ಹತ್ತು ದಿನದಿಂದ ಊರಲ್ಲಿ
ರಚ್ಚಿಟ್ಟು ರಾಚುತ್ತಿದೆ ಮಳೆ
ಬಡಿದಂತೆ ನೆಲಕ್ಕೆ
ಏಕಕಾಲಕ್ಕೆ ಸಹಸ್ರಮೊಳೆ!
ಊರಿನ ಕೆನ್ನೆಗೆ ಪಟಪಟ
ಬಾರಿಸಿ
ರೇಗಿಸಿ
ಛೇಡಿಸಿ
ಕೂಗಿ ತರಿಸುತ್ತಿದೆ ಎಲ್ಲರ
ಎದೆಯಲ್ಲೂ ದಿಗಿಲು
ತಿಂಗಳ ಹಿಂದೆ
ಮಾತೇ ಬರದೆ ಉಗ್ಗುತ್ತಿದ್ದ
ಕಪ್ಪನೆ ಮುಗಿಲು!

ಕುಂಬಾರಗುಂಡಿಯ ಸಣ್ಣ ಹೊಂಡಗಳೆಲ್ಲ
ಸಾರಿನ ದೊನ್ನೆ
ಕೆಂಪನೆ ಸೊನ್ನೆ
ಪ್ರಿಯನ ಮೊದಲ ಮುತ್ತಿಗೆ ನಾಚಿದ
ಕನ್ನೆಯ ಕೆನ್ನೆ
ಒಮ್ಮೊಮ್ಮೆ ಕದಡಾರತಿಯ ನೀರು
ಜೀರಿಗೆ ಬೆಲ್ಲದ ಸಾರು
ಬಕೀಟುಗಟ್ಟಲೆ ಕುಡಿದಿವೆ
ಭತ್ತದಗದ್ದೆ ಅಡಿಕೆ, ಮಾವಿನ ಬೇರು.

ಮಳೆ ಹೊಡೆತಕ್ಕೆ ಕಂಗಾಲು
ಮುಚ್ಚಿದೆ ಮನೆ ಮನೆ ಬಾಗಿಲು,
ಸಿಳ್ಳು ಹಾಕುತ್ತ ಓಣಿಗಳಲ್ಲಿ
ಪುಂಡಗಾಳಿಯ ಇರಿಚಲು ಕಾವಲು.
ತೆರೆದಿದ್ದರೆ ಕಿಟಕಿ,
ಕೊಂಚ ಒಳಕ್ಕೆ ಹಣಿಕಿ
ಪೋಲಿ ಕೂಗುವ ತೆವಲು
ಪಡ್ಡೆಗಾಳಿಗೆ,
ಕನಸುತ್ತದೆ ಗೂಳಿ ಮನಸ್ಸು
ಕಾಮದ ಹೋಳಿಗೆ.

ನುಗ್ಗಿದೆ ದೊಡ್ಡ ಬ್ರಾಹ್ಮಣರ ಬೀದಿಗೂ
ಬೀರಿನ ಬಣ್ಣದ ನೀರು.
ಹೊಳೆ ಚರಂಡಿ ಒಂದಾಗಿ
ಗುಂಡಾಭಟ್ಟರ ಮಡಿ ಬಂದಾಗಿ
ಸ್ನಾನಕ್ಕೆ ರಜ,
ಪೂಜೆ ಸಂಧ್ಯಾವಂದನೆ ವಜ.
ಕಾಫಿ ನೀರಿಗೇ ತತ್ವಾರವಾಗಿ
ಭಟ್ಟರ ಮಡಿಯ ವ್ಯಾಖ್ಯಾನ ವಿಸ್ತಾರವಾಗಿ
ಹಿಂದೆ ತಿವಿಸಿಕೊಂಡಿದ್ದ ನಲ್ಲಿಯ ಮುಖಕ್ಕೇ ಈಗ
ಕುಂಕುಮ ಹೂವು ಏರಿಸಿ ಸತ್ಕಾರ,
ಅದು ಹರಿಸಿದ ನೀರಿನಲ್ಲೇ
ಪಾನಕ ಪನಿವಾರ.

