ಭ್ರಮಣ – ೧೫

ಭ್ರಮಣ – ೧೫

ಬಂಡೆಗೆ ಒರಗಿ ನಿಂತಿದ್ದಳು ಕಲ್ಯಾಣಿ. ಅವಳ ಹೊಟ್ಟೆ ಗರ್ಭಿಣಿ ಎಂಬುದನ್ನು ಸ್ಪಷ್ಟಪಡಿಸುತ್ತಿತ್ತು. ಅದಕ್ಕಾಗಿ ಅವಳು ತನ್ನ ಮೇಲಿನ ವಸ್ತ್ರವನ್ನು ಬದಲಾಯಿಸಿದಳು. ಅವಳೆದುರು ಅವಳ ಹಿಂಬಾಲಕರು ಅದೇ ವಿಧೇಯ ರೀತಿಯಲ್ಲಿ ನಿಂತಿದ್ದರು. ಹೊಸದೊಂದು ಸುದ್ದಿಯನ್ನು ತಂದಿದ್ದ ಶಂಕರ. ಅದಕ್ಕೆ ಆ ವಿಶೇಷ ಸಭೆ.

“ಚೌಧರಿಯ ಜನರು ಎಷ್ಟಿದ್ದಾರೆ?” ತನ್ನದೇ ನಿರ್ಭಾವ ದನಿಯಲ್ಲಿ ಕೇಳಿದಳು ಕಲ್ಯಾಣಿ.

“ಎಂಟು ಜನ” ಕೂಡಲೇ ಉತ್ತರಿಸಿದ ಶಂಕರ.

“ಅವರಿಗೆ ನಮ್ಮ ಠಿಕಾಣಿ ಗೊತ್ತಾಗಿದೆಯೇ?” ಕೇಳಿದಳು ಕಲ್ಯಾಣಿ.

“ಗೊತ್ತಾದ ಹಾಗೆ ಮುಂದೆ ಬರುತ್ತಿದ್ದಾರೆಂಬ ಸುದ್ದಿ ಬಂದಿದ”

“ಹೇಗೆ ಗೊತ್ತಾಗಿರಬಹುದು?”

“ನನಗೆನಿಸಿದಂತೆ ಅವರು ಕಾಡೆಲ್ಲಾ ಜಾಲಾಡಿರಬಹುದು ಒಂದು ಅಂದಾಜಿನ ಮೇಲೆ ಬರುತ್ತಿರಬಹುದು.” ಮೊದಲ ಬಾರಿ ವಿವರಣೆ ನೀಡಿದ ಹರಿ.

ಅವಳ ಹುಬ್ಬುಗಳು ಗಂಟಿಕ್ಕಿದ್ದವು. ಬಂಡೆಗಾನಿ ನಿಲ್ಲುವುದೂ ಕಷ್ಟವೆನಿಸುತ್ತಿತ್ತು. ಹಣೆಯನ್ನು ವರೆಸಿಕೊಂಡಳು.

“ನಾ ಕುರ್ಚಿ ತರುತ್ತೇನಕ್ಕ!” ಹೇಳಿದ ನಾಗೇಶ. ಅವಳು ಮೂರು ತಿಂಗಳ ಗರ್ಭಿಣಿಯಾದಾಗಲೇ ಅವಳ ಹಿಂಬಾಲಕರು ಕುರ್ಚಿಯ ವ್ಯವಸ್ಥೆ ಮಾಡಿದ್ದರು. ಅದಕ್ಕವಳು ಏನೂ ಹೇಳದಾಗ ಹರಿ ಆದೇಶಿಸಿದ.

“ಕುರ್ಚಿ ತಾ”

ಅಕ್ಕನ ನಂತರ ಅವನೇ ನಾಯಕ. ಅದಕ್ಕೇನೂ ಹೇಳಲಿಲ್ಲ ಕಲ್ಯಾಣಿ. ನಾಗೇಶ ಕುರ್ಚಿ ತಂದು ಹಾಕಿದ. ಅದೇ ಬೇಕಾಗಿದ್ದವಳಂತೆ ಅದರಲ್ಲಿ ಕುಳಿತಳು ಕಲ್ಯಾಣಿ.

“ದೇವಿಯಾದವ ಅವರಿಗೆ ಏನೇನು ಕೊಡುತ್ತಿದ್ದ?” ಹರಿಯನ್ನು ನೋಡುತ್ತಾ ಪ್ರಶ್ನಿಸಿದಳು.

“ಆಯುಧಗಳನ್ನಲ್ಲದೇ ಹಣವನ್ನು ಕೊಡುತ್ತಿದ್ದ” ಹೇಳಿದ ಹರಿ.

“ಅವನಿಗೆ ಅದರ ಪ್ರತಿಫಲವೇನು ಸಿಗುತ್ತಿತ್ತು?” ಕೇಳಿದಳು ಕಲ್ಯಾಣಿ.

“ಕ್ರಾಂತಿಕಾರಿಯರ ಹೆಸರಿನಲ್ಲಿ ಇವರು ಅವನ ಬೇಕಾದ ಕೆಲಸ ಮಾಡುತಿದ್ದರು”

ಇದೆಲ್ಲಾ ತಮಗೆ ಗೊತ್ತಿದ್ದ ವಿಷಯ ಯಾಕೆ ಹೀಗೆ ಕೇಳುತ್ತಿದ್ದಾಳೋ ಅರ್ಥವಾಗಲಿಲ್ಲ ನಾಗೇಶನಿಗೆ.

“ಇದೆಲ್ಲಾ ನಿಮಗೆ ಗೊತ್ತಿರುವ ವಿಷಯ. ಆದರೂ ಯಾಕೆ ಹೇಳುತ್ತಿದ್ದೇನೆ ಗೊತ್ತೆ?”

ತನ್ನ ಮನಸ್ಸಿನಲ್ಲಿ ಸುಳಿದ ಪ್ರಶ್ನೆಯನ್ನು ಕೂಡಲೇ ಕೇಳಿದಳಲ್ಲ ಎಂದುಕೊಂಡು ಹೇಳಿದ ನಾಗೇಶ.

“ಇಲ್ಲ”

“ಯಾಕೆಂದರೆ ನಿಮಗೆಲ್ಲಾ ಗೊತ್ತಾಗಬೇಕು! ಕ್ರಾಂತಿಯ ಹೆಸರಿನಲ್ಲಿ ಧನವಂತರನ್ನು ಸುಲಿದು ಮಜಾ ಮಾಡುವುದು, ರಾಜನೀತಿಜ್ಞರ ಗುಲಾಮರಾಗಿ ಕೆಲಸ ಮಾಡುವುದು ಜನರಿಗೆ ಗೊತ್ತಾಗಿ ಹೋಗುತ್ತದೆ. ಅದು ಯಾರೂ ಅವರಿಗೆ ಹೇಳಬೇಕಾಗಿಲ್ಲ. ಅದೇ ಕಾರಣಕ್ಕೆ ಕೆಲ ತಂಡಗಳು ನಾಶವಾಗಿವೆ. ಇನ್ನೂ ಕೆಲ ತಂಡದ ಹಿಂಬಾಲಕರು ಸಿಕ್ಕಿಬಿದ್ದು ಜೈಲಿನಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ. ಅವರನ್ನು ಹಿಡಿದುಕೊಟ್ಟವರು ಯಾರು ಜನರೆ! ನಿಮ್ಮನ್ನು ಸುತ್ತುಮುತ್ತಿನ ಹಳ್ಳಿಗಳಲ್ಲಿ, ರಾಮನಗರದಲ್ಲಿ ಜನ ಗುರುತಿಸುತ್ತಾರೆ. ಆದರೆ ಯಾರೂ ನಿಮಗೆ ಕೇಡು ಬಗೆಯುವುದಿಲ್ಲ, ಪೋಲಿಸಿನವರಿಗೆ ಇವರೇ ಕಲ್ಲಕ್ಕನ ಕ್ರಾಂತಿಕಾರಿ ತಂಡದವರು ಎಂದು ಯಾರೂ ಬೆರಳು ಮಾಡಿತೋರಿಸುವುದಿಲ್ಲ. ಯಾಕೆ? ಯಾಕೆಂದರೆ ಯಾವಾಗಲೂ ನಾವು ಜನಸಾಮಾನ್ಯರ ಏಳಿಗೆಯನ್ನು ಬಯಿಸಿದ್ದೆವಷ್ಟೆ. ಅವರ ನಂಬಿಕೆಗೆ ಎಂದೂ ದ್ರೋಹ ಬಗೆದಿಲ್ಲ. ನಾವು ಯಾರಲ್ಲಾದರೂ ಕೈಚಾಚಿ, ಹೆದರಿಸಿ ಹಣ ಕೇಳಿದ್ದೇವೆಯೇ? ಇಲ್ಲ. ಅವರೇ ಮನಸ್ಪೂರ್ತಿಯಾಗಿ ನಮಗೆ ಬೇಕಾದುದನ್ನೆಲ್ಲಾ ಕೊಡುತ್ತಾರೆ. ಯಾಕೆ? ಯಾಕೆಂದರೆ ನಮ್ಮಿಂದ ಅವರಿಗೆ ಯಾವುದೇ ರೀತಿಯ ಸಹಾಯ ಸಿಕ್ಕಿರಬಹುದು. ಅದನ್ನು ನಿಮಗೆಲ್ಲಾ ಮನದಟ್ಟಾಗಲೆಂದೇ ಆ ಪ್ರಶ್ನೆ ಕೇಳಿದ್ದು. ಜನರ ಮನ ಗೆಲ್ಲಿ ಅವರು ನಿಮಗಾಗಿ ಪೋಲಿಸಿನವರನ್ನೂ ಕೊಲ್ಲುತ್ತಾರೆ. ನಿಮಗಾಗಿ ಅವರು ಏನು ಬೇಕಾದರೂ ಮಾಡುತ್ತಾರೆ. ಅದನ್ನು ನೀವು ನೋಡಿದ್ದೀರಿ.

ನನಗೆ ಗಂಡನಿದ್ದಾನೆ, ಮನೆ ಇದೆ. ನಾನು ಎಂತಹ ಅವಸ್ಥೆಯಲ್ಲಿದ್ದೇನೆಂಬುವುದು ನೀವು ನೋಡುತ್ತಿದ್ದೀರಿ. ಆದರೂ ನಿಮ್ಮ ಜತೆಗಿದ್ದನೆ. ಬಡಬಗ್ಗರ ನಿಸ್ಸಾಹಾಯಕತೆಯನ್ನು, ಅವರ ಅವಹೇಳನೆಯನ್ನು ನೀಗಿಸಲಿದ್ದೇನೆ. ಅವರಿಗೆ ತಮ್ಮ ಆತ್ಮಗೌರವವನ್ನು ಮರಳಿ ಪಡೆಯುವಂತೆ ಮಾಡಲು ನಾನಿಲ್ಲಿದ್ದೇನೆ. ಅದಕ್ಕಾಗಿ ಕೆಲಸ ಮಾಡಿ.

ಯಾಕೋ ನನಗಿಂದು ನಿಮ್ಮೊಡನೆ ಮಾತಾಡುತ್ತಿರುವುದು ಕೊನೆಯ ಸಲವೇನೋ ಎನಿಸುತ್ತಿದೆ. ಎಲ್ಲಾ ಗಮನವಿಟ್ಟು ಕೇಳಿ ನನ್ನ ನಂತರ ಹರಿಯೇ ನಾಯಕ. ಅವನು ಬುದ್ಧಿವಂತ, ನಿಷ್ಠಾವಂತ ಅವನ ಮಾರ್ಗದರ್ಶನದಲ್ಲಿ ಈ ಚಳುವಳಿ ಮುಂದುವರೆಯಲಿ

ಕಲ್ಯಾಣಿ ಮಾತು ನಿಲ್ಲಿಸಿದಾಗ ನಾಗೇಶನ ಕಣ್ಣಲ್ಲಿಂದ ಧಾರಾಕಾರವಾಗಿ ನೀರು ಹರಿಯುತ್ತಿತ್ತು. ಬೇರೆಲ್ಲರ ಮುಖದಲ್ಲೂ ಶೋಕದ ಭಾವ ತುಂಬಿಬಂದಿತ್ತು. ಅವನನ್ನು ಕೈಮಾಡಿ ಹತ್ತಿರ ಕರೆದಳು. ಅವನು ಅವಳ ಕುರ್ಚಿಯನ್ನು ಹಿಡಿದು ಕುಳಿತು ಅಳತೊಡಗಿದ. ಅವನ ತಲೆಯ ಮೇಲೆ ಅಕ್ಕರೆಯಿಂದ ಕೈ ಸವರುತ್ತಾ ತಾನು ಮಾತಾಡುವುದನ್ನು ನಿಲ್ಲಿಸಿಯೇ ಇಲ್ಲವೇನೋ ಎಂಬಂತೆ ಹೇಳತೊಡಗಿದ್ದಳು.

“ನಾನು ಮೊದಲು ಈ ಭಾವೋದ್ವೇಗಗಳನ್ನು ಹೊರಗೆಡಹಬೇಕು. ನಾವೆಲ್ಲಾ ನಿರ್ವಿಕಾರರಾಗಬೇಕು ಎಂಬ ಬೋಧನೆ ಮಾಡುತ್ತಿದ್ದೆ. ಅದು ಆಗದ ಮಾತೆಂದು ನನಗೆ ತೇಜಾ ತೋರಿಸಿಕೊಟ್ಟ. ನಂತರ ಯೋಚಿಸಿದಾಗ ಬಡವರ ಕಣ್ಣೀರು, ಆಡಳಿತ ಅವರಿಗೆ ಮಾಡುತ್ತಿರುವ ಅನ್ಯಾಯಗಳ ಬಗೆಗಿನ ಆಕ್ರಂದನ ಕೇಳಿ ನಾವು ಈ ದಾರಿಗೆ ಇಳಿದಿರುವುದು! ಈಗ ಭಾವೋದ್ವೇಗಗಳೆಲ್ಲ ಮನುಷ್ಯನ ಅಂಶವೇನೋ ಎನಿಸುತ್ತದೆ. ಆದರೆ ನಾವದನ್ನು ಬಸ್ತಿನಲ್ಲಿಡುವುದು ಕಲಿಯಬೇಕು. ಏಳು ನಾಗೇಶ ಅಳು ನಿಲ್ಲಿಸು ಮುಂದಿನ ಕೆಲಸದಕಡೆ ಗಮನ ಕೊಡು.

ಹರಿ ಈಗೊಂದು ಮುಖ್ಯ ವಿಷಯ. ತೇಜಾನ ಟ್ರಾನ್ಸ್‌ಫರ್ ಆಗಿದೆ. ಅದರ ವಿರುದ್ಧ ಬಂಡೇರಹಳ್ಳಿಯವರು ಗದ್ದಲವೆಬ್ಬಿಸುತ್ತಿದ್ದಾರೆ. ನಾ ಹೇಳಿದ ಹಾಗೆ ಇಷ್ಟು ಅನ್ಯಾಯ ಅತ್ಯಾಚಾರಗಳನ್ನು ಮಾಡಿದರೂ ನಾಯಕ್ ಇನ್ನೂ ಪಂಚಾಯತಿಯ ಪ್ರೆಸಿಡೆಂಟೇ ಆಗಿದ್ದಾನೆ. ಮೊದಲು ಅವನ ಕಥೆ ಮುಗಿಸಬೇಕು. ಯಾವ ಪೋಲಿಸ್ ಅಧಿಕಾರಿಯೇ ಆಗಲಿ, ಯಾರೇ ಜನರ ಮೇಲೆ ಅತ್ಯಾಚಾರ ಮಾಡಿದರೆ ಅವರು ನಾಶಿಸಬೇಕು. ತೇಜಾ ಹೋದಮೇಲೆ ನಾಯಕರೊಡನೆ, ನೀವು ಎಸ್.ಪಿ. ಕಲೆಕ್ಟರ್‌ರನ್ನು ಮುಗಿಸಬೇಕು. ಕನಿಷ್ಠ ರಾಮನಗರವನ್ನಾದರೂ ಭ್ರಷ್ಟಾಚಾರದಿಂದ ಮುಕ್ತಿ ಹೊಂದಿಸಬೇಕು. ಕೊನೆಯ ಮಾತು ನಾನು ಬದುಕಿರುವವರೆಗೂ ನಾಯಕಿ ನಾ ಹೇಳಿದ್ದನ್ನು ನೀವು ಮಾಡಬೇಕು. ನಾನಿಲ್ಲೇ ಇದ್ದುಬಿಡುತ್ತಿದ್ದೆ. ಆದರೆ ಅಪ್ಪನಿಗೆ ಒಂದು ವಚನ ಕೊಟ್ಟು ಬಂದಿದ್ದೇನೆ ಅದನ್ನು ನಿಭಾಯಿಸಬೇಕು. ಈಗ ಇಷ್ಟು ಸಾಕು… “ಶಂಕರ ಅವರುಗಳಿಲ್ಲಿ ತಲುಪಲು ಎಷ್ಟು ಸಮಯಬೇಕು?”

