ಡಾ|| ಸುಧೀರಕೃಷ್ಣ ರಾವ್ ಕಪಿಲಳ್ಳಿ, ಗಂಡಸರ ಸಮಸ್ಯೆ ಕಾಯಿಲೆಗಳ ತಜ್ಞ ವೈದ್ಯರು ಎಂಬ ಬೋರ್ಡೊಂದು ಹಠಾತ್ತನೆ ಪುರಾತನ ಮುಳಿ ಮಾಡಿನ ಚಿಕ್ಕ ಕಟ್ಟಡವೊಂದರ ಮುಂದೆ ನೇತು ಬಿದ್ದದ್ದು ಕಪಿಲಳ್ಳಿಯಲ್ಲಿ ಬಹುದೊಡ್ಡ ಚರ್ಚೆಗೆ ವಿಶಾಲವಾದ ವೇದಿಕೆಯನ್ನು ಒದಗಿಸಿಬಿಟ್ಟಿತು.

ಕಪಿಲೇಶ್ವರನ ದೇವಾಲಯದಲ್ಲಿ ಬಾಯಲ್ಲಿ ಮಣ ಮಣ ಮಂತ್ರ ಹೇಳುತ್ತಾ ಪೂಜೆ ಮಾಡುತ್ತಿದ್ದ ಅರ್ಚಕ ಪುರೋಹಿತ ಗಣಪತಿ ಸುಬ್ರಾಯ ಜೋಯಿಸರಿಗೆ ಇದ್ದಕ್ಕಿದ್ದಂತೆ ಮೂಡಿದ ಬೋರ್ಡಿನದ್ದೇ ಧ್ಯಾನವಾಗಿ ಹೇಗೋ ಅಂದಿನ ಪೂಜೆಯನ್ನು ಮುಗಿಸಿ ಮಂಗಳಾರತಿ ಎತ್ತಿ ನೈವೇದ್ಯ ತಂದು ತಪಸ್ವಿನಿಯ ಮೀನುಗಳಿಗೆ ತಿನ್ನಿಸಿ, ಕೈಕಾಲು ತೊಳೆದುಕೊಂಡು ಒಳಬಂದು ನಮಸ್ಕಾರ ಮಂಟಪದಲ್ಲಿ ತೀರ್ಥಪ್ರಸಾದ ತಟ್ಟೆ ಸಮೇತ ಬಂದು ಕೂತವರ ಕಣ್ಣಿಗೆ ಮೊದಲು ಬಿದ್ದದ್ದೇ ದೊಡ್ಡ ಮುಂಡಾಸು ಹೊನ್ನಪ್ಪ ಗೌಡರು. “ಅಲ್ಲಾ ಗೌಡ್ರೇ, ಈ ಸುಧೀರಕೃಷ್ಣ ಅದ್ಹೇಗೆ ಡಾಕ್ಟರನಾಗಿಬಿಟ್ಟ? ನನಗೆ ಗೊತ್ತಿರುವ ಹಾಗೆ ಐದನೇ ಕ್ಲಾಸು ಕೂಡಾ ಪಾಸಾಗಲು ಇವನಿಂದ ಆಗಿರಲಿಲ್ಲ. ಅಂತಾದ್ದರಲ್ಲಿ ಇದೇನಿದು ಕಪಿಲೇಶ್ವರನ ಲೀಲೆ?”

ದೊಡ್ಡ ಮುಂಡಾಸು ಹೊನ್ನಪ್ಪ ಗೌಡರು ಮಾತಿಗೆ ಪೂರ್ವ ಪೀಠಿಕೆಯಾಗಿ ಎರಡೆರಡು ಬಾರಿ ಗಂಟಲು ಸರಿಪಡಿಸಿಕೊಂಡು ಕಫ ಅಡ್ಡ ಬರದಂತೆ ಸಕಾಲಿಕ ಮುನ್ನೆಚ್ಚರಿಕೆ ವಹಿಸಿ ಹೇಳಿದರು. “ನನಗೂ ಇದೇನೆಂದು ತಿಳಿಯುತ್ತಿಲ್ಲ ನೋಡಿ. ನಮ್ಮ ಕಣ್ಣೆದುರು ಓಡಾಡಿ ಕೊಂಡಿದ್ದವ ನಾನೇ ಸುಧೀರಕೃಷ್ಣ ಎಂದು ಕರೆಯೋದು ಕಷ್ಟವಾಗಿ ಸೂದ್ರ ಮಾಣಿ ಎಂದು ಹೆಸರಿಟ್ಟದ್ದು. ಆದ್ರೂ ಎಷ್ಟೋ ವರ್ಷಗಳ ಹಿಂದೆ ಊರು ಬಿಟ್ಟೋನಲ್ವಾ? ಎಲ್ಲೋ ಹೋಗಿ ಡಾಕ್ಟರಿಕೆನೋ, ಕೋಂಪೋಂಡರಿಕೆನೋ ಕಲ್ತು ಬರೋ ಸಾಧ್ಯತೆ ಉಂಟಲ್ವಾ?”

“ಏ ಸುಮ್ಮಗಿರಿ ಗೌಡ್ರೆ ನೀವು. ಐದನೆ ಫೇಲಾದವ ಡಾಕ್ಟರಾಗೋದುಂಟಾ? ಡಾಕ್ಟರಿಕೆನೂ ಇಲ್ಲ, ಮಣ್ಣಾಂಗಟ್ಟಿನೂ ಇಲ್ಲ. ಇದರಲ್ಲಿ ಏನೋ ಒಂದು ಸೀಂತ್ರಿ ಉಂಟು ಗೌಡ್ರೇ. ಒಮ್ಮೆ ನೀವೇ ಹೋಗಿ ಪತ್ತೆಮಾಡದಿದ್ದರೆ ಅವನು ಏನೇನೋ ಮದ್ದು ಕೊಟ್ಟು ಯಾರಾರದೋ ಜೀವಕ್ಕೆ ಸಂಚಕಾರ ತಂದಾನು. ಹೇಗೂ ನಿಮಗೆ ಕಫ ದೋಷವುಂಟು. ಅದೇ ನೆವನದಲ್ಲಿ ಹೋಗಿ ಒಮ್ಮೆ ಅದೇನಾಗಿದೆಯೆಂದು ನೋಡಿಕೊಂಡು ಬರೋದು ಊರಿಗೇ ಕ್ಷೇಮ. ನಾನು ಸಂಜೆ ಇಲ್ಲೇ ಸಿಗುತ್ತೇನೆ.”

ದೇವಸ್ಥಾನದಲ್ಲಿ ಏಳೆಂಟು ಆಸ್ತಿಕ ಭಕ್ತಾದಿಗಳಿರುವಾಗ ತನ್ನ ಕಫ ದೋಷದ ಪ್ರಸ್ತಾಪ ಮಾಡಿ ಗಣಪತಿ, ಸುಬ್ರಾಯ ಜೋಯಿಸರಿಗೆ ತನ್ನನ್ನು ಬೇಕೆಂದೇ ಚುಚ್ಚುತ್ತಿದ್ದಾರೆಂದು ದೊಡ್ಡ ಮುಂಡಾಸು ಹೊನ್ನಪ್ಪ ಗೌಡರಿಗೆ ಸಿಟ್ಟು ಬಂತು. ಅವರ ಸಿಟ್ಟಿನೊಡನೆ ಕಫಮೇಲಕ್ಕೆ ಬಂದಂತಾಗಿ ಬಹಳ ಕಷ್ಟಪಟ್ಟು ಅದು ಹೊರಬರದಂತೆ ತಡಕೊಂಡರು. ಮನೆಯಲ್ಲಿರುತ್ತಿದ್ದರೆ ಕಫ ಬಂದಾಗಲೆಲ್ಲಾ ದೊಡ್ಡ ಸ್ವರದಲ್ಲಿ ಕ್ಯಾಕರಿಸಿ ಅಲ್ಲೇ ಅಂಗಳದಲ್ಲಿ ಪಚಕ್ ಎಂದು ಕೂತಲ್ಲಿಂದಲೇ ಉಗುಳಬಹುದಿತ್ತು. ದೇವಾಲಯದಲ್ಲಿ ಆ ಸೌಲಭ್ಯ ಎಲ್ಲಿ ಸಿಗಬೇಕು? ಒಳಾಂಗಣ, ಹೊರಾಂಗಣ, ಗೋಪುರ ದಾಟಿ ಹೊರ ಹೋಗಿ ಕಫ ಉಗುಳಿ ಬರಲು ಕಾಲು ಗಂಟೆಯಾದರೂ ಬೇಕು. ದೊಡ್ಡ ಮುಂಡಾಸು ಹೊನ್ನಪ್ಪ ಗೌಡರು ಹೇಗೆ ತಡಕೊಂಡರೂ ಅವರ ಪ್ರಯತ್ನ ಮೀರಿ ಬಂದದ್ದು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ವಾಪಾಸಾಯಿತು.

