ಅನೂಹ್ಯ…….

ಅನೂಹ್ಯ…….

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಗಂಗಾಧರ ಮಾಸ್ತರರು ಆ ಊರಿಗೆ ವರ್ಗವಾಗಿ ಬಂದ ಬಳಿಕ ಊರಿನ ವಾತಾವರಣವೇ ಬದಲಾಗಿ ಹೋಗಿತ್ತು. ಮಕ್ಕಳ ಪಾಲಿಗೆ ಅವರು ಶಿಕ್ಷೆ ಕೊಡುವ ಅಧ್ಯಾಪಕರಾಗಿರಲಿಲ್ಲ. ಪ್ರೀತಿಯಿಂದ ಹಾಡಿ ಕುಣಿದು ಪಾಠ ಹೇಳಿಕೊಡುವುದು ಅವರ ರೂಢಿ. ಸದಾ ಹಸನ್ಮುಖದ ಗಡ್ಡ ಮೀಸೆ ಎರಡೂ ಬೋಳಿಸಿ ಹಿಂದಿ ಸಿನೆಮಾ ನಟರ ಹಾಗೆ ಕಾಣುವ ಗಂಗಾಧರ ಮಾಸ್ತರರೆಂದರೆ ಹರೆಯದ ಹೆಣ್ಣು ಮಕ್ಕಳಿಗೆ ಒಂಥರಾ ರೋಮಾಂಚನ! ಅವರು ಬಂದ ಮೇಲೆಯೇ ಆ ಊರಿನಲ್ಲಿ ಯುವಕ-ಯುವತಿ ಮಂಡಲಗಳು ಆರಂಭವಾದದ್ದು. ವರ್ಷಕ್ಕೊಮ್ಮೆ ಅವರು ಮನೆ ಮನೆಗೆ ಹೋಗಿ ಹಣ ಸಂಗ್ರಹಿಸಿ ಶಾಲಾ ವರ್ಧಂತಿ ಮಾದಲು ಆರಂಭಿಸಿದ್ದು. ಮಕ್ಕಳಿಗೆ ಒಳ್ಳೆಯ ಕನ್ನಡದ ಪುಸ್ತಕಗಳನ್ನೇ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಅವರಲ್ಲಿ ಓದಿನ ಹುಚ್ಚನ್ನು ಬೆಳೆಸಿದ್ದು. ಯಾವ್ಯಾವುದೋ ನಾಟಕಗಳನ್ನು ನಿರ್ದೇಶಿಸಿ ಗೊಣ್ಣೆ ಬುರುಕ ಮಕ್ಕಳನ್ನು ವೇದಿಕೆಗೆ ಏರಿಸಿದ್ದು. ಯಕ್ಷಗಾನ ತಂಡಗಳನ್ನು ಕರೆಸಿ ರಂಗಿನ ಮಾಯಲೋಕವನ್ನು ಸೃಷ್ಟಿಸಿದ್ದು. ಒಂದೇ ಎರಡೇ.

ಗಂಗಾಧರ ಮಾಸ್ತರರ ಶಾಲಾ ವರ್ಧಂತಿಯ ಜೊತೆಗೆ ಯುವಕ, ಯುವತಿ ಮಂಡಲಗಳು ತಮ್ಮ ವರ್ಧಂತಿಯನ್ನು ಆಚರಿಸತೊಡಗಿದ್ದು ಊರಿನಲ್ಲಿ ಮಿಂಚಿನ ಸಂಚಾರವನ್ನುಂಟು ಮಾಡಿತ್ತು. ಕೆಲವು ನಾಟಕಗಳಲ್ಲಿ ಹೆಣ್ಣುಗಳ ಪಾತ್ರವನ್ನು ಹೆಣ್ಣುಗಳೇ ವಹಿಸಿದ್ದು. ಹಾಡುಗಳಿಗೆ ಯುವಕರೊಡನೆ ಹೆಜ್ಜೆ ಹಾಕಿದ್ದು, ಯಾವ ಹವ್ಯಾಸವೂ ಇಲ್ಲದೆ ಬೇರೆಯವರನ್ನು ದೊರುವುದನ್ನೇ ಕಾಯಕವನ್ನಾಗಿ

