ಕೆಲವು ದಿನಗಳಿಂದ ನನಗೆ ಬರೆಯಲಾಗಲಿಲ್ಲ. ಯಾಕೆಂದರೆ ನಾನು ನನ್ನ ಡೈರಿ ಕುರಿತು ಯೋಚಿಸುತ್ತಿದ್ದೆ. ನನ್ನಂತೆ ಕೆಲವರ ಪ್ರಕಾರ ಡೈರಿಯನ್ನು ಇಟ್ಟುಕೊಳ್ಳುವುದು ಚಿಲ್ಲರೆ ವಿಷಯ. ಇದರರ್ಥ ಈ ಹಿಂದೆ ನಾನು ಅದನ್ನು ಮಾಡಿರಲಿಲ್ಲ ಎಂದಲ್ಲ. ಆದರೆ ನಾನಾಗಲಿ ಅಥವಾ ಇತರರಾಗಲಿ ಈ ವಿಚಾರವಾಗಿ ಬರಿಯ ಹದಿಮೂರು ವರ್ಷಗಳ ಹುಡುಗಿಯೊಬ್ಬಳ ಅಪಕ್ವ ಸಂಗತಿಗಳ ಬಗ್ಗೆ ಆಸಕ್ತಿ ಹೊಂದಿರಲು ಅದು ಹೇಗೆ ಸಾಧ್ಯ.? ಹಾಗಿದ್ದೂ ಈ ವಿಚಾರವನ್ನೇನು ಮಾಡೋಣ? ನಾನು ಬರೆಯಬೇಕು. ಅದಕ್ಕೂ ಹೆಚ್ಚಾಗಿ ನನ್ನ ಹೃದಯದೊಳಗೆ ಹೂತ ಆ ಎಲ್ಲ್ಲ ಸಂಗತಿಗಳನ್ನು ನಾನು ಹೊರಹಾಕಬೇಕು.
“Paper is more patient than man” ಎಂಬ ಮಾತಿದೆ. ಬೇಸರದಿಂದ ಗಲ್ಲಕ್ಕೆ ಕೈ ಹಚ್ಚಿ ಕೂತು ಮನೆಯಿಂದ ಹೊರ ಹೋಗಲೋ ಬೇಡವೋ ಎಂಬ ಸಂದಿಗ್ಧ ಮನಸ್ಥಿತಿಯ ಸಂಕಟಮಯ ದಿನಗಳಲ್ಲಿ ನನಗೀ ಮಾತು ನೆನಪಾಯಿತು. ಹೌದು ನಿಜಕ್ಕೂ ಪೇಪರ ಬಹಳೇ ಸಹನಶೀಲವಾದದ್ದು. ನನಗೊಬ್ಬ ಆಪ್ತ ಗೆಳತಿ ಅಥವಾ ಗೆಳೆಯ ಸಿಗದಿದ್ದರೆ, ದಪ್ಪ ರಟ್ಟಿನ, ಡೈರಿ ಎಂಬ ಹೆಮ್ಮೆಯ ನಾಮಧೇಯ ಹೊತ್ತ ಈ ಹೊತ್ತಿಗೆಯನ್ನು ನಾನ್ಯಾರಿಗೂ ತೋರಿಸ ಬಯಸುವುದಿಲ್ಲವಾದ್ದರಿಂದ ಬಹುಶಃ ಯಾರೂ ಇದನ್ನು ಲಕ್ಷ್ಯಿಸುವುದಿಲ್ಲ.
ಮತ್ತೀಗ ನಾನು ಮುಖ್ಯ ಸಂಗತಿಯೊಂದನ್ನು ಹೇಳಬಯಸುತ್ತೇನೆ. ನಾನು ಡೈರಿ ಪ್ರಾರಂಭಿಸಲು ಕಾರಣವೆಂದರೆ ನನಗೆ ಯಾರೂ ಅಂತಹ ನಿಜ ಗೆಳೆಯರಿಲ್ಲದಿರುವುದು.
