ರಾವಣಾಂತರಂಗ – ೧೬

ರಾವಣಾಂತರಂಗ – ೧೬

ಮಾತೃ ಸನ್ನಿಧಾನದಲ್ಲಿ

ಮುಂಜಾನೆಯ ಬ್ರಾಹ್ಮಿ ಮಹೂರ್ತದಲ್ಲಿ ಶಿವನನ್ನು ಅರ್ಚಿಸಿ ಪೂಜಿಸಿ, ಸಾಮವೇದಗಾನದಿಂದ ಸ್ತುತಿಸಿ ಸಾಷ್ಟಾಂಗ ನಮಸ್ಕಾರ ಹಾಕಿ ಹೊರ ಬಂದೊಡನೆ ಮಾತೃಶ್ರೀಯವರ ದರ್ಶನ “ಎಂತಹ ಸೌಭಾಗ್ಯ” ಅಮ್ಮ ಇದೇ ಈಗ ನಿನ್ನನ್ನು ನೋಡಿ ಆಶೀರ್ವಾದ ಪಡೆಯಲು ನಾನೇ ಹೊರಟಿದ್ದೆ. ಅಷ್ಟರೊಳಗೆ ನೀನೇ ಬಂದೆ ಬನ್ನಿ ಅಮ್ಮ ಕುಳಿತುಕೊಳ್ಳಿ “ಅಮ್ಮಾ ನನಗೆ ಆಶೀರ್ವಾದ ಮಾಡಿ”.

“ನನ್ನ ಆಶೀರ್ವಾದ ಸದಾ ಇರುತ್ತದೆ ಮಗು ರಾವಣ ವಿಷಯ ಗೊತ್ತಾಯಿತೇನು? ಶ್ರೀರಾಮನಾಗಲೇ ಸಮುದ್ರದಾಟಿ ಲಂಕೆಯ ಹತ್ತಿರ ಬಂದು ಬೀಡು ಬಿಟ್ಟಿದ್ದಾಯಿತು. ಯುದ್ಧ ನಿಶ್ಚಯವೇ?”

“ನಿಶ್ಚಯವಾದ ಹಾಗೇ ಯಾಕಮ್ಮ ಇಷ್ಟೊಂದು ಭಯ”

ಮಗನೇ ಶ್ರೀರಾಮನ ಬರುವಿಕೆಯು ನನಗೆ ಭಯವುಂಟು ಮಾಡಿದೆ. ಶ್ರೀರಾಮಲಕ್ಷ್ಮಣರು ದೈವಾಂಶ ಸಂಭೂತರು ದುಷ್ಟ ಶಿಕ್ಷಣ ಶಿಷ್ಯರಕ್ಷಣೆಯೇ ಅವರ ಗುರಿಯಂತೆ, ಇದುವರೆಗಿನ ಘಟನೆಗಳನ್ನು ಅವಲೋಕಿಸಿದರೆ ಅವರ ಸಾಮರ್ಥ್ಯ ಅರಿವಾಗುತ್ತದೆ. ನೀನು ಅವರ ಸಂಗಡ ದ್ವೇಷ ಮಾಡದೆ ಸೀತಾದೇವಿಯನ್ನು ಒಪ್ಪಿಸಿ ಶರಣಾಗತನಾಗಿ ನಿನ್ನ ವಂಶವನ್ನು ಕಾಪಾಡಿಕೋ, ನನ್ನ ಬಲಗಣ್ಣು ಬಲಭುಜ ಹಾರುತ್ತಿದೆ. ಲಂಕೆಯಲ್ಲಿ ಅನಿಷ್ಟಗಳು, ಉಲ್ಕಾಪಾತಗಳು ನಡೆಯುತ್ತಿವೆ. ಮುಂದಾಗುವ ವಿಪತ್ತುಗಳನ್ನು ಸೂಚಿಸುತ್ತವೆ. ಮಗು ರಾವಣ ಹಠ ಮಾಡಬೇಡ ಸಂಧಿ ಮಾಡಿಕೋ” “ಅಮ್ಮಾ ನಿನ್ನ ಮಗನ ಪರಾಕ್ರಮದಲ್ಲಿ ನಂಬಿಕೆಯಿಲ್ಲವೇನಮ್ಮ? ಇಷ್ಟು ಬೇಗ ನನ್ನ ಸಾಹಸಗಳನ್ನು ಮರೆತುಬಿಟ್ಟೆಯಾ” “ಮರೆತಿಲ್ಲ ಆದರೂ ನನ್ನದೊಂದು ಮಾತು ನಡೆಸಿಕೊಡುತ್ತೀಯಾ? ನಡೆಸಿಕೊಡುತ್ತೀಯಾ?” ಇದೇನಮ್ಮ ಅಪನಂಬಿಕೆಯಿಂದ ಪ್ರಶ್ನಿಸುತ್ತೀಯಾ, ನಿನಗಾಗಿ ನನ್ನ ಹತ್ತುತಲೆಗಳನ್ನು ಕಡಿದು ಈಶ್ವರನಿಗೆ ಒಪ್ಪಿಸಿ, ಆತ್ಮಲಿಂಗವನ್ನು ತಂದುಕೊಡಲು ಪ್ರಯತ್ನಿಸಲಿಲ್ಲವೇ ಏನು ಮಾಡಲಿ ಪರಮೇಶ್ವರನ ಆತ್ಮಲಿಂಗ ನಮ್ಮ ಕೈ ಸೇರಿ ಲಂಕಾಸ್ಪರ್ಶವಾಗಿದ್ದರೆ ಲಂಕೆಯನ್ನು ಯಾರು ಮುಟ್ಟುವ ಹಾಗಿರಲಿಲ್ಲ. ಒಂದು ನಿಮಿಷದಲ್ಲಿ ದೇವತೆಗಳ ಸಂಚಿನಿಂದ ಎಲ್ಲವೂ ಮುಳುಗಿ ಹೋಯಿತು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ”.

ಅದೊಂದು ಸಂಕ್ರಮಣದ ದಿನ ಕಡಲ ತೀರದಲ್ಲಿ ಕುಳಿತು ಮರಳಿನಿಂದ ಶಿವಲಿಂಗವನ್ನು ಮಾಡಿ ಭಕ್ತಿಯಿಂದ ಪೂಜಿಸಿ ಆರತಿ ಮಾಡುತ್ತಿರುವಾಗ, ಅಲೆಗಳು ಬಂದು ಲಿಂಗವನ್ನು, ಆರತಿಯನ್ನು ತೇಲಿಸಿಕೊಂಡು ಹೋದವು. ಅಘಾತದಿಂದ ಸ್ತಬ್ಬಳಾಗಿ ಕುಳಿತೆ, “ಪರಮೇಶ್ವರಾ ನಾನೆಂತಹ ದುರ್ದೈವಿಯು, ಪರಮಪಾಪಿಯು ನಾನ್ಯಾವ ತಪ್ಪು ಮಾಡಿದೆನೆಂದು ನನ್ನ ಕೈಬಿಟ್ಟು ಹೋದೆ. ಏನಪರಾಧ ಮಾಡಿದನೆಂದು ಸಿಟ್ಟು ಮಾಡಿಕೊಂಡು, ಶಂಕರಾ! ನಿನ್ನ ಪೂಜೆಯಾಗದ ಹೊರತು ಪ್ರಸಾದವನ್ನು ಸಹ ನಾನು ಮುಟ್ಟುವುದಿಲ್ಲ” ಹೀಗೆ ಎದೆಬಡಿದುಕೊಂಡು ಅಳುತ್ತಿರಲು ನನ್ನನ್ನು ಸಮಾಧಾನ ಮಾಡಲಿಕ್ಕಾಗದೆ ದಾಸಿಯು ಓಡಿಹೋಗಿ ರಾವಣನನ್ನು ಕರೆ ತಂದಳು. “ಅಮ್ಮಾ ಅಮ್ಮಾ ಏನಾಯಿತು ಏಕೆ ಹೀಗೆ ಅಳುತ್ತಿರುವೆ?”

