ಬೆಳಿಗ್ಗೆ ಎಂದಿಗಿಂತ ಬೇಗ ಎಚ್ಚರವಾಯ್ತು ಆಕೆಗೆ. ಇವತ್ತು ಎಲೆಕ್ಷನ್ ಟ್ರೇನಿಂಗು. ಹತ್ತು ಗಂಟೆಗೆಲ್ಲಾ ಅಲ್ಲಿರಬೇಕು. ನಿನ್ನೆಯ ಎಲ್ಲ ಪಾತ್ರೆಗಳ ಸಿಂಕನಲ್ಲಿ ಎತ್ತಿ ಹಾಕಿ ನೀರು ಬಿಟ್ಟಳು. ಪಾತ್ರಗಳ ಜೋರು ಸದ್ದು ಆಕೆಯ ಕೈ ಬಳೆಯ ಜೊತೆ ಸ್ಪರ್ಧೆಗಿಳಿದಂತೆ ಠಂಠಂ ಕಿಣಿಕಿಣಿ ಕೇಳಿಬರುತ್ತಲೂ ಗಂಡ ನಿದ್ದೆಯ ಮಂಪರಿನಲ್ಲೇ. ಬಗಿಲೇ ಹಗುರಕ್ಕೆ ಕೆಲಸ ಮಾಡೇ.. ನಿನ್ನ ಪಾತ್ರೆ ಸುಪ್ರಭಾತ ಸಾಕಮಾಡ ನಿದ್ದೆಗೆ ಭಂಗ ಆದದ್ದಕ್ಕೆ ಕೋಪದಿಂದ ಒಮ್ಮೆ ಒದರಿದ.
ಕೇಳಿಯೂ ಕೇಳದಂತೆ ಮೌನವಾಗೇ ಭಾರತಿಯ ಕೆಲಸ ಮುಂದುವರೆಯಿತು. ಪಾತ್ರೆ ತೊಳೆದು ಅಂಗಳ ಗುಡಿಸಿ ಬಂದವಳು ಸೀದಾ ಸ್ನಾನಕ್ಕೆ ಹೊರಟಳು. ನಿರ್ಲಿಪ್ತವಾಗೇ ಗಂಡನಿಗೆ ’ ಏಳಿ, ಗಿಡಕ್ಕೆ ಅಂಗಳಕ್ಕೆ ನೀರ ಹಾಕಿ’ ಎಂದು ಹೇಳಿ ಆತನ ಉತ್ತರಕ್ಕೂ ಕಾಯದೇ ಬಚ್ಚಲು ಮನೆ ಸೇರಿದಳು. ಆಕೆ ನೀರು ಹೊಯ್ದುಕೊಳ್ಳುತ್ತಿದ್ದದ್ದು ಕೇಳಿದಂತೆ ಎಳೆಯುವ ಕಣ್ಣುಗಳ ಬಲವಂತದಿಂದ ಜಾಗ್ರತಗೊಳಿಸಿಕೊಂಡು ಎದ್ದ ಆತ ಹಲ್ಲುಜ್ಜತೊಡಗಿದ. ಕಣ್ಣು ಬಾಗಿಲಲ್ಲಿ ಬಿದ್ದ ಪೇಪರ ಕಡೆ ಹೊರಳುತ್ತಲೂ ನೀರು ಹಾಕುವ ಕೆಲಸ ಮರೆತು ಹೋಗಿತ್ತು. ಸ್ನಾನ ಮಾಡಿಬಂದ ಆಕೆ ಅಂಗಳ ಇನ್ನು ನೀರು ಕಂಡಿಲ್ಲ ಎಂಬುದನ್ನು ಗ್ರಹಿಸಿದಳು. ಆತ ಯಾವಾಗಲೂ ಹಾಗೆ . ಸದ್ಯ ಬೇಗ ಎದ್ದನಲ್ಲ ಎಂದುಕೊಂಡು ತಾನೇ ಪಂಪು ಚಾಲೂ ಮಾಡಿ ಮನೆಮುಂದಿನ ಬೋನ್ಸಾಯಿಗಳಿಗೆ ನೀರುಣಿಸಿದಳು.
ಮೊನ್ನೆ ಸಹೋದ್ಯೋಗಿಯೊಬ್ಬಳು ಬಂದಾಗ ವ್ಹಾ! ಮೇಡಂ, ಎಂಥ ಅದ್ಭುತ ಅಲ್ವಾ? ಅಷ್ಟು ದೊಡ್ಡ ಮರಗಳು ಇಷ್ಟು ಚಿಕ್ಕ ಕುಂಡದಲ್ಲಿ ಹೀಗೆ ಬೆಳೆಸುವುದು. ನೋಡೋಕ್ಕೆ ಚೆಂದ ಅನ್ನಿಸ್ತವೆ. ನಂಗೂ ಹೀಗೆ ಗಿಡಗಳ ಬೆಳೆಸೋ ಆಸೆ.ಮನೆ ಬೃಂದಾವನದ ಹಾಗೆ ಮಾಡಿದ್ದೀರಿ..ಎಷ್ಟು ವೈರಟಿ ಮರಗಳನ್ನು ಬೆಳೆಸಿದ್ದೀರಿ! ಅದ್ಯಾಂಗೆ ಮೆಂಟೇನ್ ಮಾಡ್ತಿರಾ ನೀವು?ತುಂಬಾ ಸ್ಕೀಲ್ಡ್ ನೀವು? ಎಂದಾಗ ಅರೆ ಕ್ಷಣ ಖುಷಿಯಾಗಿತ್ತು.
ಇದೊಂದು ಜಪನೀಸ್ ಕಲೆ ಟೀಚರ. ತುಂಬಾ ಕಾಳಜಿಯಿಂದ ಬೆಳೆಸಬೇಕು. ನೋಡಲಷ್ಟೇ ಚೆನ್ನ ಇವು. ಹೊರಗಿನ ಮರಗಳ ತಾಕತ್ತಿಲ್ಲ ಎಂದಳು. ದೊಡ್ಡ ಮರವನ್ನು ಕುಬ್ಜತೆಗೆ ಈಡುಮಾಡಿದ ತನ್ನ ಹವ್ಯಾಸ ನೆನೆದು ಕ್ಷಣ ಅಧೀರತೆ ಆವರಿಸಿತು. ಛೇ! ನಾನು ಪಾಪದ ಚೀಲವನ್ನು ಹೊಲೆಯುತ್ತಿರುವೆನೇನೋ? ತಲೆ ಕೊಡವಿದಳು.
ಅಂಗಳಕ್ಕೆ ನೀರು ಗುಚ್ಚಿ ಒಳಬಂದರೂ ಆತನ ಓದುವಿಕೆ ಮುಗಿದಿರಲಿಲ್ಲ. ಮೊದಲ ಪೇಜಿನಿಂದ ಕೊನೆಯ ಅಕ್ಷರ ಬಿಡದೇ ಓದುವ ಆತನಿಗೆ ಇನ್ನೊಂದು ಅರ್ಧಗಂಟೆಯಾದರೂ ಬೇಕು. ಆಕೆ ದೇವರ ಕೋಣೆಗೆ ಹೋಗಿ ಕಾಟಾಚಾರದ ಊದುಬತ್ತಿ ಬೆಳಗಿ ದೀಪ ಹಚ್ಚಿ ಬಂದಳು. ಅಡುಗೆ ಕೋಣೆ ಸೇರಿ ಕಾವಲಿಗೆ ಹಿಟ್ಟು ಹೊಯ್ದು ರೇಡಿಯೋ ತಿರುಗಿಸಿದಳು. ಚಿಂತನ ಕಾರ್ಯಕ್ರಮ ಕೇಳುತ್ತ ಒಂದೊಂದೆ ದೋಸೆ ತೆಗೆದು ಹಚ್ಚಿಗೆಗೆ ಹಾಕತೊಡಗಿದಳು. ಬದಲಾದ ಕಾಲದಲ್ಲೂ ಕೆಲವೊಂದು ಆಕೆಯ ಆಸ್ಥೆಯ ವಸ್ತುಗಳ ಬಳಕೆ ಮಾಡುವುದು ಖಯಾಲಿ. ಹಳೆಯ ಹಿಂದಿಹಾಡು ಕೇಳುವುದು ಆಕೆಗಿಷ್ಟ. ಚಾ ಕುದಿಯಲಿಟ್ಟು ಮತ್ತೊಮ್ಮೆ ಗಂಡನಿಗೆ ಅದೇ ನಿರ್ಲಿಪ್ತತೆಯಿಂದಲೇ ನುಡಿದಳು. ದೋಸೆ ಆಯ್ತು. ತಿಂಡಿಗೆ ಬನ್ನಿ. ಹೆಚ್ಚು ಕಮ್ಮಿ ಆತನದು ಓದು ಮುಗಿದಂತೆ ಪೇಪರ ಮಡಚಿಟ್ಟು ಬಂದವನೇ ಗಟಗಟನೇ ಡೈನಿಂಗ್ ಟೇಬಲ್ಲಿನ ಮೇಲೆ ಇದ್ದ ಜಗ್ ಎತ್ತಿ ಒಂದಿಷ್ಟು ಕುಡಿದ. ಆತನಿಗೆ ಈಗ ಎಲ್ಲೂ ಹೋಗಬೇಕಿಲ್ಲ. ನಿವೃತ್ತಿಯಾಗಿ ನಾಲ್ಕು ತಿಂಗಳಾಯಿತು. ಹಾಗೆಂದು ಬೇಸರವಿಲ್ಲ.. ಮಹಾನ್ ಹಿಟ್ಲರನ ನೆಕ್ಸ್ಟ್ ಜನರೇಶನ್‌ನ ಗೆಳೆಯರ ಸಾಂಗತ್ಯವಿದೆ. ಸಮಯ ಕಳೆಯುವ ಕಷ್ಟವಿಲ್ಲದಂತೆ ಮನೆಗೆ ಬಂದು ತಾವೇ ಚಾ ಮಾಡಿ ಆತನಿಗೂ ಕೊಡುವಷ್ಟು ಟಾಲ್ಸಟಾಯ್, ಚೆಕಾಫ್‌ನಂತವರ ದಾರ್ಶನಿಕತ್ವದ ಬಗ್ಗೆ ಮಾತನಾಡುವ ಗೆಳೆಯರ ದೊಡ್ಡ ಬಳಗವಿದೆ. ದೋಸೆ ತಟ್ಟೆಗೆ ನೀಡಿ ಚಾ ವಾಟೆಗೆ ಹೊಯ್ದಳು. ಅವ ಕುಡಿದು ಮುಗಿಸುವವರೆಗೂ ಅಲ್ಲೇ ನಿಂತು ಕೊಂಡಿರಬೇಕು. ಮದುವೆಯ ನಾಲ್ಕನೇ ದಿನವೇ ಹೇಳಿದ್ದ, ನಾನು ಊಟ ಮಾಡುವಾಗ ನೀನು ಮಾತನಾಡಬಾರದು. ನನ್ನ ಊಟವಾದ ಮೇಲೆ ನೀನು ಉಣ್ಣು. ನನ್ನನ್ನು ಅತಿಯಾಗಿ ಅವಲಂಬಿಸಬೇಡ. ಆ ಕ್ಷಣಕ್ಕೆ ಮನಸ್ಸಿಗೆ ಕಸಿವಿಸಿಯಾಗಿತ್ತು. ಪ್ರೀತಿಗೂ ಅವಲಂಬನೆಗೂ ಅಂತರ ಅರಿಯದ ಮಹಾನ್ ತಾತ್ವಿಕ ಚಿಂತಕನೆಂಬ ಆತನ ಸಣ್ಣತನ ಬೇಗನೇ ಅರ್ಥವಾಗಿತ್ತು.
