ದ್ವೇಷವಿದ್ದಲ್ಲಿ ಈಗಲೆ ನನ್ನ ಶಿಕ್ಷಿಸು
ಲೋಕ ಕೆಳಗೊತ್ತುತಿರುವಾಗಲೇ ನನ್ನನ್ನು
ನೀನೂ ಕೈಗೂಡಿಸಿ ಕೆಳತನಕ ಬಾಗಿಸು ;
ಹಳೆಗಾಯಕೆಂದೂ ಹಾಕದಿರು ಹೊಸ ಬರೆಯನ್ನು.
ಒಂದು ಕೊರಗಿಂದ ಎನ್ನೆದೆಯು ಹೊರಬಂದಿರಲು
ಹಿಂದಿಂದ ಬಂದು ಬೇರೊಂದಕ್ಕೆ ಗುರಿಮಾಡಿ,
ಬಿರುಗಾಳಿಯಿರುಳ ಬೆನ್ನಟ್ಟಿ ಜಡಿಮಳೆ ಹಗಲು
ಬಂದಂತೆ ಮಾಡದಿರು ಹೊಸ ದುಃಖದೊಳು ದೂಡಿ.
ಬಿಡುವುದಿದ್ದರೆ ನನ್ನ ಎಂದಿನವೊ, ಯಾತಕೋ
ಇತರ ಕಿರುಬಾಧೆಗಳು ಕಚ್ಚುತಿರುವಾಗಲೇ,
ಈಗಲೇ ಬಿಟ್ಟುಬಿಡು. ವಿಧಿ ತರುವ ಅತಿ ಘೋರ
ವ್ಯಥೆಯನ್ನು ಉಂಡುಬಿಡುವುದು ಲೇಸು ಮೊದಲಲ್ಲೆ
ಈಗ ದೊಡ್ಡದು ಎನಿಸುತಿರುವ ವ್ಯಥೆಯೆಲ್ಲವೂ
ನಿನ್ನನ್ನು ಕಳಕೊಳ್ಳುವುದರೆದುರು ಚಿಕ್ಕವು.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 90
Then hate me thou wilt, if ever, now