ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಇದು ನಮ್ಮ ಅಜ್ಜ ಹೇಳುತ್ತಿದ್ದ ಕಥೆ. ಅವರ ಕಾಲದಲ್ಲಿ ಊರಿನ ದೊಡ್ಡವರೆಂದರೆ ಪಟೇಲರು. ಅವರು ಸುಪ್ರೀಂ ಕೋರ್ಟು ಇದ್ದ ಹಾಗೆ. ಅವರಿಗೆ ಯಾರೂ ಎದುರಾಡುವಂತಿಲ್ಲ. ಎಲ್ಲಾ ವಿಷಯಗಳಲ್ಲೂ ಅವರದ್ದೇ ಅಂತಿಮ ತೀರ್ಮಾನ. ಅದು ಬ್ರಿಟಿಷರ ಕಾಲವಾದುದರಿಂದ ಊರಿನ ಕಂದಾಯದ ಅಧಿಕಾರ ಅವರಲ್ಲೇ ಇತ್ತು. ದರ್ಖಾಸ್ತು ಕೊಡುವುದು, ಊರಿನ ಒಕ್ಕಲೆಬ್ಬಿಸುವುದು ಎಲ್ಲವೂ ಅವರದೆ.

ನಮ್ಮ ಪಟೇಲರು ಬಹಳ ರಸಿಕರಾಗಿದ್ದರಂತೆ. ಅಜ್ಜ ಆ ಕಥೆಗಳನ್ನು ನಮಗೆ ಹೇಳುವಾಗ ಅವುಗಳ ಮುಂದೆ ಬಾಲಿವುಡ್ ಸಿನಿಮಾ ಏನು ಮಹಾ ಎಂದು ನಮಗೆ ಅನಿಸುತ್ತಿತ್ತು. ಜಗಳ ವಿಕೋಪಕ್ಕೆ ಹೋದಾಗ “ನಿನ್ನ ತಾಯಿಗೆ ಪಟೇಲರು ಎನ್ನುವುದು ನಮ್ಮೂರಿನ ಒಂದು ಬೈಗುಳವೇ ಆಗಿತ್ತು.” ಅಜ್ಜ ಹೇಳುತ್ತಿದ್ದ ಪ್ರಕಾರ ಈ ಬೈಗಳು ಸತ್ಯಕ್ಕೆ ಹತ್ತಿರವಾಗಿತ್ತು.

ನಮ್ಮೂರಿನ ಜಾತ್ರೆಯಲ್ಲೂ ಪಟೇಲರದ್ದೇ ಮುಂದಾಳುತನ. ಅದು ಮೂರು ದಿನಗಳ ಭರ್ಜರಿ ಜಾತ್ರೆ. ಮೂರು ದಿನ ಮಧ್ಯಾಹ್ನ ಊರಿನವರಿಗೆಲ್ಲ ಗಡದ್ದು ಪಾಯಸದ ಊಟ. ದೇವಸ್ಥಾನದಲ್ಲಿ ಮಾಡುತ್ತಿದ್ದ ಗುಜ್ಜೆ-ಕೊದ್ದೆಲ್ ಊಟವಾದ ಬಳಿಕ ಒಂದುವಾರದ ವರೆಗೆ ಕೈಯಲ್ಲಿ ಸುವಾಸನೆ ಉಳಿಸುತ್ತಿದ್ದೆಂದು ಅಜ್ಜ ಹೇಳುತ್ತಿದ್ದರು. “ಈಗ ಅಂಥ ಜಾತ್ರೆ ನಡೆಯುವುದಿಲ್ಲ. ಒಂದು ದಿನ ನಡೆದರೂ ಊಟ ಸಿಗುವುದಿಲ್ಲ. ನಿಮ್ಮಂತವರಿಗೆ ಗುಜ್ಜೆ-ಕೊದ್ದೆಲ್ ನ ಯೋಗವಿಲ್ಲ.” ಎಂದು ಪರಿತಪಿಸುತ್ತಿದ್ದರು.