ಹದಿಮೂರು ವರ್ಷದ ಹುಡುಗಿಯೊಬ್ಬಳು ಈ ಜಗತ್ತಿನಲ್ಲಿ ತಾನು ಏಕಾಂಗಿ ಎಂದು ತಿಳಿದಿದ್ದಾಳೆ ಎಂದರೆ ಅದನ್ನು ಯಾರೂ ಕೂಡಾ ನಂಬಲಿಕ್ಕಿಲ್ಲ ಎಂಬ ವಿಚಾರವನ್ನು ನನಗೆ ಸ್ಪಷ್ಟಪಡಿಸಬೇಕಿದೆ. ನನ್ನನ್ನು ಅತಿಯಾಗಿ ಪ್ರೀತಿಸುವ ತಂದೆ ತಾಯಿ ಮತ್ತು ಹದಿನಾರರ ಹರೆಯದ ನನ್ನಕ್ಕ ನನಗಿದ್ದಾರೆ. ಗೆಳೆಯರೆಂದು ಕರೆಯಬಹುದಾದ ಸುಮಾರು ಮೂವತ್ತು ಜನರ ಪರಿಚಯ ನನಗಿದೆ. ನನ್ನ ಕುಡಿಗಣ್ಣಿನ ನೋಟಕ್ಕಾಗೇ ಕಾದಿರುವ, ಅದು ವಿಫಲವಾದಾಗ ತರಗತಿಯ ಕನ್ನಡಿಯಲ್ಲಿ ನನ್ನತ್ತಲೇ ಇಣುಕುವ ಬಹುದೊಡ್ಡ ಗೆಳೆಯರ ಬಳಗವಿದೆ. ಒಂದೊಳ್ಳೆಯ ಮನೆ, ಪ್ರೀತಿಪಾತ್ರರಾದ ಸಂಬಂಧಿಗಳು, ಅತ್ತೆ-ಮಾವ, ಚಿಕ್ಕಮ್ಮ-ಚಿಕ್ಕಪ್ಪ ಎಲ್ಲವೂ ಇವೆ. ಇಲ್ಲ, ನನಗ್ಯಾವ ಕೊರತೆಯೂ ಇಲ್ಲ. ಆದರೆ ಗೆಳೆಯರೊಂದಿಗೆ ನಾನು ವಿನೋದ ಮತ್ತು ಹಾಸ್ಯದ ಹೊರತಾಗಿ ಬೇರೇನೂ ಇಟ್ಟುಕೊಳ್ಳುತ್ತಿರಲಿಲ್ಲ. ಸಾಮಾನ್ಯ ವಿಚಾರಗಳಿಗಿಂತ ಹೆಚ್ಚಾಗಿ ನಾನೆಂದೂ ಬಿಚ್ಚಿಕೊಳ್ಳಲಾರೆ. ನನ್ನಲ್ಲಿಯ ಸಮಸ್ಯೆಯ ಮೂಲ ಕಾರಣ ಯಾರೊಂದಿಗೂ ಅತಿ ಹತ್ತಿರವಾಗಲು ಸಾಧ್ಯವಾಗದೇ ಇರುವುದು. ಬಹುಶಃ ನನ್ನಲ್ಲಿಯ ಆತ್ಮವಿಶ್ವಾಸದ ಕೊರತೆ, ಹೀಗಿದ್ದೂ ಅದು ನನ್ನಲ್ಲಿಯ ಮೊಂಡುತನ ಇರಬಹುದು, ಆದರೆ ನಾನೇನೂ ಮಾಡಲಾರೆ.
