ಅಪೂರ್‍ವ ತ್ಯಾಗ

ಅಪೂರ್‍ವ ತ್ಯಾಗ

ಬಂಗಾಲದಲ್ಲಿ ಚೈತನ್ಯರೆಂಬ ಒರ್‍ವ ದೊಡ್ಡ ಭಕ್ತರಾಗಿ ಹೋದರು ವೈಷ್ಣವ ಧರ್‍ಮವು ಅಲ್ಲಿ ಬೆಳೆಯಲು ಅವರೇ ಕಾರಣರು. ಅಲ್ಲಿಯ ಜನಕೆ ಭಕ್ತಿಯ ರುಚಿ ಹಚ್ಚಿದರು ಪರಮಭಕ್ತರಾಗುವ ಪೂರ್‍ವದಲ್ಲಿ ಚೈತನ್ಯರು ದೊಡ್ಡ ಪಂಡಿತರೆಂದು ಹೆಸರಾಗಿದರು. ನ್ಯಾಯ-ಸದ್ಗುಣ ಇವರನ್ನು ಹಿಡಿವರಾರೂ ಇರಲಿಲ್ಲ.

ಒಂದು ದಿನ ಚೈತನ್ಯರು, ಹಾಲದ ನದಿಯ ದಂಡೆಯ ಮೇಲೆ ದೋಣಿಗಾಗಿ ಹುಡುಕುತ್ತಿದ್ದರು. ಅವರ ಹತ್ತಿರ ಸಾಮಾನುಗಳಿಂದ ತುಂಬಿದ ಒಂದು ಚೀಲವಿದ್ದಿತು. ನದಿಯ ದಂಡೆಯ ಮೇಲೆ ಹೊಗುವವರ ಗದ್ದಲ ಇತ್ತು. ದೋಣಿ ಬೇಗ ಹೊರಡುವುದರಲ್ಲಿತ್ತು. ಜನರು ಆತ್ತಿತ್ತ ಓಡಾಡುತ್ತಿದ್ದರು. ಚೈತನ್ಯರು ದೋಣಿಯಲ್ಲಿ ಕೂತರು. ದೋಣಿ ನದಿಯ ಪಾತ್ರದಲ್ಲಿ ವೇಗದಲ್ಲಿ ನಡೆಯಹತ್ತಿತು.

ಸೂರ್ಯ ಪ್ರಕಾಶವಿದ್ದಿತು. ದೂರದಿಂದ ನದಿಯ ದಂಡೆಯ ಮೇಲಿದ್ದ ಗಿಡಗಳು ಸುಂದರವಾಗಿ ತೋರುತ್ತಿದ್ದವು. ಗಾಳಿಯೊಂದಿಗೆ ತೀವ್ರ ಅಲ್ಲಾಡುತ್ತ ತಲೆಬಾಗಿ ನದಿಗೆ ವಂದನೆ ಮಾಡುತ್ತಿರುವಂತೆ ಕಾಣುತ್ತಿದ್ದವು. ನಡುನಡುವೆ ಮಿಂಚಿನಂತೆ ನದಿಯೊಳಗಿನ ಮೀನುಗಳು ಹೊಳೆಯುಳಯತ್ತಿದ್ದವು. ಸೂರ್‍ಯಕಿರಣಗಳು ಅವುಗಳ ಮೇಲೆ ಬಿದ್ದು ಹೊಳೆಯುತ್ತಿದ್ದವು.

ಹೀಗೆ ಮಾತು ನಡೆದಿದ್ದವು. ಬಿಸಿಲು ಬಲಿಯುತ್ತಿತ್ತು. ಚೈತನ್ಯರು ನದಿಯ ಅಲೆಗಳತ್ತ ನೋಡುತ್ತಿದ್ದರು. ಅವರ ಹೃದಯಸಾಗರದಲ್ಲೂ ಎಷ್ಟೊಂದು ತರಂಗಗಳು ಏಳುತ್ತಿದ್ದವು. ಅಷ್ಟರಲ್ಲಿ ಯಾರೋ ಒಬ್ಬರು ಅವರ ಹತ್ತಿರ ಬಂದು ಅವರ ಭುಜಕ್ಕೆ ಕೈ ಹಚ್ಚಿದರು. ಚೈತನ್ಯರು ಎಚ್ಚರಗೊಂಡರು. ಮೇಲಕ್ಕೆ ಕಣೆತ್ತಿ ನೋಡಿದಾಗ ಯಾರನ್ನು ಕಂಡರು? ಅವರ ಚಿಕ್ಕಂದಿನ ಗೆಳೆಯ ಅವರ ಹತ್ತಿರ ನಿಂತಿದ್ದ. “ಗದಾಧರ! ಎಷ್ಟು ವರ್‍ಷದ ಮೇಲೆ ನಾವು ಭೇಟ್ಟಿ ಯಾಗುತ್ತಿದ್ದೇವೆ? ಗುರುಗೃಹವನ್ನು ಬಿಟ್ಟ ನಂತರ ಇದೇ ಮೊದಲ ಭೆಟ್ಟಿ. ಬಾ, ಗೆಳೆಯಾ ಕೂಡು. ನಿನ್ನನ್ನು ನೋಡಿ ನನ್ನ ಹೃದಯ ಉಕ್ಕೇರಿದೆ.” ಎಂದು ಚೈತನ್ಯರು ಗದಾಧರನನ್ನು ತಮ್ಮ ಹತ್ತಿರ ಕೂಡಿಸಿ ಕೊಂಡರು. ಇಬ್ಬರೂ ತೇಜಃಪುಂಜರು, ವಿದ್ಯೆಯ ತೇಜವು ಮುಖದ ಮೇಲೆ ಹೊಳೆಯುತ್ತಿತ್ತು. ಪಾವಿತ್ರದ ಮತ್ತು ಚಾರಿತ್ರ್ಯದ ಬೆಳಕು ಅವರ ಮುಖದ ಮೇಲಿತ್ತು. ರವಿ, ಚಂದ್ರರಂತೆ ಈ ಜೋಡಿ ಶೋಭಿಸುತ್ತಿತ್ತು. ಗಂಗಾ ಯಮುನೆಯ ಪ್ರವಾಹದಂತೆ ಕಾಣುತ್ತಿದ್ದರು. ಚೈತನ್ಯರ ಮೈಯ ಕಾಂತಿ ಹಾಲಿನ ನೊರೆಯಂತಿತ್ತು. ಗದಾಧರನು ನಸುಗಪ್ಪಾಗಿದ್ದರು, ಇಬ್ಬರೂ ಪ್ರೀತಿಯಿಂದ ಬಿಗಿದಪ್ಪಿದರು. ಸ್ವಲ್ಪ ಹೊತ್ತು ಯಾರೂ ಮಾತನಾಡಲಿಲ್ಲ.

