ವಿಜಯ ವಿಲಾಸ – ದ್ವಿತೀಯ ತರಂಗ

ವಿಜಯ ವಿಲಾಸ – ದ್ವಿತೀಯ ತರಂಗ

ಇತ್ತಲಾ ವೇದವತೀ ನಗರದಲ್ಲಿ ರಾಜನು ತಪಸ್ಸಿಗೆ ಹೋದುದು ಮೊದಲಾಗಿ ಪರಮ ಪತಿವ್ರತೆಯಾದ ಶೀಲವತಿಯು ತನ್ನ ಪತಿಗೆ ಯಾವಾಗಲೂ ಶುಭವನ್ನೇ ಬಯಸುತ್ತ, ಆತನು ಯತ್ನಿಸಿದ್ದ ಕಾರ್ಯದಲ್ಲಿ ಜಯಶಾಲಿಯಾಗಿ ಇರುವಂತೆ ಅನುಗ್ರಹಿಸಲು ತ್ರಿಕಾಲದಲ್ಲಿಯೂ ಸರ್ವಮಂಗಳೆಯನ್ನಾರಾಧಿಸುತ್ತ, ಪತಿಯ ಆಗಮವನ್ನು ಅತಿ ಕುತೂಹಲದಿಂದ ನಿರೀಕ್ಷಿಸಿಕೊಂಡು ನಿಯಮನಿರತೆಯಾಗಿ ಕಾಲವನ್ನು ಕಳೆಯುತ್ತಿದ್ದಳು.

ವಿಜಯ ವಿದ್ಯಾಧರಿಯರು, ತಮ್ಮ ವಿವಾಹ ಮಂಗಳವ ನೆರವೇರಲು ವಿಳಂಬವಾದುದಕ್ಕಾಗಿ ವಿರಹವ್ಯಧೆಯಿಂದ ದಿನದಿನಕ್ಕೆ ಕೃಶರಾಗುತ್ತ, ಚಂದ್ರಸೇನರಾಯನು ವಿಜಯಶಾಲಿಯಾಗಿ ಬರುವುದನ್ನೆ ಅತಿ ಕುತೂಹಲದಿಂದ ಎದುರುನೋಡುತ್ತ, ಕನಸಿನಲ್ಲಿಯೂ ಸಹ ವಿವಾಹವಿಚಾರವಲ್ಲದೆ ಬೇರೊಂದನ್ನು ನೆನೆಯದೆ ಬಹು ಕಷ್ಟದಿಂದ ದಿನಗಳನ್ನು ನೂಕುತ್ತಿದ್ದರು.

ವಿದ್ಯಾಧರಿಯನ್ನು ಪಾಣಿಗ್ರಹಣಮಾಡಿಕೊಳ್ಳಬೇಕೆಂದು ಮೋಹಾತುರರಾಗಿದ್ದ ಭಾನುತೇಜನೂ ರಾಜಹಂಸನೂ ಸಹ ಹೇಗಾದರೂ ವಿಜಯ ವಿದ್ಯಾಧರಿಯರ ಪರಸ್ಪರಾನುರಾಗವನ್ನು ಒಡೆದು ಹಾಕಿ ತಾವು ಅವಳ ಪ್ರೀತಿಯನ್ನು ಸಂಪಾದಿಸಬೇಕೆಂದು ಒಬ್ಬನು ಮತ್ತೊಬ್ಬನಿಗೆ ಗೋಚರವಿಲ್ಲದೆ ನಾನಾ ಪ್ರಯತ್ನಗಳನ್ನು ಮಾಡಿ ವಿಫಲರಾದರು. ಇದರಿಂದ ವಿಜಯನಲ್ಲಿ ಅವರಿಗೆ ಅಸೂಯೆಯು ದಿನದಿನಕ್ಕೆ ಹೆಚ್ಚುತ್ತಲೇ ಬಂತು. ಒಂದಾನೊಂದು ದಿನ ಇವರಿವರ ಮನೋಭಾವಗಳು ಪರಸ್ಪರ ವ್ಯಕ್ತವಾದುವು. ಆದರೆ ಇವರಿಗೆ ವಿದ್ಯಾಧರಿಯ ಮೇಲಣ ಮೋಹವೂ ವಿಜಯನ ಮೇಲಣ ಅಸೂಯೆಯೂ ಸಮಾನವಾಗಿದ್ದುವು. ಕಡೆಗೆ ತಮ್ಮಿಬ್ಬರಲ್ಲಿ ಯಾರಾದರೂ ಒಬ್ಬನು ವಿದ್ಯಾಧರಿಯನ್ನು ವಿವಾಹಮಾಡಿಕೊಳ್ಳಬೇಕಲ್ಲದೆ ಅವಳು ವಿಜಯನ ಕೈಸೇರುವಂತೆ ಎಂದಿಗೂ ಅವಕಾಶಕೊಡಕೂಡದೆಂದು ತಮ್ಮ ತಮ್ಮಲ್ಲಿ ನಿಶ್ಚಯಿಸಿಕೊಂಡರು. ಆದರೂ ಹೇಗಾದರೂ ಮಾಡಿ ತಾನೇ ಅವಳನ್ನು ವಿವಾಹ ಮಾಡಿಕೊಳ್ಳಬೇಕೆಂದು ಒಬ್ಬನು ಮತ್ತೊಬ್ಬನಿಗೆ ಮೋಸ ಮಾಡಲು ಆಂತರ್ಯದಲ್ಲಿ ಆಲೋಚಿಸಿಕೊಂಡನು. ಅನಂತರ ಇವರಿಬ್ಬರೂ ಅವಳನ್ನು ಉಪಾಯದಿಂದ ಸಮ್ಮತಿಪಡಿಸಬೇಕೆಂದು ಆಕೆಯು ಉದ್ಯಾನದಲ್ಲಿ ಶಿಲಾತಲ್ಪದ ಮೇಲೆ ವಿರಹವ್ಯಧೆಯಿಂದ ಕುಳಿತಿರುವ ಸಮಯದಲ್ಲಿ ಹೋಗಿ, ಆಕೆಯಲ್ಲಿ ಸರಸೋಕ್ತಿಗಳನ್ನಾರಂಭಿಸಿ ತಮ್ಮ ಭಾವನೆಯನ್ನು ಸೂಚಿಸಿ ಪ್ರಾರ್ಥಿಸಿಕೊಂಡರು. ವಿದ್ಯಾಧರಿಯಾದರೋ ನಿಜಪ್ರೇಮ ಯುಕ್ತಳೂ, ನಿಶ್ಚಲಮನಸ್ಕಳೂ ಆದುದರಿಂದ ಇವರ ಪ್ರಾರ್ಥನೆಯನ್ನು ತಿರಸ್ಕರಿಸಿ, ರೂಪದಲ್ಲಿ ಮನ್ಮಥನನ್ನೂ, ತೇಜಸ್ಸಿನಲ್ಲಿ ಚಂದ್ರನನ್ನೂ, ಪರಾಕ್ರಮದಲ್ಲಿ ಪಾರ್ಧನನ್ನೂ ಹೋಲುತ್ತಿರುವ ವಿಜಯಕುಮಾರನನ್ನೇ ತನ್ನ ಪತಿಯೆಂದು ಮನಸ್ಸಿನಲ್ಲಿ ನಿಶ್ಚಯಿಸಿರುವುದಾಗಿಯೂ, ಉಳಿದ ಪುರುಷರು ತನಗೆ ಸಹೋದರ ಸಮಾನರೆಂತಲೂ ಹೇಳಿ, ಇನ್ನು ಮುಂದೆ ತನ್ನಲ್ಲಿ ಈ ವಿಚಾರವನ್ನು ಹೇಳಬಾರದೆಂದು ರಾಜಕುಮಾರರಿಬ್ಬರಿಗೂ ಕೈಮುಗಿದು ಪ್ರಾರ್ಥಿಸಿಕೊಂಡಳು. ಆದರೂ ಬಿಡದೆ ಈ ಮೋಹಾಂಧರು ಆಕೆಯನ್ನು ಅತಿಯಾಗಿ ಪೀಡಿಸಲಾರಂಭಿಸಿದರು. ಆಕೆಯ ನಿಶ್ಚಲಮನಸ್ಸಿನ ಮುಂದೆ ಇವರ ಹರಟೆಗಳೆಲ್ಲವೂ ವ್ಯರ್ಥವಾದವು. ಕಡೆಗೆ ತಮ್ಮಿಂದ ಆಕೆಯ ಮನವನ್ನೊಪ್ಪಿಸಲು ಅಸಾಧ್ಯವೆಂದು ತಿಳಿದು ತಮ್ಮ ತಾಯಿಯರಾದ ಸೌದಾಮಿನಿ ಕಾದಂಬಿನಿಯರ ಮೂಲಕ ಅವಳ ಮನಸ್ಸನ್ನು ತಮ್ಮ ಕಡೆಗೆ ತಿರುಗಿಸಿ ಕೊಳ್ಳಬೇಕೆಂದಾಲೋಚಿಸಿ ಅರಮನೆಗೆ ಬಂದು ತಾಯಿಯರೊಡನೆ ಎಲ್ಲ ವೃತ್ತಾಂತವನ್ನೂ ಹೇಳಿಕೊಂಡು ಹೇಗಾದರೂ ಆ ವಿದ್ಯಾಧರಿಯನ್ನು ತಮ್ಮಿಬ್ಬರಲ್ಲಿ ಒಬ್ಬರಿಗೆ ತಂದು ವಿವಾಹ ಮಾಡಲೇ ಬೇಕೆಂತಲೂ, ಇಲ್ಲವಾದರೆ ತಾವು ಪ್ರಾಣತ್ಯಾಗವನ್ನೆ ಮಾಡಿಕೊಳ್ಳುವೆವೆಂತಲೂ ಹೇಳಿಕೊಂಡರು. ಮೊದಲಿಂದಲೂ ಸವತಿಯಾದ ಶೀಲವತಿಯ ಮೇಲೆಯೂ ಅವಳ ಮಗನಾದ ವಿಜಯನ ಮೇಲೆಯೂ ಅಸೂಯೆಯಿಂದ ಬೆಂಕಿಯನ್ನೇ ಕಾರುತ್ತಿದ್ದ ಸೌದಾಮಿನಿ ಕಾದಂಬಿನಿಯರ ಕ್ರೋಧಾಗ್ನಿಗೆ ಇದು ಮತ್ತಷ್ಟು ತೈಲವನ್ನು ಸುರಿದಂತಾಯಿತು. ಆಗ ಅವರಿಬ್ಬರೂ ಒಂದಾಗಿ, ಹೇಗಾದರೂ ಆ ಶೀಲವತಿಯನ್ನೂ ಅವಳ ಮಗನನ್ನೂ ರಾಜನ ಆಗ್ರಹಕ್ಕೆ ಪಾತ್ರರನ್ನಾಗಿ ಮಾಡಿದರೆ ತಮ್ಮ ಮಾರ್ಗವು ನಿಷ್ಕಂಟಕವಾಗುವುದೆಂದು ಆಲೋಚಿಸಿ, ತಾವು ಆ ವಿದ್ಯಾಧರಿಯನ್ನು ವಿಜಯನಿಗೆ ತಪ್ಪಿಸಿ ಭಾನುತೇಜನಿಗಾಗಲಿ, ರಾಜಹಂಸನಿಗಾಗಲಿ ತಂದು ವಿವಾಹ ಮಾಡಿಸುತ್ತೇವೆಂದು ಮಕ್ಕಳಿಬ್ಬರಿಗೂ ಭರವಸೆ ಹೇಳಿ ರಾಜನ ಆಗಮನವನ್ನೆ ನಿರೀಕ್ಷಿಸಿಕೊಂಡಿದ್ದರು.