ಮಾಡಿಕೊಂಡ ಜನರ ಕಣ್ಣುಗಳನ್ನು ಕೆಂಪಾಗಾಗಿಸಿದ್ದು. ಕೆಲವರಂತೊ ನೇರವಾಗಿ “ನಿಮ್ಮಿಂದಾಗಿ ಊರು ಹಾಳಾಯಿತು ಮಾಸ್ಟ್ರೆ” ಎಂದು ಆಕ್ಷೇಪಿಸಿದ್ದು ಉಂಟು. ಮಾಸ್ಟ್ರು ಅದಕ್ಕೆ ನಗುತ್ತಾ “ನಾಟಿಕ ಯಕ್ಷಗಾನಗಳಿಂದ ಊರು ಒಳ್ಳೆಯದಾಗುತ್ತದೆ. ಬೇಕಂದಾದರೆ ನಿಮಗಾಗಿಯೇ ಒಂದು ನಾಟಕ ಮಾಡೋಣ. ಈ ಊರಿನವರು ಒಪ್ಪದಿದ್ದರೆ ಬೇರೆ ಊರುಗಳಿಂದ ನಟಿಯರನ್ನು ಕರೆಸೋಣ. ನೀವು ಸ್ವಲ್ಪ ಹಣ ಖರ್ಚು ಮಾಡಲು ತಯಾರಿರಬೇಕು ಅಷ್ಟೇ” ಎನ್ನುತ್ತಿದ್ದರು. ಆಗ ಆಕ್ಷೇಪ ಎತ್ತಿದ ಮಂದಿಗಳು ಹೊಸ ಕನಸುಗಳನ್ನು ಕಟ್ಟಿ ರೋಮಾಂಚಿತರಾಗಿ “ಹ್ಞಾಂ….ಹೊಂ….. ನೋಡೋಣ ನೋಡೋಣ” ಎಂದು ತಾವು ಎತ್ತಿದ ಮೂಲ ಪ್ರಶ್ನೆಗಳನ್ನೇ ಮರೆತುಬಿಡುತ್ತಿದ್ದರು. ಕೆಲವೊಮ್ಮೆ ನಾಟಕಗಳಲ್ಲಿ ಚೆನ್ನಾಗಿ ಅಭಿನಯಿಸಿದ ಯುವಕ ಯುವತಿಯರಿಗೆ ಬಹುಮಾನಗಳನ್ನು ಕೊಡುವಷ್ಟರ ಮಟ್ಟಿಗೆ ಗಂಗಾಧರ ಮಾಸ್ತರರ ನಡವಳಿಕೆ ಅವರನ್ನು ಬದಲಾಯಿಸಿ ಬಿಟ್ಟಿತ್ತು.

ಹೀಗೆ ಊರಿಗೆ ಊರೇ ಒಂದು ಬಗೆಯ ರೋಮಾಂಚನದಲ್ಲಿ ಮುಳುಗಿ ಶಾಲಾವರ್ಧಂತಿ ಯಾವಾಗ ಬರುತ್ತದೆಂದು ಕಾಯುವಂತೆ ಮಾಡಲು ಗಂಗಾಧರ ಮಾಸ್ತರರಿಗೆ ಸಾಧ್ಯವಾಗಿತ್ತು. ಅದರ ಜತೆಯಲ್ಲೇ ಅವರು ಸ್ಥಳೀಯ ಸಂಸ್ಕೃತಿಯ ಉಳಿವಿನ ಬಗ್ಗೆ ತಮ್ಮದೆ ಆದ ಪ್ರಯತ್ನಗಳನ್ನು ಮಾಡಹತ್ತಿದರು. ಊರಿನ ಹಿರಿಯ ತಲೆಗಳಿಂದ ಜಾನಪದ ಕತೆ, ಪಾಡು ಪಾಡ್ದನಗಳನ್ನು ಸಂಗ್ರಹಿಸಿ ಅವುಗಳನ್ನು ರೂಪಕಗಳನ್ನಾಗಿ ನೃತ್ಯವನ್ನಾಗಿ ಪರಿವರ್ತಿಸಿ ಹೊಸ ಹೊಸ ಚರ್ಚೆಗಳಿಗೆ ಕಾರಣರಾಗಿದ್ದರು. ಭೂತ ಕಟ್ಟುವವರ ಮನೆಗಳಿಗೆ ಹೋಗಿ ಅವರೊಡನೆ ತಿಂದು ಉಂಡು ಭೂತದ ಸಂಧಿಗಳನ್ನು ಬರಕೊಂಡು ಬಂದು ಬಿಡುತ್ತಿದ್ದರು. ಅವುಗಳನ್ನು ಕಥಾರೂಪಕ್ಕಿಳಿಸಿ ವೈದಿಕೆ ಸಂಸ್ಕೃತಿಯ ಪ್ರವಾಹದಲ್ಲಿ ಸ್ಥಳೀಯ ಸಂಸ್ಕೃತಿಗಳು ಕೊಚ್ಚಿ ಹೋಗಬಾರದೆಂದು ಪ್ರತಿಪಾದಿಸುತ್ತಿದ್ದರು.

