ದೀಪವೂ ನಿನ್ನದೆ, ಗಾಳಿಯೂ ನಿನ್ನದೆ

ದೀಪವೂ ನಿನ್ನದೆ, ಗಾಳಿಯೂ ನಿನ್ನದೆ

Deepa Gaaliಜುಲೈ ೩೦, ೨೦೦೦. ಭೀಮನ ಆಮಾವಾಸ್ಯೆಯ ಆ ಕರಾಳ ರಾತ್ರಿಯ ನಂತರದಲ್ಲಿ ಕರ್ನಾಟಕ ರಾಜ್ಯದಲ್ಲಿ ನಡೆದ ಘಟನೆಗಳನ್ನು ನೋಡಿ:

‘ಸಂಕಷ್ಟದಿಂದ ಪಾರು ಮಾಡೋ ಮಾದೇಶ’ ಎಂದು ಅಂದಿನ ಮುಖ್ಯಮಂತ್ರಿ ಸಪತ್ನೀಕರಾಗಿ ಮಲೆ ಮಹದೇಶ್ವರನ ಮೊರೆ ಹೊಕ್ಕರು. ನಾಡಿಗೆ ಕವಿದ ಕತ್ತಲು ಕರಗಿದರೆ ಚಿನ್ನದ ಸರ ಹಾಕಿಸುವುದಾಗಿ ಕೊಲ್ಲೂರು ಮೂಕಾಂಬಿಕೆಗೊ (ಕಟೀಲು ದುರ್ಗಾ ಪರಮೇಶ್ವರಿಗೊ) ರಾಜಕೀಯ ಪಕ್ಷವೊಂದರ ಹಿರಿಯ ಮುಖಂಡರು ಹರಕೆ ಹೊತ್ತರು. ರಾಜ್ಯದ ಅನೇಕ ಭಾಗಗಳಲ್ಲಿ ಅಹೋರಾತ್ರಿ ಭಜನೆ ನಡೆಯಿತು. ದುರ್ಗಾ ಹೋಮ ನಡೆಸಲು ಸರ್ಕಾರ ಆದೇಶ ಹೊರಡಿಸಿತು. ಸಿನಿಮಾ ನಟಿಯರು ಉರುಳುಸೇವೆ ನಡೆಸಿದರು. ವಚನಗಳ ಗಾಯನ, ದೇಗುಲಗಳಲ್ಲಿ ಹೋಮ ಹವನ, ಸರದಿ ಉಪವಾಸ, ಉರುಳು ಸೇವೆಯ ಆವೇಶ- ಚರ್ಚು, ಮಸೀದಿ, ದೇಗುಲ, ಬಯಲುಗಳಲ್ಲಿ ತುಂಬಿಕೊಂಡವು. ವಿದೇಶಗಳಲ್ಲಿನ ಕನ್ನಡಿಗರು ಅಂತರ್ಜಾಲದಲ್ಲಿ ತಮ್ಮ ಅಭಿಮಾನ, ಅಳಲು ತೋಡಿಕೊಂಡರು. ಈ ಎಲ್ಲ ಪ್ರಾರ್ಥನೆ ನಡೆದುದು ಕಾಡುಗಳ್ಳ ವೀರಪ್ಪನ್ನಿಂದ ಅಪಹರಣಕ್ಕೆ ಒಳಗಾಗಿದ್ದ ವರನಟ ರಾಜಕುಮಾರ್ ಬಿಡುಗಡೆಗಾಗಿ.

ಒಬ್ಬ ವ್ಯಕ್ತಿಗಾಗಿ ಇಡೀ ನಾಡು ಪ್ರಾರ್ಥಿಸಿದ ಉದಾಹರಣೆ ಆಧುನಿಕ ಸಂದರ್ಭದಲ್ಲಿ ಇದೊಂದೇ ಇರಬೇಕು. ಮಳೆ ಗುಳೆ ಹೊಂಟಾಗ ‘ಹುಯ್ಯೋ ಹುಯ್ಯೋ ಮಳೆರಾಯ’ ಎಂದು ಜನಪದರು ಸಾಮೂಹಿಕವಾಗಿ ಪ್ರಾರ್ಥಿಸಿದ ಉದಾಹರಣೆಗಳು ಅಂದಿಗೂ ಇವೆ, ಇಂದೂ ಇವೆ. ನಾಡಿನಲ್ಲಿ ಕ್ಷಾಮ ಡಾಮರ ಉಂಟಾದಾಗ, ಯುದ್ಧ ನಡೆದಾಗ
ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಸಲು, ಹೋಮ ಹವನ ನಡೆಸಲು ಪ್ರಭುತ್ವ ಆದೇಶಿಸಿದ ಕಥೆಗಳು ನಮ್ಮ ಪುರಾಣ, ಇತಿಹಾಸದಲ್ಲಿ ಸಾಕಷ್ಟಿವೆ. ಆದರೆ ಒಬ್ಬ ವ್ಯಕ್ತಿಗಾಗಿ, ಓರ್ವ ಸಿನಿಮಾ ನಟನ ಬಿಡುಗಡೆಗಾಗಿ ನಾಡು ಏಕತ್ರ ಕಂಠದಿಂದ ಮೊರೆ ಇಟ್ಟ ಇನ್ನೊಂದು ಉದಾಹರಣೆ ಕಾಣಲಾರೆವು.

ಪ್ರಾರ್ಥನೆಯ ಇನ್ನೊಂದು ತುದಿಯನ್ನು ನೋಡಿ. ಮನೆದೇವರ ಬಿಡುಗಡೆಗಾಗಿ ಪಾರ್ವತಮ್ಮ ಮತ್ತು ಮಕ್ಕಳು ಆಕಾಶವಾಣಿಯಲ್ಲಿ ‘ವೀರಪ್ಪಣ್ಣನ ಬೇಡಿದರು. ತನ್ನನ್ನು ಬಿಡುಗಡೆ ಮಾಡಿಸುವಂತೆ ಸರ್ಕಾರವನ್ನು ಪ್ರಾರ್ಥಿಸಿ ರಾಜ್ ಕಾಡಿನಿಂದ ಸಂದೇಶ ಕಳಿಸಿದರು. ಯಾವ ಪ್ರಾರ್ಥನೆ ಫಲಿಸಿತೊ, ರಾಜ್ ವನವಾಸ ೧೦೮ ದಿನಗಳ ನಂತರ ಮುಕ್ತಾಯವಾಯಿತು. ಪ್ರಾರ್ಥನೆ ಮಾತ್ರ ಮುಗಿಯಲಿಲ್ಲ ನರಹಂತಕನ ಸೆರೆಯಿಂದ ಪಾರಾಗಿ ಬಂದ ನಂತರದ ದಿನಗಳಲ್ಲಿ ‘ದೀನ ನಾನು/ ಸಮಸ್ತ ಲೋಕಕೆ ದಾನಿ ನೀನು’ ಎಂದು ರಾಜ್ ಪದೇಪದೇ ಹಾಡಿಕೊಳ್ಳುತ್ತಿದ್ದರು. ವ್ಯಕ್ತಿಯ ದೈನ್ಯತೆಯ ಅಭಿವ್ಯಕ್ತಿಯಾದ ಈ ಕೀರ್ತನೆಯನ್ನು ವಿಧಿವಶರಾಗುವ ಕೆಲ ತಾಸುಗಳ ಮುನ್ನವೂ ರಾಜ್ ಹಾಡಿಕೊಂಡಿದ್ದರಂತೆ. ಅವರ ಸಾವಿನ ನಂತರವೂ ಪ್ರಾರ್ಥನೆ ಮುಂದುವರಿದಿದೆ. ನಾನಾ ವಿಷಯಗಳಿಗಾಗಿ ರಾಜ್ ಸಮಾಧಿ ಮುಂದೆ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಈಗ ಹೇಳಿ, ಪ್ರಾರ್ಥನೆಗೆ ಎಷ್ಟು ಮುಖ?

ಹಸುಗೂಸಿನ ಅಳು. ಮರಣಶಯ್ಯೆಯಲ್ಲಿನ ವ್ಯಕ್ತಿಯ ರೋದನ. ದೇಗುಲದ ಘಂಟಾನಿನಾದ. ಬಯಲಿನಲ್ಲಿನ ಮೌನ. ನದಿತಟದಲ್ಲಿನ ಬಕಧ್ಯಾನ. ಗಾಂಧಿಯ ಉಪವಾಸ. ಥೆರೇಸಾ ಅಮೃತಹಸ್ತ….. ಈ ಆಳು, ನಗು, ವಿಸ್ಮಯ, ಗಾಂಭೀರ್ಯ, ಸಹನೆ, ಪ್ರೀತಿ- ಪ್ರತಿಯೊಂದೂ ಒಂದು ಪ್ರಾರ್ಥನೆ. ಎಲ್ಲ ಭಾಷೆಗಳಲ್ಲಿ ಎಲ್ಲ ಕಾಲಗಳಲ್ಲಿ ಎಲ್ಲ ದೇಶಗಳಲ್ಲಿ ಪ್ರಾರ್ಥನೆ ಜೀವಂತ. ಪ್ರಾರ್ಥನೆ ಸಂಜೀವಿನಿ; ಅಮೃತವರ್ಷಿಣಿ.

