ನೆಳಲೆಮಠದ ಶ್ರೀಗಳು

ನೆಳಲೆಮಠದ ಶ್ರೀಗಳು

“ಎಲ್ಲವೂ ಮುಳುಗಿಹೋಯಿತೆ?” ಎಂದರು ಸ್ವಾಮಿಗಳು. ಪಾರುಪತ್ತೆ ಗಾರರು ತಂದ ಸುದ್ದಿಯಿಂದ ದಂಗಾದ ಅವರು, ಮಧ್ಯಾಹ್ನದ ಭೋಜನ ಮುಗಿಸಿ ಗಾದಿಗೆ ಒರಗಿ ಅರ್ಧ ನಿದ್ರೆ ಅರ್ಧ ಎಚ್ಚರದ ಮಂಪರಿನ ಸುಖದಲ್ಲಿದ್ದವರು, ತಟ್ಟನೆ ಎದ್ದು ಕುಳಿತಿದ್ದರು. “ತಂತಿಯಲ್ಲಿರುವುದು ಮಠ ನೆರೆನೀರಿನಲ್ಲಿ ಮುಳುಗಿದೆ ಎಂದು. ಎಲ್ಲವೂ ಮುಳುಗಿದೆಯೆ ಇಲ್ಲವೆ, ಮಠದ ಕಟ್ಟಡ ಕುಸಿದು ಬಿತ್ತೆ ಇಲ್ಲವೆ ಎಂಬ ಯಾವ ವಿವರವೂ ಇಲ್ಲ. ಅದು ಹಳೆಯ ಕಟ್ಟಡವಾದ್ದರಿಂದ ಕುಸಿದು ಹೋಗಿರುವ ಸಾಧ್ಯತೆಯಿದೆ” ಎಂದರು ಪಾರುಪತ್ತೆಗಾರರು. ಆಗತಾನೆ ಕೈಸೇರಿದ್ದ ತಂತಿಯನ್ನು ಅವರು ಸ್ವಾಮಿಗಳಿಗೆ ನೀಡಿದರು. ಸ್ವಾಮಿಗಳು ಅದನ್ನು ತೆಗೆದುಕೊಂಡು ತಿರುಗಿಸಿ ನೋಡಿ ಇನ್ನೇನೂ ತೋಚದೆ ಪಾರುಪತ್ತೆಗಾರರಿಗೆ ಹಿಂತಿರುಗಿಸಿ ಕೊಟ್ಟರು.

“ಪ್ರಾಣಹಾನಿಯಾಗಿದೆಯೆ?” ಎಂದರು.

“ಇರಲಾರದು. ಇದ್ದಿದ್ದರೆ ತಂತಿಯಲ್ಲಿ ಆ ಬಗ್ಗೆ ವಿವರ ಇರುತ್ತಿತ್ತು.”

“ಈಗ ನಮ್ಮ ಕರ್ತವ್ಯವೇನು?”

“ಅದನ್ನು ಕೇಳೋಣವೆಂದೇ ಸನ್ನಿಧಿಗೆ ಬಂದೆ” ಎಂದರು ಪಾರುಪತ್ತೆಗಾರರು. ಅವರ ನಿಜವಾದ ಹೆಸರು ಕೃಷ್ಣಶಾಸ್ತ್ರಿ ಎಂದಿದ್ದರೂ ಪಾರುಪತ್ತೆ ಗಾರರೆಂದೇ ಅವರು ಊರಲ್ಲೆಲ್ಲ ಪ್ರಸಿದ್ಧರು. ಶಾಸ್ತ್ರಿಗಳು ಹಲವು ಕಾಲದಿಂದ ನೆಳಲೆ ಮಠದ ಪಾರುಪತ್ತೆಗಾರಿಕೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿದ್ದಾರೆ. ಗತಿಗೋತ್ರವಿರದ ಮಠಕ್ಕೆ ಸಾಕಷ್ಟು ಆಸ್ತಿಪಾಸ್ತಿ ಯನ್ನೂ ಶಿಷ್ಯವರ್ಗವನ್ನೂ ಸಂಪಾದಿಸಿಕೊಟ್ಟು ಅದಕ್ಕೊಂದು ಹೆಸರನ್ನು ತಂದವರು ಅವರೇ. ಶಾಸ್ತ್ರಿಗಳು ಈಗಿನ ಸ್ವಾಮಿಗಳಿಗಿಂತ ವಯಸ್ಸಿನಲ್ಲಿ ಸುಮಾರು ಹತ್ತು ವರ್ಷ ಹಿರಿಯರು – ಆದರೆ ಮುದುಕರೇನಲ್ಲ. ಹಿಂದಿನ ಹಿರಿಯ ಸ್ವಾಮಿಗಳು ಕಾಲದಲ್ಲಿ ಕೇವಲ ಚಾಕರಿಗೆಂದು ಮಠದ ಸಂಪರ್ಕಕ್ಕೆ ಬಂದು ಕ್ರಮೇಣ ಅವರಿಂದ ಮೆಚ್ಚುಗೆಗಳಿಸಿ ಪಾರುಪತ್ತೆಗಾರಿಕೆಗೆ ಬಂದಿದ್ದರು.

“ಈ ವಾರ್ತೆಯಿಂದ ನಾವು ದಿಙ್ಮೂಢರಾಗಿದ್ದೇವೆ. ನಮ್ಮ ತಲೆಯೊಳಗೆ ಏನೊಂದೂ ಹೊಳೆಯುತ್ತಿಲ್ಲ. ” ಎಂದರು ಸ್ವಾಮಿಗಳು.

“ಈ ಸಂದರ್ಭದಲ್ಲಿ ಊರಿಗೆ ಮರುಳುವುದೊಂದೇ ದಾರಿಯೆಂದು ನನಗನಿಸುವುದು.”

“ಆದರೆ ನಾವೀಗ ಚಾತುರ್ಮಾಸ್ಯದಲ್ಲಿದ್ದೇವಷ್ಟೇ. ಹೀಗಿರುತ್ತ ಮರಳುವುದು ಉಚಿತವೆನಿಸುತ್ತದೆಯೆ?”

“ವಿಪತ್ಕಾಲದಲ್ಲಿ ಎಲ್ಲವೂ ಉಚಿತ. ಬೇಗನೆ ಮರಳಿದರೆ ಏನನ್ನಾದರೂ ಉಳಿಸುವುದು ಸಾಧ್ಯವೋ ಎಂದು ನೋಡಬಹುದು.”

“ನಾವು ಯೋಚಿಸುತ್ತಿರುವುದು ಆ ಬಗ್ಗೆಯೇ?” ಎಂದರು ಸ್ವಾಮಿಗಳು. ನೆಳಲೆಮಠ ನಾಲ್ಕು ಸೂತ್ರದ ಮಣ್ಣಿನ ಮನೆ. ಇದರ ಒಂದು ಸೂತ್ರದಲ್ಲಿ ಸ್ವಾಮಿಗಳ ವಾಸಸ್ಥಾನ, ಪಕ್ಕದಲ್ಲೇ ಶಾರದಾಂಬಾ ಗುಡಿ. ರಕ್ಷಣೆಯ ದೃಷ್ಟಿಯಿಂದ ಮಠದ ಚಿನ್ನಾಭರಣಗಳನ್ನೂ ಹಲವಾರು ಸಾವಿರದಷ್ಟು ಬೆಲೆಯ ಕರೆನ್ಸಿ ನೋಟುಗಳನ್ನೂ ಶಾರದಾಂಬ ವಿಗ್ರಹದ ಕೆಳಗೆ ಗುಪ್ತಕುಂಡವೊಂದರಲ್ಲಿ ಹೂತುಹಾಕಿತ್ತು. ಇಡಿಯ ಮಠವೇ ನೀರಲ್ಲಿ ಮುಳುಗಿದ ಮೇಲೆ ಇದು ಉಳಿಯುತ್ತದೆಯೆ?

ನಮಗನಿಸುವುದೆಂದರೆ ನಾವು ಸಂಪೂರ್ಣವಾಗಿ ಮುಳುಗಿದೆವು-ಸರ್ವಸಾರ ವಾಯಿತು ಎಂದು” ಎಂದರು ಶ್ರೀಗಳು.

“ಶ್ರೀಗಳು ಹಾಗೆ ನಿರಾಶರಾಗಬಾರದು. ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾಯಶಿಷ್ಯತೆ.”ಎಂದರು ಪಾರುಪತ್ತೆಗಾರರು.

ಸ್ವಾಮಿಗಳು ಸಂಸ್ಕೃತ ಓದಿದವರಲ್ಲವಾದ್ದರಿಂದ ಹಾಗಂದರೇನೆಂದು ಕೇಳುವ ಮನಸ್ಸಾದರೂ ಕೇಳುವುದಕ್ಕೆ ಹೋಗಲಿಲ್ಲ. ಅದಕ್ಕೆ ಬದಲಾಗಿ “ಚಾತುರ್ಮಾಸ್ಯದ ಸಮಯದಲ್ಲಿ ಮಠಕ್ಕೆ ಮರಳಿದ ಪ್ರಸಂಗಗಳಿವೆಯೆ?” ಎಂದು ಕೇಳಿದರು.

“ಇಲ್ಲದೇನೊ ಇಲ್ಲ, ಹಿರಿಯ ಸ್ವಾಮಿಗಳ ಕಾಲದಲ್ಲಿ ಒಮ್ಮೆ ಹೀಗಾಯಿತು. ಅವರು ಚಾತುರ್ಮಾಸ್ಯದಲ್ಲಿದ್ದ ಬಳ್ಳಾರಿ ಕಡೆ ಪ್ಲೇಗು ಹತ್ತಿದ್ದರಿಂದ ಅರ್ಧದಲ್ಲಿ ಮರಳಬೇಕಾಯಿತು. ಇಷ್ಟಕ್ಕೂ ನಾವು ಮಠಕ್ಕೆ ವಾಪಸಾಗುತ್ತಿಲ್ಲವಷ್ಟೆ. ಮಠವೇ ನೀರಿನಲ್ಲಿ ಮುಳುಗಿದ ಮೇಲೆ ಆ ಪ್ರಶ್ನೆ ಏಳುವುದಿಲ್ಲ.”

“ಅದು ನಿಜ. ಊರಿಗೆ ಮರಳಿದರೆ ನಮ್ಮ ಪರಿವಾರ ಇಳಿದುಕೊಳ್ಳುವುದೆಲ್ಲಿ?”

“ಮರಳಿದ ಮೇಲೆ ನೋಡೋಣ.”

“ಹಾಗಾದರೆ ಪ್ರಯಾಣಕ್ಕೆ ಏರ್ಪಾಟು ಮಾಡಿರಿ.”

ಆ ವರ್ಷ ಅವರು ಚಾತುರ್ಮಾಸ್ಯಕ್ಕೆಂದು ಬಂದುದು ಶಿವಮೊಗ್ಗೆಗೆ. ಬಂದು ಇನ್ನೂ ಒಂದು ತಿಂಗಳು ಕೂಡ ಸಂದಿರಲಿಲ್ಲ. ಅಷ್ಟರಲ್ಲೆ ಸ್ವಾಮಿಗಳು ವಾಪಸಾಗುತ್ತಾರೆಂಬ ಸಂಗತಿ ಶಿವಮೊಗ್ಗೆಯ ಶಿಷ್ಯವರ್ಗವನ್ನು ಚಿಂತೆಯ ಕಡಲಲ್ಲಿ ಮುಳುಗಿಸಿತು. ಮಠಕ್ಕೆ ನೆರವಾಗಲೆಂದು ಸಾಕಷ್ಟು ಕಾಣಿಕೆ ಹಣವನ್ನು ಸಂಗ್ರಹಿಸಲಾಯಿತು. ಈ ಕಾಣಿಕೆ ಹಣದೊಂದಿಗೆ ಮತ್ತು ಮುಂದೆ ಸದ್ಯದಲ್ಲೇ ಇದಕ್ಕೂ ಹೆಚ್ಚಿನ ಸಹಾಯದ ಆಶ್ವಾಸನೆಯೊಂದಿಗೆ ನೆಳಲೆಮಠದ ಸ್ವಾಮಿಗಳ ಪರಿವಾರ ಮರುದಿನ ಮುಂಜಾನೆಯೇ ಶಿವಮೊಗ್ಗೆಯನ್ನು ಬಿಟ್ಟಿತು.