ಅಂತಹ ಒಂದು ಸಂದರ್ಭದಲ್ಲಿ ಅವರ ಕಣ್ಣಿಗೆ ಬಿದ್ದದ್ದು ಬೊಳಿಯನ ಮಗ ಕರಿಯ. ಬೊಳಿಯ ಇನ್ನೂರೈವತ್ತು ಭೂತಗಳ ಸಂಧಿಗಳನ್ನು ನೆನಪಿಟ್ಟುಕೊಂಡು ಅಷ್ಟೂ ಭೂತಗಳನ್ನು ಕಟ್ಟುವ ಪ್ರಚಂಡ ಕಲಾವಿದ. ವರ್ಷವಿಡೀ ಅವನಿಗೆ ಪುರುಸೊತ್ತಿಲ್ಲದಷ್ಟು ಕಾರ್ಯಕ್ರಮಗಳು. ಯೋಗ್ಯತೆ ಇದ್ದರೂ ಅವನಿಗೆ ರಾಜ್ಯ ಪ್ರಶಸ್ತಿ ಸಿಕ್ಕಿದ್ದು ಸುಮಾರು ವರ್ಷಗಳ ಬಳಿಕವೇ?

ಅವನ ಬಗ್ಗೆ ಸರಕಾರದ ಯಾವುದೋ ಇಲಾಖಿ ಒಂದು ಸಾಕ್ಷ್ಯಚಿತ್ರವನ್ನು ಮಾಡಿತ್ತು. ಆದರೆ ಅವನಿಗದನ್ನು ನೋಡುವ ಭಾಗ್ಯ ಸಿಕ್ಕಿರಲೇ ಇಲ್ಲ.

ಗಂಗಾಧರ ಮಾಸ್ತರರು ಅವನ ಮನೆಗೆ ಹೋಗಿ ಅವನ ವಿಶ್ವಾಸಗಳಿಸಿ ಅವನ ಬೇಕು ಬೇಡಗಳನ್ನು ಪೂರೈಸಿ ಅವನೊಟ್ಟಿಗೆ ಕುಣಿಯ ಹೋಗಸೊಪ್ಪಿನ ಸಮೇತ ಎಲೆ ಅಡಿಕೆ ಮೆದ್ದು ಅವನಂತೆಯೆ ಅವನ ಮನೆಯಂಗಳದಲ್ಲಿ, ’ಪಿಚಕ್’ ಎಂದು ಉಗುಳಿ ಅವನನ್ನು ಮಾತಿಗಳೆದು ತಮ್ಮ ಸಂಗ್ರಹವನ್ನು ಹೆಚ್ಚಿಸಿಕೊಂಡಿದ್ದರು. ಆಗ ಅಲ್ಲಿ ಓಡಾಡಿಕೊಂಡು ಇರುತ್ತಿದ್ದ ಲಂಗೋಟಿ ವೀರ ಕರಿಯ ಅವರ ಗಮನ ಸೆಳೆದಿದ್ದು.

