ಬೇಕಾಗಿದ್ದಾರೆ: ಶಿಕ್ಷಕರು!

ಬೇಕಾಗಿದ್ದಾರೆ: ಶಿಕ್ಷಕರು!

ಮತ್ತೆ ಮತ್ತೆ ಹೇಳಿದ್ದನ್ನೇ ಹೇಳಬೇಕಾಗುತ್ತದೆ, ಯಾಕೆಂದರೆ ಮತ್ತೆ ಮತ್ತೆ ಶಿಕ್ಷಣ ಕ್ಷೇತ್ರ ದೂರದೃಷ್ಟಿಯ ಕೊರತೆಯಿಂದ ಬಳಲುತ್ತಿದೆ. ಅದು ಹೇಗೆ ಸಾಧ್ಯ? ನಮ್ಮಲ್ಲಿ ಎರಡೆರಡು ಮಂತ್ರಾಲಯಗಳು ಪ್ರಾಥಮಿಕ-ಪ್ರೌಢ ಮತ್ತು ಉನ್ನತ ಶಿಕ್ಷಣ ಕ್ಷೇತ್ರಗಳನ್ನು ನೋಡಿಕೊಳ್ಳುತ್ತಿಲ್ಲವೇ ಎಂದು ಸರಕಾರ ಕೇಳಬಹುದು. ಮಂತ್ರಿಗಳಿದ್ದಾರೆ, ಮಂತ್ರಾಲಯಗಳೂ ಇವೆ. ಅವರು ಸಾಕಷ್ಟು ಕೆಲಸಗಳನ್ನೂ ಮಾಡುತ್ತಿವೆ ಎನ್ನುವುದೂ ನಿಜ. ಸರ್ವಶಿಕ್ಷಣ ಅಭಿಯಾನವಿದೆ, ಬಿಸಿಯೂಟದ ಯೋಜನೆಯಿದೆ, ಹೊಸ ಹೊಸ ಶಾಲೆ ಕಾಲೇಜುಗಳನ್ನು ವರ್ಷ ವರ್ಷವೂ ಸ್ಥಾಪಿಸಲಾಗುತ್ತಿದೆ. ಎಲ್ಲವೂ ನಿಜ. ಆದರೆ ಒಂದು ಮುಖ್ಯ ಸಂಗತಿಯನ್ನೇ ನಾವು ಮರೆತಿದ್ದೇವೆ! ಒಳ್ಳೆಯ ಶಿಕ್ಷಕರನ್ನು ಎಲ್ಲಿಂದ ತರುತ್ತೀರಿ? ಇಂದು ಇನ್ನಷ್ಟು ಮೆಡಿಕಲ್ ಮತ್ತು ಎಂಜಿನೀಯರಿಂಗ್ ಕಾಲೇಜುಗಳು ಬೇಕು ಎಂದು ಕೂಗುತ್ತಿದ್ದೇವೆ; ಅವೂ ಸಾಮಾನ್ಯವಾದ ಎಂಜಿನೀಯರಿಂಗ್ ಕಾಲೇಜುಗಳು ಸಾಲದು -ಐ‌ಐಟಿಗಳೇ ಆಗಬೇಕು. ಆದರೆ ಇದೇ ವೇಳೆಗೆ, ಸರಿಯಾದ ಅಧ್ಯಾಪಕರಿಲ್ಲದೆ ಇದ್ದ ಮೆಡಿಕಲ್ ಹಾಗೂ ಎಂಜಿನೀಯರಿಂಗ್ ಕಾಲೇಜುಗಳೇ ಮನ್ನಣೆ ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿವೆ! ಡಾಕ್ಟರರು ಮತ್ತು ಎಂಜಿನೀಯರರು ಬೇಕು, ಆದರೆ ಶಿಕ್ಷಕರು ಬೇಡ ಎಂದರೆ ಹೇಗೆ?

ಶಾಲೆಯಾಗಲಿ ಕಾಲೇಜಾಗಲಿ ಕೇವಲ ಕಟ್ಟಡವಲ್ಲ. ಅವಕ್ಕೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಬೇಕು. ಕೆಲವು ಅನುಕೂಲತೆಗಳೂ ಅಗತ್ಯ. ನಾನಿಲ್ಲಿ ಮಾತಾಡಹೊರಟಿರುವುದು ಅಧ್ಯಾಪಕರ ಬಗ್ಗೆ. ಶಿಕ್ಷಕರಾಗುವುದು ಇಂದಿನ ಯುವ ತಲೆಮಾರಿನ ಯಾರಿಗೂ ಬೇಡದ ಸಂಗತಿ. ಯಾಕೆಂದರೆ, ಅದಕ್ಕಿಂತ ಆಕರ್ಷಕವಾದ ಉದ್ಯೋಗಾವಕಾಶಗಳು ಅವರಿಗೆ ನಗರಗಳಲ್ಲಿ ದೊರಕುತ್ತಿವೆ. ಈ ಆಕರ್ಷಣೆ ಕೇವಲ ಸಂಬಳಕ್ಕೆ ಸಂಬಂಧಿಸಿದ ಸಂಗತಿಯಲ್ಲ. ಬಹುರಾಷ್ಟ್ರೀಯ ಕಂಪೆನಿಯೊಂದು ಬಹುಶಃ ವಿಶ್ವವಿದ್ಯಾಲಯದ ಅಧ್ಯಾಪಕರಿಗೆ ದೊರಕುವಷ್ಟು ವೇತನ ನೀಡಲಾರದು; ಆದರೂ ಯುವ ಜನತೆಗೆ ಈ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಯಾವ ಕೆಲಸವಾದರೂ ಸರಿ-ಆದರೆ ಕಾಲೇಜು ಅಥವಾ ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರಾಗುವುದು ಬೇಡ. ಈ ಉನ್ನತ ಹಂತದಲ್ಲೇ ಹೀಗಾದರೆ, ಇನ್ನು ಶಾಲೆಗಳ ಅವಸ್ಥೆಯೇನು?

