ಗರ್ಜಿಸು ಹೂಂಕರಿಸು ಘೀಳಿಡು ಕೇಕೆ ಹಾಕು
ಗಹಗಹಿಸು ಹೇಷಾರವ ಮಾಡು
ಕಿರುಚಾಡು ಕೆನೆ ಬೇಬೇ ಎನ್ನು
ಏನು ಬೇಕಾದರೂ ಮಾಡು ಆದರೂ
ಕೆಲವು ಸಲ ಮನುಷ್ಯ ಧ್ವನಿಯಲ್ಲಿ ಮಾತಾಡು
ಇಲ್ಲದಿದ್ದರೆ ಮರೆತುಬಿಡುತ್ತೀ
ಪೂರ್ತಿ
ರಸ್ಪುಟಿನ್‌ನ ವಿಷ ಅವನ ಹಲ್ಲುಗಳಲ್ಲಿತ್ತೆ
ಉಗುರುಗಳಲ್ಲಿತ್ತೆ ಮೈಯೆಲ್ಲ ವ್ಯಾಪಿಸಿತ್ತೆ
ಹೇಳುವುದು ಕಷ್ಟ
ಆದರೆ ಆ ತಮಂಧದ ಕಣ್ಣುಗಳು ತಮ್ಮ
ನೋಡಿದವರ ನೋಡದೆ ಇರಲಿಲ್ಲ
ಖಾಸರಿನ (chasm) ಹಾಗೆ
ಒಡಲಿಲ್ಲದ ನೆರಳುಗಳು ಹಗಲೆಲ್ಲ ಓಡಾಡಿ
ಒಂದೆಡೆ ಸೇರಿದರೆ ಇರುಳಾಗುತ್ತೆ
ಅವು ಸ್ವಂತ ರುಂಡಗಳ ಲಾಂದ್ರದ ಹಾಗೆ ಹಿಡಿದು
ಹುಡುಕುವುದೇನು ಕೊಟೆ ಬುರುಜಿನಲ್ಲಿ?
ನಮ್ಮನ್ನಲ್ಲ ನಮ್ಮನ್ನಲ್ಲ ಎನ್ನುತ್ತೇವೆ
ಆದರೂ ಓದಿ ತಿಳಿಯಬೇಕೊಮ್ಮೆ
ಡಿವೈನ್ ಕಾಮೆಡಿಯ
ಭಯದ ಭಯವೇ ನಿಜವಾದ ಭಯ
ಕದ ಬಡಿಯುವುದಕ್ಕಿಂತ
ಅದು ಯಾವಾಗ ಬಡಿಯುತ್ತದೆ ಎಂದು ಕಾಯುವುದು ಭಯ
ಒಮ್ಮೆ ಮುಗಿಯಲಿ ಎಂದು ಕೊರಳೊಡ್ಡಲು ತಯಾರಿದ್ದೇವೆ
ಬೆಟ್ಟದ ಮೇಲೇರಿ ಆಕಾಶ ಬುಟ್ಟಿ
ಹಾರಿಸುವುದು
ಸಮುದ್ರ ಕಿನಾರೆಯಲಿ ಪಿಯಾನೋ ಇರಿಸಿ
ಬಾರಿಸುವುದು
ಇದೆಲ್ಲವೂ ನಿರಾಕರಿಸುವ ಉಪಾಯ
ಅಲ್ಲ ಇದು ಯಾವುದೂ ಅಲ್ಲ ಮಾತೆಯರ ದಿನ
ಆಚರಿಸದೆ ಇರೋದಕ್ಕೆ
ಅದಕ್ಕೆ ಕಾರಣ ಮಿದುವಾಗುವ ಭಯ
ಮತ್ತೆ ಮಗುವಾದೇವೆನ್ನುವ ಭಯ
*****


