ತನ್ನ ಬಳಿಕ ಕರಿಯ ಭೂತ ಕಟ್ಟುವ ಕಾಯಕ ಮುಂದುವರಿಸಬೇಕೆನ್ನುವುದು ಬೊಳಿಯನ ಇಂಗಿತವಾಗಿತ್ತು. ಅದಕ್ಕಾಗಿ ಅವನಿಗೆ ಸಂಧಿ-ಪಾಡ್ದನಗಳ ಮೌಖಿಕ ಪಾಠ ಆರಂಭಿಸಿದ್ದ. ಗಂಗಾಧರ ಮಾಸ್ತರರು ಬೊಳಿಯನಲ್ಲಿ ವಿಷಯವೊಂದನ್ನು ಪ್ರಸ್ತಾಪಿಸಿದ್ದರು. ೧೪ ವರ್ಷಗಳವರೆಗೆ ಶಿಕ್ಷಣವನ್ನು ಮಕ್ಕಳಿಗೆ ಖಡ್ಡಾಯವಾಗಿ ನೀಡಲೇ ಬೇಕೆಂದಿರುವ ಸರಕಾರದ ಕಾನೂನಿನ ಬಗ್ಗೆ ಹೇಳುವಾಗ ಬೊಳಿಯ ಗಹಗಹಸಿ ನಕ್ಕಿದ್ದ. “ನಿಮಗೆ ಏನು ಮಾಷ್ಟ್ರೇ ನಿಮ್ಮ ಕಾನೂನಿನಿಂದ ಹೊಟ್ಟೆ ತುಂಬುತ್ತದಾ? ನಾಳೆ ನನ್ನ ಕೈ ಕಾಲು ಬಿದ್ದಾಗ ಭೂತಕಟ್ಟಬೇಕಾದವ ಇವನೇ. ಅವನಿಗೀಗಲೇ ಸರ್ವೀಸ್ ಆಗಬೇಕು. ಸಂಧಿ ಪಾಡ್ದನ ಕಲಿಯಬೇಕು. ಅದು ಬಿಟ್ಟು ಅ ಆ ಇ ಈ ಕಲಿತು ಬದುಕು ಸಾಗಿಸುವುದು ಹೇಗೆ?

ಆದರೆ ಗಂಗಾಧರ ಮಾಸ್ತರರು ಕರಿಯನನ್ನು ಒಮ್ಮೊಮ್ಮೆ ಶಾಲೆಗೆ ಕರೆದೊಯ್ಯುತ್ತಿದ್ದರು. ಒಂದೇ ಬಣ್ಣದ ಉಡುಪು ತೊಟ್ಟ ಮಕ್ಕಳು ತನಗೆ ಗೊತ್ತಿಲ್ಲದ ಹಾಡುಗಳನ್ನು ಹಾಡುವಾಗ ಆಟಗಳನ್ನು ಆಡುವಾಗ ಕರಿಯ ಕಣ್ಣರಳಿಸಿ ನೋಡುತ್ತಿದ್ದ. ತಾನು ಯಾವುದೋ ಭಾಗ್ಯದಿಂದ ವಂಚಿತನಾಗಿದ್ದನೆಂದು ಅವನಿಗೆ ಅನಿಸುತ್ತಿತ್ತು. ಅಪ್ಪನಲ್ಲಿ ಅವನು ಅದನ್ನು ನಿಧಾನವಾಗಿ ಪ್ರಸ್ತಾಪಿಸಿಯೂ ಇದ್ದ.

ಇತ್ತೀಚಿಗೆ ಸಂಧಿ ಪಾಡ್ದನ ಕಲಿಯಲು ಮಗ ಆಸಕ್ತಿ ತೂರಿಸದೇ ಇರುವ ಕಾರಣ ಅಪ್ಪನಿಗೆ ಈಗ ಅರ್ಥವಾಯಿತು. ಗಂಗಾಧರ ಮಾಸ್ತರರ ಮೇಲೆ ಅಪಾರ ಸಿಟ್ಟು ಬಂತು. ಆದರೆ ಬೇರೆ ಯಾವ ಕಲಿತ ಶೂದ್ರರೂ ಹಾಗೆ ಮನೆಯೊಳಗೆ ಬಂದು ತಾವು ಮಾಡಿ ಹಾಕಿದ್ದನ್ನು ತಿಂದು ತಾನು ಹೇಳಿದ್ದನ್ನು ರಾಮಾಯಣ ಮಹಾಭಾರತಕ್ಕಿಂತಲೂ ದೊಡ್ಡದೆಂದು ಬರೆದುಕೊಳ್ಳುತ್ತಿದ್ದರು? ಬೊಳಿಯ ಗೊಂದಲದಲ್ಲಿ ಬಿದ್ದ. ಕೊನೆಗೂ ಮಗನ ಒತ್ತಡಕ್ಕೆ ಮಣಿದು ಬೆನ್ನು ಮೇಲೆ ಹಾಕಿಕೊಳ್ಳುವ ಚೀಲವೊಂದನ್ನು ತಂದು, ಸ್ವಿಚ್ಚ್ ಒತ್ತಿದಾಗ ರಭಕ್ಕನೇ ಬಿಚ್ಚಿಕೊಳ್ಳುವ ಬಣ್ಣದ ಕೊಡೆಯೊಂದನ್ನು ಕೊಟ್ಟು ಶಾಲೆಗೆ ಕಳುಹಿಸಿದ್ದ. ಗಂಗಾಧರ ಮಾಸ್ತರರು ಸಂಜೆ ತೆಗೆದುಕೊಂಡು ಬಂದ ಅರ್ಜಿಯಲ್ಲಿ ಅವರು ಹೇಳಿದ ಜಾಗದಲ್ಲಿ ಎಡಗೈ ಹೆಬ್ಬೆಟ್ಟು ಒತ್ತಿ ಮಗನಾದರೂ ವಿದ್ಯಾವಂತನಾಗುತ್ತಾನಲ್ಲಾ ಎಂದು ಹಿಗ್ಗಿದ್ದ.