ನಮ್ಮ ಸಮಾಜದಲ್ಲಿ ಶಿಕ್ಷಕರಿಗೆ ಬಹಳ ಗೌರವ ಮರ್ಯಾದೆಗಳಿವೆಯೆಂದು ಲೆಕ್ಕ. ಗುರು ದೇವೋ ಭವ ಎನ್ನುವುದು ನಮ್ಮ ಪರಂಪರೆಯಲ್ಲವೇ? ಆದರೆ ನಮ್ಮ ದೃಶ್ಯಮಾಧ್ಯಮಗಳನ್ನು ಗಮನಿಸಿ: ಬಿ. ಆರ್. ಪಂತುಲು ಒಂದು ಕಾಲದಲ್ಲಿ ‘ಸ್ಕೂಲ್ ಮಾಸ್ಪರ್’ ಎನ್ನುವ ಆದರ್ಶವಾದಿ ಸಿನಿಮಾ ಮಾಡಿದ್ದರು. ಆದರೆ ಅದನ್ನು ಬಿಟ್ಟರೆ ಉಳಿದಂತೆ, ಸಿನಿಮಾದಲ್ಲಿ, ಸೀರಿಯಲುಗಳಲ್ಲಿ, ಜಾಹೀರಾತುಗಳಲ್ಲಿ ನಾವು ಕಾಣುವ ಶಿಕ್ಷಕರ ಪ್ರಾತಿನಿಧೀಕರಣ ಎಷ್ಟು ತಮಾಷೆಯದ್ದಾಗಿದೆ! ಶಿಕ್ಷಕ ಪಾತ್ರವೆಂದರೆ ಒಬ್ಬ ಜೋಕರ್‌ನ ಹಾಗೆ. ಆತನಿಗೆ ವ್ಯಾವಹಾರಿಕ ಜ್ಞಾನವಿಲ್ಲ, ಬುದ್ಧಿಶಕ್ತಿಯೇ ಕಡಿಮೆ, ಹಾಗೂ ಯಾವತ್ತೂ ತನ್ನದೇ ವಿದ್ಯಾರ್ಥಿಗಳಿಂದ ತರಗತಿಯಲ್ಲೂ ಹೊರಗೂ ಗೇಲಿಗೆ ಒಳಗಾಗುವ ನ್ಯಕ್ತಿ. ಉದಾಹರಣೆಗೆ, ‘ಕಸೌಟಿ ಜಿಂದಗೀಕಿ’ ಎಂಬ ಜನಪ್ರಿಯ ಹಿಂದಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವಾದ ಪ್ರೇರಣ ನಡೆಸುತ್ತಿರುವ ಗುರುಕುಲದ ಪ್ರಿನ್ಸಿಪಾಲ್ ಯಾವ ಕಂಪೆನಿ ನಾಟಕದ ಹಾಸ್ಯಪಾತ್ರಕ್ಕೂ ಕಡಿಮೆಯಲ್ಲ. ಆತನ ವೇಷಭೂಷಣ, ಮಾತು, ಹಾವ ಭಾವ ಎಲ್ಲವೂ ಹಾಗಿವೆ. ಮೆಂಟೋಸ್ ಎಂಬ ಟಾಫಿಯ ಜಾಹೀರಾತಿನಲ್ಲಿ ಹುಡುಗನೊಬ್ಬ ತಡವಾಗಿ ತರಗತಿಗೆ ಪ್ರವೇಶ ಮಾಡುತ್ತಾನೆ. ಕರಿಹಲಗೆಯಲ್ಲಿ ಏನೋ ಬರೆಯುತ್ತಿದ್ದ ಶಿಕ್ಷಕರು ತಿರುಗಿ ನೋಡಿ ಅವನನ್ನು ಹೊರಗೆ ಹೋಗುವಂತೆ ಗದರಿಸುತ್ತಾರೆ. ಇದೇ ಹುಡುಗ ಆಮೇಲೆ ಹಿಂದು ಹಿಂದಾಗಿ ತರಗತಿ ಪ್ರವೇಶ ಮಾಡಿದಾಗ ಶಿಕ್ಷಕರು ಆತ ಹೊರಗೆ ಹೋಗುತ್ತಿದ್ದಾನೆ ಎಂದುಕೊಂಡು, ಹೋಗಿ ಕೂತುಕೊಳ್ಳುವಂತೆ ಆದೇಶಿಸುತ್ತಾರೆ! ಈ ‘ಬುದ್ದಿವಂತ’ ಹುಡುಗನಿಗೆ ಬೇಕಾದ್ದೂ ಅದೇ. ಕಪೋಚ್ಚಾಟಕ ಔಷಧಿಯೊಂದರ ಜಾಹೀರಾತಿನಲ್ಲಿ ಅಟೆಂಡರನೊಬ್ಬ ಧ್ವನಿವರ್‍ಧಕ ಪರೀಕ್ಷಿಸಲೆಂದು ‘ಒನ್, ಟೂ, ತ್ರೀ’ ಎಂದಾಗ ಇಡೀ ತರಗತಿಯ ಮಕ್ಕಳು ಪಿನ್ಸಿಪಾಲರ ಮುಂದೆಯೇ ಆ ಔಷಧಿಯನ್ನು ಹೊಗಳುವ ಹಾಡನ್ನು ಒಕ್ಕೊರಲಿನಿಂದ ಹಾಡುತ್ತಾರೆ. ಇವನ್ನೆಲ್ಲ ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳಬಾರದು, ಜೀವನದಲ್ಲಿ ಸ್ವಲ್ಪ ತಮಾಷೆ ಬೇಡವೇ ಎಂದು ಕೇಳಬಹುದು. ಹೀಗೆ ಅನಗತ್ಯ ಮುಗುಮ್ಮಾಗಿರೋದಕ್ಕೇ ಶಿಕ್ಷಕರು ತಮಾಷೆಗೆ ಗುರಿಯಾಗುತ್ತಾರೆ ಎಂದು ಕೂಡಾ ಹೇಳಬಹುದು. ಎಲ್ಲ ತಮಾಷೆಗಳ ಹಿಂದೆಯೂ ಒಂದು ಸ್ವೀಕೃತ ಧೋರಣೆ ಇರುತ್ತದೆ!