ಒಂದು ವರ್ಷ ಪಟೇಲರಿಗೆ ಜಾತ್ರೆ ಗಡದ್ದು ಮಾಡಬೇಕೆಂಬ ಲಹರಿ ಬಂತು. ಅದನ್ನು ಅವರು ದೇವಸ್ಥಾನದ ಮೊಕ್ತೇಸರರಿಗೆ ತಿಳಿಸಿದರು. ಮೊಕ್ತೇಸರರು ಧರ್ಮದರ್ಶಿಗಳ ಸಭೆ ಕರೆದರು. ಪಟೇಲರು ಹೇಳಿದ ವಿಷಯವನ್ನು ಪ್ರಸ್ತಾಪಿಸಿದರು. ಜಾತ್ರೆಗೆ ಒಟ್ಟು ಇಪ್ಪತ್ತು ಸಾವಿರ ಖರ್ಚಾಗುತ್ತದೆಂದು ಅಂದಾಜು ಮಾಡಿದರು. ಅದು ಈ ಕಾಲದ ಇಪ್ಪತ್ತು ಸಾವಿರವಿಲ್ಲ. ಆ ಕಾಲದ್ದು, ಈಗ ಲೆಕ್ಕಹಾಕಿದರೆ ಎರಡು ಲಕ್ಷ ಆಗಬಹುದು. ಇಪ್ಪತ್ತು ಸಾವಿರವನ್ನು ಇಪ್ಪತ್ತು ಜನರಿಂದ ಸಂಗ್ರಹಿಸುವುದು ಎಂದು ತೀರ್ಮಾನಿಸಿದರು.

ನಮ್ಮ ಊರಿನಲ್ಲಿ ಆ ಕಾಲದಲ್ಲಿ ಒಂದು ಸಾವಿರ ವಂತಿಗೆ ಕೊಡುವ ಕುಳವಾರುಗಳೇ ಇರಲಿಲ್ಲ. ಮೊಕ್ತೇಸರರು ತಲೆಗೆ ಕೈ ಹೊತ್ತು ಕೂತರು. ಆಗ ಧರ್ಮದರ್ಶಿಗಳಲ್ಲಿ ಒಬ್ಬರಾದ ಸುಬ್ರಾಯ ಭಟ್ಟರು ಎದ್ದು ನಿಂತರು. “ಮೊಕ್ತೇಸರರೇ, ಅದಕ್ಕೆ ಯಾಕೆ ಯೋಚನೆ ಮಾಡುತ್ತೀರಿ? ನಾವು ಕಮಿಟಿಯಲ್ಲಿ ಹತ್ತು ಜನ ಇದ್ದೇವೆ. ಸಾಲವೋ ಸೋಲವೋ ಒಂದೊಂದು ಸಾವಿರ ಹಾಕುವ, ಅಲ್ಲಿಗೆ ಹತ್ತು ಸಾವಿರ ಆಯ್ತಲ್ಲ? ಇನ್ನು ದೊಡ್ಡವರು ಪಟೇಲರು. ಅವರಿಂದ ಎರಡು ಸಾವಿರ ಕೇಳುವ. ಶಾನುಭೋಗರಿಂದ ಎರಡು ಸಾವಿರ ತೆಗೆದುಕೊಳ್ಳಬಹುದು. ಸಂಕಪ್ಪ ಗೌಡರು ಮತ್ತು ವೆಂಕಪ್ಪ ಶೆಟ್ಟರು ಒಂದೊಂದು ಸಾವಿರ ಕೊಟ್ಟಾರು. ಸ್ವಲ್ಪಗಾಳಿ ಹಾಕಿದರೆ ಅಂತಪ್ಪ ಪೂಜಾರಿಗಳಿಂದ ಸಾವಿರ ಪೀಂಕಿಸಬಹುದು  ಇಪ್ಪತ್ತು ಸಾವಿರ ಸಂಗ್ರಹಿಸುವುದು ಕಷ್ಟವಾಗಕ್ಕಿಲ್ಲ.”

ಸುಬ್ರಾಯ ಭಟ್ಟರ ಮಾತಿಗೆ ಈಶ್ವರ ಕಲ್ಲೂರಾಯರು ತಲೆಯಾಡಿಸಿದರು.”ನೀವು ಹೇಳಿದ್ದೆಲ್ಲ ಸರಿ ಭಟ್ರೆ. ಆದರೆ ಒಂದು ಸಮಸ್ಯೆ ಉಂಟು. ಅಬ್ದುಲ್ಲ ಸಾಹುಕಾರರು ಇಸ್ಲಾಂ. ಇಸ್ಲಾಂಗಳಿಂದ ಹಣ ತೆಗೆದುಕೊಂಡು ಹಿಂದುಗಳ ಜಾತ್ರೆ ಮಾಡಬೇಕಾ? ಅದು ಸರಿಯಾಗುತ್ತದಾ?”