ಭಾವನೆಗಳ ನೆರೆ ಕಡಿಮೆಯಾಗಿ ಭಾಷಣಕ್ಕೆ ಅವಸರ ದೊರೆಯಿತು.

ಚೈತನ್ಯ : ಹೇಗೆ ನಡೆದಿದೆ, ಗದಾಧರ? ಕಲಿಯುವತನಕ ಜೀವನದಲ್ಲಿ ಮೋಜು ಇತ್ತು. ಹಕ್ಕಿಗಳಂತೆ ನಿಶ್ಚಿಂತವಿದ್ದೆವು ಆಗ, ಸಂಸಾರದ ಭಾರ ಬಿದ್ದ ಮೇಲೆ ಉಸಿರುಗಟ್ಟಿದಂತೆ ಆಗುತ್ತದೆ. ಈಗ ನೀನು ಎಲ್ಲಿ ಏನು ಮಾಡುತ್ತೀಯಾ? ಸಂಸಾರದ ತೊಂದರೆಗಳು ಹೆಚ್ಚಾಗಿ ಇಲ್ಲವಲ್ಲ?

ಗದಾಧರ : ಚೈತನ್ಯ, ಅಧ್ಯಯನ, ಅಧ್ಯಾಪನಗಳಲ್ಲಿ ಕಾಲ ಮುಂದರಿಯುತ್ತಿದೆ. ನನ್ನದು ಎಲ್ಲ ನೆಟ್ಟಗೆ ನಡೆದಿದೆ. ಮನೆಯಲ್ಲಿ ಕಲಿಯಲು ವಿದ್ಯಾರ್‍ಥಿಗಳಿದ್ದಾರೆ. ಅವರಿಗೆ ನಾನು ಕಲಿಸುತ್ತಲಿದ್ದೇನೆ. ಶ್ರೀಮಂತ ಜಮೀನದಾರನೊಬ್ಬನು ಎಲ್ಲ ವೆಚ್ಚವನ್ನು ನೋಡಿಕೊಳ್ಳುತ್ತಾನೆ. ಆನಂದದಲ್ಲಿ ದಿನ ಕಳೆಯುತ್ತಲಿದ್ದೇನೆ. ನಡುನಡುವೆ ಹಿಂದಿನ ಸವಿನೆನಪು ಬರುತ್ತವೆ. ಗುರುಗೃಹದಲ್ಲಿ ನಾನು ನೀನು ಬಡೆದಾಡಿದ್ದನ್ನು ಹುಡುಗರಿಗೆ ಹೇಳುತ್ತೇನೆ. ಚೈತನ್ಯ, ಹೌದು ನಾವು ಬಡೆದಾಡುತ್ತಿದ್ದೆವು. ಆದರೆ ಎಷ್ಟು ಬೇಗ ಮರೆಯುತಿದ್ದೆವಲ್ಲ. ಮರೆತುಹೋಗುವ ಬಡೆದಾಟದಲ್ಲಿ ಒಂದು ರೀತಿಯ ಆನಂದ ವಿರುವದಿಲ್ಲವೇ?

ಚೈತನ್ಯ : ಹೌದು, ಆದರೆ ಜಗತ್ತು ಜಗಳ ಮರೆಯಲು ಸಿದ್ಧವಿರುವದಿಲ್ಲ. ಜಗಳಗಳನ್ನು ಕೆದರಿ ತೆಗೆಯಲು ಜಗತ್ತು ಸದಾಸಿದ್ದವಿರುತ್ತದೆ. ಜಗತ್ತು ವಿಚಿತ್ರವಿದೆ! ಗದಾಧರ! ವಿದ್ಯಾರ್‍ಥಿಗಳಿದ್ದಾಗ ನಾವು ಎಷ್ಟು ಮನೋರಥಗಳನ್ನು ರಚಿಸುತ್ತಿದ್ದೆವು, ಎಂಥ ಸವಿಗನಸುಗಳನ್ನು ಕಾಣುತ್ತಿದ್ದೆವು? ನಿನಗೆ ನೆನಪಿದೆಯೋ?

