ಆಪತ್ತಿನಲ್ಲಿಯೂ ಸಂಪತ್ತು

ಆಪತ್ತಿನಲ್ಲಿಯೂ ಸಂಪತ್ತು

ಮಂಗಳೂರಿಗೆ ಹೋದನೆಂದರೆ ರಾಮರಾಯನು ಹೊತ್ತಾರೆ ಕದ್ರೆಗೆ ಹೋಗದೆ ಇಲ್ಲ. ಬೆಟ್ಟದಾಚೆಯಿಂದ ಮೂಡಿಬರುವ ಸೂರ್ಯ, ಆ ಎಳೆ ಬಿಸಿಲಲ್ಲಿ ನಗುವ ಬೆಟ್ಟ, ಅದರ ಬುಡದಲ್ಲಿ ತಿಳಿನೀರಿಂದ ಕಂಗೊಳಿಸುವ ಕೆರೆ, ಕೆಳಗೆ ದೇವಸ್ಥಾನ, ಇವುಗಳ ಸೊಬಗನ್ನು ಮನದಣಿಯೆ ಕಂಡು ಕೆರೆಯಲ್ಲಿ ಮಿಂದು ದೇಗುಲವನ್ನು ಹೊಕ್ಕು ಬಂದುಬಿಟ್ಟನೆಂದರೆ ಅವನ ಮನಸ್ಸಿಗಷ್ಟೊಂದು ಆನಂದ, ಮೈಗೆಷ್ಟೋ ಸುಖ, ದಿನವೆಲ್ಲ ಉತ್ಸಾಹವೇ ಉತ್ಸಾಹ!

ಹೀಗೊಂದು ದಿನ ಮಿಂದ ಉಲ್ಲಾಸದಿಂದ ರಾಮರಾಯನು ಕದ್ರೆಯ ಬೀದಿಗಿಳಿದು ಬರುತ್ತಿದ್ದ-ಬೀದಿಯ ಇಕ್ಕಡೆಯಲ್ಲಿಯೂ ತುಸು ಹಿಂದೆ ಸರಿದು ತೆಂಗಿನ ತೋಟಗೆಳ ಆರೆಮರೆಯಲ್ಲಿ ಮಂಟಪದಂತೆ ಕಂಗೊಳಿಸುವ ಮನೆಗಳು, ಅವುಗಳ ಎದುರು ಬಗೆಬಗೆಬಣ್ಣದ ಗಿಡಬಳ್ಳಿಗಳಿಂದೊಪ್ಪುವ ಹೂ ದೋಟಗಳು, ಅವುಗಳ ನಡುವೆ ಮುದ್ದು ಚಿಟ್ಟೆಗಳಂತೆ ಚಂದಾಗಿ ಅಡ್ಡಾಡುತ್ತಾ ಹೂವುಗಳನ್ನು ಕೊಯ್ಯುವ ಚಿಕ್ಕ ಬಾಲಕಿಯರು! ಇವನ್ನೆಲ್ಲ ನೋಡುತ್ತ ರಾಮರಾಯನು ಮೆಲ್ನಡೆಯಿಂದ ಮುಂದುವರಿಯುತ್ತಿದ್ದ. ಹಿಂದಿನಿಂದ ಇಂಪಾದೊಂದು ಧ್ವನಿಯು ‘ಅಮ್ಮ ಕರೀತಾಳೆ’ ಎಂದಂತಾಯಿತು. ತಿರುಗಿ ನೋಡಿದ, ಚಿಕ್ಕ ಚೆಲುವಿನ ಹುಡುಗಿ! ನಾಚಿಕೆಯೊಡನೆ ಹೋರಾಡುತ್ತ ಹೋರಾಡುತ್ತ ಮತ್ತೂ ಚೆಲುವಾಗಿ ಹೇಳಿದಳು- ‘ಅಮ್ಮ ಕರೀತಾಳೆ ನಿಮ್ಮನ್ನ’ ಎಂದು. ‘ಮಗೂ, ನಿನ್ನಮ್ಮನೆಂದರೆ ಯಾರು, ಎಲ್ಲಿ?’ ಎಂದ ರಾಮರಾಯ. ‘ನನ್ನಮ್ಮ? ನನ್ನಮ್ಮ!’ ಎನುತ್ತ ಆ ಮುದ್ದುಗುವರಿಯು ಅಲ್ಲೇ ತುಸು ಹಿಂದೆ ಎಡಗಡೆಗೆ ನೋಡಿದಳು. ರಾಮರಾಯನ ಕಣ್ಣೂ ಆ ದಿಕ್ಕಿಗೆ ಹರಿಯಿತ್ತು ಅಲ್ಲಿ ಚಿಕ್ಕ ತಲೆಬಾಗಿಲ (Gate) ಒಳಗಡೆ ಅಂಗೈಯಂಗಳದ ತುದಿಯಲ್ಲಿ ಚಿಕ್ಕ ಚೊಕ್ಕ ಮನೆಯೊಂದು. ಅದರ ಜಗಲಿಯ ಮೆಟ್ಟಿಲಿನ ಬಳಿಯ ದುಂಡುಗಂಬವನ್ನು ನೆಮ್ಮಿ ಅರೆಮರೆಯಾಗಿ ನಡು ಹರೆಯದ ಬೆಡಗಳಿಯದ ನೀರೆಯೊಬ್ಬಳು ನಿಂತು ತನ್ನ ಮಗಳ ಬೇಡಿಕೆಗೆ ಸೈಗೊಟ್ಟಂತ ರಾಮರಾಯನ ಕಣ್ಣನ್ನು ಹಿಡಿದು ನಸು ತಲೆ ಬಾಗಿಸಿ ಕರೆಕೊಟ್ಟಳು.