“ಆದರೂ ಜೋಯಿಸರೇ, ಈಗಿನ ಕಾಲದವರನ್ನು ನಂಬಲಿಕ್ಕಾಗುವುದಿಲ್ಲ ನೋಡಿ. ದೊಡ್ಡ ದೊಡ್ಡ ಪೇಟೆಗಳಲ್ಲಿ ಹಣ ಕೊಟ್ಟರೆ ಏನನ್ನು ಬೇಕಾದರೂ ಕಲಿಸಿಕೊಡುತ್ತಾರಂತಲ್ಲಾ? ಸುಧೀರಕೃಷ್ಣ ಎಲ್ಲಾದರೂ, ಹೇಗಾದರೂ ಡಾಕ್ಟರಿಕೆ ಕಲಿತುಕೊಂಡಿದ್ದರೆ ನಮ್ಮ ಕಪಿಲಳ್ಳಿಗೊಬ್ಬ ಡಾಕ್ಟರು ಸಿಕ್ಕಂತಾಯ್ತಲ್ಲಾ? ಎಲ್ಲಾ ಅವರವರ ಹಣೆಯಲ್ಲಿ ಬರೆದದ್ದು. ನೀವೇ ನೋಡಿದ್ದೀರಲ್ಲಾ, ನನ್ನ ಹಾಗೇ ಹೊಲ ಉಳುತ್ತಿದ್ದ ನಮ್ಮ ದೂರದ ನೆಂಟ ದೇವೇಗೌಡರು ಪ್ರಧಾನಿಯಾಗಿರಲಿಲ್ವಾ, ಹಾಗೇ.”

ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ತನ್ನ ಇನ್‌ಫ್ಲುಯೆನ್ಸ್ ಹಾಕಿ ಊರ ರಸ್ತೆಗೆ ಡಾಮಾರು ಮಾಡಿಸುವುದಾಗಿಯೂ, ಊರಿಗೊಂದು ಸರಕಾರೀ ಆಸ್ಪತ್ರೆ ಸ್ಯಾಂಕ್ಷನ್ನು ಮಾಡಿಸಿಯೇ ಬಿಡುವುದಾಗಿಯೂ, ತನಗೆ ಹೆಣ್ಣು ಕೊಟ್ಟ ಮಾವನ ಕಡೆಯಿಂದ ಸಂಬಂಧಿಯಾಗಿರುವ ದೇವೇಗೌಡರು ತಾವೊಂದು ಮಾತು ಹೇಳಿದರೆ ತಳ್ಳಿ ಹಾಕಲು ಸಾಧ್ಯವೇ ಇಲ್ಲವೆಂದೂ ಊರಿಡೀ ಹೇಳಿಕೊಂಡು ಸುತ್ತುತ್ತಾ ದೊಡ್ಡ ಮುಂಡಾಸು ಹೊನ್ನಪ್ಪ ಗೌಡರು ಎರಡು ನಮಸ್ಕಾರ ಹೆಚ್ಚು ಗಿಟ್ಟಿಸಿಕೊಂಡಿದ್ದರು. ದೇವೇಗೌಡರು ಸಾಕ್ಷಾತ್ ಪ್ರಧಾನಿಯೇ ಆಗಿಬಿಟ್ಟಾಗ ಅವರು ತನ್ನ ತಾಯಿಯ ಕಡೆಯಿಂದ ತೀರಾ ಹತ್ತಿರದ ಬಂಧುವೆಂದೂ, ತಾನೊಂದು ಮಾತು ಹೇಳಿದರೆ ಅವರು ತಪಸ್ವಿನಿಯ ಈ ದಡದಿಂದ ಆ ದಡಕ್ಕೆ ಭದ್ರವಾದ ಸೇತುವೆ ಮಾಡಿಸಿ ಎಂಥಾ ಮಳೆಗಾಲದಲ್ಲೂ ಆಸ್ತಿಕ ಭಕ್ತಾಭಿಮಾನಿಗಳು ಕಪಿಲೇಶ್ವರನ ದರ್ಶನ ಭಾಗ್ಯಕ್ಕೆ ಬರಲಾಗುವಂತೆ ಅನುಕೂಲತೆ ಕಲ್ಪಿಸಿಯೇ ಬಿಡುತ್ತಾರೆಂದೂ ಹೇಳುತ್ತಾ ತಿರುಗುತ್ತಿದ್ದರು. ದೇವೇಗೌಡರು ಪ್ರಧಾನಿ ಪಟ್ಟದಿಂದ ಇಳಿದಾಗ, “ಇದು ರೈತನೊಬ್ಬ ಪ್ರಧಾನಿಯಾಗಿದ್ದರೆ ತಮ್ಮ ಬೇಳೆ ಬೇಯದೆಂದು ವರ್ತಕ ವರ್ಗ ಮಾಡಿದ ಕುತಂತ್ರ” ಎಂದು ಕಪಿಲಳ್ಳಿಯ ಜನರು ತಲೆದೂಗುವಂತೆ ಹೇಳಿದ್ದರು. ದೇವೇಗೌಡರಿಗೆ ಇನ್ನೊಂದು ಛಾನ್ಸು ಕೊಟ್ಟು ನೋಡಿ. ತಪಸ್ವಿನಿಗೆ ಸೇತುವೆ ಮಾಡಿಸದೆ ಇದ್ದರೆ ಇದು ಮೀಸೆಯಲ್ಲ. ಇದನ್ನು ಬೋಳಿಸಿಬಿಡುತ್ತೇನೆ” ಎಂಬ ಘೋರ ಭೀಷಣ ಪ್ರತಿಜ್ಞೆ ಮಾಡಿ ಪ್ರಶ್ನೆ ಕೇಳಿದವರ ಬಾಯಿ ಮುಚ್ಚಿಸಿಬಿಡುತ್ತಿದ್ದರು.

ಇದೆಲ್ಲಾ ನೆನಪಿಗೆ ಬಂದು ಗಣಪತಿ ಸುಬ್ರಾಯ ಜೋಯಿಸರು ನಗುತ್ತಾ, “ಆದದ್ದಾಗಲಿ ಗೌಡ್ರೆ. ನೀವೇ ಒಮ್ಮೆ ನೋಡಿ ಮಾತಾಡಿಸಿ ಬರುವುದು ಯಾವುದಕ್ಕೂ ಒಳ್ಳೇದು. ನಮ್ಮ ಊರಲ್ಲಿ ಅವನಿಗೆ ನಿಮ್ಮಷ್ಟು
ಹತ್ತಿರದವರು ಯಾರಿದ್ದಾರೆ?” ಎಂದು ಗೌಡರಿಗೆ ತೀರ್ಥಕೊಟ್ಟು ಬೊಗಸೆಗೆ ಗಂಧವನ್ನು ಎಸೆದರು. ವಿಪ್ರಕುಲ ಸಂಜಾತ ಸುಧೀರಕೃಷ್ಣನನ್ನು ತನ್ನ ಹತ್ತಿರದವನನ್ನಾಗಿ ಏಳೆಂಟು ಜನ ಭಕ್ತಾದಿಗಳ ಎದುರಲ್ಲೇ ಗಣಪತಿ ಸುಬ್ರಾಯ ಜೋಯಿಸರು ಉದ್ಘೋಷಿಸಿದ್ದು ತನ್ನ ಘನತೆಯನ್ನು ಹೆಚ್ಚಿಸಿದೆಯಂದು ಉಬ್ಬಿಹೋದ ದೊಡ್ಡ ಮುಂಡಾಸು ಹೊನ್ನಪ್ಪ ಗೌಡರು, “ನೀವಂದಂತೆ ಆಗಲಿ ಜೋಯಿಸರೇ” ಎಂದು ನಿಂತ ನಿಲುವಿನಲ್ಲೇ ಹೊರಟುಬಿಟ್ಟರು. ದೇವಸ್ಥಾನಕ್ಕೆ ಬಂದಾಗಲೆಲ್ಲಾ ಪ್ರಸಾದ ತೆಗೆದುಕೊಂಡು ಹರಿವಾಣಕ್ಕೆ ದಕ್ಷಿಣೆ ಹಾಕಿಯೇ ನಮಸ್ಕರಿಸಿ ಹೋಗುತ್ತಿದ್ದ ದೊಡ್ಡ ಮುಂಡಾಸು ಹೊನ್ನಪ್ಪ ಗೌಡರು ಇಂದು ಆ ಆರ್ಷೇಯ ಸತ್ಸಂಪ್ರದಾಯವನ್ನು ಮುರಿಯುವುದಲ್ಲಿರುವುದನ್ನು ಗಮನಿಸಿದ ಜೋಯಸರು, “ಅಲ್ಲಾ ಗೌಡ್ರೆ….” ಎಂದು ಮಾತಿಗೆಳೆದು ಗೌಡರನ್ನು ಇನ್ನಷ್ಟು ಹೊತ್ತು ನಿಲ್ಲಿಸಿದರೆ ದಕ್ಷಿಣೆ ಹಾಕದ್ದು ನೆನಪಾದೀತು ಎಂದು ಯತ್ನಿಸಿದರೆ ತಲೆಯಿಡೀ ಸುಧೀರಕೃಷ್ಣನನ್ನೇ ತುಂಬಿಕೊಂಡ ಗೌಡರು ಇನ್ನಿಲ್ಲದ ಅವಸರದಿಂದ, “ಇಲ್ಲಾ ಜೋಯಿಸರೇ ಬಂದುಬಿಟ್ಟೆ” ಎಂದು ತರಾತುರಿಯಿಂದ ನಡೆದೇ ಬಿಟ್ಟರು.