ಗದಾಧರ: ಅವುಗಳನ್ನು ಹೇಗೆ ಮರೆಯುವೆ! ಚನ್ನಾಗಿ ನೆನಪಿನಲ್ಲಿವೆ. “ಜಗತ್ತು ನನ್ನನ್ನು ತಲೆಯಮೇಲೆ ಹೊತ್ತು ಕುಣಿಯುವಂಥ ನ್ಯಾಯ ಶಾಸ್ತ್ರದ ಗ್ರಂಥವೊಂದನ್ನು ಬರೆಯುವೆ” ಎಂದು ನೀನು ಗುರುಗೃಹದಲ್ಲಿ ಅಂದಿದ್ದಿ. ಗುರುಗಳು ನಿನಗೆ ಆಶೀರ್‍ವಾದವನ್ನಿತ್ತಿದ್ದರು.

ಚೈತನ್ಯ : ನಾನು ಆ ನಿಶ್ಚಯವನ್ನು ಕೃತಿಯಲ್ಲಿಳಿಸುತ್ತಲಿದ್ದೇನೆ. ಈಗ ನಾನು ನ್ಯಾಯಶಾಸ್ತ್ರದ ಮೇಲೆ ಬರೆಯುತ್ತಲಿದ್ದ ಗ್ರಂಥವು ಮುಗಿಯತ್ತ ಬಂದಿದೆ. ಗದಾಧರ, ಅದನ್ನು ನೋಡಿ ನಿನಗೆ ಆನಂದವೆನಿಸುವದು.

ಗದಾಧರ: ಎಲ್ಲಿದೆ ಆ ಗ್ರಂಥ? ಇಲ್ಲಿ ತಂದಿದ್ದೀಯಾ?

ಚೈತನ್ಯ : ಹೌದು ತಂದಿದ್ದೇನೆ.

ಹೀಗೆಂದು ಚೈತನ್ಯರು ತಮ್ಮ ಚೀಲದೊಳಗಿಂದ ತಾವು ಬರೆದ ಗ್ರಂಥ ಹೊರತೆಗೆದರು. ಅದು ಸುಂದರವಾದ ವಸ್ತ್ರದಲ್ಲಿ ಕಟ್ಟಿತ್ತು. ಒಳ್ಳೇ ಎಚ್ಚರಿಕೆ ಯಿಂದ ಸುಂದರವಾಗಿ ಬರೆಯಲಾಗಿತ್ತು. ಗದಾಧರನು ಅದನ್ನು ತಕ್ಕೊಂಡು ಓದಲಾರಂಭಿಸಿದನು. ಚೈತನ್ಯರ ಅಕ್ಷರ ಮುತ್ತಿನಂತಿದ್ದವು.

ಪುಟದಿಂದ ಪುಟಗಳನ್ನು ಗದಾಧರ ಓದುತ್ತಿದ್ದರು. ಓದಿದಂತೆ ಮನಸ್ಸು ಖಿನ್ನವಾಗಹತ್ತಿತು. ಮುಂದೆ ಅವರಿಂದ ಓದುವದಾಗಲಿಲ್ಲ. ಗದಾಧರರು ಮಾತನಾಡಲಿಲ್ಲ. ಒಂದು ದೀರ್‍ಘವಾದ ನಿಟ್ಟುಸುರು ಬಿಟ್ಟರು.

ಆಕಾಶದಲ್ಲಿ ಮೋಡಗಳು ಬರಹತ್ತಿದವು. ಸೂರ್‍ಯನು ಕಾಣದಾದನು. ದೋಣಿಯಲ್ಲಿಯ ಹುಡುಗರಿಗೆ ಹೆಂಗಸರಿಗೆ ತೊಂದರೆಯಾಗಬಾರದೆಂದು ಮೋಡಗಳು ಬಂದಿದ್ದವು! ತಾಯಂದಿರಿಗೆ ಸಮಾಧಾನವೆನಿಸಿತು. ಆದರೆ! ಅಷ್ಟರಲ್ಲಿ ಬಿರುಗಾಳಿ ಬೀಸಹತ್ತಿತು. ಪ್ರಚಂಡವಾದ ಕಾರ್‍ಮೋಡಗಳು ತಲೆದೋರಹತ್ತಿದವು. ನದಿಯ ತೆರೆಗಳು ದೊಡ್ಡವಾದವು. ದೋಣಿ ಹೊಯ್ದಾಡಹತ್ತಿತು. ಜನರು ಗಾಬರಿಗೊಂಡರು, ತಾಯಂದಿರು ಮಕ್ಕಳನ್ನು ಗಟ್ಟಿಯಾಗಿ ಅಪ್ಪಿಕೊಂಡರು. ‘ನಾವು ಎಂಥ ಪಾಪಮಾಡಿದೆವೆಂದು ಈ ಬಿರುಗಾಳಿ ಬಂದಿತು’ ಎಂದು ಕೆಲವರು ಚಡಪಡಿಸಹತ್ತಿದರು.