ಕರಿಯ ಶಾಲೆಗೆ ಸೇರಿದ ಬಳಿಕ ಗಂಗಾಧರ ಮಾಸ್ತರರು ಬೊಳಿಯನ ಭೂತಗಳನ್ನು ಕೋಲ ನಡೆಯುವಲ್ಲಿಗೆಲ್ಲಾ ಹೋಗಿ ನೋಡುತ್ತಿದ್ದರು. ಈಗಾಗಲೇ ಅನೇಕ ಸಂಧಿ ಪಾಡ್ದನಗಳು ಅವರಿಗೆ ಬಾಯಿಪಾಠವಾಗಿ ಬಿಟ್ಟಿದ್ದವು. ಬೊಳಿಯನಿಂದ ಭೂತದ ಹೆಚ್ಚೆಗಳನ್ನು ಭೂತ ಕೊಡುವ ಅಭಯವನ್ನು ಕಲಿತುಕೊಂಡಿದ್ದರು. ಬೊಳಿಯನಿಗೆ ಅಚ್ಚರಿ ಯಾಗುವಷ್ಟು ಅವರು ಅದರಲ್ಲಿ ನಿಷ್ಣಾತರಾಗಿದ್ದರು. ಊರಿನ ಪಟೇಲರು ಒಮ್ಮೆ ಅದಕ್ಕಾಗಿ ಅವರನ್ನು ಆಕ್ಷೇಪಿಸಿದರು.

“ನೋಡಿ ಮಾಷ್ಟ್ರೇ, ಯಾವ ಕುಲದವರು ಯಾವ ವೃತ್ತಿ ಮಾಡಬೇಕೆನ್ನುವುದು ಹಿರಿಯರು ಮಾಡಿದ ಕಟ್ಟಳೆ. ನೀವು ಅದನ್ನು ಮೀರುತ್ತಿದ್ದೀರಿ. ಇದ್ಯಾಕೋ ನನಗೆ ಸರಿ ಕಾಣುವುದಿಲ್ಲ. ಮಾಷ್ಟ್ರಾದ ನೀವು ಹಾಗೆ ಮಾಡಬಹುದೇ? ಎಂದಿದ್ದರು. ಅದಕ್ಕವರು ನಗುತ್ತಾ “ನಿಮ್ಮ ಪ್ರಕಾರ ನಾನು ಪಾಠ ಮಾಡುವುದು ತಪ್ಪು. ಶೂದ್ರರಿಗೆ ಅಕ್ಷರ ಕಲಿಯುವ ಅಧಿಕಾರ ನಮ್ಮ ಕಟ್ಟಳೆಯಲ್ಲಿ ಇರಲಿಲ್ಲವಲ್ಲಾ.

ಶೂದ್ರರಾದ ನೀವು ನಿಮ್ಮ ಮೊಮ್ಮಕ್ಕಳನ್ನು ಕಾಲೇಜಿಗೆ ಕಳಿಸುವುದು ತಪ್ಪಾಗುವುದಿಲ್ಲವೇ?” ಎಂದು ಪ್ರಶ್ನಿಸಿದ್ದರು. ಪಟೇಲರು ಅದಕ್ಕೆ ಉತ್ತರಿಸಲಾಗದೆ ತಬ್ಬಿಬ್ಬಾಗಿದ್ದರು.