ಪ್ರಾರ್ಥನೆಯ ಸರಳ ಅರ್ಥ ಬೇಡುವುದು. ಯಾರನ್ನು? ಇಲ್ಲಿನ ದಾತ ದೇವರಲ್ಲದೆ ಬೇರೆ ಯಾರನ್ನೂ ಅಲ್ಲ(ಈ ದೇವರು ನಾಸ್ತಿಕರ ಪಾಲಿಗೆ ಅಗೋಚರ ಶಕ್ತಿ ಆಗಿರಬಹುದು). ಸೂತ್ರ ರೂಪದಲ್ಲಿ ಹೇಳುವುದಾದರೆ ಮನುಷ್ಯ ಹಾಗೂ ಬದುಕಿನ ಮೇಲೆ ಪ್ರಭಾವ ಬೀರುವ ಶಕ್ತಿಗೆ ಶಿರಬಾಗುವ ಶರಣಾಗತಿಯೇ ಪ್ರಾರ್ಥನೆ. ಕೋರಿಕೆ, ಪಾಪನಾಶ, ಮೋಕ್ಷಪ್ರಾಪ್ತಿ- ಹೀಗೆ ಪ್ರಾರ್ಥನೆಯ ಹರಹು ದೊಡ್ಡದು. ಹಿಂದೂ, ಮುಸ್ಲಿಂ, ಕ್ರಿಶ್ಚಯನ್, ಬೌದ್ಧ, ಜಿನ, ಎಲ್ಲ ಧರ್ಮಗಳ ಪ್ರಾರ್ಥನೆಯ ತಿರುಳು ಇದೇ.

ಅನುಭವಿಗಳ ಕಣ್ಣಲ್ಲಿ ಪ್ರಾರ್ಥನೆಗೆ ಎಷ್ಟೊಂದು ಮುಖಗಳಿವೆ ನೋಡಿ:

ಪ್ರಾರ್ಥನೆ ದೇವರನ್ನು ಬದಲಿಸುವುದಿಲ್ಲ ಪ್ರಾರ್ಥಿಸುವವನನ್ನೇ ಬದಲಿಸುತ್ತದೆ (ಸೊರೆನ್ ಕೇರ್ಕೆಗಾರ್ಡ್). ನೀನು ಪ್ರಾರ್ಥಿಸದಿದ್ದರೂ ಮಳೆ ಬರುತ್ತದೆ; ಸೂರ್ಯೋದಯವಾಗುತ್ತದೆ (ಸ್ಯಾಚೆನ್ ಪೈಜೆ). ಎಲ್ಲಿಯವರೆಗೆ ಪರೀಕ್ಷೆಗಳು ಇರುತ್ತವೆಯೋ ಆಲ್ಲಿಯವರೆಗೆ ಶಾಲೆಗಳಲ್ಲಿ ಪ್ರಾರ್ಥನೆಗಳು ಇರುತ್ತವೆ (ಅನಾಮಿಕ). ದೇವರೊಂದಿಗೆ ಮಾತನಾಡುವಾಗ ಪ್ರಾರ್ಥಿಸುತ್ತೇವೆ. ಅವನು ನಮ್ಮೊಂದಿಗೆ ಮಾತನಾಡುವಾಗ ನಮಗೆ ಅರಳು ಮರಳು (ಜೇನ್ ವ್ಯಾಗನರ್). ದೇವರೇನಾದರೂ ದೊಡ್ಡ ಆಸ್ಪಿರಿನ್ ಗುಳಿಗೆ ಆಗಿದ್ದರೆ ತುಂಬಾ ಜನ ಆತನನ್ನು ಪ್ರಾರ್ಥಿಸುತ್ತಿದ್ದರು. ಬಹಳಷ್ಟು ಜನ ತಮಗೆ ಸಂಕಟ ಒದಗಿದಾಗಷ್ಟೇ ಪ್ರಾರ್ಥಿಸುತ್ತಾರೆ (ಬಿ.ಗ್ರಹಾಂ ಡೈನೆರ್ಟ್). ದೇವರೊಂದಿಗಿನ ಮಾತು ಪ್ರಾರ್ಥನೆ; ಆತನನ್ನು ಆಲಿಸುವಿಕೆ ಧ್ಯಾನ (ಅನಾಮಿಕ). ಪ್ರಾರ್ಥನೆಗೆ ನಾಲಗೆಗಿಂಥ ಹೃದಯ ಮುಖ್ಯ (ಆಡಂ ಕ್ಲಾರ್ಕ್). ಬಹಳಷ್ಟು ಜನ ಪ್ರಾರ್ಥಿಸುವುದಿಲ್ಲ ಕೇವಲ ಬೇಡುತ್ತಾರೆ (ಜಾರ್ಜ್ ಬರ್ನಾರ್ಡ್ ಷಾ). ಸಹನೆ ಬಹುದೊಡ್ಡ ಪ್ರಾರ್ಥನೆ (ಬುದ್ಧ). ಪ್ರಾರ್ಥಿಸು; ದೇವರು ಚಿಂತೆಗೆ ಈಡಾಗುತ್ತಾನೆ (ಮಾರ್ಟಿನ್ ಲೂಥರ್ ಕಿಂಗ್). ಪ್ರಾರ್ಥಿಸುವುದೆಂದರೆ ಬೇಡುವುದಲ್ಲ ಅದು ಪ್ರತಿದಿನ ನಮ್ಮ ಬಲಹೀನತೆಗಳನ್ನು ಒಪ್ಪಿಕೊಳ್ಳುವ ವಿಧಾನ.  ಪ್ರಾರ್ಥನೆಯಲ್ಲಿ ಪದಗಳಿಲ್ಲದ ಹೃದಯ ಇರುವುದು ಒಳ್ಳೆಯದು (ಮಹಾತ್ಮ ಗಾಂಧಿ). ಸಂಕಟ ಬಂದಾಗ ವೆಂಕಟರಮಣ (ಗಾದೆ). ಕಣ್ಣಿಲ್ಲದವರು ಕೂಡ ಸರತಿಯಲ್ಲಿನಿಂತಿದ್ದಾರೆ. ಅವರು ಕೂಡ ನಿನ್ನ ಭಕ್ತರೇ (ಜಾನ್ ಮಿಲ್ಪನ್). ಓ ದೇವರೇ ನಾನು ನರಕದ ಭಯದಿಂದ ನಿನ್ನನ್ನು ಆರಾಧಿಸಿದರೆ ನನ್ನನ್ನು ನರಕಕ್ಕೆ ತಳ್ಳು. ಸ್ವರ್ಗ ಪಡೆಯಬೇಕೆಂದು ಆರಾಧಿಸಿದರೆ ನನ್ನನ್ನು ಅಲ್ಲಿಗೆ ಕಳುಹಿಸಬೇಡ. ನಿನ್ನನ್ನು ದೇವರು ಆನ್ನುವ ಕಾರಣಕ್ಕೆ ಆರಾಧಿಸಿದರೆ ನನ್ನನ್ನು ನಿನ್ನೆಡೆಗೆ ಕರೆಯಿಸಿಕೊ (ರಬಿಯಾ, ತತ್ವಜ್ಞಾನಿ). ಸೀಸೆಯ ಬಿರಡೆಯನ್ನು ದಬ್ಬಿಕೊಂಡು ಹೊರಬರುವ ವೈನ್ ನೀತಿಯಂತೆ ನನ್ನ ಪ್ರಾರ್ಥನೆ. ಒಳಗೊಂದು ರುಚಿಯಿದೆ ಹಾಗು ಅದು ಹೊರಬರಲೇಬೇಕಿದೆ (ಹೆನ್ರಿ ವಾರ್ಡ್ ಬೀಚರ್).

ನಾಗರಿಕತೆಯಷ್ಟೇ ಪ್ರಾರ್ತನೆಯೂ ಪ್ರಾಚೀನ. ಹುಟ್ಟಿದಾಗ ಮಗು ಅಳುತ್ತದಲ್ಲ ಆ ಅಳುವಿನಲ್ಲಿ ಎದೆಹಾಲಿಗಾಗಿ ತಾಯಿದೇವರನ್ನು ಬೇಡುವ ಮಗುವಿನ ಪ್ರಾರ್ಥನೆಯಿದೆ. ಬೇಡುವಿಕೆಗಷ್ಟೇ ಪ್ರಾರ್ಥನೆ ಸೀಮಿತವಲ್ಲ. ಧನ್ಯವಾದ, ಮನವಿ, ಶರಣಾಗತಿ, ಹೊಗಳಿಕೆ- ಇವೆಲ್ಲ ಪ್ರಾರ್ಥನೆಯ ಮುಖಗಳು.

