ಪ್ರೀತಿಯ ಕಿಟಿ,
ನೇರವಾಗಿಯೇ ಹೇಳುವೆ. ಇದು ಬಹು ನಿರಾಳದ ಕ್ಷಣಗಳು. ಮಮ್ಮಿ ಡ್ಯಾಡಿ ಹೊರಹೋಗಿದ್ದಾರೆ. ಮಾರ್‍ಗೊಟ್ ತನ್ನ ಕೆಲವು ಸ್ನೇಹಿತರೊಂದಿಗೆ ಪಿಂಗಪಾಂಗ್ ಆಡಲು ಹೋಗಿದ್ದಾಳೆ. ನಾನು ನನ್ನಷ್ಟಕ್ಕೆ ಪಿಂಗಪಾಂಗ್ ಆಡುತ್ತಲೇ ಇರುತ್ತೇನೆ. ಪಿಂಗಪಾಂಗಿಗಳಾದ ನಾವು ಐಸ್ಕ್ರೀಮ ಪಕ್ಷಪಾತಿಗಳು. ಅದರಲ್ಲೂ ಬೇಸಿಗೆಯ ಸಮಯದಲ್ಲಿ ಆಟ ಆಡಿ ಧಗೆ ಎದ್ದಾಗಲೆಲ್ಲಾ ಐಸ್ಕ್ರೀಮ್. ಯಹೂದಿಗಳಿಗೆ ಹೋಗಲು ಅನುಮತಿ ಇರುವ ಸಮೀಪದ ಢೇಲ್ಪಿ ಅಥವಾ ಓಯಾಸಿಸ್ ಐಸ್ಕ್ರೀಮ್ ಅಂಗಡಿಗೆ ಭೇಟಿ ನೀಡಿದ ಮೇಲೆಯೇ ನಮ್ಮ ಆಟ ಮುಗಿಸುತ್ತೇವೆ. ನಾವು ಎಕ್ಸ್ಟ್ರಾ ಪಾಕೇಟ್ ಮನಿಯನ್ನು ಒಟ್ಟುಗೂಡಿಸುವುದನ್ನು ಬಿಟ್ಟು ಬಿಟ್ಟಿದ್ದೇವೆ. ಓಯಾಸಿಸ್ ಯಾವಾಗಲೂ ತುಂಬಿರುತ್ತದೆ. ಮತ್ತು ನಾವು ನಮ್ಮ ಸ್ನೇಹಿತರ ದೊಡ್ಡ ಬಳಗದಲ್ಲಿ ಯಾರಾದರೊಬ್ಬ ಹೃದಯವಂತ ವ್ಯಕ್ತಿ ಅಥವಾ ಗೆಳೆಯನನ್ನು ಹುಡುಕಿಯೇ ಇರುತ್ತೇವೆ. ಆತ ನಾವು ಒಂದು ವಾರವಿಡಿ ತಿನ್ನಬಹುದಾದಕ್ಕಿಂತ ಹೆಚ್ಚು ಐಸ್ಕ್ರೀಮನ್ನು ನಮಗೆ ಕೊಡಿಸುತ್ತಾನೆ.