“ಇನ್ನೇನು ಅರ್‍ಧ ಗಂಟೆಯಲ್ಲಿ ಇಲ್ಲಿಗೆ ತಲುಪಬಹುದು” ಹೇಳಿದ ಶಂಕರ.

“ಶಂಕರ, ಮಲ್ಲಪ್ಪ, ನಾಗೇಶ, ನೀವು ಎಲ್ಲಾ ದಿಕ್ಕುಗಳಿಂದ ನೋಡುತ್ತಿರಿ ಅವರು ಬರುತ್ತಿರುವ ಸೂಚನೆ ಸ್ವಲ್ಪವಾದರೂ ಕಂಡುಬಂದರೆ ತಿಳಿಸಿ”

ಅವಳ ಮಾತು ಮುಗಿಯುತ್ತಿದ್ದಂತೆ ದುರ್ಬೀನುಗಳನ್ನು ತೆಗೆದುಕೊಂಡು ಮೂವರೂ ಮೂರು ಮೂರು ದಿಕ್ಕುಗಳಿಗೆ ಹೋದರು. ಅವರು ಕಣ್ಮರೆಯಾಗುತ್ತಿದ್ದಂತೆ. ಅಲ್ಲಿ ಮಿಕ್ಕ ಹರಿ ಮತ್ತು ಸಾಯಿಯ ಕಡೆ ತಿರುಗಿ ಮಾತಾಡಿದಳು ಕಲ್ಯಾಣಿ

“ಎಲ್ಲಾ ವ್ಯವಸ್ಥೆ ಚೆನ್ನಾಗಿದೆ ತಾನೇ”

“ಅದರಲ್ಲಿ ಸಂದೇಹವೇ ಇಲ್ಲವಕ್ಕ ಅವರಲ್ಲಿ ಒಬ್ಬನೂ ಉಳಿಯುವುದಿಲ್ಲ”

ಹರಿಯ ಮಾತು ಮುಗಿಯುತ್ತಲೇ ಕೇಳಿದಳು ಕಲ್ಯಾಣಿ

“ನಮ್ಮಲ್ಲಿ”

“ನನ್ನ ಯೋಜನೆಯಂತೆ ನಡೆದರೆ ನಮ್ಮವರೊಬ್ಬರಿಗೂ ಏನೂ ಆಗುವುದಿಲ್ಲ”

ಮತ್ತೆ ಪೂರ್ತಿ ವಿಶ್ವಾಸದಿಂದ ಹೇಳಿದ ಹರಿ.

“ಇನ್ನೊಮ್ಮೆ ನಿನ್ನ ಯೋಜನೆ ವಿವರಿಸು” ಕೇಳಿದಳು ಕಲ್ಯಾಣಿ

“ಅವರು ಎತ್ತ ಕಡೆಯಿಂದ ಬೆಟ್ಟವೇರುತ್ತಿದ್ದಾರೆಂದು ತಿಳಿದಾಕ್ಷಣ ನಾನು, ಸಾಯಿ ಬೇರೆ ದಿಕ್ಕಿನಿಂದ ಇಳಿದು ಕೆಳಗೆ ಹೋಗಿ ಅವರನ್ನು ಹಿಂದಿನಿಂದ ಸುತ್ತುವರೆಯುತ್ತೇವೆ. ಬೆಟ್ಟವೇರಲು ಆರಂಭಿಸಿದಾಕ್ಷಣ ನಮ್ಮ ಮೈನುಗಳಿಂದ ಅವರಲ್ಲಿನ ಒಬ್ಬರಿಬ್ಬರು ಸಾಯುತ್ತಾರೆ. ಭಯದಿಂದ ಹಿಂತಿರುಗಿ ಓಡಲು ಯತ್ನಿಸಿದರೆ ನಾವವರನ್ನು ಮುಗಿಸುತ್ತೇವೆ” ತನ್ನ ಯುದ್ಧನೀತಿಯನ್ನು ವಿವರಿಸಿದ ಹರಿ.

“ಆ ಚೌಧರಿಗೆ ನಾವು ಮೈನುಗಳನ್ನು ಹರಡಿರಬಹುದೆಂಬ ಅನುಮಾನ ಮೊದಲೇ ಬಂದಿದ್ದರೆ?” ಕೇಳಿದಳು ಕಲ್ಯಾಣಿ.

ಅವನಿಗಷ್ಟು ಬುದ್ಧಿ ಇದ್ದಿದ್ದರೆ ಯಾವಾಗಲೋ ನಮ್ಮ ಠಿಕಾಣಿಯನ್ನು ಪತ್ತೆಹಚ್ಚುತ್ತಿದ್ದ. ನಾವೀ ಎತ್ತರದ ಬೆಟ್ಟದ ಮೇಲಿರಬಹುದೆಂದು ಅವನಿಗೆ ಯಾರೋ ಹೇಳಿದ್ದಾರೆ. ಅದರ ಅಂದಾಜಿನ ಮೇಲವನಿಲ್ಲಿ ಬರುತ್ತಿದ್ದಾನೆ. ನಾವಿಲ್ಲೆ ಇದ್ದೇವೆಂಬುವುದು ಅವನಿಗೆ ಖಚಿತವಾಗಿ ಗೊತ್ತಿಲ್ಲ.”

“ಯಾರು ಹೇಳಿರಬಹುದು?” ಮತ್ತೆ ಅದೇ ಅನುಮಾನ ಅವಳಿಗೆ

“ನನಗನಿಸಿದಂತೆ ಕಾಡಿನಲ್ಲಿ ಬಂದ ಯಾರನ್ನೊ ಅವನು ಬಹಳ ಹಿಂಸಿಸಿರಬೇಕು. ಅವನಿಂದ ಮುಕ್ತಿ ಹೊಂದಲು ಅವನೂ ಈ ಎತ್ತರದ ಸ್ಥಾನವನ್ನು ತೋರಿಸಿರಬಹುದು. ಇದೆಲ್ಲಾ ಬರೀ ಅಂದಾಜಿನ ಮೇಲೆ ನಡೆದ ಕೆಲಸ. ಯಾಕೆಂದರೆ ಬಂಡೇರಹಳ್ಳಿಯಲ್ಲಿನ ಯಾರಿಗೂ ನಾವೆಲ್ಲಿದ್ದೇವೆಂಬುವುದು ಗೊತ್ತಿಲ್ಲ”

ಸ್ವಲ್ಪ ಹೊತ್ತು ಯೋಚಿಸಿ ಹೇಳಿದಳು

“ನೀನು ಸಾಯಿ ಕೆಳಗೆ ಹೋಗುವುದು ಬೇಡ. ಮಲ್ಲಪ್ಪ ಶಂಕರನನ್ನು ಕಳಿಹಿಸುವ”

ಅವಳ ಮುಖದ ಕಡೆ ನೋಡುತ್ತಿದ ಹರಿಗೆ ಅದ್ಯಾಕೆಂದು ಕೇಳುವ ಧೈರ್ಯ ಬರಲಿಲ್ಲ. ಮುಂದೆ ಅವರ ಮಾತು ಬೆಳೆಯದಂತೆ

“ಅವರು ಬರುತ್ತಿದ್ದಾರೆ” ಎಂದು ಹೇಳಿದ ಮಲ್ಲಪ್ಪ.

ಆ ಮಾತಿನೊಡನೆಯೇ ಯುದ್ಧದ ಸಿದ್ಧತೆ ಆರಂಭವಾಯಿತು. ಹರಿ ಓಡಿಹೋಗಿ ಬೈನಾಕ್ಯುಲರ್‌ನ ಮೂಲಕ ಬಹು ಜಾಗ್ರತೆಯಿಂದ ವೀಕ್ಷಿಸಿದ. ಆಯುಧಗಳನ್ನು ಹಿಡಿದು ಎಂಟು ಜನ ಒಂದೇ ದಿಕ್ಕಿನಿಂದ ಗಿಡಗಂಟೆಗಳನ್ನು ಸರಿಸಿಕೊಳ್ಳುತ್ತಾ ಬರುತ್ತಿದ್ದರು. ತಾ ಹೇಳಿದ್ದು ನಿಜವಾದುದಕ್ಕೆ ಅವನಿಗೆ ಎಲ್ಲಿಲ್ಲದ ಸಂತಸ. ಎಲ್ಲರನ್ನೂ ಕಲ್ಲಕ್ಕನ ಬಳಿ ಕರೆ ತಂದ. ಅವರಲ್ಲಿ ಬರುತ್ತಲೇ ಹೇಳಿದಳು ಕಲ್ಯಾಣಿ.

“ಮಲ್ಲಪ್ಪ, ಶಂಕರ ನೀವು ಈ ದಿಕ್ಕಿನಿಂದ ಇಳಿದು ದೂರದ ಮಾರ್ಗದಿಂದ ಅವರ ಹಿಂದೆ ಬನ್ನಿ, ನಿಮ್ಮಲ್ಲಿ ಎಲ್ಲ ವಿಧದ ಆಯುಧಗಳು, ಸೈನೆಡ್‌ಗಳೂ ಇರಬೇಕು, ಇದು ಧೈರ್ಯಕ್ಕಿಂತ ಹೆಚ್ಚಾಗಿ ಬುದ್ಧಿವಂತಿಕೆಯ ಕೆಲಸ. ಅವರೊಂದು ವೇಳೆ ಓಡಿಹೋಗತೊಡಗಿದರೆ ಒಬ್ಬರೂ ಮಿಕ್ಕಿರಬಾರದು. ಹೋಗಿ ಜಯ ನಿಮ್ಮದೇ” ಆಕೆಯ ಮಾತು ಮುಗಿಯುತ್ತಿದ್ದಂತೆ ತಮ್ಮ ತಮ್ಮ ಮಾರಕ ಆಯುಧಗಳನ್ನು ಎತ್ತಿಕೊಳ್ಳಲು ಅವರು. ಗುಹೆಯ ಕಡೆ ಓಡಿ ಅಲ್ಲಿ ತಮಗೆ ಬೇಕಾಗಬಹುದಾದಂತಹ ಸ್ಫೋಟಕಗಳನ್ನು ತೆಗೆದುಕೊಂಡು, ಯುದ್ಧಕ್ಕೆ ಹೋಗುವ ಸೈನಿಕರಂತೆ ಕೆಳಗೆ ಜಾರತೊಡಗಿದರು. ತಾ ಹಾಸಿದ ಲ್ಯಾಂಡ್ ಮೈನ್‌ಗಳು ಎಲ್ಲಿವೆ ಎಂಬುವುದು ಅವರಿಗೆ ಚೆನ್ನಾಗಿ ಗೊತ್ತಿತ್ತು.

ಹರಿ ಮತ್ತು ಸಾಯಿ ದುರ್ಬೀನಿನಿಂದ ಚೌದರಿಯ ದಳದವರನ್ನು ಪರಿಕ್ಷಿಸುತ್ತಿದ್ದರು. ಮಾರಕ ಆಯುಧಗಳನ್ನು ಹಿಡಿದ ಅವರು ತಮಗೆ ಗೊತ್ತಿದ್ದ ಗುರಿಯ ಕಡೆ ನಡೆಯುತ್ತಿದ್ದಂತಿತ್ತು. ನಾಗೇಶ ಬರೀ ಅವರ ಚಟುವಟಿಕೆಗಳನ್ನು ಗಮನಿಸುತ್ತಿದ್ದ. ಅವರು ಸಮೀಪವಾಗುತ್ತಿದ್ದಂತೆ ಹಿಂದಕ್ಕೆ ನೋಟ ಹರಿಸಿದ ಹರಿ. ಮಲ್ಲಪ್ಪ ಒಂದು ದಿಕ್ಕಿನಿಂದ, ಶಂಕರ ಇನ್ನೊಂದು ದಿಕ್ಕಿನಿಂದ ಬಂದು ನೆಲದ ಮೇಲೆ ಮಲಗಿ ತಮ್ಮ ಆಯುಧಗಳನ್ನು ಸಿದ್ಧವಾಗಿ ಹಿಡಿದಿದ್ದರು. ನುರಿತ ಸೈನಿಕರಂತಹ ಅವರ ಶಿಸ್ತಿಗೆ ಮೆಚ್ಚದೇ ಇರುವುದು ಕಷ್ಟ. ಇಂತಹವರು ಜತೆಗಿದ್ದರೆ ಏನನ್ನಾದರೂ ಸಾಧಿಸಬಹುದು ಎನಿಸಿತು.

ಕುರ್ಚಿಯಲ್ಲಿ ಕುಳಿತ ಕಲ್ಯಾಣಿಯ ಕಿವಿಗಳು ಭಯಂಕರ ಸ್ಫೋಟವನ್ನು ಕೇಳಲು ಸಿದ್ಧವಾಗಿದ್ದವು. ಮುಂದಿನ ಜೀವನದ ಬಗ್ಗೆ ಅವಳಿಗೆ ಯೋಚನೆ ಇಲ್ಲ. ಅಪ್ಪನ ಒಂದು ಇಷ್ಟಾರ್ಥವನ್ನು ನೆರವೇರಿಸಿದರಾಯಿತು. ಅಲ್ಲಿಗೆ ತನ್ನದೊಂದು ಕರ್ತವ್ಯ ಮುಗಿಯುತ್ತದೆ ಎಂದುಕೊಂಡಳು.