ಇಂಗ್ಲಿಷ’ನ ಪ್ರೆಯೆರ್ ಪದದ ಕನ್ನಡರೂಪ ಪ್ರಾರ್ಥನೆ. ಲ್ಯಾಟಿನ್‍ನ ಪೀಕೇರಿಯಸ್ ಪದದಿಂದ ಪ್ರೇಯರ್ ಉತ್ಪತ್ತಿಯಾಗಿದೆ. ಪೀಕೇರಿಯಸೆಂದರೆ ಬೇಡುವುದರಿಂದ ದೊರೆತದ್ದು ಎಂದರ್ಥ. ಈ ಪ್ರಾರ್ಥನೆ ಜಗತ್ತಿನ ಎಲ್ಲೆಡೆಗಳಲ್ಲೂ ಎಲ್ಲ ಭಾಷೆಗಳಲ್ಲೂ ಎಲ್ಲಕಾಲದಲ್ಲೂ ನಡೆಯುತ್ತಲೇ ಇರುತ್ತದೆ. ಅದು ಅವಿರತವಾದುದು. ಅವಿನಾಶಿಯಾದುದು. ಕಾಲದೇಶ ಧರ್ಮಗಳನ್ನು ಮೀರಿದುದು.

ಪ್ರಾರ್ಥನೆ ಬಹುಬಗೆಯದಾದರೂ ಸ್ಥೂಲವಾಗಿ ನಾಲ್ಕು ರೀತಿಗಳಲ್ಲಿ ಕಾಣಬಹುದು. ಧ್ಯಾನ ರೂಪದ ಪ್ರಾರ್ಥನೆ ಮೊದಲನೆಯದು. ಎರಡನೆಯ ರೀತಿಯದು ‘ಕೋರಿಕೆ’. ಮೂರನೆಯದು ಸಾಂಪ್ರದಾಯಿಕ ಪ್ರಾರ್ಥನೆ. ಕೊನೆಯದು ಸಂವಾದ ರೀತಿಯ ಪ್ರಾರ್ಥನೆ.

ಪದಕ್ಕೆ ಜೋತುಬಿದ್ದರೆ ಧ್ಯಾನ ಹಾಗೂ ಪ್ರಾರ್ಥನೆಗೆ ಬೇರೆಯದೇ ಆಸ್ತಿತ್ವವಿದೆ. ವಿಶಾಲ ಅರ್ಥದಲ್ಲಿ ನೋಡಿದರೆ ಪ್ರಾರ್ಥನೆ ಹಾಗೂ ಧ್ಯಾನ ಬೇರೆಬೇರೆಯಲ್ಲ ಬೆಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಉಪ ಕುಲಪತಿ ಡಾ.ಎಂ.ಎಸ್.ತಿಮ್ಮಪ್ಪ ಕೂಡ ಇದನ್ನೇ ಹೇಳುತ್ತಾರೆ. ಅವರ ಪ್ರಕಾರ ಎರಡಕ್ಕೂ ಇರುವ ವ್ಯತ್ಯಾಸ ಸರಳವಾದುದು. ದೇವರಲ್ಲಿ (ಶಕ್ತಿಯಲ್ಲಿ) ತನ್ನ ಕೋರಿಕೆಯನ್ನು ಹೇಳಿಕೊಳ್ಳುವುದು ಪ್ರಾರ್ಥನೆ. ಆ ಶಕ್ತಿಯೊಂದಿಗೇ ನೇರವಾಗಿ ಸಂವಹನ ನಡೆಸುವುದು ‘ಧ್ಯಾನ’.  ನಿರ್ದಿಷ್ಟ ವಸ್ತು ಹಾಗೂ ವಿಷಯಕ್ಕೆ ಸಂಬಂಧಿಸಿದ್ದು ‘ಧ್ಯಾನ’. ಈ ಧ್ಯಾನದಲ್ಲಿ ಶಬ್ಬ ಬೆಳಕು ಕೇಂದ್ರವಾಗಿರುವುದೂ ಇದೆ.

‘ಬೇಡಿಕೆ’ ಪ್ರಾರ್ಥನೆಯ ಎರಡನೆಯ ಮುಖ. ಬೇಡುವುದಾದರೂ ಏನನ್ನು? ಅದು ಪದಾರ್ಥವಾಗಿರಬಹುದು, ಪದವಿಯಾಗಿರಬಹುದೂ, ದ್ರವ್ಯವಾಗಿರಬಹುದು, ಆರೋಗ್ಯವಾಗಿರಬಹುದು, ತಿಳಿವಳಿಕೆಯಾಗಿರಬಹುದು. ಬೇಡಿಕೆಗಳಿಗೆ ಎಲ್ಲೆಯಾದರೂ ಎಲ್ಲಿ? ಹಾಗೆಂದು ಬೇಡಿಕೆಗಳೆಲ್ಲವೂ ಸ್ವಾರ್ಥವೇ ಆಗಿರಬೇಕೆಂದಿಲ್ಲ.

‘ಶಕ್ತಿಯ ಕೊಡು, ಶಕ್ತಿಯ ಕೊಡು
ಶಕ್ತಿಯ ಕೊಡು ಹೇ ಪ್ರಭೂ,
ಸತ್ಯಕಾಗಿ ನಿಲುವ ಛಲವ
ದೀಪ್ತಗೊಳಿಸು ನನ್ನೊಳು’            (ಜಿ. ಎಸ್.ಶಿವರುದ್ರಪ್ಪ)
– ಎನ್ನುವ ರೀತಿಯ ಸಜ್ಜನ ಪ್ರಾರ್ಥನೆಗೂ ಅವಕಾಶವಿದೆ.

ಪುರಾಣ, ಧಾರ್ಮಿಕ ಗ್ರಂಥ- ಪಠ್ಯಗಳ ಪಠಣವನ್ನು ಒಳಗೊಂಡಿರುವ ಸಾಂಪ್ರದಾಯಿಕ ಪ್ರಾರ್ಥನೆ ಬಹು ಜನಪ್ರಿಯವಾದುದು. ಜಾತ್ರೆ, ಉತ್ಸವಗಳಲ್ಲಿನ ಸಾಮೂಹಿಕ ಪ್ರಾರ್ಥನೆಯೂ ಸಾಂಪ್ರದಾಯಿಕವೇ (ರಂಜಾನ್, ಬಕ್ರಿದ್ ಹಬ್ಬಗಳಲ್ಲಿನ ಮುಸಲ್ಮಾನರ ಪ್ರಾರ್ಥನೆಯ ಚಿತ್ರ ಅದ್ಬುತ ಕಲಾಕೃತಿಯಂತೆ ಕಾಣುತ್ತದಲ್ಲವೇ?). ಮುಕುಂದಮಾಲಾ (ಕುಲಶೇಖರ ಆಳ್ವಾರ್), ಭಗವದ್ಗೀತೆ, ಮಂಕುತಿಮ್ಮನ ಕಗ್ಗ ಕೀರ್ತನೆಗಳು, ವಚನಗಳು, ರಾಮಾಯಣ, ಮಹಾಭಾರತ, ಕುರಾನ್, ಬೈಬಲ್- ಇವೆಲ್ಲ ಸಾಂಪ್ರದಾಯಿಕ ಪ್ರಾರ್ಥನೆಯ ಕೆಲವು ಪಠ್ಯಗಳು.

ತನ್ನ ಯೋಚನೆ, ಭಾವನೆ ಹಾಗೂ ಅಗತ್ಯಗಳ ಕುರಿತಂತೆ ಅಗೋಚರ ಶಕ್ತಿಯೊಂದಿಗೆ ನಡೆಸುವ ನೇರ ಸಂವಾದ ಪ್ರಾರ್ಥನೆಯ ಇನ್ನೊಂದೂ ಮುಖ. ಸಂವಾದ ರೀತಿಯ ಪ್ರಾರ್ಥನೆ ಆಮೇರಿಕದಲ್ಲಿ ಜನಪ್ರಿಯ. ಪ್ರಾರ್ಥನೆ ಆರೋಗ್ಯಕ್ಕೆ ಪೂರಕ ಎನ್ನುವ ನಂಬಿಕೆಯಿದೆ. ಅಮೇರಿಕದಲ್ಲಿ ೬೦ಕ್ಕೂ ಹೆಚ್ಚು ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಧಾರ್ಮಿಕ-ಆಧ್ಯಾತ್ಮಿಕ ವಿಷಯಗಳನ್ನು ಭೋಧಿಸುತ್ತವೆ ಎನ್ನುವ ಅಂದಾಜಿದೆ. ಆಧ್ಯಾತ್ಮಿಕ ಕೇಂದ್ರಗಳನ್ನು ಹೊಂದಿರುವ ಆಸ್ಪತ್ರೆಗಳೂ ಅಲ್ಲಿವೆ.