ಎಷ್ಟೇ ತರಾತುರಿಯಲ್ಲಿದ್ದರೂ, ಸಕತ್ತಾದ ಮಳೆಯಿಂದ ಮಾರ್ಗಗಳು ಕೊರಕಲಾಗಿಬಿಟ್ಟುದರಿಂದ ಹಾಗೂ ಅವರ ವಾಹನಗಳು ಒಂದೆರಡು ಬಾರಿ ಕೆಟ್ಟು ಹೋದ್ದರಿಂದ ಊರು ತಲಪುವಾಗ ಮತ್ತೆರಡು ದಿನಗಳೇ ಆದವು. ಸ್ವಾಮಿಗಳ ನಿರೀಕ್ಷೆಯಲ್ಲಿದ್ದ ಊರವರು ಅವರನ್ನು ಸ್ವಾಗತಿಸಿ ಅವರಿಗೊಂದು ತಾತ್ಕಾಲಿಕ ನೆಲೆಯೋದಗಿಸುವುದಕ್ಕೆ ಚಿಕ್ಕದೊಂದು ಕಮಿಟಿಯನ್ನು ಮಾಡಿಕೊಂಡಿದ್ದರಿಂದ ಹೆಚ್ಚಿನ ತೊಂದರೆಯೇನೂ ಆಗಲಿಲ್ಲ. ಸ್ವಾಮಿಗಳು ಹಿರಿಮನೆ ನಾರಾಯಣ ಭಟ್ಟರಲ್ಲಿ ತಂಗುವುದೆಂದಾಯಿತು. ಭಟ್ಟರು ಆಸ್ತಿಕರು ಧರ್ಮಿಷ್ಟರು ಮಾತ್ರವಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಭಾರೀ ಶ್ರೀಮಂತರು. ದೊಡ್ಡದಾದ ಮನೆ, ಅದಕ್ಕೆ ಹೊಂದಿದ ಉಪಗೃಹ, ಕೆಲಸ ಕಾರ್ಯಗಳಿಗೆ ಆಳು ಕಾಳುಗಳು ಎಲ್ಲಾ ಇದ್ದುವು. ಉಪಗೃಹವನ್ನು ಸ್ವಾಮಿಗಳಿಗೋಸ್ಕರ ತೆರವು ಮಾಡಿ, ಅವರ ಪೂಜೆ ಪುನಸ್ಕಾರ, ಸ್ನಾನ, ಶಯನ ಇತ್ಯಾದಿಗಳಿಗೆಲ್ಲ ಅನುಕೂಲತೆ ಒದಗಿಸಲಾಗಿತ್ತು. “ಶ್ರೀಗಳು ಇಲ್ಲಿರುವಷ್ಟು ಕಾಲ ಯಾವುದಕ್ಕೂ ಕೊರತೆ ಬೀಳದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಈ ಅವಕಾಶ ದೊರೆತುದು ನಮ್ಮ ಭಾಗ್ಯ.” ಎಂದು ಭಟ್ಟರು ಕಾಣಿಕೆಯೊಂದಿಗೆ ಉದ್ದಂಡ ನಮಸ್ಕರಿಸಿದರು. ಅಲ್ಲಿ ನೆರೆದಿದ್ದ ಇತರ ಮುಖ್ಯಸ್ಥರೂ ಹಾಗೆಯೇ ಮಾಡಿದರು.

ನಂತರ ಅವರೆಲ್ಲ ಪಾರುಪತ್ತೆ ಗಾರರೊಂದಿಗೆ ಆಪ್ತಾಲೋಚನೆ ನಡೆಸಲು ತೆರಳಿದರು. ನೆಳಲೆ ಮಠ ಇದ್ದುದು ನೆಳಲೆ ಹೊಳೆಯ ದಂಡೆಯ ಮೇಲೆ. ಹೊಳೆಯಲ್ಲಿ ಆಗಾಗ ನೆರೆ ಬರುವುದು ಇದ್ದದ್ದೇ ಆದರೂ ಈ ಪ್ರಮಾಣದಲ್ಲಿ ಎಂದೂ ಬಂದಿರಲಿಲ್ಲ. ಎಡೆಬಿಡದೆ ಬಂದ ಜಡಿಮಳೆಯಿಂದಾಗಿ ಪಕ್ಕದ ಗುಡ್ಡವೊಂದು ಜರಿದು ಬಿದ್ದು ಪ್ರವಾಹವನ್ನು ತಡೆದುದರಿಂದ ಮಠ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಈಗ ಪ್ರವಾಹ ಇಳಿದಿದ್ದರೂ, ಪ್ರವಾಹ ತಂದಿದ್ದ ಕೊಚ್ಚಿ ಕೆಸರು ಎಲ್ಲೆಲ್ಲೊ ತುಂಬಿದ್ದು, ಅಲ್ಲೊಂದು ಪುರಾತನ ಮಠವಿತ್ತು ಎಂಬ ಕುರುಹು ಕೂಡ ಕಾಣಿಸುವಂತಿರಲಿಲ್ಲ. ಹೊಸ ಮಠ ಕಟ್ಟಬೇಕಾದರೆ-ಬೇಕಾದರೆ ಎಂಬ ಪ್ರಶ್ನೆಯಿದೆಯೇ? ಅದು ಈಗಿನ ನಿವೇಶನದಲ್ಲಿ ಸಾಧ್ಯವಿರಲಿಲ್ಲ. ಎತ್ತರದ ನಿವೇಶನವೊಂದು ಬೇಕಾಗಿತ್ತು. ಇಂಥ ನಿವೇಶನಕ್ಕೆ ಭೂಮಿ ಕೊಡಲು ಊರವರೊಬ್ಬರು ಮುಂದೆ ಬಂದಿದ್ದರಿಂದ ಅದೊಂದು ಸಮಸ್ಯೆಯಾಗಿರಲಿಲ್ಲ. ಸಮಸ್ಯೆ ಯೆಂದರೆ ಹೊಸ ಕಟ್ಟಡ ಕಟ್ಟಿಸಲು ಬೇಕಾದ ಹಣ. ಕಟ್ಟಡ ಮಾತ್ರವೇ ಸಾಕೆ, ಒಂದು ಮಠವೆಂದ ಮೇಲೆ ಪೀಠೋಪಕರಣ ಪಾತ್ರೆ ಪಗಡೆ, ಸ್ವಾಮಿಗಳ ಬಟ್ಟೆ ಬರೆ, ಪೂಜೆಗೆ ಸಂಬಂಧಿಸಿದ ಉಪಕರಣಗಳು, ಕಳೆದು ಹೋದ ಪಂಚಶಿಲೆಯ ಶಾರದಾಂಬ ವಿಗ್ರಹ…. ಹೀಗೆ ನೂರೆಂಟು ಖರ್ಚು. ಇವಕ್ಕೆಲ್ಲ ಹಣ ಎಲ್ಲಿಂದ? ಮಠದ ಇಷ್ಟು ವರ್ಷದ ಉಳಿತಾಯ, ಅದೇನಾದರೂ ಇದ್ದರೆ ಎಷ್ಟು, ಎಲ್ಲಿದೆ ಎಂಬ ಪ್ರಶ್ನೆಗಳನ್ನು ಯಾರೂ ಎತ್ತದಿದ್ದರೂ ಪಾರುಪತ್ತೆಗಾರರೇ ಅಂಥದೇನೂ ಇಲ್ಲವೆಂದೂ, ಇದ್ದುದೆಲ್ಲ ನೀರು ಪಾಲಾಯಿತೆಂದೂ ಹೇಳಿದರು. ಎಂದ ಮೇಲೆ ಮೊತ್ತಮೊದಲಿನ ಕೆಲಸವೆಂದರೆ ಧನಸಂಗ್ರಹ-ಅದಕ್ಕೆಂದು ಒಂದು ಕಮಿಟೀಯನ್ನು ಮಾಡಿದರು.

ರಾತ್ರಿ ಎಲ್ಲರೂ ಮಲಗಿದ ಮೇಲೆ ಸ್ವಾಮಿಗಳು ಪಾರುಪತ್ತೆಗಾರರನ್ನು ಕರೆಸಿಕೊಂಡು ಈ ವಿವರಗಳನ್ನೆಲ್ಲ ಗೊತ್ತು ಮಾಡಿಕೊಂಡರು. ನಂತರ “ನಿಮ್ಮಲ್ಲಿ ಟಾರ್ಚಿದೆಯೆ?” ಎಂದರು.

“ಇದೆ” ಎಂದರು ಪಾರುಪತ್ತೆಗಾರರು.

“ಗುದ್ದಲಿ?”

“ಗುದ್ದಲಿಯೆ?” ಪಾರುಪತ್ತೆಗಾರರು ಅಚ್ಚರಿಗೊಂಡರು.

“ಅಥವಾ ಅಂಥದೇ ಏನಾದರೂ, ಮಠದ ಚಿನ್ನಾಭರಣಗಳು ಸಿಗುತ್ತವೋ ಎಂದು ನೋಡಬೇಡವೆ?”

ಪಾರುಪತ್ತೆಗಾರರು ತುಸು ಹೊತ್ತು ಚಿಂತೆಗೊಳಗಾದರು. ಅವೆಲ್ಲ ನನ್ನ ಮನೆಯಲ್ಲಿ ಭದ್ರವಾಗಿವೆ; ಚಾತುರ್ಮಾಸ್ಯ ಕಾಲದಲ್ಲಿ ಅಷ್ಟು ಧನವನ್ನು ಮಠದಲ್ಲಿ ಹಾಗೆ ನಿರ್ಗತಿಕವಾಗಿ ಬಿಟ್ಟು ಹೋಗುವುದಕ್ಕೆ ನಾನೇನು ಮೂರ್ಖನೆ- ಎಂದು ಸ್ವಾಮಿಗಳಿಗೆ ತಿಳಿಸಿ ಹೇಳುವುದು ಹೇಗೆ?

“ಸಂಜೆ ನಾವೆಲ್ಲ ಆಕಡೆ ಹೋಗಿದ್ದೆವು. ಅಲ್ಲಿ ಮೊಣಕಾಲತನಕ ಕೊಚ್ಚಿಯಿದೆ. ಮಠದ ಪಂಚಾಂಗವೇ ಕಾಣಿಸುತ್ತಿಲ್ಲ. ಇನ್ನು ಗುಡಿಯ ನಿವೇಶನ ಎಲ್ಲಿದೆ ಎಂದು ಹೇಳುವುದು ಹೇಗೆ? ಈ ಬಗ್ಗೆ ಶ್ರೀಗಳು ಚಿಂತೆ ಹಚ್ಚಿಕೊಳ್ಳಬಾರದು.”

“ಹಾಗನ್ನುವಿರ? ಇದು ತುಂಬಲಾರದ ನಷ್ಟವಲ್ಲವೆ?”

“ಯಾವುದೂ ತುಂಬಲಾರದ ನಷ್ಟವಲ್ಲ. ಸ್ವರ್ಣ ಎಲ್ಲಿಂದ ಬಂತೋ ಅಲ್ಲಿಗೆ ಹೋಗುತ್ತದೆ-ಎಂದರೆ ನೆಲಕ್ಕೆ. ಭೂಮಿಯನ್ನು ವಸುಂಧರೆಯೆಂದು ಕರೆಯುತ್ತಾರಷ್ಟೆ. ಭೂಮಿ ಸ್ವರ್ಣ ಗರ್ಭೆ ಕೂಡ ಹೌದು. ಇನ್ನು ಮುತ್ತುರತ್ನಗಳು ಸಾಗರಕ್ಕೆ ಹೋಗುತ್ತವೆ. ಸಮುದ್ರಮಥನ ಕಾಲದಲ್ಲಿ ಅವುಗಳನ್ನು ಸಮುದ್ರ ರಾಜನಿಂದ ತೆಗೆಯಲಾಯಿತೆಂದು ಪುರಾಣ ಹೇಳುತ್ತದೆ. ಪುರಾಣಗಳು ಸತ್ಯವನ್ನೇ ಹೇಳುತ್ತವೆ. ಶ್ರೀಗಳು ಇದಕ್ಕೆಲ್ಲ ಬೇಸರಿಸಬಾರದು. ಮಠದ ಅತ್ಯಮೂಲವಾದ ಆಸ್ತಿಯಿರುವ ತನಕ ಯಾವುದೂ ನಷ್ಟವಾಗುವುದಿಲ್ಲ.”

“ನಾಲ್ಕೆಕೆರೆ ಅಡಿಕೆ ತೋಟದ ಬಗ್ಗೆ ತಾನೆ ನೀವು ಹೇಳುತ್ತಿರುವುದು? ಅದರ ಆದಾಯ ನಮ್ಮ ಮೂರು ತಿಂಗಳ ಖರ್ಚಿಗೂ ಸಾಲದೆಂದು ನೀವೇ ಒಮ್ಮೆ ಹೇಳಿದ್ದಿರಿ.”