ಊರೆಲ್ಲ ನಿದ್ದೆ ಮಾಡುತ್ತಿರುವಾಗ ಗೆಳೆಯರೊಂದಿಗೆ ಹರಟೆ ಹೊಡೆದು ಮನೆಗೆ ಬರುತ್ತಿದ್ದ. ಕಿರಿಯ ಮಗ ಹುಟ್ಟಿದ ಸಂದರ್ಭ. ಎಳೆಂಟು ತಿಂಗಳ ಹಸುಗೂಸನ್ನು ಕಟ್ಟಿಕೊಂಡು ಬಂದ ತಾನು ಕಛೇರಿ ಕೆಲಸ ಮುಗಿಸಿ ಮನೆಗೆ ಬಂದು ಮನೆಗೆಲಸ ಮಾಡಿಕೂತಾಗ ಹಸಿವೆ ತಡೆಯಲಾರದೇ ಅದೊಂದು ದಿನ ಬೇಗ ಊಟಮಾಡಿದ್ದಳು. ಹಾಲುಣಿಸುವ ಕಾಲಕ್ಕೆ ಸಹಜವಾಗೇ ಆಕೆಗೆ ಬಹಳ ಹಸಿವಾಗುತ್ತಿತ್ತು. ಅಲ್ಲದೇ ಆತ ಬರುವಾಗ ತುಂಬಾ ತಡವಾಗಿತ್ತು. ಕಾದು ಕಾದು ತಡೆಯದೇ ಆಕೆ ಉಂಡಿದ್ದಳು.ಬಿಕನಾಸಿನ ತಂದ ಕಟ್ಟಿಕೊಂಡಂಗ್ಹಾಯ್ತ, ಗಂಡ ಬರೂಕ್ಕಿಂತ ಮುಂಚೆ ಸ್ವಾಹಾ ಮಾಡೋ ಹೆಣ್ತಿ ಅಂದ್ರೇ ನಿನ್ಹಂಗೆ ಇರ್‍ತರೇನೋ? ನಮ್ಮಪ್ಪ ಹೇಳ್ತದಾ. ಕುಲನೋಡೇ ಹೆಣ್ಣತರ್‍ಬೇಕ ಅಂದೇ..!ಬಕಾಸುರಿ.. ಬಿಕನಾಸಿ ಎಂದೆಲ್ಲಾ ಕೂಗಿ ಬಡಿಸಿದ ತಟ್ಟೆಯ ಆಕೆಯ ಮುಖಕ್ಕೆಸೆದು ಉಣ್ಣದೇ ಮಲಗಿದ್ದ.
ಆಕೆ ಹೌಹಾರಿದ್ದಳು. ನಾನೇನು ಬಿಕನಾಸಿಯಲ್ಲ. ನಮ್ಮಪ್ಪ ಬೇಕಾದಷ್ಟು ಕೊಟ್ಟೆ ನಿಮ್ಮ ಖರೀದಿ ಮಾಡಿದ್ದು. ಈ ದರ್ಪ ಧಿಮಾಕು ಅಯೋಗ್ಯನ ಅವತಾರ. ಬೇಕಾದ್ರೇ ಉಣ್ಣಿ ಬೇಡಾದ್ರೇ ಬಿಡಿ ಎಂದು ಕೂಗಿ ಹೇಳಿ ಕೋಣೆ ಸೇರಿದ್ದಳು. ಹೆಚ್ಚಿಗೆ ಮಾತಾಡಲಿಲ್ಲ. ಅದಾಕೆಗೆ ಬೇಕಿರಲಿಲ್ಲ.
ಮಾರನೇ ದಿನ ಪಕ್ಕದ ಮನೆಯ ಗಿರಿಜಮ್ಮ ಯಾಕ್ರೀ ಬಾಯರ, ರಾತ್ರಿ ಬರೋಬರಿ ಹನ್ನೆರಡಕ್ಕ ನಿಮ್ಮನೇಲಿ ದೊಡ್ಡಾಟ ನಡೆದಿತ್ತೇನ್ರೀ ಎನ್ನುತ್ತಾ ತಮಾಷೆ ಮಾಡಿದಾಗ ಉಕ್ಕಿದ ಕೋಪಕ್ಕೆ ಆಕೆಯ ಕಪಾಳಕ್ಕೆ ಬಿಗಿಯುವಂತಾಗಿತ್ತು. ಮಾತಾಡುವ ಇರಾದೆ ಇರಲಿಲ್ಲ. ಗಿರಿಜಮ್ಮನ ಹೀನತನಕ್ಕೆ ಹೆಣ್ತನದ ಬಗ್ಗೆ ಹೇಸಿಗೆಯಾಯ್ತು.
ಆ ದಿನದಿಂದ ಆಕೆ ಆತನ ಮೇಲೆ ಯಾವ ಮೋಹ, ಪ್ರೀತಿ ಕೊನೆಗೆ ಗಂಡನೆಂಬ ಹೆದರಿಕೆ ಇಲ್ಲದಿದ್ದರೂ ಆತನ ಊಟಕ್ಕೆ ಮುಂಚೆ ಉಣ್ಣುತ್ತಿರಲಿಲ್ಲ. ಮೌನಪ್ರೀತಿ ಗಾಢವಾಗಿತ್ತು.
ಆತನಿಗೆ ತಾನು ಹೆಂಡತಿಯನ್ನು ಹದ್ದುಬಸ್ತಿನಲ್ಲಿಟ್ಟುಕೊಂಡಿರುವೆ ಎಂಬ ಭ್ರಮೆ. ನೆಂಟರೆಲ್ಲ ಬಂದಾಗ ಖುಷಿಖುಷಿಯಿಂದ ಮಾತನಾಡುತ್ತಾನೆ ಆತ. ಹೊರಸ್ನೇಹಿತರ ಜೊತೆ ಕಲಕಲ ನಗುತ್ತಾನೆ. ಮನೆಯ ಒಳಬಂದಂತೆ ಸ್ತಬ್ಧಚಿತ್ರದಂತೆ ಭಾವನೆಗಳನ್ನೆಲ್ಲಾ ಮೂಟೆಕಟ್ಟುತ್ತಾನೆ. ಪ್ರಾಜ್ಞತೆಯ ಮುಖವಾಡದ ಹಿಂದಿನ ಗಂಡೆಂಬ ಹಮ್ಮು ಚೆನ್ನಾಗಿಯೇ ಬೆಳೆಸಿಕೊಂಡವನಾತ. ಅವನೊಂದಿಗೆ ತನ್ನದು ಇಪ್ಪತೈದು ವರ್ಷಗಳ ಅನುಭವ. ಮೊದಲೆಲ್ಲಾ ಈ ವಿಪರೀತಗಳಿಗೆ ತಲೆ ಕೆಡಿಸಿಕೊಂಡು ಕೊರಗಿದ್ದೆಷ್ಟೋ ಸಲ.