ಹೀಗಿರಲು ಶಂಕರನಿಂದ ರತ್ನ ಬಾಣವನ್ನು ಪಡೆದು ಲಬ್ಧ ಮನೋರಥನಾಗಿ ರಾಜನು ರಾಜಧಾನಿಗೆ ಹಿಂದಿರುಗಿ ಬಂದನು, ಇಷ್ಟಾರ್ಥವನ್ನು ಪಡೆದು ಕುತೂಹಲದಿಂದ ಬಂದ ರಾಜನನ್ನು ನೋಡಿ ಪತ್ನಿಯರೂ, ಪುತ್ರರೂ ಮಂತ್ರಿಯಾದ ಧುರಂಧರನೂ ಸಹ ಪರಮಾನಂದ ಪರವಶರಾದರು. ಪ್ರಜೆಗಳೆಲ್ಲರೂ ಆನಂದಾಂಬುಧಿಯಲ್ಲಿ ಓಲಾಡುತ್ತ ರಾಜನನ್ನು ಕೊಂಡಾಡಿದರು. ರಾಜನೂ ಸಹ ತನಗೆ ಒದಗಿದ ದೈವಾನುಗ್ರಹದಿಂದ ಸಂತೋಷಪಟ್ಟು ಎಲ್ಲರನ್ನೂ ಅಭಿನಂದಿಸಿ ಜೇಷ್ಠ ಪುತ್ರನಾದ ವಿಜಯನ ವಿವಾಹ ಮಂಗಳವನ್ನು ನೆರವೇರಿಸುವ ಅಭಿಲಾಷೆಯನ್ನು ಸೂಚಿಸಿದನು. ಅಲ್ಲದೆ ಶಂಕರನಿಂದ ಲಬ್ಧವಾದ ಮತ್ತು ವಿಜಯಪ್ರದವಾದ ರತ್ನ ಬಾಣವನ್ನು ಮುಂದೆ ತನ್ನ ಸ್ಥಾನವನ್ನ ಲಂಕರಿಸುವ ಯುವರಾಜನಾದ ವಿಜಯಕುಮಾರನಿಗೆ ವಿವಾಹ ಸಮಯದಲ್ಲಿ ಕೊಟ್ಟು ಆಶೀರ್ವದಿಸಬೇಕೆಂಬ ತನ್ನ ಕುತೂಹಲವನ್ನು ತನ್ನ ಮಂತ್ರಿ ಸಾಮಾಜಿಕರಿಗೂ ರಾಜ್ಞಿಯರಿಗೂ ತಿಳಿಸಿದನು.