ಆಕಾಶ- ಪ್ರಸನ್ನ ಆಕಾಶವು ಕಪ್ಪಾಯಿತು. ಅಲ್ಪಾವಕಾಶದ ಹಿಂದೆ ಅದು ನಿರಭ್ರವಾಗಿತ್ತು. ಯಾರಿಗೂ ಈ ಮಾತು ಹೇಳಿದರೆ ನಿಜವೆನಿಸಲಿಕ್ಕಿಲ್ಲ. ನಿಸರ್‍ಗದ ಲಹರಿ, ಮನುಷ್ಯನು ನಿಸರ್‍ಗದ ಅಂಶವೆಂದು ಅವನೂ ಲಹರಿ! ಒಂದು ಕ್ಷಣದ ಹಿಂದೆ ಪ್ರಸನ್ನವಿದ್ದ ಗದಾಧರನ ಮುಖವು ಎಷ್ಟು ಕಪ್ಪಾಗಿತ್ತು! ಅವನ ಹೃದಯಾಕಾಶದಲ್ಲಿಯ ಸೂರ್‍ಯನು ಮಾಯವಾಗಿ ಅಲ್ಲಿಯೂ ಕಾರ್‍ಮೋಡಗಳು ಕವಿದಿವೆ. ಏನು ಕಾರಣವಾಯಿತು?

ಚೈತನ್ಯ : ಗದಾಧರ, ಏನಾಗಿದೆ? ನೀನು ಒಮ್ಮೆಲೆ ಗ್ರಂಥವನ್ನು ಏಕೆ ಮುಚ್ಚಿದಿ? ಯಾವದಾದರೊಂದು ಶೋಕ ಪ್ರಸಂಗದ ನೆನಪಾಯಿತೆ? ಒಮ್ಮೆಲೆ ಬಿರುಗಾಳಿ ಬಿಟ್ಟಂತೆ, ನಿನಗೂ ಏನಾದರೂ ಆಯಿತೆ?

ಗದಾಧರ ಮಾತನಾಡಲಿಲ್ಲ. ಅವರ ಕಣ್ಣೊಳಗಿಂದ ಒಂದೆರಡು ಹನಿಗಳು ಹೊರಬಿದ್ದವು. ಅವರು ಮುಖ ತಿರುವಿ ಕಣ್ಣೀರು ಒರಿಸಿಕೊಂಡರು. ಚೈತನ್ಯನ ಕಡೆ ನೋಡುವದಾಗಲಿಲ್ಲ. ಚೈತನ್ಯನು ಅವನ ಕೈಗಳನ್ನು ತನ್ನ ಕೈಯಲ್ಲಿ ಹಿಡಿದನು. ಆಗ ಅವನ ಕೈಯಮೇಲೆ ಕಣ್ಣೀರು ಬಿದ್ದಿತು. ಚೈತನ್ಯನಿಗೆ ಆಶ್ಚರ್‍ಯವೆನಿಸಿ ದುಃಖವೆನಿಸಿತು.

ಚೈತನ್ಯ : ಗದಾಧರ, ನಾವು ಇಂದು ಎಷ್ಟೋ ವರುಷಗಳಾದ ಮೇಲೆ ಭೆಟ್ಟಿ ಯಾಗುತ್ತಿದ್ದೇವೆ. ನಿನ್ನ ದುಃಖ, ನೀನೇಕೆ ನನಗೆ ಹೇಳುವದಿಲ್ಲ? ಗುರುಗೃಹದಲ್ಲಿದ್ದಾಗ ನೀನು ನಿನ್ನ ಸುಖ ದುಃಖಗಳನ್ನು ನನಗೆ ಹೇಳುತ್ತಿದ್ದಿ. ನಿನಗೆ ಹೊಟ್ಟೆ ನೋವಾದರೆ ನಾನು ಎಣ್ಣೆ ಹಚ್ಚಿ ತಿಕ್ಕದೆ ಅದು ಕಡಿಮೆಯಾಗುತಿದ್ದಿಲ್ಲ. ಚಿಕ್ಕಂದಿನ ಆ ನಾನು ಈಗ ಬೇರೆಯಾದೆನೇ? ಆಗ ನಿನ್ನ ಸುಖದುಃಖಗಳನ್ನು ಕೇಳಲು ಯೋಗ್ಯನಿದ್ದವನು ಈಗ ಅಯೋಗ್ಯನಾದೆನೇ? ಗದಾಧರ, ಚಿಕ್ಕಂದಿನಲ್ಲಿ ನಿನ್ನ ಕಣ್ಣೀರು ವರಿಸಿದಂತೆ, ಇಂದು ಅವನ್ನು ವರಿಸಲು ಸಾಧ್ಯವಾಗಲಿ, ನಿನ್ನ ದುಃಖ ದೂರಮಾಡಲು ಸಾಧ್ಯವಾಗಲಿಲ್ಲ. ಜಗತ್ತಿನಲ್ಲಿ ಪರಸ್ಪರರ ದುಃಖ ಕಡಿಮೆಮಾಡುವದಕ್ಕಿಂತ ಹಿರಿದಾದ ಇನ್ನಾವ ಮಾತಿದೆ ? ಇಂಥ ನೂರಾರು ಗ್ರಂಥಗಳನ್ನು ಬರೆಯುವದಕ್ಕಿಂತ ಒಬ್ಬನ ಕಣ್ಣೀರು ವರಿಸುವದು, ಅವನ ದುಃಖ ಕಡಿಮೆಮಾಡುವದು ಶ್ರೇಷ್ಠವಾದದ್ದೆಂದು ನನ್ನ ಭಾವನೆ. ಆದರೆ ಇನ್ನೂ ಪಾಂಡಿತ್ಯ ತೋರುವ, ಕೀರ್‍ತಿಪಡೆಯುವ ಮೋಹವು ಬಿಡಲೊಲ್ಲದು ಮೋಹವನ್ನು ಗೆಲ್ಲುವದು ಕಠಿಣ, ಆದ್ದರಿಂದಲೇ ಅವನ್ನು ಗೆಲ್ಲುವದರಲ್ಲಿ ಪುರುಷಾರ್‍ಥವಿದೆ. ಅದಿರಲಿ. ನಿನ್ನ ದುಃಖ ತಿಳಿದುಕೊಳ್ಳುವದನ್ನು ಬಿಟ್ಟು ನಾನು ವ್ಯಾಖ್ಯಾನವನ್ನು ಕೊಡಹತ್ತಿದೆನಲ್ಲ! ಗದಾ, ಹೇಳು ನಿನ್ನ ದುಃಖದ ಕಾರಣ ಹೇಳು ತನ್ನ ಗೆಳೆಯ ತನಗೆ ದುಃಖ ಹೇಳುವದಿಲ್ಲ ಇದಕ್ಕಿಂತ ದುರ್‍ದೈವ ಯಾವುದು? ಹೇಳು! ನಿನ್ನ ದುಃಖ.

