ಹೀಗೊಂದು ಮಗುವಿನ ಘಟನೆ

ಹೀಗೊಂದು ಮಗುವಿನ ಘಟನೆ

ಇತ್ತೀಚೆಗೆ ಒಂದು ಘಟನೆ ನಡೆಯಿತು. ಇದೇನು ಸುದ್ದಿ ಮೌಲ್ಯದ ಘಟನೆಯಲ್ಲ. ಪತ್ರಿಕೆಗಳ ಯಾವುದೇ ಪುಟದಲ್ಲಿ ಪ್ರಕಟಗೊಳ್ಳುವ ಘಟನೆಯಲ್ಲ. ಇದು ಸಾರ್ವಜನಿಕ ಚರ್ಚೆಯ ವಸ್ತುವೂ ಅಲ್ಲ. ಯಾಕೆಂದರೆ ಇದು ರಾಜಕೀಯ ನಾಯಕರಿಗೆ ಸಂಬಂಧಿಸಿದ್ದಲ್ಲ. ಸಾಂಸ್ಕೃತಿಕ ವ್ಯಕ್ತಿತ್ವಗಳ ಸುದ್ದಿಯಲ್ಲ. ಮಠಾಧಿಪತಿಗಳ ಮಾತಲ್ಲ. ಇದು ಒಂದು ಮಗುವಿಗೆ ಸಂಬಂಧಿಸಿದ ಘಟನೆ. ‘ಪ್ರಸಿದ್ಧ ಪುರುಷರ’ ಮಗುವೂ ಅಲ್ಲವಾದ್ದರಿಂದ ಈ ಘಟನೆ ಬೆರಳೆಣಿಕೆಯ ಜನಕ್ಕೆ ಮಾತ್ರ ಗೊತ್ತು.

