ದಾರಿ ತಪ್ಪಿಸುವ ಶ್ಲೋಕ – ಒಂದು ಚಿಂತನೆ

ದಾರಿ ತಪ್ಪಿಸುವ ಶ್ಲೋಕ – ಒಂದು ಚಿಂತನೆ

ಇಡೀ ಮಾನವ ಕುಲದ ಮನಸ್ಸನ್ನು ಮೋಸಗೊಳಿಸಿ ಸಮಾಜದ ವಿಕೃತಿಗೆ ಕಾರಣವಾಗಿರುವ ಒಂದು ಶ್ಲೋಕ ಇದೆ. ಅದು ಬ್ರಾಹ್ಮಣ ಎಂದರೆ ಯಾರು ಎಂದು ತಿಳಿಸಲು ಅಳತೆಗೋಲಾಗಿರುವ ಶ್ಲೋಕ.

 ಜನ್ಮನಾ ಜಾಯತೇ ಶೂದ್ರಃ
 ಕರ್ಮಣಾ ಜಾಯತೇ ದ್ವಿಜಃ |
 ವೇದ ಪಾಠೇಣ ವಿಪ್ರಾಣಾಂ
 ಬ್ರಹ್ಮ ಜ್ಞಾನಂ ತು ಬ್ರಾಹ್ಮಣಃ ||

(ಹುಟ್ಟಿನಿಂದ ಶೂದ್ರನಾಗಿ, ತನ್ನ ಕರ್ಮಾಧಿಕಾರದ ನಿರ್ವಹಣೆಯಿಂದ ದ್ವಿಜನಾಗಿ, ವೇದಾದಿಗಳ ಪಾಠ ಪಠನಗಳಿಂದ ವಿಪ್ರನಾಗಿ, ಬ್ರಹ್ಮಜ್ಞಾನ ಪಡೆದನಂತರ ಬ್ರಾಹ್ಮಣನಾಗುತ್ತಾನೆ.)

ಜನ್ಮನಾ ಜಾಯತೇ ಶೂದ್ರಃ: -ವಿಚಾರಕ್ಕಾಗಿ ಈ ಮಂತ್ರದ ಹಿನ್ನೆಲೆಯಲ್ಲಿ ಹುಟ್ಟಿನಿಂದ ಎಲ್ಲರೂ ಶೂದ್ರರೆಂದು ಸ್ವೀಕರಿಸುವ.

ಕರ್ಮಣಾ ಜಾಯತೇ ದ್ವಿಜಃ -ತಾನು ಮಾಡುವ (ಯಾವುದೇ) ಕರ್ಮದಿಂದ ದ್ವಿಜ ಎಂದರೆ ಮರುಹುಟ್ಟು ಪಡೆದವನಾಗುತ್ತಾನೆ. ಕರ್ಮ ಎಂದರೆ ಕೈಕೊಳ್ಳುವ ಕೆಲಸ. ಕರ್ಮದಿಂದ ಮರುಹುಟ್ಟು ಪಡೆಯುಪುದು ಹೇಗೆ? ನಿಷ್ಠೆಯಿಂದ, ಪ್ರಾಮಾಣಿಕತೆಯಿಂದ ಅದರಲ್ಲಿ ತಲ್ಲೀನನಾಗುವುದರ ಮೂಲಕ ಅಂತರಂಗದ ಅರಿವನ್ನು ಪಡೆಯುವುದು. ತನ್ನನ್ನು ತಾನು ಕಂಡುಕೊಳ್ಳುವುದು. ಈ ರೀತಿ ತನ್ನಿಂದ ತಾನೇ ಉದ್ಭವವಾಗುವ, ಮರು ಹುಟ್ಟು ಪಡೆಯುವ ಪವಿತ್ರಕರ್ಮ ವರ್ಷಕ್ಕೊಮ್ಮೆ ಮಾಡುವ ಉಪಾಕರ್ಮವಾಗಿ ಬರಿಯ ದಾರದ ಬದಲಾವಣೆಗೆ ಸೀಮಿತವಾಗಿರುವುದು ಮಾನವ ಕುಲದ ದುರಂತವಲ್ಲದೆ ಮತ್ತೇನು ?