ಈಗ ಎದೆಎತ್ತರ ಬೆಳೆದ ಮಕ್ಕಳು ಆಗಾಗ ತಮಾಷೆ ಮಾಡುತ್ತಾರೆ. ಅದೇನಮ್ಮಾ! ಅಪ್ಪ ಅಷ್ಟು ಕ್ಲುಪ್ತವಾಗಿ ನಿಂಕಡೆ ವ್ಯವಹರಿಸಿದರೂ ನೀನು ನಿರಾಳಾಗೇ ಇರ್‍ತಿಯಲ್ಲಾ? ಯಾವ ಜಮಾನಾದ ಜೋಡಿ ನೀವ? ಅಪ್ಪ ಹೆಚ್ಚ ಮಾತಾಡದ್ರೆ ಯಾರಿಗಾರೂ ದುಡ್ಡು ಕುಡಬೇಕಾತಿದ ಅಂದಕಂಡರೇನಾ? ಅಥವಾ ನೀನ ಕಿವುಡಿ ಅಂದ್ಕಂಡರಾ? ನಕ್ಕು ಹೇಳಿದರೂ ಆ ಮಕ್ಕಳ ಎದೆಯಲ್ಲಿಯ ನೋವಿನ ಎಳೆ ಗೊತ್ತಾಗಿಯೂ ಆಕೆ ನಗುತ್ತಾಳೆ. ಅವರಿಗೂ ಅಪ್ಪ ಸಿಹಿಸಿಹಿಯಾಗಿ ನಗುತ್ತಾ ಇರಬೇಕೆಂಬ ಆಸೆ. ಮಗಳೊಮ್ಮೆ ಕೇಳಿಯೂ ಕೇಳಿದಳು, ಅಮ್ಮಾ ನೀನ್ಯಾಕೆ ಅಪ್ಪನ್ನ ಮದುವೆಯಾದೆ? ನಿಮ್ಮಗ್ ಇಬ್ಬರಿಗೂ ಮನಸ್ಥಿತಿಲೇ ವರ್ತನಿಲೇ ಮಾತನಲ್ಲೆ ಇಟ್ಟೆಲ್ಲಾ ವ್ಯತ್ಯಾಸ ಇದ. ನಿಂಗೆ ಬೇಜಾರಾಗುಲಾ ಅಮ್ಮ. ನಾನಂತೂ ಮದುವೆನೇ ಆಗುಕಿಲ್ಲಾ ಅಂದ್ಕಂಡಿ… ಆದರೂ ಇಂತಾ ಗಂಡ ಸಿಕ್ಕರೆ ಮುಲಾಜಿಲ್ಲದೇ ಡೈವೋರ್ಸಗೆ ಅಪ್ಲೈ ಮಾಡ್ವಳೇ ನಾನ ಅಂದಿದ್ದಳು. ಎಲ್ಲಕ್ಕೂ ಮೌನವಾಗಿದ್ದು ಸುಮ್ಮನೇ ನಗುತ್ತಾಳೆ. ಆಕೆಗನ್ನಿಸುವುದು ಜೀವನ ಕಲಿಸಿದ ಹತ್ತಾರು ಪಾಠಗಳ ಜೊತೆ ಇದೇನೂ ಹೆಚ್ಚಿನದಲ್ಲ. ಹೊರ ಊರುಗಳಿಗೆ ಕಲಿಯಲು ಹೋಗಿರುವ ಇಬ್ಬರು ಮಕ್ಕಳು ಬಂದಾಗ ಮಾತ್ರ ಆಕೆಗೆ ಮನೆ ಕಳೆಕಳೆಯಾಗಿ ಕಾಣುತ್ತದೆ. ಅವನಿಗೆ ಅಂತಹ ಯಾವ ಫರಕು ಇಲ್ಲ.
ಆತ ತಿಂಡಿ ಮುಗಿಸಿ ಸ್ನಾನಕ್ಕೆ ಹೊರಟ. ತಾನೀಗ ಬೇಗ ಬೇಗ ಸಿದ್ಧಳಾಗಬೇಕು. ಎಂಟೂವರೆಗೆ ಬಸ್ಸು. ಅದು ಹೇಗೋ ಎರಡು ದೋಸೆ ಗಂಟಲಲ್ಲಿ ತುರುಕಿ ಚಾ ಕುಡಿದಳು. ದಿನದ ನಡುವಿಗೆ ಹಸಿವು ಆಗದಿರಲೆಂದು ಒಳಹೋಗದ ದೋಸೆಯನ್ನು ಬಲವಂತದಿಂದ ತುರುಕುವುದು ತನ್ನ ನಿತ್ಯದ ಗೋಳು. ಒಳಹೋಗಿ ಬೀರುವಿನಿಂದ ಸೀರೆಯೊಂದನ್ನು ತೆಗೆದುಕೊಂಡಳು. ನೀಟಾಗಿ ಸೀರೆ ಉಡುವ ತನ್ನ ಕೌಶಲ್ಯಕ್ಕೆ ಪ್ರಾಯದ ಸಹೋದ್ಯೋಗಿ ಹುಡುಗಿಯರು ಸೀರೆ ಉಡುವ ವಿಧಾನ ಕಲಿಸೆಂದು ದುಂಬಾಲು ಬೀಳುತ್ತಾರೆ. ಮನದಲ್ಲೇ ನಕ್ಕಳು. ಮನೆಯ ಕೆಲಸ ಮುಗಿಸಿದ ಆಕೆಗೆ ಸುಸ್ತಾದಂತೆನ್ನಿಸಿ, ಆತನಿಗೆ ಬಸ್ಸು ನಿಲ್ದಾಣದವರೆಗೂ ಬಿಟ್ಟು ಬರುವಂತೆ ಹೇಳಬೇಕೆಂದುಕೊಂಡಳು. ಆದರೆ ಮಾತು ಗಂಟಲಲ್ಲಿ ಉಳಿದು ಕಾಲುಗಳು ಅರ್ಧ ಪರ್ಲಾಂಗು ದೂರದ ಬಸ್ಟಾಂಡಿನ ಕಡೆ ಹೆಜ್ಜೆ ಹಾಕಿದವು.
ತಂಗೀ…ತಂಗೀ… ಯಾರೋ ಕರೆದಂತಾಗಿ ಹಿಂದೆ ತಿರುಗಿದಳು. ದಾರಿಯ ಮಧ್ಯೆ ತನ್ನ ಹಿಂದಿನಿಂದ ತನ್ನ ತವರಿನ ಕೊಪ್ಪದ ಗೋಪಾಲಣ್ಣ ಬರುತ್ತಿದ್ದ. ಆತ ಮಾಣುವಿನ ಗಂಡನ ಎರಡನೆ ಅಣ್ಣ ಸಭ್ಯಸ್ಥ.. ನಕ್ಕು ಕುಶಲೋಪರಿ ಕೇಳಿ ’ ಊರಲ್ಲಿ ಎಲ್ಲರ ಕೇಳದೇ ಅಂದೇ ಹೇಳ್’ ಎಂದು ಹೇಳಿ ಮುಂದುವರಿದರೂ ಆಕೆಗೆ ಕೊಪ್ಪ ಕಣ್ಮುಂದೆ ಸುಳಿಯಿತು. ಹೊಸೂರು ಪಟ್ಟಣದಿಂದ ಬರೀ ಹತ್ತು ಮೈಲು ದೂರದ ತನ್ನೂರು ಸಗಡಿಬೇಣ ಮನಸ್ಸಿನಿಂದ ಎಷ್ಟು ದೂರವಾಗಿದೆ. ಸಮೀಪದಲ್ಲಿದ್ದರೂ ವರ್ಷಕ್ಕೆರಡು ಬಾರಿ ಕೂಡಾ ಹೋಗಿ ಬರಲಾಗದ ಸ್ಥಿತಿ ತನ್ನದು. ಅಪ್ಪ ಅಮ್ಮ ಹೋಗಿ ಹತ್ತು ವರ್ಷಗಳಾಗುತ್ತಾ ಬಂತು. ಅವರಿದ್ದಾಗ ಕರುಳಿನ ವ್ಯಾಮೋಹಕ್ಕೆ ಸಾಧ್ಯವಾಗದಿದ್ದರೂ ಅದು ಹೇಗೋ ಸಮಯ ಹೊಂದಿಸಿಕೊಂಡು ಹೋಗುತ್ತಿದ್ದೆ. ಈಗ ಹಾಗಲ್ಲ.
ಬಸ್ಟ್ಯಾಂಡಿಗೆ ಬರುವ ಹೊತ್ತಿಗೆ ಬಸ್ಸು ಬಂದು ನಿಂತಿತ್ತು. ಇಡೀ ಬಸ್ಸಿನ ತುಂಬೆಲ್ಲಾ ಎಲೆಕ್ಷನ್ ನಡೆಸುವ ಪ್ರಕ್ರಿಯೆಗಳ ಕುರಿತ ಚರ್ಚೆ. ಇಷ್ಟು ದಿನಗಳವರೆಗೂ ಬಸ್ಸಿನಲ್ಲಿ ರಾಜಕೀಯ ಪಕ್ಷಗಳ ರಾಜಕಾರಣಿಗಳ ಕುರಿತ ಚರ್ಚೆಗಳು, ಮಂಡನೆಗಳು ನಡೆಯುತ್ತಿದ್ದರೆ ಇಂದು ಕೊಂಚ ಭಿನ್ನ. ಆಕೆಯ ಆಸಕ್ತಿಯೂ ಕೆರಳಿತ್ತು. ಅವರಿವರ ಚರ್ಚೆಗಳನ್ನು ಆಲಿಸತೊಡಗಿದ್ದಳು. ಇನ್ನೊಂದು ಕಡೆ ಈ ಎಲ್ಲ ಬದಲಾವಣೆಗಳ ನಡುವೆಯೂ ತನ್ನೂರಿನಂತಹ ಹಳ್ಳಿಗಳು ಅಲ್ಲಿಯ ಬದುಕು ಚೂರೂ ಕೂಡಾ ಬದಲಾಗದೇ ಇರುವ ಬಗ್ಗೆ, ಹೆಣ್ಣುಗಳ ಕಣ್ಣೀರಿನ ಕಥೆಗಳು ದಿನವೂ ಹಾಗೇ ಹಾಗೇ ವ್ಯಥೆಯ ಅಕ್ಷರಗಳಲ್ಲಿ ದಾಖಲಾಗುತ್ತಿರುವ ಬಗ್ಗೆ ಹೀಗೆ ಬಸ್ಸಿನ ಚರ್ಚೆಯ ವಿಷಯಗಳಾಗುವ ಕಾಲ ಬರಬಹುದೇ? ಯೋಚಿಸುತ್ತಾ ಇದ್ದವಳು ನಿಲುಗಡೆ ಬಂದಾಗ ಎಲ್ಲರೊಂದಿಗೆ ತಾನೂ ಇಳಿದು ಹೋದಳು.