ಗದಾಧರ : ಚೈತನ್ಯ, ಏನು ಹೇಳಲಿ, ಹೇಗೆ ಹೇಳಲಿ? ಯಾವ ಮಾತಿನಿಂದ ನನ್ನ ಹೃದಯಸಾಗರವು ಉಕ್ಕೇರಿ ಬರಬೇಕಾಗಿತ್ತೋ ಅದರಿಂದ ನನಗೆ ದುಃಖವೆನಿಸಹತ್ತಿದೆ. ನನ್ನ ದುಃಖ ಹೇಳುವದಕ್ಕೆ ನನಗೆ ನಾಚಿಕೆ ಆದರೆ ಸುಳ್ಳಾದರೂ ಹೇಗೆ ಹೇಳಲಿ? ಚೈತನ್ಯ, ನಾನೂ ನ್ಯಾಯಶಾಸ್ತ್ರದ ಮೇಲೆ ಒಂದು ಗ್ರಂಥ ಬರೆದಿದ್ದೇನೆ. ಆದರೆ ನಿನ್ನ ಗ್ರಂಥವನ್ನೋದಿ ನನಗೆ ನನ್ನ ಗ್ರಂಥದ ವಿಷಯ ನಾಚಿಗೆ ಅನಿಸಿತು. ಸೂರ್‍ಯನಿದುರು ಹೊನ್ನಿಹುಳ, ಮತ್ತು ಸಮುದ್ರದಿದುರು ಗುಂಡಿ, ಗರುಡನಿದುರು ಚಿಕ್ಕಹಕ್ಕಿ. ಅದರಂತೆ ನಿನ್ನ ಗ್ರಂಥದೆದುರು ನನ್ನದು! ಚೈತನ್ಯ! ನನ್ನ ಗ್ರಂಥವು ಪಂಡಿತರ ಮನ್ನಣೆ ಪಡೆಯುವದು, ಜಗತ್ತಿನ ಮನ್ನಣೆ ಪಡೆಯುವದೆಂದು ತಿಳಿದಿದ್ದೆ; ಆದರೆ, ನನ್ನ ಸೊಕ್ಕು ಮುರಿಯಿತು, ನನ್ನ ಅಹಂಕಾರವು ಕುಗ್ಗಿತು. ನಿನ್ನ ಗ್ರಂಥವಿರುವ ವರೆಗೆ ನನ್ನ ಗ್ರಂಥಕ್ಕೆ ಯಾರು ಕೈಹಚ್ಚುವರು? ಬಂಗಾರ ಸಿಕ್ಕಾಗ ಮಣ್ಣಿಗಾರು ಕೈಹಚ್ಚುವರು? ನಿನ್ನ ಗ್ರಂಥ ನೋಡಿ ನನಗೆ ಆನಂದವಾಗ ಬೇಕು, ಆದರೆ ಒಂದೇ ಕ್ಷಣದಲ್ಲಿ ನನ್ನ ಆಶೆ ಆಕಾಂಕ್ಷೆಗಳು ಮಣ್ಣು ಪಾಲಾದವು. ಆದ್ದರಿಂದ ನನಗೆ ದುಃಖವಾಯಿತು. ಈ ನಿರಾಶೆ ಸಹಿಸಲು ನನಗೆ ಸಾಧ್ಯವಾಗಲಿಲ್ಲ. ಏನಾದರೂ ನಾನೂ ಒಬ್ಬ ಮನುಷ್ಯ, ನಿನ್ನ ಗ್ರಂಥ ಓದಿ ನನಗೆ ಮತ್ಸರವೆನಿಸಿತಂತಲ್ಲ; ಆದರೆ ಘೋರ ನಿರಾಶೆಯಿಂದ ದುಃಖಿಯಾಗಿದ್ದೇನೆ. ಚೈತನ್ಯ ! ಎಂಥ ಗೆಳೆಯ ಇವ ಎಂದು ನಿನಗೆ ತಿರಸ್ಕಾರವೆನಿಸುತ್ತಿರಬೇಕು. ಆದರೆ, ಗೆಳೆಯ! ಕ್ಷಮಿಸು! ನಿಜವೆನಿಸಿದ್ದನ್ನು ಹೇಳಿದೆ. ನಿನ್ನನ್ನು ನೋಡಿ ಆನಂದವೆನಿಸಿತು, ಆದರೆ ನಿನ್ನ ಅಪೂರ್‍ವ ಗ್ರಂಥವನ್ನೋದಿ ನನ್ನ ಆಶೆ ನಿರಾಶೆಯಾಯಿತು.