ವೇದ ಪಾಠೇಣ ವಿಪ್ರಾಣಾಂ – ವೇದ ಪಾಠ ಪಠಣಗಳಿಂದ ಅಂದರೆ ವೇದಾಧ್ಯಯನ ಮಾಡುವುದರಿಂದ ವಿಪ್ರವಾಗುತ್ತಾನೆ. ಮಹಾಭಾರತದ ಅನುಶಾಸನ ಪರ್ವದಲ್ಲಿ ಒಂದು ಶ್ಲೋಕ

 ತ್ರೈವಿದ್ಯೋ ಬ್ರಾಹ್ಮಣೋ
 ವಿದ್ವಾನ್ನ ಚಾಧ್ಯಯನ ಜೀವಕಃ
 ತ್ರಿಕರ್ಮಾ ತ್ರಿಪರಿಕ್ರಾನ್ತೋ
 ಮೈತ್ರಮೇಷ ಸ್ಮೃತೋ ದ್ವಿಜ //೬೬//

(ಯಾವ ವಿದ್ವಾಂಸನು ಮೂರು ವೇದಗಳನ್ನು ಅಧ್ಯಯನ ಮಾಡಿರುವನೋ, ವೇದವನ್ನು ಹೇಳಿಕೊಟ್ಟು ಜೀವಿಕೆಯನ್ನು ನಡೆಸುವುದಿಲ್ಲವೋ, ದಾನ-ಧರ್ಮ-ಯಜ್ಞಗಳೆಂಬ ತ್ರಿಕರ್ಮಗಳಲ್ಲಿ ಯಾವಾಗಲೂ ನಿರತನಾಗಿರುವನೋ, ಕಾಮ-ಕ್ರೋಧ-ಲೋಭಗಳನ್ನು ಪರಿತ್ಯಜಿಸಿರುವನೋ ಎಲ್ಲ ಪ್ರಾಣಿಗಳ ವಿಷಯದಲ್ಲಿಯೂ ಮೈತ್ರಿ ಭಾವದಿಂದಿರುವನೋ ಅವನೇ ದ್ವಿಜ- ಶ್ರೀಮನ್ಮಹಾಭಾರತ, ಭಾಗ ೨೯, ಪುಟ ೪೭೮೩)

ಮೂರು ವೇದಗಳನ್ನು ಅಧ್ಯಯನ ಮಾಡಿರುವವನು ಯಾರು ಇದ್ದಾನೆ? ಅದಿರಲಿ ಮೂರು ವೇದಗಳ ಪೂರ್ಣಪಾಠ ಇದೆ ಎಂದು ಎದೆ ತಟ್ಟಿ ಹೇಳಬಲ್ಲವರು ಯಾರು ಇದ್ದಾರೆ ? ಮನಸ್ಸಿನಿಂದ ಮನಸ್ಸಿಗೆ ಹರಿದು ಬಂದ ವೇದಗಳ ಜ್ಞಾನ ಶಾಖೆ ಯಾವ ಯಾವ ಮನಸ್ಸಿನಿಂದ ನುಸುಳಿ, ಅಪಭ್ರಂಶಗೊಂಡು ಮಿಕ್ಕಿದ್ದೆ ದಕ್ಕಿದ್ದು ಎನ್ನುವಂತಾಗಿಲ್ಲ! ಅದಷ್ಟನ್ನು ಅಧ್ಯಯನ ಮಾಡಿದವ ವಿಪ್ರನಾಗುತ್ತಾನೆ ಎನ್ನುವ ಸೀಮಿತ ಅಭಿಪ್ರಾಯ ಸರಿಯೆ? ಈ ಇಪ್ಪತ್ತನೇ ಶತಮಾನದಲ್ಲಿ ವೇದಾಧ್ಯಯನ ಮಾಡುವುದಿರಲಿ ಅದನ್ನು ನೋಡಿದ್ದೇನೆ ಎಂದು ಹೇಳಬಲ್ಲ ಬ್ರಾಹ್ಮಣರೆಷ್ಟಿದ್ದಾರೆ? ಈ ಠಕ್ಕುಗಾರರನ್ನು ಕುರಿತು ಸ್ವಾಮಿ ವಿವೇಕಾನಂದರು “ನೀಚರೂ, ಕುತಂತ್ರಿಗಳೂ ಆದ ಪುರೋಹಿತರು ಎಲ್ಲಾ ವಿಧದ ಮೂಢನಂಬಿಕೆಗಳನ್ನು ವೇದ ಮತ್ತು ಹಿಂದೂಧರ್ಮದ ಸಾರ ಎಂದು ಬೋಧಿಸುತ್ತಾರೆ. ಈ ಠಕ್ಕುಗಾರರಾದ ಪುರೋಹಿತರಾಗಲೀ ಅಥವಾ ಅವರ ತಾತ ಮುತ್ತಾತಂದಿರಾಗಲೀ ಕಳೆದ ನಾನೂರು ತಲೆಮಾರುಗಳಿಂದಲೂ ವೇದದ ಒಂದು ಭಾಗವನ್ನೂ ನೋಡಿಲ್ಲ. ಮೂಢಾಚಾರಗಳನ್ನು ಅವರು ಅನುಸರಿಸಿ ಹೀನ ಸ್ಥಿತಿಗೆ ಬರುತ್ತಾರೆ. ಕಲಿಯುಗದಲ್ಲಿ ಬ್ರಾಹ್ಮಣ ವೇಷದಲ್ಲಿರುವ ಈ ರಾಕ್ಷಸರಿಂದ ಮುಗ್ಧ ಜನರನ್ನು ಆ ದೇವರೇ ಕಾಪಾಡಬೇಕು.” – ಎಂದಿದ್ದಾರೆ. (ಸ್ವಾ. ಮಿ. ಕೃತಿ ಶ್ರೇಣಿ೬, ಪುಟ೬೬)