ತಪಸ್ವಿನಿಯನ್ನು ಪಿಂಡಿಯಲ್ಲಿ ದಾಟುತ್ತಿರುವಾಗ ದೊಡ್ಡ ಮುಂಡಾಸು ಹೊನ್ನಪ್ಪ ಗೌಡರಿಗೆ ಸುಧೀರಕೃಷ್ಣನ ಬಾಲಲೀಲೆಗಳೆಲ್ಲಾ ನೆನಪಾದವು. ಅದೇನೆಂದು ಕಿಂಚಿತ್ತೂ ಅರ್ಥವಾಗದ ಪ್ರಾಯದಲ್ಲಿ ಅವನಿಗೆ ಉಪನಯನ ಸಂಸ್ಕಾರ ಮಾಡಿ ಅವನ ತಂದ ದೊಡ್ಡ ಜನಿವಾರ ತೊಡಿಸಿದ್ದರು. ಜಪ್ಪಯ್ಯ ಎಂದರೂ ಗಾಯತ್ರಿಯೂ ಸೇರಿದಂತೆ ಒಂದೇ ಒಂದು ಮಂತ್ರ ಸುಧೀರಕೃಷ್ಣನ ನಾಲಿಗೆಯಲ್ಲಿ ಹೊರಳಲಿಲ್ಲ. ಅಪ್ಪ ಸೇದಿ ಎಸೆದ ಮೋಟು ಬೀಡಿಗಳನ್ನು ಸಂಗ್ರಹಿಸಿ ಬಚ್ಚಲಿಗೆ ಕೊಂಡು ಹೋಗಿ ಬೆಂಕಿ ತಾಗಿಸಿ ತುಟಿಗಿಟ್ಟು ಸೇದಿ ಚಿತ್ರವಿಚಿತ್ರಾಕಾರಗಳಲ್ಲಿ ಹೊಗೆ ಬಿಡುವ ಕಲೆ ಮಾತ್ರ ಬಹಳ ಬೇಗ ಅವನಿಗೆ ಸಿದ್ಧಿಸಿಬಿಟ್ಟಿತು. ಒಮ್ಮೆ ಅದೇನೋ ರಾದ್ಧಾಂತ ಮಾಡಿ ಹಾಕಿದಾಗ ಅಪ್ಪ ವಿಪರೀತ ಬೈದದ್ದಕ್ಕೆ ಸಿಟ್ಟಾಗಿ ಮುಳಿಹುಲ್ಲಿನ ಚಾವಣಿಯ ಬಚ್ಚಲು ಕೊಟ್ಟಿಗೆಗೆ ಬೆಂಕಿಕೊಟ್ಟು ಓಡಿಹೋದವನನ್ನು ಸ್ವಯಂ ದೊಡ್ಡ ಮುಂಡಾಸು ಹೊನ್ನಪ್ಪ
ಗೌಡರೇ ಹುಡುಕಿ ಕರಕೊಂಡು ಬಂದು ತಂದೆ ಮಗನ ನಡುವೆ ತಾತ್ಕಾಲಿಕ ದ್ವಿಪಕ್ಷೀಯ ಶಾಂತಿ ಒಪ್ಪಂದ ಏರ್ಪಡಿಸಿದ್ದರು. ಹೊನ್ನಪ್ಪ ಗೌಡರ ಎರಡನೇ ಮಗ ದಿನೇಶ ಸುಧೀರಕೃಷ್ಣನ ಸಮವಯಸ್ಕ, ದಿನೇಶನ ಸ್ನೇಹಿತನಾಗಿ ಸುಧೀರಕೃಷ್ಣ ಗೌಡರ ಮನೆಯಲ್ಲೇ ಠಿಕಾಣಿ ಹೂಡ ತೊಡಗಿದ. ಮೀನಿನಿಂದ ಆರಂಭಿಸಿ ಏಡಿ, ಆಮೆ, ಕಾಡುಕೋಳಿ, ಕೊಕ್ಕರೆ, ಚಣಿಲ್, ಪಾಂಚ, ಮೊಲ, ಹಂದಿ, ಬರಿಂಕ, ಪೊಟ್ಟಪಕ್ಕಿ, ಗಿಡುಗ, ಹದ್ದು, ಕೊಕ್ಕರೆ, ಜಿಂಕೆ, ಕಡವೆ ಎಂದು ಗೌಡರು ಬೇಟೆಯಾಡಿ ತರುತ್ತಿದ್ದ ಸಕಲ ಸರೀಸೃಪ, ಜಲಚರ, ಉಭಯವಾಸಿ ಖಗಮೃಗ ಸಂಕುಲಗಳ ರುಚಿ ನೋಡಿ ನೋಡಿ ಗೌಡರನ್ನು ಆರಾಧಿಸತೊಡಗಿದ. ಗೌಡರು ಕೋವಿ ಹಿಡಿದು ಹೊರಟರೆ ಸುಧೀರಕೃಷ್ಣ ಬಾಳುಕತ್ತಿ ಹಿಡಿದು ಅವರಿಗೆ ಬೇಟೆಯ ಸಾಥಿಯಾದ. ಗೌಡರು ಒಮ್ಮೊಮ್ಮೆ ಕೊಡುವ ಭಟ್ಟಿಸಾರಾಯಿಯನ್ನು ತಾನೂ ಸೇವಿಸಿ ಬ್ರಹ್ಮಾನಂದದಲ್ಲಿ ತೇಲಲು ಕಲಿತ. ದೊಡ್ಡ ಮುಂಡಾಸು ಹೊನ್ನಪ್ಪ ಗೌಡರು ಅವನಿಗೆ ಸೂದ್ರ ಮಾಣಿಯೆಂದು ಹೆಸರಿಟ್ಟು ಕಪಿಲಳ್ಳಿಯಲ್ಲಿ ಜಗತ್ ಪ್ರಸಿದ್ಧನನ್ನಾಗಿ ಮಾಡಿಬಿಟ್ಟರು.

ಅಪ್ಪನ ಭಯದಿಂದ ಒಮ್ಮೊಮ್ಮೆ ಅವನು ಶಾಲೆಗೆ ಹೋದರೆ, ‘ಇವತ್ತು ಹುಣ್ಣಿಮೆಯಾ, ಅಮಾವಾಸ್ಯೆಯಾ’ ಎಂಬ ಪ್ರಶ್ನೆ ಕೇಳಿ ಮುಖ್ಯೋಪಾಧ್ಯಾಯ ನಾರಾಯಣ ರಾಯರು ಅವನನ್ನು ಕೆಕ್ಕರುಗಣ್ಣುಗಳಿಂದ ಸ್ವಾಗತಿಸುತ್ತಿದ್ದರು. ಅಲ್ಲಿನ ಲೆಕ್ಕ, ವಿಜ್ಞಾನ ಮತ್ತು ಸಮಾಜಗಳು ಅವನ ಪಾಲಿಗೆ ಅಪ್ಪ ಹೇಳಿಕೊಡುತ್ತಿದ್ದ ಮಂತ್ರಗಳಿಗಿಂತಲೂ ಭಯೋತ್ಪಾದಕ ಸಾಧನಗಳಾಗಿ ಗೋಚರಿಸತೊಡಗಿದವು. ಕಪಿಲಳ್ಳಿಯಲ್ಲಿದ್ದದ್ದು ಒಂದೇ ಶಾಲೆ ಮತ್ತು ಐದು ತರಗತಿಗಳಿಗೆ ಒಬ್ಬರೇ ಮೇಸ್ಟ್ರು. ಕಪಿಲಳ್ಳಿಯ ಸರಕಾರಿ ಕಿರಿಯ ಪ್ರಾಥಮಿಕ ಏಕೋಪಾಧ್ಯಾಯ ಶಾಲೆಯಲ್ಲಿ ಒಂದನೆಯವರಿಗೆ ಎರಡನೆಯವರು, ಎರಡನೆಯವರಿಗೆ ಮೂರನೆಯವರು, ಮೂರನೆಯವರಿಗೆ ನಾಲ್ಕನೆಯವರು, ನಾಲ್ಕನೆಯವರಿಗೆ ಐದನೆಯವರು ಮತ್ತು ಐದನೆಯವರಿಗೆ ಸ್ವಯಂ ಮುಖ್ಯೋ ಪಾಧ್ಯಾಯ ನಾರಾಯಣರಾಯರು ಕಲಿಸಿಕೊಡುತ್ತಿದ್ದರು. ಸುಧೀರಕೃಷ್ಣನನ್ನು ಹಾಗೂ ಹೀಗೂ ಐದರವರೆಗೆ ತಳ್ಳಿಕೊಂಡೇ ಬಂದ ನಾರಾಯಣರಾಯರು ಅವನಿಗೆ ಸ್ವತಃ ತಾವೇ ಪಾಠ ಹೇಳಿ ಕೊಡುವಾಗ “ಆಹಾ! ತಲೆಯೆಂದರೆ ಇಷ್ಟು ಗಟ್ಟಿ ಇರಬೇಕು. ಇದರೊಳಗೆ ಏನೇನೂ ಪ್ರವೇಶಿಸಲಾರದು. ಹೋದದ್ದು ಎಂದಿಗೂ ಹೊರಬಾರದು” ಎಂದು ನಾಗರಬೆತ್ತ ಪ್ರಯೋಗಿಸಿ ಸುಧೀರಕೃಷ್ಣನಿಗೆ ಭರತನಾಟ್ಯ ಕಲಿಸುತ್ತಿದ್ದರು. ಈಗ ಸುಧೀರಕೃಷ್ಣನ ಪಾಲಿಗೆ ಶಾಲೆ ಕುಂಭೀಪಾಕ ನರಕವಾಗಿ ನಾರಾಯಣ ರಾಯರು ಸಾಕ್ಷಾತ್ ಯಮಧರ್ಮ ರಾಯನಂತೆ ಕಂಗೊಳಿಸತೊಡಗಿದರು.