“ಅದಲ್ಲ, ನಾನು ಹೇಳುತ್ತಿರುವುದು ಸನ್ನಿಧಾನದ ಬಗ್ಗೆ. ಎಷ್ಟರ ತನಕ ಸನ್ನಿಧಾನ ಅಚಲವಾಗಿರುತ್ತದೋ ಅಷ್ಟರ ತನಕ ಮಠಕ್ಕೆ ಯಾವ ನಷ್ಟವೂ ಸಂಭವಿಸುವುದಿಲ್ಲ. ಹಾಗೆ ಸಂಭವಿಸುವ ನಷ್ಟ ಕಾಲ ಕಾಲಕ್ಕೆ ತುಂಬುತ್ತಲೇ ಇರುತ್ತದೆ.”

ಅವರಿಗೆ ಹಿಂದಿನ ಸ್ವಾಮಿಗಳ ನೆನಪಾಯಿತು. ಹಿಂದಿನ ಸ್ವಾಮಿಗಳು ವಿದ್ವತ್ತಿಗೆ ಪ್ರಸಿದ್ಧರಲ್ಲದಿದ್ದರೂ, ಜಿಪುಣತೆಗೆ ಪ್ರಸಿದ್ಧರು. ಪ್ರತಿದಿನವೂ ತಿಜೋರಿಯ ಬೀಗ ಖುದ್ದಾಗಿ ತೆಗೆದು ಹಣವನ್ನು ಎಣಿಸಬೇಕು. ಇದೇ ಕಾರಣದಿಂದಲೋ ಏನೋ ತಮ್ಮ ಕೊನೆಗಾಲದ ತನಕವೂ ಉತ್ತರಾಧಿಕಾರಿಯೊಬ್ಬರನ್ನು ತೆಗೆದುಕೊಳ್ಳಲು ಅವರು ಹಿಂಜರಿದರು. ತೀರ ಕೊನೆಗಾಲ ಬಂದಾಗ ಮಾತ್ರವೇ ಮೈಸೂರಲ್ಲೋ ಬೆಂಗಳೂರಲ್ಲೋ ಅಲೆಯುತ್ತಿದ್ದ ತಮ್ಮ ದೂರದ ಸಂಬಂಧಿಯೊಬ್ಬನನ್ನು ಕಂಡು ಹಿಡಿದು ತರಿಸಿ ಉತ್ತರಾಧಿಕಾರ ವಹಿಸಿಕೊಟ್ಟುದು. ಅದಕ್ಕೆ ಕಾಯುತ್ತಿದ್ದಂತೆ ಅವರ ಸಮಾಧಿಯೂ ಕ್ಷಿಪ್ರದಲ್ಲೇ ಸಂಭವಿಸಿ, ನಂತರದ ವಿಧಿಗಳಿಗೆ ಖರ್ಚಿನ ಅಗತ್ಯವಿದ್ದು ತಿಜೋರಿಯನ್ನು ತೆರೆಸಿ ನೋಡಿದರೆ ಅಲ್ಲಿ ಕಂಡದ್ದೇನು? ಬರಿಯ ಶೂನ್ಯ. ಇದೇಕೆ ಹೀಗಾಯಿತೆಂದು ಎಷ್ಟು ತಲೆ ಕೆರೆದುಕೊಂಡರೂ ಪಾರುಪತ್ತೆಗಾರರಿಗೆ ಉತ್ತರ ಸಿಗಲಿಲ್ಲ. ಹಲವರ ಮೇಲೆ ಸಂದೇಹ ಬಂದು ಹಲವು ಕಡೆ ಹುಡುಕಿ ನೋಡಿ ಕೊನೆಗೂ ನಿರಾಶರಾಗಬೇಕಾಯಿತು. ಅದಕ್ಕೂ ಮಿಗಿಲಾಗಿ, ಮಠದ ಹಣವನ್ನು ಎತ್ತಿ ಹಾಕಿದ ಎಂಬ ವೃಥಾಪವಾದ ತಮ್ಮ ಮೇಲೆ ಎಲ್ಲಿ ಎರಗುವುದೋ ಎಂಬ ಭಯವೂ ಆಯಿತು.

ಆದರೆ ಹಾಗೇನೂ ಆಗಲಿಲ್ಲ. ಅಂತೂ ಬಹಳ ಕಷ್ಟದಿಂದ ಹಳೆ ಸ್ವಾಮಿಗಳ ಅಂತ್ಯ ವಿಧಿಗಳೂ ಹೊಸ ಸ್ವಾಮಿಗಳ ಪೀಠಾರೋಹಣವೂ ಜರುಗಿದವು. ಇದಾದನಂತರ ಒಂದು ದಿನ ಹೊಸ ಸ್ವಾಮಿಗಳು – ಅಂದರೆ ಈಗಿನವರು ಪಾರುಪತ್ತೆಗಾರರನ್ನು ಕರೆಸಿಕೊಂಡು.

“ಶಾಸ್ತ್ರಿಗಳೆ, ನಮ್ಮ ಶಯನಕ್ಕೆ ಒದಗಿಸಲಾಗಿರುವ ಹಾಸಿಗೆಯೇನೂ ಚೆನ್ನಾಗಿಲ್ಲ. ಅದು ಹತ್ತಿಯದೇ ಅಲ್ಲವೇನೋ ಎಂಬ ಸಂದೇಹ ನಮಗೆ. ರಬ್ಬರಿನ ಒಳ್ಳೆ ಹಾಸಿಗೆ ಸಿಗುತ್ತಿದೆ ನೋಡಿ, ಅದೊಂದನ್ನು ತರಿಸುವ ಏರ್ಪಾಡು ಮಾಡುತ್ತೀರ?” ಎಂದರು.

“ಮಾಡುತ್ತೇನೆ. ಅದಕ್ಕೆ ತುಂಬಾ ಖರ್ಚು ತಗಲುವುದರಿಂದ ಇಷ್ಟು ದಿನ ಮುಂದೂಡಿದ್ದು.” ಎಂದರು ಪಾರುಪತ್ತೆಗಾರರು. ಅದು ಹಿರಿಯ ಸ್ವಾಮಿಗಳು ಉಪಯೋಗಿಸಿಕೊಂಡಿದ್ದ ಹಾಸಿಗೆ. ಅದನ್ನು ಯಾರಿಗಾದರೂ ದಾನವೀಯಬೇಕೆಂಬ ಯೋಚನೆ ಒಮ್ಮೆ ಬಂದಿದ್ದರೂ ಉಳಿತಾಯದ ದೃಷ್ಟಿಯಿಂದ ಹಾಗೆ ಮಾಡಿರಲಿಲ್ಲ. ಈಗ ಹೊಸ ಹಾಸಿಗೆಯನ್ನು ತರಿಸುವುದು ಅನಿವಾರ್ಯವಾಯಿತು. ಮರುದಿನವೇ ಪೇಟಿಗೆ ಹೋಗಿ ಫೋಮ್ ರಬ್ಬರಿನ ಹಾಸಿಗೆ, ಗಾದಿ ಹಾಗೂ ದಿಂಬುಗಳನ್ನು ತರಿಸಿ ದರು. ತರಿಸಿ ಹಳೆ ಹಾಸಿಗೆ ಮತ್ತು ದಿಂಬುಗಳನ್ನು ಉಗ್ರಾಣಕ್ಕೆ ಸಾಗಿಸಿದರು. ಹಾಗೆ ಸಾಗಿಸುತ್ತಿದ್ದಾಗಲೆ ಅವರಿಗೆ ಅವುಗಳ ಮೇಲೆ ಸಂದೇಹ ಬಂದುದು. ಸಾಮಾನ್ಯ ಹತ್ತಿ ಹಾಸಿಗೆ ಮತ್ತು ದಿಂಬುಗಳಿಗಿಂತ ಕಠಿಣವೂ ಭಾರವೂ ಇದ್ದುವು ಇವು. ಗಮನಿಸಿ ನೋಡಿದಾಗ ಕೈಯಲ್ಲಿ ಹಾಕಿದ ಕರಡು ಹೊಲಿಗೆಗಳು ಕಂಡುಬಂದುವು. ಕುತೂಹಲ ಹೆಚ್ಚಾಗಿ, ಬ್ಲೇಡಿನಿಂದ ಕುಯ್ದುಹತ್ತಿಯನ್ನು ಹೊರಕ್ಕೆಳೆದಾಗ ಹೊರ ಬಿದ್ದುದು ಕರೆನ್ಸಿ ನೋಟಿನ ಕಂತೆಗಳು!

ನೆಳಲೆಮಠವು ಜಲಾಂತರ್ಗತವಾದ್ದರಿಂದ ಅಪಾರ ನಷ್ಟವುಂಟಾಗಿದ್ದರೂ ಪ್ರಾಣಹಾನಿಯೇನೂ ಆಗಿರಲಿಲ್ಲ. ಆಗದೆ ಇರುವುದಕ್ಕೆ ಮುಖ್ಯಕಾರಣ ಮಠದಲ್ಲಿ ವೇದಪಾಠ ಹೇಳಲು ನಿಯುಕ್ತರಾಗಿದ್ದ ಪರಮೇಶ್ವರಾವಧಾನಿಗಳು. ಗೋಕರ್ಣದ ಕಡೆಯವರಾದ ಅವಧಾನಿಗಳು ಈಗೆರಡು ವರ್ಷಗಳಿಂದ ಮಠದಲ್ಲಿ ತಂಗಿದ್ದು ಹತ್ತಾರು ಹುಡುಗರಿಗೆ ವೇದ ಪಾಠ ಹೇಳಿ ಜೀವನ ಮಾಡುತ್ತಿದ್ದರು. ನಾಲ್ಕು ದಿನಗಳಿಂದ ಬಿಡದೆ ಹೊಡೆಯುತ್ತಿದ್ದ ಮಳೆಗೆ ನಾಲ್ಕನೆ ರಾತ್ರಿ ನೆಳಲೆ ಹೊಳೆ ಮೇರೆ ಮೀರಿ ಹರಿಯಲು ಸುರುವಾಗಿತ್ತು. ಮಠದ ಚಾವಡಿಯಲ್ಲೆ ರಾತ್ರಿ ಮಲಗುತ್ತಿದ್ದ ಅವಧಾನಿಗಳು ನೆರೆನೀರು ಮಠದ ಆವರಣವನ್ನು ಪ್ರವೇಶಿಸುತ್ತಿರುವುದನ್ನು ಗಮನಿಸಿದರು. ಅವರು ಸರಿ ನಿದ್ರೆಯಲ್ಲಿದ್ದ ಮಠದ ನಿವಾಸಿಗಳನ್ನೆಬ್ಬಿಸಿದರು. ಎಲ್ಲರೂ ಇನ್ನು ತಡಮಾಡದೆ ಕೈಗೆ ಸಿಕ್ಕಿದ ಸಾಮಾನುಗಳನ್ನೆತ್ತಿಕೊಂಡು ಮೊಣಕಾಲ ತನಕದ ನೀರಿನಲ್ಲಿ ನಡೆದುಕೊಂಡು ಹೋಗಿ ಅನತಿ ದೂರದಲ್ಲೇ ಇದ್ದ ಸ್ಕೂಲು ಕಟ್ಟಡವೊಂದರಲ್ಲಿ ಆಶ್ರಯಪಡೆದರು. ಸ್ವಲ್ಪವಾದರೂ ತಡ ಮಾಡುತ್ತಿದ್ದರೆ ಅಚಾತುರ್ಯವಾಗಿ ಹೋಗುತ್ತಿತ್ತು. ಹೀಗೆ ಇಡಿಯ ಮುಳುಗಡೆಯನ್ನು ಕಣ್ಣಾರೆ ಕಂಡ ಅವಧಾನಿಗಳನ್ನು ಸ್ವಾಮಿಗಳು ಅವರ ಸಾಹಸ ಕಾರ್ಯಕ್ಕೆ ಪ್ರಶಂಸಿಸಿ ನಂತರ ಕೇಳಿದರು-

“ಸುಮಾರು ಎಷ್ಟು ಗಂಟಿಗೆ ತಮಗೆ ಎಚ್ಚರವಾಯಿತು, ಅವಧಾನಿಗಳೇ?”

“ನನಗೇ ನಿದ್ದೆಯೇ ಬಂದಿರಲಿಲ್ಲ. ನೀರು ಮಠದ ಆವರಣವನ್ನು ನುಗ್ಗುವ ಹೊತ್ತು ರಾತ್ರಿ ಒಂದು ಗಂಟಿ ಇದ್ದೀತು.”

“ಅಷ್ಟರವರೆಗೂ ನಿದ್ದೆ ಬಂದಿರಲಿಲ್ಲವೆ?”

“ನನಗೆ ರಾತ್ರಿ ಬೇಗನೆ ನಿದ್ದೆ ಹತ್ತುವುದಿಲ್ಲ. ಅಲ್ಲದೆ ಅಂದಿನ ರಾತ್ರಿ ಯಾವುದೋ ಚಿಂತೆಯನ್ನು ಹಚ್ಚಿಕೊಂಡಿದ್ದೆ.”