* * * * * *
ಬೆಳ್ಳಂಬೆಳಿಗ್ಗೆ ಮಾಳಕ್ಕೆ ಮಲಗಲು ಹೋದ ಗಂಡ ಮನೆಗೆ ಬರುವ ಹೊತ್ತು. ಅದೋ ಅಷ್ಟು ದೂರದಲ್ಲಿ ಗದ್ದೆ ಬಯಲಿನ ಹಾಳೆಯ ಮೇಲೆ ಬರುತ್ತಿದ್ದಾನೆ. ಮನೆಯ ಹಿರಿಯ ಅಕ್ಕ ಎದ್ದಿರುವುದು ಮಾತ್ರ. ಉಳಿದವರು ಇನ್ನು ಸವಿ ನಿದ್ದೆಯಲ್ಲಿದ್ದಾರೆ.ಇವತ್ತಾದರೂ ಮಾತನಾಡಿಸಬಹುದು. ಇಲ್ಲದಿರೆ ತಾನೇ ಮಾತನಾಡಿಸಬೇಕು. ತಲೆ ಎತ್ತಿ ಆತನ ಕಡೆಗೆ ನೋಡತೊಡಗಿದಳು. ಆತ ಮಾತನಾಡಿಸುವ ಲಕ್ಷಣ ಕಾಣಲಿಲ್ಲ. ತಾನೇ ನಕ್ಕಳು. ಆತನ ಪೇಲವ ಮುಖದಲ್ಲಿ ಸಣ್ಣಗೆ ಕಿರುನಗೆ ಧೈರ್ಯ ತಂದಿತು. ಬ್ಯಾಗೆ ಬಂದ್ರೀ ಇಂದೆ,ಹೊತ್ತಿಗೆ ಮುಂಚೆ ಎದ್ರೆನೋ. ಸೆಖೆಗೆ ಆತ ಹುಂ. ಎಂದು ಮುಂದೆ ನಡೆದೆ ಬಿಟ್ಟ. ಒಳಗುದಿಯ ಬೇಗೆಗೆ ಕಣ್ಣುಗಳು ಮಂಜಾದವು. ಆತನ ಹಿಂದೆ ಹಿಂದೆ ಬಂದವಳು ಒದರಿ ಬಿಟ್ಟಳು ಇಂದೆ ನಮ್ಮ ಮದುವೆಯಾದ ದಿನ ಮರೆತಹೋಯ್ತೇ, ಮದುವೆಯಾಗಿ ಎರಡ ವರ್ಷಾಯ್ತ. ಎಂದಳು. ಆತ ಸುಮ್ಮನೇ ಬಚ್ಚಲು ಮನೆ ಹೊಕ್ಕವನ ನಿರಾಸಕ್ತಿಗೆ ಅನಾದರಕ್ಕೆ ಅಸಹಾಯಕ ನಿಟ್ಟುಸಿರು ದಬ್ಬಿದಳು.
ನೀವ್ಯಾಕೆ ದಿನವೂ ಮಾಳಕ್ಕೆ ಮಲಗುಕೆ ಹೋಗುದ, ಉಕ್ಲೀ ಎಲ್ಲ ಆಯ್ತಲ್ಲಾ ಅಲ್ಲೇನಿದ ಕಾಯುಕೆ. ಮನಿಲೇ ಮಲಗುಕಾಗುಲಾ ಬಚ್ಚಲು ಬಾಗಿಲ ಬಳಿ ನಿಂತು ಆಕೆ ಹೇಳುತ್ತಿರುವುದು ತನಗೆ ಕೇಳದೆಂಬಂತೆ ಆತ ನೀರು ಹೊಯ್ದುಕೊಳ್ಳುತ್ತಿದ್ದ. ಅದೆಷ್ಟೋ ಸಲ ಈ ಮಾತನ್ನು ನಾಲಿಗೆ ತುದಿವರೆಗೂ ಬಂದರೂ ತಡೆದುಕೊಂಡಿದ್ದನ್ನು ಇವತ್ತು ತಡೆಯಲಾರದೇ ನಾಚಿಕೆ ಬಿಟ್ಟು ಕೇಳಿದ್ದಳು. ತನ್ನ ಹಳಹಳಿಕೆ ಇತನಿಗೆ ಗೊತ್ತಾಗುವುದಾದರೂ ಹೇಗೇ? ದೇವರೇ!..
ಹಿರಿಯ ಭಾವ ಬಾಲಣ್ಣ ಮತ್ತು ಆತನ ಹೆಂಡತಿ ಅನ್ಯೋನ್ಯವಾಗಿದ್ದಾರೆ. ಇಬ್ಬರು ಮಕ್ಕಳ ಸಂಸಾರ ಅವರದು. ಇನ್ನೊಬ್ಬಾತ ಗೋಪಾಲಣ. ಅವನ ಹೆಂಡತಿ ಬಸುರಿ ಬಾಣಂತಿತನಕ್ಕೆ ತೌರಿಗೆ ಹೋಗಿದ್ದಾಳೆ. ಆದರೆ ತನ್ನ ಗಂಡ ಹೊನ್ನಪ್ಪ ಮಾತ್ರ ಹೀಗೆ. ತಾನು ಎಂದು ತಾಯ್ತನದ ಹಿಗ್ಗು ಕಾಣುವುದು. ವರ್ಷ ಎರಡು ಕಳೆದರೂ ಹತ್ತಿರ ಸುಳಿಯದ ಗಂಡ. ಉಮ್ಮಳಿಸಿಕೊಂಡು ಬಂದ ದುಃಖಕ್ಕೆ ಸೆರಗನ್ನು ಒತ್ತಿ ಹಿಡಿದುಕೊಂಡು, ಕೊಡವನ್ನು ಹಿಡಿದು ಸರಕಾರಿ ಬಾವಿಯ ಕಡೆ ನಡೆದಳು. ಮನೆಯ ಬಾವಿಯ ನೀರು ತಳಕಂಡಿತ್ತು. ಬೇಸಿಗೆಯ ದಿನ ಬಂತೆಂದರೆ ಹೆಂಗಳೆಯರಿಗೆ ಮುಗಿಯದ ವ್ಯಥೆ. ಕೊಡಗಳ ಸಾಲು ಸಾಲು ನೋಡುತ್ತ ಅಲ್ಲೆ ತನ್ನ ಕೊಡವಿರಿಸಿಕೊಂಡು ಕಾಯತೊಡಗಿದಳು.
ಗ್ರಾಮ ಪಂಚಾಯತಿ ಮೆಂಬರಾಗಿದ್ದ ಪಟೇಲನ ಮಗ ವೆಂಕಟ ಕೆರೆಯ ಕಡೆ ಹೋಗಿದ್ದವ ವಾಪಸ್ಸು ಬರುತ್ತಿದ್ದ. ಮದುವೆಯಾಗಿ ವರ್ಷವಾಗುವುದರೊಳಗೆ ತಂದೆಯಾಗಿದ್ದ. ಈಗ ಹೆಂಡತಿ ಎರಡನೇ ಹೆರಿಗೆಗೆ ತವರುಮನೆಯಲ್ಲಿದ್ದಳು. ದಿನ ಬೆಳಿಗ್ಗೆ ತೋಟಕ್ಕೆ ಕೆರೆಯ ನೀರನ್ನು ಹಾಯಿಸುವುದಕ್ಕಾಗಿ ತಮ್ಮ ಬೆಲಗಿನ ತೋಬು ತೆಗೆದುಕೊಟ್ಟು ಬರಲು ಹೋಗುತ್ತಿದ್ದ. ದಾರಿಯಲ್ಲಿ ಸರ್ಕಾರಿ ಬಾವಿಯ ಸುತ್ತ ನೆರೆದ ಹೆಂಗಳೆಯರ ಮೇಲೆತ್ತಿ ಕಟ್ಟಿದ ಸೀರೆಯ ಕೆಳಗಿನ ಕಪ್ಪು ದಪ್ಪ ಒಡೆದ ಹಿಮ್ಮಡಿಗಳ ಕಾಲುಗಳನ್ನಷ್ಟೇ ನೋಡುತ್ತಾ ’ಮುಖ ಮೇಲೆತ್ತಿದರೆ ಕೆಟ್ಟೆ’ ಎಂದುಕೊಳ್ಳುತ್ತ ಅಲ್ಲಿಂದ ತಪ್ಪಿಸಿಕೊಂಡರೆ ಸಾಕೆಂದು ಭರಭರ ಹೋಗುತ್ತಿದ್ದವನಿಗೆ ಆ ಕಾಲುಗಳ ನಡುವೆ ಗೆಜ್ಜೆ ಧರಿಸಿದ ಕೊಂಚ ಬೆಳ್ಳಗಿನ ತುಂಬಿದ ನುಣುಪು ಕಾಲುಗಳು ಒಮ್ಮೆಲೆ ಮನಸ್ಸನ್ನು ಆಯಸ್ಕಾಂತದಂತೆ ಸೆಳೆಯುತ್ತಲೂ ಆತ ಮುಖ ಮೇಲೆತ್ತಿದ. ಆತನ ಕಣ್ಣುಗಳು ಆಕೆಯೆಡೆಗೆ ವಾಲುತ್ತಲೂ ಆಕೆಯ ದೃಷ್ಟಿಯೂ ಅತ್ತಲೇ ಹೊರಳಿಕೊಂಡವು. ಕ್ಷಣದಲ್ಲಾದ ಈ ದೃಷ್ಟಿ ಪ್ರಮಾದ ಆತನನ್ನು ಅಲ್ಲೇ ನಿಲ್ಲಿಸಿದವು.