ತುಂಗೆಗೆ ಗಂಗೆಯಾಗುವ ಮನ

ಭಾಗೀರಥೀ ಹಬ್ಬದ ದಿನ.
ಹೊಳೆ ಮೆಟ್ಟಿಲಲ್ಲಿ,
ರಾಮಣ್ಣ ಶೆಟ್ಟಿ ಪಾರ್ಕಿನ ಇಳಿ ಘಟ್ಟದಲ್ಲಿ
ನೂಕು ನುಗ್ಗಲು ಜನ.
ತುಂಗೆಯ ಸರ್ಕಸ್ಸು ಅವರೆದುರಿಗೆ :
ಪ್ರಶಾಂತಲಯದ ಬ್ಯಾಂಡು ನಡಿಗೆ ಈ ಗಳಿಗೆ,
ಹೆಡಿಗೆ ಮುಚ್ಚಳ ಸರಿಸಿ
ಸರಸರನೆ ನೆಲಕ್ಕೆ ಹರಿವ
ಸರ್ಪಗತಿ ತೆರೆಗೆ
ಮರುಗಳಿಗೆ;
ಹೆಡೆಯೆತ್ತಿ
ರಪ್ಪನೆ ಬಡಿದು ದಡಕ್ಕೆ,
ಸರಿ ದೂರ ಎನ್ನುವ ರೋಷ ;
ನಿಮಿಷಕ್ಕೊಂದು ಮೆಟ್ಟಲ ಮುಳುಗು
ಜಲಕ್ಕೆ ನೆಲ ನುಂಗುವ ಆವೇಶ!

ಇಂಥ ನೆರೆಯಲ್ಲೂ
ಸುರಿಯುವ ಮಳೆಯಲ್ಲೂ
ಜೀವದ ಜೊತೆ ಅಂಬಿಗರ ಹುಚ್ಚಾಟ,
ತೇಲುವ ಕಳ್ಳನಾಟಾ ಹಿಡಿಯಲು
ಹೊಳೆಗಿಳಿದಾನೆಗಳ ಮೋಜಿನ ನೀರಾಟ.
ಆಡುವ ಆನೆ ಒಮ್ಮೊಮ್ಮೆ ಗಾಢ, ನಿಶ್ಚಲ
ಮುಳುಗದ ಬೆನ್ನು, ತಲೆ. ಮೇಲೆ ಕೂಗುವ ಕಾಗೆ
ಆನೆಯೋ ಬಂಡೆಯೋ ?
ಬೆರಗಿನ
ಆನೆಬಂಡೆ ಕಾಗೆಬಂಡೆ ಪದಕ್ಕೆ
ಹೊಸ ಅರ್ಥಸ್ಪರ್ಶ!

ಎಸೆಯುತ್ತಾರೆ ಜನ ಕೈ ಮುಗಿದು ತಾಯ ಒಡಲಿಗೆ
ಹೂವು ಅಕ್ಷತೆ ಕಾಸು,
ಹಚ್ಚಿಡುತ್ತಾರೆ ಧೂಪ.
ತೇಲಿಬಿಡುತ್ತಾರೆ ಹೆಂಗಳೆಯರು
ನೂರಾರು ದೊನ್ನೆದೀಪ,
ಹಾಡುವ ನೀರಲ್ಲಿ ಆಡುವ ಬೆಂಕಿಯ ಪುಟಾಣಿಪಾಪ!
ನೋಡುವ ಭಾವುಕರಿಗೆ ಕವಿಸುತ್ತ ಬೆರಗು
ದೂರ ಕಡಲಲ್ಲಿ ಯುದ್ಧಕ್ಕೆ ಹೊರಟಿವೆ
ಪಂಜುಬೆಳಕಿನ ಸಾಲುಹಡಗು.

ಸಂಜೆ ರಸ್ತೆಯ ತುಂಬ
ಅರಳಿದ ಛತ್ರಿಗಳ ವಾಕಿಂಗು,
ಕೆಸರು ರಸ್ತೆಯಲ್ಲಿ ಎಂಕ ಸೀನರಿಗೆ ಸ್ಕೇಟಿಂಗು!
ಚಿಕ್ಕೆಯ ಬೆಳಕೂ ಇಲ್ಲದ ಕಕ್ಕಾಬಿಕ್ಕಿರಾತ್ರಿ,
ಊಟದ ಹೊತ್ತಿಗೇ ಕರೆಂಟು ಹೋಗುವುದು ಖಾತ್ರಿ.

ಬುಡ್ಡಿ ಬೆಳಕಿನಲ್ಲಿ ಬೆಚ್ಚನೆ ಊಟ
ಎಲ್ಲಿಲ್ಲದ ಸ್ನೇಹ
ಹಬೆ ಅನ್ನಕ್ಕೆ ಹಾಗಲಗೊಜ್ಜಿಗೆ.
ಇದ್ದರೆ ಒಂದೆರಡು ಮೆಣಸಿನ ಬಜ್ಜಿಗೆ,
ನಲಿಯುತ್ತದೆ ಕಿವಿ
ಹಪ್ಪಳ ಬಾಳಕ ಮುರಿಯುವ ಸದ್ದಿಗೆ!

ಆಹಾ :
ಎಲ್ಲಪ್ಪಾ ಸುರಿದೀತು ಇನ್ನೊಮ್ಮೆ ಅಂಥ ಮಳೆ
ಆಹಾ,
ಎಲ್ಲಪ್ಪಾ ಹರಿದೀತು ಇನ್ನೊಮ್ಮೆ ಹಾಗೆ ಹೊಳೆ!
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)