ಪ್ರತಿದಿನ ಸಹಸ್ರ ನಾಮಾರ್ಚನೆಯೊಡನೆ ನಾಗರಬೆತ್ತದಿಂದ ತ್ರಿಕಾಲ ಪೂಜೆ ಮಾಡಿಸಿಕೊಳ್ಳುತ್ತಿದ್ದ ಸುಧೀರಕೃಷ್ಣ, ನಾರಾಯಣ ರಾಯರಿಗೆ ಮರೆಯಲಾಗದ ಪಾಠ ಕಲಿಸುವುದು ಹೇಗೆಂದು ತಿಳಿಯದೆ,
ಹಗಲಿರುಳು ಚಿಂತಿಸಿ ಚಿಂತಿಸಿ ಹಣ್ಣಾಗಿ ಕೊನೆಗೊಂದು ದಿನ ಅದೇ ಸರಿಯೆಂದು ದೃಢ ನಿರ್ಧಾರಕ್ಕೆ ಬಂದ. ಮರುದಿನ ಶಾಲಾ ಹಿಂಬದಿಯ ಸುಣ್ಣದ ಗೋಡೆ ‘ನಾರಾಯಣ ಅಹಲೆ, ನಾರಾಯಣ ಅಹಲೆ,
ನಾರಾಯಣ ಅಹಲೆ, ನಾರಾಯಣ ಅಹಲೆ’ ಎಂಬ ಹೆಸರುಗಳಿಂದ ತುಂಬಿ ತುಳುಕುತ್ತಿತ್ತು. ಕಮ್ಯುನಿಸ್ಟು ಗಿಡದ ಹಸಿರು ರಸದಿಂದ ಕೊರೆದ ಆ ಅಕ್ಷರಗಳು ನಾರಾಯಣ ರಾಯರ ಯಾವ ಪ್ರಯತ್ನಕ್ಕೂ ಜಗ್ಗದೆ ಶಿಲಾಶಾಸನದಂತೆ ಉಳಿದು ಬಿಟ್ಟು ತಾನು ಉಳಕೊಂಡಿದ್ದ ಮನೆಯೊಡೆಯ ಗೋಪಾಲಕೃಷ್ಣ ಪರಾಂಜಪೆಯವರ ಪ್ರಾಯಪ್ರಬುದ್ಧ ಅವಿವಾಹಿತೆ ಮಗಳು ಅಹಲ್ಯೆಯೊಡನೆ ತನ್ನ ಹೆಸರನ್ನು ಗೋಡೆಯಲ್ಲಿ ಕೆತ್ತಿದ್ದ ಜಕಣಾಚಾರಿಯನ್ನು ಕಂಡುಹಿಡಿಯುವುದು ಹೇಗೆಂದು ನಾರಾಯಣ ರಾಯರು ತಲೆಗೆ ಕೈಹೊತ್ತು ಕೂತುಬಿಟ್ಟರು.

ಕೊನೆಗೆ ನಾರಾಯಣ ರಾಯರು ಇಡೀ ಶಾಲೆಗೆ ಶಾಲೆಯನ್ನೇ ಆಟದ ಮೈದಾನಕ್ಕಿಳಿಸಿದರು. “ಶಾಲೆಯ ಹಿಂಬದಿ ಗೋಡೆಯಲ್ಲಿ ಏನೇನೋ ಬರೆದು ಹಾಕಿದ್ದು ನಿಮ್ಮಲ್ಲೇ ಯಾರೋ ಒಬ್ಬ. ಯಾರು ಬರೆದದ್ದೆಂದು ಹೇಳಿದರೆ ಪೆಟ್ಟು ಬೀಳುವುದಿಲ್ಲ. ಇಲ್ಲದಿದ್ದರೆ ಎಲ್ಲರ ಬೆನ್ನು ಹುಡಿಯಾಗುತ್ತದೆ.”

ನಾರಾಯಣ ರಾಯರ ಭಯೋತ್ಪಾದನೆಗೆ ಯಾರೂ ಮಿಸುಕಾಡಲಿಲ್ಲ. ನಾರಾಯಣ ರಾಯರು ಸಿಟ್ಟಿನಿಂದ ಕೆಂಪಾಗಿ ನಡುಗುತ್ತಾ, “ಮಾಡಬಾರದ್ದನ್ನು ಮಾಡಿ ಹಾಕುವಾಗ ಇದ್ದ ಧೈರ್ಯ ಈಗೆಲ್ಲಿ ಹೋಯಿತು? ಯಾರವ ಬರೆದದ್ದು? ಅಪ್ಪನಿಗೆ ಹುಟ್ಟಿದವನಾದರೆ ಎದುರು ಬರಲಿ” ಎಂದು ಗರ್ಜಿಸಿದರು.

ಈಗಲೂ ಮಕ್ಕಳು ಸುಮ್ಮನೆ ನಿಂತು ಅವರ ಹಾವಭಾವ ಭಂಗಿಗಳನ್ನು ನೋಡುತ್ತಿದ್ದರು. “ನೀವು ಹೇಳುವುದಿಲ್ಲ ಅಲ್ವಾ? ಈಗ ನೀವು ಹೇಳದಿದ್ದರೆ ಇವತ್ತಿನಿಂದ ಶಾಲೆಯನ್ನು ಮುಚ್ಚಿಸಿಬಿಡುತ್ತೇನೆ. ಮತ್ತೆ ನಿಮ್ಮ ಜನ್ಮಕ್ಕೆ ಶಾಲೆಯೇ ಇರುವುದಿಲ್ಲ.”

ನಾರಾಯಣರಾಯರ ಈ ಮಾತುಗಳಿಂದ ಮಕ್ಕಳಿಗೆ ಅತ್ಯಾನಂದವಾಗಿ ಅವರ ಮುಖಗಳು ಪ್ರಕಾಶಮಾನವಾಗಿ ಅರಳಿದವು, ಪೆಚ್ಚಾದ ನಾರಾಯಣ ರಾಯರು ಕೊನೆಗೆ ತಮ್ಮ ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ಪ್ರಯೋಗಿಸಿದರು. ಬರೆದದ್ದು ಯಾರೆಂದು ಗೊತ್ತಿದ್ದೂ ಹೇಳದಿದ್ದರೆ ಕಪಿಲೇಶ್ವರನ ಮೇಲಾಣೆ.”

ಆಣೆಗೆ ಹೆದರಿ ನಡುಗಿ ದೊಡ್ಡ ಮುಂಡಾಸು ಹೊನ್ನಪ್ಪ ಗೌಡರ ಮಗ ದಿನೇಶ ಬಾಯಿಬಿಟ್ಟ. ಕೋಪದಿಂದ ಕಣ್ಗೇ ಕಾಣದಂತಾಗಿ ಹೋಗಿದ್ದ ನಾರಾಯಣ ರಾಯರು ಸುಧೀರಕೃಷ್ಣನನ್ನು ದರದರನೆ ಒಳಗೆ ಎಳಕೊಂಡು ಹೋಗಿ ಕಣ್ಣು, ಮೂಗು, ಬಾಯಿ ಎಂದು ನೋಡದೆ ನಾಗರಬೆತ್ತದಿಂದ ದನಕ್ಕೆ ಬಡಿವಂತೆ ಬಡಿದರು. ಒಂದು ನಾಗರಬೆತ್ತ ಪುಡಿ ಪುಡಿಯಾಗಿ ಇನ್ನೊಂದನ್ನು ಅವರು ಹುಡುಕತೊಡಗಿದಾಗ ಸುಧೀರಕೃಷ್ಣ ಸರಕ್ಕನೆ ನುಸುಳಿ ಓಡಿಹೋದವನು ಮತ್ತೆಂದೂ ಶಾಲೆಯ ಮೆಟ್ಟಿಲು ಹತ್ತಲಿಲ್ಲ.