ಪ್ರಾರ್ಥನೆಗೆ ಔಷಧದ ಶಕ್ತಿಯೂ ಇದೆ. ರಕ್ತ ಚಲನೆಗೆ ಚೈತನ್ಯ. ಅಧಿಕ ರಕ್ತದೊತ್ತಡ ಯಥಾಸ್ಥಿತಿಯಲ್ಲಿರಲು ನೆರವು. ಮಾನಸಿಕ ಉದ್ವೇಗ ಶಮನ. ಸ್ನಾಯು ಸೆಳೆತ- ತಲೆಶೂಲೆ ಗುಣ. ಆತ್ಮವಿಶ್ವಾಸ ವೃದ್ಧಿ. ಶರೀರದ ತೂಕಕ್ಕೆ ಕಡಿವಾಣ. ಋತುಸ್ರಾವ ಮುನ್ನಾ ಆತಂಕಗಳಿಗೆ ವಿರಾಮ. ಉಸಿರಾಟದ ತೊಂದರೆಗಳ ನಿವಾರಣೆ. ಬಿಳಿ ರಕ್ರಕಣಗಳ ಉತ್ಪಾದನೆಗೆ ಇಂಬು. ಈ ಎಲ್ಲ ವಿವರಗಳು ಜಾಹಿರಾತೊಂದರ ತುಣಕುಗಳಲ್ಲ. ಧ್ಯಾನದಿಂದ ಪ್ರಾಪ್ತವಾಗುವ ಫಲಗಳು. ಈ ಮಾತು ಸಾಧುಸಂತರ ಹೇಳಿಕೆಯಲ್ಲ. ವೈಜ್ಞಾನಿಕ ಅಧ್ಯಯನಗಳ ಸಾರ. ಉಳಿದವರಿಗಿಂತಲೂ ಧ್ಯಾನ ಮಾಡುವವರು ಹೆಚ್ಚಿನ ಆರೋಗ್ಯವಂತರು ಎನ್ನುವುದು ಈ ಎಲ್ಲ ಅಧ್ಯಯನಗಳ ಷರಾ.

ಅಮೆರಿಕದಲ್ಲಂತೂ ಪರ್ಯಾಯ ವೈದ್ಯ ಪದ್ದತಿಯಾಗಿ ಪ್ರಾರ್ಥನೆ ಚಾಲ್ತಿಯಲ್ಲಿದೆ. ಶೇ. ೪೩ ಅಮೆರಿಕನ್ನರು ಆರೋಗ್ಯಕ್ಕಾಗಿ ನಿಯಮಿತವಾಗಿ ಪ್ರಾರ್ಥಿಸುತ್ತಾರೆ ಎನ್ನುವುದು ಒಂದು ಅಂದಾಜು.

ಧ್ಯಾನ ಹಾಗೂ ಆರೋಗ್ಯದ ಮಾತು ಬಂದಾಗಲೆಲ್ಲ ಸರ್ಜನ್ ರ್‍ಯಾನ್‍ಡಾಲ್ಫ್  ಸಿ. ಬೈರ್ಡ್ ಅವರ ಅಧ್ಯಯನವನ್ನು ಉಲ್ಲೇಖಿಸಲೇಬೇಕು. ೧೯೮೮ರಲ್ಲಿ ನಡೆದ ಈ
ಅಧ್ಯಯನದ ವಿವರಗಳು ‘ಸದರನ್ ಮೆಡಿಕಲ್ ಜರ್ನಲ್’ನಲ್ಲಿ ಪ್ರಕಟವಾಗಿವೆ. ೩೯೩ ಹೃದ್ರೋಗಿಗಳನ್ನು ಆಧ್ಯಯನಕ್ಕೆ ಬಳಸಿಕೊಂಡಿರುವ ಬೈರ್ಡ್ ಪ್ರಾರ್ಥನೆ ಹಾಗೂ ಆರೋಗ್ಯಕ್ಕಿರುವ ಧನಾತ್ಮಕ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ. ೧೯೯೮ರಲ್ಲಿ ೪೦ ಏಡ್ಸ್ ಸೋಂಕು ಹೊಂದಿದ ರೋಗಿಗಳ ಮೇಲೆ ನಡೆದ ಅಧ್ಯಯನ, ೯೯ರಲ್ಲಿ ಕನ್ಸಾಸ್ ನಗರದ ಸೇಂಟ್‍ಲ್ಯೂಕ್ಸ್ ಆಸ್ತತ್ರೆಯಲ್ಲಿ ನಡೆದ ಅಧ್ಯಯನ, ಕೂಡ ಇದೇ ಮಾತು ಹೇಳುತ್ತವೆ.

ಕೆಲವು ಅಧ್ಯಯನಗಳು ಪರೋಕ್ಷ ಪ್ರಾರ್ಥನೆಯ ಪರಿಣಾಮವನ್ನು ಗಮನಿಸಿರುವುದೂ ವಿಶೇಷ. ಅಂದರೆ, ಅಪರಿಚಿತ ಆದರೆ ನಿರ್ದಿಷ್ಟ ರೋಗಿಗಳ ಆರೋಗ್ಯ
ಸುಧಾರಣೆಗಾಗಿ ಧಾರ್ಮಿಕ ಗುಂಪುಗಳು ಸಲ್ಲಿಸುವ ಪ್ರಾರ್ಥನೆ ಇದಾಗಿದೆ.

ಲಾಸ್ ಏಂಜಲೀಸ್‍ನ ಸೆಡಾರ್‍-ಸಿನಾಯ್ ಮೆಡಿಕಲ್ ಸೆಂಟರ್ ನ ಸಂಶೋಧಕರು ಹೃದ್ರೋಗಿಗಳ ಮೇಲೆ ೧೬ ವಾರಗಳ ಕಾಲ ವಿವಿಧ ಧ್ಯಾನ ಸಂಬಂಧಿ ಪ್ರಯೋಗಗಳನ್ನು ನಡೆಸಿದ ನಂತರ ಕೈಗೊಂಡ ತೀರ್ಮಾನಗಳು ಇಂತಿವೆ:

ಧ್ಯಾನವನ್ನು ಅಭ್ಯಾಸ ಮಾಡಿದ ರೋಗಿಗಳ ರಕ್ತದೊತ್ತಡ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಯಿತು. ರಕ್ತದಲ್ಲಿನ ಗ್ಲುಕೋಸ್ ಮತ್ತು ಇನ್ಸುಲಿನ್ ಪ್ರಮಾಣದಲ್ಲಿ ಗಣನೀಯ ಸುಧಾರಣೆಯಾಯಿತು. ಹೃದ್ರೋಗ ಮಾತ್ರವಲ್ಲ; ಎಲ್ಲ ಸಂದರ್ಭಗಳಲ್ಲೆಲ್ಲ ಧ್ಯಾನ ಆರೋಗ್ಯಕ್ಕೆ ಸಂಜೀವಿನಿ ಇದ್ದಂತೆ.

ಅಂದಹಾಗೆ, ಪ್ರಾರ್ಥನೆಗೂ ಆರೋಗ್ಯಕ್ಕೂ ಪೂರಕ ಸಂಬಂಧವಿದೆ ಎನ್ನುವುದು ಸರ್ವಸಮ್ಮತ ನಿಲುವೇನೂ ಅಲ್ಲ. ೨೦೦೬ರ ಮಾರ್ಚ್‌ನಲ್ಲಿ ನಡೆದ ನ್ಯೂಯಾರ್ಕ್ ಕೇಂದ್ರಿತ ಅಧ್ಯಯನವೊಂದು ಹೃದ್ರೋಗಿಗಳ ಮೇಲೆ ಪ್ರಾರ್ಥನೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದಿದೆ. ವಿಜ್ಞಾನ ಮತ್ತು ಧಾರ್ಮಿಕ ಸಂಶೋಧನೆಗಳನ್ನು ಬೆಂಬಲಿಸುವ ‘ಟೆಂಪ್ಲೆಟನ್ ಪ್ರತಿಷ್ಠಾನ’ ಪ್ರಾಯೋಜಿಸಿದ ಈ ಸಂಶೋಧನೆಯನ್ನು ೬ ವೈದ್ಯಕೀಯ ಕೇಂದ್ರಗಳಲ್ಲಿನ ೧,೮೦೦ ರೋಗಿಗಳ ಮೇಲೆ ನಡೆಸಲಾಗಿತ್ತು. ನಿರ್ದಿಷ್ಟ ರೋಗಿಗಳಿಗಾಗಿ ಮೂರು ಕ್ರಿಶ್ಚಿಯನ್ ಗುಂಪುಗಳು ಪ್ರಾರ್ಥಿಸಿದ್ದವು. ಸರ್ಜರಿಯ ಮುನ್ನಾ ದಿನದಿಂದ ಅನಂತರದ ಒಂದು ತಿಂಗಳವರೆಗೆ ರೋಗಿಗಳ ನಿಗಾ ವಹಿಸಿದ ‘ಹಾರ್ವರ್ಡ್ ಮೆಡಿಕಲ್ ಸ್ಕೂಲ್’ನ ಡಾ. ಹರ್ಬ‌‍ರ್ಟ್ ಬೆನ್ಸನ್ ಮತ್ತು ಇತರ ವಿಜ್ಞಾನಿಗಳು, ಅಧ್ಯಯನದ ಚೌಕಟ್ಟಿನಲ್ಲಿದ್ದ ರೋಗಿಗಳ ಆರೋಗ್ಯದ ತೊಂದರೆ ರಹಿತ ಸುಧಾರಣೆ ನಿಟ್ಟಿನಲ್ಲಿ ಪ್ರಾರ್ಥನೆಯ ಪರಿಣಾಮ ಶೂನ್ಯ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ.