ಚೌಧರಿ ಸಹಿತ ಅವನ ಮೂವರು ಸಂಗಡಿಗರು ಒಂದೇ ಸಲ ಮೈನಿನ ಮೇಲೆ ಕಾಲಿಟ್ಟರು. ಭಯಂಕರ ಸ್ಫೋಟದೊಡನೆ ಅವರ ದೇಹಗಳು ಮೇಲೆ ಹಾರಿದವು. ನೆಲಕ್ಕೆ ಬೀಳುವಾಗ ಒಂದೊಂದು ದೇಹ ನಾಲ್ಕಾರು ತುಂಡುಗಳಾಗಿತ್ತು. ಭಯ-ಭ್ರಾಂತಿಗಳಿಂದ ತಕ್ಷಣ ಹಿಂದೆ ಸರಿದರು ಮಿಕ್ಕವರು. ಏನು ಮಾಡಬೇಕೆಂಬಂತ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡು ತಮ್ಮ ನಾಯಕನೇ ಇಲ್ಲದಿರುವ ಅರಿವು ಅವರಲ್ಲಿ ಎಲ್ಲಿಲ್ಲದ ಭಯವನ್ನು ಹುಟ್ಟಿಸಿತು. ಕಾಡಿನಲ್ಲಿ ಓಡಲಾರಂಭಿಸಿದರು. ಮಲ್ಲಪ್ಪ ಮತ್ತು ಶಂಕರರ ಆಯುಧಗಳಿಂದ ಗುಂಡುಗಳ ಸುರಿಮಳೆ ಆರಂಭವಾಯಿತು. ಇನ್ನೂ ಮೂವರು ಆ ಗುಂಡುಗಳಿಗೆ ಬಲಿಯಾದರು. ಮಿಕ್ಕ ಇಬ್ಬರೂ ತಮ್ಮ ಆಯುಧಗಳನ್ನು ಸರಿಪಡಿಸಿಕೊಳ್ಳುತ್ತಾ ನೆಲಕ್ಕುರಳಿ ತಾವು ಗುಂಡುಗಳನ್ನು ಹಾರಿಸತೊಡಗಿದರು. ಶಂಕರ ಮತ್ತು ಮಲ್ಲಪ್ಪ ಗಿಡ ಮರಗಳ ಹಿಂದೆ ಇದ್ದ ಕಾರಣ ಅವರಿಗೆ ಕಾಣುವ ಹಾಗಿರಲಿಲ್ಲ. ಹಲವು ಕ್ಷಣಗಳು ಗುಂಡುಗಳ ಸದ್ದು ನಿಂತಿತು. ಮತ್ತೆ ಆ ಕಾಡಿಗೆ ಅಸಹಜವೆನಿಸುವಂತಹ ಸದ್ದು ನಿಂತು ಮೌನವಾವರಿಸಿತು. ಚೌದರಿಯ ದಳದ ಇಬ್ಬರೂ ತಮ್ಮ ಶತ್ರುಗಳನ್ನು ನೋಡಲು ತಲೆ ಮೇಲೆತ್ತಿದ್ದರು. ಶಂಕರ್ ಅವರ ಮೇಲೆ ಗ್ರೈನೆಡ್ ಎಸೆದ ಗ್ರೈನೆಡ್ ಅವರಿಗೆ ಕಾಣಲಿಲ್ಲ. ಎರಡೂ ಗ್ರೆನೆಡ್‌ಗಳು ಭಯಂಕರ ಶಬ್ದ ಮಾಡಿ ಒಬ್ಬನನ್ನು ಬಲಿ ತೆಗೆದುಕೊಂಡಾಗ ತನ್ನ ಸ್ಥಾನದಿಂದ ಎದ್ದು ಅವನ ಹತ್ತಿರ ಬಂದು ಗುಂಡುಗಳನ್ನು ಹಾರಿಸತೊಡಗಿದ ಮಲ್ಲಪ್ಪ. ನೋಡುನೋಡುತ್ತಾ ಆ ಮಿಕ್ಕ ಒಬ್ಬನೂ ನೆಲಕ್ಕೆ ಕುಸಿದ.

ಬೈನಾಕುಲರ್‌ನ್ನು ಕಣ್ಣಿನಿಂದ ಸರಿಸಿದ ಹರಿ ಕುರ್ಚಿಯಲ್ಲಿ ಕುಳಿತ ಕಲ್ಯಾಣಿಯ ಬಳಿ ಓಡಿಬಂದು ಹೇಳಿದ

“ಎಲ್ಲಾ ನಾ ಹೇಳಿದಂತೆ ನಡೆಯಿತು ಅವರಲ್ಲಿ ಒಬ್ಬನೂ ಮಿಕ್ಕಿಲ್ಲ.”

“ಶಭಾಷ್! ನಿನ್ನ ಬುದ್ಧಿವಂತಿಕೆ ಮೆಚ್ಚಿಕೊಳ್ಳಬೇಕು… ಆದಷ್ಟು ಬೇಗ ಈ ಜಾಗ ಖಾಲಿ ಮಾಡಿ ದೇವನಹಳ್ಳಿಯ ಹತ್ತಿರ ಒಂದು ದಿನ ಇರಿ ಮತ್ತೆ ಅಲ್ಲಿಂದಲೂ ಬದಲಾಗಬೇಕು…”

“ಎಲ್ಲಾ ಮೊದಲಿನ ಹಾಗೆ!” ಅವಳ ಮಾತನ್ನೂ ಪೂರ್ತಿ ಮಾಡಿದ ಹರಿ.

“ಹೌದು! ಎಲ್ಲಾ ಮೊದಲಿನ ಹಾಗೆ, ತೇಜಾ ಬಂಡೇರಹಳ್ಳಿ ಬಿಡುತ್ತಿದ್ದಾನೆಂದರೆ ಮತ್ತೆ ಎಲ್ಲಾ ಮೊದಲಿನ ಸ್ಥಿತಿಗೆ ಬರುತ್ತದೆ.” ಹಳೆಯ ದಿನಗಳನ್ನು ನೆನೆಸಿಕೊಳ್ಳುತ್ತಿರುವಂತೆ ಹೇಳಿದಳು ಕಲ್ಯಾಣಿ, ಮಾತಾಡಲು ಇನ್ನು ಏನೂ ವಿಶೇಷವಿಲ್ಲವೆಂಬಂತೆ ತನ್ನ ಸಂಗಡಿಗರಿಗಾಗಿ ಕಾಯುತ್ತಾ ನಿಂತ. ಎಲ್ಲವನ್ನು ನೋಡುವುದು ಮುಗಿಸಿಬಂದ ನಾಗೇಶ ಹೇಳಿದ

“ಆ ಎಂಟು ಜನರ ಕಥೆಯೂ ಮುಗಿದುಹೋಯಿತಕ್ಕಾ! ತುಂಡು ತುಂಡುಗಳಾಗಿ ಕಾಡಿನಲ್ಲೆಲ್ಲಾ ಹರಡಿಬಿಟ್ಟಿದ್ದಾರೆ”

ಅವನ ದನಿಯಲ್ಲಿ ಉತ್ಸಾಹ ಉದ್ವೇಗಗಳು ತುಂಬಿದ್ದವು. ಅವನ ಹಿಂದೆಯೇ ಬಂದ ಸಾಯಿ ಸುಮ್ಮನೆ ನಿಂತಿದ್ದ.

“ನೀವಿಬ್ಬರೂ ಹೋಗಿ ಸಾಮಾನು ಕಟ್ಟುವ ಕೆಲಸ ಆರಂಭಿಸಿ ನಾವೀ ಜಾಗ ಖಾಲಿ ಮಾಡುತ್ತಿದ್ದೇವೆ” ಹೇಳಿದಳು ಕಲ್ಯಾಣಿ.

ಯಾವ ಮಾತು ಆಡದೆ ಸಾಯಿ, ನಾಗೇಶ ಹಿಂದೆ ಹೋದರು. ಅವರು ಕಣ್ಮರೆಯಾಗುತ್ತಿದ್ದಂತೆ ಮತ್ತೆ ಮಾತು ಆರಂಭಿಸಿದಳು ಕಲ್ಯಾಣಿ.

“ನೋಡು ಹರಿ! ನಿಮ್ಮನ್ನು ಬಿಟ್ಟು ಹೋಗುವ ಇಷ್ಟ ನನಗೂ ಇಲ್ಲ. ಆದರೆ ನನ್ನ ಈ ಅವಸ್ಥೆಯಲ್ಲಿ ನಿಮಗೆ ತೊಂದರೆ ಕೊಡುವುದು ನ್ಯಾಯವಲ್ಲ. ಕೆಲದಿನಗಳು ನಿಮ್ಮಿಂದ ದೂರವಿರುತ್ತೇನೇ. ಮತ್ತೆ ಬಂದು ನಿಮ್ಮನ್ನು ಸೇರಿಕೊಳ್ಳುತ್ತೇನೆ. ನಾನು ಅಪ್ಪನ ಮನೆಯಲ್ಲಿದ್ದರೂ ನೀವು ಆಗಾಗ ಬಂದು ನನ್ನ ಭೇಟಿಯಾಗಬಹುದು. ಯಾವುದೇ ಮುಖ್ಯ ವಿಷಯವೇ ಆಗಲಿ ನನ್ನ ಅನುಮತಿ ಇಲ್ಲದೇ ಮಾಡಬೇಡಿ”

“ಸರಿ ಅಕ್ಕಾ! ನಾನೆಲ್ಲಾ ನೋಡಿಕೊಳ್ಳುತ್ತೇನೆ ನಿಮಗ್ಯಾವ ಚಿಂತೆಯೂ ಬೇಡ. ಅದೂ ಅಲ್ಲದೇ ನೀವು ದೂರವೇನೂ ಹೋಗುತ್ತಿಲ್ಲ. ಹತ್ತಿರದಲ್ಲೇ ಇದ್ದೀರಿ. ಅದೇ ನಮಗೆ ಎಲ್ಲಿಲ್ಲದ ಬಲ” ಎಂದ ಹರಿ. ಶಂಕರ ಮತ್ತು ಮಲ್ಲಪ್ಪ ಬಂದು ತಮ್ಮ ವಿಜಯದ ವಿಷಯ ಹೇಳಿದರು. ಅವರನ್ನು ಪ್ರಶಂಸಿಸಿ ಈಗ ಇಲ್ಲಿಂದ ಜಾಗ ಖಾಲಿ ಮಾಡಬೇಕೆಂದು ಹೇಳಿ ಅವರ ಸಿದ್ಧತೆ ಮಾಡುವಂತೆ ಆದೇಶಿಸಿದಳು.

ಎಲ್ಲರೂ ತಮ್ಮ ತಮ್ಮ ಗಂಟು ಮೂಟೆಗಳನ್ನು ಕಟ್ಟಿದರು. ಆಯುಧಗಳು ಒಂದೆಡೆ, ಸ್ಫೋಟಕಗಳು ಒಂದೆಡೆಯಾಗಿ ಅವು ಎರಡು ಮೂಟೆಗಳಾದವು. ಎಲ್ಲವನ್ನೂ ಹೊತ್ತುಕೊಂಡು ಕೆಳಗಿಳಿಯತೊಡಗಿತು ಕಲ್ಯಾಣಿಯ ತಂಡ. ಒಂದು ಜಾಗದಲ್ಲಿ ಅವರು ಮೊದಲೆಂದೂ ಇಷ್ಟು ದಿನವಿದ್ದಿಲ್ಲ. ಹೆಚ್ಚು ದಿನದ ಇರುವಿಕೆಯ ಕಾರಣ ಆ ಜಾಗ ಅವರಿಗೆ ತಮ್ಮ ಮನೆಯಂತೆಯೇ ಆಗಿಹೋಗಿತ್ತು ಈಗ ಎಲ್ಲರಿಗೂ ಅದರ ಅಗಲಿಕೆಯ ವ್ಯಥೆ. ಅದನ್ಯಾರೂ ಮಾತಿನಲ್ಲಿ ಹೇಳಲಿಲ್ಲ. ಮುಖದಲ್ಲಿ ಅದರ ಛಾಯೆ ಕಾಣಿಸುತ್ತಿತ್ತು.

ಎಲ್ಲರಿಗಿಂತ ಕೊನೆಯಲ್ಲಿ ಇಳಿಯುತ್ತಿದ್ದವಳು ಕಲ್ಯಾಣಿ. ಏಳುವುದು ಇಳಿಯುವುದು ಈಗವಳಿಗೀಗ ಬಹಳ ಕಷ್ಟವಾದ ಕೆಲಸ. ನೋಡಿದವರಿಗೆ ಆ ಗರ್ಭಿಣಿ ಯಾವಾಗಲಾದರೂ ಹಡೆಯಬಹುದೆಂಬಂತೆ ಕಾಣಿಸುತ್ತಿದ್ದಳು. ನಿಧಾನವಾಗಿ ಇಳಿಯುತ್ತಿದ್ದ ಅವಳ ತೋಳನ್ನು ಹಿಡಿದಿದ್ದ ನಾಗೇಶ. ಅವಳು ಎಲ್ಲಿ ಎಡವಿಬೀಳುವಳೋ ಎಂಬ ಭಯ ಅವನಿಗೆ.

ಕಲ್ಯಾಣಿಗೆ ಆ ಬಳಲಿಕೆಯ ನೋವಿಗಿಂತ, ಬಹು ದೊಡ್ಡದೊಂದು ಕುಟುಂಬವನ್ನು ಬಿಟ್ಟು ಹೋಗುತ್ತಿದ್ದೇನಲ್ಲಾ ಎಂಬ ನೋವು ಹೆಚ್ಚಾಗಿತ್ತು.
* * *

ಮನೆಯಲ್ಲಿ ಮಂಚದಲ್ಲಿ ಉರುಳಿದ ತೇಜಾ ಗತವನ್ನೆಲ್ಲಾ ಮೆಲುಕು ಹಾಕುವುದರಲ್ಲಿ ತೊಡಗಿದ್ದ. ಈಗವನಿಗೆ ಕಲ್ಯಾಣಿ ಹಿಡಿದ ದಾರಿಯೇ ಸರಿ ಎನಿಸತೊಡಗಿತ್ತು. ದಿನಗಳು ಹೇಗೆ ನೋಡು ನೋಡುತ್ತಾ ಉರುಳಿಹೋಗುತ್ತವೆ ಎನಿಸುತ್ತಿತ್ತು.

ಸಿದ್ಧಾನಾಯಕ್ ಬಂದಿಯಾಗಿ ಪಟ್ಟಣಕ್ಕೆ ಹೋದ ಮರುದಿನವೇ ಬಂಡೇರಹಳ್ಳಿಗೆ ಬಂದಿದ್ದ. ಅವನ ಪಾರ್ಟಿ ಪ್ರೆಸಿಡೆಂಟ್‌ಗಿರಿಗೆ ಯಾವ ಧಕ್ಕೆಯೂ ಒದಗಿರಲಿಲ್ಲ. ಸರಕಾರಿ ನೌಕರನ್ಯಾರಾದರೂ ಅರೆಸ್ಟ್ ಆಗಿ ಬೇಲ್‌ನ ಮೇಲೆ ಬಿಡುಗಡೆಯಾದರೂ ಅವನನ್ನು ಸಸ್ಪೆಂಡ್ ಮಾಡಲಾಗುತ್ತದೆ. ರಾಜಕಾರಣದಲ್ಲಿ ಅಧಿಕಾರದಲ್ಲಿರುವವರಿಗೆ ಆ ಕಾನೂನು ವರ್ತಿಸುವುದಿಲ್ಲ. ಕೋರ್ಟ್ ಆದೇಶದ ಮೇರೆಗೆ ನಾಯಕನ ಕೇಸನ್ನು ರಾಮನಗರಕ್ಕೆ ರವಾನಿಸಲಾಗಿತ್ತು. ಎಷ್ಟೇ ಕಾಲ ಕೇಸು ನಡೆದರೂ ತೀರ್ಪು ನಾಯಕನ ಪರವಾಗಿಯೇ ಬರುತ್ತದೆ ಎಂಬುವುದಂತೂ ನಿಸ್ಸಂದೇಹ. ನ್ಯಾಯಾಧೀಶರು ಭ್ರಷ್ಟರಲ್ಲ ಎಂದು ಹೇಳುವ ಹಾಗೇ ಇಲ್ಲ.

