ಹೊರನಾಡೆಂಬುದು ಹೊರನಾಡಲ್ಲ; ವರನಾಡು
ಚೆಲುವಿನ ದೇವತೆ ವರ ನೀಡಿರುವ ಸಿರಿನಾಡು
ಇದುವೇ ವರನಾಡು; ಸೃಷ್ಟಿಯ
ಹೊರನಾಡೆನಿಸಿಹ ವರನಾಡು /ಪ//

ತೆಂಗಿನ ಮರಗಳು ಕಂಗಿನ ಮರಗಳು
ತಲೆದೂಗುತಿಹ ಚೆಲುನಾಡು
ಬೆಳ್ಳಿಯ ಮೋಡವು ಹಸುರಿನ ಬೆಟ್ಟವ
ಚುಂಬಿಸುತಿರುವ ಗಿರಿನಾಡು
ಇದೇ ನಮ್ಮಯ ಹೊರನಾಡು
ಸೊಗ ಸೌಂದರ್ಯದ ಸಿರಿಬೀಡು

ವೀಳ್ಯದ ಎಲೆ ಯಾಲಕ್ಕಿ ಮೆಣಸುಗಳು
ತುಂಬಿಹ ಸಮೃದ್ಧಿಯ ನಾಡು
ತೂಗುವ ತಾಳೆ ಬಾಗುವ ಬಾಳೆ
ಮೈತಾಳಿಹ ನಾಟ್ಯದ ನಾಡು
ಇದೇ ನಮ್ಮಯ ಹೊರನಾಡು
ತರುಲತೆಗಳ ಸಿಂಗರ ಬೀಡು

ಹಸಿವೇ ಇಲ್ಲದ ಮೃಗ ಪಕ್ಷಿಗಳು
ಅಂಡಲೆಯುವ ಸುಂದರನಾಡು
ಸುಮಧುರ ಧ್ವನಿಯಲಿ ಮೆಲ್ಲನೆ ಉಲಿಯುವ
ಗಿಳಿ ಕೋಗಿಲೆಗಳ ನೆಲೆ ನಾಡು
ಇದೇ ನಮ್ಮಯ ಹೊರನಾಡು
ಸುಖ ಸಂತೋಷದ ಸ್ವರ ಬೀಡು

ಹೂ ಬಿಸಿಲಿಗೆ ಹಸಿ ಮೈಯನು ಒಡ್ಡಿಹ
ವನದೇವಿಯ ಮೋಹಕ ನಾಡು
ಕಾಣುವ ಕಂಗಳ ಸೆರೆ ಹಿಡಿಯುತಲಿ
ಕವಿ ಮಾಡುವ ಮಾಂತ್ರಿಕ ನಾಡು
ಇದೇ ನಮ್ಮಯ ಹೊರನಾಡು
ಇದರಿಂ ಮೂಡಿದೆ ಈ ಹಾಡು

ಇಂತಹ ನಾಡು ಕಂಡಿದೆ ಕೇಡು
ಮಾಯವಾಗಿದೆ ಹಸಿರು
ಜನವೈವಿಧ್ಯ ಇದ್ದ ಬೀಡಲಿ
ಉಳಿದಿದೆ ಕೊಂಚವೆ ಉಸಿರು
ಇದೇ ಇಂದಿನ ಹಾಡು
ಆಗದೆ ಇರಲಿ ಇದು ಪಾಡು
*****