ಇದನ್ನು ಕೇಳಿದ ಕೂಡಲೇ ಕಿರಿಯ ಹೆಂಡಿರಾದ ಸೌದಾಮಿನಿ ಕಾದಂಬಿನಿಯರಿಗೂ, ಅವರ ಪುತ್ರರಾದ ಭಾನುತೇಜ ರಾಜಹಂಸರಿಗೂ ಹೊಟ್ಟೆಯಲ್ಲಿ ಬೆಂಕಿ ಬಿದ್ದಂತಾಯಿತು. ರತ್ನ ಬಾಣವೂ, ಕನ್ಯಾರತ್ನವೂ, ಸಿಂಹಾಸನಾಧಿಪತ್ಯವೂ ಎಲ್ಲವೂ ವಿಜಯನ ಪಾಲೇ ಆಗುವುವೆಂದು ಆ ನಾಲ್ಕು ಮಂದಿಯ ಮನಸ್ಸಿನಲ್ಲಿ ಕುದಿದು ತಳಮಳಿಸಿ ಹೇಗಾದರೂ ಈ ವಿಜಯನ ವಿವಾಹಕ್ಕೂ, ರಾಜನಿಗೆ ಅವನಲ್ಲಿರುವ ವಿಶ್ವಾಸಕ್ಕೂ ಭಂಗವನ್ನು ತರಲೇಬೇಕೆಂದು ನಿಶ್ಚಯಿಸಿಕೊಂಡರು. ಭಾನುತೇಜನೂ ರಾಜಹಂಸನೂ, ರತ್ನ ಬಾಣವನ್ನು ವಿಜಯನಿಗೆ ಕೊಡಗೊಡಿಸದೆ ತಾವೇ ಪಡೆಯಬೇಕೆಂದು ಅದಕ್ಕೆ ತಕ್ಕ ಉಪಾಯವನ್ನು ಆಲೋಚಿಸಲು ತಾಯಿಯರನ್ನು ಕೇಳಿದರು. ಅದಕ್ಕೆ ಕಾದಂಬಿನಿಯು ಮಕ್ಕಳನ್ನು ಕುರಿತು, “ನೀವೂ ಸಹ ನಿಮ್ಮ ತಂದೆಯಾರ್ಜಿಸಿದ ವಸ್ತುಗಳನ್ನು ಪಡೆಯಲು ವಿಜಯನಂತೆಯೇ ಬಾಧ್ಯತೆಯುಳ್ಳವರಾದುದರಿಂದ ಆ ಶರವನ್ನು ನಿಮಗೆ ಕೊಡಬೇಕೆಂದು ಹಠವನ್ನು ಹಿಡಿಯಿರಿ, ಕೊಡದೆ ಇದ್ದ ಪಕ್ಷದಲ್ಲಿ ಮುಂದೆ ತಕ್ಕ ಆಲೋಚನೆ ಯನ್ನು ನಾನು ಮಾಡುವೆನು” ಎಂದು ಹೇಳಿದಳು. ಆಗಬಹುದೆಂದು ಸಂತೋಷದಿಂದ ಸಮ್ಮತಿಸಿ ಭಾನುತೇಜನೂ ರಾಜಹಂಸನೂ ಸಹ ತಂದೆಯ ಬಳಿಗೆ ಹೋಗಿ ರತ್ನ ಬಾಣವನ್ನು ತಮಗೇ ಕೊಡಬೇಕೆಂದು ಹಠಹಿಡಿದು ಕೇಳಿದರು. ಅದಕ್ಕೆ ರಾಜನು “ಸುಪುತ್ರರೇ! ನೀವು ಮೂರು ಮಂದಿಯೂ ಶಸ್ತ್ರಾಸ್ತ್ರ ವಿದ್ಯೆಗಳಲ್ಲಿ ನಿಪುಣರಾಗಿರುವಿರಿ. ಶಂಕರನಿಂದ ಲಬ್ಧವಾದ ಬಾಣವನ್ನು ಪಡೆಯಲು, ನಿಮ್ಮಲ್ಲಿ ಯಾವನು ಅತಿಶಯಪರಾಕ್ರಮಿಯೋ ಅವನೇ ಅರ್ಹನೆಂದು ನನಗೆ ತೋರುವುದು” ಎಂದನು. ಅದಕ್ಕೆ ರಾಜಪುತ್ರರಿಬ್ಬರಿಗೂ ರೋಷ ಹುಟ್ಟಿ, “ತಂದೆಯೇ ನಿನ್ನ ಪುತ್ರರಾದ ನಾವು ವಿಜಯನಿಗಿಂತಲೂ ಪರಾಕ್ರಮದಲ್ಲಿ ಕಡಿಮೆಯಾದವರೆಂದು ನೀನೆಂದಿಗೂ ತಿಳಿಯಬೇಡ. ಬೇಕಾದರೆ ಪರೀಕ್ಷಿಸು” ಎಂದರು. ಅದಕ್ಕೆ ರಾಜನು ಆಗಬಹುದೆಂದು ಸಮ್ಮತಿಸಿ ವಿಜಯನನ್ನೂ ಕರೆಯಿಸಿ, “ನಾಳೆಯ ದಿನ, ನಾನು ಒಂದು ಗುರಿಯನ್ನಿಟ್ಟು ನಿಮ್ಮ ಮೂರು ಮಂದಿಯ ಬಾಣ ಪ್ರಯೋಗ ಚಾತುರ್ಯವನ್ನೂ ಪರೀಕ್ಷಿಸುವೆನು, ಅದರಲ್ಲಿ ಯಾರು ಗೆಲ್ಲುವರೋ ಅವರಿಗೆ ರತ್ನ ಬಾಣವನ್ನು ಕೊಡುವೆನು” ಎಂದು ತಿಳಿಸಿದನು. ಮೂರು ಮಂದಿಗೂ ಬಹಳ ಸಂತೋಷವಾಯಿತು. ಭಾನುತೇಜನೂ, ರಾಜಹಂಸನೂ ತಾವೇ ಜಯಶಾಲಿಗಳಾಗುವೆವೆಂದು ನಂಬಿ ಆನಂದದಿಂದ ನಲಿಯುತ್ತ ತಾಯಿಯರ ಬಳಿಗೆ ಬಂದು ಈ ವಾರ್ತೆಯನ್ನು ತಿಳಿಸಿದರು. ಆಗ ಭಾನುತೇಜನ ತಾಯಿ ಯಾದ ಸೌದಾಮಿನಿಯು “ನಾಳೆಯ ದಿನದ ಪರೀಕ್ಷೆಯಲ್ಲಿ ಯಾರು ಜಯ ಶೀಲರಾಗುವರೆಂಬುದನ್ನು ಹೇಳಲಾಗುವುದಿಲ್ಲ. ಅದರಿಂದ ವಿಜಯನ ಮೇಲೆ ಮೊದಲೇ ರಾಜನಿಗೆ ಅಸಹನೆ ಹುಟ್ಟುವಂತೆ ಮಾಡಿದರೆ ಅನಂತರ ಉಳಿದ ನಿಮ್ಮಿಬ್ಬರಲ್ಲಿನ ಪ್ರೀತಿಯಿಂದ ಶರವನ್ನು ನಿಮಗೆ ಕೊಟ್ಟು ಬಿಡುವನು. ಆದಕಾರಣ ಈ ದಿನ ರಾಜನ ಅಂತಃಪುರದಲ್ಲಿ ಇಟ್ಟಿರುವ ರತ್ನ ಬಾಣವನ್ನು ಗೋಪ್ಯವಾಗಿ ತಂದು ನಿಮ್ಮ ವಶಕ್ಕೆ ಕೊಡುವೆನು. ಅದನ್ನು ನೀವು ರಹಸ್ಯವಾಗಿ ವಿಜಯನ ಬತ್ತಳಿಕೆಯಲ್ಲಿ ಸೇರಿಸಿ ಮುಚ್ಚಿಡಿರಿ. ನಾಳಿನ ದಿನ ರಾಜನ ಎದುರಲ್ಲಿ ಅವನು ಬತ್ತಳಿಕೆಯನ್ನು ತೆಗೆದಾಗ ಈ ಬಾಣವು ಅವನಲ್ಲಿರುವುದನ್ನು ನೋಡಿದರೆ ರಾಜನಿಗೆ ಕೋಪ ಬರಲೇ ಬರುವುದು. ಆಗ ಆತನು, ವಿಜಯನು ಶರವನ್ನು ಕದ್ದ ದ್ರೋಹಿಯೆಂದು ಅವನಿಗೆ ಶಿಕ್ಷೆಯನ್ನು ವಿಧಿಸಿ, ನಿಮ್ಮಿಬ್ಬರಲ್ಲಿ ಒಬ್ಬರಿಗೆ ಬಾಣವನ್ನು ಕೊಡುವನು” ಎಂದು ಹೇಳಿದಳು. ಅದಕ್ಕೆ ಆಗಬಹುದೆಂದು ಅವರಿಬ್ಬರೂ ಒಪ್ಪಿದರು. ವಿಜಯನಿಗೆ ಈ ಮೋಸವೊಂದೂ ತಿಳಿಯಲೇ ಇಲ್ಲ.