“ಕುಮಾರ ನನ್ನ ಕರ್ಮಕಥೆಯನ್ನು ಏನೆಂದು ಹೇಳಲಿ, ಲಿಂಗ ಪೂಜೆಯಾಗಿ ಪ್ರಸಾದ ಸ್ವೀಕರಿಸಬೇಕೆನ್ನುವಷ್ಟರಲ್ಲಿ ಲಿಂಗವು ಒಮ್ಮಿಂದೊಮ್ಮೆ ತೆರೆಗಳ ಹೊಡೆತದಿಂದ ಸಮುದ್ರದ ಪಾಲಾಯಿತು.”

“ಸಮುದ್ರದ ಪಾಲು! ಈ ಸಮುದ್ರರಾಜನ ಉದ್ಧಟತನಕ್ಕೆ ಕೊನೆಯಿಲ್ಲ ಯಾರೆಂದು ತಿಳಿದುಕೊಂಡಿರುವನು. ತ್ರಿಭುವನವನ್ನು ಕ್ಷಣಾರ್ಧದಲ್ಲಿ ಪುಡಿಪುಡಿ ಮಾಡುವ ಪ್ರಚಂಡ ರಾವಣಮಾತೆಯ ವ್ರತಭಂಗ ಮಾಡಿದನಲ್ಲ. ಇವನ ಹುಟ್ಟಡಗಿಸುತ್ತೇನೆಂದು ಗದೆಯಿಂದ ಹೊಡೆಯ ಎಗರಿಹೋದನು. “ಕುಮಾರಾ ಸುಮ್ಮನೆ ಸಮುದ್ರರಾಜ ನನ್ನೇಕೆ ದೂಷಿಸುತ್ತೀಯಾ ಇದೆಲ್ಲಾ ನನ್ನ ಪೂರ್ವಾಜಿತ ಕರ್ಮ, ಇಂದೇಕೋ ಆ ಶಿವನಿಗೆ ನನ್ನ ಪೂಜೆ ಬೇಡವಾಗಿದೆ. “ಅಮ್ಮಾ ಇದೆಲ್ಲವೂ ಸ್ವರ್ಗದಲ್ಲಿರುವ ದೇವತೆಗಳ ಕಿತಾಪತಿ ಹೆಜ್ಜೆಹೆಜ್ಜೆಗೂ ನಾನು ಮೇಲೇರದಂತೆ ತುಳಿಯಲು ಪ್ರಯತ್ನಿಸುತ್ತಾರೆ. ರಾವಣನನ್ನು ಮಟ್ಟಹಾಕಬೇಕೆಂದು ಅಹರ್ನಿಶಿ ಯೋಚಿಸುತ್ತಿರುತ್ತಾರೆ.

“ರಾವಣ ದೇವಾನುದೇವತೆಗಳನ್ನು ನಿಂದಿಸಿ ಅವರ ಮೇಲೆ ಹರಿಹಾಯ ಬೇಡ. ದೇವತೆಗಳ ವೈರತ್ವವನ್ನು ಕಟ್ಟಿಕೊಳ್ಳಬೇಡ. ನಿನ್ನ ಪಾಪದ ಫಲವೇ ನನ್ನ ವ್ರತ ಭಂಗಕ್ಕೆ ಕಾರಣವಿರಬೇಕು. ನೀನು ಮಾತೃಭಕ್ತನಲ್ಲ ‘ಮಾತೃದೋಹಿ’ “ತಾಯಿ ಹಾಗೆ ನಿಂದಿಸಬೇಡ ನಾನು ಮಾತೃದೋಹಿಯಲ್ಲ ನಿಜವಾಗಿಯೂ ನಾ ನಿನ್ನ ವಿದೇಯಮಗನು ತಾಯಿ ನೀನು ಸಾಮಾನ್ಯಳೇ ತಮ್ಮ ಗರ್ಭದಿಂದುಸಿದ ನಾನು ನಿಮ್ಮ ದುಃಖವನ್ನು ಹೇಗೆ ಸಹಿಸಲಿ, ನಿಮ್ಮ ದುಃಖವನ್ನು ನಿವಾರಣೆ ಮಾಡದಿದ್ದರೆ ನಾನು ಹುಟ್ಟಿದುದ್ದಕ್ಕೆ ಸಾರ್ಥಕವೇನು? ಅಮ್ಮಾ ನೂರು ಜನ್ಮ ಹುಟ್ಟಿ ಬಂದರೂ ನಿನ್ನ ಋಣ ತೀರಿಸಲಿಕ್ಕಾಗುವುದೇ? ಅಮ್ಮಾ ಈ ಅಲೆಗಳ ಹೊಡೆತಕ್ಕೆ ನಶಿಸುವ ತಾತ್ಕಾಲಿಕ ಲಿಂಗದ ಸಹವಾಸವೇ ಬೇಡ, ರಾವಣನ ತಾಯಿ ನೀನು! ಮರಳಿನ ಲಿಂಗ ಪೂಜಿಸುವುದೇ? ನಿನಗಾಗಿ ಈ ನಿನ್ನ ಮಗನು ನನ್ನ ಆರಾಧ್ಯದೇವನಾದ ಪರಮೇಶ್ವರನ ಪವಿತ್ರ ಆತ್ಮಲಿಂಗವನ್ನೇ ತಂದು ಕೊಡುವೆನು. ನಿಶ್ಚಿಂತೆಯಿಂದ ಅರಮನೆಗೆ ಹೋಗಿ” “ಕುಮಾರ ನಿನ್ನ ಮಾತೃಭಕ್ತಿಗೆ ಎಣೆಯಿಲ್ಲ. ನೀನು ಮಾತೃ ಸೇವಾ ದುರಂಧರನು ಎಂಬುದಕ್ಕೆ ನಿನ್ನ ನುಡಿಮುತ್ತುಗಳೇ ಸಾಕ್ಷಿ. ರಾವಣಾ ಶ್ರೀಶಂಕರನು ಪೂಜಿಸುತ್ತಿರುವ ಆತ್ಮಲಿಂಗ ನಿನ್ನ ಕೈವಶವಾಯಿತೆಂದರೆ ಇಡೀ ಬ್ರಹ್ಮಾಂಡವೇ ನಿನ್ನ ಅದೀನವಾಗುವುದು. ಮಗು ಇದು ಸುಲಭಸಾಧ್ಯವಲ್ಲ. ಪ್ರತಿನಿತ್ಯವೂ ಅದನ್ನು ಪೂಜಿಸಿ, ಆತ್ಮಲಿಂಗದಲ್ಲಿ ಮೈಮರೆಯುವ ಶ್ರೀಶಂಕರನು ತನ್ನ ಆತ್ಮಲಿಂಗವನ್ನು ಹೇಗೆ ತಾನೇ ಕೊಟ್ಟಾನು?