ಕರಿಯ ಶಾಲೆಗೆ ಸೇರಿದ ಬಳಿಕ ತುಂಬಾ ಬದಲಾಗಿ ಹೋಗಿದ್ದ. ಮಾಸ್ತರರ ಪ್ರಭಾವದಿಂದ ಅವನು ಕಲಿಕೆ ಮತ್ತು ಸಂಧಿ ಪಾಡ್ದನಗಳಾ ಸಂಗ್ರಹಕ್ಕೆ ಸಮಾನ ಮಹತ್ತ್ವ ನೀಡಿದ್ದ. ಅಪ್ಪನಿಂದ ಭೂತ ಕಟ್ಟುವ ಶಿಕ್ಷಣ ಪಡೆದುಕೊಂಡಿದ್ದ. ಬೊಳಿಯನಿಗೆ ಮಾಷ್ಟ್ರ ಬಗ್ಗೆ ಅಭಿಮಾನ ಮೂಡುವಂತೆ ಅವನು ಮಾಡಿದ್ದ.

ಊರಿನ ಜಾತ್ರೆಗೆ ಇನ್ನೇನು ತಿಂಗಳಿದೆ  ಎನ್ನುವಾಗ ಬೊಳಿಯನನ್ನು ನಿಶ್ಶಕ್ತಿ ಕಾಡತೊಡಗಿತು. ಸಾಧಾರಣವಾಗಿ ಅವನು ಭಸ್ಮ, ತಾಯ್ತ, ಬೇರು, ಕಷಾಯಗಳಿಂದ ತನ್ನ ಕಾಯಿಲೆಗಳನ್ನು

ಗುಣಪಡಿಸಿಕೊಳ್ಳುತ್ತಿದ್ದ. ಈ ಬಾರಿ ಅವನ ನಿಶ್ಶಕ್ತಿ ಅವನ ಯಾವುದೇ ಪ್ರಯತ್ನಕ್ಕೆ ಜಗ್ಗಲಿಲ್ಲ. ಎರಡು ವಾರ ಕಳೆದರೂ ತಾನು ಸುಧಾರಿಸಿಕೊಳ್ಳದಿರುವುದನ್ನು ನೋಡಿ ಅವನು ದಿಗಿಲುಬಿದ್ದ”ಯಾಕೋ ಮಾಷ್ಟ್ರೇ ಎದೆ ನೋಯ್ತಾ ಇದೆ. ತುಂಬಾ ಹೊತ್ತು ನಿಲ್ಲಲೂ ಕಷ್ಟವಾಗುತ್ತಿದೆ. ಜಾತ್ರೆ ಹತ್ತಿರವಾಯಿತು. ಏನು ಮಾಡುವುದೆಂದು ತೋಚುತ್ತಿಲ್ಲ.” ಎಂದು ತನ್ನ ದುಗುಡವನ್ನು ಅವರಲ್ಲಿ ತೋಡಿಕೊಂಡಿದ್ದ.

ಅವರದನ್ನು ಗಂಭೀರವಾಗಿ ತೆಗೆದುಕೊಂಡು ತಕ್ಷಣ ಡಾಕ್ಟರರ ಬಳಿಗೆ ಕರೆದು ಕೊಂಡು ಹೋದರು. ಉಗುಳು, ರಕ್ತ ಮಲಮೂತ್ರ ಎಂದು ಎಲ್ಲಾ ಪರೀಕ್ಷೆಗಳಾದ ಮೇಲೆ ಡಾಕ್ಟರರು ಎದೆಯ ಎಕ್ಸ್ ರೇ ತೆಗೆದು ನೋಡಿದರು. ಬಳಿಕ ಗುಟ್ಟಾಗಿ ಮಾಸ್ತರರನ್ನು ಕರೆದು”ಇವನ ಬಲ ಕುಪ್ಪಸಕ್ಕೆ ಟಿ.ಬಿ. ಅಟ್ಯಾಕ್ ಆಗಿದೆ. ಒಂದುವರೆ ವರ್ಷ ಇವನು ಟ್ರೀಟ್ ಮೆಂಟ್ ತೆಗೆದುಕೊಳ್ಳಬೇಕಾಗುತ್ತದೆ. ಸಾಯುವ ಭೀತಿಯೇನೂ ಇಲ್ಲ. ಆದರೆ ಟ್ರೀಟ್ ಮೆಂಟ್ ಮುಗಿಯುವ ಮೊದಲು ಪ್ರಯಾಸದ ಕೆಲಸವೇನಾದರೂ ಮಾಡಿದರೆ ಅಪಾಯ ತಪ್ಪಿದ್ದಲ್ಲ.” ಎಂದು ಮಾತ್ರೆ ಇಂಜೆಕ್ಷನ್ ಬರೆದುಕೊಟ್ಟಿದ್ದರು.