ಅಂದು ಸಂಜೆ ಜನಗಣಮನಕ್ಕೆ ಅರ್ಧ ಗಂಟೆಯಿದೆಯೆನ್ನುವಾಗ ನಾರಾಯಣ ರಾಯರನ್ನು ಕಾಣಲು ಧಿಮಿಗುಡುವ ಮುಖದ ಸುಧೀರಕೃಷ್ಣನ ಅಪ್ಪ ದಾಪುಗಾಲು ಹಾಕುತ್ತಾ ಬಂದರು. “ಅವನನ್ನು ಏನು ಯಾರೂ ಕೇಳುವವರಿಲ್ಲದ ಬೀಡಾಡಿ ದನ ಎಂದುಕೊಂಡಿದ್ದೀರಾ? ನಿಮ್ಮ ಏಟಿನಿಂದ ಮೈಯೆಲ್ಲಾ ದಪ್ಪಗಾಗಿ ವಿಪರೀತ ಜ್ವರ ಬಂದು ಮಲಗಿ ಬಿಟ್ಟಿದ್ದಾನೆ. ಅವನಿಗೇನಾದರೂ ಹೆಚ್ಚು ಕಡಿಮೆಯಾದರೆ ನಿಮ್ಮ ಕೈಕಾಲು ಮುರಿದು ತಪಸ್ವಿನಿಗೆ ಎಸೆದು ಬಿಡುತ್ತೇನೆ” ಎಂದು ಹೂಂಕರಿಸಿದರು.

“ಮೊದಲು ನಿಮ್ಮ ಮಗನಿಗೆ ಬುದ್ದಿ ಹೇಳಿ. ಬನ್ನಿ, ನಿಮ್ಮ ಮಗ ಏನು ಬರೆದಿದ್ದಾನೆಂದು ನೀವೇ ನೋಡಿ.”

ಸುಧೀರಕೃಷ್ಣನ ಅಪ್ಪ ನೋಡಿದರು. ಅವರ ಮುಖದಲ್ಲಿದ್ದ ಕೋಪವೆಲ್ಲಾ ಮಾಯವಾಗಿ ಪ್ರಸನ್ನವದನರಾದರು. ಇದು ನಮ್ಮ ಸುಧೀರಕೃಷ್ಣನ ಅಕ್ಷರವಾ? ಅವನ ಕೈಬರಹ ಇಷ್ಟು ಚೆನ್ನಾಗಿದೆಯೆಂದು ನನಗೆ ಗೊತ್ತಿರಲೇ ಇಲ್ಲ ನೋಡಿ. ನಾರಾಯಣ ಅಹಲೆ, ನಾರಾಯಣ ಅಹಲೆ, ಹೆಹ್ಹೆ, ಅಹಲ್ಯೆಗೆ ಅಡಿ ಒತ್ತು ಕೊಟ್ಟಿಲ್ಲ. ಆದರೆ ನಾರಾಯಣ ರಾಯರೇ, ಹುಡುಗಿ ಅಪ್ಪಟ ಬಂಗಾರ. ಈ ಮೂತಿಗೆ ಮಾತ್ರ ಪರಾಂಜಪೆಯವರು ಖಂಡಿತಾ ಅವಳನ್ನು ಕೊಡಲಿಕ್ಕಿಲ್ಲ″ ಎಂದು ಚುಚ್ಚಿದರು.

ನಾರಾಯಣ ರಾಯರಿಗೆ ಕೋಪ ಬಂದು, “ಮಕ್ಕಳ ಎದುರು ಆಡುವ ಮಾತಾ ಇದು? ಇಂಥ ಅಪ್ಪನಿಗೆ ಅಂಥ ಮಗನೇ ಹುಟ್ಟುವುದು” ಎಂದಾಗ ಸುಧೀರಕೃಷ್ಣನ ಅಪ್ಪನಿಗೂ ಸಿಟ್ಟು ಏರಿ, “ಇಂಥ ಮೇಸ್ಟ್ರಿಗೆ ಅಂಥ ಶಿಷ್ಯ. ನೀವು ಕಲಿಸಿದ್ದು ಸರಿ ಇರುತ್ತಿದ್ದರೆ ನಮ್ಮ ಹುಡುಗ ಅಹಲ್ಯೆಗೆ ಅಡಿ ಒತ್ತು ಕೊಡದೆ ಬಿಡುತ್ತಿರಲಿಲ್ಲ. ಅಷ್ಟೂ ಕಲಿಸಲಾಗಲಿಲ್ಲ ನಿಮ್ಮ ಯೋಗ್ಯತೆಗೆ” ಎಂದು ತಿವಿದರು. “ನಿಮ್ಮದು ತೀರಾ ಅತಿಯಾಯಿತು. ನನ್ನದು ತಪ್ಪು ಎಂದಾದರೆ ಕೇಳೋದಕ್ಕೆ ಮೇಲಿನವರು ಇದ್ದಾರೆ. ನೀವು ಬರೆದು ಹಾಕಿ, ನಿಮ್ಮ ಎಲುಬಿಲ್ಲದ ನಾಲಿಗೆಯಿಂದ ಏನೇನೋ ಹೇಳಿ ಶಾಲೆಯ ಶಿಸ್ತು ಹಾಳು ಮಾಡಿದರೆ ನಾನು ಪೋಲೀಸು ಕಂಪ್ಲೇಂಟು ಕೊಟ್ಟು ನಿಮ್ಮನ್ನು ಅರೆಸ್ಟ್ ಮಾಡಿಸಬೇಕಾಗುತ್ತದೆ” ಎಂದು ಧಮಕಿ ಹಾಕಿಬಿಟ್ಟರು.

“ನಿಮ್ಮ ಶಿಸ್ತಿಗೆ ಬೈಹುಲ್ಲು. ನಿಮ್ಮನ್ನು ಬಿಡುತ್ತೇನೆಂದು ತಿಳಿದುಕೊಂಡಿದ್ದೀರಾ? ನಿಮಗೆ ಬುದ್ಧಿ ಕಲಿಸದಿದ್ದರೆ ನಾನು ಅಪ್ಪನಿಗೆ ಹುಟ್ಟಿದ ಮಗನಲ್ಲ” ಎಂದು ಸುಧೀರಕೃಷ್ಣನ ಅಪ್ಪ ನೆಲಕ್ಕೆ ಕೈ ಬಡಿದು ಭಯಾನಕ ಪ್ರತಿಜ್ಞೆ ಮಾಡಿ ಮಕ್ಕಳಲ್ಲಿ ಭೀತಿ ಮೂಡಿಸಿ ಹೊರಟು ಹೋಗಿದ್ದರು. ಇಡೀ ಪ್ರಕರಣ ಕಪಿಲಳ್ಳಿ ಜನರ ಬಾಯಲ್ಲಿ ವರ್ಣರಂಜಿತ ವಾಕ್ಚಿತ್ರವಾಗಿ ಮೌಖಿಕ ಪರಂಪರೆಯಾಗಿ ಮುಂದುವರಿಯಿತು. ಅದಾಗಿ ಒಂದೇ ತಿಂಗಳಲ್ಲಿ ನಾರಾಯಣ ರಾಯರು ತಮ್ಮ ಊರಿಗೇ ವರ್ಗ ಮಾಡಿಸಿಕೊಂಡು ಹೋಗಿಬಿಟ್ಟರು. ತನ್ನ ಹುಟ್ಟಿನ ಮೇಲೆಯೇ ಶಪಥ ಮಾಡಿ ನೆಲಕ್ಕೆ ಕೈ ಬಡಿದಿದ್ದರೂ ಸುಧೀರಕೃಷ್ಣನ ಅಪ್ಪ ನಾರಾಯಣ ರಾಯರಿಗೆ ಬುದ್ಧಿ ಕಲಿಸುವ ಯಾವ ಕಾರ್ಯಕ್ರಮವನ್ನೂ ಹಾಕಿಕೊಂಡಿರಲಿಲ್ಲ. ಅಂಥ ಹಿನ್ನೆಲೆಯ ಸುಧೀರಕೃಷ್ಣ ಈಗ ಡಾಕ್ಟ್ರು!

ದೊಡ್ಡ ಮುಂಡಾಸು ಹೊನ್ನಪ್ಪ ಗೌಡರು ಸುಧೀರಕೃಷ್ಣನ ಆಸ್ಪತ್ರೆಗೆ ಬಂದಾಗ ಅಲ್ಲಿ ಒಂದು ನರಪಿಳ್ಳೆಯೂ ಇರಲಿಲ್ಲ. ಒಳಹೊಕ್ಕರೆ ಒಂದು ಟೇಬಲ್ಲು ಮೇಲೆ ನಾಲ್ಕು ಬಾಟಲಿ ಇಟ್ಟುಕೊಂಡು ಸುಧೀರಕೃಷ್ಣ ಕೂತಿದ್ದ. “ಬನ್ನಿ ಬನ್ನಿ, ದೊಡ್ಡ ಮುಂಡಾಸು ಹೊನ್ನಪ್ಪ ಗೌಡರಲ್ಲವೆ? ನೀವೇ ನನ್ನ ಪ್ರಥಮ ಪೇಷಂಟು.”