“ಅದೇನೆಂದು ಕೇಳಬಹುದೆ?”

“ಶಂಕರಭಾಷ್ಯದ ಒಂದು ಕ್ಲಿಷ್ಟತೆಗೆ ಸಂಬಂಧಿಸಿ, ಮರುದಿನ ತರಗತಿಯಲ್ಲಿ ಅದನ್ನು ಬಿಡಿಸಿ ಹೇಳಬೇಕಾಗಿತ್ತು.”

“ತರಗತಿಯಲ್ಲಿ ಇಂಥ ಸಂಗತಿಗಳನ್ನು ಹೇಳುತ್ತೀರ?”

“ವೇದಪಾಠವೆಂದ ಮೇಲೆ ಹೇಳಬೇಕಾಗುತ್ತದೆ. ಕೆಲವು ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ತಮ್ಮ ಗಮನಕ್ಕೆ ಬಂದಿದೆಯೋ ಇಲ್ಲವೋ ತಿಳಿಯದು.”

“ಒಂದು ದಿನ ಅವರಿಗೆ ನಮ್ಮ ಭೇಟಿಯ ಏರ್ಪಾಡು ಮಾಡಿಸೋಣವಂತೆ. ನೀರು ಮಠವನ್ನು ನುಗ್ಗಿದ ಸಂಗತಿ ನಿಮ್ಮ ಗಮನಕ್ಕೆ ಬಂದ ನಂತರ ಏನು ಮಾಡಿದಿರಿ?”

“ಉಳಿದವರನ್ನು ಎಬ್ಬಿಸಿದೆ. ಕೈಗೆ ಸಿಕ್ಕಿದ ವಸ್ತುಗಳನ್ನು ಎತ್ತಿಕೊಂಡು ಅಲ್ಲಿಂದ ಹೊರಟು ಪಕ್ಕದ ಶಾಲಾವಠಾರಕ್ಕೆ ಬಂದೆವು”

“ಏನೇನು ವಸ್ತುಗಳನ್ನು ಎತ್ತಿಕೊಂಡಿರಿ?”

“ಕೆಲವರು ಚಾಪೆಗಳನ್ನು, ಇನ್ನು ಕೆಲವರು ಪೆಟ್ಟಿಗೆಗಳನ್ನು, ನಾನು ನನ್ನ ಕೆಲವು ಗ್ರಂಥಗಳನ್ನು ಎತ್ತಿಕೊಂಡೆ. ಉಳಿದವೆಲ್ಲ ನೀರು ಪಾಲಾದವು. ಹಳೆಯ ಗ್ರಂಥಗಳವು, ಈಗ ಎಲ್ಲೂ ಸಿಗುವುದಿಲ್ಲ.”

“ಮರುದಿನ ಮಠದ ಕಡೆ ಹೋಗಿದ್ದಿರ?”

“ಹೋಗಿದ್ದೆ. ಆದರೆ ಮಠ ಮುಳುಗಿ ಹೋಗಿತ್ತು. ಕೆಂಪು ನೀರೊಂದನ್ನುಳಿದು ಬೇರೇನೂ ದೃಷ್ಟಿಗೆ ಬೀಳುತ್ತಿರಲಿಲ್ಲ.”

“ನೀರಲ್ಲಿ ಪೆಟ್ಟಿಗೆಗಳೋ ಅಥವಾ ಅಂಥದೇ ಇನ್ನಿತರ ವಸ್ತುಗಳೋ ಕಾಣಿಸಿದುವೆ? ಯೊಚಿಸಿ ಹೇಳಿ”

“ಯಾವುದೂ ಕಾಣಿಸಲಿಲ್ಲ.”

“ಸರಿ. ಅಂದು ರಾತ್ರಿ ನೀವು ಜತೆಯಲ್ಲಿ ತೆಗೆದೊಯ್ದ ಸಾಮಾನುಗಳನ್ನು ಪಾರುಪತ್ತೆಗಾರರಿಗೆ ತೋರಿಸಿಬಿಡಿ.”

“ಈಗಾಗಲೇ ಅವರು ಬಂದು ನೋಡಿದ್ದಾರೆ.”

“ಸರಿ ಹಾಗಾದರೆ.”

ಇತ್ತ ಪಾರುಪತ್ತೆಗಾರರು ಮಠದ ನಿರ್ಮಾಣಕ್ಕೆ ಬೇಕು ಬೇಕಾದ ಯೋಜನೆಗಳನ್ನು ತ್ವರಿತಗತಿಯಲ್ಲಿ ರೂಪಿಸಿ ಕಾರ್ಯಪ್ರವೃತ್ತರಾದರು. ಮೊದಲನೆಯದಾಗಿ ಪತ್ರಿಕಾವರದಿಗಾರರನ್ನು ಫೋಟೋ ತೆಗೆಯುವವರನ್ನು ಕರೆಸಿ ಚಿತ್ರಸಹಿತ ಲೇಖನಗಳು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗುವಂತೆ ಏರ್ಪಾಡು ಮಾಡಿದರು. ಧನಸಹಾಯ ಕೋರಿ ಸರಕಾರಕ್ಕೂ ಇತರ ಮಠಾಧಿಪತಿಗಳಿಗೂ ಮನವಿಗಳನ್ನು ಕಳಿಸಿದರು. ಮುಂಬಯಿ, ಬೆಂಗಳೂರು, ಮದರಾಸು ಮುಂತಾದ ಪ್ರಮುಖ ನಗರಗಳಿಗೆ ಹೋಗಿ ಸಾಕಷ್ಟು ಧನ ಸಂಗ್ರಹ ಮಾಡಿಕೊಂಡು ಬಂದರು. ಯೋಗಾಯೋಗವೆಂಬಂತೆ ಅದು ಚುನಾವಣೆಯ ಸಮಯವಾದ್ದರಿಂದ ಪಾರ್ಟಿ ಪ್ರಚಾರಕ್ಕೆ ಬಂದಿದ್ದ ಎಂಡೋಮೆಂಟ್ ಮಂತ್ರಿಗಳು ಮಠದ ನಿರ್ಮಾಣಕ್ಕೆಂದು ಸ್ಥಳದಲ್ಲೇ ಎರಡು ಲಕ್ಷರೂಪಾಯಿಗಳನ್ನು ಮಂಜೂರು ಮಾಡಿದರು. ಹೀಗೆ ಹಣ ಬೇರೆ ಬೇರೆ ದಿಕ್ಕುಗಳಿಂದ, ಬೇರೆ ಬೇರೆ ರೂಪದಲ್ಲಿ ಹರಿದು ಬಂದು ಎಲ್ಲರೂ ನೋಡ ನೋಡುತ್ತಿದ್ದಂತೆ, ಹೊಸನಿವೇಶನದಲ್ಲಿ ಕಟ್ಟಡವೊಂದು ಎದ್ದು ಬಂತು. ಹೊಸ ಮಾದರಿಯ ಕಟ್ಟಡ ಎಲ್ಲ ಅನುಕೂಲತೆಗಳನ್ನು ಹೊಂದಿದ್ದು ನೋಡಲು ಆಕರ್ಷಕವಾಗಿತ್ತು. ನೆಳಲೆ ಗ್ರಾಮಕ್ಕೆ ಕಳಶವಿಟ್ಟಂತೆ. ಒಂದು ಶುಭದಿನದಂದು ಸ್ವಾಮಿಗಳು ಮಠಪ್ರವೇಶವನ್ನೂ ಮಾಡಿದರು.

ಆದರೂ ಸ್ವಾಮಿಗಳಿಗೇಕೋ ಸಮಾಧಾನವಿದ್ದಂತೆ ಇರಲಿಲ್ಲ. ಅವರು ಚಿತ್ತ ಕ್ಷೋಭೆ ಯಿಂದ ನರಳುವಂತೆ ತೋರುತ್ತಿತ್ತು. ಹೊಸ ಮಠದ ಪ್ರವೇಶದ ಕಾಲದಲ್ಲಿ ಅವರು ಯಾವ ಉತ್ಸಾಹವನ್ನೂ ತೋರಲಿಲ್ಲ. ತಮ್ಮ ತಾತ್ಕಾಲಿಕ ಬಿಡದಿಗೇ ಅವರು ಸೇರಿಕೊಂಡಹಾಗಿತ್ತು. ಯಾವ ಯಾವುದೋ ಕಾರಣದಿಂದ ಮಠದ ಪ್ರವೇಶ ಎರಡೆರಡು ಬಾರಿ ಮುಂದೆ ಬಿತ್ತು. ಕೊನೆಗೂ ಈ ಕಾರ್ಯಕ್ರಮ ಸಾಕಷ್ಟು ವಿಜೃಂಭಣೆ ಯಿಂದಲೆ ನಡೆದು ಮಠಪ್ರವೇಶ ಮಾಡಿದ ಸ್ವಾಮಿಗಳು ತಮ್ಮ ಹೊಸ ವಸತಿಯಿಂದ ಆಚೇಚೆ ಹೊಗದೆ ಏನಾದರೂ ಪುಸ್ತಕವನ್ನು ನೋಡುತ್ತ ಕಾಲ ಕಳೆಯತೊಡಗಿದರು. ಆದರೆ ಪುಸ್ತಕದ ಪಠಣದಲ್ಲೂ ಅವರ ಮನ ನೆಟ್ಟಂತೆ ಕಾಣಲಿಲ್ಲ. ಸುಮ್ಮನೆ ಯಾವುದೋ ಒಂದು ಪುಟವನ್ನು ತೆರೆದು ನಾಲ್ಕು ಸಾಲು ಓದಿನಂತರ ಹಾಗೆಯೆ ಕುಳಿತು ಬಿಡುತ್ತಿದ್ದರು – ಕಿಟಿಕಿಯಾಚೆ ಕಾಣಿಸುತ್ತಿದ್ದ ದೃಶ್ಯಗಳನ್ನು ನೋಡುತ್ತ. ಅವರೀಗ ಎಲ್ಲಕಿಂತ ಹೆಚ್ಚಾಗಿ ಬಯಸುತ್ತಿದ್ದುದು ಏಕಾಂತವನ್ನು. ಆದರೆ ಮಠವೆಂದಮೇಲೆ ಏಕಾಂತವೆಲ್ಲಿ? ಕಂಡು ಕಾಣಿಕಿಯೊಪ್ಪಿಸಿ ಆಶೀರ್ವಾದ ಪಡೆದು ಹೋಗಲು ಬರುತ್ತಿದ್ದ ಮಂದಿ. ಉಪಚಾರಕ್ಕಾಗಿ ಯಾದರೂ ಸಲಹೆ ಪಡೆಯಲು, ವರದಿಯೊಪ್ಪಿಸಲು, ಅಡಳಿತ ಸಮಸ್ಯೆ ಗಳನ್ನು ಚರ್ಚಿಸಲು ಆಗಾಗ ಬಂದು ಕಾಣುತ್ತಿದ್ದ ಪಾರುಪತ್ತೆಗಾರರು; ವೇದಪಾಠ ನಡೆಸುತ್ತಿದ್ದ ಅವಧಾನಿಗಳು – ಇಂಥ ವಾತಾವರಣದಲ್ಲಿ ಏಕಾಂತವೆಲ್ಲಿ? ಹೊಸ ಮಠವೆಂದು ವೇದಪಾಠ ಹೇಳಿಸಿಕೊಳ್ಳಲು ಬರುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿದ ಹಾಗ ಕಂಡುಬರುತ್ತಿತ್ತು. ಅವರೆಲ್ಲರೂ ಸ್ವರವೆತ್ತಿ ಮಂತ್ರಗಳನ್ನು ಪಠಿಸುತ್ತಿದ್ದರೆ ಅದು ಅರ್ಧ ಮೈಲಿ ದೂರದ ತನಕ ಕೇಳಿಸಬೇಕು. ಇವಲ್ಲದೆ, ಸ್ವಾಮಿಗಳು ಸ್ವತಃ ನಡೆಸುವ ಸಂಧ್ಯಾವಂದನೆ, ಪೂಜೆ ಇತ್ಯಾದಿ ಕಾರ್ಯಕ್ರಮಗಳೂ ಇವೆಯಲ್ಲ.