ನನ್ನ ಆತ್ಮೀಯರೊಬ್ಬರಿಗೆ ಮೂರ್‍ನಾಲ್ಕು ವರ್ಷಗಳ ಹಿಂದೆ ಒಂದು ಹೆಣ್ಣು ಮಗುವಾಯಿತು. ಹುಟ್ಟಿದಾಗಲೇ ಮಗುವಿಗೆ ಆರೋಗ್ಯ ಸರಿ ಇರಲಿಲ್ಲ. ಗಂಡ-ಹೆಂಡತಿ ಮಗುವನ್ನು ಎತ್ತಿಕೊಂಡು ತಜ್ಞ ವೈದ್ಯರ ಹುಡುಕಾಟಕ್ಕೆ ತೊಡಗಿದರು. ತಜ್ಞ ವೈದ್ಯರು ಮಗುವಿನ ಕಾಯಿಲೆ ಹುಡುಕಾಟದಲ್ಲಿ ತೊಡಗಿದರು. ಕತ್ತಿನ ಸುತ್ತ ಹೆಚ್ಚುವರಿ ಬೆಳವಣಿಗೆ, ಮುಖದ ಒಂದು ಭಾಗ ಉಬ್ಬಿ ಅಂದಗೆಡಿಸಿದ ರೀತಿಗಳಿಗೆ ಏನು ಕಾರಣವೆಂದು ಹುಡುಕುತ್ತ ಒಬ್ಬರು ಸರಿಯಾಗಿ, ಇನ್ನೊಬ್ಬರು ಅನುಮಾನಾಸ್ಪದವಾಗಿ ಔಷಧಿಗಳನ್ನು ನಿಗದಿ ಗೊಳಿಸಿದರು. ಎಲ್ಲಾದರೂ ಸರಿ ವಾಸಿಯಾಗಲಿ ಎಂದು ತಾಯಿ ತಂದೆಯವರು ಏನನ್ನು ಲೆಕ್ಕಿಸದೆ ಮುಖ್ಯ ವೈದ್ಯರು ಮತ್ತು ಆಸ್ಪತ್ರೆಗಳಿಗೆ ಸುತ್ತಿದರು. ಸಾಲ ಸೋಲ ಮಾಡಿ ಮಗಳನ್ನು ಸುಸ್ಥಿತಿಗೆ ತರುವ ಶತಪ್ರಯತ್ನ ಮಾಡಿದರು. ಕಡೆಗೆ ದುಬಾರಿ ಆಸ್ಪತ್ರೆಯೊಂದರಲ್ಲಿ ಶಸ್ತ್ರಚಿಕಿತ್ಸೆಯೂ ಆಯಿತು. ಮಗು ಉಳಿಯಲಾರದೆಂಬ ಸ್ಥಿತಿಯನ್ನು ಮುಟ್ಟಿದ್ದಾಯಿತು. ಆದರೆ ಮಗು ಉಳಿಯಿತು. ತಾಯಿ ತಂದೆಯವರಿಗೆ ಮಗುವಿನ ರೂಪಕ್ಕಿಂತ ಮಗುವಿನ ಜೀವ ಮುಖ್ಯವಾಗಿತ್ತು. ಅದಕ್ಕಾಗಿ ಹಗಲಿರುಳು ತವಕಿಸಿದರು. ಗುಡಿಗೋಪುರಗಳ ಗಂಟೆ ಬಾರಿಸಲಿಲ್ಲ. ತಿರುಪತಿಯಲ್ಲಿ ತಲೆ ಬೋಳಿಸಲಿಲ್ಲ. ಪೂಜಾರಿಗಳ ಪರವಾನಗಿ ಕೇಳಿ ಪೂಜೆ ಮಾಡಲಿಲ್ಲ. ಮಗುವಿನ ಜೀವವೇ ಪೂಜೆಯಾಯಿತು; ಅದೇ ಭಕ್ತಿಯಾಯಿತು; ಅದೇ ಅಧ್ಯಯನವಾಯಿತು; ಅದೇ ಸಂವೇದನೆಯಾಯಿತು. ಸುತ್ತ ಇದ್ದ ಸ್ನೇಹಿತರಿಗೆ ಪ್ರಪಂಚವೇ ಗೊತ್ತಿಲ್ಲದ ಈ ಸಣ್ಣ ಮಗು ಹೀಗಿದ್ದು ಹೋರಾಡುವ ಬದಲು ಈಗಲೇ ಕಣ್ಮುಚ್ಚಬಾರದೆ ಎಂದು ಒಂದು ಕ್ಷಣ ಅನ್ನಿಸಲಿಕ್ಕೆ ಸಾಕು. ಆದರೆ ಈ ತಾಯಿತಂದೆಯರು ಅದೇನೋ ನೈತಿಕ ನೆಲೆಯಿಂದ, ಅಸಾಧ್ಯ ನಿರ್ಲಿಪ್ತತೆಯಿಂದ, ಬೂದಿ ಮುಚ್ಚಿದ ಸಂಕಟ ಸಂವೇದನೆಯಿಂದ ಮಗುವನ್ನು ಉಳಿಸಿಕೊಳ್ಳಲು ಹೊರಾಡಿದರು. ಅರ್ಧ ಲಕ್ಷ ರೂಪಾಯಿಗಳಿಗೂ ಹೆಚ್ಚು ಹಣ ಖರ್ಚು ಮಾಡಿದರು.

ಕಡೆಗೂ ಮಗು ಉಳಿಯಿತು. ಕತ್ತಿನ ಒಂದು ಭಾಗದಲ್ಲಿ ಮುಖವನ್ನೂ ಆವರಿಸಿಕೊಂಡ ಉಬ್ಬು ರೂಪದೊಂದಿಗೆ ಬೆಳೆಯಿತು; ಬೆಳೆಯಿತು ಎನ್ನುವುದಕ್ಕಿಂತ ಬೆಳೆಸಿದರು ಎಂದರೇ ಸರಿಯಾದೀತು. ಎಲ್ಲ ಮಕ್ಕಳಂತಲ್ಲದೆ ನಿಧಾನವಾಗಿ ತೆವಳಿತು; ಮತ್ತಷ್ಟು ನಿಧಾನವಾಗಿ ದನಿ ಮಾಡಿತು. ಮತ್ತೆ ಮೆಲ್ಲಗೆ ಎದ್ದು ಬಿದ್ದು ನಡೆಯತೊಡಗಿತು.

ಈ ಹಂತದಲ್ಲಿ ಎಲ್ಲ ತಾಯಿತಂದೆಯರಂತೆ ಇವರಿಗೂ ನರ್ಸರಿ ಶಾಲೆಗೆ ಸೇರಿಸಬೇಕೆಂದು ಅನ್ನಿಸಿತು. ನಾನು ಹೇಳಬೇಕೆಂದುಕೊಂಡ ಘಟನೆ ನಡೆದಿದ್ದು ಈ ಹಂತದಲ್ಲೇ, ಈ ಶಾಲೆಯಲ್ಲೇ. (ಯಾವ ಶಾಲೆ ಎಂಬ ಹೆಸರು ಇಲ್ಲಿ ಬೇಡ).