ತನ್ನ ಗುರುತು ಹಿಡಿದು ಸುಧೀರಕೃಷ್ಣ ಮಾತಾಡಿಸಿದ್ದಕ್ಕೆ ದೊಡ್ಡ ಮುಂಡಾಸು ಹೊನ್ನಪ್ಪ ಗೌಡರಿಗೆ ಹಿಗ್ಗಾಯಿತು. “ಡಾಕ್ಟ್ರಿಗೆ ನನ್ನ ನೆನಪುಂಟಲ್ಲ ಹೆ ಹೆ” ಎಂದು ಗಂಟಲು ಸರಿಪಡಿಸಿ ಕೊಂಡರು. “ಉಂಟಾ ಗೌಡ್ರೆ, ನಿಮ್ಮ ಸೂದ್ರ ಮಾಣಿಯನ್ನು ನೀವು ಡಾಕ್ಟ್ರೇ ಅಂತ ಕರೆಯೋದಾ? ನಿಮ್ಮ ಮನೆಯ ಮಾಂಸದೂಟದ ಋಣ ನಾನು ಏಳೇಳು ಜನ್ಮದಲ್ಲಿ ತೀರಿಸಲಿಕ್ಕುಂಟಾ? ನೀವು ದಿನೇಶನಿಗಿಂತ ಹೆಚ್ಚಾಗಿ ನನ್ನನ್ನು ನೋಡಿಕೊಂಡೋರು. ನಿಮ್ಮ ಬಾಯಿಂದ ಡಾಕ್ಟ್ರು, ನೀವು ಎಂದು ಬರಬಾರದು. ನೀವು ಮಾತಾಡುವಾಗಲೇ ನನಗೆ ಗೊತ್ತಾಯಿತು, ನಿಮ್ಮ ಕಫದೋಷ ನಿವಾರಣೆಯಾಗಲಿಲ್ಲ ಎಂದು ನೋಡುವಾ, ನನ್ನಿಂದೇನಾದರೂ ಸಹಾಯವಾದೀತಾ ಅಂತ.”

ಅವನು ಮೇಜಿನ ಮೇಲಿನ ಬಾಟಲಿಗಳಲ್ಲಿ ಒಂದರಿಂದ ಲೋಟಾಕ್ಕೆ ಮದ್ದನ್ನು ಬಗ್ಗಿಸಿ ಅದಕ್ಕೊಂದಷ್ಟು ನೀರು ಬೆರೆಸಿ ಅವರಿಗೆ ಕೊಟ್ಟು ನಿಧಾನವಾಗಿ ಗುಟುಕರಿಸಲು ಹೇಳಿದ. ಗೌಡರಿಗೆ ಮದ್ದಿನ ಒಗರು ಚಿತ್ರವಿಚಿತ್ರವಾಗಿ, “ಏನಪ್ಪಾ ಸೂದ್ರಮಾಣಿ, ಇಂಥದ್ದನ್ನು ನನ್ನ ಆಯುಷ್ಯದಲ್ಲಿ ಕುಡಿದವನಲ್ಲ. ನನ್ನನ್ನು ಮೇಲಕ್ಕೆ ಕಳಿಸಿ ಬಿಡುತ್ತೀಯೋ ಹೇಗೆ? ಹೆ ಹೆ” ಎಂದು ನಕ್ಕಾಗ, “ಈಗ ನೇರ ಮನೆಗೆ ಹೋಗಿ ಚೆನ್ನಾಗಿ ಹೊದ್ದು ಮಲಕ್ಕೊಳ್ಳಿ ಗೌಡ್ರೆ, ಬೇರೆಲ್ಲಿಗೂ ಹೋಗಬೇಡಿ. ನಾಳೆ ಬೆಳಗ್ಗೆ ಬಂದು ಏನಾಯಿತೆಂದು ಹೇಳಿ” ಎಂದು ತುರ್ತು ಮಾಡಿ ಗೌಡರನ್ನು ಕಳಿಸಿಕೊಟ್ಟ.

ಮರುದಿನ ದೊಡ್ಡ ಮುಂಡಾಸು ಹೊನ್ನಪ್ಪ ಗೌಡರು ತೀರಾ ಉಲ್ಲಸಿತರಾಗಿ ಸುಧೀರಕೃಷ್ಣನ ಆಸ್ಪತ್ರೆಗೆ ಬಂದರು. ಅಲ್ಲಯ್ಯಾ ಸೂದ್ರ ಮಾಣಿ, ಅದೇನು ಗಾರುಡಿಯೋ ನಿನ್ನ ಮದ್ದಿಗೆ? ಮನೆಗೆ ಮುಟ್ಟುವಾಗ ತೂರಾಡತೊಡಗಿದ್ದೆ. ಹೋದವನೇ ಅವಳಿಗೆ ಹೇಳಿ ನೀನಂದಂತೆ ಹೊದ್ದು ಕೊಂಡು ಮಲಗಿದವನಿಗೆ ಎಚ್ಚರವಾದದ್ದೇ ಈಗ ಸ್ವಲ್ಪ ಹೊತ್ತಿಗೆ ಮುಂಚೆ. ಎದ್ದವನೇ ಎಂದಿನ ಅಭ್ಯಾಸ ಬಲದಿಂದ ಕ್ಯಾಕರಿಸಿ ಕಫ ಉಗುಳಲು ನೋಡಿದರೆ ಛಟ್ಟ್! ಕಫದ ಎಡ್ರಸ್ಸೇ ಇಲ್ಲ. ನೀನು ಕಪಿಲಳ್ಳಿಯ ಧನ್ವಂತರಿಯಾಗಿ ಬಿಟ್ಟೆ ನೋಡು. ಭೇಷ್” ಎಂದು ಹೊಗಳಿದರು. ಆದರೂ ಒಂದು ಡವುಟ್ಟು, ಯಾರಿಂದಲೂ ಗುಣಪಡಿಸಲಾಗದ ಕಪಿಲಳ್ಳಿಯ ದೊಡ್ಡ ಮುಂಡಾಸು ಹೊನ್ನಪ್ಪ ಗೌಡರ ಕಫದೋಷ ನಿನ್ನಿಂದ ಗುಣವಾದದ್ದು ಮತ್ತು ನೀನು ಡಾಕ್ಟರನಾದದ್ದು ಹೇಗೆ?”

ಸುಧೀರಕೃಷ್ಣ ಧ್ವನಿ ತಗ್ಗಿಸಿದ. “ನೀವು ತಿನ್ನಿಸಿದ ಮಾಂಸದ ಋಣ ತೀರಿಸಲಿಕ್ಕಾದರೂ ನಾನು ನಿಮ್ಮಲ್ಲಿ ಸತ್ಯ ಹೇಳಲೇಬೇಕು ನೋಡಿ. ಆದರೆ ನೀವಿದನ್ನು ಗುಟ್ಟಾಗಿ ಇಡುತ್ತೇನೆಂದು ಮಾತು ಕೊಡಬೇಕು. ಆ ಮಾತು ಮಾತ್ರ ನಾರಾಯಣ ರಾಯರೆದುರು ಭೂಮಿಗೆ ಕೈಬಡಿದು ನನ್ನಪ್ಪ ಮಾಡಿದ ಪ್ರತಿಜ್ಞೆಯಂತಾಗಬಾರದು.”

ಗೌಡರು ಗಹಗಹಿಸಿ ನಗುತ್ತಾ, “ಅಹಲ್ಯೆಗೆ ಅಡಿ ಒತ್ತು ಕೊಡಲಾಗದ ಮಗನ ಅಪ್ಪನಲ್ಲವೇ ಅವರು? ಆದದ್ದೆಲ್ಲಾ ಒಳ್ಳೇದಕ್ಕೆ, ನಿನ್ನಪ್ಪನೆಲ್ಲಾದರೂ ಸಿಟ್ಟಿನ ಭರದಲ್ಲಿ ಮೇಸ್ಟ್ರ ಮೇಲೆ ಕೈ ಮಾಡುತ್ತಿದ್ದರೆ ಕಪಿಲಳ್ಳಿ ಏನು ಹೇಳುತ್ತಿತ್ತು? ಬಿಡು ಆ ಸುದ್ದಿ. ನಿನ್ನ ಗುಟ್ಟನ್ನು ಕಪಿಲೇಶ್ವರನಾಣೆಗೂ ಯಾರಿಗೂ ಹೇಳುವುದಿಲ್ಲ” ಎಂದು ಅವನ ಕೈ ಹಿಡಕೊಂಡರು.

