Home / ಲೇಖನ / ಇತರೆ / ಜಾಣ ಕುರುಡೇ?

ಜಾಣ ಕುರುಡೇ?

ಚಿತ್ರ: ಗರ್‍ಡ್ ಆಲ್ಟ್‌ಮನ್

ಪ್ರಿಯ ಸಖಿ,

ಹೀಗೆ, ಆಶ್ರಮವೊಂದರಲ್ಲಿ ಗುರುವೊಬ್ಬನಿದ್ದ. ಮಹಾನ್ ಮಾನವತಾವಾದಿ. ಎಂತಹ ಸೂಕ್ಷ್ಮ ಮನಸ್ಸಿನವನೆಂದರೆ ತನ್ನ ಮಾತು, ಕೃತಿಗಳಿಂದ ಎಂದೂ ಇತರರನ್ನು ನೋಯಿಸಿದವನಲ್ಲ. ತನ್ನ ಶಿಷ್ಯರೊಡನೆಯೂ ಪ್ರೀತಿ ಮಮತೆಗಳಿಂದ ನಡೆದುಕೊಳ್ಳುತ್ತಿದ್ದ. ಬಿರು ಬೇಸಿಗೆಯಲ್ಲಿ ಗಿಡಗಳು ಸುಟ್ಟು ಹೋಗುತ್ತವಲ್ಲ ಎಂದೂ ಚಳಿಗಾಲದಲ್ಲಿ ಪಕ್ಷಿಗಳು ನಡುಗಿ ನೋಯುತ್ತವಲ್ಲಾ ಎಂದೂ, ಗಿಡದಿಂದ ಹೂಕಿತ್ತರೆ ಅದಕ್ಕೆ ನೋವಾಗುವುದೆಂದೂ ಪರಿತಪಿಸುತ್ತಿದ್ದ. ಇಷ್ಟೆಲ್ಲಾ ಸೂಕ್ಷ್ಮ ಮನಸ್ಸಿನ ಈ ಗುರು ಒಬ್ಬ ಮಾಂಸಾಹಾರಿಯಾಗಿದ್ದ. ಆ ತನ್ನ ತಪಸ್ಸಿನ ಶಕ್ತಿಗೆ, ಧೈರ್ಯ, ಬುದ್ಧಿವಂತಿಕೆಗೆ ತೇಜಸ್ಸಿಗೆ ತಾನು ಮಾಂಸಹಾರಿಯಾಗಿರುವುದೇ ಕಾರಣವೆಂದು ಬಲವಾಗಿ ನಂಬಿದ್ದ! ಈ ಆಶ್ರಮಕ್ಕೆ ಹೊಸ ಶಿಷ್ಯನೊಬ್ಬ ಆಗಮಿಸಿದ. ಅವನೋ ಅಪ್ಪಟ ಸಸ್ಯಾಹಾರಿ. ಜೊತೆಗೆ ಮಹಾನ್ ಬುದ್ಧಿವಂತ. ಅವನಿಗೆ ತನ್ನ ಗುರುಗಳ ಬುದ್ಧಿವಂತಿಕೆ, ಶಕ್ತಿ, ಎಲ್ಲಕ್ಕಿಂತ ಹೆಚ್ಚಾಗಿ ಅವರ ಮಾನವೀಯ ಗುಣಗಳು ಹೆಚ್ಚು ಮೆಚ್ಚುಗೆಯಾದವು. ಮಾನವೀಯತೆಯ ಕುರಿತು ಅವರು ಹೇಳುತ್ತಿದ್ದ ಕಥೆಗಳು, ಅದರಂತೆ ನಡೆಯಬೇಕೆಂದು ಅವರು ನೀಡುತ್ತಿದ್ದ ಉಪದೇಶ ಎಲ್ಲವೂ ಬಹಳ ಅಪ್ಯಾಯಮಾನವಾಗಿದ್ದವು. ಹಾಗೆಯೇ ಹೂವು, ಗಿಡ, ಮರ, ಪಕ್ಷಿಗಳ ಕುರಿತೂ ಅವರಿಗಿರುವ ಪ್ರೀತಿಯನ್ನು ಕಂಡು ಹೃದಯ ತುಂಬಿಬರುತ್ತಿತ್ತು.