ಸ್ಕ್ವಾಡಿನ ಮುಖ್ಯಸ್ಥರು ರಿಟೈರಾದ ನಾಲ್ಕು ತಿಂಗಳಲ್ಲೇ ತೇಜಾನ ವರ್ಗಾವಣೆಯಾಗಿ ಬಿಟ್ಟಿತ್ತು. ಅದನ್ನು ಕೇಳಿದ ಬಂಡೇರಹಳ್ಳಿಯ ಜನರೆಲ್ಲಾ ಸಿಡಿದೆದ್ದರು. ಗಲಾಟೆ ಮಾಡಿದರು. ಅವರನ್ನು ನಿಯಂತ್ರಿಸಲು ರಾಮನಗರದಿಂದ ಪೋಲೀಸ್ ವ್ಯಾನುಗಳು ಬಂದಿದ್ದವು. ಕೊನೆಗೆ ತಾನೇ ಅವರಿಗೆ ಸಮಾಧಾನ ಮಾಡಿ, ಇಲ್ಲೇ ಹತ್ತಿರವೇ ದೇವನಹಳ್ಳಿಯಲ್ಲಿಯೇ ಇರುತ್ತೇನಲ್ಲಾ ಎಂದು ಹೇಳಿ ರಾಮನಗರದಿಂದ ರಿಲಿವಿಂಗ್ ಆರ್ಡರ್ ತೆಗೆದುಕೊಂಡು, ಪಟ್ಟಣಕ್ಕೆ ಹೋಗಿ ಅದೇ ಮೊದಲಿದ್ದ ಕೆಲಸದಲ್ಲೇ ಸೇರಿ ಮರುದಿನದಿಂದಲೇ ಎರಡು ತಿಂಗಳ ರಜೆ ಹಾಕಿ ಬಂದಿದ್ದ. ಆಗ ತಾನೇ ಪಟ್ಟಣದಿಂದ ಬಂದ ಅವನು ಮಂಚದಲ್ಲುರುಳಿ ಮೆಲುಕು ಹಾಕುವಿಕೆಯ ಕೆಲಸದಲ್ಲಿ ತೊಡಗಿದ.

ಬಂಡೇರಹಳ್ಳಿಯ ಜನರಿಗೂ ತನಗೂ ಒಳ್ಳೆಯ ಸಂಪರ್ಕವೇರ್ಪಟ್ಟಿತು. ಅವರಿಗೆಲ್ಲಾ ಅವನು ಬಹು ಆತ್ಮೀಯನಾಗಿಬಿಟ್ಟಿದ್ದ. ಅಲ್ಲಿನ ಹೆಂಗಸರು ಯುವತಿಯರು ಕೂಡ ಅವನಿಂದ ಭಯಪಡುವುದು ಬಿಟ್ಟರು. ಹಲವಾರು ಯುವತಿಯರೂ ಅವನೊಡನೆ ಆತ್ಮೀಯವಾಗಿ ಮಾತಾಡುತ್ತಿದ್ದರು. ಅವರನ್ನೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸುತ್ತಿದ್ದ ತೇಜಾ. ಮಾತುಗಳಲ್ಲಿ ಅಲ್ಲಿನ ಗಂಡಸರಿಗೂ ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ಚೆನ್ನಾಗಿ ವಿದ್ಯಾಭ್ಯಾಸ ಕೊಡಿಸಬೇಕಾಗಿ, ಅವರನ್ನೂ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿಕೊಡಬೇಕಾಗಿ ಒತ್ತಾಯಿಸುತ್ತಿದ್ದ. ಅದರ ಕಾರಣವಾಗೇ ವರ್ಗಾವಣೆಯ ಮೊದಲು ಅಲ್ಲಿ ಅವನು ಮಾಡಿದ ಕೊನೆಯ ಕಾರ್ಯಕ್ರಮದಲ್ಲಿ ಇಬ್ಬರು ಹುಡುಗಿಯರು ಭಾಗವಹಿಸಿದ್ದರು.

ಅವರಿಂದ ವಿದಾಯ ಹೊಂದುವ ದಿನ ದೊಡ್ಡ ಸಮಾರಂಭವನ್ನು ಏರ್ಪಡಿಸಿದರು. ಬಹುಜನರು ಅವನಿಗೆ ಹಾರಗಳನ್ನು ಹಾಕಿ ನಮಸ್ಕರಿಸಿದ್ದರು. ಆ ಸಭೆಯಲ್ಲಿ ಎಲ್ಲಿ ಗದ್ದಲವಾಗುವುದೋ ಎಂದು ಅವನ ಸ್ಥಾನಕ್ಕೆ ಬಂದ ಇನ್ಸ್‌ಪೆಕ್ಟರ್‌ ಸರಕಾರಿ ಉಡುಪಿನಲ್ಲಿ ತನ್ನ ಸಿಬ್ಬಂದಿಯೊಂದಿಗೆ ಬಂದಿದ್ದ. ಅವನ ಹೆಸರು ಜಗದೀಶ, ಬಿಗಿದುಕೊಂಡ ಅವನ ಮುಖದಲ್ಲಿ ಅಧಿಕಾರದ ಅಹಂಭಾವ ಕಾಣುತ್ತಿತ್ತು. ಅಲ್ಲಿ ನೆರೆದ ಜನರ ಮೇಲೆಲ್ಲಾ ತನ್ನ ಶತ್ರುಗಳ ಮೇಲೆ ಕಣ್ಣಾಡಿಸಿದಂತೆ ಕಣ್ಣಾಡಿಸುತ್ತಿದ್ದ ಆ ಸಮಾರಂಭದ ಮುಖ್ಯ ಅತಿಥಿ ಗುಂಡು ತಾತ ಆಗಿದ್ದ. ಗದ್ಗದ ಕಂಠದಲ್ಲಿ ಅವನು ಮಾತಾಡಿದಾಗ ಅಲ್ಲಿ ನೆರೆದ ಸಾಕಷ್ಟು ಜನರ ಕಣ್ಣಲ್ಲಿ ನೀರು ಬಂದುಬಿಟ್ಟಿತು. ಅಷ್ಟು ಜನರಿಗೆ ತಾನು ಬೇಕಾದವನು ಎಂಬುವುದು ತೇಜಾನಿಗೂ ಗೊತ್ತಿರಲಿಲ್ಲ. ಮಾತಾಡುವ ತನ್ನ ಸರದಿ ಬಂದಾಗ ತೇಜಾನ ಹೃದಯ ತುಂಬಿಬಂದಿತ್ತು. ಬಹುಕಷ್ಟದಿಂದ ತನ್ನ ಭಾವೋದ್ವೇಗವನ್ನು ತಡೆದುಕೊಂಡು ಅವರು ತನ್ನ ಪ್ರತಿ ತೋರಿದ ವಿಶ್ವಾಸಕ್ಕೆ ತಾನು ಋಣಿ ಎಂದು ಅವರನ್ನು ಎಂದೂ ಮರೆಯುವುದಿಲ್ಲವೆಂದು, ಈಗ ಬಂದಿರುವ ಇನ್ಸ್‌ಪೆಕ್ಟರ್‌ ಸಾಹೇಬರೂ ಅವರಿಗೆಲ್ಲಾ ನ್ಯಾಯ ಒದಗಿಸಿಕೊಂಡುವರೆಂದು ಹೇಳಿದ್ದ. ಜೀಪಿಗೆ ಹತ್ತುವ ಮುನ್ನ ಅವನನ್ನು ಅಪ್ಪಿದ ತಾತ, ಕಾಲಿಗೆ ನಮಸ್ಕಾರ ಮಾಡಿದ ವೆಂಕಟ್ ಮತ್ತಿನ್ನಿತರ ಯುವಕರು, ಮನೆ ಆಳಾದ ಗಂಗವ್ವನನ್ನು ಸೇರಿಕೊಂಡು ಕೆಲ ಹೆಂಗಸರು ಗಳಗಳನೆ ಅತ್ತುಬಿಟ್ಟಿದ್ದರು. ಇದೆಲ್ಲಾ ಒಂದು ನಾಟಕ, ಒಂದು ತಮಾಶೆ ಎಂಬಂತೆ ನೋಡುತ್ತಾ ನಿಂತಿದ್ದ ಹೊಸ ಇನ್ಸ್‌ಪೆಕ್ಟರ್ ಜಗದೀಶ್.

ಈ ಹೆಂಗಸರು ತನ್ನನ್ನು ಇಷ್ಟು ಯಾಕೆ ಹಚ್ಚಿಕೊಂಡಿದ್ದಾರೆಂಬುವುದೇ ಅರ್ಥವಾಗಿರಲಿಲ್ಲ. ತೇಜಾನಿಗೆ ಮನೆಯಲ್ಲಿದ್ದ ಪಾತ್ರೆಗಳನ್ನು, ಇನ್ನಿತರ ವಸ್ತುಗಳನ್ನು ಮನೆ ಆಳಾದ ಗಂಗವ್ವನಿಗೆ ಕೊಟ್ಟುಬಿಟ್ಟಿದ್ದ. ಅವಳು ತನಗೆ ಅಭಾರಿಯಾಗಿ ಕಣ್ಣೀರು ಹಾಕಿರಬಹುದು ಆದರೆ ಮಿಕ್ಕವರು?

ಅದೆಲ್ಲದಕ್ಕಿಂತ ವೆಂಕಟ್ ಕಾಲಿಗೆ ನಮಸ್ಕಾರ ಮಾಡಿ ಆಶೀರ್ವಾದ ಮಾಡಿ ಎಂದು ಅತ್ತ ದೃಶ್ಯ ಅವನ ಕಣ್ಣಿಗೆ ಕಟ್ಟಿದಂತಿತ್ತು. ಇನ್ನೂ ಎಷ್ಟೋ ಯುವಕರ ಹೆಸರುಗಳು ಕೂಡ ಅವನಿಗೆ ನೆನಪಿಲ್ಲ. ಅವರಿಗೆಲ್ಲಾ ಆಗಾಗ ತನ್ನಲ್ಲಿಗೆ ಬರುತ್ತಿರುತ್ತೇನೆಂದು ಅವರು ಯಾವಾಗ ಬೇಕಾದರಾಗ ದೇವನಹಳ್ಳಿಯ ತನ್ನ ಮನೆಗೆ ಬರಬಹುದೆಂದು ತಾನು ಕೆಲಸಕ್ಕೆ ರಜ ಹಾಕುತ್ತಿರುವೆನೆಂದೂ ಹೇಳಿದ್ದ. ತಾತನೊಡನೆ ಯುವಕರೆಲ್ಲಾ ಅವನ ಮನೆಯ ಫೋನ್ ನಂಬರು ಬರೆದು ಕೊಂಡಿದ್ದರು.

ಪಟ್ಟಣದಲ್ಲಿ ರಜೆ ಹಾಕಿ ಬರುವ ಮುನ್ನ ನಿವೃತ್ತಿ ಹೊಂದಿದ ಸ್ಕ್ವಾಡಿನ ಮುಖ್ಯಸ್ಥರ ಮನೆಗೆ ಹೋಗಿದ್ದ. ಅವರಾಗಲೇ ಪೇಪರುಗಳಲ್ಲಿ ವಾರಪತ್ರಿಕೆಗಳಲ್ಲಿ ಪಟುವಾರಿಯವರ ಬಗ್ಗೆ ಓದಿದ್ದರು. ತೇಜಾ ಈಗ ಅವರ ದತ್ತಕಪುತ್ರ ನಾಗಿದ್ದಾನೆಂಬುವುದು ಗೊತ್ತಿತ್ತು. ನೀನು ಹೇಗಿದ್ದಿ? ಹೇಗಿದೆ ಜೀವನ? ಎಂಬಂತಹ ಮಾತುಗಳ ನಂತರ ಅವರಿಗೆ ಕುಶಾಲನಿಗೆ ಹೇಳಿದಂತೆ ತಾನು ಕಲ್ಯಾಣಿಯನ್ನು ಮದುವೆಯಾಗುವುದಾಗಿ ಹೇಳಿ ಯಾವ ಮುಚ್ಚೂ ಮರೆಯೂ ಇಲ್ಲದೇ ಎಲ್ಲವನ್ನೂ ವಿವರಿಸಿದ್ದ. ಅವನ ವರ್ಗಾವಣೆಯ ವಿಷಯ ಅವರಿಗೆ ತಿಳಿದಿತ್ತು. ತಾನು ರಜೆ ಹಾಕಿದ್ದನ್ನೂ ಕುಶಲೋಪರಿ ಮಾತುಗಳ ನಡುವೆಯೇ ಹೇಳಿಬಿಟ್ಟಿದ್ದ.

ಅವನು ಹೇಳಿದ ವಿವರಗಳನ್ನು ಕೇಳಿ ಅವರು ಗಂಭೀರ ಚಿಂತನೆಯಲ್ಲಿ ತೊಡಗಿದ್ದರು. ತೇಜಾ ಅವರಿಗೆ ಬಹಳ ಬೇಕಾಗಿದ್ದವನಾಗಿದ್ದ. ಇನ್ನೂ ಚಿಂತನೆಯಲ್ಲಿ ತೊಡಗಿರುವವರಂತೆ ಹೇಳಿದರವರು.

“ಏನೇ ಆಗಲಿ ಒಳ್ಳೆಯದು ಮಾಡಿದೆ ನಿನಗೆ ಲಾಯಕ್ಕಾದ ಹೆಂಡತಿ”

ಮಾತು ಮುಗಿಸಿ ಚಿಂತನೆಯನ್ನು ಮುಂದುವರೆಸಿದ್ದರು. ನಂತರ ಹೇಸಿಗೆಯಿಂದ ನಾರುತ್ತಿರುವ ರಾಜಕೀಯದ ಬಗ್ಗೆ, ನಿಷ್ಟಾವಂತ ಆಡಳಿತ ವರ್ಗದವರ ಅಸಹಾಯತೆ ಬಗ್ಗೆ ಮಾತಾಡಿದರು. ಅವನ ತಂದೆಯ ಬಗ್ಗೆ ಮತ್ತು ಆಗಿನ, ಇಂದಿನ ‘ದೇಶಭಕ್ತ’ ‘ದೇಶಸೇವೆ’ ಎಂಬ ಪದದ ಅರ್ಥಗಳಲ್ಲಿ ಆದ ವ್ಯತ್ಯಾಸದ ಕುರಿತು ಅವರು ಹೇಳಿದ ಮಾತು ಎಷ್ಟು ಸತ್ಯವೆಂಬುವುದನ್ನು ವಿವರಿಸಿದರು. ಅತ್ತ, ಇತ್ತ ಸುತ್ತಿದ ಮಾತುಗಳು ಮತ್ತೆ ತೇಜಾನ ಮದುವೆಯ ವಿಷಯ ಬಂದಾಗ ಗಂಭೀರದನಿಯಲ್ಲಿ ಹೇಳಿದ್ದರವರು.

“ವಿಚಿತ್ರ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದ್ದಿ. ಯಾರನ್ನು ನಿನ್ನ ಬಂಧಿಸೆಂದು ಕಳಿಸಿದ್ದರೋ ಅವಳನ್ನೇ ಮದುವೆಯಾಗುವುದೇ! ಆದರೂ ನಾವು ಅದರ ಯಾವುದಾದರೂ ಪರಿಹಾರ ಮಾರ್ಗ ಹುಡುಕುವ, ಹೋಗು ನೀನು ನಿಶ್ಚಿಂತೆಯಾಗಿ ನಿನ್ನ ತಂದೆ ತಾಯಿಯರನ್ನು ನೋಡಿಕೊ”

ಆ ಅವರ ಗಂಭೀರ ದನಿಯೂ ನಿಸ್ಸಾಯಕನೊಬ್ಬನ ಅರಣ್ಯರೋಧನ ದಂತೆ ಕೇಳಿಸಿತ್ತು ತೇಜಾನಿಗೆ. ಅಲ್ಲಿಂದ ಅವನು ಕುಶಾಲನ ಮನೆಗೆ ಹೋಗಿದ್ದ. ಆ ದಿನ ಅಲ್ಲೇ ಊಟ ಮಾಡಿ ಹೋಗಬೇಕೆಂದು ಫೋನ್ ಮಾಡಿದಾಗ ಒತ್ತಾಯಿಸಿದ್ದ ಕುಶಾಲ.

ಅವನ ಮನೆಯವರೆಲ್ಲಾ ಹಾರ್ದಿಕವಾಗಿ ಸ್ವಾಗತಿಸಿ ಮಾತಾಡಿಸಿದ್ದರು. ಅವನ ಹೊಸದಾಗಿ ಹುಟ್ಟಿಕೊಂಡ ತಂದೆ ತಾಯಿಯವರು ಎಂತಹವರೆಂದು ವಿಚಾರಿಸಿದ್ದರವನ ತಾಯಿ, ತಂದೆಯ ಬಗ್ಗೆ ಪೇಪರುಗಳಲ್ಲಿ ಬಂದದ್ದನೆಲ್ಲಾ ಓದಿದ್ದ ಅವರು ಅವನ ತಂದೆ ಈ ದೇಶದ ಒಬ್ಬ ಮಹಾನ್ ಪುರುಷರೆಂದಿದ್ದರು.