ಅನಂತರ ಆದಿನ ಸಂಧ್ಯಾ ಸಮಯದಲ್ಲಿ ಚಂದ್ರಸೇನರಾಜನು ಜ್ಯೇಷ್ಠ ಪತ್ನಿಯಾದ ಶೀಲವತಿಯ ಅಂತಃಪುರವನ್ನು ಪ್ರವೇಶಿಸಿ ಆಕೆಯಿಂದ ಸತ್ಕೃತನಾಗಿ ಆಕೆಯ ಪತಿಭಕ್ತಿಗೆ ಸಂತೋಷಪಟ್ಟು ಸರಸೋಕ್ತಿಗಳನ್ನಾಡಿ ಅಲ್ಲಿಂದ ಹೊರಟು ಕಿರಿಯ ಹೆಂಡತಿಯಾದ ಸೌದಾಮಿನಿಯ ಅಂತಃಪುರಕ್ಕೆ ಬಂದನು. ಮೊದಲೇ ಕಿರಿಯ ಹೆಂಡರಿಬ್ಬರೂ ತಮ್ಮ ತಮ್ಮಲ್ಲಿ ಆಲೋಚಿಸಿ ಕೊಂಡಿದ್ದ ಮೇರೆಗೆ, ಸೌದಾಮಿನಿಯು ರಾಜನನ್ನು ನೋಡಿ ಬಹಳ ಖಿನ್ನ ಮನಸ್ಕಳಾಗಿ ಕುಳಿತಿದ್ದಳು. ರಾಜನು ಆಶ್ಚರ್ಯದಿಂದ ಆಕೆಯನ್ನು ನೋಡಿ “ಪ್ರಿಯೇ!ಸೌದಾಮಿನಿ! ರಾಜನೂ, ರಾಜ್ಯವೂ ಸಹ ಅಪರಿಮಿತ ಸಂತೋಷಸಾಗರದಲ್ಲಿ ತೇಲುತ್ತಿರುವ ಇಂತಹ ಆನಂದಕರವಾದ ಸಮಯ ದಲ್ಲಿ ರಸಿಕಾಗ್ರಣಿಯಾದ ನೀನೇತಕ್ಕೆ ಮುಗ್ಧಭಾವವನ್ನು ವಹಿಸಿರುವೆ? ನಿನ್ನ ಚಿಂತೆಗೆ ಕಾರಣವೇನು? ಹೇಳು. ಅದನ್ನು ನಾನು ಪರಿಹರಿಸುವೆನು” ಎಂದು ಕೈ ಹಿಡಿದು ವಿನಯವಿಶ್ವಾಸಗಳಿಂದಲೂ ಮೃದುಮಧುರ ವಾಕ್ಕುಗಳಿಂದಲೂ ಪ್ರಶ್ನೆ ಮಾಡಿದನು. ಆಗ ಸೌದಾಮಿನಿಯು ರಾಜನ ವಿಷಯದಲ್ಲಿ ಅತ್ಯಂತ ಪಶ್ಚಾತ್ತಾಪ ಪಟ್ಟಂತೆ ನಟಿಸುತ್ತ “ಪ್ರಿಯಾ! ನನ್ನ ನಿನ್ನ ಖಿನ್ನತೆಯ ಕಾರಣವನ್ನು ತಾವು ಅನ್ಯರಿಂದ ತಿಳಿಯಬೇಕಲ್ಲದೆ ನನ್ನಿಂದ ಅದು ಹೊರಪಡಬಾರದು. ಹಾಗೆ ಅದು ನನ್ನಿಂದ ಹೊರಪಟ್ಟಲ್ಲಿ ನಾನು ಅಸೂಯಾಪರಳೆಂದು ತಮಗೆ ಭಾವನೆಯುಂಟಾದೀತು” ಎಂದಳು. ಈ ಮಾತನ್ನು ಕೇಳಿದೊಡನೆಯೇ ರಾಜನಿಗೆ ವಿಷಯವನ್ನು ತಿಳಿಯುವ ಕುತೂಹಲವು ಮತ್ತಷ್ಟು ಪ್ರಬಲವಾಯಿತು. ಆಗ ಸೌದಾಮಿನಿಯನ್ನು ನೋಡಿ “ಎಲೌ ಮನೋಹರೇ! ನಿಜಾಂಶವನ್ನು ನನಗೆ ಹೇಳುವ ವಿಷಯದಲ್ಲಿ ನೀನು ಸಂದೇಹಪಡಬಾರದು. ನೀನು ಅಸೂಯಾಪರಳಲ್ಲವೆಂಬುದನ್ನು ನಾನು ಚೆನ್ನಾಗಿ ಬಲ್ಲೆನು. ತಿಳಿದಂಶವನ್ನು ಪ್ರಿಯನಾದ ನನ್ನೊಡನೆ ಹೇಳದಿದ್ದರೆ, ನೀನು ಪತಿಯನ್ನು ವಂಚಿಸಿದವಳಾಗುವೆ. ಆದುದರಿಂದ ಯಾವ ಸಂದೇಹವೂ ಇಲ್ಲದೆ ನಿನ್ನ ಮನಸ್ಸಿನಲ್ಲಿರುವ ವಿಷಯವನ್ನು ವಿಸ್ತಾರವಾಗಿ ತಿಳಿಸಿ ನನ್ನ ಸಂಶಯವನ್ನು ಪರಿಹರಿಸು” ಎಂದು ಗಲ್ಲವನ್ನು ಹಿಡಿದು ಪ್ರಾರ್ಥಿಸಿದನು. ತಕ್ಕ ಸಮಯ ಸಂದರ್ಭಗಳು ಸಿಕ್ಕಿದುವೆಂದು ಮನಸ್ಸಿನಲ್ಲಿ ಸಂತೋಷವುಂಟಾದರೂ ಆ ಕುಟಿಲೆಯು ಬಹಳ ವ್ಯಥೆಪಟ್ಟವಳಂತೆ ನಟಿ ಸುತ್ತ, “ಪ್ರಿಯಾ! ಇದು ಬಹಳ ಗೋಪ್ಯವಾದ ವಿಚಾರವು. ತಮ್ಮ ಕೀರ್ತಿಗೆ ಮಾತ್ರವಲ್ಲದೆ ನಮ್ಮ ವಂಶಕ್ಕೇ ಮಹಾ ಕಳಂಕವನ್ನು ತರುವ ವಿಚಾರವು. ಅದನ್ನು ತಮ್ಮೊಡನೆ ನಾನು ಹೇಗೆ ಹೇಳಲಿ! ಅಯ್ಯೋ! ನನ್ನ ಬಾಯಿಂದ ತಮ್ಮ ಎದುರಲ್ಲಿ ಆ ವಿಚಾರವನ್ನು ಹೇಗೆ ಉಚ್ಚರಿಸಲಿ!” ಎಂದು ಸೆರಗಿನಿಂದ ಕಣ್ಣೀರನ್ನು ಒರೆಸಿಕೊಳ್ಳುವಳಂತೆ ನಟಿಸಿದಳು. ರಾಜನ ಕುತೂಹಲವೂ ಭೀತಿಯೂ ಕ್ಷಣಕ್ಷಣಕ್ಕೂ ಮಿತಿಮೀರಿ ಉಕ್ಕಿದುವು. ಆಗ ಆತನು ಸೌದಾಮಿನಿಯ ಎರಡು ಕೈಗಳನ್ನೂ ಹಿಡಿದು, “ನೀನು ಸಂದೇಹಪಡಬೇಡ, ಅಂತಹ ವಿಚಾರವಿದ್ದಲ್ಲಿ ಅದನ್ನು ಆಪ್ತಳಾದ ನಿನ್ನಿಂದಲೇ ನಾನು ಕೇಳಬೇಕಲ್ಲದೆ ಅನ್ಯರ ಬಾಯಿಂದ ಇಂತಹ ಅಮಂಗಳ ವಿಚಾರವನ್ನು ನಾನು ಕೇಳಲೊಲ್ಲೆನು. ಮೊದಲು