ಆಸ್ಪತ್ರೆಯಿಂದ ವಾಪಾಸಾಗುವಾಗ ಮಾಷ್ಟ್ರು “ಬೊಳಿಯ, ನೀನು ಇನ್ನು ಒಂದೂವರೆ ವರ್ಷ ಭೂತ ಕಟ್ಟುವಂತಿಲ್ಲ. ಹೆದರಬೇಡ ಜೀವಕ್ಕೇನೂ ಅಪಾಯವಿಲ್ಲ. ಸರಿ ಚಿಕಿತ್ಸೆ ಮಾಡಿಸಿದರೆ ಒಂದುವರೆ ವರ್ಷದ ನಂತರ ಭೂತ ಕಟ್ಟಬಹುದು” ಎಂದರು. ಬೊಳಿಯ ಅದಕ್ಕೆ ನಗುತ್ತಾ”ನಿಮ್ಮದು ಒಳ್ಳೆ ವಿಶೇಷವಾಯ್ತು ಮಾಷ್ಟೇ. ಇನ್ನು ಹತ್ತು ದಿನಕ್ಕೆ ರಥೋತ್ಸವ ಬರುತ್ತದೆ. ರಥ ಎಳೆಯುವಾಗ ನಾನು ಭೂತವಾಗಿ ಅದರೆದುರು ಕುಣಿಯಲೇ ಬೇಕು. ಇಲ್ಲದಿದ್ದರೆ ರಥೋತ್ಸವ ನಿಂತು ಬಿಡುತ್ತದೆ. ಊರಿನಲ್ಲಿ ಇಲ್ಲದ ದೋಷಗಳು ಕಾಣಿಸಿಕೊಳ್ಳುತ್ತವೆ. ಅಲ್ಲದೆ ಇನ್ನು ಹತ್ತು ದಿನಗಳಲ್ಲಿ ನಾನು ಇನ್ನೊಬ್ಬನನ್ನು ಭೂತ ಕಟ್ಟಲು ಸಿದ್ಧ ಗೊಳಿಸುವಂತಿಲ್ಲ. ನೀವು ಸುಮ್ಮನೆ ಇಲ್ಲದ್ದು ಹೇಳಿ ನನ್ನ ತಲೆ ಹಾಳು ಮಾಡಬೇಡಿ.” ಎಂದಿದ್ದ.

ಅವನನ್ನು ಹೇಗೆ ಭೂತ ಕಟ್ಟದಂತೆ ತಡೆಯುವುದು ಎನ್ನುವುದು ಮಾಷ್ಟ್ರಿಗೂ ದೊಡ್ಡ ಸಮಸ್ಯೆ ಯಾಗಿ ಹೋಯ್ತು. ಕರಿಯನನ್ನು ಭೂತ ಕಟ್ಟಿಸೋಣವೆಂದರೆ ಅವನು ಇನ್ನೂ ತೀರಾ ಚಿಕ್ಕವ.

ಮಾಷ್ಟ್ರೀಗ ಪ್ರತಿ ಸಂಜೆ ಬೊಳಿಯನಲ್ಲಿಗೆ ಹೋಗತೊಡಗಿದರು. ಊರಲ್ಲಿ ವಾರಕ್ಕೊಮ್ಮೆ ಕಾಣಿಸಿಕೊಳ್ಳುತ್ತಿದ್ದ ಬಿಳಿ ಡ್ರೆಸ್ಸಿನ ನರ್ಸಮ್ಮ ನನ್ನು ಪ್ರತಿದಿನ ಕರೆಸಿ ಅವನಿಗೆ ಇಂಜೆಕ್ಷನ್ ಚುಚ್ಚಿಸತೊಡಗಿದರು.