ತಾನಾಗಿಯೇ ಹೆಂಗಸರಿಗೆ ನೀರ ಬಾಳ ಕೆಳಗೆ ಹೋಗಿದ್ದಂಗೆ ಕಾಣ್ತಿದ, ನೀರ ಇದಾ ಎನ್ನುತ್ತಾ ಬಾವಿಯ ಕಟ್ಟೆ ಏರಿ ನೀರು ನೋಡುತ್ತಿರುವವನಂತೆ ನಾಟಕ ಮಾಡಿದ. ಇದೇ ಸಮಯ ಕಾಯುತ್ತಿದ್ದ ಮಾಳಿಗೆ ಮನೆಯ ದ್ಯಾಮಕ್ಕ ಬಿಟ್ಟರೆ ಸಿಕ್ಕ ಇಂವ, ಪಂಚಾಯತಿ ಮೆಂಬರ ಮಾಡದ್ದ ನಿನ್ನ ಎಂಥಕ್ಕೆ?. ತಿಂಗಳಾಯ್ತೆ ಬಂತ. ದಿನಾ ಇದೇ ಹಾಡ! ಕುಡಿಯುಕು ನೀರಿಲ್ಲದಂಗ್ಹೆ ಕಿರಕ್ತೆ ಇವ್ರ ನೋಡ, ಕಾಣುಲಾ! ನೀ ನೋಡದ್ರೆ ಮಾತ್ನಲ್ಲೆ ಮಾನಿ, ಬಾವಿ ರಸ್ತೆ ಎಲ್ಲಾ ಮಾಡ್ವಂವಾ. ಎಪ್ರಿಲ್ಲಿಗೆ ಹಿಂಗ್ಹೆ, ಇನ್ನ ಮೇ ಬಂದ್ರೇ ಹ್ಯಾಂಗೋ! ಮುಂದಿನ ಸಲ ಬ್ಯಾಸಗಿ ಬರೋವರ್ರೆ ಈ ಬಾವಿಗೆ ರಿಂಗ್ ಹಾಕ್ಸೆ ನೀರನ ತಾಪತ್ರಯ ತಪ್ಸದ್ರೇ ಮುಂದನ ಸಲ ನಿಂಗೆ ಓಟ, ಇಲ್ಲಾಂದ್ರೇ ಒಕ್ಕಲಕೇರಿ ರುಕ್ಕುಗೇ ಹಾಕ್ಬೇಕಂದೇ ಮಾಡವ ನಾವೆಲ್ಲ ಹಿಂಗಸ್ರೂ. ಅಲ್ವೇನ್ರೇ…? ಎಂದು ಆತನ ತರಾಟೆಗೆ ತಗೆದುಕೊಂಡಳು.
ಕೊಂಚ ಹರೆಯದ ಇನ್ನೊಬ್ಬಾಕೆ ಆತನ ಪರ ಮಾತನಾಡತೊಡಹಗಿದಳು ಏ, ಪಾಪ ಆವನೂ ಬೇಜಾರಲ್ಲೆ ಇಂವ್ನೆ .ರಾಶಿ ಬಯ್ಯಬ್ಯಾಡ. ಹೆಂಡ್ತಿ ಮನಿಲಿಲ್ಲ. ಬಾಣಂತನಕ್ಕೆ ಹೋಗಿದ. ಅದ ಬಂದ ಮ್ಯಾಲೆ ಅಂವ ನೋಡ. ನಮ್ಮ ಊರಿಗೆ ಏನೇನ ಬೇಕ ಎಲ್ಲಾ ಮಾಡ್ಸಕುಡ್ತಯಾ, ಯಾರ್‍ಯಾರಿಗೆ ಏನೇನ ಬೇಕ ಅದೆಲ್ಲಾ ಎನ್ನುತ್ತ ಒಂದ ನಮೂನೆಯಲ್ಲೇ ನಕ್ಕಳು. ಇದೆಲ್ಲಾ ನೋಡುತ್ತ ಕೇಳುತ್ತ ನಿಂತ ಮಾಣು ಆತನ ಕಡೆ ನೋಡುವ ಧೈರ್ಯ ಸಾಲದೇ ನಿಂತಿದ್ದಳು.
ಆದರಾತನಿಗೆ ಈ ಹೆಂಗಸರ ಯಾವ ಮಾತುಗಳು ಕೇಳಿಸದಂತಿದ್ದವು. ಆತನ ಮನಸ್ಸು ತಳಕಂಡ ಬಾವಿಯಲ್ಲಿ ನೀರನ್ನು ಅರಸುವ ಕೊಡದಂತೆ ಮಾಣುವಿನ ಮುಖದಲ್ಲಿ ತನ್ನ ಬಗೆಗಿನ ಭಾವವನ್ನು ಹುಡುಕುವ ಪ್ರಯತ್ನದಲ್ಲಿದ್ದಂತೆ ಅವಳ ಕಡೆಗೆ ಕಳ್ಳ ನೋಟ ಬೀರುತ್ತಿದ್ದ. ಬಹಳ ಹೊತ್ತಿನವರೆಗೂ ಅವರಿವರ ಕೂಡಾ ಮಾತನಾಡಿದಂತೆ ನಟಿಸುತ್ತಿದ್ದ ಆತನ ಹಿಕಮತ್ತು ಆಕೆಗೆ ಅರ್ಥವಾಗಿತ್ತು. ಆದರೂ ಎಳೆಪ್ರಾಯದ ಆಕೆ ಮನಸ್ಸು ಬೇಡಬೇಡವೆಂದರೂ ಅದ್ಯಾಕೋ ಮತ್ತೊಮ್ಮೆ ಆತನ ಕಡೆ ಹೊರಳಿದ್ದೇ ತಡ ಅವಳತ್ತಲೇ ದಿಟ್ಟಿನೆಟ್ಟ ಆತ ನಕ್ಕು ಕಣ್ಣು ಮಿಟುಕಿಸಿದ. ಆ ಕಣ್ಣಿನ ಎಲ್ಲ ಮಿಂಚು ಗೊಂಚಲಗೊಂಚಲವಾಗಿ ಆಕೆಯ ಎದೆಗಿಳಿದಂತೆ ಆಕೆ ತತ್ತರಿಸಿದಳು.
ಅಕ್ಕಪಕ್ಕದವರ್‍ಯಾರಾದರೂ ಕಂಡರೋ ಎಂದು ಕೊಂಡು ಆಚೀಚೆ ನೋಡಿಕೊಂಡಳು. ತನ್ನ ಸರದಿ ಬಂದಕೂಡಲೇ ಭರಭರನೇ ನೀರು ತುಂಬಿಕೊಂಡು ಮನೆ ಕಡೆ ಹೆಜ್ಜೆ ಹಾಕುತ್ತಿದ್ದವಳ ಹಿಂದೆ ಎರಡು ಹೆಜ್ಜೆಗಳು ಹಿಂಬಾಲಿಸುತ್ತಿರುವುದು ಅವಳರಿವಿಗೆ ಬಂದಿತ್ತು.
ಮನೆಗೆ ಬಂದವಳಿಗೆ ಕೋಳಿಗೂಡಿನಲ್ಲಿ ಪುಟ್ಟಿಯ ಮೇಲೆ ಕಾವಿಗೆ ಕೂತ ಹ್ಯಾಟೆ ಮರಿ ಮಾಡಿದ್ದು ಕಾಣುತ್ತಲೇ ಒಳಗೆ ದೋಸೆ ಹೊಯ್ಯುತ್ತಿದ್ದ ಭಾವನ ಹೆಂಡತಿಗೆ ಕೂಗಿ ಹೇಳಿದಳು. ಅಕ್ಕಾ ಕೋಳಿಹೆಂಟೆ ಮರಿ ಮಾಡಿದ. ಪುಟ್ಟಿಗೂಡೇ ಹೊರಗೆ ತೆಗಿಲೇ . ಅತ್ತೆ ಇಲ್ಲದ ಮನೆಯಲ್ಲಿ ಆ ಸ್ಥಾನ ಆಕ್ರಮಿಸಿಕೊಂಡ ಆಕೆ ಹಾಂ ತೆಗಿ, ಪುಟ್ಟಿ ತಿಗದ ಹೊರಗ ಹಾಕ್. ಮರಿ ಆದ ಮ್ಯಾನೆ ಅದ ಕೋಳಿ ಗೂಡಲ್ಲಿ ಇಡುದ ಬ್ಯಾಡಾ ಎಂದಳು.