ನನ್ನ ವಯಸ್ಸಿನಲ್ಲಿ ನಾನು ಗೆಳೆಯರ ಬಗ್ಗೆ ಮಾತನಾಡಬೇಕು ಎಂಬ ವಿಚಾರವಾಗಿ ನೀನು ಆಶ್ಚರ್ಯ ಪಡುತ್ತೀ ಎಂದು ನಾನು ನಿರೀಕ್ಷಿಸುತ್ತೇನೆ. ಅಯ್ಯೋ! ನಮ್ಮ ಶಾಲೆಯಲ್ಲಿ ಯಾರೊಬ್ಬರೂ ಸುಮ್ಮನೇ ಇಂತಹ ಸಂಗತಿಗಳಿಂದ ದೂರವಿರುವಂತೆ ಕಾಣುವುದಿಲ್ಲ. ಹುಡುಗನೊಬ್ಬ ನನ್ನೊಂದಿಗೆ ಸೈಕಲ್ ಮೇಲೆ ಮನೆಗೆ ಹೋಗುವಂತಾದಾಗಲೆಲ್ಲ, ನಾವಿಬ್ಬರೂ ಮಾತಿನಲ್ಲಿ ಮುಳುಗಿರುವಾಗ ಆತ ಪ್ರೇಮದ ವಿಚಾರದಲ್ಲೆ ತಲೆಕೆಳಗಾಗಿ ಬಿದ್ದಿರುತ್ತಾನೆ ಮತ್ತು ನನ್ನನ್ನು ತನ್ನಡೆಗೆ ಸೆಳೆಯಬಯಸುತ್ತಾನೆ ಎಂಬುದು ನನಗೆ ಹತ್ತರಲ್ಲಿ ಒಂಬತ್ತರಷ್ಟು ಸತ್ಯ. ಸ್ವಲ್ಪ ಹೊತ್ತಿಗೆ ಖಂಡಿತ ಇವೆಲ್ಲ ತಣ್ಣಗಾಗುತ್ತವೆ. ವಿಶೇಷವಾಗಿ ಈ ಪ್ರೇಮದ ನೋಟವನ್ನು ಗಮನಿಸುತ್ತಿದ್ದಂತೆ ನನ್ನ ಕಾಲುಗಳು ಸುಮ್ಮನೇ ಪೆಡಲ್ ತುಳಿಯುತ್ತವೆ.
ಒಂದೊಮ್ಮೆ ಇದೆಲ್ಲ ಸ್ವಲ್ಪ ದೂರ ಹೋದರೆ ಅವರು ತಂದೆಯನ್ನು ಕೇಳು ಎಂಬುದಾಗಿ ಪ್ರಾರಂಭಿಸುತ್ತಾರೆ. ನಾನು ನಿಧಾನಕ್ಕೆ ನನ್ನ ಸೈಕಲ್ಲನ್ನು ಹಿಂದಕ್ಕೆ ತಿರುಗಿಸುತ್ತ, ನನ್ನ ಶಾಲಾಬ್ಯಾಗ್ ಕೆಳಗೆ ಬೀಳಿಸುತ್ತೇನೆ. ಆ ತರುಣ ಕೆಳಗಿಳಿದು ಅದನ್ನು ಕೈಗೆ ನೀಡುತ್ತಲೇ ನಾನು ಬೇರೆ ವಿಚಾರವನ್ನು ಪ್ರಸ್ತಾಪಿಸುತ್ತೇನೆ.
ಇವೆಲ್ಲ ಮುಗ್ಧ ಸಾಮಾನ್ಯ ಸಂಗತಿಗಳು. ಆದರೆ ಕೆಲವೊಮ್ಮೆ ಕಿಸ್[ಮುತ್ತುಗಳನ್ನು]ಗಳನ್ನು ನಿಮ್ಮತ್ತ ಎಸೆಯುವವರೂ, ಕೈ ಹಿಡಿದು ಜಗ್ಗುವವರೂ ಎದುರಾಗಬಹುದು. ಆದರೆ ನಿಜಕ್ಕೂ ಅವರು ಬಡಿಯುತ್ತಿರುವುದು ತಪ್ಪು ಬಾಗಿಲನ್ನು ಎಂಬುದು ಖರೆ. ಆಗ ನಾನು ನನ್ನ ಬೈಸಿಕಲ್ಲಿನಿಂದಿಳಿದು ಬಿಡುತ್ತೇನೆ. ಅವರೊಂದಿಗೆ ಮುಂದೆ ಪ್ರಯಾಣಿಸಲು ನಿರಾಕರಿಸುತ್ತೇನೆ. ಅಥವಾ ಅವರಿಂದ ಅವಮಾನಿತಳಾದಂತೆ ನಟಿಸುತ್ತೇನೆ. ಮತ್ತು ಸ್ಪಷ್ಟವಾಗಿ ಹೇಳಿಬಿಡುತ್ತೇನೆ.
ಅಲ್ಲಿಗೆ ನಮ್ಮ ಸ್ನೇಹದ ಬುನಾದಿ ನಾಳೆಯವರೆಗೂ ಮುಂದುವರೆಯುತ್ತದೆ.
ನಿನ್ನ
ಆನ್
*****
