ಸ್ವಾಮಿಗಳ ಈ ಮನೋರೋಗ – ಅಲ್ಲದೆ ಅದು ಇನ್ನೇನು? – ಅವರನ್ನು ಬಲ್ಲವರೆಲ್ಲರಿಗೆ ಒಂದು ಸಮಸ್ಯೆ ಯಾಯಿತು. ಮುಖ್ಯವಾಗಿ ಪಾರುಪತ್ತೆ ಗಾರರಿಗೆ. ಕಳೆದ ಕೆಲವು ವರ್ಷಗಳಿಂದ ಸ್ವಾಮಿಗಳನ್ನು ಸಮೀಪದಿಂದ ಬಲ್ಲವರು ಅವರು-ಸ್ವಾಮಿಗಳನ್ನು ಸಮೀಪದಿಂದ ಯಾರಾದರೂ ಅರಿತುಕೊಳ್ಳುವುದು ಸಾಧ್ಯವಿದ್ದರೆ, ಸ್ವಾಮಿಗಳು ಯಾವಾಗಲೂ ಮಾತಾಡುತ್ತ, ಮಠಕ್ಕೆ ಬಂದವರನ್ನು ಮಾತಡಿಸುತ್ತ, ಅವರ ಕುಲಗೋತ್ರ, ಊರಿನ ಸಂಗತಿ, ಸದ್ಯದ ರಾಜಕೀಯ ಇತ್ಯಾದಿಗಳನ್ನು ವಿಚಾರಿಸುತ್ತ ಲವಲವಿಕೆಯಿಂದಿರುತ್ತಿದ್ದ ವ್ಯಕ್ತಿ. ಸಂಗೀತ, ನೃತ್ಯ, ಯಕ್ಷಗಾನ ಬಯಲಾಟ ಮೊದಲಾದ ಲಘು ಮನರಂಜನೆಗಳು ಮಠದ ಆವರಣದಲ್ಲೇ ಆಗಿಂದಾಗ್ಗೆ ನಡೆಯುವ ಪದ್ಧತಿಯೂ ಇತ್ತು. ಇವಲ್ಲದೆ ನವರಾತ್ರಿ, ದೀಪಾವಳಿ, ಯುಗಾದಿಯ ಸಂದರ್ಭಗಳಲ್ಲಿ ಸಾಂಸ್ಕೃತಿಕ ಉತ್ಸವಗಳಂತೂ ಇದ್ದೇ ಇದೆ. ಇವೆಲ್ಲದರ ಹಿಂದಿನ ಪ್ರೇರಣೆ ಸ್ವಾಮಿಗಳದ್ದೇ. ಹೀಗಿರುತ್ತ ಸ್ವಾಮಿಗಳ ಸದ್ಯದ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗಿತ್ತು. ಇದಕ್ಕೆ ಮಠದ ಮುಳುಗಡೆಯೊಂದಿಗೆ ಕಳೆದು ಹೋದ ಹಣ ಮತ್ತು ಚಿನ್ನಾಭರಣಗಳು. ಕಾರಣವಿರಬಹುದೆ ಎಂಬ ಒಂದು ಸಂಶಯ ಮಾತ್ರ ಪಾರುಪತ್ತೆಗಾರರಿಗೆ ಬಂದಿತ್ತು.

ಇಲ್ಲಿ ಅಲಕನಂದೆಯ ವಿಚಾರ ಹೇಳುವುದು ಅಗತ್ಯ. ಅಲಕನಂದೆ ಹದಿನೆಂಟರಾಕೆ, ಚೆಲುವೆ, ಸೊಂಪಾದ ತಲೆಗೂದಲು, ಅಚ್ಚುಕಟ್ಟಾದ ಮುಖ, ಚಂಚಲ ಕಣ್ಣುಗಳು. ಅಲಕನಂದೆ ನಾರಾಯಣ ಭಟ್ಟರ ಮಗಳು. ನಾಲ್ಕು ಜನ ಗಂಡುಮಕ್ಕಳ ನಡುವೆ ಒಬ್ಬಳೇ ಹುಡುಗಿ. ಆದ್ದರಿಂದಲೋ ಏನೋ ಬಹಳ ಅಕ್ಕರೆಯಿಂದ ಬೆಳೆದವಳು. ಆಗ ತಾನೇ ಡಿಗ್ರಿ ಪರೀಕ್ಷೆ ಮುಗಿಸಿ ಮನೆಯಲ್ಲಿದ್ದಳು. ಅಕ್ಕರೆ ಯಿಂದ ಬೆಳೆದವಳಾದರೂ ಅವಳ ನಡೆ ನುಡಿ ಹಿತಮಿತವಾಗಿದ್ದು ಎಲ್ಲರ ಮೆಚ್ಚುಗೆ ಗಳಿಸಿದ್ದಳು. ಸದ್ಯ ಮನೆಯಲ್ಲೇ ಸಂಗೀತಾಭ್ಯಾಸ ಮಾಡುತ್ತಿದ್ದ ಅಲಕನಂದೆಗೆ ದೈವದತ್ತವಾದ ಕಂಠ ಮಾಧುರ್ಯವಿತ್ತು. ಪ್ರತಿದಿನವೂ ಒಬ್ಬ ಸಂಗೀತ ಅಧ್ಯಾಪಕರು ಬಂದು ಪಾಠ ಹೇಳಿ ಹೋಗುತ್ತಿದ್ದರು. ಅಲಕನಂದೆ ಓದಿನಲ್ಲಿ ಮುಂದಿದ್ದರೂ ಅವಳನ್ನು ದೂರದ ನಗರಕ್ಕೆ ಕಳಿಸಿ ಇನ್ನಷ್ಟು ಓದಿಸುವ ವಿಚಾರ ಯಾರಿಗೂ ಇರಲಿಲ್ಲ. ಸ್ವತಃ ಅಲಕನಂದೆಗೂ ಆ ಬಗ್ಗೆ ಅಷ್ಟೇನೂ ಉತ್ಸಾಹವಿದ್ದಂತಿರಲಿಲ್ಲ. ಬೇಕಾದ ಪುಸ್ತಕಗಳನ್ನು ಮನೆಗೇ ತರಿಸಿಕೊಂಡು ಅವಳು ಓದುತ್ತಿದ್ದಳು. ಮನೆಯ ಸುತ್ತಮುತ್ತಲು ಹೂದೋಟ ಬೆಳಿಸಿ ಹೊಗಿಡಗಳ ಆರೈಕೆ ಮಾಡುವುದು ಅವಳ ಇನ್ನೊಂದು ಹವ್ಯಾಸವಾಗಿತ್ತು. ಈ ಹೂದೋಟದಲ್ಲಿ ಸುಳಿದಾಡುವ ಅಲಕನಂದೆಯನ್ನು ನೋಡುವುದೆಂದರೆ ಎಲ್ಲರಿಗೂ ಖುಷಿ. ಹೀಗಿರುತ್ತ, ನೆಳಲೆ ಮಠದ ಸ್ವಾಮಿಗಳು ತಮ್ಮಲ್ಲಿ ಬಿಡದಿ ಮಾಡಲು ಒಪ್ಪಿದಾಗ ನಾರಾಯಣ ಭಟ್ಟರು ಮಗಳಲ್ಲಿ ಧರ್ಮಶ್ರದ್ಧೆ ಹೆಚ್ಚಲಿ ಎಂಬ ಉದ್ದೇಶದಿಂದ ಆಕೆಯನ್ನು ಸ್ವಾಮಿಗಳ ಸೇವೆಗೆ ಹಚ್ಚಿದ್ದು ಸಹಜವೇ ಆಗಿತ್ತು. ಸ್ವಾಮಿಗಳ ಸೇವೆಗೆ ವಾಸ್ತವವಾಗಿ ಅಲಕನಂದೆಯ ಅಗತ್ಯವೇನೂ ಇದ್ದಿರಲಿಲ್ಲ; ಅದಕ್ಕೆ ಬೇರೆಯೇ ಜನರಿದ್ದರು. ಆದರೂ ಅಲಕನಂದೆ ಸ್ವಾಮಿಗಳ ದಿನನಿತ್ಯದ ಸಂಧ್ಯಾವಂದನೆ, ಪೂಜೆಗಳಿಗೆ ಬೇಕಾಗಿದ್ದ ಚಂದನವನ್ನು ಅರೆದುಕೊಡುವುದು, ಹೂಗಳನ್ನು ಆಯ್ದು ತರುವುದು, ಉಪಾಹಾರ ನೈವೇದ್ಯಗಳನ್ನು ಸಿದ್ಧಗೊಳಿಸುವುದು ಮುಂತಾದ ಸಣ್ಣಪುಟ್ಟ ಕೆಲಸ ಕಾರ್ಯಗಳಲ್ಲಿ ನೆರವಾಗುತ್ತಿದ್ದಳು.

ಒಂದು ದಿನ ಹೂಗಳನ್ನು ಆಯ್ದು ತಂದ ಅಲಕನಂದೆಯನ್ನು ಸ್ವಾಮಿಗಳು ಕೇಳಿದರು-

“ಅಲಕನಂದೆಯೆಂದಲ್ಲವೆ ಹೆಸರು?”

ಸ್ವಾಮಿಗಳು ಅವಳನ್ನು ಮಾತಾಡಿಸಿದ್ದು ಅದೇನೂ ಮೊದಲ ಸಲವಲ್ಲ. ಆದರೂ ಅವರ ಧ್ವನಿಯಲ್ಲಿ ಕಾಣಿಸಿಕೊಂಡ ಕಂಪನ ಅವಳ ಗಮನವನ್ನು ಸೆಳೆಯದಿರಲಿಲ್ಲ. “ಹೌದು” ಎಂದಳು.

“ನಾವು ಅಲಕಾ ಎಂದು ಕರೆಯಬಹುದೆ?”

ಅವಳು ಅದಕ್ಕೇನು ಹೇಳಬಲ್ಲಳು? ಸುಮ್ಮನೆ ಸಮ್ಮತಿ ಸೂಚಕವಾಗಿ ತಲೆಯಾಡಿಸಿದಳು. ಸ್ಕೂಲು ಕಾಲೇಜುಗಳಲ್ಲಿ ಗೆಳತಿಯರು ಅವಳನ್ನು ಹಾಗೆಯೇ ಕರೆಯುತ್ತಿದ್ದುದು.

“ಅಲಕಾ!”

ಅಲಕನಂದೆ ಒಂದು ಕ್ಷಣ ಮುಖವೆತ್ತಿ ಸ್ವಾಮಿಗಳನ್ನು ನೋಡುವ ಧೈರ್ಯ ಮಾಡಿದಳು. ಆಕ್ಷಣವೇ ತಲೆ ತಗ್ಗಿಸಿದಳು.

“ನಮ್ಮದೊಂದು ಭಿಕ್ಷೆಯಿದೆ…..”

ತುಸು ಹೊತ್ತು ತಡೆದು ಸ್ವಾಮಿಗಳು ಮುಂದುವರಿಸಿದರು-

“ನಾವು ಈ ಮೊದಲು ಇಂಥ ಭಿಕ್ಷೆಯನ್ನು ಯಾರಲ್ಲೂ ಕೇಳಿಲ್ಲ. ಮುಂದೆ ಕೇಳಲೂ ಆರೆವು. ಅದು ಮತ್ತೇನೂ ಅಲ್ಲ, ಪ್ರೇಮಭಿಕ್ಷೆ, ಒಬ್ಬ ವ್ಯಕ್ತಿ ಇನ್ನೊಂದು ವ್ಯಕ್ತಿಗೆ ಕೊಡಬಹುದಾದ ಸರ್ವಸ್ಥ. ನಿಮಗೆ ಆಶ್ಚರ್ಯವೆನಿಸಿತೆ? ಬೇಕೆಂದೇ ನಾವು ಈ ಪೀಠವನ್ನು ಏರಿದವರಲ್ಲ. ಅದಕ್ಕೆ ಬೇಕಾದ ಯೋಗ್ಯತೆಯೂ ನಮಗಿರಲಾರದು. ನಮ್ಮ ನಮ್ಮ ನಿಯಂತ್ರಣಕ್ಕೆ ಮೀರಿದ ಸನ್ನಿವೇಶಗಳು ನಮ್ಮನ್ನು ಎಲ್ಲಿಗೋ ಒಯ್ಯುತ್ತವೆ, ಏನೇನೋ ಆಗುತ್ತವೆ, ಇರಲಿ. ನಿಮ್ಮ ಸಮ್ಮತಿ ಇದ್ದರೆ ಈ ಪೀಠವನ್ನೂ ಇದಕ್ಕೆ ಸಂಬಂಧಿಸಿದ ಈ ವೇಷ, ಈ ಮಠ, ಈ ಹೆಸರು – ಇವೆಲ್ಲವನ್ನೂ ತ್ಯಜಿಸಿ ನಿಮ್ಮ ಕೈ ಹಿಡಿಯುವುದಕ್ಕೆ ನಾವು ಸಿದ್ಧ. ನೀವು ಈಗಲೇ ಉತ್ತರಿಸಬೇಕೆಂದೇನೂ ಇಲ್ಲ. ನಮ್ಮ ಮಾತುಗಳು ಅನಿರೀಕ್ಷಿತವಾಗಿದ್ದುವು. ಅಲ್ಲವೆ? ಆದರೆ ನಾವು ಸತ್ಯವನ್ನೇ ನುಡಿದಿದ್ದೇವೆ, ಎಷ್ಟೋ ಬಾರಿ ಇದನ್ನೆಲ್ಲ ಹೇಳಲೆ ಬೇಡವೆ ಎಂದು ನಿಶ್ಚಿಯಿಸಲಾರದೆ ನಾವು ಅಸ್ವಸ್ಥರಾದ್ದುಂಟು….”