ಮೊನ್ನೆ ಮೊನ್ನೆ ಮೊಟ್ಟೆ ಇಟ್ಟ ಹ್ಯಾಟೆ ಹೊರಗೆ ಬರುತ್ತಲೇ ಮರಿ ಆಡಿಸುತ್ತಾ ತಾಯ್ತನದ ಗತ್ತಿನಲ್ಲಿ ಮಲೆಯುತ್ತಾ ಕೊಕ್ಕೋಕ್ಕೋ.. ಅನ್ನುತ್ತಾ ಕೆಂಪು ಕಾಲುಗಳ ಮರಿಗಳನ್ನು ಪಕ್ಕೆಗಳಲ್ಲಿ ತುಂಬಿಕೊಳ್ಳಲು ಹವಣಿಸುತ್ತಿತ್ತು. ಮಾಣುವಿಗೆ ಎದೆಯೊಳಗೆ ಯಾರೋ ಬರೆ ಎಳೆದಂತೆ ದುಃಖದ ಸೆಲೆ ಉಕ್ಕುತ್ತಿತ್ತು. ಅದೇ ಸಮಯಕ್ಕೆ ಆಕೆಗೆ ನೆನಪಾಗಿದ್ದು ತಮ್ಮ ಗೂಡಲ್ಲಿ ಹುಂಜನಿಲ್ಲ. ಅರೇ.. ಹ್ಯಾಟೆ ಬೇರೆ ಗೂಡಿನ ಹುಂಜದ ಸಂಗ ಬೆಳೆಸಿರಬೇಕು. ಇಲ್ಲ ಆ ಹುಂಜನೇ ಇಲ್ಲಿಗೆ ಬಂದಿರಬೇಕು. ’ನೋಡು ಈ ಕೋಳಿಯ ಭಾಗ್ಯ’ ಎಂದುಕೊಂಡಳು.
ಕೋಳಿ ಗೂಡಿನ ಕಡೆ ಬಾಗಿದಾಗ ಸಣ್ಣಗಿನ ಪುಸುಕುಗಳು ಇಡೀ ಕೋಳಿಗೂಡನ್ನು ಮುತ್ತಿಕೊಂಡಂತೆ ಎದ್ದಿದ್ದವು. ’ಅಯ್ಯೋ ದೇವ್ರೇ..! ಇವೆಲ್ಲ ಕಡೆ ಹರಡಿ ಬಿಟ್ರೇ ಗೊಟಾಳಿ’ ಎಂದುಕೊಳ್ಳುತ್ತ ಬೇಗಬೇಗ ಅಡಿಕೆ ಸೋಗೆಗೆ ಬೆಂಕಿ ಹಚ್ಚಿಕೊಂಡು ಗೂಡಿನ ತುಂಬೆಲ್ಲ ಆಚೆಯಿಂದ ಈಚೆಗೆ ಈಚೆಯಿಂದ ಆಚೆಗೆ ಹಾಯಿಸತೊಡಗಿದಳು. ಅವು ಉಂಟು ಮಾಡುವ ಅಸಾಧ್ಯ ಮೈ ತುರಿಕೆ ಅವಳಿಗೆ ಗೊತ್ತಿಲ್ಲದ್ದೇನಲ್ಲ. ಮನಸ್ಸಿನ ತುಂಬಾ ಕಡೆಗಣಿಸುವ ಗಂಡನ ಬಗ್ಗೆ ತಾತ್ಸಾರ ತುಂಬಿಕೊಂಡಿದ್ದರೆ ಹೊರಗೆ ಕೋಳಿಗೂಡಿನ ಪುಸುಕುಗಳಿಗೆ ಎಬ್ಬಿಸಿದ ಬೆಂಕಿಯ ಹೊಗೆ ಎದ್ದಿತ್ತು.
ಇದಾಗಿ ವಾರ ಕಳೆದಿತ್ತು. ಅವತ್ತು ನಸುಕಿನ ಹೊತ್ತಲ್ಲಿ ತಂಬಿಗೆ ಹಿಡಿದು ಕುಂಭರಿಗೆ ಹೋಗಿದ್ದ ಆಕೆಯನ್ನು ಏಕಾಂಗಿಯಾಗಿ ಕಂಡಿದ್ದ ವೆಂಕಟ. ಕೆರೆಯ ಕಡೆ ಹೋದವನಿಗೆ ಆಕೆ ತಟ್ಟಂತ ಕಣ್ಣಿಗೆ ಬಿದ್ದಿದ್ದಳು. ಹತ್ತಿರದಲ್ಲಾರೂ ಇಲ್ಲದ ಖಾತ್ರಿಮಾಡಿಕೊಂಡ ಆತ ಹತ್ತಿರ ಬಂದವನೇ ಆಕೆಯನ್ನು ಹಿಂದಿನಿಂದ ಗಕ್ಕನೇ ಹಿಡಿದು ತಬ್ಬಿದ್ದ. ಪರಪುರುಷನ ಹಿಡಿತವೆಂಬುದು ತಿಳಿಯುತ್ತಲೂ ಆಕೆ ಕೊಸರಿಕೊಂಡಳು. ಗಂಡನ ಅಪ್ಪುಗೆಗಾಗಿ ಆ ಕ್ಷಣವೂ ಕನವರಿಸಿದಳು. ಕಣ್ಣುಗಳು ತುಂಬಿಕೊಳ್ಳುತ್ತಲೂ ಆತನ ಅಪ್ಪುಗೆಯಲ್ಲಿ ಕರಗಿದ್ದಳು. ಮತ್ತೆ ಮತ್ತೆ ಆತ ಆಕೆಯನ್ನು ಸೆಳೆಯತೊಡಗಿದ್ದ. ಆಕೆ ಸೊಗಸು ತುಂಬಿಕೊಳ್ಳತೊಡಗಿದಳು. ಗಂಡನ ಕಂಡಾಗಲೆಲ್ಲಾ ಇವನ್ಯಾರದ್ದಾದರೂ ಹಿಂದೆ ಬಿದ್ದಿದ್ದಾನೇಯೇ? ಎಂಬ ಸಂಶಯ ಬರುತ್ತಿತ್ತು. ಆದರೆ ಅದ ಪತ್ತೆ ಹಚ್ಚುವ ಆಸಕ್ತಿ ಇರಲಿಲ್ಲ. ಆಕೆಯ ಮೈ ಮನಸ್ಸುಗಳ ವೆಂಕಟ ಉಪಕ್ರಮಿಸಿಕೊಂಡಿದ್ದ.
ಐದಾರು ತಿಂಗಳು ಕಳೆದಿದ್ದವು. ಮಾಣು ದಿನವೂ ಬೆಳಿಗ್ಗೆ ವಾಂತಿ ಮಾಡಿಕೊಳ್ಳತೊಡಗಿದ್ದಳು. ಅನ್ನ ಕಂಡರೆ ಅದರ ವಾಸನೆ ತಿಳಿದರೆ ಸಾಕು ಗಕ್ಕ.. ಎಂದು ವಾಂತಿಯಾಗುತ್ತಿತ್ತು. ಪಕ್ಕದ ಮನೆಯ ಗೆಳತಿ ಭಾರತಿಯ ಹತ್ತಿರ ಹೇಳಿಕೊಳ್ಳಬೇಕೆನ್ನಿಸಿದರೂ ಆವರ ಮನಗೆ ಹೋಗುವಂತಿರಲಿಲ್ಲ. ಭಾವನ ಹೆಂಡತಿ ಒಂಥರಾ ಮುಖಮಾಡಿ ನೋಡತೊಡಗಿದರು. ದಿನವೂ ಹೀಗೆ ಆಗತೊಡಗಿದಾಗ ಆಕೆ ಅದನ್ನು ತನ್ನ ಗಂಡ ಮತ್ತು ಮೈದುನರ ಕಿವಿಗೆ ಹಾಕಿದ್ದಳು. ಒಂದಿನ ಸಂಜೆ ಚಹಾ ಕುಡಿಯುತ್ತಲೂ ಮನೆ ಜನವೆಲ್ಲಾ ಒಮ್ಮೆಲೆ ಆಕೆಯ ಸುತ್ತ ಮುಗಿ ಬಿದ್ದಂತೆ ಪ್ರಶ್ನೆಗಳ ಸುರಿಮಳೆ ಹಾಕತೊಡಗಿದರು.
ಹಿರಿಭಾವನೆನ್ನಿಸಿಕೊಂಡವ ಸಭ್ಯತೆ ಮೀರಿ ಏನೇ ಬೋಸಡಿ, ಇಟ್ ತಿಂಗಳ್ಯಾಯ್ತೆ? ಯಾರ ಸಂಗ್ತಿಗೆ ಮಲಗ್ಕಂಡೆ. ಯ್ಯಾವಂವ ಅಂವ ? ಎನ್ನುತ್ತಾ ಪೀಠಿಕೆ ಹಾಕುತ್ತಿದ್ದಂತೆ ಮೈ ಮೇಲೆ ದೆವ್ವ ಬಂದವನಂತೆ ಗಂಡನೆನ್ನಿಸಿಕೊಂಡವ ಅಂಗಳಕ್ಕಿಳಿದು ಕೂಗಲಾರಂಭಿಸಿದ. ಹಾದರಕ್ಕೆ ಹುಟ್ಟದ ರಂಡಿಗೆ ನೆಲ ಕುಟ್ಟಂಗಾಯ್ತ. ನಾನ ಒಂದಿನಾ ಹೋಗ್ದೇ ಇದ್ರು ಇದ ಬಸಿರಾಗಿದ.ಯಾವ ನಾಲಾಯಕ್ ಬೋ.. ಮಗನ ಕೂಡಕಂಡಿದಾ.? ಕುನ್ನಿ ಜಾತಿಯೋಳ. ಮನಿ ಕೆಲಸ ಮಾಡ್ಕಂಡ ಬಿದ್ಕಣುಕೇನಾಗತ? ಹೊಟ್ಟೆಗೆ ಇಲ್ಲದವಳಂದೆ ಕಟ್ಟಕಂಡ ಕೂಳ ಹಾಕದ್ರೇ ನಂಗೇ ಖೈಮಾ ತಿನಸ್ತ! ಬೋಸಡಿ, ನಿನ್ನಾ ಹಿಂಗೇ ಬಿಟ್ರಾಗಾ. ಪಾಠ ಕಲಿಸ್ಲೆ ಬೇಕ್.ಹೊಟ್ಟಿಗೆ ಹುಕ್ಕದ್ದೆಲ್ಲಾ ಸಿಗಿದ ಹಾಕುತನ್ಕಾ ನಂಗೆ ನಿದ್ರ ಬರಾ.. ಎನ್ನುತ್ತಾ ತನ್ನ ಗಂಡಸ್ತನದ ಬಗ್ಗೆ ಊರವರಿಗೆ ಇದ್ದ ಶಂಕೆಯನ್ನು ಜಗಜ್ಜಾಹೀರು ಮಾಡಿಬಿಟ್ಟ.