ಮೊಕ್ತೇಸರರು ಚಿಂತಾಕ್ರಾಂತರಾದರು. ಅವರಿಗೆ ಅಬ್ದುಲ್ಲ ಸಾಹುಕಾರರನ್ನು ಲಿಸ್ಟ್ ನಿಂದ ಬಿಡುವುದು ಇಷ್ಟವಿರಲಿಲ್ಲ. ಆದರೆ ಕಲ್ಲೂರಾಯರು ಎತ್ತಿದ ಪ್ರಶ್ನೆಯಲ್ಲೂ ಸತ್ಯಾಂಶ ಇದೆ ಯೆಂದು ಅವರಿಗೆ ತೋಚಿತು. ಸದ್ಯಕ್ಕೆ ಅಬ್ದುಲ್ಲ ಸಾಹುಕಾರರನ್ನು ಚರ್ಚಿ ಯಿಂದ ಹೊರಗಿಟ್ಟು , ವಿಷಯ ಮುಂದುವರೆಸಬೇಕೆಂದು ಅವರು ನಿರ್ಧರಿಸಿದರು.

ಮೊಕ್ತೇಸರರೆಂದರು.”ಎಲ್ಲಾ ಒಳ್ಳೆ ಕೆಲಸಗಳಿಗೂ ಒಂದು ಒಳ್ಳೆಯ ಆರಂಭ ಇರಬೇಕು. ಈಗ ದೇಣಿಗೆ ಬೋಣಿ ಮಾಡುವವರು ಯಾರು? ಬೋಣಿ ಒಳ್ಳೆಯ ಪೊಲ್ಸಿನ ದಾದರೆ ಸಂಗ್ರಹ ಬೇಕಾದಷ್ಟಾಗುತ್ತದೆ. ನಾವು ಪಟೇಲರಿಂದಲೇ ಆರಂಭಿಸಿದರೆ ಹೇಗೆ? ಊರಿನ ಮುಖ್ಯಸ್ಥರಾದುದರಿಂದ ಅವರು ಇದರಿಂದ ಜಾರಿಕೊಳ್ಳುವಂತಿಲ್ಲ.”

ಅವರ ಮಾತಿಗೆ ಉಳಿದವರು ತಲೆದೊಗಿದರು. ಈಶ್ವರ ಕಲ್ಲೂರಾಯರು “ನೀವು ಹೇಳಿದ್ದೇನೋ ಸರಿಯೆ. ಆದರೆ ಆ ಪಟೇಲರನ್ನೇ  ಜಾತ್ರೆ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಅವರು ಹಣ ಕೊಡುವುದು ಅಷ್ಟರಲ್ಲಿಯೇ ಇದೆ.” ಎಂದರು.

ಅದಕ್ಕೆ ಸುಬ್ರಾಯ ಭಟ್ಟರು ” ಅದು ಹೇಗಾಗುತ್ತದೆ? ದೇವಸ್ಥಾನದ ಮೊಕ್ತೇಸರರೇ ಜಾತ್ರೆ  ಸಮಿತಿಯ ಅಧ್ಯಕ್ಷರಾಗಬೇಕು. ಅದು ಬಿಟ್ಟು ಆ ಪಟೇಲರಿಗೆ ಅಧ್ಯಕ್ಷ ಗಿರಿ ಕೊಡುವುದು ಎಷ್ಟು ಸರಿಯಾಗುತ್ತದೆ. ಅವರು ಅಧ್ಯಕ್ಷರಾದರೆ ನಮಗೆ ಬೆಲೆಯೂ ಸಿಗುವುದಿಲ್ಲ.” ಎಂದು ಬಿಟ್ಟರು.