ಕರೆಬಾರದೇ ತೂರುವ ಸ್ವಭಾವದವನು ರಾಮರಾಯ. ಅವನ ದಿನ ಚರ್ಯವೇ ಅಂತಹದು. ಹೀಗಿರುವಲ್ಲಿ ‘ಬನ್ನೀ’ ಎಂದ ಕಡೆಗೆ ಹಾರದಿರುವವನೆ? ಅಂಗಳ ಹತ್ತಿದ, ಜಗಲಿ ಏರಿದ, ಒಮ್ಮೆ ಕಣ್ಣು ಸುಳಿಸಿ ಆ ಚೊಕ್ಕ ಮನೆಯ ಒಳಗೆ ಹೊರಗೆ ಎಲ್ಲ ನೋಡಿಬಿಟ್ಟ. ಅಂತಹ ಚಿಕ್ಕ ಚೊಕ್ಕ ಮನೆಯನ್ನು ಅವನು ಆ ವರೆಗೆ ಕಂಡಿಲ್ಲವೆಂದೇ ತೋರಿತು- ಕಳಕಳನೆ ನಗುವ ನೆಲ, ಮಲ್ಲಿಗೆಯ ಬಿಳುಪಿನ ಗೋಡೆ, ಅದಕ್ಕಂದವಾದ ಹಸುರುರಂಗಿನ ಅಂಚು, ನಡುವೆ ಅಲ್ಲಲ್ಲಿ ಕಳೆಯೇರುವಂತೆ ಸಮಸೂತ್ರದಲ್ಲಿ ತೂಗಿಸಿರುವ ಚಿತ್ರಪಠಗಳು, ಹೊರಗೆ ಚೊಕ್ಕವಾಗಿರಿಸಿದ್ದ ಆ ಚಿಕ್ಕ ಅಂಗಳದ ಅಂಚಿನ ಸುತ್ತ ಹೂವರಳಿ ನಗುತ್ತಿರುವ ಬಗೆಬಗೆಯ ಗಿಡಬಳ್ಳಿಗಳು! ಹೀಗೆ ಎತ್ತ ನೋಡಿದರೂ ಸಂತುಷ್ಟಿಯ ಸರಳ ಸುಖಜೀವನದ ಲಕ್ಷಣಗಳೇ. ಅವುಗಳ ನಡುವೆ, ಸವಿಗಟ್ಟಾದ ಚೌಕಟ್ಟಿನಲ್ಲಿ ಬಿಗಿದ ಚಿತ್ರದಂತೆ ಕಂಗೊಳಿಸುತ್ತಿದ್ದಳು ಮಗಳಿಂದೊಡಗೂಡಿ ನಿಂತಿದ್ದ ಆ ನಡುಹರೆಯದ ಸಡಗರವಳಿಯದ ತಾಯಿ ಅಲ್ಲಿ ಆ ಕಿರಿಜಗಲಿಯಲ್ಲಿ ನಿಂತು ಇಂತಹ ನೋಟಗಳ ಮೇಲೆಲ್ಲ ರಾಮರಾಯನು ದೃಷ್ಟಿ ಹರಿಸುತ್ತಿದ್ದಾಗಲೇ ಆ ವ್ಯಕ್ತಿ ಯಾರಾಗಿರಬಹುದೆಂದು ಹಲವು ಹದಿನೆಂಟು ಊಹೆಗಳು ಅವನ ತಲೆಯಲ್ಲಿ ಮಿಂಚಿ ಮಾಯವಾಗದೆ ಇದ್ದಿಲ್ಲ.