ಚೈತನ್ಯ : ಗದಾಧರ

ಮುಂದೆ ಮಾತು ಹೊರಡಲೊಲ್ಲವು. ಇಬ್ಬರೂ ಗೆಳೆಯರು ನಿಶ್ಯಬ್ದರಾಗಿ ಪ್ರವಾಹದತ್ತ ನೋಡಹತ್ತಿದರು. ಬಿರುಗಾಳಿ ಬರುವದಿತ್ತು, ಆದರೆ ಮೋಡಗಳು ಕರಗಹತ್ತಿದವು. ಸೂರ್‍ಯನು ಕಾಣಹತ್ತಿದನು. ದೋಣಿಯ ಪ್ರವಾಸಿಗಳಿಗೆ ಆನಂದವೆನಿಸಿತು. ಡೋಣಿ ವೇಗದಿಂದ ಮುಂದರಿಯಹತ್ತಿತು. ಇನ್ನು ಅರ್‍ಧತಾಸಿನಲ್ಲಿ ದಂಡೆ ಕಾಣುವವೆಂದು ಅಂಬಿಗನು ಹೇಳಿದನು.

ಚೈತನ್ಯರ ಮುಖ ಗಂಭೀರವಾಗಿತ್ತು. ಅವರು ವಿಚಾರ ಮಾಡುತ್ತಿದ್ದರು. ಅವರ ಕಣ್ಣಲ್ಲಿ ಪ್ರೀತಿ, ಕಾರುಣ್ಯ ಭಾವಗಳ ಮಿಶ್ರಣವು ಕಾಣುತ್ತಿತ್ತು. ಕಣ್ಣು ಸ್ಥಿರವಾಗಿದ್ದವು. ತೊಡೆಯಮೇಲೆ ಆ ಗ್ರಂಥವಿತ್ತು, ಸುಂದರವಾದ ಅರಿವೆಯಲ್ಲಿ ಅದನ್ನು ಕಟ್ಟಲಾಗಿತ್ತು, ಚೈತನ್ಯರು ಗ್ರಂಥವನ್ನು ಕೈಯಲ್ಲಿ ಹಿಡಿದರು. ‘ಇದೇನು ಇದೇನು’ ಎಂದು ಗದಾಧರನು ಅನ್ನು ವಷ್ಟರಲ್ಲಿ ಅವರು ಆ ಗ್ರಂಥವನ್ನು ನದಿಯ ಪಾತ್ರದಲ್ಲಿ ಒಗೆದರು. ನದಿಯ ಗಂಭೀರ ಪ್ರವಾಹವು ಸಾವಿರಾರು ತರಂಗಗಳಿಂದ ಅದನ್ನು ಅಪ್ಪಿಕೊಂಡಿತು. ಮತ್ತು ತನ್ನ ಅಂತರಂಗದಲ್ಲಿಟ್ಟು ಕೊಂಡಿತು.

ಚೈತನ್ಯರ ಗಂಭೀರ ಮುಖದ ಮೇಲೆ ಪ್ರೀತಿಯು ಅರಳಿತ್ತು. ಸರೋವರದ ಮೇಲ್ಬಾಗದಲ್ಲಿ ಕಮಲಗಳು ಅರಳಿದಂತೆ ಅವರ ಮುಖದ ಮೇಲೆ ಪ್ರೇಮ ಅರಳಿತ್ತು. ಅವರ ಮುಖದ ಶಾಂತಿ ಅಪೂರ್‍ವವಾಗಿತ್ತು.

ಗದಾಧರ: ಇದೇನು ಮಾಡಿದಿ, ಚೈತನ್ಯ ? ನಿನ್ನ ಈ ಕೃತ್ಯದಿಂದ ನನಗೆ ಆನಂದವೆನಿಸೀತೇ? ನಿನ್ನ ಈ ಕೃತ್ಯದಿಂದ ನನ್ನ ಹೆಸರು ಕಡೆತನಕ ಕೆಡುವದು ಮತ್ತು ನಿನ್ನ ಹೆಸರು, ಕೀರ್‍ತಿ ಚಿರಂತನವಾಗಿ ಬಾಳುವದು. ಗೆಳೆಯ ಎಂಥ ಅಮೂಲ್ಯವಾದ ಗ್ರಂಥವನ್ನು ಬೀಸಾಡಿದಿ? ನನ್ನ ನಿರಾಶೆ ಒಂದು ಕ್ಷಣದ್ದು, ಅದನ್ನು ನಾನು ಮರೆತು ಬಿಡುತ್ತಿದ್ದೆ. ಜಗತ್ತಿಗೆ ನೀನು ಹಾನಿ ಮಾಡಿದೆ. ನೀನು ಅನ್ನುವದಕ್ಕಿಂತ ನಾನು ಅನ್ನುವದೇ ಯೋಗ್ಯ, ನನಗೆ ನಿರಾಶೆ ಎನಿಸದಿದ್ದರೆ, ನನ್ನ ದುಃಖ ನಾನು ಸಹಿಸಿದ್ದರೆ ಹೀಗಾಗುತ್ತಿದ್ದಿಲ್ಲ. ಆದರೆ ಈಗೇನು? ಚೈತನ್ಯ, ಗೆಳೆಯಾ!”