ಸಂಶೋಧನೆ, ಸಮೀಕ್ಷೆಗಳ ಮಾತು ಏನೇ ಇರಲಿ. ಧ್ಯಾನದಿಂದ ಮಾನಸಿಕ ನೆಮ್ಮದಿ ಹಾಗೂ ಬದುಕಿಗೆ ಭರವಸೆ ಲಭಿಸುವ ಅನುಭವಕ್ಕೆ ಪುರಾವೆಗಳನ್ನು ಹುಡುಕುವುದು ವ್ಯರ್ಥ. ನಮ್ಮಲ್ಲಿನ ಹೈಟೆಕ್ ಆಸ್ಪತ್ರೆಗಳ ಅಂಗಳಗಳಲ್ಲಿನ ಗಣೇಶ, ಕ್ರಿಸ್ತನ ಪ್ರತಿಮೆಗಳು ಸೂಚಿಸುವುದೂ ಇದನ್ನೇ ಅಲ್ಲವೇ?

ಪ್ರಾರ್ಥನೆ ಒಂದು ಆಟ. ಎಂಥ ಆಟವೆನ್ನುತ್ತೀರಿ. ಅದು ಕಾಡುವ, ಛೇಡಿಸುವ, ಒಲಿಸಿಕೊಳ್ಳುವ, ಬೇಡುವ ಆಟ. ನಿನ್ನನುಳಿದರೆ ಅನ್ಯ ಜೀವನವಿಲ್ಲ ಎಂದು ದೈವವನ್ನು ನಂಬುವ ಆಟ. ಈ ಆಟದಲ್ಲಿ ದೈನ್ಯತೆಯಿದೆ. ಅಮಾಯಕತೆಯಿದೆ. ಕೆಣಕುವ, ರಮಿಸುವ ತುಂಟತನವಿದೆ. ‘ಯಾರು ಬದುಕಿದರು ನಿನ್ನ ನಂಬಿ’ ಎನ್ನುವ ಪ್ರಶ್ನೆಯಿದೆ.

ಈ ಆಟ ಹೇಗೆ ಸಾಗುತ್ತದೆ ನೋಡಿ:
‘ಬೆಟ್ಟವೂ ನಿನ್ನದೆ, ಬಯಲೂ ನಿನ್ನದೆ,
-ಹಬ್ಬಿ ನಗಲಿ ಪ್ರೀತಿ!
ನೆಳಲೋ ಬಿಸಿಲೋ, ಎಲ್ಲವೂ ನಿನ್ನವೆ
-ಇರಲಿ ಏಕರೀತಿ!
-ಕೆ. ಎಸ್. ನರಸಿಂಹಸ್ವಾಮಿ

ಕವಿಯ ಪ್ರಾರ್ಥನೆ ಭಗವಂತನ ಅಗಾಧ ಶಕ್ತಿಯ ಕುರಿತು ಹೇಳುತ್ತದೆ.

‘ಕರುಣಾಳು, ಬಾ, ಬೆಳಕೆ, ಮುಸುಕಿದೀ ಮಬ್ಬಿನಲಿ,
ಕೈಹಿಡಿದು ನಡೆಸೆನ್ನನು.
ಇರುಳು ಕತ್ತಲೆಯ ಗವಿ; ಮನೆದೂರಕ್ಕೆ; ಕನಿಕರಿಸಿ,
ಕೈಹಿಡಿದು ನಡೆಸೆನ್ನನು’
–  ಬಿ.ಎಂ.ಶ್ರೀ.

ಮೇಲಿನ ಪದ್ಯ ಬೇಡುವವನ ಅಸಹಾಯಕತೆ ಹಾಗೂ ದಾತನ ಸರ್ವಶಕ್ತಿಯ ಕರುಣೆಯ ಕುರಿತು ಮಾತನಾಡುತ್ತದೆ. ‘ಬಂಧುಗಳು ಎನಗಿಲ್ಲ /ಬದುಕಿನಲಿ ಸುಖವಿಲ್ಲ/ ನಿಂದೆಯಲಿ ನೊಂದೆನೈ ನೀರಜಾಕ್ಷ’ ಎನ್ನುವ ಗೋಪಾಲದಾಸರ ಕೀರ್ತನೆಯಲ್ಲಿ ಆರ್ತ ಮೊರೆಯಿದೆ.

‘ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ
ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ.
ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ
ನಿಮ್ಮ ಶರಣರ ಪಾದವಲ್ಲದೆ ಅನ್ಯ ವಿಷಯಕ್ಕೆಳಸದಂತೆ ಇರಿಸು
ಕೂಡಲಸಂಗಮದೇವ’

– ಮೇಲಿನ ಬಸವಣ್ಣನ ವಚನದಲ್ಲಿ ಶರಣಾಗತಿ, ದೈನ್ಯತೆಯಿದೆ. ದೇವರ ಅಸ್ತಿತ್ವದಲ್ಲೇ ತನ್ನ ಸಾರ್ಥಕತೆ ಕಂಡುಕೊಳ್ಳುವ ಹಂಬಲವಿದೆ. ಇದೇ ಬಸವಣ್ಣ ನೀನೊಲಿದರೆ ವಿಷವಮೃತವಹುದಯ್ಯ/ ನೀನೊಲಿದರೆ ಸಕಲ ಪಡಿಪದಾರ್ಥ ಇದಿರಲಿಪ್ಪವು’ ಎಂದು ಭಗವಂತನನ್ನು ಅಟ್ಟಕ್ಕೇರಿಸುತ್ತಾರೆ.

‘ಭಕ್ತಿ’ ಎನ್ನುವ ಕವಿತೆ ನೋಡಿ:

ಮಾನಿನಿಯ ಮೊಲೆ ಹಿಡಿದ ಹಸ್ತಗಳಿಂದ
ನಿನ್ನ ಅಡಿ ಮುಟ್ಟಿರುವೆ
ಆ ಪುಲಕ ನಿನ್ನಡಿಯ ಮಿಡುಕಿಸಲಿ

ಎಂದು ಆಘಾತಕರ ಚಿತ್ರದ ಮೂಲಕ ಕವಿತೆ ಆರಂಭಿಸುವ ಎಸ್. ಮಂಜುನಾಥ್-

‘ಅವಳ ಸೊಂಟ ಬಳಸಿದ ತೋಳಿಂದ ನಿನ್ನ
ತಬ್ಬಿಕೊಳ್ಳುವೆ- ಆ ಸುಖ ನಿನ್ನ ಕೈಕಾಲುಗಳ ಚಿಗುರಿಸಲಿ
ಸುರಿದ ನೀಳ ಕೇಶವನ್ನೆತ್ತಿ ಮೂಸಿರುವೆ
ಈ ಹೂವಲ್ಲಿ ಆ ಪರಿಮಳ
ನಿನಗೆ ಮೂಗು ಮೂಡಿಸಲಿ’

– ಎನ್ನುತ್ತಾರೆ. ಏನಿರಬಹುದು ಕವಿಯ ಉದ್ದೇಶ. ಅವರೇ ಹೇಳುತ್ತಾರೆ: ‘ನೀನು ಬಯಲು ಘನಗೊಂಡ ಕಲ್ಲು ಲಿಂಗವೇ!/ ನನ್ನ ಇಂದ್ರಯಗಳು ನಿನ್ನನ್ನೆಚ್ಚರಿಸಲಿ’. ತನ್ನ ಇಂದ್ರಿಯಗಳ ಮೂಲಕ ದೇವರನ್ನು ರೂಪಿಸುವ, ಎಚ್ಚರಿಸುವ ಕವಿ ಪ್ರತಿಭಗೆ ಶರಣು.

ನವ್ಯ ಕಾವ್ಯದ ನೇತಾರ ಮೊಗೇರಿ ಗೋಪಾಲಕೃಷ್ಣ ಅಡಿಗರ ‘ಪ್ರಾರ್ಥನೆ’ ಏನಿದ್ದೀತು? ಅವರ ಪ್ರಾರ್ಥನೆ ಪ್ರಾರಂಭವಾಗುವುದೇ, ‘ಪರಾಕು ಪಂಪನ್ನೊತ್ತಿಯೊತ್ತಿ ನಡ ಬಗ್ಗಿರುವ/ ಬೊಗಳು ಸನ್ನಿಯ ಹೊಗಳುಭಟ್ಟ ಖಂಡಿತ ಅಲ್ಲ’ ಎನ್ನುವ ಆತ್ಮಾಭಿಮಾನದ ನುಡಿಗಳಿಂದ.