ಮೊಕ್ತೇಸರರು ಮತ್ತೆ ಪೇಚಿನಲ್ಲಿ ಸಿಕ್ಕಿಕೊಂಡರು. ಅವರಿಗೆ ಸುಬ್ರಾಯ ಭಟ್ಟರ ಮಾತಿನಲ್ಲಿ ಇರುವ ಸತ್ಯಾಂಶ ಅರ್ಥವಾಗಿತ್ತು. ದೇವಸ್ಥಾನದ ಮೊಕ್ತೇಸರನಾಗಿ ತಾನೇ ಜಾತ್ರೆ ಸಮಿತಿಯ ಅಧ್ಯಕ್ಷನಾಗುವುದು ಸರಿಯಾದ ಕ್ರಮ. ಆದರೆ ಆ ಪಟೇಲ ಬರೇ ಉಬ್ಬಾಳು. ಸಮಿತಿಯ ಅಧ್ಯಕ್ಷನಾಗದಿದ್ದರೆ ಕಿಲುಬು ಕಾಸೂ ಕೊಡಲಾರ. ಈಗ ಕೆಲಸ ಆಗುವುದು ಮುಖ್ಯ. ಕಾರ್ಯವಾಸಿ ಕತ್ತೇ ಕಾಲು! ಪ್ರಕಟವಾಗಿ ಮೊಕ್ತೇಸರರೆಂದರು “ಅಧ್ಯಕ್ಷರು ಯಾರಾದರೇನು? ಈಗ ಹಣ ಸಂಗ್ರಹವಾಗುವುದು ಮುಖ್ಯ. ಜಾತ್ರೆ ಸಮಿತಿಯ ಅಧ್ಯಕ್ಷರು ದೇವಸ್ಥಾನದ ಅಧ್ಯಕ್ಷರೇನಲ್ಲವಲ್ಲ? ಅಲ್ಲದೆ ಇದೊಂದು ತಾತ್ಕಾಲಿಕ ವ್ಯವಸ್ಥೆ. ಅದಕ್ಕೆ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಅವರೇ ಅಧ್ಯಕ್ಷರಾಗಲಿ. ಒಟ್ಟಿನಲ್ಲಿ ನಮ್ಮ ಕೆಲಸವಾಗಲಿ.”

ಮೊಕ್ತೇಸರರ ಮಾತಿಗೆ ಮತ್ತೆ ವಿರೋಧ ವ್ಯಕ್ತವಾಗಲಿಲ್ಲ. “ಹಾಗಾದರೆ ಕೆಲಸ ಇವತ್ತಿನಿಂದಲೇ ಪ್ರಾರಂಭವಾಗಲಿ. ಪಟೇಲರಲ್ಲಿಗೆ ನಾವು ಹೋಗಿ ವಿಷಯ ತಿಳಿಸುವ. ಅವರು ಬೋಣಿ ಮಾಡದೆ ಬಿಡಲಿಕ್ಕಿಲ್ಲ. ಇನ್ನೇನು ಜಾತ್ರೆಗೆ ಇರುವುದು ಮೂರೇ ವಾರ. ಕೆಲಸ ಬೇಗ ಮುಗಿಯಬೇಕೆಂದು ಅವರು ಅವಸರಿಸಿದರು.

ಧರ್ಮದರ್ಶಿಗಳೊಡನೆ ಮೊಕ್ತೇಸರರು ನೇರವಾಗಿ ಪಟೇಲರಲ್ಲಿಗೆ ಹೋದರು. ಪಟೇಲರು ಬಾಯಲ್ಲಿ ತಾಂಬೂಲ ತುಂಬಿ ಕೊಂಡಿದ್ದರು. ಇವರನ್ನು ಕಂಡು ಅಂಗಳಕ್ಕೆ ಬಂದು ಕೈ ಮುಗಿದು “ಬನ್ನಿ, ಬನ್ನಿ, ಬಡವರ ಮನೆಗೆ ಬಾಗೀರಥಿ ಬಂದ ಹಾಗಾಯಿತು.” ಎಂದು ಹೇಳುವಾಗ ಅವರ ಬಾಯಿಯಿಂದ ಒಂದಷ್ಟು ಹನಿಗಳು ಮೊಕ್ತೇಸರರ ಮುಖಕ್ಕೆ ಸಿಡಿದವು. ಮೊಕ್ತೇಸರರು ಹೆಗಲಮೇಲಿನ ಉತ್ತರೀಯದಿಂದ ಅದನ್ನು ಒರೆಸಿಕೊಂಡರು. ಪಟೇಲರು ಅವರನ್ನು ಜಗುಲಿಯಲ್ಲಿ ಚಾಪೆ ಹಾಕಿ ಕೂರಿಸಿ “ನಾವು ಚಾ, ಕಾಫಿ ಮಾಡಿಕೊಟ್ಟರೆ ನೀವು ಕುಡಿಯುವವರಲ್ಲ. ಎಳನೀರು ತೆಗೆಯಲು ಕೆಲಸದವರಿಲ್ಲ. ನಿಮಗೆ ಏನು ಕೊಡಬೇಕೆಂದೇ ಗೊತ್ತಾಗುವುದಿಲ್ಲ.” ಎಂದು ಸುಮ್ಮ ಸುಮ್ಮನೆ ಪರಿತಪಿಸಿಕೊಡಗಿದಳು.