ಬ್ರಹ್ಮ ಜ್ಞಾನಂ ತು ಬ್ರಾಹ್ಮಣ : – ನೋಡಿ, ಇದು ಎಂತಹ ವಿಪತ್ಕಾರಕ ಸುಳಿ ಎಂಬುದನ್ನು! ಇಲ್ಲಿ ಎರಡು ಪದಕ್ಕೆ ಒತ್ತು ಇದೆ. ಒಂದು ಬ್ರಹ್ಮ ಇನ್ನೊಂದು ಅವನ ಜ್ಞಾನ. ಬ್ರಹ್ಮ ಎಂದರೆ ಯಾರು? ಮೂಲಪುರುಷನನ್ನು ಒಂದೊಂದು ಧರ್ಮದವರು ಒಂದೊಂದು ಹೆಸರಿನಲ್ಲಿ ಕರೆದಂತೆ ಈ ಬ್ರಹ್ಮ ಎನ್ನುವ ಹೆಸರೂ ಕೂಡ ಒಂದು. ಇವನ ವರ್ಣನೆ ಕೂಡ ಅದ್ಭುತವಾಗಿದೆ. ಇವ ರೂಪಾತೀತನಾದವ, ನಾಮಾತೀತನಾದವ, ಜ್ಞಾನಾತೀತನಾದವ, ಗುಣಾತೀತನಾದವ, ಎಂದರೆ ಒಟ್ಟರ್ಥದಲ್ಲಿ ಶೂನ್ಯ. ಈ ಶೂನ್ಯದ ಜ್ಞಾನವನ್ನು ಯಾರು ಪಡೆದಿದ್ದಾನೆಯೋ ಅವನು ಬ್ರಾಹ್ಮಣ. ಇದೇ ಮಾನವ ಕುಲಕ್ಕೆ ಮಾರಕವಾದ ಮೊದಲ ಮೆಟ್ಟಿಲು.

ಈ ಮೇಲೆ ಹೇಳಿದ ಬ್ರಹ್ಮ, ಹಾಗೂ ಆ ಬ್ರಹ್ಮಜ್ಞಾನ ಯಾವ ವ್ಯಾಖ್ಯೆಗಾಗಲೀ, ಅಳತೆಯ ಚೌಕಟ್ಟಿಗಾಗಲೀ ನಿಲುಕದ ನಿರ್ವಿಕಾರವಾದ ಶೂನ್ಯ. ಇದು ಭವ್ಯವಾದ ಅಮೂರ್ತ ಕಲ್ಪನೆ. ಈ ಅಮೂರ್ತ ಕಲ್ಪನೆಯನ್ನು ಇವ ಒಳಗೊಂಡಿದ್ದಾನೆ, ಇವನು ಬಾಹ್ಮಣ ಎಂದು; ಇವನು ಒಳಗೊಂಡಿಲ್ಲ ಇವನು ಅಬ್ರಾಹ್ಮಣ ಎಂದು ನಿರ್ಧರಿಸುವ ಬಗೆ ಹೇಗೆ ? ಈ ಅಮೂರ್ತ ಭವ್ಯ ಕಲ್ಪನೆಯನ್ನು ಜನಿವಾರ ಎನ್ನುವ ದಾರಕ್ಕೆ ಸೀಮಿತಕೊಳಿಸಿಕೊಂಡ ಸಂಕುಚಿತ ಮನಸ್ಸಿನ ಕಪಿಮುಷ್ಟಿಗೆ ಸಿಕ್ಕು ಇಡೀ ಮಾನವ ಕುಲದ ಮನಸ್ಸು ತುಕ್ಕು ಹಿಡಿದಿದೆ. ಈ ತುಕ್ಕು ಹಿಡಿದ ಮನಸ್ಸುಗಳ ವಿಷವರ್ತುಲದಲ್ಲಿ ಸಿಕ್ಕು ಬೆಂಕಿಯನ್ನು ಕಂಡು ಅದನ್ನು ಪಳಗಿಸಿ, ಕಬ್ಬಿಣ ಕರಗಿಸಿ ಹಾರೆ, ಗುದ್ದಲಿಗಳನ್ನ ಮಡಿಕೆ ಕುಡಿಕೆಗಳನ್ನ ಇಟ್ಟಿಗೆಗಳನ್ನ ಆಭರಣಗಳನ್ನ ಮಿಶ್ರಲೋಹಗಳನ್ನ ತಯಾರಿಸಿದ ಶ್ರಮಜೀವಿ ಮಾನವನ ಪ್ರಗತಿಗೆ ಕಾರಣವಾಗಿದ್ದರೂ ಮಾನ್ಯತೆ ಪಡೆಯದೆ ಮೂಲೆಗುಂಪಾಗಿ, ಅದೇ ಬೆಂಕಿಯನ್ನ ಪಳಗಿಸಲಾರದ ಪವಾಡ ಪಂಥದ ಪುರೋಹಿತ ಅದನ್ನು ಅಗ್ನಿದೇವನನ್ನಾಗಿ ವೈಭವೀಕರಿಸಿ ಹವಿಸ್ಸನ್ನು ಅರ್ಪಿಸುತ್ತಾ, ತನ್ನ ಭ್ರಮಾತ್ಮಕತೆಯಿಂದ ಇಡೀ ಮಾನವ ಕುಲದ ದುರಂತಕ್ಕೆ ಕಾರಣನಾಗಿದ್ದರೂ ಅವನನ್ನು ಮಾನ್ಯತೆ ಮಾಡಿ ದಾರಿ ತಪ್ಪಿಸುತ್ತಿರುವುದು ಮೌಢ್ಯವಲ್ಲವೆ ?