ಆದರೆ ಅವರ ಮಾತುಗಳನ್ನು ಕೇಳಲು ಅಲಕನಂದೆ ಅಲ್ಲಿ ನಿಂತಿರಲಿಲ್ಲ. ಅವಳು ಹೊರಗೆ ಧಾವಿಸಿ ದೊಡ್ಡದಾದ ಅಂಗಳವನ್ನು ದಾಟಿ ತನ್ನ ಕೋಣೆಗೆ ಹೋಗಿ ಕುಳಿತಳು. ಇತ್ತ ಸ್ವಾಮಿಗಳ ತಲ್ಲಣ ಹೇಳಿತೀರದು. ತಾನೇನು ಹೇಳಿದೆ? ಹೇಗೆ ಹೇಳಿದೆ? ಯಾಕೆ ಹೇಳಿದೆ? ಯಾಕಾದರೂ ಹೇಳಿದೆ? ಏನು ಹೇಳಬೇಕಾಗಿತ್ತು? ಯಾಕೆ ಹೇಳಬೇಕಾಗಿತ್ತು? ಒಂದೂ ತಿಳಿಯದೆ ಮನಸ್ಸು ಮಂಕಾಯಿತು. ಇದರ ಜತೆಯಲ್ಲೇ ಅವ್ಯಕ್ತವಾದ ಯಾವುದೋ ಭಯವೂ ಆವರಿಸಿತು. ಅಲಕಾ ಯಾಕೆ ಹಾಗೆ ಹೇಳದೆ ಹೊರಟು ಹೋದಳು?ಇನ್ನು ಬರುತ್ತಾಳೇಯೆ ಇಲ್ಲವೆ? ಕೇಳಿದ ಭಿಕ್ಷೆ ಕೊಡುತ್ತಾಳೆಯೆ ಕೊಡುವುದಿಲ್ಲವೆ? ಅಂದು ಸಂಜೆ ಅವಳು ಬರಲಿಲ್ಲ. ಮರುದಿನ ಬೆಳಿಗ್ಗೆ ಬರಲಿಲ್ಲ. ಸಂಜೆಯೂ ಬರಲಿಲ್ಲ. ಅವಳನ್ನು ಮುಂದೆ ಬರುವುದೇ ಇಲ್ಲ ಎಂದು ದಿನಗಳು ಯುಗಗಳಾಗುವ ಹೊತ್ತಿಗೆ ಬಂದಳು ಏನೊಂದೂ ಆಗದಿದ್ದ ಹಾಗೆ. ಕೈಯಲ್ಲಿ ಹೂವಿನ ಬುಟ್ಟಿ. ಆಗತಾನೆ ಅರೆದು ಪರಿಮಳ ಸೂಸುವ ಶ್ರೀಗಂಧ. ನೇರವಾಗಿ ಮುಖ ನೋಡಲಾರಳು. ಏನಿದರ ಅರ್ಥ?

ಮನುಷ್ಯನೆಂದರೆ ಕೇವಲ ವ್ಯಕ್ತಿ ಮಾತ್ರವಲ್ಲ. ಆತ ನಿರ್ವಹಿಸುವ ಪಾತ್ರ, ಇತರರು ಅದಕ್ಕೆ ಕೊಡುವ ಅರ್ಥ – ಎಂದರೆ, ಇತರ ಪಾತ್ರಗಳೊಂದಿಗೆ ಅದಕ್ಕಿರುವ ಸಂಬಂಧ-ಜನರು ಬಯಸುವ ಅಭಿನಯ-ಇವೆಲ್ಲವೂ ಹೌದು. ನೆಳಲೆ ಮಠದ ಶ್ರೀಗಳು ಇದಕ್ಕೊಂದು ಅಪವಾದವಾಗಿರುವುದು ಸಾಧ್ಯವೇ? ಅವರು ವಹಿಸಿಕೊಂಡ ಪಾತ್ರವೇ ಅಂಥದು, ಏಕಾಂತದ ತೊಳಲಿಂದ ತುಂಬಿದ್ದ ವೇಳೆಯಲ್ಲೇ ಹಲವು ಜನರ ದೃಷ್ಟಿಯಲ್ಲಿ ಯಾವಾಗಲೂ ಬೀಳುವಂಥ ರೀತಿಯದು. ತಮ್ಮ ಅಂತರ್ಯವನ್ನು ಯಾರ ಸಮ್ಮುಖದಲ್ಲಿ ಹೇಳಬೇಕು? ಮಠಾಧಿಪತಿಯೊಬ್ಬನಿಗೆ ಶಿಷ್ಯ ವರ್ಗವಿರುತ್ತದೆಯೇ ವಿನಾ ಸ್ನೇಹಿತರಿರುವುದಿಲ್ಲವಲ್ಲ. ಅಲಕನಂದೆಗೆ ಹೇಳಿದ ಆ ಮಾತುಗಳು, ’ಪ್ರೇಮವೆಂದರೆ ಒಬ್ಬ ವ್ಯಕ್ತಿ ಇನ್ನೊಂದು ವ್ಯಕ್ತಿಗೆ ಕೊಡಬಹುದಾದ ಸರ್ವಸ್ವ, ಬೇಕೆಂದೇ ನಾವು ಈ ಪೀಠವನ್ನು ಏರಿದವರಲ್ಲ’ ಎಂದು ಮುಂತಾದುವು, ಹಲವು ದಿನಗಳಿಂದ ಮನಸ್ಸಿನಲ್ಲೇ ಮೂಡಿದ ಸ್ವಗತ, ಅಂದು ಆ ಕ್ಷಣದಲ್ಲಿ ಪ್ರಕಟವಾಗಿ ಮಾತಿನ ರೂಪಿನಲ್ಲಿ ಬಂದಿತ್ತು. ಒಮ್ಮೆ ಮಾತಿನ ರೂಪು ಪಡೆದ ವಿಚಾರಗಳನ್ನು ಪುನಃಪೂರ್ವಾವಸ್ಥೆಗೆ ತರುವುದು ಸಾಧ್ಯವಿರಲಿಲ್ಲ. ಅಂತಹ ಮಾತುಗಳು ಹೊಸ ಸಂಬಂಧಗಳನ್ನು ನಿರ್ಮಿಸಿ ವ್ಯಕ್ತಿ ಗಳನ್ನು ಕಾಡುತ್ತವೆ. ಶ್ರೀಗಳು ಭಟ್ಟರ ಉಪಗೃಹವನ್ನು ತೊರೆದು ಹೊಸ ಮಠಕ್ಕೆ ಬಂದುದು ಇಂತಹ ಮನಸ್ಥಿತಿಯಲ್ಲಿ.

’ಆದರೆ ಇದು ಎಷ್ಟು ದಿನ ತಾನೆ ಹೀಗೆ ಮುಂದುವರಿಯುವುದು ಸಾಧ್ಯವಿತ್ತು? ಒಂದು ದಿನ ಪಾರುಪತ್ತೆಗಾರರು ತಾವಾಗಿಯೇ ವಿಷಯ ಎತ್ತಿದರು.

“ಶ್ರೀಗಳು ಹಲವು ದಿನಗಳಿಂದ ಚಿಂತೆಯೊಂದನ್ನು ಮನಸ್ಸಿಗೆ ಹಚ್ಚಿಕೊಂಡಂತಿದೆ. ಇದರ ಕಾರಣ ತಿಳಿದರೆ ಏನಾದರೂ ಪರಿಹಾರ ಕಂಡುಹಿಡಿಯುವುದು ಸಾಧ್ಯ. ಇಡಿಯ ಮಠವೇ ಕಳೆಗುಂದಿದಂತಿರುವುದು ಬೇಗನೆ ಜನರ ಗಮನಕ್ಕೆ ಬೀಳುತ್ತದೆ.”

ಸ್ವಾಮಿಗಳು ಅದಕ್ಕೆ ಏನನ್ನೂ ಹೇಳದಿರಲು ಪಾರುಪತ್ತೆಗಾರರೇ ಮುಂದುವರಿಸಿದರು. “ಕೇವಲ ನಷ್ಟಗೊಂಡ ಚಿನ್ನಾಭರಣಗಳ ಕುರಿತಾದರೆ ಅವುಗಳನ್ನು ತುಂಬಲು ತಕ್ಕ ಕ್ರಮಗಳನ್ನು ಕೈಗೊಂಡಿರುವೆನು. ಬೇರೆ ಸಂಗತಿಯೇನಾದರೂ ಇದ್ದರೆ ತಿಳಿಸಬೇಕು.”

“ಚಿನ್ನಾಭರಣಗಳ ಕುರಿತು ನಾವು ತಲೆ ಕಡಿಸಿಕೊಂಡಿದ್ದೇವೆಂದು ತಿಳಿದಿರ?”

“ಹಾಗಿದ್ದರೆ ಆರೋಗ್ಯದ ವಿಷಯವೆ? ಹವಾ ಬದಲಾವಣೆಯ ಅಗತ್ಯವಿದ್ದರೆ ಅದಕ್ಕೆ ಏರ್ಪಾಡು ಮಾಡುವೆ?”

“ನಾವು ಆರೋಗ್ಯವಾಗಿಯೇ ಇದ್ದೇವೆ?”

“ಹಾಗಿದ್ದರೆ ಇನ್ನೇನೋ ಕಾರಣವಿರಬೇಕು?”

“ಇರಬಹುದು.”

“ವೈಯಕ್ತಿಕವೇ?”

“ನಿಮ್ಮಲ್ಲೇನು ವೈಯಕ್ತಿಕ” ಶಾಸ್ತ್ರಿಗಳೆ. ನಾವು ಈ ಪೀಠವನ್ನು ತ್ಯಜಿಸಬೇಕೆಂದಿದ್ದೇವೆ.”

“ಪೀಠತ್ಯಾಗವೆ?”

“ತ್ಯಜಿಸಿ ಗೃಹಸ್ಥರಾಗಬೇಕೆಂದಿದ್ದೇವೆ.”

“ಗೃಹಸ್ಥರೆ?”

“ಹೌದು.”

“ಏನಾಯಿತು?”

“ಈ ಪೀಠವನ್ನು ಅಲಂಕರಿಸುವುದಕ್ಕೆ ನಾವು ಯೋಗ್ಯರಲ್ಲ ಎಂಬುದು ತಿಳಿಯಿತು.”

“ಇಷ್ಟು ನಿಗೂಢವಾಗಿ ಹೇಳಿದರೆ ನನಗೊಂದೂ ಅರ್ಧವಾಗುವುದಿಲ್ಲ.”

“ಬಿಡಿಸಿಯೇ ಹೇಳುವೆವು.” ಶಿವಮೊಗ್ಗೆಯಿಂದ ಬಂದ ಮೇಲೆ ತಾತ್ಕಾಲಿಕವಾಗಿ ನೆಲಸಲೆಂದು ನೀವು ನಾರಾಯಣ ಭಟ್ಟರ ಉಪಗೃಹದಲ್ಲಿ ನಮ್ಮನ್ನು ಇಳಿಸಿದಿರಿ. ಅಲ್ಲಿ ನಮಗೆ ಅಲಕನಂದೆಯ ಪರಿಚಯವಾಯಿತು. ನಮಗೆ ಗೊತ್ತಾವುದಕ್ಕೆ ಮುನ್ನವೆ ನಾವು ಅವಳಲ್ಲಿ ಅನುರಕ್ತರಾದೆವು.”

“ಇದನ್ನೆಲ್ಲಾ ಮೀರುವ ಚಿತ್ತ ಸ್ಥೈರ್ಯ ಶ್ರೀಗಳಿಗಿಲ್ಲವೆ?”

“ನಾವು ನಮ್ಮ ಮನೋಗತವನ್ನು ಅಲಕನಂದೆಗೆ ತಿಳಿಸಿಯೂ ಆಗಿದೆ.”

“ಮಠದ ಗೌರವ, ಪರಂಪರೆ, ಧರ್ಮ – ಇವುಗಳ ಮುಂದೆ ಹೆಣ್ಣೊಬ್ಬಳ ಆಕರ್ಷಣೆಯೇನು?”

“ನಾವು ಈ ಬಗ್ಗೆ ಬಹಳ ಯೋಚನೆ ಮಾಡಿದ್ದೇವೆ. ಕಳೆದ ಕೆಲವು ದಿನಗಳಿಂದ ಬೇರೇನನ್ನೂ ಯೋಚನೆ ಮಾಡುವುದಕ್ಕೇ ಆಗುತ್ತಿಲ್ಲ.”