ಎಲ್ಲರಿಗೂ ತಮ್ಮ ಮಕ್ಕಳು ದೊಡ್ಡ ಡಾಕ್ಟರರಾಗಬೇಕು ಅಥವಾ ಎಂಜಿನೀಯರ್ ಆಗಬೇಕು ಎನ್ನುವ ಆಕಾಂಕ್ಷೆಯಿರುವಂತೆ ತೋರುತ್ತದೆ. ಈ ಸ್ಪರ್ಧೆಯ ಗಲಾಟೆಯಲ್ಲಿ ನಾವು ಗಣಿತ, ಜೀವವಿಜ್ಞಾನ, ಭೌತವಿಜ್ಞಾನ, ರಸಾಯನ ವಿಜ್ಞಾನ, ಭೂ ವಿಜ್ಞಾನ ಖಗೋಳಜ್ಞಾನ ಮುಂತಾದ ಮೂಲಶಿಸ್ತುಗಳನ್ನು ಕಡೆಗಣಿಸುತ್ತಿದ್ದೇವೆ! ಒಳ್ಳೆಯ ಬಿ.ಎಸ್ಸಿ. ಇಲ್ಲದಿದ್ದರೆ ಒಳ್ಳೆಯ ಎಮ್.ಎಸ್ಸಿ. ಇರಲಾರದು; ಒಳ್ಳೆಯ ಎಮ್.ಎಸ್ಸಿ. ಇಲ್ಲದಿದ್ದರೆ ಈ ಕ್ಷೇತ್ರಗಳಲ್ಲಿ ಸಂಶೋಧನೆಗಳಾಗಲಿ ಅಭಿವೃದ್ಧಿಯಾಗಲಿ ಆಗಲಾರವು. ಒಳ್ಳೆಯ ಅಧ್ಯಾಪಕರೂ ಸಿಗಲಾರರು. ಇಂಥ ಪರಿಸ್ಥಿತಿಯಲ್ಲಿ ನಿಮ್ಮ ಮಕ್ಕಳಲ್ಲಿ ಕೆಲವರಾದರೂ ಡಾಕ್ಟರ್, ಎಂಜಿನಿಯರ್ ಆಗುವುದು ಹೇಗೆ? ಯಾಕೆಂದರೆ, ವೈದ್ಯಕೀಯದಲ್ಲಾಗಲಿ ತಾಂತ್ರಿಕ ರಂಗದಲ್ಲಾಗಲಿ ಕಲಿಸುವುದಕ್ಕೆ ಮೂಲವಿಜ್ಞಾನದಲ್ಲಿ ಪರಿಣತರಾದವರೇ ಬೇಕು. ವಿಜ್ಞಾನಕ್ಕೆ ಹೋಲಿಸಿದರೆ ಇತಿಹಾಸ, ಸಮಾಜ ವಿಜ್ಞಾನ, ಅರ್ಥಶಾಸ್ತ್ರ, ತತ್ವಜ್ಞಾನ ಮುಂತಾದ ಮಾನವಿಕ ಶಾಸ್ತ್ರಗಳು ಇಂದು ತೀರಾ ದಯನೀಯ ಸ್ಥಿತಿಯಲ್ಲಿದೆ. ಇವು ಆಸಕ್ತ ವಿದ್ಯಾರ್ಥಿಗಳನ್ನು ಆಕರ್ಷಿಸುವುದು ಕಡಿಮೆ. ಇನ್ನೆಲ್ಲೂ ಪ್ರವೇಶ ಸಿಗದ ವಿದ್ಯಾರ್ಥಿಗಳೇ ಹೆಚ್ಚಾಗಿ ಈ ವಿಭಾಗಗಳಿಗೆ ಪವೇಶ ಪಡೆಯುವುದರಿಂದ ಇಂಥ ಶಾಖೆಗಳ ಮಟ್ಟ ಕುಸಿದರೆ ಆಶ್ಚರ್ಯವಿಲ್ಲ. ಸಮಾಜದ ವಿಮರ್ಶಾಪ್ರಜ್ಞೆ ಜಾಗೃತವಾಗಿರುವುದಕ್ಕೆ ಈ ಶಿಸ್ತುಗಳ ಅಗತ್ಯ ಯಾವತ್ತೂ ಇದೆ ಎನ್ನುವುದು ಒಂದೋ ಜನರಿಗೆ ತಿಳಿಯದು, ಇಲ್ಲವೇ ತಿಳಿದವರು ಮರೆತಿದ್ದಾರೆ. ಮಾನವಿಕ ಅವಜ್ಞೆಗೊಳಗಾದ ಶಾಖೆಗಳೆಂದರೆ ಭಾಷೆ ಮತ್ತು ಸಾಹಿತ್ಯ. ಭಾಷೆ ತನ್ನಿಂತಾನೇ ಬರುತ್ತದೆಂದೂ ಅದನ್ನೇ ವಿಶೇಷವಾಗಿ ಕಲಿಯುವ ಅಗತ್ಯವಿಲ್ಲವೆಂದೂ ಕೆಲವರ ಭಾವನೆ. ಇನ್ನು ಸಾಹಿತ್ಯವನ್ನು ತೆಗೆದುಕೊಂಡರೆ ಅದರಿಂದ ಉಪಯೋಗವಾದರೂ ಏನು? ಎಂಬ ಸುಲಭದಲ್ಲಿ ಉತ್ತರಿಸಲಾರದ ಪ್ರಶ್ನೆಯಿದೆ. ಭಾಷೆಯ ಮಟ್ಟಿಗೆ ಹೇಳುವುದಾದರೆ, ಇದು ಸಂವಹನ ಕ್ರಿಯೆಗೆ ಸಂಬಂಧಿಸಿದ ಸಂಗತಿ ಮಾತ್ರವೇ ಅಲ್ಲ, ಸರಿಯಾಗಿ ಯೋಚಿಸುವುದಕ್ಕೂ ಸಂಬಂಧಿಸಿದುದು; ಆದ್ದರಿಂದ ಉದ್ಯೋಗ ಯಾವುದೇ ಆಗಲಿ, ಪ್ರತಿಯೊಬ್ಬ ವ್ಯಕ್ತಿಗೂ ಭಾಷಾಕಲಿಕೆಯ ಅಗತ್ಯವಿದೆ. ಮಾತ್ರವಲ್ಲ, ಒಂದಕ್ಕಿಂತ ಹೆಚ್ಚು ಭಾಷೆ ಗೊತ್ತಿರುವುದು ಯಾವಾಗಲೂ ಮನುಷ್ಯನ ಮಾನಸಿಕ ಜಗತ್ತನ್ನು ವಿಶಾಲಗೊಳಿಸುತ್ತದೆ ಅಷ್ಟೆ ಅಲ್ಲ, ಜಗತ್ತಿನ ವ್ಯವಹಾರಗಳಲ್ಲಿ ಕೆಲವು ಅನುಕೂಲತೆಗಳನ್ನು ಸಹಾ ನೀಡುತ್ತದೆ.