“ಸತ್ಯ ಹೇಳುತ್ತೇನೆ ಗೌಡ್ರೆ, ಇದು ನೀವು ನನ್ನನ್ನು ದಿನೇಶನ ಹಾಗೆ ನೋಡಿಕೊಂಡದ್ದಕ್ಕೆ ಹೇಳುವುದು. ಅಹಲ್ಯೆಯ ಅಡಿ ಒತ್ತು ಪ್ರಕರಣವಾದ ಮೇಲೆ ನನಗೆ ಊರಲ್ಲಿ ನಿಲ್ಲಲು ಮನಸ್ಸಾಗಲಿಲ್ಲ. ಮಾಡಿದ್ದು ತಪ್ಪು ಎಂದು ಮನಸ್ಸು ಹೇಳುತ್ತಿತ್ತು. ನನ್ನ ಗ್ರಹಚಾರಕ್ಕೆ ಅಹಲ್ಯೆ ನಮ್ಮ ಮನೆಗೇ ಬಂದು ತಾಯಿಯೆದುರು ಕಣ್ಣೀರು ಹಾಕಿದ್ದಕ್ಕೆ ತಾಯಿಯಿಂದಲೂ ದಿನಾ ಸಹಸ್ರ ನಾಮಾರ್ಚನೆಯಾಗೋದು. ಮಕ್ಕಳೆದುರು ನೆಲಕ್ಕೆ ಕೈ ಬಡಿದು ಪ್ರತಿಜ್ಞೆ ಮಾಡಿ ಬಂದ ಅಪ್ಪನ ಮನಸ್ಸೂ ಬದಲಾಗಿ “ಹಾಳಾದವ. ಈ ಊರಲ್ಲಿ ಈವರೆಗೆ ನಡೆಯದ್ದು ಇವನಿಂದಾಗಿ ನಡೆದು ಹೋಯಿತು. ಮೇಸ್ಟ್ರು ಬಯ್ಯೋದು, ಬಡಿಯೋದು ಮಕ್ಕಳ ಒಳ್ಳೆದಿಕ್ಕೇ ಎನ್ನುವುದು ಗೊತ್ತಿದ್ದೂ ಕೆಟ್ಟ ಗಳಿಗೆಯಲ್ಲಿ ನಾರಾಯಣ ರಾಯರಿಗೆ ಬೈದುಬಿಟ್ಟೆ. ಇದೊಂದು ಶನಿ ಯಾಕೆ ಹುಟ್ಟಿತೋ” ಎಂದು ದಿನಕ್ಕೊಮ್ಮೆಯಾದರೂ ನನಗೆ ಬಯ್ಯೋರು. ನನಗಾಗ ಹದಿಮೂರೋ, ಹದಿನಾಲ್ಕೋ ಇರಬಹುದು. ದಿನಾ ಬೈಗಳು ಕೇಳಿ ಕೇಳಿ ಊರು ಬಿಟ್ಟೋಡುವಾ ಎಂದಾದರೂ ಗುರುತು ಪರಿಚಯವಿರದ ಯಾವುದೋ ಊರಿಗೆ ಹೋಗಿ ಪರ್ದೇಸಿಯಾಗಲು ಧೈರ್ಯವೇ ಬರಲಿಲ್ಲ. ಆ ವರ್ಷ ಕಪಿಲಳ್ಳಿಗೊಬ್ಬ ಕಾವಿಧಾರಿ ಜಂಗಮ ಬಂದಿದ್ದ. ಅವನ ಹಿಂದೆಯೇ ಹೋಗಿ ಏನು ಮಾಡುತ್ತಾನೆಂದು ನೋಡುವುದು ನನ್ನ ದಿನಚರಿಯಾಯಿತು. ಅವನು ಊರಲ್ಲಿ ತಿರುಪೆ ಎತ್ತಿ ಕಪಿಲೇಶ್ವರನ ದೇವಾಲಯದ ಗೋಪುರದೆದುರು ಮೂರು ಕಲ್ಲು ಹಾಕಿ ಒಲೆ ಮಾಡಿ ತಾನೇ ಬೇಯಿಸಿ ತಿಂದು, ಗೋಪುರದಲ್ಲೇ ಮಲಗಿಕೊಳ್ಳೋನು. ಒಂದು ರಾತ್ರೆ ಅಲ್ಲೇ ಅವನನ್ನು ಭೇಟಿಯಾಗಿ ನನ್ನ ಮನೋಸ್ಥಿತಿಯನ್ನು ವಿವರಿಸಿದೆ.” “ನನ್ನದೇ ಒಂದು ಮಠ ಇದೆ. ಸ್ವಲ್ಪ ಆಸ್ತಿಯೂ ಇದೆ. ಹುಟ್ಟಿದ ಊರಲ್ಲೇ ಇದ್ದರೆ ಪ್ರಪಂಚ ಗೊತ್ತಾಗೋದು ಹೇಗೆ? ಅದಕ್ಕೆ ವರ್ಷಕ್ಕೊಮ್ಮೆ ಒಂದು ವಾರ ಯಾವುದಾದರೊಂದು ಊರಲ್ಲಿದ್ದು ಅನುಭವ ಹೆಚ್ಚಿಸೋದು ನನ್ನ ಅಭ್ಯಾಸ ನನ್ನ ಜತೆ ಬರುತ್ತೀಯೆಂದಾದರೆ ಆ ಶಿವನಿಚ್ಛೆಯಂತಾಗುತ್ತದೆ” ಎಂದ. ಹಿಂದೆ ಮುಂದೆ ನೋಡದೆ ನಾನು ಹೊರಟೇ ಬಿಟ್ಟೆ.”

“ಅವನದು ಉತ್ತರ ಕರ್ನಾಟಕದ ಒಂದು ಹಳ್ಳಿ. ಶಿಕ್ಷಣದ ಗಂಧಗಾಳಿ ಇಲ್ಲದ ಅಲ್ಲಿನ ಜನರಿಗೆ ಈ ಜಂಗಮನ ಮಠವೇ ಶಾಲೆ, ಆಸ್ಪತ್ರೆ ಮತ್ತು ನ್ಯಾಯಾಲಯ. ನಮ್ಮ ಮಠಾಧೀಶರುಗಳು ಅವನಿಂದ ಕಲಿಯಬೇಕು. ಯಾರಾದರೂ ಪಾದಕ್ಕೆ ಬಿದ್ದರೆ, ‘ಶಿವನ ಪಾದಕ್ಕೆ ಬಿದ್ರೆ ಸಾಕಪ್ಪಾ, ಈ ಭವಿಯ ಪಾದಕ್ಕಲ್ಲ’ ಎನ್ನೋನು. ಅವನ ಮಠದಲ್ಲಿ ವಾರಕ್ಕೊಮ್ಮೆ ಊರವರಿಗೆ ಅನ್ನದಾಸೋಹ. ಅಲ್ಲಿ ಪಂಕ್ತಿ ಭೇದವಿಲ್ಲ. ಊಟವಾದ ಮೇಲೆ ಒಂದು ಧಾರ್ಮಿಕ ಸಭೆ. ಅದಕ್ಕೆ ಅಕ್ಕಪಕ್ಕದ ಊರುಗಳಿಂದ ಮಠಾಧೀಶರುಗಳು ಬಂದು ಬಿಡೋರು. ಆದರೆ ಒಬ್ಬರೂ ಕೂತು ಆಶೀರ್ವಚನ ಮಾಡೋರಿಲ್ಲ. ಭಕ್ತಿಯೋಗಕ್ಕಿಂತ ಕರ್ಮಯೋಗ’ದೊಡ್ಡದು ಎನ್ನೋರು. ಕಷ್ಟದಲ್ಲಿರುವವರಿಗೆ ಸಹಾಯ ಮಾಡೋದೇ ಭಗವಂತನ ಸೇವೆ ಎಂದು ಆಡಿ ಮಾಡಿ ತೋರಿಸೋರು. ಎಲ್ಲರ ಜತೆ ನೆಲದಲ್ಲೇ ಕೂತು ಒಬ್ಬರು ಇನ್ನೊಬ್ಬರ ಮಾತನ್ನು ಕೇಳೋರು. ಅವರನ್ನು ನೋಡುವಾಗ ಮಠಾಧೀಶರೆಂದರೆ ಹಾಗೆ ದೀನದಲಿತರ ಮಧ್ಯೆ ಬದುಕಿ ಬಡವರ ಸೇವೆಯಲ್ಲಿ ಭಗವಂತನನ್ನು ಕಾಣುವಂತಾಗ ಬೇಕೆಂದು ನನಗೆ ಈಗಲೂ ಅನ್ನಿಸೋದು.

“ಅವನಿಗೆ ಸಹಾಯಕನಾಗಿ ನಾನು ಸಣ್ಣಪುಟ್ಟ ರೋಗಗಳಿಗೆ ಸೊಪ್ಪು, ಬೇರು ಅರೆದು ಮದ್ದು ಮಾಡುವುದನ್ನು ಕಲಿತೆ. ಅಲ್ಲಿ ಶೂದ್ರ ಮತ್ತು ಅತಿಶೂದ್ರ ಹೆಂಗಸರನ್ನು ದೇವದಾಸಿಯರಾಗಿ ಮಾಡುವ ಸಂಪ್ರದಾಯವೊಂದಿದೆ. ಅಂಥ ಹೆಂಗಸರ ಸಂಪರ್ಕ ಮಾಡಿ ರೋಗ ಹತ್ತಿಸಿಕೊಂಡವರು ಇವನಲ್ಲಿ ಇಲಾಜಿಗಾಗಿ ಬರೋರು. ಅವರಿಗೆ ಇವನು ಗರ್ಭ ನಿರೋಧಕಗಳನ್ನು ಹಂಚುತ್ತಿದ್ದ. ಸನ್ಯಾಸಿಯಾದ ಇವನು ಅವನ್ನು ತರಲು ಸಂಕೋಚವಾಗಿ ತಾಲ್ಲೂಕು ಆರೋಗ್ಯ ಕೇಂದ್ರಕ್ಕೆ ನನ್ನನ್ನೇ ಅಟ್ಟುತ್ತಿದ್ದ. ನನಗೂ ಹೊಸದೊಂದು ಲೋಕದ ಪರಿಚಯವಾಯಿತು. ಆಚೆ ಕಡೆ ಹೋಳಿ ಹಬ್ಬ ಬಹಳ ಜೋರು. ಗಂಡು, ಹೆಣ್ಣು, ಮಕ್ಕಳು, ಮುದುಕರೆಂದು ನೋಡದೆ ಬಣ್ಣ ಎರಚಿ ಕುಡಿದು ತಿಂದು ಕಾಮದಹನ ಮಾಡೋರು. ಅದಾಗಿ ರಾಮರಸ ಕುಡ್ದು ಗಡದ್ದಾಗಿ ನಿದ್ದೆ ಹೊಡಿಯೋರು. ಅದನ್ನು ತಯಾರಿಸಲು ಗೊತ್ತಿದ್ದದ್ದು ನಮ್ಮ ಜಂಗಮ್ಮಯ್ಯನಿಗೆ ಮಾತ್ರ. ರಾಮರಸ ಕುಡಿದ್ರೆ ಕಡಿಮೆಯೆಂದರೂ ಹತ್ತು ಗಂಟೆ ನಿದ್ದೆ ಗ್ಯಾರಂಟಿ. ನಮಗೆ ಪದೇ ಪದೇ ಬರುವ ನೆಗಡಿ, ಶೀತ, ಕಫಮಟಾಮಾಯ. ಆದರೆ ಅದನ್ನು ತಯಾರಿಸೋದು ಹೇಗೆಂದು ನನಗೆ ಗೊತ್ತಾಗಲೇ ಇಲ್ಲ.”