ಅಷ್ಟರಲ್ಲಿ ‘ಲಲಿತೂ, ಮಾಮನನ್ನು ಒಳಗೆ ಕರೆದುಕೊಂಡು ಬಾರೇ, ಅಲ್ಲೇ ಎಷ್ಟು ಹೊತ್ತು ನಿಲ್ಲಿಸಿಕೊಳ್ಳುವಿಯೆ?’ ಎನ್ನುತ್ತ ಆ ಹೆಂಗಸು ಒಳಗೆ ಕಾಲಿಟ್ಟಳು. ಅನಿರೀಕ್ಷಿತವಾಗಿ ಬರುತ್ತಿದ್ದ ಈ ಹೊಸಹೊಸ ಸನ್ನಿವೇಶಗಳಿಂದ ರಾಮರಾಯನು ಬಗೆಗೆಟ್ಟು ಆ ಚಿಕ್ಕ ಹುಡುಗಿಯ ಕೈಗೊಂಬೆಯಂತಾಗಿ ಒಳಗೆ ಎಳೆಯಲ್ಪಟ್ಟ. ಅಲ್ಲಿ ಚಿಕ್ಕ ಪಡಸಾಲೆಯ ಒಂದು ಮಗ್ಗುಲಲ್ಲಿ ಹಾಸಿದ್ದ ಬಣ್ಣದ ಚಾಪೆಯ ಮೇಲೆ ಕುಳಿತುಕೊಂಡ, ಎದುರಿನ ಗೋಡೆಯಲ್ಲಿ ಕೆಳಗಡೆಯಿತ್ತು ದೇವರಕಂಡಿ, ಅದರ ಮುಂದೆ ಹೂವಿನ ತಟ್ಟೆ ಬೆಳಗಿ ತೊಳಗುತ್ತಿರುವ ಪೂಜಾ ಪಾತ್ರೆಗಳು. ಕಂಡಿಯ ಇಬ್ಬದಿಯಲ್ಲಿ ಹಾಗೂ ಮೇಲೆ ಗೋಡೆಯಲ್ಲಿ ಸ್ತೂಪಾಕಾರವಾಗಿ ದೇವತಾಪಠಗಳು, ತುದಿಯಲ್ಲಿ ಲಕ್ಷ್ಮಿ ಚಿತ್ರದ ಹಳೆಯದೊಂದು ಕೆಲೆಂಡರ್, ನಡುವಿನಲ್ಲೊಂದು ಪುರುಷನ ಭಾವಚಿತ್ರ! ಅದರ ಕಡೆಗೆ ರಾಮರಾಯನ ಕಣ್ಣು ಬಿದ್ದಾಗ ‘ಅದು ನನ್ನಪ್ಪ!’ ಎಂದಳು ಹುಡುಗಿ. ಆ ಮಾತಿಗೆ ಸೈಗುಟ್ಟಿ ದಂತೆ ನಿಟ್ಟುಸಿರೊಂದು ಬಂತು ಆ ತಾಯಿಯಿಂದ. ಅವನು ನಿಂತಿದ್ದ ಆಕೆಯನ್ನು ಮುಖವೆತ್ತಿ ನೋಡಿದ, ಮೋರೆಯಲ್ಲಿ ಕುಂಕುಮವಿದ್ದಿಲ್ಲ. ಮೂಗಿನಲ್ಲಿ…. ಹಾ! ಕಣ್ಣಿನಲ್ಲಿ ನೀರು ತುಂಬಿತ್ತು! ಆಕೆಯ ವಿಷಯವಾಗಿ ಆತನು ಮಾಡಿದ್ದ ಆ ಹಲವೊಂದು ಊಹೆಗಳೆಲ್ಲ ಒಮ್ಮೆಗೇ ಕುಸಿದು ಬಿದ್ದು ಹೋದವು! ಅವನ ಹೃದಯವು ಕರಗಿ ನೀರಾಯಿತು. ‘ಅಮ್ಮಾ, ಕುಳಿತು ಕೊಳ್ಳಬಾರದೇ? ನಿಂತಿರುವಿರೇಕೆ? ಏನೋ ಆಪತ್ತಿನಲ್ಲಿರುವಂತೆ ತೋರುವಿರಲ್ಲ? ನನ್ನಿಂದೇನಾದರೂ ಉಪಕಾರವಾಗುವುದಿದ್ದರೆ ಹೇಳಿಯಮ್ಮ, ಸಂಕೋಚ ಬೇಡ’ ಎಂದ.

