ಮೂಲ: ಭಾಸ್ಕರ ಚಕ್ರವರ್ತಿ
ಈ ಉದ್ದನೆ ಕಾರಿಡಾರ್
ಒಂದು
ಇಕ್ಕಟ್ಟು ಓಣಿಯ ಹಾಗೆ.
ಇವತ್ತು ರಾತ್ರಿ
ಇಲ್ಲಿ
ಕುರ್ಚಿಯೊಂದೆ ಕೂರುತ್ತದೆ.
ದೂರದ ಪೊದೆಯಿಂದ ಚಂದಿರ
ಬಾನಿಗೆ ಜಿಗಿಯುತ್ತದೆ;
ಮಹಡಿ ಬದಿಯಿಂದ ಬೆಕ್ಕು
ಒಲೆ ಕಡೆ ನೆಗೆಯುತ್ತದೆ.
ಗರಿಕೆ ಹಾಡುತ್ತದೆ
ಇವತ್ತು ರಾತ್ರಿಯ ಗಾಳಿಯಲ್ಲಿ
ಮನುಷ್ಯ ನೋಡುತ್ತಾನೆ ನಿಂತು
ಛಾವಣಿ ನೆತ್ತಿಯಲ್ಲಿ
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.