮ ಪ್ರಾಥಮಿಕ ಸ್ವಾತಂತ್ರ್ಯದಲ್ಲಿ ನಡೆಸಿದ ಹಸ್ತಕ್ಷೇಪ ಎಂದು ತಿಳಿದರೆ ಅದರಲ್ಲಿ ತಪ್ಪಿಲ್ಲ. ‘ನೀವು ಏನು ಬೇಕಾದರೂ ಹೇಳಿ, ಆದರೆ ನೀವು ಏನು ಬರೆದಿದ್ದೀರಿ ಎನ್ನುವುದು ನಮಗೆ ಮುಖ್ಯ,’ ಎಂದು ನಾವು ಅಂಥ ಲೇಖಕರಿಗೆ ಉತ್ತರಿಸಬಹುದು. ಹೀಗೆ, ಸಾಹಿತ್ಯ ಮೀಮಾಂಸೆಯ ಗಂಧಗಾಳಿ ನಮಗೆ ಗೊತ್ತಿರದೆ ಇದ್ದರೂ, ಇಷ್ಟು ಹೇಳಬಲ್ಲೆವು ಎಂದಾದರೆ ಸಾಹಿತ್ಯದ ಓದಿನ ಸ್ವಾತಂತ್ರ್ಯದ ಬಗ್ಗೆ ನಮಗೆ ಅರಿವಿದೆಯೆಂದೇ ಲೆಕ್ಕ. ಲೇಖಕನ ಕೃತಿ ಆತನ ಮಾತಿನಿಂದ ಭಿನ್ನವಾಗುವುದು ಇಲ್ಲಿಯೇ ಹಾಗೂ ನಮಗೆ ಅರ್ಥ ಸ್ವಾತಂತ್ರ್ಯ ನೀಡುವ ಕೃತಿಯೇ ಲೇಖಕನಿಗಿಂತ ಹೆಚ್ಚು ವಿಶ್ವಸನೀಯವಾಗುವುದು.
*****