“ಮಾತೆ ಇದೇನು ಹೀಗೆ ಹೇಳುವಿರಿ, ನನ್ನ ಭಕ್ತಿಯನ್ನು ನೀವು ಅರಿಯದವರೇ ಅಖಂಡ ತಪಸ್ಸಿನಿಂದ ಕೈಲಾಸನಾಥನನ್ನು ಮೆಚ್ಚಿಸಿಕೊಂಡು ಆತ್ಮ ಲಿಂಗವನ್ನು ತಾರದೇ ನನ್ನ ಮುಖವನ್ನು ನಿಮಗೆ ತೋರಿಸುವುದಿಲ್ಲ. ನಿಮ್ಮ ವ್ರತನೇಮಗಳ ಪುಣ್ಯದಿಂದಲೂ ನನ್ನ ಭಕ್ತಿ ಪರಾಕಾಷ್ಠತೆಯಿಂದಲೂ ಚಂದ್ರಮೌಳಿಯನ್ನು ಒಲಿಸಿಕೊಂಡು ಆತ್ಮಲಿಂಗವನ್ನು ತರುವೆನು. ನೀವು ನನಗೆ ಆಶೀರ್ವದಿಸಿರಿ” “ಕುಮಾರ ಜಯಶಾಲಿಯಾಗಿ ಹಿಂದಿರುಗು ನಿನ್ನ ಉಜ್ವಲ ಭಕ್ತಿಗೆ ಮೆಚ್ಚಿ ಶಿವ ತನ್ನ ಆತ್ಮಲಿಂಗವನ್ನು ಕರುಣಿಸಲಿ.”

ಆದರೆ ನಾವೊಂದು ಬಗೆದರೆ ದೈವ ಬೇರೊಂದು ಬಗೆಯಿತು. ಆತ್ಮಲಿಂಗಕ್ಕಾಗಿ ಘೋರತಪಮಾಡಿದ ರಾವಣನು ದೇವತೆಗಳ ಕುತಂತ್ರಕ್ಕೆ ಸಿಕ್ಕಿ ಮಾಯೆಯ ಪಾಶಕ್ಕೆ ಒಳಗಾಗಿ ತನ್ನ ವಿವೇಕ ವಿವೇಚನೆಯನ್ನು ಕಳೆದುಕೊಂಡು ಆತ್ಮಲಿಂಗಕ್ಕೆ ಬದಲಾಗಿ ಜಗಜ್ಜನನಿಯಾದ ಪಾರ್ವತಿಯನ್ನು ವರವಾಗಿ ಕೇಳಿ ಕಡುಮೂರ್ಖನೆನಿಸಿದನು. ಪರಮೇಶ್ವರನಾದರೂ ಭಕ್ತ ಪರಾಧೀನ ಭಕ್ತನೊಬ್ಬ ಬಂದು ಕೇಳಿದರೆ ಇಲ್ಲವೆನ್ನುವ ಕರುಣಾಮಯಿ “ಮಗನೊಬ್ಬ ಬಂದು ನನಗೆ ತಾಯಿಬೇಕು. ಕಳುಹಿಸಿಕೊಡು ಎಂದು ತಂದೆಯನ್ನು ಗೋಗರೆದರೆ ಇಲ್ಲವೆನ್ನಲು ಹೇಗೆ ಸಾಧ್ಯ” “ಪಾರ್ವತಿ ಮಗನ ಜೊತೆ ಹೋಗಿ ನಾಲ್ಕಾರು ದಿನ ಇದ್ದು ಬಾರೆಂದು ಕಳುಹಿಸಿಕೊಟ್ಟ ಸಹಾನಾಸಿಂಧು” ಕಡೆಗೆ ನಾರದರ ತಂತ್ರದಿಂದ ಪಾರ್ವತಿ ಭದ್ರಕಾಳಿಯಾಗಿ ಗೋಚರಿಸಿದಾಗ ಶಿವನಿಗೆ ಪತ್ನಿಯನ್ನು ಹಿಂದಿರುಗಿಸಿದ ಧೂರ್ತ ಅರಮನೆಗೆ ಬಂದೊಡನೆ ಮಾಯೆ ಮಾಯವಾದಾಗ ತನ್ನ ತಪ್ಪಿನ ಅರಿವಾಗಿ ತನ್ನ ಪಾಪಕಾರ್ಯಕ್ಕೆ ಹೇಸಿ ಪಶ್ಚಾತ್ತಾಪ ಪಟ್ಟು ನನ್ನ ಕಾಲುಗಳನ್ನು ಹಿಡಿದು ರೋಧಿಸಿ “ಅಮ್ಮಾ ಈಗ ನೋಡುತ್ತಿರು ಈ ನಿನ್ನ ಮಗ ತನ್ನ ಹತ್ತು ತಲೆಗಳನ್ನು ಕತ್ತರಿಸಿ ಶಿವನ ಪಾದದ ಮೇಲಿಟ್ಟು ಆತ್ಮ ಲಿಂಗ ತರುತ್ತೇನೆಂದು ಹೋದವನು, ಸಾಕ್ಷಾತ್ ಶಿವನ ದರ್ಶನವನ್ನೇ ಮಾಡಿಸಿದರು. ಈ ಸಲ ರಾವಣ ಘೋರವಾದ ತಪಸ್ಸು ಮಾಡುವ ಕಷ್ಟ ತೆಗೆದುಕೊಳ್ಳದೆ “ದೇವಾಧಿದೇವಾ ಮಹಾದೇವ ನಾನು ನನ್ನ ತಾಯಿಯ ಸಂತೋಷಕ್ಕಾಗಿ ಬಂದೆನಲ್ಲದೆ ಯಾವ ದುರುದ್ದೇಶವಿಲ್ಲ. ಪ್ರಭು ಅರಿಯದೆ ಮಾಡಿದ ಅಲ್ಪಕಾರ್ಯವನ್ನು ಮನ್ನಿಸಿ ಕೃಪೆ ಮಾಡು ಶಂಕರಾ ಇಗೋ ನೋಡು ನನ್ನ ಹತ್ತು ತಲೆಗಳನ್ನು ಕತ್ತರಿಸುವೆನೆಂದು ನಿರ್ದಾಕ್ಷಿಣ್ಯವಾಗಿ ಒಂಬತ್ತು ತಲೆಗಳನ್ನು ಕತ್ತರಿಸಿ ಕೊನೆಯ ಹತ್ತನೇ ಶಿರಸ್ಸನ್ನು ನಿನ್ನ ಚರಣಕ್ಕರ್‍ಪಿಸುವೆನು. ತಲೆ ಕತ್ತರಿಸಬೇಕು. ಅಷ್ಟರಲ್ಲಿ ದಯಾಮಯನಾದ ಶಂಕರನು ಪ್ರತ್ಯಕ್ಷನಾಗಿ “ಹಾ! ಭಕ್ತತಡೆ, ತಡೆ, ನಿನ್ನ ಭಕ್ತಿಗೆ ಉಗ್ರ ತಪಸ್ಸಿಗೆ ಮೆಚ್ಚಿದೆನು. ನಿನ್ನಂತಹ ಪರಮ ಸದ್ಭಕ್ತನನ್ನು ತ್ರಿಭುವನದಲ್ಲಿ ಕಾಣಲಿಲ್ಲ. “ಭಕ್ತಾ ಬೇಡು ನಿನ್ನಿಷ್ಟ ಬಂದ ವರಗಳನ್ನು ಬೇಡು, ನಿನ್ನ ಭಕ್ತಿಗೆ ಪರವಶನಾದ ಈ ಶಂಕರನು ಅತ್ಯಾನಂದದಿಂದ ಕೊಡುವೆನು.”