ತಾಯಿ ತಂದೆಯರು ತಮ್ಮ ಸಹಜ ಸ್ಥಿತಿಯ ಹೆಣ್ಣು ಮಗುವನ್ನು ನರ್ಸರಿ ಶಾಲೆಗೆ ಸೇರಿಸಬೇಕೆಂದು ಹೋದಾಗ ಮುಖ್ಯೋಪಾಧ್ಯಾಯಿನಿ ಸಂತೋಷದಿಂದ ಸೇರಿಸಿಕೊಂಡರು. ತಾಯಿ-ತಂದೆಯರಿಗೆ ಸಂತೋಷ ವಾಯಿತು. ಆದರೆ ಈ ಸಂತೋಷದ ಆಯಸ್ಸು ಅಲ್ಪ. ನಂತರ ಎರಗಿದ್ದು ಅಸಹನೆಯ ಅನುಭವ.

ಈ ಶಾಲೆಯ ಉಳಿದ ಮಕ್ಕಳ ಕೆಲವು ತಾಯಿ ತಂದೆಯರು ಈ ನಮ್ಮ ಸ್ನೇಹಿತರ ಹೆಣ್ಣು ಮಗುವಿನ ಶಾಲಾ ಪ್ರವೇಶವನ್ನು ಸಹಿಸಲಿಲ್ಲ. ಅವರ ಕಣ್ಣಿಗೆ ಈ ಮಗು ದೈಹಿಕ ಮತ್ತು ಮಾನಸಿಕವಾಗಿ ವಿಕೃತವಾಗಿ ಕಂಡಿತು. ಸ್ವಲ್ಪ ಅಸಹಜ ರೀತಿಯಲ್ಲಿ ಇರುವುದು ನಿಜವಾದರೂ ಈ ಮಗು ಅಸಹನೆ ಹುಟ್ಟಿಸುವಂತೇನೂ ಇಲ್ಲ. ಆದರೆ ಈ ಕೆಲವು ಪೋಷಕರ ಅಸಹನೆ ಎಷ್ಟು ಉಗ್ರವಾಗಿತ್ತೆಂದರೆ ಮಗುವಿನ ತಾಯಿ ತಂದೆಯ ಎದುರೆ ಮುಖ್ಯೋಪಾಧ್ಯಾಯಿನಿಯನ್ನು ತರಾಟೆಗೆ ತೆಗೆದುಕೊಂಡರು. ‘ಇಂಥ ಮಕ್ಕಳನ್ನು ಶಾಲೆಗೆ ಸೇರ್‍ಸೋದು ಸರಿಯಲ್ಲ’ ಎಂದು ಒತ್ತಡ ತಂದರು. ಮುಖ್ಯೋಪಾಧ್ಯಾಯಿನಿ ಸಮಾಧಾನದ ಮಾತುಗಳಿಗೆ ಬೆಲೆ ಸಿಗಲಿಲ್ಲ; ಬದಲಾಗಿ ಅಸಹನೆಯ ಉಗ್ರರೂಪಿಗಳಾಗಿದ್ದವರು ಈ ಹೆಣ್ಣು ಮಗುವಿನ ತಾಯಿತಂದೆಯರ ಎದುರೇ ‘ಈ ಮಗೂನ ಸೇರಿಸ್ಕೊಳ್ಳೋದಾದ್ರೆ ನಮ್ಮ ಮಕ್ಕಳನ್ನು ವಾಪಸ್ ಕರ್‍ಕೊಂಡು ಹೋಗುತ್ತವೆ. ಈ ಶಾಲೇನೇ ನಮಗೆ ಬೇಡ’ ಎಂದು ಹೇಳಿ ತಮ್ಮ ಮಕ್ಕಳನ್ನು ವಾಪಸ್ ಕರೆದುಕೊಂಡು ಹೋಗೇಬಿಟ್ಟರು. ಹೋಗುವಾಗ ತಾಳ್ಮೆ ತಪ್ಪಿದಂತೆ ನಡೆದುಕೊಂಡರು.