ಅಲ್ಲದೆ ಶೂದ್ರನಾದ ಐನ್‌ಸ್ಟೀನ್‌ ಮಾನವ ಜನಾಂಗದ ಪ್ರಗತಿಗೆ ಆಟಂ ಅನ್ನು ಕಂಡುಹಿಡಿದ. ಆದರೆ ಬುದ್ಧಿವಂತರೆಂಬ ಭ್ರಮಾತ್ಮಕ ಜನ ಅದನ್ನು ನಾಗಸಾಕಿ ಹಿರೋಷಿಮಾಗಳ ಮೇಲೆ ಹಾಕಿ ಮಾನವ ಜನಾಂಗದ ಅವನತಿಗೆ ಉಪಯೋಗಿಸಿದ್ದು ಸಾಲದೆಂಬಂತೆ ಈಗ ಯಾವ ಮಟ್ಟಕ್ಕೆ ಹೋಗಿದ್ದಾರೆಂದರೆ ಭೂಗ್ರಹವನ್ನು ಒಟ್ಟಿಗೆ ಚೂರು ಚೂರು ಮಾಡುವಷ್ಟು ಶಕ್ತಿಯುತ ಅಣುಬಾಂಬುಗಳು ಸಿದ್ದವಾಗಿವೆ. ಇದು ಭ್ರಮಾತ್ಮಕ ಬುದ್ಧಿಯಿಂದ ಉದ್ಭವವಾಗುತ್ತಿರುವ ಮಾನವ ಕುಲದ ಸರ್ವನಾಶವಲ್ಲವೆ ?

ಹೀಗೆ ವಂಚಿರವಾಗಿರುವ ಮನಸ್ಸುಗಳಿಂದ ಸಮಾಜದ ಸುಧಾರಣೆಯಾಗಲೀ, ದೇಶದ ಪ್ರಗತಿಯಾಗಲೀ, ಇಲ್ಲ ಮಾನವ ಕಲ್ಯಾಣವಾಗಲೀ ಸಾಧ್ಯವೇ ? ಹೀಗಾಗಿ ಒಳಿತಿಗೆಂದು ಹಾಕಿಕೊಂಡಿರುವ ಒಂದೊಂದು ದಾರವೂ (ಅದು ಯಾವುದೇ ದಾರವಾಗಿರಲಿ) ಕುತ್ತಿಗೆಗೆ ಉರುಳಾಗಿದ್ದರೂ ಅದಕ್ಕೆ ಮರುಳಾಗಿ ಉಳಿಯುತ್ತಿರುವುದು – ಅದೂ ೨೧ ನೇ ಶತಮಾನಕ್ಕೆ ಪದಾರ್ಪಣೆ ಮಾಡುತ್ತಿರುವ ಈ ಪರ್ವಕಾಲದಲ್ಲಿ – ನಮ್ಮ ದುರ್ಬಲತೆಗೆ ಸಾಕ್ಷಿಯಲ್ಲವೆ ? ಎಂತಹ ನಾಚಿಕೆಗೇಡಿನ ವಿಷಯ!