ಹೇಳು! ಹೇಳು. ಇನ್ನು ನನ್ನ ಮನಸ್ಸಿನ ಕುತೂಹಲವು ಮೇರೆ ಮೀರಿತು. ಇನ್ನು ಈ ವ್ಯಸನ ಸಂದೇಹಗಳನ್ನು ಬಿಡು, ನಿಜಾಂಶವನ್ನು ವಿವರಿಸಿ ತಿಳಿಸು” ಎಂದನು. ಆಗ ಆ ಮಿಟಾರಿಯು ಮೆಲ್ಲನೆ, “ಪ್ರಿಯಾ! ತಮ್ಮ ಬಲಾತ್ಕಾರದಿಂದ ನಾನು ಈಗ ವಿಷಯವನ್ನು ಹೇಳಬೇಕಾಗಿದೆ. ಯಾವ ಮಹನೀಯಳನ್ನು ಮಹಾ ಪತಿವ್ರತೆಯ, ಪಟ್ಟದರಸಿಯೂ ಎಂದು ತಾವು ಭಾವಿಸಿ ತಮ್ಮ ಸರ್ವ ಪ್ರೀತಿಯನ್ನೂ ಅವಳಲ್ಲಿಟ್ಟು ಆನಂದಪಡುತ್ತಿರುವಿರೋ ಆ ಮಾಯಾಂಗನೆಯಾದ ಶೀಲವತಿಯು ತಾವು ತಪಸ್ಸಿಗೆ ಹೊರಟುಹೋದುದು ಮೊದಲಾಗಿ ತನಗನುರೂಪನೆಂದು ತೋರಿದ ಪರಪುರುಷನೊಬ್ಬನಲ್ಲಿ ಅನುರಕ್ತಳಾಗಿ ನಿತ್ಯವೂ ಅವನಲ್ಲಿ ಲೀಲಾವಿನೋದದಿಂದಿರುವಳು” ಎಂದಳು. ಇದನ್ನು ಕೇಳಿದ ಕೂಡಲೇ ರಾಜನ ಎದೆಯು ಝಲ್ಲೆಂದಿತು. ಕಿವಿಗಳು ಕಿವುಡಾದುವು. ಕಣ್ಣಿಗೆ ಮಂಜು ಕವಿಯಿತು. ತಲೆಯು ಗಿರ್ರನೆ ತಿರುಗಿತು. ಬುದ್ದಿಯು ಭ್ರಾಂತಿ ಹೊಂದಿ ರಾಜನು ಕಡಿದ ಮರದಂತೆ ದೊಪ್ಪನೆ ನೆಲಕ್ಕೆ ಬಿದ್ದನು. ಆಗ ಸೌದಾಮಿನಿಯು ತನ್ನ ಮಂತ್ರವು ಚೆನ್ನಾಗಿ ಫಲಿಸಿತೆಂದು ಮನಸ್ಸಿನಲ್ಲಿ ಸಂತೋಷಿಸಿದರೂ ಬಹಳ ಭಯಪಟ್ಟವಳಂತೆ ನಟಿಸುತ್ತ ರಾಜನನ್ನು ಹಿಡಿದೆತ್ತಿ ಉಪಚರಿಸಿ, “ಪ್ರಿಯಾ! ಇದಕ್ಕಾಗಿಯೇ ತಮ್ಮಲ್ಲಿ ನಾನು ಇಂತಹ ವಿಷಯವನ್ನು ತಿಳಿಸಲು ಸಂಶಯಪಟ್ಟುದು, ತಾವು ಶಾಂತರಾಗಬೇಕು” ಎಂದು ಬೇಳುವೆಯ ಮಾತುಗಳಿಂದ ಕುಲುಕಿದಳು. ಆಗ ರಾಜನು, “ಅಯ್ಯೋ! ನಿರ್ಮಲವಾದ ಈ ರಾಜವಂಶವು ಇಂತಹ ಕುಲಟೆಯಿಂದ ಕಳಂಕವನ್ನು ಪಡೆಯಿತೇ! ಶಿವಶಿವಾ!” ಎಂದು ದುಃಖಿಸಿ ಮತ್ತೆ ಆಲೋಚಿಸಿ, “ಎಲೌ! ಸೌದಾಮಿನೀ! ನನ್ನ ಶೀಲವತಿಯು ಮಹಾ ಪತಿವ್ರತೆಯು! ಕುಲಟೆಯಲ್ಲ! ನೀನು ಹೇಳುವ ಮಾತು ನಿಶ್ಚಯವೇ? ನನ್ನ ಪ್ರಿಯೆಯಾದ ಶೀಲವತಿಯು ನನ್ನನ್ನು ವಂಚಿಸಿ ದುರ್ಮಾರ್ಗ ಪ್ರವರ್ತಕಳಾದಳೇ? ನಾನು ನಂಬಲಾರೆನು” ಎಂದನು. ಅದಕ್ಕೆ ಆ ಮಾಯಾವಿನಿಯು “ಪ್ರಿಯಾ! ಇದಕ್ಕೆ ನಾನು ಈ ವಿಚಾರವನ್ನು ತಮ್ಮಲ್ಲಿ ತಿಳಿಸಲೊಲ್ಲೆನೆಂದು ಮೊದಲೇ ವಿಜ್ಞಾಪಿಸಿಕೊಂಡೆನು. ಆದರೂ ಬಲಾತ್ಕರಿಸಿ ನನ್ನಿಂದ ಹೇಳಿಸಿ ಈಗ ಅರಮನೆಯಲ್ಲಿ ಎಲ್ಲರೂ ನೋಡಿರುವ ವಿಷಯವನ್ನು ತಾವು ನಂಬುವುದಿಲ್ಲವೆಂದರೆ ನಾನು ಅಸೂಯಾಪರಳಾಗಿ ಅನ್ಯಾಯವಾಗಿ ಅವಳನ್ನು ದೂರಿದವಳಾದೆನು. ಚಿಂತೆಯಿಲ್ಲ. ನಾನು ತಮ್ಮಲ್ಲಿ ಅನೃತವನ್ನಾಡಿದೆನೆಂಬ ಭಾವನೆಯು ತಮಗುಂಟಾಗಿದ್ದರೆ, ತಾವೂ ತಮ್ಮ ಶೀಲವತಿಯೂ ಆನಂದದಿಂದಿರಿ. ನಾನು ಈ ಪ್ರಾಣವನ್ನೇ ಇರಿಸಲಾರೆನು. ದೂರು ಹೇಳಿದೆನೆಂಬ ಅಪವಾದವು ನನಗೆ ತಮ್ಮಿಂದಲೇ ಬಂದ ಮೇಲೆ ನಾನು ಈ ಭೂಮಿಯಲ್ಲಿ ಬಾಳಲಾರೆನು, ವಿಷಪಾನದಿಂದಲಾದರೂ ಪ್ರಾಣತ್ಯಾಗ ಮಾಡಿಕೊಳ್ಳುವೆನು” ಎಂದು ಗೊಳಗೊಳನೆ ಅಳುವುದಕ್ಕಾರಂಭಿಸಿದಳು. ಉಭಯ ಸಂಕಟಗಳಿಗೆ ಸಿಕ್ಕಿದ ರಾಜನು ದಿಕ್ಕು ತೋರದೆ, “ಪ್ರಿಯೇ! ನಿನ್ನ ಮಾತಿನಲ್ಲಿ ನನಗೆ ನಂಬಿಕೆಯುಂಟು. ಆದರೆ ನಾನು ಸುಶೀಲವತಿಯೆಂದು ತಿಳಿದಿದ್ದ ಆ ಶೀಲವತಿಯು ದುಶೀಲವತಿಯಾದುದಕ್ಕಾಗಿ ಆಶ್ಚರ್ಯಪಟ್ಟು ಹಾಗೆಂದೆನು. ನನ್ನನ್ನು