ಮಾಣುವಿಗೆ ದಿಕ್ಕೆ ತೋಚದಂತಾಯಿತು. ವೆಂಕmನ ಸುಳಿವಿಲ್ಲ. ’ಯಾರಾತ ’ಎಂದು ಪದೇ ಪದೇ ಕೇಳುತ್ತ ಈಗ ಹಿರಿಯ ಭಾವನೇ ಗಂಡನಿಗಿಂತ ಹೆಚ್ಚಾಗಿ ಕೋಲು ಹಿಡಿದು ಬಾರಿಸತೊಡಗಿದ. ಗಂಡ ಹೊರಗೆ ತೆಣೆಯ ಮೇಲೆ ಕೂತು ಜಗತ್ತಿಗೆ ಈ ವಿಷಯ ಶ್ರುತಪಡಿಸತೊಡಗಿದ. ಆಕೆ ನೆಲದ ಮೇಲೆ ಬಿದ್ದು ಹೊಡೆತದ ನೋವು ತಾಳಲಾರದೇ ಒದ್ದಾಡತೊಡಗಿದಳು. ಭಾವನ ಹೆಂಡತಿಯರು ಒಳಗೊಳಗೆ ಅದೆಂತಹುದೋ ಆನಂದ ಉಣ್ಣುತ್ತಿದ್ದರು. ಸಂಜೆವರೆಗೂ ಚೀರಾಡಿದಳು ಕೂಗಾಡಿದಳು. ಗಂಡನ ಷಂಡತನವನ್ನು ಕೊಪ್ಪದ ಕಿವಿಗಡಕಿಚ್ಚುವಂತೆ ಎರಡು ವರ್ಷಗಳ ತನ್ನ ವೇದನೆಯನ್ನು ಗಂಡನ ಪ್ರೀತಿಗಾಗಿ ಹಂಬಲಿಸಿದ್ದನ್ನು ಕೂಗಿ ಕೂಗಿ ಹೇಳಿದಳು. ಆಕೆಯ ಎಲ್ಲಕ್ಕೂ ಕೊಪ್ಪ ಆ ಜನರು ಕಿವುಡಾಗಿದ್ದರು. ಆಕೆ ಮಾತ್ರ ಮಾನದ ಕಟಕಟೆಯಲ್ಲಿ ಬಜಾರಿಯಾಗಿದ್ದಳು. ಅವಳ ಪರವಾಗಿ ಭಾರತಿಯೊಬ್ಬಳ ಬಿಟ್ಟರೆ ಮಾತಾಡುವವರಾರೂ ಇರಲಿಲ್ಲ. ನಿಂದೆ ಅಪಮಾನ ಎಲ್ಲವನ್ನೂ ಸಹಿಸಿದ ಮಾಣುವಿಗೆ ಆ ದಿನರಾತ್ರಿ ಮನೆಯೊಳಗೆ ಪ್ರವೇಶ ಸಿಗಲಿಲ್ಲ. ಮದುವೆಯ ಸುಖ ಕನಸುಗಳ ಕಂಡ ತನ್ನ ಗೊತ್ತಿಲ್ಲದೇ ಈ ಬರಡುಕೋಣಕ್ಕೆ ವಿಚಾರಿಸದೇ ಕಟ್ಟಿದ ಹೆತ್ತವರ ಬಗ್ಗೆ ಸಿಟ್ಟು ಬಂತು. ಗೊತ್ತಿದ್ದು ತನ್ನ ಬದುಕನ್ನು ಬರಡು ಬಂಜರನ್ನಾಗಿ ಮಾಡಹೊರಟ ಗಂಡನ ಮನೆಯವರ ಮೇಲೆ ಉಕ್ಕಿದ ಸಿಟ್ಟು ಆಕೆಯನ್ನು ಕೆರೆಯೆಡೆಗೆ ಕರೆದೊಯ್ದಿತು. ಮುಂಜಾನೆ ವೆಂಕಟ ಕೆರೆಗೆ ನೀರು ಹಾಯಿಸಲು ಹೋದಾಗ ಕೆರೆಯ ನೀರಲ್ಲಿ ಮಾಣು ತೇಲುತ್ತಿರುವುದ ಕಂಡು ದಿಗ್ಬ್ರಾಂತನಾಗಿ ಊರುಬಿಟ್ಟು ಓಡಿಹೋದ.
* * * * * *
ಮನೆಗೆ ವಾಪಸ್ಸು ಬಂದ ಆಕೆಗೆ ಸಿಂಕನಲ್ಲಿ ಎತ್ತಿಟ್ಟ ಊಟದ ತಟ್ಟೆಗಳು ವಾಟೆಗಳು ಕಾಯುತ್ತಿದ್ದವು. ಗಂಡ ಟಿ.ವ್ಹಿ ನೋಡುವುದರಲ್ಲಿ ಮಗ್ನನಾಗಿದ್ದ. ಚಪ್ಪಲಿ ಬಿಟ್ಟೆದ್ದು ಒಳನಡೆದು ಬಟ್ಟೆ ಬದಲಾಯಿಸಿ ಬಂದವಳು ತನಗೊಬ್ಬಳಿಗೆ ಚಹಾ ಮಾಡಲಿಟ್ಟಳು. ಆತ ಮಾಡಿಕೊಂಡು ಕುಡಿದಿರುತ್ತಾನೆ. ಚಾ ಹೀರುತ್ತಾ ಶೂನ್ಯ ಮನಸ್ಸಿನಲ್ಲಿದ್ದವಳಿಗೆ ಒಮ್ಮೆಲೆ ಪೇಟೆಯಲ್ಲಿ ಸಿಕ್ಕ ಮಾಣುವಿನ ಭಾವ ನೆನಪಾದ. ಮಾಣು ಮನಸ್ಸಿನ್ನು ಆಕ್ರಮಿಸಿಕೊಂಡಳು. ತನಗೆ ತವರು ನೆನಪಾದಾಗಲೆಲ್ಲ, ಮಾಣು ನೆನಪಾಗುತ್ತಾಳೆ. ಆಕೆ ತನ್ನ ಯೌವನದ ಕಾಲದ ಆಪ್ತ ಗೆಳತಿ. ದೂರದ ಊರಿನ ಆಕೆಯನ್ನು ಹೈಸ್ಕೂಲು ಮುಗಿಯುವ ಮೊದಲೇ ತನ್ನೂರಿಗೆ ಮದುವೆಮಾಡಿಕೊಟ್ಟಿದ್ದರು. ಮನೆಯ ಪಕ್ಕದವಳು. ತಮ್ಮ ಕೊಪ್ಪದಲ್ಲಿ ಹತ್ತಾರು ಮನೆಗಳು ಒತ್ತಟ್ಟಿಗೆ ಇರುವುದು. ಹೀಗಾಗಿ ಆಕೆ ಇವರ ಮನೆಗೆ ತಾನು ಆಕೆಯ ಮನೆಗೆ ಹೋಗಿ ಪಟ್ಟಾಂಗ ಹೊಡೆದು ಬರುವುದು ನಿತ್ಯ ಇತ್ತು. ಆಕೆಯ ಗಂಡನೆನ್ನಿಸಿಕೊಂಡವ ಆಕೆಯೊಂದಿಗೆ ಸಹಜವಾಗಿರಲಿಲ್ಲ. ಅದಕ್ಕೂ ಹೆಚ್ಚಾಗಿ ಆಕೆಯ ಚೆಂದಕ್ಕೂ ವಯಸ್ಸಿಗೂ ಅನುರೂಪನಾಗಿರಲಿಲ್ಲ. ಆದರೂ ಆಕೆಯೆಂದರೆ ಆತ ಯಾವ ಪ್ರೀತಿ ಮೋಹ ಇಲ್ಲದವನಂತೆ ಕಾಣುತ್ತಿದ್ದ. ಸಪೂರ ದೇಹದ ಗೋದಿ ಮೈಬಣ್ಣದ ಮಾಣು ಆಕರ್ಷಕವಾಗಿದ್ದಳು. ಸ್ವಲ್ಪ ಗಂಡು ದನಿಯಲ್ಲಿ ಮಾತನಾಡುವುದ ಬಿಟ್ಟರೆ ಆಕೆಯಲ್ಲಾವ ಕುಂದು ಕಾಣುತ್ತಿರಲಿಲ್ಲ. ಆಗೆಲ್ಲ ಹೊತ್ತಿಗೆ ಮುಂಚೆ ಅಷ್ಟೊತ್ತಿಗೆ ಎದ್ದು ನಿನ್ನೆಯ ಹೊಲಸಿನ ಮಡಿಕೆಗಳನ್ನೆಲ್ಲಾ ಒಯ್ದು ತೆಂಗಿನ ಗಿಡದ ಬುಡದಲ್ಲಿ ಇಟ್ಟ ನೀರಮರಿಗೆಯ ಪಕ್ಕದ ಕಲ್ಲಿನ ಮೇಲಿಟ್ಟು ಉಜ್ಜುತ್ತಾ ಆತನಿಗಾಗಿ ಕಣ್ಣು ಕಿರಿದುಗೊಳಿಸಿಕೊಂಡು ಕಾಯುತ್ತಿದ್ದಳು. ರಾತ್ರಿಯೆಲ್ಲ ಗದ್ದೆ ಕಾಯಲು ಮಾಳಕ್ಕೆ ಮಲಗಲು ಹೋಗುತ್ತಿದ್ದ ಗಂಡ ಬೆಳಗ್ಗೆ ಬರುತ್ತಿದ್ದ. ಆಕೆಯೊಂದಿಗೆ ಆತ ಒಂದು ದಿನವೂ ಮನಃಪೂರ್ವಕವಾಗಿ ಆನಂದದಿಂದ ನಕ್ಕಿರಲಿಲ್ಲ. ಮನಬಿಚ್ಚಿ ಮಾತಾಡುತ್ತಿರಲಿಲ್ಲ. ಕೇಳಿದ್ದಕ್ಕೆಲ್ಲಾ ಹಾಂ..ಹೂಂ ಎಂದಷ್ಟೇ ಹೇಳುತ್ತಿದ್ದನೆಂದು, ಮನೆಯ ಉಳಿದ ಜನರ ಜೊತೆ ಸರಿಯಾಗಿಯೇ ನಡೆದುಕೊಳ್ಳುತ್ತಿದ್ದನೆಂದು, ಆತನ ಅಣ್ಣನ ಮಕ್ಕಳನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದನೆಂದು, ಆ ಪ್ರೀತಿಯ ಒಂದು ಹನಿಯನ್ನಾದರೂ ತನ್ನೆಡೆಗೆ ತೋರುವುದಿಲ್ಲವೆಂದು ಮಾಣು ಸಮಯ ಸಿಕ್ಕಾಗಲೆಲ್ಲಾ ಮುಖ ಚಿಕ್ಕದು ಮಾಡಿಕೊಂಡು ಹೇಳುತ್ತಿದ್ದಳು.