ಹೀಗಾಗಿ ಜನಿವಾರ ಹಾಕಿ ಕೊಂಡವರೆಲ್ಲ ಬ್ರಾಹ್ಮಣರಾಗುವುದಿಲ್ಲ ; ಹಾಗೆಯೆ ಹಾಕಿಕೊಳ್ಳದವರು ಅಬ್ರಾಹ್ಮಣರಾಗುವುದಿಲ್ಲ. ಜನಿವಾರ ಹಾಕಿಕೊಂಡ ಮಾತ್ರದಿಂದಲೇ ಬ್ರಾಹ್ಮಣ ಎಂದು ಕರೆಸಿಕೊಳ್ಳುತ್ತಿರುವವರ ಹೃದಯದಾಳದಲ್ಲಿ ತಾನು ನಿಜವಾದ ಅರ್ಥದಲ್ಲಿ ಬ್ರಾಹ್ಮಣ ಅಲ್ಲ ಅನ್ನುವ ಅನುಮಾನ ಕಾಡುತ್ತಲೇ ಇದೆ. (Pride in ones caste more than in ones power to do good is the surest sign of a weak head – T.P. Kailasam, The purpose, page 36, 1973 edition)

ಈ ಅನುಮಾನದ ಸುಳಿಯಲ್ಲಿ ಸಿಕ್ಕಿ, ಮೋಸ ಹೋಗಿ ನರಳುತ್ತಿರುವ ಪ್ರಾಮಾಣಿಕ ಹೃದಯಕ್ಕೆ ಬ್ರಾಹ್ಮಣ ಎಂದರೆ ಬೈಗುಳವಾಗಿ ಬಿಡುವುದರಿಂದ ನನ್ನನ್ನು ಬ್ರಾಹ್ಮಣ ಎಂದು ಬೈಯಬೇಡಿ, ಹಾರುವ ಎಂದು ಆದರಿಸಿ ಎಂದು ಹೃದಯ ತೆರೆದು ನಿಜದ ನೆಲಗಟ್ಟಿನಲ್ಲಿ ನಿಂತು ಪೃಕೃತಿಯೊಂದಿಗೆ ಗುರುತಿಸಿಕೊಳ್ಳಲು ಹಾತೊರೆಯುತ್ತದೆ. ತಾನು ಏನು ಎಂದು ಅರಿವ ಪ್ರಾಮಾಣಿಕತೆಯಲ್ಲಿ ಪ್ರಗತಿಯ ಸೂಚನೆ ಇದೆ. ತಾನು ಯಾವುದು ಅಲ್ಲವೋ ಅದು ಎನ್ನುವ ಭ್ರಮೆಯಲ್ಲಿರುವುದು ಅವನತಿ ಮಾರ್ಗ. ಯಾರೇ ಆಗಲಿ ಬ್ರಹ್ಮವನ್ನರಿತ ಕ್ಷಣಾರ್ಧದಲ್ಲಿ ಶ್ರೀರಾಮಕೃಷ್ಣಪರಮಹಂಸ, ರಮಣ ಮಹರ್ಷಿಗಳಂತೆ ಹುಟ್ಟುತ್ತಲೇ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಎಂಬ ಅರಿಷಡ್ವರ್ಗಗಳಿವೆ; ಏಳನೆಯ ಜನಿವಾರದ ಬಂಧನವೇಕೆ ಎಂದು ಜನಿವಾರವನ್ನು ಕಿತ್ತೆಸೆದು ನಿಜದ ನೆಲಗಟ್ಟಿಗೆ ನೆಗೆದು ಬಿಡುತ್ತಾನೆ.