‘ತಿಂದದ್ದು ಸರಿಯಾಗಿ ರಕ್ತವಾಗುವ ಹಾಗೆ
ಅನುಗ್ರಹಿಸು; ಅರಗದಂಥ ಕಚ್ಚಾ ಗಾಳಿಗೀಳುಗಳ
ಕಾಗದದ ಮೇಲೆಲ್ಲ ಕಾರಿಕೊಳ್ಳದ ಹಾಗೆ
ಏರ್ಪಡಿಸು ಸಹಜ ಹೊರದಾರಿಗಳ; ರಹದಾರಿಗಳ
ಕೊಡು ಎಲ್ಲರಿಗೂ ತಮ್ಮ ತಮ್ಮ ಖಾಸಗಿ ಮನೆಗೆ.
ಎಲ್ಲಕ್ಕಿಂತ ಹೆಚ್ಚಾಗಿ
ಒಂದು ತುತ್ತನ್ನ ಮೂವತ್ತೆರಡು ಸಲ ಜಗಿದು, ನುರಿಸಿ
ಜೊಲ್ಲಿಗೆ ಮಿಲಾಯಿಸುವಷ್ಟು ಆರೋಗ್ಯ
ಶಾಸ್ತ್ರದ ಮೊದಲ ಪಾಠ ಕಲಿಸು. ಕಲಿಸದ್ದಿದರೂ ಕೂಡ
ಕಲಿತಿಲ್ಲ ಎಂಬ ನೆನಪುಳಿಸು. ಉಳ್ಳಾಗಡ್ಡೆ
ತಿಂದು ಕೊರಳೆಲ್ಲ ಕಸ್ತೂರಿಯರಾಗುವುದೆಂಬ
ಭ್ರಮೆಯ ಕಳೆ. ದೊಡ್ಡ ದೊಡ್ಡ ಮಾತು ಬೆಲೂನು
ಹಿಗ್ಗುವಾಗ್ಗೆಲ್ಲ ತಾಗಿಸು ನಿಜದ ಸೂಜಿಮೊನೆ.
ಕವಿ ಅಡಿಗರದು ಅದ್ಭುತ ಪ್ರಾರ್ಥನೆ!

‘ದೇವರು ಬೇಕು ಆದರೆ ಅವನಿಲ್ಲ’ ಎನ್ನುವುದು ಎ.ಎನ್.ಮೂರ್ತಿರಾಯರ ಪ್ರಸಿದ್ದ ಹೇಳಿಕೆ. ಈ ಮಾತಿನಲ್ಲು ಒಂದು ಪ್ರಾರ್ಥನೆ ಇಣುಕುತ್ತಿದೆ ಅಲ್ಲವೇ?

ಪ್ರಾರ್ಥನೆಯ ಅಡಿಪಾಯ ನಂಬಿಕೆ. ‘ಗೊಂಬೆಗೆ ಕೈಮುಗಿದರೂ ನಂಬಿಕೆ ಇರಬೇಕು’ ಎನ್ನುವುದು ಕಿಟೆಲ್ ಪದಕೋಶದಲ್ಲಿನ ಒಂದು ಗಾದೆ.

ಪ್ರಾರ್ಥನೆಯ ಪೂರ್ಣಫಲ ದೊರಕಬೇಕಾದರೆ ನಂಬಿಕೆ ಇರಲೇಬೇಕು. ಅಪನಂಬಿಕೆಯಿರುವ ವೈದ್ಯನ ಮದ್ದು ಹೇಗೆ ವ್ಯರ್ಥವೋ ನಂಬಿಕೆಯಿಲ್ಲದೆ ಮಾಡುವ
ಪ್ರಾರ್ಥನೆಯೂ ವ್ಯರ್ಥ.

ಒಂದು ಕಥಯಿದೆ:
ದೋಣಿಯೊಂದು ನದಿಯಲ್ಲಿ ತೇಲುತ್ತಿದೆ. ಅದ್ಯಾವ ಆಳದಲ್ಲಿತ್ತೋ ಸುಳಿ, ಪ್ರತ್ಯಕ್ಷವಾಗಬೇಕೆ? ದೋಣಿಯಲ್ಲಿದ್ದವರು ಮೂರೇ ಮಂದಿ. ಅವರಲ್ಲೊಬ್ಬ ಕ್ರಿಶ್ಚಯನ್.  ಕಾಪಾಡು’ ಎಂದು ಆತ ಶಿಲುಬೆ ಕಣ್ಣಿಗೊತ್ತಿಕೊಂಡ. ಒಡನೆಯೇ ಪ್ರತ್ಯಕ್ಷನಾದ ಕ್ರಿಸ್ತ ಆತನನ್ನು ದಡ ಸೇರಿಸಿದ. ಮತ್ತೊಬ್ಬ ಮುಸ್ಸಿಂ. ‘ಅಲ್ಲಾ ಎಲ್ಲಿರುವೆ’ ಎಂದು ಆಕಾಶ ನೋಡಿದ. ಆತನೂ ದಡಮುಟ್ಟಿದ. ಮೂರನೆಯವ ಹಿಂದೂ. ‘ಕೃಷ್ಣ ಕಾಪಾಡು’ ಎಂದ. ತಕ್ಷಣವೇ ‘ಈಶ್ವರಾ ರಕ್ಷಿಸು’ ಎಂದು ಕೂಗಿದ. ಕ್ಷಣಾರ್ಧದಲ್ಲಿ ಆತ ಹತ್ತಾರು ದೇವರನ್ನು ಪ್ರಾರ್ಥಿಸಿದ. ದೋಣಿ ಮುಳುಗಿಹೋಯಿತು.

ಪ್ರಾರ್ಥನೆಯಲ್ಲಿ ನಂಬಿಕೆ ಹಾಗೂ ಚಂಚಲತೆಯ ಪರಿಣಾಮಗಳನ್ನು ಈ ಕಥಗಿಂತಲೂ ಸೊಗಸಾಗಿ ಹೇಳುವುದು ಕಷ್ಟ.

‘ಓಟವೇ ಗುರಿ, ಗಡಿಯಾರವೇ ದೇವರು’ ಎನ್ನುವಂಥ ಕಾಲವಿದು. ಹಾಂ, ಈ ಗಾಳಿಗಾಲಕ್ಕೆ ಜಾಗತೀಕರಣ ಯುಗ, ಮಾಹಿತಿ ತಂತ್ರಯುಗ ಎಂತಲೂ ಕರೆಯುತ್ತಾರೆ.
ಇಂತಿಪ್ಪ ಕಾಲದಲ್ಲಿ ಮಾನಸಿಕ ತೊಂದರೆಗಳು ಕೂಡ ಆರ್ಥಿಕ ಪ್ರಗತಿಯಂತೆಯೇ ಏರುಮುಖದಲ್ಲಿವೆ. ಅಂದರೆ, ಪ್ರಾರ್ಥನೆಗೀಗ ಹೆಚ್ಚಿನ ಮಹತ್ವ ಎಂದಾಯಿತು? ಈ ನಿಜವನ್ನು ಅರಿತೇ ಅನೇಕ ಖ್ಯಾತನಾಮರು ಧ್ಯಾನವನ್ನು ರೂಢಿಸಿಕೊಳ್ಳುತ್ತಿದ್ದಾರೆ. ಸೋಲಿನಲ್ಲಿ ದಾಖಲೆ ಸೃಷ್ಟಿಸುತ್ತಿದ್ದ ಭಾರತೀಯ ಕ್ರಿಕೆಟಿಗರು ಮನಃಶಾಸ್ತ್ರವೈದ್ಯರ ನೆರವು ದೊರೆತ ಮೇಲೆ ಗೆಲುವಿನ ಲಯ ಕಂಡುಕೊಂಡ ಉದಾಹರಣೆ ಇದೆ. ನಟಿ ಶಿಲ್ಪಾ ಶೆಟ್ಟಿಯನ್ನು ನೋಡಿ: ಆಕೆ ನಿತ್ಯ ಮಲಗುವ ಮುನ್ನ ‘ಓಂ ನಮಃ ಶಿವಾಯ’ ಮಂತ್ರವನ್ನು ೧೦೮ಸಲ ಬರೆಯುತ್ತಾಳಂತೆ. ಕನ್ನಡ ನಟ ರಾಜಕುಮಾರ್ ಅಂತೂ ಯೋಗ-ಧ್ಯಾನವನ್ನು
ಊಟದಂತೆಯೇ ಪ್ರೀತಿಸುತ್ತಿದ್ದರು.

ಈ ಲೇಖನವನ್ನು ಓದುವ ಹಾಗೂ ಇತರರಿಗೆ ಓದಿ ಹೋಳುವ ಸಹೃದಯರ ಎಲ್ಲ ಪ್ರಾರ್ಥನೆಗಳೂ ಈಡೇರಲಿ ಎನ್ನುವುದು ಲೇಖಕನ ಪ್ರಾರ್ಥನೆ.

ವೈದ್ಯಕೀಯ, ಶಿಕ್ಷಣ ಹಾಗೂ ಆಡಳಿತ ವಿಷಯಗಳಲ್ಲಿ ಅನುಭವವುಳ್ಳ, ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿಗಳಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ಡಾ.ಎಂ.ಎಸ್. ತಿಮ್ಮಪ್ಪ ಪ್ರಾರ್ಥನೆಯ ಕುರಿತು ವಿಶೇಷ ಒಲವುಳ್ಳವರು. ‘ಅಧ್ಯಾತ್ಮಿಕತೆಯ ಹಿಂದಿರುವ ವೈಜ್ಞಾನಿಕ ಥಿಯರಿಗಳು’ ವಿಷಯದ ಕುರಿತು ಆರೇಳು ವರ್ಷಗಳ ಕಾಲ ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನದಲ್ಲಿ ಅವರು ಮುಖ್ಯವಾಗಿ ಕಂಡುಕೊಂಡಿರುವುದು ಎರಡು ಅಂಶ. ಮೊದಲನೆಯದು, ಮನಸ್ಸು ಹಾಗೂ ದೇಹಕ್ಕೆ ಪ್ರಾರ್ಥನೆಯಿಂದ ವಿಶ್ರಾಂತಿ ದೊರೆಯುತ್ತದೆ. ಎರಡನೆಯದು, ಚಿತ್ತ ವೈಶಾಲ್ಯ ಹೊಂದುತ್ತಾನೆ.

