ಅಜ್ಜೀ ಅಜ್ಜೀ ಯಾವಾಗ್ಲೂ ನಾನ್
ನಿನ್ ಜೊತೇನೇ ಇರ್‍ತೀನಿ
ನಿನ್ಹಾಗೇನೇ ನಾನೂನೂ
ಏಕಾದಶೀ ಮಾಡ್ತೀನಿ.

ನಿನ್ಹಾಗೇನೇ ಬೆಳಿಗ್ಗೆ ಪಾವು
ಉಪ್ಪಿಟ್ ಮಾತ್ರ ತಿಂತೀನಿ
ಹಾಲನ್ ಕುಡಿದು ಕಣ್ಮುಚ್ಚಿ
ಮಿಣಿ ಮಿಣಿ ಜಪ ಮಾಡ್ತೀನಿ
ದೇವರ ಪ್ರಸಾದ ಅಂತ ನಾಲ್ಕೇ
ರಸಬಾಳೇ ಹಣ್ ತಿಂತೀನಿ;
ಒಂದೇ ಲೋಟ ಪಂಚಾಮೃತಾನ
ತೀರ್ಥ ಅಲ್ವೆ, ಕುಡಿತೀನಿ

ಸಂಜೇ ಹೊತ್ತಿಗೆ ಎರಡೇ ಎರಡು
ಮೋಸುಂಬೀ ಹಣ್ ಸಾಕಜ್ಜೀ
ಒಂದೇ ಸೇಬು, ಒಂದೇ ಕಿತ್ಲೆ
ಕಾಫೀ ಗೀಫೀ ಬೇಡಜ್ಜೀ!
ರಾತ್ರಿ ಒಂದಿಷ್ಟ್ ಮೊಸರವಲಕ್ಕಿ
ಒಂದೇ ಲೋಟ ಪಾಯ್ಸಾನ
ರಾಮಾ ಅಂತ ಮುಗಿಸಿ ತೆಪ್ಪಗೆ
ಮಲಗ್ಬಿಡೋಣ, ಏನಜ್ಜೀ?

ಇದ್ದೇ ಇದೆ ಪ್ರತೀ ದಿನಾನೂ
ಹೊಟ್ಟೆ ತುಂಬ ಉಣ್ಣೋದು
ಹದಿನೈದ್ ದಿನಕ್ಕೆ ಒಂದ್ಸಲವಾದ್ರೂ
ಉಪಾಸ ಮಾಡೋದೊಳ್ಳೇದು.
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)