ಹೀಗೆ ಬ್ರಾಹ್ಮಣ ಎನ್ನುವ ಪದದಿಂದ ಮೋಸ ಹೋಗಿರುವ ಮನಸ್ಸುಗಳು ಬೆಳವಣಿಗೆಯನ್ನು ಕಂಡುಕೊಳ್ಳದೆ ನಿಂತ ನೀರಾಗಿ ಕೊಳೆತು ನಾರುತ್ತಿದ್ದರೂ ಅದನ್ನೇ ಪನ್ನೀರೆಂದು ಭ್ರಮಿಸುವ ಭ್ರಮೆಗೆ ಒಳಗಾಗಲು ಕಾರಣವೇನು? ಮೋಸಗೊಳಿಸುತ್ತಾ ಮೋಸ ಹೋಗುವುದರ ಅಂತರಂಗದ ಗುಟ್ಟೇನು? ಮೌಢ್ಯವನ್ನು ಉಳಿಸಿಕೊಂಡು ಬಂದು ಅದನ್ನೇ ಬಿತ್ತುತ್ತಾ ಅದರ ಮರೆಯಲ್ಲಿ ತನ್ನ ಸ್ವಾರ್ಥಸಾಧನೆ ಮಾಡಿಕೊಳ್ಳುವುದಲ್ಲವೆ? ಉದಾಹರಣೆಗೆ, ಉಡುಪಿಯ ನೂತನ ದೈವಜ್ಞ ಪೀಠದ ಕತೆಯನ್ನು ತೆಗೆದುಕೊಳ್ಳಿ: ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥಸ್ವಾಮಿ ಸೋದೇ ಸ್ವಾಮಿಗಳೇ ದೀಕ್ಷೆನೀಡಬೇಕು ಅಥವಾ ಅವರ ಒಪ್ಪಿಗೆಯಿಂದ ಈ ಕಾರ್ಯ ಆಗಬೇಕು ಎನ್ನುವುದು ಮೊದಲಿನಿಂದಲೂ ನಮ್ಮ ಬಯಕೆಯಾಗಿತ್ತು. ನೂತನ ಪೀಠಕ್ಕೆ ಅವರು ಒಪ್ಪಿಗೆ ನೀಡದ ಕಾರಣ ನಾವು ಆದೆಸೆಯಲ್ಲಿ ಮುಂದುವರೆದೆವು ಈಗ ಅವರು ತಮ್ಮ ಅಸಮ್ಮತಿ ಸೂಚಿಸಿ ನ್ಯಾಯಾಲಯದ ನೆಲೆಯಲ್ಲಿ ಇದನ್ನು ವಿರೋಧಿಸುವ ಸೂಚನೆ ಬಂದದ್ದರಿಂದ ನಿರ್ಧಾರವನ್ನು ಪುನವಿಮರ್ಶಿಸುವುದು ಅಗತ್ಯವಾಯ್ತು. ನಮ್ಮೊಳಗೆ ಫರ್ಷಣೆ ಉಂಟಾಗುವುದು ನಮಗೆ ಇಷ್ಟವಿಲ್ಲ. ಹೊಸ ದೈವಜ್ಞ ಪೀಠ ಬಯಸುವವರು ಪ್ರಸ್ತುತ ನಿರ್ಧಾರದಿಂದ ನಿರಾಶೆ ಅಥವಾ ಅಸಮಾಧಾನ ಹೊಂದದೆ ದೈವಜ್ಞ ಸಮಾಜದ ಉನ್ನತಿಗಾಗಿ ವಿಧಾಯಕ ಕಾರ್ಯಗಳಲ್ಲಿ ಶಕ್ತಿಯನ್ನು ಕೇಂದ್ರೀಕರಿಸಲೆಂದು ಹಾರೈಸುತ್ತೇನೆ ಎಂದಿದ್ದಾರೆ. -ಮುಂಗಾರು ೩೧. ೮. ೮೫.

ನೋಡಿ, ದೈವಜ್ಞ ಪೀಠ ಎಂದರೆ ದೈವವನ್ನು ತಿಳಿದ ಪೀಠ ಎಂದರ್ಥ. ದೈವವನ್ನು ತಿಳಿದವರಿಗೆ ನೂತನ ದೈವಜ್ಞ ಪೀಠದ ಅಗತ್ಯವೇನಿದೆ? ದೈವ ನೂತನವಾಗುವ ಸಾಧ್ಯತೆ ಇದೆಯೆ? ಈ ದೈವವನ್ನು ಅರಿತ ದೈವಜ್ಞರು ನ್ಯಾಯಾಲಯದ ಮೆಟ್ಟಲು ಹತ್ತುವ ಹಂತಕ್ಕೆ ಏಕೆ ಹೋದರು? ಈ ಉಡುಪಿ ಮಠಾಧೀಶರು ಒಂದು ಕೋಟಿ ರೂಪಾಯಿಗಳ ಚಿನ್ನದ ತೇರನ್ನು ಕಟ್ಟಲು ಯೋಚಿಸಿ ಹಣ ಸಂಗ್ರಹಣೆಗೆ ತೊಡಗುತ್ತಿದ್ದಾರೆ. ಅದರ ಆಗತ್ಯವೇನು ? ಈ ವರ್ಷದ ನಂಜನಗೂಡಿನ ರಥ ಚರಂಡಿಯಲ್ಲಿ ಹೂತು ನಿಂತಾಗ ಮೇಲೆತ್ತುವ ಯಂತ್ರ (ಕ್ರೇನ್) ತರಿಸಿ ಅದನ್ನು ಮುನ್ನಡೆಸಿದ್ದಾಯ್ತು. ಅಂದರೆ ಅದರ ಅರ್ಥ ಇಂದಿನ ಅಗತ್ಯ ವೈಜ್ಞಾನಿಕ ಬೆಳವಣಿಗೆ ಮತ್ತು ಅಗತ್ಯ ಎಂದಾಯಿತಲ್ಲವೆ ? ಕುಡಿವ ನೀರಿನ, ಚರಂಡಿ ವ್ಯವಸ್ಥೆ ಇರದ ಈ ದೇಶಕ್ಕೆ ಒಂದು ಕೋಟಿ ರೂಪಾಯಿನ ಚಿನ್ನದ ರಥವಾಗಲೀ, ತಿರುಪತಿ ತಿಮ್ಮಪ್ಪನಿಗೆ ಹಾಕಬೇಕೆಂದಿರುವ ಎಂಟು ಕೋಟಿ ರೂಪಾಯಿನ ಕಿರೀಟವಾಗಲೀ ಅಗತ್ಯವಿದೆಯೆ? ಇದು ದೈವದ ಹೆಸರಿನಲ್ಲಿ ಸ್ವಾರ್ಥ ಸಾಧಿಸಿಕೊಳ್ಳುತ್ತಿರುವ ಒಂದು ದುಷ್ಟಕೂಟ ಎನ್ನುವುದು ಅರ್ಥವಾಗುವುದಿಲ್ಲವೆ ? ಇಂತಹ ಅನಿಷ್ಟಕೂಟಗಳನ್ನ ಕಂಡು ಹೇಸಿದ ಸ್ವಾಮಿ ವಿವೇಕಾನಂದರು ಜನತೆಗೆ: Down with all superstitions! With temples, with priests, with Goda, with incornations, with God himself! I am all the God that ever existed. Truth triumphs and it is true I am infinite ಎಂದು ಕರೆ ಇತ್ತಿದ್ದಾರೆ . (C.W.S.V Vol 1p. ೫೦೨.)