ನಿದ್ದೆಯ ಸಮಯದಲ್ಲಿ ದೇಹದ ನಾಡಿಮಿಡಿತ ಹಾಗೂ ಹೃದಯದ ಬಡಿತ ನಿಧಾನವಾಗಿರುತ್ತದೆ. ಆದರೆ ಧ್ಯಾನದ ಸಂದರ್ಭದಲ್ಲಿ ಈ ಪ್ರಮಾಣ ನಿದ್ದೆಯ
ಸಮಯಕ್ಕಿಂತಲೂ ಕಡಿಮೆ ಇರುತ್ತದೆ ಎಂದೂ ತಿಮ್ಮಪ್ಪ ತಮ್ಮ ಅಧ್ಯಯನದಿಂದ ಕಂಡುಕೊಂಡಿದ್ದಾರೆ. ಧ್ಯಾನದ ಸಮಯದಲ್ಲಿ ದೇಹ ಹಾಗೂ ಮನಸ್ಸಿಗೆ ನಿದ್ದೆಯ ಸಮಯಕ್ಕಿಂತಲೂ ಹೆಚ್ಚಿನ ವಿಶ್ರಾಂತಿ ಸ್ಥಿತಿ ದೊರೆಯುತ್ತದೆ. ಈ ತೀರ್ಮಾನಕ್ಕೆ ಬರುವಲ್ಲಿ ತಿಮ್ಮಪ್ಪನವರು ನೂರು ಜನರನ್ನು ಅಧ್ಯಯನಕ್ಕೆ ಬಳಸಿಕೊಂಡಿದ್ದಾರೆ.

ಧ್ಯಾನದಿಂದ ದೊರೆಯುವ ಬಹುದೊಡ್ಡ ಪ್ರಯೋಜನ ‘ಚಿತ್ತ ವೈಶಾಲ್ಯ’. ಈ ವಿಶಾಲ ಎನ್ನುವ ಶಬ್ದದ ಅರ್ಥವೂ ವಿಶಾಲವಾದುದು. ಧ್ಯಾನದಿಂದ ವ್ಯಕ್ತಿಯ ಗ್ರಹಿಕೆಯ ಸಾಮರ್ಥ್ಯ ಹೆಚ್ಚುತ್ತದೆ. ಸಂಬಂಧಗಳ ಬಗೆಗಿನ ಧೋರಣೆಯೂ ಬದಲಾಗುತ್ತದೆ. ಅಮ್ಮ, ಅಪ್ಪ, ಹೆಂಡತಿ, ಗಂಡ, ಕಛೇರಿಯ ಒಡೆಯ, ಗೆಳತಿ, ಮಕ್ಕಳು – ಇವರಲ್ಲಿ ಈವರೆಗೆ ಗಮನಿಸದ ಅನೇಕ ಧನಾತ್ಮಕ ಅಂಶಗಳನ್ನು ಕಾಣುವ ಶಕ್ತಿ ಧ್ಯಾನದಿಂದ ಸಾಧ್ಯವಾಗುತ್ತದೆ. ಈ ಕಾಣ್ಕೆಯಿಂದ ಸಂಬಂಧಗಳು ಸುಧಾರಿಸುತ್ತವೆ. ಕುದುರೆ ಕಣ್ಪಾಪಿನಂಥ ಧೋರಣೆ ಬದಲಾಗಿ ವಿಶಾಲ ಮನಃಸ್ಥಿತಿ ಸಾಧ್ಯವಾಗುತ್ತದೆ. ಇದು ಕೇವಲ ಅಧ್ಯಯನದ ವರದಿಯಲ್ಲ ವೈಯಕ್ತಿಕ ಅನುಭವ ಕೂಡ ಎನ್ನುತ್ತಾರೆ. ಈ ಮಾತನ್ನು ಇನ್ನಷ್ಟು ವ್ಯಾಪಕಾರ್ಥದಲ್ಲಿ ಯೋಚಿಸೋಣ. ನಮ್ಮ ರಾಜಕೀಯ ನಾಯಕರಿಗೆಲ್ಲ ಧ್ಯಾನದ ಸಹವಾಸ ಅಂಟಿಕೊಂಡು, ಅವರ ಸಂಕುಚಿತ ಮನೋಭಾವ ವಿಕಸನ ಹೊಂದಿದೆ ಅಂದುಕೊಳ್ಳಿ. ಬಹುಶಃ, ನಾವಿಂದು ಜ್ವಲಂತ ಸಮಸ್ಯೆಗಳೆಂದು ಆತಂಕ ಪಡುತ್ತಿರುವ ಅನೇಕ ಸಮಸ್ಯೆಗಳು ಆಗ ಸುಲಭವಾಗಿ ಬಗೆಹರಿಯುತ್ತವೆ. ಧ್ಯಾನದಿಂದ ಒದಗುವ ಮನಃಶಾಂತಿಯಿಂದ ಬಹುತೇಕ ಆರೋಗ್ಯ ಸಮಸ್ಯೆಗಳೂ ಮಾಯವಾಗುತ್ತವೆ.

ಮಾಹಿತಿ ತಂತ್ರಜ್ಞಾನದ ಅಬ್ಬರದ ದಿನಗಳಲ್ಲಿ ಹೆಚ್ಚುತ್ತಿರುವ ಸಾಮೂಹಿಕ ಸತ್ಸಂಗ, ಧ್ಯಾನಗಳಂಥ ಕಾರ್ಯಕ್ರಮ-ಶಿಬಿರಗಳು ಪದೇಪದೇ ನಡೆಯುವಾಗ ‘ಧ್ಯಾನ ಏಕಾಂತವಾ? ಲೋಕಾಂತವಾ?  ಪ್ರಶ್ನೆ ಏಳುವುದಿಲ್ಲವಾ? ಈ ಕುರಿತು ತಿಮ್ಮಪ್ಪನವರದು ಸ್ಪಷ್ಟ ಉತ್ತರ: ಪ್ರಚಾರ, ಹಣ, ಸಾಂಸ್ಥಿಕ ಚೌಕಟ್ಟು ಎಲ್ಲಿರುತ್ತದೆಯೋ ಅಲ್ಲಿ ಮುಜುಗರ ಉಂಟಾಗುತ್ತದೆ. ಧ್ಯಾನ ಸಾಧ್ಯವಾಗುವುದು ಮೌನದಲ್ಲಿಯೇ ಹೊರತು ಬಯಲಿನಲ್ಲಿ ಅಲ್ಲ. ಹಾಗಾದರೆ, ಉತ್ತಮ ಸಂದರ್ಭಗಳಲ್ಲಿನ ಸಾಮೂಹಿಕ ಪ್ರಾರ್ಥನೆಯನ್ನು ಹೇಗೆ ಅರ್ಥೈಸಿಕೊಳ್ಳುವುದು? ಉತ್ತರ ಸ್ಪಷ್ಟವಾಗಿದೆ. ಅಲ್ಲಿ ಹಣವಿಲ್ಲ ಪ್ರಭಾವಗಳಿಲ್ಲ ಹಾಗಾಗಿ,
ಗುಂಪಿನಲ್ಲಿದ್ದೂ ಪ್ರಾರ್ಥನೆಯಲ್ಲಿ ತೊಡಗಿದ ವ್ಯಕ್ತಿ ಏಕಾಂತವನ್ನು ಅನುಭವಿಸುತ್ತಾನೆ.

ಪುರಾಣ, ಇತಿಹಾಸಗಳ ಪುಟಗಳ ತಿರುವಿ. ಅಲ್ಲಿ ದೈವಾಂಶ ಸಂಭೂತನ ಬಳಿ ಪ್ರತಿ ಬಾರಿ ಹೋದಾಗಲೂ ವ್ಯಕ್ತಿ ಶಕ್ತಿಶಾಲಿಯಾಗಿ ಹಿಂತಿರುಗುತ್ತಿದ್ದ. ಆದರೆ, ಆಧುನಿಕ ದೇವ ಮಾನವರ ಹಿನ್ನೆಲೆಯಲ್ಲಿ ಅವಲಂಬನೆ ಹೆಚ್ಚಾಗುತ್ತಿದೆ. ಇದು ಅಧ್ಯಾತ್ಮಕ್ಕೆ ವಿರುದ್ದವಾದುದು.