ಮಿತ್ರರಿಬ್ಬರೇ ಕುಳಿತು ಮಾತಾಡುತ್ತಿದ್ದಾಗ ತಾನು ಸ್ಕ್ವಾಡಿನ ಮುಖ್ಯಸ್ಥರಿಗೆ ಎಲ್ಲಾ ವಿಷಯಗಳನ್ನು ತಿಳಿಸಿರುವುದಾಗಿ ಹೇಳಿದ ತೇಜಾ ನಿವೃತ್ತರಾದ ಸ್ಕ್ವಾಡಿನ ಮುಖ್ಯಸ್ಥರ ಮಾತು ಅವನಲ್ಲಿ ಅಸಮಾಧಾನ ಹುಟ್ಟಿಸಿತ್ತು. ಅದನ್ನೇ ಕುಶಾಲನೆದುರು ಕಾರಿದ್ದ.

“ನಾನು ಅವಳನ್ನಲ್ಲಿ ಬಂಧಿಸಲು ಹೋಗಿದ್ದೆ ನಿಜ. ಅವಳ ಜನಪ್ರಿಯತೆ ನನ್ನ ದಂಗು ಪಡಿಸಿತ್ತು. ಅವಳನ್ನು ಅವಳ ಅನುಯಾಯಿಯರನ್ನು ಜೀವ ಸಹಿತ ಹಿಡಿಯುವುದೂ ಅಸಂಭವವೆಂದು ಗೊತ್ತಾಗಿತ್ತು. ಆಗ ಇದೇ ಸ್ಕ್ವಾಡಿನ ಮುಖ್ಯಸ್ಥರು ಅವಳನ್ನು ಕೊಲ್ಲಬೇಡ ಎಂದು ನನಗೆ ಆದೇಶ ನೀಡಿದ್ದರು. ಅದನ್ನವರು ಮರೆತು ಹೋಗಿರಬೇಕು.”

ಅವರೊಬ್ಬ ನಿವೃತ್ತ ಅಧಿಕಾರಿ ಈಗ ಅವರ ಕೈಯಲ್ಲಿ ಏನೂ ಇಲ್ಲ ಅದಕ್ಕೇ ಏನೋ ಹೇಳಿದ್ದಾರೆ ಎಂದು ಸಮಾಧಾನ ಮಾಡಿದ್ದ ಕುಶಾಲ.

ಕುಶಾಲ ಒಂದು ಕೆಲಸವನ್ನು ಮಾತ್ರ ಬಹಳ ಚೆನ್ನಾಗಿ ಮಾಡಿದ್ದ. ದೇವನಹಳ್ಳಿ ಎಂಬ ಕುಗ್ರಾಮ ಒಂದು ದೇಶದಲ್ಲಿದೆ ಎಂದು ಜನರಿಗೆ ಗೊತ್ತುಮಾಡಿದ್ದ. ಅವರಿಬ್ಬರೂ ಸೇರಿ ನಾಯಕನನ್ನು ಅರೆಸ್ಟ್ ಮಾಡಿ ಕಳಿಸಿ ಮರಳುವಾಗ ಜೀಪಿನಲ್ಲಿ ಹೇಳಿದ ಮಾತುಗಳು ಬರೀ ಮಾತುಗಳಾಗಿರಲಿಲ್ಲ. ಒಂದು ವಾರದೊಳಗಾಗಿ ಒಂದು ಬೆಳಗ್ಗೆ ಹೆಗಲಿಗೆ ದೊಡ್ಡ ಬ್ಯಾಗನ್ನು ಏರಿಸಿದ ಪತ್ರಕರ್ತನೊಬ್ಬ ಅವರ ಮನೆಗೆ ಬಂದಿದ್ದ. ಜೀಪಿನಲ್ಲಿ ಆದ ಮಾತುಗಳನ್ನು ಮರೆತೇ ಹೋಗಿದ್ದ ತೇಜ ಅವನನ್ನು ಅನುಮಾನದಿಂದ ನೋಡಿದಾಗ ತನ್ನ ಕುಶಾಲ ಕಳುಹಿಸಿರುವುದಾಗಿ ಹೇಳಿ ತನ್ನ ಕಾರ್ಡನ್ನು ಕೊಟ್ಟಿದ್ದ. ಅದರ ಹಿಂದೆ ಕುಶಾಲನ ಸಹಿ ಇತ್ತು. ದೇಶದಲ್ಲಿ ಬಹು ಹೆಚ್ಚಾಗಿ ಮಾರಾಟವಾಗುವ ಇಂಗ್ಲೀಷ್ ದಿನಪತ್ರಿಕೆಯೊಂದರ ವರದಿಗಾರ. ಅವನನ್ನು ಹಾರ್ದಿಕವಾಗಿ ಸ್ವಾಗತಿಸಿ ತಂದೆಗೆ ಪರಿಚಯಿಸಿದ್ದ ತೇಜಾ, ಮೊದಲು ಬೇಡವೆಂದರು ಆ ವರದಿಗಾರ ಕೇಳಿದ ಪ್ರಶ್ನೆಯೊಂದು ಅವರನ್ನು ರೇಗಿಸಿತ್ತು. ಮಾತನ್ನಾಡಲಾರಂಭಿಸಿದ್ದರು. ಹಾಗೆ ಆರಂಭವಾದ ಮಾತುಗಳು ಮಧ್ಯಾಹ್ನದವರೆಗೆ ನಡೆದವು. ಆ ವರದಿಗಾರನ ಊಟವೂ ಅವರ ಮನೆಯಲ್ಲಿಯೇ ಆಯಿತು.

ಅವರಾಡಿದ್ದ ಪ್ರತಿ ಮಾತನ್ನು ಬರೆದುಕೊಂಡಿದ್ದ ವರದಿಗಾರ ಫೋಟೋಗಳು ತೆಗೆಯುವ ಕೆಲಸ ಆರಂಭಿಸಿದ. ಬೇರೆ ಬೇರೆ ಕೋನಗಳಿಂದ ದೇವನಹಳ್ಳಿಯ ಫೋಟೋಗಳನ್ನು ತೆಗೆದ. ನಂತರ ಅವರ ಮನೆಯ ಫೋಟೋ ಹಲವಾರು ಭಂಗಿಯಲ್ಲಿ ಕುಳಿತಿರುವ ತಂದೆಯ, ತಾಯಿಯರು ಕುಳಿತಿರುವ ನಿಂತಿರುವ, ಅವರೊಡನೆ ದತ್ತಕಪುತ್ರನಾದ ತೇಜಾನ, ತೇಜಾ ಒಬ್ಬನೇ ನಿಂತಿರುವ, ಹೀಗೆ ಲೆಕ್ಕವಿಲ್ಲದಷ್ಟು ಫೋಟೋಗಳನ್ನು ಹಿಡಿದನಾತ. ನಂತರ ತನ್ನಲ್ಲಿರುವ ತಂದೆಯ, ಗಾಂಧಿ, ನೆಹರು, ಇನ್ನಿತರ ನಾಯಕರೊಡನೆ ಇದ್ದ ಫೋಟೋಗಳನ್ನು ಕೊಟ್ಟ. ಅದೇ ಅಲ್ಬಂನಲ್ಲಿ ತಂದೆ ತಾಯಿ ಮದುವೆಯಾದಾಗಿನ ಫೋಟೋ ಇತ್ತು ಅದನ್ನು ಮತ್ತು ಅಮೆರಿಕೆಯಲ್ಲಿರುವ ತನ್ನ ತಂಗಿಯ ಫೋಟೋವನ್ನು ಕೂಡ ತೆಗೆದುಕೊಂಡನಾತ. ಹೆಚ್ಚು ಕಡಿಮೆ ಮನೆಯಲ್ಲಿ ಆ ದಿನವೆಲ್ಲಾ ಅದೇ ಸಂಭ್ರಮ ನಡೆದಿತ್ತು.

ಆದಿನ ತಂದೆ, ತಾಯಿ ಮಗ ಆ ಬಗ್ಗೆ ಸ್ವಲ್ಪ ಹೊತ್ತು ಮಾತಾಡಿ ಅದನ್ನು ಮರೆತುಬಿಟ್ಟಿದ್ದರು. ಸುಮಾರು ಹದಿನೈದು ದಿನಗಳನಂತರ ಯಾವುದೋ ಕೆಲಸದ ನಿಮಿತ್ತ ರಾಮನಗರಕ್ಕೆ ಹೋದಾಗ ಬಹುವ್ಯಂಗ್ಯವಾಗಿ ತಾನು ಪ್ರಸಿದ್ಧನಾಗುತ್ತಿದ್ದೇನೆಂದು ಹೇಳಿದ್ದರು ಎಸ್.ಪಿ. ಸಾಹೇಬರು ಹಾಗೆ ಅವನಿಗೆ ಆ ದಿನ ಪತ್ರಿಕೆಯ ರವಿವಾರದ ವಿಶೇಷ ಸಂಚಿಕೆಯಲ್ಲಿ ತನ್ನ ತಂದೆಯ ವಿಷಯ ಬಂದಿದ್ದು ಗೊತ್ತಾಗಿತ್ತು. ಅವನು ರಾಮನಗರಕ್ಕೆ ಹೋದದ್ದು ಮಂಗಳವಾರ ಆ ಪತ್ರಿಕೆಯನ್ನು ಅಲ್ಲಿನ ಅವನ ಮಿತ್ರರಿಂದ ಹುಡುಕಾಡಿಸಿ ಪಡೆದು ಕೂಲಂಕುಷವಾಗಿ ಓದಿದ. ‘ದಿ ಆನ್‌ನೊನ್ ಹಿರೋ’ ಎಂಬ ತಲೆಬರಹದಲ್ಲಿ ಎರಡು ಪುಟಗಳ ವರದಿ. ಅದರಲ್ಲಿ ಕೆಲವು ಪೋಟೋಗಳು. ‘ತೇಜಾನನ್ನ ಯಾಕೆ ದತ್ತಕ ಪುತ್ರನನ್ನಾಗಿ ಆರಿಸಿಕೊಂಡಿರಿ?’ ಎಂಬ ಪ್ರಶ್ನೆ ಅವನ ತಂದೆ ಕೊಟ್ಟ ಉತ್ತರ. ‘ನನ್ನ ಪುತ್ರ ದೇಶಭಕ್ತನಾಗಿರಬೇಕೆಂದು ಮೊದಲಿನಿಂದ ಕನಸು ಕಾಣುತ್ತಿದ್ದೆ. ಅಂತಹ ನಿಜವಾದ ದೇಶಭಕ್ತ ಅವನೆಂದು ಗುರುತಿಸಿದೆ’ ಎಂದು ಉತ್ತರಿಸಿದ್ದರವನ ತಂದೆ. ಅವರ ಮಾತುಗಳನ್ನು ತೇಜಾ ಕೇಳಿಸಿಯೇ ಕೊಂಡಿರಲಿಲ್ಲವಾದುದ್ದರಿಂದ ಅವನಿಗೆ ಅಚ್ಚರಿಯಾಯಿತು. ಬಹುರಂಜನೀಯವಾಗಿ, ರಸವತ್ತಾಗಿ ಬರೆದ ವರದಿಯದು. ಫೋಟೋಗಳಲ್ಲಿ ಅವನದು, ಅವನ ತಂಗಿಯದು ಬಂದಿತ್ತು. ಓದಿದ್ದನ್ನೇ ಎರಡೆರಡು ಸಲ ಓದಿದ್ದ. ಅದನ್ನ ಉತ್ತೇಜ್ ತನ್ನ ಅಪ್ಪಾ ಅಮ್ಮಂದಿರಿಗೆ ತೋರಿಸಿದಾಗ ಅವರಿಗೂ ಖುಷಿಯಾಗಿತ್ತು.

“ಅಂತೂ ನನ್ನಂತಹವನ್ನೊಬ್ಬ ಇನ್ನೂ ಬದುಕ್ಕಿದ್ದೇನೆಂದು ಕೆಲವರಿಗಾದರೂ ಗೊತ್ತಾಯಿತಲ್ಲ. ಅದೇ ಸಂತೋಷ” ಎಂದಿದ್ದರವರು.

ಮುಂದಿನ ಒಂದು ತಿಂಗಳೆಲ್ಲಾ ಇಡೀ ಉತ್ಸವ, ದೇಶ ವಿವಿಧ ಭಾಷೆಯ ಪತ್ರಿಕೆಗಳವರು ಮನೆಗೆ ಬಂದು ಅಪ್ಪನ ಸಂದರ್ಶನ ಪಡೆದುಹೋಗಿದ್ದರು. ಹಾಗೇ ಟಿ.ವಿ.ಯ ವಿವಿಧ ಚಾನಲ್‌ಗಳವರು ಬಂದು ತಮ್ಮ ತಮ್ಮ ವಿಶಿಷ್ಟ ರೀತಿಯಲ್ಲಿ ಅವರ ಸಂದರ್ಶನ ಪಡೆದು ಚಿತ್ರೀಕರಣ ಆರಂಭಿಸಿದ್ದರು. ಸಿನಿಮಾದ ಒಬ್ಬ ದರ್ಶಕ ಅವರ ಬಗ್ಗೆ ಒಂದು ಡಾಕ್ಯೂಮೆಂಟರಿಯನ್ನು ಮಾಡುತ್ತೇನೆಂದು ಹೇಳಿದ್ದ.

ದೇಶದ ಎಲ್ಲಾ ಭಾಷೆಗಳಲ್ಲೂ ಪಟವಾರಿಯವರ ಎಲ್ಲಾ ವಿವರ ಪ್ರಕಟವಾಗಿತ್ತು. ಪ್ರತಿ ಪತ್ರಿಕೆಯ ವರದಿಗಾರ ಅದಕ್ಕೆ ತನ್ನದೇ ಒಂದು ವಿಶಿಷ್ಟ ಆಯಾಮ ಕೊಟ್ಟಿದ್ದ. ಕೆಲವು ವಾರ ಪ್ರತಿಗಳ ಮುಖಪುಟದ ಮೇಲೆ ಅವರ ಚಿತ್ರ ಎದ್ದು ಕಾಣುವಂತೆ ಮುದ್ರಿತವಾಗಿತ್ತು. ಟಿ.ವಿ.ಯ ಕೆಲವು ಚಾನಲ್‌ಗಳು ತಮ್ಮದೇ ರೀತಿಯಲ್ಲಿ ಅವರ ಜೀವನಚರಿತ್ರೆಯನ್ನು ಬಿತ್ತಿರಿಸಿದ್ದವು. ಅಂತೂ ದೇಶದ ಯಾವುದೊ ಮೂಲೆಯಲ್ಲಿ ದೇವನಹಳ್ಳಿ ಎಂಬ ಕುಗ್ರಾಮವಿದೆ ಅಲ್ಲಿ ವಿಶಿಷ್ಟ ಸ್ವಾತಂತ್ರಯೋಧ ರಾಮಚಂದ್ರ ಪಟವಾರಿಯವರು ಇದ್ದಾರೆ ಎಂಬುವುದು ದೇಶದ ಬಹುಪಾಲು ಜನರಿಗೆ ಗೊತ್ತಾಗಿತ್ತು.