ಅದಕ್ಕಾಗಿ ಈ ಡೈರಿ. ನಾನು ಯಾರಿಗಾಗಿ ಬಹುಕಾಲ ಕಾದಿದ್ದೆನೋ ಅಂತಹ ಗೆಳೆಯನ ಚಿತ್ರವನ್ನು ನನ್ನ ಮನಃಕುಕ್ಷಿಯಲ್ಲಿ ಇನ್ನಷ್ಟು ವಿಸ್ತೃತಗೊಳಿಸಿತು. ಬಹಳಷ್ಟು ಜನ ಮಾಡುವಂತೆ ಡೈರಿಯನ್ನು ಅನಾವಶ್ಯಕ ಸಂಗತಿಗಳನ್ನು ತುಂಬಿಸಲು ನಾನು ಬಳಸುವುದಿಲ್ಲ. ನನ್ನ ಗೆಳೆಯನನ್ನು ನಾನು ಕಿಟಿಎಂದು ಕರೆಯುವೆ. ಖಿನ್ನತೆಯಿಂದ ಹೊರಬರುವುದಕ್ಕಾಗಿ ನಾನು ಕಿಟಿಗೆ ಪತ್ರ ಬರೆಯಲು ಪ್ರಾರಂಭಿಸಿದರೂ ನಾನೇನು ಹೇಳುತ್ತಿರುವೆನೆಂದು ಯಾರೂ ತಿಳಿಯಲಾರರು. ಮನಸ್ಸಿಲ್ಲದಿದ್ದರೂ ನನ್ನ ಬದುಕಿನ ಚಿತ್ರವನ್ನು ಸಂಕ್ಷಿಪ್ತವಾಗಿ ಚಿತ್ರಿಸುವೆ.
ನನ್ನ ತಾಯಿಯನ್ನು ವಿವಾಹವಾದಾಗ ನನ್ನ ತಂದೆಗೆ ೩೬ ವರ್ಷ. ಆಕೆಗೆ ೨೫ ವರ್ಷಗಳು. ನನ್ನ ಅಕ್ಕ ಮಾರ್‍ಗೊಟ್ ೧೯೨೬ರಲ್ಲಿ Frankfort-on-Mainನಲ್ಲಿ ಜನಿಸಿದಳು. ಅವಳು ಹುಟ್ಟಿದ ನಂತರ ನಾನು ೧೯೨೯ ಜೂನ ೧೨ರಂದು ಜನಿಸಿದೆ. ಮತ್ತು ನಾವು ಯಹೂದಿಗಳಾದ ಕಾರಣ ೧೯೩೩ರಲ್ಲಿ ಹಾಲೆಂಡಿಗೆ ವಲಸೆ ಹೋದೆವು. ಅಲ್ಲಿ ನನ್ನ ತಂದೆ ಟ್ರಾವಿಸ್ ಎನ್ ವ್ಹಿ. ಎಂಬ ವ್ಯವಹಾರ ಸಂಸ್ಥೆಯಲ್ಲಿ ಮ್ಯಾನೆಂಜಿಂಗ್ ಡೈರೆಕ್ಟರ ಆಗಿ ನೇಮಕಗೊಂಡರು. ಈ ವ್ಯವಹಾರ ಸಂಸ್ಥೆ ನನ್ನ ತಂದೆ ಪಾರ್ಟನರ್ ಆಗಿರುವ ಅದೇ ಕಟ್ಟಡದಲ್ಲಿರುವ, ಕೋಲೆನ್ ಆಂಡ್ ಕೋ ಸಂಸ್ಥೆಯೊಂದಿಗೆ ಗಟ್ಟಿ ಸ್ನೇಹ ಹೊಂದಿತ್ತು.