ಆದರೆ ಅವನಿಗೆ ಅರ್ಥವಾಗದ್ದೊಂದೇ. ಅದು ಗುರುಗಳ ಮಾಂಸಾಹಾರ ಸೇವನೆ. ಇಷ್ಟೆಲ್ಲಾ ಪ್ರೀತಿ ತುಂಬಿದ ಹೃದಯದ ಗುರುಗಳು ಮಾಸಾಹಾರಿಗಳೇಕೆ ಎಂಬ ಪ್ರಶ್ನೆ ಅವನನ್ನು ಕಾಡುತ್ತಿತ್ತು. ಹಾಗೆಂದು ಗುರುಗಳನ್ನು ಎದುರಿಗೇ ಕೇಳಲಾದೀತೇ? ಸರಿ ಅವರ ಆಹಾರ ಕ್ರಮವನ್ನು, ಇಂಚಿಂಚೂ ಪರೀಕ್ಷಿಸತೊಡಗಿದ.

ಗುರುಗಳು ಆಹಾರದ ಸಮಯಕ್ಕೆ ಸರಿಯಾಗಿ ಭೋಜನ ಶಾಲೆಗೆ ಆಗಮಿಸುತ್ತಿದ್ದರು. ಆಹಾರ ಸೇವಿಸಿ ಹೊರಟು ಹೋಗುತ್ತಿದ್ದರು. ಆಹಾರ ತಯಾರಿ ವಿಧಾನವಾಗಲಿ, ಇವರ ಮಾಂಸಾಹಾರಕ್ಕಾಗಿ ನಡೆಯುವ ಪ್ರಾಣಿ ವಧೆಯನ್ನಾಗಲಿ ಅವರು ಕಂಡೇ ಇರಲಿಲ್ಲ.

ಈ ಹೊಸ ಶಿಷ್ಯ ಇದನ್ನೆಲ್ಲವನ್ನೂ ಅವರಿಗೆ ತೋರಿಸಲು ನಿರ್ಧರಿಸಿದ. ಒಂದು ದಿನ ಆ ವೇಳೆಯಲ್ಲಿ ಅವರನ್ನು ಪಾಕ ಶಾಲೆಗೆ ಕರೆತಂದ. ಅಲ್ಲಿ ಕೆಲ ಶಿಷ್ಯರು ಕೋಳಿಯೊಂದರ ಪುಕ್ಕ ಕಿತ್ತು, ಅದನ್ನು ಕೊಲ್ಲುವ ತಯಾರಿಯಲ್ಲಿದ್ದರು. ಇದನ್ನು ಕಂಡ ಗುರುಗಳು ಸಿಟ್ಟಿನಿಂದ ಕೂಗಾಡಿದರು. ಶಿಷ್ಯರು ತಮ್ಮ ಆಹಾರಕ್ಕಾಗಿಯೇ ಈ ಎಲ್ಲಾ ಹಿಂಸೆ ಎಂದಾಗ ಗುರುಗಳು ದಿಗ್ಭ್ರಾಂತರಾದರು!

ಪ್ರಿಯ ಸಖಿ, ಗುರುಗಳು ಮಾಂಸಾಹಾರ ತ್ಯಜಿಸಿ ಸಸ್ಯಾಹಾರಿಯಾದರೋ ಇಲ್ಲ ಇಂತಹ ಹಿಂಸೆಯನ್ನು ತಮ್ಮ ಕಣ್ಣಿಗೆ ತೋರಿಸಿದ್ದಕ್ಕಾಗಿ ಹೊಸ ಶಿಷ್ಯನನ್ನೇ ದಂಡಿಸಿದರೋ, ಮುಂದೆ ಆ ಕಥೆಯೇನಾಯ್ತೋ ನಮಗೆ ಬೇಡ. ಆದರೆ ಮೃದು ಹೃದಯದ, ಸಣ್ಣ ನೋವಿಗೂ ಸ್ಪಂದಿಸುವೆವೆಂದು ಹೇಳಿಕೊಳ್ಳುವಂತಹಾ ಈ ಗುರುವಿನಂತವರು ಇಂತಹಾ ಹಿಂಸಾಚಾರವನ್ನು ನಿತ್ಯ ತಮ್ಮ ಮನೆಗಳಲ್ಲಿ ನೋಡುತ್ತಲೇ ಇರುತ್ತಾರಲ್ಲವೇ ? ನಮ್ಮ ಕಥೆಯ ಗುರುವಿನಂತೆ ಹಿಂಸೆಯ ಅರಿವು ಅವರಿಗಿರುವುದಿಲ್ಲವೊ, ಈ ಕುರಿತು ಜಾಣ ಕುರುಡೋ. ಪ್ರಾಣಿಗಳಿರುವುದೇ ನಮ್ಮ ಆಹಾರಕ್ಕೆ ಅದರಲ್ಲೆಂತಾ ಹಿಂಸೆ ಎಂಬ ದಿವ್ಯ ಬುದ್ಧಿವಂತಿಕೆಯೋ? ಏನೆಂಬುದು ಅವರವರಿಗೇ ಗೊತ್ತಿರಬೇಕಷ್ಟೇ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...