ಅದರಿಂದಲೇ ರಾಮನಗರ ಕೂಡ ಎಚ್ಚೆತ್ತುಕೊಂಡಿತ್ತು. ಕಲೆಕ್ಟರ್ ಸಾಹೇಬರು ಸ್ವಾತಂತ್ರ ದಿನದಂದು ಅವರನ್ನು ಮುಖ್ಯ ಅತಿಥಿಯಾಗಬೇಕೆಂದು ಬೇಡಿಕೊಂಡರು. ಅವರ ಒತ್ತಾಯಕ್ಕೆ ಮಣಿದು, ದೇಶದ ದುರ್ಗತಿಯನ್ನು ಜನರಿಗೆ ಹೇಳುವ ಅವಕಾಶ ಸಿಕ್ಕಿದೆ ಅದನ್ನು ಉಪಯೋಗಿಸಬೇಕೆಂದು ಒಪ್ಪಿಕೊಂಡಿದ್ದರು. ಅವರ ವಿಶಿಷ್ಟ ಭಾಷಣವನ್ನು ಕೆಲವು ಪತ್ರಿಕೆಗಳು ಯಾವ ಮುಲಾಜೂ ಇಲ್ಲದೇ ಪ್ರಕಟಿಸಿದ್ದವು. ಅಂತಹ ಪತ್ರಿಕೆಗಳನ್ನು ಓದುವವರು ತೀರಾ ಕಡಿಮೆ. ಕ್ರಾಂತಿಕಾರಿಯರು ಹುಟ್ಟಿಕೊಳ್ಳಲು ಕಾರಣ ಈಗಿನ ರಾಜಕಾರಣಿಗಳು ವ್ಯವಸ್ಥೆಯಲ್ಲಿ ತುಂಬಿರುವ ಭ್ರಷ್ಟಾಚಾರವೆಂದು ಹೇಳಿದ ಅವರು ಅದಕ್ಕೆ ಪೂರಕವಾದ ಉದಾಹರಣೆಗಳನ್ನು ಕೊಟ್ಟಿದ್ದರು. ಅದೂ ಅಲ್ಲದೇ ಸ್ವಾತಂತ್ರ್ಯದ ನಂತರ ಜನರಲ್ಲಿ ದೇಶಭಕ್ತಿಯ ಭಾವ ಕಡಿಮೆಯಾಗುತ್ತಿದೆ ಎಂದು ಅದಕ್ಕೂ ಕಾರಣ ರಾಜಕಾರಣ ವ್ಯವಹಾರವಾಗಿ ಮಾರ್ಪಟಿರುವುದೇ ಎಂದು ಇನ್ನೂ ಎಷ್ಟೋ ನಿಷ್ಠೂರ ಸಂಗತಿಗಳನ್ನು ಹೇಳಿದರು. ಆಗ ಇವರನ್ನು ಮುಖ್ಯ ಅತಿಥಿಯಾಗಿ ಕರೆಸಿ ತಪ್ಪು ಮಾಡಿದವೇನೋ ಎನಿಸಿತು ಕಲೆಕ್ಟರ್ ಸಾಹೇಬರಿಗೆ. ಅವರೂ ತಮ್ಮ ಮನಃಪೂರ್ವಕವಾಗಿ ಮಾಡಿದ ಕೆಲಸವಲ್ಲವದು. ಪಟ್ಟಣದಿಂದ ಬಂದ ಆಜ್ಞೆಯನ್ನು ಅವರು ಪಾಲಿಸಿದ್ದರಷ್ಟೆ.

ದಿನಗಳು ಉರಳಿದಂತೆ ಪತ್ರಿಕೆಗಳಲ್ಲಿ ಬಂದ, ಟಿ.ವಿ.ಯಲ್ಲಿ ಬಿತ್ತರಿಸಿದ ಅವರ ಬಗೆಗಿನ ಮಾಹಿತಿಯನ್ನು ಮರೆಯತೊಡಗಿದರು ಜನ. ಅದು ಪತ್ರಿಕೆಯವರಿಗೂ ಹಳೆಯ ಸುದ್ದಿಯಾಗಿಬಿಟ್ಟಿತ್ತು.

ಇವೇ ದಿನಗಳಲ್ಲಿ ಕಲ್ಯಾಣಿಯಿಂದಲೂ ವಿಚಿತ್ರ ಹಿಂಸೆಯನ್ನು ಅನುಭವಿಸಿದ್ದ ತೇಜಾ. ಅವಳು ಯಾವಾಗ ಬರುತ್ತಾಳೆ. ಯಾವಾಗ ಹೋಗುತ್ತಾಳೆಂಬುವುದು ತನಗೂ ಗೊತ್ತಿರಲಿಲ್ಲ. ದಿನ ಕಳೆಂದತೆ ಅವಳ ಹೊಟ್ಟೆಯಲ್ಲಿರುವ ಮಗು ತನ್ನ ಇರುವನ್ನು ಸಾರಲಾರಂಭಿಸಿದ್ದ. ದೇವನಹಳ್ಳಿಯ ಜನರಿಗೆ ಕಲ್ಲಕ್ಕ ತೇಜಾನ ಮಡದಿ ಎಂದು ಗೊತ್ತಾಗಿಹೋಗಿತ್ತು. ಹಾಗೆ ಗೊತ್ತಾದ ಆ ಸುದ್ದಿ ದೂರದ ಊರುಗಳಲ್ಲಿರುವ ಅವಳ ಅಭಿಮಾನಿಯರಿಗೂ ತಿಳಿದಿತ್ತು. ಬಂಡೇರಹಳ್ಳಿಯವರಿಗೂ ಆ ಸುದ್ದಿ ತಿಳಿದೇ ಇರಬೇಕು. ಆದರೆ ಯಾರೂ ವಿಷಯ ಅವನ ಮುಂದೆ ಎತ್ತಿರಲಿಲ್ಲ.

ಇನ್ನು ನಿನ್ನ ಕೆಲಸ ನಿಲ್ಲಿಸು ಮಗು ಜನಿಸುವವರೆಗೂ ವಿಶ್ರಾಂತಿ ಪಡಿ ಎಂದವನು ಅವಳಿಗೆ ಗೋಗರೆಯುವಂತೆ ಹೇಳಿದ್ದ. ಹಳ್ಳಿಯ ಹೆಂಗಸರು ಹೇಗೆ ಮಗು ಜನಿಸುವವರೆಗೂ ದುಡಿಯುತ್ತಲೇ ಇರುತ್ತಾರೆ ಎಂಬುವದವನಿಗೆ ಜ್ಞಾಪಿಸಿದ್ದಳು ಕಲ್ಯಾಣಿ. ಅದೇ ದಿನಗಳಲ್ಲಿ ಬೇರೆ ಬೇರೆ ಹಳ್ಳಿಗಳಲ್ಲಿ ಇಬ್ಬರು ಭೂಮಾಲೀಕರ ಕೊಲೆಯಾಗಿತ್ತು. ಅವರು ಬಹಳ ಕ್ರೂರಿಯರು, ರೈತರನ್ನು ಗುಲಾಮರಂತೆ ಕಾಣುತ್ತಿದ್ದರೆಂಬುವುದು ಎಲ್ಲರಿಗೂ ಗೊತ್ತಿದ್ದ ವಿಷಯ. ಅದು ತನ್ನ ತಂಡದವರ ಕೆಲಸವೆಂದು ಅವನು ಭಯಪಡಬಾರದೆಂದು ತಾನವನಿಗೆ ಮಗುವನ್ನು ಕೊಟ್ಟೇ ಮಡಿಯುವೆನೆಂದು ವಚನ ಕೊಡುವಂತೆ ಹೇಳಿದ್ದಳು ಕಲ್ಯಾಣಿ. ಕಾಡುಗಳಲ್ಲಿ ಅಲೆಯುವ, ಭ್ರಷ್ಟಾಚಾರ ನಿರ್ಮೂಲ ಮಾಡುವ ವಿಷಯ ಬಂದಾಗ ತಾನು ನಾಯಕನ ವಿಷಯ ಹೇಳಿದ್ದನ್ನು ಜ್ಞಾಪಿಸಿದ್ದಳು. ಏನು ಮಾಡಬೇಕೋ ತೋಚದಂತಹ ನಿಸ್ಸಹಾಯ ಸ್ಥಿತಿಯಲ್ಲಿ ಅವಳ ಯೋಚನೆಯ ಹಿಂಸೆಯನ್ನು ಅನುಭವಿಸುತ್ತಾ ದಿನಗಳನ್ನು ಕಳೆದಿದ್ದ ತೇಜಾ.

ಅಮ್ಮನ ಸ್ಥಿತಿಯಂತೂ ಇನ್ನೂ ಶೋಚನೀಯವಾಗಿತ್ತು. ಉಬ್ಬಿದ ಹೊಟ್ಟೆಯನ್ನು ಹೊತ್ತುಕೊಂಡು ಅವಳನಪ್ಪಿ ಅತ್ತು ಬಿಟ್ಟಿದ್ದಳು ಅಮ್ಮ. ಇನ್ನೂ ಹೊರಗೆ ತಿರುಗುವುದು ಸಾಕೆಂದಿದ್ದಳು. ಅಕ್ಕರೆಯಿಂದ, ಪ್ರೇಮದಿಂದ ಅಮ್ಮನನ್ನು ಸಮಾಧಾನಪಡಿಸಿ ತನ್ನ ಯಾವ ಚಿಂತೆಯೂ ಮಾಡಬಾರದೆಂದು ಪ್ರತಿದಿನ ಒಬ್ಬ ಬಂದು ತೇಜಾನಿಗೆ ಆರೋಗ್ಯದ ವರದಿ ಒಪ್ಪಿಸುತ್ತಾನೆಂದು ಹೇಳಿಹೋಗಿದ್ದಳು. ಅದರಿಂದ ದಿನಾಗಲೂ ಬೆಳಗೆ ಸುತ್ತಾಡಿ ಕಲ್ಯಾಣಿ ಆರೋಗ್ಯವಾಗಿದ್ದಾಳೆಂಬ ವರದಿ ಒಪ್ಪಿಸುತ್ತಿದ್ದ ತೇಜಾ. ಅಪ್ಪನಿಗಂತೂ ಅವಳ ಆರೋಗ್ಯದ ಯೋಚನೆ ಹೆಚ್ಚಾಗಿ ಇದ್ದಂತೆ ತೋರಲಿಲ್ಲ. ಜಾಗ್ರತೆಯಾಗಿರು ಎಂದು ಅವಳಿಗೆ ಹೇಳಿದ್ದರು. ಮಾವ, ಸೊಸೆ ಕ್ರಾಂತಿಕಾರಿಯರೇ ಎಂದು ಮನದಲ್ಲೇ ಬೈದುಕೊಂಡಿದ್ದ ತೇಜಾ.

ಅವನು ಎಷ್ಟು ಹಿಂದಿನದೆಲ್ಲಾ ಮೆಲುಕು ಹಾಕುವುದರಲ್ಲಿ ಲೀನನಾಗಿದ್ದನೆಂದರೆ, ಪಟವಾರಿಯವರು ಬಂದು ಅವನ ತಲೆಯ ಬಳಿ ನಿಂತದ್ದೂ ಗಮನಕ್ಕೆ ಬರಲಿಲ್ಲ. ಅವನ ಮುಖವನ್ನೇ ನೋಡುತ್ತಾ ಕೇಳಿದರವರು

“ಏನು ಯೋಚಿಸುತ್ತಿದ್ದಿ?”

ಒಮ್ಮೆಲೆ ಬೆಚ್ಚಿಬಿದ್ದು ಎದ್ದು ಕುಳಿತನವ. ಅಪ್ಪನನ್ನು ಎದುರಿಗೆ ನೋಡಿ ಗಲಿಬಿಲಿಗೊಂಡು ಕೇಳಿದ

“ಏನಪ್ಪಾ ಏನಾಯಿತು?”

ಅವನ ಪ್ರಶ್ನೆಯಿಂದ ಅವನು ತಮ್ಮ ಮಾತನ್ನು ಕೇಳಿಸಿಕೊಳ್ಳಲಿಲ್ಲವೆಂಬುವುದು ಸ್ಪಷ್ಟವಾಯಿತವರಿಗೆ ಮತ್ತೆ ಕೇಳಿದರು.

“ಏನು ಯೋಚಿಸುತ್ತಿದ್ದಿ?”

ಆವರೆಗೆ ಪೂರ್ತಿ ಚೇತರಿಸಿಕೊಂಡಿದ್ದ ತೇಜಾ ಸಿಟ್ಟಿನ ದನಿಯಲ್ಲಿ ಹೇಳಿದ

“ನಾನು ಕಲ್ಯಾಣಿಯನ್ನು ಮದುವೆಯಾಗಿ ಘೋರ ಅಪರಾಧ ಮಾಡಿದನೇನೋ ಎಂದು ಯೋಚಿಸುತ್ತಿದ್ದೆ”

ಅದಕ್ಕೆ ಅವರು ನಿಷ್ಠುರ ದನಿಯಲ್ಲಿ ಹೇಳಿದರು.

“ನೀನವಳನ್ನು ಮದುವೆಯಾಗದಿದ್ದರೆ ನನ್ನ ಮಗನೂ ಆಗುತ್ತಿರಲಿಲ್ಲ”

ಎದ್ದು ಅವರ ಜತೆ ಕೋಣೆಯಿಂದ ಹೊರಬರುತ್ತಾ ಹೇಳಿದ ತೇಜಾ.

“ನನ್ನದು ಬಿಡಪ್ಪಾ ಅಮ್ಮನದು ಏನು ಗತಿಯಾಗಿದೆ ನೋಡು”

“ದೇಶಕ್ಕೆ ಸ್ವಾತಂತ್ರ್ಯ ಬರಲು ಲಕ್ಷಾಂತರ ಮಕ್ಕಳ ಬಲಿಯಾಯಿತು. ಒಂದು ಒಳ್ಳೆಯ ಕೆಲಸ ಮಾಡಲು ತ್ಯಾಗಗಳು ಮಾಡಬೇಕಾಗುತ್ತದೆ. ಕಷ್ಟಗಳು ಅನುಭವಿಸಬೇಕಾಗುತ್ತದೆ. ಅದರಲ್ಲಿ ಇದೂ ಒಂದು” ನಿರ್ವಿಕಾರ ದನಿಯಲ್ಲಿ ಹೇಳಿದರವನ ತಂದೆ.

ನಿಸ್ಸಹಾಯದ ಎತ್ತರದ ದನಿಯಲ್ಲಿ ಹೇಳಿದ ತೇಜಾ

“ಈಗ ದೇಶಕ್ಕೆ ಸ್ವಾತಂತ್ರ್ಯ ಬಂದಿದೆಯಪ್ಪಾ! ನಾವು ಯಾರ ಗುಲಾಮರೂ ಅಲ್ಲ. ನಾವೇ ಸರ್ಕಾರವನ್ನು ಆರಿಸುತ್ತಿದ್ದೇವೆ. ಪ್ರೇಮದಿಂದ ಸಾಧಿಸಬಹುದಾದದ್ದನ್ನು ಹಿಂಸೆಯಿಂದ ಸಾಧಿಸಲಾಗುವುದಿಲ್ಲವೆಂದು ಗಾಂಧೀಜಿ ಯವರೇ ಹೇಳಿದ್ದಾರೆ”

ತಮ್ಮ ಅದೇ ನಿರ್ವಿಕಾರ ದನಿಯಲ್ಲಿ ಹೇಳಿದರವನಪ್ಪ

“ಸುಭಾಷ್ ಚಂದ್ರ ಬೋಸ್, ಭಗತ್‌ಸಿಂಗ್, ಚಂದ್ರಶೇಖರ ಆಚಾದ್‌ನಂತಹವರು ಹುಟ್ಟದಿದ್ದರೆ ಗಾಂಧಿಯವರ ಮಾತನ್ನು ಯಾರೂ ಕೇಳುತ್ತಿರಲಿಲ್ಲ. ಅವರ ಕೊಡುಗೆಯನ್ನು ಮರೆತಿದ್ದಾರೆ ಜನ”

ಅವರ ಮಾತು ಮುಗಿಯುತ್ತಲೇ ಹೇಳಿದ ತೇಜಾ.