‘ನಿಮ್ಮಿಂದಾಗುವ ಮಹದುಪಕಾರವು ಈ ಮೊದಲೇ ಆಗಿಹೋಗಿದೆ. ಅದರ ದೆಸೆಯಿಂದಲೇ ನಮಗೆ ಆಪತ್ತಿನಲ್ಲಿಯೂ ಈ ಸಂಪತ್ತು! ನಿಮ್ಮ ಕೈ ಕಾಲಿಗೆ ಸುಖವಿರಲೆಂದು ನಾನು ದಿನಾಲೂ ಈ ದೇವರ ಮುಂದೆ ಬೇಡುತಿದ್ದೇನೆ. ನಿಮ್ಮನ್ನೊಮ್ಮೆ ಕಂಡು ಉಪಕಾರ ಹೇಳಬೇಕೆಂದು ನನ್ನ ಹೃದಯವು ಈ ಎರಡು ವರುಷಗಳಿಂದಲೂ ಕೂಗುತ್ತಿತ್ತು. ಆದರೆ ನಿಮ್ಮ ಊರಾಗಲಿ ಹೆಸರಾಗಲಿ ಯಾವುದೂ ಗೊತ್ತಿಲ್ಲದೆ ಪೇಚಾಡುತ್ತಿದ್ದೆ. ಇಂದು ಅನಿರೀಕ್ಷಿತವಾಗಿ ದೇವರೇ ನಿಮ್ಮನ್ನು ತೋರಿಸಿಕೊಟ್ಟ! ‘ಲಲಿತೂ, ಅಡ್ಡ ಬೀಳೆ ಮಾಮಂಗೆ, ನಮ್ಮ ಹಿಟ್ಟು ಬಟ್ಟೆಯ ಪಾಡು ಇಂದು ಮಾನ ಮರ್ಯಾದೆಯಿಂದ ಸರಾಗವಾಗಿ ಸಾಗುತ್ತಿರುವುದು ಈ ಮಾವನ ಉಪಕಾರದಿಂದ!’ ಎನ್ನುತ್ತ ಆಕೆಯು ಕೃತಜ್ಞತೆಯ ಕಣ್ಣೀರ ಕಾಣಿಕೆಯಿಟ್ಟು ರಾಮರಾಯನ ಪಾದಕ್ಕೆರಗಿ ಎದ್ದು ನಿಂತಳು. ಲಲಿತೆಯೂ ಅಡ್ಡ ಬಿದ್ದಳು. ಅವನು ಆ ಬಾಲಿಕೆಯನ್ನು ತನ್ನ ಬಳಿಗೆಳೆದು ಕುಳ್ಳಿರಿಸಿಕೊಂಡು ಆಕೆಯ ಬೆನ್ನ ಮೇಲೆ ಕೈಯಾಡಿಸುತ್ತ ಆ ತಾಯಿಯನ್ನು ಕುರಿತು ‘ಅಮ್ಮಾ, ಅಂತಹ ಉಪಕಾರವು ನನ್ನಿಂದ ನಿಮಗಾಗಿದ್ದರೆ ನನ್ನ ಜನ್ಮವೇ ಸಾರ್ಥಕ ವಾಯಿತೆನ್ನುತ್ತಿದ್ದೆ! ಆದರೆ ನಿಮ್ಮನ್ನೆಲ್ಲೋ ಎಂದೋ ನೋಡಿದ್ದ ಅರೆಯರೆ ನೆನಪಾಗುವುದಲ್ಲದೆ ಬೇರಾವುದನ್ನೂ ನಾನರಿಯೆನಲ್ಲ!’ ಎಂದ.