ಇದನ್ನೆಲ್ಲ ಮನಸ್ಸಿನಲ್ಲಿಟ್ಟುಕೊಂಡು ಸರಕಾರ ಎರಡು ಧ್ಯೇಯಗಳ ದೀರ್ಘಕಾಲಿಕ ಯೋಜನೆಯನ್ನು ಹಾಕಿಕೊಳ್ಳುವುದು ಅಗತ್ಯ. ಒಂದು, ಮೂಲಭೂತ ಜ್ಞಾನಶಾಖೆಗಳಲ್ಲಿ ವಿದ್ಯಾರ್ಥಿಗಳಿಗೆ ಚಿಕ್ಕಂದಿನಿಂದಲೇ ಆಸಕ್ತಿ ಬರಿಸುವುದು; ಎರಡು, ಇತರ ವೃತ್ತಿಗಳಿಗೆ ಪೈಪೋಟಿ ನೀಡುವ ಮಟ್ಟದಲ್ಲಿ ಶಿಕ್ಷಕ ವೃತ್ತಿಯನ್ನು ಔದ್ಯೋಗಿಕವಾಗಿ ಹೆಚ್ಚು ಆಕರ್ಷಕಗೊಳಿಸುವುದು. ಇಂಥ ಯೋಜನೆಯನ್ನು ರೂಪಿಸುವುದಕ್ಕೆ ಹಾಗೂ ಕಾರ್ಯಗತಗೊಳಿಸುವುದಕ್ಕೆ ಸರಕಾರ ತಜ್ಞರ ಸಲಹೆ ಸಹಕಾರ ತೆಗೆದುಕೊಳ್ಳಬೇಕು. ಹಾಗೂ ಇಡಿಯ ಶಿಕ್ಷಣವನ್ನು ಒಂದು ಸಂಪರ್ಕಜಾಲದಲ್ಲಿ ತರದೆ ಇದು ಜಯಪ್ರದವೂ ಆಗಲಾರದು. ಸ್ಪಷ್ಟವಾಗಿ ಹೇಳುವುದಾದರೆ, ಶಾಲೆ ಕಾಲೇಜು ವಿಶ್ವವಿದ್ಯಾಲಯಗಳು ಒಟ್ಟಿಗೇ, ಒಂದು ಸಮಾಜಕ್ಕೆ ಸೇರಿದವರೆಂದು ತಿಳಿದು ಕಾರ್ಯ ನಿರ್ವಹಿಸಬೇಕಾಗಿದೆ. ಕೆಳ ಹಂತದ ಶಿಕ್ಷಕರನ್ನು ತಿರಸ್ಕಾರದಿಂದ ನೋಡುವ ಜಾಯಮಾನ ಮೇಲಿನ ಹಂತದ ಪ್ರಾಧ್ಯಾಪಕರಲ್ಲಿ ಕೆಲವರಿಗೆ ಇರಬಹುದಾದ್ದರಿಂದ ಈ ಮಾತನ್ನು ಪ್ರತ್ಯೇಕವಾಗಿ ಇಲ್ಲಿ ಹೇಳಬೇಕಾಗಿದೆ. ಎಲ್ಲಾ ಹಂತಗಳ ಶಿಕ್ಷಕರು ಕೆಲವು ಬಾರಿಯಾದರೂ ಒಟ್ಟಿಗೆ ವಿಚಾರವಿನಿಮಯ ಮಾಡಿಕೊಳ್ಳುವ ಸಂಪ್ರದಾಯ ಬೆಳೆಸಿಕೊಂಡರೆ ಕೀಳರಿಮೆ ಮೇಲರಿಮೆಗಳನ್ನು ಹೋಗಲಾಡಿಸಬಹುದು ಮಾತ್ರವಲ್ಲ, ಪರಸ್ಪರರಿಂದ ಅರಿವನ್ನೂ ಹೆಚ್ಚಿಸಿಕೊಳ್ಳಬಹುದು. ಇದಕ್ಕೋಸ್ಕರ ಆಯಾ ವಿಶ್ವವಿದ್ಯಾಲಯ ಪ್ರದೇಶಗಳಲ್ಲಿನ ಶಿಕ್ಷಣ ಸಂಸ್ಥೆಗಳನ್ನು (ಶಾಲೆ ಕಾಲೇಜು ಪಾಲಿಕೆಟ್ನಿಕ್ ಇತ್ಯಾದಿ ಭೇದವಿಲ್ಲದೆ) ಆ ವಿಶ್ವವಿದ್ಯಾಲಯವೂ ಸೇರಿದಂತೆ ಒಂದು ಶಿಕ್ಷಣ ಘಟಕವಾಗಿ ಪರಿಗಣಿಸುವುದು ಸರಿಯಾದ ಕ್ರಮವಾಗುತ್ತದೆ.