ಉಳಿದ ನನ್ನ ಕುಟುಂಬಸ್ಥರು ಹಿಟ್ಲರನ ಯಹೂದಿ ವಿರೋಧಿ ಕಾನೂನುಗಳಿಂದ ಹತಾಶರಾಗಿದ್ದರು. ಬದುಕು ಉದ್ವಿಗ್ನತೆಯಿಂದ ಕೂಡಿತ್ತು. ೧೯೩೮ರಲ್ಲಿ ಪೋಗ್ರೊಮ್ಸ್ ನಂತರ ನನ್ನ ತಾಯಿಯ ಸಹೋದರಿಬ್ಬರು ಯು. ಎಸ್. ಎ.ಗೆ ಪಲಾಯನಗೈದರು. ೭೩ ವರ್ಷಗಳ ನನ್ನಜ್ಜಿ ನಮ್ಮಲ್ಲಿಗೆ ಬಂದಳು. ೧೯೪೦ ಮೇ ನಂತರ ಒಳ್ಳೆಯ ದಿನಗಳು ಕ್ರಮೇಣ ಮರೆಯಾದವು. ಮೊದಲು ಯುದ್ಧ, ನಂತರ ಶರಣಾಗತಿ, ನಂತರ ಜರ್‍ಮನ್ನರ್ ಆಗಮನ, ನಿಜಕ್ಕೂ ಅಲ್ಲಿಂದಲೇ ಯಹೂದಿಗಳ ಸಂಕಟಗಳು ಶುರುವಾದವು. ಯಹೂದಿ ವಿರೋಧಿ ಕಟ್ಟಳೆಗಳು ತ್ವರಿತವಾಗಿ ಅನುಷ್ಠಾನಕ್ಕೆ ಬಂದವು. ಯಹೂದಿಗಳು “yellow star”ನ್ನು ತೊಡಬೇಕಿತ್ತು. ತಮ್ಮದೇ ಬೈಸಿಕಲ್ಲುಗಳನ್ನು ಹೊಂದಬೇಕಿತ್ತು. ಅವರಿಗೆ ಟ್ರೇನುಗಳಲ್ಲಿ ಪ್ರಯಾಣ ಬಹಿಷ್ಕರಿಸಲಾಗಿತ್ತು. ವಾಹನ ಚಾಲನೆಯನ್ನು ನಿರಾಕರಿಸಲಾಗಿತ್ತು.
ಅವರಿಗೆ ತಮ್ಮ ಶಾಪಿಂಗ್ ಮಾಡಲು ಮೂರರಿಂದ ಐದು ಗಂಟೆಗಳವರೆಗೆ ಮಾತ್ರ ಅನುಮತಿ ಇತ್ತು. ಅದೂ ಕೂಡಾ ಜ್ಯೂಯಿಸ್ ಶಾಪ್ [ಯಹೂದಿಗಳಿಗಾಗಿ ಮಾತ್ರ ಇರುವ ಅಂಗಡಿಗಳು] ಎಂಬ ಫಲಕ ಹೊಂದಿದ ಅಂಗಡಿಗಳಲ್ಲಿ ಮಾತ್ರ. ಎಂಟುಗಂಟೆಯ ಒಳಗೆಲ್ಲಾ ಯಹೂದಿಗಳು ಮನೆಯ ಒಳಗಡೆ ಇರಬೇಕು. ಮತ್ತು ಆ ವೇಳೆಯ ನಂತರ ಅವರು ಯಾವುದೇ ಕಾರಣಕ್ಕೂ ತಮ್ಮ ಮನೆಯ ಗಾರ್ಡನ್‌ನಲ್ಲಿಯೂ ಕುಳಿತುಕೊಳ್ಳುವ ಹಾಗಿರಲಿಲ್ಲ. ಯಹೂದಿಗಳನ್ನು ಥೇಟರುಗಳಿಗೆ, ಸಿನೇಮಾಗಳಿಗೆ ಇನ್ನಿತರೆ ಮನೋರಂಜನೆಯ ಎಲ್ಲ ಸ್ಥಳಗಳಿಂದಲೂ ಬಹಿಷ್ಕರಿಸಲಾಗಿತ್ತು. ಅವರು ಸಾರ್ವಜನಿಕ ಕ್ರೀಡೆಗಳಲ್ಲಿ ಭಾಗವಹಿಸುವಂತಿರಲಿಲ್ಲ. ಈಜುಗೊಳಗಳಲ್ಲಿ, ಟೆನಿಸ್ ಕೋರ್ಟಗಳಲ್ಲಿ, ಹಾಕಿ ಮೈದಾನಗಳಲ್ಲಿ, ಇನ್ನಿತರ ಆಟದ ಮೈದಾನಗಳಿಂದಲೂ ಅವರು ಬಹಿಷ್ಕರಿಸಲ್ಪಟ್ಟಿದ್ದರು. ಅವರು ಕ್ರೈಸ್ತರೊಂದಿಗೆ ಬೆರೆಯುವಂತಿರಲಿಲ್ಲ. ಯಹೂದಿಗಳಿಗೆಂದೇ ಇರುವ ಶಾಲೆಗಳಿಗೆ ಮಾತ್ರ ಹೋಗಬೇಕಿತ್ತು. ಇಂತಹ ಅದೆಷ್ಟೋ ಕಟ್ಟಳೆಗಳಿದ್ದವು.