ಕ್ಷಮಿಸು ಬಾ ದುಃಖಿಸಬೇಡ!” ಎಂದು ಸಂತೈಸಿದನು. ಅದಕ್ಕೆ ಆ ಮಾಯೆಗಾತಿಯು “ಪ್ರಿಯಾ! ನನ್ನ ಮಾತಿನಲ್ಲಿ ತಮಗೆ ನಂಬುಗೆ ಇಲ್ಲದಿದ್ದರೆ ಹೋಗಲಿ. ತಮ್ಮ ಪರಮಪ್ರೀತಿಗೆ ಪಾತ್ರಳಾಗಿರುವ ನಿಮ್ಮ ಕಾದಂಬಿನಿಯನ್ನಾದರೂ ಕೇಳಿ ನಿಜಾಂಶವನ್ನು ದೃಢಪಡಿಸಿಕೊಳ್ಳಿ” ಎಂದು ಹೇಳಿ ಸರಸರನೆ ಕುಲುಕಿಕೊಂಡು ಹೋಗಿ ಸವತಿಯಾದ ಕಾದಂಬಿನಿಯನ್ನು ಕರೆತಂದಳು. ಮೊದಲೇ ಉರಿಯುತ್ತಿರುವ ಬೆಂಕಿಗೆ ಗಾಳಿಯೂ ಬೀಸಿದಂತೆ ಕುಟಿಲ ಸೌದಾಮಿನಿಯ ಜೊತೆಗೆ ಕುತ್ಸಿತ ಕಾದಂಬಿನಿಯೂ ಬಂದು ನಿಂತಳು. ಆಗ ಆಶ್ಚರ್ಯ ವ್ಯಸನ ಕೋಪಗಳಿಂದ ಕರ್ತವ್ಯವನ್ನರಿಯದೆ ನಿಂತಿದ್ದ ರಾಜನು ಕಾದಂಬಿನಿಯ ಮುಖವನ್ನು ನೋಡಿ ತಲೆಯನ್ನು ತಗ್ಗಿಸಿದನು. ಸೌದಾಮಿನಿಯು ಕಾದಂಬಿನಿಯನ್ನು ನೋಡಿ “ತಂಗೀ! ಆರ್ಯಪುತ್ರನು ತಪಸ್ಸಿಗೆ ಹೋಗಿದ್ದ ಕಾಲದಲ್ಲಿ ಅಂತಃಪುರದಲ್ಲಿ ಏನೇನು ವಿಷಯಗಳು ನಡೆಯುತ್ತಿದ್ದುವೆಂಬುದನ್ನು ನೀನಾದರೂ ತಿಳಿಸಿ ಆತನ ಮನಸ್ಸಿನ ಸಂಶಯವನ್ನು ಪರಿಹರಿಸು. ಅದಕ್ಕಾಗಿಯೇ ನಾನು ನಿನ್ನನ್ನು ಕರೆತಂದುದು” ಎಂದಳು. ಅದಕ್ಕೆ ಆ ಠಕ್ಕುಮಾರಿಯು “ಅಕ್ಕಾ! ಮಾಡಿದವರ ಪಾಪ ಆಡಿದವರ ಬಾಯಲ್ಲಿ” ಎಂಬ ಗಾದೆಯನ್ನು ಕೇಳಲಿಲ್ಲವೇ? ಅದರಿಂದ ನಾವೇತಕ್ಕೆ ದೊಡ್ಡವರ ದೋಷಗಳನ್ನು ಬಿಚ್ಚಿ ಆರ್ಯಪುತ್ರನ ಕೋಪಕ್ಕೆ ಒಳಗಾಗಬೇಕು? ಕ್ರಮಕ್ರಮವಾಗಿ ಆತನಿಗೇ ತಿಳಿಯುವುದು. ಮುಖ್ಯವಾಗಿ ಶೀಲವತಿಯು ಪಟ್ಟದರಸಿಯು, ನಾವುಗಳು ಅವಳ ಹಿಂದಿನವರು. ಇದರಿಂದ ಆಕೆಯ ದೋಷಗಳನ್ನು ನಾವುಗಳು ಹೇಳಿದಲ್ಲಿ ನಾವೇ ಆಸೂಯಾಪರರೆಂದು ಆರ್‍ಯ ಪುತ್ರನಿಗೆ ತೋರಬಹುದು. ಇದರಿಂದ ನಾವು ಬಾಯಿಂದ ಹೇಳುವುದಕ್ಕಿಂತಲೂ ವಿಷಯವನ್ನು ಪ್ರತ್ಯಕ್ಷವಾಗಿ ತೋರಿಸಿದರಾಯಿತಲ್ಲವೇ? ಕೈ ಹುಣ್ಣಿಗೆ ಕನ್ನಡಿಯೇಕೆ? ಪ್ರಭುವು ಅರಮನೆಯಲ್ಲಿರುವಾಗಲೇ ಅಂತಃಪುರಕ್ಕೆ ಪರಪುರುಷನು ಪ್ರವೇಶಿಸುತ್ತಿರುವಲ್ಲಿ ಇನ್ನು ಆತನು ಕಣ್ಮರೆಯಾಗಿದ್ದಾಗ ಸ್ಥಿತಿಯು ಯಾವರೀತಿಯಿತ್ತೆಂಬುದನ್ನು ಆತನೇ ಊಹಿಸಲಿ” ಎಂದಳು. ಇದನ್ನು ಕೇಳಿ ರಾಜನ ಮನಸ್ಸಿನಲ್ಲಿ ಮತ್ತಷ್ಟು ಶೂಲವಿರಿದಂತಾಗಿ, ಸೌದಾಮಿನಿಯ ಮಾತು ನಿಜವೆಂದು ದೃಢಪಟ್ಟಿತು. ಆಗ ಕೋಪತಾಪಗಳನ್ನು ಸಹಿಸಲಾರದೆ ಎಲೌ! ಈಗಲೂ ಅಂತಹ ಅವಿವೇಕಗಳು ನನ್ನ ಅಂತಃಪುರದಲ್ಲಿ ನಡೆಯುತ್ತಿರುವುವೇ?” ಎಂದು ಗಜರಿದನು. ಅದಕ್ಕೆ ಕಾದಂಬಿನಿಯು “ಆರ್ಯಪುತ್ರನು ಈ ಕೋಪವನ್ನು ಸ್ವಲ್ಪ ಸೈರಿಸಿ ಈ ದಿನ ಅರ್ಧರಾತ್ರಿಯಲ್ಲಿ ನಮ್ಮೊಡನೆ ಶೀಲವತಿಯ ಅಂತಃಪುರಕ್ಕೆ ಗೋಪ್ಯವಾಗಿ ಬಂದರೆ ಆ ವಿಚಾರವು ಪ್ರತ್ಯಕ್ಷವಾಗಿ ವೇದ್ಯವಾಗುವುದು” ಎಂದಳು. ಅದಕ್ಕೆ ರಾಜನು ಸಮ್ಮತಿಸಿ ಆ ರಾತ್ರಿ ಹನ್ನೆರಡು ಘಂಟೆಗೆ ಸರಿಯಾಗಿ ತಾನು ಶೀಲವತಿಯ ಅಂತಃಪುರದ ಬಳಿಗೆ ಬರುವುದಾಗಿ ಹೇಳಿ, ಶೀಲವತಿಯ ವಿಷಯದಲ್ಲಿ ತಾನು ಇಟ್ಟಿದ್ದ ನಂಬಿಕೆಯೆಲ್ಲವೂ ವ್ಯರ್ಥವಾಯಿತೆಂಬ ಪಶ್ಚಾತ್ತಾಪದಿಂದಲೂ, ತನ್ನ ಪತ್ನಿಯು ಕುಲಟೆಯೆನಿಸಿದಳೆಂಬ ಅವಮಾನದಿಂದಲೂ ಮುಗ್ಧನಾಗಿ ಚಿಂತಾಗಾರವನ್ನು ಸೇರಿದನು.