ಒಂದು ದಿನ ಇದ್ದಕ್ಕಿದ್ದ ಹಾಗೆ ಬೊಳಿಯ ಸ್ವಲ್ಪ ರಕ್ತವಾಂತಿ ಮಾಡಿಕೊಂಡಾಗ ಅವನಿಗೆ ದಿಗಿಲಾಯಿತು. ಅಂದು ಸಂಜೆ ಗಂಗಾಧರ ಮಾಷ್ಟ್ರು ಬಂದಾಗ “ಇಲ್ಲ ಮಾಷ್ಟ್ರೇನಾನು ನಂಬಿದ ಭೂತಗಳಿಗೇನೋ ನನ್ನ ಸಿಟ್ಟು ಬಂದಿದೆ. ನಾನಿನ್ನು ಬಹುದಿನ ಬದುಕುವುದಿಲ್ಲವೆನಿಸುತ್ತಿದೆ.” ಎಂದು ಛಾವಣಿ ದಿಟ್ಟಿಸತೊಡಗಿದೆ. ಮಾಷ್ಟ್ರದಕ್ಕೆ ಸಂತೈಸುವ ಸ್ವರದಲ್ಲಿ ” ಅಂತದ್ದೇನೂ ಆಗುವುದಿಲ್ಲ. ಈ ಬಾರಿ ಮಾತ್ರ  ಭೂತ ನೀನು ಕಟ್ಟಲೇಬೇಡ. ಕಟ್ಟಿದರೆ ಆ ಭೂತ ಬೇಗ ಅದರೆ ಬಳಿಗೆ ನಿನ್ನನ್ನು ಕರೆಸಿಕೊಳ್ಳುತ್ತದೆ” ಎಂದರು. “ಉಂಟಾ ಮಾಷ್ಟ್ರೇ ವರ್ಷಕೊಮ್ಮೆ ನಡೆಯುವ ರಥೋತ್ಸವ ನಾನು ನಿಲ್ಲಿಸಿಬಿಡುವುದೇ?” ಎಂದವನು ಪ್ರಶ್ನಿಸಿದಾಗ “ನೀನು ಹೆದರಬೇಡ. ನಾನೆಲ್ಲ ವ್ಯವಸ್ಥೆ ಮಾಡಿದ್ದೇನೆ” ಎಂದು ಅವನ ಕಿವಿಯಲ್ಲಿ ಏನೋ ಪಿಸುಗುಟ್ಟಿದರು. ಬೊಳಿಯ ಈ ಬಾರಿ ಜಾತ್ರೆಗೆ ಭೂತ ಕಟ್ಟುವುದಿಲ್ಲವೆಂದೂ ಪಕ್ಕದ ಊರಿನಿಂದ ಯುವ ಕಲಾವಿದನೊಬ್ಬ ಬರಲಿದ್ದಾನೆಂದೂ ಊರಲ್ಲಿ ದಟ್ಟ ವಾರ್ತೆ ಹಬ್ಬಿತು.

ಆ ವರ್ಷ ಭರ್ಜರಿಯಾಗಿಯೇ ರಥೋತ್ಸವ ನಡೆಯಿತು. ಭೂತದ ಕುಣಿತವೂ ಭರ್ಜರಿಯಾಗಿಯೇ ಇತ್ತು. ಭೂತದ ನುಡಿಗಳನ್ನು ಕೇಳುವವರಿಗೆ ಇದೆಲ್ಲೋ ಕೇಳಿದ ಸ್ವರದಂತಿದೆಯಲ್ಲಾ ಅಂತ ಅನಿಸಿತ್ತಿತ್ತು. ರಥೋತ್ಸವ ಮುಗಿದ ಮರುದಿನ ಊರಿನಲ್ಲಿ ರಹಸ್ಯ ಸ್ಫೋಟವಾಯಿತು. “ಈ ಬಾರಿ ಭೂತ ಕಟ್ಟಿದ್ದು ಗಂಗಾಧರ ಮಾಷ್ಟ್ರಂತೆ!”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಜ್ಜಿ ಅಜ್ಜೀ
Next post ಈ ಪರಿಯ ಸೊಬಗು

ಸಣ್ಣ ಕತೆ

 • ಮುದುಕನ ಮದುವೆ

  ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

 • ಕತೆಗಾಗಿ ಜತೆ

  ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

 • ಡಿಪೋದೊಳಗಣ ಕಿಚ್ಚು…

  ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

 • ಮಿಂಚು

  "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

 • ದೊಡ್ಡವರು

  ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…