ಚೈತನ್ಯ : ಗದಾಧರ! ಆದದ್ದೆಲ್ಲ ಒಳಿತೇ, ನಿನ್ನ ಗ್ರಂಥವು ಬಾಳಲಿ. ಅದರಲ್ಲಿ ನನಗೆ ಆನಂದವಿದೆ. ಗ್ರಂಥ ಬರೆಯುವಾಗ, ಇದನ್ನು ಯಾಕೆ ಬರೆಯುತ್ತಿದ್ದೇನೆ ಎಂದು ನನಗೆ ಅನಿಸುತ್ತಿತ್ತು. ಎಲ್ಲಿಯೋ ಹೃದಯದ ಮೂಲೆಯಲ್ಲಿ ಮಂಜುಳವಾಣಿ ನುಡಿಯುತ್ತಿತ್ತು ಬೇಡ ಎಂದು. ಆದರೆ ಅದನ್ನು ಲೆಕ್ಕಿಸದೆ ಬರೆದೆ. ಆಸಕ್ತಿ ಗೆದೆಯಲೇ ಬೇಕಾಗಿತ್ತು. ಗದಾಧರ! ನಿನ್ನ ಮೇಲೆ ಉಪಕಾರವೆಂದಲ್ಲ. ಆದರೆ ನನ್ನ ಮೋಹವನ್ನು ಗೆಲ್ಲಲು ನಾನು ಈ ಗ್ರಂಥ ಬೀಸಾಡಿದೆ. ಆಸಕ್ತಿಯನ್ನು ಗೆಲ್ಲಲು ಇಂಥ ನೂರಾದ ಗ್ರಂಥಗಳನ್ನು ಬೀಸಾಡಬೇಕಾದೀತು! ಗದಾ, ಖಿನ್ನನಾಗಬೇಡ, ನಿನ್ನ ಗ್ರಂಥದಲ್ಲಿ ನಾನಿದ್ದೇನೆ. ನಾವಿಬ್ಬರೂ ಒಬ್ಬ ಗುರುವಿನ ಶಿಷ್ಯರಲ್ಲವೇ? ನಿನ್ನ ಗ್ರಂಥವೇ ಇದ್ದು ಬಾಳಲಿ. ನಿನ್ನ ಗ್ರಂಥವನ್ನೋದದೆ ನ್ಯಾಯಶಾಸ್ತ್ರದ ಅಭ್ಯಾಸ ಮುಗಿಯಿತೆಂದು ಯಾರೂ ಅನ್ನಲಾರರು. ಪಂಡಿತರ ಮನ್ನಣೆ ಅದಕ್ಕೆ ದೊರೆತು, ನಿನ್ನ ಗ್ರಂಥವು ಪೂಜ್ಯವಾಗುವದು. ಗದಾ, ನಗು! ನೋಡು, ಆ ಸೂರ್‍ಯನು ಮತ್ತೆ ನಗಹತ್ತಿದ್ದಾನೆ. ಬೇಡ, ನಿನ್ನ ಹಾಸ್ಯವನ್ನು ಮುಚ್ಚಿಡಬೇಡ. ಹಾಸ್ಯವನ್ನು ಮುಚ್ಚಿಡಬಾರದು. ಹೊರಗೆ ಬರಲಿ ಆ ಹಾಸ್ಯವು, ಜಗತ್ತಿನಲ್ಲಿ ಎಲ್ಲರ ಮುಖದ ಮೇಲೆ ಹಾಸ್ಯ ಮೂಡಬೇಕೆಂದು ನನ್ನ ಬಯಕೆ. ಕರುಣಾಳುವಾದ ಪರಮೇಶ್ವರನ ಈ ಸೃಷ್ಟಿಯಲ್ಲಿ ಯಾರೂ ದುಃಖಕ್ಕೀಡಾಗಬಾರದೆಂದು ನನಗೆ ಅನಿಸುತ್ತದೆ. ನಗು, ಗದಾ, ನಗು, ನಿನ್ನ ಕಣ್ಣೀರು ಹೋಗಿ, ನಿನ್ನ ಮುಖದ ಮೇಲೆ ಹಾಸ್ಯವಾಡಲೆಂದು ನಾನೇನು ಮಾಡಲಿ ಗೆಳೆಯ? ಈ ಗ್ರಂಥವೇ ಏಕೆ ನನ್ನ ಪ್ರಾಣವನ್ನು ಅರ್‍ಪಿಸಲು ಸಿದ್ಧನಿದ್ದೇನೆ. ಜಗತ್ತನ್ನು ನಗಿಸಬೇಕೆಂದು ಬಯಸಿದ ನಾನು ಇಂದು ನನ್ನ ಗೆಳೆಯನನ್ನಾದರು ನಗಿಸಲಿ. ತ್ಯಾಗದ, ಪ್ರೇಮದ ಮೊದಲನೇ ಪಾಠವನ್ನಾದರೂ ಕಲಿಯಲಿ. ಮೊದಲನೆ ಹೆಜ್ಜೆ ಕಠಿಣವಿರುತ್ತದೆ, ಗದಾ!