ಯಾವ ಕಾರಣಕ್ಕೆ ಆತ ಹೀಗೆ ಮಾಡುತ್ತಿರುವನೆಂದು ಯಾರಿಗೂ ಗೊತ್ತಿರಲಿಲ್ಲ. ಆತನ ಮನೆಯ ಒಳಸುದ್ದಿ ಮನೆ ಜನರಿಗೆ ಬಿಟ್ಟರೆ ಹೊರಗಿನವರಿಗೆ ತಿಳಿಯಲು ಸಾಧ್ಯವಿರಲಿಲ್ಲ. ಮಾಣು ಹೀಗೆ ತನ್ನೊಂದಿಗೆ ಮನೆಯ ಸಂಗತಿ ಚರ್ಚಿಸುತ್ತಿರುವುದು ಅದು ಹೇಗೋ ಆತನ ಅತ್ತಿಗೆಗೆ ತಿಳಿದು ಆಕೆಯೊಮ್ಮೆ ತನ್ನೊಂದಿಗೆ ಜಗಳಕ್ಕೆ ನಿಂತಿದ್ದಳು. ಆ ದಿನದಿಂದ ಮಾಣು ತಮ್ಮ ಮನೆಗೆ ಬರುವುದನ್ನು ನಿಲ್ಲಿಸಿದ್ದಳು. ಅದಾದ ಕೆಲವೇ ತಿಂಗಳಲ್ಲಿ ಮಾಣುವಿನ ಸಾವು, ಆಕೆಯ ಪ್ರಿಯಕರನ ಕೃಷ್ಣಲೀಲೆಗಳು, ಆಕೆಯ ಗಂಡನ ಷಂಡತನದ ವಿಚಾರಗಳು ಕೊನೆಗೆ ಪಂಚಾಯತಿ ಮೆಂಬರ ವೆಂಕಟನ ಕಣ್ಮರೆಯ ವಿಚಾರಗಳೇ ಕೊಪ್ಪದ ಜಗತ್ತಿನ ವಾರ್ತಾಪತ್ರಿಕೆಯ ಪುಟಪುಟವೂ ತುಂಬಿ ಇಡೀ ಕೊಪ್ಪವೂ ಆ ಚರ್ಚೆಯಲ್ಲಿಯೇ ತಿಂಗಳುಗಟ್ಟಲೇ ಕಳೆದಿದ್ದವು.
ಎಲ್ಲರೂ ಮಾಣುವಿನ ತಪ್ಪಿನೆಡೆಗೆ ಬೊಟ್ಟು ಮಾಡುತ್ತಿದ್ದರೆ ತನಗೆ ಮಾತ್ರ ಆಕೆಯ ಗಂಡನನ್ನೆ ಹಿಡಿದು ತದುಕುವಂತಾಗುತ್ತಿತ್ತು. ತನ್ನ ಯೋಗ್ಯತೆ ಗೊತ್ತಿದ್ದು ಕಣ್ಣುಚ್ಚಿಕೊಂಡು ಪಾಪದ ಕೂಪಕ್ಕೆ ಆಕೆಯನ್ನು ದೂಡಿದ್ದಲ್ಲದೇ ಆಕೆಗೆ ಸಾವಿನ ದಾರಿಯನ್ನು ತೋರಿದ್ದ.. ಆಕೆ ಸತ್ತ ದಿನವೆಲ್ಲಾ ತಾನು ವಿಚಿತ್ರವಾಗಿ ವರ್ತಿಸಿ ಆತನ ಗಂಡನ ಮನೆಯವರನ್ನು ಯದ್ವಾತದ್ವಾ ಬೈದಿದ್ದಳು. ತನ್ನ ಬಗ್ಗೆ ಯಾವಾಗಲೂ ಅಕ್ಕರೆ ತೋರುತ್ತಿದ್ದ ಇದೇ ಗೋಪಾಲಣ್ಣ ನಿಂಗೆ ನಮ್ಮನೀ ವಿಚಾರೆಲ್ಲ ಗುತ್ತಿಲ್ಲಾ ಸುಮ್ನೇ ಒದರಬ್ಯಾಡ ಎಂದು ಗದರಿದ್ದ. ಊರವರೂ ತನ್ನ ಬಾಯನ್ನೆ ಮುಚ್ಚಿಸಲು ನೋಡುತ್ತಿದ್ದರು. ತಾನು ಆ ಕುರಿತ ಒಂದು ಲೇಖನ ಬರೆದು ಕಾಲೇಜಿನ ಮ್ಯಾಗಜಿನ್‌ಗೆ ನೀಡಿದ್ದಳು. ನಿಧಾನ ಎಲ್ಲ ಮರೆತಿತ್ತು.ನೀತಿ ನಿಯಮ ಧರ್ಮ ಕರ್ಮ ಎಂದೆಲ್ಲಾ ಬದುಕಿನ ಚೌಕಟ್ಟುಗಳಲ್ಲಿ ಮಾಣು ಕೊಚ್ಚಿಹೋದಳು. ಎಲ್ಲ ತಣ್ಣಗಾಗುತ್ತಲೇ ಮರಳಿಬಂದ ವೆಂಕಟ ಹೆಂಡತಿಯೊಡನೆ ಸುಖವಾಗಿದ್ದಾನೆ.
ಭಾರತಿ ಈಗ ಮೌನಕ್ಕೆ ಶರಣಾಗಿದ್ದಾಳೆ. ದಿನಕಳೆದಂತೆ ಮೌನವೇ ಹೆಚ್ಚು ಹರಿತವಾದಂತೆ ಹತ್ತಿರವಾದಂತೆ ಆಕೆಗನ್ನಿಸಿದೆ. ಆವತ್ತೆಲ್ಲಾ ಉಗ್ರವಾದದ ತಾನು ಬದಲಾದ ಪರಿಗೆ ಆಕೆಗೆ ಅಚ್ಚರಿ. ಗಂಡನ ಎಲ್ಲ ಹಮ್ಮು ಬಿಮ್ಮುಗಳಿಗೆ ತಾನೀಗ ತಲೆ ಕೆಡಿಸಿಕೊಳ್ಳುವುದಿಲ್ಲ. ತನ್ನದು ಉದಾಸೀನ. ಬದಲಾಯಿಸಲಾಗದ ಆತನನ್ನು ಬದಲಾಯಿಸುವ ಪ್ರಯತ್ನವನ್ನೆ ಮಾಡಲಿಲ್ಲ ಆಕೆ. ಆತ ಗರ್ವಿಸಲೂ ಪ್ರಯತ್ನಿಸಿದಷ್ಟೂ ತಾನು ಮೌನದ ಹೊದಿಕೆಯಲ್ಲಿ ಮುಚ್ಚಿಕೊಳ್ಳತೊಡಗಿದಳು. ಈಗೀಗ ಅದೇ ಆಕೆಗೆ ಅಪ್ಯಾಯವಾಗುತ್ತದೆ. ಮಾನಸಿಕ ಅಂತರ ಹೆಚ್ಚಿದಷ್ಟು ಆತ ಆಕೆಯೊಂದಿಗೆ ವಿಪರೀತದ ವತನೆಗಳನ್ನು ಕಡಿಮೆಮಾಡಿದ್ದ. ಕುಗ್ಗತೊಡಗಿದ. ಈಗೀಗ ಆಕೆ ಮೌನದಲ್ಲಿ ಅವ್ಯಕ್ತ ಮುದ್ರೆಯಲ್ಲಿ ಅಂತರ್ಧಾನವಾಗುತ್ತ ಬೆಳಗಿದಂತೆಲ್ಲಾ ಆತ ವ್ಯಕ್ತವಾಗುತ್ತ ವ್ಯಾಕುಲನಾಗುತ್ತ ಕುಬ್ಜನಾಗುತ್ತ, ಕಳೆದುಹೋಗುತ್ತಿದ್ದಾನೆ.
*****