“ನಾನು ನೋಡಿ ಯಾವ ಹೆಚ್ಚಿನ ಕೆಲಸವನ್ನೂ ಮಾಡದೆಯೇ ಇಡೀ ಬಂಡೇರಹಳ್ಳಿಯ ಪ್ರೇಮ ವಿಶ್ವಾಸಗಳನ್ನು ಹೊಂದಿದೆ. ಹಾಗೆ….”

“ನೀನಲ್ಲಿ ಇನ್ನೂ ಬಹಳ ಕೆಲಸ ಮಾಡಿದ್ದಿ ಅದನ್ನು ನೀನು ಮರೆಯುತ್ತಿದ್ದಿ. ಅಥವಾ ನಿನ್ನ ಅಹಿಂಸಾವಾದವನ್ನು ಪ್ರತಿಪಾದಿಸಲು ಹಾಗೆ ಮಾಡುತ್ತಿದ್ದಿ… ನಿನ್ನನ್ನು ಮೆಚ್ಚಿ ಭೇಟಿಯಾದ ದಿನವೇ ನಿನ್ನ ಮದುವೆಯಾಗುವಷ್ಟು ಹುಚ್ಚಿಯಲ್ಲ ಕಲ್ಯಾಣಿ. ನೀನಲ್ಲಿ ಸರಾಯಿಖಾನೆಗಳನ್ನು ನಿಮಿತ ರೀತಿಯಲ್ಲಿ ನಡೆಯುವಂತೆ ಮಾಡಿದ್ದಿ. ಅದಕ್ಕೆ ಬಲಪ್ರಯೋಗ ಮಾಡಿ, ಲಾಟರಿಯನ್ನು ಮುಚ್ಚಿಸಿದ್ದಿ. ಸಿದ್ಧಾನಾಯಕನಂತಹ ಕಿರಾತಕನನ್ನು ಬಂಧಿಸಿದೆ. ನೀ ಬಂದ ದಿನದಿಂದ ನಿನ್ನ ಪ್ರತಿ ಚಲನವಲನವನ್ನು ಗಮನಿಸಿರುತ್ತಾಳೆ ಕಲ್ಯಾಣಿ. ನಿನ್ನ ಚರಿತ್ರೆ ಓದಿದ ಮೇಲೆ ಅವಳು ನಿನಗೆ ಮಾರು ಹೋಗಿರಬಹುದು. ಅದರಿಂದಾಗಿಯೇ ನಿನ್ನ ನೋಡಲು ಕರೆಸಿಕೊಂಡಿರುತ್ತಾಳೆ. ಭೇಟಿಯಾದ ದಿನವೇ ನಿಮ್ಮ ಮದುವೆಯಾಗಲು ಕಾರಣ ಅವಳು ನಿನ್ನ ಮೊದಲಿನಿಂದಲೂ ಪ್ರೀತಿಸುತ್ತಿರಬಹುದು… ನಿನ್ನಿಂದಾಗಿ ಶಾಂತವಾಗಿತ್ತು ಬಂಡೇರಹಳ್ಳಿ. ಇನ್ನು ಮುಂದೆ ನೋಡು ಅಲ್ಲಿ ಕಿರಾತಕತ್ವ ತಾಂಡವಾಡುತ್ತದೆ. ಅವನ ಮಾತನ್ನು ತಡೆದು ಒಂದೇ ಉಸಿರಿನಲ್ಲಿ ಹೇಳುವಂತೆ ತಮ್ಮ ಸೊಸೆಯನ್ನು ಹೊಗಳಿದರು. ಪಟವಾರಿಯವರು. ಅದಕ್ಕೇನು ಹೇಳಬೇಕೆಂದು ಯೋಚಿಸಿ ಮಾತಾಡಿದ ತೇಜಾ.

“ಇದಕ್ಕೆ ಕೊನೆಯಿಲ್ವ ಅಪ್ಪಾ!”

“ಕೊನೆ ಇದೆ! ಇಂತಹ ಕೆಲ ಕಲ್ಯಾಣಿಯರು ಹುಟ್ಟಿಕೊಂಡರೆ ಸರಕಾರ ಎಚ್ಚೆತ್ತುಕೊಳ್ಳುತ್ತದೆ. ಸಾವಿರಾರು ಚಪ್ಪಲಿ, ಬೂಟುಗಳ ಜೋಡಿಗಳನ್ನು, ಆ ಬೂಟು, ಚಪ್ಪಲಿಗಳ ಬಣ್ಣಕ್ಕೆ ಹೊಂದುವಂತಹ ಬೆಲೆ ಬಾಳುವ ಉಡುಪುಗಳನ್ನು ಹವಾನಿಯಂತ್ರಿತ ಬಸ್ಸುಗಳನ್ನು ಮಾಡಿಕೊಳ್ಳುವಂತಹ ಮುಖ್ಯಮಂತ್ರಿಯವರು ಮುಂದೆ ಬರಲಿಕ್ಕಿಲ್ಲ. ಎಪ್ಪತ್ತಾದರೂ ತಮ್ಮಗಿನ್ನೂ ಹುಡುಗಿಯರ ಗೀಳಿದೆ ಎಂದು ರಾಜಾರೋಷವಾಗಿ ಹೇಳಿಕೊಳ್ಳುವಂತಹ ಮುಖ್ಯಮಂತ್ರಿಯರು ಇಲ್ಲವಾಗುತ್ತಾರೆ. ಮಾಫಿಯಾ ಗ್ಯಾಂಗುಗಳ ಬೆಂಬಲದಿಂದ ರಾಜಕಾರಣಕ್ಕೆ ಇಳಿದವರು ಇಲ್ಲವಾಗುತ್ತಾರೆ. ಓಟುಗಳಿಗಾಗಿ ಜನಹಿತಕರ ನಿರ್ಣಯಗಳನ್ನು ತೆಗೆದುಕೊಳ್ಳಲಾಗದ ಸರಕಾರ ಹೆಚ್ಚು ದಿನ ಬಾಳುವುದಿಲ್ಲ. ನಮ್ಮ ದೇಶ ಮತ್ತೆ ಸೊನೆಕಿ ಚಿಡಿಯಾ… ಬಂಗಾರದ ಗುಬ್ಬಿಯಾಗುತ್ತದೆ” ಭಾವುಕ ದನಿಯಲ್ಲಿ ಹೇಳಿದರವನ ಅಪ್ಪ.

ಅವರಿಬ್ಬರೂ ಮಾತಾಡುತ್ತಾ ಕೆಳಗೆ ಬಂದು ಮುಂದಿನ ಕೋಣೆಯಲ್ಲಿ ಕುಳಿತಿದ್ದರು. ಅಪ್ಪನ ಭವಿಷ್ಯವಾಣಿ ನಿಜವಾಗಬಹುದೇ ತಮ್ಮ ದೇಶ ಮತ್ತೆ ದೊಡ್ಡ ಬಲಾಢ್ಯ ದೇಶಗಳ ಪ್ರತಿಸ್ಪರ್ಧಿಯಾಗಬಹುದೇ ಎಂಬ ಯೋಚನೆಯಲ್ಲಿ ತೊಡಗಿದ್ದ ತೇಜಾ, ಬಾಗಿಲು ಬಡಿದ ಸದ್ದಾಯಿತು. ಯಾರಿರಬಹುದು ಎಂದವನು ಅಂದುಕೊಳ್ಳುತ್ತಿರುವಾಗ ಆಳು ಬಂದು ಬಾಗಿಲು ತೆಗೆದ. ಕಲ್ಯಾಣಿ! ಅವಳ ಅವಸ್ಥೆ ಕಂಡು ತಂದೆ, ಮಗ ಇಬ್ಬರೂ ಒಮ್ಮೆಲೆ ಎದ್ದು ಅವಳ ಬಳಿ ಬಂದರು. ಕಲ್ಯಾಣಿಯ ಒಂದು ಕೈಯನ್ನು ತನ್ನ ಭುಜದ ಮೇಲೆ ಹಾಕಿಕೊಂಡು ಹಿಡಿದು ಅವಳನ್ನು ಒಳತರ ತೊಡಗಿದ ತೇಜಾ. ಅಕ್ಕರೆಯಿಂದ ಅವಳ ತಲೆಯನ್ನು ನೇವರಿಸುತ್ತಾ ಕೇಳಿದರು ಅವಳ ಮಾವ

“ಏನಾಯಿತಮ್ಮ? ಏನಾಯಿತು?”

ಕಾಡಿನಲ್ಲಿ ನಡೆದೂ ನಡೆದೂ ಬಹಳ ದಣಿದಿದ್ದಳು ಕಲ್ಯಾಣಿ. ಅವಳ ಮುಖ ಕಳೆಗುಂದಿತ್ತು. ಮುಖದಲ್ಲಿ ಬೆವರಿನ ಸಾಲುಗಳು ಹುಟ್ಟಿಕೊಂಡಿದ್ದವು.

“ಏನಾಗಿಲ್ಲ ಅಪ್ಪಾ ಬಹು ದಣಿದಿದ್ದೇನೆ ಅಷ್ಟೆ!” ಎಂದಳು ಕಲ್ಯಾಣಿ. ಅವಳ ಮಾತಿನಲ್ಲೂ ದಣಿವು ಎದ್ದು ಕಾಣುತ್ತಿತ್ತು. ಆಗಲೇ ಮೇಲೆ ಹೋದ ಆಳು ಲಕ್ಷ್ಮೀದೇವಿಯವರಿಗೆ ಅವರ ಸೊಸೆ ಬಂದಿರುವ ವಿಷಯ ತಿಳಿಸಿದ. ಆಕೆ ಎಲ್ಲಿಲ್ಲದ ಉತ್ಸಾಹದಿಂದ ನವಯುವತಿಯಂತೆ ಮೆಟ್ಟಿಲುಗಳನ್ನು ಇಳಿದು ಬಂದಳು. ಅವರು ಬರುತ್ತಿರುವುದು ನೋಡಿದ ತಂದೆ ಮಗ ಇಬ್ಬರೂ ಅವಳ ಬದಿಯಿಂದ ಸರಿದರು. ಕಲ್ಯಾಣಿಯ ಬದಿಗೆ ಕುಳಿತ ಅವರ ಅತ್ತೆ ಅವಳನ್ನು ತಬ್ಬಿ ಅವಳ ಮೈಯೆಲ್ಲಾ ಸವರುತ್ತಾ ಹೇಳಿದರು.

“ಹೇಗಿದ್ದಿ ಕೂಸು! ಬಹಳ ದಣಿವಾಗಿದೆಯೇ ನಡಿ… ನಿಧಾನವಾಗಿ ಮೆಟ್ಟಲೇರು… ಲೇ ಭಿಮಾ ನೀ ಹೋಗಿ ವೈದ್ಯರನ್ನು ಕರೆದುಕೊಂಡು ಬಾರೋ”

“ನನಗಂತಹದೇನೂ ಆಗಿಲ್ಲವಮ್ಮ” ಆಕೆಯನ್ನು ತಬ್ಬಿ ಹೇಳಿದರು ಕಲ್ಯಾಣಿ.

“ನಿನಗೇನು ಗೊತ್ತಾಗುತ್ತದೆ ಮಣ್ಣು. ವೈದ್ಯರು ಬಂದು ನೋಡಿ ಹೇಳಿದ ಆಮೇಲೆ ದಾಯಮ್ಮನ ಕರೆಸೋಣ. ಈ ಊರಿನಲ್ಲಿ ಆದ ಹೆರಿಗೆಗಳನ್ನೆಲ್ಲಾ ಅವಳೇ ಮಾಡಿಸಿದ್ದಾಳೆ” ಅಕ್ಕರೆಯಿಂದ ಗದರುವ ದನಿಯಲ್ಲಿ ಹೇಳಿದರವಳ ಅತ್ತೆ. ಕಲ್ಯಾಣಿಯನ್ನು ಮೇಲೆ ಹತ್ತಿಸುವಲ್ಲಿ ತಾಯಿಗೆ ಸಹಾಯ ಮಾಡಿದ ತೇಜಾ, ಮೇಲೆ ಹತ್ತುತ್ತಿದ್ದ ಆ ಮೂವರನ್ನು ನೋಡುತ್ತಿದ್ದ ಪಟವಾರಿಯವರ ಮುಖದಲ್ಲಿ ತೃಪ್ತಿಯ ಭಾವವಿತ್ತು.

ಮಂಚದಲ್ಲಿ ಮಲಗಿಸಿದ ಮೇಲೆ ತಂದೆ, ಮಗನನ್ನು ಹೊರಗೇ ಇರುವಂತೆ ಹೇಳಿ ಅವಳ ಬಟ್ಟೆಗಳನ್ನೆಲ್ಲಾ ಬಿಚ್ಚಿ, ನೀರನ್ನು ಕಾಯಿಸಿ ತಂದು ಅದರಲ್ಲಿ ಬಟ್ಟೆ, ಅದ್ದಿ ಅವಳ ದೇಹವನ್ನೆಲ್ಲಾ ಅದರಿಂದ ವರೆಸತೊಡಗಿದರು ಲಕ್ಷ್ಮೀದೇವಿ. ಮಂಚದಲ್ಲಿ ಮಲಗುತ್ತಲೇ ಅವರೆಗಿನ ದಣಿವೆಲ್ಲಾ ಒಮ್ಮೆಲೇ ದೂರವಾದಂತೆನಿಸಿತು ಕಲ್ಯಾಣಿಗೆ ಬೀಸಿನೀರಿನಲ್ಲಿ ಅದ್ದಿದ ಬಟ್ಟೆಯಿಂದ ದೇಹವೆಲ್ಲಾ ವರೆಸುತ್ತಿದ್ದಾಗ ಹೊಸ ಜೀವನ ಬರುತ್ತಿರುವಂತಹ ಅನುಭವ. ಅಕ್ಕರೆ ತುಂಬಿದ ಕಣ್ಣುಗಳಿಂದ ಅತ್ತೆಯನ್ನೆ ನೋಡುತ್ತಾ ಹೇಳಿದಳು ಕಲ್ಯಾಣಿ.

“ಯಾಕಮ್ಮ ಇಷ್ಟೆಲ್ಲಾ ಕಷ್ಟ ನನ…”

“ನೋಡು ಮೈಯೆಲ್ಲ ಎಷ್ಟು ಹೊಲಸು! ನೀ ಬಾಯಿ ಮುಚ್ಚಿಕೊಂಡು ಮಲಗು… ಈಗ ನಾ ಮಾಡುತ್ತಿರುವ ಕೆಲಸ ನಿನ್ನ ಹೊಟ್ಟೆಯಲ್ಲಿರುವ ಕೂಸಿಗೂ ಗೊತ್ತಾಗುತ್ತದೆ. ಪಾಪ ನಿನ್ನ ಜತೆಗೆ ಅದನ್ನೂ ಗೋಳುಹಾಕಿಕೊಂಡಿ” ಅವಳ ಮಾತನ್ನು ನಡುವೆಯೇ ತಡೆದು ಹೇಳಿದರವಳ ಅತ್ತೆ. ಸಂತಸದ ಭರದಲ್ಲಿ ಏನೇನೋ ಮಾತಾಡುತ್ತಿದ್ದಾರೆ ಎಂದುಕೊಂಡ ಕಲ್ಯಾಣಿ ಕಣ್ಣು ಮುಚ್ಚಿದಳು. ತೇಜಾನ ಗಾಬರಿಗೊಂಡ ಮುಖವೇ ಅವಳ ಕಣ್ಣಿಗೆ ಕಟ್ಟಿದಂತಾಗಿತ್ತು.