“ದೇವಾ ತಮ್ಮ ಅಭಯವನ್ನು ಕೇಳಿ ಧೈರ್ಯಬಂತು. ಕೈಲಾಸನಾಥ! ನನ್ನ ತಾಯಿಯ ಸಂತೋಷಕ್ಕಾಗಿ ಅವಳ ಪೂಜೆಗಾಗಿ ವ್ರತನೇಮಗಳಿಗಾಗಿ ತಾವು ನಿತ್ಯ ಪೂಜಿಸುತ್ತಿರುವ ತಮ್ಮ ಪವಿತ್ರ ಜ್ಯೋತಿರ್‍ಮಯನಾಧ ಆತ್ಮಲಿಂಗವನ್ನು ಕೊಟ್ಟು ನನ್ನ ಜನ್ಮದಾತೆಯನ್ನು ಉದ್ಧರಿಸು ದೇವಾ” “ರಾವಣ ಇದನ್ನೇನು ಅನುಚಿತ ವರವನ್ನು ಬೇಡಿದೆ. ಈ ಆತ್ಮಲಿಂಗದಲ್ಲಿ ಜಗತ್ತಿನ ಸತ್ವವೂ ಒಟ್ಟುಗೂಡಿದೆ. ಇದನ್ನು ಕೊಟ್ಟರೆ ನನ್ನ ಜೀವನವನ್ನೇ ಧಾರೆಯೆರೆದಂತೆ ಇನ್ನೊಮ್ಮೆ ವಿಚಾರ ಮಾಡು ಕಂದಾ.”

“ಪರಮಾತ್ಮ ನನ್ನ ತಾಯಿ ನಾನು ಆತ್ಮಲಿಂಗ ತರುತ್ತೇನೆಂದು ಅನ್ನ ಆಹಾರಾದಿಗಳನ್ನು ಬಿಟ್ಟು ಕೊರಗಿ ಸೊರಗುತ್ತಿರುವರು ತಾಯಿಯ ವಾಂಚಿತವನ್ನು ತೀರಿಸದಿದ್ದರೆ ಮಗನಾಗಿ ಹುಟ್ಟಿ ಸಾರ್ಥಕವೇನು? ನೀವು ಆತ್ಮಲಿಂಗವನ್ನು ದಯಪಾಲಿಸಿದರೆ ನನ್ನ ಜನ್ಮ ಪಾವನವಾಗುವುದು. ಈ ಬಡಭಕ್ತನ ಮೇಲೆ ಕೃಪೆ ಮಾಡಿ ನನ್ನ ತಾಯಿಗೆ ಕೊಟ್ಟ ವಚನದಿಂದ ಮುಕ್ತನನ್ನಾಗಿ ಮಾಡು” “ರಾವಣ ನಿನ್ನಂತಹ ಮಾತೃಭಕ್ತನನ್ನು ನಾನೆಲ್ಲಿಯೂ ಕಾಣಲಿಲ್ಲ. ಆಗಲಿ, ಮಾತೆಯ ಆನಂದಕ್ಕಾಗಿ ಈ ನನ್ನ ಆತ್ಮಲಿಂಗವನ್ನು ಕೊಡುವೆನು. ತೆಗೆದುಕೊ ಒಂದು ಮಾತು ನೀನು ಲಂಕೆಗೆ ಹೋಗುವವರೆಗೆ ಜಾಗರೂಕನಾಗಿರು ಲಿಂಗ ಭೂ ಸ್ಪರ್ಶವಾದರೆ ಅಲ್ಲಿಯೇ ನೆಲೆಯಾಗಿ ಸ್ಥಿರವಾಗುವುದು ಮತ್ತೆ ನಿನ್ನ ಕೈ ಸೇರಲಾರದು ಜಾಗ್ರತೆ.”

ರಾವಣನೇನೋ ಆತ್ಮಲಿಂಗವನ್ನು ಬೇಡಿ ಪಡೆದುಕೊಂಡು ಆದಷ್ಟು ಬೇಗ ಅಮ್ಮನಿಗೊಪ್ಪಿಸಿ ಅವಳ ಆನಂದವನ್ನು ಕಣ್ತುಂಬ ನೋಡಬೇಕೆಂದು ಬರುವಾಗ ಮತ್ತೊಮ್ಮೆ ದೇವತೆಗಳ ಹುನ್ನಾರಕ್ಕೆ ಬಲಿಯಾದನು. ಸ್ವಯಂ ವಿಷ್ಣು, ದೇವತೆಗಳು ಆತ್ಮಲಿಂಗ ದೇಶಬಿಟ್ಟು ದೇಶಕ್ಕೆ ಹೋಗಬಾರದೆಂದು ಯುಕ್ತಿಯಿಂದ ರಾವಣನನ್ನು ಕಟ್ಟಿಹಾಕಿದರು. ತನ್ನ ಸುದರ್ಶನಚಕ್ರದಿಂದ ಸೂರ್ಯನಿಗೆ ಮರೆ ಮಾಡಿ ಸಂಧ್ಯಾಕಾಲವನ್ನುಂಟು ಮಾಡಿದಾಗ ಕರ್ಮಶೀಲನು, ನೇಮನಿಷ್ಠನಾದ ರಾವಣ ಸಂಧ್ಯಾವಂದನೆ ಮಾಡಲು ಕಾತುರನಾದನು, ಮಾಡದೆ ಮುಂದಕ್ಕೆ ಹೋಗುವಂತಿಲ್ಲ ಲಿಂಗವನ್ನು ಭೂಮಿಯಲ್ಲಿ ಇಡುವಂತಿಲ್ಲ. ದ್ವಂದ್ವದಲ್ಲಿ ಸಿಲುಕಿ ಸಮಯಕ್ಕೆ ಸರಿಯಾಗಿ ಕಾಣಿಸಿಕೊಂಡ ಬಾಲಕನನ್ನು (ಗಣಪತಿಯೇ ಬಾಲಕರೂಪ ತಾಳಿದ್ದನು) ಬೇಡಿಕೊಂಡು “ಕೆಲವೇ ನಿಮಿಷಗಳಲ್ಲಿ ಸಂಧ್ಯಾವಂದನೆ ಮಾಡಿ ಬರುತ್ತೇನೆ. ಅಲ್ಲಿಯವರೆಗೆ ಈ ಲಿಂಗವನ್ನು ಹಿಡಿದಿರು ಯಾವುದೇ ಕಾರಣಕ್ಕೂ ಭೂಮಿಯ ಮೇಲೆ ಇಡಬೇಡವೆಂದು ಕಳಕಳಿಯಿಂದ ಪ್ರಾರ್ಥಿಸಿದನು. ಆ ಬಾಲಕನಾದರೋ ಮೊದಲೇ ತೀರ್ಮಾನಿಸಿದಂತೆ ರಾವಣನು ಸಂಧ್ಯಾವಂದನೆ ಮಾಡುವ ಸಮಯ ಕಾದು ರಾವಣನನ್ನು ಮೂರು ಬಾರಿ ಕರೆದು ಬರಲಿಲ್ಲವೆಂದು ಲಿಂಗವನ್ನು ಭೂಮಿಯ ಮೇಲೆ ಇಟ್ಟುಬಿಟ್ಟನು. ಅಲ್ಲಿಗೆ ಎಲ್ಲವೂ ಮುಗಿಯಿತು. ರಾವಣನ ತಪದ ಫಲ ಹಾಳಾಯಿತು. ಸರ್ವಸ್ವವೇ ಹರಣವಾಯಿತು. “ವಿಶ್ವಾಸಘಾತುಕ ಇದೇನು ಮಾಡಿಬಿಟ್ಟೆ, ನಿನ್ನನ್ನು ಕೊಲ್ಲಬೇಕೆಂದರೆ ಬ್ರಹ್ಮಹತ್ಯೆ, ಶಿಶುಹತ್ಯ ದೋಷ ಬಾಲಕನ ತಲೆ ಮೇಲೆ ಕುಟ್ಟಿದನು. ತನ್ನ ಸರ್ವ ಸಾಮರ್ಥ್ಯವನ್ನು ಒಟ್ಟುಗೂಡಿಸಿ ಲಿಂಗವನ್ನು ಕೀಳಲು ಪ್ರಯತ್ನಿಸಿದನು. ಲಿಂಗವನ್ನು ಅಪ್ಪಿಕೊಂಡು ಕಣ್ಣೀರಿನಿಂದ ಅಭಿಷೇಕ ಮಾಡಿದನು.