“ಒಂದು ಸಲ ಹೋಳಿ ಹಬ್ಬದ ಹಿಂದಿನ ದಿನ ಅವನು ಒಳಕೋಣೆಯಲ್ಲಿ ರಾಮರಸ ತಯಾರಿಸುತ್ತಿದ್ದಾಗ ನಾನು ಅಡಗಿ ನಿಂತು ಬೇರು ಮತ್ತು ಚೂರ್ಣದ ಹೆಸರು ನೆನಪಿಟ್ಟುಕೊಂಡೆ. ಹೋಳಿ ಹಬ್ಬ ಮುಗಿದ ಮೇಲೆ ಬೇರೆಲ್ಲಾದರೂ ಅದೃಷ್ಟ ಪರೀಕ್ಷಿಸುವ ಮನಸ್ಸಾಯಿತು. ಜಂಗಮಯ್ಯನಿಗೆ ಹೇಳಿಯೇ ಊರುಬಿಟ್ಟು ಇನ್ನೂ ಉತ್ತರಕ್ಕೆ ಹೋದೆ. ಅಲ್ಲೊಂದು ದವಾಖಾನಿ ತೆರದು ರಾಮರಸವನ್ನು ಗಂಡಸರ ಮೇಲೆ ಪ್ರಯೋಗಿಸಿದೆ. ಹಣ ಕೊಟ್ಟು ರಿಜಿಸ್ಟರ್ಡ್ ಮೆಡಿಕಲ್ ಪ್ರಾಕ್ಟೀಶನರ್ ಎಂಬ ಖೊಟ್ಟಿ ಸರ್ಟಿಫಿಕೇಟು ಮಾಡಿಸಿಕೊಂಡೆ. ರಾಮರಸದಿಂದ ಯಾರಿಗೂ ತೊಂದರೆಯಾಗದ್ದಕ್ಕೆ ಪೋಲಿಸರಿಂದ ಬಚಾವಾಗಿದ್ದೇನೆ. ಹಾಗೂ ಯಾರಾದರೂ ಬಂದು ಬಿಟ್ಟರೆ ರಾಮರಸ ಕುಡಿಸಿದ್ರಾಯ್ತು. ಅವರಿಗೆ ಎಚ್ಚರಾಗೋದ್ರಲ್ಲಿ ಈ ಬೋರ್ಡು ಸಮೇತ ಡಾ. ಸುಧೀರಕೃಷ್ಣ ಇನ್ಯಾವುದೋ ಊರಲ್ಲಿರುತ್ತಾನೆ.”

ಸುಧೀರಕೃಷ್ಣ ಗಹಗಹಿಸಿದ. “ಆದ್ರೆ ಇಲ್ಲೂ ನನ್ನದೊಂದು ಧರ್ಮ ಪಾಲಿಸ್ಕೊಂಡು ಬಂದಿದ್ದೇನೆ ಗೌಡ್ರೆ. ಹೆಂಗಸ್ರಿಗೆ, ಮಕ್ಳಿಗೆ ಇದನ್ನು ಕೊಡ್ತಿಲ್ಲ. ಅದಕ್ಕೇ ಗಂಡಸರ ಸಮಸ್ತ ಕಾಯಿಲೆಗಳ ತಜ್ಞ ವೈದ್ಯರು ಎಂದು ಹಾಕಿಸಿಕೊಂಡಿರೋದು. ಸತ್ಯ ಹೇಳಬೇಕೆಂದರೆ ನೀವು ನನಗೆ ಕೊಡ್ತಿದ್ರಲ್ಲಾ ಕಳ್ಳಭಟ್ಟಿ, ಅದಕ್ಕಿಂತ ಇದು ಎಷ್ಟೋ ವಾಸಿ. ನಿಮ್ಮ ಜೀವ ತಗಿಯುವಂತದ್ದೇನೂ ಇದರಲ್ಲಿಲ್ಲ. ಮತ್ತೆ ನೀವು ಯಾವ ಇಂಗ್ಲಿಷು ಮದ್ದು, ಟಾನಿಕ್ಕು ತೆಗೆದು ಕೊಂಡರೂ ಅದರಲ್ಲಿ ಶರಾಬಿನಂಶ ಇದ್ದೇ ಇರುತ್ತದೆ.”

ದೊಡ್ಡ ಮುಂಡಾಸು ಹೊನ್ನಪ್ಪ ಗೌಡರು ಅವನನ್ನು ಮೆಚ್ಚುಗೆಯಿಂದ ನೋಡಿದರು. “ಅಂದರೆ ಇಲ್ಲಿ ನಿನ್ನ ದವಾಖಾನೆ ಪರಮನೆಂಟಾಗಿ ಇರುತ್ತದೆ ಅನ್ನು.”

“ಯಾಕೋ ಗೌಡ್ರೇ ನನ್ನೂರಲ್ಲಿ ಇದು ಪರಮನೆಂಟಾಗಿ ಬೇಡ ಎನಿಸುತ್ತದೆ. ಅಪ್ಪನ ಅಂಗೈಯಗಲ ಭೂಮಿ ನಂಬಿ ಬದುಕೋದುಂಟಾ? ಅಲ್ಲೇ ಉತ್ತರ ಕರ್ನಾಟಕದಲ್ಲೇ ಎಲ್ಲಾದರೂ ತಳವೂರಿದರೇನು ಎಂಬ ಆಲೋಚನೆ ಬರುತ್ತಿತ್ತು. ಆದರೆ ಅಲ್ಲಿನ ನಂಬಿಕೆಗಳು ನನಗಿಷ್ಟವಾಗಲಿಲ್ಲ. ಅದಕ್ಕಿಂತಲೂ ಈ ಕಪಿಲಳ್ಳಿ ಸೆಳೆತವೇ ಹೆಚ್ಚಾಯಿತೆನ್ನಬೇಕು. ಇಲ್ಲಿ ನಾಲ್ಕು ದಿನ ಬೋರ್ಡು ಹಾಕಿ ಕೂತರೆ ನಾನು ಡಾಕ್ಟರನೆನ್ನುವುದು ಪ್ರಚಾರವಾಗಿ ಹೊರಗಿನಿಂದ ಒಳ್ಳೆ ಸಂಬಂಧ ಬಂದೀತೆಂದು ಕಾಯುತ್ತಿರೋದು. ಅಂಥ ಸಂಬಂಧ ಕುದುರಿದ ಮೇಲೆ ಈ ಬೋರ್ಡು ತೆಗೆದು ಕೃಷಿ ಮಾಡಿ ಬಿಡುತ್ತೇನೆ. ಭೂಮಿ, ಕಾಣಿ ಇರುವವರು ಮೋಸ ಮಾಡಬಾರದಲ್ವಾ?”
* * * *

ಸುಧೀರಕೃಷ್ಣನ ಧರ್ಮ ಅವನನ್ನು ರಕ್ಷಿಸಿದೆ. ಘಟ್ಟದ ಕಡೆಯಿಂದ ಗಟ್ಟಿ ಸಂಬಂಧವೊಂದು ಕುದುರಿ, ಕಪಿಲಳ್ಳಿಯಲ್ಲೇ ಅವನು ಹದಿನಾರೆಕರೆ ಜಮೀನು ಮಾಡಿ ಗಟ್ಟಿಯಾಗಿ ಬೇರು ಬಿಟ್ಟಿದ್ದಾನೆ. ದವಾಖಾನೆ ಮುಚ್ಚಿದ್ದರೂ ಉತ್ತರ ಕರ್ನಾಟಕದಲ್ಲಿ ತಾನು ಕಳೆದ ದಿನಗಳ ನೆನಪಿಗಾಗಿ ಕಪಿಲಳ್ಳಿಯಲ್ಲಿ ಪ್ರತಿವರ್ಷ ಹೋಳಿ ಆಚರಿಸಿ ರಾಮರಸ ಹಂಚುತ್ತಾನೆ. ಅದರಿಂದಾಗಿ ಜನಪ್ರಿಯನಾಗಿ ಓಟಿಗೆಲ್ಲಾದರೂ ನಿಂತರೆ ಪಂಚಾಯತ್ ಅಧ್ಯಕ್ಷನಾಗಿ ಬಿಡಲಿದ್ದಾನೆ.
*****