ಹಾಗೆ ನಾವಿದನ್ನು ಮಾಡುವಂತಿರಲಿಲ್ಲ, ಅದನ್ನು ಮಾಡುವುದನ್ನು ನಿಷೇಧಿಸಲಾಗಿತ್ತು. ಇಷ್ಟೆಲ್ಲದರ ಹೊರತಾಗಿಯೂ ಬದುಕು ನಡದೇ ಇತ್ತು. ಜೋಪಿ ಯಾವಾಗಲೂ ನನಗೆ ಇದು ಬಹಿಷ್ಕರಿಸಲ್ಪಟ್ಟಿರಬೇಕು ಅದು ಬಹಿಷ್ಕರಿಸಲ್ಪಟ್ಟಿದ್ದಿರಬಹುದು ಎನ್ನುತ್ತಾ ನೀನು ಏನು ಮಾಡಲಿಕ್ಕೂ ಹೆದರುತ್ತೀ. ಎಂದು ಹೇಳುತ್ತಿದ್ದಳು. ನಮ್ಮ ಸ್ವಾತಂತ್ರ್ಯವನ್ನು ಕಡ್ಡಾಯವಾಗಿ ಮಿತಗೊಳಿಸಲಾಗಿತ್ತು. ಆದಾಗ್ಯೂ ಸಂಗತಿಗಳು ಸಹ್ಯವಾಗಿದ್ದವು.
೧೯೪೨ರಲ್ಲಿ ನನ್ನ ಅಜ್ಜಿ ತೀರಿಹೋದಳು. ಆಕೆ ನನ್ನ ಮನಸ್ಸಿನಲ್ಲಿ ಎಷ್ಟು ಗಾಢವಾಗಿರುವಳೆಂದೂ, ಇಂದಿಗೂ ಆಕೆಯನ್ನು ನಾನೆಷ್ಟು ಪ್ರೀತಿಸುವೆನೆಂದು ಯಾರಿಗೂ ತಿಳಿಯದು.
ಅದು ೧೯೩೪ರಲ್ಲಿ ನಾನು ಮಾಂಟೆಸ್ಸರಿ ಕಿಂಡರಗಾರ್ಟನ್ ಶಾಲೆಗೆ ಹೋದೆ ಮತ್ತು ಅಲ್ಲಿಯೇ ಕಲಿಯುವುದನ್ನು ಮುಂದುವರೆಸಿದೆ. ಅದು ಶಾಲೆಯ ಕೊನೆಯ ದಿನ. ನಾನು ಆರನೇ ಬಿ ತರಗತಿಯಲ್ಲಿದ್ದೆ. ಮಿಸೆಸ್ ಕೆ. ಗೆ ನಾನು ಗುಡ್ ಬೈ ಹೇಳಬೇಕಿತ್ತು. ತುಂಬಾ ದುಃಖದಿಂದ ನಾವಿಬ್ಬರೂ ಬಹಳ ಅತ್ತೆವು. ಆನಂತರ ೧೯೪೧ರಲ್ಲಿ ನಾನು ನನ್ನಕ್ಕ ಮಾರ್‍ಗೊಟ್ ಜೊತೆಯಲ್ಲಿ ಯಹೂದಿ ಸೆಕೆಂಡರಿ ಶಾಲೆಗೆ ಸೇರಿದೆ. ಆಕೆ ನಾಲ್ಕನೇ ತರಗತಿಯಲ್ಲಿದ್ದರೆ ನಾನು ಮೊದಲ ತರಗತಿಯಲ್ಲಿದ್ದೆ.
ಬಹಳ ದಿನಗಳವರೆಗೆ ನಮ್ಮೊಂದಿಗೆ ಎಲ್ಲವೂ ಚೆನ್ನಾಗಿಯೇ ಇದೆ. ಇಂದು ಕೂಡಾ.
*****
