ಹೀಗಂದು ಚೈತನ್ಯರು ಗದಾಧರನನ್ನು ಅಪ್ಪಿಕೊಂಡರು. ಗದಾಧರನ ಹೃದಯವು ತುಂಬಿಬಂದಿತು. ಕಣ್ಣಲ್ಲಿ ಆನಂದಾಶ್ರುಗಳು ಬಂದವು. ಇಬ್ಬರ ಮುಖದ ಮೇಲೆ ಅಪೂರ್‍ವ ತೇಜವು ಕಾಣುತ್ತಿತು ಕೈಯಲ್ಲಿ ಕೈ ಹಿಡಿದು ಇಬ್ಬರೂ ನದಿಯ ಪ್ರವಾಹದತ್ತ ನೋಡುತ್ತಿದ್ದರು. ದಂಡೆ ಬಂದಿತೆಂದು ಅಂಬಿಗರು ಕೂಗಿದರು. ಜನರು ತಮ್ಮ ತಮ್ಮ ಸಾಮಾನುಗಳನ್ನು ಕಟ್ಟಿ ಹತ್ತಿದರು. ಚಿಕ್ಕ ಮಕ್ಕಳು ದಂಡೆಯತ್ತ ನೋಡಹತ್ತಿದರು.

ಚೈತನ್ಯ : ಗದಾಧರ, ಈ ಜಗತ್ತಿನ ಪ್ರವಾಸದಲ್ಲಿ ಇನ್ನೆಂದು ಭೇಟ್ಟಿ ಯಾಗುವೆವು?

ಗದಾಧರ : ಚೈತನ್ಯ, ಇನ್ನು ನಾವು ಭೆಟ್ಟಿಯಾಗದಿದ್ದರೂ ನಾವು ಮರೆಯುವದು ಸಾಧ್ಯವೇ? ದಿನಾಲು ನನಗೆ ನಿನ್ನ ನೆನಪು ಬಂದು, ನಿನ್ನ ತ್ಯಾಗದಿಂದ ಕಥೆಯನ್ನು ಹೇಳುವಾಗ ಕಣ್ಣು ತುಂಬಿ ಬರುವವು. ಪ್ರೀತಿಯಿಂದ ತುಂಬಿದ ತ್ಯಾಗದಿಂದ ತುಂಬದ ಪ್ರೀತಿಯಿಂದ ನನ್ನನ್ನು ನೀನು ಬದ್ದ ಮಾಡಿದೆ. ನಾನು ಜಗತ್ತಿಗೆ ನ್ಯಾಯಶಾಸ್ತ್ರವನ್ನೇನೋ ಕಲಿಸುವೆ ಚೈತನ್ಯ, ಆದರೆ ನೀನು ನಿರಪೇಕ್ಷ ಪ್ರೇಮದ ಶಾಸ್ತ್ರ ಕಲಿಸುವಿ! ರಸಹೀನ ಘಟ ಪಟ ಶಾಸ್ತ್ರ ಕಲಿಸುವದಕ್ಕಲ್ಲ ನಿನ್ನ ಜೀವನ, ನಿನ್ನ ಅವತಾರ; ಪರಮ ಮಂಗಲ ಪ್ರೇಮ ಕಲಿಸಲು ನಿನ್ನ ಅವತಾರವಿದೆ!

ಚೈತನ : ಪ್ರೇಮ, ಪ್ರೇಮ, ಪ್ರೇಮ! ಹೌದು, ದುಃಖದಲ್ಲಿ ಮುಳುಗಿದ ಈ ಜಗತ್ತಿಗೆ ಪ್ರೇಮದ ಅವಶ್ಯಕತೆ ಅದೆ. ಪ್ರೇಮ! ತುಂಬಲಿ ನನ್ನ ಹೃದಯದಲ್ಲಿ, ಪ್ರೇಮದ ಸಾಗರವು ಬಂದು ತುಂಬಲಿ ಮತ್ತು ನಾನು ಅದನ್ನು ಜಗತ್ತಿಗೆ ಕೊಡುವೆ. ದುಷ್ಟನಿರಲಿ, ಸುಷ್ಟನಿರಲಿ, ಎಲ್ಲರಿಗೂ ಪ್ರೇಮದ ಸವಿಯನ್ನು ಸವಿಸುವೆನು. ಹೌದು, ಗದಾಧರ, ಇದೇ ನನ್ನ ಜೀವಿತ ಕಾರ್‍ಯವು. ನನ್ನ ಜೀವಿತ ಕಾರ್‍ಯವು. ಇಂದು ನನಗೆ ಸಾಧಿಸಿತು.

ಗದಾಧರ : ಜೀವಿತದ ಸಿದ್ಧಿ ದೊರೆತವನು ಧನ್ಯ, ಕೃತಕೃತ್ಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೫೯
Next post ಕಪ್ಪು-ಇತಿಹಾಸ

ಸಣ್ಣ ಕತೆ

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…