ಅದಕ್ಕೆ ಮೊಕ್ತೇಸರರು ನಗುತ್ತಾ “ಅದೆಲ್ಲ, ಬೇಡ ಬಿಡಿ. ಪಟೇಲರೇ, ನಿಮ್ಮ ಮಾತಿನಿಂದಲೇ ಹೊಟ್ಟೆ ತುಂಬಿದ ಹಾಗಾಯಿತು.ಎಲ್ಲದಕ್ಕಿಂತಲೂ ವಿಶ್ವಾಸವೇ ಮುಖ್ಯ” ಎಂದರು.

ಪಟೇಲರು ಅದಕ್ಕೆ ನಗುತ್ತಾ  “ನಿಮ್ಮ ಮಾತೆಂದರೆ, ಮೊಕ್ತೇಸರರೇ, ಅದು ಮಾತಲ್ಲ ಮುತ್ತು. ಈಗ ಈ ಬಡವನಿಂದ ಏನಾಗಬೇಕು.” ಎಂದು ಕೇಳಿದರು.

ಮೊಕ್ತೇಸರರು ಧರ್ಮದರ್ಶಿಗಳ ಸಭೆಯ ನಿರ್ಣಯವನ್ನು ಪಟೇಲರಿಗೆ ತಿಳಿಸಿದರು.”ನೀವು ಊರ ಹಿರಿಯರು. ಈ ಜಾತ್ರೆ ಸಮಿತಿಯ ಅಧ್ಯಕ್ಷರಾಗಿ ಸಸೂತ್ರವಾಗಿ ಜಾತ್ರೆಯನ್ನು ನಡೆಸಿಕೊಂಡು ಹೋಗಬೇಕು. ಸಮಿತಿಗೆ ಒಂದು ಸಾವಿರ ಕೊಟ್ಟು ಬೋಣಿ ಮಾಡಬೇಕು.”

ಪಟೇಲರು ಒಂದು ಕ್ಷಣ ಯೋಚಿಸಿದರು. “ಇದು ಒಳ್ಳೆಯ ಯೋಜನೆ. ಜಾತ್ರೆ ಸಮಿತಿಗೆ ನಾನು ಅಧ್ಯಕ್ಷನಾಗುವುದು ಸರಿ. ಆದರೆ ಇವತ್ತು ಬೋಣಿ ಮಾಡಲು ನನ್ನಲ್ಲಿ ಕಾಸೇ ಇಲ್ಲ. ನನಗೆ ಸ್ವಲ್ಪ ಹಣ ಬರಲಿಕ್ಕುಂಟು. ನಾಲ್ಕುದಿನ ಆದೀತು. ದೇವರ ಕಾರ್ಯವಾದುದರಿಂದ ಅದಕ್ಕೆಂದು ಕಾಯುವುದು ಒಳ್ಳೆಯದಾಗುವುದಿಲ್ಲ. ಮೊಕ್ತೇಸರರೇ, ದೇವಸ್ಥಾನಕ್ಕೆ ನೀವೇ ಮುಖ್ಯಸ್ಥರು. ನಿಮ್ಮಿಂದಲೇ ಈ ಪುಣ್ಯ ಕಾರ್ಯ ಆರಂಭವಾಗಬೇಕು. ನೀವು ಮತ್ತು ಧರ್ಮದರ್ಶಿಗಳು ಸೇರಿದರೆ ಒಟ್ಟು ಏಳುಮಂದಿ ಆಗುತ್ತಿರಿ. ತಲಾ ಎರಡು ಸಾವಿರದಂತೆ ಹಾಕಿ. ಒಟ್ಟು ಹದಿನಾಲ್ಕು ಸಾವಿರವಾಗುತ್ತದೆ. ಉಳಿದುದನ್ನು ನಾನು ಹಾಕುತ್ತೇನೆ.”