ಲುಗಬಗೆಯಿಂದ ಬಂದ ವೈದ್ಯರು. ತಂದೆ ಮಗನೊಡನೆ ಮುಂದಿನ ಕೋಣೆಯಲ್ಲೇ ಕಾಯುತ್ತಾ ಕುಳಿತರು. ಲಕ್ಷ್ಮೀದೇವಿ ತಮ್ಮ ಸೊಸೆಗೆ ಶುಭ್ರವಾದ ಸೀರೆ ಉಡಿಸಿದ ಮೇಲೆ ವೈದ್ಯರನ್ನು ಮೇಲೆ ಕರೆದರು. ಅವರು ಅವಳ ನಾಡಿ ಪರೀಕ್ಷಿಸಿ. ಏನೂ ಆಗಿಲ್ಲ ಕಲ್ಯಾಣಿ ಮತ್ತು ಅವಳ ಮಗು ಸ್ವಸ್ಥವಾಗಿದ್ದಾರೆ ಎಂದು ಪುಷ್ಟಿಕರವಾದ ಆಹಾರ ಕೊಡಬೇಕೆಂದು ಹೇಳಿಹೋದರು. ವೈದ್ಯರೊಡನೆಯೇ ಅವಳ ಕೋಣೆಗೆ ಬಂದರು ತಂದೆ, ಮಗ, ಪಟವಾರಿಯವರು ತಮ್ಮ ಸೊಸೆಯ ತಲೆಯ ಮೇಲೆ ಕೈಯಾಡಿಸುತ್ತಾ ಹೇಳಿದರು.

“ನೀನ್ಯಾವುದರ ಬಗ್ಗೆಯೂ ಯೋಚಿಸಬೇಡಮ್ಮ ಎಲ್ಲಾ ಸರಿ ಹೋಗುತ್ತದೆ”

“ನೀವಿದ್ದ ಮೇಲೆ ನನಗ್ಯಾತರ ಯೋಚನೆಯಪ್ಪಾ… ನಿಮ್ಮ ಮಗನಿಗೆ ಹೇಳಿ ಎಲ್ಲಾ ನೋವನ್ನು ಅವರೇ ಅನುಭವಿಸುತ್ತಿದ್ದ ಹಾಗೆ ಕಾಣುತ್ತದೆ” ಹೇಳಿದಳು ಕಲ್ಯಾಣಿ. ಅವಳ ಮಾತಿನಲ್ಲೀಗ ಲವಲವಿಕೆ ತುಂಬಿ ಬಂದಿತ್ತು.

“ನೀನೇ ಹೇಳಮ್ಮ ಆಗಲೇ ಅವನಿಗೆ ಅರ್ಥವಾಗುವುದು… ನಡೀ ಲಕ್ಷ್ಮೀ ನಾವು ಸ್ವಲ್ಪ ಹೊತ್ತು ಹೊರಗೆ ಕೂಡುವ” ಹೇಳಿದರವಳ ಮಾವ.

“ನಾ ಹಾಲು ಕಳಿಸುತ್ತೇನೆ ಅವಳಿಗೆ ಕುಡಿಸು… ನಿನ್ನ ತಲೆ ಕೆಟ್ಟ ಪೋಲಿಸ್ ಮಾತುಗಳು ಆಡಬೇಡ” ಎಂದ ಲಕ್ಷ್ಮೀದೇವಿಯವರು ತಮ್ಮ ಪತಿಯೊಡನೆ ಕೋಣೆಯಿಂದ ಹೊರ ಹೋದರು.

ತೇಜಾನ ಭುಜದ ಮೇಲೆ ಕೈ ಹಾಕಿ ಮೇಲೆ ಸರಿಯುತ್ತಾ ಕೇಳಿದಳು ಕಲ್ಯಾಣಿ.

“ಬೇಜಾರಾಗಿದೆಯೇ?”

ದಿಂಬನ್ನು ಅವಳ ಬೆನ್ನಿಗಾನುವಂತೆ ಸರಿಸಿ ಅವಳು ಅದಕ್ಕೊರಗಿ ಕುಳಿತಾಗ ಹಣೆಗೆ ಮುದ್ದಿಸಿ ಹೇಳಿದ

“ನಾನು ಎಷ್ಟು ಹಿಂಸೆ ಅನುಭವಿಸುತ್ತಿದ್ದೇನೆಂದು… ನನಗೇ ಗೊತ್ತು. ಈಗ ಸ್ವಲ್ಪ ಮನಸ್ಸಿಗೆ ಶಾಂತಿ ದೊರೆತಿದೆ”

ಇಬ್ಬರೂ ಒಬ್ಬರನ್ನೊಬ್ಬರು ಆರಾಧಕ ನೋಟದಿಂದ ನೋಡಿಕೊಳ್ಳುತ್ತಿದ್ದರು.

“ಸ್ವಲ್ಪವೆಂದರೆ… ಪೂರ್ತಿ ಶಾಂತಿ ದೊರೆತಿಲ್ಲವೇ?” ಅವನ ತಲೆಯ ಮೇಲೆ ಕೈಸವರುತ್ತಾ ಕೇಳಿದಳು. ಅವಳ ಹೊಟ್ಟೆಯ ಮೇಲೆ ಕೈ‌ಆಡುತಾ ಹೇಳಿದ ತೇಜಾ

“ನಮ್ಮ ಭಗತ್‌ಸಿಂಗ್ ಹೊರಬರುವವರೆಗೂ ಅವನು ಹೊರಬಂದು ನೀನು ಸ್ವಸ್ಥವಾಗುವವರೆಗೂ ನನಗೆ ಪೂರ್ತಿ ಶಾಂತಿ ದೊರೆಯುವುದಿಲ್ಲ”

“ಆ ಅನುಮಾನವ್ಯಾಕೆ?” ಕೇಳಿದಳವಳು.

“ನೀನು ತೆಗೆದುಕೊಳ್ಳಬೇಕಾದ ಇಂಜೆಕ್ಷನ್‌ಗಳನ್ನು ಔಷಧಿಗಳನ್ನು ತೆಗೆದುಕೊಂಡಿಲ್ಲ. ಮಾಡಿಸಿಕೊಳ್ಳಬೇಕಾದ ಟೆಸ್ಟುಗಳನ್ನು ಮಾಡಿಸಿಕೊಂಡಿಲ್ಲ. ಆದರಿಂದ…”

ಅವನ ಮಾತನ್ನು ಅಲ್ಲಿಗೆ ತಡೆಯುತ್ತಾ ಹೇಳಿದಳು ಕಲ್ಯಾಣಿ.

“ಅದರಿಂದ ಗಾಬರಿಯಾಗುವ ಅವಶ್ಯಕತೆ ಇಲ್ಲ. ನಮ್ಮ ಮಗ ದಷ್ಟಪುಷ್ಟವಾಗಿ ಆರೋಗ್ಯವಂತನಾಗಿ ಹುಟ್ಟುತ್ತಾನೆ… ನಮ್ಮ ಪೂರ್ವಜರು ಅದನ್ನೆಲ್ಲಾ ತೆಗೆದುಕೊಳ್ಳುತ್ತಿದ್ದರೆ, ನನಗೆ ಕೂಸಿಗೆ ಏನೂ ಆಗುವುದಿಲ್ಲ. ನೀವದರ ಬಗ್ಗೆ ಯೋಚಿಸಬೇಡ… ಟ್ರಾನ್ಸ್‌ಫರ್‌ದು ಏನಾಯಿತು?”

“ಆ ಮಾತುಗಳು ಈಗ ಬೇಡ” ಅನ್ಯಮನಸ್ಕ ದನಿಯಲ್ಲಿ ಹೇಳಿದ ತೇಜಾ.

“ಹೇಳು ಅದೇನೂ ಅಂತಹ ವಿಷಯವಲ್ಲ” ಒತ್ತಾಯಿಸುವ ದನಿಯಲ್ಲಿ ಹೇಳಿದಳು ಕಲ್ಯಾಣಿ.

“ಟ್ರಾನ್ಸ್‌ಫರ್ ಆಯಿತು. ಸಿಸಿ‌ಎಸ್‌ನಲ್ಲಿ ಜಾಯಿನ್ ಆಗಿ ಲೀವ್ ಹಾಕಿ ಬಂದಿರುವೆ” ಮನಸಿಲ್ಲದ ಮನಸ್ಸಿನಿಂದ ಹೇಳಿದ ತೇಜಾ.

“ಇನ್ನು ನೋಡು ಬಂಡೇರಹಳ್ಳಿಯಲ್ಲಿ ಆರಂಭವಾಗುತ್ತದೆ ಪೋಲೀಸರ ಕಿರಾತಕತೆ” ಹೇಳಿದಳು ಕಲ್ಯಾಣಿ

ಯಾವಾಗಲೂ ಹಾಗೇ ಕೆಟ್ಟದಾಗಿ ಯಾಕೆ ಯೋಚಿಸುತ್ತಿ ಈಗ ಬಂದಿರುವ ಇನ್ಸ್‌ಪೆಕ್ಟರ್‌ನೂ ಒಳ್ಳೆಯವನಿರಬಹುದು. ನನ್ನಂತೆ…”

“ನಿನ್ನಂತಹ ಅಧಿಕಾರಿಯರು ಪೋಲಿಸ್ ಖಾತೆಯಲ್ಲಿರುವುದು ತೀರಾ ಅಪರೂಪ. ಮೈಮೇಲೆ ಪೋಲೀಸರ ಉಡುಪು ಬರುತ್ತಲೇ ತಾವೇ ಸರ್ವಾಧಿಕಾರಿಗಳೆಂದುಕೊಳ್ಳುತ್ತಾರೆ ಎಲ್ಲರೂ. ಆಗಲೇ ಆ ಇನ್ಸ್ ಪೆಕ್ಟರನ ಜಾತಕ ತರಿಸಿ ನೋಡಿದ್ದೇನೆ…”

“ಸಾಕು! ಸಾಕು ಕಲ್ಯಾಣಿ ಆ ಮಾತುಗಳು ಸಾಕು. ಇನ್ನೇನಾದರೂ ಮಾತಾಡೋಣ ಕನಸುಗಳನ್ನು ಕಟ್ಟೋಣ” ಕಟುವಾಗಿ ಅವಳ ಮಾತನ್ನು ತಡೆದ ತೇಜಾ ತಾನೇ ಕನಸು ಕಾಣುತ್ತಿರುವಂತೆ ಮಾತು ಮುಗಿಸಿದ. ಬಾಗಿಲಿಗೆ ಬೆರಳಿನಿಂದ ಬಡಿದ ಸದ್ದಾದಾಗ ಎದ್ದ ತೇಜಾ ಆಳಿನ ಕೈಯಿಂದ ಹಾಲಿನ ಗ್ಲಾಸನ್ನು ತೆಗೆದುಕೊಂಡು ಬಾಗಿಲು ಹಾಕಿಬಂದು ಅವಳ ಕೈಗೆ ಅದನ್ನು ರವಾನಿಸಿದ. ಬಿಸಿ ಹಾಲನ್ನು ಒಂದು ಗುಟುಕು ಕುಡಿದು ತಾನೂ ಕನಸಿನ ರಾಜ್ಯದಲ್ಲಿ ತೇಲಿಹೋಗುತ್ತಿರುವಂತೆ ಕೇಳಿದಳು ಕಲ್ಯಾಣಿ.

“ಹೇಳು ಎಂತಹ ಕನಸು ಕಾಣುವ?”

ಆದಕ್ಕವನು ಉತ್ತರಿಸಲು ಹೋದಾಗ ಟೆಲಿಫೋನ್ ಶಬ್ದ ಮಾಡತೊಡಗಿತು. ಎದ್ದು ಹೋಗಿ ರಿಸಿವರನ್ನು ಎತ್ತಿಕೊಂಡ.

“ಹಲೋ…”

“ನಾನಪ್ಪಾ ತಾತ ಇಲ್ಲೊಂದು ಘೋರವಾಗಿ ಹೋಗಿದೆ” ತೇಜಾನ ಕಂಠವನ್ನು ಗುರುತಿಸಿದ ತಾತ ಕೂಡಲೇ ಮಾತಾಡಿದ. ಅವನ ದನಿಯಲ್ಲಿ ದುಃಖ ತುಂಬಿತ್ತು. ಕಲ್ಯಾಣಿಯ ಕಡೆ ಒಮ್ಮೆ ನೋಡಿ ಮಾಮೂಲು ದನಿಯಲ್ಲಿ ಕೇಳಿದ.

“ಏನು?”

“ವೆಂಕಟನ ಕೊಲೆಯಾಗಿದೆ. ಈಗ ಬಂಡೆಗಳ ಬಳಿ ಅವನ ಶವ ಸಿಕ್ಕಿದೆ…”

ತೇಜಾನ ಹೊಟ್ಟೆಯಲ್ಲಿ ಯಾರೊ ಕೈಹಾಕಿ ಕರುಳುಗಳನ್ನು ಹಿಸುಕಿದಂತಾಯಿತು. ಆದರೂ ಅವನು ತನ್ನ ಮುಖಭಾವ ಬದಲಿಸಲಿಲ್ಲ. ಹೇಳಿದ

“ನಾನೀಗ ಬಂದೆ”

ಮಾತು ಮುಗಿಸಿ ರಿಸೀವರನ್ನು ಕೆಳಗಿಡುತ್ತಿದ್ದಾಗ ಕೇಳಿದಳು ಕಲ್ಯಾಣಿ.

“ಯಾರು?”

“ಗುಂಡು ತಾತನ ಮೈಯಲ್ಲಿ ಹುಷಾರಿಲ್ಲವಂತೆ. ನಾ ಬಂಡೇರಹಳ್ಳಿಗೆ ಹೋಗಿ ಬರುತ್ತೇನೆ… ಆದಷ್ಟು ಬೇಗ ಬಂದುಬಿಡುತ್ತೇನೆ”

ಗುಂಡುತಾತನ ಬಗೆಗಿನ ಕಾಳಜಿ ತೇಜಾನ ಮುಖದಲ್ಲಿ ಎದ್ದು ಕಾಣುತ್ತಿತ್ತು. ವ್ಯಂಗ್ಯದ ಮುಗುಳ್ನಗೆ ನಕ್ಕು ಹೇಳಿದಳು ಕಲ್ಯಾಣಿ

“ಸುಳ್ಳು, ಬೇಡ! ನನ್ನೆದುರು ಎಂತಹ ನಟನೆಯೂ ಬೇಡ, ನನಗೆಲ್ಲಾ ಗೊತ್ತಾಗುತ್ತದೆ. ಹೋಗಿ ಬನ್ನಿ. ಅಲ್ಲಿ ಯಾವುದೋ ಘಟನೆ ನಡೆದಿರಬಹುದು. ಅಮ್ಮನಿಗೆ ಏನಾದರೂ ಸುಳ್ಳು ಹೇಳಿ ಅವರ ಮುಂದೆ ಬಂಡೇರಹಳ್ಳಿಯ ಹೆಸರು ಎತ್ತುವುದು ಬೇಡ” ನಿರ್ಭಾವ ದನಿಯಲ್ಲಿ ಹೇಳಿದಳು ಕಲ್ಯಾಣಿ. ಇವಳು ಬಹಳ ಬುದ್ಧಿವಂತೆ ಎಂದು ತನಗೆ ತಾನು ಮತ್ತೆ ಜ್ಞಾಪಿಸಿಕೊಂಡು, ಅವಳ ಕಪೋಲ ಸವರಿ ಹಣೆಗೆ ಮುದ್ದಿಸಿ ಕೋಣೆಯಿಂದ ಹೊರಬಿದ್ದ ತೇಜಾ, ತಂದೆ ತಾಯಿಯರಿಗೆ ಯಾವುದೋ ಸುಳ್ಳು ಹುಟ್ಟಿಸಿ ಹೇಳಿ ಲಗುಬಗೆಯಲ್ಲಿ ಮನೆಯಿಂದ ಹೊರಬಿದ್ದ.

ಲಕ್ಷ್ಮೀದೇವಿ ಮತ್ತು ಪಟವಾರಿಯವರು ತಮ್ಮ ಸೊಸೆಯ ಕೋಣೆಯ ಕಡೆ ನಡೆದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪೂರಕ
Next post ನೆರೆಯವರು ನಕ್ಕರು

ಸಣ್ಣ ಕತೆ

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…