ಶಿಕ್ಷಕರ ಆತ್ಮಗೌರವ ಮತ್ತು ಘನತೆಗೆ ಧಕ್ಕೆಯಿಂಟುಮಾಡುವ ಯಾವ ಕೆಲಸವನ್ನೂ ಸರಕಾರವಾಗಲಿ ಖಾಸಗಿ ಸಂಸ್ಥೆಗಳಾಗಿ ಮಾಡಬಾರದು. ಮುಖ್ಯವಾಗಿ, ಅರೆಕಾಲಿಕ, ತಾತ್ಕಾಲಿಕ, ಅತಿಥಿ ಅಧ್ಯಾಪಕ ಮುಂತಾದ ಅನಗತ್ಯ ಚೇಷ್ಟೆಗಳನ್ನು ಬಿಟ್ಟುಬಿಡಬೇಕು; ಯಾಕೆಂದರೆ ಇದು ಕೀಳುಮಟ್ಟದ ಆಡಳಿತ, ಎರಡನೆಯ ಮತ್ತು ಮೂರನೆಯ ದರ್ಜೆಯ ಕಂಪೆನಿಗಳ ಅನುಕರಣೆ. ಎಲ್ಲಿ ಹುದ್ದೆಗಳು ಖಾಲಿಬಿದ್ದಿವೆಯೋ ಅಲ್ಲಿಗೆ ಯೋಗ್ಯರಾದವರನ್ನು ಖಾಯಮ್ಮಾಗಿ ನೇಮಿಸುವುದಕ್ಕಿರುವ ಅಡ್ಡಿಯೇನು? ಶಿಕ್ಷಣವೆನ್ನುವುದು ಕೋತಿಯಾಟವಲ್ಲ, ಅದೊಂದು ಗಂಭೀರವಾದ ಸಂಗತಿ; ಇಡೀ ರಾಷ್ಟ್ರದ ಗತಿಯನ್ನು ನಿರ್ಧರಿಸುವಂಥದು; ಕೇವಲ ವರ್ತಮಾನವನ್ನು ಮಾತ್ರವಲ್ಲ, ಭವಿಷ್ಯವನ್ನೂ ಪರಭಾವಿಸುವಂಥದು. ಅಧ್ಯಾಪನವನ್ನು ಒಂದು ಉದ್ಯೋಗವಾಗಿ ಸ್ವೀಕರಿಸುವವರಿಗೆ ಕೆಲಸದ ಭದ್ರತೆಯ ಜತೆಗೆ ಕುಟುಂಬ ನಿರ್ವಹಣೆಗೆ ತಕ್ಕುದಾದ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ಸ್ಪರ್ಧಾತ್ಮಕವಾದ ಸಂಬಳದ ಭದತೆಯೂ ಸಿಗಬೇಕು. ಈ ಶಿಕ್ಷಕರು ನಮ್ಮ ಮಕ್ಕಳ ಮನಸ್ಸಿನ ಜತೆ ವ್ಯವಹರಿಸುವವರು ಎನ್ನುವುದು ನೆನಪಿರಲಿ. ಶಿಕ್ಷಕರ ಮನ ನೋಯಿಸಿ ನೀವು ಅವರಿಂದ ಒಳ್ಳೆಯ ಪಾಠಗಳನ್ನು ಅಪೇಕ್ಷಿಸುವುದು ಹೇಗೆ? ಹಲವು ಶಾಲೆ ಕಾಲೇಜುಗಳಲ್ಲಿ ವರ್ಷವಿಡೀ ದುಡಿದ ಶಿಕ್ಷಕರನ್ನು ಬೇಸಿಗೆ ರಜೆ ಬರುತ್ತಲೇ ವಜಾಗೊಳಿಸಲಾಗುತ್ತದೆ; ಪಾಪ! ಬೇರೇನೂ ದಾರಿಯಿಲ್ಲದ ಅವರು ಮುಂದಿನ ವರ್ಷ ಅದೇ ಸಂಸ್ಥೆ ತಮ್ಮನ್ನು ಕೆಲಸಕ್ಕೆ ತೆಗೆದುಕೊಳ್ಳುವುದಕ್ಕೆ ಕಾಯುತ್ತಿರುತ್ತಾರೆ. ಇದರಿಂದಾಗಿ ವರ್ಷ ವರ್ಷವೂ ಇವರಿಗೆ ಬೇಸಿಗೆ ರಜೆಯ ಸ೦ಬಳವಿಲ್ಲ. ಒಟ್ಟಾರೆ ಸೇವಾವಧಿಯೂ ಬಹುಶಃ ದೊರಕುವುದಿಲ್ಲ, ಇದಕ್ಕೆ ಸಂಬಂಧಿಸಿದ ಭವಿಷ್ಯನಿಧಿ ಇತ್ಯಾದಿಗಳಿಗೂ ಖೋತಾ. ಆಡಳಿತದವರ ಈ ಹಣ ಉಳಿಸುವ ತಂತ್ರ ಶಿಕ್ಷಕರಮಟ್ಟಿಗೆ ಅದೆಷ್ಟು ಅವಮಾನಕರವಾದ ಸಂಗತಿಯೆನ್ನುವುದನ್ನು ಯಾರಾದರೂ ಯೋಚಿಸಿದ್ದಾರೆಯೇ? ಶೈಕ್ಷಣಿಕ ವರ್ಷವಿಡೀ ಮಡಿದವರಿಗೆ ಬೇಸಿಗೆ ರಜೆಯ ಸಂಬಳ ದೊರಕುವಂತೆ ಸರಕಾರ ಕಾನೂನ ತರುವುದು ಅಗತ್ಯವಾಗಿದೆ. ಬೇಕಿದ್ದರೆ ಈ ಸಂಬಳ ಮುಂದಿನ ವರ್ಷವೂ ಅವರು ಕೆಲಸಕ್ಕೆ ದೊರಕುವಂತಿದ್ದರೆ ಮಾತ್ರ ಲಭ್ಯ ಎಂಬ ಷರತ್ತನ್ನು ಇರಿಸಬಹುದು.