“ಬಾ ಲಿಂಗವೇ ಬಾ, ಒಂದು ಸಲ ಬಂದು ನನ್ನ ತಾಯಿಯನ್ನು ನೋಡು ನಾನೀಗ ಬರಿಗೈಲಿ ಹೋಗುವುದಿಲ್ಲ. ಇಲ್ಲೇ ನನ್ನ ತಲೆಯನ್ನು ಚಚ್ಚಿಕೊಂಡು ಪ್ರಾಣ ಬಿಡುವೆನು. ಮಾತೃಶೋಕವನ್ನು ನೋಡಲಾರೆ ಅಯ್ಯೋ! ಎಂತಹ ಕೆಲಸವಾಯಿತು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲ, “ಪರಮೇಶ್ವರಾ ಇದೇನು ಮಾಡಿದೆ ನಂಬಿಸಿ ಕುತ್ತಿಗೆ ಕುಯ್ದೆಯಲ್ಲ. ನಾನೀ ಸಂಕಷ್ಟಕ್ಕೆ ಈಡಾಗುತ್ತೇನೆಂದು ಏಕೆ ಎಚ್ಚರಿಸಲಿಲ್ಲ. ದೇವಾ ಕೃಪೆ ಮಾಡು ಆತ್ಮ ಲಿಂಗವು ನನ್ನ ಕೈಗೆ ಸಿಗುವಂತೆ ಮಾಡು. “ಪರಮೇಶ್ವರಾ ಪಾಹಿಮಾಂ ಪಾಹಿಮಾಂ ಚಂದ್ರಶೇಖರ ರಕ್ಷಮಾಂ ರಕ್ಷಮಾಂ”

ರಾವಣನು ಲಿಂಗಕ್ಕೆ ತಲೆಬಡಿದುಕೊಂಡು ವಿಧವಿಧವಾಗಿ ಪ್ರಲಾಪಿಸಿದನು. ತಲೆಯಿಂದ ನೆತ್ತರು ಸುರಿದು ಧಾರಾಕಾರವಾಗಿ ಹರಿಯಿತು. ಭಕ್ತನೆಲ್ಲಿ ಪ್ರಾಣ ಬಿಡುವನೋ ಎಂದು ತಳಮಳಿಸಿ ಭಕ್ತಪರಾಧೀನನಾದ ಪರಮೇಶ್ವರನು ಪ್ರತ್ಯಕ್ಷನಾಗಿ ವಾತ್ಸಲ್ಯದಿಂದ ಹಿಡಿದೆತ್ತಿದನು.

“ರಾವಣಾ ಬಿಟ್ಟುಬಿಡು ಈ ಆತ್ಮಲಿಂಗವನ್ನು, ನೀನಲ್ಲ ನಾನಲ್ಲ ಯಾರಿಂದಲೂ ಅದನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಸಮಾಧಾನ ಮಾಡಿಕೊ ಅಗೋ ನೋಡು ನಿನ್ನ ತಾಯಿ ತಮ್ಮಂದಿರಿಬ್ಬರೂ ಬಂದಿರುವರು” “ಪರಮೇಶ್ವರಾ ದೇವಾ ಇಂದಿಗೆ ನನ್ನ ಅಹಂಕಾರ ಮಮಕಾರಗಳು ಅಳಿದುಹೋದವು. ನನಗೆ ಯಾವ ವರವೂ ಬೇಡ, ಈ ಸಕಲ ಸಾಮ್ರಾಜ್ಯ ಬೇಡ. ನಿನ್ನ ಚರಣಸನ್ನಿಧಿಯೊಂದಿದ್ದರೆ ಸಾಕು, ಇದೇನು ಯೋಗಾ ಯೋಗಾ! ತ್ರಿಮೂರ್ತಿಗಳ ಸಂಗಮ ಇದಕ್ಕಿಂತಲೂ ಹೆಚ್ಚಿನ ಪುಣ್ಯವಿಲ್ಲ. ಅಮ್ಮಾ ನೋಡು ತ್ರಿಮೂರ್ತಿಗಳಿಗೆ ನಮಸ್ಕರಿಸು “ಕಂದಾ ನಿನ್ನಂತ ಸತ್ಪುತ್ರನಿಂದಲೇ ತ್ರಿಮೂರ್ತಿಗಳ ದರ್ಶನಭಾಗ್ಯ ಧನ್ಯ! ರಾವಣ ಧನ್ಯ| ವಿಭೀಷಣನು ಅಣ್ಣನಿಂದ ಈ ದೃಶ್ಯವನ್ನು ಕಾಣುವಂತಾಯಿತೆಂದು ಆನಂದ ಭಾಷ್ಪ ಸುರಿಸಿದನು. “ದೇವಾ ನನ್ನನ್ನು ನಿನ್ನ ಚರಣ ಸನ್ನಿಧಿಗೆ ಸೇರಿಸಿಕೊ”

“ರಾವಣ ಹಾಗಾಗಲೂ ಸಾಧ್ಯವಿಲ್ಲ. ಇನ್ನು ನಿನ್ನ ಕಾಲಾವಧಿಯು ದೂರ ಇರುವುದು ನಿನ್ನ ಭಕ್ತಿಗೆ ಮೆಚ್ಚಿ ನನ್ನ ಹೆಸರನ್ನು ನಿನಗೆ ಇಡುತ್ತಿದ್ದೇನೆ. ಇಂದಿನಿಂದ ನೀನು ರಾವಣನಲ್ಲ. ರಾವಣೇಶ್ವರ! ಆತ್ಮಲಿಂಗವನ್ನು ಹಿಡಿದು ಅದಕ್ಕೊಂದು ಗೋವಿನ ರೂಪ ಕೊಟ್ಟಿದ್ದರಿಂದ ಇಂದಿನಿಂದ ಇದು. ಗೋಕರ್ಣಕ್ಷೇತ್ರ ಭೂಕೈಲಾಸವಾಗಲಿ”

“ಅಮ್ಮಾ ಅಮ್ಮಾ ಹೀಗೇಕೆ ಸುಮ್ಮನೆ ಕುಳಿತೆ, ಗೋಕರ್ಣದ ನೆನಪಾಯಿತೇ?” “ಹೌದು ಮಗು ಅಂದು ನೀನು ಮಾಡಿದ ಸಾಹಸ ತಾಯಿಗಾಗಿ ಪ್ರಾಣದ ಹಂಗು ತೊರೆದು ಆತ್ಮಲಿಂಗವನ್ನು ತಂದೆ ಇಂದು ನನ್ನ ಆತ್ಮದ ಆನಂದಕ್ಕಾಗಿ ನಾ ಹೇಳಿದ ಕೆಲಸ ಮಾಡಲಾರೆಯಾ”