ಮೊಕ್ತೇಸರರು ಮತ್ತು ಧರ್ಮದರ್ಶಿ ಗಳು ದಿಗ್ಭ್ರಾಂತರಾದರು. ಅವರಿಗೆಲ್ಲ ಗಂಟಲಿಗೆ ಬಿಸಿ ತುಪ್ಪ ಸುರುವಿಕೊಂಡ ಅನುಭವ. ಹ್ಞಾಂ ಅನ್ನುವಂತಿಲ್ಲ. ಹ್ಞೂಂ ಅನ್ನುವಂತಿಲ್ಲ. ಕೊನೆಗೆ ಮೊಕ್ತೇಸರರೇ ಬಾಯಿ ಬಿಟ್ಟರು. “ಉಳಿದ ಆರು ಸಾವಿರಕ್ಕೆ ಏನು ಮಾಡುವುದು ಸ್ವಾಮಿ?”

ಪಟೇಲರು ಮತ್ತೊಮ್ಮೆ ದೊಡ್ಡದಾಗಿ ನಕ್ಕರು.”ಮತ್ತೆ ನಾನು ಪಟೇಲ ಅಂತ ಇರುವುದು ಯಾಕೆ? ಅದು ನನಗೆ ಬಿಡಿ ಈಗ ನೀವು ಎರಡೆರಡು ಹಾಕುತ್ತೀರೋ ಇಲ್ಲವೋ ಹೇಳಿಬಿಡಿ.”

ಮೋಕ್ತೇಸರರು ಮತ್ತು ಧರ್ಮದರ್ಶಿಗಳು ಒಪ್ಪಲೇಬೇಕಾಯಿತು.”ಈಗ ಹದಿನಾಲ್ಕು ಸಾವಿರ ಆಯ್ತಲ್ಲ. ಬನ್ನಿ ಉಳಿದುದನ್ನು ನಾನು ಮಾಡಿಕೊಡುತ್ತೇನೆ.”

ಮೊಕ್ತೇಸರರು ಮತ್ತು ಧರ್ಮದರ್ಶಿಗಳು ಪಟೇಲರ ಹಿಂದಿನಿಂದ ನಡೆದರು. ಸಂಕಪ್ಪ ಗೌಡರು ಪಟೇಲರ ಮಾತಿಗೆ ಸೋತು ಒಂದು ಸಾವಿರ ಕೊಡಬೇಕೆಂದಿದ್ದವರು ತಮ್ಮ ದೇಣಿಗೆ ಯನ್ನು ಎರಡು ಸಾವಿರಕ್ಕೆ ಏರಿಸಿಬಿಟ್ಟರು. ವೆಂಕಪ್ಪ ಶೆಟ್ಟರು ಐನೂರೇ ಕೊಡಬೇಕೆಂದಿದ್ದವರು ಉಪಾಯವಿಲ್ಲದೆ ಎರಡು ಸಾವಿರ ಕೊಟ್ಟು ಬಿಟ್ಟರು.

ದಾರಿಯಲ್ಲಿ ಬರುವಾಗ  ಪಟೇಲರೆಂದರು.”ದೇವರ ಕೆಲಸವೆಂದರೆ ಹೀಗೆ ನೋಡಿ, ಎಲ್ಲವೂ ಹೂ ಎತ್ತಿದ ಹಾಗೆ ಆಗುತ್ತಿದೆ. ಈಗ ಹದಿನೆಂಟು ಸಾವಿರ ಆಯ್ತಲ್ಲ. ಇನ್ನು ಬಿಡಿ ಈ ಊರಿಗೆ ಪಟೇಲ ಅಂತ ನಾನಿರುವುದು ಯಾಕೆ?” ಎಂದು ಮತ್ತೊಮ್ಮೆ ಹಿಂದೆ ಹೇಳಿದ್ದನ್ನು ಪುನರುಚ್ಛರಿಸಿದರು.