ಈ ಹೆಣ್ಣು ಮಗುವಿನ ತಾಯಿತಂದೆಯರಿಗೆ ಆದ ಅನುಭವವನ್ನು ಖಚಿತವಾಗಿ ಹೇಳಲಾಗದು; ಅದು ಅವಮಾನವಿರಬಹುದು; ಸಂಕಟ ವಿರಬಹುದು; ನಿರಾಶೆಯಿರಬಹುದು. ಒಟ್ಟಿನಲ್ಲಿ ನಿರ್ಲಿಪ್ತತೆಯಿಂದ ನಸುನಕ್ಕರು. ಈಗ ಶಾಲೆಯ ಮುಖ್ಯೋಪಾಧ್ಯಾಯಿನಿ ಹೇಳಿದರು : ‘ಇವರೆಲ್ಲರ ಮಕ್ಕಳು ನನ್ನ ಶಾಲೆ ಬಿಟ್ಟು ಹೋದ್ರು ನಿಮ್ಮ ಮಗಳನ್ನು ಬಿಡಬೇಕಾಗಿಲ್ಲ’ ಎಂಥ ದಿಟ್ಟ ನಿಲುವು! ಈ ಮುಖ್ಯೋಪಾಧ್ಯಾಯಿನಿ ವೇದಿಕೆಯ ಹುಲಿಯಾಗಿರಲಿಲ್ಲ. ಕ್ರಿಯಾ ನಿಷ್ಠೆಯಾಗಿದ್ದರು. ತಮ್ಮ ಶಾಲೆಗೆ ಸೇರಿಸಿಕೊಳ್ಳಬಾರದ ವಿಕೃತಿ ಈ ಹೆಣ್ಣುಮಗುವಿನಲ್ಲಿ ಇಲ್ಲ ಎಂದು ನಂಬಿದ್ದರು.

ಮುಂದೆ ಎಷ್ಟು ಜನ ಈ ಶಾಲೆಯಿಂದ ತಮ್ಮ ಮಕ್ಕಳನ್ನು ಬಿಡುತ್ತಾರೋ ಗೊತ್ತಿಲ್ಲ. ಸದ್ಯಕ್ಕಂತೂ ಈ ಘಟನೆ ಸಂಭವಿಸಿದೆ.

ಹೀಗೊಂದು ಮಗುವಿನ ಸುತ್ತ ಸಂಭವಿಸಿದ ಘಟನೆ ನಮ್ಮ ಸಂದರ್ಭದ ‘ಸತ್ಯ’ಗಳನ್ನು ಹೊರಹಾಕಿದೆ. ಜೀವನವಿಡೀ ಸಮಸ್ಯೆಗಳನ್ನು ಎದುರಿಸಬೇಕಾಗಬಹುದೆಂಬ ನಿರೀಕ್ಷೆಯಿದ್ದು ತಮ್ಮ ಹೆಣ್ಣು ಮಗುವನ್ನು ಯಾವ ರೀತಿಯಲ್ಲಾದರೂ ಯಾವ ರೂಪದಲ್ಲಾದರೂ ಉಳಿಸಿಕೊಳ್ಳಬೇಕೆಂಬ ಕರುಳಬದ್ದತೆಯಲ್ಲಿ ಕಷ್ಟಪಟ್ಟು ತಾಯ್ತಂದೆಯರು ಒಂದು ಕಡೆ, ಈ ಮಗುವನ್ನಾಗಲಿ ತಾಯಿ ತಂದೆಯರ ಮನಸ್ಥಿತಿಯನ್ನಾಗಲಿ ಪರಿಗಣಿಸದೆ ಅಥವಾ ಪರಿಗಣಿಸುವ ಅಗತ್ಯವೂ ಕಾಣದೆ ತಮ್ಮ ಮಕ್ಕಳಿಗೆ ಮೈಲಿಗೆಯಾದಂತೆ ವರ್ತಿಸಿದ ಮಾನಸಿಕ ಮೈಲಿಗೆಯ ತಾಯ್ತಂದೆಯರು ಇನ್ನೊಂದು ಕಡೆಗಿದ್ದರೆ, ಇಬ್ಬರ ನಡುವೆ ನ್ಯಾಯ ಕಂಡಂತೆ ನಡೆದುಕೊಂಡ ಮುಖ್ಯೋಪಾಧ್ಯಾಯಿನಿ ಇದ್ದಾರೆ.