“ಅಮ್ಮಾ ರಾಮನೊಡನೆ ಸಂಧಿ ಮಾಡಿಕೊಳ್ಳುವುದನ್ನು ಬಿಟ್ಟು ಇನ್ನೇನಾದರೂ ಕೇಳಿ, ಬೇಕಾದರೆ ಈಗಲೇ ನನ್ನ ಪ್ರಾಣವನ್ನು ಕೇಳಿ ಬಿಟ್ಟು ಬಿಡುತ್ತೇನೆ” “ರಾವಣ ಯಾರ ಮೇಲೆ ಛಲ ಸಾಧಿಸುತ್ತಿದ್ದೀಯಾ? ನನಗರ್ಥವಾಗುತ್ತಿಲ್ಲ. ನೀನು ಮಾಡುತ್ತಿರುವುದು ಧರ್ಮವಲ್ಲ. ಸಾಧುವಲ್ಲ. ಪುತ್ರಾ ನಾವು ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ತಾಯಿಯಾದವಳು ಮಕ್ಕಳಿಂದ ಧನಕನಕ ಸಂಪತ್ತು ಸಾಮ್ರಾಜ್ಯ ಏನನ್ನು ಬಯಸುವುದಿಲ್ಲ. ನ್ಯಾಯವಾಗಿ ಸಂಪಾದಿಸಿದರೆ ತಾಯ ಹೃದಯಕ್ಕೆ ಆನಂದ, ಮಗ ಒಳ್ಳೆಯ ದಾರಿಯಲ್ಲಿ ನಡೆದು ನಾಲ್ಕು ಜನ ಎಂತಹ ತಾಯಿ ಹಡೆದ ಮಗನೋ” ಎಂದು ಹೊಗಳಿದರೆ ಆತಾಯ ಹೊಟ್ಟೆಗೆ ಪಾಯಸ ಉಂಡಷ್ಟು ಸಂತಸ. ನಾಳೆ ಜಗತ್ತು ಕೈಕಸಿ ಎಂತಹ ಸಮಾಜಘಾತುಕ ಮಕ್ಕಳನ್ನು ಹೆತ್ತಳಲ್ಲ. ಇಂತಹ ಮಕ್ಕಳನ್ನು ಹಡೆಯುವುದಕ್ಕಿಂತ ಬಂಜೆಯಾಗಿಯೇ ಇದ್ದಿದ್ದರೆ ಎಷ್ಟೋ ಚೆನ್ನಾಗಿತ್ತು ಎಂದು ನಿಂದಿಸಬಾರದಲ್ಲ. ಮಗು ಇಷ್ಟು ದಿನಗಳು ನೀನೇನೋ ಮಾಡಿದರೂ ನಾ ಸಹಿಸಿಕೊಂಡಿದ್ದೆ ಆದರೆ ಈಗ ನಿನ್ನಿಂದ ನಮ್ಮ ವಂಶವೇ ನಿರ್ವಂಶವಾಗುವ ಗತಿ ಬಂದಿದೆ. ಈ ತಾಯ ಹೃದಯಕ್ಕೆ ಕಿಚ್ಚುಹಚ್ಚಬೇಡ. ಅದರ ಬದಲು ನನ್ನನ್ನು ಕೊಂದು ನನ್ನ ದೇಹಕ್ಕೆ ಕೊಳ್ಳಿ ಇಟ್ಟುಬಿಡು. ನೆಮ್ಮದಿಯಿಂದ ಪ್ರಾಣ ಬಿಡುತ್ತೇನೆ.

“ಅಮ್ಮಾ ಹಾಗೆಲ್ಲಾ ಮಾತನಾಡಿ ಕರುಳಿಗೆ ಬರೆಹಾಕಬೇಡ, ಅಮ್ಮ ದಯವಿಟ್ಟು ನನ್ನ ಮಾತು ಕೇಳು. ಈ ಯುದ್ಧದಲ್ಲಿ ನನ್ನ ವಂಶ ಕೊನೆಯಾದರೂ ನಿನ್ನ ವಂಶ ಬೆಳೆಯುತ್ತದೆ. ನಿನ್ನ ಇಬ್ಬರು ಮಕ್ಕಳು ಸಮಾಜ ಘಾತುಕರು ದುಷ್ಟರಾಗಿರಬಹುದು. ಆದರೆ ನಿನ್ನ ಮಗ ವಿಭೀಷಣ ಅವನಿಂದ ವಂಶ ಬೆಳೆಯುತ್ತದೆ. ಲಂಕೆ ಉಳಿಯುತ್ತದೆ. ಯೋಚನೆ ಮಾಡಬೇಡಮ್ಮ ನಮ್ಮ ಹಣೆಯ ಬರಹದಲ್ಲಿರುವುದನ್ನು ನಾವು ಅನುಭವಿಸಲೇಬೇಕು. ಎಲ್ಲಾ ಪರಮೇಶ್ವರನ ಇಚ್ಚೆ ಅವನಾಟದ ಸೂತ್ರಕ್ಕೆ ಕುಣಿಯುವವರು ನಾವು ಅಮ್ಮಾ ಚಿಂತೆ ಮಾಡಿ ಆರೋಗ್ಯ ಹಾಳು ಮಾಡಿಕೊಳ್ಳಬೇಡ. ನೀನು ಸಾವಿರ ವರ್ಷ ಬದುಕಬೇಕು, ಈ ರಾವಣೇಶ್ವರನ ತಾಯಿ ಯಾವುದಕ್ಕೂ ಅಂಜಬಾರದು. ನಿನಗೆ ಗೊತ್ತಿದೆ. ಈ ಭೂಮಿಯ ಮೇಲಿನ ಋಣ ಮುಗಿದಾಕ್ಷಣ ಎಲ್ಲರೂ ತೆರಳಲೇಬೇಕಾಗುತ್ತದೆ.

“ರಾವಣ ನನಗೆ ಇಷ್ಟೊಂದು ನೀತಿ ಹೇಳುವ ನೀನು ಏಕೆ ಸರಿದಾರಿಯಲ್ಲಿ ನಡೆಯಬಾರದು.”

ಅಮ್ಮಾ ನಾನೀಗ ತಪ್ಪು ದಾರಿಯಲ್ಲಿ ನಡೆದು ಸುಮಾರು ದೂರ ಬಂದು ಬಿಟ್ಟಿದ್ದೇನೆ. ಹಿಂದಕ್ಕೆ ಹೋಗಲಾರದಷ್ಟು; ಹಿಂದಕ್ಕೆ ಬಂದು ನಾ ಸಾಧಿಸಬೇಕಾಗಿರುವುದು ಅಷ್ಟರಲ್ಲೇ ಇದೆ ಮುಂದೆ ಸಾಗುತ್ತೇನೆ. ಅಳಿವೋ ಉಳಿವೋ ಎಲ್ಲಾ ಪರಮೇಶ್ವನ ಕೈಯಲ್ಲಿ”

“ಹೌದು ಎಲ್ಲವೂ ಅವನ ಕೈಯಲ್ಲಿ! ನೀವಿಬ್ಬರೂ ದುಷ್ಟರಾಗಿ ಹುಟ್ಟುವುದಕ್ಕೆ ನಾನೇ ಕಾರಣ”

“ನೀವು ಕಾರಣ! ಯಾವ ಕಾರಣ? ನಿಮ್ಮ ಒಗಟು ಮಾತು ನನಗರ್ಥವಾಗುತ್ತಿಲ್ಲ. ಅದೇನು ಬಿಡಿಸಿ ಹೇಳಮ್ಮ”

