ಬಾಳ ಪಯಣದಲಿ ಜೊತೆ ನಡೆದ
ಹುಡುಗಿ ಕಳೆದುಹೋಗಿದ್ದಾಳೆ
ಮಾಡಿದ ಮೋಡಿ ಮರೆತಿಲ್ಲ,
ಕಾಡಿದ ರಾತ್ರಿಯ ತೆರೆ ಸರಿದಿಲ್ಲ
ಕಾಡುಮೇಡ ಹಾದಿಯಲ್ಲಿ
ಕಲ್ಲು-ಮುಳ್ಳುಗಳ ನರ್ತನ
ನಿನ್ನ ನಗುವೆಂಬ ಹೂ ಅರಳೆ
ಕಷ್ಟಗಳೆಲ್ಲಾ ಸುಖವೆಂಬ ಹೂರಣ
ಭಾನು-ಭುವಿಯ ಮಿಲನಕ್ಕೆ
ರುಜುವಾತು ವರ್ಷ ಋತುಗಾನ
ನಮ್ಮಿಬ್ಬರ ಪ್ರೇಮತೋರಣಕ್ಕೆ ಸಾಕ್ಷಿಯಿನ್ನೇಕೆ?
ಸಾಕಲ್ಲವೇ ಒಲವ ಮಾತುಗಳ ಸಿಂಚನ
ಕಣ್ಣು ಕಲೆತಿರುವಾಗ, ಮನಸು ಬೆರೆತಿರುವಾಗ
ಭಾವ-ಜೀವವಿಲ್ಲದ ಪದಗಳೇಕೆ ಬೇಕು?
ಹೃದಯಗಳ ಬೆಸುಗೆಗೆ ನಿನ್ನ ಕಣ್ಣನೋಟದ
ಬಿಸಿ ಸ್ಪರ್ಶವೇ ಸಾಕು.
ಹೇಗೆ ಮರೆಯಲಿ ನಿನ್ನನ್ನು?
ಕೆಣಕಿ ಸೆಳೆಯುವ ನಿನ್ನ ಮುಂಗುರುಳನ್ನು?
ಮೆರುಗು ತುಟಿಯ ನಗುವನ್ನು?
ನೀನಿಲ್ಲದೆಯೂ ಇರುವ ನಿನ್ನ ನೆನಪನ್ನು?
*****


