ಮಧ್ಯಾಹ್ನದ ಬಿಸಿಯೂಟದ ಹೊಣೆಯಿಂದ ಶಿಕ್ಷಕ ವರ್ಗವನ್ನು ದಯವಿಟ್ಟು ಮುಕ್ತಗೊಳಿಸಿ! ಬಿಸಿಯೂಟದ ಕಾರ್ಯನಿರ್ವಹಣೆಗೆ ಸರಕಾರ ಬೇರೆ ವ್ಯವಸ್ಥೆ ಮಾಡಬೇಕು. ಶಿಕ್ಷಕರು ಸ್ಥಳದಲ್ಲಿದ್ದಾರೆ ಎಂಬ ಮಾತ್ರಕ್ಕೆ ಅವರ ತಲೆ ಮೇಲೆ ಇದನ್ನು ಹೊರಿಸುವುದು ಸರಿಯಲ್ಲ. ವಿದ್ಯಾರ್ಥಿಗಳಿಗೆ ಕಲಿಸುವುದು ಮಾತ್ರವೇ ಅಧ್ಯಾಪಕರ ಜವಾಬ್ದಾರಿ. ಯಾವಾಗಲೂ ಕಲಿಯುವ ಅಧ್ಯಾಪಕರು ಮಾತ್ರವೇ ಯಾವಾಗಲೂ ಕಲಿಸಬಲ್ಲರು. ಆದ್ದರಿಂದ ಎಲ್ಲ ಅಧ್ಯಾಪಕರಿಗೂ ಅಧ್ಯಯನ ನಡೆಸುವುದಕ್ಕೆ ಸಾಕಷ್ಟು ವೇಳೆ ಮತ್ತು ವಿರಾಮ ಸಿಗಬೇಕು. ಸರಕಾರವಾಗಲಿ ಖಾಸಗಿ ಸಂಸ್ಥೆಗಳ ಆಡಳಿತದವರಾಗಲಿ ಈ ನಿಟ್ಟನಲ್ಲಿ ಶಿಕ್ಷಕರನ್ನು ಪ್ರೋತ್ಸಾಹಿಸಬೇಕಲ್ಲದೆ ಸುಮ್ಮನೆ ಅವರಿಗೆ ಹೆಚ್ಚು ಹೆಚ್ಚು ದೈಹಿಕ ಮತ್ತು ಮಾನಸಿಕ ಶ್ರಮ ನೀಡುವುದಲ್ಲ. ನೀವು ಶಾಲೆಯೊಂದನ್ನು ನಡೆಸುವವರಾಗಿದ್ದು ನಿಮ್ಮ ಅಧ್ಯಾಪಕರನ್ನು ತಂತಮ್ಮ ಕ್ಷೇತ್ರಗಳಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪಡೆದುಕೊಳ್ಳಲು ಪ್ರೋತ್ಲಾಹಿಸಬೇಕು. ಉದಾಹರಣೆಗೆ, ಬಿ.ಎಸ್ಸಿ.ಯವರನ್ನು ಎಂ.ಎಸ್ಸಿ ಅಥವಾ ಬಿ‌ಎಡ್ ಮಾಡುವಂತೆ. ಈಗ ಮುಕ್ತವಿಶ್ವವಿದ್ಯಾಲಯಗಳೂ ಅಂಚೆ ತೆರಪಿನ ಶಿಕ್ಷಣದ ಸೌಲಭ್ಯವೂ ಇರುವುದರಿಂದ ಶಾಲಾಡಳಿತದವರ ಪ್ರೋತ್ಸಾಹ ಇದ್ದರೆ ಇದೇನೂ ಅಸಾಧ್ಯವಲ್ಲ. ಕೆಲಸದಲ್ಲಿದ್ದುಕೊಂಡೇ ಶಿಕ್ಷಕರು ತಮ್ಮ ವಿದ್ಯಾರ್ಹತೆಯನ್ನು ಹೆಚ್ಚಿಸಿಕೊಳ್ಳಬಹುದು. ಆಗಾಗ ವಿಷಯಾಧಾರಿತ ಸಂಕೀರ್ಣಗಳನ್ನು ಏರ್ಪಡಿಸಿ. ನೆರೆಯಲ್ಲಿ ಇಂಥ ಸಂಕೀರ್ಣಗಳು ನಡೆಯುವಾಗ ನಿಮ್ಮ ಅಧ್ಯಾಪಕರನ್ನು ಅದರಲ್ಲಿ ಭಾಗವಹಿಸುವುದಕ್ಕೆ ಹೇಳಿ. ಹೀಗೆಲ್ಲಾ ಮಾಡಿದರೆ ಈ ಶಿಕ್ಷಕರು ತಮ್ಮ ಪಾಠಗಳ ಬಗ್ಗೆ ಆಸಕ್ತಿ ವಹಿಸಲಾರರು ಎಂಬ ಅನುಮಾನವನ್ನು ಮೊದಲು ನಿಮ್ಮ ಮನಸ್ಸಿನಿಂದ ತೊಡೆದುಹಾಕುವುದು ಅಗತ್ಯ.