‘ನಿಮಗೆ ನೆನಪಿರಲಾರದು, ಎಂಟು ವರ್ಷಗಳ ಹಿಂದೆ ನಾವು ಉಡುಪಿಯಲ್ಲಿದ್ದೆವು. ಅವರಿಗೆ ಕಚೇರಿಯಲ್ಲಿ ಕೆಲಸವಿತ್ತು. ನೀವು ಎಷ್ಟೋ ಸಲ ಬಂದು ಅವರನ್ನು ಯಾವುದಕ್ಕೋ ಒತ್ತಾಯಪಡಿಸುತ್ತಿದ್ದಿರಿ. ಒಂದು ದಿನ ಆದಿತ್ಯವಾರ- ನೀವು ಬಂದು ಬಹಳ ಹೊತ್ತು ಅವರೊಡನೆ ಚರ್ಚಿಸಿ ಹೋಗಿದ್ದಿರಷ್ಟೆ ಅವರು ಕಾಫಿ ಕುಡಿಯಲಿಕ್ಕೆ ಒಳಗೆ ಬಂದರು. ಆಗ ನಾನು, ಅವರೊಬ್ಬರು ಆಗಾಗ ಬಂದು ಒತ್ತಾಯಪಡಿಸುವುದೇನು?’ ಎಂದೆ, ಅವರಿಗೇನು! ನಾನು ಲೈಫ್ ಇನ್ಶೂರು ಮಾಡಬೇಕಂತೆ! ಮುಂದಕ್ಕೊಂದು ಗಂಟಾಗುವುದಂತೆ! ಕೈಯಲ್ಲಿ ಕಾಸು ಉಳಿದರಲ್ಲವೆ ಮುಂದಿನ ಗಂಟಿನ ಯೋಚನೆ?’ ಎಂದರು ಅವರು. ‘ಅಗಲಿ, ಏಕೆ ಪ್ರಯತ್ನಿಸಬಾರದು?’ ಎಂದೆ ನಾನು. ಈ ಊರಲ್ಲಿ ಆಗ ಅಕ್ಕಿಯ ವ್ಯಾಪಾರ ಮಾಡುತ್ತಿದ್ದ ಅವರ ಅಣ್ಣನ ಹೆಂಡತಿಯು ಅಂದು ನಮ್ಮಲ್ಲಿದ್ದಳು. ಅವಳು “ಹಣವನ್ನುಳಿಸಲಿಕ್ಕೆ ಇನ್ಶೂರ್‌ ಕಂಪ್ನಿಯಂತೆ! ಅದಕ್ಕೆ ಹಣ ಸುರಿಯುತ್ತಾ ಬರುವುದಂತೆ! ಅದಕ್ಕೆ ಹಾಕುವ ಹಣವಿದ್ದರೆ ನನಗೆ ಚಿನ್ನ ಮಾಡಿಸಿ ಕೊಟ್ಟುಬಿಡಿ” ಎಂದು ನಿಮ್ಮಣ್ಣನವರಿಗೆ ಹೇಳಿ ಎಷ್ಟೋ ಇನ್ಶೂರ್ ಏಜಂಟುಗಳನ್ನು ಹಿಂದೆ ಕಳುಹಿಸಿದೆ ನಾನು!’ ಎಂದಳು. ಅದಕುತ್ತರವಾಗಿ, ಹಾಗೆ ಹೇಳಬೇಡ, ಚಿನ್ನ ಮಾಡಿಸುವುದಕ್ಕಿಂತ ವಿಮೆ ಮಾಡುವುದು ಎಷ್ಟೋ ಮೇಲು’ ಎಂದರು ನಮ್ಮವರು. ಅದನ್ನು ಕೇಳಿದ ನಾನು, “ಹಾಗಾದರೆ ನೀವು ಸೇರಿಯೇ ಬಿಡಿರಿ, ದುಂದುಗಾರಿಕೆ ಬಿಡೋಣ, ವೆಚ್ಚ ಕಡಿಮೆ ಮಾಡೋಣ, ಹೇಗಾದರೂ ಮಾಡಿ ಅಷ್ಟು ಹಣವನ್ನು ಉಳಿಸುತ್ತ ಬರಲೇ ಬೇಕು” ಎಂದು ಧೈರ್ಯದಿಂದ ಹೇಳಿಬಿಟ್ಟೆ. ಮರುದಿನವೇ ಅವರು ಎಂಟು ಸಾವಿರ ರೂಪಾಯಿಗೆ ಇನ್ಶೂರು ಮಾಡಿದರು……” ಎನ್ನುವಷ್ಟರಲ್ಲಿ ರಾಮರಾಯನು, “ಹೌದು, ಈಗ ನೆನಪಾಯಿತು! ಶ್ಯಾಮರಾಯರೆಂದು ಅವರ ಹೆಸರಲ್ಲವೆ? ಅಲ್ಲಿಂದ ಪುತ್ತೂರಿಗೆ ವರ್ಗವಾಗಿದ್ದಾಗ….”