ವಿಕಲ್ಪ ಹೊಂದಿದ ಈ ಬ್ರಾಹ್ಮಣ ಎನ್ನುವ ಪದ ಮನುಷ್ಯನ ಮೇಲೆ ಎಂತಹ ಗಾಢ ಪ್ರಭಾವವನ್ನು ಬೀರುತ್ತಾ ಬಂದಿದ್ದು ಅವನ ಅವನತಿಗೆ ಕಾರಣವಾಗಿದೆ ಎಂದರೆ ಮನುಷ್ಯರ ನಡುವೆ ಏರ್ಪಡಬೇಕಾಗಿದ್ದ ಮಾನವ ಅಂತ್ಥಃಕರಣವನ್ನೇ ತನ್ನ ಉಗುರುಗಳಿಂದ ಉಗ್ರನರಸಿಂಹನ ಉಗುರುಗಳಿಗಿಂತ ಕ್ರೂರವಾಗಿ ಕಿತ್ತುಕೊಂಡಿದೆ. ಸಮಾಜದ ಎಲ್ಲ ಸಂಪ್ರದಾಯದ ಶೃಂಖಲೆಗಳಿಂದ ಬಿಡಿಸಿಕೊಂಡು ವೈಚಾರಿಕವಾಗಿ, ಅಸ್ತಿತ್ವವಾದವನ್ನ ಆಲಂಗಿಸಿಕೊಂಡು ಬೆಳೆಯ ಹೊರಟ ಡಾ.ಯು. ಆರ್. ಅನಂತಮೂರ್ತಿ ಪೇಜಾವರರ ಪಾದಾರವಿಂದಗಳಿಗೆ ಮೆಟ್ಟಲಾಗಿದ್ದಾರೆ. ವ್ಶೆಜ್ಞಾನಿಕ ದೃಷ್ಟಿಕೋನವುಳ್ಳ ಡಾ. ಶಿವರಾಮಕಾರಂತರು ಸಾವಿರ ವರ್ಷಗಳ ಹೊರೆ ನನ್ನ ಮೇಲೆ, ಬ್ರಾಹ್ಮಣನ ಮೇಲೆ, ಹರಿಜನನ ಮೇಲೆ ಬಿದ್ದಿದೆ. ಅದನ್ನು ತೆಗೆದು ಹಾಕುವುದು ಅಷ್ಟು ಸುಲಭ ಅಲ್ಲ. ನಾನು ಗಾಂಧಿವಾದಿಯಾಗಿ ಸಮಾನತೆ ಇತ್ಯಾದಿ ಪ್ರತಿಪಾದಿಸಿದವನು. ಹರಿಜನರ ನಡುವೆ ಓಡಾಡಿ ಕೆಲಸ ಮಾಡಿದವನು. ಇಷ್ಟಾದರೂ ಒಮ್ಮೆ ಹರಿಜನರ ಮಗು ಒಂದನ್ನು ಎತ್ತಿಕೊಳ್ಳಲು ಹೋದಾಗ ನನ್ನ ಮೈಯೇ ಜುಂ ಎಂದಿದೆ ಎಂದಿದ್ದಾರೆ. – ತರಂಗ, ೧೭.೭.೮೩.