“ಆದರೆ ಒಂದು ಸಂಗತಿ…..”

“ಏನು?”

“ಶ್ರೀಗಳಿಗೀಗ ಇರುವ ಹೆಸರು, ಸಲ್ಲುವ ಮರ್ಯಾದೆ ಶ್ರೀಗಳಿಂದೇ ಹೊರತು ವ್ಯಕ್ತಿ ಯೆಂದಲ್ಲ. ಒಮ್ಮೆ ತಾವು ಪೀಠವನ್ನು ತ್ಯಜಿಸಿದ ಮೇಲೆ ಕೇವಲ ವ್ಯಕ್ತಿ ಯಾಗಿ ಬಿಡುತ್ತೀರಿ. ನಂತರ ಜನರು ತಮ್ಮನ್ನು ನೋಡುವುದು ಬೇರೆ ಮಾನದಂಡದಲ್ಲಿ. ನನಗೆ ತಿಳಿದಿರುವಂತೆ ಅಲಕನಂದೆಗೆ ಈಗಾಗಲೆ ವರಾನ್ವೇಷಣೆ ನಡೆಯುತ್ತಿದೆ. ವಿದೇಶದಲ್ಲಿರುವ ಇಂಜಿನಿಯರನೊಬ್ಬನ ಕುರಿತಾಗಿ ಮಾತುಕತೆ ನಡೆದಿದೆಯೆಂದು ಕೇಳಿದ್ದೇನೆ.”

“ಮಾತುಕತೆಯೆ? ಇದು ಅಸಾಧ್ಯ ” ಎಂದರು ಸ್ವಾಮಿಗಳು.

ಈ ಬಗ್ಗೆ ಸಂಭಾಷಣೆ ಅಲ್ಲಿಗೆ ನಿಂತಿತು. ಸ್ವಾಮಿಗಳನ್ನು ಅವರ ಚಿಂತೆಗೆ ಬಿಟ್ಟು ಪಾರುಪತ್ತೆಗಾರರು ತಮ್ಮ ಸಮಸ್ಯೆಯನ್ನು ಹಚ್ಚಿಕೊಂಡು ಹೊರಟರು. ಮನುಷ್ಯನ ಮನಸ್ಸಿನ ಸೂಕ್ಷಗಳನ್ನು ಬಲ್ಲ ಪಾರುಪತ್ತೆಗಾರರಿಗೆ ಸ್ವಾಮಿಗಳ ಮನೋರಹಸ್ಯ ಅವರು ಹೇಳದೆಯೇ ಗೊತ್ತಿರಲಿಲ್ಲವೆ? ಇದ್ದರೂ ಅದು ಇಷ್ಟು ಮುಂದು ವರಿಯಬಹುದೆಂದು ಅವರು ಊಹಿಸಿರಲಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಧರ್ಮ ಸಂಕಟಗಳನ್ನು ಕಾಲಕ್ರಮೇಣ ತಾನಾಗಿಯೇ ಪರಿಹರಿಸಿಕೊಳ್ಳಲು ಶಕ್ತನಿರುತ್ತಾನೆ. ಸ್ವಾಮಿಗಳು ಈ ನಿಟ್ಟಿನಲ್ಲಿ ತೀರ ದುರ್ಬಲರಾಗಿರುವಂತೆ ಕಂಡಿತು. ಕಾಲವೇ ಇದಕ್ಕೆ ಪರಿಹಾರ ಸೂಚಿಸುತ್ತದೆ ಎಂದುಕೊಂಡರು ಪಾರುಪತ್ತೆ ಗಾರರು.

’ಇದು ಅಸಾಧ್ಯ’ ಎಂಬುದಾಗಿ ಸ್ವಾಮಿಗಳು ನುಡಿದುದು ಅವರ ಮನೋಗತವನ್ನೇ ಹೊರತು ಅದಕ್ಕೆ ಬೇರೆ ಹೆಚ್ಚಿನ ಅರ್ಥವಿರಲಿಲ್ಲ. ಕಾರಣ ಪಾರುಪತ್ತೆಗಾರರು ಹೇಳಿದಂತೆ ಅಲಕನಂದೆಯ ಮದುವೆ ನಿಶ್ಚಯವಾಗಿ ಮಠಕ್ಕೆ ಸಕಾಲದಲ್ಲಿ ಕಾಣಿಕೆಯೂ ಆಮಂತ್ರಣವೂ ಬಂದುವು. ಮದುವೆಯೂ ನೆರವೇರಿ, ವೀಸಾ ದೊರಕಿದ ಕೂಡಲೇ ಅಲಕನಂದೆ ತನ್ನ ಪತಿಯೊಂದಿಗೆ ಅಮೇರಿಕೆಗೆ ಪ್ರಯಾಣ ಮಾಡಿದಳು. ಮಠದ ವಾತಾವರಣದಲ್ಲಿ ಗೋಚರಕ್ಕೆ ಬರುವಂಥ ವ್ಯತ್ಯಾಸವೇನೂ ಉಂಟಾಗಲಿಲ್ಲ. ಅವಧಾನಿಗಳ ಪಾಠಪ್ರವಚನ, ಶಾಸ್ತ್ರಿಗಳ ಅಡಳಿತ, ಸ್ವಾಮಿಗಳ ಏಕಾಂತ ಒಂದೊಂದೂ ಹಾಗೆಯೇ ಮುಂದುವರಿಯುತ್ತಿತ್ತು.

ಆದರೆ ಬಹಳ ಕಾಲವಲ್ಲ. ಒಂದು ಬೆಳಿಗ್ಗೆ ಸ್ವಾಮಿಗಳ ಚಾಕರಿಯ ಹುಡುಗ ಪಾರುಪತ್ತೆಗಾರರ ಮನೆಗೆ ಓಡಿ ಬಂದು ಸ್ವಾಮಿಗಳು ಎಲ್ಲೂ ಕಾಣಿಸುವುದಿಲ್ಲ ಎಂದು ವರದಿ ಮಾಡಿದ. ಪಾರುಪತ್ತೆಗಾರರು ಆಗಷ್ಟೆ ಎದ್ದು ನಿತ್ಯವಿಧಿಗಳನ್ನು ಪೂರೈಸಿ ಕುಡಿಯಲೆಂದು ಕಾಫ಼ಿಯನ್ನು ಕೈಗೆತ್ತಿಕೊಂಡಿದ್ದರು. ಕಾಫ಼ಿಯನ್ನು ಅಲ್ಲೇ ಇಟ್ಟು ಅವರು ಹುಡುಗನೊಂದಿಗೆ ಮಠಕ್ಕೆ ಬಂದರು. ಶ್ರೀಗಳ ಮಲಗುವ ಕೋಣೆ ಖಾಲಿಯಾಗಿತ್ತು. ನಂತರ ಪಾರುಪತ್ತೆಗಾರರ ಗಮನ ಹರಿದುದು ತಮ್ಮದೇ ಕೋಣೆ ಯತ್ತ – ಹೊಸ ಕಟ್ಟಡ ಕಟ್ಟಿಸುವಾಗ ಅನುಕೂಲವಾಗುತ್ತದೆಂದು ತಮಗೂ ಒಂದು ಕೋಠಡಿಯನ್ನು ಅವರು ಕಟ್ಟಿಸಿಕೊಂಡಿದರು. ಕೊಠಡಿಗೆ ಹಾಕಿದ ಬೀಗ ಮಾಯವಾಗಿತ್ತು.

“ಓ! ಮರೆತಿದ್ದೆ. ಸ್ವಾಮಿಗಳು ನಿನ್ನೆ ರಾತ್ರಿಯೇ ಮೈಸೂರಿನ ಸಮ್ಮೇಳನಕ್ಕೆ ಹೊರಟು ಹೋದರು. ಅಲ್ಲಿಂದ ಕೂಡಲೇ ಬರಬೇಕೆಂದು ತಾರು ಬಂದಿತ್ತು.” ಎಂದರು ಪಾರುಪತ್ತೆಗಾರರು. ಸ್ವಾಮಿಗಳು ಇನ್ನು ಕೆಲವು ದಿನಗಳತನಕ ಮೈಸೂರಲ್ಲೆ ಇರುತ್ತಾರೆ ಎಂದೂ ತಿಳಿಸಿದರು.

ನಂತರ ಅವರು ತಮ್ಮ ಕೊಠಡಿಯನ್ನು ಪ್ರವೇಶಿಸಿದರು. ಭದ್ರವಾದ ತಿಜೋರಿ ಹಾಗೆಯೇ ಇತ್ತು. ಆದರೆ ಹಿಂದಿನ ದಿನ ತಾನು ನೇತು ಹಾಕಿದ್ದ ಅಂಗಿ ಮುತ್ತು ಧೋತರಗಳು ಮಾತ್ರ ಎಲ್ಲೂ ಕಾಣಿಸಲಿಲ್ಲ.

“ಸ್ವಾಮಿಯಾಗುತ್ತಲೇ ನಾನು ನನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡೆ; ವ್ಯಕ್ತಿತ್ವವನ್ನು ಕಳೆದುಕೊಂಡೆ; ತಲೆಗೂದಲನ್ನೂ ಹೆಸರನ್ನೂ ಕಳೆದುಕೊಂಡೆ. ಈಗ ಮತ್ತೆ ನಾನು ಸುಬ್ಬಣ್ಣ ನಾಗಿದ್ದೇನೆ. ನನ್ನ ಸ್ವಾತಂತ್ರ್ಯವನ್ನು ಮರಳಿ ಪಡದಿದ್ದೇನೆ. ಇದರಲ್ಲಿ ತಪ್ಪೇನು?”

“ಸ್ವಾಮಿಗಳಾದವರು ಕೆಲವೊಂದು ಸಂಗತಿಗಳ ಬಗ್ಗೆ ಮಾತನಾಡಬಾರದೆಂದು ಶಾಸ್ತ್ರ ಹೇಳುತ್ತದೆ. ಸ್ತ್ರೀಸಂಗ, ಜೂಜು, ಕಳವು, ಕೊಲೆ ಮತ್ತು ಪೂರ್ವಾಶ್ರಮ.”

“ಶಾಸ್ತ್ರಕ್ಕಿಷ್ಟು ಮಣ್ಣು ಹಾಕಿತು! ನಾನೀಗ ಕೇವಲ ಸುಬ್ಬಣ್ಣ, ತಿಳಿಯತೆ? ಸ್ವಾಮಿ ಗೀಮಿ ಏನಲ್ಲ, ನಡುಮನೆ ಗಣಪ್ಪಯ್ಯನ ಮಗ ಸುಬ್ಬಣ್ಣ. ಆ ನಡುಮನೆ- ಅದು ಬರೀ ಹೆಸರಿಗಷ್ಟೇ ಅಂಟಿಕೊಂಡಿದ್ದುದು. ಅದನ್ನು ಅಪ್ಪಯ್ಯ ಸಾಯುವುದಕ್ಕೆ ಮೊದಲೇ ಮಾರಿ ನೀರು ಕುಡಿದಿದ್ದರಿಂದ ಆ ಸಂಬಂಧ ಕೂಡ ನನಗಿಲ್ಲ. ಹಾಗೆಂದೇ ನಾನು ಚಿಕ್ಕವನಿದ್ದಾಗಲೆ ಊರು ಬಿಟ್ಟುದು. ಮನಸ್ಸಿದ್ದರೆ ಹಿಂದಿನ ಸ್ವಾಮಿಗಳು ನನ್ನನ್ನು ಓದಿಸಬಹುದಿತ್ತು. ಅವರಿಗೆ ನನ್ನ ನೆನಪಾದ್ದು ಸಾಯುವ ಕಾಲದಲ್ಲಿ.”

ಸ್ವಾಮಿಗಳು ಜೇಬಿನಿಂದ ಬೀಡಿ ತೆಗೆದು ಸೇದ ತೊಡಗಿದರು. ಸ್ವಾಮಿಗಳು ಮತ್ತು ಪಾರುಪತ್ತೆಗಾರರು ಮೈಸೂರಿನ ಪಾರ್ಕೊಂದರಲ್ಲಿ ಕುಳಿತು ಮಾತನಾಡುತ್ತಿದ್ದರು. ಸ್ವಾಮಿಗಳ ಬೀಡಿಯ ಹೊಗೆ ಪಾರುಪತ್ತೆಗಾರರ ಮುಖಕ್ಕೆ ಹೊಡೆಯುತ್ತಿತ್ತು. ಪಾರುಪತ್ತೆಗಾರರು ಹೊಗೆ ಸೇದುತ್ತಿರಲಿಲ್ಲ. ವೀಳ್ಯ ಕೂಡ ಹಾಕುತ್ತಿರಲಿಲ್ಲ.

