Home / ಕಥೆ / ಸಣ್ಣ ಕಥೆ / ತಿರುಚನಾಪಳ್ಳಿಯ ಜಟ್ಟಿ

ತಿರುಚನಾಪಳ್ಳಿಯ ಜಟ್ಟಿ

ಪಟ್ಟವಾಗುವುದಕ್ಕೆ ಮುಂಚೆ ಕಂಠೀರವ ಒಡೆಯರು ತಮ್ಮ ತಂದೆಗಳಾದ ಚಾಮರಾಜ ಒಡೆಯರ ಬಳಿಯಲ್ಲಿ ತೆರಕಣಾಂಬಿಯಲ್ಲಿದ್ದರು. ಆ ಕಾಲದಲ್ಲಿ ರಾಮೇಶ್ವರದ ತೀರ್ಥಯಾತ್ರೆ ಮಾಡಿಕೊಂಡು ಬರುತ್ತಿದ್ದ ಒಬ್ಬ ಬ್ರಾಹ್ಮಣನು ಈ ಒಡೆಯರನ್ನು ಕಂಡು ಫಲ ಮಂತ್ರಾಕ್ಷತೆಯನ್ನು ಒಪ್ಪಿಸಿ “ತಿರುಚನಾಪಳ್ಳಿಯಲ್ಲಿ ಮಹಾ ಪರಾಕ್ರಮಶಾಲಿಯಾದ ಶೂರ ಜಟ್ಟಿಯೊಬ್ಬನಿರುವನು. ಆತನು ತನ್ನ ಸಮಾನ ಕಾಳಗವಾಡುವವರು ಯಾರೂ ಇಲ್ಲವೆಂದು ಹೆಮ್ಮೆ ಹೊಂದಿದ್ದಾನೆ. ತನ್ನ ದಟ್ಟಿ ಚಲ್ಲಣಗಳನ್ನು ಆ ಊರಿನ ಕೋಟೆ ಬಾಗಲಿಗೆ ಕಟ್ಟಿದರೆ ಸರ್ವಜನರೂ ತನ್ನ ಕಾಲಕೆಳಗೆ ಸಂಚಾರಮಾಡಿದಂತೆ ಆಗುವುದೆಂದು ಆ ಊರ ಅರಸನ ಅನುಮತಿಯನ್ನು ಪಡೆದು ದುರಹಂಕಾರಿಂದ ಅವುಗಳನ್ನು ಕಟ್ಟಿದ್ದಾನೆ. ಆ ಊರಿನ ಅರಸರು ಬ್ರಾಹ್ಮಣರು ಮಾತ್ರ ಮತ್ತೊಂದು ಬಾಗಲಿನಲ್ಲಿ ಸಂಚಾರಮಾಡುವ ಹಾಗೆಯೂ ಉಳಿದವರೆಲ್ಲರೂ ಆ ಬಾಗಲಿನಲ್ಲಿಯೇ ಸಂಚರಿಸುವಂತೆಯೂ ಕಟ್ಟುಮಾಡಿದ್ದಾರೆ” ಎಂದು ಹೇಳಿದನು. ಆ ಮಾತನ್ನು ಕೇಳಿ ಈ ಕಂಠೀರವಒಡೆಯರು ಜಟ್ಟಿಯ ವೇಷವನ್ನು ಧರಿಸಿ, ಯಾರೂ ಅರಿಯದಂತೆ ಆ ಬ್ರಾಹ್ಮಣನನ್ನು ಸಂಗಡ ಕರೆದುಕೊಂಡು ತಿರುಚನಾಪಳ್ಳಿಗೆ ಹೊರಟು, ಅಲ್ಲಿ ಕೋಟಿ ಬಾಗಲಿಗೆ ಕಟ್ಟಿದ್ದ ದಟ್ಟಿ ಚಲ್ಲಣಗಳನ್ನು ತಮ್ಮ ಆಳಿನ ಕೈಕೋಲಿನಿಂದ ತೆಗೆಸಿ, ಅನಂತರ ಕೋಟೆಯೊಳಕ್ಕೆ ಪ್ರವೇಶಮಾಡಿದರು.