ಇತ್ತಲಾ ಮಾಯೆಕಾತಿಯರಾದ ಸೌದಾಮಿನಿ ಕಾದಂಬಿನಿಯರು ತಮ್ಮ ಮಾತನ್ನು ರಾಜನಿಗೆ ನಿದರ್ಶನದಿಂದ ದೃಢಪಡಿಸಲು ತಮ್ಮ ತಮ್ಮಲ್ಲಿ ಆಲೋಚಿಸಿಕೊಂಡು ಆಪ್ತಸಖಿಯಾದ ಸರಸಾಂಗಿಯೆಂಬುವಳನ್ನು ಕರೆದು ಆದರಿಸಿ, ಅವಳಿಗೆ ಬೆಲೆಬಾಳುವ ರತ್ನ ಹಾರವೊಂದನ್ನು ಲಂಚವನ್ನಾಗಿ ಕೊಟ್ಟು, “ಎಲೌ ಸರಸಾಂಗೀ ಈ ರಾತ್ರಿ ಶೀಲವತಿಯು ಅಂತಃಪುರದಲ್ಲಿ ಒಂಟಿಯಾಗಿ ಮಲಗಿರುವಳು. ನೀನು ಪುರುಷವೇಷವನ್ನು ಧರಿಸಿ, ಅವಳು ನಿದ್ರಾಸಕ್ತಳಾಗಿರುವಾಗ ಅಲ್ಲಿಗೆ ಹೋಗಿ ಅವಳ ಒಳಿಯಲ್ಲಿ ಸುಳಿದಾಡುತ್ತಿರು. ಅಲ್ಲಿಗೆ ನಾವುಗಳು ರಾಜನೊಡನೆ ಬರುವೆವು. ಆಗ ರಾಜನು ನಿನ್ನನ್ನು ಪುರುಷನೆಂಬ ಭ್ರಾಂತಿಯಿಂದ ಶಿಕ್ಷಿಸುವನು. ನಮಗಾಗಿ ನೀನು ಆ ಶಿಕ್ಷೆಯನ್ನು ಸ್ವಲ್ಪ ಸಹಿಸಿಕೊಂಡು ಓಡಿಹೋಗು. ಅನಂತರ ನಾಳಿನ ಪ್ರಾತಃ ಕಾಲ ನಿನಗೆ ಬೇಕಾದಷ್ಟು ಹಣವನ್ನೂ ವಸ್ತ್ರಾಭರಣಗಳನ್ನೂ ಕೊಟ್ಟು ನಿನ್ನನ್ನು ಐಶ್ವರ್ಯದಲ್ಲಿ ತೇಲಿಸಿಬಿಡುವೆವು” ಎಂದರು. ಅದಕ್ಕೆ ಸರಸಾಂಗಿಯು ನಡುಗುತ್ತ, “ತಾಯಿ! ಅರ್ಧರಾತ್ರಿಯಲ್ಲಿ ಪುರುಷವೇಷದಿಂದ ನಾನು ಹೋದರೆ ಆ ಕಾವಲುಗಾರರು ನನ್ನನ್ನು ಒಳಗೆ ಬಿಡುವರೇ? ಅಥವಾ ನಾನು ಒಳಗೆ ಉಪಾಯದಿಂದ ಹೋದರೂ ಅಪರಾಧಿಯೆಂದು ತಿಳಿದು ರಾಜನು ನನ್ನನ್ನು ಅಲ್ಲಿಯೇ ನಿರ್ಬಂಧಿಸದಿರುವನೇ? ಅಥವಾ ಶೂಲಕ್ಕೇರಿಸದಿರುವನೇ? ಇದರಲ್ಲಿ ನನ್ನ ಪ್ರಾಣಕ್ಕೆ ಅಪಾಯ ಬರುವುದಿಲ್ಲವೇ?” ಎಂದಳು. ಅದಕ್ಕೆ ಸೌದಾಮಿನಿಯು “ಎಲೌ! ನೀನು ಹೆದರಬೇಡ, ಅಂತಃಪುರದ ಕಾವಲುಗಾರರಿಗೆ ಲಂಚವನ್ನು ಕೊಟ್ಟು ಅವರನ್ನು ನಾವುಗಳು ಆಗಲೇ ನಮ್ಮ ಪಕ್ಷವಾಗಿ ತಿರುಗಿಸಿಕೊಂಡಿರುವೆವು. ಅಲ್ಲದೆ ನೀನು ಅಲ್ಲಿಗೆ ಬರುವ ಕಾಲದಲ್ಲಿ ನಾವೂ ನಿನ್ನೊಡನೆ ಇದ್ದು ಕಿಟಕಿಯಿಂದ ನಿನ್ನನ್ನು ಒಳಕ್ಕೆ ಕಳುಹಿಸುವೆವು. ರಾಜನು ನಿನ್ನನ್ನು ಶಿಕ್ಷಿಸಲು ಬಂದಾಗ ಉಪಾಯದಿಂದ ನಿನ್ನನ್ನು ನಾವು ಆತನ ಕೈಯಿಂದ ಬಿಡುಗಡೆ ಮಾಡುವೆವು; ಅಂಜಬೇಡ, ಧೈರ್ಯವಾಗಿ ನಾವು ಹೇಳಿದಂತೆ ನಡೆ,” ಎಂದು ವಿಧವಿಧವಾಗಿ ಧೈರ್ಯವನ್ನು ಹೇಳಿ ಹುರಿದುಂಬಿಸಿ ಪುರುಷವೇಷದ ಉಡುಪನ್ನು ತಂದು ಅವಳಿಗೆ ತಾವೇ ಚೆನ್ನಾಗಿ ಅಲಂಕಾರಮಾಡಿದರು. ಸ್ವಲ್ಪ ಹೊತ್ತಿನೊಳಗಾಗಿ ಸರಸಾಂಗಿಯು ಸರಸಾಂಗನಾದಳು. ನಿಲುವುಗನ್ನಡಿಯನ್ನು ನೋಡಿಕೊಂಡು, ಸರಸಾಂಗಿಯು ಕನ್ನಡಿಯಲ್ಲಿ ಕಾಣುವ ಸರಸಾಂಗನಲ್ಲಿ ಮೋಹಪರವಶಳಾಗಿ ಭ್ರಾಂತಿಯಿಂದ ಮುಂಬರಿದು ಕನ್ನಡಿಯ ಮೇಲೆ ಬೀಳುತ್ತಿದ್ದಳು. ಸವತಿಯರಿಬ್ಬರೂ ನಕ್ಕು ಅವಳ ಪುರುಷರೂಪದ ಅಂದಕ್ಕೂ ತಾವು ಮಾಡಿದ ಅಲಂಕಾರದ ಚಾತುರ್ಯಕ್ಕೂ ತಮ್ಮ ತಮ್ಮಲ್ಲಿಯೇ ಸಂತೋಷ ಪಟ್ಟು ವಿನೋದದಿಂದ ಸರಸಾಂಗನನ್ನು ಪರಿಹಾಸ್ಯ ಮಾಡುತ್ತ, ಧೈರ್ಯ ಹೇಳುತ್ತ ಇದ್ದು, ಹನ್ನೆರಡು ಘಂಟೆಗಳಿಗೆ ಮುಂಚೆಯೇ ಶೀಲವತಿಯ ಅಂತಃಪುರದ ಬಳಿಗೆ ಬಂದು ಮೊದಲೇ ಏರ್ಪಡಿಸಿದ್ದಂತೆ ಕಾವಲುಗಾರರ ಸಹಾಯದಿಂದ ಪುರುಷವೇಷಧಾರಿಣಿಯನ್ನು ಒಳಹೊಗಿಸಿದರು.