ಆಕೆ-‘ಹೌದು, ಆಕಸ್ಮಿಕವಾಗಿ, ಮೂರೇ ದಿವಸ ಜ್ವರ! ಯಾರೂ ಯೋಚಿಸಿದ್ದಿಲ್ಲ ಅಷ್ಟು ಬೇಗನೆ ಎಲ್ಲ ಮುಗಿದು ಹೋಗುವುದೆಂದು….’

ರಾಮರಾಯ-ಅಮ್ಮಾ, ಚೆಲ್ಲಿಹೋದ ಹಾಲಿಗಾಗಿ ದುಃಖಿಸಿ ಫಲವೇನು? ಆದರೆ ನಮ್ಮ ಕಂಪನಿಯು ಹಣವನ್ನು ಕೊಡಲಿಲ್ಲವೆ? ಏನಾದರೂ ಮೋಸ ಮಾಡಿತೆ?

ಆಕೆ,-ಅಯ್ಯೋ! ಎಲ್ಲಿಯ ಮೋಸ? ಎಂಟು ಸಾವಿರಕ್ಕೂ ಮಿಕ್ಕಿಯೇ ಕೊಟ್ಟಿತು. ಆದುದರಿಂದಲೇ ಹೇಳಿದೆ-ನಮಗೆ ಆಪತ್ತಿನಲ್ಲಿಯೂ ಈ ಸಂಪತ್ತು ನಿಮ್ಮಿಂದಾಯಿತು ಎಂದು. ಈ ಮನೆ, ಈ ದೊಡ್ಡ ತೋಟ, ಇದರಲ್ಲಿರುವ ಬೇರೆ ನಾಲ್ಕು ಮನೆಗಳು- ತಿಂಗಳಿಗೆ ಐವತ್ತು ರೂಪಾಯಿಗಳ ಬಾಡಿಗೆ ಬರುತ್ತಿದೆ- ಎಲ್ಲವೂ ಆ ಹಣದಿಂದ ಇತ್ತೀಚೆಗೆ ಕೊಂಡುಕೊಂಡುದು! ಅಂದು ನೀವು ಪದೇ ಪದೇ ಬಂದು ಅವರನ್ನು ಒತ್ತಾಯಪಡಿಸದೆ ಇರುತ್ತಿದ್ದರೆ ಇಂದು ನನ್ನ ಗತಿ? ಈ ಮಗುವಿನ ಗತಿ? ಅವರ ಅಣ್ಣನ ಹೆಂಡತಿಯ ಗತಿಯಂತೆ, ಅವಳ ಮಕ್ಕಳ ಗತಿಯಂತೆ, ಆಗಿಹೋಗುತ್ತಿತ್ತು!

ರಾಮರಾಯ-‘ಏನಾಯಿತು ಅವರಿಗೆ?’