“ಅಲ್ಲದೆ ಸ್ತ್ರೀಸಂಗವಾಗಲಿ, ಜೂಜಾಗಲಿ, ಕಳವಾಗಲಿ, ಕೊಲೆಯಾಗಲಿ ನಾನು ಮಾಡಿಲ್ಲ. ಆಹಾ! ನಿಜ! ಕಳವು. ನೆಳಲೆಯಿಂದ ಮನುಷ್ಯನಂತೆ ಹೊರಡುವುದಕ್ಕೆ ನನಗೆ ಬಟ್ಟೆ ಬರೆ ಬೇಕಾಗಿತ್ತು. ನಿಮ್ಮದನ್ನು ತೆಗೆದುಕೊಂಡೆ. ಇದು, ಹೌದು, ಒಂದು ರೀತಿಯಲ್ಲಿ ಕಳವು.”

“ಛೆ ಛೆ ನಾನು ಹಾಗಂದನೆ? ನಾನಂದುದು ತಾವು ಪೂರ್ವಾಶ್ರಮದ ಬಗ್ಗೆ ಮಾತನಾಡಬಾರದು ಎಂದು. ಸ್ವಾಮಿಗಳಾಗುವುದೆಂದರೆ ಇನ್ನೊಂದು ಜನ್ಮ ಎತ್ತಿದಂತೆ.”

“ಸ್ವಾಮಿಯಾಗುತ್ತಲೆ ನನ್ನ ಶ್ರಾದ್ಧವೂ ಆಗಿತ್ತಲ್ಲ?”

“ತಾವು ಅಲಕನಂದೆಯ ವಿಚಾರವನ್ನು ಬಹಳವಾಗಿ ಮನಸ್ಸಿಗೆ ಹಚ್ಚಿಕೊಂಡಂತಿದೆ.”

“ನೆಳಲೆ ಮಠದ ಸ್ವಾಮಿಯಾಗಿ ನಾನಿದ್ದ ಕಾಲಾವಧಿ ಒಂದು ಕನಸು. ಕನಸಲ್ಲದೆ ಅದು ಮತ್ತೇನು-ಇದೆಲ್ಲ ಏನೆಂದು ತಿಳಿಯುವ ಮೊದಲೇ ನಾನು ಸ್ವಾಮಿಯಾಗಿಬಿಟ್ಟಿದ್ದೆ.”

“ಅಂದಿನ ಪರಿಸ್ಥಿತಿ ಹಾಗಿತ್ತು. ಇಂದು ಪರಿಸ್ಥಿತಿ ಅದಕ್ಕಿಂತಲೂ ಕಠಿಣವಾಗಿದೆ. ಗುರುಗಳಿಲ್ಲದೆ ಮಠವಿಲ್ಲ. ತಾವೀಗ ಮರಳಿದಿದ್ದರೆ ನೆಳಲೆಮಠ ಗುರುವಿಲ್ಲದಾಗುತ್ತದೆ.”

“ನನ್ನ ಹಾಗೆಯೇ ಇನ್ನೊಬ್ಬನನ್ನು ಕುಳಿತುಕೊಳ್ಳಿಸಬಹುದಲ್ಲ?”

“ಅದೇನು ಅಷ್ಟು ಸುಲಭವೆ?”

“ಈ ಒಂದು ತಿಂಗಳ ಅವಧಿ ಗುರುಗಳಿಲ್ಲದೆ ಕಳೆಯಲಿಲ್ಲವೆ?”

“ಶ್ರೀಗಳು ಒಂದು ಧಾರ್ಮಿಕ ಸಮ್ಮೇಳನಕ್ಕೆಂದು ಮೈಸೂರಿಗೆ ಹೋಗಿರುವರೆಂದು ಎಲ್ಲರೂ ನಂಬಿದ್ದಾರೆ. ತಾವು ಇದೇ ನಗರದಲ್ಲಿ ಇರುತ್ತೀರೆಂಬ ಸಂದೇಹವಿತ್ತು ನನಗೆ. ಶ್ರೀಗಳು ಇನ್ನು ತಡಮಾಡಬಾರದು.”

“ನನ್ನನ್ನು ಸುಬ್ಬಣ್ಣನೆಂದು ಕರೆಯಿರಿ ಶಾಸ್ತ್ರಿಗಳೆ. ನಾನು ನಿಮಗಿಂತ ಸಣ್ಣವನು.”

“ಶ್ರೀಗಳು ಎಲ್ಲರಿಗಿಂತ ಹಿರಿಯ ಸ್ಥಾನದಲ್ಲಿರುವವರು.”

“ನಾನು ಸ್ವಾಮಿಯಾಗಿ ಈಗ ಇಲ್ಲವಲ್ಲ.”

“ಇದ್ದೀರಿ-ಎಲ್ಲ ದೃಷ್ಟಿಯಲ್ಲಿ?”

“ಆದರೆ ನಿಮ್ಮ ದೃಷ್ಟಿಯಲ್ಲಿ?”

“ನನ್ನ ದೃಷ್ಟಿಯೆಂಬುದೇ ಇಲ್ಲ. ಸ್ವಾಮಿಗಳಾಗಿ ತಾವು ಹೇಗೆ ತಾವಲ್ಲವೋ ಹಾಗೆಯೇ ಪಾರುಪತ್ತೆ ಗಾರನಾಗಿ ನಾನು ಕೂಡ ನಾನಲ್ಲ.”

“ಎಂದರೆ?”

“ಸ್ವಾಮಿಗಳಂತೆಯೇ ಪಾರುಪತ್ತೆಗಾರನದೂ ಒಂದು ಸಾರ್ವಜನಿಕ ಸ್ಥಿತಿ. ಅದನ್ನು ನಮಗೆ ಬೇಕೆಂದಾಗ ಬಿಟ್ಟು ಬಿಡುವಂತಿಲ್ಲ. ಸ್ವಂತವನ್ನು ಬಿಟ್ಟು ಯೋಚಿಸಿ ನೋಡಿ – ಹಲವು ವರ್ಷಗಳಿಂದ ನಾವಿಬ್ಬರೂ ಜತೆ ಜತೆಯಾಗಿದ್ದೆವು. ಈಗ ನಾನೊಬ್ಬನೆ ಹೇಗೆ ಹಿಂತಿರುಗಲಿ?”

ಸ್ವಾಮಿಗಳು ಬೀಡಿಯ ತುಂಡನ್ನು ದೂರಕ್ಕೆಸೆದು ಕೇಳಿದರು; “ನಾನೇನು ಮಾಡಬೇಕೆಂದು ಹೇಳುತ್ತೀರಿ?”

“ಮಠದ ಕಾರು ರಾಮಕೃಷ್ಣಾಶ್ರಮದಲ್ಲಿ ಕಾಯುತ್ತಿದೆ. ತಮ್ಮ ಬಟ್ಟೆ ಬರೆಯನ್ನು ನಾನು ಜತೆಯಲ್ಲಿ ತಂದಿದ್ದೇನೆ.”

“ನಾನು ಯೋಚಿಸಬೇಕು.”

“ನಾನು ಆಶ್ರಮದಲ್ಲಿ ಇಳಿದುಕೊಂಡಿದ್ದೆನೆ.” ಎಂದರು ಪಾರುಪತ್ತೆಗಾರರು.

ಮಾರನೆ ದಿನ ಕಾರು ಮೈಸೂರು ಬಿಟ್ಟಾಗ ಮಧ್ಯಾಹ್ನವಾಗಿತ್ತು. ಯಾತ್ರೆ ಸಾಗುತ್ತಿದ್ದಂತೆ ಪಾರುಪತ್ತೆಗಾರರು ಸ್ವಾಮಿಗಳ ಗೈರುಹಾಜರಿಯಲ್ಲಿ ತಾವು ಕೈಗೊಂಡ ಕಾರ್ಯಗಳ ಬಗ್ಗೆ ಅವರಿಗೆ ತಿಳಿಸುತ್ತಿದ್ದರು. ಅದು ಬೇಸಿಗೆಯ ಕಾಲ, ಬಿಸಿಲ ಬೇಗೆಗೆ ಸ್ವಾಮಿಗಳಿಗೆ ಕುಳಿತಲ್ಲೇ ಚೊಂಪುಹತ್ತಿದ್ದರಿಂದ ಪಾರುಪತ್ತೆ ಗಾರರು ಮಾತು ನಿಲ್ಲಿಸಿದರು. ಸಂಜೆಯ ಹೊತ್ತಿನಲ್ಲಿ ಅವರು ಘಟ್ಟದ ಅಂಚನ್ನು ತಲಪಿದ್ದರು. ಒಂದು ಪ್ರಶಸ್ತವಾದ ಜಾಗದಲ್ಲಿ ತುಸು ವಿಶ್ರಾಂತಿಗೆಂದು ಪಾರುಪತ್ತೆಗಾರರು ಡ್ರೈವರನಿಗೆ ಕಾರು ನಿಲ್ಲಿಸಲು ಹೇಳಿದರು. ಜತೆಯಲ್ಲಿ ಎಳನೀರು ತಂದಿದ್ದರು.

ಸ್ವಾಮಿಗಳೂ ಪಾರುಪತ್ತೆ ಗಾರರೂ ಒಂದು ಎತ್ತರದ ಹಾಸುಗಲ್ಲಿನ ಮೇಲೆ ಕೂತುಕೊಂಡಿದ್ದರು. ಅಲ್ಲಿಂದ ಕೆಳಗಿನ ಕಣಿವೆ ಸುಂದರವಾಗಿ ಕಾಣಿಸುತ್ತಿತ್ತು. ಆಚೀಚೆ ಕಾಡು ಬೆಟ್ಟಗಳು, ಸೂರ್ಯನ ಬೆಳಕು ಬೆಟ್ಟಗಳ ತುದಿಯಲ್ಲಷ್ಟೆ ಇತ್ತು. ಮಾತಿನ ನಡುವೆ ಪಾರುಪತ್ತೆಗಾರರು ಕೇಳಿದರು.

“ಶ್ರೀಗಳು ನಮ್ಮ ಡ್ರೈವರನನ್ನು ಗಮನಿಸಿರಬಹುದು.”

“ಗಂಗಾಧರನನ್ನೇ?”

“ಹೌದು.”

“ಯಾಕೆ?”

“ಹಿರಿಯ ಸ್ವಾಮಿಗಳು ಸಮಾಧಿಸ್ಥರಾಗುವ ಕಾಲದಲ್ಲಿ ಗಂಗಾಧರ ಇನ್ನೂ ಚಿಕ್ಕವನು. ಸ್ಕೂಲಿಗೆ ಹೋಗುತ್ತಿದ್ದ. ಕೊನೆಯ ಕಾಲದಲ್ಲಿ ಸ್ವಾಮಿಗಳು ನನ್ನನ್ನು ಸಮೀಪಕ್ಕೆ ಕರೆಸಿ ಅವನ ಕೈಬಿಡದಂತೆ ಮಾತು ತೆಗೆದುಕೊಂಡಿದ್ದರು.”

“ಹೌದೆ?”

“ಗಂಗಾಧರನ ತಾಯಿ ಎಲ್ಲಿಂದಲೋ ಚಾಕರಿಗೆಂದು ಬಂದು ಮಠವನ್ನು ಆಶ್ರಯಿಸಿದ್ದಳು. ಕಾಣುವುದಕ್ಕೆ ಲಕ್ಷಣವಾಗಿದ್ದಳು, ಆ ಕಾಲದಲ್ಲಿ.”

ತುಸು ಹೊತ್ತು ಯಾರೂ ಮಾತಾಡಲಿಲ್ಲ. ನಂತರ ಸ್ವಾಮಿಗಳು, “ಇದನ್ನು ಯಾಕೆ ಹೇಳಿದಿರಿ?” ಎಂದರು. ಪಾರುಪತ್ತೆ ಗಾರರಿಗೆ ಅದು ಕೇಳಿಸುತೋ ಇಲ್ಲವೋ ಅವರು ಹೊತ್ತಾಯಿತೆಂದು ಎದ್ದರು.

ಮುಂದೆ ಘಟ್ಟ ಇಳಿಯುವ ದಾರಿ, ಕಡಿದಾದ ತಿರುವುಗಳು ಬೇರೆ. ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಶ್ರೀಗಳು ತಮ್ಮ ಡೋಲಾಯಮಾನ ಮನಸ್ಸಿನ ಸಂಕೇತದಂತೆ ಆಗಾಗ್ಗೆ ಬದಿಯಿಂದ ಬದಿಗೆ ತೊನೆಯುತ್ತಿದ್ದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರದಕ್ಷಿಣೆ
Next post ಹೊರನಾಡೆಂಬುದು ಹೊರನಾಡಲ್ಲ

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

cheap jordans|wholesale air max|wholesale jordans|wholesale jewelry|wholesale jerseys