ಹಿಂದೆ ತ್ರಿಪುರಾಸುರನ ನಾಶಕಾಲದಲ್ಲಿ ನಿನ್ನ ಅಜ್ಜ ಸುಮಾಲಿಯು ದೇವತೆಗಳಿಂದ ತಪ್ಪಿಸಿಕೊಂಡು ರಸತಾಳಕ್ಕೆ ಓಡಿಹೋಗಿ ಅಲ್ಲಿ ಸ್ವಲ್ಪ ದಿನಗಳು ಅಡಗಿಕೊಂಡಿದ್ದರು. ಆನಂತರ ನನ್ನ ವಿವಾಹವನ್ನು ಮಾಡಬೇಕೆಂದು ದೇವತೆಗಳ ಸೊಕ್ಕನ್ನು ಮುರಿಯಬೇಕೆಂದು ಹಂಚಿಕೆ ಹಾಕಿ ಯೋಗ್ಯನಾದ ವರನನ್ನು ಹುಡುಕಹತ್ತಿದರು. ಹೀಗಿರುವಾಗ ಒಮ್ಮೆ ಪುಲಸ್ತ್ಯ ಬ್ರಹ್ಮನ ಮಗನಾದ ವಿಶ್ರಾವಸ್ಸುವಿನ ಬೇಟಿಯಾಯಿತು. ವಿಶ್ರಾವಸ್ಸುವಿನ ತಪೋಬಲವನ್ನು ಕಂಡುಕಂಡು ನನ್ನನ್ನು ಕುರಿತು “ಮಗಳೇ ವಿಶ್ರಾವಸ್ಸುವಿಗಿಂತಲೂ ಯೋಗ್ಯನಾದ ವರ ಸಿಗುವುದಿಲ್ಲ. ನೀನು ಇವರನ್ನು ಮದುವೆಯಾಗಿ ಯೋಗ್ಯರಾದ ಮಕ್ಕಳನ್ನು ಪಡೆ, ಅದರಿಂದ ರಾಕ್ಷಸರ ಕಲ್ಯಾಣವೂ ದೇವತೆಗಳ ನಾಶವೂ ಆಗಬೇಕು. ನನ್ನ ಆಪೇಕ್ಷೆಯನ್ನು ಪೂರ್ಣ ಮಾಡು ಎಂದನು. ನನಗಾಗ ತಾರುಣ್ಯ ತುಂಬಿ ತುಳುಕುತ್ತಿತ್ತು. ತಂದೆಯ ಮಾತನ್ನು ವೇದವಾಕ್ಯವೆಂದು ನಂಬಿದೆ. ನನ್ನ ಯೌವ್ವನದಿಂದ ಕಣ್ಣುಗಳ ಸಂಚಿನಿಂದ ವೈಯ್ಯಾರದಿಂದ ವರ್ತಿಸಿ ಮುನಿಯು ನನ್ನ ಬಲೆಗೆ ಬೀಳುವಂತೆ ಮಾಡಿಕೊಂಡು ಮದುವೆಯಾದೆನು. ಒಂದು ದಿನ ವಯಸ್ಸಿಗೆ ಸಹಜ ಆಸೆಯಿಂದ ದೈಹಿಕ ಸುಖಕ್ಕಾಗಿ ಮುನಿಯನ್ನು ಕಾಡಿದೆ. ನನ್ನ ಸೌಂದರ್ಯಕ್ಕೆ ರಸಿಕತೆಗೆ ಮಾರುಹೋಗಿ ನನ್ನ ಬಯಕೆಯನ್ನು ನನ್ನ ಈಡೇರಿಸಿದನು. ಆದರೆ ಪರಿಸ್ಥಿತಿ ಕೈಮೀರಿ ಹೋಗಿತ್ತು. “ಸುಂದರಿಯೇ ಇದು ರಾಕ್ಷಸ ಸಂಚಾರದ ವೇಳೆಯು ಸಂಧ್ಯಾಕಾಲದಲ್ಲಿ ನೀನು ಕಾಮೇಚ್ಚೆಯಿಂದ ಬಂದಿದ್ದರಿಂದ ನಿನಗೆ ರಾಕ್ಷಸರಂತಹ ಇಬ್ಬರು ಗಂಡು ಮಕ್ಕಳೂ ಒಬ್ಬಳು ಹೆಣ್ಣು ಮಗಳು ಹುಟ್ಟುವರು” ಎಂದು ವರ ನೀಡಿದನು. ಅವರ ವರವನ್ನು ಕೇಳಿ ನಾನು ದುಃಖದಿಂದ ಕುಸಿದು ಹೋದೆ. ಆತನ ಕಾಲುಗಳ ಮೇಲೆ ಬಿದ್ದು ಗೋಳಾಡಿದೆ. ನನ್ನ ಕಣ್ಣೀರಿಗೆ ಕರಗಿದ ಆತನು “ಹೆದರಬೇಡ ವಿಷ್ಣುಭಕ್ತನೂ ಧರ್ಮಜ್ಞನೂ ಚಿರಂಜೀವಿಯೂ ಆದ ಒಬ್ಬ ಸತ್ಪುತ್ರ ಹುಟ್ಟುವನೆಂದು ಆಶೀರ್ವದಿಸಿದನು.”