ನಾವು ಮಕ್ಕಳ ಬಗ್ಗೆ ಮಾತಾಡುತ್ತಲೇ ಇರುತ್ತೇವೆ. ಸಹಿಷ್ಣುತೆಯ ಬಗ್ಗೆ ಭಾಷಣ ಮಾಡುತ್ತೇವೆ. ಈ ದೇಶಕ್ಕಿರುವ ಪುಣ್ಯ ಪರಂಪರೆಯ ಯಾವ ದೇಶಕ್ಕೂ ಇಲ್ಲವೆಂಬಂತೆ ಬೀಗುತ್ತಾರೆ. ಆದರೆ ಕಂಡವರ ಬಗ್ಗೆ ಕಿಂಚಿತ್ತೂ ಚಿಂತಿಸದೆ ಕಂತುಗಳಲ್ಲಿ ಕರುಣೆ ಉಕ್ಕಿಸುತ್ತೇವೆ. ಹಾಗಾದರೆ ನಮ್ಮ ಶಿಕ್ಷಣ ನಮಗೇನು ಕಲಿಸುತ್ತಿದೆ? ನಮ್ಮ ದೇವಸ್ಥಾನಗಳು ಎಷ್ಟು ನಿರ್ಮಲ ಮನಸ್ಸನ್ನು ರೂಪಿಸುತ್ತಿವೆ? ಇಷ್ಟವಾಗದ್ದನ್ನು ಉಚಿತ ರೀತಿಯಲ್ಲಿ ವ್ಯಕ್ತಪಡಿಸುವ ವಿಧಾನವನ್ನು ಈ ಸಮಾಜ ನಮಗೆ ಕಲಿಸಿಲ್ಲವೆ? ಭಾವ-ಬುದ್ಧಿಗಳಿಗೆ ಇಲ್ಲಿ ಬೆಂಕಿ ಬಿದ್ದಿದೆಯೆ? ಇಂಥ ಹತ್ತಾರು ಪ್ರಶ್ನೆಗಳ ನಡುವೆ ನಿರಾಶೆಯ ನಕಾಶೆ ರೂಪು ಪಡೆಯುತ್ತಿರುವಂತೆ ಕಂಡರೂ ಅದರ ಗೆರೆಗಳಿಗೆ ಗರಬಡಿಯುವಂತೆ ಮಾಡುವ ಮುಖ್ಯೋಪಾಧ್ಯಾಯಿನಿ ಕೆಲವರಾದರೂ ಇದ್ದಾರೆಂಬುದು ಒಂದು ಸಮಾಧಾನ. ಎಲ್ಲ ಶಾಲೆಗಳನ್ನೂ ಎಲ್ಲ ಬೋಧಕರನ್ನೂ ಎಲ್ಲ ತಾಯಿತಂದೆಯರನ್ನೂ ಒಂದೇ ರೀತಿಯಲ್ಲಿ ನೋಡಬೇಕಾಗಿಲ್ಲ.

ಈ ಮಗುವಿನ ಸತ್ಯ ಘಟನೆ ನಮ್ಮ ನಾಡಿನ ಎಷ್ಟೋ ಮಕ್ಕಳ ಹಾಗೂ ತಾಯಿ ತಂದೆಯರ ಘಟನೆಯಾಗಿರುತ್ತದೆ. ಜಾತಿಯ ಕಾರಣಕ್ಕೆ ಕೆಲವರನ್ನು ಶಾಲೆಯಿಂದ, ದೇವಸ್ಥಾನಗಳಿಂದ ಹೊರಗಿಟ್ಟ ಮನೋಧರ್ಮವೇ ಜಾತಿಗಳನ್ನು ಮಾರಿ ಅಸಹನೆಯ ಆಯಾಮವನ್ನು ಪಡೆಯುತ್ತದೆ. ಆದ್ದರಿಂದ ಮಕ್ಕಳಂತೆ ನಿರ್ಮಲವಾದ ಮನಸ್ಸನ್ನು ದೊಡ್ಡವರಲ್ಲಿ ಹುಡುಕಬೇಕಾಗಿದೆ. ದೊಡ್ಡವರು ಮತ್ತೆ ಮಗುವಾಗಿ ಮನೋಧರ್ಮವನ್ನು ರೂಪಿಸಿಕೊಳ್ಳಬೇಕಾಗಿದೆ.
*****
೧೭-೭-೧೯೯೪

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೇಂಟೆಯ ಕವಿತೆ
Next post ತಾರುಣ್ಯ

ಸಣ್ಣ ಕತೆ

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…