ಕಾಲೇಜು, ವಿಶ್ವವಿದ್ಯಾಲಯ ಮಟ್ಟದಲ್ಲೂ ಅಧ್ಯಾಪಕರು ನಿರಂತರವಾಗಿ ಅಧ್ಯಯನಶೀಲರಾದರೇನೇ ಪುರೋಗತಿ ಸಾಧ್ಯ. ಕೇವಲ ಪಿ‌ಎಚ್.ಡಿ. ಗಳಿಸಿದರೆ ಮಾತ್ರವೂ ಸಾಲದು. ವರ್ಷ ವರ್ಷವೂ ಏನಾದರೂ ಹೊಸ ಹೊಸ ಓದು ಬರಹದಲ್ಲಿ ಅಧ್ಯಾಪಕರು ತೊಡಗುವುದು ಅಗತ್ಯವಿದೆ. ವರ್ಷಕ್ಕೆ ಒಂದು ಲೇಖನವನ್ನಾದರೂ ಅವರು ಬರೆದು ಪ್ರಕಟಿಸಬೇಕು, ಒಂದು ಪುಸ್ತಕವನ್ನಾದರೂ ಅನುವಾದಿಸಬೇಕು, ಸಂಕೀರ್ಣದಲ್ಲಾದರೂ ಭಾಗವಹಿಸಬೇಕು. ಒಂದು ಸಾರ್ವಜನಿಕ ಉಪನ್ಯಾಸವನ್ನಾದರೂ ಕೊಡಬೇಕು.

ಶಿಕ್ಷಕರನ್ನು ಆಕರ್ಷಿಸುವುದಕ್ಕೆ ಅವರಿಗೆ ಔದ್ಯೋಗಿಕ ಅನುಕೂಲತೆಗಳನ್ನು ಅಂತರರಾಷ್ಟ್ರೀಯ ಕಂಪೆನಿಗಳ ಮಾದರಿಯಲ್ಲಿ ನೀಡಬೇಕು. ಇವತ್ತು ನಮ್ಮ ಹಲವಾರು ಶಾಲೆಗಳಲ್ಲಿ ಅಧ್ಯಾಪಕರಿಗೆ ತುಸು ವಿಶ್ರಾಂತಿ ಪಡೆದುಕೊಳ್ಳುವುದಕ್ಕೆ ಪ್ರಾಥಮಿಕ ಅನುಕೂಲತೆಯೇ ಇಲ್ಲ. ಕೆಲವು ಕಡೆ ಕಟ್ಟಡಗಳೇ ಇಲ್ಲ. ಖಾಸಗಿ ಶಾಲೆಯವರು ವಿದ್ಯಾರ್‍ಥಿಗಳಿಗೆ ಅನುಕೂಲತೆಗಳನ್ನು ಕಲ್ಪಿಸಿದರೂ ಶಿಕ್ಷಕರನ್ನು ತೀರಾ ಕಳಪೆಯಾಗಿ ಕಾಣುವುದಿದೆ. ಅವರು ಕ್ಲಾಸಿನಲ್ಲಿ ಕೂತುಕೊಳ್ಳಬಾರದು, ಸ್ಟಾಫ್ ರೂಮಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳಬಾರದು. ಬೆಳಿಗ್ಗಿನಿಂದ ಸಂಜೆ ತನಕ ಏನಾದರೂ ಮಾಡುತ್ತಲೇ ಇರಬೇಕು. ಶಿಕ್ಷಕರನ್ನು ಗಾಣದ ಎತ್ತುಗಳಂತೆ ಕಾಣುವ ಈ ಧೋರಣೆ ಆಮೂಲಾಗ್ರವಾಗಿ ಬದಲಾಗಬೇಕಾಗಿದೆ.

ಕನಿಷ್ಠ ಹತ್ತು ವರ್ಷಗಳಷ್ಟು ಸೇವೆ ಮಾಡಿದ ಶಿಕ್ಷಕರ ಮಕ್ಕಳಿಗೆ ವಿದ್ಯಾಲಯಗಳಲ್ಲಿ ಪ್ರವೇಶನದಲ್ಲಿ ಮತ್ತು ಫೀಸಿನಲ್ಲಿ ಕೆಲವು ರಿಯಾಯಿತಿಗಳನ್ನು ತೋರಿಸಬೇಕು. ಮುಂದೆ ಅವರ ವಿದ್ಯಾಭ್ಯಾಸ ಪೂರ್ತಿಯಾದ ಮೇಲೆ ಬೇಕಿದ್ದರೆ ಅವರಿಂದ ಕಡ್ಡಾಯವಾಗಿ ಯಾವುದಾದರೊಂದು ವಿದ್ಯಾಸಂಸ್ಥೆಯಲ್ಲಿ ಒಂದು ವರ್ಷ ಅಧ್ಯಾಪನ ಸೇವೆ ಪಡೆಯುವ ಕಾನೂನನ್ನು ರೂಪಿಸಬಹುದು.