ಆಕೆ-ಬಾವನವರಿಗೆ ಅಕ್ಕಿಯ ವ್ಯಾಪಾರದಲ್ಲಿ ಸೋಲಾಯಿತು, ಸಾಲಹಿಡಿಯಿತು. ಆ ಸಾಲಸೊಲುಗಳಲ್ಲಿ ಅವಳ ಚಿನ್ನಾಭರಣಗಳೆಲ್ಲವೂ ತೇಲಿಹೋದುವು. ಚಿಂತೆ ಹಿಡಿದು ಬಾವ ನವರು ತೀರಿಕೊಂಡರು. ಅವಳು ಮೂವರು ಹೆಮ್ಮಕ್ಕಳೊಡನೆ ಬಡ ತೌರುಮನೆಯನ್ನು ಸೇರಿಕೊಂಡಿದ್ದಾಳೆ! ತೌರು ದೊಡ್ಡದಿರಲಿ, ಬಡತನದ್ದಿರಲಿ, ಗತಿಗೆಟ್ಟು ತೌರು ಸೇರಬಾರದು; ಅತ್ತಿಗೆ ನಾದಿನಿಯರ ಕಾಲ ಕಸಕ್ಕಿಂತಲೂ ಕೀಳಾಗಿ ಬಾಳಬಾರದು. ನಮ್ಮ ಮಕ್ಕಳು ಅವರ ಮಕ್ಕಳ ಕೈರೊಟ್ಟಿಯ ಚಾರುಚೂರಿಗೆ ಬಾಯಿ ತೆರೆಯುವಂತಾಗಬಾರದು, ಆದರೆ ಅವಳ, ಅವಳ ಮಕ್ಕಳ ಬಾಳು ಈಗ ಹಾಗಾಗಿ ಹೋಗಿದೆ! ಮಾತ್ರವೆ? ಮುಂದೆ ಆ ಬಡ ತಾಯಿಯು ಕಾಸಿಲ್ಲದೆ ಆ ಮೂರು ಹೆಮ್ಮಕ್ಕಳನ್ನು ಯಾರ ಕೈಗೆ ಹಾಕಿಯಾಳು? ಅಂದು ಬಾವನವರ ಸಂಪಾದನೆಯ ಕೈ ಯು ಸ್ಥಿರ ವೆಂದು ನಂಬಿ ಇನ್ಶೂರೆನ್ಸ್ ಏಜಂಟರನ್ನು ಹಿಂದೆ ಕಳುಹಿಸಿಕೊಟ್ಟಳು. ಇಂದು ಕಣ್ಣೀರಿಂದ ಕೈ ತೊಳೆಯುವಳು, ಗಂಡಂದಿರ ಸಂಪಾದನೆಯ ಕೈಯೆಂದರೆ ಗಾಳಿಗಿಟ್ಟ ದೀಪದಂತೆ, ಅದು ಸಂಸಾರವನ್ನು ಸಂತೋಷ ದಿಂದ ನಗಿಸಿ ನಗಿಸಿ ಬೆಳಗಿಸುತ್ತಿದ್ದಂತೆಯೆ ಒಮ್ಮೆಗೇ ನಂದಿಹೋಗಿ ಅದನ್ನು ನಂಬಿದ್ದ ಕುಟುಂಬವನ್ನು ಗಾಢ ದುಃಖಾಂಧಕಾರದಲ್ಲಿ ತಳ್ಳಿ ಬಿಡುವುದು. ಅಂತಹ ಕಗ್ಗತ್ತಲಲ್ಲಿ ಕಂಗೆಟ್ಟಾಗ ಕೈಕೆಳಗಾಗಿ ದಾರಿ ತೋರಿಸುತ್ತದೆ ಲೈಫ್ ಇನ್ಶೂರೆನ್ಸ್ ಕಂಪೆನಿ! ಆದರೆ ಇದನ್ನರಿಯದೆ ನನ್ನಕ್ಕನಂತೆ ಕೆಟ್ಟು ಕಣ್ಣೀರಿಡುವ ಹೆಂಗಳೆಷ್ಟು! ಏನೋ ಅಂತಹ ದುರವಸ್ಥೆಯಿಂದ ದೇವರೆಂದು ನೀವೆಂದು ಅವರೆಂದು ನಿಮ್ಮ ಕಂಪೆನಿಯೆಂದು ನಮ್ಮನ್ನು ಕಾಪಾಡಿದಿರಿ. ಅದರ ನೆನವರಿಕೆಗಾಗಿ, ನೋಡಿ ಅಲ್ಲಿ, ನಿಮ್ಮ ಕಂಪೆನಿಯ ಆ ಕೆಲಂಡರನ್ನು ದೇವರ ಕಂಡಿಯ ಮೇಲೆ ತೂಗಿಸಿದ್ದೇನೆ. ಹೀಗೆ ನಿಮಗೆ ತಿಳಿಯದೆಯೇ ನೀವೆಷ್ಟೋ ಸಂಸಾರಗಳನ್ನು ಭಯಂಕರ ದಾರಿದ್ರದಿಂದ ರಕ್ಷಿಸಿ ಉದ್ಧರಿಸಿರುವ ಪುಣ್ಯವು ನಿಮ್ಮ ಪಾಲಿಗಿದೆ. ನೀವು ಸಮಾಜದ ತಾಯಿ. ಆದರೆ ಮದ್ದು ಕೊಡ ಬಂದ ತಾಯಿಯನ್ನು ದೂಡುವಂತೆ ಬುದ್ದಿಯಿಲ್ಲದ ಸಮಾಜವು ನಿಮ್ಮನ್ನು ತಳ್ಳುತ್ತಿದೆ! ಅದನ್ನು ಲಕ್ಷಿಸದೆ ನೀವು ಮೂರ್ತಿಮತ್ತಾದ ಸಹನೆಯಂತೆ ಉತ್ಕೃಷ್ಟವಾದ ಸಮಾಜ ಸೇವೆಯನ್ನು ಅರ್ಪಿಸುತ್ತಿರುವಿರಿ. ಅದಕ್ಕಾಗಿ ದೇವರು ನಿಮ್ಮನ್ನು ಚಿರಕಾಲ ವಿಡಲಿ! ಲಲಿತೂ, ಮಾವನನ್ನು ಹೋಗಲಿಕ್ಕೆ ಬಿಡಬೇಡ, ಇವರು ಕೆರೆಗೆ ಹೋದುದನ್ನು ಕಂಡು ಇಷ್ಟು ಹೊತ್ತು ಕಾದುನಿಂತು ನಿಂತುಕಾದು ಹಿಡಿದಿದ್ದೇವೆ, ಎಲ್ಲಾದರೂ ಬಿಟ್ಟಿಯೇ, ಜಾಗ್ರತೆ! ನಾನು ಮಾಮನಿಗೆ ಒಂದಿಷ್ಟು ಕಾಫಿ….’ ಎನ್ನುತ್ತ ಆಕೆಯು ಅಡಿಗೆಯ ಕೋಣೆಗೆ ಕಾಲಿಟ್ಟಳು. ಇತ್ತ ರಾಮರಾಯನು ಇನ್ಶೂರೆನ್ಸ್ ಏಜಂಟನನ್ನು ಪಿಶಾಚಿಯೆಂದೂ ನ್ಯೂಸೆನ್ಸ್ ಏಜಂಟನೆಂದೂ ಹಲವರು ಗೇಲಿಮಾಡಿದರೂ ಅವನೊಬ್ಬ ಲೋಕೋಪಕಾರಿಯೆಂದು ತಿಳಿದು ಕರೆದು ಆದರಿಸುವ ಮನೆಗಳೂ ಇವೆ, ಎಂದು ಯೋಚಿಸುತ್ತ ಹಿಂದೆಂದೂ ಹೊಂದದ ಅದೊಂದು ದಿವ್ಯ ಮನ ಶ್ಯಾಂತಿಯ ಆನಂದವನ್ನು ಹೊಂದುತ್ತಿರಲು ಲಲಿತೆಯು, ಮಾಮಾ, ನನ್ನ ಹಾರ್ಮೋನಿ! ಎಷ್ಟು ಚಂದ! ಮೊನ್ನೆ ಅಮ್ಮ ತೆಕ್ಕೊಂಡಿದ್ದು! ಮೂವತ್ತು ರೂಪಾಯಿಗೆ!’ ಎನ್ನುತ್ತ ದೇವರ ಕಂಡಿಯ ಬಳಿಯಲ್ಲಿದ್ದ ಅಂದವಾದೊಂದು ಹಾರ್ಮೊನಿಯಮನ್ನು ತೋರಿಸಿದಳು. ಆಗ ಒಳಗಿಂದ ತಾಯಿಯು, ‘ಲಲಿತೂ, ಸುಮ್ಮನೆ ಹಾರ್‍ಮೊನಿ ತೋರಿಸಿ ಏನು ಪ್ರಯೋಜನ? ಒಂದು ಪದ ಹೇಳಮ್ಮಾ, ಮಾಮ ಕೇಳಲಿ’ ಎಂದಳು, ಲಲಿತೆಯು ಹಾರ್‍ಮೊನಿಯನ್ನು ತೆಗೆದಳು, ‘ನಂಬ ಬೇಡವೋ ಈ ತನುವ ನೀ| ನಂಬ ಬೇಡವೊ…’ ಎಂದು ಅದಕ್ಕೆ ಸ್ವರಗೂಡಿಸಿ ಮೃದು ಮಧುರವಾಗಿ ಹಾಡತೊಡಗಿದಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೃತಿ ಚೋರರು
Next post ಕಿಡಿಯೊಂದೆ!

ಸಣ್ಣ ಕತೆ

 • ಮಾದಿತನ

  ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

 • ಕರಿಗಾಲಿನ ಗಿರಿರಾಯರು

  ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

 • ಮಲ್ಲೇಶಿಯ ನಲ್ಲೆಯರು

  ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

 • ಬೂಬೂನ ಬಾಳು

  ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

 • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

  ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

cheap jordans|wholesale air max|wholesale jordans|wholesale jewelry|wholesale jerseys