ಎದುರಿಂದ ಅಬ್ದುಲ್ಲಾ ಸಾಹುಕಾರರು ಬರುತ್ತಿದ್ದರು. ಅವರ ಪಟ್ಟೆ ಕಂಬೈ, ಅರ್ಧ ತೋಳಿನ ಬನಿಯನ್ನು, ಕಂಬೈಯ ಮೇಲೆ ಪಟ್ಟೆ ದಪ್ಪನೆಯ ಬೆಲ್ಟು, ಅದರಲ್ಲಿ ಒಂದು ಕಡೆ ಪರ್ಸು, ಇನ್ನೊಂದು ಕಡೆ ನೇತಾಡುವ ಸಣ್ಣ ಚೂರಿ, ತಲೆಯ ಮೇಲೆ ನೀರು ದೋಸೆಯ ತೂತುಗಳಂತಿರುವ ತೂತುಗಳಿರುವ ಬಿಳಿ ಟೊಪ್ಪಿ. ನೋಡಿ ಪಟೇಲರು ಕೈ ಮುಗಿದರು. “ನೋಡಿ ಸಾಹುಕಾರರೇ, ಕಾಶಿಗೆ ಹೊರಟವರಿಗೆ ಗಂಗೆಯೇ ಎದುರು ಸಿಕ್ಕಂತಾಯಿತು. ಎಲ್ಲವೂ ಆ ದೈವ ಚಿತ್ತನೋಡಿ. ನಿಮ್ಮನ್ನೇ ಹುಡುಕಿಕೊಂಡು ಹೊರಟವರು ನಾವು. ದೇವರ ದಯೆ ಯಿಂದ ನೀವು ಎದುರಲ್ಲೇ ಸಿಕ್ಕಿದಿರಿ. ದೇವರು ದೊಡ್ಡವನು. “ಎಂದು ಕೈ ಮುಗಿದರು.

ಅಬ್ದುಲ್ಲಾ ಸಾಹುಕಾರರಿಗೆ ವಿಷಯವೇನೆಂದು ಅರ್ಧವಾಗಲಿಲ್ಲ. “ಅದೆಲ್ಲ ಸರಿ ಪಟೇಲರೆ. ನೀವು ನಮ್ಮಲ್ಲಿಗೆ ಹೊರಟಿದ್ದು ಯಾಕೆ? ಅದು ನೀವು ಹೇಳಲಿಲ್ಲ. ಅಲ್ಲದೆ ನಿಮ್ಮಂತವರಿಗೆ. ಮೊಕ್ತೇಸರರಿಗೆ ನನ್ನಲ್ಲಿ ಏನು ಕೆಲಸ ಉಂಟು?”

ಪಟೇಲರು ದೇಶಾವರಿ ನಗೆ ನಕ್ಕರು. ಈ ವರ್ಷ ಸಹುಕಾರರೇ ನಮ್ಮ ಜಾತ್ರೆ ಗಡದ್ದು ಆಗಬೇಕು. ಅದಕ್ಕೆ ಸ್ವಲ್ಪ ಹಣ ಸಂಗ್ರಹ ಆಗಬೇಕು. ನಿಮ್ಮಲ್ಲಿ ಹೆಚ್ಚೇನು ಕೇಳುವದಿಲ್ಲ. ನೀವೊಂದು ಎರಡು ಸಾವಿರ ಕೊಟ್ಟರೆ ಸಾಕಪ್ಪ. ಇಲ್ಲ ಎನ್ನಬೇಡಿ. ದೇವರ ಕಾರ್ಯ ನೋಡಿ” ಎಂದರು.

ಅಬ್ದುಲ್ಲಾ ಸಾಹುಕಾರರು “ನೀವು ಹೇಳುವುದು ಸರಿ ಪಟೇಲರೇ, ದೇವರ ಕಾರ್ಯಕ್ಕೆ ಯಾರೂ ಇಲ್ಲವೆನ್ನಬಾರದು. ನನ್ನ ಪ್ರಕಾರ ಎಲ್ಲಾ ದೇವರು ಒಂದೇ. ಆದರೆ ನಾನು ಇಸ್ಲಾಂ ಆಗಿ ಹಿಂದೂಗಳ ಜಾತ್ರೆಗೆ ಹಣ ಕೊಟ್ಟರೆ ಉಳಿದವರು ಏನು ಹೇಳಲಿಕ್ಕಿಲ್ಲ.? ನೀವೇ ಹೇಳಿ” ಎಂದರು.
ಉಳಿದವರು ಬಾಯಿ ತೆಗೆಯುವ ಮೊದಲೇ ಪಟೇಲರು ಹೇಳಿದರು. “ಹಣದಲ್ಲಿ ಇಸ್ಲಾಂ ಹಣ ಮತ್ತು ಹಿಂದೂ ಹಣ ಅಂತ ಉಂಟಾ ಸಾಹುಕಾರರೇ? ಅದೆಲ್ಲಾ ಅಲ್ಪರು ಮಾಡುವ ವ್ಯತ್ಯಾಸ. ನಾವು ಈ ಊರಿನ ಹಿರಿಯರು. ಒಟ್ಟಿಗೆ ಸೇರಿ ಎಲ್ಲಾ ಕೆಲಸ ಮಾಡಬೇಕು. ಹೌದೋ? ಅಲ್ಲವೋ?” ಎಂದು ಪ್ರಶ್ನಿಸಿದರು.