ಕೌಟಿಲ್ಯವನ್ನರಿಯದ ಶೀಲವತಿಯಾದರೋ ಎಂದಿನಂತೆ ತಲ್ಪದಮೇಲೆ ಗಾಢ ನಿದ್ರೆಯಲ್ಲಿ ಮಲಗಿದ್ದಳು. ಸರಸಾಂಗನು ಸಪ್ಪಳಾಗದಂತೆ ಮೆಲ್ಲನೆ ಮುಂದೆ ಬಂದು, ಸ್ವಲ್ಪ ಹೊತ್ತು ನಿಂತು ರಾಣಿಯನ್ನು ನೋಡಿ, ಬಳಿಗೆ ಹೋಗಲು ಧೈರ್ಯವಿಲ್ಲದೆ ಅನುಮಾನಿಸುತ್ತಿದ್ದನು. ರಾಣಿಯು ಒಂದು ವೇಳೆ ಎಚ್ಚರವಾಗಿ ತನ್ನನ್ನು ಯಾರೆಂದು ಪ್ರಶ್ನೆ ಮಾಡಿದರೆ ಏನನ್ನು ಹೇಳಬೇಕೆಂಬುದೇ ಮೊದಲಾದ ವಿಧವಿಧಾಲೋಚನೆಗಳು ಇವಳ ಮನಸ್ಸಿನಲ್ಲಿ ಉಂಟಾದುವು. ಹೇಗಾದರೂ ತನ್ನ ಪ್ರಾಣಕ್ಕೆ ಸೌದಾಮಿನಿ ಕಾದಂಬಿನಿಯರು ಹೊಣೆಯಾಗಿರುವರೆಂಬ ಭರವಸವು ಮಾತ್ರ ಆಗಾಗ ಇವಳಿಗೆ ಧೈರ್ಯವನ್ನುಂಟುಮಾಡುತ್ತಿದ್ದಿತು. ಹೀಗೆ ಸ್ವಲ್ಪ ಹೊತ್ತು ಆಲೋಚನೆಯಲ್ಲಿಯೇ ಸ್ತಬ್ಬಳಾಗಿ ಶೀಲವತಿಯ ಮಂಚದ ಬಳಿಯಲ್ಲಿ ನಿಂತಿದ್ದಳು. ಇಷ್ಟು ಹೊತ್ತಿಗೆ ಹನ್ನೆರಡು ಘಂಟೆ ಹೊಡೆಯಿತು. ರಾಜನು ಸಂಕೇತದಂತೆ ಅಂತಃಪುರಕ್ಕೆ ಬರುವುದರೊಳಗಾಗಿ ಕಾದಂಬಿನಿ ಸೌದಾಮಿನಿಯರೂ ಸಹ ಗೋಚರವಾದರು. ರಾಜನು ಮೆಲ್ಲನೆ ಇವರ ಬಳಿಗೆ ಬಂದನು. ಕಾದಂಬಿನಿಯು ರಾಜನ ಕೈಯನ್ನು ಹಿಡಿದು ಮೆಲ್ಲನೆ ಕಿಟಿಕಿಯ ಬಳಿಗೆ ಕರೆತಂದು ಸಣ್ಣ ಕಿಂಡಿಯಲ್ಲಿ ತೋರಿಸಿ, “ಪ್ರಿಯಾ! ಇದೋ! ಅಂತಃಪುರದ ರಹಸ್ಯವು ಪ್ರತ್ಯಕ್ಷವಾಗಿರುವುದು” ಅವಲೋಕಿಸಬೇಕು. ಈಗಲಾದರೂ ನಮ್ಮ ಮಾತು ನಿಜವೋ ಅಥವಾ ಅಸೂಯಾಜನಿತವಾದುದೋ ಎಂಬುದನ್ನು ಚಿತ್ತಕ್ಕೆ ತರಬೇಕು” ಎಂದಳು. ಅದಕ್ಕೆ ಸೌದಾಮಿನಿಯು “ತಂಗೀ! ಕಾದಂಬಿನೀ! ಪ್ರತ್ಯಕ್ಷವಾಗಿ ಕಾಣುತ್ತಿರುವ ವಿಷಯವನ್ನು ನೋಡಿದ ಮೇಲೆ ಆರ್ಯಪುತ್ರನು ನಮ್ಮನ್ನು ಆಸೂಯಾಪರರೆಂದು ಎಂದಿಗೂ ಭಾವಿಸಲಾರನು” ಎಂದಳು. ರಾಜನಿಗೆ ಅವಮಾನವೂ ವ್ಯಸನವೂ ಕೋಪವೂ ಮೇರೆ ಮೀರಿದ್ದರೂ ವಿಷಯವು ಬಹಿರಂಗಪಡಿಸತಕ್ಕುದಲ್ಲವಾದುದರಿಂದ, ಮಂತ್ರ ಬಂಧಿತವಾದ ಘಟಸರ್ಪದಂತೆ ತನ್ನಲ್ಲಿ ತಾನೇ ಕುದಿದು ಕುದಿದು ಸ್ಥಬ್ಧನಾಗಿ ನಿಂತಿದ್ದು, ಕಡೆಗೆ ಸಹಿಸಲಾರದೆ ಅಂತಃಪುರದ ಬಾಗಿಲನ್ನು ಬಲವಾಗಿ ಒದೆದು, “ಬಾಗಿಲನ್ನು ತೆರೆ” ಎಂದು ಸಿಂಹಾರ್ಭಟದಿಂದ ಕೂಗಿದನು. ಗಾಢನಿದ್ರೆಯಲ್ಲಿದ್ದ ಶೀಲವತಿಯು ಬೆಚ್ಚು ಬಿದ್ದು ತಟ್ಟನೆ ಮೇಲಕ್ಕೆ ಏಳುವಷ್ಟರೊಳಗಾಗಿ ಸರಸಾಂಗನು ಹಿಂದಣಿಂದ ಫಕ್ಕನೆ ಮಂಚದ ಕೆಳಗೆ ಇಳಿಯ ಬಿದ್ದಿದ್ದ ತೆರೆಯಲ್ಲಿ ತೂರಿ ಮರೆಯಾದನು, ಶೀಲವತಿಯು ರಾಜನ ಧ್ವನಿಯನ್ನು ಕೇಳಿ ಬೇಗನೆ ಓಡಿ ಬಂದು ಕದವನ್ನು ತೆರೆದಳು. ಆ ಕೂಡಲೇ ಕಣ್ಣುಗಳಿಂದ ಕೆಂಡಗಳನ್ನು ಸುರಿಸುತ್ತ ರಾಜನು ಸಿಡಿಲಿನಂತೆ ಆರ್ಭಟಿಸಿ, ಶೀಲವತಿಯನ್ನು ಹಿಡಿದು, ಶಿರಸ್ಸನ್ನು ಕಡಿಯುವುದಕ್ಕಾಗಿ ಸೊಂಟದಿಂದ ಕತ್ತಿಯನ್ನೆಳೆಯಲುವಷ್ಟರಲ್ಲಿ ಸೌದಾಮಿನಿಯ ಕಾದಂಬಿನಿಯೂ ಬೇಗನೆ ಒಂದು ರಾಜನ ಕೈಗಳನ್ನು ಹಿಡಿದು, “ಸೈರಿಸು, ಪ್ರಿಯಾ! ಸೈರಿಸು. ವಿಷಯವೇನೆಂಬುದನ್ನು ವಿವರವಾಗಿ ವಿಚಾರಿಸದೆ ಅಕ್ಕನನ್ನು ಶಿಕ್ಷಿಸಬೇಡ. ಸ್ವಲ್ಪ ಸೈರಿಸು” ಎಂದು ಹೇಳಿ ಸಮಾಧಾನಪಡಿಸುವಂತೆ ನಟಿಸಿ, ಶೀಲವತಿಯನ್ನು ರಾಜನ ಕೈಯಿಂದ ಬಿಡಿಸಿ ದೂರವಾಗಿ ಕರೆದುಕೊಂಡು ಹೋದರು. ಸತ್ಯಶೀಲೆಯಾದ ಶೀಲವತಿಯು, ಇವರು ಪರಮ ಸತ್ಯವಂತರೂ, ದಯಾವಂತರೂ ಎಂದು ತಿಳಿದು, “ಎಲೈ ತಂಗಿಯರಿರಾ! ನೀವೇ ನನ್ನ ಭಾಗದ ಭಾಗ್ಯ ದೇವತೆಯರು. ನನ್ನ ಪ್ರಾಣವನ್ನುಳಿಸಿದ ಪುಣ್ಯಶೀಲೆಯರು; ಆರ್ಯಪುತ್ರನಿಗೆ ನನ್ನ ಮೇಲೆ ಇಷ್ಟು ಆಗ್ರಹವುಂಟಾಗಲು ಕಾರಣವೇನು? ನಿಮಗೇನಾದರೂ ತಿಳಿದಿದ್ದರೆ ದಯವಿಟ್ಟು ತಿಳಿಸಿರಿ. ನನ್ನ ಅಪರಾಧಗಳೇನಾದರೂ ಇದ್ದಲ್ಲಿ ನಾನು ಆತನ ಪಾದಗಳ ಮೇಲೆ ಬಿದ್ದು ಕ್ಷಮೆಯನ್ನು ಬೇಡಿಕೊಳ್ಳುವೆನು” ಎಂದು ವಿನಯದಿಂದ ಕೇಳಿಕೊಂಡಳು. ಆಗ ಸೌದಾಮಿನಿಯು “ಅಕ್ಕಾ! ಇದಕ್ಕೆ ಕಾರಣವೇನೆಂಬುದು ನಮಗೂ ತಿಳಿಯದು. ಆರ್ಯ ಪುತ್ರನು ಕೋಪದಲ್ಲಿರುವನು; ಈಗ ಆತನ ಎದುರಿಗೇ ನೀನು ನಿಲ್ಲಬೇಡ ಬಾ” ಎಂದು ದೂರವಾಗಿ ಕರೆದುಕೊಂಡು ಹೋದಳು. ಸರಸಾಂಗನು ಮಂಚದ ಕೆಳಗೆ ತೂರಿ ಅಡಗಿಕೊಂಡುದನ್ನು ಬಾಗಿಲ ಕಿಂಡಿಯಿಂದ ನೋಡಿದ್ದ ರಾಜನು ಮುಂದೆ ನುಗ್ಗಿ ಮಂಚದ ಮುಸುಕಿನೊಳಗಿದ್ದ ವೇಷಧಾರಿಯನ್ನು ಪುರುಷನೆಂದೇ ಭಾವಿಸಿ, ಹಿಡಿದೆಳೆದು ತರುವುದರೊಳಗಾಗಿ ಕಾದಂಬಿನಿಯು ಬೇಗನೆ ಬಂದು ರಾಜನ ಕೈಯನ್ನು ಹಿಡಿದು, “ನಿಲ್ಲು, ನಿಲ್ಲು ಪ್ರಿಯಾ! ಇವನನ್ನು ವಧಿಸಬೇಡ. ಇನ್ನೂ ವಿಷಯಗಳೇನಿರುವುವೋ ನಾಳಿನ ದಿನ ಇವನನ್ನು ಕ್ರಮವಾಗಿ ರಹಸ್ಯದಲ್ಲಿ ವಿಚಾರಿಸಿ, ಇವನಿಗೆ ತಕ್ಕ ಶಿಕ್ಷೆಯನ್ನು ವಿಧಿಸಬಹುದು. ಇದು ಆಗ್ರಹದ ಸಮಯವು. ಈಗ ದುಡುಕು ವುದುಚಿತವಲ್ಲ; ಸ್ವಲ್ಪ ಸೈರಿಸು” ಎಂದು ಮಹಾವಿನಯದಿಂದ ರಾಜನ ಪಾದಗಳ ಮೇಲೆ ಬಿದ್ದು ಬೇಡಿಕೊಂಡಳು. ಆಗ ರಾಜನು ತನ್ನ ವಂಶಕ್ಕೆ ಕಲಂಕವುಂಟಾಗಿ ತಾನು ಮಹಾವಮಾನಕ್ಕೆ ಗುರಿಯಾದೆನೆಂದು ಖೇದಗೊಂಡಿದ್ದರೂ, ಕಿರಿಯ ಹೆಂಡತಿಯು ಬೇಳುವೆಯ ಮಾತುಗಳಿಗೆ ಸೋತು ಸ್ವಲ್ಪ ಹೊತ್ತು ಒಬ್ಬನಾಗಿದ್ದು ಕಡೆಗೆ ಅಪರಾಧಿಗಳಿಬ್ಬರನ್ನೂ ಕಾರಾಗೃಹದ ಬೇರೆಬೇರೆ ಕೊಟಡಿಗಳಲ್ಲಿ ಸೇರಿಸಿ ಬಲವಾದ ಬೀಗಗಳನ್ನು ಹಾಕಿ ಬೀಗದ ಕೈಗಳನ್ನು ತಾನೇ ತೆಗೆದುಕೊಂಡು ಅರಮನೆಗೆ ಬಂದನು. ಮತ್ತು, ಪತಿವ್ರತೆಯೆಂದು ತಾನು ನಂಬಿ ಪ್ರೀತಿಸುತ್ತಿದ್ದ ತನ್ನ ಪತ್ನಿಯು ಕುಲಟೆಯಾಗಿ ತನಗೆ ದ್ರೋಹಮಾಡಿ ತನ್ನ ವಂಶಕ್ಕೆ ಕಳಂಕವನ್ನು ತಂದಳೆಂಬ ದುಃಖಾವಮಾನಗಳಿಂದ ತಪ್ತನಾಗಿ ನಿದ್ರೆಯಿಲ್ಲದೆ ಆ ರಾತ್ರಿಯನ್ನು ಮಹಾ ವ್ಯಥೆಯಿಂದಲೇ ಕಳೆದನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೋಡೆ
Next post ಸೋಲೇ ಇಲ್ಲ!

ಸಣ್ಣ ಕತೆ

 • ಗುಲ್ಬಾಯಿ

  ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

 • ರಣಹದ್ದುಗಳು

  ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

 • ಒಂಟಿ ತೆಪ್ಪ

  ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

 • ಬೂಬೂನ ಬಾಳು

  ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

 • ಅವರು ನಮ್ಮವರಲ್ಲ

  ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…