ಈ ಸುದ್ದಿಯನ್ನು ಕೇಳಿದ ತಿರುಚನಾಪಳ್ಳಿಯ ನಾಯಕನು ಇವರನ್ನು ಕರೆಯಿಸಿ, ಸನ್ಮಾನಮಾಡಿ ಇರಿಸಿಕೊಂಡಿದ್ದು, ಒಂದು ದಿನ ಎಲ್ಲರನ್ನೂ ಕರೆಸಿ ಸಭೆಮಾಡಿ, ತಾನು ಉಪ್ಪರಿಗೆಯ ಮೇಲೆ ಕುಳಿತುಕೊಂಡು, ತನ್ನ ಜಟ್ಟಿಗೂ ವೇಷಧಾರಿಗಳಾಗಿ ಬಂದಿದ್ದ ಕಂಠೀರವ ಒಡೆಯರಿಗೂ ಕಾಳಗ ಬಿಡಿಸಿದನು. ಆಗ ವಜ್ರಮುಷ್ಠಿಗಳನ್ನು ಹಿಡಿದು ಇಬ್ಬರೂ ಕಾಳಗಮಾಡುವ ಸಮಯದಲ್ಲಿ ಈ ಒಡೆಯರು ಯಾರೂ ಅರಿಯದಂತೆ ಮೊದಲೇ ಸೊಂಟದಲ್ಲಿ ಕಟ್ಟಿದ್ದ ವಿಜಯನಾರಸಿಂಹವೆಂಬ ಕತ್ತಿಯಿಂದ ಆ ಜಟ್ಟಿಯ ಕೊರಳನ್ನು ಕ್ಷಣ ಮಾತ್ರದಲ್ಲಿ ಅತಿಚಮತ್ಕಾರದಿಂದ ಕತ್ತರಿಸಿಬಿಟ್ಟು, ನಿಂತಿದ್ದ ಆ ಹೆಣದ ಮುಂದೆ ಸುಮ್ಮನೆ ನಿಂತುಕೊಂಡರು. ಇದನ್ನು ತಿಳಿಯದೆ ಅಲ್ಲಿಯ ಅರಸು “ಏತಕ್ಕೆ ಸುಮ್ಮನೆ ನಿಂತಿದ್ದೀರಿ?” ಎಂದು ಕೇಳಲು ಒಡೆಯರು ತಮ್ಮ ಎಡಗೈಯಲ್ಲಿದ್ದ ಬೆತ್ತದಿಂದ ಎದುರಾಳಿನ ಮುಖವನ್ನು ತಿವಿದರು. ಜಟ್ಟಿಯ ತಲೆಯು ಕೆಳಕ್ಕೆ ಉರುಳಿ ಬಿತ್ತು. ಆಗ ಕಾಳೆಗವನ್ನು ನೋಡಲು ಬಂದಿದ್ದ ಜನರೆಲ್ಲರೂ ಇವರ ಸಾಧನೆಯನ್ನೂ ಹಸ್ತಲಾಘವ ಚಮತ್ಕಾರಗಳನ್ನೂ ಕಂಡು ಆಶ್ಚರ್ಯ ಪಟ್ಟು ಇವರನ್ನು ಕೊಂಡಾಡುತ್ತಿದ್ದರು. ಕಾಳೆಗ ಮುಗಿಯಿತು.

ಆಗ ತಿರುಚನಾಪಳ್ಳಿಯ ಅರಸನು ಇವರಿಗೆ ವಿಶೇಷವಾದ ಸನ್ಮಾನ ಬಹುಮಾನಗಳನ್ನು ಮಾಡಬೇಕೆಂದು ಯೋಚಿಸಿ ಉಪ್ಪರಿಗೆಯನ್ನು ಬಿಟ್ಟು ಇಳಿದನು. ಆತನ ಮುಖಭಾವದಿಂದಲೇ ಆತನ ಇಂಗಿತವನ್ನು ಕಂಠೀರವಒಡೆಯರು ಈ ಸಾಮಾನ್ಯ ಪಾಳೆಯ ಗಾರನಿಂದ ಜಟ್ಟಿಯಂತೆ ಸನ್ಮಾನಮಾಡಿಸಿಕೊಳ್ಳುವುದು ಯುಕ್ತವಲ್ಲವೆಂದೆಣಿಸಿ “ನಾಳೆ ಬರುತ್ತೇವೆ” ಎಂದು ಅರಸನಿಗೆ ಹೇಳಿ ಆ ರಾತ್ರಿಯೇ ಯಾರೂ ಅರಿಯದಂತೆ ಆ ಊರ ಕೋಟೆಬಾಗಲಿಗೆ “ಮಹೀಶರ ಸಂಸ್ಥಾನದಿಂದ ಯಾರೋ ಒ೦ದು ಇ೦ಥ ಪರಾ ಕ್ರಮವನ್ನು ತೋರಿಸಿದರು” ಎಂದು ಎಲ್ಲರಿಗೂ ತಿಳಿಯುವಂತಹ ಒಂದು ಚೀಟಿಯನ್ನು ಬರೆದು ಕಟ್ಟಿ, ಜತೆಯಲ್ಲಿ ಒಂದಿದ್ದ ಬ್ರಾಹ್ಮಣನೊಡನೆ ತೆರಕಣಾಂಬಿಯ ದಾರಿಯನ್ನು ಹಿಡಿದು ಮರುದಿವಸ ಆ ಸ್ಥಳವನ್ನು ಸೇರಿದರು.
*****
[ವಂಶರತ್ನಾಕರ ಪುಟ ೬೫-೬೬; ವಂಶಾವಳಿ ಸಂ. ೧, ಪುಟ ೬೬-೬೭ ವಿಲ್ಕ್ಸ್ ಸಂ. ೧, ಪುಟ೩೦]

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...