ನಿಜ, ಇದೆಲ್ಲಕ್ಕೂ ಹಣ ತಗಲುತ್ತದೆ. ಆದರೆ ಶಿಕ್ಷಣಕ್ಕೆ ವ್ಯಯಿಸಿದ ಹಣ ಎಂದೂ ವ್ಯರ್‍ಥವಾಗುವುದಿಲ್ಲ. ಸಾಕಷ್ಟು ನೈಸರ್ಗಿಕ ಸಂಪತ್ತಿಲ್ಲದ ನಮ್ಮ ದೇಶದಲ್ಲಿ ಜನಸಂಪತ್ತು ಇದೆ. ಇದನ್ನೇ ನಾವು ವಿವೇಚನೆಯಿಂದ ಬಳಸಿಕೊಂಡರೆ ಸಾಕು. ನಮ್ಮ ವಿದ್ಯಾಭ್ಯಾಸವನ್ನು ಸಾರ್ವತ್ರಿಕಗೊಳಿಸುವುದು ಹಾಗೂ ಉತ್ತಮಗೊಳಿಸುವುದು ಇದಕ್ಕಿರುವ ದಾರಿ. ಇವೆರಡೂ ಕಾರ್ಯಗತವಾಗಬೇಕಾದರೆ ನಮಗೆ ದಕ್ಷ ಶಿಕ್ಷಕರ ಅಗತ್ಯವಿದೆ. ಅವರು ಆಕಾಶದಿಂದ ಬೀಳುವುದಿಲ್ಲ; ನಮ್ಮ ಮಧ್ಯದಿಂದಲೇ ಎದ್ದುಬರಬೇಕು. ಶಿಕ್ಷಕರ ಅಭಾವವಿರುವುದು ಕೇವಲ ನಮ್ಮ ದೇಶದಲ್ಲಿ ಮಾತ್ರವೇ ಅಲ್ಲ. ಮುಂದುವರಿದ ದೇಶಗಳಾದ ಬ್ರಿಟನ್, ಅಮೇರಿಕಗಳಲ್ಲೂ ಈ ಸಮಸ್ಯೆಯಿದೆ. ನಮ್ಮ ದೇಶದಲ್ಲಿ ಕಲಿತ ಗಣಿತಜ್ಞರು, ರಾಜ್ಯಶಾಸ್ತ್ರಜ್ಞರು ಅಲ್ಲಿನ ಯುನಿವರ್ಸಿಟಿಗಳಲ್ಲಿ ಹೋಗಿ ಪಾಠಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಬೇಡಿಕೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಆದ್ದರಿಂದ ಶಿಕ್ಷಣದಲ್ಲಿ ತೊಡಗಿಸಿದ ಸಂಪನ್ಮೂಲ ಎಂದೂ ಹಾಳಾಗುವುದಿಲ್ಲ; ಯಾಕೆಂದರೆ ಅದೇ ಒಂದು ದೊಡ್ಡ ಸಂಪನ್ಮೂಲವಾಗುತ್ತದೆ! ಆದರೆ ಇದಕ್ಕೆ ವರ್ತಮಾನಕ್ಕಿಂತ ಆಚೆಗೆ ಯೋಚಿಸುವ ಮಂತ್ರಿಗಳು ಬೇಕು.

ಟಿಪ್ಪಣಿ: ಬಿಸಿಯೂಟಕ್ಕೂ ಶಿಕ್ಷಕರಿಗೂ ಕಡ್ಡಾಯವಾದ ಸಂಬಂಧವಿಲ್ಲ ಎಂದೀಗ ತಿಳಿದಿದ್ದೇನೆ. ಮೇಲಿನ ಲೇಖನ ಬರೆಯುವಾಗ ನಾನು ಆ ನಂಬಿಕೆಯಲ್ಲಿದ್ದೆ.
****

One thought on “0

 1. ಸರ್ ಅವರು ತುಂಬಾ ಮೌಲಿಕವಾದ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಸರ್ ಹೇಳಿದ ಒಂದೊಂದು ಅಂಶಗಳು ಔಚಿತ್ಯಪೂರ್ಣವೇ ಆಗಿವೆ. “ಕಲಿಯಲಾರದ ಅಧ್ಯಾಪಕರು ಕಲಿಸಲಾರರು” ಎಂಥ ಮಾತಿದು!! ಶಿಕ್ಷಕರಿಗೆ ಕೊಡಬೇಕಾದ ಆದ್ಯತೆಯನ್ನು ಮಾರ್ಮಿಕವಾಗಿ ಹೇಳಿದ್ದಾರೆ. ಆದರೆ ವೈಯಕ್ತಿಕವಾಗಿ ಲಾಭದಾಯಕವಲ್ಲದ ಈ ಕ್ಷೇತ್ರದಲ್ಲಿ ಬಂಡವಾಳ ಹಾಕಲು ನಮ್ಮ ಪ್ರಭುತ್ವವು ಮನಸ್ಸು ಮಾಡುವುದಿಲ್ಲ ಎಂಬುದು ದುರ್ದೈವದ ಸಂಗತಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನ್ನ ನೆನಪೇ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೪೨

ಸಣ್ಣ ಕತೆ

 • ರಾಮಿ

  ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

 • ಅವರು ನಮ್ಮವರಲ್ಲ

  ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

 • ಲೋಕೋಪಕಾರ!

  ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

 • ಮನೆಮನೆಯ ಸಮಾಚಾರ

  ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

 • ಮುಗ್ಧ

  ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

cheap jordans|wholesale air max|wholesale jordans|wholesale jewelry|wholesale jerseys