ಅಬ್ದುಲ್ಲಾ ಸಾಹುಕಾರರು ನಿರುತ್ತರರಾದರು. ಮತ್ತೆ ಪಟೇಲರೇ ಮುಂದುವರೆಸಿದರು.”ನೋಡಿ ಸಾಹುಕಾರ್ರೇ, ನಿಮ್ಮ ಹಣವನ್ನು ನಾವು ಊಟಕ್ಕೆ ಬಳಸುವಂತಿಲ್ಲ. ಬ್ಯಾಂಡು, ವಾಲಗ ಮತ್ತು ಗರ್ನಲು ನಿಮ್ಮ ಹೆಸರಿನಲ್ಲಾಗಲಿ. ಬ್ಯಾಂಡು, ವಾಲಗ , ಗರ್ನಲುಗಳಲ್ಲಿ ಹಿಂದೂ ಮುಸ್ಲಿಂ ಎಂದಿಲ್ಲವಲ್ಲ?”

ಈಗ ಅಬ್ದುಲ್ಲಾ ಸಾಹುಕಾರರಿಂದ ಹಣ ತೆಗೆದುಕೊಳ್ಳ ಬಾರದೆಂದು ಹಿಂದೆ ಯೋಚಿಸಿದ ಧರ್ಮದರ್ಶಿಗಳು ಮೌನವಾಗಲೇ ಬೇಕಾಗಿತ್ತು. ಅಬ್ದುಲ್ಲಾ ಸಾಹುಕಾರರಿಗೂ ಬೇರೆ ದಾರಿ ಕಾಣಲಿಲ್ಲ. “ಆಯಿತು ಮಾರಾಯ್ರೇ, ನೀವು ಇಷ್ಟೆಲ್ಲ ಹೇಳಿದ ಮೇಲೆ ಇಲ್ಲವೆಂದರೆ ಅದು ನನ್ನ ಅಲ್ಪತನವಾಗುತ್ತದೆ. ಎರಡು ಸಾವಿರ ಕೊಡುವ. ಜಾತ್ರೆ ಗಡದ್ದಾಗಿ ನಡೆಯಲಿ.”

ಅಬ್ದುಲ್ಲಾ ಸಾಹುಕಾರರು ಆಚೆ ಕಡೆ ಹೋದರು. ಪಟೇಲರ ನೇತೃತ್ವದಲ್ಲಿ ಉಳಿದವರು ದೇವಸ್ಥಾನಕ್ಕೆ ಬಂದರು. ಸಂತೃಪ್ತ ವದನದ ಪಟೇಲರು ಮೊಕ್ತೇಸರರೊಡನೆ ಹೇಳಿದರು. “ನೋಡಿ ಸ್ವಾಮೀ, ನೀವು ಸಮಿತಿಯ ಅಧ್ಯಕ್ಷರನ್ನಾಗಿ ನನ್ನನು ಮಾಡಿದ್ದೀರಿ. ಇಪ್ಪತ್ತು ಸಾವಿರ ಸಂಗ್ರಹಿಸುವ ಜವಾಬ್ದಾರಿ ನನಗೆ ಕೊಟ್ಟಿದ್ದೀರಿ. ಈಗ ಇಪ್ಪತ್ತು ಸಾವಿರ ಸಂಗ್ರಹ ಆಗಿದೆ. ನಾಡಿದ್ದು ಜಾತ್ರೆಯ ಆಮಂತ್ರಣ ಮುದ್ರಿಸುವಾಗ ಸಮಿತಿಯ ಅಧ್ಯಕ್ಷೆ ಎಂದು ನನ್ನ ಹೆಸರು ತೋರಿಸಲು ಮರೆಯಬೇಡಿ.”

ಕತೆ ಮುಗಿಸಿ ಅಜ್ಜ ನಕ್ಕರು. “ಈ ಪಟೇಲರು ಯಾರೆಂದುಕೊಂಡಿದ್ದೀರಿ? ನನ್ನ ಅಪ್ಪ.”
*****

Latest posts by ವೀಣಾ ಮಡಪ್ಪಾಡಿ (see all)