ಇಷ್ಟೆಲ್ಲ ಸತ್ಯದ ನಡುವೆಯೂ ಇತ್ತೀಚಿಗೆ ಜ್ಞಾನಪೀಠ ಪ್ರಶಸ್ತಿ ಪಡೆದುಕೊಂಡ ಕನ್ನಡದ ಆಸ್ತಿಯಾದ ಡಾ. ಮಾಸ್ತಿ ತಮ್ಮ ಧರ್ಮಸಂರಕ್ಷಣೆಯಲ್ಲಿ ಚಾತುರ್‍‍ವರ್ಣ ಇರಬೇಕು, ಎಲ್ಲರೂ ಬ್ರಾಹ್ಮಣರಾಗಬೇಕು ಎಂದಿರುವುದು ಇತಿಹಾಸದ ವ್ಯಂಗ್ಯವಲ್ಲವೆ ?
ಅದಕ್ಕಿಂತಲೂ ಅತ್ಮಂತ ಕ್ರೂರವಾದ ವ್ಯಂಗ್ಯವೆಂದರೆ “ಬನ್ನಿ, ಮನುಷ್ಯರಾಗಿ! ಯಾವಾಗಲೂ ಪ್ರಗತಿಗೆ ವಿರುದ್ಧವಾಗಿರುವ ಪುರೋಹಿತರನ್ನು ಒದ್ದೋಡಿಸಿ. ಅವರೆಂದಿಗೂ ತಿದ್ದಿಕೊಳ್ಳುವುದಿಲ್ಲ. ಅವರ ಹೃದಯ ಎಂದಿಗೂ ವಿಶಾಲ ಆಗುವುದಿಲ್ಲ. ಶತಶತಮಾನಗಳಿಂದ ಬಂದ ಮೂಢನಂಬಿಕೆ ಮತ್ತು ದಬ್ಬಾಳಿಕೆಯ ಮಕ್ಕಳವರು. ಮೊದಲು ಅವರನ್ನು ಬೇರು ಸಹಿತ ಕಿತ್ತೊಗೆಯಿರಿ” (ಸ್ವಾಮಿ ವಿವೇಕಾನಂದ ಕೃತಿಶ್ರೇಣಿ, ಸಂಪುಟ ೬, ಪುಟ ೮೧.) ಎಂದ ವಿವೇಕಾನಂದರ ಕ್ರಾಂತಿಕಾರಿ ವಿಚಾರವನ್ನ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬಿತ್ತಿ ಬೆಳೆಯದೆ ಹೋದದ್ದು.

ಹೀಗಾಗಿ ಇಂದಿನ ಅತ್ಮಂತ ಅನಿವಾರ್ಯ ಅಗತ್ಯವೆಂದರೆ, ಮೋಸಗೊಳಿಸುತ್ತಾ ಮೋಸ ಹೋಗುತ್ತಿರುವ ಮನಸ್ಸುಗಳು ಮಾನವ ಕುಲಕ್ಕೆ ಮಾರಕವಾಗಿರುವ ಈ ಭ್ರಮಾತ್ಮಕ ಶ್ಲೋಕವನ್ನ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಇತ್ಯಾದಿ ಪದಗಳ ಗೊಂದಲಗಳನ್ನು ತಿರಸ್ಕರಿಸಿ ಮಾನವತೆಯನ್ನ ಬಿತ್ತಿ ಬೆಳೆಯಬಲ್ಲ ವಾಸ್ತವದ ನೆಲೆಗಟ್ಟಿಗೆ ಹೃದಯವಮ್ನ ತೆರೆಯುವ ತೀವ್ರತೆ.

ಸೆಪ್ಟೆಂಬರ್ ೧೯೮೫

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?
ಎಂದೋ ಮನುಬರೆದಿಟ್ಟದಿಂದೆಮಗೆ ಕಟ್ಟೇನು?
ಎದೆಯದನಿ ಖುಷಿ; ಮನು ನಿನಗೆ ನೀನು!
-ಕುವೆಂಪು


Previous post ಶಿವಮೊಗ್ಗೆಯಲ್ಲಿ ಮಳೆ – ೧೯೪೬
Next post ನಿಯತ್ತು

ಸಣ್ಣ ಕತೆ

 • ದೇವರು ಮತ್ತು ಅಪಘಾತ

  ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

 • ದೊಡ್ಡವರು

  ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

 • ಮೃಗಜಲ

  "People are trying to work towards a good quality of life for tomorrow instead of living for today, for many… Read more…

 • ನಾಗನ ವರಿಸಿದ ಬಿಂಬಾಲಿ…

  ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

 • ಬೂಬೂನ ಬಾಳು

  ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

cheap jordans|wholesale air max|wholesale jordans|wholesale jewelry|wholesale jerseys