ನಾನು ಅವರೊಂದಿಗೆ ಸುಖವಾಗಿ ಸಂಸಾರ ಮಾಡುತ್ತಿದ್ದೆ. ಕೆಲವು ಮಾಸಗಳಾದ ಮೇಲೆ ನಾನು ಗರ್ಭಿಣಿಯಾದೆ. ನವಮಾಸ ತುಂಬಿದ ಮೇಲೆ ಹತ್ತುಮುಖ, ಇಪ್ಪತ್ತುತೋಳುಗಳಿಂದ ಕೂಡಿದ ಅಜಾನುಬಾಹುವಾದ ನೀನು ಹುಟ್ಟಿದೆ. ನೀನು ಹುಟ್ಟಿದ ಕೂಡಲೇ ದಿಕ್ಕುಗಳು ಕಪ್ಪಾದವು, ನಕ್ಷತ್ರಗಳುದುರಿದವು. ರಕ್ತವೃಷ್ಠಿಯಾಯಿತು. ನಿನ್ನ ಗುಡುಗಿನಂತಹ ಧ್ವನಿಕೇಳಿ ಎಲ್ಲರೂ ಬೆಚ್ಚಿಬಿದ್ದರು. ನಿನಗೆ ‘ರಾವಣ’ನೆಂದು ಹೆಸರಿಟ್ಟರು. ಮುಂದೆ ನಾಲ್ಕು ವರ್ಷದ ನಂತರ ಕುಂಭಕರ್ಣನು ಹುಟ್ಟಿದನು. ಅವನ ಕಿವಿಗಳು ಕುಂಭ (ಕೊಡ)ದಂತೆ ಇದ್ದುದ್ದರಿಂದ ಆ ಹೆಸರಾಯಿತು. ಅನಂತರ ಶೂರ್ಪನಖಿ, ಅವಳ ಉಗುರುಗಳು, ಶೂರ್ಪ (ಮರ) ದಂತೆ ಅಗಲವಾದ್ದರಿಂದ ಆ ಕೂಸಿಗೆ ಶೂರ್ಪನಖಿ ಎಂದು ಹೆಸರು ಬಂತು. ಅವಳಾದರೂ ದುಷ್ಟಳೂ ದುರಾಚಾರಿಯೂ ಆಗಿ ಬೆಳೆದಳು. ನಾಲ್ಕನೇಯವನೇ ವಿಭೀಷಣ, ವಿಷ್ಣುಭಕ್ತನು, ಚಿರಂಜೀವಿಯೂ ಸದಾಚಾರಿಯೂ ಸತ್ಯಪಕ್ಷಪಾತಿಯಾಗಿದ್ದನು. ನಿಮ್ಮ ನಾಲ್ವರಿಗೂ ನಿಮ್ಮ ತಂದೆ ಅಕ್ಷರಾಭ್ಯಾಸ ವೇದಭ್ಯಾಸ ಮಾಡಿಸಿದರು. ನೀನು ತುಂಬಾ ಬುದ್ಧಿವಂತನಾಗಿದ್ದೆ. ಸಕಲ ಪಾಂಡಿತ್ಯವೆಂಬ ಭಾಷ್ಯವನ್ನು ಬರೆದೆ. ಇಷ್ಟೆಲ್ಲಾ ಒಳ್ಳೆಯ ಗುಣಗಳನ್ನು ಹೊಂದಿರುವ ನೀನು ಒಮ್ಮೊಮ್ಮೆ ವಿನಾಕಾರಣ ಬದಲಾಗುತ್ತೀಯಾ, ವೈರತ್ವವನ್ನು ಬೆಳೆಸಿಕೊಳ್ಳುತ್ತೀಯಾ, ಜನರಿಂದ ನಿಷ್ಟುರವನ್ನು ಪಡೆಯುತ್ತೀಯಾ ಮಗು, ರಾವಣ ತಾಯಿಗೆ ಎಷ್ಟೇ ಮಕ್ಕಳಿದ್ದರೂ ಮೊದಲ ಮಗುವಿನಲ್ಲೇ ಹೆಚ್ಚು ಪ್ರೀತಿ. ತಾಯ ಹೃದಯಕ್ಕೆ ಸಂತಸವನ್ನು ತಂದೆ, ತಾಯ್ತನದ ಆನಂದವನ್ನು ಕಂಡೆ, ಹಾಲುಣಿಸಿ ಬೆಳೆಸಿದೆ, ಬಾಲ್ಯದ ಆಟಪಾಠಗಳನ್ನು ನೋಡಿ ಹಿಗ್ಗಿದೆ, ಮಗನ ಮುಂದಿನ ಭವಿಷ್ಯದ ಕನಸುಗಳನ್ನು ಕಾಣುತ್ತಾ ಜೀವನದಲ್ಲಿ ಸುಖ ಸಂತೋಷವನ್ನು ತಂದುಕೊಟ್ಟ ಮೊದಲ ಮಗನಲ್ಲೇ ಅವಳ ಪ್ರಾಣ, ಅವನೇ ಸರ್ವಸ್ವ ತನ್ನ ಮಗ ಚೆನ್ನಾಗಿರಬೇಕು. ಅವನಿಗೆ ಯಾವ ಕೇಡು ತಟ್ಟಬಾರದೆಂದು ತಾಯಹೃದಯ ಚಡಪಡಿಸುತ್ತಿರುತ್ತದೆ. ರಾವಣ, ವಿಭೀಷಣ, ಒಳ್ಳೆಯ ಮಗನಿರಬಹುದು. ನೀನೇನೂ ಕೆಟ್ಟವನಲ್ಲ. ಇದೊಂದು ಕೆಟ್ಟ ಕೆಲಸವನ್ನು ಬಿಟ್ಟು ಬಿಡು. ಮಾಡಿದ ತಪ್ಪನ್ನು ಒಪ್ಪಿಕೊಂಡು ಪಶ್ಚಾತ್ತಾಪ ಪಡು ಶರಣಾಗು, ಆಗ ನಿನ್ನನ್ನು ಕಂಡು ಲೋಕವೇ ಕೊಂಡಾಡುತ್ತದೆ.”

“ಅಮ್ಮಾ ನೀನು ವೀರ ಮಾತೆ, ಯುದ್ಧಕ್ಕಾಗಲಿ, ಪ್ರಾಣಕ್ಕಾಗಲಿ ಹೆದರಬಾರದು. ಸೋಲೋ ಗೆಲುವೋ ಉಳಿವೋ ಅಳಿವೋ ಯುದ್ಧದಲ್ಲಿ ಹೋರಾಡಬೇಕೆಂದು ಧೈರ್ಯಹೇಳು. ಮಕ್ಕಳಿಗೆ ಶರಣಾಗತರಾಗುವ ಸುದ್ದಿಯನ್ನು ಎಂದೂ ಹೇಳಬಾರದು. ರಾಜಕಾರಣವನ್ನು, ಧರ್ಮನಿಷ್ಠೆಯನ್ನು ಪೂರಾ ಬಲ್ಲೆನು. ಅಮ್ಮಾ ನಾನು ಯುದ್ಧದಲ್ಲಿ ಮಡಿದರೆ ಶೋಕಿಸಬಾರದು. ಪರಮಾತ್ಮನ ಸನ್ನಿಧಿಯನ್ನು ಬೇಗ ಸೇರಿದನೆಂದು; ಸರಿಯೋ ತಪ್ಪೋ, ಯಾವುದೇ ರೀತಿಯಿಂದ ನನ್ನ ಮಗ ಮುಕ್ತಿ ಪಡೆದನೆಂದು ಸಂತಸಪಡು. ನೀನು ಚಿಂತೆ ಮಾಡಬೇಡ, ಈಶ್ವರನ ಅನುಗ್ರಹ ನನ್ನ ಮೇಲಿದೆ. ನನ್ನ ಯೋಗಕ್ಷೇಮ ಅವನೇ ನೋಡಿಕೊಳ್ಳುತ್ತಾನೆ.” “ಆಯಿತು ಬಿಡು, ನಿನ್ನ ಹಣೆ ಬರಹವಿದ್ದಂತಾಗಲಿ ದೈವದಲ್ಲಿದ್ದವನ್ನು ಯಾರೂ ತಪ್ಪಿಸಲಾರರು, ಆದದ್ದಾಗಲಿ, ನಾನಿನ್ನು ಬರುತ್ತೇನೆ. ಪರಮೇಶ್ವರ ನಿನಗೆ ಸದ್ಭುದ್ಧಿಯನ್ನು ಮುಕ್ತಿಯನ್ನು ಕರುಣಿಸಲಿ” ತಾಯಿ ಅತ್ತ ಹೋದೊಡನೆ ದುಃಖದಿಂದ ಕಂಠ ತುಂಬಿ ಬಂತು. “ಹೋಗಿ ಬಾ ಅಮ್ಮ, ಈ ಜನ್ಮದ ನನ್ನ ನಿನ್ನ ಋಣ ಇಷ್ಟೆ ಮುಂದಿನ ಜನ್ಮವಿದ್ದರೆ ನಿನ್ನ ಮಗನಾಗಿಯೇ ಹುಟ್ಟಿ ಸುಖಸಂತೋಷವನ್ನು ನಿನ್ನ ಮಡಿಲಿಗೆ ತುಂಬುತ್ತೇನೆ. ಆ ದೇವರು ನಿನಗೆ ಪುತ್ರಪೌತ್ರಾದಿಗಳ ಶೋಕವನ್ನು ಸಹಿಸುವ ಶಕ್ತಿ ಕೊಡಲಿ.”

“ಅಯ್ಯೋ! ಎಷ್ಟು ಹೊತ್ತಾಯಿತು. ಶ್ರೀರಾಮನ ಕಪಿಸೇನೆಯನ್ನು ನೋಡಲು ಹೋಗೋಣವೆಂದು ಪ್ರಹಸ್ತನಿಗೆ ಹೇಳಿದ್ದೆ. ಮಂತ್ರಿವರ್ಯರು ನನಗಾಗಿ ಕಾಯುತ್ತಿರಬಹುದೆಂದು ಕೋಟೆಯತ್ತ ಧಾವಿಸಿದೆ”
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೋವರ್ಧನವನ್ನು ಕಂಡು
Next post ದ್ವೇಷವಿದ್ದಲ್ಲಿ ಈಗಲೆ ನನ್ನ ಶಿಕ್ಷಿಸು

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…