ಭಾವನೆಯಿಲ್ಲದ, ಕಲ್ಪನೆಯಿಲ್ಲದ, ಅಂತರ್ ಒತ್ತಡವಿಲ್ಲದ, ಅಂತರ್ಮುಖಿ ಆಗಿಲ್ಲದ ಪ್ರಾರ್ಥನೆಯಿಂದ ಉಪಯೋಗವಿಲ್ಲ. ಪ್ರಾರ್ಥನೆಯಲ್ಲಿ ಭಾಷೆ ಜೀವಂತವಾಗಬೇಕು, ಶಬ್ಬಗಳು ಅನುಭವಗ್ರಾಹ್ಯವಾಗಬೇಕು. ಈ ಎಲ್ಲ ಅನುಭವಗಳು ಶಕ್ತಿಯೊಂದರ ಜೊತೆಗಿನ ಸಂವಾದಕ್ಕೆ ಅನುವು ಮಾಡಿಕೊಡಬೇಕು. ಪ್ರಾರ್ಥನೆಯಲ್ಲಿ ಸಮರ್ಪಣಾ ಭಾವ ಅತ್ಯಗತ್ಯ. ಎಂದು ಧ್ಯಾನದ ಒಳಗುಟ್ಟುಗಳ ವಿಶ್ಲೇಷಿಸುವ ತಿಮ್ಮಪ್ಪನವರ ದೃಷ್ಟಿಯಲ್ಲಿ ಧ್ಯಾನ ಅಥವಾ
ಪ್ರಾರ್ಥನೆ ಅಧ್ಯಾತ್ಮದ ಸಂವಾದಿ ರೂಪಗಳು. ಅಧ್ಯಾತ್ಮ ಸಂಗಾತಿ ಎನ್ನುವ ಅಭಿಪ್ರಾಯಕ್ಕೆ ಅವರ ವಿರೋಧವಿದೆ. ಬಾಲ್ಯದಿಂದಲೇ ಜೊತೆಗೂಡುವ ವಿದ್ಯೆ, ಆಟ,
ಸಂಬಂಧಗಳಂತೆ ಆಧ್ಯಾತ್ಮವೂ ದಿನಚರಿಯ ಭಾಗವಾಗಬೇಕು. ವ್ಯಕ್ತಿತ್ವ ವಿಕಸನಕ್ಕೆ ಇದು ಒಳ್ಳೆಯದು ಎನ್ನುವುದು ಈ ವೈದ್ಯರ ಪ್ರಿಸ್ಕ್ರಿಪ್ಷನ್.

ಧ್ಯಾನದ ಬಗೆಗೆ ಇಷ್ಟೆಲ್ಲ ಮಾತನಾಡುವ ತಿಮ್ಮಪ್ಪನವರ ಇಷ್ಟದ ಪ್ರಾರ್ಥನೆ ಯಾವುದಿರಬಹುದು? ಅವರು ಗುಟ್ಟು ಮಾಡುವುದಿಲ್ಲ. ಕಳೆದ ದಶಕಗಳಿಂದ ‘ಓಂ’ ಬೀಜಮಂತ್ರ ಅವರ ದಿನಚರಿಯ ಭಾಗವಾಗಿದೆ.

ಪ್ರಾರ್ಥನೆಯ ಬೇರುಗಳನ್ನು ತಡಕೋಣ. ನಮ್ಮ ಜನಪದರ ಪಾಲಿಗೆ ಪ್ರಾರ್ಥನೆ ದಿನಚರಿಯ ಒಂದು ಭಾಗವಲ್ಲ; ಅದು ದಿನದ ಎಲ್ಲ ಸಂದರ್ಭಗಳಲ್ಲೂ ಜೊತೆಗಿರುವ ಆಸರೆಯ ದೀಪ. ಅವರ ಬದುಕಿನ ಎಲ್ಲ ಸಂದರ್ಭಗಳಲ್ಲಿ ಸಂಬಂಧಗಳಲ್ಲಿ ಪ್ರಾರ್ಥನೆ ಹಾಸುಹೊಕ್ಕು.

‘ಎದ್ದೂನೆ ನಿಮಗ್ಯಾನ ಏಳುತಲೆ ನಿಮಗ್ಯಾನ/
ಸಿದ್ಧರಗ್ಯಾನ ಶಿವಗ್ಯಾನ ಮಾ ಶಿವನೆ/
ನಿದ್ದೆಗಣ್ಣಾಗೆ ನಿಮಗ್ಯಾನ’
– ಎನ್ನುವ ತ್ರಿಪದಿ ಹೇಳುವುದು ಬದುಕು ಹಾಗೂ ದೇವರ ನಡುವಣ ಅವಿನಾಭಾವ ಸಂಬಂಧವನ್ನೇ.

ಜನಪದರ ಪ್ರಾರ್ಥನೆ ಬೆಳಗಿನೊಂದಿಗೇ ಶುರು. ‘ಬೆಳಗಾಗಿ ನಾನೆದ್ದು ಯಾರ್‍ಯಾರ ನೆನೆಯಲಿ…’ ಎಂದು ಬೆಳಗಿಗೆ ಮುಖಾಮುಖಿಯಾಗುವ ಜನಪದರು, ಎಳ್ಳುಜೀರಿಗೆ ಬೆಳೆವಂಥ ಭೂಮಿತಾಯಿಯನ್ನು ಎದ್ದೊಂದು ಘಳಿಗೆ ನೆನೆಯುತ್ತಾರೆ.

‘ಕಲ್ಲಮ್ಮ ಮಾತಾಯಿ ಮೆಲ್ಲಮ್ಮ ರಾಗೀಯ
ಜಲ್ಲಜಲ್ಲನೆ ಉದುರಮ್ಮ ನಾ ನಿನಗೆ?
ನೆಲ್ಲಕ್ಕಿ ಪಡಿಯ ನಡಸೇನು’
– ಎನ್ನುವ ಪ್ರಾರ್ಥನೆಯಿಂದ ಜನಪದ ಹೆಣ್ಣು ಬೆಳಗಿನ ದಿವ್ಯಮೌನಕ್ಕೆ ತನ್ನ ಬೀಸುಕಲ್ಲಿನ ಶೃತಿ ಕೂಡಿಸುತ್ತಾಳೆ.

ಸಂಬಂಧಗಳ ಮಾತಿಗೆ ಬಂದರೆ ಜನಪದರದು ಎಣೆಯಿಲ್ಲದ ಭಾವುಕತೆ. ಅವರ ಪಾಲಿಗೆ ತಂದೆತಾಯಿ ಪ್ರತ್ಯಕ್ಷ ದೇವರು. ಈ ದೇವರುಗಳನ್ನು ನೆನೆಯುವ ಫಲ ಹೇಗಿದ್ದೀತು? ಹಾಡುತ್ತಾರೆ:

ತಂದೀಯ ನೆನೆದರ ತಂಗಳ ಬಿಸಿಯಾಯ್ತು|
ಗಂಗಾ-ದೇವಿ ನನ್ನ ಹಡೆದವ್ನ| ನೆನೆದರ|
ಮಾಸೀದ ತಲೆಯು ಮಡಿಯಾಯ್ತು||

ತವರು ನೆನೆವಾಗ ಹೆಣ್ಣುಮಗಳು ಯಾವ ಕವಿಗೂ ಕಡಿಮೆಯಿಲ್ಲ ಗಂಡನ ಮನೆಯಲ್ಲಿದ್ದರೂ ಆಕೆಯ ಮನಸ್ಸು ತವರಿಗಾಗಿ ಪ್ರಾರ್ಥಿಸುತ್ತಿರುತ್ತದೆ. ಹಾರೈಕೆ ರೂಪದ ಅವಳ ಪ್ರಾರ್ಥನೆ ಹೇಗಿದ್ದೀತು? ಕೇಳಿ, ಅದೊಂದು ಅದ್ಭುತ ಕಾವ್ಯ.

ಹಾಲುಂಡ ತವರೀಗಿ ಏನೆಂದು ಹಾಡಲೆ|
ಹೊಳೆದಂಡಿಲಿರುವ ಕರಕೀಯ| ಕುಡಿಯಂಗ|
ಹಬ್ಬಲೆ ಅವರ ರಸಬಳ್ಳಿ||

ಎಲ್ಲ ಆಗುಹೋಗುಗಳಿಗೂ ಭಗವಂತನ ಹೊಣೆಯಾಗಿಸುವ ಮನಸ್ಸು ಜನಪದರದು. ‘ಒಳಿತು ಕೆಡಕು ಎರಡಕ್ಕೂ ಅವನೇ ಕಾರಣ; ನಾವು ಬೇಡುವುದೇನಿದ್ದರೂ
ಅವನ ಅಭಿಮಾನ’ ಎನ್ನುವ ಪೂರ್ವಸೂರಿಗಳ ಆಶಯ ಉಜ್ವಲವಾದುದು, ಅಲ್ಲವೆ?

ಕರುಣ ಬಂದರ ಕಾಯೊ ಮರಣ ಬಂದರ ಒಯ್ಯೋ|
ಕರುಣಿ ಕಲ್ಯಾಣಿ ಬಸವಣ್ಣ ಕಾಸಿಲಿಂಗ|
ಕಡೆತನ ಕಾಯೊ ಅಭಿಮಾನ||

ಸ್ವಾರ್ಥದ ಸೊಂಕಿಲ್ಲದ ಮೇಲಿನ ರೀತಿಯ ಪ್ರಾರ್ಥನೆ ಆಧುನಿಕ ಸಂದರ್ಭದಲ್ಲಿ ನಮಗೇಕೆ ಸಾಧ್ಯವಾಗುತ್ತಿಲ್ಲ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಥಮ ನೋಟ
Next post ಸವಾಲು

ಸಣ್ಣ ಕತೆ

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

cheap jordans|wholesale air max|wholesale jordans|wholesale jewelry|wholesale jerseys